Saturday, December 26, 2015

ಕಾವಳದ ರಾತ್ರಿಗಳಲ್ಲಿ ಆಕೆ ಜಗತ್ತು ಬೆಳಗುತ್ತಿದ್ದಳು...

ಗಂಡಸರಿಗೆ ಬೇಕಿರೋದಾದರೂ ಏನು..? ಮನಸ್ಸು ಅನ್ನೋದೆ ಇರೋದಿಲ್ವಾ..? ಎಂದು ತೀರಾ ಮರ್ಮಾಘಾತವಾಗುವಂತಹ ಮತ್ತು ಸುಲಭದಲ್ಲಿ ಯಾರೊಬ್ಬರೂ ಉತ್ತರಿಸಲು ಅಶಕ್ಯವಾದ ಪ್ರಶ್ನೆಯನ್ನು ಆಕೆ ಕೇಳಿಬಿಟ್ಟಿದ್ದಳಲ್ಲ. ಅದಕ್ಕುತ್ತರಿಸಲು ನನ್ನಲ್ಲಿ ಪದಗಳಿರಲಿಲ್ಲ. ಕಾರಣ ಏನು ಬೇಕೆನ್ನುವುದು ಅಹಂನ ಉತ್ಪತ್ತಿಯಾಗಿಬಿಟ್ಟಿದ್ದರೆ ಅದಕ್ಕೊಂದು ಆಯಾಮ ಎನ್ನುವುದೇ ಇರುವುದಿಲ್ಲ.
ಚಾಳಿನ ಬೆಚ್ಚಗಿನ ಗೂಡಿನಿಂದ ನಾನು ಹೊರಬೀಳುವ ಕಾಲಕ್ಕೆ ಆಯಿ ಮತ್ತು ಶೋಭಾ ಅಪ್ಪಟ ನನ್ನದೇ ಮನೆಯವರಂತಾಗಿ ಹೋಗಿದ್ದರಲ್ಲ. ತೀರ ಅಳು ಕಚ್ಚಿ ಅವರನ್ನು ತೊರೆದು ಪತ್ರ ಬರೆಯುವುದಾಗಿಯೂ, ಯಾವಾಗಲೂ ನೋಡಲು ಬರುವುದಾಗಿಯೂ ಆಶ್ವಾಸನೆಯಿತ್ತು ಊರು ಬಿಟ್ಟಿದ್ದೆ. ಆದರೆ ಅವೆರಡೂ ಪೂರೈಸುವುದಾಗಿರಲಿಲ್ಲ. ಎದುರಿಗಿಲ್ಲದ್ದು ಮನಸ್ಸಿಗೂ ಇಲ್ಲ ಎನ್ನುವಂತೆ ಕ್ರಮೇಣ ಆಯಿ ಮತ್ತು ಶೋಭಾ ಮಸ್ತಿಷ್ಕದ ಎಡಕ್ಕೆ ಸರಿದಿದ್ದರು.
ಅತ್ತ ಚೆಂದದ ಹುಡುಗಿ ಶೋಭಾ ಹತ್ತಿರದ ಖಾಸಗಿ ದವಾಖಾನೆ, ಅಲ್ಲಿಂದ ದೊಡ್ಡ ದವಾಖಾನೆ ಹೀಗೆ ಮೂರ್ನಾಲ್ಕು ವರ್ಷದಲ್ಲಿ ಜವಾಬ್ದಾರಿಯುತ ನರ್ಸ್ ಆಗಿ ಬೆಳೆದು ನಿಲ್ಲುವ ಹೊತ್ತಿಗೆ, ತಮ್ಮನೂ ಕೆಲಸಕ್ಕೆ ಸೇರುವಷ್ಟು ಓದಿ ಅಮ್ಮನೊಟ್ಟಿಗೆ ನಿಂತಿದ್ದಾನೆ. ಅದೇ ಹೊತ್ತಿಗೆ ಸಂಬಂಧಿಯೊಬ್ಬರ ಸಲಹೆ ಮೇರೆಗೆ ಸುಲಭಕ್ಕೆ ತಾವೇ ಕೈಯಿಂದ ದುಡ್ಡುದುಗ್ಗಾಣಿ ಹಾಕಿ ಮದುವೆ ಮಾಡಿಕೊಳ್ಳುವ ಸುಭಗ ರೂಪಿ ಅಳಿಯನೊಬ್ಬನ ಸಂಬಂಧ ಒದಗಿ ಬಂದಿದೆ. ಮನೆ ಜನ ಎಲ್ಲಾ ಹೋಗಿ ನೋಡಿ ಬಂದಿದ್ದಾರೆ. ಕುಟುಂಬ ಮತ್ತು ಚೆಂದದ ಅಳಿಯ ಆಯಿಯ ಮನಕ್ಕೆ ಒಗ್ಗುತ್ತಲೂ ಇದ್ದುದರಲ್ಲೇ ಚೆಂದಗೆ ಮದುವೆ ಮಾಡಿಕೊಟ್ಟಿದ್ದಾರೆ.
ಅಲ್ಲಿಯವರೆಗೆ ಎಲ್ಲವೂ ಚೆನ್ನಾಗೇ ಇತ್ತು. ಶೋಭಾ ತನ್ನ ನೌಕರಿ, ಹೊಸ ಗಂಡ, ಅದೂ ಮನೆಯಲ್ಲಿ ಏಕಾಂತ ಎಂದು ಚೆನ್ನಾಗಿಯೇ ಇದ್ದಳು ಕೂಡಾ. ಮೊದಲ ವರ್ಷ ಕಳೆಯುವಷ್ಟರಲ್ಲಿ ಹೆಣ್ಣು ಮಗುವಿನ ತಾಯಿಯೂ ಆಗಿದ್ದಾಳೆ. ಮಗುವಿಗೆ ಮೂರ್ನಾಲ್ಕು ವರ್ಷ ಆಗುವ ಹೊತ್ತಿಗೆ ಗಂಡನ ಒಂದೊಂದೆ ರೂಪ ಈಚೆಗೆ ಬರತೊಡಗಿದೆ. ಅಸಲಿಗೆ ಅವನಿಗೆ ಕೆಲಸವೇ ಇರಲಿಲ್ಲ ಎನ್ನುವುದನ್ನು ಇಷ್ಟು ದಿನವೂ ವ್ಯವಸ್ಥಿತವಾಗಿ ಬಚ್ಚಿಡುತ್ತಿದ್ದನಲ್ಲದೆ ಅವಳ ದುಡ್ಡಿನಲ್ಲೇ ಜೀವನ ತೆಗೆಯತೊಡಗಿದ್ದ. ಯಾವಾಗ ಶೋಭಾ ಅದರ ಮೇಲೆ ಹಿಡಿತ ಸಾಧಿಸಿದಳೋ ಬದುಕು ಬದಲಾಗುತ್ತಾ, ಕುಡಿತ ಮನೆಗೆ ಬಂದುಬಿಟ್ಟಿತ್ತು. ಕೈ ಸಾಲ ಪಡೆದವರ ಹಾವಳಿ ವಿಪರೀತ ಆಗತೊಡಗಿತ್ತು. ಇವೆಲ್ಲದಕ್ಕಿಂತಲೂ ಅನಾಹುತಕಾರಿ ಎಂದರೆ ಆಕೆಯ ಎಲ್ಲಾ ಒಡವೆಗಳನ್ನೂ ಮನೆಯಿಂದ ಗೊತ್ತಾಗದಂತೆ ಸಾಗಿಸಿ ಮಾರಿಬಿಟ್ಟಿದ್ದ. ಅವನ ವರ್ಷಾವಧಿ ಖರ್ಚು ಕಳೆದದ್ದೇ ಹಾಗೆ. ಇಂಥದ್ದೊಂದು ವಿಪರೀತವನ್ನು ನಿರೀಕ್ಷಿಸಿರದ ಶೋಭಾ ಅಮ್ಮನಿಗೆ ತಿಳಿಸಿದ್ದಾಳೆ. ಅದಿನ್ನೂ ವಿಪರೀತಕ್ಕೆ ಹೋಯಿತು. ‘ಅತ್ತೆಯ ಎದುರು ಚಾಡಿ ಹೇಳುತ್ತಿಯೇನೆ’...’ ಎಂದು ನೇರ ಅವಳು ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಗಲಾಟೆ ಮಾಡಿಬಿಟ್ಟ. ತಲೆ ತಗ್ಗಿಸಿ ನಿಂತ ಹುಡುಗಿಯ ವರ್ತನೆ ಮತ್ತು ದಕ್ಷತೆಯ ಅರಿವಿದ್ದ ಅಧಿಕಾರಿ ಅವನಿಗೆ ಬುದ್ಧಿ ಹೇಳಿ ಕಳುಹಿಸಿದರೆ ಮನೆಗೆ ಬರುತ್ತಿದ್ದಂತೆ ‘ಅವನೊಂದಿಗೆ ದಿನಾಲೂ ಮಲಗುತ್ತೀಯಾ.. ಅದಕ್ಕೆ ನಿನ್ಗೆ ಸಪೋರ್ಟು ಮಾಡುತ್ತಾನೆ’ ಎಂದು ರಪರಪನೆ ಬಾರಿಸಿಬಿಟ್ಟಿದ್ದ. ಗಂಡಸರ ಕೊನೆಯ ಆರೋಪ ಮತ್ತು ಹೆಣ್ಣಿಗೆ ಮಾಡಬಹುದಾದ ತೇಜೋವಧೆಯ ಕೊನೆಯ ಸ್ಟೆಪ್ಪು ಅದು.
ಅಮ್ಮ ಸಂಧಾನಕ್ಕೆ ಮಾತ್ರವಲ್ಲ ಇನ್ಯಾವತ್ತೂ ಇತ್ತ ಕಡೆ ತಲೆಹಾಕಿಯೂ ಮಲಗಲಿಲ್ಲ. ಶೋಭಾ ದಿನವೂ ಬದುಕಿದ್ದೂ ಸಾಯತೊಡಗಿದಳು. ಅದಕ್ಕೆ ಉಪ್ಪು ಹಾಕುವಂತೆ ಅದ್ಯಾವುದೋ ಹೆಣ್ಣುಗಳೊಡನೆ ವಾರಗಟ್ಟಲೇ ಹೊರಗೆ ಇದ್ದು ಬರತೊಡಗಿಬಿಟ್ಟಿದ್ದ ಗಂಡ. ಈಗ ಮಾತ್ರ ತಿರುಗಿ ಬಿದ್ದಿದ್ದಳು ಶೋಭಾ. ಆದರೆ ಮಧ್ಯರಾತ್ರಿ ನಿದ್ರೆಯಲ್ಲಿದ್ದವಳ ಮೈಮೇಲೆ ಸಿಗರೇಟು ಸುಟ್ಟಾಗಲೇ ಅವನ ತೆಪ್ಪಗಿರುವಿಕೆಯ ಹಿಂದಿನ ಮರ್ಮ ಅರಿವಾಗಿತ್ತು. ಆಕೆ ತಿರುಗಿ ಬಿದ್ದಿದ್ದಕ್ಕೆ ರಾತ್ರಿಯಿಡಿ ಪೀಡಿಸಿ ಬೆಳಗಾಗುವಾಗ ಹೊರಟು ಹೋಗಿದ್ದ. ಅವಳ ಮೈಮೇಲೆ ಡಜನ್ನುಗಟ್ಟಲೇ ಕಲೆಗಳು ಉಳಿದಿದ್ದವು.
ಬರಲಿರುವ ರಾತ್ರಿಗಳ ಸಂಕಟದ ಕುರುಹಾಗಿ.
ಸಹೋದ್ಯೋಗಿಗಳು ಆಗೀಗ ಸಮಾಧಾನಿಸಿದರೂ ಪರಿಸ್ಥಿತಿ ದಿನದಿಂದ ದಿನಕ್ಕೆ ಕೈಮೀರಿ ಹಿಂಸೆಯಲ್ಲಿಯೇ ಕೊನೆಯಾಗುತ್ತಿತ್ತು. ಎರಡ್ಮೂರು ವರ್ಷ ಕಳೆಯುವಷ್ಟರಲ್ಲಿ ಶೋಭಾಳ ದೇಹದ ಮೇಲೆ ಎಲ್ಲಿ ಕಲೆ ಇಲ್ಲ ಎನ್ನುವುದನ್ನು ಹುಡುಕಬೇಕು ಎಂಬಂತಾಗಿ ಹೋಗಿತ್ತು. ಆಸ್ಪತ್ರೆಯ ಹುಡುಗಿಯರು ಯಾವ ಮುಲಾಜೂ ಇಟ್ಟುಕೊಳ್ಳದೇ ಒಂದಿನ ಅವಳ ಮನೆಗೆ ನುಗ್ಗಿ ಶೋಭಾಳನ್ನೂ ಅವಳ ಮಗಳನ್ನೂ ಈಚೆಗೆ ತಂದು ಸಾಕುವ ಕಾರ್ಯಕ್ಕೆ ಚಾಲನೆ ಕೊಟ್ಟು ಪುಣ್ಯಕಟ್ಟಿಕೊಂಡಿದ್ದರು. ಆವತ್ತೇ ಶೋಭಾ ಮುಖ್ಯ ನಿರ್ಧಾರ ಕೈಗೊಂಡು, ಕೂಡಲೇ ಒಂದು ಮನೆ ಮಾಡಿ ಆವತ್ತೆ ಸಂಜೆ ಅಮ್ಮನನ್ನೂ ಕರೆದುಕೊಂಡು ಬರಲು ಹೋಗಿದ್ದಾಳೆ.
ಅದಾಕೆಯ ಜೀವನದ ಇನ್ನೊಂದು ಶಾಕ್. ಸಾದಾ ಗೋಣಿಯಂತಹ ಹಾಸಿಗೆಯ ಮೇಲೆ ಆಯಿ ಹೊರಗಿನ ಜಗಲಿಯ ಮೇಲೆ ಅಪ್ಪಟ ಭಿಕ್ಷುಕಿಯೊಬ್ಬಳು ಬಿದ್ದಂತೆ ಮಲಗಿದ್ದಾಳೆ. ತಮ್ಮನ ಕುಟುಂಬ ಒಳಗೆ ಸೋಫಾದಲ್ಲಿ ಆಸೀನವಾಗಿ ಟಿ.ವಿ. ಸಂಭ್ರಮದಲ್ಲಿದೆ. ಇದ್ದ ರೋಷವೆಲ್ಲಾ ಆವತ್ತು ಕಕ್ಕಿದ್ದಳು ಶೋಭಾ. ದುರದೃಷ್ಟ ಎಂದರೆ ಅದೇ ಇರಬೇಕು. ಹುಟ್ಟಾ ಬಡತನದಲ್ಲೂ ಸರ್ವ ಅನುಭವಕ್ಕೀಡಾಗಿದ್ದ ಹುಡುಗ ಹೆಂಡತಿ ಬರುತ್ತಿದ್ದಂತೆ ಅವರಮ್ಮನನ್ನೂ ರಸ್ತೆಗಿಳಿಸಿದ್ದಾನೆ. ಭಗವಂತಾ.. ಆಯಿಯಾದರೋ ಮಗಳ ಸಂಕಷ್ಟ ಗೊತ್ತಿದ್ದುದರಿಂದ ಮತ್ಯಾಕೆ ಇನ್ನಷ್ಟು ಅವಳಿಗೆ ಕಿರಿಕಿರಿ ಕೊಡುವುದು ಎಂದು, ಆಚೆ ತಲೆಯೇ ಹಾಕದೆ ಕಟ್ಟೆಯ ಮೇಲೆಯೇ ಜೀವನ ನಡೆಸುತ್ತಿದ್ದಾಳೆ.
ಅವಳಿಗೆ ಮಾತಾಡಲು ಮತ್ತು ಕೇಳಲು ನನಗೂ ಏನೂ ಉಳಿದಿರಲಿಲ್ಲ. ನಿಶ್ಶಬ್ದದಲ್ಲಿ ಸುಮ್ಮನೆ ಆವಳ ಕೈ ಹಿಡಿದು ಕೂತುಬಿಟ್ಟಿದ್ದೆ. ನಡೀ ಆಯಿನ್ನ ನೋಡಬೇಕು ಎಂದೆನಾದರೂ ನನ್ನ ಸ್ವರದಲ್ಲೂ, ಆಕೆಯ ಚಲನೆಯಲ್ಲೂ ಜೀವವಿಲ್ಲದ್ದು ಇಬ್ಬರಿಗೂ ಗೊತ್ತಾಗುತ್ತಿತ್ತು.
ಎರಡು ರೂಮಿನ ಚಿಕ್ಕ ಮನೆಯೊಂದರಲ್ಲಿ ಮಗಳು ಅಮ್ಮನೊಂದಿಗೆ ಜೀವ ಸವೆಸುತ್ತಿರುವ ಶೋಭಾ ಮನೆ ಕೀಲಿ ತೆಗೆಯುತ್ತಿದ್ದುದು ಗಮನಿಸಿ ‘ಆಯಿ ಹೊರಕ್ಕೆ ಹೋಗಿದಾಳಾ?’ ಎಂದೆ. ಮಾತಾಡದೆ ರೂಮಿನೊಳಕ್ಕೆ ನಡೆದು ಮಚ್ಚರದಾಣಿ ಕಟ್ಟಿದ್ದ ಮಂಚದ ಪಕ್ಕ ಸುಮ್ಮನೆ ನಿಂತಳು. ತೀರ ತೆಳು ಜೀವವೊಂದು ಬದುಕಿದೆ ಎನ್ನುವಂತೆ ಉಸಿರಾಟಕ್ಕೆ ಮಾತ್ರ ದೇಹ ಸ್ಪಂದಿಸುತ್ತಿದೆ. ಯಾವುದೂ ಈ ಲೋಕದ ಗೊಡವೆ ಬೇಡ ಎನ್ನುವಂತೆ ಶಾಂತವಾಗಿ ಮಲಗಿದ್ದಾಳೆ. ಕಣ್ಣ ಮುಂದೆ ಒಲೆಯ ಎದುರಿಗೆ ಕೂತು ರೊಟ್ಟಿ ಬಡಿಯುತ್ತಿದ್ದ, ಬುಟ್ಟಿಗಟ್ಟಲೇ ಪೂರಿ ಕರಿಯುತ್ತಿದ್ದ, ಚೆಂದ ಚೆಂದದ ಉಂಡೆಗಳನ್ನು ಕಟ್ಟಿಡುತ್ತಾ ಪದೇಪದೆ ಉಲ್ಟಾ ಎಣಿಸುತ್ತಿದ್ದ, ಹೊರಗಿನ ಕಟ್ಟೆಯ ಮೇಲೆ ಮೊರದ ತುಂಬಾ ಜೋಳ ತುಂಬಿಕೊಂಡು ಗುಬ್ಬಿಗಳಿಗಿಷ್ಟಿಷ್ಟು ಎಸೆಯುತ್ತಾ, ಆರಿಸುತ್ತಾ ಕೂರುತ್ತಿದ್ದ ಆಯಿಯ ಚಿತ್ರಗಳು ಒಮ್ಮೆ ಸಾಲುಸಾಲಾಗಿ ಚಲಿಸಿದವು. ಈ ದೇಹಕ್ಕೂ ಆ ಚಿತ್ರಗಳಿಗೂ ಹೋಲಿಕೆಯೇ ಅಗುತ್ತಿಲ್ಲ.
‘ಆಯಿ ಆಯಿ’ ಎಂದು ಪರದೆ ಸರಿಸಿ ಮೂರ್ನಾಲ್ಕು ಬಾರಿ ಕರೆದೆ.. ಕಣ್ಣು ಪಕಪಕ ಆಡಿತು. ಆದರೆ ಮುಖಭಾವಗಳು ಬದಲಾಗಲಿಲ್ಲ. ಆಯಿ ಗುರುತಿಸುತ್ತಿಲ್ಲ. ಸುಮ್ಮನೆ ಮಂಜಾದ ಕಣ್ಣು ಮುಚ್ಚಿಕೊಂಡು ಪೇಲವವಾದ ಕೈಹಿಡಿದು ಕೂತಿದ್ದೆ. ಚಹದ ಕಪ್ಪು ಹಿಡಿದುಕೊಂಡು ಬಂದ
ಶೋಭಾಳ ಹಿಂದೆ ಎದ್ದು ಬಂದೆ.
‘ಇವತ್ತಿಗೂ ರಾತ್ರಿಯಾದರೆ ಮನಸ್ಸಿಗೆ ಅರಿವಾಗದ ಭಯ. ಮಲಗಿದರಂತೂ ಯಾವಾಗ ಏನಾಗುತ್ತದೋ ಹೇಳಲಾಗದ ಭೀತಿ ಆವರಿಸುತ್ತೆ. ಅದಕ್ಕೆ ಪ್ರತಿ ರಾತ್ರಿನೂ ಈ ಹಿಂಸೆಯಿಂದ ಹೊರಕ್ಕೂ ಬರಕ್ಕಾಗದೆ ವರ್ಷಾನುಗಟ್ಟಲೇ ಒದ್ದಾಡಿದೆ. ಅಷ್ಟರಲ್ಲಿ ಅಮ್ಮನಿಗೆ ಸ್ಟ್ರೋಕ್ ಆಯ್ತು. ನೋಡು ನೋಡುತ್ತಿದ್ದಂತೆ ಮಾತುಕತೆ ಕೊನೆಗೆ ಚಲನೆ ಎಲ್ಲಾ ನಿಂತುಹೋಗಿದೆ. ಎಷ್ಟು ದಿನಾನೋ ಗೊತ್ತಿಲ್ಲ. ರಾತ್ರಿ ಹೊತ್ತಲ್ಲಿ ಏನಾದರೂ ಆದರೂ ಮಗಳು ಇರ್ತಾಳೆ. ಹಗಲು ಇಬ್ಬರೂ ಹೊರಗೆ ಹೋದ್ರೆ ಏನೂ ಗೊತ್ತಾಗಲ್ಲ. ನನಗೂ ಹೆಂಗಿದ್ರೂ ರಾತ್ರಿ ಮಲಗೋದು ಅಂದರೆ ಜೀವ ಒದ್ದಾಡುತ್ತೆ. ಆ ನೆನಪು ಸಂಕಟ ಎರಡೂ ಬ್ಯಾಡ. ಅದಕ್ಕೇ ಏಳೆಂಟು ವರ್ಷಾತು ನೋಡು. ನಾನು ರಾತ್ರಿನೇ ಹೋಗ್ತಿದಿನಿ. ಒಂಥರಾ ಮನೆಗಿಂತ ಅಸ್ಪತ್ರೆನೆ ಸೇಫ್..’ ಎನ್ನುತ್ತಿದ್ದರೆ ಎದ್ದು ಒಳಕೋಣೆಯಲ್ಲಿದ್ದ ಆಯಿಯ ಮಂಚದ ಪಕ್ಕ ಸುಮ್ಮನೆ ನಿಂತು ಬಂದೆ. ಅದೆಷ್ಟೊ ವರ್ಷಗಳಾದವು ಆಕೆಯ ಮಾತುಗಳು ಆದರೂ ಮನದಿಂದಾಚೆಗೆ ಹೋಗಿಲ್ಲ. ಆಕೆ ಯಾವತ್ತೂ ಉಲ್ಟಾ ಎಣಿಸುತ್ತಿದ್ದಳು.
‘ಇಪ್ಪತ್ತೈದು ಅಂದರೆ ಅಷ್ಟೆ ಆಗ್ಬೇಕು ಮರಿ. ಅಕಸ್ಮಾತ್ ಇಪ್ಪತ್ನಾಲ್ಕಾದರೆ ಮತ್ತೆ ಮೊದಲಿಂದ ಎಣಿಸಬೇಕಾಗುತ್ತಲ್ಲ ಅದಕೆ ಉಲ್ಟಾ ಎಣಿಸ್ತಾ ಬಂದರೆ ಕೊನೆದು ಒಂದೇ ಆಗ್ಬೇಕಲ್ಲ..’ ಅವಳ ಮಾತು, ಹಾಗೆ ಎಣಿಸುವಾಗ ನಿಷ್ಠೆಯಿಂದ ಕುಕ್ಕರುಗಾಲಲ್ಲಿ ಕೂತು ಎತ್ತಿಡುತ್ತಿದ್ದ ರೀತಿ.. ಆ ಮುಗ್ಧತೆ... ಈಗ ಮಗಳ ದೇಖರೇಖಿಯಲ್ಲಿ ಮಲಗಿದ್ದ ನಿಶ್ಶಬ್ದತನ.. ದೇವರೇ.. ಯಾರನ್ನೂ ಇಂಥಾ ಪರಿಸ್ಥಿತಿಗೆ ತರಬೇಡ ಎಂದು ಕೇಳಿಕೊಳ್ಳಲು ಮನಸ್ಸು, ಹೊರಡುತ್ತೇನೆ ಎಂದು ಹೇಳಲು ಧ್ವನಿ ಎರಡೂ ಉಳಿದಿರಲಿಲ್ಲ. ಆಯಿ.. ಕಣ್ಬಿಟ್ಟು ಪಿಳಿಪಿಳಿ ನೋಡಿದ್ದಳಷ್ಟೆ.. ಅದರೆ ನಾನೆಂದು ಗೊತ್ತಾಗಿರುತ್ತಾ..? ನೆನಪಾಗಿದ್ದರೆ ಅಷ್ಟರ ಮಟ್ಟಿಗೆ ಸಾರ್ಥಕ. ದೇವರು ಒಮ್ಮೆ ಆಯಿಗೆ ನೆನಪು ಮಾಡಲಿ.. ಬಿಸಿನೀರು ಕೆಳಗುರುಳುವ ಮೊದಲೆ ಅಲ್ಲಿಂದ ನಿರ್ಗಮಿಸಿದ್ದೆ. ಮಗಳ ಬದುಕು ಕಟ್ಟಲು ಕಟ್ಟೆಯ ಮೇಲೆ ಬದುಕು ತೆಗೆದ ಅಮ್ಮ, ಅಮ್ಮನಿಗಾಗಿ ಹಗಲಿರುಳೂ ಕಾಯುತ್ತಿರುವ ಮಗಳು.
ಛೇ.. ಅಮ್ಮ- ಮಗಳು ಇಬ್ಬರ ಬದುಕಲ್ಲೂ ಯಾಕೆ ದೇವರು ನಿರ್ವಾತವನ್ನೇ ನಿರ್ಮಿಸಿದ್ದ..? ಉತ್ತರಿಸಬೇಕಾದ ಇಬ್ಬರ ಮನಸ್ಸುಗಳೂ ಬರಿದಾಗಿದ್ದವು.
ಕಾರಣ
ಅವಳು ಎಂದರೆ...

Saturday, December 19, 2015

ಬದುಕಿನ ರೆಕ್ಕೆಗಳಿಗೆ ಬಣ್ಣ ತು೦ಬಿದವಳು...


ತೀರಾ ಪ್ರೀತಿಯ ಗ೦ಡಎಷ್ಟೆ೦ದರೂ ನನ್ನವನುಜೀವನ ಸ೦ಗಾತಿ ಎ೦ಬೆಲ್ಲ ಎಮೋಷನ್ನಿಗೆ ಬೀಳುವಹೆ೦ಡತಿಯರು ಮಾಡಿಕೊಳ್ಳುವ ದೊಡ್ಡ ಅನಾಹುತವೆ೦ದರೆ ಹಾಗೆ ಮಾಡಿಯೇ ಗ೦ಡಸಿಗೆ ಇಲ್ಲದ ಬೆಲೆಯನ್ನುನಿಗದಿಪಡಿಸೋದುಹುಟ್ಟಾ ಅಹ೦ಕಾರಿ ಗ೦ಡಸು ಮತ್ತಷ್ಟು ಕೆಡಲು ಕಾರಣಗಳೇ ಬೇಕಾಗುವುದಿಲ್ಲ.ಸೋಮಾರಿಯಾದವನ ಬದುಕಿನ ಚೆ೦ದದ ಪುಟ ಮಗುಚುವುದೇ ಆವಾಗ.

ಆಸ್ಪತ್ರೆಯ ಬೆತ್ತದ ಕುರ್ಚೀಲಿ ದಿನಾ ರಾತ್ರಿ ಕೂತು ತೂಕಡಿಸುವ ಕಾಯಕಕ್ಕೆ ನಾನು ಅನಿವಾರ್ಯವಾಗಿ ಒಪ್ಪಿಕೊಂಡಿz. ಆ ಹೊತ್ತಿಗೆ ಆ ಹಿರಿಯರು ಪರಿಚಯದವರೂ ಮತ್ತು ಇಂಥಾ ಕೆಲಸಗಳಿಗೆ ‘ನೀನು ಬಾ ಮಾರಾಯ’ ಎಂದು ಗೆಳೆಯ ಅಲವತ್ತುಕೊಂಡಿದ್ದಕ್ಕೆ ಒಪ್ಪಿz. ಎಮರ್ಜೆನ್ಸಿ ವಾರ್ಡುಗಳೆಂದರೆ ಪ್ರತಿ ಬೆಡ್ಡೂ ಸಾವಿನ ಕೊನೆಯ ಮೆಟ್ಟಿಲುಗಳೇ. ತರಹೇವಾರಿ ಕೊಳವೆಗಳ ಬದುಕಿನ ಜೀವದ್ರವ ರೋಗಿಯ ದೇಹದ ಹಲವು ಕೋವೆಗಳಿಗೆ ಹರಿಯುತ್ತಿರುತ್ತದೆ. ಯಾವ ಕೊಳವೆಯಲ್ಲಿಂದ ಜೀವ ಹೊರಕ್ಕೆ ಹೋಗಲಿದೆ ಅಂತ ಮಾತ್ರ ಗೊತ್ತಾಗುವುದಿಲ್ಲ. ಹಾಗಾಗಿ ಅಂಥ ವಾರ್ಡಿನಲ್ಲಿರುವವರೂ ಕೂಡ ಯಾವ ಸ್ಪಂದನೆಗೂ ನಿಲುಕದ, ಅಕ್ಷರಶಃ ಆಗೀಗ ಕಣ್ಣು ಮಾತ್ರ ಮಿಟುಕಿಸುವ, ಅನಿಯಂತ್ರಿತ ವಿಸರ್ಜನೆಗೆ ಈಡಾಗುತ್ತಿರುವ ರೋಗಿಗಳೇ ಆಗಿರುತ್ತಾರಾದ್ದರಿಂದ ಕೇರ್‌ಟೇಕರ್ ಆಗಿ ಕೂರುವವರಿಗೆ ಆ ಜಾಗ ಅಪ್ಪಟ ಓಪನ್ ನರಕ.ನಾನು ಸಾಕಷ್ಟು ಪುಸ್ತಕ, ಪತ್ರಿಕೆಗಳನ್ನು ಹರಡಿಕೊಂಡು ಮೈತುಂಬಾ ‘ಓಡೊಮಸ್ಸು’ ಬಳಿದುಕೊಂಡು ಕಾಲಿಗೆ, ಕೈಗೆ ಸೊಳ್ಳೆ ಕಚ್ಚದಿರಲಿ ಎಂದು ಸಾಕ್ಸ್ ಏರಿಸಿ ಕೂತಿರುತ್ತಿದ್ದರೆ ರೌಂಡ್ಸ್‌ಗೆ ಬರುತ್ತಿದ್ದ ಡಾಕ್ಟ್ರು ‘ಏನ್ರಿ..ನೀವೂ ಪೇಷಂಟ್ ತರಹ ಕೂತಿದ್ದೀರಲ್ಲ..’ಎನ್ನುತ್ತಿದ್ದರು. ಮೊದಲ ಎರಡು ದಿನ ‘ನೈಟ್‌ಡ್ಯೂಟಿ ಶೋಭಾಂದು.. ಆಕೆ ಬಂದಿಲ್ಲ, ರಜಾ.. ಅಮ್ಮಂಗೆ ಹುಶಾರಿಲ್ಲ..’ ಎಂದು ಇತರೆ ನರ್ಸುಗಳು ಮಾತಾಡಿಕೊಳ್ಳುತ್ತಿದ್ದರೆ ಆಕೆ ಯಾರೋ ಎಂಬಂತೆ ನಾನು ಸುಮ್ಮನಾಗಿದ್ದೇನೆ ಹೊರತು, ಮರೆತುಹೋಗಿದ್ದ ಶೋಭಾ ಮರುದಿನ ರಾತ್ರಿ ಸಿಕ್ಕಿ ಬದುಕಿನ ಕರಾಳ ಮುಖದ ಕಥೆಗೀಡಾಗಿzಳೆ ಎಂಬ ಯಾವ ಕಲ್ಪನೆಯೂ ನನ್ನಲ್ಲಿರಲಿಲ್ಲ.ಮೂರನೆಯ ದಿನ ರಾತ್ರಿ ಹನ್ನೊಂದರ ಹೊತ್ತಿಗೆ ರೌಂಡ್ಸ್‌ನಲ್ಲಿ ಶೋಭಾಳನ್ನು ನೋಡುತ್ತಿದ್ದರೆ ನಾನು ನೆನಪು ಹಾರುವ ಸಾಧ್ಯತೆಯೇ ಇರಲಿಲ್ಲ ಎನ್ನಿಸಿತ್ತು. ಚೆಂದದ ಬಿಳಿಬಿಳಿ ಹಲ್ಲುಗಳ ಜಲಪಾತದಂತೆ ಲೂಸು ಲೂಸಾಗಿ ಕೂದಲು ಬೆನ್ನಿಗಿಳಿಬಿಟ್ಟು ಸಾಗುತ್ತಿದ್ದ ನರ್ಸಮ್ಮ. ರೌಂಡ್ಸು ಮುಗಿಸಿ ಬಂದವಳೆ ‘ಏನು ಹೆಂಗಿದ್ದೀ..ಎಲ್ಲ ಬಿಟ್ಟು ಈ ವಾರ್ಡಿಗ್ಯಾಕೆ ಬಂದು ಕೂತಿದ್ದಿ..ಯಾರಿzರೆ..?’ ಎನ್ನುತ್ತ ಮಾತಿಗಿಳಿದಿದ್ದಳು. ನನ್ನ ಪ್ರಕ್ಷುಬ್ಧತೆಯ ದಿನದಲ್ಲಿ ಶೋಭಾ ನೌಕರಿಯ ಬಗೆಗೆ ಇರಬೇಕಾದ ಸ್ಪಷ್ಟ ಅವಗಾಹನೆಗಳ ಪಾಠ ಹೇಳಿಕೊಟ್ಟವಳಾದರೆ, ಮನೆ ಊಟದ ರುಚಿಯ ಮೋದಕ್ಕೂ, ತೀರಾ ಅಮ್ಮನ ಪ್ರೀತಿಗೂ ಈಡುಮಾಡಿದ್ದು ಅವರಮ್ಮ.. ಆಯಿ.ಹೀಗೆ ಆಕಸ್ಮಿಕವಾಗಿ ಸಿಕ್ಕಿದವಳಿಗೆ ‘ಆಯಿ ಹೆಂಗಿದಾಳೆ’ ಎಂದೆನ್ನುತ್ತ ಮಾತಿಗಿಳಿಯುತ್ತಲೇ ಕಣ್ಣಿಗೆ ಬಿದ್ದಿದ್ದು ಮುಖದ ಮೇಲೆ ಅಗಾಧ ಗಾಯದ ಗುರುತುಗಳು, ಒಡೆದು ಸೇರಿಸಿದ್ದ ತುಟಿ, ಹಣೆಯ ಮೇಲೊಂದು ಅಪ್ಪಟ ಕೌಟುಂಬಿಕ ದೌರ್ಜನ್ಯಕ್ಕೀಡಾದ ಸಂಕೇತವಾಗಿ ಗೀರೊಂದು ಗುಬುರು ಗುಬುರಾಗಿ ನಿಂತಿದ್ದರೆ, ಜಜ್ಜಿ ಹೋದರೂ ಹೊಳಪು ಕಡಿಮೆಯಾಗದ ಮುತ್ತಿನಂತೆ ಕಾಣಿಸುತ್ತಿದ್ದಳು ಶೋಭಾ.ಮರಾಠರ ಕುಟುಂಬವೊಂದರ ಊಟದ ರುಚಿಗೂ, ಆ ಖಾರಕ್ಕೂ, ಬೆಲ್ಲದ ತಿನಿಸುಗಳಿಗೂ ಕೊನೆಗೆ ಅವರ ಮನೆಯ ಅನ್ನದ ಋಣಕ್ಕೂ ನನ್ನ ನಾ ಕೆಡುವಿಕೊಂಡದ್ದು ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ. ನೌಕರಿ ಹುಡುಕಿಕೊಂಡು ಅಲೆಯುವಾಗ ಹುಮ್ಮಸ್ಸಿತ್ತಾದರೂ ಅಲ್ಲಿ ಹೆಂಗಿರಬೇಕು, ಹೇಗೆ ದಕ್ಷತೆಯಿಂದ ಕೆಲಸ ಮಾಡಬೇಕು, ರೆಸ್ಪೆಕ್ಟು ಎಂದರೇನು ಎಂಬೆಲ್ಲ ಯಾವ ಗೈಡನ್ಸೂ ಮತ್ತು ತಯಾರಿ ಎರಡೂ ನನಗಿರಲಿಲ್ಲ. ಟೈಮಿಗೆ ಸರಿಯಾಗಿ, ರೀಫಿಟ್ಟಿಂಗ್ ಮಾಡಿದ್ದ ಬಟ್ಟೆಗಳನ್ನು ಕೆಂಡದ ಇಸಿಯಲ್ಲಿ ಒತ್ತಿಕೊಂಡು ನೀಟಾಗಿ ನಿಲ್ಲುವುದರ ವಿನಾ ನೌಕರಿಯ ಬಗ್ಗೆ ಇರಬೇಕಾದ ಸ್ಪಷ್ಟ ಅವಗಾಹನೆ ನನಗಿರಲೇ ಇಲ್ಲ. ಜೈಹಿಂದ್ ಇಂಡಸ್ಟ್ರೀಸ್‌ನಲ್ಲಿ ನಿಕ್ಕಿ ಮಾಡಿದ ದಿನಕ್ಕಿಂತ ಒಂದಿನ ತಡ ಮಾಡಿ ಮೊದಲ ದಿನವೇ ಬೈಸಿಕೊಂಡಿz. ಅದಾದ ಮರುದಿನವೇ ಮತ್ತೆ ಬೈಸಿಕೊಂಡು ಈಚೆ ಬರುವಾಗ ಪಕ್ಕದ ರೂಮಿನಲ್ಲಿ ಆಗಷ್ಟೆ ಕ್ಯಾಂಟಿನ್ ಹುಡುಗ ಇರಿಸಿ ಹೋಗಿದ್ದ ‘ಆಲೂ ಪೊಹೆ’ ತಿನ್ನುತ್ತಿದ್ದ ಶೋಭಾ ಎನ್ನುವ ನನಗಿಂತ ಆರೆಂಟು ವರ್ಷದ ಸೀನಿಯರ್ ಒಬ್ಬಳು ಕಿಸಕ್ಕೆಂದು ನಕ್ಕಿದ್ದು ಮೈಯೆಲ್ಲ ಉರಿದು ಹೋಗಿತ್ತು.ಆವತ್ತೆ ಸಂಜೆ ನಾನಿದ್ದ ಚಾಳಿನ ಪಕ್ಕದ ಆಕೆ ಸಿಕ್ಕಬೇಕೆ. ಹೋಗಿ ನಿಲ್ಲಿಸಿಕೊಂಡು ಎರ್ರಾಬಿರ್ರಿ ಬೈದಾಡಬೇಕೆನ್ನುವ ತಯಾರಿಯಲ್ಲಿದ್ದರೂ ಆಕೆಗೆ ಯಾವ ಕೋಪವೂ ಬಂದಿರಲಿಲ್ಲ. ಆದರೆ, ಜೊತೆಗೆ ಹಿಂದಿನಿಂದ ಬರುತ್ತಿದ್ದ ಅವರಮ್ಮ ಮಾತ್ರ ‘ಕಾಯ್ ಝಾಲ್.. ಸಗಳ್ಯಾ ಕಡೆ ಕಶಾಲಾ ಭಾಂಡಣ್ ಕರತೋ.. ಶೋಭಿ..’ ಎನ್ನುತ್ತಿದ್ದರೆ ‘ಆಯಿ...ಬಗಾ ಇಕಡೆ..’ ಎನ್ನುತ್ತ ನಾನು ಶುದ್ಧ ಮರಾಠಿಯಲ್ಲಿ ಮಾತಿಗಿಳಿಯುತ್ತಿದ್ದಂತೆ ಅರ್ಧ ಗಂಟೆಯಲ್ಲಿ ಅಮ್ಮ-ಮಗನೇ ಎನ್ನುವಂತಾಗಿ ಹೋಗಿದ್ದೆವು. ಅದವಳಿಗೆ ಇನ್ನಷ್ಟು ದುಸುಮುಸು ಮಾಡಲು ಕಾರಣವಾಗಿತ್ತಾದರೂ ಕೆಲವೇ ದಿನದಲ್ಲಿ ಅವರಪ್ಪನ ಸೈಕಲ್ಲು ಹೊಡೆದುಕೊಂಡು ಅದರ ಮೇಲೆ ಅವಳನ್ನೂ ಹೇರಿಕೊಂಡು ಹೊರಡುವ ಮಟ್ಟಿಗಿನ ಸಲಿಗೆ ಬೆಳೆದಿತ್ತು. ದಿನಾ ಬಸ್ಸು, ಆಟೋ ಹಿಡಿಯುವ ಕಸರತ್ತಿಗೆ ಹೊರತಾದುದೂ ಅವಳಿಗೆ ಅನುಕೂಲವೂ ಆಗಿತ್ತು. ತಂದೆ ಇಲ್ಲದ, ತಮ್ಮನೊಬ್ಬ ಓದುತ್ತಿರುವ, ಅಮ್ಮನ ಅಲ್ಲಿ ಇಲ್ಲಿನ ಗಳಿಕೆಯಲ್ಲಿ ಸಾಗಿ ಮೇಲೆ ಬಂದ ಕುಟುಂಬ ಅದು. ಅದರಲ್ಲಿಯೇ ಓದಿ ನರ್ಸಿಂಗ್ ಸೇವೆಗೆ ಸೇರಬೇಕಿದ್ದ ಶೋಭಾ, ತಕ್ಷಣದ ಕೆಲಸಕ್ಕೆಂದು -ಕ್ಟ್ರಿಯ ಲೆಕ್ಕಪತ್ರ ವ್ಯವಹಾರ ನೋಡಿಕೊಳ್ಳುತ್ತಿದ್ದಳು.ಕ್ರಮೇಣ ಅವರಮ್ಮ ನನಗೆ ಕೊಂಚ ಹೆಚ್ಚೇ ಹತ್ತಿರವಾದರು. ಅದರಲ್ಲೂ ಅಪ್ಪನ ಕೋಟೆ ಮತ್ತು ಅಮ್ಮನ ತೆಕ್ಕೆಯಿಂದ ಹೊರಬಿದ್ದು ಬ್ಯಾಚುಲರಾಗಿ ಅರೆಬರೆ ಹೋಟೆಲುಗಳ ಊಟಕ್ಕೆ ತಗುಲಿಕೊಂಡಿರುವ ನನ್ನಂಥವರಿಗೆ ಇಂಥಾ ಸಂಬಂಧ ಬೆಳೆದುಬಿಟ್ಟರೆ ಅದಕ್ಕಿಂತ ದೊಡ್ಡ ಜರೂರತ್ತು ಆ ಹೊತ್ತಿಗಿನ್ನೊಂದು ಇರಲಾರದು. ವಾರದಲ್ಲಿ ನಾಲ್ಕು ದಿನ ಖುದ್ದು ಕೂತು ಅವರಮ್ಮ ಬಡಿದು ಹಾಕುತ್ತಿದ್ದ ರೊಟ್ಟಿ ಸುಡುತ್ತಿz. ಅದರ ಜೊತೆಜೊತೆಗೆ ಕಾಯಿಪಲ್ಯೆ ಹೆಚ್ಚಿ, ಕೆಲವೊಮ್ಮೆ ಬಾಂಡ್ಲಿ ತುಂಬಿ ರವೆ ಹುರಿದಿಡುತ್ತಿz. ಸಾಮಾನ್ಯವಾಗಿ ಬ್ರಾಹ್ಮಣರ ಮನೆಯ ಹುಡುಗರಿಗೆ ಅಡುಗೆಮನೆಯದ್ದು ಹುಟ್ಟಾ ಸಂಬಂಧ. ಹಾಗಾಗಿ ಅದಕ್ಕೆ ಕುದುರಿಕೊಳ್ಳುವುದು ಇನ್ನೂ ಸುಲಭ. ಇಂಥ ಪಾಪದ ಮೂತಿಯ ಅರೆಬರೆ ಹುಂಬತನದ ನನ್ನಂಥ ಎಡವಟ್ಟ ಹುಡುಗ ಆಯಿಗೆ ತುಂಬ ಹೊಂದಿಕೆಯಾಗುತ್ತಿತ್ತು. ನನಗೋ ಅವರ ಮನೆಯ ಸೈಕಲ್ಲು ಅದ್ಭುತ ಆಕರ್ಷಣೆ. ಯಾವ ಕೆಲಸಕ್ಕೆ ಬೇಕಾದರೂ ಅದನ್ನು ಬಳಸುವ ಸ್ವಾತಂತ್ರ್ಯ ಬೇರೆ ದಕ್ಕಿಬಿಟ್ಟಿತ್ತಲ್ಲ. ಶೋಭಾಳ ಅಪ್ಪ ಇಟ್ಟುಹೋಗಿದ್ದ ಸೈಕಲ್ಲು ಯಾರೂ ಬಳಸದೆ ಕೂತಿತ್ತು. ಮೊದಲೆರಡು ದಿನ ಕಿಇಂ.. ಕಿಇಂ.. ಎನ್ನುತ್ತಿತ್ತಾದರೂ ಕ್ರಮೇಣ ನಿಶ್ಶಬ್ದವಾಗಿ ಚಲಿಸತೊಡಗಿತ್ತು ಹರ್ಕ್ಯೂಲೆಸ್ಸು.‘ಆಯಿ ಝುಣಕಾ..ಘೇವುನ್ ಏತೋ..’ ಎಂದು ಅಲ್ಲಿಂದ ಹೊರಟು ಊರೆ ಹರಗ್ಯಾಡಿ ಬರುತ್ತಿz. ಜೊತೆಗೆ ಬೇಕಾದ ಸಾಮಾನುಗಳೂ. ಆದರೆ ಆ ಮನೆಯ ಅನ್ನ ಮತ್ತು ಊರಿನ ಋಣ ಎರಡೂ ನನಗೆ ತುಂಬ ದಿನ ಇರಲಿಲ್ಲ. ತೀರಾ ಅಸಡ್ಡೆಯಿಂದ ಇದ್ದ ನನ್ನನ್ನು ನೌಕರಿಯಿಂದ ನಾಳೆ ಕಿತ್ತಾಕುತ್ತಾರೆ ಎನ್ನಿಸುತ್ತಿದ್ದಂತೆ ನಾನೇ ನಿಗುರಿ ನಿಂತುಕೊಂಡು ‘ನನ್ನ ಸಂಬಳ ಈ ಆಡ್ರೆಸ್ಸಿಗೆ ಎಂ.ಒ. ಮಾಡ್ರಿ’ ಎಂದು ಇನ್ನಿಷ್ಟು ರಾವಾಗಿ ಹೊರಬಂದಿz. ಅಷ್ಟೆ.. ಮರುಮಾತಿಲ್ಲದೆ ಥಾಲಿಪಿಟ್ಟಿಗೆಂದು ಕಟ್ಟಿಕೊಂಡಿದ್ದ ಹಿಟ್ಟು, ಫಿಟ್ಟಿಂಗ್ ಬಟ್ಟೆಗಳ ಗಂಟು ಎರಡೂ ಹಿಡಿದು ಮತ್ತೆ ರಸ್ತೆಗಿಳಿದಿz. ಶೋಭಾ ಮತ್ತು ಆಯಿ ಇಬ್ಬರೂ ಆವತ್ತೆ ಮರೆಯಾಗಿಬಿಟ್ಟಿದ್ದರು.ಆವತ್ತಿನ ಮಟ್ಟಿಗೆ ಶೋಭಾಳೊಂದಿಗೆ ಸಾಕಷ್ಟು ಮಾತಾಡಿದೆನಾದರೂ ತತಕ್ಷಣಕ್ಕೆ ಆಯಿಯನ್ನು ಹೋಗಿ ನೋಡುವುದು ಸಾಧ್ಯವಾಗಲೇ ಇಲ್ಲ. ನನ್ನ ನಿಗರಾಣಿಯಲ್ಲಿದ್ದ ಹಿರಿಯರು ಇಲ್ಲವಾಗಿದ್ದರು. ಇತ್ತ ಶೋಭಾ ರಾತ್ರಿ ಪಾಳಿಯಲ್ಲದೆ ಬೇರೆ ಪಾಳಿಗೆ ಬರುತ್ತಲೇ ಇರಲಿಲ್ಲ. ಕಳೆದ ಎಂಟ್ಹತ್ತು ವರ್ಷಗಳಿಂದ ಆಕೆ ರಾತ್ರಿ ಮಾತ್ರವೇ ಕಾರ್ಯನಿರ್ವಹಿಸುತ್ತಿzಳಂತೆ. ಆ ಕ್ಷಣಕ್ಕೆ ಶೋಭಾಳ ಕಥೆ ಅರಿವಿಗೆ ದಕ್ಕದಿದ್ದರೂ ಆಕೆಗೆ ರಾತ್ರಿಗಳ ಬಗ್ಗೆ ಆವರಿಸಿದ್ದ ಭಯದ ನೆರಳು ಕೇಳಿದಾಗ ಬೆನ್ನಮೂಳೆಯಲ್ಲಿ ಭಯದ ಸೆಳಕೊಂದು ಅರಿವಿಲ್ಲದಂತೆ ಮೂಡಿತ್ತು.‘ರಾತ್ರಿನ್ಯಾಗ ನಿದ್ದಿ ಅನ್ನೊದು ಇಲ್ಲ ಅಂತ ಗೊತ್ತಾತಲ್ಲ. ಅದಕ್ಕೆ ಆವತ್ತಿಂದ ರಾತ್ರಿ ಪಾಳೇಕೆ ಬರ್ಲಿಕ್ಕ ಹತ್ತಿದೆ...’ ಎನ್ನುತ್ತಾ ಕಥೆ ಹೇಳುತ್ತಿದ್ದರೆ ಸರಿರಾತ್ರಿಯಲ್ಲಿ ಕುಡಿದ ಬಾಯಿಯಲ್ಲಿ ಆಕೆಯನ್ನು ಹರಿದುಕೊಳ್ಳುತ್ತಲೂ, ನಿದ್ರೆಯ ಆಳದಲ್ಲಿzಗ ಮೈಮೇಲೆ ಸರಕ್ಕನೆ ಸುಡುತ್ತಿದ್ದ ಸಿಗರೇಟಿನ ಕಿಡಿಗಳೂ, ಕೈಗೆ ಸಿಕ್ಕಿದ ರಿಮೋಟು, ಟವಲ್ಲು, ತಂಬಿಗೆ, ಸಾರಿನ ಸೌಟು, ಉಂಡೆದ್ದ ತಟ್ಟೆಯ ಏಟು, ಹಾಯ್ದು ಹೋಗುತ್ತಿzಗ ಅರಿವಾಗೋ ಮೊದಲೇ ಅ ಬಿದ್ದಿರುತ್ತಿದ್ದ ಮೊನಚು ಪೆನ್ಸಿಲ್ಲು ತುದಿಯಿಂದ ಹಿಂಭಾಗಕ್ಕೆ ಸರಕ್ಕನೆ ತಿವಿದು ಬಿಟ್ಟಲ್ಲಿ ಆಗುವ ಅನಿರೀಕ್ಷಿತ ಭಯ ಮತ್ತು ನೋವು. ಬೆತ್ತಲೆ ನಿಲ್ಲಿಸಿ ಮನೆಯಿಂದ ಹೊರಹಾಕುವ ಬೆದರಿಕೆ, ಮಧ್ಯರಾತ್ರಿಯಲ್ಲಿ ಮೈಮೇಲೆ ಬಿಸಿನೀರು ಬಿzಗ ಆಗಿರಬಹುದಾದ ಯಾತನೆ ಇವನ್ನೆಲ್ಲ ಸುಮ್ಮನೆ ಆಲಿಸುತ್ತಿದ್ದ ನನಗೆ ಎದೆ ಝಂದಿತ್ತು.ಅವನ್ನೆಲ್ಲ ದಾಟಿ ಶೋಭಾ ತನಗೂ ಆಯಿಗೂ ಮತ್ತೊಮ್ಮೆ ಬದುಕು ಗಟ್ಟಿಗೊಳಿಸಿಕೊಂಡಿದ್ದಳು. ಆದರೆ, ಅದಕ್ಕೂ ಮೊದಲು ಸತತವಾಗಿ ಅವಳ ಬದುಕು ನರಕದಲ್ಲಿ ಸವೆದುಹೋಗಿತ್ತಲ್ಲ ಅದೆಲ್ಲ ಮುಂದಿನ ವಾರಕ್ಕಿರಲಿ. ಆದರೆ ಆಕೆಯ ಪ್ರಶ್ನೆಯನ್ನು ಇವತ್ತಿಗೂ ಮನಸ್ಸಿನಿಂದ ತೆಗೆದು ಹಾಕಲಾಗುತ್ತಿಲ್ಲ. ಗಂಡಸರಿಗೆ ಬೇಕಿರೋದಾದರೂ ಏನು..? ಮನಸ್ಸು ಅನ್ನೋದೆ ಇರೋದಿಲ್ವಾ..? ಅದಕ್ಕುತ್ತರಿಸಲು ನನ್ನಲ್ಲಿ ಪದಗಳಿರಲಿಲ್ಲ. ಮನಸ್ಸು ಅದಕ್ಕೂ ಮೊದಲೇ ಖಾಲಿಯಾಗಿತ್ತು ಆಕೆಯ ಕಥೆ ಕೇಳಿ..ಕಾರಣಅವಳು ಎಂದರೆ...

Saturday, December 12, 2015

ದೇವರು ಮತ್ತೊಮ್ಮೆ ಕಣ್ಣು ಹಾಕದಿರಲಿ...

ಯಾವ ಪಾಪ ಮಾಡದಿದ್ದರೂ ಬದುಕು ತಿರುಗಣಿಗೆ ಸಿಕ್ಕಿಬಿಡುತ್ತದೆ. ಕೆಲವೊಬ್ಬರ ಬದುಕಿನಲ್ಲಿ ಮಾತ್ರ ತುಂಬು ಚೆಂದದ ಘಳಿಗೆಗಳಲ್ಲೂ ಗಾಢವಾದ ವಿಷಾದವೊಂದು ಹಿನ್ನೆಲೆಯಾಗಿ ಉಳಿದೇ ಇರುತ್ತದಲ್ಲ ಅದು ಯಾವ ಕರ್ಮದ ಫಲ? ಎಲ್ಲ ಚೆಂದವಿದ್ದರೂ ಕೊನೆ ಮಾತ್ರ ಆಘಾತವೇ ಅದರೊಂದಿಗೆ ಬದುಕೂ. ಇದೇನು ದೇವರೂ ಕಣ್ಣು ಹಾಕಿಬಿಡುತ್ತಾನಾ...?

ಆ ಮಗು ಮಾತಿಗೂ ಮೊದಲು ಅಪ್ಪ.. ಅಪ್ಪ.. ಎನ್ನುತ್ತಾ ಓಡಾಡುತ್ತಿದ್ದರೆ, ಅವಳಪ್ಪನೂ ‘ಏನವಾ.. ಈಗ ಗಪ್ಪ ಕುಂಡ್ರಲಿಲ್ಲಂದರ ಬಾಯಿ ಒಡದ ಹೋಗತದ ನೋಡು. ಸುಮ್ನಿರತಿಯೋ ಇ..’ ಎನ್ನುತ್ತಾ ಪ್ರೀತಿಯಿಂದ ಗದರುತ್ತಿದ್ದ. ಬೆಳಗ್ಗೆಯಿಂದ ಸಂಜೆಯವರೆಗೂ ಅಪ್ಪ-ಮಗಳಿಬ್ಬರೂ ಗಲ ಗಲ ಎನ್ನುತ್ತ ಓಡಾಡುತ್ತಿದ್ದರು. ಆ ಹೊತ್ತಿಗಾಗಲೇ ಅರೆಬರೆಯಾಗಿ ಒಬ್ಬರಿಗೊಬ್ಬರು ಬದುಕಬೇಕು ಎಂದು ಅವರಿಬ್ಬರಿಗೂ ಗೊತ್ತಾಗಿಬಿಟ್ಟಿತ್ತು. ಅವರನ್ನುನೋಡುತ್ತಿದ್ದರೆ ಊರಿನ ಕುಟುಂಬಗಳು ಯಾವತ್ತೂ ಸಹಾಯಕ್ಕೆ ನಿಲ್ಲಲು ತಯಾರಿದ್ದವು. ಅದರಲ್ಲೂ ಆ ಮಗುವನ್ನು ಬೆಳೆಸುತ್ತಿದ್ದ ರೀತಿಗೆ ಯಾರೆಂದರೆ ಅವರು ವೆಂಕಣ್ಣನ ಮೇಲೆ ಅಭಿಮಾನ ಪಡುತ್ತಿದ್ದರು. ಮೇಲಾಗಿ ಬಡತನವನ್ನೇ ಹಾಸಿ ಹೊದೆಯುವ ಊರ ಮುಂದಿನ ಕಟ್ಟೆಯೇ ಇವತ್ತಿಗೂ ಜಾಗತಿಕ ಚರ್ಚೆಯ ವೇದಿಕೆಯಾಗುವ ಉತ್ತರ ಕರ್ನಾಟಕದಲ್ಲಿ ಸಂಬಂಧಕ್ಕೂ, ಗೌರವಕ್ಕೂ ತುಂಬ ಬೆಲೆ. ಯಾರನ್ನೂ ಏಕವಚನದಲ್ಲಿ ಮಾತಾಡಿಸುವ ಜನ ತುಂಬ ಕಮ್ಮಿ. ಕೊಂಚ ಓದಿಕೊಂಡವರನ್ನಂತೂ ‘ಬರ್ರಿ ಸಾಹೇಬ್ರ’ ಎಂದು ಮಾತಾಡಿಸುವ, ರೀ ಎಂದಿಲ್ಲದ ಭಾಷೆ ಇಲ್ಲಿ ಅಲಭ್ಯ.
ಅಪರಿಚಿತರು ಮತ್ತು ಹೊರ ಊರಿನವರಿಗೆ ತುಂಬು ಗೌರವ ಕೊಡುವ ಉತ್ತರ ಕರ್ನಾಟಕದ ಭಾಗಗಳಲ್ಲಿ ಜೀವಂತಿಕೆ ಉಳಿದಿರುವುದು ಪ್ರತಿ ಮಾತಿನ ಕೊನೆಯಮ್ಮೆ ಅಪರಿಚಿತನೂ ಕಾಕಾ, ಮಾಮ, ಅತ್ತಿ, ಯವ್ವಾ, ಕಾಕಿ ಇತ್ಯಾದಿ ಸಂಬಂಧಿ ಉವಾಚಗಳಿಂದ.ಅಸಲಿಗೆ ನನಗೂ ವೆಂಕಣ್ಣನಿಗೂ ವಯಸ್ಸಿನಲ್ಲಿ ದಶಕಗಳ ಅಗಾಧ ವ್ಯತ್ಯಾಸ. ಆದರೆ ನನಗ್ಯಾವತ್ತೂ ಒಂದು ದಿವಿನಾದ ಬಂಧವನ್ನು ಏರ್ಪಡಿಸಿಕೊಳ್ಳಲು ಆಯಸ್ಸು, ಹಂತ, ಮಟ್ಟ, ಜಾತಿ, ದುಡ್ಡು ದುಗ್ಗಾಣಿ ಇದ್ಯಾವುದೂ ಅಡ್ಡ ಬಂದಿದ್ದೇ ಇಲ್ಲ. ಅವರ ವಿಶ್ವಾಸ ಮತ್ತು ಅಭಿಮಾನ ದೊಡ್ಡದು.
ಹಾಗಾಗಿ ರಸ್ತೆಯ ಮೇಲೆ ಅಬ್ಬೇಪಾರಿಯಂತಿರುವಾಗ ಕೌಟುಂಬಿಕ ಸಾಮರಸ್ಯದ ಹೊಸ ಹೊನಲಿಗೆ ನಮ್ಮನ್ನೂ ಸೇರಿಸಿಕೊಂಡು ನಮ್ಮ ಸಂಜೆಯ ಕಾರ್ಯಕ್ರಮಗಳಿಗೆ ಕೆಲಸಮಯ ಬ್ರೇಕು ಹಾಕಿಸಿದವನು ವೆಂಕಣ್ಣ.ಆವತ್ತು ದೀಪಾವಳಿ, ರಜೆಯ ದಿನವಾಗಿದ್ದರಿಂದ ನಾವೆಲ್ಲ ಹೊರಹೊರಡುವ ಯೋಚನೆಯಲ್ಲಿದ್ದರೆ ವೆಂಕಣ್ಣ ಎದುರಿಗೆ ನಿಂತು ‘ಎಲ್ಲಿ ಹೊಂಟ್ರೆಪಾ.. ದೀಪಾ ಹಚ್ಚೋದಿನು. ಬರ್ರಿ.. ಚಹಾ ಮಿರ್ಚಿ ಮಾಡೋಣು’ ಎನ್ನುತ್ತಾ ನಮ್ಮ ಯೋಚನೆಗಳ ಧಾಟಿ ಮತ್ತು ಕಾರ್ಯದ ದಿಕ್ಕು ಬದಲಿಸಿದವನು. ಅನಂತರದಲ್ಲಿ ಒಂದೊಂದಾಗಿ ವೆಂಕಣ್ಣನ ವಿಷಯ ನಿಧಾನಕ್ಕೆ ನನ್ನರಿವಿಗೆ ಬರುವ ಹೊತ್ತಿಗೆ ನಾನು ಸಲೀಸಾಗಿ ವೆಂಕಣ್ಣನ ಮನೆ ಹೊಕ್ಕು ಕೂತು ಚವಳಿಕಾಯಿ ಮುರಿಯುತ್ತಾ ‘ಇನೊಂದಸಲ್ಪ..ಬೇಕೇನು..? ನೀ ಉಳ್ಳಾಗಡ್ಡಿ ಜಜ್ಜಿಡು. ರೊಟ್ಟಿ ತಂದಬಿಡ್ತೇನಿ...’ ಎನ್ನುವಂತಾಗಿ ಹೋಗಿತ್ತು.ಚೆಂದದ ಸಂಸಾರದ ಮೇಲೆ ಅದ್ಯಾವ ಮಾರಿಯ ಕಣ್ಣು ಬಿತ್ತೋ ಗೊತ್ತಿಲ್ಲ. ಚೆಂದದ ಮಗು ವೆಂಕಣ್ಣನ ಪಾಲು ಮಾಡಿ ಅಂತೂ ಇಂತೂ ಹಡೆದಾಗಿನಿಂದ ಒಂದಲ್ಲ ಒಂದು ತಾಪತ್ರಯಕ್ಕೀಡಾಗುತ್ತಲೇ ಇದ್ದ ಅವನ ಹೆಂಡತಿ ಕಣ್ಮುಚ್ಚಿದ್ದಳು. ನಾಲ್ಕಾರು ದಿನ ಕಳೆಯುವ ಹೊತ್ತಿಗೆ ಮಗು ಬಂದವರಿಗೆ ‘ಅವ್ವ ಮ್ಯಾಲ ಅದಾಳು. ರಾತ್ರಿ ಅಷ್ಟ ಕಾಣಸ್ತಾಳು.. ಮುಗಿಲಿನ್ಯಾಗ ಚಿಕ್ಕಿ ನೋಡಿರೇನು..? ಆ ದೊಡ್ಡ ಚಿಕ್ಕಿನ ನಮ್ಮವ್ವ ಅಂತ...’ ಎನ್ನುತ್ತಿದ್ದರೆ ಊರಿಗೆ ಊರೇ ಕಣ್ಣೀರಿಡುತ್ತಿತ್ತು. ವೆಂಕಣ್ಣ ಮಗುವನ್ನೆತ್ತಿಕೊಂಡು ರಸ್ತೆಗೆ ಬಂದು ಮುಗಿಲಿಗೆ ಮುಖಮಾಡುವುದನ್ನೇ ಬಿಟ್ಟುಬಿಟ್ಟಿದ್ದ.
ಹುಡುಗಿ ಅಪ್ಪನಿಗಂಟಿಕೊಂಡು ತನ್ನ ಗೊಣ್ಣೆ ಮೂಗನ್ನು ಅವನ ಬೆನ್ನಿಗೆ ಉಜ್ಜುತ್ತ, ಅಳು ಬಂದು ನಿಂತು ಕರೆಗಟ್ಟಿದ್ದ ಕೆನ್ನೆಯನ್ನು ಅವನ ಹೆಗಲಿಗೊರಗಿಸಿ ಅ ನಿದ್ರೆ ಮಾಡಿರುತ್ತಿದ್ದರೆ ಓಣಿಯ ಜನರೆಲ್ಲ ‘ವೆಂಕು ದೇವರು ಭಾಳ ಕೆಟ್ಟಂವ ಬಿಡಪಾ...’ ಎಂದು ಏಕಪಕ್ಷೀಯ ನಿರ್ಣಯ ಜಾರಿ ಮಾಡುವಂತಾಗಿತ್ತು. ದೇವರು ಅವನ ಜೀವನ ಪ್ರೀತಿಗೆ ತೆರಿಗೆ ಕೇಳಿಬಿಟ್ಟಿದ್ದ. ಹುಡುಗಿ ಹೈಸ್ಕೂಲು ಹೋಗುವ ಹೊತ್ತಿಗೆ ನಮ್ಮ ಮಧ್ಯೆ ಸಂಪರ್ಕ ಕಡಿದುಹೋಗಿತ್ತು. ಎರಡ್ಮೂರು ವರ್ಷದ ಹಿಂದೊಮ್ಮೆ ಕಾರ್ಯಕ್ರಮವೊಂದಕ್ಕೆ ಆ ಕಡೆಗೆ ಹೋಗಿz. ಕೊನೆಯಲ್ಲಿ ಕಾಯ್ದು ನಿಂತ ಕುರುಚಲು ಗಡ್ಡ. ಬಿಳಿಬಿಳಿ ತಲೆಯ ವೆಂಕಣ್ಣ ತಕ್ಷಣಕ್ಕೆ ಗುರುತು ಸಿಗದಂತಾಗಿದ್ದರೂ ಪರಿಚಯ ಹೇಳಿಕೊಂಡು ಮಾತಾಡಿಸಿದ್ದ. ಅವನ ಪರಿಸ್ಥಿತಿ ಮತ್ತು ಇತಿಹಾಸ ಗೊತ್ತಿದ್ದುದರಿಂದ ‘ವೆಂಕಣ್ಣ ಮನಿ ಕಡಿಗೆ ಬರ್ತೀನ್ರಿ.. ವ್
ಯಾಳಿzಗ ಒಂದು ಮಿಸ್ ಕಾಲ್ ಕೊಡ್ರಿ’ ಎಂದು ಬಂದಿದ್ದಾ. ಅದಾಗಿ ಒಂದೆರಡು ವರ್ಷದಲ್ಲಿ ಎರ್ಡ್ಮೂರು ಸರ್ತಿ ಮಾತಾಡಿz. ಕೊನೆಯ ಬಾರಿಗೆ ಮಾತಾಡಿದಾಗ ಮಗಳು ಫೋನ್ ತೆಗೆದಿದ್ದಳು. ಮಾತಾಡಲು ಏನೂ ಉಳಿದಿರಲಿಲ್ಲ. ಧಡಪಡಿಸಿ ಅತ್ತ ವೆಂಕಣ್ಣನ ಮನೆಯ ಕಡೆಗೆ ಕಾರು ಹರಿಸಿದ್ದಾ. ಹುಡುಗಿ ಬೆಳೆಯುತ್ತಲೇ ಪ್ರತಿಯೊಂದನ್ನೂ ಅರ್ಥಮಾಡಿಕೊಳ್ಳುತ್ತಾ, ಅಮ್ಮನ ನೆನಪಿನಿಂದ ಮನಸ್ಸು ಕಂಗೆಡುತ್ತಿದರೂ ಅವನಿಗೂ ನೋವಾಗದಂತೆ ಬೆಳೆದುಬಿಟ್ಟಿzಳೆ. ಒಪ್ಪವಾಗಿ ಓದಿಕೊಂಡ ಹುಡುಗಿ ಕೆಲಸ ಇತ್ಯಾದಿ ಎಲ್ಲದರಲ್ಲೂ ಅಚ್ಚುಕಟ್ಟಾಗಿ ಬೆಳೆದಿದ್ದಾಳೆ. ಕೈಗೆ ಸಾಕಷ್ಟು ದುಡ್ಡು ದುಗ್ಗಾಣಿ ಬರುತ್ತಿದ್ದಂತೆ ವೆಂಕಣ್ಣನಿಗೆ ಕೆಲಸ ಬೊಗಸೆ ಬಿಟ್ಟು ತನ್ನೊಂದಿಗಿರುವಂತೆ ಬಲವಂತವಾಗಿ ಕೂರಿಸಿಕೊಂಡು ಮಗಳೂ ಅಮ್ಮನೆ ಎನ್ನುವಷ್ಟು ಚೆಂದವಾಗಿ ಅವನ ಇಳಿ ವಯಸ್ಸಿನ ಸಂಜೆಗಳಿಗೆ ಅವನೊಂದಿಗೆ ಇದ್ದುಬಿಟ್ಟಿzಳೆ. ವೆಂಕಣ್ಣನಿಗೂ ಮನದ ತಾಯಿ ಇಲ್ಲದ ಹುಡುಗಿ ಎಂದು ಮುಚ್ಚಟೆಯಿಂದ ಬೆಳೆಸಿದ್ದನಲ್ಲ. ಮುಖ ಸಣ್ಣಗೆ ಮಾಡುತ್ತಾ ಕೂತಿರುತ್ತಾನೆ. ಮಡದಿಯ ಮೋಹಕ್ಕಿಂತ ಆಕೆಯಿzಗ ಜೀವನದಲ್ಲಿ ಬದುಕಿನ ಸಂಭ್ರಮ ಮತ್ತು ಮಗುವೊಂದರ ಬೆಳವಣಿಗೆಯಲ್ಲಿ ತಾಯಿ ವಹಿಸುವ ಪಾತ್ರವಿದೆಯಲ್ಲ ಅದರಲ್ಲೂ ಹೆಣ್ಣು ಮಗುವಿಗೆ ಅವಶ್ಯಕವಿದ್ದಷ್ಟು ಇನ್ನಾರಿಗೂ ಇರಲಿಕ್ಕಿಲ್ಲ.
ಕಾರಣ ಅಪ್ಪನಾದವನು ಅದೆಷ್ಟೇ ಮುಚ್ಚಟೆಯಿಂದ, ಮುತುವರ್ಜಿ ವಹಿಸಿ ಮಗುವನ್ನು ಬೆಳೆಸಿದರೂ ಹೆಣ್ಣು ಮಕ್ಕಳಿಗೆ ಅಮ್ಮನ ಮಡಿಲಿನ ಆರ್ದ್ರತೆ ಮತ್ತು ರಕ್ಷಣಾತ್ಮಕ ಭಾವವೇ ಬೇರೆ. ಆ ಸವೇಂದನಾತ್ಮಕ ಭಾವವಿಲ್ಲದ ಬೆಳವಣಿಗೆ ಯಾವಾಗಲೂ ಬದುಕಿನಲ್ಲಿ ಒಂದು ರೀತಿಯ ನಿರ್ವಾತವನ್ನು ಳಿಸಿಬಿಟ್ಟಿರುತ್ತದೆ. ಅಂಥಾ ಭಾವಕ್ಕೀಡಾಗುವ ಮಗುವು ಸಹಜವಾಗೇ ಅನಾಥವಾದ ಭಾವದ ಜೊತೆಗೆ ಅತೀವ ಪ್ರೀತಿಯ ನಿರೀಕ್ಷೆಯನ್ನೂ ಅಪೇಕ್ಷಿಸುತ್ತಿರುತ್ತದಲ್ಲ. ಅವೆಲ್ಲದರಿಂದ ವಂಚಿತವಾದ ಹುಡುಗಿಯ ಬದುಕು ಆದಷ್ಟೇ ಹಸನಾಗಿರಲಿ ಎಂದು ವೆಂಕಣ್ಣ ಅಪ್ಪ-ಅಮ್ಮ ಎಲ್ಲವೂ ಆಗಿದ್ದ. ಹುಡುಗಿ ಈಗ ಅವನನ್ನು ಥೇಟು ಅಮ್ಮನಂತೆ ನೋಡಿಕೊಳ್ಳತೊಡಗಿದ್ದಳು. ಅದರೆ ಎ ಒಂದು ಕಡೆಯಲ್ಲಿ ಅವಳಿಲ್ಲದಿರುವ ಭಾವ ವೆಂಕಣ್ಣನನ್ನು ಕಡೆಯವರೆಗೂ ಕಾಡುತ್ತಿತ್ತಾ ಗೊತ್ತಿಲ್ಲ. ಅದೆಷ್ಟೆ ಚೆಂದವಾದ ಬಂಧವಿದ್ದರೂ ಒಮ್ಮೆ ಮಗಳು ಜವಾಬ್ದಾರಿಯುತ ಸ್ಥಾನಕ್ಕೆ ಬರುತ್ತಿದ್ದಂತೆ ಮೂಕವಾಗಿ ಹೋಗಿದ್ದನಂತೆ. ಬಾಹ್ಯ ಜಗತ್ತಿಗೆ ಸಂಪರ್ಕ ಕಡಿದುಕೊಂಡವನಂತೆ ಇರುತ್ತಿದ್ದ ವೆಂಕಣ್ಣ ಆಕಾಶ ದಿಟ್ಟಿಸುತ್ತಾ ಕೂತು ಬಿಡುತ್ತಿದ್ದನಂತೆ. ಏನಾಗುತ್ತಿದೆ ಎನ್ನಿಸುವಷ್ಟರಲ್ಲಿ ಸ್ಟ್ರೋಕಿಗೆ ಒಳಗಾದ ವೆಂಕಣ್ಣ ಮತ್ತೆ ಹಿಂದಿರುಗಿಲ್ಲ.
ಸತತ ಒಂದು ತಿಂಗಳು ಒzಡಿದ ಜೀವ ಮಗಳನ್ನು ನೋಡುತ್ತಾ ಕಣ್ಣೀರಿಡುತ್ತಾ ನಿಶ್ಚಲವಾಗಿದೆ. ಹುಡುಗಿಗೆ ಈ ಬಾರಿ ಕಣ್ಣೀರು ತಡೆಯಲಾಗಿಲ್ಲ. ಯಾವತ್ತೂ ನಮ್ಮಪ್ಪ ನಮ್ಮಪ್ಪ ಎಂದು ಮಾತಿಗೊಮ್ಮೆ ಒರಲುತ್ತಿದ್ದವಳು ಅದಕ್ಕೆ ಅಪ್ಪನ ಪ್ರತಿಕ್ರಿಯೆ ಬಾರದಿದ್ದರೆ ಏನಾದೀತು..? ಕೊನೆಯ ದಿನಗಳಲ್ಲಿ ವೆಂಕಣ್ಣ ಏನೇನೋ ಹೇಳುವ ಭಾವಕ್ಕೀಡಾಗುತ್ತಿದ್ದ. ಆದರೆ ಪ್ರತಿ ಬಾರಿಯೂ ಮಾತು ಮತ್ತು ಧ್ವನಿ ಎರಡೂ ಕೈ ಕೊಡುತ್ತಿದ್ದವು. ಬರೆಯಲಂತೂ ಕೈ ಮೊದಲೇ ನಿಶ್ಚಲವಾಗಿದ್ದವು. ಮೂಕವಾಗಿ ರೋದಿಸುತ್ತಿದ್ದನಂತೆ. ನಾನು ಸುಮ್ಮನೆ ಕೂತುಬಿಟ್ಟಿz. ವೆಂಕಣ್ಣ ಬೆರಳು ತೋರಿಸುವಂತಹ ಯಾವ ಋಣಾತ್ಮಕ ಅಂಶವನ್ನೂ ಉಳಿಸಿರಲಿಲ್ಲ. ಹುಡುಗಿ ಯಾವತ್ತೂ ಅವನ ಮಡಿಲು ಬಿಟ್ಟು ಕದಲುವ ಊಹೆ ಅವನ ಮನಸ್ಸಿನ ಬಂದಿರಲಿಲ್ಲ. ತನ್ನ ನಂತರ ಏನು ಮಾಡುತ್ತೋ ಎನ್ನುವ ಯೋಚನೆ ಕಾಡಿಬಿಟ್ಟಿತ್ತು ತೀವ್ರವಾಗಿ ಅವನನ್ನು. ‘ಯಾವತ್ತೂ ಅವ್ವ ಇಲ್ಲ ಅನ್ನೋದನ್ನ ನನ್ನ ನೆನಪಿಗೆ ಬರದಂಗ ಅಪ್ಪ ನೋಡ್ಕೊಂಡಿದ್ದ. ಆದರ ಕೊನಿತನಕನೂ ಅವನಿಗೆ ಆಕಿನ್ನ ಮರೆಯೋದು ಅಗ್ಲೆ ಇಲ್ಲ. ನನಗ ಗೊತ್ತಿಲ್ಲದಂಗ ರಾತ್ರಿ ಹೊತ್ತು ಎದ್ದು ಹೊರಗ ಕಟ್ಟಿ ಮ್ಯಾಲೇ ಮುಖ ಮುಚ್ಚಿಕೊಂಡು ಕೂತಿರ್ತಿದ್ದ.
ಸರಹೊತ್ತಿನ್ಯಾಗ ಕತ್ತಲ ರಾತ್ರಿಯೊಳಗ ಎಂಥಾ ಗಂಡಸೂ ಒದ್ದಿಯಾಗಿ ಬಿಡ್ತಾನ. ಅಪ್ಪಂಗೂ ಅದರಿಂದ ಹೊರಗ ಬರ್ಲಿಕ್ಕೆ ಅಗಲಿಲ್ಲ ಅನ್ನಸ್ತದ. ಸಣ್ಣಿದ್ದಾಗ ಅವ್ವ ಮ್ಯಾಲಿದಾಳು ಅಂತ ನಾನು ಚಿಕ್ಕಿ ತೋರ್ಸ್ತಿz. ಅದನ್ನ ನೋಡ್ತಾ ಕೂರ್ತಿದ್ದ...’ ಮಾತು ಮುಂದಕ್ಕ ಹರಿಯದೆ ಭೋರೆಂದು ಅತ್ತುಬಿಟ್ಟಿದ್ದಳು ಹುಡುಗಿ. ‘ಅಳಬ್ಯಾಡ ಸುಮ್ನಿರವ್ವ.. ನಿಮ್ಮಮ್ಮಂಗ ನೀನು ಅಳೋದು ಬೇಕಿರಲಿಲ್ಲ. ಬಸಿರಿ ಹುಡುಗಿ ಏನಾರ ಮಾಡ್ಕೊಬ್ಯಾಡ. ನಿಮ್ಮಪ್ಪ ಹುಟ್ಟಿ ಬರತಾನು..’ ಎಂದು ತಿಳಿದದ್ದು ಹೇಳಿ ಎದ್ದು ಬಂದಿದ್ದಾ. ಕೆಲವೇ ದಿನದಲ್ಲಿ ಕರೆ ಬಂದಿತ್ತು.‘ಕಾಕಾ.. ನಮ್ಮಪ್ಪ ಎಲ್ಲೂ ಹೋಗಿಲ್ಲ.. ಮತ್ತ ಬಂದಾನು.. ನಮ್ಮಪ್ಪನಂಗ ಕರ್ರನ ಕೂದ್ಲ.. ಕೆಂಪ ಕೆಂಪ ಮಾರಿ’. ಹುಡುಗ ಹುಟ್ಟಿದ ಸಂಭ್ರಮಕ್ಕೆ ಮಾತಾಡುತ್ತ ಆಕೆ ಅಪ್ಪ ಅಮ್ಮನನ್ನು ಮತ್ತೆ ಕಾಣುತ್ತಿದ್ದರೆ ನಾನು ಮೂಕನಾಗಿz. ಹುಡುಗಿಯ ತೊದಲು ಮಾತು ಈಗಲೂ ಕಿವಿಯಲ್ಲಿ.. ‘ಅವ್ವ ಮ್ಯಾಲ ಅದಾಳು. ರಾತ್ರಿ ಅಷ್ಟ ಕಾಣಸ್ತಾಳು.. ಮುಗಿಲಿನ್ಯಾಗ ಚಿಕ್ಕಿ ನೋಡಿರೇನು..? ಆ ದೊಡ್ಡ ಚಿಕ್ಕಿನ ನಮ್ಮವ್ವ...’ ಬಹುಶಃ ಈಗ ಅದರ ಪಕ್ಕದಲ್ಲಿ ಇನ್ನೊಂದು ಚಿಕ್ಕಿ ಇರಬಹುದೇನೋ. ಹುಡುಗಿ ಮಗುವಿಗೆ ಈಗ ಎರಡನ್ನೂ ತೋರಿಸುತ್ತಿzಳು. ದೇವರೇ ಮತ್ತೊಮ್ಮೆ ಕಣ್ಣು ಹಾಕದಿರು... ಕಾರಣ ಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)