ಬದಲಾವಣೆಯ ಚಕ್ರದಲ್ಲಿ ಬದುಕು ಸಿಕ್ಕಿಹಾಕಿಕೊ೦ಡಾಗ...
ತು೦ಬ ಚೆ೦ದವಾಗಿ ಬದುಕತೊಡಗಿದ್ದಾಗಲೇ, ಹೀಗೊ೦ದು ತಿರುವು ಬರುತ್ತದಾ ಎನ್ನುವ ಯೋಚನೆಯೂ ಬ೦ದಿರುವುದಿಲ್ಲ. ಏನೇ ಆಗುವುದಾದರೂ ಅದು ನಮ್ಮ ಬದುಕಿಗಾಗಲಿಕ್ಕಿಲ್ಲ ಎ೦ಬ ವಿಶ್ವಾಸದಿ೦ದಿರುತ್ತೇವಲ್ಲ ಅಲ್ಲೇ ತಪ್ಪಾಗಿರುತ್ತದೆ.
‘ಎಲ್ಲಿದ್ದೀಯೋ.. ನೀ ಮಾತಾಡಕ್ಕ ಸಿಗ್ತೀಯೊ ಇಲ್ವೋ ಅಂತಾಬಿಟ್ಟಿದ್ದೆ. ಪೇಪರಿನೋರು ನಂಬರ್ ಕೊಡೊದಿಲ್ಲ ಅಂತಾರೆ. ಅದಕ್ಕೆ ಇ-ಮೇಲ್ ಮಾಡಿದ್ದೆ’ ಎನ್ನುತ್ತಾ ನನ್ನನ್ನು ಮರೆತುಹೋದ ಕಥಾನಕಕ್ಕೆ ಎಳೆದು ತಂದವಳು ಭಾವಿ. ಆಕೆಯ ಪೂರ್ತಿ ಹೆಸರು ಭಾವನಾ ಶಂಕರ್‌ರಾವ್. ಮೊನ್ನೆವರೆಗೂ ಮರೆತೇ ಬಿಟ್ಟಿದ್ದ ಭಾವಿಯನ್ನು ಮತ್ತೆ ಆಕೆ ನೆನಪಿಸಿಕೊಂಡು ಕರೆ ಮಾಡಿದಾಗಲೇ ನಾನು ನೆನಪಿಗೂ, ಆಕೆಯ ಇರುವಿಕೆಗೆ ಸ್ಪಂದಿಸಿದ್ದು. ಕಾರಣ ಸರಿಸುಮಾರು ಮೂನ್ನೂರಕ್ಕೂ ಹೆಚ್ಚು ಸಹಪಾಠಿಗಳನ್ನೂ, ನೂರಾರು ಸ್ನೇಹಿತರನ್ನೂ ಹಾಯ್ದು ಬಂದಾಗ ತೀರಾ ನಮಗೆಲ್ಲೂ ತಾಗದೇ ಉಳಿದು ಬಿಡುವವರೂ, ಆಗೀಗ ಇದ್ದಕ್ಕಿದ್ದಂತೆ ಬದುಕಿನ ಮಧ್ಯೆ ಪ್ರವೇಶಿಸಿ, ಧುತ್ತನೆ ಇನ್ನೆಲ್ಲೋ ಪ್ರತ್ಯಕ್ಷವಾಗಿ ಅಚ್ಚರಿಗೀಡು ಮಾಡುವವರೂ ಇಲ್ಲದಿಲ್ಲ. ಹಾಗಾಗೇ ನಮ್ಮಲ್ಲಿ ಆ ಮಟ್ಟಿಗಿನ ಸಲುಗೆ, ಆ ವಯೋಸಹಜ ವಾಂಛೆಗಳ ಕಾಲದಲ್ಲಿ ಭಾವಿ ಎನ್ನುವ ಹುಡುಗಿ ಹುಡುಗಾಟದ ಕಾಲಾವಽ ಹೊರತು ಪಡಿಸಿದರೆ ಅದ್ಯಾಕೋ ಭಿತ್ತಿಯಿಂದ ಕಣ್ಮರೆಯೇ ಆಗಿ ಹೋಗಿದ್ದು ಹೌದು.
ಬೆಂಗಳೂರಿನ ಗಲ್ಲಿಗಳಲ್ಲಿ ನಮ್ಮೊಂದಿಗೆ ಜಗಳಕ್ಕೆ ಬೀಳುವಾಗ ನಮಗ್ಯಾರಿಗೂ ಈ ಮಟ್ಟಿಗಿನ ಪರಿಸ್ಥಿತಿಯಲ್ಲಿ ಬದಲಾವಣೆಗಳು ಬಂದಾವೆಂಬ ಅಂದಾಜು ಬಿಡಿ, ಭವಿಷ್ಯತ್ತಿನ ಬಗೆಗೆ ಯಾವೊಂದು -ಂಟಸಿಯೂ ಇರಲಿಲ್ಲ. ನಾವಿದ್ದ ಪರಿಸ್ಥಿತಿಗೆ ಕನಸಲ್ಲಿ ಕೂಡಾ ಒಂದೊಳ್ಳೆ ಸೀನು ಬರುತ್ತಿರಲಿಲ್ಲ. ಎಲ್ಲ ಬ್ಲಾಕ್ ಆಂಡ್ ವೈಟ್ ಚಿತ್ರಣಗಳೇ. ಅಂತಹದರಲ್ಲಿ ಒಬ್ಬರು ಹೊರಲಿಕ್ಕಾಗದಷ್ಟು ಗಾತ್ರದ ದೊಡ್ಡ ಟಿ.ವಿ. ಮತ್ತು ಬ್ಯಾಕ್ ಟು ಬ್ಯಾಕ್ ದಾಂಗುಡಿಯಿಟ್ಟ ವಿ.ಸಿ.ಪಿ ಅತಿದೊಡ್ಡ ಆಕರ್ಷಣೆ ಆಗ. ಅದೆಷ್ಟೇ ಮಾಸಿದ ಅರೆಬರೆ ಗೆರೆ ಹಾಯುತ್ತಿದ್ದ ಸಿ.ಡಿ ಸಿಕ್ಕಿದರೂ ಕೂತು ಕಣ್ರೆಪ್ಪೆ ಮುಚ್ಚದೆ ನೋಡುತ್ತಿದ್ದ ಕಾಲ ಅದು.
ಇದನ್ನೆಲ್ಲಾ ನೋಡಲು ನಾವು ವಾರಕ್ಕೊಮ್ಮೆಯಾದರೂ ಸಂಪಾದಿಸುತ್ತಿದ್ದ ಕ್ಯಾಸೆಟ್ಟಿಗೆ ಟಿ.ವಿ. ಎಂಬ ಮಾಯಾಪೆಟ್ಟಿಗೆ ಜೊತೆಗೆ ಅದರ ಪ್ಲೇಯರನ್ನೂ ಒದಗಿಸುತ್ತಿದ್ದುದು ಭಾವಿ. ಸಾಯಂಕಾಲಗಳಿಗೆ ನಮ್ಮೊಂದಿಗೆ ಜಿದ್ದಿಗೆ ಬಿದ್ದಂತೆ ಗಾಡಿ ಓಡಿಸಿಕೊಂಡು ಬರುತ್ತಿದ್ದಳು. ನಮ್ಮದೋ ಯಾರೋ ಕೊಡುತ್ತಿದ್ದ ಎಂ.೮೦ ಅಥವಾ ನಾನು ಆಗೀಗ ಆಫೀಸಿನಿಂದ ರಾತ್ರಿ ಎತ್ತಿಟ್ಟುಕೊಂಡು ಬರುತ್ತಿದ್ದ ಆರ್‌ಟಿಝೆಡ್ಡು. ಆಕೆ ಆ ಕಾಲದ -ಮಸ್ಸು ಯೆಜ್ಡಿಯನ್ನು ಓಡಿಸಿಕೊಂಡು ಬೆಂಗಳೂರಿನ ರಸ್ತೆಗಳಿಗೆ ಬೆಂಕಿ ಇಕ್ಕುತ್ತಿದ್ದಳು. ಆದರೆ ನಿಲ್ಲಿಸುವಾಗ ಮಾತ್ರ ನಾವು ಕೈಯಿಕ್ಕದಿದ್ದರೆ ‘ಕ್ವಾಣ(ಕೋಣ)ದ್ದಂಗಿದೀರಿ. ಹುಡುಗಿ ಅನ್ನೋ ಖಬರ್ ಬ್ಯಾಡ. ಸ್ಟ್ಯಾಂಡ್ ಹಾಕೂದಾಗುದಿಲ್ಲಾ?’ ಎಂದು ನಮ್ಮ ಚಳಿ ಬಿಡಿಸುತ್ತಿದ್ದಳು. ಬದುಕು, ಜೀವನೋತ್ಸಾಹ ಆಕೆಯಿಂದ ಕಲಿಯಬೇಕಿತ್ತು. ನಲ್ವತ್ತು ಕೆ.ಜಿ. ತೂಗುತ್ತಿದ್ದ ಹುಡುಗಿ ಬಾಯಿ ಮಾತ್ರ ಭಯಂಕರ. ನಾವು ನಾಲ್ಕಾರು ಹುಡುಗರು ಬೊಬ್ಬಿರಿದರೂ ಒಬ್ಬಳೇ ಅಡಚಿಬಿಡುತ್ತಿದ್ದಳು ನಮ್ಮನ್ನು. ಅಂಥ ಬಾಯಿ, ಮಾತಿಗೂ ಮುಂಚೆ ಸಿಡಿಸಿಡಿ ಸಿಡಿಯುತ್ತಿದ್ದ ಆಕೆ ಅಚ್ಚುಕಟ್ಟೂ ಹೌದು. ನಾವೇನಾದರೂ ಯಾವುದಾದರು ಕೆಲಸ, ನಾಳೆ ನೋಡೋಣ ಎನ್ನುತ್ತ ಹಗುರವಾಗಿ ತೆಗೆದುಕೊಂಡರೆ ನಮ್ಮ ಸೋಮಾರಿತನಕ್ಕೆ ನೀರಿಳಿಸುತ್ತಿದ್ದ ಹುಡುಗಿಯ ದೇಹದಲ್ಲಿ ಅಂಥ ಕಸುವಿತ್ತೋ ಇಲ್ಲವೋ ಆದರೆ ಆಕೆಯ ಧಾಡಸಿತನಕ್ಕೆ ನಾವು ಅವಳಿಲ್ಲದಾಗ ‘ಜಾಸ್ತಿ ಎಗರಾಡಬ್ಯಾಡ. ಭಾವಿ ಬಂದು ಮನಗಂಡ ಝಾಡಸ್ತಾಳ ನೋಡು’ ಎಂದಾಡಿಕೊಳ್ಳುವಷ್ಟು ಪ್ರಭಾವ ಬೀರಿದ್ದಳು. ಓದುವ ಹುಡುಗರಿಗೆ ನಾವು ಯಾವ ರೀತಿಯ ಭರವಸೆಯನ್ನೂ ಹುಟ್ಟಿಸುವವರಲ್ಲವಾಗಿದ್ದರಿಂದ, ನಮ್ಮ ಜೊತೆ ಸುತ್ತುತ್ತಿದ್ದ ಭಾವಿಯ ಬಗ್ಗೆಯಂತೂ ಕೇಳುವುದೇ ಬೇಡ.
‘ಏಯ್, ಆಕೀ ಓದಿ ಯಾವ ಕಂಪನಿ ಉದ್ಧಾರ ಆಗ್ಬೇಕಾಗ್ಯದ್ ಬಿಡ್ರೋ, ಇನ್ನೊಂದ ನಾಲ್ಕ ವರ್ಷ ಕಳದರ ಮದುವಿ ಆಗ್ತದೆ. ಆಮೇಲೆ ಆಕಿನ್ನ ಕುದರಿ ಜೋಡಿ ಕಳಿಸೋದಷ್ಟ ಬಾಕಿ ನೋಡರಿ’ ಎನ್ನುತ್ತಾ ಶಂಕರ್‌ರಾವ್, ಇನ್ನೇನೂ ಈ ಹುಡುಗಿಯಿಂದ ಆಗಲಾರದು ಎನ್ನುವ ನಿಟ್ಟಿನಲ್ಲಿ ನುಡಿಯುತ್ತಿದ್ದರೆ, ಮೇಲಿಂದ ಕೆಳಗೊಮ್ಮೆ ದಿಟ್ಟಿಸುತ್ತಿದ್ದೆ. ಕಾರಣ ನಾವೆಲ್ಲಾ ಆಗ ಭವಿಷ್ಯದ ಯಾವ ಕಲ್ಪನೆಗೂ ಶ್ರೀಕಾರ ಹಾಕಲೊಲ್ಲದ ದರವೇಶಿತನದ ಪರಮಾವಽಯಂತಿದ್ದೆವು. ಆಗೀಗ ‘ಭಾವಿನ್ನ ಮದುವಿ ಆದರ ಹ್ಯಾಂಗ’ ಎನ್ನುತ್ತಿದ್ದ ರವಿಯನ್ನು ಮಾತ್ರ ನಾನು ಕನಿಕರದಿಂದ ದಿಟ್ಟಿಸುತ್ತಿದ್ದೆ. ಅಂದೇ ಸಂಜೆ ಹೊತ್ತಿಗೆ ಅನಾಹುತ ಆಗಿತ್ತು.
ನಮ್ಮ ರೂಮಿನ ಹತ್ತಿರ ಯೆಜ್ಡಿ ನಿಲ್ಲಿಸಿದ ಶಬ್ದ. ಬಂದಾಗಲೇ ಯಾಕೋ ಆಕೆ ಬಂದುದು ನಾರ್ಮಲ್ ಇದ್ದಂಗಿಲ್ಲ ಎನ್ನಿಸಿ ನಾವು ಮುಖಮುಖ ನೋಡಿಕೊಳ್ಳುತ್ತಿದ್ದರೆ, ದಢಾರನೆ ಬಾಗಿಲು ಒದ್ದು ಒಳಬಂದ ಭಾವಿ ಚಿಟಿಚಿಟಿ ಚೀರುತ್ತಾ ರವಿಯನ್ನು ಹುಡುಕತೊಡಗಿದ್ದಳು. ಮಧ್ಯಾಹ್ನದ ನಿದ್ರೆಯಿಂದಿನ್ನು ಏಳದ ನಾನು ಕಣ್ಣುಜ್ಜಿಕೊಳ್ಳುತ್ತಾ ‘ಏನು ಏನಾತು? ಭಾವಿ ಯಾಕ ಹಿಂಗ’ ಎನ್ನುತ್ತಿದ್ದರೆ ಬುಸುಗುಡುತ್ತಿದ್ದೋಳು, ‘ಅಲ್ಲ ನಿನಗರ ಗೊತ್ತಾಗೋದಿಲ್ಲೇನು? ಕಾಗದಾ ಬರದ್ರ ನನಗ ಬರೀಬೇಕ ಹೌದಿಲ್ಲೋ? ನಮಪ್ಪನ ಕೈಯ್ಯಾಗ ಕೊಟ್ಟಾನಲ್ಲ. ಎಲ್ಲಿದಾನು? ಅಸ್ಥಿಪಂಜರಕ್ಕ ಪ್ಯಾಂಟು ತೂಗ ಹಾಕಿದಂಗಿದಾನು, ಥೇಟ್ ದೆವ್ವಿದ್ದಂಗಿದಾನು. ಮೊದಲು ನನ್ನ ಹತ್ತಿರ ಮಾತಾಡಬೇಕು ಅನ್ನೋ ಖಬರ್ ಬ್ಯಾಡೆನು?’ ಎನ್ನುತ್ತಿದ್ದರೆ ನಡೆದದ್ದೇನು ಎಂದು ಈಗ ಸ್ಪಷ್ಟವಾಗುತ್ತಿತ್ತು. ಮನದೊಳಗೇ ಮಂಡಿಗೆ ಮೇಯುತ್ತಿದ್ದ ರವಿ, ತಾನು ಕೇಳುವ ಮೊದಲೇ ಆಕೆಯನ್ನೆಲ್ಲಾದರೂ ಮದುವೆ ಮಾಡಿಯಾರೆಂಬ ದಿಗಿಲಿಗೆ ಬಿದ್ದು ಭಾವಿಗೊಂದು ಕಾಗದ ಬರೆದುಕೊಂಡಿದ್ದಾನೆ. ಹೋಗಲಿ ಅವಳ ಕೈಗಾದರೂ ಇಟ್ಟಿದ್ದಾನಾ? ಅದೂ ಇಲ್ಲ. ಮಧ್ಯಾಹ್ನದ ರಣರಣ ಬಿಸಿಲಿನಲ್ಲಿ ಕಾಲೇಜು ತಿರುಗಿ ಅಲ್ಲೆಲ್ಲೂ ಕಾಣದಿದ್ದಾಗ ವಿಚಾರಿಸುತ್ತಾ ಮನೆಗೂ ತಲುಪಿದ್ದಾನೆ. ಮನೆಗೆ ಹೋಗುವುದು ಹೊಸದೇನೂ ಆಗಿರಲಿಲ್ಲ. ಮನೆಯಲ್ಲಿ ಆಚೀಚೆ ನೋಡಿದ್ದಾನೆ. ಆಕೆ ಕಂಡಿಲ್ಲ. ಅವರಪ್ಪ ‘ಏನೋ’ ಎಂದು ಪ್ರಶ್ನಿಸಿದ್ದಾರೆ. ನಿಜವಾದ ಕಾರಣ ಹೇಳಲು ಮತ್ತು ತಕ್ಷಣಕ್ಕೆ ಬೇರೆ ನೆಪ ಹೇಳಲು ಆಗದಿದ್ದಾಗ ‘ಏನಿಲ್ಲ ಇದನ್ನು ಭಾವಿಗ ಕೊಡಬೇಕಿತ್ತು’ ಎನ್ನುತ್ತಾ ಹಲ್ಲು ಗಿಂಜಿ ಅವರಪ್ಪನ ಕೈಗೆ ಲಕೋಟೆ ಇಟ್ಟು ಬಂದಿದ್ದಾನೆ.
ಮನೆಯಲ್ಲಿ ಎಲ್ಲರೂ ಭಾವಿಯನ್ನು ತಮಾಷೆ ಮಾಡಿದ್ದೇ ಮಾಡಿದ್ದು. ಅಷ್ಟು ಸಾಕಾಗಿದೆ ಅವಳಿಗೆ. ಅಪ್ಪಟ ಚೆನ್ನಮ್ಮನ ಪೋಸಿನೊಂದಿಗೆ ಗಾಡಿ ಎಳೆದುಕೊಂಡು ಬಂದು ಅವನನ್ನು ಹುಡುಕತೊಡಗಿದ್ದಳು. ಅವರಪ್ಪ ನಗೆಯಾಡಿ ಅಳಿಯಾ ಬಂದಿದ್ದ ಎನ್ನುತ್ತಾ ಹಗುರವಾಗೇ ತೆಗೆದುಕೊಂಡು ಭಾವಿಯನ್ನು ಕಾಡಿಸಿದ್ದಾರೆ. ಆದರೆ, ಅದರ ಅವಮಾನ ತಟ್ಟಿದ್ದು ಭಾವಿಗೆ. ಅದಕ್ಕೆ ಇಲ್ಲಿಗೆ ಬಂದು ಎಗಾದಿಗಾ ಕುಣಿಯತೊಡಗಿದ್ದಳು. ಆವತ್ತು ರವಿ ಆಕೆಯ ಕೈಗೆ ಸಿಕ್ಕಿದ್ದರೆ ಖಂಡಿತಕ್ಕೂ ಒದೆ ಬೀಳುತ್ತಿದ್ದವೇನೋ. ಆದರೆ ಅದರ ಮರುದಿನವೂ ಅವನು ರೂಮಿಗೆ ಕಾಲಿಡುವ ಸಾಹಸ ಮಾಡಲಿಲ್ಲ.
ಇದೇ ನೆಪ ಉಪಯೋಗಿಸಿಕೊಂಡು ಇನ್ನೊಬ್ಬ ಸ್ನೇಹಿತ ಅವನನ್ನು ಅಲ್ಲಿಂದ ಗುಳೆ ಹೋಗುವಂತೆ ಮಾಡಿಬಿಟ್ಟ. ವಾರೊಪ್ಪತ್ತು ಕಳೆಯುವ ಮೊದಲೇ, ರವಿ ನೇತಾಕಿದ್ದ ಎರಡು ಪ್ಯಾಂಟು, ಲುಂಗಿ ಸೆಳೆದುಕೊಂಡು ಮತ್ತಿಕೆರೆಯ ರೂಮಿಗೆ ಹೊರಟುಹೋಗಿದ್ದ. ಆದರೆ, ಕೊನೆಗೂ ಭಾವಿ ಹೋಗಲಿ, ಯಾರನ್ನೂ ಮದುವೆನೇ ಆಗಲಿಲ್ಲ. ಅದ್ಯಾವ ಕಾರಣಕ್ಕೆ ಪಾಂಡಿಗೆ ಹೋದನೋ? ರವಿ ಮತ್ತೆ ಜೀವಂತ ಹಿಂದಿರುಗಲೇ ಇಲ್ಲ. ಭಯಾನಕ ರೋಗಕ್ಕೆ ಸಿಕ್ಕಿ ಮುಗಿದುಹೋಗಿದ್ದ. ನಮ್ಮ ಟೀಮು ಹೋಗುವಷ್ಟರಲ್ಲಿ ನೋಡಲು ಮುಖವೂ ಸಿಕ್ಕಿರಲಿಲ್ಲ. ‘ಹುಡುಗ ಛಲೋ ಇದ್ದ. ಆದರೆ ಧೈರ್ಯ ಇರ್ಲಿಲ್ಲ ಬಿಡು’ ಎಂದು ಭಾವಿ ನೀರುಬಿಟ್ಟಿದ್ದಳು.
ಅದಾಗಿ ನಾವೆಲ್ಲಾ ಚದುರಿಹೋಗುವ ಕಾಲದಲ್ಲಿ ಭವಾನಿ ಚೆಂದ ಚೆಂದ ಎನ್ನುವ ದಪ್ಪ ಗಾಜಿನ ಕನ್ನಡಕದ ಹುಡುಗನೊಬ್ಬನನ್ನು ಮೆಚ್ಚಿ ಮದುವೆ ಆಗಿದ್ದಳು. ಅವನು ಹುಡುಗ ಎನ್ನುವುದಕ್ಕಿಂತಲೂ ಅವಳ ಹಿಂದಿಂದೆ ಸುತ್ತುವ ಪರಿಗೆ ‘ಮದುವಿ ಗಂಡನ ಜೋಡಿ ಮಾಡ್ಕೊಂಡ್ಯೋ, ಇಲ್ಲ ಒಬ್ಬ ಪಿ.ಎ.ಅನ್ನು ಮಾಡ್ಕೊಂಡ್ಯೋ’ ಎಂದು ಆಕೆಯನ್ನು ಆಡಿಕೊಂಡು ಗಡದ್ದಾಗಿ ಜಿಲೇಬಿ ಉಂಡು ಬಂದಿದ್ದೆವು. ಅದಾದ ಮೇಲೆ ಎರಡು ದಶಕದ ಗ್ಯಾಪಲ್ಲಿ ಭಾವಿ ಮಾತಿಗೆ ಸಿಕ್ಕಿದ್ದಳು.
ನಸು ಹಳದಿ ಗೋಡೆಗಳ ಕೆಳಗೆ ಗಾಢವರ್ಣದ ಪಟ್ಟಿಗಳಿದ್ದ ಚಿಕ್ಕ ಹಾಲ್. ತುಂಬಿದ್ದ ಸಾಮಾನುಗಳ ಮಧ್ಯೆ ಆರಾಮು ಕುರ್ಚಿಯಲ್ಲಿ ಶಂಕರ್‌ರಾವ್ ಗುರುತೇ ಸಿಗದಷ್ಟು ಕುಗ್ಗಿ ಕೂತಿದ್ದರೆ, ಟಕ್‌ಟಕ್ ಎನ್ನುತ್ತ ಶಬ್ದಿಸುತ್ತಾ ಓಡಾಡುತ್ತಿದ್ದ ಭಾವಿ ಕಾಲೆಳೆದು ನಡೆಯುತ್ತಿದ್ದಳು. ಸೋ-ದಲ್ಲಿ ಕೂತಿದ್ದ ನನ್ನೆದುರಿಗೆ ಕಾಫಿ ಇಡುತ್ತಾ ನಿಸ್ತೇಜವಾದರೂ ದಣಿವಾಗಿಲ್ಲ ಎನ್ನುವಂತಿದ್ದ ಮುಖದಲ್ಲಿ ಮೊಳಕಾಲ ಬಳಿ ಕೈ ಹಾಕಿ ಹುಕ್ಕು ಕದಲಿಸಿ ಕಾಲು ಎತ್ತಿ ಆಚೆಗಿಡುತ್ತಾ ಸೀಟಿನ ಮೇಲೆ ಕೈಯಿಟ್ಟು, ನನ್ನೆಡೆಗೆ ತಿರುಗಿ ‘ಕಾಫಿ’ ಎಂದು ಎಚ್ಚರಿಸುತ್ತಿದ್ದರೆ ನಾನು ಎತ್ತಿಟ್ಟ ಕಾಲು, ಮಡಚಿ ಹೋದ ಕೈಗಿದ್ದ ಶಾಶ್ವತವಾದ ಖಾಕಿಬಣ್ಣದ ಪಟ್ಟಿ ನೋಡುತ್ತ ಕೂತಿದ್ದೆ. ಉಳಿದದ್ದು ಮುಂದಿನ ವಾರಕ್ಕೆ. ಆದರೆ ಮುಖದಲ್ಲಿ ಮಾತ್ರ ಒಂದಿನಿತೂ ಹಿಂಗಾಯ್ತು ಎನ್ನುವ ತುಮುಲವಿರಲಿಲ್ಲ.
ಕಾರಣ ಅವಳು ಎಂದರೆ...