Monday, January 23, 2017


ಅವನ್ಯಾಕೆ ಮಾತೇ ಅಡುವುದಿಲ್ಲ...?

( ಹೆಚ್ಚಿನಂಶ ಅವರವರ ಮನೆಯಲ್ಲಿ ತನ್ನ ಗಂಡ ಮಾತೇ ಆಡುವುದಿಲ್ಲ ಎನ್ನುವದೂರು ಸಹಜ ಮತ್ತು ಅವನಲ್ಲೀಗ ಮೊದಲಿದ್ದ ಆಸಕ್ತಿ ಉತ್ಸಾಹ ಎರಡೂ ಮಾತಾನಾಡುವುದರಲ್ಲಿ ಉಳಿದೇ ಇಲ್ಲ ಎನ್ನುವ ಕಮೆಂಟು ಸುಅಭವಾಗಿ ಅವನಿಗೆ ತಗಲುತ್ತಲೇ ಇರುತ್ತದೆ. ಅದು ಒಂದಿಷ್ಟು ನಿಜವಾದರೂ ಅಸಲಿಗೆ ಅವನು ಬೇಕೆಂದೇ ಅದನ್ನು ಮಾಡುತ್ತಿರುವುದಿಲ್ಲ. ಒಲ್ಲದ ಮನಸ್ಥಿತಿಗೆ ದೇಹದಲ್ಲಿ ಸ್ರವಿಸುವ ಹಾರ್ಮೋನು ಅವನನ್ನು ಬೇರೆಡೆಗೆ ಸೆಳೆಯುತ್ತಾ ಅವನಿಗರಿವಾಗದೆ ಅವನನ್ನು ಮಾತಾಡದಂತೆ ತಡೆಯಲು ಪ್ರೇರೇಪಿಸುತ್ತಿರುತ್ತದೆ. ಇದು ಗೊತ್ತಿಲ್ಲದ ಶೇ. 98 ರಷ್ಟು ಕುಟುಂಬದಲ್ಲಿ ಆತ ಮೌನವಾಗಿದ್ದೇ ಖಳನಾಗುತ್ತಿರುತ್ತಾನೆ.)

ಬಹಳಷ್ಟು ದಂಪತಿಗಳಲ್ಲಿ ಒಂದು ದೂರು ಸಹಜವಾಗಿ ಕೇಳುತ್ತಿರುತ್ತದೆ. 
" ...ರಾಜಕೀಯ, ಕ್ರಿಕೇಟು, ಸಿನೇಮಾ ಬಿಟ್ಟರೆ ಬೇರೆ ಮಾತೆ ಇಲ್ಲ ಅವರಿಗೆ. ಊರವರ ಜತೆಗೆಲ್ಲಾ ಮಾತಾಡೊಕೆ ಆಗುತ್ತೆ ನನ್ನ ಜತೆ ಮಾತಾಡೊಕೆ ಸಮಯವೇ ಇಲ್ಲ ಅವರಿಗೆ. ಏನು ಕೇಳಿದರೂ ಹಾಂ ಹೂಂ ಅಂತಿರ್ತಾರೆ. ಬರೀ ಲೆಕ್ಕಾಚಾರದಷ್ಟೆ ಮಾತಾಗುತ್ತೆ. " ಇತ್ಯಾದಿ. 
ಹೌದು. ಆತ ಕ್ರಮೇಣ ಮಾತೇ ನಿಲ್ಲಿಸಿರುತ್ತಾನೆ ಹಾಗಂತ ಆಕೆಯ ಕಂಪ್ಲೆಂಟು. ಆದರೆ ವೈಜ್ಞಾನಿಕವಾಗಿ ಅದು ಅವನ ನಿರ್ಧಾರವಾಗಿರುವುದಿಲ್ಲ. ಅನುಭವ ಮತ್ತು ಮಾನಸಿಕ ಸ್ಥಿತಿಗತಿಗೆ ಸಿಲುಕಿದ ದೇಹದ ಸಮತೋಲನ ನಿರ್ವಹಿಸುವ ಹಾರ್ಮೋನುಗಳು ಅವನನ್ನು ಆ ಸ್ಥಿತಿಗೆ ತಂದು ನಿಲ್ಲಿಸಿರುತ್ತವೆ. ಹಾಗಾಗಿ ಆತ ಎಲ್ಲಿ ಮತ್ತು ಏನು ಮಾತಾಡಬೇಕೆನ್ನುವುದನ್ನು ಅವನಿಗೆ ಗೊತ್ತಿಲ್ಲದೆ ಅವನ ಮನಸ್ಸು ನಿರ್ಧರಿಸಿಬಿಟ್ಟಿರುತ್ತದೆ. 
ಆದರೆ ಅಪವಾದ ಮತ್ತು ಬೈಗುಳುಗಳಿಗೆ ಅವನು ತುತ್ತಾಗುತ್ತಲೇ ಇರುತ್ತಾನೆ. ಅದರ ಮುಂದುವರಿದ ಪರಿಣಾಮವಾಗಿ ಬಿಗು ಇನ್ನಷ್ಟು ಬೆಳೆಯುತ್ತದೆ ಹೊರತಾಗಿ ಚಿಂತನೆ ಮತ್ತು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವ ಯಾವ ಚರ್ಚೆಯೂ ನಡೆಯುವುದೇ ಇಲ್ಲ. ಅಷ್ಟಕ್ಕೂ ಗಂಡಸು, ಪುರುಷ, ಹುಡುಗ, ಗಂಡ, ಅಪ್ಪ ಹೀಗೆ ಯಾವ್ಯಾವುದೋ ರೂಪದಲ್ಲಿರುವ ಅವನ್ಯಾಕೇ ಮಾತೇ ಆಡುವುದಿಲ್ಲ...? 
ಇದು ಬರೀ ಹೆಣ್ಣೊಬ್ಬಳ ಪ್ರಶ್ನೆ ಅಲ್ಲ. ಆರಂಭದಲ್ಲಿ ಹಲವು ಔಚಿತ್ಯಗಳಿಗೆ ಮತ್ತು ತನ್ನೆಲ್ಲಾ ಪ್ರವರಗಳನ್ನು ಹೇಳಿಕೊಳ್ಳಲು ಸಾಲುಸಾಲಾಗಿ ಮಾತುಗಳನ್ನು ಪೆÇೀಣಿಸುತ್ತಿದ್ದ ಹುಡುಗ, ಮದುವೆಯ ನಂತರದ ದಿನಗಳಲ್ಲಿ ಇದ್ದಕ್ಕಿದ್ದಂತೆ ಮೌನವಾಗಿ ಹೋಗುತ್ತಾನೆ ಅಥವಾ ಆಕೆಗೆ ಹಾಗಂತ ಅನ್ನಿಸಿರುತ್ತದೆ. ಕ್ರಮೇಣ ಗಂಡನಾದವನೂ ಎಲ್ಲದಕ್ಕೂ ಹಾಂ.. ಹೂಂ.. ಎಂದಷ್ಟೆ ಮಾತಾಡುತ್ತಾನೆ ಹೊರತಾಗಿ ತನ್ನ ಭಾವನೆಗಳನ್ನು ಯಾಕೆ ಏನೂ ಹೇಳೊದೇ ಇಲ್ವಲ್ಲ. ಯಾಕೆ ಗಂಡಸರಿಗೆ ಭಾವನಾತ್ಮಾಕ ಮಾತೇ ಬೇಕಿರೋದಿಲ್ವಾ..? ಅದೇ ಹೊರಗೆ ನಾಲ್ಕಾರು ಜನ ಸೇರಿದರೆ ರಾಜಕೀಯ, ಕಛೇರಿ ಮ್ಯಾಟರ್ರು, ಕ್ರಿಕೆಟ್ಟು ಅಬ್ಬಬ್ಬಾ ಅದೇನು ಮೀಟರ್ರು, ನಾಲ್ಕಾರು ತಾಸು ಬೇಕಿದ್ದರೂ ನೋಡುನೋಡುತ್ತಲೇ ಮಾತಾಡುತ್ತಾ ಕಳೆಯುತ್ತಾರೆ. ಒಳ ಬರುತ್ತಿದ್ದಂತೆ ಅದ್ಯಾಕೆ ಗಂಭೀರ ಗಣಪತಿಯಾಗುತ್ತಾನೆ..? ಸಂಬಂಧಿಕರು ಬಂದಿದ್ದರೆ, ಸ್ನೇಹಿತೆಯರಿದ್ದರೆ ಬಾಯೇ ಬಿಡುವುದಿಲ್ಲ. ಇದ್ಯಾಕೆ ಹಿಂಗೆ..? ನಮ್ಮ ಜತೆಗಿನ ಆಪ್ತತೆ ಕಡಿಮೆಯಾಗಿದೆಯಾ...ಅಥವಾ ನಮ್ಮ ಐ.ಕ್ಯೂ. ಇವ್ನಿಗೆ ಸಾಕಾಗುತ್ತಿಲ್ಲವಾ..? 
ಹೀಗೆ ಹಲವು ಸಂದರ್ಭದಲ್ಲಿ ಆಕೆಗೆ ಒಳಗೊಳಗೇ ಅನ್ನಿಸಿದ್ದು ಸುಳ್ಳಲ್ಲ ಮತ್ತು ಗಂಡಸೊಬ್ಬ ಮಾತೇ ಆಡದೆ ಬರೀ ವ್ಯವಹಾರಿಕ ಮಾತುಗಳನ್ನಷ್ಟೆ ಮಾತಾಡುತ್ತಾನೆನ್ನುವ ದೂರಿಗೂ ಅವನು ಜಗ್ಗಲಾರ ಎನ್ನುವುದು ಎರಡೂ ಕಡೆಯ ವಾದ. ಆದರೆ ಹಾಗೊಂದು ಹಂತಕ್ಕೆ ಅವನು ತಲುಪುವ ಮೊದಲು ಆಕೆಯಂತೆ, ಅವನೂ ಕಿವಿ ತೆಗೆದು ಕಾಯುತ್ತಿರುತ್ತಾನೆ ಎನ್ನುವುದು ನೆನಪಿಸಿಕೊಂಡರೆ ನೆನಪಾದೀತು.
ಕಾರಣ ಅವನಿಗೂ ಆಕೆಯ ಮಾತುಗಳು ಬೇಕಿರುತ್ತವೆ. ಆದರೆ ಅದರಲ್ಲಿ ಪ್ರಾಯೋಗಿಕತೆ (ಅಥವಾ ವಾಸ್ತವಿಕತೆ ಅಂತಿಟ್ಟುಕೊಳ್ಳಿ) ಇರೋದೆ ಇಲ್ಲ ಅನ್ನೋದು ಅವನ ವಾದ. ದುರಂತವೆಂದರೆ ಯಾವತ್ತೂ ಇಬ್ಬರೂ ಬಾಯ್ಬಿಟ್ಟು ಹೇಳಿಕೊಳ್ಳಲಾರರು. ಇದೆಲ್ಲಾ ಹೀಗೆ ಇತಿಹಾಸದಿಂದಲೂ ನಡೆಯುತ್ತಾ ಈಗಲೂ ಮುಂದುವರೆಯುತ್ತಿರಲು ಕಾರಣ ಅವಳು ಭಾವ ಜೀವಿಯಾದರೆ ಅವನು ಪ್ರಾಯೋಗಿಕ ಜೀವಿ. ಆಕೆ ಮಾನಸಿಕ ಸಾಂಗತ್ಯ ಇಷ್ಟಪಟ್ಟು ಮುನ್ನಡೆಯುತ್ತಿದ್ದರೆ ಅವನು ದೈಹಿಕ (ಪ್ರಾಯೋಗಿಕ) ಸಾಂಗತ್ಯದ ನಂತರ ಮನಸ್ಸಿನಾಳಕ್ಕೆ ಇಳಿಯುತ್ತಾನೆ. ಆಕೆಗೆ ಮಾತಿನ ನಲುಮೆಯಿಂದ ಗಂಟೆ, ದಿನಗಳನ್ನು ಕಳೆಯಲು ಇಷ್ಟಪಡುತ್ತಾಳಾದರೆ ಅವನಿಗೆ ಇದೆಲ್ಲಾ ಸಿಲ್ಲಿ ಎನ್ನಿಸುವ ರೇಜಿಗೆಗೆ ಕಾರಣ ಅವನ ಮಾನಸಿಕ ಸ್ಥಿತಿಗತಿಯಲ್ಲಿ ಹೀಗೆ ಭಾವನಾತ್ಮಕ ಮಾತುಗಳಿಗೆ ಪ್ರಾಯೋಗಿಕ ಔಟ್‍ಪುಟ್ ಏನೂ ಇರೋದಿಲ್ಲ ಎನ್ನುವ ತರ್ಕ. 
ಇದೆಲ್ಲದರ ಫಲಿತಾಂಶ ಇಬ್ಬರ ಮಧ್ಯೆ ಒಂದು ಪಾರದರ್ಶಕ ಗೋಡೆ ಎದ್ದು ನಿಲ್ಲುತ್ತದೆ. ಇಬ್ಬರಿಗೂ  ಎಲ್ಲ ಕಾಣುತ್ತಿದೆ ಆದರೆ ಕೇಳಿಸುವುದಿಲ್ಲ. ಎಲ್ಲಾ ಗೊತ್ತಾಗುತ್ತಿದೆ ಆದರೆ ಇಬ್ಬರ ಮಾತುಗಳಿಗೂ ಜೀವವಿರುವುದಿಲ್ಲ ಹಾಗಾಗಿ ಏನೂ ಅರ್ಥವಾಗುತ್ತಿಲ್ಲ. ಅಷ್ಟೊತ್ತಿಗೆ ಕೆಲವು ವರ್ಷಗಳ ಕಾಲದ ಸಾಂಗತ್ಯ ಅಥವಾ ದಾಂಪತ್ಯದಲ್ಲಿ ಕೆಲವು ವಿಷಯ ಮತ್ತು ಸೂಕ್ಷ್ಮತೆ ಅರ್ಥವಾಗಿಬಿಟ್ಟಿರುತ್ತದೆ. ಜತೆಗೆ ಅವರಿಬ್ಬರಲ್ಲಿನ ಲೈಂಗಿಕ ಆವರ್ತನೆಯಲ್ಲಿನ ಒಳಗೊಳ್ಳುವಿಕೆಯ ಹಂತದಲ್ಲಿ ಅಗತ್ಯದ ತೆರೆದುಕೊಳ್ಳದಿರುವಿಕೆ ಕೂಡಾ ನಿರ್ದಿಷ್ಟ ಎತ್ತರದ ಗೋಡೆಯ ರೂಪತಾಳಿರುತ್ತದೆ. ಗಮನಿಸಿ ನೋಡಿ. ಹೆಣ್ಣಾದವಳು ರಸಿಕತೆಯಲ್ಲಿ ಯಾವ ನಾವಿನ್ಯತೆಯನ್ನೂ ಪ್ರಯತ್ನಿಸದಿದ್ದರೆ ಅಷ್ಟರ ಮಟ್ಟಿಗೆ ಅವನ ಜೀವನದ ಅರ್ಧ ರಸ ಕಡಿಮೆಯಾದಂತೇನೆ. 
ಏನು ಮಾಡಬೇಕು ಹೇಗೆ ಮಾಡಬೇಕು ಎನ್ನುವುದನ್ನೆಲ್ಲಾ, ಸರಸ ಎಷ್ಟು ರಸಮಯವಾಗಿರಬೇಕು ಎನ್ನುವುದನ್ನು ಮದುವೆ ಆಗಿ ಆರೆಂಟು ವರ್ಷ ಕಳೆದ ದಂಪತಿಗಳಿಗೆ ಕಲಿಸುವ ಹೇಳಿಕೊಡುವ, ವಿಡಿಯೋ ತೋರಿಸುವ ಅಗತ್ಯವಿರುವುದೇ ಇಲ್ಲ. ಆದರೆ ಹಾಗೊಂದು ಪ್ರಯತ್ನದಲ್ಲಿ ಆಕೆ ಸಹಕರಿಸದಿದ್ದರೆ ಆತ ಸಪ್ಪಗಾಗತೊಡಗುತ್ತಾನೆ. ಆಕೆಗೆ ಯಾವ ಹೊಸ ಮಾಹಿತಿ, ಬದಲಾವಣೆ, ವಿಭಿನ್ನತೆ ಇತ್ಯಾದಿ ಗೊತ್ತೇ ಇರುವುದಿಲ್ಲ ಎಂದಿಟ್ಟುಕೊಂಡರೂ, ಅವನ ಮೇಲೆ ಹಾಗೊಂದು ಸಾಂಗತ್ಯವನ್ನು ಹಂಚಿಕೊಳ್ಳುವುದರಿಂದಲೇ ಬದುಕು ಇನ್ನಷ್ಟು ರಸಮಯವಾಗಲಿದೆ ಎನ್ನುವ ನಂಬುಗೆನಾದರೂ ಆಕೆಗೆ ಇರುತ್ತದಾ...? ಅದೂ ಇಲ್ಲ. ಯಾವದಕ್ಕೂ ಕೇವಲ ತನ್ನ ಅರಿವಿಗೆ ದಕ್ಕಿದ ಜ್ಞಾನ ಮಾತ್ರವೇ ಸತ್ಯ ಎನ್ನುವ ವಾಸ್ತವಕ್ಕೆ ಬಿಗಿದು ಆತುಕೊಂಡು ನಿಂತುಬಿಟ್ಟಿರುತ್ತಾರೆ. 
ಎಲ್ಲದಕೂ ಒಲ್ಲೆನೆನ್ನುವ ಸಹವರ್ತಿಯನ್ನು ಅಧಿಕೃತವಾಗಿ ಯಾರೂ ಒತ್ತಾಯಿಸಲಾರರು. ಅದರಲ್ಲಿ ತಿರಸ್ಕೃತ ಮುಖದ ಒತ್ತಾಯದ ಸಾಮಿಪ್ಯವನ್ನು ನಿಜವಾದ ಗಂಡಸಾದವನು ಎದುರಿಸಲಾರ. ಅಲ್ಲಿಗೆ ಒತ್ತಾಯಿಸಿ ಪಡೆಯಲೊಲ್ಲದ, ಹಾಗೆ ಒತ್ತಾಯದಿಂದ ಸುಖ ಪಡೆಯಲಾರೆನೆನ್ನುವ ಸತ್ಯ, ಗಂಡಸಿನ ಅಳಿದುಳಿದ ಆಸಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ಹಾಗೆ ನಕಾರಾತ್ಮಕ ಮತ್ತು ನಾವಿನ್ಯತೆ ಇಲ್ಲದ ದಾಂಪತ್ಯದ ಸಾಂಗತ್ಯದಲ್ಲಿ ಕ್ರಮೇಣ ಆಸಕ್ತಿ ಕಳೆದುಕೊಳ್ಳುತ್ತಾನೆ. ಅ ಒಂದು ಹಂತದ ಸಲುಗೆಯ ನಂತರದಲ್ಲಿ ಅವನಿಗೆ, ಆಕೆ ತನಗೇನು ಬೇಕು ಎನ್ನುವುದನ್ನು ಅರಿತುಕೊಳ್ಳಲಿ ಎನ್ನುವ ಭಾವ ಮೊಳೆಯುತ್ತಿರುತ್ತದೆ. ಆದರೆ ಆಕೆ ಅದಕ್ಕೆ ಪಕ್ಕಾಗುವುದಿಲ್ಲ ಎನ್ನುವುದರಿವಾಗುತ್ತಿದ್ದಂತೆ ಆ ಖಾಸಗಿ ಸಾಂಗತ್ಯ ತೀರ ಯಾಂತ್ರಿಕವಾಗತೊಡಗುತ್ತದೆ. ಅದು ಅವನ ಸಂಗಾತಿಯೊಂದಿನ ಖಾಸಗಿ ಆಪ್ತತೆಯ ಅಂತರವನ್ನೂ ಹೆಚ್ಚು ಮಾಡತೊಡಗುತ್ತದೆ.
 ಕ್ರಮೇಣ ಅವನಿಗೆ ಯಾವುದನ್ನಾದರೂ ಹಂಚಿಕೊಳ್ಳಬೇಕು ಎನಿಸುವ ಮನಸ್ಸೂ ಕಡಿಮೆಯಾಗತೊಡಗುತ್ತದೆ. ಅಂತಿಮವಾಗಿ ಅದು ಪ್ರಮುಖ ಸಂವಹನ ಮಾಧ್ಯಮವಾದ ಮಾತಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೆ ಆಗುವ ಚಕ್ರದಲ್ಲಿ ಉಧ್ಬವಾಗುವ ಅಶಾಂತಿ, ಅಸಂತೃಪ್ತಿ ಪರಿಣಾಮ ಅವನಿಗರಿವಾಗದೆ ಅವನ ಭಾವನೆಗಳ ಮೇಲೂ ಬೀಳತೊಡಗುತ್ತದೆ. ಹಾಗಾಗಿ ಆತ ಈಚೆ ಬರುತ್ತಿದ್ದಂತೆ ತನ್ನ ಇತರೆ ಹವ್ಯಾಸ, ಆಸಕ್ತಿ ಮತ್ತು ಇತರ ಚಟುವಟಿಕೆಗಳತ್ತಲೇ ಮಾತುಕತೆ ಹೊರಳಿಸುವಂತಾಗುತ್ತಾನೆ ಹೊರತಾಗಿ ಅವನಾಗಿ ಬೇಕೆಂದೆ ಹಾಗೆ ಮಾಡಿರುವುದಿಲ್ಲ. 
ಹೆಣ್ಣು ಮತ್ತು ಗಂಡುಗಳಿಬ್ಬರ ಭಾವನಾತ್ಮಕ, ಪ್ರಾಯೋಗಿಕ ವಿಷಯ, ಮಾತುಗಳ ಹಂಚಿಕೆ ಮತ್ತು ವಿಷಯದ ಆಯ್ಕೆ ಅವರ ಕೈಯಲ್ಲಿ ಇಲ್ಲವೇ ಇಲ್ಲ. ಅವರಿಬ್ಬರ ಮಾನಸಿಕ ಸ್ಥಿತಿಗತಿ ಸೇರಿದಂತೆ ಎಲ್ಲವನ್ನೂ ನಿರ್ಧರಿಸುವುದು ಈಗಾಗಲೇ ರೂಪಗೊಂಡಿರುವ ನರಕೋಶಗಳ ಆಧಾರದ ಮೇಲೆ ಹೊರತಾಗಿ ಅವರವರೇ ಅದನ್ನು ಆಯ್ದುಕೊಳ್ಳುವ ಸಾಧ್ಯತೆಗಳು ಇಲ್ಲವೇ ಇಲ್ಲ. ಆದರೆ ದೈನಂದಿನ ನಡವಳಿಕೆ ಮತ್ತು ಮನಸ್ಸಿನ ಹಾರ್ಮೋನ್ ಸ್ರವಿಸುವಿಕೆಗೆ ಕಾರಣವಾಗುವ ಚೋದಕಗಳಿಗೆ, ಹೊರಭಾಗದಲ್ಲಿ ನಡೆಯುವ ಪ್ರಕ್ರಿಯೆಗಳಿಂದ ದೊರಕುವ ಪ್ರಚೋದನೆ ಇಬ್ಬರನ್ನೂ ನಿಯಂತ್ರಿಸುತ್ತಲೇ ಇರುತ್ತದೆ. ಮಾನಸಿಕವಾಗಿ ಮೆದುಳಿನ ಮತ್ತು ಆ ಸಂಬಂಧಿ ನರಗಳ ಪ್ರಕ್ರಿಯೆಗಳಲ್ಲಿ ಭಾವನಾತ್ಮಕ ಮತ್ತು ಪ್ರಾಯೋಗಿಕ ಎಂದು ಇಬ್ಬರಲ್ಲೂ ಈ ಮೊದಲೇ ಬೈ ಡಿಫಾಲ್ಟ್ ಡಿಸೈನ್ ಆಗಿರುವುದರಿಂದ ಮೂಲ ವರ್ತನೆ ಹಾಗೆಯೇ ಇರುತ್ತದೆ. ಆದರೆ ಸಂಗಾತಿ ಮತ್ತು ಸಮಯದ ಅನುಕೂಲದ ಮೇರೆಗೆ ಇಬ್ಬರ ವರ್ತನೆಯಲ್ಲೂ ಬದಲಾವಣೆಗೆ ಅವಕಾಶ ಇದ್ದೇ ಇರುತ್ತದೆ. 
ಇದಕ್ಕೊಂದು ಉದಾ. ಎಂದರೆ ಪರಿಚಯದ ಮೊದಮೊದಲಿಗೆ ಅವನ ಮಾತುಕತೆ ತುಂಬ ಭಾವನಾತ್ಮಕವಾಗಿರುತ್ತದೆ ಮತ್ತದಕ್ಕೆ ಆಕೆ ಅದೆಷ್ಟು ತಿವ್ರವಾಗಿ ಸ್ಪಂದಿಸುತ್ತಾಳೆಂದರೆ ಅವರಿಬ್ಬರ ಸಾಮಿಪ್ಯಕ್ಕೆ ಸಮಯವೇ ಉಳಿದಿರುವುದಿಲ್ಲ. ಅದೇ ಒಮ್ಮೆ ಸಾಂಗತ್ಯ ನೇರವೇರುತ್ತಿದ್ದಂತೆ ಆತ ಪ್ರಾಯೋಗಿಕವಾಗಿ ಬಿಡುತ್ತಾನೆ. ಇದನ್ನು ನೀವೆ ನಿಮ್ಮ ಜೀವನ ಶೈಲಿಯಲ್ಲಿ ಸಂಗಾತಿಯೊಂದಿಗಿನ ನಡೆನುಡಿಯಲ್ಲಿ ಗಮನಿಸಿಕೊಳ್ಳಬಹುದು. ಪುರುಷ ಮಿಲನಕ್ಕೂ ಮೊದಲು ವ್ಯವಹರಿಸುವ ರೀತಿಗೂ ನಂತರ ತತಕ್ಷಣ ಮೊಬೈಲು, ಟಿ.ವಿ. ರಿಮೋಟ್ ಎತ್ತಿಕೊಂಡು ಕೂಡುವ ವರ್ತನೆಯನ್ನು ಗಮನಿಸಿದರೆ ಇದರ ಒಳಾರ್ಥ ಸೂಕ್ಷ್ಮವಾಗಿ ಅರ್ಥವಾದೀತು. ಪ್ರಾಯೋಗಿಕ ನಡೆ ಮತ್ತು ಬಯಕೆಯ ಭಾವಗಳಲ್ಲಿ, ಪ್ರಾಯೋಗಿಕತೆ ಗೆದ್ದಾಗ ಭಾವುಕತೆಯಲ್ಲಿ ಇಳಿಕೆಯಾಗುತ್ತದೆ. ಇದನ್ನೆ ನಾನು "ಭಾವ - ಪ್ರಾಯೋಗಿಕ ಸಿದ್ಧಾಂತ" ಎಂದು ಕರೆದಿದ್ದು ಮತ್ತು ಇದನ್ನು ಸೂಕ್ಷ್ಮವಾಗಿ ಗ್ರಹಿಸಿ, ಸಹನೆಯಿಂದ ಚರ್ಚೆ, ತರ್ಕಕ್ಕೆ ಕೂತಲ್ಲಿ ಈ ನೈಸರ್ಗಿಕ ತಾಕಲಾಟದಿಂದ ಹೊರಬಂದು ಬೇಕಾದಂತೆ ಇಬ್ಬರೂ ಬದುಕು ಕಟ್ಟಿಕೊಳ್ಳಬಹುದಾಗಿದೆ. ಆದರೆ ತೀವ್ರವಾಗಿ ಸಾಂಗತ್ಯದಲ್ಲಿ ಸಂಗಾತಿಯ ನಿರೀಕ್ಷೆಗಳು ಸೋಲುವಾಗ ಆತ ಅದನ್ನು ಕೇಳಿ ಪಡೆಯದ ದಾಕ್ಷಿಣ್ಯದ ಭಾವಕ್ಕೂ, ಅದೆಲ್ಲಾ ಆಗುವುದಿಲ್ಲ ಎನ್ನುವ ಆಕೆಯ ನಿಯಂತ್ರಿತ ಒಲವಿನ ಕಾರಣಕ್ಕೂ, ಆತ ತಾನೂ ಇದ್ದ ಗೆರೆ ದಾಟುವುದೇ ಇಲ್ಲ. ಇನ್ನು ಅದೆಂಗೆ ಇಬ್ಬರ ಮಧ್ಯದಲ್ಲಿ ಭಾವ-ಪ್ರಾಯೋಗಿಕ ಒಲವಿನ ಪರಿಭಾಷೆ ನಿರಂತರವಾಗಿ ಹರಿಯಲು ಸಾಧ್ಯ...? 
ಇನ್ನೂ ಒಂದಿದೆ, ಇಬ್ಬರಲ್ಲೂ ಕೆಲವೊಂದು ವ್ಯತಿರಿಕ್ತ ಭಿನ್ನಾಭಿಪ್ರಾಯಗಳು ಮತ್ತು ಏನು ಮಾತಾಡಿದರೆ ಅದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತದೆ ಎನ್ನುವುದು ಇಬ್ಬರ ಅರಿವಿಗೂ ಬಂದುಬಿಟ್ಟಿರುತ್ತದ್ದಾರಿಂದ ಇಬ್ಬರೂ ಆಯಾ ಭಾವನೆಗಳನ್ನು ಸುಧಾರಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಅದರಿಂದ ಆ ಗೋಡೆ ಮಾತುಗಳ ಮಧ್ಯೆ ಕಂಡೂ ಕಾಣದಂತೆ ಎದ್ದು ನಿಲ್ಲುತ್ತಲೆ ಇರುತ್ತದೆ. ಪ್ರತಿ ಸಂವಹನದಲ್ಲೂ ಇಬ್ಬರಲ್ಲೂ ಒಂದು ಅಂತರ್ಗತ ಎಚ್ಚರಿಕೆ ಅವರಿಗರಿವಾಗದೆ ಬೆರೆತು ಬಿಟ್ಟಿರುತ್ತದೆ. ಹಾಗೆ ಮಾತಿಗೆ ಮೊದಲೇ ಢಾಲು ಅಡ್ಡ ಇರಿಸಿಕೊಂಡಿದ್ದೇ ಆದರೆ ಮಾತುಗಳು ಭಾವನಾತ್ಮಕವಾಗಿ ಅವರನ್ನು ಹತ್ತಿರಕ್ಕೆ ಸರಿಸುವುದೇ ಇಲ್ಲ. ಅಲ್ಲಿಗೆ ಮಾತಿಗಿಂತ ಮೌನಕ್ಕೆ ಹೆಚ್ಚು ಸಾಂಗತ್ಯ ದೊರಕುತ್ತಾ ಏನಾದರೂ ಮಾತಾಡಿ ಕಿರಿಕ್ ಮಾಡಿಕೊಳ್ಳುವುದಕ್ಕಿಂತ ಸುಮ್ಮನಿದ್ದು ಬಿಡೋಣ ಎನ್ನಿಸತೊಡಗಿ ಇಬ್ಬರಲ್ಲೂ ಮಾತು ಕ್ರಮೇಣ ಕಡಿಮೆಯಾಗುತ್ತಾ ಎಲ್ಲಿ ತಮ್ಮ ಮಾತಿಗೆ ಬೆಲೆ ಇರುತ್ತದೋ, ಭಾವಕ್ಕೆ, ಪ್ರಾಯೋಗಿಕ ಸಂವಹನಕ್ಕೆ ಒತ್ತು ದೊರಕುತ್ತದೋ ಅಲ್ಲಷ್ಟೆ ಮಾತಿನ ರಭಸ ಹೆಚ್ಚಾಗುತ್ತಿರುತ್ತದೆ. 
ದುರಂತವೆಂದರೆ ಯಾವ ದಂಪತಿಯರಲ್ಲೂ ಇದನ್ನು ಒಡೆಯುವ ಮನೋಭಾವ ಮಾತ್ರ ಸಿದ್ಧಾಂತದಾಚೆಗೆ ಬರುತ್ತಲೇ ಇಲ್ಲ. ಇಬ್ಬರೂ ಮಾತಾಡಿ ಯಾಕೆ ಮೂಡ್ ಹಾಳುಮಾಡಿಕೊಳ್ಳೊದು ಎನ್ನುವ ನಿಲುವಿಗೆ ಬಂದು ನಿಲ್ಲುತ್ತಿದ್ದಾರೆನ್ನುವುದು ಮೌನಕ್ಕಿಂತಲೂ ದೊಡ್ಡ ಆಘಾತ. ಬದುಕಿನಲ್ಲಿ ಬೇಕಿದ್ದ ಭಾವನಾತ್ಮಕ ಸಾಂಗತ್ಯದ ಜತೆಗೆ ಪ್ರಾಯೋಗಿಕ ಒಲವೂ ಸೇರಿದಾಗ ಇಬ್ಬರ ಮಾತುಗಳಿಗೂ ಜೀವ ಬರುತ್ತದೆ. ಆದರೆ ಸಲ್ಲಬೇಕಿದ್ದ ಸಾಂಗತ್ಯದಲ್ಲಿ ಮೀಸಲಾತಿ ಶುರುವಾದಾಗ ಮಾತುಗಳೂ ಮತ್ತು ನಡತೆಗೂ ಅಂತರಗಳು ಉತ್ಪತ್ತಿಯಾಗತೊಡಗುತ್ತವೆ. ಅದರ ಫಲಿತಾಂಶವೇ ಇಬ್ಬರ ಮಧ್ಯದಲ್ಲಿ ಮಾತುಗಳಿಗೆ ಬರೀ ಶಬ್ದ ಮತ್ತು ಅಕ್ಷರಗಳ ರೂಪ ದೊರೆಯುತ್ತ ಹೊರತಾಗಿ ಅದರಲ್ಲಿ ಜೀವ ಇರುವುದೇ ಇಲ್ಲ. 
ಎಲ್ಲದಕ್ಕಿಂತಲೂ ಯಾವಾಗಲೂ ಅಗುವುದಿಲ್ಲ ಮತ್ತು ಪ್ರತಿ ಕಾರ್ಯದಲ್ಲೂ ನೆಗೆಟಿವ್ ಪ್ರೇರಿತ ಯೋಚನೆಗಳ ಚರ್ಚೆಗಿಳಿಯುವ ಸಂಗಾತಿಯಿಂದ ಅವನು ಆದಷ್ಟು ವಿಷಯಾಂತರ ಮಾಡಲು ಆರಂಭಿಸಿಬಿಡುತ್ತಾನೆ. ಯಾವಾಗ ಚರ್ಯೆಯ ಹಿಂದಿನ ಮನಸ್ಥಿತಿ ತನಗೆ ಹೊಂದಾಣಿಕೆ ಆಗುತ್ತಿಲ್ಲ ಎನ್ನಿಸುತ್ತದೋ ಅಲ್ಲಿಗೆ ಅವನ ಮಾತುಗಳೂ ಕಡಿಮೆಯಾಗತೊಡಗುತ್ತವೆ. ಆದರೆ ಹಾಗೆ ಆಗುತ್ತಿರುವ ಬದಲಾವಣೆಯನ್ನು ಬದಲಿಸಬೇಕಾದ ಆಕೆ ಅದಕ್ಕೆ ಮತ್ತಿಷ್ಟು ನೀರು ಹೊಯ್ಯುವ ಮೂಲಕ ಆರಿಸಿಬಿಡುತ್ತಾಳೆ. 
ಅಲ್ಲಿಗೆ ಎಲ್ಲವೂ 
ಶಾಂತಿ.. ಶಾಂತಿ.. ಶಾಂತಿ..