Monday, May 29, 2017

ಸ್ವತ: ಮಾಡಿಕೊಳ್ಳುವ ಸಿಹಿವಂಚನೆ ಅದು...

(ಎಲ್ಲಾ ಗೊತ್ತಾದರೂ "ಅಯ್ಯೋ.." ಎನ್ನುವ ಅವನ ಮಾತಿಗೆ ಆಕೆ ಒಳಗೊಳಗೆ ನಕ್ಕು ಸುಮ್ಮನಾಗುತ್ತಾಳೆ. ಕಾರಣ ಆಕೆಗೊಂದು ಆಪ್ತ ಸ್ನೇಹದ ಮನಸ್ಸು ಬೇಕಿರುತ್ತದೆ. ಮಾತಾಡಿಕೊಳ್ಳಲು ಇಂಥ "ಕಡಿಮೆ ಡೆಂಜರ್"ಎನ್ನಿಸುವವನು ಬೇಕಿರುತ್ತಾನೆ.)
"..ಎಷ್ಟು ಸರ್ತಿ ಹೇಳಿದೀನಿ ನಿನ್ಗೆ ಟೈಂಗೆ ಸರಿಯಾಗಿ ಇರ್ಬೇಕು ಅಂತಾ. ಕಾಲ್ ಬೇರೆ ಹೋಗ್ತಿಲ್ಲ ನಿನಗೆ.." ಎನ್ನುತ್ತಾ ಆಕೆ ಸ್ನೇಹದಿಂದಲೂ ಅವನ ಜೊತೆಗೆ ಇರುವ ಸಲುಗೆಯಿಂದಲೂ ಕಾರ್ಯಕ್ರಮಕ್ಕೆ ತಡವಾಗಿ ಬಂದವನನ್ನು ಗದರುತ್ತಿದ್ದರೆ, ಆತ ಪ್ಯಾಲಿ ನಗೆ ನಗುತ್ತಾ, ಅರೆ ಚಿಗುರಿದ ಗಡ್ಡ ಕೆರೆದು, 
" ನಿನ್ನಂಗೆ ಎಲ್ಲಾ ಅಪ್‍ಡೆಟ್ ಇರಲ್ಲಮ್ಮಾ ನಾವು.. ಎಲ್ಲಾ ಕಡೆನೂ ಗಮನ ಕೊಡೊದ್ರಲ್ಲಿ ಮೊಬೈಲ್ ಅಪ್ಡೆಟ್ ಮಾಡ್ಕೊಳ್ಳಕೂ ದುಡ್ಡು ಉಳ್ದಿರಲ್ಲ.." ಇತ್ಯಾದಿಯಾಗಿ ಮಾತಲ್ಲೇ ಅಡ್ವಾಂಟೇಜ್ ಹುಟ್ಟಿಸಿಕೊಳ್ಳುತ್ತಾ, ತನ್ನ ಕತೆಯನ್ನು ಅನುಕಂಪ ಭರಿತವಾಗಿ ನುಡಿಯುತ್ತಿದ್ದರೆ, ನಂತರ ನಡೆಯುತ್ತಿದ್ದ ಕಾರ್ಯಕ್ರಮಕ್ಕಿಂತಲೂ ಸ್ನೇಹಿತನ ಮೇಲೆ ಅನುಕಂಪ ಆಕೆಯನ್ನು ಹೆಚ್ಚು ಹಿಂಡಿ ಹಾಕುತ್ತಿತ್ತು. ಅವನು ಬೇಡ ಬೇಡ ಎಂದು ಹಲ್ಲು ಕಿರಿಯುತ್ತಿದ್ದರೂ ಬಿಡದೆ ಅವನಿಗೊಂದು ಒಳ್ಳೆ ಊಟ ಹಾಕಿಸಿ, ಹಾಗೆ ಬಿಲ್ಲು ಕೊಡುವಾಗ ತಾನು, ಮಕ್ಕಳು ಮರಿ ಐಸ್‍ಕ್ರೀಂ ಎಂದೆಲ್ಲಾ ಖರ್ಚು ಮಾಡುವಾಗ ಮಾಡುತ್ತಿದ್ದ ಲೆಕ್ಕಾಚಾರದ ಬದುಕಿಗಿಂತಲೂ ಕೊಂಚ ಹೆಚ್ಚಾಗಿದೆ ಎನ್ನಿಸುವುದು ಅರಿವಿಗೆ ಬಾರದಂತೆ ಮಾಡುವ ಅವನ, ಹದಭರಿತ ಊಟ, ತಮಾಷೆಯ ಪ್ರೀತಿ ಪೂರ್ವಕ ಮಾತಿನ ಭರದಲ್ಲಿ ತುಸು ಹೆಚ್ಚೆ ಖರ್ಚಾಗಿದೆ ಎನ್ನಿಸಿದರೂ ಅದೊಂದು ದುಗುಡ ಎನ್ನಿಸದೆ, ಹೆಂಗೋ ಬದುಕುತ್ತಿದ್ದಾನೆ ಎಂಬ ಸ್ನೇಹ ಪೂರ್ವಕ ಪ್ರೀತಿಯ ಒಲುಮೆಯಲ್ಲಿ ಮರೆತು ಹೋಗುತ್ತಾ ಕಡೆಗೆ ಆಟೊದಲ್ಲಿ ಕೂತಾಗ ಹೀಗೆ ಆಗಾಗ ಅವನಿಗೆ ಕೊಡುವ ಮತ್ತು ಖರ್ಚು ಮಾಡುತ್ತಿರುವದರ ಹಿಂದಿನ ತನ್ನ ಆಪ್ತತೆಯ ಬಗೆಗೆ ಆಕೆಗೆ ಹೆಮ್ಮೆಯಾಗುತ್ತ ಗುನುಗಿಕೊಂಡೆ ಮನೆಯತ್ತ ನಡೆಯುತ್ತಾಳೆ.
ಆದರೆ ಹಾಗೆ ವಿಶ್ವಾಸಗಳಿಸಿಕೊಂಡು ಅವಳಿಂದ ಕೈ ಸಾಲ ಎತ್ತುತ್ತಿರುವ ಆತ, ಅದಾದ ಅರ್ಧ ಗಂಟೆಯಲ್ಲೇ ಇನ್ನೇಲ್ಲೋ ಚಾಟ್‍ನಲ್ಲಿ ಮತ್ತದೇ ಗೋಳು ಹೇಳಿಕೊಳ್ಳುತ್ತಾ ಇನ್ನೊಬ್ಬಳು ಸ್ನೇಹಿತೆಯಿಂದಲೂ ಇನ್ನೊಂದೆರಡು ಸಾವಿರ ಎತ್ತುವಳಿಯ ಉಳುಮೆ ಮಾಡುತ್ತಿದ್ದನೆ ಎಂದು ಗೊತ್ತೇ ಆಗುವುದಿಲ್ಲ. 
ತನ್ನ ಕೈ ನಡೆಯುವಾಗ ಇನ್ನಿಲ್ಲದ ಆರ್ಭಟಕ್ಕಿಳಿಯುವ ಇಂಥವರು, ಅಷ್ಟೆ ನಾಜೂಕಾಗಿ ಕೈ ಸಾಲ ಎನ್ನುತ್ತಿವಲ್ಲ ಅದನ್ನು ಎತ್ತುವುದರಲ್ಲಿ ಪ್ರವೀಣರು. ತೀರ ಹತ್ತಾರು ಸಾವಿರವನ್ನು ಯಾವ ಸ್ನೇಹಿತೆಯೂ ಸುಲಭಕ್ಕೆ ಕೊಡಲಾರಳು. ಅಷ್ಟೊಂದು ಹಣವನ್ನು ಇಟ್ಟುಕೊಂಡು ಓಡಾಡಲಾರರು ಕೂಡ. ಹಾಗೆ ಅಷ್ಟೆಲ್ಲಾ ಕೇಳಿದರೆ ಅದು ವರ್ಕೌಟೂ ಆಗುವುದಿಲ್ಲ. ಆದರೆ ಒಂದೆರಡು ಸಾವಿರ, ನೂರಿನ್ನೂರು ಚಿಲ್ರೆ ಹಣವಾದರೆ ಆಕೆ ವಾಪಸ್ಸು, ಕೇಳದಂತೆನೂ ಇರಬೇಕು. ಕೇಳಿದರೂ ಯಾರೋ ಒಬ್ಬರಿಗೆ ಹಿಂದಿರುಗಿಸಲು ಅನಾನುಕೂಲವೂ ಇರಬಾರದು. ಹೆಚ್ಚಿನ ಇವೆಲ್ಲಾ ಗಾಡಿಗೆ ಪೆಟ್ರೊಲ್ ರೂಪದಲ್ಲೂ, ಎಷ್ಟೊ ಸರ್ತಿ ಸಣ್ಣ ಮೊತ್ತದ ಮೊಬೈಲ್ ಕರೆನ್ಸಿ ರೂಪದಲ್ಲೂ, ಕೆಲವೊಮ್ಮೆ ಆವತ್ತಿನ ಪುಷ್ಕಳ ಚಿಕನ್ ಊಟದ ರೂಪದಲ್ಲೂ(ಬಹುಶ: ತುಂಬ ಜನರಿಗೆ ಈ ಅನುಭವಾಗಿರುತ್ತದೆ. ತಮ್ಮ ಊಟಕ್ಕೆ ಲೆಕ್ಕಾಚಾರವಿರುತ್ತದೆ. ಅದೇ ಬೇರೆಯವರು ಬಿಲ್ಲೆತ್ತುವ ದಿನ ಅದ್ಯಾವುದೂ ಇರುವುದೂ ಇಲ್ಲ ಮತ್ತು ಆವತ್ತು ಕಂಡು ಕೇಳರಿಯದ ಮೆನು ಎಲ್ಲಾ ಟೇಬಲ್ಲಿಗೆ ದಾಖಲಾಗುತ್ತಿರುತ್ತವೆ ಆವತ್ತೇ ಅವರಿಗೆ ಹಸಿವೂ ಕೂಡಾ), ಈ ತಿಂಗಳ ಅಮ್ಮನ ಮೆಡಿಸಿನ್ ಮುಗಿದು ಹೋಗಿದೆ ಎನ್ನುವ ಅನುಕಂಪದ ಅಧಾರದ ಮೇಲೆ, ತಮ್ಮ/ತಂಗಿ ಹಾಸ್ಪಿಟಲ್ ಎನ್ನುವ ಕಾಮನ್ ಆದರೆ ಎಫೆಕ್ಟೀವ್ ರೀಸನ್ನು, ಗಾಡಿಗೇನೋ ಪ್ರಾಬ್ಲಂ ನಡ್ಕೊಂಡೆ ಓಡಾಡ್ತೀದಿನಿ ಎನ್ನುವ ಪಾಪದ ನೆಪ, ಹೀಗೆ ಹತ್ತಿರವಾದ ಸ್ನೇಹಿತೆಯರು ತಾವಾಗಿಯೇ ಪರ್ಸು ಬಿಚ್ಚುವಂತೆ ಮಾಡುವಲ್ಲಿ ಸಿದ್ಧ ಹಸ್ತರು. ಬೇಡ ಬೇಡ ಎನ್ನುತ್ತಲೆ ತೆಗೆದುಕೊಳ್ಳುವ ಬಣ್ಣದ ನೋಟು ಇನ್ಯಾವತ್ತೂ ಆಕೆಯ ಪರ್ಸಿಗೆ ಹಿಂದಕ್ಕೆ ಬಂದ ಉದಾ. ತುಂಬ ಕಡಿಮೆ. 
ಕಾರಣ ಸಾವಿರದ ಆಸುಪಾಸಿನ ಹಣವನ್ನು ಕೇಳುವುದಾದರೂ ಹೇಗೆ..? ಎನ್ನುವ ಮುಲಾಜಿಗೆ ಬೀಳುವ ಹೆಣ್ಣು ಮಕ್ಕಳು, ಕೆಲವೊಮ್ಮೆ ಈ ಯಾಮಾರಿಸುವಿಕೆ ಗೊತ್ತಿದ್ದರೂ ಹೋಗಲಿ ಪಾಪ ಎನ್ನುವ ಮೂರ್ಖತನಕ್ಕೂ ಒಳಗಾಗಿ ಸುಮ್ಮನಿದ್ದು ಬಿಡುತ್ತಾರೆ. ಒಂದೆರಡು ಬಾರಿ ಅವನು ಅಯ್ಯೋ.. " ಎನ್ನುತ್ತಾ ಹಲವು ಅನುಕಂಪಕಾರಿ ಕಾರಣ ಕೊಡುತ್ತಾ ಹಣ ಹಿಂದಿರುಗಿಸದ ಬಗ್ಗೆ ಮುಖ ಸುಟ್ಟಾ ಬದನೆಯಂತೆ ಮಾಡಿ ಅವನು ಹಲ್ಕಿರಿಯುತ್ತಿದ್ದರೆ, 
"..ಪರವಾಗಿಲ್ಲ ಸುಮ್ನಿರು. ನಿನ್ಗೆ ಎಲ್ಲಾ ಅನುಕೂಲ ಆದ್ಮೇಲೆ ಅದರ ಡಬಲ್ ಇಸ್ಕೊಳ್ತೀನಿ.." ಎಂದಾಕೆ ಆಪ್ತ ಸಲುಗೆಯಲ್ಲಿ ನುಡಿಯುತ್ತಿದ್ದರೆ ಅತ್ತ ಅವನು ನಿರಾಳವಾಗಿಬಿಡುತ್ತಿರುತ್ತಾನೆ. ಕಾರಣ ತನ್ನ ಆ ಡಬಲ್ ಕೊಡುವ ಅನುಕೂಲ ಬರುವುದಿಲ್ಲ. ಹಾಗೆ ಆಕೆ ಹೇಳುತ್ತಿದ್ದಾಳೆಂದರೆ ಇನ್ನಾಕೆ ವಿಚಾರಿಸುವುದಿಲ್ಲ. ಅಲ್ಲಿಗೆ ಗಾಂಧಿ ನೋಟಿಗೆ ಕೃಷ್ಣನ ಲೆಕ್ಕವೇ. 
ಅದ್ಯಾವುದಕ್ಕೋ ಅಂತಾ ಕಾಯ್ದಿಟ್ಟ ಹಣವನ್ನೂ ಇಂತಹ ಪ್ಯಾಲಿ ಹೆಂಗಸರು ಹೀಗೆ ಕಳೆದುಕೊಳ್ಳುತ್ತಲೇ ಇರುತ್ತಾರೆ. ಆದರೆ ಎಲ್ಲೂ ಹೇಳಲಾಗದ ಮತ್ತು ತೀರ ತಲೆ ಹೋಗುವ ಮೊತ್ತವೂ ಅದಲ್ಲವಲ್ಲ. ಅಲ್ಲಿಗೆ ಅವನ ಜೀವನ ಅಷ್ಟರ ಮಟ್ಟಿಗೆ ನವನವೀನ. ಇತ್ತ ಎಲ್ಲಾ ಗೊತ್ತಾದರೂ ಅಯ್ಯೋ ಎನ್ನುವ ಅವನ ಮಾತಿಗೆ ಆಕೆ ಒಳಗೊಳಗೆ ನಕ್ಕು ಸುಮ್ಮನಾಗುತ್ತಾಳೆ. ಕಾರಣ ಆಕೆಗೊಂದು ಆಪ್ತ ಸ್ನೇಹದ ಮನಸ್ಸು ಬೇಕಿರುತ್ತದೆ. ಮಾತಾಡಿಕೊಳ್ಳಲು ಇಂಥ "ಕಡಿಮೆ ಡೆಂಜರ್"ಎನ್ನಿಸುವವನು ಬೇಕಿರುತ್ತಾನೆ. ಬಾಕಿ ಎಲ್ಲಾ ಓ.ಕೆ. ಸಿಕ್ಕಿದರೆ ಚಾನ್ಸು ತೊಗೊಳ್ಳುವವನೇ, ಅದರೆ ಗೆರೆ ದಾಟದ ಮನುಶ್ಯ ಎಂಬಿತ್ಯಾದಿ ಆಕೆಯದ ಮನಸ್ಸಿಗೆ ಸಮಾಧಾನಿಸುವ ಕಾರಣಗಳ ಜೊತೆಗೆ, ಎಲ್ಲೋ ತೀರ ಅಫೇರಾಗದಿದ್ದರೂ ಅದೂಂದು ರೀತಿಯ ಆತ್ಮ ಬಂಧುವಿನಂತಹ ಸಂಬಂಧ ಅನ್ನಿಸಿರುತ್ತದಲ್ಲ ಹಾಗಂದುಕೊಂಡಿರುತ್ತಾಳೆ ಆಕೆ. ಆದರೆ ಅಲ್ಲೆ ಯಡವಟ್ಟುಗಳಾಗೋದು. ( ನೆನಪಿರಲಿ ಹೀಗೆ ದುಡ್ಡು ಯಾಮಾರುವುದು ಒಂಥರಾ ಆಪ್ತ ಆಪ್ತ ಎನ್ನುವ ಸಲುಗೆಯಲ್ಲೇ. ಅದು ತೀರ ಅವರ ಮಧ್ಯದ ಆಫೇರು ಆಗಿರುವುದಿಲ್ಲ. ಅಕಸ್ಮಾತ ಆಗಿದ್ದರೆ ಆಕೆಯನ್ನು ಇಷ್ಟು ಸಣ್ಣ ಮೊತ್ತಕ್ಕೆ ಆತ ಯಾಮಾರಿಸುವುದಿಲ್ಲ.)ಇದೆಲ್ಲಾ ಆಗಿ ಎಲ್ಲಾ ಕಡೆಯಲ್ಲೂ ಅವನು ಹೀಗೆಯೆ ಕೈಎತ್ತುತ್ತಾನೆನ್ನುವುದು ಗೊತ್ತಾಗುತ್ತಿದ್ದರೂ ಹೋಗ್ಲಿ ಎನ್ನುವ ಪ್ಯಾದೆ ಹೆಣ್ಣುಮಕ್ಕಳು ಇವತ್ತು ಇದೇ ಸರ್ಕಲ್ಲಿನಲ್ಲಿ ಸಿಗುತ್ತಾರೆ. ಎಂಥೆಂಥಾ ರೀಸನ್ನುಗಳು ಅಂತೀರಿ. 
ಹಾಗಂತ ಹೆಣ್ಣು ಮಕ್ಕಳೇನೋ ಯಾಮಾರಿಸುವುದೇ ಇಲ್ಲವಾ ಎನ್ನುವ ಆಗತ್ಯವೇ ಇಲ್ಲ. ಅಷ್ಟೆ ಸಂಖ್ಯೆಯಲ್ಲಿ ತನ್ನ ಖರ್ಚಿಗೊಬ್ಬ/ಕುರ್ಚಿಗೊಬ್ಬ ಎಂದು ಬೇರೆ ಬೇರೆ ರೀಸನ್ನುಗಳಿಗೆ ಸ್ನೇಹಿತರನ್ನು ಸಾಕಿಕೊಳ್ಳುವ ಹೆಂಗಸರಿದ್ದಾರೆ. ವಾರಾಂತ್ಯಕ್ಕೆ ಬೇರೆ, ತೀರ ಜೊತೆಯಾಗಿರಲೊಬ್ಬ, ಅಗತ್ಯದ ಅಪಾರ ಖರ್ಚುಗಳಿಗೊಬ್ಬ ಇತ್ಯಾದಿ. ಕೊನೆಕೊನೆಗೆ ಅವನೊಡನೆ ಹೊರಟರೆ ಎಲ್ಲಾ ಅವನದ್ದೇ ಖರ್ಚು ಬಿಡು ಎಂದು ನಿರುಮ್ಮಳವಾಗಿ ಅವನ ಜೇಬು ತೆಳ್ಳಗಾಗಿಸುತ್ತಾ,  ತೀರ ಖಾಸಗಿಯಾಗಿ ಅವನೊಂದಿಗೆ ಕಳೆಯುವಾಗಲೂ ಅವಳಿಗೆ ವ್ಯತ್ಯಾಸಗಳಿರುವುದಿಲ್ಲ. ಇತ್ತ ಇವನೊಂದಿಗೂ ಅತ್ತ ಅವನಿಗೂ ತೆಕ್ಕೆ ಬದಲಿಸುತ್ತಾ ಬದುಕು ಕದಲಿಸುವವರಿದ್ದಾರೆ. ಸ್ನೇಹದ ಹೆಸರಲ್ಲಿ ಕೊಂಚ ಸಲಿಗೆಯವನೂ ಸರಿನೇ, ಸುಮ್ಮನೆ ಅವನ ಬಗಲಿಗೆ ಕೈ ಹೂಡಿ ನಡೆದರಾಯಿತು. ತೀರ ಸರಿಯಾಗಿ ಹುಡುಕಿದರೆ ಇವತ್ತು ಫೇಸ್‍ಬುಕ್ಕಿನಲ್ಲೂ ಅಲ್ಲಲ್ಲಿ ಕಾಲಿಗಡರುತ್ತಾರೆ ಇಂತಹ ಹೆಂಗಸರು. ಅಚ್ಚರಿ ಎಂದರೆ ಇಂಥ ಪರಿಚಯದ ಅರೆಬರೆ ಸ್ನೇಹಿತೆಯರನ್ನು ನಂಬಿಕೊಂಡು, ಸುಖಾಸುಮ್ಮನೆ ಅವರ ಜೊತೆ ಕೂತೆದ್ದು ಪಟ್ಟಾಂಗ ಹೊಡೆಯಲೇ ರಾಜಧಾನಿಗೆ ಎಡತಾಕುವವರೂ ಇದ್ದಾರೆ.
ನೆನಪಿರಲಿ, ಬ್ರಿಗೇಡ್‍ರೋಡ್‍ಲ್ಲಿ ಪರ್ಚೇಸಿಂಗ್ ಮಾಡಸ್ತೀಯಾ ಎನ್ನುವ ಹೆಣ್ಣುಗಳಿಗೂ ಕಡಿಮೆ ಇಲ್ಲ. ಆದರೆ ಹಾಗೆ ತೆವಲಿಗೆಂದೆ ನಮ್ಮ ಜೇಬಿಗೆ ಕೈಯಿಕ್ಕುವವರ ಬಗ್ಗೆ ಯಾರಾದರೂ ಸರಿ ಹುಶಾರಾಗಿರಲೇಬೇಕು. ತೀರ ಅವರಿಬ್ಬರ ಸಂಬಂಧವೆ ಖಾಸಗಿ ರೂಪದಲ್ಲಿದೆ ಎಂದರೆ ಅವರವರು ಏನು ಮಾಡಿಕೊಳ್ತಾರೋ, ಖರ್ಚೋ,  ಲಾಭನೋ ಅದು ಅವರ ಹಣೆಬರಹ. ಆದರೆ ಅಗತ್ಯಕ್ಕೆ ಬಳಸಿಕೊಳ್ಳುವವರ ಇಂತಹ ವಂಚನೆಯಿಂದ, ನಿಜಕ್ಕೂ ಯಾವಾಗಾದರೂ ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದಾಗ ಎಂಥವರೂ ಯೋಚಿಸಿ ಕೈಯೆತ್ತಿಬಿಡುವುದಾಗುತ್ತದಲ್ಲ ಆಗ ಆಗುವ ನಷ್ಟಕ್ಕೆ ಯಾರು ಹೊಣೆ..?
ಕಾರಣ ಇವತ್ತು ತಾನು ಕಷ್ಟದಲ್ಲಿದ್ದೇನೆ ಎಂದು ಕೆಲವೊಮ್ಮೆ ಮಕ್ಕಳ ಶಾಲೆ ಫೀಸಿಗೆ ಹಣ ಕಟ್ಟಿಸಿಕೊಂಡೂ ಕನಿಷ್ಟ ಮಗು ಸ್ಕೂಲಿಗೆ ಹೋಗ್ತಿದೆ ಎನ್ನುವ ಮಾಹಿತಿ ಕೊಡದ ಕೃತಘ್ನರು ಬೇಕಾದಷ್ಟಿದ್ದಾರೆ. ಮಾತು ಮತ್ತು ತೋರಿಕೆಯ ಜಂಭಕ್ಕೇನೂ ಕಮ್ಮಿ ಇರದ ಇಂತಹ ಗಂಡು/ಹೆಣ್ಣು ಇವತ್ತು ಸಮಾನ ಸಂಖ್ಯೆಯಲ್ಲಿದ್ದಾರೆ. ನಿಜಕ್ಕೂ ಹುಶಾರು ತಪ್ಪಿದಾಗ, ಅಗತ್ಯವಿದ್ದಾಗ ಮಾನವೀಯತೆಯ ದೃಷ್ಟಿಯಲ್ಲಿ ಸಹಾಯ ಮಾಡಿದವರನ್ನೇ ಖಳನಾಯಕ/ಕಿ ಸ್ಥಾನದಲ್ಲಿ ನಿಲ್ಲಿಸಿದವರಿಗೂ ಕೊರತೆ ಇಲ್ಲ ಇಲ್ಲಿ. ಜೊತೆಗೆ ಇಂತಹ ಸಹಾಯ ಪಡೆದ/ಮಾಡಿದ ಅವರನ್ನು ಹೊರತು ಪಡಿಸಿ ಉಳಿದವರು ಮಸಾಲೆ ಉರಿಸುವವರೇ ಜಾಸ್ತಿ ಇವತ್ತು ಗೋಡೆ ಬರಹದಲ್ಲಿ. ಹಾಗಾಗಿ ನಮಗೇ ಗೊತ್ತಾಗದಂತೆ ಯಾಮಾರಿಸುವವರ ಜೊತೆಗೆ ಹುಶಾರಾಗಿರದೇ ಇದ್ದರೆ ನಿಜಕೂ ನಮ್ಮದೇ ನಿಜವಾದ ಆಪ್ತರಿಗೆ ಏನಾದರೂ ಕೈ ಮುಂದೆ ಮಾಡಲು ನಾವು ಯೋಚಿಸುವಂತಾಗುವ ಪರಿಸ್ಥಿತಿಗೆ ಬದುಕು ಬಂದು ನಿಂತರೆ ಆಗುವ ಲುಕ್ಷಾನು ಇಂತಹ ಹಲಾಲು ಟೋಪಿ ಸ್ನೇಹಿತರಿಗಲ್ಲ. ನಮಗೇನೆ.. ನೆನಪಿರಲಿ.. 
ಇಲ್ಲದಿದ್ದರೆ ಹೀಗೆಲ್ಲಾ ನಾನು "ಪಿಸುಮಾತು" ಆಡುವ ಅವಶ್ಯಕತೆಯಾದರೂ ಯಾಕೆ ಬರುತ್ತದೆ...? 

Saturday, May 20, 2017

ಜಾಲತಾಣದಲ್ಲೂ ಅದೇ ಹಾಡು ಅದೇ ರಾಗ...

(..ಇವತ್ತು ಸೋಷಿಯಲ್ ಮೀಡಿಯಾ ಕೆಟ್ಟದಿಲ್ಲ. ಋಣಾತ್ಮಾಕ ಅಂಶಗಳು ಎಲ್ಲೆಡೆಗೂ ಇರ್ತವೆ. ಆದರೆ ಎಂಥವನೂ ಒಂದು ಚಾನ್ಸ್ ತೊಗೊಳ್ಳೊಣ ಎಂದೇ ಟ್ರೈ ಕೊಡುತ್ತಾ ಇದ್ದರೆ ಯಾರನ್ನು ನಂಬೋದು. ಇವರಿಗೆಲ್ಲ ಹೆಣ್ಣು ಮಕ್ಕಳೆ ಇರಲ್ಲವಾ ..? " ಇತ್ಯಾದಿ ಮಾತಾಡುತ್ತಿದ್ದ ಆಕೆಯ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ...)

"..ಎನೋ ನನ್ನ ವಾರಿಗೆಯ ಸ್ನೇಹಿತರೆಲ್ಲಾ ಇದಾರೆ ಅಂತಾ ಫೇಸ್‍ಬುಕ್ಕು ವಾಟ್ಸಾಪು ಮಾಡಿಕೊಂಡೆ. ಇದು ನೋಡಿದ್ರೆ ಊರಿಗಿಲ್ಲದ ಉಸಾಬರಿ ಆಗ್ತಿದೆಯೋ ಮಾರಾಯ. ಇಷ್ಟು ವರ್ಷದ ನಂತರ ಅನವಶ್ಯಕವಾಗಿ ನಮ್ಮ ಮನೆಲಿ ಮಾತು ಕೇಳ್ಬೇಕಾಯಿತು ನೋಡು.." ಎನ್ನುತ್ತಾ ಆಕೆ ಅನ್ಯಮನಸ್ಕಳಾಗಿ ಹುಬ್ಬೇರಿಸುತ್ತಿದ್ದರೆ ಜಾಲತಾಣದಲ್ಲಿ ಕುಹಕಿಗಳ, ಮಹಿಳೆಯರನ್ನು ಕಾಡುವ ಹೊಸ ವರಸೆಗಳಿಗೆ ಹೊಸ ಸಾಕ್ಷಿಯಾಗತೊಡಗಿದ್ದೆ. 
ತೀರ ಹೊಸಬರಿಗೆ ಮಾತ್ರವಲ್ಲ, ಮನೆಯಲ್ಲಿದ್ದೇ ಕೆಲಸ ಕಾರ್ಯ ಮಾಡಿಕೊಂಡಿದ್ದ ನೆಮ್ಮದಿಯ ಹೆಣ್ಣುಮಕ್ಕಳಿಗೂ ಹೋಮಮೇಕರ್ ಎಂಬ ಡೆಸಿಗ್ನೇಶನ್ನು ಕೊಟ್ಟಿದ್ದೇ ಇವತ್ತು ಸಾಮಾಜಿಕ ಜಾಲತಾಣಗಳು. ತಂತಮ್ಮ ಮಕ್ಕಳ ಹತ್ತಿರ ಫೇಸ್‍ಬುಕ್ಕು ಐ.ಡಿ ಮಾಡಿಸಿಕೊಂಡು ತಾವೂ ಯುಗಾದಿಗೊಂದು ಫೆÇೀಟೊ, ಒಂದು ಪ್ರವಾಸದ ಚಿತ್ರ, ಯಾವುದೋ ಮಗುವಿನ ಬೊಚ್ಚು ನಗೆ, ಇನ್ಯಾವಾಗಿನದ್ದೋ ತಾನೆ ಬರೆದುಕೊಂಡಿದ್ದ ಹಳೆಯ ಕವನದ ಧೂಳು ಹಾರಿಸಿ ಇಲ್ಲಿ ಪ್ರಕಟಿಸಿಕೊಂಡು, ಎಲ್ಲೆಲ್ಲೋ ಇದ್ದ ಸ್ನೇಹಿತೆಯರೆಲ್ಲಾ ಸಿಕ್ಕಿ ತಮ್ಮದೇ ಒಂದು ವೃತ್ತ ರಚಿಸಿಕೊಂಡು ಅಲ್ಲೆಲ್ಲ ಫೆÇೀಟೊ, ಚಾಟು ಹೀಗೆ ಅವರವರ ಖುಷಿಗೆ ಮತ್ತು ಅಗತ್ಯಕ್ಕೆ ಜಾಲತಾಣ ಹೊಸ ರೀತಿಯ ಚೇತನ ಮಧ್ಯಮವಯ ದಾಟುತ್ತಿರುವವರಿಗೂ ಒದಗಿಸಿದ್ದು ಸುಳ್ಳಲ್ಲ. ಅದರಲ್ಲೂ ಹೆಣ್ಣುಮಕ್ಕಳು ಒಂದಿಷ್ಟು ನಿರುಮ್ಮಳವಾಗಿ ಆಪ್ತ ಸಂಗಾತಿಯಂತೆ ಅಲ್ಲಲ್ಲಿ ಮನಸ್ಸಿನ ಹರಿವಿಗೊಂದು ದಾರಿ ಕಲ್ಪಿಸಿಕೊಂಡಿದ್ದೂ ಹೌದು.
ತುಂಬ ಮಹಿಳೆಯರಿಗೆ ಸ್ಕ್ರೀನು ತೀಡುತ್ತಾ ಕೂಡಲು ಫೇಸ್‍ಬುಕ್ಕು ಆಪ್ತ ಅಪ್ತ. ರೆಸಿಪಿಯಿಂದ ಹಿಡಿದು, ಸಮಾಜ ಸೇವೆ, ಇನ್ಯಾರಿಗೋ ನೋಟ್ ಬುಕ್ಕು ವಿತರಣೆಗೆ ತಂಡ ಕಟ್ಟಿಕೊಂಡು ಹೋಗಿ ಅಲ್ಲೇ ಕಾಪಿಯ ಸಣ್ಣ ಔಟಿಂಗು, ಕಿಟ್ಟಿಪಾರ್ಟಿಯ ತೀರ್ಮಾನ, ಹೊಸ ಪುಸ್ತಕದ ಚರ್ಚೆ, ತಿಂಗಳ ಕಿರಿಕಿರಿಯವರೆಗೂ ಆಪ್ತವಾಗಿ ಇನ್‍ಬಾಕ್ಸಿನಲ್ಲಿ ಸ್ನೇಹಿತೆಯರೊಂದಿಗೆ ಹರಟಿಕೊಂಡು ಹಗುರಾಗಲು ಸಮಾನ ಮನಸ್ಕರ ಸಾಂಗತ್ಯ ಆಕೆಗೆ/ಅವಳಿಗೆ ಲಭ್ಯವಾಗಿದ್ದೇ ಇಂತಹ ಜಾಲಗಳು ಬದುಕಿಗೆ ಅಚ್ಚರಿಯಾಗಿ ಕಾಲಿಕ್ಕಿದ ಮೇಲೆ. 
ವಾಟ್ಸಾಪು, ಫೇಸ್‍ಬುಕ್ಕಿನದ್ದು ಈಗ ಯಮ ವೇಗ. ಯಾರ ಮಾಹಿತಿ, ಏನೇ ಅನಾಹುತಗಳೂ ಮೊದಲು ಜಾಹೀರಾಗೋದು ಅಲ್ಲೇ. ಅದೆಲ್ಲ ಅವರವರ ವೈಯಕ್ತಿಕ ಇಷ್ಟ. ಆದರೆ ಅದನ್ನೆ ಗುರಿಯಿಕ್ಕಿ ಹೆಣ್ಣುಮಕ್ಕಳಿಗೆ ಕಾಡುವ ಜಾಲಿಗರಿದ್ದಾರಲ್ಲ ಅವರ ಕೈಯಿಂದ ತಪ್ಪಿಸಿಕೊಳ್ಳೊದೇ ಇವತ್ತು ದೊಡ್ಡ ತಲೆ ನೋವಾಗಿದೆ. ಹೀಗೆ ಹಿಂದೆ ಬೀಳುವ ಹೆಚ್ಚಿನವರದ್ದೆಲ್ಲಾ ಒಂದೇ ಗುರಿಯೆಂದರೆ ಆಕೆ ಎಟುಕಬಹುದಾ ಎನ್ನುವುದು. ಇಲ್ಲದಿದ್ದರೆ ಇನ್ಯಾರಿಗೂ ಸಿಗದೆ ಇರಲಿ ಎನ್ನುವ ಆತ್ಮಸಂಕಟ. 
ಇವತ್ತು ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಸ್ನೇಹಿತೆಯರು ಇನ್ಯಾರ ಜೊತೆಗಾದರೂ ಸ್ನೇಹದಿಂದಿದ್ದರೆ, ಒಂದೆರಡು ಪಿಕ್‍ನಿಕ್ಕು, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಡಿದ್ದೆ ತಡ ಅವಳ ಇನ್‍ಬಾಕ್ಸಿಗೆ ಆತುಕೊಳ್ಳುತ್ತಾರೆ. ಅವರೆಲ್ಲರೊಂದಿಗೆ ಸಲಿಗೆಯಿಂದಿದ್ದೀಯಲ್ಲ ನನ್ನೊಂದಿಗೂ ಇರು ಎನ್ನುವುದೇ ಪರೋಕ್ಷ ವರಾತ. ಹೇಗಾದರೂ ಅವನೊಂದಿಗೆ ಸ್ನೇಹ ಇದೆ. ನಾನೂ ಹಂಗೆ ಒಬ್ಬಳೊಂದಿಗೆ ಕಟ್ಟಿಕೊಂಡು ಓಡಾಡಬೇಕು, ಫೆÇೀಟೊ ಹಾಕಿಕೊಳ್ಳಬೇಕು.. ಎನ್ನುವುದು ಒನ್‍ಲೈನ್ ಅಜೆಂಡಾ.
ಒಂಚೂರು ಸ್ನೇಹ ಕುದುರುವುದೇ ತಡ, ಯಾವ ಮುಲಾಜೂ ಇಲ್ಲದೆ ಆಕೆ ಯಾರಿಕೆ ಲೈಕ್ ಒತ್ತುತ್ತಾಳೆ, ಯಾರಿಗೆ ಕಮೆಂಟ್ ಮಾಡುತ್ತಾಳೆ, ಹಾಗೆ ಒತ್ತುವ ಲೈಕು,  ಮಾಡುವ ಕಮೆಂಟು ಎರಡನ್ನೂ ನಾನು ನೋಡಿದ್ದೇನೆ ಎನ್ನುವಂತೆ ತಾನೂ ಅದಕ್ಕೊಂದು ಲೈಕು ಒತ್ತುವುದು, ಆಕೆಗೆ ಬೀಳುವ ಎಲ್ಲಾ ಕಮೆಂಟ್‍ನ್ನು ಫಾಲೋ ಮಾಡುತ್ತಿರುವುದು, ಆಕೆ ರಾತ್ರಿ ಹನ್ನೊಂದರ ನಂತರವೂ ಆನ್‍ಲೈನ್‍ನಲ್ಲಿದ್ದರೆ ಪಕ್ಕದಲ್ಲಿ ಗಂಡ ಇಲ್ಲ ಎನ್ನುವ ಅಂದಾಜು, ತೀರ ಬೇಸರದಲ್ಲಿದ್ದೇನೆ ನಿಮ್ಜೊತೆ ಮಾತ್ರ ಹೇಳ್ಕೊಳ್ಳಕಾಗೋದು ಕಾಲ್ ಮಾಡಲೇ..?ಎನ್ನುವ ಪಿಸಣಾರಿತನ, ಇದೊಂದು ಕವನ ಬರೆದೆ ಅದ್ಯಾಕೋ ಕಣ್ಮುಂದೆ ನೀನು ಮಾತ್ರ ಬರ್ತೀದೀಯ ಎನ್ನುವ ಹುಕಿ, ಇದು ಕವನ ನಿನಗಾಗೇ, ಎಲ್ಲೋ ಟ್ರಿಪ್ ಹೋಗ್ತಿದೀವಿ ನೀನು ಬರ್ತೀ ಅಂತಾನೆ ಡಿಸೈಡ್ ಮಾಡಿದ್ದು ಅಲ್ಲೆಲ್ಲ ಉಳಿದವರ ಜತೆ ನನಗೆ ಕಂಪೆನಿ ಸೆಟ್ ಆಗಲ್ಲ ಎನ್ನುವ ಎಮೋಶನಲ್ ಬ್ಲಾಕ್ ಮೇಲ್, ಕವನ ಸಂಕಲನಕ್ಕೆ ನಿಮ್ಮ ಅಭಿಪ್ರಾಯ ಕೊಡಿ ಮಾತಾಡಲು ಮನೆಗೇ ಬರಲಾ..? ಎನ್ನುತ್ತಾ ದಾರಿ ಹುಡುಕುವವರು, ವಾಲ್ ಮೇಲೆ ನಿನ್ನ ಕವನ ನೋಡಿದ ಮೇಲೆ ನಾನು ಬರೆಯೋದನ್ನೇ ಬಿಟ್ಟೆ ಎನ್ನುತ್ತಾ, ಕೊನೆಗಾಕೆ ಹೂಂ ಎಂದರೆ ಅದೂ ಮನೆಯಲ್ಲಿ ಗಂಡ ಮಕ್ಕಳು ಇಲ್ಲದ ಸಮಯವೇ ಆಗಬೇಕಂತೆ. ಸ್ವಲ್ಪ ಸ್ನೇಹ ಎನ್ನುವ ಪರೀಧಿಯಲ್ಲಿ ಆಕೆ ಅಪ್ತತೆಯಿಂದ ಮಾತಾಡಿದರೂ ಸಾಕು, ಒಂದು ಕವನ ಬರೆದು, ಬೆಳ್‍ಬೆಳಿಗ್ಗೆ ನಿದ್ರೆಗೂ ಮೊದಲು ನಿನ್ನದೆ ಕನಸು ಎನ್ನುತ್ತಾ ಕನವರಿಕೆಗೆ ನಾಲ್ಕು ಸಾಲು ಇನ್‍ಬಾಕ್ಸ್ ಮಾಡಿ, ರಾಮರಾಮಾ ಆಕೆ ಯಾಕಾದರೂ ಜಾಲತಾಣಕ್ಕೆ ಕಾಲಿಟ್ಟೇನೋ ಎನ್ನುವಂತೆ ಮಾಡಿಬಿಡುತ್ತಿದ್ದಾರೆ.
ಹೇಗಿದೆ ವರಸೆ...? 
ಅದಕ್ಕೂ ಮಿಗಿಲಾಗಿ ದಿನಕ್ಕೆ ಮೂರೂ ಹೊತ್ತೂ ಬಂದು ಬೀಳುವ ಗುಡ್‍ಮಾರ್ನಿಂಗು, ಗುಡ್‍ನೈಟು, ಊಟ ಆಯಿತಾ, ತಿಂಡಿ ಆಯಿತಾ ಎನ್ನುವ ಮಾತುಕತೆಗೆ ಆಹ್ವಾನಿಸುವ ರಹದಾರಿಯನ್ನು ತೆರೆಯಲೆತ್ನಿಸುತ್ತಾ ಆಕೆ ಕಿರಿಕಿರಿಯಿಂದ ಬೇಸತ್ತು ಎನೋ ಒಂದು ಹೇಳಿ ಸಾಗಹಾಕಲು ಹೋದರೆ ಅದರಲ್ಲೇ ಹಲವು ಅರ್ಥ ಹುಡುಕುತ್ತಾ, ಇಷ್ಟೆ ಆಯಿತಾ ಅದೂ ಇಲ್ಲ. ಕೊಂಚ ಕಿರಿಕ್ ಆಗಿ ಬ್ಲಾಕ್ ಮಾಡಿದರೆ ಫೇಕ್ ಐ.ಡಿಯಿಂದಲೂ ಬೆನ್ನಟ್ಟುವುದನ್ನು ಬಿಡಲಾರರು. ಕೆಲವು ಕುಹಕಿಗಳಂತೂ ಇನ್ನೊಂದು ಫೇಕ್ ಐಡಿ ಮೂಲಕ ಆಕೆಯ ಗಂಡನಿಗೂ/ಹೆಂಡತಿಗೂ ಇಲ್ಲ ಸಲ್ಲದ ಮೆಸೇಜು ಕಳುಹಿಸಿ ಯಾಕಾದರೂ ಫೇಸ್‍ಬುಕ್ಕು ಮಾಡಿಕೊಂಡೇನೋ ಎನ್ನಿಸುತ್ತಿದ್ದಾರೆ. ಅವನ್ಯಾವನೋ ಮುಖ ಮೂತಿ ಇಲ್ಲದ ಫೇಕು ಮೇಸೆಜು ಮಾಡಿದ ಸರಿಯೇ. ಆದರೆ ಹತ್ತಾರು ವರ್ಷಗಳಿಂದ ಸಂಸಾರ ಮಾಡಿರುವ ಈ ಗಂಡನಿಗೇನಾಗಿರುತ್ತದೆ ಧಾಡಿ..? 
ಮೊದಲೇ ಹೆಂಡತಿ ಯಾವಾಗೆಲ್ಲ ಮೊಬೈಲ್ ತೀಡುತ್ತಿದ್ದುದು ಅವನ ಕಣ್ಣು ಕುಕ್ಕುತ್ತಿರುತ್ತದಲ್ಲ. ಮನೆಯಲ್ಲೂ ಈಗ ಪಿರಿಪಿರಿ ಶುರುವಾಗತೊಡಗುತ್ತದೆ. " ಮನೆ ನೀಟಾಗಿಡುತ್ತಿಲ್ಲ, ಮಕ್ಕಳ ಆವರೇಜು ಕಡಿಮೆಯಾಗುತ್ತಿದೆ, ಕರೆಂಟು ಬಿಲ್ ಜಾಸ್ತಿ, ಲಿಸ್ಟ್ ಬರೆದಿಟ್ಟಲ್ಲ.." ಹೀಗೆ ಕಾಂಜಿ ಪಿಂಜಿ ಮಾತುಗಳಿಗೆಲ್ಲ ಆಕೆ ತಲೆ ಕೊಡಬೇಕು. ಅವನೀಗ, ಮನೆಯಲ್ಲಿ ನಾನಿಲ್ಲದಾಗ ಸುಖಾಸುಮ್ಮನೆ ಫೇಸ್‍ಬುಕ್ಕಿನಲ್ಲಿ ಟೈಂಪಾಸ್ ಮಾಡ್ತಿದ್ದಿ ಅನ್ನುವುದನ್ನು ಪರೋಕ್ಷವಾಗಿ ಹೇಳುತ್ತಿದ್ದಾನೆ. ಹತ್ತಾರು ವರ್ಷಗಳಿಂದ ಬಾರದ ಪ್ರಶ್ನೆಗಳಿಗೆ ಈಗ ಎಲ್ಲಿಂದ ಉತ್ತರ ಹುಡುಕುವುದೆನ್ನುತ್ತಾ ಆಕೆ ಅನ್ಯಮನಸ್ಕಳಾಗುತ್ತಿದ್ದಾಳೆ. ಸ್ವಂತ ಹೆಂಡತಿ ಹೆಸರಿನಲ್ಲಿ ಚಾಟ್ ಮಾಡಿ ಅದು ನಾನೇ ಅವಳಿಲ್ಲ ಎನ್ನುವವರು, ನಿಮ್ಮದು ಪರ್ಸನಲ್  ಐ.ಡಿ/ವಾಟ್ಸ್ ಆಪ್ ನಂ. ಇದೆಯಾ ಎನ್ನುವ ಆಸೆಬುರಕರು, ನಾನು ಚಾಟ್ ಮಾಡಿದ್ದು ನನ್ನ ಹೆಂಡತಿಗೆ ಹೇಳಬೇಡಿ ಎನ್ನುವ ಮಖೇಡಿಗಳು ಹೀಗೆ ತರಹೇವಾರಿಯಲ್ಲಿ ಬಹಿರಂಗವಾಗುವ ಕುಹಕಿ ಗಂಡಸರ ಸಂಕಟಗಳೆಂದರೆ ಅರ್ಜೆಂಟಿಗೆ ಅವನಿಗೊಬ್ಬ ಹೆಂಗಸು ಬೇಕಿದೆ. ಚಾಟಿಗೆ, ಚಟಕ್ಕೆ, ಲೈಕಿಗೆ. ಯಾರಾದಾಳು ಎಂದು ಎಲ್ಲೆಡೆಗೆ ಕಾಳು ಹಾಕುವುದೇ ಆಗಿದೆ.
 ಆಕೆಗಾದರೆ ಹಂಚಿಕೊಳ್ಳಲು ಹಲವು ವಿಷಯಗಳಿವೆ, ತನ್ನದೆ ಚೆಂದದ ಪುಟವಿದೆ, ಹಲವು ಮಾಹಿತಿಯ ಕಣಜವಿದೆ. ಅವನಿಗೇನಿದೆ..? ತನಗೆ ಲಭ್ಯವಾಗದಿರುವ ಆಕೆಯ ಲೈಕು, ಕಮೆಂಟು, ಸ್ನೇಹ  ಬೇರೊಬ್ಬನಿಗೆ ದಕ್ಕುತ್ತಿದೆಯಲ್ಲ ಎನ್ನುವುದೇ ಒಳದರ್ದಿನ ಮೂಲ. ಅದನ್ನು ತಡೆಯುವ ಸಕಲ ಪ್ರಯತ್ನದ ಭಾಗವೇ ಆಕೆಯ ಇನ್‍ಬಾಕ್ಸ್‍ಗೆ ಎಚ್ಚರ, ನಿಯಂತ್ರಣ, ಪರೋಕ್ಷ ವಾರ್ನಿಂಗು ಎಲ್ಲ. ಆಕೆ ಸ್ನೇಹದ ಪರೀಧಿಯಲ್ಲಿದ್ದರೂ ಇವತ್ತಲ್ಲ ನಾಳೆ ಎಟುಕಿಯಾಳು ಎನ್ನುವ ಕುತ್ಸಿತ ಮನಸ್ಥಿತಿ ಅಷ್ಟೆ.
"..ಇವತ್ತು ಸೋಷಿಯಲ್ ಮೀಡಿಯಾ ಕೆಟ್ಟದಿಲ್ಲ. ಋಣಾತ್ಮಾಕ ಅಂಶಗಳು ಎಲ್ಲೆಡೆಗೂ ಇರ್ತವೆ. ಆದರೆ ಎಂಥವನೂ ಒಂದು ಚಾನ್ಸ್ ತೊಗೊಳ್ಳೊಣ ಎಂದೇ ಟ್ರೈ ಕೊಡುತ್ತಾ ಇದ್ದರೆ ಯಾರನ್ನು ನಂಬೋದು. ಇವರಿಗೆಲ್ಲ ಹೆಣ್ಣು ಮಕ್ಕಳೆ ಇರಲ್ಲವಾ ..? " ಇತ್ಯಾದಿ ಮಾತಾಡುತ್ತಿದ್ದ ಆಕೆಯ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ. 
ಕಾರಣ ಪ್ರತಿ ಹೆಣ್ಣೂ ಅಫೇರಿಗೇ ಆಗಲಿ ಎಂದು ಪ್ರಯತ್ನಿಸುವ, ಅವನ ಜೊತೆ ಚಾಟ್ ಮಾಡ್ತಿದ್ದೀರಾ ಎಂದು ಕಾಲ್ಕೆರೆದು ಬರುವ, ನನಗೊಂದು ಕಾಲ್ ಮಾಡಿ ಎಂದು ಮೇಸೆಜು ಹಾಕಿ ಕಾಲ್ ಮಾಡಿದರೆ ಆ ಕಡೆಯಿಂದ ಅದನ್ನೆ ಸ್ನೇಹಿತರಿಗೆ ತೋರಿಸಿಕೊಂಡು "..ನೋಡ್ರೊ ಆಕೆ ನನಗೆ ಕಾಲ್ ಮಾಡ್ತಾಳೆ.." ಎನ್ನುವ ಹರಾಜಿನ ಪ್ರಕ್ರಿಯೆಗಿಳಿಯುವ ಆತ್ಮವಂಚನೆಯ ಮಧ್ಯೆ, ಆಕೆ ಇನ್ನಾರೊಂದಿಗೂ ಆತ್ಮೀಯಳಾಗದಿರಲಿ ಎಂದೇ ಗಿಲ್ಟ್‍ಗೆ ತಳ್ಳುವ ಮುನ್ನ ಆಕೆಯ ಬಗ್ಗೆ ಅಲ್ಲಲ್ಲಿ ಮಾತಾಡಿ ಹೊಲಸು ಮಾಡುವವರ ಮಧ್ಯೆ, ಆಕೆ ಅಂತಹವರನ್ನು ಬ್ಲಾಕ್ ಮಾಡಿ ಮುನ್ನಡೆಯುವುದೊಂದೇ ದಾರಿ ಎಂದುಕೊಳುತ್ತಿದ್ದಾಳೆ. ಸ್ವಚ್ಛತೆ ಹೊರಗಷ್ಟೆ ಅಲ್ಲ ಒಳಗೂ ಆಗಬೇಕಿದೆ. ಅದರೆ ಜಾಲತಾಣದಲ್ಲಿ ಗಾರ್ಬೇಜೇ ಹೆಚ್ಚಾಗುತ್ತಿದೆ. 
ಇಲ್ಲದಿದ್ದರೆ ಪಿಸುಮಾತು ಆಡುವ ಅಗತ್ಯವಾದರೂ ಏಕಿರುತ್ತದೆ ನನಗೆ...?

Friday, May 19, 2017


ಅವಳೊಂದು ಜೀವೋನ್ಮಾದ... ಅದರೆ ಅವನು...?

(ರಾತ್ರಿ ಹನ್ನೊಂದಕ್ಕೆ ಮಂಚಕ್ಕೆ ತಲೆಯಿಡುತ್ತಿದ್ದರೆ ಬೇಕಿದೆಯೋ ಬೇಡವೋ ವಿಚಾರಿಸಿಕೊಳ್ಳದೇ ಅವನೊಂದಿಗೆ ದೇಹ ಉಜ್ಜುವ ಪ್ರಕ್ರಿಯೆಯಲ್ಲಿ, ಮನಸ್ಸು ಎಲ್ಲಿ ಯಾವ ಪಾತ್ರೆಯ ಕರೆಯ ಜೊತೆ ತೊಳೆದು ಸರಿದು ಹೋಗಿರುತ್ತದೋ ಗೊತ್ತಾಗುವುದಾದರೂ ಹೇಗೆ..? )

" ನಾವು ನಾಜೂಕು ಇದ್ರೂ ಅತೀ ಹೆಚ್ಚು ಕೆಲ್ಸ ನಡೆಯೋದೇ ನಮ್ಮಿಂದ..." ಅವಳ ಮಾತಿಗೆ ತತಕ್ಷಣಕ್ಕೆ ಹೂಂ ಅಥವಾ ಉಹೂಂ ಎನ್ನಲು ನನ್ನಲ್ಲಿ ಯಾವ ಕಾರಣಗಳೂ ಇರಲಿಲ್ಲ. ಕಾರಣ ದೈತ್ಯ ಕೆಲಸಗಾರ ಅಥವಾ ಅವನದ್ದು ಭಾರಿ ವರ್ಕು ಅಂತೆಲ್ಲಾ ಏನೇ ವಿಶೇಷಣಗಳಿಟ್ಟುಕೊಂಡು, ಗಂಡಸಿನ ವರ್ಕಾಲಿಕ್ ನೇಚರ್ ಅಂತೆಲ್ಲಾ ಮಾತಾಡುತ್ತಿದ್ದರೂ ಒಂದೇ ದಿನ ಮನೆಲಿ ಬಿಟ್ಟುನೋಡಿ. ಸುಮ್ಮನೆ ಇವತ್ತೊಂದಿನ ಮನೆ ಸುಧಾರಿಸಿ ಅಂತಾ ಪೂರ್ತಿ ಮನೆನಾ ಕೈ ಗಿಟ್ಟು ಹೊರಟು ಬಿಡಿ.
ಅವನು ಅರ್ಧ ದಿನವೂ ತಡೆಯಲಾರ,
ಉಹೂಂ ..ತೋಪೆದ್ದು ಹೋಗುತ್ತಾನೆ.
ಯಾವಾಗ ಮತ್ತೆ ಆಫಿûೀಸಿಗೆ ಸೇರಿಯೇನು ಎಂದು ಗೊಣಗಾಟ ಬಾಯಿಂದಾಚೆಗೆ ಬಾರದಿದ್ದರೂ ಮರುದಿನ ಕಚೇರಿ ಸಮಯವೋ ಅಥವಾ ಮನೆಯಿಂದಾಚೆಗೆ ಹೋಗುವುದಕ್ಕೋ ಆತ ಕಾಯುತ್ತಲೇ ಇರುತ್ತಾನೆನ್ನುವುದು ಸುಳ್ಳಲ್ಲ. ಕಾರಣ ದೊಡ್ಡ ದೊಡ್ಡ ಕೆಲಸವನ್ನು ಸಲೀಸಾಗಿ ಎಂಥವನೂ ನಿಭಾಯಿಸಿ ಬಿಡುತ್ತಾನೆ. ಆ ಕೆಲಸಕ್ಕೆ ಬೇಕಾದಷ್ಟು ಸಹನೆ ಮತ್ತು ಕಾರ್ಯವಾಹಿ ದಕ್ಷತೆ ಮೈಗೂಡಿಸಿಕೊಂಡು ಮಾನಸಿಕವಾಗಿ ಒಂದು ಸಿದ್ಧತೆ ಎಂದಿರುತ್ತದೆ. ಹಾಗಾಗಿ ನಾಳೆ ಬೆಳಿಗ್ಗೆಯಿಂದಲೆ ಇದಿಷ್ಟು ಕೆಲಸ ಎಂದು ಲೆಕ್ಕ ಹಾಕಿಕೊಂಡವನನ್ನು ನೋಡಿ. ಅಷ್ಟು ಮಾತ್ರಕ್ಕೆ ಅವನಿಗೆ ಸುಸ್ತು ಅಥವಾ ಸೋಮಾರಿತನ ಎಂಬುವುದಿರುವುದಿಲ್ಲ.
ಸಮಯಕ್ಕೆ ಸರಿಯಾಗಿ, ಅಗತ್ಯಕ್ಕೆ ತಕ್ಕಂತೆ ತನ್ನ ಕೈಲಾದಷ್ಟು ದಕ್ಷತೆಯಲ್ಲಿ ಆ ಕೆಲಸ ಮಾಡಿ ಮುಗಿಸಿರುತ್ತಾನೆ ಅಥವಾ ತನ್ನ ಕೆಳಗಿರುವವರಿಂದ ಮಾಡಿಸುತ್ತಾನೆ ಒಟ್ಟಾರೆ ಕಮೀಟ್‍ಮೆಂಟು ಪೂರ್ತಿಯಾಗುತ್ತದೆ. ಲೆಕ್ಕಾಚಾರದ ಕೆಲಸವನ್ನವನು ಕಳ್ಳು ಬಿದ್ದು ಹದಗೆಡಿಸದೇ ಹೋದರೂ ಮನಸ್ಸಿರದಿದ್ದರೂ ಮುಗಿಸುವಲ್ಲಂತೂ ಮೋಸವಾಗುವುದಿಲ್ಲ.
ಆದರೆ ಹಾಗೊಂದು ಹುದ್ದೆದಾರಿಕೆ ಕೊಡದೆ, ದೊಡ್ಡ ಕೆಲಸವನ್ನೇನೂ ಹೇಳದೆ ಸುಮ್ಮನೆ ಮನೆಯಲ್ಲಿ ಕುಳ್ಳಿರಿಸಿ, ಅತೀ ಬುದ್ಧಿವಂತಿಕೆ, ಅಪಾರ ತಾಕತ್ತು ಇದಾವುದನ್ನೂ ಬೇಡದ ಮನೆಯ ಪುಟಗೋಸಿ(?) ಕೆಲಸಕ್ಕೆ ಕುಳ್ಳಿರಿಸಿ. ಅರ್ಧ ಗಂಟೆಯಲ್ಲಿ ಅವನ ಸಹನೆ ಸತ್ತು ಹೋಗಿರುತ್ತದೆ. ಮೊದಲರ್ಧದಲ್ಲೇ ನಶಿಸುವ ದಕ್ಷತೆ ಇನ್ನುಳಿದದ್ದಕ್ಕಂತೂ ಅಂತೂ ಮುಗಿಸುವ ಇರಾದೆಯಲ್ಲಿ ಯಾಂತ್ರಿಕವಾಗಿ ನಡೆಯಲಾರಂಭಿಸಿರುತ್ತದೆ.
ಕಾರಣ ಅವನ ಲೆಕ್ಕದಲ್ಲಿ ಇಂತಹದ್ದೆಲ್ಲ ಮನೆಗೆಲಸ ಎಂದು ಏನು ಪಟ್ಟಿ ಮಾಡಬಹುದೋ ಅದನ್ನೆಲ್ಲಾ ಅವನಲ್ಲ ಅವನ ಹೆಂಡತಿ ಅಥವಾ ಅನುಕೂಲವಿದ್ದರೆ ಮನೆಗೆಲಸದವಳು ಮಾಡಬೇಕಾದ ಬಾಬತ್ತು. ಅಲ್ಲಿಗೆ ಇಂಡೈರಕ್ಟಲಿ ಯಾರು, ಏನು ಎಂದು ನೀವು ಊಹಿಸಿಕೊಳ್ಳಿ. ಅಲ್ಲಿಗೆ ಅವನಿಗೆ ಕೆಲಸ ಮಾಡಲು ಬರುವುದಿಲ್ಲ ಎಂದಲ್ಲ.
ಆತ ಚೆಂದಗೆ ಅಡಿಗೆ ಮಾಡಬಲ್ಲ ಅದರೆ ದಿನವೂ ಅಲ್ಲ. ನೀಟಾಗಿ ಐರನ್ ಮಾಡಬಲ್ಲ ಅದರೆ ಪ್ರತಿ ನಿತ್ಯ ಅಲ್ಲ. ಗೀಡಕ್ಕೆ ನೀರು ಹಾಕಬಲ್ಲ ಅವನಿಗೆ ಪುರಸೊತ್ತಾದರೆ ಮಾತ್ರ, ಮೆಶಿನ್ ಹಾಕಬಲ್ಲ ಟಿ.ವಿ. ಯಲ್ಲಿ ಕಿತ್ತು ಹೋದ ಚಿತ್ರ ಬರುತ್ತಿದ್ದರೆ ಅಥವಾ ಐ.ಪಿ.ಎಲ್. ಇಲ್ಲದಿದ್ದಾಗ ಮಾತ್ರ. ಕೊನೆಗೆ ಕಾಯಿಪಲ್ಯೆಯನ್ನೂ ಹೆಚ್ಚಿ ಇಷ್ಟಿಷ್ಟೆ ನೀಟಾಗಿ ತುರಿದು ಕೊಡಬಲ್ಲ ಯಾವಾಗಲೂ ಅಲ್ಲ ಆ ಹೊತ್ತಿಗೆ ಹೆಂಡತಿಯ ಸಾಮೀಪ್ಯದಲ್ಲಿರಲು ಮನ ಬಯಸುತ್ತಿದ್ದರೆ ಮಾತ್ರ. ಹಾಗಾಗಿ ಯಾವೆಲ್ಲಾ ಮನೆಯ ಕಂಪಲ್ಸರಿ ಎನ್ನುವ ಕೆಲಸಗಳಿವೆಯೋ ಅದರಲ್ಲೆಲ್ಲಾ ಅವನಿಗೇ ಗೊತ್ತಿಲ್ಲದೆ ರಿಸರ್ವೇಶನ್ನು ಹುಟ್ಟಿಬಿಟ್ಟಿರುತ್ತದೆ. ಬೇಕಿದ್ದರೆ ಅದನ್ನು ಮನಸ್ಸಿಗೊಲ್ಲದ ಕೆಲಸ ಎನ್ನಿ.
ಅದೇ ಆಕೆಯನ್ನು ನೋಡಿ. ಬೇಕಿದೆಯೋ ಇಲ್ಲವೋ ದಿನವೂ ಎಲ್ಲಾ ಕೆಲಸಗಳನ್ನು ಮಾಡಿಕೊಂಡೆ ದಿನ ಮುಂದೆ ಸರಿಯಲು ಬಿಡುತ್ತಾಳೆಯೇ ವಿನ: ಕೆಲಸ ಬಾಕಿ ಇಟ್ಟುಕೊಂಡು ಆವತ್ತಿಗೆ ಕೈ ಜಾಡಿಸುವ ಜಾಯಮಾನವೇ ಅಲ್ಲ. ಬೆಳಿಗೆದ್ದು ಹಾಲಿಗಿಟ್ಟು, ಕಾಫಿ ಕಾಯಿಸಿ, ಮಕ್ಕಳ ಬೆನ್ನಿಗೆ ಗುಮ್ಮುತ್ತಾ ಅಡುಗೆ ಮನೆಯಿಂದಲೇ ಕೂಗುತ್ತಾ, ಅಗೀಗ ಗ್ಯಾಸ್ ಮೇಲಿಟ್ಟ ಪದಾರ್ಥ ಏನಾಯಿತು ಗಮನಿಸುತ್ತಾ, ತನ್ನ ಡಬ್ಬಿ, ಮಕ್ಕಳ ಡಬ್ಬಿ ಅದೂ ಹಿಂದಿನ ದಿನವೇ ತೊಳೆದಿಟ್ಟುಕೊಂಡಿದ್ದರೆ ಮಾತ್ರ ಬಚಾವು. ಇಲ್ಲವಾದರೆ ಆಗಲೇ ಪಕ್ಕದ ಸಿಂಕನಲ್ಲೇ ಅದನ್ನು ಕೈಯ್ಯಾಡಿಸಿ, ಗಲಬರಿಸುತ್ತಾ, ಓಡಾಡುತ್ತಲೇ ಮಕ್ಕಳಿಗೆ ಬೀಸಿನೀರು ತೋಡಿ ಬಕೀಟಿಗೆ ಬಿಟ್ಟುಕೊಟ್ಟು, ಅರೆಬರೆ ಕೂದಲು ಕಿತ್ತುಕೊಳ್ಳುವ ಹುಡುಗಿಗೆ ಟೇಫು ಬಿಗಿದು, ಹುಡುಗನಿಗೆ ಬೆಲ್ಟು ಏರಿಸಿ, ಆಗಷ್ಟೆ ಏಳುವ ಅವನ ಕೈಗೆ ಕಾಫಿ ಕೊಡುತ್ತಾ, ಕೆಲವೊಮ್ಮೆ ಎದ್ದೇ ಇರದ ಅವನನ್ನು ಎಬ್ಬಿಸಿ ಮಕ್ಕಳನ್ನು ಬಿಟ್ಟು ಬರಲು ದಬ್ಬಿ, ಅದಕ್ಕವನು ಏನೋ ಮಂತ್ರ ಗೊಣಗುತ್ತಿದ್ದರೆ ಅದಕ್ಕೆ ಲಕ್ಷ್ಯ ಕೊಡದೆ, ಆಗೀನ ಮಟ್ಟಿಗೆ ತಿಂಡಿ ಮಾಡಿ, ಹೊರಗೆ ಸೋಫದ ಮೇಲೆ ನೇತಾಡುತ್ತಿದ್ದ ಟವಲ್ ಎತ್ತಿಟ್ಟು, ಅರಬರೆ ಬಾಯ್ದೆರಿದಿದ್ದ ಬಾಸ್ಕೇಟ್ ಸರಿ ಪಡಿಸಿ. ಅಲ್ಲಲ್ಲೆ ಬಿದ್ದಿದ್ದ ಪೇಪರ್ ಜಾಗಕ್ಕೆ ತಳ್ಳಿ, ಲಾಡಿ ಬಿಟ್ಟುಕೊಂಡು ಬೆಡ್‍ರೂಮಿನಲ್ಲೆಲ್ಲೋ ನೇತಾಡುವ ಅವನ ಬರ್ಮುಡಾವನ್ನು ಬೇಕೆಂದೇ ಸಶಬ್ದವಾಗಿ ಎರಡೇ ಬೆರಳಲ್ಲಿ ಎತ್ತಿ ನೇತಾಡಿಸುತ್ತಾ ತಪಕ್ಕನೆ ಬಕೀಟಿನಲ್ಲಿ ಬಿಟ್ಟು, ಕೆದರಿದ್ದ ಬೆಡ್ ಸ್ಪ್ರೆಡ್ ಸರಿಪಡಿಸಿ, ಐರನ್ನಿಗೆ ಸ್ವಿಚ್ಚು ಒತ್ತಿ, ಅಷ್ಟೊತ್ತಿಗೆ ಅವನ ಸ್ನಾನ ಆಗಿದ್ದರೆ ಟೇಬಲ್ ಮೇಲೆ ತಿಂಡಿ ಜೋಡಿಸಿ ಅದರ ಮಧ್ಯೆ ತನ್ನ ಸ್ನಾನ, ಡ್ರೆಸ್ಸು, ನಿನ್ನೆನೆ ನೆನಪಿರಿಸಿಕೊಂಡಿದ್ದ ಕೆಲಸ ಜೊತೆಗೆ ಸಂಜೆ ಬರುವಾಗ ತರಲೇಬೇಕಾದ ಸಾಮಾನಿನ ಲಿಸ್ಟು ಇವನ್ನೆಲ್ಲಾ ಸರಿಪಡಿಸಿಕೊಂಡು ಚಾರ್ಜಿಗೆ ಹಾಕಿದ್ದ ಮೊಬೈಲು ಎತ್ತಿಕೊಂಡು, ಚಪ್ಪಲಿ ಸಿಕ್ಕಿಸಿಕೊಳ್ಳುತ್ತಾ ಬಾಯಲ್ಲೇ ಹಿಡಿದಿದ್ದ ಕ್ಲಿಪ್ಪನ್ನು ತಲೆಗೆ ತೂರಿಸಿ, ರಾಮಾ ರಾಮಾ ಏನಿದು..? ಅವಳೇನು ಹೆಣ್ಣಾ ಗೂಡ್ಸ್ ಗಾಡಿನಾ..?
ಅದೇ ಅವನ ಲಿಸ್ಟ್ ನೋಡಿ, ಬೆಳಿಗೆದ್ದಾ, ಕಾಪಿ,ಶೇವಿಂಗ್,ತಿಂಡಿ, ಮಟ್ಟಸವಾಗಿ ಐರನ್ ಮಾಡಿದ್ದ ಡ್ರೆಸ್ಸು ಏರಿಸಿಕೊಂಡು ಜಿಪ್ ಎಳೆದುಕೊಳ್ಳುವಾಗ ಕರ್ಚೀಫು ಕೊಡಲು ಹೆಂಡತಿಯೇ ಬೇಕು. ಅಷ್ಟಾಗಿ ಕೈಗೆ ಪ್ಲೆಟು ಎತ್ತಿಕೊಂಡು ತಿನ್ನುತ್ತಾ ಅದನ್ನೂ ಸಿಂಕಿಗೂ ಇಡದೆ, ಕೂತಲ್ಲೇ ಟೀಗೆ ಕೂಗು ಹಾಕುತ್ತಾ, ಕೈಯೊರೆಸಿಕೊಂಡು ಎದ್ದು ಬರುವ ಅವನಿಗೆ ದಿನವಿಡೀ ಬಿಜಿ ಎನ್ನುವ ಲೆಕ್ಕಾಚಾರದಲ್ಲಿ "ಹ್ಯಾಗೆ" ಎಂದು ಕೂತುಕೊಂಡು ಕೇಳಬೇಕೆನ್ನಿಸುತ್ತದೆ ನನಗೆ. ಕಾರಣ ಆಫೀಸಿನ ಕೆಲಸ ಬಿಡಿ ಆಕೆ ಅದನ್ನೂ ಮಾಡುತ್ತ ಮತ್ತೆ ಸಂಜೆ ಬಂದು ಮತ್ತೆ ರೂಟಿನ್ ಶುರು ಮಾಡಿಕೊಳ್ಳುತ್ತಾಳಲ್ಲ ಆಗಲೂ ಒಂದಿಷ್ಟಾದರೂ ಕೆಲಸ ನಾಳೆಗಿರಲಿ ಎಂದಾಕೆ ಎತ್ತಿಟ್ಟಿದ್ದೇ ಇಲ್ಲ. ಅಕ್ಕಿ ರುಬ್ಬಿ ಇಡದಿದ್ದರೆ ಹುಳಿ ಬಾರದೆ ಹೇಗೆ ದೋಸೆಯಾಗುವುದಿಲ್ಲವೋ ಹಾಗೆ ಮರುದಿನಕ್ಕೆ ಬೇರೆಯದೇ ಕೆಲಸದ ಲಿಸ್ಟು ಆಕೆಯ ತಲೆಯಲ್ಲಿ ಕಾಯುತ್ತಲೆ ಇರುತ್ತದೆ.
ಇದೆಲ್ಲಾ ಮುಗಿದು ರಾತ್ರಿ ಹನ್ನೊಂದಕ್ಕೆ ಮಂಚಕ್ಕೆ ತಲೆಯಿಡುತ್ತಿದ್ದರೆ ಬೇಕಿದೆಯೋ ಬೇಡವೋ ವಿಚಾರಿಸಿಕೊಳ್ಳದೇ ಅವನೊಂದಿಗೆ ದೇಹ ಉಜ್ಜುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಾಗ, ಮನಸ್ಸು ಎಲ್ಲಿ ಯಾವ ಪಾತ್ರೆಯ ಕರೆಯ ಜೊತೆ ತೊಳೆದು ಸರಿದು ಹೋಗಿರುತ್ತದೋ ಗೊತ್ತಾಗುವುದಾದರೂ ಹೇಗೆ..? ಆ ಹೊತ್ತಿಗಿನ ಮಾನಸಿಕ ಬಣ್ಣಗಳನ್ನು ಗುರುತಿಸಲು ಕತ್ತಲೆಗೆ ಶಕ್ತಿ ಇದ್ದಿದ್ದರೆ ಅಥವಾ ಆ ರಾತ್ರಿಗಳಿಗೆ ಕಣ್ಣಿದ್ದಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತೇನೋ. ಆದರೆ ಅದಾವುದೂ ಉಹೂಂ ಆಗುವುದೇ ಇಲ್ಲ. ಎಲ್ಲಾ ದುಮ್ಮಾನಗಳು ಕಾವಳದಲ್ಲೇ ಕಳೆದುಹೋಗುತ್ತವೆ. ಬೇರೆ ದಾರಿ ಮತ್ತು ಅವಕಾಶ ಎರಡೂ ಇರುವುದೇ ಇಲ್ಲವಲ್ಲ.
ಪ್ರತಿ ನಿತ್ಯದಂತೆ ಬದುಕಿನುದ್ದಕ್ಕೂ ಹೀಗೆ ಮಾಡಿಕೊಂಡೆ ಬದುಕು ಮಕ್ಕಳು ಮನೆ ನಡೆಸುವ ಆಕೆಯ ಪರಿಚಾರಿಕೆಗೆ ಯಾವ ಐ.ಎಸ್.ಓ. ಸ್ಟಾಂಡರ್ಡು ಸರ್ಟಿಫಿಕೇಟು ಕೊಡಬಲ್ಲದು..? ಇದ್ದಿದ್ದೇ ಆಗಿದ್ದರೆ ಯಾವ ಥೌಸೆಂಡೂ ಸಾಲುತ್ತಿರಲಿಲ್ಲ. ಅದರೆ ಅದಿಷ್ಟೆಲಾ ಜಗತ್ತಿಗೆ ಬೇಕಿಲ್ಲ ಅವನಿಗೆ ಮಾತ್ರ ಗೊತ್ತಾದರೆ ಸಾಕು ಎಂದಾಕೆ ಮನದಲ್ಲೇ ಮುದಗೊಳ್ಳುತ್ತಿದ್ದರೆ, ಎಲ್ಲಾ ಆದ ನಂತರವೂ, "ಹೆಂಗಸರಿಗೆ ಇಂಟರೆಸ್ಟೇ ಇಲ್ಲ ಮಾರಾಯ.." ಎಂದು ಡಾಕ್ಟರೇಟ್ ಪ್ರಧಾನ ಮಾಡುತ್ತಿದ್ದರೆ ಬದುಕು ಒರಳು ಕಲ್ಲಲ್ಲಿ ಗರಗರ ಆಡಿದಂತಲ್ಲದೆ ಜೋಕಾಲಿಯಾದೀತಾದರೂ ಹೇಗೆ..? ಉತ್ತರಿಸಬೇಕಾದ ಆಕೆಗೆ ಬೇರೆ ಆಪ್ಶನ್ನು ಇಲ್ಲ. ಇದ್ದ ಆವನಿಗೆ ಅದು ಬೇಕಿಲ್ಲ. ಮನಸ್ಸು ಮಾತ್ರ ಪಿಸುನುಡಿಯುತ್ತಲೇ ಇರುತ್ತದೆ.. ಇಷ್ಟೆನಾ ಬದುಕು..? ಗೊತ್ತಿಲ್ಲ. ಆಕೆಯ ಕಣ್ಣಿಗೆ ದೃಷ್ಠಿ ಬೇರೆಸಲಾಗದ ನಾನು ಸುಮ್ಮನೆ ಶೂ ಲೇಸು ಬಿಗಿವ ನೆಪದಲ್ಲಿ ಕೆಳಗೆ ನೋಡುತ್ತೇನೆ. ಅಷ್ಟಕ್ಕೂ ತಲೆ ಎತ್ತಲು ನನಗಾದರೂ ಯಾವ ಸಮಜಾಯಿಸಿ ಬಾಕಿ ಉಳಿದಿರುತ್ತೆ ಅಂಥಾ ಹೊತ್ತಿನಲ್ಲಿ.

Wednesday, May 10, 2017

ಪಾತಾಳ ಗಂಗೆ… ಬರಿದಾಗಲಿರುವ ಅಂತರಗಂಗೆ…

ಪಾತಾಳ ಎನ್ನುವುದೇ ಒಂದು ಕಲ್ಪನೆ. ಅಂದರೆ ಯಾರೂ ಮುಟ್ಟಲಾಗದ ಆಳ, ತಡವಲಾಗದ ಬುಡತುದಿ ಎಂದೇ ಅರ್ಥ. ಪುರಾಣಗಳ ಹೊರತುಪಡಿಸಿದರೆ ಪಾತಾಳ ಕೈಗೆ ದಕ್ಕುವುದು ಅಸಾಧ್ಯವಾದುದರಿಂದಲೇ ಅದನ್ನು ಕೈಯಳತೆಗೆ ಸಿಗದ ಉದಾಹರಣೆಯಾಗಿ ಬಳಸುತ್ತೇವೆಯೇ ವಿನಾ ಪ್ರಾತ್ಯಕ್ಷಿಕ ರೂಪಕ್ಕೆ ಎಟುಕಿಸಿಕೊಂಡಿದ್ದೇ ಇಲ್ಲ.  ಭೂಮಿಯ ನಾಲ್ಕಾರು ಸಾವಿರ ಮೀಟರ್ ಆಳದಲ್ಲಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಯಾವ ಉಪಗ್ರಹವೂ ನಮಗೆ ಬಿಡಿಸಿಕೊಟ್ಟಿಲ್ಲ. ಅದು ಸಾಧ್ಯವೂ ಇಲ್ಲ. ಅದೇನಿದ್ದರೂ ತರಂಗಗಳ ಮೂಲಕ ನೀಡುವ ಕಲರ್ ಕೋಡಿಂಗ್ ಇಟ್ಟುಕೊಂಡು ನಾವು ವಿಶ್ಲೇಷಿಸುವ ಮೂಲಕ ಭೂಮಿಯ ಇಂತಿಂಥ ಭಾಗದಲ್ಲಿ ಹೀಗೆ ಇದೆ ಎಂಬ ಲೆಕ್ಕಾಚಾರಕ್ಕೆ ಬಂದಿದ್ದೇವೆ. (ಇವೆಲ್ಲ ಪಕ್ಕಾ ಮಾಹಿತಿ ಸಿಕ್ಕುವುದಾಗಿದ್ದರೆ ಕೊಳವೆ ಬಾವಿಗೆ ಬಿದ್ದ ಮಗುವನ್ನು ಪಾರು ಮಾಡಲು ಇಂತಲ್ಲಿ ಹೀಗೇ ಗುಂಡಿ ಹೊಡೆಯಬೇಕೆನ್ನುವುದು ಸುಲಭದ ಲೆಕ್ಕಚಾರವಾಗುತ್ತಿತ್ತು. ಆದರೆ ಈವರೆಗೂ ಕಲ್ಲು ಅಡ್ಡ ಬಂದಾಗಲೇ ಗೊತ್ತಾಗುತ್ತೆ ನಮ್ಮ ಅಂದಾಜು ತಪ್ಪಾಗಿದ್ದು) ಆದರೆ ನೀರಿನ ವ್ಯವಸ್ಥೆ ಹಾಗಿಲ್ಲ. ಹಾಗಿರೋದಕ್ಕೆ ಸಾಧ್ಯವೂ ಇಲ್ಲ. ಯಾವ ತಂತ್ರಜ್ಞಾನದ ಮೂಲಕವೂ ಭೂಮಿಯ ಆಳದ ಚಹರೆ ಮತ್ತು ಸಾಧ್ಯತೆಯನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ಭೂಮಿಯ ಆಳದಲ್ಲಿ ನೀರಿನ ಸಂಗ್ರಹ ಆಗುತ್ತಾದರೂ ಹೇಗೆ..? ಎರಡು ವಿಧದಲ್ಲಿ. ಅದರಲ್ಲಿ ಮೊದಲನೆಯದು ಮೇಲ್ಮೈ ಮೂಲಕ.
ಮೂಲತಃ ಭೂಮಿಯ ಸಂದಿಯಲ್ಲಿ ಒಳಗಿಳಿಯುವ ನೀರು, ನಿಸರ್ಗದತ್ತವಾಗಿ ಸಾವಿರಾರು ಕೋವೆಗಳಿಂದ ಸೋಸಿ, ಬಸಿದುಕೊಂಡು ಸೆಲೆಯಾಗಿ ಒಂದಕ್ಕೊಂದು ಸೇರುತ್ತಾ ಮತ್ತೂ ಇಳಿಮುಖವಾಗಿ ಗುರುತ್ವದತ್ತ ಒಸರುತ್ತಾ, ಗಟ್ಟಿಯಾದ ನೆಲದ ಪದರು ದೊರಕಿದರೆ ಅಲ್ಲೇ ಸಂಗ್ರಹವಾಗಿ, ನಿಂತಲ್ಲೆ ತನ್ನ ಕೆಳಗಿನ ನೆಲವನ್ನು ಕ್ರಮೇಣ ತೋಯಿಸಿ, ಒದ್ದೆಯಾಗಿಸಿ ಮತ್ತೂ ಕೆಳಗಿಳಿಯಲು ದಾರಿ ಮಾಡಿಕೊಂಡು, ಒಂದು ಸಂದಿನ ಬಿರುಕನ್ನು ಸೇರಿ, ಭೂಮಿಯ ಮೇಲ್ಪದರದ ಅಪ್ಪಟ ಬುಡ ದಾಟಿ ಇನ್ನೇನು ಮುಂದಕ್ಕೆ ಹೋಗುವುದು ಸಾಧ್ಯವೇ ಇಲ್ಲ ಎನ್ನುವಂತೆ ಶಿಲಾ ಪದರ ಅಡ್ಡ ಬಂದಾಗ ಅಲ್ಲೇ ಒಟ್ಟಾಗಿ ಸಂಗ್ರಹದ ಮಟ್ಟ ಏರಿ, ಹಾಗೆ ಏರಿದಾಗ ಉಕ್ಕಿ ಹರಿದ ಭಾಗದಲ್ಲಿಂದ ಇನ್ನೂಂದು ಸ್ಥಳಕ್ಕೆ ದೌಡಾಯಿಸುತ್ತಾ, ಆಚೀಚೆಗೂ ನೀರಿನ ಸಂಗ್ರಹ ಹೆಚ್ಚಿಸುತ್ತಾ ನಿಂತುಬಿಡುವ ನೀರೇ ನಮಗೆ ಪೂರೈಕೆಯಾಗುವ ನೆಲ ಜಲವಲಯ. ಇದಕ್ಕೆ ಪ್ರತಿ ಮಳೆಗಾಲದಲ್ಲಿ, ನೆರೆ ಬಂದ ಸಂದರ್ಭಗಳಲ್ಲಿ ಈ ರೀತಿಯ ಆವರ್ತನದಲ್ಲಿ ಭರ್ತಿಯಾಗುತ್ತಲೇ ಇರುತ್ತದೆ.
ಎರಡನೆಯದ್ದು ಲಕ್ಷಾಂತರ ವರ್ಷಗಳ ಹಿಂದೆ ಭೂಮಿ, ಹಿಮಗಲ್ಲುಗಳ ಉಂಡೆಯಾಗಿ ಸುತ್ತುತ್ತಿದ್ದಾಗ, ಕಾಲಗರ್ಭದೊಂದಿಗೆ ಭೂಗರ್ಭದಲ್ಲಿ ಸೇರಿಕೊಂಡು ಅದರ ಜೌಗು ಅಲ್ಲಿನ ಹೀರು ಶಿಲಾ ಪದರ, ಒಸರು ಪ್ರದೇಶ ಸೇರಿ ಗಾಳಿಯಾಡದೆ ಉಳಿದು ಹೋಗಿ ಒತ್ತಡಕ್ಕೊಳಗಾಗಿ ಸ್ಪಂಜಿನ ಅಥವಾ ಮಂಜಿನ ರೂಪದಲ್ಲಿ ಶಿಲಾ ಪದರದಲ್ಲಿ ಸಂಚಯವಾಗಿ ಶೇಖರವಾಗಿದ್ದು ಇದೆ. ಇದನ್ನು ಕಣ ಶಿಲೆ ಅಥವಾ ಉಪ್ಪುಗಲ್ಲು ಎನ್ನುತ್ತೇವಲ್ಲ ಅವು ಹಿಡಿದುಕೊಂಡಿರುತ್ತವೆ. ಇದರಲ್ಲಿ ಅಗಾಧ ಪ್ರಮಾಣದ ನೀರಿನ ಸಂಗ್ರಹ ಇದ್ದಿದ್ದು, ಈಗಲೂ ಇದೆ. ಆದರೆ ಅದು ನಮ್ಮ ಕೈಗೆಟುಕುವ ಅಂದಾಜಿನ ಹೊರಗಿದ್ದುದರಿಂದಲೇ ನಾವದನ್ನು ‘ಪಾತಾಳ ಗಂಗೆ’ ಎನ್ನುವುದು. ವೈಜ್ಞಾನಿಕವಾಗಿ ‘ಪೆಲಿಯೋ ವಾಟರ್’ ಎಂದು ಹೆಸರು. ಅದರೆ ಅದು ಎಲ್ಲಾ ಕಡೆಯಲ್ಲೂ ಇಲ್ಲ. ತೀರ ನೀರಿನ ಒರತೆಯ ಜತೆ ಎಲ್ಲಿ ಮರಳು ಶಿಲೆಗಳ ಫಲಕಗಳಿವೆಯೋ ಅಲ್ಲಿ ಮಾತ್ರ ಈ ನೀರಿನ ಖಜಾನೆ ಭದ್ರವಾಗಿ ಇದೆ. ಹಾಗೆ ಇದ್ದುದರಿಂದಲೇ ನಮ್ಮ ಮೇಲ್ಮೈನ ನೆಲ ಜಲವಲಯ ಭದ್ರವಾಗಿ ಉಳಿದುಕೊಂಡಿದ್ದು. ಆದರೆ ದಕ್ಷಿಣ ಭಾರತ ಒರಟು ಶಿಲಾ ಫಲಕಗಳ ಭೂಮಿ. ಇಲ್ಲಿ ಏನಿದ್ದರೂ ನೆಲ ಜಲವಲಯವೇ ನಮಗೆ ಜೀವಾಳ. ಪಾತಾಳ ಗಂಗೆಯ ಖಜಾನೆ ಇಲ್ಲಿ ನೆಪ ಮಾತ್ರಕ್ಕೆ.
ನಿಸರ್ಗದ ಇಂಥ ಸಂಕೀರ್ಣ ವ್ಯವಸ್ಥೆಯಿಂದಾಗೇ ನಾವು ಇಲ್ಲಿವರೆಗೂ ಸಿಹಿ ನೀರಿನ ಕೊರತೆ ಅಷ್ಟಾಗಿ ಅನುಭವಿಸಿಲ್ಲ. ಅದರೆ ಕ್ರಮೇಣ ಮೇಲ್ಮೈ ವಲಯಕ್ಕೆ ಆಧುನೀಕರಣದ ಕಾಂಕ್ರಿಟ್ ಹೊಡೆತ ಕೊಟ್ಟು ನೀರು ಒಸರುವ ಸೆಲೆಯ ಸಂದುಗಳನ್ನು ಹಾಳುಗೆಡವುತ್ತಾ ಬಂದೆವಲ್ಲ ಆ ಕಾರಣಕ್ಕೆ ಒಕ್ಕರಿಸಿದ್ದೇ ಅಗಾಧ ಬರ ಮತ್ತು ಸಿಹಿನೀರ ಕೊರತೆ.
ಈಗ ಪಾತಾಳಕ್ಕೆ ಡ್ರಿಲ್ಲು ಹೊಡೆದು ಆ ಶಿಲಾಗರ್ಭಕ್ಕೆ ತೂತು ಕೊರೆದು ಅಲ್ಲಿಂದ ನೀರನ್ನು ಮೇಲಕ್ಕೆಬ್ಬಿಸಿ ತಂದು (ಗಂಟೆಗೆ ಒಂದು ಲಕ್ಷ ಲೀ. ಬರುತ್ತದಂತೆ!) ಅದನ್ನು ಕರ್ನಾಟಕಕ್ಕೆ ಹರಿಸುವ ಯೋಜನೆಗೆ ಸರಕಾರ ಸಿದ್ಧವಾಗಿ ನಿಂತಿದೆ. ವಿಚಿತ್ರವೆಂದರೆ ಹಾಗೆ ಪಾತಾಳದಿಂದ ನೀರು ಎಬ್ಬಿಸಿದ್ದೇ ಅದರೆ ಮುಂದೊಮ್ಮೆ ನೆಲ ಸಡಿಲಗೊಂಡು, ಶಿಥಿಲಾವಸ್ಥೆಯಿಂದಾಗಿ ಸಣ್ಣ ಅಲುಗಾಟಕ್ಕೂ ಕುಸಿದು, ಪೂರ್ತಿ ಶಿಲಾ ರಚನೆಯ ವ್ಯವಸ್ಥೆಯನ್ನೇ ಹದಗೆಡಿಸುವುದಲ್ಲದೆ, ಸಣ್ಣ ಭೂಕಂಪಕ್ಕೂ ಅನಾಹುತಕಾರಿ ಭೂಕುಸಿತವಾಗಿ ಇರುವ ಮೂಲ ಭೂ ಬಂಧದ ರಚನೆಯನ್ನೇ ಹಾಳು ಮಾಡುವ ಈ ಪದ್ಧತಿಯ ಬಗ್ಗೆಯೇ ವೈಜ್ಞಾನಿಕವಾಗಿ ತಕರಾರಿದೆ. ಕಾರಣ, ಭೂಗರ್ಭದಲ್ಲಿರುವುದು ಸಿಹಿ ನೀರೇ ಎನ್ನುವುದಕ್ಕೆ ಯಾವುದೇ ಪುರಾವೆ, ರಿಪೋರ್ಟುಗಳನ್ನು ಯಾರೂ ಸಮೀಕ್ಷೆ ಮಾಡಿ ನೀಡಿಲ್ಲ. ಅಕಸ್ಮಾತ್ ಸಿಹಿ ನೀರೇ ಆಗಿದ್ದರೂ ಸಾವಿರಾರು ಮೀ. ಆಳದಲ್ಲಿ ಅದು ಸಹಜ ಶಿತಕಾರಕ ಸ್ಥಿತಿಯಲ್ಲಿರುವುದು ಅಸಾಧ್ಯ. ಹೊರ ವಾಯುವಲಯದ ಸಂಪರ್ಕವಿಲ್ಲದೆ ಇರುವುದರಿಂದ ಒಮ್ಮೆಲೆ ತೆರೆದುಕೊಂಡಾಗ ಯಾವ ರೀತಿಯ ರಾಸಾಯನಿಕ ಬದಲಾವಣೆಗೆ ಈಡಾಗುತ್ತದೆ ಎನ್ನುವುದರ ಬಗ್ಗೆಯೂ ಮಾಹಿತಿ ಇಲ್ಲ. ಅದನ್ನು ಎಬ್ಬಿಸಿ ಸಹಜ ಸ್ಥಿತಿಗೆ ತರುವುದಕ್ಕೆ ಬೇಕಾದ ವಿಸ್ತೃತ ನೀಲನಕ್ಷೆ ನಮ್ಮೆದುರಿಗಿಲ್ಲ. ಇನ್ನು ಅದು ಸಹಜ ಶುದ್ಧ ನೀರಾಗಿರುತ್ತದೆ ಎನ್ನಲು ಅಸಾಧ್ಯ. ಕಾರಣ ಸಿಹಿ ನೀರಿಗೆ ಹೊರಾವರಣದ ಆಮ್ಲಜನಕದ ಸಂಪರ್ಕ ನಿರಂತರವಾಗಿ ಬೇಕಾಗುತ್ತದೆ.
ಇವೆಲ್ಲಾ ಸರಿ ಇದ್ದರೂ ಒಂದು ಬಾವಿಗೆ ಹತ್ತು ಕೋಟಿ ರು. ಸುರಿದು ನೀರು ಮೇಲೆತ್ತಿದರೂ ಎಷ್ಟು ಕಾಲ ಎತ್ತಬಲ್ಲಿರಿ? ಹಾಗೆ ಖಾಲಿಯಾಗುವ ನೀರಿಗೆ ಮರುಪೂರ್ಣ ಹೇಗೆ ಮಾಡುವುದು? ಹಾಗೆ ಖಾಲಿ ಮಾಡಿ ಮುಂದಿನ ಪೀಳಿಗೆಗೆ ಖಾಲಿ ಒಡಲನ್ನು ಬಿಡುವುದೇ? ಎಲ್ಲದಕ್ಕಿಂತ ದೊಡ್ಡ ಲೋಪವೆಂದರೆ ಹಾಗೆ ಪಾತಳಕ್ಕೆ ಗರಡಿ ಹಾಕಲು ದಕ್ಷಿಣ ಭಾರತದ ನೆಲ ಸೂಕ್ತ ಎಂದು ಸಲಹೆ ಕೊಟ್ಟಿದ್ಯಾರು? ಯಾವ ಉಪಗ್ರಹದ ನೆರವಿನಿಂದ ಯೋಜನೆಯ ನಕ್ಷೆ ತಯಾರಿಸಲಾಗಿದೆ? ಅಕಸ್ಮಾತ್ ಡ್ರಿಲ್ಲು ಕೊರೆದದ್ದೇ ಆದರೆ ಯಾವ ರೀತಿಯ ನೀರು ಬರಬಲ್ಲದು? ಆಯಾ ಸ್ಥಳದಲ್ಲಿ ಇರುವ ನೀರಿನಲ್ಲಿ ಇರುವ ಅಂಶಗಳು ಯಾವುದು? ಹಾಗೆ ಸಾವಿರಾರು ಮೀ. ಆಳವನ್ನು ಹೊರ ಮೈ ವಾಯು ವಲಯಕ್ಕೆ ತೆರೆದುಕೊಡುತ್ತಿದ್ದಂತೆ ಆಗಬಹುದಾದ ರಾಸಾಯನಿಕ ಪಲ್ಲಟಗಳ ಮಾಹಿತಿ ಇದೆಯಾ?
ನೀರಿನೊಂದಿಗೆ ಸೇರಿಕೊಂಡು ಬರುವ ಫ್ಲೋರೈಡ್, ಸಿಲಿಕಾರ್ಡ್, ಕ್ಲೋರೈಡ್ ರಾಸಾಯನಿಕಗಳು ಮತ್ತು ಉಷ್ಣವನ್ನು ಸಹಜ ಸ್ಥಿತಿಗೆ ತರುವ ವಿಧಾನಗಳೇನು?ಎಲ್ಲಿ ಶಿಲಾ ಪದರುಗಳು ಮತ್ತು ಫಲಕಗಳ ಕೊರತೆಯಾಗಿ ಬರೀ ಬಂಡೆಯ ಅದಿರಿನ ತಳಹದಿ ಹೊಂದಿರುತ್ತವೋ ಅಲ್ಲೆಲ್ಲಾ ಶಿಲಾಮೇಲ್ಮೈ ಪದರದೊಂದಿಗೆ ರಾಸಾಯನಿಕ ಪರಿವರ್ತನೆಗೊಳಪಟ್ಟು ಅದು ಕಲುಷಿತ ನೀರಾಗೇ ಬದಲಾಗಿರುತ್ತದೆ. ಅಕಸ್ಮಾತ್ ಈ ನೀರನ್ನು ಎತ್ತಿ ತಂದರೂ ಅದಕ್ಕೆ ತಗುಲುವ ವೆಚ್ಚ ಒಂದು ಬಾವಿಗೆ ಸುಮಾರು ಹತ್ತು ಕೋಟಿಯಷ್ಟು.  ಹಾಗೆ ಪ್ರತಿ ಗಂಟೆಗೆ ಒಂದು ಲಕ್ಷ ಲೀ. ನೀರು ಬರುತ್ತಿದ್ದಂತೆ ಅದನ್ನು ಸಹಜ ಸ್ಥಿತಿಗೆ ತರಲು ಆಗುವ ಕಾರ್ಯವಾಹಿ ವೆಚ್ಚ, ಅದಕ್ಕೆ ಬೇಕಾಗುವ ಕರೆಂಟು, ಮಾನವ ಶಕ್ತಿ ಹಾಗೂ ಇತರ ಶಕ್ತಿಯ ಮೂಲಗಳ ವೆಚ್ಚ ಇನ್ನೂ ಐದಾರು ಕೋಟಿಯಾದರೂ ಆಗಲಿಕ್ಕಿಲ್ಲವೇ? ಅಷ್ಟೆಲ್ಲಾ ಆದ ಮೇಲೂ ಅಲ್ಲಿಂದ ಎಷ್ಟು ಕಾಲ ನೀರು ಎತ್ತಬಹುದೆನ್ನುವ ಶೇ.1 ರಷ್ಟು ಲೆಕ್ಕಾಚಾರ ಕೂಡಾ ಕಂಪನಿ ಅಥವಾ ಇಲಾಖೆಯ ಬಳಿಯಿಲ್ಲ!
ಅದರ ಬದಲಿಗೆ ಒಂದು ಲಕ್ಷ ಲೀಟರ್ ನೀರು ಇಂಗಿಸುವ ಸಾಮರ್ಥ್ಯದ ಇಂಗು ಗುಂಡಿಗೆ ಒಂದೇ ಲಕ್ಷ ರು. ಖರ್ಚು ಮಾಡಿದಲ್ಲಿ ಪ್ರತಿ ಗುಂಡಿಯಿಂದಾಗಿ ಅದರ ಮೂರು ಕಿ.ಮೀ. ವ್ಯಾಪ್ತಿಯೊಳಗಿನ ಜಲಮೂಲಗಳು ಪುನಃ ಜೀವ ಪಡೆದುಕೊಳ್ಳುತ್ತವೆ. ಅಲ್ಲದೆ ನೆಲಜಲ ವಲಯ ಸಮೃದ್ಧವಾಗುತ್ತದೆ. ಸರಿಯಾಗಿ ಇಂಗು ಗುಂಡಿ ಮತ್ತು ಮಳೆ ಕೊಯ್ಲು ಮಾಡಿದ್ದೇ ಆದರೆ ಐದೇ ವರ್ಷಗಳಲ್ಲಿ ಶೇ. 50ರಷ್ಟು ಸಿಹಿ ನೀರ ಅಂತರ್ಜಲ ಪ್ರಮಾಣ ಏರಿಸಬಹುದು. ಇದಕ್ಕೆ ತಗುಲುವ ವೆಚ್ಚ ಶೇ.1ಮಾತ್ರ. ಇನ್ನು ಈ ಯೋಜನೆ ಕೈಗೆತ್ತಿಕೊಳ್ಳುತ್ತಿರುವ ‘ವಾಟರ್ ಕ್ವೆಸ್ಟ್’ ಕಂಪನಿ ಬಳಿ ಒಂದೇ ಒಂದು ವೈಜ್ಞಾನಿಕ ಮಾಹಿತಿ ಇಲ್ಲ. ತನ್ನ ವೆಬ್‌ಸೈಟಿನಲ್ಲಿ ಶಾಲೆ ಹುಡುಗರು ಕಲರ್ ಹೈಲೈಟರ್‌ನಿಂದ ಮಾರ್ಕ್ ಮಾಡಿರುವ ನಾಲ್ಕಾರು ನಕಾಶೆಗಳನ್ನು ಸೇರಿಸಿಟ್ಟಿದೆ. ನಾಲ್ಕು ಆಳಕೊಳವೆ ಬಾವಿ ಹೊಡೆಯುವ ಮಶಿನ್ ಚಿತ್ರ ಬಿಟ್ಟರೆ ತಾನು ಹೇಗೆ, ಯಾವ ಆಧಾರದ ಮೇಲೆ ಇಲ್ಲಿ ನೀರಿನ ಅಂತರಾಳದ ಬಗ್ಗೆ ಖಾತರಿ ಕೊಡುತ್ತಿದ್ದೇನೆ ಎನ್ನುವ ಬಗ್ಗೆ ಒಂದಕ್ಷರದ ಮಾಹಿತಿಯೂ ಇಲ್ಲ. ಅವರ ಕಾರ್ಯ ತಂತ್ರದ ಬಗ್ಗೆಯೂ ಖಚಿತತೆ ಇಲ್ಲ. ಅವರ ವಿಶ್ವಾಸವೆಂದರೆ ಎರಡ್ಮೂರು ಸಾವಿರ ಅಡಿ ನೆಲಕ್ಕೆ ಡ್ರಿಲ್ಲು ಹೊಡೆದು ಭೂಮಿಗೆ ತೂತು ಕೊರೆದದ್ದೇ ಆದರೆ ಎಲ್ಲಿದ್ದರೂ ನೀರು ಬಂದೇ ಬರುತ್ತದೆ. ಅದಕ್ಕೆ ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆ ಬೇಕಿಲ್ಲ ಎಂಬುದು. ಆದರೆ ನೀರು ಇಲ್ಲೇ ಇಷ್ಟೇ ಇದೆ ಎನ್ನುವುದು ಮತ್ತು ಅಲ್ಲಿರುವ ನೀರನ್ನು ತೆಗೆದಾದ ಮೇಲೆ ಭೂಮಿಯೊಳಗೆ ಸ್ವಯಂ ಮರುಪೂರಣ ವ್ಯವಸ್ಥೆ ಇದೆ ಎನ್ನುವ ಬಗ್ಗೆ ಕಂಪನಿ ಕರಾರುವಕ್ಕಾಗಿ ಕಿವಿಗೆ ಗೊಂಡೆ ಹೂವಿಡುತ್ತಿದೆ. ನೆನಪಿರಲಿ ಸಮುದ್ರದ ನೀರು ಸಿಹಿನೀರಾಗಿ ಪರಿವರ್ತನೆಯಾಗಿ ಭೂಮ್ಯಾಂತರಾಳ ಸೇರುವ ಪ್ರಕ್ರಿಯೆಯೇ ಇಲ್ಲ.
ಇಂಡಿ, ಆಲಂದ ಚಿಕ್ಕನಾಯಕನಹಳ್ಳಿ, ಶಿಡ್ಲಘಟ್ಟ, ಚಳ್ಳಕೆರೆ, ಆನೇಕಲ್, ಮಹಾಲಿಂಗಪುರ, ಅಣ್ಣಿಗೇರಿಯಲ್ಲಿ ಇಂಥ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಸ್ತಾಪಿಸಿರುವ ನೀರಾವರಿ ಇಲಾಖೆ ಪ್ರತಿ ದಿನ ಇಲ್ಲಿಂದ ಸರಾಸರಿ 100 ದಶ ಲಕ್ಷ ಲೀ. ನೀರು ಮೇಲೆತ್ತುವ ಪ್ರಸ್ತಾವನೆಗೆ ಅನುಮೋದನೆ ನೀಡುತ್ತಿದೆ. ಆದರೆ ಇಲ್ಲಿನ ಗಂಟೆಗೆ ಸುಮಾರು 100 ದ.ಲ. ಕ್ಯೂಬಿಕ್ ಮೀ. ನೀರು ಹರಿವು ಭೂಮಿಯಾಳದಲ್ಲಿ ಸರಾಸರಿ 350 ಮೀ. ನಂತರ 600 ಮೀ. ವರೆಗೂ ಇದೆ ಎನ್ನುವುದನ್ನು ಯಾವ ಸಂಸ್ಥೆ ದೃಢಪಡಿಸಿದೆ? ಉತ್ತರ ಸೊನ್ನೆ. ಇದನ್ನೂ ‘ವಾಟರ್ ಕ್ವೆಸ್ಟ್’ ಸಂಸ್ಥೆಯೇ ವರದಿ ನೀಡಿದ್ದು, ನೀರು ಬಾರದಿದ್ದರೆ ದುಡ್ಡು ಬೇಡ ಎನ್ನುವ ಆಕರ್ಷಕ ಆಫರ್ ಕೊಟ್ಟಿಿದೆ! ಆದರೆ ಅಷ್ಟು ಆಳಕ್ಕೆ ಬೋರ್ ಇಳಿಸಿದರೆ ನೀರು ಬಂದೇ ಬರುತ್ತದೆ. ಇದಕ್ಕೆ ದೊಡ್ಡ ಲೆಕ್ಕಾಚಾರವೇನೂ ಬೇಕಿಲ್ಲ. ಅದನ್ನು ಶುದ್ಧೀಕರಿಸಲು ಇದರ ಎರಡು ಪಟ್ಟು ದುಡ್ಡು ಪೀಕುವ ಸಂಸ್ಥೆ ಆ ವಿಶ್ಲೇಷಣೆಯನ್ನು ಇಲ್ಲಿ ಮಾಡಿಯೇ ಇಲ್ಲ. ಅಕಸ್ಮಾತ್ ನೀರು ರಾಸಾಯನಿಕಮಿಶ್ರವಾಗಿದ್ದರೆ ಅದನ್ನು ಶುದ್ಧೀಕರಿಸಲೇಬೇಕಲ್ಲ ಆಗ? ಸಮುದ್ರದ ನೀರು ಅಲ್ಲಿಂದ ಇಂಗಿ ಸಿಹಿ ನೀರಾಗಿ ಪರಿವರ್ತನೆಯಾಗಿ ಇಲ್ಲೆಲ್ಲ ಕೋಟ್ಯಂತರ ಲೀಟರ್‌ಗಟ್ಟಲೆ ಸಂಗ್ರಹವಾಗಿದೆ ಎನ್ನುವ ಕತೆ ಕೇಳಲಷ್ಟೇ ಚೆಂದ. ಅಂಥ ನೈಸರ್ಗಿಕ ಪ್ರಕ್ರಿಯೆ ಅಸಾಧ್ಯ ಎನ್ನುವುದನ್ನು ವಿಜ್ಞಾನದ ಸೆಕೆಂಡರಿ ಹುಡುಗನೂ ಹೇಳಬಲ್ಲ. ಹಾಗಿದ್ದಾಗ ಸ್ವಯಂ ಮರುಪೂರಣ ಎನ್ನುವ ಕತೆ ಹಾಗೂ ನೀರು ಮೇಲೆತ್ತುವ ಲೆಕ್ಕಾಚಾರ ನೋಡಿದರೆ ಬರಲಿರುವ ದಿನಗಳಲ್ಲಿ ಕರ್ನಾಟಕವನ್ನು ಸ್ಮಶಾನವನ್ನಾಗಿಸುವ ಹುನ್ನಾರದ ಹೊರತಾಗಿ ಬೇರೆ ಒಂದೇ ಒಂದು ಧನಾತ್ಮಕ ಅಂಶವೂ ಅದರಲ್ಲಿಲ್ಲ.
ಸಂತೋಷ ಕುಮಾರ ಮೆಹೆಂದಳೆ

Saturday, May 6, 2017


ಅವಳ ಕನಸು ಕಮರುವ ಮೊದಲು...  


(ಅವಳೊಂದು ಭಾವಗೀತೆಯಾ..?ಅವಳೊಂದು ಕವಿತೆಯಾ...? ಯಾರಿಗೆ ಗೊತ್ತು..? ಸರಿಯಾಗಿ ಓದಿಕೊಂಡರೆ ದೊಡ್ಡ ಕಾವ್ಯವೇ ಆದಾಳು. ಆದರೆ ಎಂಜಲು ಹಚ್ಚದೆ ಪುಟ ತಿರುವಬಲ್ಲ ಹಿಕಮತ್ತು ಅವನಿಗೆ ಗೊತ್ತಿರಬೇಕಿತ್ತು. ಪ್ರತಿ ಹುಡುಗಿಯ ಕನಸಿಗೊಂದು ತಿರುವು ಸಿಗುವುದೇ ಈ ಹಂತದಲ್ಲಿ... )
                 
"..ಮದುವೆ ಅಂತಾಗಿಬಿಟ್ಟರೆ ಹುಡುಗಿಯರೆಲ್ಲಾ ಸುಖವಾಗೇ ಇರ್ತಾರೆ ಅಂತೀಯಾ..?"
ಸರಕ್ಕನೆ ತೀರ ಉತ್ತರಿಸಲಾಗದ ಪ್ರಶ್ನೆ ಕೇಳಿಬಿಟ್ಟಿದ್ದಳು ಶಾಂತಿ. ನಾನು ಸುಮ್ಮನೆ ಶಬ್ದಗಳನ್ನು ತಡುವಿಕೊಂಡಿದ್ದೆ. ಅಸಲಿಗೆ ಹಾಗೆ ಸುಖ ಎನ್ನುವುದನ್ನು ಮತ್ತು ಅದಕ್ಕೊಂದು ಮಾನದಂಡವನ್ನು ಯಾರೂ ರೂಪಿಸಿಲ್ಲವಾದರೂ ಒಂದು ಖಚಿತತೆಯ ಹಾದಿಯಲ್ಲಿ, ಬದುಕು ಹೂವಿನ ಹಾಸಿಗೆ ಎಂದುಕೊಳ್ಳುವುದಕ್ಕೆ ಎಲ್ಲರೂ ಅವರವರ ಭಾವಕ್ಕೆ ಪಕ್ಕಾಗೇ ಇರುತ್ತಾರೆ.
ಆದರೆ ಇಂತಹದ್ದೊಂದು ಮೂಲಭೂತ ಪ್ರಶ್ನೆಯನ್ನಿಟ್ಟುಕೊಂಡು ಉತ್ತರ ಹೇಳು ಎನ್ನುವಂತೆ ಮುಖ ನೋಡಿದ ಶಾಂತಿಗೆ ಎನೂ ಉತ್ತರಿಸದೆ ಸುಮ್ಮನೆ ಒಂದು ಪ್ಯಾಲಿ ನಗೆ ನಕ್ಕೆ. ಕಾರಣ ಎಂಥದ್ದೇ ಬುದ್ಧಿವಂತ ಎಂದುಕೊಂಡರೂ ಗಂಡಸು ಹೆಣ್ಣಿನ ಮನಸ್ಸಿಗೂ, ಆಕೆಯ ಒಳಾವರಣಕ್ಕೂ ಲಗ್ಗೆ ಇಕ್ಕಿದ್ದು ಕಡಿಮೆಯೇ. ಹಾಗಂತ ಎಲ್ಲಾ ಗಂಡಸಿನದೇ ತಪ್ಪಾ..? ಖಂಡಿತಾ ಅಲ್ಲ. ಅರಳಿಕೊಳ್ಳುವಷ್ಟಾದರೂ ಅರಳದಿದ್ದರೆ ಅದು ಮೊಗ್ಗಾಗೇ ಇರುತ್ತದೆ ಎನ್ನುವುದು ಹೇಗೆ ಸತ್ಯವೋ ಹಾಗೆ ತೆರೆದುಕೊಳ್ಳುವಷ್ಟಾದರೂ ಅವನೊಂದಿಗಿನ ಸಾಂಗತ್ಯಕ್ಕೆ ಬೀಳದಿದ್ದರೆ ಆಕೆ ಹೂವಾಗಲಾರಳು.
ಹೀಗೆ ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಚೆಂದದ ಸಂಸಾರಕ್ಕೂ ಅದಕ್ಕಿಂತಲೂ ಚೆಂದವಾಗಿ ಈ ಬದುಕು ಹುಟ್ಟಿದ ಮೇಲೆ ಆರಂಭಿಸಿಬಿಡಬೇಕೆನ್ನುವ, ಅನಾಮತ್ತಾಗಿ ಅನುಭವಿಸಿಬಿಡಬೇಕೆನ್ನುವ ಅಗಾಧ ಆಸೆಗೂ, ತನ್ನ ಏನೆಲ್ಲಾ ಕನಸಿನ, ಬದುಕಿನ ಫ್ಯಾಂಟಸ್ಸಿಗೆ ಆಕೆ ಕಾಯುವುದು ಒಬ್ಬ ರಾಜಕುಮಾರನಿಗಾಗಿ, ಬದುಕು ಏನೇ ಗ್ಯಾಜೆಟ್‍ಗಳ ಸಾಂಗತ್ಯದಲ್ಲಿ ವೃತ್ತದೊಳಗೆ ಸೇರಿಕೊಂಡಿದೆ ಎಂದುಕೊಂಡರೂ ಸುರುಳಿಯಲ್ಲಿನ ತಿರುವುಗಳಿಗೊಂದು ಮಹತ್ವ ಬರಲು ವೃತ್ತ ಬೇಕೆ ಬೇಕು ಎನ್ನುವಂತೆ ಆಕೆ ಅವನಿಗಾಗೇ ಕಾದಿರುತ್ತಾಳೆ. ತನ್ನ ಬದುಕು ಅವನೊಂದಿಗೆ ಆರಂಭ ಮತ್ತು ಅವನೊಂದಿಗೆ ಅಂತ್ಯ.. ಅಲ್ಲಿ ಏನೆಲ್ಲಾ ಖುಶಿ ಅಥವಾ ಭರಿಸಲಾಗದ ಹಳವಂಡಗಳಿದ್ದರೂ ಎಲ್ಲವೂ ತನ್ನದೇ. ತಾನು ಆ ಜಗತ್ತಿನ ಅಧೀಕೃತ ಸಾಮ್ರಾಜ್ಞಿ ಎಂದೇ ಹೆಗಲು ಒಡ್ಡಲು ತಯಾರಾಗಿ ನಿಂತಿರುತ್ತಾಳೆ. ಹೊರುತ್ತಾಳಾ ಇಲ್ವಾ ಅದು ಸೆಕಂಡರಿ.
ಕಾರಣ ಅಲ್ಲಿಯವರೆಗಿನ ಅನಿವಾರ್ಯದ ಓದು, ಬದುಕಿನ ಮೊದಲ ಹೀರೊ ಅಪ್ಪನ ಪ್ರೀತಿ, ಅಣ್ಣನ ರಕ್ಷಣೆಯ ಸಾಂಗತ್ಯ, ತಮ್ಮನ ಓಲೈಕೆ, ತಂಗಿಯ ಹುಸಿಮುನಿಸು, ಅಕ್ಕನ ಕದನ, ಯಾವಾಗಲೂ ಒಂದು ಕಣ್ಣಿಟ್ಟೆ ಕಾಯುವ ಅಮ್ಮನ ಬೇಹುಗಾರಿಕೆ, ದೂರದಿಂದಲೇ ಹೊಂಚುತ್ತಿದ ಊರ ಹುಡುಗರು, ಇನ್ಯಾವಾಗಲೋ ಮೈ ಕೈ ತಾಗಿಸುವ ಸಮೀಪದ ಸಂಬಂಧಿ, ಉಗುಳಲಾಗದ ಬಿಸಿ ತುಪ್ಪದಂತಹ ಕುಟುಂಬದ ಕ್ಲೋಸು ಮನುಶ್ಯ, ಒಲ್ಲೆನೆಂದರೂ ಬೀಡದ ಅವಳ್ಯಾರೋ ಸ್ನೇಹಿತೆ, ಯೌವ್ವನ ಹೊಸ ಬಿಸಿಗಳನ್ನೆಲ್ಲ ಕದ್ದು ತೋರಿಸುವ ಆಗೀಗ ಮಜ ಕೊಡುವ ಕೊಂಚವೇ ಸಿನಿಯರ್ ಹುಡುಗಿ, ಆಗೆಲ್ಲಾ ಇದ್ದಕ್ಕಿದ್ದಂತೆ ಎದೆಗೆ ಕೈಯಿಕ್ಕಿಬಿಡುವ ಆಕೆಯ ಚರ್ಯೆ ಮುಜುಗರ ತರಿಸಿದರೂ ಹೊಸ ವಿಷಯಗಳ ಬಗ್ಗೆ, ಅರಿಯದ ಖಾಸಗಿ ಜಗತ್ತಿನ ಅಗಾಧತೆಗಳನ್ನು ಆಕೆ ಎತ್ತಿಡುವಾಗ, ಕದ್ದಾದರೂ ಸರಿ ಆಕೆಯ ಒರಟು ಸಾಮೀಪ್ಯ ಬೇಕೆನ್ನಿಸಿರುತ್ತದೆ ಪ್ರತಿ ಹುಡುಗಿಗೆ.
ಇವೆಲ್ಲದರ ಆಚೆಗೆ ಇದೆಲ್ಲವನ್ನೂ ನಿವಾಳಿಸಿ ತನ್ನದೇ ಒಂದು ಪ್ರಪಂಚ, ಅಲ್ಲೊಂದು ಅಧ್ಬುತ ಕಚಗುಳಿ, ಅದಕ್ಕೂ ಮಿಗಿಲಾದ ತನ್ನೆಲ್ಲಾ ಕನಸಿಗೆ ನೀರೆರೆಯುವವನ ಸಾಂಗತ್ಯ, ಅಲ್ಲಿ ತನ್ನ ಮೇಲೆ ಕಣ್ಣಿರಲ್ಲ, ಇತರರ ಕಣ್ಣಿಂದ ಕಾಯಲು ಅವನಿರುತ್ತಾನೆ. ತನಗೆ ಏನು ಬಂದರೂ ಬಾರದಿದ್ದರೂ ಅವನು ಕಲಿಸುತ್ತಾನೆ. ತಾನು ಶೃದ್ಧೆಯಿಂದ ಒಪ್ಪವಾಗಿ ಒಂದು ಗೂಡಿನಲ್ಲಿ ಬದುಕು ಬಣ್ಣಗಳ ಸಂತೆಯಾಗಿಸಬೇಕೆನ್ನುವ ಸಮಯಕ್ಕೆ ಆಕೆ ಸರಹೊತ್ತಿನಲ್ಲೂ ಕನಸುಗಟ್ಟಿ ಕಾಯುತ್ತಿರುತ್ತಾಳೆ. ಆಕೆ ಬದುಕು ಮತ್ತು ಕ್ಷಣಗಳೂ ಆರಂಭವಾಗುತ್ತಿದ್ದುದೇ ಹಾಗೆ.
ಪ್ರಿಯ ದೊರೆ... ಒಂದು ಉಮ್ಮಾ...
ಪ್ರತಿ ಮಾತಿನ ಮೊದಲು ಮತ್ತು ಕೊನೆಗೊಮ್ಮೆ ಅಧರ ಮುದ್ರೆಯೊತ್ತದಿದ್ದರೆ ಬದುಕಿನ ಸವಿಯ ಕ್ಷಣಗಳು ಕಳೆದುಕೊಂಡಂತೆನೆ ಎನ್ನುವುದು ಆಕೆಯ ನಿಲುವು. ಅದಕ್ಕೆ. ಉಮ್ಮಾ... ಎಂದೇ ಆರಂಭಿಸು ಎಂದೇ ಆಕೆಯ ವಾದ. ಪ್ರೀತಿಯ ವಾದಕ್ಕೆ ಅಕೆಯ ಎದುರಿನಲ್ಲಿ ಅವನು ಗೆದ್ದಿದ್ದು ಕಮ್ಮಿ. ಅವನದೇನಿದ್ದರೂ ಆಕೆಗೆ ಸೋತು ಗೆಲ್ಲುವುದು.
ಎಲ್ಲಿದ್ದೀಯೋ.. ಯಾವ ಗುಡ್ಡ ಹತ್ತುತ್ತಿದ್ದಿಯೋ ಗೊತ್ತಿಲ್ಲ. ನಾನು ಮಾತ್ರ ಕಮ್ಮಗಿನ ಕಬ್ಬಿನ ಹಾಲನ್ನೂ ಅದರ ನೊರೆಯ ಜೊತೆಗೆ ತುಟಿಯೆಲ್ಲ ನೊರೆಯಾಗುವಂತೆ ಮಾಡಿಕೊಳ್ಳುತ್ತಾ ಸಂಜೆಯ ಚಳಿಗೆ ಮುದುರುತ್ತಾ, ಅದರೊಳಗೂ ಕಾಡಿ ನೆನಪಾಗುವ ನಿನ್ನ ತುಂಟತನಕ್ಕೆ ಸಣ್ಣಗೆ ಅಲ್ಲಲ್ಲೆ ಖಾಸಗಿಯಾಗಿ ಒದ್ದೆಯಾಗುತ್ತಾ ಕೂತಿದ್ದೇನೆ. ಜೀವನದಲ್ಲಿ ಮೊದಲನೇ ಬಾರಿಗೆ ಅರಿವಿಲ್ಲದೇ ನಿನ್ನ ಮಿಸ್ ಮಾಡ್ಕೊಳ್ಳೋಕೆ ಶುರುವಿಟ್ಟುಕೊಂಡೆನಲ್ಲ ‌ ..ನಿನ್ನ ಕರೆಗೆ ಯದ್ವಾ ತದ್ವಾ ಕಾಯೋಕೆ ಪ್ರಾರಂಭಿಸಿದೆನಲ್ಲ ..ಸಾವಿರಾರು ದ್ವಂಧ್ವಗಳ, ಭಯಗಳ ನಡುವೆಯಲ್ಲೂ ಇನ್ನಿಲ್ಲದ ದರ್ದಿನಲ್ಲಿ ಮೊದಲನೇ ಸಲ ನಿನ್ನ ಭೇಟಿ ಮಾಡಿದ್ನಲ್ಲ ಆವತ್ತೇ ಅನ್ನಿಸಿಬಿಡ್ತು ನಂಗೆ ಇವ್ನ ಕಟ್ಕೊಂಡು ಬದುಕು ಕಷ್ಟ ಅಂತ ...!
ಯಾಕೆ ಗೊತ್ತಾ ? ಯಾವತ್ತೂ ನಿನ್ನಿಂದ ತಪ್ಪಿಸಿಕೊಂಡು ಓಡದ ಹಾಗೆ ಅಡಿಕ್ಟು ಆಗಿದ್ದು ಆವತ್ತೇ ...ಪ್ರತೀ ದಿನ ಪ್ರತೀ ಕ್ಷಣ ನಿನಗಾಗಿ ಕಾಯುವ ಹಾಗೇ ಹಂಬಲಿಸುವ ಹಾಗೇ ಮಾಡಿದ್ದೀಯಲ್ಲ ...ಇವತ್ತಿಡೀ ನೆನಪಿಸಿಕೊಳ್ದೇ ತೆಪ್ಪಗಿರೋಣ ಅಂತ ಶಪತ ಹಾಕಿ ಆಣೆ ಮಾಡ್ಕೊಂಡು ದಿನವನ್ನು ಶುರುವಿಟ್ಟುಕೊಳ್ಳೋಣ ಅಂತ ಹೊರಟ್ರೂ ..ನಿನಗೊಂದು ತಣ್ಣನೆಯ ಮೆಸೇಜ್ ಮಾಡ್ದೇ ಇದ್ರೆ ಆ ದಿನವೇ ಮುಂದೆ ಹೋಗದೇ ಭೂಮಿನೇ ನಿಂತುಬಿಟ್ಟಿದ್ಯೇನೋ ಅನ್ನುವಷ್ಟು ಅಡಿಕ್ಷನ್ ಮನಸ್ಸಿಗೆ ಒಗ್ಗಿದೆ ಅಂತಾದ್ರೆ ನೀನೇ ಹೇಳು...ನಿನ್ನ ಕಟ್ಕೊಂಡು ಬದುಕು ಕಷ್ಟ ಆಗುತ್ತೆ ಅಂತ ನಂಗೆ ಅನ್ಸಿದ್ದು ತಪ್ಪಾ ಅಥವಾ ಬದುಕು ಅಂತಹ ಅಪರೂಪದ ಸುಖದ ಒತ್ತಡದಲ್ಲಿ ಬದುಕೊದಕ್ಕೆ ಅಂತನೆ ಹಿಂಗೆ ಮಾಡಿಕೊಂಡೆನಾ..? ನನ್ನ ಬದುಕಿನಲ್ಲಿ ನಡೆದು ಬಂದು ಕಾಲೂರಿ ನಿಂತವನು ನೀನು... ಬರುವದಕ್ಕೇ ಕಾಯುತ್ತಿರುವವಳಂತೆ ನಿನ್ನ ತೆಕ್ಕೆಗೆಳೆದುಕೊಂಡವಳು ನಾನು.. ಇಬ್ಬರಿಗೂ ಅದು ಅನಿರೀಕ್ಷಿತ..!
ಬೆಟ್ಟ ಹತ್ತುವಾಗ ಸಿಕ್ಕ ಪುಟ್ಟ ನವಿಲುಗರಿಯಂತೆ... ಒಂಟಿ ಸಂಜೆಯಲ್ಲೊಂದು ಕವಿತೆಯ ಸಾಲು ಹೊಳೆದಂತೆ ..ಯಾವತ್ತೋ ಕಳೆದು ಹೋದ ಬಾಲ್ಯದ ಗೆಳತಿಯ ಪತ್ರ ಸಿಕ್ಕಂತೆ ..ಆಮೇಲಿನದೆಲ್ಲ ವಿವರಣೆಗೆ ದಕ್ಕುವದಿಲ್ಲ ಬಿಡು.. ನೀನು ನನ್ನ ಕವಿತೆಗಳಲ್ಲಿ, ಬರೆದ ಸಾಲುಗಳಲ್ಲಿ, ಹಾಡುವ ಹಾಡುಗಳಲ್ಲಿ, ಅಲೆದ ದಾರಿಗಳಲ್ಲಿ, ಮಾಡುವ ಕೆಲಸಗಳಲ್ಲಿ, ಮಾಡಿಕೊಂಡ ಸಿಂಗಾರದಲ್ಲಿ, ಎಲ್ಲಿ ನೀನು ದಾಕಲಾಗಲಿಲ್ಲ ಹೇಳು..? ಕಾಲಿನ ಹೆಬ್ಬೆರಳ ತುದಿಯಿಂದ ಹಿಡಿದು ನೆತ್ತಿಯ ಮೇಲಿನ ಜೀವ ನಾಡಿಯ ತನಕ ...ನಿನ್ನ ಮುಂದೆ ಬೆತ್ತಲಾಗದೇ ಉಳಿದದ್ದೇನಿದೆ ..? ಎಲ್ಲೆಲ್ಲೋ ನನಗೆ ಗೊತ್ತಿಲ್ಲದಂತೆ ಹುಟ್ಟಿಕೊಳ್ಳುವ ಸುಖದ ಸಣ್ಣ ಗುಳ್ಳೆಗಳನ್ನೂ ಬಿಡದೆ ನೇವರಿಸಿ ಕಿಚ್ಚೆಬ್ಬಿಸುವ ನಿನ್ನ ಹುಚ್ಚೆಬ್ಬಿಸುವ ಸ್ಪರ್ಷಕ್ಕೆ ಕೋಣೆಯ ತಾಪವೇ ಏರುತ್ತದಲ್ಲ...?ಅದೇನಾ ಬದುಕಿನ ಅರಿಯದ ಸುಖದ ಗಮ್ಯ..? ನನಗೆ ಗೊತ್ತಿಲ್ಲ. ವಿವರಿಸಬೇಕಾದ ನೀನು ವೃತ್ತದಾಚೆಗೀಗೀಗ.
ಅದೆಲ್ಲ ಬಿಡು ಕೊಟ್ಟದ್ದು, ಪಡೆದದ್ದು, ಸುಖಕ್ಕೆ ಮೈಯೊಡ್ಡಿದ್ದು, ತೋಯ್ದು ಮುದ್ದೆಯಾದದ್ದು, ಹನಿದು ನೀರಾದದ್ದು, ಕರಗಿ ಕಳೆದು ಹೋದದ್ದು, ಸಾವಿರ ಮಾತಾಡಿದ್ದು,  ಆಡದೇ ಮನದಲ್ಲಿ ಉಳಿದು ಹೋದದ್ದು ಲಕ್ಷಾಂತರ ಮೆಸೇಜ್ ಕಳಿಸಿಕೊಂಡದ್ದು, ಇದೆಲ್ಲವೂ ಬರೀ ಕಡು ಕತ್ತಲೆಯ ಬೆತ್ತಲೆಯ ಮೋಹ ಅಂತ ಯಾರಾದ್ರೂ ಹೇಳಿದ್ರೆ ..ಅಥವಾ ನಮಗೇ ಇನ್ಯಾವತ್ತೋ ದುರ್ಬಲ ಕ್ಷಣದಲ್ಲಿ ಹಾಗನ್ನಿದ್ರೆ ಮರೆತು ಬಿಡಬಹುದು..ಆದ್ರೆ ನೀನು ಸಿಕ್ಕಾಗ ಅನುಭವಿಸಿದ ಬೆರಳಂಚಿನ ಪುಳಕ ...ಒಂಟಿ ಸಾಯಂಕಾಲದ ಹಿತ್ತಲಿನಲ್ಲಿ ನಿನ್ನದೇ ನೆನಪು ಮಾಡುತ್ತ ಕಳೆದು ಬಿಡುವ ಬೇಸರ...ಬದುಕು ಬೇಸರ ಅನ್ನಿಸಿದಾಗ ನೀನೊಬ್ಬನಿದ್ದೀಯಲ್ಲ ಆತ್ಮಬಂದು ಅಂತ ಅಂದುಕೊಂಡು ಹಗುರಾಗುವ ಆ ಕ್ಷಣ ..."
ಹೀಗೆ ಬದುಕಿನ ಬಗ್ಗೆ ಆಕೆಯ ಕನಸು,ಹುಟ್ಟಿಕೊಂಡ ಚಿಗುರು ಗರಿಕೆಗಳ ಒಡಲಲ್ಲಿ ಅಸೆಗಳ ಒರತೆ ಮೂಟೆ ಮೂಟೆ.  ಅವಳೊಂದು ಭಾವಗೀತೆಯಾ..? ಅವಳೊಂದು ಕವಿತೆಯಾ...? ಯಾರಿಗೆ ಗೊತ್ತು..? ಸರಿಯಾಗಿ ಓದಿಕೊಂಡರೆ ದೊಡ್ಡ ಕಾವ್ಯವೇ ಆದಾಳು. ಆದರೆ ಎಂಜಲು ಹಚ್ಚದೆ ಪುಟ ತಿರುವಬಲ್ಲ ಹಿಕಮತ್ತು ಅವನಿಗೆ ಗೊತ್ತಿರಬೇಕಿತ್ತು. ಶಾಂತಿಯ ಬದುಕು ಪುಟ ಮಗುಚಿದಂತೆಲ್ಲಾ ಬಣ್ಣಗಳ ಕದಡಿದ್ದು ನನಗೆ ಸ್ಪಷ್ಟವಾಗಿ ಕಂಡಿತ್ತು. ಬದುಕಿನ ಮೊದಲ ಪುಟಕ್ಕೆ ಕಾಲಿಟ್ಟಾಗ ಎಲ್ಲವೂ ಹೊಸ ಪಾನುಗಳೇ. ಆದರೆ ಗಂಡಸೆಂಬುವನು, ಗಂಡನಾದಾಗ ಪಾನುಗಳಲ್ಲಿ ಚಿತ್ಕಾಟು ಎದ್ದು ಕಾಣತೊಡಗುತ್ತದೆ. ಏನೇ ಸ್ನೇಹಿತನಂತಿದ್ದಾನೆ ಎಂದುಕೊಂಡರೂ ಸ್ನೇಹಿತೆಯೊಬ್ಬಳ ಕಾಲ್‍ಗೂ ಕೂಡಾ ಮನ ಬಿಚ್ಚಿಕೊಂಡು ಆಚೆ ಹೋಗಿ ಮಾತಾಡಬಲ್ಲ ಸಣ್ಣ ಸ್ವಾತಂತ್ರ್ಯ ಅರಿವಿಲ್ಲದೆ ಬಂಧಕ್ಕೊಳಗಾದಾಗಲೇ, ಆಕೆಯ ಕನಸಿನ ಲೊಕಕ್ಕೆ ಸೂಚಿಯ ಮೊನೆ ತಾಗಿದ್ದು ಗೊತ್ತಾಗೋದು. ವಿಚಿತ್ರವೆಂದರೆ ಪ್ರತಿ ಗಂಡಸೂ ತನ್ನವಳ ಎದುರು ಸಾಚಾ ಮತ್ತು ಹೀರೋ ಆಗೇ ಇರಬಯಸುತ್ತಾನೆ ಎನ್ನುವುದು ಆಕೆಗೆ ಗೊತ್ತಾಗುತ್ತಿದ್ದರೂ ಅದನ್ನಾಕೆ ನಂಬಿ ಬದುಕು ಕಟ್ಟಲು ಎದ್ದು ನಿಂತಿರುತ್ತಾಳೆ.
ಶಾಂತಿ ಇದರಲ್ಲಿ ಮೊದಲಲ್ಲ ಮತ್ತು ಕೊನೆಯೂ ಅಲ್ಲ. ನನ್ನ ಕಥಾನಕದ ಸಾವಿರಾರು ಕೊವೆಗಳಲ್ಲಿ ತಮ್ಮ ಬಿಸಿಯುಸಿರು ಬಿಟ್ಟು ನನ್ನ ಹೆಗಲಿಗೆ ಕತೆಯನ್ನೆಲ್ಲಾ ದಾಟಿಸಿ ನಿರುಮ್ಮಳ್ಳವಾಗಿ ಎದ್ದು ಹೋದ ತಾಯಂದಿರಿದ್ದಾರೆ, ಸಹೋದರಿಯರಿದ್ದಾರೆ, ಪುಟ್ಟ ಪುಟ್ಟ ಅಮ್ಮಂದಿರಿದ್ದಾರೆ, ಸಾಂಗತ್ಯವೇ ಇಲ್ಲದೆ ಮಕ್ಕಳು ಹಡೆದ ನತದೃಷ್ಟೆಯರಿದ್ದಾರೆ, ಒಪ್ಪತ್ತಿನ ಊಟಕ್ಕಾಗಿ ದೈಹಿಕವಾಗಿ ಬೆತ್ತಲಾಗಿ ನಿಂತು ಬಿಟ್ಟ ಜಿವಚ್ಛವಗಳಿದ್ದಾರೆ, ಭಾವನೆಗಳ ಬಿಕರಿಗಿಟ್ಟು ಹಲ್ಕಿರಿದು ನಿಲ್ಲುತ್ತಿರುವ ದೈನೆಸಿ ಚಿಕ್ಕಮ್ಮಂದಿರಿದ್ದಾರೆ, ಹೆಂಗೋ ಗಂಡ ಅಂತೊಬ್ಬನಿರಲಿ ಎಂದು ಗೊತ್ತಿದ್ದೂ ಹಳ್ಳಕ್ಕೆ ಬಿದ್ದು ಕಾಲಿಗೆ ಕಲ್ಲು ಕಟ್ಟಿಕೊಂಡ ಹೆಂಗಸರಿದ್ದಾರೆ. ಹೆಣ್ಣಿನ ಸಾಕಿದ್ದೇ ಗಂಡಸುತನ ಎಂದುಕೊಂಡ ಪುಂಗವರಿದ್ದಾರೆ ಅದಕ್ಕೂ ಮಿಗಿಲಾಗಿ ತನಗೆ ಸಂಬಳ ಎಷ್ಟು ಏನು ಮಾಡುತ್ತಿದ್ದೇನೆ ಎನ್ನುವುದನ್ನೂ ತಿಳಿಪಡಿಸದ ಕುರಿಯಂತೆ ಹೆಂಡತಿಯನ್ನು ಸಾಕುತ್ತಿರುವವರಿದ್ದಾರೆ.
ಇವೆಲ್ಲದರ ಮಧ್ಯೆ ಬದುಕನ್ನು ನೇರ್ಪುಗೊಳಿಸುವ ಆಕೆಯ ಬಿಸಿಯುಸಿರು, ಹೇಳಿಕೊಂಡು ಹಗುರವಾದೇನಾ ಎನ್ನುವ ಹೃದಯದ ಪಿಸುಮಾತಿಗೆ ದನಿಯಾಗುವ ಮೂಲಕ ಕೊಂಚವಾದರೂ ಸಾಂತ್ವನ ನೀಡಿದ್ದೇ ಆದರೆ ಅಷ್ಟರ ಮಟ್ಟಿಗೆ ನಾನು ಧನ್ಯ. ಅಂತಹ ಹಲವು ಹರವುಗಳ ದನಿಗಳ ಭಾವಜಾಲ ನಿಮ್ಮೆದುರಿಗೆ ಇನ್ನು ಮೇಲೆ ಪ್ರತಿವಾರ
ಪಿಸುಮಾತಿನ ಪಾರಿಜಾತ...