Saturday, September 7, 2013

ಏಕಾಂತ ಎನ್ನುವ ಪರಮ ಸುಖ .... !!!

      ನಿಜಕ್ಕೂ ಮನುಶ್ಯನೊಬ್ಬ ತನ್ನ ಬಗ್ಗೆ ಯೋಚಿಸಿಕೊಳ್ಳಲು ಸಿಗುವ ಪ್ರಶಸ್ತ ಏಕಾಂತ ಸ್ಥಳವೆಂದರೆ ಒಂದು ಬಾತ್ ರೂಮಿನಲ್ಲಿ... ಎರಡನೆಯದ್ದು ಟಾಯ್ಲೆಟ್ಟಿನಲ್ಲಿ... ಬೃಹತ್ ಯೋಚನೆಗಳು ಕೆಲವೊಮ್ಮೆ ಅದ್ಭುತ ಐಡಿಯಾಗಳು ಹೊಳೆಯುವುದೇ ಏಕಾಂತದಲ್ಲಿ ಅದೂ ಈ ಇರುಕಾದ ಟಾಯ್ಲೆಟ್ಟು ಎನ್ನುವ ಮೂರು ಬೈ ನಾಲ್ಕರ ರೂಮಿನಲ್ಲಿ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ದಿನದಲ್ಲಿ ಒಮ್ಮೆ ಅಥವಾ ಎರಡು ಬಾರಿ ಲಭ್ಯವಾಗುವ ಕೆಲವು ನಿಮಿಷಗಳು ಏನೇನೆಲ್ಲಾ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗುತ್ತವೆ ಎನ್ನೋದು ಅನುಭವಿಸಿದವರಿಗೇ ಗೊತ್ತು. ನಿಜಕ್ಕೂ ಮನೆಯಲ್ಲೊಂದು ಸಂಗೀತ ಸಾಧನ ಟೇಪ್.. ಸಿ.ಡಿ.ಪ್ಲೇಯರಿದ್ದು ಅದ್ಭುತವಾದ ಸಂಗೀತವನ್ನು ಕೇಳುವ ಮತ್ತು ಅಂತಹ ಹಾಡುಗಳ ಒಂದು ಸಂಗ್ರಹ ಬಳಿಯಲ್ಲಿದ್ದರೆ ಅದರ ಮಜವೇ ಬೇರೆ.
        ಅದರ ಜೊತೆಗೆ ಏಕಾಂತದಲ್ಲಿ ಸರಕ್ಕನೆ ಬಂದು ಅಡರಿಕೊಳ್ಳುವ ಕಾಮ... ಕುಡಿತ... ದೂರವಾಣಿಲಿ ಸಂಭಾಷಿಸುವಂತಹ ವ್ಯಸನಗಳು ಮನುಶ್ಯನಿಗಿಲ್ಲದಿದ್ದರೆ ಆ ಏಕಾಂತದ ಅನುಭವವೇ ಅದ್ಭುತ. ಎಷ್ಟೊಂದು ಕೆಲಸಗಳು... ಐಡಿಯಾಗಳು... ಅಛೀವ್‌ಮೆಂಟುಗಳಿಗೆ ಬೇಕಾಗುವ ಅಪರೂಪದ ಎಲಿಮೆಂಟುಗಳ ವಿವರಗಳು.. ಅಷ್ಟೇಕೆ ಕಟ್ಟಕಡೆಯಲ್ಲಿ ಸ್ನಾನ ಮಾಡಿ ಬರುವಾಗ ಹೇಗಿದ್ದರೂ ಯಾರೂ ಇಲ್ಲ.. ಹೇಗಿದ್ದರೇನು ಎಂದುಕೊಂಡು ನೇರಾ ನೇರ ನಗ್ನ ಮುನಿಯಂತೆ ಬಾತ್ ರೂಮಿನಿಂದ ಬೀಳುತ್ತಿರುವ ಟವಲ್ ಲೆಕ್ಕಿಸದೇ ಈಚೆಗೆ ಬಂದೂ ಬಿಡುವ ಖಯಾಲಿ ಬಹುಶ: ಏಕಾಂತದಲ್ಲಲ್ಲದೇ ಬೇರೆಯ ಹೊತ್ತಿನಲ್ಲಿ ಬರಲು ಸಾಧ್ಯವೇ ಇಲ್ಲವೇನೋ...? ಸುಖಾಸುಮ್ಮನೆ ಬಿದ್ದುಕೊಂಡಿರುವುದೂ ಅಲ್ಲದೇ... ಗಂಟೆಗಟ್ಟಲೇ ಮಾತೇ ಆಡದೇ ನಮ್ಮಷ್ಟಕ್ಕೆ ಗುನುಗುನಿಸಿಕೊಳ್ಳದೇ... ಸುಮ್ಮನೇ ಚಾಚಿದ ಕಾಲು ಸರಿಸದೆ.. ಉರಿಯುವ ಬಲ್ಬು... ಹೊಡೆದುಕೊಳ್ಳುತ್ತಿದ್ದ ಟಿ.ವಿ. ಉಹೂಂ.. ಯಾವೆಂದರೆ ಯಾವೂದೂ ಕೂಡಾ ಬದಲಿಸದೆ ಬಿದ್ದುಕೊಂಡು ಬಿಡುವ... ಇದ್ದ ಇಷ್ಟೆ ಹಳೆಯ ಸಾರು.. ಬ್ರೆಡ್ಡು.. ನಿನ್ನೆಯ ರೋಟಿ.. ಎಲ್ಲ ಓ..ಕೆ.. ಆದರೆ ಈ ಅದ್ಬುತ ಏಕಾಂತವನ್ನು ಅನುಭವಿಸುವ ಮತ್ತು ಅದನ್ನು ಉಪಯೋಗಿಸಿಕೊಳ್ಳುವ ಮನಸ್ಸು ನಮಗಿರಬೇಕು ಅಷ್ಟೆ. ಅಂತಹದ್ದೊಂದು ಏಕಾಂತಕ್ಕಾಗಿ ನಾನು ಯಾವಾಗ್ಲೂ ಹಾತೊರೆಯುತ್ತೇನೆ. ತೀರ ಟೆಲಿಫೋನ್ ಲೈನಗಳನ್ನು ತೆಗೆದಿಟ್ಟು ಕಂಪ್ಯೂಟರಿನಲ್ಲಿರುವ ಆಶಾಳಿಗೆ ಜೀವ ಕೊಟ್ಟು, ಸಣ್ಣಗೆ ಆಕೆ " ಲಗ ಜಾ ಗಲೇ ಕೆ ಫೀರ್ ಯೆ ಹಸಿ ರಾತ್ ಹೋನ ಹೋ..." ಹಾಡುತ್ತಿದ್ದರೆ ಕುಳಿತಲ್ಲೇ ಜೀವ ಕಂಪಿಸಿಬಿಡಬೇಕು. ಹಾಗೇ ಅನಾಮತ್ತು ಆರು ದಿನ ಒಂದೇ ಒಂದು ಹೊರಗಿನ ಜೀವಿಯ ಸಂಪರ್ಕವೂ ಇಲ್ಲದಂತೆ ಬದುಕಿಬಿಟ್ಟಿದ್ದೆ ಕೇವಲ ಎಕ್ಸ್‌ಫೆರಿಮೆಂಟು ಎಂದು.

         ಬಹುಶ: ೧೯೯೮ ನವೆಂಬರ್ ಮಧ್ಯಭಾಗವಿರಬೇಕು. ನಾನು ಬೆ೦ಗಳೂರಿನಿಂದ ಪಯಣಿಸುತ್ತಿದ್ದೆ. ಸರಿ ಸುಮಾರು ಮಧ್ಯರಾತ್ರಿ ಒಂದೂವರೆ ಹೊತ್ತಿಗೆ ಮಲಗಿದ್ದವರು ಅಲ್ಲೆ ಮಗುಚಿ ಬೀಳುವಂತೆ ಡ್ರೈವರು ಬ್ರೇಕಿಸಿದ. ಸರಿಯಾಗಿ ಹರಿಹರ ದಾಟಿ ರಾಣೆಬೆನ್ನೂರು ಕಡೆ ಹೋಗುವ ದಾರಿಯಲ್ಲಿ ನಡೆದ ಆಕ್ಸಿಡೆಂಟ್ ಅದು. ಮುಂದೆ ನಿಂತಿದ್ದ ಲಾರಿ ಮತ್ತು ಬೇರೊಂದು ಬಸ್ಸಿನ ನಡುವೆ ನುಜ್ಜುಗುಜ್ಜಾಗಿದ್ದ ಮಾರುತಿ ವ್ಯಾನಿನಿಂದ ಅರೆ ಜೀವಗಳು ಒದ್ದಾಡುತ್ತಿದ್ದವು. ತೀರ ಕತ್ತಲಿನ ಅಪರಾತ್ರಿ. ದೇಹವೊಂದು ಈಚೆಗೆ ಬಂದು, ಬರೀ ಕೈ ಮಾತ್ರ ಗಾಳಿಯಲ್ಲಿ ಅಲುಗಾಡುತ್ತಾ ರಸ್ತೆಯ ಮಧ್ಯದಲ್ಲಿ ಭೀಕರತೆಯನ್ನು ಸೃಷ್ಟಿಸಿತ್ತು. ಬಹುಶ: ಯಾರೆಂದರೆ ಯಾರೂ ಬದುಕಿರಲಿಲ್ಲ. ಡ್ರೈವರ್ ಸೀಟಿನಲ್ಲಿದ್ದ ವ್ಯಕ್ತಿಯ ತಲೆ ಹೊಟ್ಟೆಯ ಭಾಗದಲ್ಲಿತ್ತು. ಆ ಅಫಘಾತಕ್ಕೂ ನಮ್ಮ ಬಸ್ಸಿಗೂ ಏನೆಂದರೆ ಏನೂ ಸಂಬಂಧವಿರಲಿಲ್ಲ. ಆದರೆ ಅದನ್ನು ಕೊಟ್ಟಕೊನೆಯಲ್ಲಿ ನೋಡಿದ ಚಾಲಕ ಸರಕ್ಕನೇ ಬ್ರೇಕ್ ತುಳಿದಿದ್ದ. ಸೀಟಿನ ಕೆಳಗೆ ಕಾಲು ಚಾಚಿ ಹಿಂದಕ್ಕೆ ಒರಗಿಕೊಂಡಿದ್ದ ನಾನು ಆ ವೇಗಕ್ಕೆ ಸಿದ್ಧನಿರಲಿಲ್ಲ. ಕಾಲು ಅಲ್ಲೇ ಇತ್ತು ದೇಹ ಮುಂದಕ್ಕೆ ಸರಿಯಿತು. ಪಾದ ಕದಲಿಸಲಾಗದಂತೆ ಲಗೇಜು ಇದ್ದುದರಿಂದಾಗಿ ಅಲ್ಲಿ ಹೊರಳಿಕೊಂಡು ಬಿಟ್ಟಿತು.

     ಎಲ್ಲರಿಗೂ ಅಷ್ಟಿಷ್ಟು ಏಟಾಗಿದ್ದವು. ಅಂತಹ ದೊಡ್ಡ ಗಾಯಗಳೇನೂ ಆಗಿರಲಿಲ್ಲ. ಆದರೆ ನನಗೆ ಎಲ್ಲಿ ಫ್ರಾಕ್ಚರ್ ಆಗಿದೆಯಾ ಎಂದು ಅನುಮಾನ ಬರುತ್ತಿತ್ತು. ಯಾಕೆಂದರೆ ಅದು ಕ್ಷಣ ಕ್ಷಣಕ್ಕೂ ಊದಿಕೊಳ್ಳುತ್ತಿತ್ತು. ಕೂಡಲೇ ಶೂ ತೆಗೆದು ನೀಟಾಗಿ ಇನ್ನೊಂದು ಸಾಕ್ಸ್ ಹಾಕಿ ಕಟ್ಟಿ ಮತ್ತಷ್ಟು ಊದಿಕೊಳ್ಳದಂತೆಯೂ, ಅಲುಗಾಡದಂತೆಯೂ ಬಿಗಿದು ಬೆಳಗಿನವರೆಗೆ ಹಾಗೇ ಕುಳಿತು ಬಿಟ್ಟೆ. ಊರಿಗೆ ತಲುಪಿದವನೇ ಇಳಿದು ಅಲ್ಲೇ ಇದ್ದ ಲೈಟು ಕಂಭಕ್ಕೊರಗಿ ನಿಂತು ಆಟೋ ಕರೆದು ಅವನ ಸಹಾಯದಿಂದ ಮನೆ ಸೇರಿಕೊಂಡಾಗ ಆ ಆದ್ಭುತ ಐಡಿಯಾ ಹೊಳೆದಿದ್ದು. ಕೂಡಲೇ ಆಟೋದವನಿಗೆ ಹೇಳಿದೆ. ಒಂದು ಗಂಟೆಯ ನಂತರ ಹಿಂದಿರುಗಿ ಬರುವಂತೆ. ಮನೆಯಲ್ಲಿ ಒಂಟಿಗಾಲಲ್ಲಿ ಓಡಾಡುತ್ತಾ ಸ್ನಾನ ಮುಗಿಸಿ ಹಾಸ್ಪಿಟಲ್‌ಗೆ ಹೋಗಿ ಎಕ್ಸರೇ ತೆಗೆಸಿದರೆ, ಸದ್ಯ ಮೂಳೆ ಮೂರಿದಿರಲಿಲ್ಲ. ಬಿರುಕೂ ಇರಲಿಲ್ಲ.

          ಆದರೆ ಹೊರಳಿದ ರಭಸಕ್ಕೆ ನರಗಳು ತಿರುಚಿಕೊಂಡು ಬಿಟ್ಟಿದ್ದವು. ಹಾಗಾಗಿ ಒಂದು ವಾರ ಬೆಡ್ ರೆಸ್ಟ್ ಎಂದು ಬ್ಯಾಂಡೇಜು ಬಿಗಿದು ನನ್ನನ್ನು ಮೂಟೆಯಂತೆ ಆಟೋಗೆ ತುಂಬಿಸಿದರು. ಡ್ರೈವರ್ ಸಹಾಯ ಪಡೆದು ಆರು ದಿನಕ್ಕಾಗುವಷ್ಟು ಹಾಲಿನ ಪುಡಿ... ಮೊಟ್ಟೆ... ಬ್ರೆಡ್ಡು... ವೆಜಿಟೇಬಲ್ಸ್ ತೆಗೆದುಕೊಂಡು ಮನೆಯೊಳಕ್ಕೆ ನಡೆದು ಹೋದವನ ಮನೆಯ ಬಾಗಿಲು ತೆಗೆಯುತ್ತಿದ್ದುದು ಬೆಳಿಗ್ಗೆ ಎಚ್ಚರಾಗಿ ಪೇಪರು ತೆಗೆದುಕೊಳ್ಳುವಾಗ ಮಾತ್ರ. ಇಲ್ಲದಿದ್ದರೆ ಅನಾಮತ್ತು ಆರು ದಿನ ಬಾಗಿಲು ತೆಗೆಯದೆ ಹೊರಕ್ಕೆ ಹೋಗದೆ... ಸ್ನಾನ... ಟಾಯ್ಲೆಟ್ಟು. ತಿಂಡಿ.. ಪೇಪರು..ಟಿ.ವಿ. ಸಿ.ಡಿ.ಯಲ್ಲಿ ಕಿಶೋರನ ಹಾಡು... ಕಣ್ತುಂಬಾ ನಿದ್ದೆ. ರಾತ್ರಿಗೆ ಫ್ರಿಜ್ಜಿನಲ್ಲಿ ಇದ್ದೇ ಇರುತ್ತಿದ್ದ ಬಿಯರು....

       ಅಷ್ಟೆ... ಹಾಗೆ ಕಳೆದ ತೀರ ಆರನೆಯ ದಿನ ಸಂಜೆ ಬೆಲ್ ಆಯಿತು. ದಿನಾಲು ಲೈಟು ಉರಿಯುತ್ತಿತ್ತು. ಪೇಪರು ಕಾಣೆಯಾಗುತ್ತಿದೆ. ಆದರೆ ಈ ಮನುಶ್ಯ ಯಾಕೆ ಹೊರಗೆ ಬರುತ್ತಿಲ್ಲ ಎಂದು ಸ್ನೇಹಿತ ಬಂದು ಬೆಲ್ ಬಾರಿಸಿದ್ದ. ಅಲ್ಲಿಗೆ ನನ್ನ ಏಕಾಂತ ವಾಸ ಕೊನೆಗೊಂಡಿತ್ತು. ಕಾಲು ಸುಮಾರಾಗಿ ವಾಸಿಯಾಗಿತ್ತಾದರೂ ಇನ್ನೂ ಊರಲಾಗುತ್ತಿರಲಿಲ್ಲ. ಹಾಗಾಗಿ ಅವನೇ ಮುಂದೆ ನೋಡಿಕೊಂಡ. ಆದರೆ ಅದ್ಭುತವಾಗಿ ಕಳೆದು ಹೋದ ಆ ಆರು ದಿನಗಳು ನಿಜಕ್ಕೂ ಒಬ್ಬಂಟಿತನದ ಮುಕ್ತತೆಗೊಂದು ಅರ್ಥ ಕಲ್ಪಿಸಿದ್ದವೆಂದರೂ ಸರಿನೇ. ಯಾಕೆಂದರೆ ಮಾಮೂಲಿನಂತೆ ಬೆಳಗು... ರಾತ್ರಿ... ಮಧ್ಯೆ ಅನಾವಶ್ಯಕ ಕಿರಿಕಿರಿಗಳಿಲ್ಲ. ಇನ್ನೇನು ಬೇಕು.

      ತೀರ ನಿಜಕ್ಕೂ ಅನುಭವಿಸಬೇಕಾದಂತಹ ಶಾಂತತೆ ಇರುತ್ತಿತ್ತು. ಮಾತು ಅಸಲಿಗೆ ಇಲ್ಲವೇ ಇಲ್ಲ. ತೀರ ಯಾವಾಗಲಾದರೊಮ್ಮೆ ಸಣ್ಣದಾಗಿ ಮೊದಲೆರಡು ದಿನ ಹಾಡು ಗುನುಗಿಸಿದ್ದೆ ಅನ್ನೋದು ಬಿಟ್ಟರೆ ಕೊನೆಕೊನೆಗೆ ಮನಸ್ಸಿನಲ್ಲೂ ಯೋಚನೆಗಳೂ ಸ್ಥಗಿತಗೊಳ್ಳಲಾರಂಭಿಸಿದ್ದವು. ಮನಸ್ಸು ಮತ್ತು ದೇಹದೊಂದಿಗಿನ ಸಂಬಂಧವೇ ಕಡಿದು ಹೋಗುತ್ತಿರುವ ಫೀಲಿಂಗ್ ಆರ೦ಭಗೊಳ್ಳುವ ಅಪರೂಪದ ಕ್ಷಣ ಆಗ ಆರಂಭವಾಗಿತ್ತು. ಮಾತಂತೂ ನಿಂತು ಹೋಗಿತ್ತು. ಮನಸ್ಸು ತನ್ನಷ್ಟಕ್ಕೆ ಮೌನವಾಗಿ ಸ್ಥಮ್ಭಿಸಿಬಿದುತ್ತಿತ್ತು. ಯಾಕೆಂದರೆ ಎಲ್ಲ ಯೋಚನೆಗಳಿಂದ ಚಿಂತೆಗಳಿಂದ ಮುಕ್ತವಾಗಿ ಮನಸ್ಸನ್ನು ಹರಿಯಲು ಬಿಟ್ಟು ತುಂಬು ಏಕಾಗ್ರತೆಯಿಂದ ಕುಳಿತುಬಿಡೋದೇ ಧ್ಯಾನ ಅಲ್ಲವಾ... ? ಏನು ಮಾಡುತ್ತಿದ್ದೇನೆ ಎನ್ನುವ ಅರಿವೂ ಇಲ್ಲದ ಹಾಗೆ ಗಂಟೆಗಳು ಕಳೆದುಹೋಗುತ್ತಿದ್ದವು. ತೀರ ನಿಸರ್ಗ ಸಹಜ ಬಾಧೆಗಳನ್ನು ಹೊರತು ಪಡಿಸಿದರೆ ಮತ್ತಾವ ಸಂವೇದನೆಗಳೂ ಅರಿವಿಗೆ ಬರುವುದನ್ನು ಕಡಿಮೆ ಮಾದತೊದಗಿದ್ದವು. ನಿಶಬ್ದ.. ಸಂಗೀತ.. ಶಾಂತಿ... ಓದು.. ಮೌನದಲ್ಲೇ ನಿದ್ದೆ.. ನಿದ್ದೆಯಲ್ಲೂ ಮೌನ.... ಇನೇನು ಬೇಕು.. ಆದರೆ ಹಾಗೊಂದು ಅಪರೂಪದ ಕ್ಷಣಗಣನೆಯ ಹಂತವನ್ನು ನಾನು ತಲುಪುವ ಸಮಯಕ್ಕೆ ಆ ಏಕಾಂತ ಮುಗಿದಿತ್ತು. ಬಹುಶ: ಬೇರೆ ಬೇರೆ ರೀತಿಯ ಅನುಭವಗಳೂ ಆಗಬಹುದೇನೋ. ಆದರೆ ನಾವು ಯಾವ ಯಾವ ರೀತಿಯ ಪರಿಸರದಲ್ಲಿ ಏಕಾಂತ ಕಳೆಯುತ್ತೇವೆಯೋ ಅದರ ಮೇಲೆ ಅವಲಂಬಿಸುತ್ತದೆ ಎನ್ನುವುದೂ ಅಷ್ಟೆ ಸತ್ಯ.

ಯಾಕೆಂದರೆ ಒಮ್ಮೆ ಗಂಡ ಮನೆಯಿಂದ ಹೊರಟ ಮೇಲೆ ಎಷ್ಟೊ ಮಹಿಳೆಯರಿಗೆ ವಾಪಸ್ಸು ಮಗು ಬರುವವರೆಗೆ ಅದ್ಭುತ ಏಕಾಂತ ಬೇಡವೆಂದರೂ ಲಭ್ಯ. ನಮ್ಮಲ್ಲೊಂದು ಗಮ್ಯವಿದ್ದರೆ ಲಭ್ಯವಾಗುವ ಏಕಾಂತ ನಿಜಕ್ಕೂ ತುಂಬಾ ದಿವ್ಯ ಅನುಭವವೇ. ಆದರೆ ಏಕಾಂತ ಕೆಲವೊಬ್ಬರಿಗೆ ಹಿಂಸೆಯಾಗಿ ಪರಿವರ್ತಿತವಾಗುವುದೂ ಇದ್ದೇಇದೆ. ಯಾಕೆಂದರೆ ಯಾವಾಗಲೂ ಲಭ್ಯವಾಗುವ ಏಕಾಂತವೇ ಕೆಲವೊಮ್ಮೆ ಬೇಡ ಎನ್ನಿಸಿಬಿಡಲೂ ಬಹುದು. ನಮ್ಮ ಬಗೆಗೆ ನಾವೇನು ಎಂದು ಆತ್ಮ ವಿಮರ್ಶೆಗೆ ಬಹುಶ: ಏಕಾಂತದಷ್ಟು ಸೂಕ್ತ ಸಮಯ ಬೇರೊಂದಿಲ್ಲವೇನೋ...? ಆದರೆ ಮನಸ್ಸೆ ಗೊಬ್ಬರದ ಗುಂಡಿಯಂತೆ ಮಾಡಿಕೊಂಡವರಿಗೆ ಏಕಾಂತ ಖಂಡಿತಕ್ಕೂ ದೆವ್ವದ ಕಾರ್ಖಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ.

3 comments:

 1. ಆದರೆ ಮನಸ್ಸೆ ಗೊಬ್ಬರದ ಗುಂಡಿಯಂತೆ ಮಾಡಿಕೊಂಡವರಿಗೆ ಏಕಾಂತ ಖಂಡಿತಕ್ಕೂ ದೆವ್ವದ ಕಾರ್ಖಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ.

  ee maatu noorakke nUru satya....

  kaigaa da jeevana nenapaayiu sir....

  super write up...

  ReplyDelete
  Replies
  1. ಥ್ಯಾಂಕ್ಸ್ ದಿನಕರ.. ಕೈಗಾ - ಕಾರವಾರ - ಉ.ಕ.ಜಿಲ್ಲೆಯ ಅದರಲ್ಲೂ ಕರ್ನಾಟಕದ ಜೀವನ ಎಲ್ಲೂ ಸಿಗಲಾರದು.. ನಿಮ್ಮ ಬರಗಳು ಸಾಕಷ್ಟು ಪ್ರಬುದ್ಧ ಮತ್ತು ಆಸಕ್ತಿಕರ.. ಆಗೀಗ ನಿಮ್ಮ ಬ್ಲಾಗ್ ಓದುತ್ತಿದ್ದೇನೆ .. ಖುಷಿಯಾಗುತ್ತೆ... ನಮ್ಮ ಮಾಸ್ತ ಹೇಗಿದ್ದಾರೆ..?

   Delete
 2. ಬಹುಶಃ ಏಕಾಂತವೆನ್ನುವುದು ಸಂತೋಷ ಅಥವಾ ದುಃಖವನ್ನು ಅತ್ಯಂತ ಉತ್ಕಟವಾಗಿ ಅನುಭವಿಸಿಬಿಡಬಹುದಾದಂತಹ ಕ್ಷಣ. ಆದರೆ ಅದನ್ನು ಅನುಭವಿಸಲು ಅನುಭವವಿಲ್ಲದವರಿಗೆ ಅದೇ ಅತೀ ಬೇಸರದ ಕ್ಷಣ ಎನ್ನಿಸಿಬಿಡಬಹುದು. ನನ್ನ ಇಂಜಿನಿಯರಿಂಗ್ ಶಿಕ್ಷಣದ ಸಮಯದಲ್ಲಿ ಈ ಕ್ಷಣಗಳ ಮಧುರ ಅನುಭವವಿದೆ. ಯಾಕೋ ಬದಲಾದ ಈ ಮೊಬೈಲುಗಳು ನಮ್ಮನ್ನು ಆವರಿಸಿಕೊಂಡಿರುವ ಪರಿಸ್ಥಿತಿಯಲ್ಲಿ ಅಂತಹ ಕ್ಷಣಗಳು ಬರಲಾರವೆಂದು ನೆನೆದು ಮನಸ್ಸು ಆ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತದೆ!!

  ReplyDelete