Wednesday, June 22, 2016

ಬಹುಶಃ ಸಂಶಯ ಮತ್ತು ಇನ್‌ಸೆಕ್ಯೂರಿಟಿಗಳು ಗಂಡಸರಿಗಿದ್ದಷ್ಟು ಹೆಂಗಸರಿಗಿಲ್ಲ. ಆದರೆ, ಹೆಣ್ಣು ಪ್ರತಿ ಕ್ರಿಯೆಗೂ ಒಂದು ಉತ್ತರ ಸಿದ್ಧ ಪಡಿಸಬೇಕಾದಲ್ಲಿ ಆಕೆ ಯಾವ ಡಿಕ್ಷನರಿ ಹುಡುಕಿಯಾಳು?

 
ಗಂಡಸರಿಗೆ ಇಂಥದ್ದೊಂದು ಸಂಶಯ ಯಾಕಾದರೂ ಬರುತ್ತದೋ? ಅವರ ಒಳಗೊಳಗಿನ ಇನ್‌ಸೆಕ್ಯೂರಿಟಿಗಳು, ಇನ್‌ಫಿರಿಯಾರಿಟಿಗಳು ಅದೇನು ಇರ್ತಾವೋ ನನಗಿವತ್ತಿಗೂ ತಿಳಿದಿಲ್ಲ. ಆದರೆ, ಯಾವುದೇ ಸಕಾರಣವಿಲ್ಲದೆ ಪ್ರತಿ ದಿನ-‘ಎಲ್ಲೋಗಿದ್ದೆ, ಏನು ಮಾಡ್ತಿದ್ದೆ? ಯಾರು, ಯಾಕೆ ಫೋನ್ ಮಾಡಿದರು? ಯಾರಾದರೂ ಬಂದಿದ್ರಾ? ಏನಾದರೂ ಬೇಕಿದ್ರೆ ನಾನೇ ತರ್ತೀನಿ, ನೀನು ಹೊರಗೆ ಹೋಗೋದು ಬೇಡ, ಇಂತಹದ್ದೇ ಬಟ್ಟೆ ಹಾಕೋ’, ಅಪ್ಪಿತಪ್ಪಿ ಬೇರೆಯದು ಹಾಕಿದರೆ ಹಾಕಿದಷ್ಟೂ ಹೊತ್ತು ಮುಖ ದಪ್ಪ ಮಾಡಿಕೊಂಡು ಸರಿಯಾಗಿ ಮಾತೇ ಆಡದೆ, ಯಾಕಾದರೂ ತನಗಿಷ್ಟದ ಬಟ್ಟೆ ತೆಗೆದುಕೊಂಡೆವೋ ಎಂಬಂತಾಗಿಸಿಬಿಡುತ್ತಾರೆ. ಅಷ್ಟ್ಯಾಕೆ, ಯಾರು ಬಂದರೂ ಹೋದರೂ ‘ಅಬ್ಬಾ’ ಎನ್ನುವಷ್ಟು ಸೂಕ್ಷ್ಮವಾಗಿ ಮತ್ತು ಸಮಾಧಾನವಾಗಿ ಬಂದವರ ಅತಿಥಿಗಳು ಸಂಬಂಧಿಕರ ಎದುರಿಗೆ ಇವನು ನನ್ನ ಗಂಡನೇನಾ ಎನ್ನಿಸುವಷ್ಟು ಆದರ-ಸದರ ಸ್ವಭಾವ.  ಆದರೆ, ಅದ್ಯಾವ ಸಂಶಯ ಅಥವಾ ಕೀಳರಿಮೆ ಕಾಡುತ್ತಿರುತ್ತದೋ ಗೊತ್ತಿಲ್ಲ. ಅದರಲ್ಲೂ ಬೇರೆ ಸ್ನೇಹಿತರು ತಪ್ಪಿಯಾದರೂ-‘ನಿನ್ನ ಹೆಂಡತಿ ಸ್ಮಾರ್ಟು’, ‘ನಿಮ್ಮನೆಯವರು ಭಾರಿ ಸೋಶಿಯಲ್ ಅದಾರು ಎಲ್ಲಾ ಸುಧಾರಸ್ತಾರು’ ಎನ್ನುವಂತಹ ಹೊಗಳಿಕೆಗೆ ಈಡು ಮಾಡಿದರೋ ಮುಗಿದೇ ಹೋಯಿತು. ಹೊಗಳಿಕೆ ಹೊನ್ನ ಶೂಲವಾಗುತ್ತದೆ! ಅಂಥವರೊಂದಿಗೆ ಬದುಕುವ ಹೆಣ್ಣುಮಕ್ಕಳು ಮಾತ್ರ ಉಣ್ಣಲಾಗದ ಉಗಿಯಲಾಗದ ಬಿಸಿ ತುಪ್ಪದಂತೆ ಬದುಕಿಬಿಡುತ್ತಾರೆ.
    ಸರಾಸರಿ ದಶಕಗಳ ಕಾಲಾವಧಿಯಲ್ಲಿ ಆಗೀಗ ಸಂಪರ್ಕದಲ್ಲಿದ್ದ, ಫೇಸ್‌ಬುಕ್ಕು, ವಾಟ್ಸ್‌ಆಪ್ ಬಂದ್ಮೇಲೆ ಸರಾಗವಾಗಿ ಎಟಕುತ್ತಿದ್ದ ಬಿಂದು ‘ಏನೂ ಮಾಡುತ್ತಿಲ್ಲ ಮನೆಯಲ್ಲೇ ಇದೀನಿ’ ಎನ್ನುತ್ತಿದ್ದರೆ ಇದ್ಯಾಕೆ ಹಿಂಗೆ ಎನಿಸದಿರಲಿಲ್ಲ. ಕಾರಣ, ಆಕೆ ಒಂದು ಕಡೆ ಕೂತ ಹುಡುಗಿಯೇ ಅಲ್ಲ. ಪೇಂಟಿಂಗು ಮಾಡ್ದೆ, ಇನ್ಯಾವುದೋ ಮನೆಯ ಗೋಡೆಗೆ ಚಿತ್ರ ಬರೆದು ಗಲೀಜು ಮಾಡಿದೆ, ಇನ್ನೊಬ್ಬರ ನೋಟ್‌ಬುಕ್ ತುಂಬ ಚೆಂದವಾಗಿ ಬೇಕಾದುದನ್ನೆಲ್ಲಾ ಗೀಚಿ ಕೊಟ್ಟೆ, ಅದ್ಯಾವುದೂ ಇಲ್ಲದಿದ್ದಾಗ ಹಳೆಯ ಡ್ರೆಸ್ಸಿನ ಚೆಂದದ ಭಾಗ ತೆಗೆದು ಅದನ್ನೇ ಆಚೀಚೆ ಮಡಚಿ ಹೊಸದರ ಮೇಲೆ ಪ್ಯಾಚ್‌ವರ್ಕ ಮಾಡಿ ಬೋಟಿಕ್ ವರ್ಕ್ ಮಾಡುತ್ತಾ, ಇನ್ನೇನೂ ಇಲ್ಲದಿದ್ದರೆ ಒಂದಷ್ಟು ಚೆಂದಗೆ ಅಡುಗೆ ಮಾಡಿಕೊಂಡು ಒಬ್ಬಳೆ ಕೂತು ಉಂಡೇಳುವ ಜೀವನ ಪ್ರೀತಿಯ ಹುಡುಗಿ ಆಕೆ. ಆಕೆಯ ಮಾತು ಮತ್ತು ಸಂಗ್ರಹದಲ್ಲಿ ವಿಷಯ ವಸ್ತುಗಳು ಹೊರತಾದುದೇ ಇಲ್ಲ. ಅಷ್ಟು ಪ್ರತಿ ಕ್ಷಣವನ್ನೂ ತೆಕ್ಕೆಗೆ ಎಳೆದುಕೊಳ್ಳುತ್ತಿದ್ದವಳು ಬಿಂದು.
   ದೀಪಾವಳಿಯ ದಿನ ಬೆಳ್‌ಬೆಳಗ್ಗೆ ನಮ್ಮನೆಗಳ ಬಾಗಿಲ ಹೊರಗೆ ಪಟಾಕಿ ಡಮ್ಮೆನ್ನಿಸಿ, ಆಕಾಶಬುಟ್ಟಿಯ ದೀಪ ದೊಡ್ಡದಾಗಿ ಉರಿಸಿ, ತಮ್ಮದೇ ಲೈಟು ಜಾಸ್ತಿ ಎನ್ನುತ್ತಾ, ‘ನೀ ಹಿಂಗ ಮಾಡಿದರ ಗಂಡ ಮನೀ ಬಿಟ್ಟು ಓಡಿಸ್ತಾನು ನೋಡಲೇ ಬಿಂದಿ’ ಎಂದು ರೇಗಿಸುತ್ತಿದ್ದರೆ ‘ಹೋಗ್ಲಿ ಬಿಡೋ ಯಾವನಿಗ ಬೇಕು? ಹಿಂಗೇ ಇದ್ದ ಬೀಡ್ತೇನಿ...’ ಎಂದು ಹಲ್ಕಿರಿದು ನಿಸೂರಾಗಿಸುತ್ತಿದ್ದಳು. ಹಾಗಾಗಿ ಧ್ವನಿಯ ಏರಿಳಿತದಲ್ಲೇ ಏನಾಗುತ್ತಿದೆ, ಏನಾಗುತ್ತಿರಬಹುದು ಎನ್ನುವುದನ್ನು ಅರಿವಿಗೆ ತಂದುಕೊಂಡು ಬಿಡುವ ನನಗೆ ಅದರಲ್ಲಿ ವಿಶೇಷ ಏನೂ ಅನ್ನಿಸಿರಲಿಲ್ಲ.
   ಎತ್ತರದ ಮಿನಿ ಬಂಗಲೆಗೆ ಅದಕ್ಕಿಂತಲೂ ಎತ್ತರ ಎನ್ನುವ ಫೀಲಿಂಗ್ ಮೂಡಿಸುವ ಅರೆಬರೆ ಗೀರುಗಳ ಗೇಟು.  ಮನುಷ್ಯ ಬಿಡಿ ಯಾವ ಹಕ್ಕಿಯೂ ಅದನ್ನು ಸರಕ್ಕನೆ ಒಂದೇಟಿಗೆ ಹಾರಲಾಗದ ಎತ್ತರ ಯಾಕಿದ್ದೀತು ಎನ್ನುವುದು ಎಂತಹವನಿಗೂ ಮೊದಲ ನೋಟಕ್ಕೆ ಅನಿಸಿಬಿಡುವಂತಹ ಮನೆಯಲ್ಲಿ ಬಿಂದು ‘ಅಂತೂ ಬಂದ್ಯಲ್ಲ. ಬಾ, ಬಾ. ದೊಡ್ಡ ಮನುಷ್ಯ, ನೀನು ಕೈಗೆ ಸಿಗೋದೆ ಅಪರೂಪ’ ಎನ್ನುತ್ತಿದ್ದರೆ, ‘ಆಯ್ತು ಹಂಗಂತ ಅರ್ಜೆಂಟಿಗ್ ಬಿದ್ದು ನೀನು ಎನಾರೇ ಮಾಡಿ ನನ್ನ ಹೊಟ್ಟಿ ಹಾಳ ಮಾಡಬ್ಯಾಡ. ನಾ ಕಾಮತ್‌ನಲ್ಲೇ ನಾಸ್ಟಾ ಮಾಡಿ ಬಂದೇನಿ’ ಎಂದು ರೇಗಿಸುತ್ತಿದ್ದರೆ ‘ನೀ ಬದಲಾಗಾಂಗಿಲ್ಲ ಬಿಡು’ ಎಂದು ಉಪಚರಿಸಿದ್ದಳು.
    ಮೂರು ಮಜಲಿನ ಮನೆ, ಎಲ್ಲೆಲ್ಲೂ ಸಾಗುವಾನಿ ಪ್ಯಾಕಿಂಗು, ಮ್ಯೂರಲ್ ಆರ್ಟು, ಶಾಂಡೀಲಿಯರ್ರು ನನ್ನಂತವನಿಗೆ ಉಸಿರಾಟ ಕಷ್ಟಕ್ಕೀಡು ಮಾಡುವಂತಹ ವಾತಾವರಣ. ಎಷ್ಟೇ ಆಮೋದವಿದ್ದರೂ ತೀರ ಪ್ಲಾಸ್ಟಿಕ್ಕು ಕುರ್ಚಿಯ ಮೇಲೆ ಕಾಲು ಮಡಚಿ ಕೂತು ಸೊರ್ರನೆ ಟೀ ಕುಡಿಯುವ ನಾನೆಲ್ಲಿ, ಫಿಂಗರು ಪ್ರಿಂಟು ಬೀಳುತ್ತದೆನೊ ಎನ್ನುವಷ್ಟು ಶುದ್ಧ ಬಿಳಿಬಿಳಿ ಪಿಂಗಾಣಿ ಕಪ್ಪಿನಲ್ಲಿ ನೊರೆನೊರೆ ಕಾಫಿಯನ್ನೂ ಲೆಕ್ಕಿಸಿ ಕುಡಿಯುವ ಆ ವಾತಾವರಣ ಎಲ್ಲಿ?
    ಮಸ್ತ ಪಗಾರಿನ ನೌಕರಿ, ಛಲೋ ಮನೆತನ ಎಂದು ಬೆಂಗಳೂರಿಗೆ ಮದುವೆಯಾಗಿ ಬಂದ ಬಿಂದುಗೆ ಎಲ್ಲವೂ ಸ್ವರ್ಗ ಸಮಾನವೇ ಆಗಿತ್ತು. ಆದರೆ ಬಿಂದುಳ ಗಂಡ ಇಪ್ಪತ್ನಾಲ್ಕು ಗಂಟೆನೂ ಆಕೆಯನ್ನು ಕಾಯತೊಡಗಿದ್ದನಲ್ಲ ಆಗ ಉಸಿರುಗಟ್ಟತೊಡಗಿತ್ತು.
   ‘ಎಲ್ಲಿದ್ದಿ? ಏನ್ಮಾಡ್ತಿದ್ದಿ? ಇಷ್ಟೊತ್ತು ಯಾಕೆ ಫೋನ್ ತಗಿಯಾಕೆ? ಹೊರಗೆ ಯಾಕೆ ಹೋಗಿದ್ದೆ, ಎಲ್ಲಿಂದ ಎಲ್ಲಿ ತನಕ ಹೋಗಿ ಬಂದೆ? ಬಾಜು ಮನೀ ಆಂಟಿ ಯಾಕ ಬಂದಿದ್ರು? ಎಷ್ಟು ಸಾಮಾನು ತಂದಿ ಅದಕ್ಕ ಇಷ್ಟ ಹೊತ್ತು ಬೇಕಾ? ಯಾಕೆ ಹೊಸಾ ಡ್ರೆಸ್ಸು ಹಾಕ್ಕೊಂಡಿದಿ? ಯಾವ -ಡ್ಸು ಫೋನ್  ಮಾಡಿದ್ದು? ಇನ್ಮ್ಯಾಲೇ ಸಂಜೀ ಮುಂದನ ಫೋನ್ ಮಾಡಕ ಹೇಳು’. ಒಂದಾ ಎರಡಾ...? ಗಂಡ ಎಂಬುವನಿಗೆ ಬಿಂದುವಿನ ಪ್ರತಿ ನಡೆಯ ಮೇಲೂ ಇನ್ನಿಲ್ಲದ ಸಂಶಯ, ಇನ್ಸ್‌ಕ್ಯೂರಿಟಿ ಮತ್ತು ಕಮೆಂಟು ಮಾಡುವ ಹುಕಿ ಇತ್ತು.
   ಆಕೆ ಏನು ಮಾಡಿದರೂ ಆತನ ಪ್ರಶ್ನೆ ಸಿದ್ಧವಾಗಿರುತ್ತಿತ್ತು. ಇದರಿಂದ ದೊಡ್ಡ ಜಗಳದಂತಹದ್ದು ಆಗುವುದೇ ಇಲ್ಲ. ಆದರೆ, ಅದನ್ನು ಪ್ರತಿ ದಿನ, ಪ್ರತಿ ಸಮಯದಲ್ಲೂ ಎದುರಿಸುವುದಿದೆಯಲ್ಲ, ಅದು ಜೀವನವನ್ನೇ ನರಕವನ್ನಾಗಿಸಿ ಬಿಡುತ್ತದೆ. ಬಿಂದುಳ ಲೆಕ್ಕದಲ್ಲೂ ಆಗಿದ್ದು ಅದೇ. ಗಂಡನಿಗೆ ಮೆತ್ತಿದ ಸಂಶಯ ಪಿಶಾಚಿಯಿಂದ ಆಕೆ ಮನೆಯಿಂದ ಹೊರ ಹೋಗುವುದನ್ನೇ ನಿಲ್ಲಿಸಿದಳು. ಮೊಬೈಲ್ ಎತ್ತಿಟ್ಟಳು. ಪೇಪರ್ ಓದುವುದನ್ನೂ ನಿಲ್ಲಿಸಿದಳು. ಬೆಳಗಿನಿಂದ ಸಂಜೆವರೆಗೂ ಆಕೆಗೆ ಬೇಕಾದಂತೆ ಇರುತ್ತಿದ್ದರೆ ಅದಕ್ಕೂ ಆತ ‘ಕೆಲಸ ಬೊಗಸಿ ಏನೂ ಇಲ್ಲೇನು ನಿನಗೆ?’ ಎನ್ನುವುದಕ್ಕೆ ಶುರು ಮಾಡುತ್ತಿದ್ದ. ‘ಬೆಳಿಗ್ಗಿಂದ ಹಂಗ ಕೂತಿರ್ತಿ, ಮನ್ಯಾಗ ಏನ್ ಮಾಡ್ತಿ?’ ಎನ್ನುತ್ತಿದ್ದ. ಇಂಥ ಮನಸ್ಥಿತಿಯನ್ನು ಎದುರಿಸುವುದಾದರೂ ಹೇಗೆ? ಮಕ್ಕಳು ಎಂತಾದ ಮೇಲೆ ಕೊಂಚ ಆಕೆಗೂ ರೀಲಿಫ್‌ ಎಂತಾದರೂ ಈಗ ಕೆಲ ಸಮಯದ ನಂತರ ಮತ್ತದೇ ಪಂಜರದ ವಾಸ. ಹೆಚ್ಚಿನಂಶ ಮಕ್ಕಳ ಜೊತೆಗೆ ಕಳೆಯುವುದರಿಂದ ದಿನವಿಡಿ ಏನೂ ಅನ್ನಿಸುವುದಿಲ್ಲ. ಸಂಜೆಯ ಪ್ರಶ್ನಾವಳಿಗೆ ಉತ್ತರ ಮತ್ತು ಫೀಲಿಂಗು ಎಲ್ಲಿಂದ ತರುವುದು? ಬದುಕಿದ್ದೇ ಕೊಂದುಕೊಳ್ಳುವುದು ಅಂದರೆ ಇದೇನಾ?
   ‘ಬೇರೆ ಏನು ದಾರಿ ಅದ ಹೇಳು ಇಂತಾ ಬದುಕಿನ್ಯಾಗೇ?’ ಆಕೆ ಹುಬ್ಬೇರಿಸುತ್ತಿದ್ದರೆ ನನ್ನೆಲ್ಲಾ ಅನುಭವಗಳು  ಬಕ್ಕಬಾರಲಾಗಿದ್ದವು. ಡೊಮೆಸ್ಟಿಕ್ ವಯಲೆನ್ಸಿನ ಕಕ್ಷೆಯೊಳಗೂ ಸಿಕ್ಕದ ಇಂಥ ವಿಷಯವನ್ನು ಪ್ರಸ್ತುತ ಪಡಿಸುವುದಾದರೂ ಹೇಗೆ?
   ‘ಹಿಂಗಾದರೆ ಹೆಂಗೆ? ಅದೇನೋ ಸುಡುಗಾಡು, ‘ಕಾರ್ಪಸ್ ಕ್ಯಾಲೋಸಮ್’ ಅಂತಿಯಲ್ಲ ಅದನ್ನಾದರೂ ರಿಪ್ಲೇಸ್ ಮಾಡಿಸ್ಬೋದಾ? ಹೇಳು. ಇದೇನಿದು ಜೀವನಪೂರ್ತಿ ಮನುಷ್ಯ ಬೆಳೆಯೋದೆ ಇಲ್ಲ, ಸುಧಾರಿಸೋದೇ ಇಲ್ಲ ಅನ್ನೋದಾದರೆ ಬದುಕು ಸಾಗಿಸೋದಾದರೂ ಹೆಂಗೆ? ಹೆಣ್ಣುಮಕ್ಕಳು ಬದಲಾದರು, ಬೆಳೆದರು ಸಾಕಷ್ಟು ಹಾಳೂ ಆದರು. ಗಂಡಸರು ಹಾಳಂತೂ ಆಗ್ತಾನೇ ಇರ್ತಾರೆ. ಆದರೆ ಒಂದಿಷ್ಟಾದರೂ ಅವರು ಸುಧಾರಿಸಬೇಕು ನೋಡು ಮಾರಾಯ’ ಬಿಂದು ಮಾತಾಡುತ್ತಿದ್ದರೆ ನಾನು ಹೂಂ ಅಥವಾ ಉಹೂಂ ಎನ್ನದ ಸ್ಥಿತಿಯಲ್ಲಿದ್ದೆ. ಮಾತು ನಿಂತುಹೋಗಿದ್ದವು. ಎಷ್ಟು ಜನರನ್ನಂತ ಅಥವಾ ಗಂಡಸರನ್ನು ಇದರಡಿಗೆ ತರೋದು? ಹೆಚ್ಚಿನಂಶ ಹೊರಗೆಲ್ಲಾ ಸುಬಗರಂತೆ ತೋರಿಸಿಕೊಳ್ಳುವ ಗಂಡಸು ಮತ್ತದೆ ಹಾಡು ಹಾಡುತ್ತಿದ್ದರೆ ಆಕೆ ಎಲ್ಲಿ ಹೋಗಬೇಕು?
ಸುಮ್ಮನೆ ಬಿಂದುಳ ಕೈಯ್ಯದುಮಿ ಹೊರಬಂದು, ಒಮ್ಮೆ ನಿರಾಳವಾಗಿ ಉಸಿರೆಳೆದುಕೊಂಡೆ. ಮನೆಯ ಆ ಗೀರು ಗೇಟಿನ ಸರಳಿನ ಹಿಂದೆ ನಿಂತ ಆಕೆಯನ್ನು ತಿರುಗಿ ನೋಡುವ ಧೈರ್ಯವಾಗಲಿಲ್ಲ. ಸ್ವಯಂಸುಧಾರಣೆ ಅಥವಾ ಬೆಳವಣಿಗೆ ಆಗದೇ ಇದು ಬದಲಾಗೋದಕ್ಕಂತೂ ಸಾಧ್ಯವಿಲ್ಲ. ಅವಳು ಹೇಗೋ ಬದುಕಿ ಬಿಡುತ್ತಾಳೆ. ಆದರೆ ಇಂಥವಕ್ಕೆ ಮುಖಾಮುಖಿಯಾಗೋ ನಾನು?
                                           ಕಾರಣ ಅವಳು ಎಂದರೆ...

No comments:

Post a Comment