ಜೀವನ ಎಂದರೆ ಹೇಗೋ ಬದುಕುವುದಲ್ಲ...!
( ಕೊನೆ ಹಂತದಲ್ಲಿ ಬದುಕು ಕೈ ಕೊಟ್ಟರೆ ಏನೂ ಆಗುವುದಿಲ್ಲ. ಕೆಲವೊಮ್ಮೆ ಅನಿರಿಕ್ಷಿತವಾಗಿ ಜೀವನ ಯಾವ ಪರಿ ತಿರುಗಿ ಬೀಳುತ್ತದೆಂದರೆ ಬರೀ ಅನುಭವಿಸುವವರಷ್ಟೆ ಅಲ್ಲ.. ಜೊತೆಗಿದ್ದವರು, ನೋಡುವವರು, ಎದುರಿಗಿದ್ದವರು ಎಲ್ಲರೂ ಅನಾಮತ್ತಾಗಿ ಬಕ್ಕಬಾರಲಾಗಿ ಬಿಡುತ್ತಾರೆ...)
ನಾವು ಅವನನ್ನು ಪ್ರೀತಿಯಿಂದ ಪದ್ಯಾ.. ಪದ್ಯಾ.. ಎನ್ನುತ್ತಿದ್ದೇವು. ನೌಕರಿ ಆರಂಭಿಸಿದ್ದರೂ ನಮ್ಮ ಹುಡುಗುತನ ಇನ್ನೂ ಹೋಗಿರಲಿಲ್ಲ. ಅದರಲ್ಲೂ ಪದ್ಯಾ ಇದ್ಬಿಟ್ರೆ ಬದುಕು, ಸಮಯ ಕಳೆಯುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ. ಇಂಥವನೊಬ್ಬ ಜೀವನದಲ್ಲಿರಬೇಕು ಎನ್ನುವಂತಿದ್ದ. ಸೀರಿಯಸ್ಸಾ..? ಹಂಗಂದ್ರೇನು ಎನ್ನುತ್ತಲೇ ಬದುಕನ್ನು ಅನಾಮತ್ತಾಗಿ ಅನುಭವಿಸುತ್ತಿದ್ದ. ಅವನಿಗೆ ಮಿತಿಗಳಿರಲಿಲ್ಲ. ಜಗತ್ತಿನ ಅಷ್ಟೂ ಖುಷಿಗಳೂ ಅವನಿಗಾಗೇ ಇದ್ದುವಾ ಗೊತ್ತಿಲ್ಲ. ಆದರೆ ಅವನು ಮಾತ್ರ ಎಂಥಾ ಸಮಯವನ್ನೂ ಚಿಟಿಕೆಯಲ್ಲಿ ಕಳೆಯುತ್ತಿದ್ದ. ಹುಡುಗಾಟದಲ್ಲೇ ಕರೆದೊಯ್ದು ಒಪ್ಪವಾಗಿ ಕೇಸರಿಭಾತಿನ ಊಟ ಬಡಿಸಿದ ಪದ್ಯಾ.. ಮದುವೆ ಆಗಿ ಪ್ರಹ್ಲಾದ್‍ರಾವ್ ಆದ. ಅಪೂಟು ಚೆಂದದ ಹೆಂಡತಿ, ಮುದ್ದಾದ ಹೆಣ್ಣು ಮಗುವಿನ ಅಪ್ಪನಾದ.
"..ಪಾರ್ಟಿ ಕೋಡ್ಬೆಕಾಗತದ, ಇನ್ನೊಂದ ಕೂಸೇ ಬ್ಯಾಡಂತ ಹೆಣ್ತಿನ್ನ ಊರಿಗೆ ಕಳಿಸ್ಯಾನು ನೋಡ್ರಲೇ.."ಎಂದು ನಾವೆಲ್ಲಾ ಗೋಳಾಡಿಸುತ್ತಿದ್ದ ಹೊತ್ತದು. ತುಂಬಾ ಚೆಂದವಾಗಿ ಸರಿಯುತ್ತಿದ್ದ ನಮ್ಮೆಲ್ಲರ ಹುಡುಗಾಟದ ಜೊತೆಗೆ ಕಾಲಕ್ಕೂ ಸಹನೆ ಕಳೆದಿತ್ತಾ..? ಅನಾಹುತಕಾರಿ ಅಪಘಾತದಲ್ಲಿ ಪುಟ್ಟ ಹೆಂಡತಿಯನ್ನು ಕಳೆದುಕೊಂಡು, ಪಿಳಿಪಿಳಿ ಕಣ್ಣು ಬಿಟ್ಟು ಅಳುತ್ತಿದ್ದ ಮಗುವಿನೊಂದಿಗೆ ಬ್ಯಾಂಡೆಜು ಬಿಗಿದುಕೊಂಡು ಬಿದ್ದಿದ್ದ ಪದ್ಯಾ. ತೀರ ದಿಕ್ಕು ತಪ್ಪಿದ ನಾವೆಯಂತಾಗಿ ಹೋಗಿತ್ತು ಬದುಕು.
ಮೊದಲಿನಂತಿಲ್ಲದ ಕುಟುಂಬ ಪದ್ಧತಿಯಲ್ಲಿ ಈಗ ಎಲ್ಲರಿಗೂ ಅವರದ್ದೇ ಚಿಂತೆ. ತಿಂಗಳಿಗೂ ಮೊದಲೇ "..ಪಾಪ ಹುಡುಗಿ ಸಣ್ಣದು.." ಎನ್ನುತ್ತಿದ್ದವರೂ ಮನೆಗೆ ಮರಳಿದರು. ಮನೆಗೊಬ್ಬೊಬ್ಬರೆ ಇರುವ ಕಾಂಪಾಕ್ಟ್ ಕುಟುಂಬದಲ್ಲಿ ಬರುವವರಾದರೂ ಯಾರೂ..? ಅದೂ ಒಂದೆರಡು ದಿನದ ಮಾತಲ್ಲವಲ್ಲ. ಮೂರು ತಿಂಗಳ ರಜ ಕಳೆದು ಹೋಗಿತ್ತು. ಬರುವ ದಿನಗಳ ಪ್ರಮುಖ ನಿರ್ಧಾರ ತೆಗೆದುಕೊಳ್ಳಲೇ ಬೇಕಿತ್ತು. ಅಗಲೇ ಇನ್ನೊಂದು ಮದುವೆಯ ಮಾತು ಕೇಳಿಬರತೊಡಗಿತ್ತು. ಇನ್ನಷ್ಟೆ ಬದುಕು ಆರಂಭಿಸಿದ್ದ ಪದ್ಯಾನ ಹುಂಬತನ ಗೊತ್ತಿದ್ದವರು "..ಇನ್ನೊಂದ ಕನ್ಯಾ ನೋಡ್ರೆಪಾ.." ಎನ್ನುವ ಸಮಯದಲ್ಲಿ, ಎಲ್ಲರ ನಿರೀಕ್ಷೆ ಮೀರಿ ಅವನು ಎದ್ದು ನಿಲ್ಲುವ ಹೊತ್ತಿಗೆ ಅವನೊಳಗೊಬ್ಬಳು ಅಮ್ಮ ಹುಟ್ಟಿಬಿಟ್ಟಿದ್ದಳಾ..?ಗೊತ್ತಿಲ್ಲ. ಭಟ್ಟರ ಹುಡುಗ ಪಸಂದಾಗಿ ಅಡುಗೆ ಮಾಡುತ್ತಿದ್ದುದು ದೊಡ್ಡ ಸಮಸ್ಯೆ ಪರಿಹಾರವಾಗಿತ್ತು. ಕಷ್ಟಕ್ಕೆ ಬೀಳುತ್ತಿದ್ದುದೇ ರಾತ್ರಿಗಳು.
"..ಅಮ್ಮ.. ಬರಲ್ಲ ಅಲ್ವೆನಪಾ.?.." ಎಂದು ಅಮ್ಮ ಬರಲಾರಳು ಎನ್ನುವ ಖಾತರಿ ಇದ್ದೂ ಮಗು ಕುತ್ತಿಗೆ ಕೈ ಹಾಕಿ, ಅವನ ಮೈ ಮೇಲೆ ಕಾಲೇರಿಸಿ, ಅಳಲಾರದೆ ಕೇಳುತ್ತಾ ನಿದ್ರೆಗಡರುತ್ತಿದ್ದ ಕಂಗಳಲ್ಲೂ ನೀರು ತುಳುಕಿಸಿ ಕೆನ್ನೆ ಕರೆಗಟ್ಟುತ್ತಿದ್ದರೆ ಮುಂದಿನ ಜಾವಗಳು ಕತ್ತಲಾಗುತ್ತಿದ್ದವು. ಜಗತ್ತಿನ ಮುಗ್ದತೆಯೆಲ್ಲ ದುಖ:ದಲ್ಲಿ ಮುಳುಗಿಸಿ ಮಗು ನಿದ್ರೆಗಿಳಿಯುತ್ತಿದ್ದರೆ, ಕತ್ತಲೆಯ ನಿಶಬ್ದ ನೀರವತೆಯಲ್ಲಿ ಅವನ ಮನಸ್ಸು,ಕಣ್ಣು ಮೌನವಾಗಿ ಒದ್ದೆಯಾಗುತ್ತಿದ್ದವು. ಮಗುವಿಗೆ ಇನ್ನ್ಯಾವತ್ತೂ ಅಮ್ಮನಿಲ್ಲ ಎನ್ನುವ ಸಂಕಟ, ಬರಲಿರುವ ದಿನಗಳಲ್ಲಿ ಎರಡರ ಪ್ರೀತಿಗೂ ಈಡು ಮಾಡಬೇಕಾದ ದುಗುಡಕ್ಕೆ ಪದ್ಯಾ ಅರ್ಧ ರಾತ್ರಿಯವರೆಗೂ ಮಗುವಿನ ಬೆನ್ನು ತಟ್ಟುತ್ತಾ, ಯಾವಾಗಲೋ ಮಲಗುತ್ತಿದ್ದ. ಬೆಳಿಗ್ಗೆ ಇಬ್ಬರ ಕೆನ್ನೆಯ ಮೇಲೂ ಕರೆಗಳಿರುತ್ತಿದ್ದವು.
ನಿದ್ರೆಯಲ್ಲೂ ಮಗಳು ಅಮ್ಮ.. ಅಮ್ಮ.. ಎನ್ನುತ್ತಿದ್ದರೆ ಎದ್ದು ಕೂರುತ್ತಿದ್ದ. ಬದುಕು ತೀರ ಸೊನ್ನೆ ಸ್ಥಿತಿಗೆ ಬಂದು ನಿಂತುಬಿಟ್ಟಿತ್ತು. ಒಮ್ಮೆ ಅಪರಾತ್ರಿಯಲ್ಲಿ ಮಗು ಎದ್ದು ಕೂತು ಅಪ್ಪನ ಕುತ್ತಿಗೆಗೆ ಕೈ ಹಾಕಿ ಅಳುನುಂಗುತ್ತಾ "..ಅಮ್ಮ ಬರಲ್ಲ ಅಲ್ವಾ. ಇನ್ಮೇಲೆ ಕೇಳಲ್ಲ. ಅದರೆ ನೀನು ಅಳ್ಬೇಡಪ್ಪಾ. ನೀನಿದ್ದೀಯಲ್ಲ.. ಸಾಕಪ್ಪ. ನೀನೂ ಅತ್ರೆ ಅಮ್ಮಂಗೂ ಬೇಜಾರಾಗುತ್ತೆ.."ಎಂದುಬಿಟ್ಟಿತ್ತು. ಎಷ್ಟು ದಿನದಿಂದ ಅಪ್ಪ ಕದ್ದು ಅಳುತಿದ್ದುದನ್ನು ನೋಡುತ್ತಿತ್ತೋ ಮಗು. ಏನೂ ಅರಿಯದೆಯೂ ಅವನ ಕುತ್ತಿಗೆಗೆ ಕೈ ಹಾಕಿ, ಮುಖ ಸವರುತ್ತಾ ಬಿಸಿ ಬಿಸಿ ಹನಿ ಉದುರಿಸುತ್ತಾ "..ಅಳ್ಬೆಡಪ್ಪಾ.." ಎನ್ನುತ್ತ ಬಿಕ್ಕುತ್ತಿತ್ತು. ಅಷ್ಟೆ..ಜಗತ್ತಿನ ಸಮಾಧಿಗಳೆಲ್ಲಾ ಸ್ರವಿಸುವಂತೆ ಕೂತು ಅತ್ತು ಬಿಟ್ಟಿದ್ದ ಅವನು.
ಮರುದಿನ ಎನೂ ಮಾತಾಡದೆ ನನ್ನೊಂದಿಗೆ ಊರ ಹೊರಗಿನ ಹೊಳೆ ದಂಡೆಯ ಮೇಲೆ ಕೂತ್ತಿದ್ದವನನ್ನು ಮಗ್ಗುಲಿಗೆ ಕೈ ಹಾಕಿ ಕರೆತಂದಿದ್ದೆ. ಎದ್ದು ಬರುವಾಗ ಆತ ತುಂಬ ಇಷ್ಟ ಪಡುತ್ತಿದ್ದ ಬೀಯರಿನ ಮೊಗೆ ನೀರಿಗೆ ಬಿದ್ದಿತ್ತು. ತಿಂಗಳೊಪ್ಪತ್ತಿನಲ್ಲಿ ನಾನು ನೋಡಿದ್ದ ಪದ್ಯಾನೇನಾ ಅನ್ನುವಷ್ಟು ಬದಲಾಗಿದ್ದ. ಪಾಪ ಹೆಂಗಸಿಲ್ಲದ ಮನಿ ಎಂದು ನಾವೆಲ್ಲ ಸೇರಿ ಊಟೋಪಚಾರದ ವ್ಯವಸ್ಥೆಗೆ ಹವಣಿಸುತ್ತಿದ್ದಾಗ
"..ಎಷ್ಟ ದಿನಾ ಅಂತ ರೊಟ್ಟಿ ಕೊಡತಿರಿ ವೈನಿ. ಇವತ್ತಲ್ಲ ನಾಳೆ ನಾನ ಮುಸರಿ ಬಳಿಬೇಕು. ಇರ್ಲಿ ಬಿಡ್ರಿ ಆಕಿ ಇದ್ದಾಗ ಇದ್ದಂಗ ಇರ್ಲಿಕ್ಕ ಅಗೋದಿಲ್ಲೇನೋ. ಆ ದಿನಾ ಮತ್ತ ಬರೂದಿಲ್ಲ. ಆದರೂ ನಾನ ಅಪ್ಪ–ಅಮ್ಮ ಎರಡೂ ಆಗಿ ಪುಟ್ಟಿನ ನೋಡ್ಕೊತೀನಿ.." ಎಂದು ಬಿಟ್ಟ. ಎದುರಿಗಿದ್ದ ನಮ್ಮೆಲ್ಲರ ಕಣ್ಣು ಗಂಟಲು ಎರಡೂ ಬಿಗಿದಿದ್ದವು. ಸುಮ್ಮನೆ ಅವನ ಭುಜ ತಬ್ಬಿ ನಿಂತುಕೊಂಡು ಅವನನ್ನು ಕರೆದೊಯ್ದಿದ್ದೆ.
ತೀರ ಬೆಳಗಿನ ಜಾವ ಏಳತೊಡಗಿದ ಪದ್ಯಾ. ಸಲೀಸಾಗಿ ಅಡುಗೆ ಮಾಡಿ ಮಗಳಿಗೆ ಡಬ್ಬಿ ಕಟ್ಟಿ ಅದನ್ನು ಎದುರಿನ ಮನೆಲಿಟ್ಟು, "ಪಾವ್ಣಾ ಕಾಕು ಹನ್ನೊಂದಕ್ಕ ಪ್ರಕಾಶನ ಜೋಡಿ ಕಳಸ್ರಿ.." ಎನ್ನುತ್ತಾ ಸಂಜೆಗೆ ಬೇಕಾಗುವ ಸಾಮಾನುಗಳ ಜೊತೆ ಮನೆ ಒಪ್ಪಗೊಳಿಸಿ, ಮರುದಿನಕ್ಕೆ ಮಗಳ ಸ್ಕೂಲ್ ಯುನಿಫಾರ್ಮ್ ನೆನಪಿಟ್ಟುಕೊಂಡು, ಸಂಜೆ ತರಬೇಕಾದ ಸಾಮಾನು ಪಟ್ಟಿ ಮಾಡಿ ಹೊರಡುವಾಗಲೇ ಕೈ ಚೀಲ ಎತ್ತಿಟ್ಟುಕೊಂಡು, ರಾತ್ರಿ ಅಡುಗೆ ಬೇಕಾದ ಕಾಯಿಪಲ್ಯೆ, ಮೊಸರು ಹುಳಿ ಬರಬಾರದೆಂದು ಪ್ರಿಜ್ಜಿಗಿಟ್ಟು, ಬೆಳಿಗ್ಗೆ ತಡವಾಗುತ್ತದೆ ಎಂದು ಸಂಜೆಯೇ ಬೆಳಗ್ಗಿನ ತಯಾರಿ, ಮಗಳು ಚಾವಿ ಕಳೆದುಕೊಂಡರೆ ಇರಲಿ ಎಂದು ಇನ್ನೊಂದನ್ನು ಕಾಕುನ ಕೈಯಲ್ಲಿಟ್ಟು, ಸ್ಕೂಲಿಂದ ಬಂದಾಗ ಪುಟ್ಟಿಗೆ ತಿನ್ನಲು ಬೇಕಾದ್ದನ್ನೆಲ್ಲ ಟೇಬಲ್ಲಿಗೆ ಜೋಡಿಸಿ, ನೀರಿನ ಜಗ್ ಇರಿಸಿ. ಕುಡಿಯಬೇಕಾದ ಹಾಲಿನ ಗ್ಲಾಸು ಎತ್ತಿಟ್ಟು.. ಬಂದ ಕೂಡಲೆ ಬದಲಿಸಬೇಕಾದ ಡ್ರೆಸ್ಸು.. ಬೇಕಿದ್ದರೆ ಉಪಯೋಗಕ್ಕೆ ಇಷ್ಟು ಚಿಲ್ಲರೆ ಕಾಸು.. ಸೇರಿದಂತೆ ಪ್ರತಿಯೊಂದನ್ನೂ ವ್ಯವಸ್ಥೆ ಮಾಡಿದ. ಮೊದಲ ಕೆಲವು ದಿನ ಮಗು ಒಬ್ಬಳೆ ಇರುವ ಅಭ್ಯಾಸ ಮಾಡಿಸುವ ಸಲುವಾಗಿ ಎರಡ್ಮೂರು ಗಂಟೆ ಮಾತ್ರ ಬಿಟ್ಟು ತಾನು ಹೊರಹೋಗಿ ಬರುತ್ತಿದ್ದ. ಕ್ರಮೇಣ ಅಭ್ಯಾಸವಾಗತೊಡಗಿದಂತೆ ಮಗು ತಾನೇ ಮನೆಗೆ ಬಂದು, ಕೀಲಿ ತೆಗೆದು ಒಳಸೇರಿ ಕದವಿಕ್ಕಿಕೊಂಡು ಊಟಮಾಡಿ, ತಟ್ಟೆಯನ್ನು ಒಯ್ದು ಸಿಂಕಿಗೆ ಹಾಕುವಲ್ಲಿಗೆ ಬಂದಾಗ ನಿರಾಳವಾಗಿ ಕಚೇರಿಗೆ ಬಂದು ಸೇರಿದ. ಪ್ರತಿಕ್ಷಣವೂ ಹೊತ್ತೊತ್ತಿಗೆ ಮೊಬೈಲಿನಲ್ಲಿ ಮಗಳ ಜೊತೆ ಟಚ್‍ಲ್ಲಿರುತ್ತ.. ಮಧ್ಯಾನ್ಹ ಮಲಗಿದ್ದು ಏಳದಿದ್ದರೆ ಕಾಲ್ ಮಾಡಿ ಎಬ್ಬಿಸಿ ಅದಕ್ಕೆ ಸೂಚನೆ ಕೊಡುತ್ತಾ.. ಆಕೆಯ ಜೊತೆಯಲ್ಲೆ ಇದ್ದಂತೆ ಉಳಿದು ಬಿಟ್ಟ.
ಅವನ ಅವಸ್ಥೆ ಗೊತ್ತಿದ್ದ ನಾನು ಮತ್ತಿಬ್ಬರು ಸ್ನೇಹಿತರೂ ಆಗೀಗ ಒಬ್ಬರಾದ ಮೇಲೊಬ್ಬರು ಅವನ ಬೆಂಬಲಕ್ಕೆ ನಿಲ್ಲುವ ಪ್ರಯತ್ನ ಜಾರಿಯಲ್ಲಿಟ್ಟೆದ್ದೆವು. ಆದರೆ ಪದ್ಯಾ ಮಾತ್ರ ಮಗಳ ಜೊತೆ ಸೇರಿ ಸಾಲುಸಾಲು ವರ್ಷಗಳನ್ನೆ ಸೋಲಿಸಿಬಿಟ್ಟಿದ್ದ.
ಇದ್ದಕ್ಕಿದ್ದಂತೆ ಒಂದಿನ ಬೆಳಿಗ್ಗೆದ್ದ ಹುಡುಗಿ " ಅಪ್ಪ ರಕ್ತ.. " ಎನ್ನುತ್ತ ನಿಂತಿದ್ದರೆ ಕಪಾಟಿನ ಅರೆಯಲ್ಲಿದ್ದ ಪೆÇಟ್ಟಣ ಕೈಗಿಡುತ್ತ ತನಗೆ ತಿಳಿದಂತೆ ವಿವರಿಸಿ, ಅದಕ್ಕೆ ಮುಜುಗರವಾಗದಂತೆ ಕಂಪ್ಯೂಟರ್‍ನಲ್ಲಿ ಸರ್ಚ್ ಮಾಡಿ "ಇದನೊಮ್ಮೆ ನೋಡಮ್ಮ.." ಎಂದು ಆಚೆಗೆ ಹೋಗಿದ್ದ. ಕಾಲ ನಿಲಲ್ಲಿಲ್ಲ. ಮಗಳು ವಯಸ್ಸಿಗೆ ಬಂದಾಗ ಪಿಂಕ್ ಸ್ಕೂಟಿ ತಂದು ಸಂಭ್ರಮಿಸಿದರು. ಒಬ್ಬರಿಗೊಬ್ಬರು ಬದುಕುವುದು ಅವರಿಗೆ ಅದ್ಭುತವಾಗಿ ಅಭ್ಯಾಸವಾಗಿತ್ತು.
ಆವತ್ತು ಅವನು ಹೊರಬರುವ ಮೊದಲೇ ಬಂದು ಗಾಡಿ ಸ್ಟಾರ್ಟ್ ಮಾಡಿದ ಆಕೆ, "ಅಪ್ಪಾ ಬಾರೆ ಬೇಗ.." ಎಂದು ರಾಗವಾಗಿ ಕೂಗಿದಳು. ಎರಡು ವರ್ಷದ ಹಳೆಯ ಕನ್ನಡಕ ಮೇಲಕ್ಕೇರಿಸುತ್ತಾ ಪದ್ಯಾ ಬಂದು ಹಿಂದೆ ಮುಂದೆ ನೋಡುತ್ತಿದ್ದರೆ, "ಸರಿಯಾಗಿ ಕೂತ್ಕೊ.."ಎನ್ನುತ್ತ ಮತ್ತೆ ಕಿರುಚಿದಳು."..ಗಟ್ಟಿ ಹಿಡ್ಕೊಂಡು ಕೂತ್ಕೊ.. ಅಲ್ಲಾಡಿಸ್ಬೆಡ.. ಬ್ಯಾಲೆನ್ಸ್ ಹೋಗುತ್ತೆ. ಅಮೇಲೆ ಹಂಪ್‍ನಲ್ಲಿ ಹಾರ್ತಿಯ.." ಎನ್ನುತ್ತಿದ್ದರೆ, "ಹೂಂನಮ್ಮ. ಅವ್ಳು ಹಿಂಗೆ ಕೂಗ್ತಿದ್ಲು ನನ್ನ ಮೇಲೆ.."ಎನ್ನುತ್ತ ಮಸುಕಾದ ಕಣ್ಣು ಒರೆಸಿಕೊಂಡ.
"..ಪಾಪ ಅಪ್ಪಾ.. ಸುಮ್ನಿರೇ. ಅಳ್ಬ್ಯಾಡ ಈಗ." ಎನ್ನುತ್ತಾ ಕೈ ಹಿಂದೆ ಹಾಕಿ ಅವನ ಎದೆ ಸವರಿದಳು.
"ಹೂಂನಮ್ಮ..ಸರಿ."ಗದ್ಗದಿಸಿದ. ಎದುರಿನ ಕಿಟಕಿಯಿಂದ ನೋಡುತ್ತಿದ್ದ ನನಗೆ, ಕೆಲ ದಿನದ ಹಿಂದೆ ಕತ್ತಲೆಯ ರಾತ್ರಿಗಳಲ್ಲಿ ಅವಳನ್ನು ನೆನೆಸಿಕೊಳ್ಳುತ್ತಾ ಹೇಳಿದ ಮಾತು ನೆನಪಾದವು,
"..ಬೇಕಂದರ ಮದುವಿ ದೊಡ್ಡ ಮಾತಾಗಿರಲಿಲ್ಲ. ಆದರ ಬಂದಾಕಿ ತಾಯಾದಾಳು. ಅವ್ವ ಅಗಾಂಗಿಲ್ಲ. ಅದಕ್ಕ ನಾನ ಎರಡೂ ಆಗ್ತೇನಿ. ಪುಟ್ಟಿ ನನಗ "..ಅಪ್ಪ ಬಾರೆ ಅಂತ ಕರದಾಗೆಲ್ಲಾ.." ಆಕೀ ಮ್ಯಾಲಿಂದ ನಮ್ಮಿಬ್ಬರನೂ ನಿಂತ ನೋಡತಿರ್ಬಹುದು ಅನ್ನಸ್ತದ. ಅದಕ್ಕಿಂತ ದೊಡ್ಡ ಖುಶಿ ಏನದ..? ಅದಕ್ಕ.. "ಆಕೀ ಅಲ್ಲಿ..ಈಕಿ ಇಲ್ಲಿ..ಇಬ್ಬರೂ ಖುಶಿಯಾಗಿರ್ಲಿ ಅಂತ.." ಮುಂದೆ ಶಬ್ದಗಳಿರಲಿಲ್ಲ. ನನಗೂ ಅವನ ಚಿತ್ರ ಮಸುಕಾಗಿದ್ದುದು ಹನಿ ಉದುರಿದಾಗಲೆ ಗೊತಾಗಿದ್ದು.
ಅಲ್ಲವಾ ಮತ್ತೆ...
ಅವಳು ಎಂದರೆ...?