ಅವಳೊಂದು ಜೀವೋನ್ಮಾದ... ಅದರೆ ಅವನು...?
(ರಾತ್ರಿ ಹನ್ನೊಂದಕ್ಕೆ ಮಂಚಕ್ಕೆ ತಲೆಯಿಡುತ್ತಿದ್ದರೆ ಬೇಕಿದೆಯೋ ಬೇಡವೋ ವಿಚಾರಿಸಿಕೊಳ್ಳದೇ ಅವನೊಂದಿಗೆ ದೇಹ ಉಜ್ಜುವ ಪ್ರಕ್ರಿಯೆಯಲ್ಲಿ, ಮನಸ್ಸು ಎಲ್ಲಿ ಯಾವ ಪಾತ್ರೆಯ ಕರೆಯ ಜೊತೆ ತೊಳೆದು ಸರಿದು ಹೋಗಿರುತ್ತದೋ ಗೊತ್ತಾಗುವುದಾದರೂ ಹೇಗೆ..? )
" ನಾವು ನಾಜೂಕು ಇದ್ರೂ ಅತೀ ಹೆಚ್ಚು ಕೆಲ್ಸ ನಡೆಯೋದೇ ನಮ್ಮಿಂದ..." ಅವಳ ಮಾತಿಗೆ ತತಕ್ಷಣಕ್ಕೆ ಹೂಂ ಅಥವಾ ಉಹೂಂ ಎನ್ನಲು ನನ್ನಲ್ಲಿ ಯಾವ ಕಾರಣಗಳೂ ಇರಲಿಲ್ಲ. ಕಾರಣ ದೈತ್ಯ ಕೆಲಸಗಾರ ಅಥವಾ ಅವನದ್ದು ಭಾರಿ ವರ್ಕು ಅಂತೆಲ್ಲಾ ಏನೇ ವಿಶೇಷಣಗಳಿಟ್ಟುಕೊಂಡು, ಗಂಡಸಿನ ವರ್ಕಾಲಿಕ್ ನೇಚರ್ ಅಂತೆಲ್ಲಾ ಮಾತಾಡುತ್ತಿದ್ದರೂ ಒಂದೇ ದಿನ ಮನೆಲಿ ಬಿಟ್ಟುನೋಡಿ. ಸುಮ್ಮನೆ ಇವತ್ತೊಂದಿನ ಮನೆ ಸುಧಾರಿಸಿ ಅಂತಾ ಪೂರ್ತಿ ಮನೆನಾ ಕೈ ಗಿಟ್ಟು ಹೊರಟು ಬಿಡಿ.
ಅವನು ಅರ್ಧ ದಿನವೂ ತಡೆಯಲಾರ,
ಉಹೂಂ ..ತೋಪೆದ್ದು ಹೋಗುತ್ತಾನೆ.
ಯಾವಾಗ ಮತ್ತೆ ಆಫಿûೀಸಿಗೆ ಸೇರಿಯೇನು ಎಂದು ಗೊಣಗಾಟ ಬಾಯಿಂದಾಚೆಗೆ ಬಾರದಿದ್ದರೂ ಮರುದಿನ ಕಚೇರಿ ಸಮಯವೋ ಅಥವಾ ಮನೆಯಿಂದಾಚೆಗೆ ಹೋಗುವುದಕ್ಕೋ ಆತ ಕಾಯುತ್ತಲೇ ಇರುತ್ತಾನೆನ್ನುವುದು ಸುಳ್ಳಲ್ಲ. ಕಾರಣ ದೊಡ್ಡ ದೊಡ್ಡ ಕೆಲಸವನ್ನು ಸಲೀಸಾಗಿ ಎಂಥವನೂ ನಿಭಾಯಿಸಿ ಬಿಡುತ್ತಾನೆ. ಆ ಕೆಲಸಕ್ಕೆ ಬೇಕಾದಷ್ಟು ಸಹನೆ ಮತ್ತು ಕಾರ್ಯವಾಹಿ ದಕ್ಷತೆ ಮೈಗೂಡಿಸಿಕೊಂಡು ಮಾನಸಿಕವಾಗಿ ಒಂದು ಸಿದ್ಧತೆ ಎಂದಿರುತ್ತದೆ. ಹಾಗಾಗಿ ನಾಳೆ ಬೆಳಿಗ್ಗೆಯಿಂದಲೆ ಇದಿಷ್ಟು ಕೆಲಸ ಎಂದು ಲೆಕ್ಕ ಹಾಕಿಕೊಂಡವನನ್ನು ನೋಡಿ. ಅಷ್ಟು ಮಾತ್ರಕ್ಕೆ ಅವನಿಗೆ ಸುಸ್ತು ಅಥವಾ ಸೋಮಾರಿತನ ಎಂಬುವುದಿರುವುದಿಲ್ಲ.
ಸಮಯಕ್ಕೆ ಸರಿಯಾಗಿ, ಅಗತ್ಯಕ್ಕೆ ತಕ್ಕಂತೆ ತನ್ನ ಕೈಲಾದಷ್ಟು ದಕ್ಷತೆಯಲ್ಲಿ ಆ ಕೆಲಸ ಮಾಡಿ ಮುಗಿಸಿರುತ್ತಾನೆ ಅಥವಾ ತನ್ನ ಕೆಳಗಿರುವವರಿಂದ ಮಾಡಿಸುತ್ತಾನೆ ಒಟ್ಟಾರೆ ಕಮೀಟ್‍ಮೆಂಟು ಪೂರ್ತಿಯಾಗುತ್ತದೆ. ಲೆಕ್ಕಾಚಾರದ ಕೆಲಸವನ್ನವನು ಕಳ್ಳು ಬಿದ್ದು ಹದಗೆಡಿಸದೇ ಹೋದರೂ ಮನಸ್ಸಿರದಿದ್ದರೂ ಮುಗಿಸುವಲ್ಲಂತೂ ಮೋಸವಾಗುವುದಿಲ್ಲ.
ಆದರೆ ಹಾಗೊಂದು ಹುದ್ದೆದಾರಿಕೆ ಕೊಡದೆ, ದೊಡ್ಡ ಕೆಲಸವನ್ನೇನೂ ಹೇಳದೆ ಸುಮ್ಮನೆ ಮನೆಯಲ್ಲಿ ಕುಳ್ಳಿರಿಸಿ, ಅತೀ ಬುದ್ಧಿವಂತಿಕೆ, ಅಪಾರ ತಾಕತ್ತು ಇದಾವುದನ್ನೂ ಬೇಡದ ಮನೆಯ ಪುಟಗೋಸಿ(?) ಕೆಲಸಕ್ಕೆ ಕುಳ್ಳಿರಿಸಿ. ಅರ್ಧ ಗಂಟೆಯಲ್ಲಿ ಅವನ ಸಹನೆ ಸತ್ತು ಹೋಗಿರುತ್ತದೆ. ಮೊದಲರ್ಧದಲ್ಲೇ ನಶಿಸುವ ದಕ್ಷತೆ ಇನ್ನುಳಿದದ್ದಕ್ಕಂತೂ ಅಂತೂ ಮುಗಿಸುವ ಇರಾದೆಯಲ್ಲಿ ಯಾಂತ್ರಿಕವಾಗಿ ನಡೆಯಲಾರಂಭಿಸಿರುತ್ತದೆ.
ಕಾರಣ ಅವನ ಲೆಕ್ಕದಲ್ಲಿ ಇಂತಹದ್ದೆಲ್ಲ ಮನೆಗೆಲಸ ಎಂದು ಏನು ಪಟ್ಟಿ ಮಾಡಬಹುದೋ ಅದನ್ನೆಲ್ಲಾ ಅವನಲ್ಲ ಅವನ ಹೆಂಡತಿ ಅಥವಾ ಅನುಕೂಲವಿದ್ದರೆ ಮನೆಗೆಲಸದವಳು ಮಾಡಬೇಕಾದ ಬಾಬತ್ತು. ಅಲ್ಲಿಗೆ ಇಂಡೈರಕ್ಟಲಿ ಯಾರು, ಏನು ಎಂದು ನೀವು ಊಹಿಸಿಕೊಳ್ಳಿ. ಅಲ್ಲಿಗೆ ಅವನಿಗೆ ಕೆಲಸ ಮಾಡಲು ಬರುವುದಿಲ್ಲ ಎಂದಲ್ಲ.
ಆತ ಚೆಂದಗೆ ಅಡಿಗೆ ಮಾಡಬಲ್ಲ ಅದರೆ ದಿನವೂ ಅಲ್ಲ. ನೀಟಾಗಿ ಐರನ್ ಮಾಡಬಲ್ಲ ಅದರೆ ಪ್ರತಿ ನಿತ್ಯ ಅಲ್ಲ. ಗೀಡಕ್ಕೆ ನೀರು ಹಾಕಬಲ್ಲ ಅವನಿಗೆ ಪುರಸೊತ್ತಾದರೆ ಮಾತ್ರ, ಮೆಶಿನ್ ಹಾಕಬಲ್ಲ ಟಿ.ವಿ. ಯಲ್ಲಿ ಕಿತ್ತು ಹೋದ ಚಿತ್ರ ಬರುತ್ತಿದ್ದರೆ ಅಥವಾ ಐ.ಪಿ.ಎಲ್. ಇಲ್ಲದಿದ್ದಾಗ ಮಾತ್ರ. ಕೊನೆಗೆ ಕಾಯಿಪಲ್ಯೆಯನ್ನೂ ಹೆಚ್ಚಿ ಇಷ್ಟಿಷ್ಟೆ ನೀಟಾಗಿ ತುರಿದು ಕೊಡಬಲ್ಲ ಯಾವಾಗಲೂ ಅಲ್ಲ ಆ ಹೊತ್ತಿಗೆ ಹೆಂಡತಿಯ ಸಾಮೀಪ್ಯದಲ್ಲಿರಲು ಮನ ಬಯಸುತ್ತಿದ್ದರೆ ಮಾತ್ರ. ಹಾಗಾಗಿ ಯಾವೆಲ್ಲಾ ಮನೆಯ ಕಂಪಲ್ಸರಿ ಎನ್ನುವ ಕೆಲಸಗಳಿವೆಯೋ ಅದರಲ್ಲೆಲ್ಲಾ ಅವನಿಗೇ ಗೊತ್ತಿಲ್ಲದೆ ರಿಸರ್ವೇಶನ್ನು ಹುಟ್ಟಿಬಿಟ್ಟಿರುತ್ತದೆ. ಬೇಕಿದ್ದರೆ ಅದನ್ನು ಮನಸ್ಸಿಗೊಲ್ಲದ ಕೆಲಸ ಎನ್ನಿ.
ಅದೇ ಆಕೆಯನ್ನು ನೋಡಿ. ಬೇಕಿದೆಯೋ ಇಲ್ಲವೋ ದಿನವೂ ಎಲ್ಲಾ ಕೆಲಸಗಳನ್ನು ಮಾಡಿಕೊಂಡೆ ದಿನ ಮುಂದೆ ಸರಿಯಲು ಬಿಡುತ್ತಾಳೆಯೇ ವಿನ: ಕೆಲಸ ಬಾಕಿ ಇಟ್ಟುಕೊಂಡು ಆವತ್ತಿಗೆ ಕೈ ಜಾಡಿಸುವ ಜಾಯಮಾನವೇ ಅಲ್ಲ. ಬೆಳಿಗೆದ್ದು ಹಾಲಿಗಿಟ್ಟು, ಕಾಫಿ ಕಾಯಿಸಿ, ಮಕ್ಕಳ ಬೆನ್ನಿಗೆ ಗುಮ್ಮುತ್ತಾ ಅಡುಗೆ ಮನೆಯಿಂದಲೇ ಕೂಗುತ್ತಾ, ಅಗೀಗ ಗ್ಯಾಸ್ ಮೇಲಿಟ್ಟ ಪದಾರ್ಥ ಏನಾಯಿತು ಗಮನಿಸುತ್ತಾ, ತನ್ನ ಡಬ್ಬಿ, ಮಕ್ಕಳ ಡಬ್ಬಿ ಅದೂ ಹಿಂದಿನ ದಿನವೇ ತೊಳೆದಿಟ್ಟುಕೊಂಡಿದ್ದರೆ ಮಾತ್ರ ಬಚಾವು. ಇಲ್ಲವಾದರೆ ಆಗಲೇ ಪಕ್ಕದ ಸಿಂಕನಲ್ಲೇ ಅದನ್ನು ಕೈಯ್ಯಾಡಿಸಿ, ಗಲಬರಿಸುತ್ತಾ, ಓಡಾಡುತ್ತಲೇ ಮಕ್ಕಳಿಗೆ ಬೀಸಿನೀರು ತೋಡಿ ಬಕೀಟಿಗೆ ಬಿಟ್ಟುಕೊಟ್ಟು, ಅರೆಬರೆ ಕೂದಲು ಕಿತ್ತುಕೊಳ್ಳುವ ಹುಡುಗಿಗೆ ಟೇಫು ಬಿಗಿದು, ಹುಡುಗನಿಗೆ ಬೆಲ್ಟು ಏರಿಸಿ, ಆಗಷ್ಟೆ ಏಳುವ ಅವನ ಕೈಗೆ ಕಾಫಿ ಕೊಡುತ್ತಾ, ಕೆಲವೊಮ್ಮೆ ಎದ್ದೇ ಇರದ ಅವನನ್ನು ಎಬ್ಬಿಸಿ ಮಕ್ಕಳನ್ನು ಬಿಟ್ಟು ಬರಲು ದಬ್ಬಿ, ಅದಕ್ಕವನು ಏನೋ ಮಂತ್ರ ಗೊಣಗುತ್ತಿದ್ದರೆ ಅದಕ್ಕೆ ಲಕ್ಷ್ಯ ಕೊಡದೆ, ಆಗೀನ ಮಟ್ಟಿಗೆ ತಿಂಡಿ ಮಾಡಿ, ಹೊರಗೆ ಸೋಫದ ಮೇಲೆ ನೇತಾಡುತ್ತಿದ್ದ ಟವಲ್ ಎತ್ತಿಟ್ಟು, ಅರಬರೆ ಬಾಯ್ದೆರಿದಿದ್ದ ಬಾಸ್ಕೇಟ್ ಸರಿ ಪಡಿಸಿ. ಅಲ್ಲಲ್ಲೆ ಬಿದ್ದಿದ್ದ ಪೇಪರ್ ಜಾಗಕ್ಕೆ ತಳ್ಳಿ, ಲಾಡಿ ಬಿಟ್ಟುಕೊಂಡು ಬೆಡ್‍ರೂಮಿನಲ್ಲೆಲ್ಲೋ ನೇತಾಡುವ ಅವನ ಬರ್ಮುಡಾವನ್ನು ಬೇಕೆಂದೇ ಸಶಬ್ದವಾಗಿ ಎರಡೇ ಬೆರಳಲ್ಲಿ ಎತ್ತಿ ನೇತಾಡಿಸುತ್ತಾ ತಪಕ್ಕನೆ ಬಕೀಟಿನಲ್ಲಿ ಬಿಟ್ಟು, ಕೆದರಿದ್ದ ಬೆಡ್ ಸ್ಪ್ರೆಡ್ ಸರಿಪಡಿಸಿ, ಐರನ್ನಿಗೆ ಸ್ವಿಚ್ಚು ಒತ್ತಿ, ಅಷ್ಟೊತ್ತಿಗೆ ಅವನ ಸ್ನಾನ ಆಗಿದ್ದರೆ ಟೇಬಲ್ ಮೇಲೆ ತಿಂಡಿ ಜೋಡಿಸಿ ಅದರ ಮಧ್ಯೆ ತನ್ನ ಸ್ನಾನ, ಡ್ರೆಸ್ಸು, ನಿನ್ನೆನೆ ನೆನಪಿರಿಸಿಕೊಂಡಿದ್ದ ಕೆಲಸ ಜೊತೆಗೆ ಸಂಜೆ ಬರುವಾಗ ತರಲೇಬೇಕಾದ ಸಾಮಾನಿನ ಲಿಸ್ಟು ಇವನ್ನೆಲ್ಲಾ ಸರಿಪಡಿಸಿಕೊಂಡು ಚಾರ್ಜಿಗೆ ಹಾಕಿದ್ದ ಮೊಬೈಲು ಎತ್ತಿಕೊಂಡು, ಚಪ್ಪಲಿ ಸಿಕ್ಕಿಸಿಕೊಳ್ಳುತ್ತಾ ಬಾಯಲ್ಲೇ ಹಿಡಿದಿದ್ದ ಕ್ಲಿಪ್ಪನ್ನು ತಲೆಗೆ ತೂರಿಸಿ, ರಾಮಾ ರಾಮಾ ಏನಿದು..? ಅವಳೇನು ಹೆಣ್ಣಾ ಗೂಡ್ಸ್ ಗಾಡಿನಾ..?
ಅದೇ ಅವನ ಲಿಸ್ಟ್ ನೋಡಿ, ಬೆಳಿಗೆದ್ದಾ, ಕಾಪಿ,ಶೇವಿಂಗ್,ತಿಂಡಿ, ಮಟ್ಟಸವಾಗಿ ಐರನ್ ಮಾಡಿದ್ದ ಡ್ರೆಸ್ಸು ಏರಿಸಿಕೊಂಡು ಜಿಪ್ ಎಳೆದುಕೊಳ್ಳುವಾಗ ಕರ್ಚೀಫು ಕೊಡಲು ಹೆಂಡತಿಯೇ ಬೇಕು. ಅಷ್ಟಾಗಿ ಕೈಗೆ ಪ್ಲೆಟು ಎತ್ತಿಕೊಂಡು ತಿನ್ನುತ್ತಾ ಅದನ್ನೂ ಸಿಂಕಿಗೂ ಇಡದೆ, ಕೂತಲ್ಲೇ ಟೀಗೆ ಕೂಗು ಹಾಕುತ್ತಾ, ಕೈಯೊರೆಸಿಕೊಂಡು ಎದ್ದು ಬರುವ ಅವನಿಗೆ ದಿನವಿಡೀ ಬಿಜಿ ಎನ್ನುವ ಲೆಕ್ಕಾಚಾರದಲ್ಲಿ "ಹ್ಯಾಗೆ" ಎಂದು ಕೂತುಕೊಂಡು ಕೇಳಬೇಕೆನ್ನಿಸುತ್ತದೆ ನನಗೆ. ಕಾರಣ ಆಫೀಸಿನ ಕೆಲಸ ಬಿಡಿ ಆಕೆ ಅದನ್ನೂ ಮಾಡುತ್ತ ಮತ್ತೆ ಸಂಜೆ ಬಂದು ಮತ್ತೆ ರೂಟಿನ್ ಶುರು ಮಾಡಿಕೊಳ್ಳುತ್ತಾಳಲ್ಲ ಆಗಲೂ ಒಂದಿಷ್ಟಾದರೂ ಕೆಲಸ ನಾಳೆಗಿರಲಿ ಎಂದಾಕೆ ಎತ್ತಿಟ್ಟಿದ್ದೇ ಇಲ್ಲ. ಅಕ್ಕಿ ರುಬ್ಬಿ ಇಡದಿದ್ದರೆ ಹುಳಿ ಬಾರದೆ ಹೇಗೆ ದೋಸೆಯಾಗುವುದಿಲ್ಲವೋ ಹಾಗೆ ಮರುದಿನಕ್ಕೆ ಬೇರೆಯದೇ ಕೆಲಸದ ಲಿಸ್ಟು ಆಕೆಯ ತಲೆಯಲ್ಲಿ ಕಾಯುತ್ತಲೆ ಇರುತ್ತದೆ.
ಇದೆಲ್ಲಾ ಮುಗಿದು ರಾತ್ರಿ ಹನ್ನೊಂದಕ್ಕೆ ಮಂಚಕ್ಕೆ ತಲೆಯಿಡುತ್ತಿದ್ದರೆ ಬೇಕಿದೆಯೋ ಬೇಡವೋ ವಿಚಾರಿಸಿಕೊಳ್ಳದೇ ಅವನೊಂದಿಗೆ ದೇಹ ಉಜ್ಜುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಾಗ, ಮನಸ್ಸು ಎಲ್ಲಿ ಯಾವ ಪಾತ್ರೆಯ ಕರೆಯ ಜೊತೆ ತೊಳೆದು ಸರಿದು ಹೋಗಿರುತ್ತದೋ ಗೊತ್ತಾಗುವುದಾದರೂ ಹೇಗೆ..? ಆ ಹೊತ್ತಿಗಿನ ಮಾನಸಿಕ ಬಣ್ಣಗಳನ್ನು ಗುರುತಿಸಲು ಕತ್ತಲೆಗೆ ಶಕ್ತಿ ಇದ್ದಿದ್ದರೆ ಅಥವಾ ಆ ರಾತ್ರಿಗಳಿಗೆ ಕಣ್ಣಿದ್ದಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತೇನೋ. ಆದರೆ ಅದಾವುದೂ ಉಹೂಂ ಆಗುವುದೇ ಇಲ್ಲ. ಎಲ್ಲಾ ದುಮ್ಮಾನಗಳು ಕಾವಳದಲ್ಲೇ ಕಳೆದುಹೋಗುತ್ತವೆ. ಬೇರೆ ದಾರಿ ಮತ್ತು ಅವಕಾಶ ಎರಡೂ ಇರುವುದೇ ಇಲ್ಲವಲ್ಲ.
ಪ್ರತಿ ನಿತ್ಯದಂತೆ ಬದುಕಿನುದ್ದಕ್ಕೂ ಹೀಗೆ ಮಾಡಿಕೊಂಡೆ ಬದುಕು ಮಕ್ಕಳು ಮನೆ ನಡೆಸುವ ಆಕೆಯ ಪರಿಚಾರಿಕೆಗೆ ಯಾವ ಐ.ಎಸ್.ಓ. ಸ್ಟಾಂಡರ್ಡು ಸರ್ಟಿಫಿಕೇಟು ಕೊಡಬಲ್ಲದು..? ಇದ್ದಿದ್ದೇ ಆಗಿದ್ದರೆ ಯಾವ ಥೌಸೆಂಡೂ ಸಾಲುತ್ತಿರಲಿಲ್ಲ. ಅದರೆ ಅದಿಷ್ಟೆಲಾ ಜಗತ್ತಿಗೆ ಬೇಕಿಲ್ಲ ಅವನಿಗೆ ಮಾತ್ರ ಗೊತ್ತಾದರೆ ಸಾಕು ಎಂದಾಕೆ ಮನದಲ್ಲೇ ಮುದಗೊಳ್ಳುತ್ತಿದ್ದರೆ, ಎಲ್ಲಾ ಆದ ನಂತರವೂ, "ಹೆಂಗಸರಿಗೆ ಇಂಟರೆಸ್ಟೇ ಇಲ್ಲ ಮಾರಾಯ.." ಎಂದು ಡಾಕ್ಟರೇಟ್ ಪ್ರಧಾನ ಮಾಡುತ್ತಿದ್ದರೆ ಬದುಕು ಒರಳು ಕಲ್ಲಲ್ಲಿ ಗರಗರ ಆಡಿದಂತಲ್ಲದೆ ಜೋಕಾಲಿಯಾದೀತಾದರೂ ಹೇಗೆ..? ಉತ್ತರಿಸಬೇಕಾದ ಆಕೆಗೆ ಬೇರೆ ಆಪ್ಶನ್ನು ಇಲ್ಲ. ಇದ್ದ ಆವನಿಗೆ ಅದು ಬೇಕಿಲ್ಲ. ಮನಸ್ಸು ಮಾತ್ರ ಪಿಸುನುಡಿಯುತ್ತಲೇ ಇರುತ್ತದೆ.. ಇಷ್ಟೆನಾ ಬದುಕು..? ಗೊತ್ತಿಲ್ಲ. ಆಕೆಯ ಕಣ್ಣಿಗೆ ದೃಷ್ಠಿ ಬೇರೆಸಲಾಗದ ನಾನು ಸುಮ್ಮನೆ ಶೂ ಲೇಸು ಬಿಗಿವ ನೆಪದಲ್ಲಿ ಕೆಳಗೆ ನೋಡುತ್ತೇನೆ. ಅಷ್ಟಕ್ಕೂ ತಲೆ ಎತ್ತಲು ನನಗಾದರೂ ಯಾವ ಸಮಜಾಯಿಸಿ ಬಾಕಿ ಉಳಿದಿರುತ್ತೆ ಅಂಥಾ ಹೊತ್ತಿನಲ್ಲಿ.
No comments:
Post a Comment