Sunday, January 3, 2016
ಬದುಕನ್ನು ಹೀಗೂ ಚೆಂದ ಮಾಡಿಕೊಳ್ಳುವವರಿದ್ದಾರಾ ಎನ್ನಿಸಿದ್ದು ಇತ್ತೀಚೆಗೆ ರಾಜಿಯನ್ನು ನೋಡಿದಾಗ. ನಾನು ನೋಡಿದಂತೆ ಬದುಕಿನ ಹಲವು ಮಜಲುಗಳಲ್ಲಿ ಆಕೆ ಯಾವತ್ತೂ ತನ್ನ ಜೀವನಕ್ಕೊಂದು ಶಿಸ್ತು, ಸಂಯಮ ಅಥವಾ ಗಮ್ಯವನ್ನಾಗಲಿ ಒದಗಿಸಿದ್ದವಳೇ ಅಲ್ಲ. ಆವತ್ತಿನ ಮಟ್ಟಿಗೆ ಅದೇ ಜೀವನ ಎನ್ನುತ್ತಿದ್ದ ರಾಜಿ, ನನ್ನಂಥವರಿಂದ ಕೊಂಚ ಅಂತರ ಕಾಯ್ದುಕೊಳ್ಳುವ ಅಸಾಧಾರಣ ಬುದ್ಧಿವಂತೆಯರ ಸಾಲಿನವಳು. ಆದರೆ ನಮ್ಮಿಬ್ಬರಿಗಿದ್ದ ಸಮಾನ ಆಸಕ್ತಿಯಾದ ಕದ್ದು ತಂದು ತಿನ್ನುವುದರಿಂದ ಒಂಥರಾ ಗೆಳೆತನವಿತ್ತು. ಸ್ವತಃ ಅಂಗಡಿಯಿಂದ ನೇರ ಪೊಟ್ಟಣಗಳನ್ನೇ ಎತ್ತಿಕೊಂಡು ಬರುತ್ತಿದ್ದ ತಿಂಡಿಗಳಿಗೆ ಮೋಕ್ಷ ಕಾಣಿಸುವುದೂ, ಉಳಿದಿದ್ದನ್ನು ಸುರಕ್ಷಿತವಾಗಿ ಮತ್ತು ನ್ಯಾಯಯುತವಾಗಿ ಮರುದಿನಕ್ಕೆ ಕಾಯ್ದಿಡುತ್ತಿದ್ದುದರಿಂದ ನಾನು ರಾಜಿಗೆ ಅಗತ್ಯವಾಗುತ್ತಿದ್ದಾ. ಅದಕ್ಕಿಂತಲೂ ಚೆಂದದ ಸಂಗತಿ ಎಂದರೆ ಇದೆಲ್ಲ ಕಂಡೂ ಕಾಣದಂತೆ ಇರುತ್ತಿದ್ದುದು ಅವರವ್ವ. ತೀರ ಜೇಬುಗಟ್ಟಲೇ ತಿಂಡಿ ತುಂಬಿಕೊಂಡು ಓಡಾಡುತ್ತಿದ್ದರೆ ಮಾತ್ರ ‘ಹಂಗ ಕಿಸೆನ್ಯಾಗ ಹಾಕ್ಕೊಂಡು ಓಡ್ಯಾಡಬ್ಯಾಡ್ರಿ. ರಾತ್ರಿ ಇರಬಿ ಬರತಾವ..’ ಎಂದು ನಮ್ಮನ್ನು ಗದರುತ್ತಿದ್ದರು.‘ಇಲ್ಲ ಬಿಡಬೇ ರಾತ್ರಿ ಬ್ಯಾರೆ ಚೆಡ್ಡಿ ಹಾಕ್ಕೊತೇನಿ’ ಎಂದು ನಾನು ಅದಕ್ಕೊಂದು ಸಮಜಾಯಿಸಿ ಕೊಡುವ ಮೊದಲೇ ರಾಜಿ,‘ಇಲ್ಲ ಬಿಡವ್ವ ಹಂಗ ಮಲಗ್ತೇನಿ’ ಎನ್ನುತ್ತ ಕಿಸಕ್ಕೆನ್ನುತ್ತಿದ್ದಳು. ಅವ್ವ ದಬಾರನೆ ಬಾರಿಸುತ್ತಿದ್ದಳು ಬೆನ್ನಿಗೆ.
Subscribe to:
Post Comments (Atom)
No comments:
Post a Comment