Saturday, April 23, 2016

ಆಳ ಕಣಿವೆಯಿಂದೇಳುವ ಜಲಪಾತದಂತೆ...

ಗಂಡಸಿನ ಲಂಪಟತನದ ಕೊಟ್ಟಕೊನೆಯ ಹಂತವೆಂದರೆ ಹೆಣ್ಣುಮಕ್ಕಳನ್ನು ಬಡಿಯುವುದು. ಅದರಲ್ಲೂ ತನ್ನ ಕೈಲಾಗದ ಹಂತದಲ್ಲಿ ಹೆಗಲು ನೀಡುವ ಹೆಣ್ಣಿನ ತಾಕತ್ತನ್ನು ಅರಗಿಸಿಕೊಳ್ಳದವನು ಪುರುಷ ಕುಲಕ್ಕೇ ಕಳಂಕ ಎಂದರೂ ತಪ್ಪಿಲ್ಲ. ಕಾರಣ ಕುಟುಂಬಕ್ಕೆ ತನ್ನ ಯೌವ್ವನ, ಜೀವನ ಎರಡೂ ಬಲಿಕೊಡಬಲ್ಲವಳು ಅವಳು ಮಾತ್ರ.

ಆಸ್ತಿ ಮತ್ತು ಮನೆತನದ ಗತ್ತು ಗೈರತ್ತಿಗಾಗಿ ಏನೆ ನಡೆದು ಹೋಗುತ್ತದೆನ್ನುವುದು ಹೊಸದಲ್ಲವಾದರೂ, ಕುಟುಂಬದ ಸದಸ್ಯರೇ ಒಟ್ರಾಸಿಯಾಗಿ ಸಂಬಂಧಗಳನ್ನು ತೆಳುಗೊಳಿಸುವುದಿದೆಯಲ್ಲ ಅದು ಮಾನವೀಯತೆಯ ತಂತನ್ನೇ ಕಡಿಯುತ್ತದೆ ಎನ್ನಿಸಿದ್ದು ಹೌದು. ನಂದಿತಾ ಕನ್ನಡ ಶಾಲೆಯಲ್ಲಿ ಆಗ ಟೀಚರ್ ಆಗಿzಳು ಈಗ ಹೆಡ್‌ಮಿಸ್ಸು. ಚೆಂದವಾಗಿ ಬದುಕು ಕಟ್ಟಿಕೊಂಡಿದ್ದ ಹುಡುಗಿ ಅಸಹಾಯಕತೆ, ಮಾನವೀಯತೆ ಎನ್ನುವ ಆದರ್ಶದ ಹಿಂದೆ ಬಿದ್ದು ಯಾಮಾರಿದಳಾ ಅಥವಾ ನಿಜಾರ್ಥದಲ್ಲಿ ಜೀವಿಸುತ್ತಿzಳಾ? ಆಕೆ ಸಿಗುವವರೆಗೂ ಗೊತ್ತಾಗಿರಲಿಲ್ಲ. ಆದರೆ, ನಂದಿತಾಳನ್ನು ನೋಡುತ್ತಿದ್ದರೆ ಇದ್ಯಾಕಿದ್ದೀತು ಎನ್ನಿಸಿದ್ದು ಹೌದು. ಊರಕಡೆಯ ಹಳ್ಳಿಗೆ ಪೊಸ್ಟಿಂಗು ಆಗಿದ್ದ ನಂದಿತಾ ಟೀಚರ್ರು, ಯಪುರದ ಬಸ್ಸಿನಲ್ಲಿ ಸಿಕ್ಕಾಗ ‘ಅಕ್ಕೋರೇ..’ ಎಂದು ನಾನು ಕೂಗುತ್ತಿದ್ದರೆ ‘ಶೀ.. ಹಂಗೆ ಬಸ್‌ಲಿ ಕೂಗಬ್ಯಾಡ ಮಾರಾಯ’ ಎನ್ನುತ್ತಿದ್ದರೆ ರಾಯರ ಮನೆಯವರೆಗೂ ಅವಳೊಂದಿಗೆ ಕಾಡದಾರಿಯಲ್ಲಿ ಕಾಲು ಹರಿಸಿz.
ಒಂಟಿಯಾದ ಕೆಂಪುಹಂಚಿನ ಮನೆಗಳ ಅಕ್ಕಪಕ್ಕದಲ್ಲಿ ಉದ್ದುದ್ದ ತೆಂಗಿನ ಗಿಡ, ಎದುರಿಗೆ ಅಡಿಕೆ ಅಂಗಳ, ಅ ನೀರು ಹರಿಯುವ ಓಳಿ, ಅದರ ಪಕ್ಕ ಹೂವಿನ ಗಿಡಗಳ ಪಾಲು, ಅದರಲ್ಲಿ ಸದಾಕಾಲಕ್ಕೂ ಇರುವ ಗುಲಾಬಿ, ಚೆಂಡು ಹೂವಿನ ಸಾಲು, ಮೂಟೆಗಳ ಮಧ್ಯೆ ಕೂತು ಅಡಿಕೆ ಸುಲಿಯುತ್ತಿದ್ದ ಅಜಾನುಬಾಹು ಆರಡಿ ಎತ್ತರದ ಕೆಂಪಗಿನ ಮೈಯ್ಯ ರಾಯರು ‘ಮಾಣಿ ಎಲ್ಲಿಂದ ಬಂದ್ಯಾ? ಅವ್ನಿಗೆ ಅಸ್ರಿಗೇನಾರ ಕೊಟ್ಯೆನೇ?’ ಎನ್ನುತ್ತಾ ಕೈಯ್ಯಂದು ಕೊನೆಗತ್ತಿ ಹಿಡಿದು ಬರುತ್ತಿದ್ದರೆ ದೊಡ್ಡ ಅಂಗಳದ ತುದಿಯಲ್ಲಿ ನಿಂತಿದ್ದ ನಾನು ಕುರಿ ತರಹ ಕಾಣುತ್ತಿz ಅವರೆದುರಿಗೆ. ಇದೆಂಥ ನಮುನೀ ದೈತ್ಯ ಮಾರಾಯ ಎನ್ನಿಸುವ ಮೊದಲೆ ಅವರ ನಡೆಯಲ್ಲೂ, ಆದರಿಸುವ ಪರಿಗೂ ನಾನು ಕರಗಿ ಹೋಗಿz.
ರಾಯರು ಏಕಾಂಗಿಯಾಗಿ ನಿಂತು ಬ್ಯಾಣ ಕಡಿದು ತೋಟ ಬೆಳೆಸಿದ ಕತೆ ಹೇಳುತ್ತಿದ್ದರೆ ಗಡಸು ಮುಖ, ಅಗಲಗಲವಾದ ಅವರ ಕೈಯ್ಯನ್ನೂ ನೋಡುತ್ತಿದ್ದರೆ, ಅವರೆದುರಿಗೆ ನಾವೆಲ್ಲ ಚಿಲ್ಟುಗಳಂತೆ ಕಾಣುತ್ತಿzವು. ನಂತರದಲ್ಲೂ ಆಗೀಗ ಅವರ ಮನೆಯ ಹೊಂಬಣ್ಣದ ಚಂದ್ರಬೊಕ್ಕೆ ತರಲು, ಪ್ರತೀ ಹಲಸಿನ ಸಿಜನ್ನಿಗೂ ಭಿಡೆ ಬಿಟ್ಟು ಹೋಗುತ್ತಿz. ಅದಾದ ನಂತರದ ಎರಡು ದಶಕದ ಕಾಲಾವಧಿಯಲ್ಲಿ ನಂದಿ ಆಗೀಗ ಮರೆತಂತಾಗಿದ್ದರೂ, ಮಧ್ಯದಮ್ಮೆ ಯಾರೋ ‘ನಿಮಗೆ ಗೊತ್ತಿರಬೇಕಲ್ಲ ನಂದಿ ಟೀಚರು ದುಡ್ಡಿಗೆ ಮಾವನ್ನೇ ಕರ್ಕೊಂಡು ಓಡಿ ಹೋದ್ಲಂತೆ’ ಎನ್ನುವ ತೀರಾ ರೇಜಿಗೆಯ ಮಾತುಗಳನ್ನು ಕೇಳಿz. ಆದರೆ ಹೆಣ್ಣುಮಗಳೊಬ್ಬಳು ಸುಲಭಕ್ಕೆ ಹಾಗೊಂದು ಸಂಬಂಧಕ್ಕೆ ಬೀಳುತ್ತಾಳೆಂಬುವುದನ್ನು ನಾನು ನಂಬುವುದಿಲ್ಲ. ಆ ತರಹದ ಕತೆಗಳನ್ನು ಬೇಕಿದ್ದರೆ ದಶಕಗಳ ನಂತರವೂ ಆಡಿಕೊಳ್ಳುತ್ತಾ ಆಕೆಯನ್ನು ಇನ್ನಷ್ಟು ಹಿಂಸೆಗೀಡು ಮಾಡುವಲ್ಲಿ ಈಗಲೂ ಹೆಂಗಸರ ಪಾಲೇ ದೊಡ್ಡದು.
ತಮಗೆ ದಕ್ಕದ್ದು ಬೇರೆಯವರಿಗೆ ಸಿಕ್ಕಿತಲ್ಲ ಎನ್ನುವ ಸಂಕಟದ ಹಲವು ಬಾರಿ ಚಿತ್ರ ವಿಚಿತ್ರ ಕತೆಗಳನ್ನು ಹರಿಬಿಡುವವರಿಂದಾಗಿ, ಸುಲಭಕ್ಕೆ ಇಂತಹದ್ದನ್ನು ಚಪ್ಪರಿಸುವ ಜನರ ಮನಸ್ಥಿತಿಯಿಂದಾಗಿ ಕತೆಗಳು ಬೀದಿಗೆ ಬಂದುಬಿಡುತ್ತವೆ. ಹಾಗಾಗಿ ‘ನಂದಿ ಏಂತಾದ್ದೇ ಕತೆ ಅದು, ಏನಾಯ್ತು’ ಎಂದು ಕೇಳೋಣ ಎಂದರೆ ನನ್ನ ಬಳಿ ಸಂಪರ್ಕವೂ ಇರಲಿಲ್ಲ. ದೂರದ ಹಾನಗಲ್ಲಿನ ಮೂಲೆಯ ಹಳ್ಳಿಯೊಂದರ ಸರ್ಕಾರಿ ಶಾಲೆಯ ಅಕ್ಕೋರು ಅಚಾನಕ್ ಆಗಿ ಸಂಪರ್ಕಕ್ಕೆ ಬಂದಿದ್ದು ಹಾವೇರಿಯ ಸ್ನೇಹಿತರೊಬ್ಬರು ನೀಡಿದ ಮಾಹಿತಿಯಿಂದಾಗಿ. ‘ನಮ್ಮ ಹೊಲಾ ಅ ಅದರೀ. ಅ ಹೆಡ್ಮಿಸ್ಸಾಗ್ಯಾರು’ ಎನ್ನುತ್ತಿದ್ದಂತೆ ಸಂಪರ್ಕಿಸಿz.
ವಯಸ್ಸು ಮತ್ತು ಪರಿಸ್ಥಿತಿ ಎರಡೂ ಬೀರಿದ ಪ್ರಭಾವದ ಹೊರತಾಗಿಯೂ ಆವತ್ತಿನ ಚೆಂದನೆಯ ಬೆಳ್ಳಗಿನ ನಂದಿ.. ಈಗಲೂ ಅದೇ ಹಳೆಯ ಸೆಳಕುಗಳ ಛಾಯೆಯಲ್ಲಿ ಹಾಗೆಯೇ ಇದ್ದಳು. ಶಾಲೆ ಬಳಿ ಹೋಗಿ, ಹೊರಗೆ ನಿಂತು ಹೇಳಿ ಕಳುಹಿಸಿದೆ. ಅರ್ಧ ಗಂಟೆಯಲ್ಲಿ ಬಂದವಳೊಂದಿಗೆ ನಡೆದು ಹೋಗಿz. ಅವಳ ಬಗೆಗೆ ಸುದ್ದಿಗಳು ಗೊತ್ತಿದ್ದುವಾದರೂ ನಿಜವಾ, ನಿನಗೂ ರಾಯ್ರಿಗೂ ಸಂಬಂಧವಿತ್ತಾ, ಹೌದಾದರೆ ಹಿಂಗ್ಯಾಕೇ? ಎನ್ನುವಂಥ ಯಾವ ಅಸಂಬದ್ಧ, ಅತಾರ್ಕಿಕ ಪ್ರಶ್ನೆಯನ್ನೂ ಕೇಳಿರಲಿಲ್ಲ. ಕಾರಣ, ನನಗೇ ಗೊತ್ತಿರುವಂತೆ ಹಾಗಾಗುವ, ಆದರೂ ಅದ್ಯಾವುದನ್ನೂ ಕೆದಕುವ, ಅವರವರ ಅನಿವಾರ್ಯತೆಗಳ ಮೂಲಕ್ಕೆ ಕೈಯ್ಯಾಡಿಸುವ ಮೂಲಕ ಮತ್ತೊಮ್ಮೆ ಮುಜುಗರ ಸೃಷ್ಟಿಸುವ ಕಾಯಕಕ್ಕೆ ನಾನ್ಯಾವತ್ತೂ ಕೈಹಾಕಿದ್ದಿಲ್ಲ. ಅಕಸ್ಮಾತಾಗೇ ಆಗಿದ್ದರೂ ಅಂತಹದ್ದರಲ್ಲಿ ಕೆದಕಿ ಮಾತಾಡಲು ನಾನೆಷ್ಟರವನು?
ಪ್ಲಾಸ್ಟಿಕ್ಕಿನ ಆರಾಮ ಕುರ್ಚಿ, ಪುಟಾಣಿ ಟೇಬಲ್ಲು, ಹರಡಿದ್ದ ವೃತ್ತಪತ್ರಿಕೆಗಳು, ಪೆಂಡಿಗಟ್ಟಲೇ ಶಾಲೆಯ ಮಕ್ಕಳ ಉತ್ತರ ಪತ್ರಿಕೆಗಳು, ಟಾಪು ಬದಲಿಸದ ದೀವಾನ, ಹಾಲ್ ನಾಚೆಗಿನದ್ದು ಕಾಣಿಸದಂತಹ ಕೊಂಚ ಕರೆಗಟ್ಟಿದ ದಪ್ಪನೆಯ ಪರದೆ ನಾನು ನೋಡುತ್ತಿದ್ದಂತೆಯೇ ಕದಲಿ ಅಗಲವಾದ ಚೌಕನೆಯ ಸ್ಟ್ಯಾಂಡಿನ ಮೇಲೆ ಭಾರ ಹಾಕುತ್ತಾ ರಾಯರು ನಿಧಾನವಾಗಿ ಹೊರಬರುತ್ತಿದ್ದರೆ, ‘ನಿಂಗ ಎಷ್ಟ ಸರ್ತಿ ಹೇಳಿಲ್ಲ. ನಾ ಬರೂ ತಂಕ ಓಡಾಡಬ್ಯಾಡ ಅಂತ’ ಎಂದು ಸರಕ್ಕನೆ ಅವರ ಬಳಿಸಾರಿ ನಂದಿ ಅವರನ್ನು ಕರೆದೊಯ್ದು ಕಿಟಕಿ ಕಡೆ ಮುಖಮಾಡಿಟ್ಟಿದ್ದ ಆರಾಮ ಕುರ್ಚಿಯಲ್ಲಿ ಕೂರಿಸಿದಳು. ಎತ್ತರದ ನಿಲುವು ಬಾಗಿದೆ. ಮೇಲೊಂದು ಮುಂಡಿಚಾಟು, ಅದರ ಜೇಬಿಗೆ ಕೈಹಾಕಿ ತೆಗೆದ ಗಾಢ ಕಲೆಗಳು, ಮೊಳಕಾಲಿನವರೆಗೆ ಮಾಂಜರಪಾಟಿನ ಪೈಜಾಮು, ನನ್ನ ನೆನಪು ಅವರಿಗಿದ್ದಂತೆ ಕಾಣಲಿಲ್ಲ. ನಂದಿಯ ಹಿಂದೆ ನಡೆದು ಅಡುಗೆಕಟ್ಟೆಯ ಪಕ್ಕದ ಸ್ಟೂಲಿನ ಮೇಲೆ ಕೂತಿದ್ದರೆ ಸ್ಸ..ಸ್.. ಎನ್ನುತ್ತಿದ್ದ ಗ್ಯಾಸಿನ ಸದ್ದೂ ಯಾಕೋ ಕಿರಿಕಿರಿ ಎನ್ನಿಸುತ್ತಿತ್ತು. ಆ ಮೌನವಂತೂ ಇನ್ನೂ.
ಬ್ಯಾಣದ ತೋಟದಲ್ಲಿ ಸಾಕಷ್ಟು ಫಸಲೂ, ದುಡಿಯುವುದರಲ್ಲಿ ಎತ್ತಿದ ಕೈಯ್ಯಾಗಿದ್ದ ರಾಯರ ಮಕ್ಕಳು ಮಾತ್ರ ಅವರಂತಾಗಿರಲಿಲ್ಲ. ಸೊಸೆಯಾಗಿ ಬಂದಿದ್ದ ಹುಡುಗಿಯ ಚುರುಕುತನದಿಂದಾಗಿ ವ್ಯವಹಾರದಲ್ಲ ಆಕೆಯ ಅಗತ್ಯತೆ ಕಾಣಿಸತೊಡಗಿದೆ. ಮಕ್ಕಳು ಮರಿಗಳೊಂದಿಗೂ ಏಗುತ್ತಾ ಇತ್ತ ಊರಿಗೆ ಹತ್ತಿರದ ಶಾಲೆಯಲ್ಲೂ ದಕ್ಷವಾಗಿ ಕೆಲಸ ನಿರ್ವಹಿಸುತ್ತಿದ್ದ ನಂದಿತಾ ಮೂಲಕ ಮಾನವಿಯತೆಯ ಇನ್ನೊಂದು ಮುಖ ನೋಡಿz ಆಗ. ತನ್ನ ಹಿಂದೆ ಏನು ನಡೆಯುತ್ತಿದೆ ಎನ್ನುವುದೇ ಆಕೆಗೆ ಗೊತ್ತಾಗಿರಲಿಲ್ಲ. ನೋಡುನೋಡುತ್ತಿದ್ದಂತೆ ರಾಯರ ವಿಶ್ವಾಸ ಹೆಚ್ಚಾಗುತ್ತಿದ್ದರೆ, ಗಂಡ ಮತ್ತು ಮನೆಯ ಇತರರ ದುಸುಮುಸು ಆಕೆಗೆ ತಗಲತೊಡಗಿತ್ತು. ವರ್ಷವೊಂದು ಕಳೆಯುವಷ್ಟರಲ್ಲಿ ಗಂಜಲದ ನೊಣದಂತೆ ಗಿಜಿಗಿಜಿ ಮಾಡುತ್ತಿದ್ದ ಗಂಡ ನೇರವಾಗಿ ರಂಪಕ್ಕಿಳಿದಿದ್ದಾನೆ. ಆಸ್ತಿಯ ವಿಷಯವಾಗಿ ಶರಂಪರ ಜಗಳಗಳು ನಡೆಯತೊಡಗಿವೆ. ಕಾರಣ ರಾಯರು ಮಾಡಿದ್ದು ಹೆಚ್ಚಾಗಿ ಸ್ವಯಾರ್ಜಿತ ಆಸ್ತಿ. ಈಗ ನಂದಿತ ರಾಯರೊಂದಿಗೆ ಚೆನ್ನಾಗಿದ್ದಾಳೆ, ಹೀಗೆ ಆದರೆ ನಾಳೆ ಅದನ್ನೆಲ್ಲ ರಾಯರು ಆಕೆಗೇ ಬರೆದುಬಿಡುವುದಿಲ್ಲ ಎಂದು ಏನು ಗ್ಯಾರಂಟಿ? ಮಗನ ಹಣೆಬರಹ ಗೊತ್ತಿದ್ದ ರಾಯರು ಆಸ್ತಿಯ ಹಿಡಿತ ಸೂಕ್ತವಾಗಿರಿಸಲು ಸೊಸೆಯನ್ನು ಆಶ್ರಯಿಸಿದ್ದರೆ, ಅರೆಪ್ಯಾಲಿ ಮಗ ಹೆಂಡತಿಯನ್ನೇ ದಾರುಣವಾಗಿ ಬಡಿದಿದ್ದಾನೆ. ಬಹುಶಃ ಹೆಂಡತಿಯನ್ನು ಬಡಿಯುವುದು ಗಂಡಸೊಬ್ಬನ ನಾಮರ್ದತನದ ಕೊನೆಯ ಹಂತ. ಅತ್ತೆಯಾದವಳು ಸೊಸೆಯ ಪರವಲ್ಲ ಎನ್ನುವಂತೆ ರಾಯರನ್ನೂ ಸೇರಿಸಿಕೊಂಡು ಆಕೆ ನಂದಿಯನ್ನು ಝಾಡಿಸುತ್ತಾ, ‘ಗಂಡಸರ ಕಚ್ಚೆ ಸಡಿಲವಾಗಿzಗ ಏನೂ ಘಟಿಸುತ್ತವೇ’ ಎನ್ನುವಂತಹ ಮಾತುಗಳಿಗೆ, ಅವರ ಹಸಿಹೊಲಸುತನಕ್ಕೆ ರೋಸಿ ನಂದಿತ ಊರು ಬಿಟ್ಟಿದ್ದಾಳೆ.
ಮನೆ ಕಡೆಗೆ ಬಾರದ ನಂದಿಯ ಮನೆಗೆ ರಾಯರೇ ಬಂದುಹೋಗಿ ಮಾಡುತ್ತಿದ್ದರೆ, ಆಸ್ತಿ ಲಪಟಾಯಿಸಲು ಮಾವನನ್ನೇ ಇಟ್ಟುಕೊಂಡಿದ್ದಾಳೆ ಎಂದು ಪಂಚಾಯಿತಿ ಕರೆದಿzರೆ. ಅಸಹ್ಯಗೊಂಡ ನಂದಿ ಆ ಕಡೆ ತಲೆ ಹಾಕಿಲ್ಲ. ಆದರೆ ಕಾಲ ಕಾಯುವುದಿಲ್ಲ. ಬದಲಾದ ಸನ್ನಿವೇಶದಲ್ಲಿ ರಾಯರು ಕೈಲಾಗದ ಹಂತದಲ್ಲಿ ಎಲ್ಲ ಅನುಭವಿಸಿಯೂ, ಅನಿವಾರ್ಯವಾಗಿ ಮಕ್ಕಳ ಕೈಗೆ ಅಧಿಕಾರ ಕೊಟಿzರೆ. ಅಷ್ಟೆ ಅವರ ನಂಬಿಕೆ ಎಕ್ಕುಟ್ಟಿತ್ತು. ಬದುಕು ಬೀದಿಗೆ ಬಿದ್ದಿತ್ತು. ಅವರ ಹರೆಯದ ದುಡಿತದ ಹೊಡೆತಕ್ಕೆ ಕಾಲು ವಕ್ರವಾಗಿವೆ. ಬೆನ್ನು ಬಿದ್ದಿದೆ. ವೃದ್ಧಾಪ್ಯ ಅವರನ್ನು ಹಿಂಡುತ್ತಿದ್ದರೆ ಜೀವನವೇ ದುಸ್ತರ ಅನ್ನುವ ಗಳಿಗೆಯಲ್ಲಿ ಮನೆಗೆ ನುಗ್ಗಿ ಮಾವನನ್ನು ಕರೆತಂದು ಸೂಕ್ತ ಚಿಕಿತ್ಸೆ ಇತ್ಯಾದಿ ಸೇವೆ ಮಾಡುತ್ತಿದ್ದಾಳೆ ನಂದಿ.
‘ಇಂಥಾ ಅಪ್ಪನ್ನ ಪಡೆಯೋಕೂ ಪುಣ್ಯಾ ಮಾಡಿರ್ಬೇಕಿತ್ತು. ಮನೆ ಜನಾನೇ ಅಪ್ಪನ ಮ್ಯಾಲೇ ಸಂಬಂಧದ ಆರೋಪ ಮಾಡಿದ್ರಲ್ಲ ಮಾರಾಯ ಆಸ್ತಿ, ಹಣ ಅನ್ನೋದು ಇಷ್ಟು ನೀಚತನಕ್ಕಿಳಿಸುತ್ತೆ ಅಂತಾ ಆವತ್ತೇ ಗೊತ್ತಾಗಿದ್ದು ನೋಡು. ಉಳಿದವ್ರು ಸಾಯ್ಲೋ.. ನಮ್ಮತ್ತೆಗೂ ಎಂಥ ರೋಗ. ಅವರೂ ಹಿಂಗಾ ಮಾಡೊದು? ದುಡ್ಡು ದುಗ್ಗಾಣಿ ಎಂದರೆ ಮನುಷ್ಯ ಯಾಕಿಂಗಾಡ್ತಾನೆ ಅಂತಾ ಈಗಲೂ ನಂಗೆ ಗೊತ್ತಾಗ್ತಿಲ್ಲ ಮಾರಾಯಾ’ ಎನ್ನುತ್ತಿದರೆ ಆಕೆ ಮಾತಾಡುವುದು ಕೇಳಿಸುತ್ತಿತ್ತೇನೋ. ಕೂತ ರಾಯರು ದುಸುಮುಸು ಮಾಡುತ್ತಿದ್ದರು. ಅ ಇದ್ದ ಒz ಬಟ್ಟೆಯಿಂದ ಒಮ್ಮೆ ಅವರ ಮುಖ ಒರೆಸಿ, ‘ಸುಮ್ನಿರು ನಿಂಗೆಂತಾ ಆಯ್ತು ಈಗ’ ಎಂದು ಮಗುವಿನಂತೆ ಗದರುತ್ತಿದ್ದರೆ, ಜೀವನದ ಆ ಗಳಿಗೆಗಳಿಗೆ ಬದುಕಬೇಕಾದ ಅವರ ಸಂಕಟಗಳೂ, ಇದೆಲ್ಲ ನುಂಗಿಯೂ ಅವರನ್ನು ನೋಡಿಕೊಳ್ಳುತ್ತಿರುವ ನಂದಿಯೂ, ಯಾರನ್ನು ನೋಡುವುದೋ ತಿಳಿಯದೆ ಚಹಾ ಕಪ್ಪು ಹಿಡಿದು ಸುಮ್ಮನೆ ಹೊರಗೆ ಬಂದು ಬಿಟ್ಟೆ. ಅದು ಅರಿವಾಗೋದು ಅವಳೊಬ್ಬಳಿಗೆ ಮಾತ್ರ.
ಕಾರಣ
ಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)


Wednesday, April 20, 2016

ಮನೆ ಮಹಡಿಯದಿತ್ತು..ಮನಸ್ಸು ಗೂಡಿನಷ್ಟೂ ಇರಲಿಲ್ಲ...

ಮಾತು, ನಡತೆ ಎಲ್ಲದರಲ್ಲೂ ಪರಕೀಯತೆ ಕಾಣಿಸಿಬಿಟ್ಟರೆ ಸಂಬಂಧ ಕಡಿದುಹೋಗಿದೆ ಎಂದೇ ಅರ್ಥ. ಹಸಿದಿದ್ದರೂ ಬದುಕು ಖುಷಿಯಾಗಿರಬಹುದು. ಮೈಗೆ ಒಂದೊತ್ತು ಊಟ ಇಕ್ಕದಿದ್ದರೂ ಪರವಾಗಿಲ್ಲ. ಮನಸ್ಸಿಗೆ ಹಿಂಸೆಯಾಗದಿದ್ದರೆ ವೃದ್ಧಾಪ್ಯ ಒಂದು ಸವಾಲೇ ಅಲ್ಲ. ಆದರೆ ಮಕ್ಕಳೇ ಸವಾಲಿನ ಮೂಲವಾದಾಗ? ಯಾಕೆ ಬದುಕಿದೆವು ಎನ್ನಿಸಿಬಿಡುತ್ತದೆ.

ನಮ್ಮ ಬದುಕಿನ ಪಾತಳಿಗೆ ತಮ್ಮದೇ ಕೊಡುಗೆ ನೀಡುವಲ್ಲಿ ಮೇಷ್ಟ್ರುಗಳ ಪಾತ್ರ ದೊಡ್ಡದು. ಆಗೆಲ್ಲ ಸಿಡುಕು, ಅರೆಬರೆ ಬೈಗುಳುಗಳ ಅವರ ಮಾತುಗಳೂ ನಮಗೆ ರೇಜಿಗೆ ಹುಟ್ಟಿಸುತ್ತಿದ್ದವಾದರೂ, ಇವತ್ತಿಗೆ ಅದೇ ಸರಿ ಎನ್ನಿಸುತ್ತಿರುವುದು ವಾಸ್ತವ. ತಡವಾಗಿ ಬಂದಾಗ ಹೊರಗೆ ನಿಲ್ಲಿಸಿದರೂ, ನಂತರ ಮೈದಡುವಿ ಚೆಂದವಾಗಿ ಓದುವುದರ ಜೊತೆ, ಸಮಯ ಪಾಲನೆಯ ಪಾಠ ಹೇಳಿ ನಮ್ಮನ್ನು ಸಜ್ಜುಗೊಳಿಸುತ್ತಿದ್ದ ರೀತಿ ಅದ್ಭುತ. ಅದು ನನಗಿವತ್ತಿಗೂ ದೊಡ್ಡ ಬಳುವಳಿ. ಮನೆಪಾಠ ಮಾಡದಿದ್ದಾಗ, ಹುಡುಗ ದುಡಿತಕ್ಕೆ ನಿಂತಿದ್ದಾನೆಂದು ಕೇಳದೆಯೂ ಕೊಡುತ್ತಿದ್ದ ಕನ್ಷಿಶನ್ನು, ಹರಕು ಚೆಡ್ಡಿಯಲ್ಲಿ ಬರುತ್ತಿದ್ದವರಿಗೆ ಪೋಸ್ಟ್ ಆಫೀಸೆನ್ನುವ ಅನ್ವರ್ಥ ತೊಲಗಿಸಲು ಚೆಡ್ಡಿ ಹಾಕಿಸುತ್ತಿದ್ದವರು, ಹೀಗೆ ಬದುಕಿನ ಅಲೆಗಳಲ್ಲಿ ಹೆದ್ದಾರೆಯಾಗಿ ನಮ್ಮನ್ನು ದೂಡಿಕೊಂಡು ಬಂದ ಮೇಷ್ಟ್ರುಗಳ ಸಂಖ್ಯೆ ಅಗಾಧ.
ಮೊನ್ನೆ ಮೊನ್ನೆವರೆಗೂ ಮರೆತಿದ್ದ ನನ್ನ ಗಣಿಯಿಂದ ಮೇಲೆದ್ದವರು ಸಾಬು ಮಾಸ್ತರರು. ಅವರೇನೂ ಸಾಬರಾಗಿರಲಿಲ್ಲ. ಸುಭಾಷ್ ಮಾಸ್ತರರು ಊರವರ ಬಾಯಲ್ಲಿ ಸಾಬು ಆಗಿದ್ದರು. ಗಣಿತದವರು ಅಧಿಕ-ಉಣಾ, ವಿeನದವರು ಪ್ರಯೋಗದ ಮಾಸ್ತರರು, ಭಾಷೆ ಕಲಿಸುವವರು ಕನ್ನಡಾ ಟೀಚರು, ಗೈರಾದವರನ್ನು ಗಂಭೀರವಾಗಿ ಹುಡುಕುತ್ತಿದ್ದ ಹಾಜರಿ ಬಾಯಿ ಹೀಗೆ ಹಲವು ಉಪನಾಮದಲ್ಲಿ ನನ್ನ ನೆನಪಿಗೆ ಉಳಿದು ಹೋದವರ ಹಿಂಡೆ ಇದೆ.
ಆವತ್ತಿನಿಂದ ಇವತ್ತಿನವರೆಗೂ ಒಂದು ಸ್ವಂತದ ಮನೆಯಿರಬೇಕು ಎಂದು ಬಯಸುವ ಪ್ರತಿ ಜೀವಿಯ ಕನಸಿನಂತೆ ಆಗಿನ ಕಾಲಕ್ಕೆ ತುಸು ಹೊರಗೆ ಎನ್ನಿಸುವ ಏರಿಯಾ ಆದರೂ ಪರವಾಗಿಲ್ಲ ಎನ್ನುವ ಪರಿಸರದಲ್ಲಿ ಸಾಕಷ್ಟು ಅನುಕೂಲವಾದ ಮನೆಯನ್ನು ಕಟ್ಟಿಸಿಕೊಂಡ ಸಾಬು ಮಾಸ್ತರ್ ಇಬ್ಬರ ಮಕ್ಕಳನ್ನೂ ಓದಿಸಿ, ಪೋಷಿಸಿ, ಕೈಗೊಂದು ಗಾಡಿಯನ್ನೂ ಕೊಡುವಷ್ಟು ಪೊರೆದಿದ್ದಾರೆ. ಅವರ ಆಸೆ, ಆಸಕ್ತಿಯಂತೆ ಮಕ್ಕಳೂ ಕೆಲಸಕ್ಕೆ ಸೇರಿದವು. ಇಂಜಿನಿಯರಿಂಗ್, ಮಾರ್ಕೆಟಿಂಗು ಅಂತೆಲ್ಲ ವೈನಾಗಿ ಓದಿಕೊಂಡು ಕಾಲೂರಿದ್ದಾರೆ.
ಮೊದಲ ಮಗನಿಗೆ ಮದುವೆಯಾಯಿತು. ಸೊಸೆ ಬಂದಳು. ಸಾಬು ಮಾಸ್ತರ್ ಕುಟುಂಬದಲ್ಲಿ ಮೊದಲ ಬಾರಿಗೆ ಒಂದು ಕೋಣೆಯ ಬಾಗಿಲಿಕ್ಕಿಕೊಂಡಿತ್ತು. ಸಹಜವೂ ಬಿಡಿ. ಅಲ್ಲಿವರೆಗೂ ಇದ್ದವರಲ್ಲಿ ಯಾರಿಗೂ ಯಾವ ಪ್ರೈವೇಸಿ, ಪ್ರತ್ಯೇಕವಾಗಿ ಮಾತಾಡಿಕೊಳ್ಳಬೇಕಾದ ಅವಶ್ಯಕತೆ ಎರಡೂ ಇರಲಿಲ್ಲ. ಹಾಗಾಗಿ ಅಪ್ಪ-ಅಮ್ಮನ ಜೊತೆಯಲ್ಲಿ ಯಾವ ಸಮಸ್ಯೆ, ಏನೇ ಕೆಲಸ ಇದ್ದರೂ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುತ್ತಾ, ಬೈದಾಡಿಕೊಂಡರೂ ಅಣ್ಣ ತಮ್ಮ ಮುನಿಸಿಕೊಂಡರೂ ಮರುದಿನಕ್ಕೆ ‘ನನ್ನನ್ನೂ ಅಲ್ಲಿವರೆಗೆ ಕಾರನ ಡ್ರಾಪ್ ಮಾಡು..’ ಎನ್ನುವಲ್ಲಿ ಎಲ್ಲ ಭಿನ್ನಾಭಿಪ್ರಾಯಗಳೂ ಕೊನೆಯಾಗುತ್ತಿದ್ದವು. ಆದರೆ ಸಾಬು ಮಾಸ್ತರರ ಕುಟುಂಬದಲ್ಲಿ ಅವರ ಸುಖದ ದಿನಗಳು ಕೊನೆಯಾಗತೊಡಗಿದ್ದವು.
ಮೊದಲ ಸೊಸೆ ಬರುತ್ತಿದ್ದಂತೆ ಪ್ರತ್ಯೇಕ ತಿರುಗಾಟಗಳು, ಮನೆಯಲ್ಲಿನ ಪ್ರತಿ ಮಾತು ವಿಭಿನ್ನ ದಿಸೆಯತ್ತ ತಿರುಗತೊಡಗಿದ್ದವು. ಕೊನೆಯವನು ಮತ್ತು ಅಪ್ಪ-ಅಮ್ಮ ಒಂದೆಡೆಯಾಗಿ ಹೋದರು. ಸೊಸೆ, ಮಗ ಇಬ್ಬರೂ ಅವರವರ ಪಾಡಿಗೆ ಹೊರಟು ನಿಲ್ಲತೊಡಗಿದ್ದರು. ಇದರಲ್ಲಿ ಹೊಸತೇನೂ ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಯಾವ ಜಗಳ, ಮುನಿಸು ಯಾವ ಸಕಾರಣವೂ ಇಲ್ಲದೇ ಆ ಮನೆಯಲ್ಲಿ ಒಂದು ಭರಿಸಲಾಗದ ಮುಲಾಜಿನ ನಿಶಬ್ದ ರಾಜ್ಯವಾಳತೊಡಗಿತು. ಮಾಸ್ತರು, ಹೆಂಡತಿ ಹಾಗೂ ಇತರರು ಯೋಚಿಸಿ ಮಾತಾಡತೊಡಗಿದರು. ಸೊಸೆಯ ಆಗಮನದೊಂದಿಗೆ ಪ್ರತಿ ಹಂತದಲ್ಲೂ ಮಗ ಯೋಚಿಸುವ ರೀತಿ ಬದಲಾಗಿದ್ದರಿಂದ ಅನಿವಾರ್ಯವಾಗಿ ಅನಿರೀಕ್ಷಿತ ಮೌನ ಕವಿಯತೊಡಗಿತ್ತು. ಅದು ಬೆಳೆಯುತ್ತಾ ಕೊನೆಗೆ, ಇದ್ದ ಮನೆಯ ಮೇಲೆ ಇನ್ನೊಂದು ಮಹಡಿ ಕಟ್ಟಿಸಿಕೊಂಡು ಹಿರಿಮಗ ಕುಟುಂಬ ಒಡೆದಿದ್ದ. ಸಕಾರಣವಿರಲಿಲ್ಲ ಸಂಬಂಧಗಳು ತೆಳುವಾಗಿದ್ದವು ಅಷ್ಟೇ.
ಆಕಸ್ಮಿಕವಾಗಿ ನಾನು ಮಾಸ್ತರರ ಕುಟುಂಬವನ್ನು ಭೇಟಿಯಾದಾಗ ಕಾಲದ ಪ್ರಹಾರಕ್ಕೆ ಸಿಕ್ಕು ಮನುಷ್ಯ ಎಷ್ಟು ಹುಲುವಾಗಿಬಿಡುತ್ತಾನೆ ಎನ್ನುವುದಕ್ಕೆ ಜೀವಂತ ಉದಾಹರಣೆಯಂತಿದ್ದರು. ಕೃಶ ದೇಹ.. ಅದಕ್ಕೂ ಮೊದಲೇ ನೆರೆತಂತಿದ್ದ ಬದುಕು ದಂಪತಿಯನ್ನು ಹೈರಾಣಾಗಿಸಿದ್ದು ಸ್ಪಷ್ಟ. ಕಾರಣ ಆ ಕಾಲಕ್ಕೇನೆ ಶಾಲೆಯನ್ನು ಕೆಂಗಣ್ಣ ನಿಯಂತ್ರಿಸುತ್ತಿದ್ದ ಸಾಬು ಮಾಸ್ತರರು ಇವತ್ತು ಸರಿಯಾಗಿ ನಿಂತು ಮಾತಾಡಲೂ ಉಸಿರೆಳೆಯುತ್ತಿದ್ದರು. ಅವರ ಪತ್ನಿ ಒಂದಷ್ಟು ಗಟ್ಟಿ ಇಲ್ಲದಿದ್ದಲ್ಲಿ ಯಾವತ್ತೊ ಕಥೆ ಕೊನೆಯಾಗುತ್ತಿತ್ತಾ? ‘ಮತ್ತೊಮ್ಮೆ ಮನೆಗೆ ಬರುತ್ತೇನೆ’ ಎಂದು ಆವತ್ತು ಒಂದಷ್ಟು ಹೊತ್ತು ಅವರೊಡನೆ ಕಳೆದು ಮೇಲಕ್ಕೆದ್ದಿದ್ದಾ. ನಂತರದ ಅವಧಿಯಲ್ಲಿ ಅವರ ಮನೆಕಡೆ ಹೋಗಲಾಗಿರಲಿಲ್ಲ. ಅದ್ಯಾಕೋ ಕೆಲಸದ ಮೇಲೆ ಅತ್ತ ಹೋದವನು ವಿಳಾಸ ಹುಡುಕಿಕೊಂಡು ಬಾಗಿಲು ತಟ್ಟಿದ್ದಾ.
ನನಗವತ್ತು ಮನುಷ್ಯನೊಬ್ಬನಿಗೆ ಇಂಥ ಬಾಳು ಬರದೇ ಇರಲಿ ಎನ್ನಿಸಿದ್ದು ಹೌದು ಮತ್ತು ಹೀಗಾಗುವುದೇ ಆದಲ್ಲಿ ನನ್ನ ಬದುಕು ಅದಕ್ಕೂ ಮೊದಲೇ ಮುಗಿದು ಹೋಗಲಿ ಎಂದನ್ನಿಸಿದ್ದೂ ದಿಟ. ಹಾಲ್‌ನ ಕಸ ಹೊಡೆಯದೇ ಯಾವ ಕಾಲವಾಗಿತ್ತೋ? ಅದರ ಮಧ್ಯದ ಜಾಗದಲ್ಲಿ ಮಾತ್ರ ಓಡಾಟದ ಕುರುಹುಗಳಿದ್ದವು. ಪಕ್ಕದ ಧೂಳು ಹಿಡಿದ ಟೀಪಾಯ್ ಮೇಲೆ ಪೇರಿಸಿಟ್ಟ ಊಟದ ತಟ್ಟೆಗಳಿಂದ ಹಳಸಿ ಕರೆಗಟ್ಟಿದ್ದ ವಾಸನೆ. ಅವು ಬಳಸಿ ಬೀಸಾಡುವ ಪೇಪರ್ ತಟ್ಟೆಗಳು. ಮನೆ ಎನ್ನುವುದು ಅಕ್ಷರಶಃ ಕೊಟ್ಟಿಗೆಯಂತಾಗಿತ್ತು. ಬಾಗಿಲ ಶಬ್ದಕ್ಕೆ ನಿಧಾನಕ್ಕೆ ಮಾಸ್ತರ್ ಪತ್ನಿ ಬಂದರೆ ಕೃಷಕಾಯದ ಆತ್ಮವೊಂದು ಸುಮ್ಮನೆ ಉಸಿರುಳಿಸಿಕೊಂಡು ಚಲಿಸುತ್ತಿದೆ ಎನ್ನಿಸುತ್ತಿತ್ತು. ಆಗಿದ್ದಿಷ್ಟು.
ಕಿರಿಮಗ ಮದುವೆಯಾಗಿ ಕೆಲವೇ ಸಮಯದಲ್ಲಿ, ಅಣ್ಣ ಬೇರೆ ಮನೆ ಮಾಡಿಕೊಂಡು ಹಾಯಾಗಿದ್ದಾನೆ. ನನಗೊಬ್ಬನಿಗೇ ಯಾಕೆ ಅಪ್ಪ ಅಮ್ಮನ ಜವಾಬ್ದಾರಿ. ನಾನೂ ಬೇರೆಯಾಗಿರುತ್ತೇನೆ ಎಂಬುದವನ ತರ್ಕ. ಹಾಗಂತ ಮನೆ ಬಿಟ್ಟು ಹೋಗುವ ಮೀಟರು ಬೇಕಲ್ಲ. ನಗರದಲ್ಲಿ ಮನೆ ಮಾಡುವುದೇನು ಹುಡುಗಾಟವಾ? ಈ ಮೊದಲೇ ಅಣ್ಣ ಮಾಡಿದ ಯೋಜನೆಯನ್ನು ತಮ್ಮನೂ ಪ್ರಯೋಗಿಸಿದ. ಮನೆಗೆ ಎರಡನೆ ಮಹಡಿ ಕಟ್ಟಿಸಿದ. ಕಾರಣ ಇಲ್ಲಿಂದ ಹೋದರೆ ಆಸ್ತಿಯ ಮೇಲಿನ ಹಿಡಿತ ಕೈತಪ್ಪುತ್ತದೆ. ಆ ಅನಾಹುತ ಯಾರಿಗೆ ಬೇಕು? ಮಹಡಿಯ ಮೇಲೊಂದು ಮಹಡಿ ಎದ್ದು ನಿಂತಿತ್ತು. ಇಬ್ಬರೂ ಅವರವರ ಪಾಡಿಗೆ ಮಹಡಿ ಸೇರಿಕೊಂಡು ಬಿಟ್ಟರು. ಕೆಳಗೆ ಉಳಿದವರು ಇಬ್ಬರೇ. ಮಾಸ್ತರರಂತೂ ಹಾಸಿಗೆಗೆ ಬಿದ್ದಿದ್ದರಲ್ಲ. ಪರಿಸ್ಥಿತಿ ಗಂಭೀರವಾಗಿತ್ತು. ಮಾತು ನಿಂತು ಹೋಗಿದೆ. ದೇಹ ಸ್ವಾಧಿನಕ್ಕೆ ಬರುವ ಸಾಧ್ಯತೆ ಕಡಿಮೆ. ಆದರೆ ಬದುಕು ಸಾಗಿಸಲೇಬೇಕಲ್ಲ, ಮಕ್ಕಳು ತಮ್ಮ ಆಟಕ್ಕೆ ಮಾಡಿರುವ ವ್ಯವಸ್ಥೆ ನೋಡಿ!
ವಯಸ್ಸಾಗಿದೆ ಏನೂ ಮಾಡಲಾಗಲ್ಲ. ಇರುವಷ್ಟು ದಿನ ಊಟಕ್ಕಿಡಬೇಕಲ್ಲ. ವಾರಕ್ಕೊಬ್ಬರಂತೆ ಮೂರು ಹೊತ್ತು ಊಟ, ತಿಂಡಿ ತಂದಿಟ್ಟು ಹೋಗುತ್ತಾರೆ. ತಟ್ಟೆ ಇಟ್ಟರೆ ಮತ್ತೆ ಬರಬೇಕಾಗುತ್ತದೆ ಅದಕ್ಕೆ ಪೇಪರ್ ಪ್ಲೇಟಿನಲ್ಲಿ ಆಹಾರ ಬರುತ್ತಿದೆ. ಅದೂ ಅವರ ಸಮಯಕ್ಕನುಸಾರ. ಬೆಳಗಿನ ಕಾಫಿ, ಬೇಕೆಂದಾಗ ಬಿಸಿನೀರು ಯಾವೆಂದರೆ ಯಾವ ಉಪಚಾರಕ್ಕೂ ದಂಪತಿ ಪಕ್ಕಾಗುತ್ತಿಲ್ಲ. ಮಾಡಿಕೊಳ್ಳಲೂ ಏನೂ ಇಲ್ಲ. ಕಾರಣ ಮೊದಲು ಮನೆ ಮಾಡುವಾಗ ಅಣ್ಣ ಒಂದಷ್ಟು ಸಾಮಾನು ಸಾಗಿಸಿಕೊಂಡು ಬಿಟ್ಟಿದ್ದನಲ್ಲ. ತನ್ನ ಪಾಲು ಎಂದು ತಮ್ಮನೂ ಇದ್ದಬದ್ದ ಸಾಮಾನು ಸಹಿತ ಸಿಲಿಂಡರ್ ಕೂಡ ಹೊತ್ತೊಯ್ದಿದ್ದಾನೆ. ಸರಿಯಾಗಿ ಚೊಂಬು ನೀರು ಹಿಡಿಯಲಾಗದ ವೃದ್ಧರಿಬ್ಬರು ಇನ್ನೆಲ್ಲಿಂದ ಹೊಸ ಸಿಲೆಂಡರು ತಂದುಕೊಂಡಾರು? ಉರಿಯದ ಬಲ್ಬು, ಅಡಿಸಲಾಗದ ಕಿಟಕಿ ಬಾಗಿಲುಗಳು, ನಾಪತ್ತೆಯಾಗಿರುವ ಪರದೆಗಳು ಯಾಕೊ ಮಾತಾಡಲೇ ಆಗಲಿಲ್ಲ. ಮಾಸ್ತರರಿಗೆ ಎಲ್ಲ ಕೇಳಿಸುತ್ತೇ ಆದರೆ ಏನೂ ಪ್ರತಿಕ್ರಿಯೆ ನೀಡಲಾರರು. ಬಣ್ಣಗೆಟ್ಟಿದ್ದ ಪ್ಲಾಸ್ಟಿಕ್ ಸ್ಟೂಲಿನ ಅರ್ಧ ಮಡಚಿದ ಕಾಲು ಸರಿ ಮಾಡಿಕೊಂಡು ಅವರೆದುರಿಗೆ ಕೂತಿದ್ದಾ. ಸುಮ್ಮನೆ ಪಿಳಿಪಿಳಿ ಮಾಡುತ್ತಿದ್ದರು. ಬಾಗಿಲ ಬಳಿಯಲ್ಲಿ ಸೋತು ನಿಂತಿದ್ದ ಅಮ್ಮನ ಮುಖ ನೋಡುವ ಚೈತನ್ಯ ನನಗುಳಿದಿರಲಿಲ್ಲ.
 ‘ಬ್ಯಾರೆ ಇದ್ರೂ ಪರವಾಗಿರಲಿಲ್ಲ. ಒಂಥರಾ ಹಂಗಿಗೆ ಬಿದ್ದಂಗೆ ಆಗಿದಿವಲ್ಲ ಅದು ಹಸಿವಿನಗಿಂತಲೂ ಜೀವಕ್ಕ ದೊಡ್ಡ ಸಂಕಟ ಕೊಡ್ತದ. ಪುಣ್ಯಕ್ಕ ಮಾಸ್ತರರು ಮನಿ ಕಟ್ಟಿಕೊಂಡಿದ್ರು. ಇಲ್ಲಂದರ ರಸ್ತೆ ಮ್ಯಾಲೇ ಇರಬೇಕಾಗುತಿತ್ತು. ಜೀವ ಹೋಗಬೇಕೂ ಅಂದರ ಅದೂ ಆಗ್ತಿಲ್ಲ ಮಾರಾಯ. ಹಿಂಗೆ ಅನುಭವಿಸಬೇಕಾಗ್ತದ ಅಂತ ಗೊತ್ತಿದ್ದರ...’ ಅಮ್ಮ ಮುಂದಕ್ಕೆ ಮಾತಾಡಲಾರದೆ ಬಾಯಿ ಹಿಡಿದು ಚೌಕಟ್ಟಿಗೆ ಆತು ನಿಂತರು. ಮಾಸ್ತರರು ಒಂಚೂರು ಅಡಿದರು. ಕಣ್ಣು ಕೂಡ ಕಷ್ಟದಲ್ಲಿ ಒದ್ದಾಯಾಗುತ್ತಿತ್ತೇನೋ. ಬದುಕಿನ ರಸವೇ ಹೀರಲಾಗಿತ್ತು. ಹೊರಗಿಟ್ಟ ತಟ್ಟೆಗಳ ಹಳಸಿದ ವಾಸನೆಗಿಂತಲೂ ಮಾಸ್ತರರ ಹಾಸಿಗೆಯ ಮೇಲಿನ ವಿಸರ್ಜನೆ, ಅಲ್ಲಿನ ವಾಸನೆ ಎಷ್ಟೊ ಸಹ್ಯ ಎನ್ನಿಸಿತ್ತು. ಅದ್ಯಾಕೋ ನಾನು ಸಣ್ಣವನಿದ್ದಾಗಿಂದಲೂ ಆಯಿ ಹೇಳುತ್ತಿದ್ದ ಮಾತುಗಳು ನೆನಪಾದವು.‘ಏನೂ ಇಲ್ಲದಿದ್ರೂ ನಡೀತದೆ. ಸ್ವಂತದ್ದಾಂದು ಮನೆ ಇರ್ಲೇಬೇಕು ನೋಡು’.
ಮಾಸ್ತರರು ಮನೆಯನ್ನಾದರೂ ಮಾಡಿಕೊಂಡಿದ್ದರು. ಅದೂ ಇಲ್ಲದಿದ್ದರೆ? ಒಳಬಾಗಿಲಲ್ಲಿದ್ದ ಅಮ್ಮನ ಮುಖ ನೋಡಲಾಗಲಿಲ್ಲ. ಅಸಹಾಯಕತನ, ದೈನೇಸಿಯಾದ ಪರಿಸ್ಥಿತಿ, ಬದಲಿಸಲಾಗದ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾದ ಸಂಕಟದ ತಲ್ಲಣಗಳು, ಏನಾಗಿ ಹೋಯಿತಲ್ಲ ಎನ್ನುವ ಹಳಹಳಿಕೆಯ ಮಧ್ಯೆ ಕೊನೆ ನಿರ್ಧರಿತವಾಗಿದ್ದಾಗ್ಯೂ ಜೀವ ನಿಲ್ಲಿಸಲೆತ್ನಿಸುತ್ತಿದ್ದ ಅಮ್ಮನ ಮುಖ ಕತ್ತಲೆಯಲ್ಲೂ ನಿರುಕಿಸುವ ಧೈರ್ಯವಾಗಲಿಲ್ಲ ನನಗೆ. ಕಾಣಲಾದರೂ ಏನಿತ್ತಲ್ಲಿ? ಛೇ...
 ಕಾರಣ ಆವಳು ಎಂದರೆ...

Friday, April 15, 2016

ಪಿಂಡ...!
ಹಾವೇರಿ ದಾವಣಗೇರಿಯನ್ನು ಇಬ್ಭಾಗ ಮಾಡಲೆಂದೇ ತುಂಗಭದ್ರೆ ಹರಿಯುತ್ತಿದ್ದರೆ, ರಾಘವೇಂದ್ರ ಮಠದಲ್ಲಿ ಶೇಖರ ಮತ್ತವನ ಸಹೋದರರು ನಾಡಿದ್ದು ಹದಿಮೂರನೆ ದಿನದ ತಿಥಿ ಊಟಕ್ಕೆ ಎನೇನು ಮಾಡಿಸ್ಬೇಕು ಎನ್ನುವ ಗಂಭೀರವಾದ ಚರ್ಚೆಗೆ ತೊಡಗಿದ್ದರು. "...ಕೇಸರಿ ಭಾತ್, ಕಾಳಪಲ್ಯೆ ಮಾಡಿದರ ಇಪ್ಪತ್ತೆರಡೆ ರೂ. ಜಾಸ್ತಿ..."ಎಂದು ಮ್ಯಾನೇಜರ್ ಕುಲ್ಕರಣಿ, ಇನ್ನೂರು ಊಟಕ್ಕೆ ಹತ್ತು ರೂಪಾಯಿ ಜಾಸ್ತಿ ಆದರೂ, ಮಠಕ್ಕೆ ಬರುವ ಆಮದನಿ ಸಾವಿರದಷ್ಟು ಆಚೀಚೆ ಆಗುತ್ತವೆ ಎಂದು ಲೆಕ್ಕ ಹಾಕುತ್ತಾ ಪುಸಲಾಯಿಸುತ್ತಿದ್ದರು. ಆದರೆ ಶೇಖರನ ಲೆಕ್ಕಾಚಾರವೇ ಬೇರೆ.
ಒಟ್ಟಾರೆ ನೂರು ಚಿಲ್ಲರ ಮಂದಿ ಮತ್ತು ಆಫೀಸಿನವರೂ ಸೇರಿದರೆ ಎರಡನೂರು ಜನ ಆಗಬಹುದು. ಜೊತೆಗೆ ಊರಕೇರಿಯಿಂದ, ಸಂಬಂಧಿಕರು, ನೆಂಟರಿಷ್ಟರು, ದಿನಕ್ಕೆ ಮೊದಲೆ ಬರುವವರು ಸೇರಿದರೆ ಮನೆಯಲ್ಲಿ ಹತ್ತುಸಾವಿರ ಖರ್ಚಾಗುತ್ತದೆ. ಅದಕ್ಕೆಲ್ಲಾ, 
"ಇಷ್ಟು ಖರ್ಚ ಆತು, ಒಟ್ಟೂ ಹದಿಮೂರು ದಿನಕ್ಕ ಇಷ್ಟ ಕೊಡ್ರಿ..."ಎಂದು ಸಹೋದರರನ್ನು ಕೇಳುವುದಾದರೂ ಹೇಗೆ..? ಅಣ್ಣತಮ್ಮಂದಿರು ದಿನದ ಖರ್ಚು ಹಂಚಿಕೊಳ್ಳೋಣ ಎಂದು ಹೇಳಿದ್ದರೂ ಈ ಎಲ್ಲಾ ಇತರೆ ಖರ್ಚು ಕೊಡುವವರು ಯಾರು..? ಅದಕಾಗೇ ಶೇಖರ ಆ ಲೆಕ್ಕವನ್ನೂ ಸರಿತೂಗಿಸುವ ನಿಟ್ಟಿನಲ್ಲಿ ಕುಲ್ಕರಣಿಗೆ ಲೆಕ್ಕದ ಚೀಟಿ ಹೆಂಗೆ ಬರೀಬೇಕು ಎಂದು ಮೊದಲೇ ಹೇಳಿಟ್ಟಿದ್ದ. ಅದರಲ್ಲಿ ಈ ಎಲ್ಲಾ ಖರ್ಚೂ ಸೇರಿಸಿದರೆ ಒಂದಿಷ್ಟು ತನಗೂ ಹಗುರಾಗುತ್ತದೆ. ಹಾಗಾಗೇ ಅದೇ ಚೀಟಿ ತೋರಿಸಿ ಇತರ ದಿನಗಳ ಖರ್ಚೂ ಹೊಂದಿಸಿಕೊಳ್ಳುವುದು ಅವನ ದೂರಾಲೋಚನೆ. ಅಷ್ಟಕ್ಕೂ ಅವನಿಗೂ ತನ್ನದೇ ಲೆಕ್ಕಾಚಾರಗಳಿದ್ದವು ಮತ್ತದು ಸುಳ್ಳೂ ಆಗಿರಲಿಲ್ಲ. ಅವನಿಗೇನೂ ಖರ್ಚು ಮಾಡಬಾರದು, ಯಾಕೆ ವೈದಿಕದ ಖರ್ಚು ಮಾಡ್ಬೇಕು..? ಎಂದೇನೂ ಇರಲಿಲ್ಲ. ಪದ್ಧತಿ ಪ್ರಕಾರ ಆಗಬೇಕೆನ್ನುವುದೂ ಸರಿನೇ. ಆದರೆ ಪೂರ್ತಿ ಇತ್ತ ಬೆಂಗಳೂರೂ ಅತ್ತ ಬೆಳಗಾಂವಿಗೆ ಮಧ್ಯದ ಹರಿಹರದ ಬಾತಿ ಗುಡ್ಡದ ಕೆಳಗಿದ್ದ ಶೇಖರನ ಮನೆಗೆ ಹೆಣ್ಣು ಮಕ್ಕಳು ಬಂದು ಹೋಗುವ ಅನುಕೂಲತೆಯಿಂದಾಗಿ ಇದೇ ತವರು ಮನೆಯಾಗಿಬಿಟ್ಟಿತ್ತು. ಉಳಿದಿಬ್ಬರ ಸಹೋದರರ ಮನೆಗಳಿಗೆ ಹೋಗುವುದು, ಅಲ್ಲೆಲ್ಲ ಜೈಲಿನಲ್ಲಿದ್ದಂತೆ ಇರುವುದು ಉಳಿದವರಿಗೂ ಅನಾನುಕೂಲ. ಜೊತೆಗೆ ಮೊದಲಿನಿಂದಲೂ ಅಪ್ಪ ಅಮ್ಮ ಆದಿಯಾಗಿ ಸಂಸಾರ ಹೆಚ್ಚು ಕಡಿಮೆ ಬೆಳೆದದ್ದು ಇಲ್ಲಿಯೇ.
ಅಲ್ಲದೆ ಹವಾ ನೀರು ಕೂಡಾ ಭೇಷ ಎನ್ನಿಸಿ, ನಿವೃತ್ತಿ ಆದ ಮೇಲೆ ನಾರಾಯಣಾಚಾರ್ಯರು ದೊಡ್ಡ ಮಗನ ಮನೆ ಬಿಟ್ಟು ಇಲ್ಲೆ ಇರ್ತೆನಿ ಅಂದಿದ್ದರು. ಅಲ್ಲದೆ ತಮ್ಮ ಕೊನೆಯ ಒಂದೆರಡು ದಶಕಗಳ ಸರ್ವೀಸಿಗಾಗಿ ಅಲ್ಲಿಯೇ ಹತ್ತಿರದ ಕರೂರಿನಲ್ಲಿದ್ದರು ಎನ್ನುವುದೂ ಮೋಹ ಅವರಿಗೆ. ಹಾಗಾಗೇ ನಿವೃತ್ತಿ ಜೀವನ ನಡುವಿನ ಮಗ ಶೇಖರನೊಟ್ಟಿಗೆ ಎಂದಾಗಿಬಿಟ್ಟಿತ್ತು.
ಆಚಾರ್ಯರು ಮನೆ ಕಟ್ಟಿಸುವುದಕ್ಕೆಂದು ಬಾತಿ ಹತ್ತಿರ ಸಾಕಷ್ಟು ದೊಡ್ಡ ಜಾಗವನ್ನೇ ಕೊಂಡಿದ್ದರು. ಸಾಕಷ್ಟು ಸುದ್ದಿಗೆ ಸಿಕ್ಕಿದ್ದ ಹಿರಿಯ ಬ್ರಾಹ್ಮಣ. ಮನೆ ಮಠಗಳ ವಾಜ್ಯದಲ್ಲೂ, ಸಮಾಜದಲ್ಲಿ ಮುಖ್ಯಸ್ಥನ ಪಾತ್ರವನ್ನೂ ವಹಿಸುವುದೂ ಇತ್ತು. ಆದರೆ ಅದ್ಯಾಕೊ ಶೇಖರನೂ ಸೇರಿದಂತೆ ಅವರ ಮಕ್ಕಳ್ಯಾರೂ ಅವರಂತೆ ಗಡಸಾಗಿ ಬೆಳೆಯಲಿಲ್ಲ ಎಂದು ಕರೂರಿನಿಂದ, ಚಿಕ್ಕಬಾತಿವರೆಗೂ ಜನ ಮಾತಾಡಿಕೊಳ್ಳುತ್ತಿದ್ದರು. 
"ಹೆ..ಹೇ.. ಆಚಾರ್ರ ಮಕ್ಕಳು ಯಾಕೋ ಪುಕ್ಕಲಾದುವು ಹೇಳ್ರಿ...ಏನೆಂದರೂ ಆಚಾರ್ರ ಹಂಗ ಜಿಗಟ ಬರಲಿಲ್ಲ..." ಎನ್ನುವುದು ಸಹಜವಾಗಿತ್ತು. 
ಅವರು ಬಾತಿಗುಡ್ಡದ ಮನೆಗೆ ಬಂದಾಗಿನಿಂದಲೂ ವಾರದಲ್ಲಿ ಒಂದೆರಡು ಸಲವಾದರೂ ಬಂದು ಅವರ ಯೋಗ ಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದ, ಕರೂರಿನ ಹತ್ತಿರದ ಬೋಗಿಬೈಲಿನ ಚಂದ್ರು ವಯಸ್ಸಿನಲ್ಲಿ ಚಿಕ್ಕವನಾದರೂ, ಒಂದರ್ಥದಲ್ಲಿ ಕೊನೆಕೊನೆಗೆ ಮನೆ ಮಕ್ಕಳಿಗಿಂತಲೂ ಹೆಚ್ಚೆ ಅಚಾರ್ರ ಸೇವೆಗೆ ನಿಂತಿದ್ದ. ಅದಕ್ಕಾಗೇ ಚಂದ್ರುಗೆ ಯಾವಾಗಲೂ ಮನದಲ್ಲೇ ಕೈ ಮುಗಿಯುತ್ತಿದ್ದ ಶೇಖರ. ಕಾರಣ ತೀರ ಅಗತ್ಯಕ್ಕೆ ಮನೆಯ ಕೆಲಸಕ್ಕೆ ಕರೆದಾಗೆಲ್ಲ ಬಂದು ಹೆಗಲು ಕೊಡುತ್ತಿದ್ದವನು ಅವನೇ ಆಗಿದ್ದ.
ಇದೆಲ್ಲಾ ಹಿನ್ನೆಲೆಯಲ್ಲಿ ಮನೆಯ ಹತ್ತಿರವೇ ಇದ್ದ ಕರೂರಿನಿಂದ, ಹರಿಹರದ ಬಾತಿಯ ಮನೆಗೆ ಅಚಾರ್ರು ಬಂದು ಉಳಿದ ಮೇಲೆ ಆಗೀಗೆಲ್ಲಾ ಕಾಯಿಲೆ ಕಸಾಲೆ ಆದಾಗ ಬರುತ್ತಿದ್ದ ಜನವೋ ಜನ. ಮೊದಲೇ ಸಮಾಜದಲ್ಲಿ ಗುರುತಿಸಿಕೊಂಡಿದ್ದವರು. ಆಗೆಲ್ಲಾ ಅದರದ್ದೇ ಆದ ಖರ್ಚು ಶೇಖರನಿಗೆ ಇದ್ದೆ ಇರುತ್ತಿತ್ತು. ಮಕ್ಕಳು ಮರಿಗಳು ಉಣ್ಣುವುದಕ್ಕೆ ಶೇಖರನಿಗೆ ಯಾವ ಅಳಕೂ ಇರದಿದ್ದರೂ ಅಷ್ಟಕಷ್ಟೆ ಎನ್ನುವ ದುಬಾರಿಯ ದಿನದಲ್ಲಿ ಅವನಿಗೆ ಒಳಗೊಳಗೆ ಅಳುಕಾಗುತ್ತಿತ್ತು. 
ಇನ್ನು ಮನೆಯ ಅಕ್ಕತಂಗಿಯರಿಗೂ ತಾನೇ ಮಾಡಬೇಕು. ಯಾಕೆಂದರೆ ಬೆಂಗಳೂರಿನಲ್ಲಿರೋ ದೊಡ್ಡಣ್ಣನ ಕಡಿಗೂ, ಬೆಳಗಾಂವಿನ ಚಿಕ್ಕವನ ಕಡಿಗೂ ಹೋಗುವುದು ಅಷ್ಟಕ್ಕಷ್ಟೆ ಆಗಿದ್ದರಿಂದ ಎಲ್ಲರ ಠಿಕಾಣಿ ಇಲ್ಲೇ ಆಗುತ್ತಿತ್ತು. 
ಹೀಗಾಗಿ ವರ್ಷದುದ್ದಕ್ಕೂ ನಡೆಯುವ ಮನೆ ಮಠದ ಖರ್ಚು ಇರುತ್ತದೆಂದು ಉಳಿದಿಬ್ಬರು ಸಹೋದರರು "...ಸಾಕಷ್ಟು ಖರ್ಚು ಇರುತ್ತೆ ಶೇಖರಾ" ಎಂದು ತಾವಾಗಿಯೇ ಕೈಯೆತ್ತಿ ನಾಲ್ಕಾಣೆ ಕೊಟ್ಟವರಲ್ಲ. ಬದಲಾಗಿ ಯಾರಾದರೂ ಮಕ್ಕಳು ಬಂದರೆ ತನ್ನದೆ ಗಾಡಿಯಲ್ಲಿ ಕೂರಿಸಿಕೊಂಡು ಹೋಗಿ, ಕಬ್ಬಿನಹಾಲು ಕುಡಿಸಿ ನೂರು ಚಿಲ್ಲರೆ ರೂಪಾಯಿಯಲ್ಲಿ "..ಮಾಮ ಐಸ್‍ಜ್ಯೂಸ್ ಕೊಡಿಸಿದ..."ಎನ್ನುವ ಶಭಾಶಗಿರಿ ಮಾತ್ರ ತಪ್ಪದೆ ಪಡಿತಿದ್ರು. ಆದರೆ ಇದನ್ನೆಲ್ಲಾ ಆಡುವಂತಿಲ್ಲ ಅನುಭವಿಸುವಂತಿಲ್ಲ. "..ವರ್ಷಕ್ಕೊಮ್ಮೆ ಊರಿಗ ಬಂದರ ಊಟಕ್ಕ ಹಾಕೋದಕ್ಕ ಆಗೋದಿಲ್ಲೇನು.." ಎನ್ನುವ ಮಾತು ಬೇರೆ. 
ಇನ್ನು ಆಗೀಗ ಜಡ್ಡು ಜಾಪತ್ರಿ ಎಂದು ಅಪ್ಪನನ್ನು ದವಾಖಾನಿಗೆ ಸೇರಿಸಿದಾಗೆಲ್ಲಾ ಓಡಾಡೋದು, ಔಷಧಿ, ಹಣ್ಣು ಹಂಪಲು ಬರುವವರು ಹೋಗುವವರು ಇದೆಲ್ಲಾ ಕೃಷ್ಣನ ಲೆಕ್ಕ. ಕೊನೆ ಕೊನೆಯ ಎರಡ್ಮೂರು ವರ್ಷವಿಡಿ ತನ್ನೊಂದಿಗೆ ಚಂದ್ರು ಎನ್ನುವ ಆಪತ್ಬಾಂಧವ ಜತೆಯಾಗದಿದ್ರೆ ಅಪ್ಪನ ಸೇವೆ ಮಾಡುವುದೋ, ಅರ್ಧ ಕಟ್ಟಿ ನಿಲ್ಲಿಸಿದ್ದ ಮನೆ ಮುಗಿಸುವುದೋ, ಇಂಜಿನಿಯರಿಂಗ್ ಓದುತ್ತಿದ್ದ ಹುಡುಗನ ಕಡೆ ಗಮನ ಕೊಡುವುದೋ.. ಎಂದು ಶೇಖರ ಒದ್ದಾಡಿ ಹೋಗುತ್ತಿದ್ದ. ಹೇಳಿದರೆ ಹಿರಿಯ ಅಣ್ಣ "..ರಜಾ ಇಲ್ಲ. ಮಕ್ಳ ಪರೀಕ್ಷೆ.." ಎಂದು ಕಾರಣ ಎದುರಿಗಿಡುತ್ತಿದ್ದ. ಇನ್ನೊಬ್ಬ ಸಹೋದರ, "..ಇಲ್ಲಿಂದ ಒಬ್ಬಾಕಿನ್ನ ಕಳಸೂ ಬದಲಾಗಿ ಶೇಖರಣ್ಣಾ. ನಾಳೆ ಮುಂಜಾನಿ ಬಸ್ಸಿಗೆ ಬಂದು ನನ್ನ ಹೆಂಡತಿನ್ನ ಕರ್ಕೊಂಡು ಹೋದರ ನೀನಗ ನಾಲ್ಕ ದಿನ ಮನೀ ಕಡಿಗೆ ಹೆಲ್ಪ ಆದೀತು ನೋಡು..." ಎನ್ನುವ ಆಗದ ಹೋಗದ ಮಾತುಗಳ ಸಬೂಬು. ಇಲ್ಲಿಂದ ಬೆಳಗಾಂವಿಗೆ ಹೋಗಿ ಆಕೆಯನು ಕರೆತರುವ ಕೆಲಸಕ್ಕಿಂತ ದೊಡ್ಡ ಅಬ್ಬೆಪಾರಿತನ ಬೇರೇನಿದ್ದೀತು..? ಅದೇ ಅವನಿಗೂ ಬೇಕಿದ್ದುದು. ಅದಕ್ಕೆ ಇಲ್ಲ ಎನ್ನಲರದೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟು ಹಗುರಾಗುತ್ತಿದ್ದರು. ಅದಕ್ಕಿಂತಲೂ ಚೂರುಪಾರು ಕೈಕಾಸಿನ ಖರ್ಚಲ್ಲಿ ಊರಿನ ಹುಡುಗ ಚಂದ್ರುವನ್ನೇ ನಂಬಿಕೊಳ್ಳುತ್ತಿದ್ದ ಶೇಖರ. ವೇಗದ ಬದುಕಿನಲ್ಲಿ ಎಲ್ಲರಿಗೂ ಅವರ ಬದುಕಿನ ಪ್ರಿಯಾರಿಟಿಗಳೆ ಮುಖ್ಯ. 
ಹಿಂದೆ ಕರೂರಲ್ಲಿ ಅಪ್ಪ ಕೆಲಸಕ್ಕಿದ್ದಾಗಿಂದಲೂ ಅವನಿಗೆ ಚಂದ್ರುವಿನ ಕುಟುಂಬ ಪರಿಚಯ. ಚಂದ್ರು ಸಣ್ಣವನಿದ್ದಾಗಿನಿಂದಲೂ ಅಪ್ಪನ ಸುತ್ತಮುತ್ತಲೇ ಆಡಿಕೊಂಡು ಬೆಳೆದ ಹುಡುಗ ಎಂಬ ಕಕ್ಕುಲಾತಿ. ಮನೆ ಕಡೆಗೂ ಅಷ್ಟಾಗಿ ಕೈಹಿಡಿಯುವವರೂ ಇಲ್ಲದ್ದರಿಂದ ಆಗೀಗ ಅಪ್ಪನ ಸಹಾಯ ಅವರಿಗೂ ಆಗಿದ್ದೀತು. ಅದಕ್ಕೆ ಹುಡುಗ ಕರೂರಿನಿಂದ ಹಿಡಿದು ಇಲ್ಲಿವರೆಗೂ, ಯಾವಾಗಂದರೆ ಆವಾಗ "..ಮನಿ ಕಡೆ ಒಂಚೂರು ಕೆಲಸೈತಿ..ಬಾರೋ ಚಂದ್ರು.." ಎನ್ನುತ್ತಿದ್ದಂತೆ ಸಿಕ್ಕಿದ ಟ್ರಕ್ಕೋ, ಅಟೋರಿಕ್ಷಾದ ತುದಿಗೆ ನಿಂತಾದರೂ ಬಂದು ಅಚಾರ್ಯರ ಸೇವೆಗೆ ನಿಲ್ಲುತ್ತಿದ್ದ. ಅವನಿಗೇನೂ ನೌಕರಿ ಅಂತಾ ಇರಲಿಲ್ಲವಾದರೂ, ಬದುಕಿಗೆ ಊರ ಕಡೆಯಲ್ಲೊಂದು ಕಿರಾಣಿ ಅಂಗಡಿ ನಡೆಸುತ್ತಿದ್ದ. ಅಪ್ಪನ ಮುಖಾ ನೋಡಿಲ್ಲದ ಪರದೇಶಿ. ಅಚಾರ್ರು ಕಾಯಿಲೆ ಬಿದ್ದಾಗಲೆಲ್ಲಾ ಬೇರೆ ಯಾವ ದಾರಿಯೂ ಇಲ್ಲದಿದ್ದಾಗ ಶೇಖರ ಕರೆ ಮಾಡಿ, 
"..ಚಂದ್ರು. ಬಾಪ್ಪ ಅಪ್ಪಗ ಸಿಟಿ ಕ್ಲಿನಿಕ್ಕಿಗೆ ಸೇರ್ಸಿದಿವಿ. ಹಗಲು ನೋಡ್ಕೊ... ರಾತ್ರಿ ನಾ ಬರ್ತೆನೆ.. ಎನ್ ಕೊಡೊದು ಕೊಡ್ತೇನಿ..." ಎಂದು ದೈನೇಸಿಯಾಗಿ ಕೇಳುತ್ತಿದ್ದ. ಬರುಬರುತ್ತಾ ಇದು ಖಾಯಂ ಆಗಿಬಿಟ್ಟಿತ್ತು.
"..ಬಿಡ ಶೇಖರಣ್ಣಾ ಹಂಗ್ಯಾಕಂತಿ...ನನಗೇನು ಕೆಲಸ ಬೊಗಸಿಯಾ..?ವೈನಿಗ ಊಟದ ಡಬ್ಬಿ ಮಾಡಲಿಕ್ಕೆ ಹೇಳು. ನಾನು ದವಾಖಾನಿ ಹೋಗಿ ಅಲ್ಲೆ ಇರ್ತೇನಿ. ಶೇಖರಣ್ಣಾ ನೀನ ಅವ್ವಂಗ ಒಂದ ಫೆÇೀನ್ ಮಾಡಿ ಹೇಳಿಬಿಡು. ಇಲ್ಲಂದ್ರ ನಾ ಪ್ಯಾಟಿಗೋಗಿ ಚೈನಿಗೆ ಬಿದ್ದೇನಿ ಅಂದ್ಕೊತಾಳ.."ಎನ್ನುತ್ತಿದ್ದ.
"..ಬಿಡೊ ನಿನ್ನಂಥಾ ಹುಡುಗನ ಹಂಗ್ಯಾಕ ಅಂತಾಳ ನಿಮ್ಮವ್ವ..." ಎಂದು ಉತ್ತರಿಸುತ್ತಿದ್ದ ಶೇಖರ. ಯಾವ ಜನ್ಮದ ಬಂಧವೋ ಹುಡುಗ ಮತ್ತು ಅವನಮ್ಮ ಸಕಾಲಕ್ಕೆ ಕುಟುಂಬಕ್ಕೆ ದಕ್ಕುತ್ತಿದ್ದರು. 
ಶೇಖರನ ಹೆಂಡತಿಗೆ ಅಪೆಂಡಿಕ್ಸ್ ಆದಾಗ "..ಯಾರರ ಹೆಣ್‍ಮಕ್ಳು ಇದ್ರ ಬರಾಕ ಹೇಳ್ರಿ ದವಾಖಾನಿಗೆ ಆಪರೇಶನ್ ಹೊತ್ತಿಗೆ ಬೇಕಾಗ್ತದ..."ಎಂದು ಡಾ.ನಾಯಕ ಹೇಳುತ್ತಿದ್ದರೆ, ಎಲ್ಲಾ ಬಿಟ್ಟುಬಂದು ನಿಂತು ಸೇವೆ ಮಾಡಿದ್ದು ಚಂದ್ರುವಿನ ತಾಯಿನೇ. ಕೆಳಮಧ್ಯಮ ವರ್ಗದ ಇಂಥಾ ಸಮಸ್ಯೆಗಳು ಆಕೆಗೂ ಹೊಸದಲ್ಲ. ಇದ್ದೊಬ್ಬ ಮಗನನ್ನು ಸಾಕಿಕೊಂಡು, ಸಿಮೆಂಟು ಫ್ಯಾಕ್ಟ್ರಿಲಿ ಕೆಲಸ ಮಾಡಿ, ರಾತ್ರಿಶಾಲೆ ನಡೆಸುತ್ತಾ, ಅಗೀಗ ಅಂಗಡಿನೂ ನಡೆಸುತ್ತಾ ದಿನಕಳೆಯುತ್ತಿರುವ ಹೆಣ್ಣು ಮಗಳು. ಕಷ್ಟಗಳೇನೂ ಹೊಸದಲ್ಲ. ಅಂಥಾ ಸಂದರ್ಭದಲ್ಲೆಲ್ಲ ದೇಖರೇಖಿ ನೋಡುತ್ತಿದ್ದ ಅಪ್ಪ ಹಿಂದೆಲ್ಲಾ ಎಷ್ಟೊ ಜನರಿಗೆ ಮಧ್ಯಸ್ಥಿಕೆ ಅದೂ ಇದೂ ಎಂದು ಸಹಾಯವಾದದ್ದು ಇತ್ಯಾದಿ ಕಾರಣಗಳಿಂದಲೇ ಈಗ ಹೀಗೆಲ್ಲಾ ಉಪಯೋಗಕ್ಕೆ ಬರುತ್ತಿದೆ ಎಂದುಕೊಳ್ಳುತ್ತಿದ್ದ ಶೇಖರ. ಒಡಹುಟ್ಟಿದವರ ಬಗ್ಗೆ ಮೈ ಉರಿದರೂ ಅದು ಅಸಹಾಯಕ ಸಿಟ್ಟು. ಅದಕ್ಕಾಗೇ ಪ್ರತಿಯೊಂದನ್ನು "..ರಸೀದಿಯಾಗೇ ಲೆಕ್ಕಾ ಬರದ್ ಕೊಡ್ರಿ ಕುಲ್ಕರ್ಣಿ.." ಎಂದು ಮಠದ ಮೆನೇಜರಿಗೆ ನೆನಪಿಸಿದ್ದ. ಅಪ್ಪಿತಪ್ಪಿ ದೊಡ್ಡ ಮೊತ್ತ ಸೇರಿಸದೆ ಉಳಿದು ಹೋಗಿ, ಬಂದ ರಸೀತಿಯಲ್ಲೇ ಎಲ್ಲರೂ ಪಾಲು ಮಾಡಿದರೇ..?
ಇನ್ನು ಮನೆಗೆ ಬರುವ ಹೆಣ್ಣು ಮಕ್ಕಳಂತೂ"..ದಿನಾಲು ಮಾಡೊದು ಇದ್ದೇ ಇರ್ತದೆ, ಇಲ್ಲೂ ಏನು ಕೆಲಸ ಮಾಡೊದು..?.."ಎಂದು ಕಾಲುಚಾಚುತ್ತಿದ್ದರೆ ಶೇಖರನ ಹೆಂಡತಿ ಉರಿದುರಿದು ಬೀಳುತ್ತಿದ್ದರೂ, ಸಮಾಧಾನ ಹೇಳಿ ಮನೆಯಲ್ಲೇ ಇದ್ದು ಕೆಲಸಕ್ಕೆ ಸಹಾಯ ಮಾಡುತ್ತಾ ಜೊತೆ ಕೊಡುತ್ತಿದ್ದವಳು ಚಂದ್ರುವಿನ ಅಮ್ಮನೆ. ಹೀಗೆ ಮಧ್ಯಮ ವರ್ಗೀಯ ತಿಕ್ಕಾಟ ಮತ್ತು ಮುರಿದುಕೊಳ್ಳಲಾಗದ ಸಂಬಂಧಗಳ ಅವಿನಾಭಾವ ಮನಸ್ಥಿತಿಯ ತೇರು ತೆವಳುತ್ತಿರುವಾಗಲೇ ಅದು ನಡೆದಿತ್ತು.
ಆವತ್ತು ಎಂದಿನಂತೆ ಬೆಳಿಗ್ಗೆದ್ದು ವಾಕಿಂಗ್ ಹೋಗಿದ್ದ ಆಚಾರ್ರು ಬಾತಿ ಬುಡದಲ್ಲಿನ ಚಹಾದಂಗಡಿಯಲ್ಲಿ ಕೂತು ಇನ್ನೇನು ಕಪ್ಪು ಕೈಗೆತ್ತಿಕೋಬೇಕು ಎನ್ನುವಷ್ಟರಲ್ಲಿ ಅಲ್ಲೇ ಗೋಣು ಚೆಲ್ಲಿದ್ದರು. ಅಲ್ಲಿಂದ ಮೂರು ದಿನ ಹೆಗಡೆಕಟ್ಟಿ, ದಾವಣಗೇರಿ, ಚಿಗಟಗೇರಿ ಅಂತೆಲ್ಲಾ ಆಸ್ಪತ್ರೆಗಳ ಓಡಾಟ ನಡೀತು. ಬರೋಬ್ಬರಿ ಎಂಟು ದಿನಾ ದವಾಖಾನಿ, ನಂತರದ ಹದಿನೈದು ದಿನ ಆಚಾರ್ರು ಹಾಸಿಗೆಯಲ್ಲೇ ಎಲ್ಲಾ ಮಾಡಿಕೋತ ದಿನ ಎಣಿಸಿದರು. ದೇಹ ಹಾಸಿಗೆಗೆ ಬಿದ್ದು ಶಿಥಿಲಗೊಳ್ಳತೊಡಗಿ ಅಲ್ಲಲ್ಲಿವೃಣ ಆಗತೊಡಗಿತ್ತು. ಚಂದ್ರು ನಿಂತು ಮೈಗೆಲ್ಲ ಪೌಡರ್ ಹಾಕಿ ಸರಿ ಮಾಡಿ ಮಲಗಿಸುತ್ತಿದ್ದ. ಸಲೈನ್ ಬಾಟ್ಲಿ ಚಾಲು ಇತ್ತು. ಕೊನೆಗೊಮ್ಮೆ ಶೇಖರ ಕರೆ ಮಾಡಿದ. 
"...ಚಂದ್ರು ಹತ್ತಿರದವರೂ ಯಾರೂ ಇಲ್ಲಪ್ಪ. ಅಪ್ಪ ಯಾಕೋ ಹಿಂದ್ಮುಂದ ಮಾಡ್ಲಿಕ್ ಹತ್ಯಾನ ಬಾ.." ಎನ್ನುತ್ತಿದ್ದಂತೆ ಚಂದ್ರು ಮತ್ತವನ ಅಮ್ಮ ಕರೂರಿನಿಂದ ಶೇಖರನ ಮನೆಗೆ ಬಂದು ತಲುಪಿದ್ದರು. ಎಲ್ಲಾ ನಿಂತು ನೋಡುವಾಗ ಕಣ್ತೆರದೆ ನಾರಾಯಣಾಚಾರ್ಯರು ಶೇಖರನ ಕೈ ಹಿಡಿದು ಅದಕ್ಕೆ ಆಸರೆಯಾಗಿ ಹಿಡಿದಿದ್ದ ಇನ್ನೊಂದು ಕೈ, ಚಂದ್ರುವಿನ ಕೈಯಲ್ಲಿದ್ದಂತೆ ಗೋಣು ಚೆಲ್ಲಿದ್ದರು. ಕಂಗಾಲಾದ ಶೇಖರನಿಗೆ ಸಮಾಧಾನ ಹೇಳುತ್ತಾ, ಸಕಲ ಕಾರ್ಯಭಾರವನ್ನೆಲ್ಲಾ ಊರಹುಡುಗ ಚಂದ್ರು ದೊಡ್ಡವನಂತೆ ನಿಂತು ಸಂಭಾಳಿಸಿದ. ಮನೆಯ ಹೆಂಗಸರ ಬೆಂಬಲಕ್ಕೆ ಅವರಮ್ಮ ನಿಂತು ಇಲ್ಲೆ ಬಿಡಾರ ಹೂಡಿದ್ದರು. ಎಲ್ಲೆಡೆಯಿಂದ ಜನಗಳು ಬಂದಿಳಿದ್ದರು. 
ಆದರೆ ಅಪ್ಪ ಹೋದ ಸಂಕಟಕ್ಕಿಂತ ಎಲ್ಲರಿಗೂ ರಜಾ ಹಾಕಿ ಬಂದುದೆ ಕಷ್ಟವೂ ದೊಡ ಸಾಧನೆಯೂ ಆಗಿತ್ತು. ಹೇಗೊ ಮೂರ್ನಾಲ್ಕು ದಿನ ರಜ ಹೊಂದಿಸಿಕೊಂಡು ಮಕ್ಕಳನ್ನು ಶಾಲೆಗೆ ರಜ ಮಾಡಿಸಿ, ಮುಂದೆ ಬರೆಯಬೇಕಾದ ನೋಟ್ಸಿನ ಮುನ್ನೆಚರಿಕೆವಹಿಸಿಕೊಂಡು, ತಂತಮ್ಮ ಆಫೀಸಿನ ಕೆಲಸ ಕಾರ್ಯಗಳನ್ನು ಹೋದ ಕೂಡಲೆ ಹೇಗೆ ಕೂತು ನಿರ್ವಹಿಸಬೇಕಾಗುತ್ತದೆಂದೂ ಚರ್ಚಿಸುವುದೇ ಮೊದಲೆರಡು ದಿನದ ಅತಿ ದೊಡ್ಡ ಅಜೆಂಡಾ ಆಗಿ, ಎಲ್ಲರೂ ಸೇರಿದಾಗಲೊಮ್ಮೆ ತಂತಮ್ಮ ಪ್ರವರ ಬಿಚ್ಚತೊಡಗಿದ್ದು ನೋಡಿ, ಶೇಖರನಿಗೆ ಇವರೆಲ್ಲರ ವರಾತಕ್ಕಿಂತ ಚಂದ್ರುನ್ನ ಬಿಟ್ಟರೆ ಬೇರಾರಿಲ್ಲ ಎನ್ನಿಸಿ ಅವನನ್ನೆ ಗಾಡಿಗೆಳೆದುಕೊಂಡು ಓಡಾಡತೊಡಗಿದ್ದ. ಅವನೂ ಕೂಡಾ,
"..ಶೇಖರಣ್ಣ ಏನ ಕೆಲಸ ಬಂದರೂ ಹೇಳು. ಮನ್ಯಾವ್ರು ಯಾರೂ ಇಲ್ಲ ಅನ್ಕೊಬ್ಯಾಡ. ನಾನು ಅವ್ವ ಬರತೇವಿ.." ಎಂದು ಕೈ ಸೇರಿಸಿದ್ದ. ಆದರೆ ಮನೆಗೆ ಬಂದವರಿಗೆ ಅದೆಲ್ಲವೂ ಕಾಣಿಸುತ್ತಲೇ ಇರಲಿಲ್ಲ. ಸೋದರ ಮಾವ "..ಬಂಡ್ಯಾ ಮಾಮ.."ಬಂದವನೇ ಶರಬತ್ತು ಕುಡಿದು, ದಿವಾನ ಮಂಚದ ಮೇಲೆ ಕೂತು, ರಾಜಮನೆತನ ಎನ್ನುವಂತೆ ದರ್ಬಾರು ನಡೆಸತೊಡಗಿದ್ದ. ಮಾತಿಗೊಮ್ಮೆ ಶೇಖರ ಅದು ತರ್ಸು.. ಇದು ತರ್ಸು.. ಎನ್ನುತ್ತಲೇ " ದಾವಣಗೇರಿ ಸಣ್ಣಕ್ಕಿ ಮಸ್ತ ಇರ್ತದ ಒಂದೈದ ಕಿಲೋ ತರಿಸಿಟ್ಟಿರು ಹೋಗುವಾಗ ಬೇಕಾಗ್ತದ.." ಎಂದು ಅಜ್ಞಾಪಿಸುತ್ತಿದ್ದ. ಕೊನೆಗೊಮ್ಮೆ ಎಲ್ಲಾ ದಿನಗಳು ಮುಗಿದು, ಹದಿಮೂರನೆಯ ದಿನ ತುಂಗ ಭದ್ರಾತೀರದ ರಾಯರ ಮಠಕ್ಕೆ ಹೋಗಿ, ಮೂರೂ ಜನ ಒದ್ದೆ ಬಟ್ಟೆಯಲ್ಲೇ ಸವ್ಯ, ಅಪಸವ್ಯದೊಂದಿಗೆ, ಪಿಂಡ ಕಟ್ಟಿ, ತಲೆಮಾರನ್ನು ಆಹ್ವಾನಿಸಿ ಹೆಬ್ಬೆರಳು ತಿರುಗಿಸಿ ಅಘ್ರ್ಯ ನೀಡಿದರು. 
ಬಂದವರೆಲ್ಲಾ ಕಡಲೆ ಬೀಜ ಅರ್ಧ ಅಗಿದು ಉಗಿದದ್ದೂ ಆಯಿತು. ಮೇಲೊಂದು ಮುದ್ದೆ ಮಾಡಿ ಕಂಭದ ಮ್ಯಾಲೆ ಕಾಗೆಪಿಂಡ ಇಟ್ಟು ಕಾಯತೊಡಗಿದರು. ಅಚಾರ್ರು "..ಎಲ್ಲಾರೂ ಮನಸಿನ್ಯಾಗೆ ಬೇಡ್ಕೊಳ್ರಿ. ಅಪ್ಪಂದು ಏನಾರ ಇಚ್ಚಾ ಬಾಕಿ ಇದ್ರ ಅವ್ರಿಗೆ ಕೇಳಿಸ್ತದೆ. ಅದು ಅವರ ಮನಸ್ಸಿಗೆ ತಾಗಿದರ, ಒಪ್ಪಿಗಿ ಆದರ ಕೂಡಲೆ ಕಾಗಿ ಪಿಂಡ ಒಯ್ತದೆ..."ಎನ್ನುತ್ತಿದ್ದಂತೆ ಎಲ್ಲ ಕಣ್ಮುಚ್ಚಿ ಕೈ ಮುಗಿದರು. ಮನದಲ್ಲೇ ಬೇಡಿಕೊಂಡು" ಅಪ್ಪ ನಿನ್ನ ಮಕ್ಕಳು ನಾವು ತಪ್ಪಾಗಿದ್ದರ ಹೊಟ್ಯಾಗ ಹಾಕ್ಕೊಳ್ರಿ " ಎಂದು ತಲೆಬಾಗಿ ನಿಂತರು. ಎಲ್ಲಿಂದಲೋ ಬಂದ ಕಾಗೆ ಪುರ್ರಂತ ಆಚೀಚೆ ಹಾರಿದಂತೆ ಮಾಡಿತಾದರೂ ಪಿಂಡದ ಹತ್ತಿರ ಸುಳಿಯದೆ ಡೌಲು ಮಾಡಿತು. ಅಷ್ಟು ದೂರದ ಪಾಗಾರದ ಕಟ್ಟೆ ಮೇಲೆ ಕೂತು ಕೊಕ್ಕು ಸವೆಸತೊಡಗಿತು.
ಮಠದ ಆಚಾರ್ಯರೆ ಮುಂದಾಗಿ ನಿಂತು ಆಗಸದತ್ತ ಮುಖ ಮಾಡಿ, ಒಮ್ಮೆ ಕೈಲಿದ್ದ ನೀರನ್ನು ಆಗಸಕ್ಕೇರಚಿ, "..ಯಜಮಾನರೆ.. ನಿಮ್ಮ ಹೆಣ್ಣು ಮಕ್ಕಳನ್ನ ಮನೆಯವರೆಲ್ಲ ಮನೆಯಲಿದ್ದವರು ಚೆನ್ನಾಗಿ ನೋಡ್ಕೊತಾರೆ. ವರ್ಷಕ್ಕೊಮ್ಮೆ ಹೋಳಿಗಿ ಬಡಿಸಿ, ಮುತ್ತೈದೆಯರಿಗೆ ಸೀರೆ, ಕುಬುಸ ಅದೂ ಇದೂ ಅ0ತಾ ಕೈಲಾದ್ದು ಉಡುಗೊರೆ ಕೊಟ್ಟು, ಅವರ ಕಷ್ಟ ಸುಖಕ್ಕೆಂತ ಕರೆದಾಗ ಹೋಗಿ ನಿಂತು ಸಹಾಯ ಮಾಡಿ, ಕೈಲಾದ್ದು ನಿಭಾಯಿಸಲು ನಿಮ್ಮ ಗಂಡು ಮಕ್ಕಳು ಎಲ್ಲಿದ್ದರೂ ಬರ್ತಾರೆ, ಕಾಯಿಲೆ ಕಸಾಲೆ ಅಂತಿದ್ದಾಗ ಅಣ್ಣ ತಮ್ಮಂದಿರೂ ಕೂಡಿ ನಿಭಾಯಿಸ್ತಾರೆ. ನಿಮ್ಮ ಮುಂದಿನ ಯಾವ ತಲೆ ಮಾರಿನಲ್ಲೂ ಮೂರೂ ಹೊತ್ತೂ ಯಾವ ಅಪವಾದಕ್ಕೆ ಎಡೆ ಕೊಡದಂತೆ ನಿಮ್ಮ ಎಲ್ಲಾ ಕಾರ್ಯಗಳನ್ನು, ನೀವು ನಡೆಸಿಕೊಂಡು ಬಂದಿದ್ದ ಎಲ್ಲಾ ಪದ್ಧತಿಗಳನ್ನೂ, ಮನೆಯವರಿಗೆ ಮಠದವರಿಗೆ ಮಾಡಬೇಕಾದುದನ್ನು ಮಟ್ಟಬೇಕಾದುದನ್ನು ನಿರ್ವಂಚನೆಯಿಂದ ಮಾಡ್ತಾರೆ. ನೀವು ಸರ್ವ ಸಂತೃಪ್ತಿಯಿಂದ ಪಿಂಡ ಸ್ವೀಕಾರ ಮಾಡ್ಬೇಕು..." ಎಂದು ಎಲ್ಲರ ಪರವಾಗಿ ಕೈ ಮುಗಿದು ಜೋರಾಗಿ ನುಡಿದರು. ಅನುಮೋದಿಸುವಂತೆ ಎಲ್ಲರೂ ಹೌದೌದು ಎಂದು ಗಲ್ಲ ಬಡಿದುಕೊಂಡರು. ಆ ಕಡೆ ನಿಂತಿದ್ದ ಚಂದ್ರು, ಅವರಮ್ಮ ಕೈಯೆತ್ತಿ ನಮಸ್ಕರಿಸಿ ಹೌದೌದು ಎಂದರೂ ಮತ್ತೆ ಮೇಲೇರಿದ ಕಾಗೆ ಕೊಕ್ಕಿನಿಂದ ಆಚೀಚೆ ಮೈ ಕೆದರಿಕೊಂಡು ಅಲ್ಲೇ ಕುಳಿತಿತು ವಿನ: ಪಿಂಡದ ಕಡೆಗೆ ಸುಳಿದಾಡಲಿಲ್ಲ. 
ಇದನ್ನೆಲ್ಲಾ ನೋಡುತ್ತಿದ್ದ ಶೇಖರ ಯಾವ ಬೇರೆ ದಾರಿನೂ ತೋಚದೆ ಹತ್ತು ನಿಮಿಷ ಕಾಯ್ದು, ಒಬ್ಬೊಬ್ಬರಾಗೇ ಬೇಡಿಕೊಳ್ಳುವುದು ಒಳ್ಳೆಯದು ಆಗ ಯಾರದ್ದು ಏನಾದರೂ ಕಸರು ಮನಸಲಿ ಉಳಿದಿದ್ದರೂ ಸರಿ ಹೋಗುತ್ತದೆ ಎಂದು ಯೋಚಿಸುತ್ತಾ ನುಡಿದ.
"..ಹೋಗ್ರೆ...ಮೂರು ಜನಾ ಏನಾದರೂ ಮನಸಿನಲ್ಲಿ ಉಳಿದಿದ್ರೆ ಬೇಡಿಕೊಳ್ರಿ. ಅಪ್ಪನ ಮನಸ್ಸಿಗೆ ಭೇಜಾರಾಗುವಂಗೆ ಏನಾದ್ರೂ ಇದ್ರೆ ತಪ್ಪಾಯ್ತು ಅಂತಾ ಕೇಳಿಕೊಳ್ರಿ." ಎಂದು ತಂಗಿಯರಿಗೆ ನೇರವಾಗೇ ಹೇಳಿದ. ಕಿರಿಯವರಿಬ್ಬರೂ ಹೋಗಿ ಬೇಡಿಕೊಂಡು"...ಶೇಖರಣ್ಣನ ಚೆನ್ನಾಗಿ ನೋಡ್ಕೊತೆವೆ ಆಗೀಗ ಬಂದು ಹೋಗಿ ಮಾಡ್ತಿವಿ. ನಾವೆಲ್ಲಾ ನಿನ್ನ ಬಗ್ಗೆ ಯಾವತೂ ಬೇಜಾರಾಗಿಲ್ಲ ಅಪ್ಪ.." ಎಂದೆಲ್ಲ ಕೈ ಬಾಯಿ ತಟ್ಟಿಕೊಂಡರೂ ಏನೂ ಜರುಗಲಿಲ್ಲ. ಮೊದಲನೆಯ ಅಣ್ಣನೂ ಹೋಗಿ ಕಂಭಕ್ಕೆ ನೆತ್ತಿ ಬಡದು, ಕೈ ಕಾಲು ಬಿದ್ದು ಐದಾರು ನಿಮಿಷ ಕಾಲ ದಿಂಡುರುಳಿ ಬಿದ್ದೇ ಇದ್ದ. ಏನೂ ಆಗಲಿಲ್ಲ. ದೊಡ್ಡಕ್ಕ ಮಾತ್ರ ತನ್ನನ್ನು ಯಾರಾದರೂ ಕರೆಯಲಿ ಎನ್ನುವ ಹಮ್ಮಿನ ನಿರೀಕ್ಷೆಯಲ್ಲಿ ಕೂತಿದ್ದು ಶೇಖರನಿಗೇನೂ ಹೊಸದನ್ನಿಸದೆ, ಅವಳ ನಡೆನುಡಿಗಳ ಧಿಮಾಕಿನ ಅರಿವೂ ಇದ್ದುದರಿಂದ ತಾನಾಗೇ ಅವಳ ಕಡೆಗೆ ನೋಡಿದ. ತನ್ನಿಂದಾದರೆ ಮಾತ್ರವೇ ಆಗುತ್ತೆ ಎನ್ನುವ ಬಿಂಕದಲ್ಲಿ ಕೂತಿದ್ದ ಆಕೆ,
"..ಅಪ್ಪಂಗ ನಾನಂದ್ರ ಭಾಳ ಪ್ರೀತಿ. ಈಗ ನೋಡ್ರಿ.." ಎನ್ನುತ್ತಾ ಹೋಗಿ ನಮಸ್ಕರಿಸಿದಳು. ಪಿಂಡದ ಕಂಭಕ್ಕೆ ನೆತ್ತಿ ಬಡಿದು ಮೇಲಕ್ಕೆದ್ದು ನೋಡಿದಳು. ಇದ್ದುದರಲ್ಲೇ ಹತ್ತಿರವಿದ್ದ ಕಾಗೆ ಇನ್ನಷ್ಟು ದೂರ ಹಾರಿತು. ಮುಖ ದುಮ್ಮಿಸಿಕೊಂಡು ಬರುತ್ತಿದ್ದುದು ತಮಾಷೆಯಾಗಿದ್ದರೂ, ಅದ್ಯಾಕೊ ಆ ಹೊತ್ತಿನಲ್ಲೂ ಅವಳ ಪರಿಸ್ಥಿಗೆ ನಗು ಉಕಿಬಂದರೂ ತಕ್ಕ ಸಮಯವಲ್ಲ ಎಂದುಕೊಳ್ಳುತ್ತಾ ಶೇಖರ ತುಟಿಕಚ್ಚಿದ. ಎಲ್ಲರೂ ಪಿಂಡದ ಪಕ್ಕದ ಮರದ ನೆರಳಿಗೆ ನಿಂತು ಆಗಲೇ ಅರ್ಧ ತಾಸು ಮೇಲಾಗಿತ್ತು. ಕಾಗೆ ಮುಟ್ಟದೆ ಊಟ ಮಾಡುವಂತಿಲ್ಲ. ಮಠದ ಅಚಾರ್ಯರೆ ಮುಂದಾಗಿ
"..ಶೇಖರಪ್ಪಾ ಇನ್ಯಾರರ ಅದಾರೇನು..?ನಿಮ್ಮ ಭಾವಂದಿರು, ದೋಸ್ತರು ಅವ್ರಿಗೂ ಒಮ್ಮೆ ಹೇಳಪಾ.." ಎಂದರು. ಬೆವೆತು ಕೆಂಪಗಾಗಿದ್ದರೂ ಅವರಿಗೂ ಕುತೂಹಲ ಜೊತೆಗೆ ಬೇರೆ ದಾರಿಯೂ ಇಲ್ಲ. ಒಮ್ಮೆ ಸುತ್ತೆಲ್ಲಾ ಎಲ್ಲರನ್ನೂ ನೋಡಿ ವೈಯಕ್ತಿಕವಾಗೂ ಕೇಳಿಕೊಂಡಿದ್ದವರೆಲ್ಲಾ ಮುಗಿದರು ಎನ್ನಿಸುತ್ತಿದ್ದಂತೆ, ಅಲ್ಲೇ ನಿಂತಿದ್ದ ಚಂದ್ರು ಮತ್ತವನ ತಾಯಿಯನ್ನು ನೋಡುತ್ತಾ ತಾವಾಗಿಯೇ, 
"..ಇವ್ರು ಯಾರು.." ಎಂದರು. ಎಷ್ಟೋ ವರ್ಷಗಳಿಂದ ಕುಟುಂಬಕ್ಕಾಗುತ್ತಿದ್ದ ತಾಯಿ-ಮಗ ಇಬ್ಬರೂ ನಿಂತು ಕಾತುರದಿಂದ ಕಾಯುತ್ತಿದ್ದರು. ಹಿಂದೆಯೇ ಮತ್ತೆ ತಾವಾಗಿಯೇ ಶೇಖರನತ್ತ ತಿರುಗಿದ ಆಚಾರ್ರು,
"..ಮನೆಗೆ ಹತ್ತಿರದವರಾದರೆ ಅವರೂ ಒಮ್ಮೆ ಕೇಳಿ ನೋಡಲಿ.." ಎಂದರು. 
"...ಅವ್ರಿಂದೇನು ಕೇಳಸೊದು ಆಚಾರ್ರ..? ಮನಿ ಮಂದಿ ಬಿಟ್ಟು ಬೇರೆಯವ್ರ ಹೆಂಗೆ ಪಿಂಡಕ್ಕೆ ಜೊತೆ ಕೊಟ್ಟಾರು..?" ಎಂದು ತಗಾದೆ ತೆಗೆದಳು ಹಿರಿಯಕ್ಕ. ತನ್ನಿಂದಲೇ ಆಗಿಲ್ಲ ಇನ್ನು ಯಾರನ್ನು ಕೇಳಿ ಏನು ..ಮಹಾ.. ಎನ್ನುವುದು ಆಕೆಯ ಧ್ವನಿಯಲ್ಲೇ ಗೊತ್ತಾಗುತ್ತಿತ್ತು. ಆಕೆಯ ಮುಖದಲ್ಲಿನ್ನೂ ಅವಮಾನದ ಗೆರೆಗಳು ಕದಲುತ್ತಿದ್ದವು. ಆದರೆ ಹಿಂದೆ ಮುಂದೆ ಯೋಚಿಸದೆ ಶೇಖರನೇ ಆ ಕ್ಷಣದ ಪರಿಸ್ಥಿತಿಗೂ ಸ್ಪಂದಿಸದೆ ನೇರವಾಗಿ ಬೆಂಬಲಿಸಿ ನುಡಿದ,
"..ಹೌದು. ಅಚಾರ್ರು ಹೇಳಿದ್ದು ಸರಿಯಾಗೇ ಅದೆ. ಬೇಕಾದ ಟೈಮ್‍ನಾಗೆ ನೀವ್ಯಾರೂ ಇಲ್ಲದಿದ್ರೂ, ಅಪ್ಪಂಗ ಮಾತ್ರ ಅಲ್ಲ ನನಗೂ, ಅವಳಿಗೂ ಆಪರೇಶನ್ ಆದಾಗಲೂ ಬಂದಾವ ಚಂದ್ರುನೇ. ಟೈಮ್ ಟೈಮ್ ಗೆ ಕಾಕು ಬರದಿದ್ರ ನಮ್ಮನ್ಯಾಗ ಊಟ ಇರ್ತಿರಲಿಲ್ಲ. ನಾವೇ ಅವ್ರ ಋಣದಾಗಿದ್ದೀವಿ. ಚಂದ್ರು ನೀನು ಕೇಳಿಬಿಡಪಾ.."ಎಂದ. ಅವನೋ,
"..ಅಣ್ಣಾ ನಾನ ಹೆಂಗ.." ಎಂದು ತೊದಲುತ್ತಲೇ, ಅಚಾರ್ರು " ನಡೀ ನಡೀ.. ಕಾಲ ಬೀಳು" ಎಂದು ಕೈ ಮಾಡುತ್ತಿದ್ದಂತೆ ಎದುರಿಗಿದ್ದ ಒದ್ದೆಯಾಗಲು ಮಾಡಿಟ್ಟಿದ್ದ ನಳದ ಕೆಳಗೆ ನಿಂತು ಭರ್ರನೆ ಒದ್ದೆಯಾಗಿ, ವಸ್ತ್ರ ಕಳಚಿ, ಒದ್ದೆ ನಡುವಸ್ತ್ರದಲ್ಲಿ ಬಂದವನೆ ಕಂಭದ ಬುಡಕ್ಕೆ ತಲಿ ಹಚ್ಚಿ ಅಡ್ಡ ಬಿದ್ದ. ಐದು ನಿಮಿಷ ಏಳಲೇ ಇಲ್ಲ. ಎಲ್ಲ ನೋಡುತ್ತಿದ್ದಂತೆ ಆಗಸದಲ್ಲಿ ಕಾ.. ಕಾ.. ಕರ್... ಎನ್ನುತ್ತ ಕಾಗೆ ಪಿಂಡದ ಪಕ್ಕ ಕೂತು ಕೊಕ್ಕು ಮಸಿಯತೊಡಗಿತು. ಎಲ್ಲಾ ಹೋ.. ಎನ್ನುವಾಗಲೆ ಇನ್ನೊ0ದು ಬಂದು ಅದರೊಂದಿಗೆ ಮೈ ಉಜ್ಜುತ್ತಾ, ಜೋಡಿಲೆ ಪಿಂಡಕ್ಕೆ ಬಾಯಿ ಹಾಕಿ ಸಲುಗೆಯಿಂದ ತಮ್ಮದೆ ಎನ್ನುವಂತೆ ಕಚ್ಚಿಕೊಂಡು ಯಾವ ರಗಳೆಯೂ ಇಲ್ಲದೆ ಹಾರಿ ನಡೆದವು.
"..ಅಯ್ಯೋ ಶಿವನೆ.." 
ಎನ್ನುತ್ತಾ ಆಚಾರ್ರು ಕರಂಡಿಕೆಯಿಂದ ನೀರನ್ನು ಆಗಸಕ್ಕೆ ಉಗ್ಗಿ ನಡೆದರು ಇನ್ನೇನು ಉಳಿದಿಲ್ಲ ಎನ್ನುವಂತೆ. ಕಟ್ಟೆಯ ನೆರಳಲ್ಲಿ ಆಸರೆ ಪಡೆದಿದ್ದವರೆಲ್ಲಾ ಚಂದ್ರುವನ್ನು ಅಲ್ಲೇ ಬಿಟ್ಟು ಸರಸರನೇ ಊಟಕ್ಕೆ ನಡೆದು ಪಂಕ್ತಿಗೆ ಕೂತರು. ಒದ್ದೆಯಾಗಿದ್ದವನು ಹಾಗೇಯೆ ಎದ್ದು ನಿಲ್ಲುವ ಹೊತ್ತಿಗೆ ಅಲ್ಲಿದ್ದ ಜನರೆಲ್ಲಾ ಖಾಲಿಯಾಗಿ ತಾನು ಮತ್ತು ಶೇಖರನೊಂದಿಗೆ ದೂರದಲ್ಲಿ ಅಮ್ಮ ದುಗುಡಗೊಂಡ ಮುಖದಿಂದ ನಿಂತಿದ್ದು ಕಂಡು ಬೆಪ್ಪಾದ ಚಂದ್ರು ಮಿಕಿ ಮಿಕಿ ನೋಡಿದ.
"..ಕೊನೆಗೂ ಅಪ್ಪನಿಗೆ ನಿನ್ನ ಸೇವಾ ಹಿಡಿಸ್ತು ನೋಡು ಚಂದ್ರು. ಒಂದು ತಾಸಿನಿಂದ ಆಗದ್ದು ನೀ ಕೈ ಮುಗದ ಐದ ನಿಮಿಷದಾಗ ಬಂದು ಹಾರಿ ಹೋಯ್ತು.. ಥ್ಯಾಂಕ್ಸಪಾ. ಅಪ್ಪನ ಮನಸ್ಸಿಗೆ ನೆಮ್ಮದಿ ಆತು ಅಷ್ಟ ಸಾಕ ಬಿಡು.." ಎಂದವನ ಕೈ ಹಿಡಿದು ಊಟದ ಪಂಕ್ತಿಯ ಕಡೆಗೆ ಹೊರಟವನು ತಿರುಗಿ ನಿಂತು,
"... ಹೌದೂ ಏನು ಬೇಡ್ಕೊಂಡಿ ಚಂದ್ರು. ಅಷ್ಟ ಲಗೂ ಅಪ್ಪನ ಪಿಂಡಕ್ಕ ಕಾಗಿ ಬಾಯಿ ಹಾಕ್ತಲ್ಲ.." ಎಂದ. ಕೂಡಲೇ ಚಂದ್ರು,
"..ಹ್ಯಾಂಗ್ ಹೇಳಲಿ ಶೇಖರಣ್ಣ. ಅವ್ರು ಹೊರಗಿನಿಂದ ಎಲ್ಲರಿಗೂ ಆಚಾರ್ರರಾದರೂ ನನಗ ಮಾತ್ರ ಅಪ್ಪಾನೇ ಅಲ್ಲೇನು...?ಅದಕ್ಕ ಅಪ್ಪಾ ನೀವಿಲ್ಲದಿದ್ರೂ ಶೇಖರಣ್ಣನ್ನ ಕೈ ಬಿಡಾಂಗಿಲ್ಲ ಆಂವ ನನಗ ಅಣ್ಣನೇ ಆಗ್ತಾನು. ಪಿಂಡ ಒಪ್ಪಿಸಗೋರಿ ಇಲ್ಲಾಂದರೆ ಅಮ್ಮಂಗ ಬೇಸರ ಆಗ್ತದ.. ಅಂದೆ.." ಎಂದು ಹೇಳಿಬಿಡಲು ಬಾಯ್ತೆರೆದವನು, ಕಷ್ಟಪಟ್ಟು ತಡೆ ಹಿಡಿದು ಮಿಕಿಮಿಕಿ ನೋಡುತ್ತಿದ್ದ ಶೇಖರನಿಗೆ, 
"..ಏನಿಲ್ಲ ಬಿಡು ಆಚಾರರ್ರ ಕಾಲಿಗೆ ಬಿದ್ದ ಬೇಡಿಕೊಂಡೆ..."
ಎನ್ನುತ್ತಾ ಕೈ ಕೊಸರಿಕೊಂಡು ತುಂಗೆಯತ್ತ ಕಾಲುಹರಿಸಿದ. ಅಷ್ಟು ದೂರದಲ್ಲಿದ್ದ ಅವನಮ್ಮ ತುಂಗೆಯ ಮಡಿಲಲ್ಲಿ ಮೈ ಒದ್ದೆ ಮಾಡಿಕೊಳ್ಳುತ್ತಾ ಕುಂಕುಮ ಒರೆಸಿಕೊಳ್ಳುತ್ತಿದ್ದು ಕಾಣಿಸಿತು. ಮುಖದ ಮೇಲಿಂದ ಹನಿಯಾಗಿ ಇಳಿಯುತ್ತಿದ್ದ ಸಾಲಿನಲ್ಲಿ ಬೆವರು ಯಾವುದೋ, ಕಣ್ಣೀರು ಯಾವುದೋ ಗೊತ್ತಾಗುವಂತಿರಲಿಲ್ಲ. 
ಹಿಂದೆ ನೋಡಿದರೆ ಶೇಖರಣ್ಣ...? ಎದುರಿಗೆ ತುಂಗೆ ದಾರಿಗಡ್ಡವಾಗಿ ಹರಿಯುತ್ತಿದ್ದಾಳೆ..! ಮಧ್ಯೆ ಮಿಕಿಮಿಕಿ ಮಾಡಿಕೊಂಡು ಸುಮ್ಮನೆ ನಿಂತು ಬಿಟ್ಟ ಚಂದ್ರು. ಅಷ್ಟು ದೂರದಲ್ಲಿ ಕಾಗೆಗಳೆರಡೂ ಬಳಗ ಬೆಳೆಸಿದ್ದವು. 
- ಸಂತೋಷ ಕುಮಾರ್ ಮೆಹೆಂದಳೆ.


Saturday, April 9, 2016

ನಿಮ್ಮ ಹನಿಗಳ ಋಣ ಬಾಕಿಯಿದೆ...!

ಎಲ್ಲರ ಕತೆಗಳ್ಯಾಕೆ ಅಕ್ಷರ ಮೋಕ್ಷಕ್ಕೀಡಾಗುವುದಿಲ್ಲ ಎನ್ನುವುದಕ್ಕೆ ನನ್ನಲ್ಲಿ ಪ್ರಾಮಾಣಿಕವಾಗಿ ದನಿಯಿಲ್ಲ. ಆದರೆ ಎಲ್ಲ ಅನುಭವಗಳೂ ಮಾತ್ರ ಛೇ... ಎನ್ನಿಸುವ ಅಸಹಾಯಕ ಉದ್ಗಾರವನ್ನು ಹೊರಡಿಸುತ್ತವಲ್ಲ ಎನ್ನುವುದೇ ಪರಮಸಂಕಟ. ಒಂದು ವರ್ಷದ ಕೊನೆಯಲ್ಲಿ ಕತೆಯ ಜೋಳಿಗೆ ಬಿಚ್ಚಿ ನಿಂತಿರುವ ಅಮ್ಮಂದಿರ ಸರದಿ, ನೋಡಿ ದಿಗಿಲು ಬಡಿದು ಕೂತಿದ್ದೇನೆ.

‘ನಿಮ್ಮ ಬರಹ ನನ್ನ ಕತೆಯೇ ಬರದಂಗಿತ್ತು. ಯಾಕೋ ಗೊತ್ತಿಲ್ಲ. ಬ್ಯಾಡ ಅಂದರೂ ನಮ್ಮವ್ವ ನೆನಪಾಗತಿದ್ಲು. ಇಪ್ಪತ್ತು ವರ್ಷಾಗಿ ಹೋಗಿತ್ತು ಇವತ್ತು ಕಣ್ಣೀರು ಬಂದ್ವು ನೋಡು. ಇಷ್ಟ ವರ್ಷದ ಮ್ಯಾಲೇ ಕಣ್ಣೀರ ಹಾಕಿಸಿದ ಪಾಪ ನಿನಗ ತಟ್ಟಲಿ ಅನ್ಲೇನು?’ ಎಂದು ಗದ್ಗದಿತರಾಗಿಯೂ ಛೇಡಿಸುತ್ತಲೂ ಮಾತಾಡಿದ ಉತ್ತರ ಕರ್ನಾಟಕದ ಪರಿಚಯವೇ ಇರದ ಅಪ್ಪಟ ವಯಸ್ಕ ಮಹಿಳೆಗೆ ‘ನಿಮ್ಮ ಕಣ್ಣೀರ ಋಣ ನನ್ನ ಮೇಲಿರಲಿ ಬಿಟ್ಟು ಬಿಡಿ ಅಮ್ಮಾ’ ಎಂದಷ್ಟೇ ಹೇಳಿದ್ದಾ.
‘ನನ್ನ ಕತೆನೇ ಅದು, ನಿನಗ ಯಾರಾದರೂ ಹೇಳಿದ್ದರೇನು? ಎಲ್ಲ ಗೊತ್ತಾಗಿದ್ದರೂ ನಿಮ್ಮದಲ್ಲ ಮಾಮಿ ಅಂದುಬಿಡ್ತೀಪಾ’ ಎನ್ನುವ ಪ್ರೀತಿಭರಿತ ಆರೋಪ ಒಂದೆಡೆಯಾದರೆ ‘ಹಲೋ, ನೀ ಮೊನ್ನೆ ಬರದಿದ್ದ ಕಾಲಂ ಇತ್ತಲ್ಲ ಆ ಶಾಂತಕ್ಕ ನಾನೇನೋ ಮಾರಾಯ. ನೀ ಮಾತ್ರ ಇನ್ನು ತನಕ ನಮ್ಮನೀ ಕಡೀಗೆ ಬರ್ಲಿಲ್ಲ ನೋಡು’ ಎಂದು ಆಚೆಕಡೆಯಿಂದ ಅಲವತ್ತುಕೊಂಡ ಆ ತಾಯಿ ಜೀವ ತಣ್ಣಗಿರಲಿ. ಯಾರದ್ದೋ ಅನುಭವಗಳಿಗೆ ಮತ್ತು ನನ್ನ ಬದುಕಿನಾವಧಿಯ ಉದ್ದಕ್ಕೂ ನೋಡಿದ ನೆನಪುಗಳಲ್ಲ ಕಾಡುತ್ತಿದ್ದ ಹೆಣ್ಣುಮಕ್ಕಳ ಸಂಕಟದ ಮರೆಯಲಾಗದ ಅನುಭೂತಿಗಳಿಗೆ ನಾನು ಅಕ್ಷರವಾಗುತ್ತಿದ್ದೇನೆ ಅಷ್ಟೆ. ಸರಿಯಾಗಿ ಒಂದು ವರ್ಷದ ಹಿಂದೆ ಆರಂಭವಾದ ‘ಅವಳು ಎಂದರೆ’ ಸರಣಿಗೆ ಸಿಕ್ಕಿರುವ, ಸಿಗುತ್ತಿರುವ ವೈಯಕ್ತಿಕ ಪ್ರತಿಕ್ರಿಯೆ ಅದ್ಭುತ. ನಿಮ್ಮೆಲ್ಲ ನಿರೀಕ್ಷೆಗೆ ತಕ್ಕಂತೆ ಉತ್ತರಿಸುವಲ್ಲಿ ವಿಫಲನಾಗುತ್ತಿದ್ದಲ್ಲಿ ಕ್ಷಮಿಸಲೇಬೇಕು.
‘ನಮ್ಮಮ್ಮನ್ನು ಹಿಂಗೆ ಸುಮ್ ಸುಮ್ನೇ ಬೈತಿದ್ದಾ. ಏನು ಹಿಂಸೆ ಆದರೂ ಅದಕ್ಕೆ ಅಮ್ಮನೇ ಕಾರಣ ಅನ್ನಿಸ್ತಿತ್ತು. ನನ್ನೆಲ್ಲ ಸಂಕಟ, ಅಸಹಾಯಕತೆ, ವಯಸ್ಸಿನ ತಾಕಲಾಟ, ತುಮುಲಗಳಿಗೂ ಅಮ್ಮನೇ ಕಾರಣ ಅನ್ನಿಸಿಬಿಡುತ್ತಿತ್ತು. ಅದ್ಯಾಕೋ ನನ್ನ ಮೇಲೆ ಪತ್ತೆದಾರಿಕೆ ಮಾಡ್ತಾಳೆ, ಕಣ್ಣಿಡುತ್ತಿದ್ದಾಳೆ ಅನ್ನಿಸುತ್ತಿತ್ತು. ಆದರೆ ಅಮ್ಮನ ಮನಸ್ಸಿನ ತಳಮಳ ಏನಂತಾ ಗೊತ್ತಾಗಿದ್ದೇ ಈಗ. ಇನ್ಮುಂದ್ಯಾವತ್ತೂ ಅಮ್ಮಂಗೆ ತಿರುಗಿ ಮಾತಾಡಲ್ಲ’ ಹೀಗೊಂದು ಮೆಸೇಜು ಬಿಟ್ಟು ಪ್ರಾಮಿಸ್ ಮಾಡಿದ್ದು, ಯೌವ್ವನದ ಹೊಸ್ತಿಲಿನ ಹುಡುಗಿ.
‘ಹದಿನೈದು ವರ್ಷದ ನಂತರ ನನ್ನ ವಾರಗಿತ್ತಿಯ ಜೊತೆಗೆ ಕೂತು ಮನಸ್ಸು ಬಿಚ್ಚಿ ಮಾತಾಡಿದ್ದು ನಿಮ್ಮ ಕಾಲಂ ಓದೋಕೆ ಶುರು ಮಾಡಿದ್ಮೇಲೆ. ಅದ್ಯಾಕೋ ಎಲ್ಲದಕ್ಕೂ ಸವಾಲಾಗುತ್ತಾ, ಕದ್ದು ಮುಚ್ಚಿ ನಾನು ಏನು ಮಾಡ್ತೀದಿನಿ ಅನ್ನೋದನ್ನು ನೋಡ್ತಿದ್ದಾಳು ಈಗ ಫ್ರೆಂಡ್ ಆಗಿದಾಳೆ. ನಿಮ್ಮ ಬರಹದಲ್ಲಿ ಬಿಚ್ಚಿಟ್ಟ ಸತ್ಯಗಳೇ ಅಂತಹವು. ನಾವು ಹೇಳಿಕೊಳ್ಳಲಾಗದ್ದನ್ನು ನೀನು ಬಿಡುಬೀಸಾಗಿ ಹೇಳಿ ನಮಗೊಂಥರಾ ದನಿಯಾಗುತ್ತಿದ್ದೀಯ’ ಎಂದು ಯಾವತ್ತೂ ಪುಟಿಯುತ್ತಿದ್ದರೂ, ಎ ಉಳಿದು ಹೋಗಿದ್ದ ಕಸರನ್ನು ಸರಿಪಡಿಸಿಕೊಂಡ ಸ್ನೇಹಿತೆಗೆ ‘ಇನ್ಮುಂದೆ ಹಂಗೆ ಇರ್ರಿ. ಮುಖ್ಯವಾಗಿ, ಇನ್ಮುಂದೆನೂ ನೀವಿಬ್ಬರೂ ಫ್ರೆಂಡ್ ಆಗೇ ಇರಿ’ಎಂದು ಹಾರೈಸಿದ್ದಾ.
ಫೋನಿನಲ್ಲೇ ಮಾತಾಡುವ ಹಿರಿಯಕ್ಕನಂತಹ ಡಾಕ್ಟರು ‘ಹೋದ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿದ್ರೇನೋ? ಅದಕ್ಕೆ ನಿಮಗೆ ಹೆಣ್ಮಕ್ಕಳ ಮನಸ್ಸಿನ ಮಾತೆಲ್ಲ ತಿಳಿತದ. ಇಲದಿದ್ರ ಹ್ಯಾಂಗ ಗೊತ್ತಾಗ್ತಾವ? ನಿಮ್ಮ ಮನಿಯವ್ರ ಹೇಳ್ತಾರೇನೋ?’ ಎಂದು ಒಂದು ಮಟ್ಟದ ಸಂಶಯದ ನನ್ನ ಮಾತಾಡಿಸುತ್ತಿದ್ದರೂ ಅಪರಿಚಿತರೆನ್ನಿಸುವುದಿಲ್ಲ.
‘ನೀನು ಬರೆಯೋದು ಬರಹ ಅಲ್ಲ. ನಮ್ಮ ಮನಸ್ಸಿಗೆ ಹಿಡಿಯೋ ಕನ್ನಡಿ ಅನ್ನಿಸ್ತಿ ಮಾರಾಯ. ಅದಕ್ಕೆ ಗೊತ್ತಿಲ್ಲದೆ ಕಪಾಳಕ್ಕೆ ನೀರು ಹನಿಯುತ್ತವೆ’ ಹೀಗೆಂದು ನನ್ನ ಎದೆಯುಬ್ಬಿಸಿದ್ದು ಸಾಹಿತ್ಯ ಲೋಕದ ಹಿರಿಯ ಬರಹಗಾರ್ತಿಯೊಬ್ಬರು.
ಇಳಿವಯಸ್ಸಿನ ಅಜ್ಜಿಯೊಬ್ಬರು ವಿಜಯಪುರದ ಕಡೆಯಿಂದ ಮಾತಾಡುತ್ತಾ, ‘ಚಷ್ಮಾ ಸರಿಗಿಲ್ಲ. ಅದಕ್ಕ ಹ್ವಾದ (ಹೋದ) ವಾರ ಓದ್ಲಿಲ್ಲ ನೋಡು. ಒಮ್ಮೆ ಬಂದು ಮಕಾ ತೋರ್ಸಿ ಹೋಗೋ ಮಾರಾಯ. ಅದೆಲ್ಲಿಂದರ ಹಿಂತಾದೆಲ್ಲ ಬರೀತಿ’ ಎನ್ನುತ್ತಿದ್ದರೆ ನಾನು ದೌಡು ಬೀಳಲು ದಿನಗಳನ್ನು ಹುಡುಕತೊಡಗಿದ್ದಾ. ಮೊನ್ನೆ ಮೊನ್ನೆ ಯಜಮಾನರು ತೀರಿಕೊಂಡ ಖಾನಾಪುರದ ಕಡೆಯ ಕಾಕಿ, ಮದುವೆಯಾದ ಇಪ್ಪತ್ಮೂರೇ ದಿನಕ್ಕೆ ಗಂಡನನ್ನು ಕಳೆದುಕೊಂಡ ವಿಜಯಪುರದ ನತದೃಷ್ಟ ಎಳೆಯ ಮದುಮಗಳು, ಹಳೆಯ ನಮ್ಮೂರ ಕನ್ನಡ ಶಾಲೆಯ ಟೀಚರು, ನನ್ನ ಕಿತ್ತುಹೋಗಿದ್ದ ಪಾಟಿ ಮತ್ತದರ ಅವಸ್ಥೆ ನೋಡಲಾಗದೆ ಪ್ರತಿ ವರ್ಷಕ್ಕೊಂದು ಹೊಸದನ್ನು ಕೊಡಿಸುತ್ತಿದ್ದ ಗಣಿತ ಮಾಸ್ತರರ ಮಕ್ಕಳು, ಊರ ಕಡೆಯ ಹಿರಿಯರು, ಆಲೆಮನೆಯ ಹಸಿವು ಇಂಗಿಸುವ ಶಾರದಕ್ಕ, ‘ಊರ ಕಡೆ ಬರ್ತೀಯೋ? ಅ ಬರಕೋತನ ಇರ್ತೀಯೋ’ಎಂದು ಪ್ರೀತಿಯಿಂದ ಗದರುವ ಚೆಡ್ಡಿ ದೋಸ್ತರು.
‘ಮಾರಾಯ ಅಷ್ಟು ವರ್ಷದ ಹಿಂದಿಂದೆಲ್ಲ ನೆನಪಿಟ್ಕೊಂಡಿದಿಯಲ್ಲ. ಹೆಂಗಿತ್ತು ಹಂಗ ಬರ್ದಿದೀಯಲ್ಲ’ ಎಂದು ಹಳೆಯ ಕತೆಗಳನ್ನು ನೆನಪಿಸಿಕೊಂಡು ಗುಟ್ಟಾಗಿ ಸಂಭ್ರಮಿಸಿದ ಅಮ್ಮಂದಿರು, ‘ಸರ್, ನನ್ನ ಹೆಸರು ಬರಿಯೋದಿಲ್ಲ ಅಂದರ ಇದನ್ನು ಬರೀರಿ. ನಂದೆ ಕತೆ ಅಂತಾ ಗೊತ್ತಾದ್ರ ಮತ್ತ ಕಷ್ಟ ಆಗುತ್ತೆ’ ಎಂದು ದೈನೇಸಿಯಾಗಿಯೂ, ಅದರಿಂದ ಹೊರಬರಲಾರದ, ಆದರೆ ಹೇಗೋ ಒಂದು ಕಡೆಯಲ್ಲಿ ಮನಸ್ಸಿನ ಕಹಿ ಸ್ರವಿಸಿ ಉಸಿರ್ಗರೆಯುವ ಅಸಹಾಯಕತನದಲ್ಲಿರುವ ಸಹೋದರಿಯರು, ಎ ಒಂದು ಕತೆ ಅಕ್ಷರರೂಪಕ್ಕಿಳಿದಾಗ ಹತ್ತಾರು ಬಾರಿ ಓದಿಕೊಂಡು ದನಿಯಾದ, ಅಷ್ಟೆ ಸಣ್ಣ ಸುಖಕ್ಕೆ ಎದೆಯುಬ್ಬಿಸಿಕೊಂಡವರು, ಗೋವೆಯ ತೀರದಲ್ಲಿ ಅರೆಬರೆ ಜೀವನ ನಡೆಸುತ್ತಿದ್ದುದನ್ನು ಬಿಟ್ಟು ಕೊನೆಗೂ ಸೆಟ್ಲಾದ ಸ್ನೇಹಿತೆ... ಹೀಗೆ ವರ್ಷವೊಂದರಲ್ಲಿ ಸರಿದುಹೋದ ಪಾತ್ರಗಳು ನೆನಪಿಸಿಕೊಳ್ಳುವಂತಹ ಅಚ್ಚರಿಗಳು.
ಕತೆ ಹೇಳಿಕೊಂಡು, ಜೊತೆ ನಿಲ್ಲಿಸಿಕೊಂಡು ಕೈ ಎತ್ತಿದ ಮಿತ್ರದ್ರೋಹಿಗಳಾದ ಹೈಟೆಕ್ ಹೆಂಗಸರು, ಯಾರದ್ದಾ ಕತೆಗೆ ತಮ್ಮ ಕತೆಯನ್ನು ಹೋಲಿಸಿಕೊಂಡು ಹಳಹಳಿಸಿದವರು,‘ಇನ್ನು ನಿನ್ನ ಸಮಾಜಸೇವೆ ಸಾಕು ಸುಮ್ನೆ ಬರಕೊಂಡಿರು’ ಎಂದು ಬುದ್ಧಿಹೇಳುವ ಫೇಸ್‌ಬುಕ್ ಅಮ್ಮಂದಿರು, ಪ್ರತಿ ವಾರ ಕಾಯಲಿಕ್ಕಾಗದೆ ಕೆಲವೊಮ್ಮೆ ‘ಇನ್ನೂ ಹದಿನೆಂಟು ಗಂಟೆ ಮಾರಾಯ. ಪಿ.ಡಿ.ಎಫ್. ಫೈಲಾದರೂ ಕಳಿಸೋ’ ಎಂದು ಗೋಗರೆದವರು, ಒಮ್ಮೆ ಇಂಥವರನ್ನು ಭೇಟಿಯಾಗಬೇಕು ಎಂದು ಗುಟ್ಟಾಗಿ ನನ್ನಿಂದ ನಂಬರು ಪಡೆದು ಎ ಮೂಲೆಯಲ್ಲಿದ್ದ ತಾಯಂದಿರನ್ನು ಮೈದಡುವಿ ಸಮಾಧಾನಿಸಿ ಬಂದ (ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದನ್ನು ಸುಳ್ಳು ಮಾಡಿದ) ಆಪ್ತೆಯರು, ಹಾಸಿಗೆ ಹಿಡಿದಿದ್ದವರ ಬೆಂಬಲಕ್ಕೆ ಧಾವಿಸಿ ಅವರನ್ನು ಮನೆಯವರು ಕೊನೆಗಾಲದದರೂ ಕೈ ಹಿಡಿಯುವಂತೆ ಮಾಡಲು ಶ್ರಮಿಸಿದ ಸ್ನೇಹಿತರು, ಹೆಣ್ಣುಮಕ್ಕಳ ನಿಂತುಹೋಗಿದ್ದ ಶಿಕ್ಷಣಕ್ಕೋಸ್ಕರ ಚಂದಾ ಎತ್ತಿದ ಪರಿಚಯವೇ ಇರದ ಯಾವ್ಯಾವುದೋ ಊರಿನ ಮಹಿಳೆಯರು, ಹೀಗೆ ‘ಅವಳು ಎಂದರೆ’ ಅನುಭವದ ಕಥಾನಕಕ್ಕೆ ದಕ್ಕಿದ ಪ್ರಕ್ರಿಯೆ, ಎದುರಾಗುತ್ತಿರುವ ನಂಬಲಶಕ್ಯವಾಗುತ್ತಿರುವ ಬೆಳವಣಿಗೆಗಳ ಮಹಾಪೂರ ನನ್ನ ಹುಬ್ಬೇರಿಸಿದೆ.
ಮೊದಮೊದಲು ಇದು ಇಷ್ಟೆಲ್ಲ ಪ್ರಕ್ರಿಯೆಗೆ ಪಕ್ಕಾಗುತ್ತದೆ ಎಂದು ನನಗೂ ಅನ್ನಿಸಿರಲಿಲ್ಲ. ಬಹುಶಃ ಪ್ರತಿಯೊಬ್ಬನಲ್ಲೂ ಇರಬಹುದಾದ ಆರ್ದ್ರ ಹೃದಯದ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದು ಈ ಸರಣಿ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಎಲ್ಲೂ ಹೇಳಿಕೊಳ್ಳದಿದ್ದ ಭಾವಗಳಿಗೆ, ಅಕ್ಷರ ರೂಪದಲ್ಲಿ ಓದಲು ಸಿಕ್ಕಿದಾಗ ಮತ್ತು ಹೇಗೆ ಹೇಳುವುದು ಎನ್ನುವ ಮುಜುಗರ, ಆತಂಕ, ಇದನ್ನೆಲ್ಲ ಹೇಳಿಕೊಳ್ಳಬೇಕಾ ಎಂಬಿತ್ಯಾದಿ ಸಂಶಯ, ಅಪನಂಬುಗೆ, ಧಾವಂತದ ಆಚೆಗೆ ಸ್ಪಷ್ಟತೆ ಲಭ್ಯವಾಗಿದ್ದೇ ‘ಅವಳ...’ ಮೂಲಕ.
ಹಾಗಾಗಿ, ಇಲ್ಲಿ ಪ್ರಕಟಿತ ಅನುಭವಗಳು ಎಲ್ಲರಿಗೂ ಅವರಿಗರಿವಿಲ್ಲದೆ ಒಳಗೊಳ್ಳುವಂತೆ ಮಾಡಿಸಿ ಓದಿಸಲು ಪ್ರೇರೇಪಿಸಿವೆ. ಪ್ರತಿಕ್ರಿಯಿಸಲು ಅನುಮತಿಸಿವೆ. ತಮ್ಮದೂ ಕತೆ ಹೇಳಲು ಧೈರ್ಯ ನೀಡಿವೆ. ಮತ್ತದಕ್ಕಿಂತಲೂ ಮಿಗಿಲಾಗಿ ಒಳಮನದಲ್ಲಿ ಗೂಡು ಕಟ್ಟಿದ್ದ, ಸಂಕಟದ ಶಬ್ದಗಳಿಗೆ ರೂಪ ಒದಗಿಸಿದೆ, ಆಡಲಾಗದ ಅನುಭವಿಸಲಾಗದ ಭಾವಗಳಿಗೆ ಹೊರಹರಿವಿನ ವಿಸ್ತಾರ ಒದಗಿಸಿದೆ. ಹಾಗಾಗಿ ಬರಹ ರೂಪದಲ್ಲಿ ಬಂದ ಈ ಅನುಭವ ಕಥಾನಕಗಳು ‘ಇವು ನಮ್ಮದೇ,’ ‘ಇದು ನನ್ನ ಕತೆ ಇದ್ದಂತಿದೆಯಲ್ಲ’, ‘ಇದೆಲ್ಲ ನಿನಗೆ ಹ್ಯಾಗೆ ಗೊತ್ತಾಯ್ತು?’ ಎನ್ನುವಲ್ಲಿಗೆ ಬಂದು ನಿಲ್ಲಿಸಲು ಕಾರಣ ಎಲ್ಲ ಅಮ್ಮಂದಿರ, ಸಹೋದರಿಯರ, ಆಪ್ತೆಯರ, ಸ್ನೇಹಿತೆಯರ ನಂಬುಗೆಯ ಒತ್ತಾಸೆಯ ದನಿಯಾಗಿ ಅಂಕಣ ಗರಿಗೆದರಿದ್ದು.
ಸರದಿಯಲ್ಲಿರುವ ಹಲವರ ವಿಷಯಕ್ಕೆ ನನಗಿನ್ನೂ ತಾಕಲಾಗಿಲ್ಲ. ಅಷ್ಟು ಮಾತ್ರದ ಕ್ಷಮೆಗೆ ನಾನು ಬೇಷರತ್ ಅರ್ಹ. ವರ್ಷದ ಹಿಂದೆ ಹಲವು ವಿಷಯ ಎದುರಿಗಿಟ್ಟುಕೊಂಡಾಗ ಯಾವ ಎರಡನೆಯ ಯೋಚನೆ ಮಾಡದೆ ‘ಈ ವಿಷಯ ನೀವು ಬರೀರಿ. ಆಯ್ತು ಫೈನಲ್’ ಎಂದು ನನ್ನನ್ನೆಬ್ಬಿಸಿ ನಿಲ್ಲಿಸಿದ ಸಂಪಾದಕರ ವಿಶ್ವಾಸಕ್ಕೆ ನಾನು ಚಿರಋಣಿ. ಇದು ವರ್ಷದ ರಿಪೋರ್ಟ್. ಅಂಕಣ ಮುಂದೆಯೂ ಇನ್ನಷ್ಟು ಸಂವೇದನೆಗಳಿಗೆ ಧನಾತ್ಮಕ ದನಿಯಾಗಿ ಮುನ್ನಡೆಯಲಿದೆ. ನೋವು, ನಲಿವು, ನಂಬಲಶ್ಯಕವಾದ, ಇದೂ ನಮ್ಮದು ಎನ್ನಿಸುವ ಅನುಭವಗಳ ಸರಣಿ ಕಥಾನಕ ಕಟ್ಟಿಕೊಡಲು ಆಕೆ ಮಾತ್ರವೇ ಉಖವಾಗಬಲ್ಲಳು. ಕಾರಣ ಇಂಥ ವೈವಿಧ್ಯತೆ, ಭಾವ ತೀವ್ರತೆ ಇನ್ನಾವ ವಿಷಯದಲ್ಲಿ ಹುಡುಕಲು ಸಾಧ್ಯ?
ಕಾರಣ ಅವಳು ಎಂದರೆ...

Monday, April 4, 2016

ಸಂಬಳವಿಲ್ಲದ ವೃತ್ತಿಗೆ ನಿವೃತ್ತಿಯೂ ಇಲ್ಲ...
ಗೃಹಕೃತ್ಯಕ್ಕಾಗಿ ಯಾವ ಅಮ್ಮಂದಿರೂ ಮನೆಯ ಮಟ್ಟಿಗೆ ಸೋಮಾರಿಯಾದದ್ದು ನನಗೆ ಗೊತ್ತಿಲ್ಲ. ದೇಹಾಲಸ್ಯವೋ ಇನ್ನೊಂದೋ ಆಗುವುದು ಸಹಜವಾದರೂ ದಿನಂಪ್ರತಿ ಹೀಗೇ ಆಗಬೇಕು ಮತ್ತು ಇಷ್ಟೆಲ್ಲ ಕೆಲಸಗಳಾಗಲೇಬೇಕು ಎನ್ನುವ ಕರಾರುವಕ್ಕಾದ ತಪನೆ ಇನ್ನಾವುದೇ ನೌಕರಿಯಲ್ಲಿಲ್ಲ.
‘ಸಿಗೋ ಹಂಗಿದ್ರೆ ಬೇಗ ಬಾ. ಸಂಜೆ ಲೇಟ್ ಆದರೆ ಮಕ್ಕಳು ಬಂದು ಬಿಡ್ತಾವೆ. ಜೊತೆಗೆ ರಾತ್ರಿ ಕೆಲಸ ಎಲ್ಲ ಇನ್ನಷ್ಟೆ ಆಗ್ಬೇಕು...’ ಎಂದು ಆಕೆ ನುಡಿಯುತ್ತಿದ್ದರೆ ಸುಲಭಕ್ಕೆ ನಾನು ಪರಿಹಾರ ಸೂಚಿಸಿದ್ದೆ. ‘ಪಾರ್ಸಲ್ ತೊಗೊಂಡು ಹೋಗೇ ಮಾರಾಯ್ತಿ ಯಾಕೆ ಹಂಗೆ ಬಡ್ಕೊತಿ ಮನೆ ಕೆಲಸಕ್ಕೆ...’ ಎನ್ನುತ್ತಿದ್ದರೆ ‘ಆಯ್ತು ಇವತ್ತು ಪಾರ್ಸಲ್, ನಾಳೆ ಪಾರ್ಸಲ್, ಇನ್ನು ಎರಡು ದಿನಾ ಪಾರ್ಸಲ್ಲು. ಆಮೇಲೇನು ನೀನು ಬರ್ತೀಯಾ?’ ಉಷಾಳ ದನಿಗೆ, ಅದರಲ್ಲಿ ಅಡಗಿದ್ದ ಅನಿವಾರ್ಯತೆಗೆ, ಅವಳಿಗೂ ಅರಿವಾಗದೇ ಮಿಳಿತವಾಗಿದ್ದ ಕಾಯಂ ಅಸಹಾಯಕತನಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ. ನನ್ನ ಬಿಡಿ, ಮಹಿಳೆಯರ ಮನೆಗೆಲಸದ ಈ ಚರ್ಚೆಗೆ ಬಹುಶಃ ಯಾವ ಮೇಧಾವಿಯೂ ಉತ್ತರ ಕೊಡಲಾರ.
ಅಡುಗೆ, ತಿಂಡಿ ಇತ್ಯಾದಿಯನ್ನು ವಾರಕ್ಕೊಮ್ಮೆಯೋ ಅಥವಾ ಆಗೀಗ ಮಾಡಬೇಕಾದಲ್ಲಿ ನಾನು ಪಸಂದಾಗಿ ಕರುಳ ಪಾತಾಳದಿಂದ ರಸವೊಸರುವಂತೆ ಮಾಡಿಬಿಡುತ್ತೇನೆ. ಆದರೆ, ಅದೇ ತಿಂದಾದ ತಕ್ಷಣಕ್ಕೆ ತಟ್ಟೆ ಎತ್ತುವ ಕೆಲಸವಿದೆಯಲ್ಲ ಬಹುಶಃ ಅದನ್ನು ಮರೆತಿರುತ್ತೇನೆ. ಇದು ನನ್ನನ್ನೊಬ್ಬನದಲ್ಲ. ಮನೆಗೆಲಸವನ್ನು ಮಾಡದ ಎಲ್ಲರ ಕಥೆಯೂ ಹೀಗೇಯೇ. ಆದರೆ ಗೃಹಕೃತ್ಯವನ್ನು ನಿರಂತರವಾಗಿ ಯಾವ ಲೋಪವಿಲ್ಲದೆ ಪೂರೈಸುವುದಿದೆಯಲ್ಲ ಅದು ಯಾವ ಲೆಕ್ಕದ ನೌಕರಿ? ಯಾವ ಲೆಕ್ಕದಲ್ಲಿ ಸಂಬಳ ನಿಗದಿ ಪಡಿಸೋಣ?
ನೌಕರಿ, ಮನೆ ಎರಡನ್ನೂ ನಿರ್ವಹಿಸುವ ಹೆಣ್ಣುಮಕ್ಕಳು ಇವತ್ತು ಪರ್ಯಾಯ ಎಂದು ಏನೇ ಉಪಾಯಗಳಿಟ್ಟುಕೊಂಡಿರಲಿ, ಅವೆಲ್ಲವೂ ಅಷ್ಟಕಷ್ಟೇ. ಏನಿದ್ದರೂ ಮನೆಗೆ ಹೋದ ಮೇಲೆ ಒಂದರ್ಧ ಗಳಿಗೆ ಕೂತು ಕಾಫಿ ಕುಡಿಯುವ ವ್ಯವಸ್ಥೆಯಿದ್ದೀತು. ನಂತರ ನೈಟಿ ಏರಿಸಿಕೊಂಡು ಹುಬ್ಬೇರಿಸುತ್ತಾ, ತಲೆಗೂದಲನ್ನು ಗಂಟು ಕಟ್ಟಿ, ಮೊಬೈಲ್ ಚಾರ್ಜಿಗೆ ಹಾಕಿ ವಾಟ್ಸ್‌ಆಪ್‌ನಲಿ "Available after two hrs/Not available'' ಎಂದು ಸ್ಟೆಟಸ್ ಬದಲಿಸಿದಳೆಂದರೆ ಪಕ್ಕಾ ಆಕೆ ಈಗ ಅಡುಗೆ ಮನೆಯಲ್ಲಿ ಬಿಜಿಯಾಗಿzಳೆಂದೇ ಅರ್ಥ. ಇದು ಹೆಚ್ಚಿನ ನೆಟ್‌ಪ್ಯಾಕ್ ಅಮ್ಮಂದಿರು ಮಾಡಬಹುದಾದ ಕ್ರಿಯೆ. ಇನ್ನೂ 3ಜಿ ಸಿಗ್ನ ಬಾರದ, ಮೊಬೈಲ್ ಸುಮ್ಮನೆ ಚಂದಕ್ಕಿಟ್ಟುಕೊಂಡಿರುವ, ಇದ್ದರೂ ವಾಟ್ಸ್ ಆಪ್ ಎನ್ನುವ ಖಾಸಗಿ ಜಗತ್ತಿಗೆ ಕಾಲಿಡಗೊಡದ ಅವರವರ ಗಂಡಸರ ಕಣ್ಗಾವಲಲ್ಲಿ ಶೇಕಡ 60ರಷ್ಟು ಗೃಹಿಣಿಯರು ಇzರಲ್ಲ ಅವರು? ದೇವರಿಗೇ ಟೈಮ್‌ಟೇಬಲ್ಲು ಕೊಡಬೇಕಷ್ಟೆ.
ಉಷಾ ಸಿಕ್ಕಿದಾಗಲೊಮ್ಮೆ ನಾನು ಛೇಡಿಸುತ್ತಿದ್ದೆ. ‘ಏನೇ ಶೂಟಿಂಗ್‌ಗೆ ಹೋಗೋ ಹಂಗೆ ರೆಡಿಯಾಗಿದ್ದಿಯಲ್ಲ’ ಎಂದರೆ, ‘ಇನ್ನೇನು ನಾವು ಮನೆ ಸೇರಿದ ಮೇಲೆ ಇದ್ದೇ ಇದೆ. ಅದೇ ಮುಸುರೆ ಜೊತೆಗೆ ಸಿಂಕಿಂದೆತ್ತಿ ಪಾತ್ರೆ ಜಾಲಾಡೋದು. ರವೆಯಷ್ಟಾದರೂ ಮನಸ್ಸು, ಮೈಗೆ ಹಗುರ ಅನ್ನಿಸುವ ಹಾಗೆ ಇರೋಣ ಸುಮ್ನಿರು’ ಎನ್ನುತ್ತಾ ಹುಬ್ಬೇರಿಸಿದರೂ, ‘ಏನಿದ್ದರೂ ನಾವು ಮಾಡಲೇಬೇಕಾದ ನಿವೃತ್ತಿ ಇಲ್ಲದ ಕೆಲಸ ಮನೆಯಲ್ಲಿ ಕಾದಿದೆ’ ಎನ್ನುವ ಭಾವ ಆಕೆಯ ಧ್ವನಿಯಲ್ಲಿದ್ದೇ ಇರುತ್ತಿತ್ತು. ಇವತ್ತು ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳಿರಲಿ, ಮನೆಯ ಹೌಸ್‌ವೈ- ಆಗಿರಲಿ ಕೆಲವು ಕೆಲಸ ಜೀವಮಾನ ಪೂರ್ತಿ ಇದ್ದದ್ದೇ ಎನ್ನುವಂತಾಗಿರುವುದು ಅಪ್ಪಟ ವಾಸ್ತವ. ಚರ್ಚೆ, ಫೆಮಿನಿಸಮ್ಮೂ, ಮಹಿಳಾ ಸಮಾನತೆ ಇವೆಲ್ಲವನ್ನೂ ಸಾರಾಸಗಟಾಗಿ ನಿವಾಳಿಸಿ ಎಸೆದಿರುವುದು ಸ್ಪಷ್ಟ. ಅಸಲಿಗೆ ಸುಲಭದ ಚಪ್ಪಾಳೆ ಮತ್ತು ಇನ್ನೂ ಮನಸ್ಸು ಬಲಿಯದ ಎಳೆಯದ ಹೆಂಗಳೆಯರೆದುರಿಗೆ ರೆಬೆಲ್ ಆಗುವ ಫೆಮಿನಿಸ್ಟುಗಳ(ಪುರುಷರನ್ನು ಹಿಯಾಳಿಸುವ, ಅವರ ಅಂಗಾಗಳಿಗೆ ಮೊಳೆ ಹೊಡೆಯೋಣ ಎಂದು ಕವಿತೆ ಬರೆಯುವ, ಪುರುಷರೆಂದರೆ ರೇಪಿಸ್ಟು, ಶೋಷಿಸುವವರೆನ್ನುವ ಋಣಾತ್ಮಕವನ್ನೇ ಬರೆಯುವ)ಸ್ವಂತದ ಬದುಕಿಗೆ ಬಂದರೆ ವೇದಿಕೆ ಮತ್ತು ಅಡುಗೆ ಮನೆ ಬೇರೆಯೇ ಎನ್ನುವುದಕ್ಕೂ, ಅಪ್ಪಟ ಸ್ವಂತಖುಷಿಗಳಿಗೆ ಪೊಸ್ಸೆಸ್ಸಿವ್ ಎನ್ನುವುದೂ ಗುಟ್ಟಾಗೇನೂ ಉಳಿದಿಲ್ಲ.
ಹಾಗೇ ತೀರಾ ಫೆಮಿನಿಸ್ಟಾಗೇ ಬದುಕುತ್ತೇನೆಂದು ಮನೆಯಲ್ಲೂ ಅದನ್ನೇ ಜಾರಿ ಮಾಡಲು ಹೊರಟವರ ಬದುಕು ಬರಕತ್ತಾಗಿಲ್ಲ ಎನ್ನುವುದೂ ಪರಮಸತ್ಯ. ಫೆಮಿನಿಸಂ ನಂಬಿ ಹೊರಜಗತ್ತಿಗೆ ನಾನು ಹಾಗೇ ಬದುಕಿ ತೋರಿಸುತ್ತೇನೆಂದು ಎದ್ದು ನಿಂತವರ‍್ಯಾರೂ ಸುಖಿ ಕುಟುಂಬದ ಆರ್ದ್ರತೆಗೆ ಈಡಾಗಿದ್ದು ನಾನಂತೂ ಕಂಡಿಲ್ಲ. ಏನಿದ್ದರೂ ಪಬ್ಲಿಕ್ ಫಿಗರಾಗಬಹುದಷ್ಟೇ. ವೈಯಕ್ತಿಕವಾಗಿ ತೀರಾ ಸೋತ ಮುಖಗಳೇ. ಆದರೆ, ಇಂಥ ಫೆಮಿನಿಸ್ಟುಗಳ ವಾದ, ವೇದಿಕೆಯಿಂದ ನೀಡುವ ಡೈಲಾಗು, ಬರಹದಲ್ಲಿನ ಹರಿತ, ಶೋಷಿಸುವ ಪುರುಷನೊಬ್ಬ ಸಿಕ್ಕಿದರೆ ಈಕೆ ಚಾಮುಂಡಿಯಾಗಲು ಒಂದೇ ಹೆಜ್ಜೆ ಎನ್ನುವ ಅವತಾರಗಳನ್ನು ನಂಬಿ, ನೆತ್ತಿ ಮಾಸುಹಾರದ ಹುಡುಗಿಯರು ಅಖಾಡಕ್ಕಿಳಿದು ಬಿಡುತ್ತಾರಲ್ಲ ಅವರಿಗೆ ವಾಸ್ತವ ಸರಿಯಾಗಿ ಅರ್ಥವಾಗುವ ಹೊತ್ತಿಗೆ ಅವರ ಬದುಕೂ ಎಕ್ಕುಟ್ಟಿಹೋಗಿರುತ್ತದೆ. ತಿಳಿ ಹೇಳುವವರು ಯಾರು?
ಆದರೆ, ಇವೆಲ್ಲದರ ಆಚೆಗೂ ಬೆಳಗ್ಗೆ ಎದ್ದು ಹಾಲು ಬಿಸಿಗಿಟ್ಟು, ಅಲ್ಲಲ್ಲಿ ಆಗಲೇ ಕೈಗೆ ಸಿಕ್ಕಿದ್ದನ್ನು ನೀಟು ಮಾಡುತ್ತಲೇ, ಮಕ್ಕಳಿಗಿಬ್ಬರಿಗೂ ಕೂಗುತ್ತಾ, ಈ ಮಧ್ಯೆ ಕಾಫಿಗಿಟ್ಟು, ಗಂಡನಿಗೊಂದು ಕೂಗು ಹಾಕಿ ಅಥವಾ ಕೆಲವೊಮ್ಮೆ ಅಡಿಸಿ ಎಬ್ಬಿಸಿಕೊಳ್ಳುವ ಭೂಪರೂ ಬೇಕಾದಷ್ಟಿzರೆ. ಜೊತೆಗೆ ತಿಂಡಿಗಾಗಿ ಈರುಳ್ಳಿ, ಕೊತ್ತಂಬರಿ ತೆಗೆದುಕೊಳ್ಳುತ್ತ ಡಬ್ಬದ ತಯಾರಿಗೆ ಬೇರೆ ಐಟಂನ್ನು ಫ್ರಿಜ್ಜಿನಿಂದ ಹೊರಗಿಟ್ಟು, ಏಳೂವರೆಗೆ ಬರುವ ಸ್ಕೂಲಿನ ಆಟೋದವನಿಗಾಗಿ ಸಮಯವನ್ನು ನಿಮಿಷದ ಬದಲಿಗೆ ಸೆಕೆಂಡುಗಳಲ್ಲಿ ಲೆಕ್ಕಿಸುತ್ತ, ಅಂತೂ ಎರಡೂ ಮಕ್ಕಳಿಗೆ ಸಮವಸ ತೊಡಿಸಿ (ಅದನ್ನೂ ಹಿಂದಿನ ದಿನವೇ ಐರನ್ನು, ಕಲರ್ ಯಾವುದು? ವೈಟಾ, ರೆಗ್ಯೂಲ್ಲರಾ? ನೋಡಿಕೊಂಡು) ಡಬ್ಬಾ ಕೈಗಿಡುವ ಮೊದಲು ಎರಡನ್ನು ಕುಳ್ಳಿರಿಸಿ ಬೇಕು ಬೇಡವನ್ನೆಲ್ಲ ಗಮನಿಸುತ್ತಾ, ತಿನ್ನಿಸಲೇ ಬೇಕಾದ ಒತ್ತಡದಲ್ಲಿ ‘ಬೇಗ ಬೇಗ ಮುಕ್ರೆ..’ ಎಂದು ಗದರುತ್ತಾ ಅವರನ್ನು ಕಳಿಸುವವರೆಗೆ ಅರ್ಧದಿನದ ಕೆಲಸ ಮುಗಿಸಿದಂತಾಗಿರುತ್ತದೆ.
ಅಲ್ಲಿಂದ ಇನ್ನೊಂದು ರೌಂಡು. ಗಂಡನ ಡಬ್ಬಾ ಅವನಿಗೆ ಮತ್ತೆ ತಿಂಡಿಗೆ ದೋಸೆ ಹುಯ್ದು, ಕಾಫಿ ಮಧ್ಯದಲ್ಲಿ ಅವನ ಬಟ್ಟೆಬರೆ, ಕರ್ಚೀ- ಜತೆಗೆ ಸ್ವಂತಕ್ಕೂ ತಿಂದು, ಮಧ್ಯಾಹ್ನದ ಟಿಫಿನ್ನು ಮಾಡಿಕೊಂಡು ಬಾಗಿಲಿಕ್ಕಿಕೊಂಡು ಬ್ಯಾಗಿಗೆ (ಇದರಲ್ಲಿ ಇಲ್ಲದ ಸಾಮಾನುಗಳೇ ಇಲ್ಲ. ಹಾಗೆ ತುಂಬಿರುತ್ತೆ. ಅಗತ್ಯಕ್ಕೆ ಒಂದೂ ಸಿಗುವುದಿಲ್ಲ) ಸಾಮಾನು ತುರುಕಿಕೊಳ್ಳುವ ಧಾವಂತದ ಜೊತೆಗೆ ಕೀ, ಕಾರ್ಡು, ಸೆಲ್ಫೋನು, ಅದರ ಚಾರ್ಜರು, ದುಗುಡಕ್ಕೀಡು ಮಾಡುವ ನ್ಯಾಪ್‌ಕಿನ್ನು ಅಡ್ವಾನ್ಸ್ ಆಗಿ ನೆನಪಿಟ್ಟುಕೊಂಡು ಬ್ಯಾಗಿಗೆ ಹಾಕಿಕೊಳ್ಳುತ್ತಾ ‘ಅಯ್ಯೋ ರಾಮ ರಾಮಾ... ಎಂಥಾ ರನ್ನಿಂಗ್ ಮಶಿನ್ನು ರೀ ಲೈಫ್?’ ಎಂಬ ಉದ್ಗಾರ.
ಹೆಣ್ಣು ಅಂತೂ ಇಂತೂ ಹೊರಗೆ ಬಿzಗ ಫಿನಿಶಿಂಗ್ ಮಾಡಿದ ಮಷಿನ್ನಿನ ರಂಗಿಗೆ ಮುಗುಳ್ನಗೆ ಎನ್ನುವ ಪ್ಲಾಸ್ಟಿಕ್ ಸ್ಮೈಲ್ ತೊಡಿಸಿ ಬಸ್ ಹಿಡಿಯುವ, ಇಲ್ಲವೇ ಕೆಟ್ಟ ಸೆಕೆಯ ಕಾಲದಲ್ಲೂ ಹೆಲ್ಮೇಟ್ಟು ಹೇರಿಕೊಂಡು ತಾಸುಗಟ್ಟಲೇ ಗಾಡಿ ಓಡಿಸಿ, ಅಂತೂ ಆಫೀಸು ಸೇರಿಕೊಂಡಿರುತ್ತಾಳೆ. ಸಂಜೆಯ ಸಾಲು ಸಾಲಿನ ಕೆಲಸಗಳ ಒತ್ತಡದಲ್ಲಿ ಅಂತೂ ಹತ್ತಕ್ಕೆ ಮನೆಯೆಂಬೋ ಫ್ಯಾಕ್ಟ್ರಿಯ ಕೆಲಸ ಕೊನೆಯಾಗುತ್ತದೆ. ಇದು ಒಂದು ಮುಖ ಮಾತ್ರ. ಆಯಾ ಮನೆಯ ಕೆಲಸ, ವ್ಯವಹಾರಗಳಿಗೆ ತಕ್ಕಂತೆ ಕಾರ್ಯವಾಹಿ ದುಗುಡ, ದುಮ್ಮಾನಗಳು ಈ ಯಂತ್ರದಲ್ಲಿ ಬದಲಾವಣೆ ಮಾಡುತ್ತಲೇ ಇರುತ್ತದೆ. ಅದಕ್ಕೆ ನಾಲ್ಕು ಗೋಡೆಯ ಮಧ್ಯದ ಬಂಧಿ ಎಂದನಾರೋ ಪುಣ್ಯಾತ್ಮ.ಇದರ ನಂತರವೂ ಆಗೀಗ ಒಲ್ಲದ ಮನಸ್ಸಿನೊಂದಿಗೆ ಮರೆತು ಹೋಗುತ್ತಿದ್ದ ಸೆಕ್ಸಿಗೆ ಹೊಂದಿಕೊಳ್ಳುತ್ತಾ, ಅದರಂದು ಸಣ್ಣ ರೇಗಾಟವೋ ಇನ್ನೇನೋ ನಡೆದು ಬದುಕು ದಿನಕ್ಕೊಮ್ಮೆ ಮಗ್ಗಲು ಬದಲಿಸುತ್ತಿರುತ್ತದ? ನನಗೊಂದು ಪ್ರಶ್ನೆ ಯಾವಾಗಲೂ ಕಾಡುತ್ತಿರುತ್ತದೆ. ಇಷ್ಟೆಲ್ಲ ಮಾಡಿಯೂ ಆ ಸಹನೆ ಉಳಿದಿರುತ್ತದಲ್ಲ ಹೆಣ್ಣುಮಕ್ಕಳಿಗೆ, ಮತ್ತದೆ ಮರುದಿನದ ಬದುಕಿನ ಫ್ಯಾಕ್ಟ್ರಿಯ ಸೈಕಲ್ಲಿಗೆ ಅದೆಲ್ಲಿಂದ ಜೀವನೋತ್ಸಾಹ ಅನುವಾಗಿಸುತ್ತದೆ? ಅದ್ಯಾವ ಹೊಸ ಹುಮ್ಮಸು ಬೆಳಗಿನ ಗಿರಣಿಗೆ ಅವರನ್ನೆಬ್ಬಿಸುತ್ತದೆ? ಒಮ್ಮೆ ದಾಂಪತ್ಯ ದೀಪಿಕೆ ಹಾಡಿಕೊಂಡು ಶುರು ಮಾಡುವ ಸೈಕಲ್ಲಿನ ಪೆಡಲ್ಲನ್ನು ನಿರಂತರವಾಗಿ ಅದ್ಯಾವ ಆಸ್ಥೆಯಿಂದ ಆಕೆ ತುಳಿಯುತ್ತಲೇ ಇರುತ್ತಾಳೋ? ಇದಕ್ಕೆ ದೇವರೂ ಉತ್ತರಿಸಲಾರ.
ದಿನವಹಿ ಜೊತೆಗೆ ಆಗೀಗಿನ ಬಸಿರು, ಬಾಣಂತನ, ರಜೆ, ಪಿರಿಯಡ್ಡು, ನೌಕರಿಯ ಮುನಿಸು, ಬಳಲಿಕೆ, ಬಿದ್ದುಹೋಗುವ ಸಣ್ಣಪುಟ್ಟ ಅ-ರು? ಅವನ್ಯಾರೋ ಇಷ್ಟವಾದರೂ ಸಾಲದ ಧೈರ್ಯ, ಬೇಡವೆನ್ನುವ ಒಳಮನಸ್ಸಿಗೊಂದು ಒದೆಕೊಟ್ಟು ಕಾಫಿಗೆ ಮಾತ್ರ ದೋಸ್ತಿ ಎನ್ನಿಸಿ, ವಾಟ್ಸ್‌ಆಪ್ ‘uಜ್ಚಿಛಿ ಏo uqs’ ಎಂದು ಬದಲಿಸಿಟ್ಟು, ಇಂಥ ಹೊರೆಯೊಂದಿಗೂ ವಾಕಿಂಗ್, ಹಾಡು, ಅ ಪುಸ್ತಕ ಬಿಡುಗಡೆ, ಹೆಂಗಾದರೂ ಸಾವರಿಸಿಕೊಂಡು ಆಗೀಗೊಂದು ಪೂಜೆ ಪುನಸ್ಕಾರ, ಬಂದು ಹೋಗುವ ಗೆಸ್ಟು, ಅದರ ಸಂದಿಯ ಕಿಟಿಪಾರ್ಟಿ ಎಲ್ಲಿಂದ ಬರುತ್ತೆ ಇದಕ್ಕೆ ಶಕ್ತಿ? ‘ಸುಮ್ನಿರು ಅದರ ಮೇಲೂ ಕಣ್ಣು ಹಾಕ್ಬೇಡ. ಗೊತಾಯ್ತಾ ಹೆಣ್ಮಕ್ಳೆ ಸ್ಟ್ರಾಂಗು ಗುರು...’ ಎಂದು ಉಷಾ ಹುಬ್ಬು ಹಾರಿಸುತ್ತಿದ್ದರೆ ನಾನು ಬರಿದೇ ಹಲ್ಲು ಕಿರಿದೆ. ಹೇಳೊಕಾದ್ರೂ ನನ್ನ ಹತ್ತಿರ ಏನಿತ್ತು?
ಕಾರಣ
ಅವಳು ಎಂದರೆ...
(ಲೇಖಕರು ಕಥೆ-ಕಾದ೦ಬರಿಕಾರರು)