ಕಾವಳದ ರಾತ್ರಿಗಳಲ್ಲಿ ಆಕೆ ಜಗತ್ತು ಬೆಳಗುತ್ತಿದ್ದಳು...
ಗಂಡಸರಿಗೆ ಬೇಕಿರೋದಾದರೂ ಏನು..? ಮನಸ್ಸು ಅನ್ನೋದೆ ಇರೋದಿಲ್ವಾ..? ಎಂದು ತೀರಾ ಮರ್ಮಾಘಾತವಾಗುವಂತಹ ಮತ್ತು ಸುಲಭದಲ್ಲಿ ಯಾರೊಬ್ಬರೂ ಉತ್ತರಿಸಲು ಅಶಕ್ಯವಾದ ಪ್ರಶ್ನೆಯನ್ನು ಆಕೆ ಕೇಳಿಬಿಟ್ಟಿದ್ದಳಲ್ಲ. ಅದಕ್ಕುತ್ತರಿಸಲು ನನ್ನಲ್ಲಿ ಪದಗಳಿರಲಿಲ್ಲ. ಕಾರಣ ಏನು ಬೇಕೆನ್ನುವುದು ಅಹಂನ ಉತ್ಪತ್ತಿಯಾಗಿಬಿಟ್ಟಿದ್ದರೆ ಅದಕ್ಕೊಂದು ಆಯಾಮ ಎನ್ನುವುದೇ ಇರುವುದಿಲ್ಲ.
ಚಾಳಿನ ಬೆಚ್ಚಗಿನ ಗೂಡಿನಿಂದ ನಾನು ಹೊರಬೀಳುವ ಕಾಲಕ್ಕೆ ಆಯಿ ಮತ್ತು ಶೋಭಾ ಅಪ್ಪಟ ನನ್ನದೇ ಮನೆಯವರಂತಾಗಿ ಹೋಗಿದ್ದರಲ್ಲ. ತೀರ ಅಳು ಕಚ್ಚಿ ಅವರನ್ನು ತೊರೆದು ಪತ್ರ ಬರೆಯುವುದಾಗಿಯೂ, ಯಾವಾಗಲೂ ನೋಡಲು ಬರುವುದಾಗಿಯೂ ಆಶ್ವಾಸನೆಯಿತ್ತು ಊರು ಬಿಟ್ಟಿದ್ದೆ. ಆದರೆ ಅವೆರಡೂ ಪೂರೈಸುವುದಾಗಿರಲಿಲ್ಲ. ಎದುರಿಗಿಲ್ಲದ್ದು ಮನಸ್ಸಿಗೂ ಇಲ್ಲ ಎನ್ನುವಂತೆ ಕ್ರಮೇಣ ಆಯಿ ಮತ್ತು ಶೋಭಾ ಮಸ್ತಿಷ್ಕದ ಎಡಕ್ಕೆ ಸರಿದಿದ್ದರು.
ಅತ್ತ ಚೆಂದದ ಹುಡುಗಿ ಶೋಭಾ ಹತ್ತಿರದ ಖಾಸಗಿ ದವಾಖಾನೆ, ಅಲ್ಲಿಂದ ದೊಡ್ಡ ದವಾಖಾನೆ ಹೀಗೆ ಮೂರ್ನಾಲ್ಕು ವರ್ಷದಲ್ಲಿ ಜವಾಬ್ದಾರಿಯುತ ನರ್ಸ್ ಆಗಿ ಬೆಳೆದು ನಿಲ್ಲುವ ಹೊತ್ತಿಗೆ, ತಮ್ಮನೂ ಕೆಲಸಕ್ಕೆ ಸೇರುವಷ್ಟು ಓದಿ ಅಮ್ಮನೊಟ್ಟಿಗೆ ನಿಂತಿದ್ದಾನೆ. ಅದೇ ಹೊತ್ತಿಗೆ ಸಂಬಂಧಿಯೊಬ್ಬರ ಸಲಹೆ ಮೇರೆಗೆ ಸುಲಭಕ್ಕೆ ತಾವೇ ಕೈಯಿಂದ ದುಡ್ಡುದುಗ್ಗಾಣಿ ಹಾಕಿ ಮದುವೆ ಮಾಡಿಕೊಳ್ಳುವ ಸುಭಗ ರೂಪಿ ಅಳಿಯನೊಬ್ಬನ ಸಂಬಂಧ ಒದಗಿ ಬಂದಿದೆ. ಮನೆ ಜನ ಎಲ್ಲಾ ಹೋಗಿ ನೋಡಿ ಬಂದಿದ್ದಾರೆ. ಕುಟುಂಬ ಮತ್ತು ಚೆಂದದ ಅಳಿಯ ಆಯಿಯ ಮನಕ್ಕೆ ಒಗ್ಗುತ್ತಲೂ ಇದ್ದುದರಲ್ಲೇ ಚೆಂದಗೆ ಮದುವೆ ಮಾಡಿಕೊಟ್ಟಿದ್ದಾರೆ.
ಅಲ್ಲಿಯವರೆಗೆ ಎಲ್ಲವೂ ಚೆನ್ನಾಗೇ ಇತ್ತು. ಶೋಭಾ ತನ್ನ ನೌಕರಿ, ಹೊಸ ಗಂಡ, ಅದೂ ಮನೆಯಲ್ಲಿ ಏಕಾಂತ ಎಂದು ಚೆನ್ನಾಗಿಯೇ ಇದ್ದಳು ಕೂಡಾ. ಮೊದಲ ವರ್ಷ ಕಳೆಯುವಷ್ಟರಲ್ಲಿ ಹೆಣ್ಣು ಮಗುವಿನ ತಾಯಿಯೂ ಆಗಿದ್ದಾಳೆ. ಮಗುವಿಗೆ ಮೂರ್ನಾಲ್ಕು ವರ್ಷ ಆಗುವ ಹೊತ್ತಿಗೆ ಗಂಡನ ಒಂದೊಂದೆ ರೂಪ ಈಚೆಗೆ ಬರತೊಡಗಿದೆ. ಅಸಲಿಗೆ ಅವನಿಗೆ ಕೆಲಸವೇ ಇರಲಿಲ್ಲ ಎನ್ನುವುದನ್ನು ಇಷ್ಟು ದಿನವೂ ವ್ಯವಸ್ಥಿತವಾಗಿ ಬಚ್ಚಿಡುತ್ತಿದ್ದನಲ್ಲದೆ ಅವಳ ದುಡ್ಡಿನಲ್ಲೇ ಜೀವನ ತೆಗೆಯತೊಡಗಿದ್ದ. ಯಾವಾಗ ಶೋಭಾ ಅದರ ಮೇಲೆ ಹಿಡಿತ ಸಾಧಿಸಿದಳೋ ಬದುಕು ಬದಲಾಗುತ್ತಾ, ಕುಡಿತ ಮನೆಗೆ ಬಂದುಬಿಟ್ಟಿತ್ತು. ಕೈ ಸಾಲ ಪಡೆದವರ ಹಾವಳಿ ವಿಪರೀತ ಆಗತೊಡಗಿತ್ತು. ಇವೆಲ್ಲದಕ್ಕಿಂತಲೂ ಅನಾಹುತಕಾರಿ ಎಂದರೆ ಆಕೆಯ ಎಲ್ಲಾ ಒಡವೆಗಳನ್ನೂ ಮನೆಯಿಂದ ಗೊತ್ತಾಗದಂತೆ ಸಾಗಿಸಿ ಮಾರಿಬಿಟ್ಟಿದ್ದ. ಅವನ ವರ್ಷಾವಧಿ ಖರ್ಚು ಕಳೆದದ್ದೇ ಹಾಗೆ. ಇಂಥದ್ದೊಂದು ವಿಪರೀತವನ್ನು ನಿರೀಕ್ಷಿಸಿರದ ಶೋಭಾ ಅಮ್ಮನಿಗೆ ತಿಳಿಸಿದ್ದಾಳೆ. ಅದಿನ್ನೂ ವಿಪರೀತಕ್ಕೆ ಹೋಯಿತು. ‘ಅತ್ತೆಯ ಎದುರು ಚಾಡಿ ಹೇಳುತ್ತಿಯೇನೆ’...’ ಎಂದು ನೇರ ಅವಳು ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಗಲಾಟೆ ಮಾಡಿಬಿಟ್ಟ. ತಲೆ ತಗ್ಗಿಸಿ ನಿಂತ ಹುಡುಗಿಯ ವರ್ತನೆ ಮತ್ತು ದಕ್ಷತೆಯ ಅರಿವಿದ್ದ ಅಧಿಕಾರಿ ಅವನಿಗೆ ಬುದ್ಧಿ ಹೇಳಿ ಕಳುಹಿಸಿದರೆ ಮನೆಗೆ ಬರುತ್ತಿದ್ದಂತೆ ‘ಅವನೊಂದಿಗೆ ದಿನಾಲೂ ಮಲಗುತ್ತೀಯಾ.. ಅದಕ್ಕೆ ನಿನ್ಗೆ ಸಪೋರ್ಟು ಮಾಡುತ್ತಾನೆ’ ಎಂದು ರಪರಪನೆ ಬಾರಿಸಿಬಿಟ್ಟಿದ್ದ. ಗಂಡಸರ ಕೊನೆಯ ಆರೋಪ ಮತ್ತು ಹೆಣ್ಣಿಗೆ ಮಾಡಬಹುದಾದ ತೇಜೋವಧೆಯ ಕೊನೆಯ ಸ್ಟೆಪ್ಪು ಅದು.
ಅಮ್ಮ ಸಂಧಾನಕ್ಕೆ ಮಾತ್ರವಲ್ಲ ಇನ್ಯಾವತ್ತೂ ಇತ್ತ ಕಡೆ ತಲೆಹಾಕಿಯೂ ಮಲಗಲಿಲ್ಲ. ಶೋಭಾ ದಿನವೂ ಬದುಕಿದ್ದೂ ಸಾಯತೊಡಗಿದಳು. ಅದಕ್ಕೆ ಉಪ್ಪು ಹಾಕುವಂತೆ ಅದ್ಯಾವುದೋ ಹೆಣ್ಣುಗಳೊಡನೆ ವಾರಗಟ್ಟಲೇ ಹೊರಗೆ ಇದ್ದು ಬರತೊಡಗಿಬಿಟ್ಟಿದ್ದ ಗಂಡ. ಈಗ ಮಾತ್ರ ತಿರುಗಿ ಬಿದ್ದಿದ್ದಳು ಶೋಭಾ. ಆದರೆ ಮಧ್ಯರಾತ್ರಿ ನಿದ್ರೆಯಲ್ಲಿದ್ದವಳ ಮೈಮೇಲೆ ಸಿಗರೇಟು ಸುಟ್ಟಾಗಲೇ ಅವನ ತೆಪ್ಪಗಿರುವಿಕೆಯ ಹಿಂದಿನ ಮರ್ಮ ಅರಿವಾಗಿತ್ತು. ಆಕೆ ತಿರುಗಿ ಬಿದ್ದಿದ್ದಕ್ಕೆ ರಾತ್ರಿಯಿಡಿ ಪೀಡಿಸಿ ಬೆಳಗಾಗುವಾಗ ಹೊರಟು ಹೋಗಿದ್ದ. ಅವಳ ಮೈಮೇಲೆ ಡಜನ್ನುಗಟ್ಟಲೇ ಕಲೆಗಳು ಉಳಿದಿದ್ದವು.
ಬರಲಿರುವ ರಾತ್ರಿಗಳ ಸಂಕಟದ ಕುರುಹಾಗಿ.
ಸಹೋದ್ಯೋಗಿಗಳು ಆಗೀಗ ಸಮಾಧಾನಿಸಿದರೂ ಪರಿಸ್ಥಿತಿ ದಿನದಿಂದ ದಿನಕ್ಕೆ ಕೈಮೀರಿ ಹಿಂಸೆಯಲ್ಲಿಯೇ ಕೊನೆಯಾಗುತ್ತಿತ್ತು. ಎರಡ್ಮೂರು ವರ್ಷ ಕಳೆಯುವಷ್ಟರಲ್ಲಿ ಶೋಭಾಳ ದೇಹದ ಮೇಲೆ ಎಲ್ಲಿ ಕಲೆ ಇಲ್ಲ ಎನ್ನುವುದನ್ನು ಹುಡುಕಬೇಕು ಎಂಬಂತಾಗಿ ಹೋಗಿತ್ತು. ಆಸ್ಪತ್ರೆಯ ಹುಡುಗಿಯರು ಯಾವ ಮುಲಾಜೂ ಇಟ್ಟುಕೊಳ್ಳದೇ ಒಂದಿನ ಅವಳ ಮನೆಗೆ ನುಗ್ಗಿ ಶೋಭಾಳನ್ನೂ ಅವಳ ಮಗಳನ್ನೂ ಈಚೆಗೆ ತಂದು ಸಾಕುವ ಕಾರ್ಯಕ್ಕೆ ಚಾಲನೆ ಕೊಟ್ಟು ಪುಣ್ಯಕಟ್ಟಿಕೊಂಡಿದ್ದರು. ಆವತ್ತೇ ಶೋಭಾ ಮುಖ್ಯ ನಿರ್ಧಾರ ಕೈಗೊಂಡು, ಕೂಡಲೇ ಒಂದು ಮನೆ ಮಾಡಿ ಆವತ್ತೆ ಸಂಜೆ ಅಮ್ಮನನ್ನೂ ಕರೆದುಕೊಂಡು ಬರಲು ಹೋಗಿದ್ದಾಳೆ.
ಅದಾಕೆಯ ಜೀವನದ ಇನ್ನೊಂದು ಶಾಕ್. ಸಾದಾ ಗೋಣಿಯಂತಹ ಹಾಸಿಗೆಯ ಮೇಲೆ ಆಯಿ ಹೊರಗಿನ ಜಗಲಿಯ ಮೇಲೆ ಅಪ್ಪಟ ಭಿಕ್ಷುಕಿಯೊಬ್ಬಳು ಬಿದ್ದಂತೆ ಮಲಗಿದ್ದಾಳೆ. ತಮ್ಮನ ಕುಟುಂಬ ಒಳಗೆ ಸೋಫಾದಲ್ಲಿ ಆಸೀನವಾಗಿ ಟಿ.ವಿ. ಸಂಭ್ರಮದಲ್ಲಿದೆ. ಇದ್ದ ರೋಷವೆಲ್ಲಾ ಆವತ್ತು ಕಕ್ಕಿದ್ದಳು ಶೋಭಾ. ದುರದೃಷ್ಟ ಎಂದರೆ ಅದೇ ಇರಬೇಕು. ಹುಟ್ಟಾ ಬಡತನದಲ್ಲೂ ಸರ್ವ ಅನುಭವಕ್ಕೀಡಾಗಿದ್ದ ಹುಡುಗ ಹೆಂಡತಿ ಬರುತ್ತಿದ್ದಂತೆ ಅವರಮ್ಮನನ್ನೂ ರಸ್ತೆಗಿಳಿಸಿದ್ದಾನೆ. ಭಗವಂತಾ.. ಆಯಿಯಾದರೋ ಮಗಳ ಸಂಕಷ್ಟ ಗೊತ್ತಿದ್ದುದರಿಂದ ಮತ್ಯಾಕೆ ಇನ್ನಷ್ಟು ಅವಳಿಗೆ ಕಿರಿಕಿರಿ ಕೊಡುವುದು ಎಂದು, ಆಚೆ ತಲೆಯೇ ಹಾಕದೆ ಕಟ್ಟೆಯ ಮೇಲೆಯೇ ಜೀವನ ನಡೆಸುತ್ತಿದ್ದಾಳೆ.
ಅವಳಿಗೆ ಮಾತಾಡಲು ಮತ್ತು ಕೇಳಲು ನನಗೂ ಏನೂ ಉಳಿದಿರಲಿಲ್ಲ. ನಿಶ್ಶಬ್ದದಲ್ಲಿ ಸುಮ್ಮನೆ ಆವಳ ಕೈ ಹಿಡಿದು ಕೂತುಬಿಟ್ಟಿದ್ದೆ. ನಡೀ ಆಯಿನ್ನ ನೋಡಬೇಕು ಎಂದೆನಾದರೂ ನನ್ನ ಸ್ವರದಲ್ಲೂ, ಆಕೆಯ ಚಲನೆಯಲ್ಲೂ ಜೀವವಿಲ್ಲದ್ದು ಇಬ್ಬರಿಗೂ ಗೊತ್ತಾಗುತ್ತಿತ್ತು.
ಎರಡು ರೂಮಿನ ಚಿಕ್ಕ ಮನೆಯೊಂದರಲ್ಲಿ ಮಗಳು ಅಮ್ಮನೊಂದಿಗೆ ಜೀವ ಸವೆಸುತ್ತಿರುವ ಶೋಭಾ ಮನೆ ಕೀಲಿ ತೆಗೆಯುತ್ತಿದ್ದುದು ಗಮನಿಸಿ ‘ಆಯಿ ಹೊರಕ್ಕೆ ಹೋಗಿದಾಳಾ?’ ಎಂದೆ. ಮಾತಾಡದೆ ರೂಮಿನೊಳಕ್ಕೆ ನಡೆದು ಮಚ್ಚರದಾಣಿ ಕಟ್ಟಿದ್ದ ಮಂಚದ ಪಕ್ಕ ಸುಮ್ಮನೆ ನಿಂತಳು. ತೀರ ತೆಳು ಜೀವವೊಂದು ಬದುಕಿದೆ ಎನ್ನುವಂತೆ ಉಸಿರಾಟಕ್ಕೆ ಮಾತ್ರ ದೇಹ ಸ್ಪಂದಿಸುತ್ತಿದೆ. ಯಾವುದೂ ಈ ಲೋಕದ ಗೊಡವೆ ಬೇಡ ಎನ್ನುವಂತೆ ಶಾಂತವಾಗಿ ಮಲಗಿದ್ದಾಳೆ. ಕಣ್ಣ ಮುಂದೆ ಒಲೆಯ ಎದುರಿಗೆ ಕೂತು ರೊಟ್ಟಿ ಬಡಿಯುತ್ತಿದ್ದ, ಬುಟ್ಟಿಗಟ್ಟಲೇ ಪೂರಿ ಕರಿಯುತ್ತಿದ್ದ, ಚೆಂದ ಚೆಂದದ ಉಂಡೆಗಳನ್ನು ಕಟ್ಟಿಡುತ್ತಾ ಪದೇಪದೆ ಉಲ್ಟಾ ಎಣಿಸುತ್ತಿದ್ದ, ಹೊರಗಿನ ಕಟ್ಟೆಯ ಮೇಲೆ ಮೊರದ ತುಂಬಾ ಜೋಳ ತುಂಬಿಕೊಂಡು ಗುಬ್ಬಿಗಳಿಗಿಷ್ಟಿಷ್ಟು ಎಸೆಯುತ್ತಾ, ಆರಿಸುತ್ತಾ ಕೂರುತ್ತಿದ್ದ ಆಯಿಯ ಚಿತ್ರಗಳು ಒಮ್ಮೆ ಸಾಲುಸಾಲಾಗಿ ಚಲಿಸಿದವು. ಈ ದೇಹಕ್ಕೂ ಆ ಚಿತ್ರಗಳಿಗೂ ಹೋಲಿಕೆಯೇ ಅಗುತ್ತಿಲ್ಲ.
‘ಆಯಿ ಆಯಿ’ ಎಂದು ಪರದೆ ಸರಿಸಿ ಮೂರ್ನಾಲ್ಕು ಬಾರಿ ಕರೆದೆ.. ಕಣ್ಣು ಪಕಪಕ ಆಡಿತು. ಆದರೆ ಮುಖಭಾವಗಳು ಬದಲಾಗಲಿಲ್ಲ. ಆಯಿ ಗುರುತಿಸುತ್ತಿಲ್ಲ. ಸುಮ್ಮನೆ ಮಂಜಾದ ಕಣ್ಣು ಮುಚ್ಚಿಕೊಂಡು ಪೇಲವವಾದ ಕೈಹಿಡಿದು ಕೂತಿದ್ದೆ. ಚಹದ ಕಪ್ಪು ಹಿಡಿದುಕೊಂಡು ಬಂದ
ಶೋಭಾಳ ಹಿಂದೆ ಎದ್ದು ಬಂದೆ.
‘ಇವತ್ತಿಗೂ ರಾತ್ರಿಯಾದರೆ ಮನಸ್ಸಿಗೆ ಅರಿವಾಗದ ಭಯ. ಮಲಗಿದರಂತೂ ಯಾವಾಗ ಏನಾಗುತ್ತದೋ ಹೇಳಲಾಗದ ಭೀತಿ ಆವರಿಸುತ್ತೆ. ಅದಕ್ಕೆ ಪ್ರತಿ ರಾತ್ರಿನೂ ಈ ಹಿಂಸೆಯಿಂದ ಹೊರಕ್ಕೂ ಬರಕ್ಕಾಗದೆ ವರ್ಷಾನುಗಟ್ಟಲೇ ಒದ್ದಾಡಿದೆ. ಅಷ್ಟರಲ್ಲಿ ಅಮ್ಮನಿಗೆ ಸ್ಟ್ರೋಕ್ ಆಯ್ತು. ನೋಡು ನೋಡುತ್ತಿದ್ದಂತೆ ಮಾತುಕತೆ ಕೊನೆಗೆ ಚಲನೆ ಎಲ್ಲಾ ನಿಂತುಹೋಗಿದೆ. ಎಷ್ಟು ದಿನಾನೋ ಗೊತ್ತಿಲ್ಲ. ರಾತ್ರಿ ಹೊತ್ತಲ್ಲಿ ಏನಾದರೂ ಆದರೂ ಮಗಳು ಇರ್ತಾಳೆ. ಹಗಲು ಇಬ್ಬರೂ ಹೊರಗೆ ಹೋದ್ರೆ ಏನೂ ಗೊತ್ತಾಗಲ್ಲ. ನನಗೂ ಹೆಂಗಿದ್ರೂ ರಾತ್ರಿ ಮಲಗೋದು ಅಂದರೆ ಜೀವ ಒದ್ದಾಡುತ್ತೆ. ಆ ನೆನಪು ಸಂಕಟ ಎರಡೂ ಬ್ಯಾಡ. ಅದಕ್ಕೇ ಏಳೆಂಟು ವರ್ಷಾತು ನೋಡು. ನಾನು ರಾತ್ರಿನೇ ಹೋಗ್ತಿದಿನಿ. ಒಂಥರಾ ಮನೆಗಿಂತ ಅಸ್ಪತ್ರೆನೆ ಸೇಫ್..’ ಎನ್ನುತ್ತಿದ್ದರೆ ಎದ್ದು ಒಳಕೋಣೆಯಲ್ಲಿದ್ದ ಆಯಿಯ ಮಂಚದ ಪಕ್ಕ ಸುಮ್ಮನೆ ನಿಂತು ಬಂದೆ. ಅದೆಷ್ಟೊ ವರ್ಷಗಳಾದವು ಆಕೆಯ ಮಾತುಗಳು ಆದರೂ ಮನದಿಂದಾಚೆಗೆ ಹೋಗಿಲ್ಲ. ಆಕೆ ಯಾವತ್ತೂ ಉಲ್ಟಾ ಎಣಿಸುತ್ತಿದ್ದಳು.
‘ಇಪ್ಪತ್ತೈದು ಅಂದರೆ ಅಷ್ಟೆ ಆಗ್ಬೇಕು ಮರಿ. ಅಕಸ್ಮಾತ್ ಇಪ್ಪತ್ನಾಲ್ಕಾದರೆ ಮತ್ತೆ ಮೊದಲಿಂದ ಎಣಿಸಬೇಕಾಗುತ್ತಲ್ಲ ಅದಕೆ ಉಲ್ಟಾ ಎಣಿಸ್ತಾ ಬಂದರೆ ಕೊನೆದು ಒಂದೇ ಆಗ್ಬೇಕಲ್ಲ..’ ಅವಳ ಮಾತು, ಹಾಗೆ ಎಣಿಸುವಾಗ ನಿಷ್ಠೆಯಿಂದ ಕುಕ್ಕರುಗಾಲಲ್ಲಿ ಕೂತು ಎತ್ತಿಡುತ್ತಿದ್ದ ರೀತಿ.. ಆ ಮುಗ್ಧತೆ... ಈಗ ಮಗಳ ದೇಖರೇಖಿಯಲ್ಲಿ ಮಲಗಿದ್ದ ನಿಶ್ಶಬ್ದತನ.. ದೇವರೇ.. ಯಾರನ್ನೂ ಇಂಥಾ ಪರಿಸ್ಥಿತಿಗೆ ತರಬೇಡ ಎಂದು ಕೇಳಿಕೊಳ್ಳಲು ಮನಸ್ಸು, ಹೊರಡುತ್ತೇನೆ ಎಂದು ಹೇಳಲು ಧ್ವನಿ ಎರಡೂ ಉಳಿದಿರಲಿಲ್ಲ. ಆಯಿ.. ಕಣ್ಬಿಟ್ಟು ಪಿಳಿಪಿಳಿ ನೋಡಿದ್ದಳಷ್ಟೆ.. ಅದರೆ ನಾನೆಂದು ಗೊತ್ತಾಗಿರುತ್ತಾ..? ನೆನಪಾಗಿದ್ದರೆ ಅಷ್ಟರ ಮಟ್ಟಿಗೆ ಸಾರ್ಥಕ. ದೇವರು ಒಮ್ಮೆ ಆಯಿಗೆ ನೆನಪು ಮಾಡಲಿ.. ಬಿಸಿನೀರು ಕೆಳಗುರುಳುವ ಮೊದಲೆ ಅಲ್ಲಿಂದ ನಿರ್ಗಮಿಸಿದ್ದೆ. ಮಗಳ ಬದುಕು ಕಟ್ಟಲು ಕಟ್ಟೆಯ ಮೇಲೆ ಬದುಕು ತೆಗೆದ ಅಮ್ಮ, ಅಮ್ಮನಿಗಾಗಿ ಹಗಲಿರುಳೂ ಕಾಯುತ್ತಿರುವ ಮಗಳು.
ಛೇ.. ಅಮ್ಮ- ಮಗಳು ಇಬ್ಬರ ಬದುಕಲ್ಲೂ ಯಾಕೆ ದೇವರು ನಿರ್ವಾತವನ್ನೇ ನಿರ್ಮಿಸಿದ್ದ..? ಉತ್ತರಿಸಬೇಕಾದ ಇಬ್ಬರ ಮನಸ್ಸುಗಳೂ ಬರಿದಾಗಿದ್ದವು.
ಕಾರಣ
ಅವಳು ಎಂದರೆ...
No comments:
Post a Comment