" ಐ ಮಿಸ್ ಯು ಟೂ ಮಚ್... " ಮೊನ್ನೆ ಒಂದು ಎಸ್ಸೆಮ್ಮೆಸ್ಸು ಇದ್ದಕ್ಕಿದ್ದಂತೆ ಮೂಡಿ ಬಂತು. ನಂಬರು ಕೊಂಚ ಪರಿಚಿತವೇ. ರಿಡೈಲ್ ತಿರುಗಿಸಿದೆ. " ಹೈ ಸ್ಯಾಂ... ಎಲ್ಲಿದ್ಡಿ. ಮಿಸ್ಸಿಂಗ್ ಯೂ ರಿಯಲಿ..." ದೂರದೂರಿನ ಗೆಳತಿ ವಿಹಾರದ ತಾಣವೊಂದರಿಂದ ಕರೆ ನೀಡಿದ್ದಳು. ಅಷ್ಟರ ಮಟ್ಟಿಗೆ ನಾನು ಪುಣ್ಯವಂತ. ತುಂಬ ಸಂತೋಷದ ಸಮಯದಲ್ಲಿ ನೆನಪಾಗಿದೆ. " ಹ್ಯಾವ್ ಎ ನೈಸ್ ಡೇ... ನೀರಿಗಿಳಿಯುತ್ತಾ ನಿನ್ನ ಗಂಡನ್ನ ತುಂಬಾ ಗೋಳು ಹೊಯ್ಕೋಬೇಡಾ. " ಎನ್ನುತ್ತಾ ಮೇಲ್ ಕೀ ಹಿಂಡಿದೆ. ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತೇವಾ..? ಕೆಲವರಿಗಂತೂ ಈ ಮಿಸ್ ಮಾಡಿಕೊಳ್ಳೊ ಬಗ್ಗೆ ಒಂದು ಸ್ಪಷ್ಟತೆ ಇಲ್ಲದಿದ್ದಾಗಲೂ ರಾತ್ರಿ ಮಲಗುವಾಗಲೂ ಐ ಮಿಸ್ ಯು ಅಂತಾ ಒಂದು ಎಸ್ಸೆಮ್ಮೆಸ್ಸು ತೂರಿ ಬಿಟ್ಟು ಮಲಗಿ ಬಿಡೋದು.
ಅರೇ ಮಲಗುವಾಗಲೂ ಬೇಕು ಅಂತಾದರೆ, ನೆನಪಾದರೆ ಅದು ಮಿಸ್ ಮಾಡಿಕೊಂಡಂತಲ್ಲ. ಅಥವಾ ನಿನಗೆ ಆಕೆಯ ನೆನಪಾದಾಗೆಲ್ಲ ಮಿಸ್ ಅಂತನ್ನಿಸುತ್ತೆ ಅಂತಾದರೆ ಅದೂ ಮಿಸ್ ಅಂತಲ್ಲಪ್ಪ ಎಂದು ವಿವರಿಸಿದರೆ ಸಧ್ಯಕ್ಕೆ ಅದ್ಯಾರಿಗೂ ಅರ್ಥ್ವಾಗುವ ಪರಿಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ನಮಗೆ ಬೇಕಾದಾಗೆಲ್ಲ ನೆನಪಾದಾಗೆಲ್ಲ ಆಕೆಯೋ ಅವನೋ ಇಲ್ಲದಿದ್ದರೆ ಅದು ಒಂದು ಮಿಸ್ಸೇ ಎನ್ನುವಂತಾಗಿಬಿಟ್ಟಿದೆ. ಅದೇ ಸಮಸ್ಯೆಯಾಗಿರೋದು. ತುಂಬಾ ಹೇಳ ಬೇಕಿಲ್ಲದಿದ್ಹರೂ " ಕೊನೆಯಲ್ಲಿ ಐ ಮಿಸ್ ಯು ಯಾರ್.." ಎಂದೋ ಅಥವಾ ಅಲ್ಲೆಲ್ಲಿಂದಲೋ ಒಮ್ಮೆ ಎಸ್ಸೆಮ್ಮೆಸ್ಸು ತೂರಿ ಬಿಟ್ಟು " ಮಿಸ್ಸಿಂಗ್ ಯು ರಿಯಲ್ಲಿ... ಲಾಸ್ಟಿಂಗ್ ಲಾಟ್ ಆಫ್ " ಎಂದು ಬಿಡೋದು ನಿಜಕ್ಕೂ ನಮ್ಮ ಮೇಲಿನ ಅಥವಾ ನಮಗೆ ಅವರ ಮೇಲಿನ ತುಂಬು ಪ್ರೀತಿಯನ್ನು ವ್ಯಕ್ತ ಪಡಿಸಿದಂತೆನ್ನಿಸುತ್ತಾ ? ಇಲ್ಲ ಅದೊಂದು ಗೀಳಾಗಿ ಬದಲಾಗುತ್ತಿದೆಯಾ...? ಸದ್ಯಕ್ಕೆ ಮಿಸ್ಸುಗಳು ಅಂತಾ ಮಿಸ್ ಮಾಡಿಕೊಳ್ಲುವವರೆ ಉತ್ತರಿಸಿಕೊಳ್ಳಬೇಕಾಗಿದೆ.
ತುಂಬು ಆತ್ಮೀಯ ಹೃದಯಕ್ಕೆ ಮನಸ್ಸು ತೀವೃವಾಗಿ ಜೊತೆಗಾರರನ್ನು ಅಥವಾ ಜೊತೆಗಾತಿಯನ್ನು ತನ್ನ ಈ ಸಂತೋಷದ ಕ್ಷಣದಲ್ಲಿ ಪಾಲ್ಗೊಳ್ಳಬೇಕಿತ್ತು ಎಂದೆನ್ನಿಸುವಾಗ, ಮನಸ್ಸು ಇನ್ನಿಲ್ಲದಂತೆ ಅವರನ್ನು ನೆನೆದರೆ ಅದೊಂದು ರೀತಿಯಲ್ಲಿ ಮನಸ್ಸಿಗೆ ಮುದವನ್ನೂ, ಅರಿಯದೇ ಅಂತರಾಳದಲ್ಲಿ ಪ್ರೀತಿಯನ್ನು ಉಕ್ಕಿಸುತ್ತಾ ಮುದವನ್ನು ನೀಡುತ್ತಿದ್ದರೆ ಅದು ಯೆಸ್... ರಿಯಲಿ ಐ ಮಿಸ್ ಯು... ಅನ್ನಬಹುದೇನೋ. ಅಸಲಿಗೆ ಹೀಗೆ ಮಿಸ್ ಮಾಡಿಕೊಳ್ಳೋದ್ಯಾಕೆ ? ಅದೂ ಕೇವಲ ಫ್ರೆಂಡ್ಸನ್ನ ತುಂಬು ಸ್ನೇಹಿತೆಯನ್ನ ಪ್ರೀತಿಸುವವರನ್ನ ಮಾತ್ರ ಮಿಸ್ ಮಾಡ್ಕೋತಿವಲ್ಲ. ಉಳಿದವರೆಲ್ಲಾ ಯಾಕೆ ಈ ಲಿಸ್ಟ್‌ನಲ್ಲಿ ಬರ್ತಿಲ್ಲ. ಪಕ್ಕದೂರಿನ ಅಂಕಲ್ಲು... ಹಳೆಯ ಮೇಸ್ಟ್ರೂ... ಹೋದ ವರ್ಷ ಟ್ರಾನ್ಸ್‌ಫರಾದ ಕ್ಲೋಸ್ ಅಧಿಕಾರಿ... ಇನ್ಯಾರೋ ಪೋಸ್ಟ್ ಮಾಸ್ತರು... ಆಚೆ ಕಡೆಯ ರಸ್ತೆಯ ಊರು ಬಿಟ್ಟು ಹೋದ ವಂದನಾ ಮಾಮಿ... ಆವತ್ತು ಇದ್ದಕ್ಕಿದ್ಡಂತೆ ಮನೆಯವರಿಗೆಲ್ಲ ಔತಣ ನೀಡಿ ನಿಜಕ್ಕೊ ಖುಷಿ ಪಡಿಸಿದ್ದ ಮಾವ... ಇವರೆಲ್ಲಾ ಯಾಕೆ ಒಂದು ಸಲವಾದರೂ ನಮಗೆ ಮಿಸ್ ಅನ್ನಿಸೋಲ್ಲ.
ಅಷ್ಟೇಕೆ ಜೊತೆ ಜೊತೆಯಲ್ಲೇ ಬೆಳೆದ ಕನಿಷ್ಟ ಇಪ್ಪತ್ತು ವಸಂತಗಳನ್ನಾದರೂ ಜೊತೆಯಲ್ಲೇ ಕಳೆದ ಅಣ್ಣ ತಮ್ಮ ಅಕ್ಕಂದಿರನ್ನು ಯಾಕೆ ಮಿಸ್ ಮಾಡ್ಕೋಳ್ಳಲ್ಲ... ಅದ್ಯಾಕೆ ಇಷ್ಟು ನಮ್ಮನ್ನು ಪ್ರೀತಿಯಿಂದ ಬೆಳೆಸಿ ಪಡಬಾರದ ಕಷ್ಟಪಟ್ಟು ಬೆಳೆಸಿದ ಅಮ್ಮನ್ನ .. ನಮಲ್ಲೊಂದು ನಮ್ಮ ಮನಸ್ಸು ದೇಹಕ್ಕೊಂದು ತುಂಬು ತಾಕತ್ತನ್ನು ಬೆಳೆಸಿದ ಅಪ್ಪನನ್ನು ಯಾಕೆ ಮಿಸ್ ಮಾಡಿಕೊಳ್ಳಲ್ಲ...? ಎಂದಾದರೂ ನಿಮ್ಮಮ್ಮನಿಗೋ ಅಪ್ಪನಿಗೋ... ತುಂಬಾ ಮನಸ್ಸಿನಿಂದ ಪುಟ್ಟ ತಂಗಿಗೋ " ಐ ಮಿಸ್ ಯು ರಿಯಲ್ಲಿ ..." ಎಂದು ಎಸ್ಸೆಮ್ಮೆಸ್ಸು ಕಳುಹಿಸಿದ್ದು ಇದೆಯಾ..? ಇದೆ ಎಂದಾದರೆ ನಿಜಕ್ಕೂ ಆ ಮೆಸೇಜು ಪಡೆದಾತ ತುಂಬಾ ಪುಣ್ಯವಂತ. ಅಪರೂಪಕ್ಕೊಮ್ಮೆ ಅಕ್ಕತಂಗಿಯರು ಫ್ರೆಂಡ್ಸ್ ತರಹದವರು " ಸೆಂಡ್ " ಎಂದು ಕೀ ಕುಟ್ಟಿರಬಹುದು ಅಷ್ಟೆ.
ವಿಚಿತ್ರ ಅನ್ನಿಸಲ್ವಾ... ನಮ್ಮದೇ ರಕ್ತಗಳ ಜೊತೆಗೆ ನಮ್ಮದೇ ಸಂತೋಷವನ್ನು ಹಂಚಿಕೊಳ್ಳುವಾಗ ನಾವ್ಯಾವತ್ತೂ ಮಿಸ್ ಮಾಡಿಕೊಳ್ಳೊದೇ ಇಲ್ಲ. ಇವನಿಗೆ ಅದೇ ನಿನ್ನೆ ಮೊನ್ನೆ ಪರಿಚಯವಾದ ತುಂಡು ಮಿಡಿಯ ಹುಡುಗಿಯದೇ ಹಗಲೂ ರಾತ್ರಿ ಧ್ಯಾನ... ಮೊನ್ನೆಯಷ್ಟೆ ಪರಿಚಯವಾಗಿ ಕೈಗೊಂದಿಷ್ಟು ಹೂವಿನೆಸಳು ಸೇರಿಸಿದ ಬೊಕ್ಕೆ ಇಟ್ಟು, ಕೈಗೊಂದು ಗ್ರೀಟಿಂಗ್ಸು ಕೊಟ್ಟು " ಸೊ ನೈಸ್ ಆಫ್ ಯು " ಎಂದುಬಿಟ್ಟ ಆ ಪಡ್ಡೆಯ ಕೆದರಿದ ಕೂದಲಿನ ಹಳೆಯ ಜೀನ್ಸ್‌ನ ರಂಗೇ... ಮನದಲ್ಲಿ ಕ್ಯಾನ್ವಾಸ್ ಬರೆದು ತಾನೇ ತಾನಾಗಿ ಚಿತ್ರಿಸುತ್ತಿದೆ ಹುಡುಗಿಯ ಮನದಲ್ಲಿ. ಯಾಕ್ಹೀಗೆ...? ಮನಸ್ಸು ತನಗೆ ಇಷ್ಟವಾದಾಗ ಇಷ್ಟವಾಗೋ ರೀತಿಯಲ್ಲಿ ಸ್ವೀಕರಿಸುತ್ತದೋ ಆಗ ಆಗೋದೇ ಹೀಗೆ.
ಹದಿವಯಸ್ಸಿನ ರಂಗು ರಂಗೇರುವ ಕಾಲಕ್ಕೆ ನಡೆಯುವ ವಿದ್ಯಮಾನದಲ್ಲಿ ಹೃದಯಗಳಿಗೆ ಮನಸ್ಸಿನದೋ ಪ್ರೀತಿಯದ್ದೋ ಮೊರೆತ ಬಿಟ್ಟರೆ ಬೇರೆ ಕೇಳಿಸುವುದೇ ಇಲ್ಲ. ಯಾವಾಗಲೂ ಅದೇ ಧ್ಯಾನ. ಹೀಗಾಗುವುದರಿಂದಲೇ ಇದ್ಡಕ್ಕಿದ್ದಂತೆ ಇಬ್ಬರಿಗೂ " ಮಿಸ್ " ಎನ್ನಿಸಲಿಕ್ಕೆ ಶುರುವಾಗಿಬಿಡುತ್ತದೆ. " ಡು ಯು ರಿಯಲಿ ಮಿಸ್ ಮಿ... ? " ಎಂದು ಮೇಲಿಂದ ಕೇಳೋದು ಬೇರೆ. ಅಷ್ಟಕ್ಕೆ ಆ ಹುಡುಗ " ನಿಜವಾಗ್ಲೂ ಕಣೆ... ನಂಗೆ ನಿನ್ನ ನೆನಪಾದ್ರೆ ನಿದ್ರೆ ಊಟ ಯಾವುದೂ ಸೇರ್ತಾನೆ ಇಲ್ಲ... ಟಿ.ವಿ. ನೋಡ್ತಾನೂ ನಿನ್ನ ಮಿಸ್ ಮಾಡ್ಕೋಳ್ತಿನಿ ಗೊತ್ತಾ" ಎಂದು ಗೋಗರೆಯುತ್ತಾ ಹಲಬುತ್ತಾನೆ. ಮಾತುಗಳನ್ನು ಹರ್ಭಜನ್‌ಗಿಂತಲೂ ಕೊಂಚ ಜಾಸ್ತಿನೇ ಎನ್ನುವಂತೆ ಸ್ಪಿನ್ ಮಾಡುತ್ತಾನೆ. ಅಷ್ಟೆ ಸರಿಯಾಗಿ ನೆತ್ತಿ ಮಾಸು ಹಾರದ, ಬ್ರಾ ಸೈಜು ಅಳತೆ ಮಾಡಿಕೊಳ್ಳಕ್ಕೆ ಬರದ ಹುಡುಗಿ ಅಷ್ಟಕ್ಕೆ ಕ್ಲೀನ್ ಬೋಲ್ಡ್. ಆಚೀಚೆ ಸರಿಸಿ ನೋಡಿದರೆ ಆಕೆಗಿನ್ನೂ ತಿಂಗಳು ಯಾವಾಗ ಬರುತ್ತದೆ ಎಂದು ಲೆಕ್ಕ ಹಾಕಿಕೊಳ್ಳಲೇ ಬರುತ್ತಿರುವುದಿಲ್ಲ. ಕೊನೆ ಕ್ಷಣದಲ್ಲಿ ಪ್ಯಾಡ್ ತಂದುಕೊಳ್ಳುವ ಧಾವಂತದ ಕನ್ಪ್ಯೂಸ್ ಸ್ಟೇಟ್‌ನವಳು ಆಕೆ. ಅವಳೂ ಬೇರೆನೂ ಹುಡುಗನಷ್ಟು ನಾಚಿಕೆ ಬಿಟ್ಟು ಸಲೀಸಾಗಿ ಬೇರೇನೂ ಹೇಳಲು ಆಗದಿದ್ದರೂ ಅದಕ್ಕೊಂದು ಕೊನೆಯಲ್ಲಿ " ಐ ಟೂ " ಎಂದು ಉಸುರಿ ಸೇರಿ ಬಿಡುತ್ತಾಳೆ.
ಅಲ್ಲಿಂದ ಶುರುವಾಗೋ ಮಿಸ್ಸಿಂಗು ಕೊನೆ ಕೊನೆಗೆ ಇಬ್ಬರೂ ಮಿಸ್ ಆಗುವವರೆಗೂ ನಡೆಯುತ್ತಲೇ ಇರುತ್ತದೆ. ಕೊಂಚ ಯೋಚಿಸಿ. ನಿದ್ರೆ ಊಟ ಬೇಡವಾದ ಹುಡುಗನಿಗೆ ಕಕ್ಕಸಿಗೆ ಅರ್ಜೆಂಟು ಆದ್ರೆ ತಡೆಯೋ ತಾಕತ್ತಿದೆಯಾ. " ನಿನ್ನ ನೆನಪಲ್ಲಿ ಕಕ್ಕಸಿಗೆ ಹೋಗೋದನ್ನೆ ಮರೆತು ಬಿಟ್ಟೆ ಕಣೆ... ಐ ಮಿಸ್ ಯು " ಎಂದ್ಯಾವನಾದ್ರೂ ಹೇಳಲಿ ನೋಡೋಣ... ಅಥವಾ ನಿನ್ನ ನೆನಪಲ್ಲಿ ಸ್ನಾನ ಮಾಡೋದು ಮರೆತು ಬಿಟ್ಟೆ ಹಲ್ಲುಜ್ಜೋದು ಮರೆತು ಬಿಟ್ಟೆ ಆಗೆಲ್ಲ " ಐ ಮಿಸ್ ಯು " ಅನ್ನಲಿ ನೋಡೋಣ. ಅದು ಬಿಟ್ಟು ಕಾಸಿಗೊಮ್ಮೆ ಕೊಸರಿಗೊಮ್ಮೆ ಮನಸ್ಸಿಗೆ ಖುಷಿಯಾಗೋ ಅನ್ನಿಸೋ ಮೊಮೆ೦ಟಿಗೆ ಮಾತ್ರ ಮಿಸ್ಸಿಂಗು ಅಂತಾರಲ್ಲ ಈಗ ಹೇಳಿ ನಿಜವಾಗಿಯೂ ಅದು ಮಿಸ್ಸಿಂಗು ಅನ್ನಿಸುತ್ತಾ... ?
ಅದೇ ಒಮ್ಮೆ ತಪ್ಪದೇ ನಿಮ್ಮ ರಿಸಲ್ಟ್ ಬಂದಾಗ್ಲೋ ಅಥವಾ ಯಾವುದಾದರು ಸಣ್ಣ ಪ್ರಶಸ್ತಿ ಬಂದಾಗಲಾದರೂ ಅಪ್ಪನಿಗೆ ಫೋನು ಮಾಡಿ " ನಿಜವಾಗಿಯೂ ನೀನಿರಬೇಕಿತ್ತು ಪಪ್ಪ. ನಾನು ಸ್ಟೇಜ್ ಮೇಲಿದ್ದಾಗ ರಿಯಲಿ ಐ ಮಿಸ್ಡ್ ಯು... " ಎಂದು ಬಿಡಿ. ಅಷ್ಟು ಸಾಕು ಆ ಹಿರಿಯ ಜೀವಕ್ಕೆ. ಜೀವನದಲ್ಲಿ ಅದಕ್ಕಿಂತಲೂ ದೊಡ್ಡ ಮಿಸ್ಸಿಂಗು ಆಗಿರಲು ಸಾಧ್ಯವೇ ಇಲ್ಲ ಅನ್ನಿಸಿಬಿಡುತ್ತೇ. ಪುಟ್ಟ ತಂಗಿಗೆ ಫೋನು ಮಾಡಿ " ಚಿಕ್ಕ ಪಾರ್ಟಿಲಿ ಫ್ರೆಂಡ್ಸ್ ಮನೇಲಿ ಇದೇನೆ... ನೀನಿರಬೇಕಿತ್ತಮ್ಮ. ಐಸ್ ಕ್ರೀ೦ ಅಂದ್ರೆ ನಿಂಗೆ ತುಂಬಾ ಇಷ್ಟ ಅನ್ನಿಸಿ ನೆನಪಾಯಿತು. ಮಿಸ್ಸಿಂಗ್ ಯು " ಅಂದು ನೋಡಿ.. ನಿಜಕ್ಕೂ ಮಿಸ್ ಆಗುತ್ತಿರುವುದೇನೆಂದು ಗೊತ್ತಾಗುತ್ತದೆ. ಇದರರ್ಥ ಪ್ರೀತಿಸುವವರೂ ಹುಡುಗರೂ ಹದಿ ವಯಸಿನವರೂ ಮಿಸ್ಸ್ ಮಾಡಿಕೋಬಾರದು ಅಂತಲ್ಲವಾದರೂ ನಿಜಕ್ಕೂ ನಾವು ಮಿಸ್ ಮಾಡಿಕೊಳ್ತಿರೋದಾದರೂ ಏನು ಗೊತ್ತಾಗಬೇಕಲ್ವಾ ?
ನಿಜಕ್ಕೂ ನನಗೊಂದು ಎಸ್ಸೆಮ್ಮೆಸ್ಸೋ ಅಥವಾ ನೇರ ಕರೆಯೊ ಮಾತಾಡಿ ನಿಜಕ್ಕೂ ಮಿಸ್ ಮಾಡಿಕೊಂಡದ್ದನ್ನು ಖಚಿತಪಡಿಸಿದಾಗ ಮಾತ್ರ. ಈ ರೀತಿ ಮಾತಾಡಿದಾಗ ನಾನೂ ನಿಜಕ್ಕೂ ಕೆಲವಾದರೂ ಓದುಗರನ್ನ ಮಿಸ್ ಮಾಡಿಕೊಂಡಿದ್ದು ಸುಳ್ಲಲ್ಲ ಎನ್ನಿಸಿತು. ಎಷ್ಟೆ ಬರೆದರೂ ಎಷ್ಟೆ ಓದಿದರೂ ಇಂಥದ್ದೊಂದು ಇದೆ ಎಂದು ನೆನಪಿನಲ್ಲುಳಿಯುತ್ತದಲ್ಲ... ಬಾರದಿದ್ದಾಗ ಅರೇ ಬರಲಿಲ್ಲ. ಛೇ ಎನ್ನಿಸುತ್ತದಲ್ಲ... ಅದಕ್ಕಿಂತ ಮಿಸ್ ಬೇಕಾ ?