" ಅವಳನ್ನ ಒಮ್ಮೆ ನಾನು ನೋಡಿಬಿಟ್ಟರೆ ಸಾಕು ಕಣೋ... ಮತ್ತೆ ಬೇರೇನೂ ಬೇಕಿಲ್ಲ ನಂಗೆ..." ಹಳಿಯಾಳದ ಬಸ್ ಸ್ಟ್ಯಾಂಡಿನಿಂದ ಬೆಂಗಳೂರಿಗೆ ಕೆಲಸಕ್ಕೆ ಸೇರಲು ಹೊರಟವನ ಮನದಲ್ಲಿದ್ದುದು ನೌಕರಿಯ ಚಿಂತೆಯಾಗಿರಲಿಲ್ಲ. ಹೇಗಾದರೂ ಒಮ್ಮೆ ಅವಳನ್ನು ನೋಡಬೇಕು ಅನ್ನೋದು. ಅದು ೯೦ ರ ಜುಲೈ ೧೦. ವಿಚಿತ್ರವೆಂದರೆ ಹಾಗೆ ಹೊರಟವನ ಬಳಿಯಲ್ಲಿ ಆಕೆಯ ಅಡ್ರೆಸ್ಸು ಹೋಗಲಿ ಕನಿಷ್ಟ ಬೆಂಗಳೂರಿನ ಯಾವ ದಿಕ್ಕಿಗೆ ಆಕೆ ಗೂಡು ಮಾಡಿಕೊಂಡಿದ್ದಾಳೆ ಎನ್ನುವ ಮಾಹಿತಿಯೂ ಇರಲಿಲ್ಲ. ಆಕೆಯ ಮದುವೆ ಬೆಂಗಳೂರಿನ ಹುಡುಗನೊಂದಿಗೆ ಆಗಿದೆ. ಅಷ್ಟನ್ನೆ ನಂಬಿಕೊಂಡು ಯಲ್ಲಾಪುರ ತಾಶಿಲ್ದಾರರ ಮಗ ಹೊರಟು ನಿಂತಿದ್ದ. ಅಸಲಿಗೆ ಅವರಿಬ್ಬರ ಪ್ರೇಮವನ್ನು ನಾನು ತೀರ ಇತ್ತಿಚೆಗೇನೂ ನೋಡುತ್ತಿರಲಿಲ್ಲ. ಬಹುಶ: ೮೬ರ ಆರ೦ಭದಲ್ಲಿ ಒಮ್ಮೆ ಇದೇ ಬಸ್‌ಸ್ಟ್ಯಾಂಡಿನಲ್ಲಿ ಆಕೆಯನ್ನು ತೋರಿಸಿದ್ದ ನೆನಪು. ಅದೂ ಕೂಡಾ ಮಧ್ಯಾನ್ಹದ ಮೂರೂವರೆಗೆ ಹೊರಡುತ್ತಿದ್ದ ಬೆಳಗಾಂ-ಶಿರಶಿ ಬಸ್ಸಿನಲ್ಲಿ ಕಿಟಕಿ ಪಕ್ಕ ಕುಳಿತವಳ ಆಕಸ್ಮಿಕ ದರ್ಶನಕ್ಕೆ ಅವನು ಬೆರಗಾಗಿ ಬಿಟ್ಟಿದ್ದ. ಅಷ್ಟಕ್ಕೂ ಅನಾಮತ್ತು ಎರಡು ಕೀ.ಮಿ.ದೂರದ ಎ.ಪಿ.ಎಂ.ಸಿ. ಯಾರ್ಡಿನಲ್ಲಿದ್ದ ನಮ್ಮ ಕಾಲೇಜಿನಿಂದ ಮಧ್ಯಾನ್ಹದ ಬಿರು ಬಿಸಿಲಿನಲ್ಲೂ ಬಂದು ಆಗಷ್ಟೆ ಉಳಿದ ಕಾಲೇಜಿನಿಂದ ಬರುತ್ತಿದ್ದ ಹುಡುಗಿಯರನ್ನ ನೋಡಿ ಹೋಗುತ್ತಿದ್ದ ಶುದ್ಧ ಪಡ್ಡೆಗಳ ಗುಂಪು ನಮ್ಮದು. ಆ ಹೊತ್ತಿನಲ್ಲಿ ನಮ್ಮ ಈ ಹೀರೊಗೆ ತನ್ನ ಹುಡುಗಿ ಕಂಡು ಬಿಟ್ಟಿದಾಳೆ. ಎಲ್ಲರಿಗೂ ತೋರಿಸಿದ. " ಎ ನೋಡ್ರೋ... ಅವಳೆ...ದೀಪಾ " ಎಂದ.
ನಮಗೆಲ್ಲಾ ಅವನಿಗೊಬ್ಬ ಗರ್ಲ್‌ಫ್ರೆಂಡ್ ಇರುವ ವಿಚಾರ ಗೊತ್ತಿತ್ತಾದರೂ ನಾವು ಅದರ ವಿಷಯದಲ್ಲಿ ಗಂಭೀರವಾಗಿರಲಿಲ್ಲ. ಈಗ ನೋಡಿದರೆ ಆಕೆ ಜೊತೆಯಲ್ಲೇ ಯಲ್ಲಾಪುರಕ್ಕೆ ಹೊರಟು ಬಿಟ್ಟಿದಾನೆ. ಅಸಲಿಗೆ ಅವನು ಹೋಗಬೇಕಾಗಿದ್ದುದು ಸಾಯಂಕಾಲದ ಕಡೆಯ ಐದೂವರೆ ಬಸ್ಸಿಗೆ. ಆಕೆ ಕಂಡಿದ್ದೆ ಕೈಲಿದ್ದ ಸಣ್ಣ ನೋಟಬುಕ್ಕನ್ನು ನಮ್ಮೆಡೆಗೆ ಎಸೆದು ಕಾಲೇಜಿನಲ್ಲಿದ್ದ ಉಳಿದವಕ್ಕೆ ವ್ಯವಸ್ಥೆ ಮಾಡಿರೋ ಎಂದೆನ್ನುತ್ತಲೇ ಢರ್ರಗುಟ್ಟಿದ ಬಸ್ಸನ್ನೇರಿದ್ದ. ಅಲ್ಲಿಗೆ ಸುದೀಪ ಎಂಬ ನಮ್ಮ ಸುಂದರಾಂಗ ಸ್ನೇಹಿತನ ಪ್ರೇಮ ಪ್ರಕರಣಕ್ಕೆ ನಾವೆಲ್ಲ ಸೀರಿಯಸ್ಸಾಗಿದ್ದೆವು. ಒಂದು ವರ್ಷ ಕಳೆಯುವಷ್ಟರಲ್ಲಿ ಆ ಪ್ರಕರಣ ಹಾಗೇ ಮುಂದುವರಿದದ್ದು ಕೊನೆಗೊಮ್ಮೆ ಅಂತಿಮ ತಿರುವಿನಲ್ಲಿ ಆಕೆ ಬೇರೆಯವನನ್ನು ಮದುವೆಯಾದಾಗ ನಮ್ಮ ಅಂತಿಮ ವರ್ಷದ ಪರೀಕ್ಷೆಗೆ ಕೇವಲ ಮೂರು ದಿನವಿದ್ದವು.
ಹುಡುಗಿ ಕೈತಪ್ಪಿ ಹೋದದ್ದಕ್ಕೂ ಅದನ್ನು ತಡೆಯಲು ಏನೂ ಮಾಡಲೂ ಆಗದ ಅವನ ಅಸಹಾಯಕತನಕ್ಕೂ... ಅದಕ್ಕೂ ಮಿಗಿಲಾಗಿ ಬೇರೇನೂ ಮಾಡಲೇ ಸಾಧ್ಯವಿಲ್ಲದ ನಮ್ಮ ಅಬ್ಬೇಪಾರಿಗಳ ಗೆಳೆತನಕ್ಕೂ ಒಂದು ರೀತಿಯಲ್ಲಿ ಗ್ರಹಣ ಹಿಡಿದಂತಾಗಿ ಬಿಟ್ಟಿತ್ತು. ಆದರೂ ಆಗ ನಮಗಾರಿಗೂ ಅಷ್ಟಾಗಿ ಅದು ಬಾಧಿಸಿರಲಿಲ್ಲವಾದರೂ ನಾನು ಮತ್ತು ಇನ್ನೊಬ್ಬ ಸ್ನೇಹಿತ ರವಿ ವೋಲೆಕರ್ (ಮುಂದೆ ಈತ ಒಂದೂವರೆ ಮರ್ಡರು ಮಾಡಿ, ದಕ್ಕಿಸಿಕೊಂಡು ಬಿಡುಗಡೆಯೂ ಆಗಿ ನೌಕರಿಯನ್ನೂ ಗಿಟ್ಟಿಸಿಕೊಂಡ. ಅದಿನ್ಯಾವತ್ತಾದರೂ ಬರೆದೇನು) ಮಾತ್ರ ಕೊಂಚ ಸುದೀಪನ ಬಗ್ಗೆ ಆಂದೋಳನೆಗೊಂಡದ್ಡು ನಿಜ. ಆ ಕ್ಷಣಕ್ಕೆ ಬೇರೇನೂ ತೋಚಿಲ್ಲವಾದರೂ ಅವನನ್ನು ಹೇಗಾದರೂ ಪಾಸು ಮಾಡಿಸುವ ಸರ್ವಾನುಮತದ ನಿರ್ಣಯ ತೆಗೆದುಕೊಂಡಿತು ಮಿತ್ರ ಪಡೆ.
ಅವನೋ ದಿನಕ್ಕೆ ಸಿಗರೇಟು ಸೇದಿ ಹೊಗೆ ಬಿಡುತ್ತಾ ಅಪ್ಪಟ ವಿರಹದ ಅಪರಾವತಾರವೇ ಆಗಿಬಿಟ್ಟಿದ್ದ. ಕೊನೆಗೆ ಅಂತೂ ಇಂತೂ ಎಕ್ಸಾಂನಲ್ಲಿ ಮುಂದೆ ಮತ್ತು ಹಿಂದೆ ಇದ್ದ ನಾನು ಇನ್ನೊಬ್ಬ ಅವನನ್ನು ಹೇಗ್ಹೆಗೋ ಮಾಡಿ ನಮ್ಮೊಂದಿಗೆ ಪಾಸು ಮಾಡಿಸಿಕೊಳ್ಳುವಲ್ಲಿ ಸಫಲನಾಗಿದ್ದೆ. ಇದಾದ ಮೇಲೆ ಕೊಂಚ ಗೆಲುವಾಗಿದ್ದವನು ಇದ್ದಕ್ಕಿದ್ದಂತೆ ಒಂದಿನ ನಾನಿದ್ದ ಊರಾದ ತೇರಗಾಂವಕ್ಕೆ ಬಂದವನೇ " ಸಂತೋಷಾ... ಎಲ್ಲಡಿಯೋ.. ನಾ ಬೆಂಗಳೂರಿಗ ಹೋಗ್ತಿದಿನಿ. ಅಪ್ರೇಂಟಿಸ್ ಸಿಕ್ಕೆದ " ಎಂದವನ ಕಣ್ಣಿನಲ್ಲಿ ಮತ್ತೆ ದೀಪದ ಬೆಳಕು. ಬೆಂಗಳೂರಿಗೆ ಹೋದವನ ಉದ್ದೇಶ ನೌಕರಿಯಲ್ಲವೇ ಅಲ್ಲ ಅನ್ನೋದು ಹೊರಟಾಗಲೇ ತಿಳಿದಿತ್ತಾದರೂ ಕೂಡಾ ಕ್ರಮೇಣ ಜೀವನದ ಬಗ್ಗೆ... ಬದುಕಿನ ಆಟದಲ್ಲಿ ಕೊಂಚ ಬೆಂಗಳೂರಿನ ಹವೆಗೆ ಗಂಭೀರವಾಗಿ ಒಗ್ಗಿಕೊಂಡ.
ಈ ಮಧ್ಯೆ ನಾನೂ ಕೂಡಾ ಸಣ್ಣದಾದ ನೌಕರಿ ಹಿಡಿದು ಬೆಂಗಳೂರು ಸೇರಿಕೊಂಡೆ. ೯೦ ರಲ್ಲಿ ಬೆಂಗಳೂರೆಂಬ ಮಾಯಾನಗರಿಗೆ ೩೫೦ ರೂಪಾಯಿ ಸಂಬಳ ನಂಬಿಕೊಂಡು ಹೋದವನನ್ನು ಈ ಬಾರಿ ಸ್ವಾಗತಿಸಿದ್ದು ಸುದೀಪನ ಭವ್ಯ ನಿಲವು... ಅಜಾನುಬಾಹುವಾಗಿ ಬೆಳೆದಿದ್ದ ಆಕೃತಿ. ಹಳೆಯ ಸ್ನೇಹಿತರಿಬ್ಬರೂ ಒಂದಾಗುತ್ತಿದ್ದಂತೆ ಎರಡನೆಯ ದಿನ ಸಂಜೆಯೇ ಪುನ: ದೀಪ ಪ್ರಸ್ತಾಪವಾಗಿದ್ದಳು. " ಒಂದು ವರ್ಷ ಪೂರ್ತಿ ಕಣ್ಣು ಹರಿದೆಡೆಯಲ್ಲೆಲ್ಲಾ ಹುಡುಕಿದೆ ಆಕೆ ಕಾಣಲೆ ಇಲ್ಲ ಕಣೋ " ಎಂದವನ ಧ್ವನಿಯಲ್ಲಿ ಸೋತ ನಿರಾಶೆ ಸಣ್ಣದಾಗಿ ಮಡುಗಟ್ಟಿತ್ತು. " ಏ ಇನ್ನ ಆಕಿನ್ನ ಮರತಿಲ್ಲೇನು..? " ಎಂದರೆ " ಇಲ್ಲ. ಈಗ ನೀ ಬಂದಿದಿಯಲ್ಲ. ಇಬ್ಬರೂ ಕೂಡಾ ಆಕಿನ್ನ ಹುಡುಕೋಣ... ಸಿಕ್ಕೇ ಸಿಗ್ತಾಳೆ..." ಎಂದು ನನ್ನನ್ನು ಸುತ್ತಿನೊಳಕ್ಕೆ ಎಳೆದುಕೊಳ್ಳತೊಡಗಿದ್ದ. ಆ ಬಿ.ಟಿ.ಎಸ್ಸು... ಹಗಲು ರಾತ್ರಿಯ ಪಾಳಿಗಳು... ಆ ಮಧ್ಯೆ ಆಗೀಗ ಜರಗುತ್ತಿದ್ದ ನಮ್ಮ ಪಾನಕಗೋಷ್ಠಿ... ಎಲ್ಲದರ ಮಧ್ಯೆಯೂ ಆಕೆಯನ್ನು ಹುಡುಕುವ ಅವನ ಉತ್ಸಾಹ ಮಾತ್ರ ನನ್ನನ್ನು ಇವತ್ತಿಗೂ ಅಚ್ಚರಿಗೆ ತಳ್ಳುತ್ತದೆ.
ಪ್ರೇಮವೆನ್ನುವುದು ಅಷ್ಟೊಂದು ಗಾಢವಾ ಎಂದು. ಮತ್ತೆ ಎರಡು ವರ್ಷಗಳು ಕಳೆದವು. ೯೨ರ ಜುಲೈ ೧೦. ಶುಕ್ರವಾರವಿರಬೇಕು. ಇಬ್ಬರೂ ಮೆಜೆಸ್ಟಿಕ್ಕಿನಲ್ಲಿ ಸುತ್ತಾಡಿ ಹೊರಟವರು ಮಲ್ಲೇಶ್ವರದಲ್ಲಿ ಇಳಿದೆವು. ಮಳೆ ಹನಿಯತೊಡಗಿತ್ತು. ಇದ್ದಕ್ಕಿದ್ದಂತೆ ಗಲಾಟೆ ಆರಂಭವಾಗಿತ್ತು. ನನಗೋ ಬೆ೦ಗಳೂರು ಹೊಸದು. ಏನೆಂದರೆ ಏನೂ ಗೊತ್ತಿರಲಿಲ್ಲ. ಪಕ್ಕದಲ್ಲಿದ್ದವ "ಬೆಂಗಳೂರು ಗಲಾಟೆ ಇದು. ಬಾ " ಎನ್ನುತ್ತಾ ಎದುರಿಗೆ ಸಿಕ್ಕಿದ್ದ ಬಸ್ಸನ್ನೇರಿದ. ಮಲ್ಲೇಶ್ವರ ಸರ್ಕಲ್ ದಾಟಿ ಒಂಭತ್ತನೆಯ ಕ್ರಾಸ್ ದಾಟುವ ಮುಂಚೆ ಕಿರುಚಿಕೊಂಡ. " ಸಂತೋಷಾ ಹಾರಲೇ.. ಜಿಗಿ ಜಿಗಿ..... ಜಂಪ್..." ಎನ್ನುತ್ತ ಹಾರಿಬಿಟ್ಟ. ನಿಧಾನಕ್ಕೆ ಸಾಗುತ್ತಿದ್ದ ಬಸ್ಸಿನಿಂದ ನಾನೂ ಕೆಳಕ್ಕೆ ನೆಗೆದೆ. ಯಾಕೆ ಏನು ಎಂದು ಕೇಳುವ ಸಮಯವಲ್ಲ. ಬಹುಶ ಗಲಾಟೆಯದ್ದೇ ಕಾರಣವಿರಬೇಕು ಎಂದುಕೊಂಡೆ. ಆದರೆ ಅಸಲಿಗೆ ವಿಚಾರವೇ ಬೇರೆ ಇತ್ತು. ಏದುಸಿರಿಡುತ್ತಾ ಉದ್ವೇಗದಲ್ಲಿ ಕಣ್ಣರಳಿಸುತ್ತಾ ನುಡಿದಿದ್ದ. " ನಾನು ದೀಪಾಳನ್ನ ನೋಡಿದೆ.." ಹಾಂ ಎಂದಷ್ಟೆ ಎಂದೆ. ಆಕೆ ಸಿಕ್ಕಿದಳಲ್ಲ ಎನ್ನುವುದಕ್ಕಿಂತಲೂ ಆ ಗಲಾಟೆ... ಹನಿಯುತ್ತಿರುವ ಮಳೆ... ಚಲಿಸುತ್ತಿರುವ ಬಸ್ಸಿನಿಂದಲೂ ಇಣುಕಿ ಆಕೆಯನ್ನು ಹುಡುಕಿದ್ದು ಇವತ್ತಿಗೂ ನನ್ನ ಅಚ್ಚರಿಗಳಲ್ಲೊಂದು. ಅವನು ಮುಂದೆ ಮಾತಿಗೆ ಅವಕಾಶ ಕೊಡದೆ ನನ್ನ ಕೈ ಹಿಡಿದು ಹತ್ತನೆ ಕ್ರಾಸಿನತ್ತ ಹೆಜ್ಜೆ ಸರಿದವನ ಮುಖದಲ್ಲಿ ಎಂದಿಲ್ಲದ ಪ್ರಕಾಶ. ಇನ್ನೇನು ಸ್ವರ್ಗ ತನ್ನೆದುರಿಗೆ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ಸಂಭ್ರಮ. ಆ ಓಟ.. ಗಲಾಟೆ... ಚದುರುತ್ತಿರುವ ಜನಗಳು.. ಪೋಲಿಸ್ ಹಾರ್ನ್.. ಅದ್ಯಾವುದೂ ಅವನ ಲಕ್ಷಕ್ಕಿಲ್ಲ. ಅವನ ಗಮ್ಯ ಅದಾವುದೋ ಆಕೃತಿಯನ್ನು ಬೆನ್ನಟ್ಟುವುದೇ ಆಗಿತ್ತು.
ಐದೇ ನಿಮಿಷದಲ್ಲಿ ಆಕೆಯನ್ನು ಸಮೀಪಸಿ ಎದುರಿಗೆ ಹೋದವನು " ದೀಪಾ ನಾನು... ಸುದೀಪ..." ಎಂದು ಧುತ್ತನೇ ಪ್ರತ್ಯಕ್ಷನಾದ. ಆಕೆ ಇದನ್ನು ಅಂದಾಜು ಹೋಗಲಿ ಕನಸಲ್ಲೂ ನೆನೆಸಿರಲಿಲ್ಲವೇನೋ...? ಅಥವಾ ಮಾಮೂಲಿನ ಪ್ರೇಮವಿರಬೇಕು ಎಂದು ಇವನನ್ನು ಮರೆತೇ ಬಿಟ್ಟಿದ್ದಳೊ...? ಒಟ್ಟಾರೆ " ಸುದೀ.. ನಾನು ಈಗ ಮದುವೆಯಾಗಿದ್ದೇನೆ.. ನೀನು ಇದನ್ನೆಲ್ಲ ಮರೆತಿಲ್ಲವಾ... ನೀವೆಲ್ಲ ಗಂಡಸರೇ ಹೀಗೆ " ಇತ್ಯಾದಿ... ಇತ್ಯಾದಿ ನುಡಿದು ರಪ್ಪನೆ ಮುಖಕ್ಕೆ ರಾಚಿ ಹೋರಟು ಹೋದಳು. ಆಕೆಯತ್ತಲೇ ನೋಡುತ್ತಿದ್ದ ನಾನು ದೊಪ್ಪನೆ ಬಿದ್ದ ಶಬ್ದ ಕೇಳಿ... ಇತ್ತ ತಿರುಗಿದೆ. ಬಹುಶ: ಇದನ್ನು ನಿರೀಕ್ಷಿಸದ ಸುದೀಗೆ ಆ ಇಪ್ಪತ್ತೇಳರ ಹರೆಯದಲ್ಲೇ ಸಣ್ಣದಾಗಿ ಹೃದಯಾಘಾತವಾಗಿತ್ತು. ಹೆಗ್ಹೇಗೋ ಗೊತ್ತಿಲ್ಲದ ಬೆ೦ಗಳೂರಿನಲ್ಲಿ ಅವನನ್ನು ಎತ್ತಿಕೊಂಡು ಯಾವ್ಯಾವುದೋ ವಾಹನ ಕಾಡಿ ಬೇಡಿ ಜಾಲಹಳ್ಳಿ ಸೇರಿಕೊಂಡಾಗ ರಾತ್ರಿ ಹನ್ನೊಂದು ಗಂಟೆ.
ಯಥಾ ಪ್ರಕಾರ... ಔಷಧಿ ಚೇತರಿಸಿಕೊಳ್ಳುವಿಕೆ ನಡೆಯಿತಾದರೂ ಆ ಘಟನೆಯಿಂದ ಸುದೀಪ ಹೊರಗೆ ಬರಲೆ ಇಲ್ಲವೇನೊ ಅನ್ನಿಸುತ್ತದೆ. ಮತ್ತೆ ಸರಿ ಸುಮಾರು ಐದು ವರ್ಷಗಳು ಕಳೆದವು. ನಾನು ಕಾರವಾರಕ್ಕೆ ಮರಳಿ ಬಂದು ಸರಕಾರಿ ನೌಕರಿ ಸೇರಿಕೊಂಡಿದ್ದೆ. ವ್ಯವಸ್ಥಿತವಾಗಿ ಗೂಡು ನಿರ್ಮಿಸಿಕೊಳ್ಳುವ ತವಕದಲ್ಲಿ ಅವನೊಂದಿಗಿದ್ದ ಇತರ ಮಿತ್ರರೂ ಹಗಲಿರುಳು ಕನವರಿಸುತ್ತಿದ್ದರೆ ಅವನು ಮಾತ್ರ ವರ್ಷದಿಂದ ವರ್ಷಕ್ಕೆ ಸಣ್ಣಗಾಗುತ್ತಾ... ಹತ್ತು ಹಲವು ಕಡೆಯಲ್ಲಿ ನೌಕರಿ ಬದಲಿಸುತ್ತಾ ಬದುಕಿದ್ದ. ಎಷ್ಟು ಹೇಳಿದರೂ ಹೇಳಿದಷ್ಟು ಹೊತ್ತು ಆಕೆಯನ್ನು ಮರೆತಂತೆ ಇರುತ್ತಿದ್ದನಾದರೂ ಏಕಾಂತ ಅವನನ್ನು ಬಹುಶ: ಕೊಂದು ಹಾಕುತ್ತಿತ್ತು. ಕಾರಣ ಮಧ್ಯದಲ್ಲಿ ಒಂದಷ್ಟು ತಿಂಗಳು ತುಮಕೂರಿನಲ್ಲಿ ಕೆಲಸ ಮಾಡಿ ಬಂದ. ಅನೀಲ ಕಪೂರನನ್ನು ಹೋಲುತ್ತಿದ್ದವ ವರ್ಷ ಕಳೆಯುವಷ್ಟರಲ್ಲಿ ಶಕ್ತಿ ಕಪೂರನಂತಾಗಿ ಬಿಟ್ಟಿದ್ದ. ೯೭ರ ಅದೇ ಜುಲೈ ತಿಂಗಳ ೧೦. ಗುರುವಾರ. ಅಲ್ಲಿಯವರೆಗೆ ಇದೆಲ್ಲ ಘಟಿಸಿ ಸುಮಾರು ವರ್ಷಗಳೇ ಕಳೆದಿದ್ದರಿಂದ ಯಾರಿಗೂ ಏನಾಗುತ್ತದೆ ಎನ್ನುವ ಅಂದಾಜು ಹೋಗಲಿ ಸಣ್ಣ ಯೋಚನೆಯೂ ಇದ್ದಿರಲಾರದು.
ಬೆಳಿಗ್ಗೆ ಮಿತ್ರರೊಂದಿಗೆ ಸೇರಿಕೊಂಡು ಮೊದಲಿನಿಂದ ಬಂದಿದ್ದ ಅಭ್ಯಾಸದಂತೆ " ಮುತ್ತತ್ತಿ " ಫಾಲ್ಸ್‌ಗೆ ಹೊರಟು ನಿಂತಿತ್ತು ಮಿತ್ರ ತಂಡ. ಆದಾಗಲೇ ಮದುವೆಯಾದವರು ಕುಟುಂಬದೊಂದಿಗೆ.. ಮಕ್ಕಳು ಸ್ನೇಹಿತರೂ ಎಲ್ಲಾ ಸೇರಿ ಸುಮಾರು ನಾಲ್ವತ್ತು ಜನ. ಮುತ್ತತ್ತಿ ತಲುಪಿ ಇನ್ನೇನು ಇಳಿಯ ಬೇಕೆನ್ನುವಾಗ... ಇದ್ದಕ್ಕಿದ್ದಂತೆ " ಸಂತೋಷಾ ಆಕಿ diipa ನಮಗ ಸಿಕ್ಕಿ ಇವತ್ತೀಗ ಎಷ್ಟ ವರ್ಷಾತು..? " ಎಂದು ಕೇಳಿದವನು..." ಬಹುಶ: ಐದು ವರ್ಷಾ. ದೀಪಾಗ ನೆನಪಿರುತ್ತಾ...? " ಎಂದು ಬಿಟ್ಟ. ಏಳ ಹೊರಟಿದ್ದವನು ಅವನ ಪಕ್ಕ ಕುಳಿತು ಮುಖ ನೋಡಿದೆ. ದೊಡ್ಡ ದುಂಡು ಕಣ್ಣಿನ ಹಿಂದೆ ಸಣ್ಣನೆಯ ನೀರಿನ ಪೊರೆ. ಸಮಾಧಾನ ಎನ್ನುವಂತೆ ಹೆಗಲು ತಟ್ಟಿ ಕೆಳಗಿಳಿಸಿಕೊಂಡು ಬಂದೆ. ನಂತರದ್ದು ಇತಿಹಾಸ. ಮಧ್ಯಾನ್ಹದವರೆಗೂ ಅಲ್ಲಲ್ಲಿ ನಮ್ಮೊಂದಿಗೆ ಇದ್ದವನು ಊಟದ ಹೊತ್ತಿಗೆ ಕಾಣೆಯಾಗಿ ಬಿಟ್ಟ.
ಆ ದಿನ ಮಾತ್ರ ನಮ್ಮೊಂದಿಗೆ ಪಾನಕ ಗೋಷ್ಟಿಗೆ ಸೇರದೆ ಇವತ್ತು ಬೇಡ ನೀವು ತಗೊಳ್ಳಿ ಎಂದು ಬಲವಂತದಿಂದ ತನ್ನದು ಎನ್ನುತ್ತ ನನ್ನ ಗ್ಲಾಸಿಗೆ ಎರಡು ಗುಕ್ಕು ಹೆಚ್ಚಿಗೆ ಸುರಿದಿದ್ದ. ಊಟಕ್ಕೆ ಮುಂಚೆ ಹುಡುಕಿದರೆ ಸುದೀಪ ಎಲ್ಲೂ ಇಲ್ಲ. ಊಟ ಅರ್ಧಕ್ಕೆ ನಿಂತು ಹೋಯಿತು. ನಾಲ್ವತ್ತು ಜನ ಇನ್ನಿಲ್ಲದಂತೆ ಶೋಧಿಸಿ ಬಿಟ್ಟರು. ಏನೂ ಅಗಲಿಲ್ಲ. ಸುದೀಪ ಸಿಕ್ಕಾಗ ಸಂಜೆಯ ಆರು ಗಂಟೆ. ಅತ್ಯುತ್ತಮ ಈಜು ಪಟುವಾಗಿದ್ದವ ಕೇವಲ ಮೊಳಕಾಲು ಉದ್ದದ ನೀರಿನಲ್ಲಿ ಅಂಗಾತ ಮಲಗಿ ಹಾಗೆ ಪ್ರಾಣ ಬಿಟ್ಟು ಬಿಟ್ಟಿದ್ದ. ಅವನನ್ನು ಹುಡುಕಲು ನೀರಿಗಿಳಿದವರು ಅದೆಷ್ಟು ಬಾರಿ ಅವನ ದೇಹದ ಮೇಲೆ ಓಡಾಡಿದ್ದರೋ ದೇವರಿಗೆ ಗೊತ್ತು. ಸುಂದರಾಂಗ ಅಂಗಾತ ಮಲಗಿದವನ ಕೈಯ್ಯಲ್ಲಿ ಬರೆದುಕೊಂಡಿದ್ದು ಕೇವಲ " ದೀಪ ". ಆದರೆ ಆವತ್ತಿನದು ಆತ್ಮಹತ್ಯೆಯಾ...? ಆಕಸ್ಮಿಕವಾ...? ನೋಡಿದವರು ಒಬ್ಬರೂ ಇಲ್ಲ. ಅಸಲಿಗೆ ಅವನಲ್ಲಿ ಅದೆಷ್ಟು ದೊಡ್ಡ ಮಟ್ಟದ ಹೋಪ್ ಇತ್ತೆಂದರೆ ಖಂಡಿತಾ ಆಕೆ ತನ್ನನ್ನು ನೋಡುತ್ತಲೇ ಕಣ್ಣರಳಿಸಿ ಇನ್ನಿಲ್ಲದ ಸಂಭ್ರಮ ಪಡುತ್ತಾಳೆ ಎಂದುಕೊಂಡಿದ್ದ.
ಆಕೆ ಒಮ್ಮೆ ಅವನಲ್ಲಿ ಮೊದಲಿನ ಸ್ನೇಹ ಸಹಜತೆಯಿಂದ ಮಾತಾಡಿ " ನೀನು ಚೆನ್ನಾಗಿರು ... ನಿನಗೆ ನಾನು ಮೋಸ ಮಾಡಿಲ್ಲ. ಪರಿಸ್ಥಿತಿಯಿಂದಾಗಿ ನಿನ್ನ ಮದುವೆಯಾಗಲಾಗಲಿಲ್ಲ..." ಇತ್ಯಾದಿಯ ಕೇವಲ ಒಂದು ಸಾಂತ್ವನ ಆಕೆಯಿಂದ ಅವನು ನಿರೀಕ್ಷಿಸಿದ್ದ. ಅಸಲಿಗೆ ಅವನು ಮೊದಲಿಗೆ ನಮ್ಮಲ್ಲಿ ಹೀಗೇ ಹೇಳಿಕೊಂಡಿದ್ದನಾದರೂ ಅದು ಎಲ್ಲಾ ಪ್ರೇಮಿಗಳು ಹೇಳುವ ಮಾತೇ ಅಂದುಕೊಂಡಿದ್ದೆವಾದರೂ, ಕೊನೆಯಲ್ಲಿ ಅವನಲ್ಲಿದ್ದ ಸಣ್ಣ ನೋಟ್ ಬುಕ್ಕಿನಲ್ಲಿ ಬೆಂಗಳೂರಿಗೆ ಹೊರಡುವ ದಿನ ಬರೆದುಕೊಂಡಿದ್ದ ವಾಕ್ಯ ನೋಡುವವರೆಗೂ ಯಾರಿಗೂ ಅವನ ಪ್ರೇಮದ ಗಾಢತನ ಅರಿವಾಗಿರಲೇ ಇಲ್ಲ. ಅಲ್ಲಿದ್ದುದು ಇಷ್ಟೆ " ದೀಪಾ ನನ್ನ ಒಮ್ಮೆ ಪ್ರೇಮದಿಂದ ನೋಡಿಬಿಡು. ನಾನು ನಿನ್ನ ನೆನಪಿನಲ್ಲೇ ಒಂದು ಬದುಕು ಕಂಡುಕೊಳ್ಳುತ್ತೇನೆ. ಇನ್ನೇನು ಬೇಡ. ಆದರೆ ಯಾವುದೇ ಕಾರಣಕ್ಕೂ ನನ್ನ ಪ್ರೀತಿಯ ನಂಬಿಕೆ ಕುಸಿಯದಿರಲಿ ಅಷ್ಟೆ " ದಿನಾ೦ಕ ೧೦. ಜುಲೈ ೯೦. ವಿಪರ್ಯಾಸವೆಂದರೆ ಅವನ ಬದುಕಿನಲ್ಲಿ ಘಟಿಸಿದ ಎಲ್ಲಾ ತಿರುವುಗಳಿಗೂ ಅಕ್ಷರಶ: ಮೂಕ ಸಾಕ್ಷಿ ಆ ತಾರೀಕು. ಇದಕ್ಕಿಂತಾ ಬೇರೆ ಪ್ರೇಮ ಕಥೆ ನಮಗೆ ಸಿಕ್ಕೀತೆ...? ಅಸಲಿಗೆ ಆಕೆ ತಿರಸ್ಕರಿಸಿದ ಮೇಲೆ ಅವನೆಂದೂ ಆಕೆಯನ್ನು ಮತ್ತೆ ಕಾಣುವ ತವಕವನ್ನೇ ಮಾಡಲಿಲ್ಲವಾದರೂ ಅವನಲ್ಲಿ ಆಕೆಯೆಡೆಗಿದ್ದ ಕನ್ಸರ್ನ್... ಆ ಪ್ರೇಮ ಇವತ್ತಿಗೂ ನನ್ನನ್ನು ಇನ್ನಿಲ್ಲದಂತೆ ಹಿಂಡುತ್ತದೆ. ಕೀ ಬೋರ್ಡ್ ಬಿಡುವ ಮುನ್ನ ಹೃದಯ ದ್ರವಿಸಿ ಬಿಟ್ಟಿತ್ತು. - ( ಕಳೆದ ತಿಂಗಳು ಇನ್ನಿಲ್ಲದೆ ಕಾಡಿದ ನೆನಪಿನ ಆವರಣ ಇದು.. ಆಗಲೇ ನನ್ನ ವಿಸ್ಮಯ ನಗರಿ ಬ್ಲಾಗ್ ನಲ್ಲಿ ಇದೆ.. ಮತ್ತೆ ಇಲ್ಲೊಮ್ಮೆ ಕಾಪಿ ಮಾಡಿದ್ದೇನೆ )