Wednesday, April 20, 2016

ಮನೆ ಮಹಡಿಯದಿತ್ತು..ಮನಸ್ಸು ಗೂಡಿನಷ್ಟೂ ಇರಲಿಲ್ಲ...

ಮಾತು, ನಡತೆ ಎಲ್ಲದರಲ್ಲೂ ಪರಕೀಯತೆ ಕಾಣಿಸಿಬಿಟ್ಟರೆ ಸಂಬಂಧ ಕಡಿದುಹೋಗಿದೆ ಎಂದೇ ಅರ್ಥ. ಹಸಿದಿದ್ದರೂ ಬದುಕು ಖುಷಿಯಾಗಿರಬಹುದು. ಮೈಗೆ ಒಂದೊತ್ತು ಊಟ ಇಕ್ಕದಿದ್ದರೂ ಪರವಾಗಿಲ್ಲ. ಮನಸ್ಸಿಗೆ ಹಿಂಸೆಯಾಗದಿದ್ದರೆ ವೃದ್ಧಾಪ್ಯ ಒಂದು ಸವಾಲೇ ಅಲ್ಲ. ಆದರೆ ಮಕ್ಕಳೇ ಸವಾಲಿನ ಮೂಲವಾದಾಗ? ಯಾಕೆ ಬದುಕಿದೆವು ಎನ್ನಿಸಿಬಿಡುತ್ತದೆ.

ನಮ್ಮ ಬದುಕಿನ ಪಾತಳಿಗೆ ತಮ್ಮದೇ ಕೊಡುಗೆ ನೀಡುವಲ್ಲಿ ಮೇಷ್ಟ್ರುಗಳ ಪಾತ್ರ ದೊಡ್ಡದು. ಆಗೆಲ್ಲ ಸಿಡುಕು, ಅರೆಬರೆ ಬೈಗುಳುಗಳ ಅವರ ಮಾತುಗಳೂ ನಮಗೆ ರೇಜಿಗೆ ಹುಟ್ಟಿಸುತ್ತಿದ್ದವಾದರೂ, ಇವತ್ತಿಗೆ ಅದೇ ಸರಿ ಎನ್ನಿಸುತ್ತಿರುವುದು ವಾಸ್ತವ. ತಡವಾಗಿ ಬಂದಾಗ ಹೊರಗೆ ನಿಲ್ಲಿಸಿದರೂ, ನಂತರ ಮೈದಡುವಿ ಚೆಂದವಾಗಿ ಓದುವುದರ ಜೊತೆ, ಸಮಯ ಪಾಲನೆಯ ಪಾಠ ಹೇಳಿ ನಮ್ಮನ್ನು ಸಜ್ಜುಗೊಳಿಸುತ್ತಿದ್ದ ರೀತಿ ಅದ್ಭುತ. ಅದು ನನಗಿವತ್ತಿಗೂ ದೊಡ್ಡ ಬಳುವಳಿ. ಮನೆಪಾಠ ಮಾಡದಿದ್ದಾಗ, ಹುಡುಗ ದುಡಿತಕ್ಕೆ ನಿಂತಿದ್ದಾನೆಂದು ಕೇಳದೆಯೂ ಕೊಡುತ್ತಿದ್ದ ಕನ್ಷಿಶನ್ನು, ಹರಕು ಚೆಡ್ಡಿಯಲ್ಲಿ ಬರುತ್ತಿದ್ದವರಿಗೆ ಪೋಸ್ಟ್ ಆಫೀಸೆನ್ನುವ ಅನ್ವರ್ಥ ತೊಲಗಿಸಲು ಚೆಡ್ಡಿ ಹಾಕಿಸುತ್ತಿದ್ದವರು, ಹೀಗೆ ಬದುಕಿನ ಅಲೆಗಳಲ್ಲಿ ಹೆದ್ದಾರೆಯಾಗಿ ನಮ್ಮನ್ನು ದೂಡಿಕೊಂಡು ಬಂದ ಮೇಷ್ಟ್ರುಗಳ ಸಂಖ್ಯೆ ಅಗಾಧ.
ಮೊನ್ನೆ ಮೊನ್ನೆವರೆಗೂ ಮರೆತಿದ್ದ ನನ್ನ ಗಣಿಯಿಂದ ಮೇಲೆದ್ದವರು ಸಾಬು ಮಾಸ್ತರರು. ಅವರೇನೂ ಸಾಬರಾಗಿರಲಿಲ್ಲ. ಸುಭಾಷ್ ಮಾಸ್ತರರು ಊರವರ ಬಾಯಲ್ಲಿ ಸಾಬು ಆಗಿದ್ದರು. ಗಣಿತದವರು ಅಧಿಕ-ಉಣಾ, ವಿeನದವರು ಪ್ರಯೋಗದ ಮಾಸ್ತರರು, ಭಾಷೆ ಕಲಿಸುವವರು ಕನ್ನಡಾ ಟೀಚರು, ಗೈರಾದವರನ್ನು ಗಂಭೀರವಾಗಿ ಹುಡುಕುತ್ತಿದ್ದ ಹಾಜರಿ ಬಾಯಿ ಹೀಗೆ ಹಲವು ಉಪನಾಮದಲ್ಲಿ ನನ್ನ ನೆನಪಿಗೆ ಉಳಿದು ಹೋದವರ ಹಿಂಡೆ ಇದೆ.
ಆವತ್ತಿನಿಂದ ಇವತ್ತಿನವರೆಗೂ ಒಂದು ಸ್ವಂತದ ಮನೆಯಿರಬೇಕು ಎಂದು ಬಯಸುವ ಪ್ರತಿ ಜೀವಿಯ ಕನಸಿನಂತೆ ಆಗಿನ ಕಾಲಕ್ಕೆ ತುಸು ಹೊರಗೆ ಎನ್ನಿಸುವ ಏರಿಯಾ ಆದರೂ ಪರವಾಗಿಲ್ಲ ಎನ್ನುವ ಪರಿಸರದಲ್ಲಿ ಸಾಕಷ್ಟು ಅನುಕೂಲವಾದ ಮನೆಯನ್ನು ಕಟ್ಟಿಸಿಕೊಂಡ ಸಾಬು ಮಾಸ್ತರ್ ಇಬ್ಬರ ಮಕ್ಕಳನ್ನೂ ಓದಿಸಿ, ಪೋಷಿಸಿ, ಕೈಗೊಂದು ಗಾಡಿಯನ್ನೂ ಕೊಡುವಷ್ಟು ಪೊರೆದಿದ್ದಾರೆ. ಅವರ ಆಸೆ, ಆಸಕ್ತಿಯಂತೆ ಮಕ್ಕಳೂ ಕೆಲಸಕ್ಕೆ ಸೇರಿದವು. ಇಂಜಿನಿಯರಿಂಗ್, ಮಾರ್ಕೆಟಿಂಗು ಅಂತೆಲ್ಲ ವೈನಾಗಿ ಓದಿಕೊಂಡು ಕಾಲೂರಿದ್ದಾರೆ.
ಮೊದಲ ಮಗನಿಗೆ ಮದುವೆಯಾಯಿತು. ಸೊಸೆ ಬಂದಳು. ಸಾಬು ಮಾಸ್ತರ್ ಕುಟುಂಬದಲ್ಲಿ ಮೊದಲ ಬಾರಿಗೆ ಒಂದು ಕೋಣೆಯ ಬಾಗಿಲಿಕ್ಕಿಕೊಂಡಿತ್ತು. ಸಹಜವೂ ಬಿಡಿ. ಅಲ್ಲಿವರೆಗೂ ಇದ್ದವರಲ್ಲಿ ಯಾರಿಗೂ ಯಾವ ಪ್ರೈವೇಸಿ, ಪ್ರತ್ಯೇಕವಾಗಿ ಮಾತಾಡಿಕೊಳ್ಳಬೇಕಾದ ಅವಶ್ಯಕತೆ ಎರಡೂ ಇರಲಿಲ್ಲ. ಹಾಗಾಗಿ ಅಪ್ಪ-ಅಮ್ಮನ ಜೊತೆಯಲ್ಲಿ ಯಾವ ಸಮಸ್ಯೆ, ಏನೇ ಕೆಲಸ ಇದ್ದರೂ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುತ್ತಾ, ಬೈದಾಡಿಕೊಂಡರೂ ಅಣ್ಣ ತಮ್ಮ ಮುನಿಸಿಕೊಂಡರೂ ಮರುದಿನಕ್ಕೆ ‘ನನ್ನನ್ನೂ ಅಲ್ಲಿವರೆಗೆ ಕಾರನ ಡ್ರಾಪ್ ಮಾಡು..’ ಎನ್ನುವಲ್ಲಿ ಎಲ್ಲ ಭಿನ್ನಾಭಿಪ್ರಾಯಗಳೂ ಕೊನೆಯಾಗುತ್ತಿದ್ದವು. ಆದರೆ ಸಾಬು ಮಾಸ್ತರರ ಕುಟುಂಬದಲ್ಲಿ ಅವರ ಸುಖದ ದಿನಗಳು ಕೊನೆಯಾಗತೊಡಗಿದ್ದವು.
ಮೊದಲ ಸೊಸೆ ಬರುತ್ತಿದ್ದಂತೆ ಪ್ರತ್ಯೇಕ ತಿರುಗಾಟಗಳು, ಮನೆಯಲ್ಲಿನ ಪ್ರತಿ ಮಾತು ವಿಭಿನ್ನ ದಿಸೆಯತ್ತ ತಿರುಗತೊಡಗಿದ್ದವು. ಕೊನೆಯವನು ಮತ್ತು ಅಪ್ಪ-ಅಮ್ಮ ಒಂದೆಡೆಯಾಗಿ ಹೋದರು. ಸೊಸೆ, ಮಗ ಇಬ್ಬರೂ ಅವರವರ ಪಾಡಿಗೆ ಹೊರಟು ನಿಲ್ಲತೊಡಗಿದ್ದರು. ಇದರಲ್ಲಿ ಹೊಸತೇನೂ ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಯಾವ ಜಗಳ, ಮುನಿಸು ಯಾವ ಸಕಾರಣವೂ ಇಲ್ಲದೇ ಆ ಮನೆಯಲ್ಲಿ ಒಂದು ಭರಿಸಲಾಗದ ಮುಲಾಜಿನ ನಿಶಬ್ದ ರಾಜ್ಯವಾಳತೊಡಗಿತು. ಮಾಸ್ತರು, ಹೆಂಡತಿ ಹಾಗೂ ಇತರರು ಯೋಚಿಸಿ ಮಾತಾಡತೊಡಗಿದರು. ಸೊಸೆಯ ಆಗಮನದೊಂದಿಗೆ ಪ್ರತಿ ಹಂತದಲ್ಲೂ ಮಗ ಯೋಚಿಸುವ ರೀತಿ ಬದಲಾಗಿದ್ದರಿಂದ ಅನಿವಾರ್ಯವಾಗಿ ಅನಿರೀಕ್ಷಿತ ಮೌನ ಕವಿಯತೊಡಗಿತ್ತು. ಅದು ಬೆಳೆಯುತ್ತಾ ಕೊನೆಗೆ, ಇದ್ದ ಮನೆಯ ಮೇಲೆ ಇನ್ನೊಂದು ಮಹಡಿ ಕಟ್ಟಿಸಿಕೊಂಡು ಹಿರಿಮಗ ಕುಟುಂಬ ಒಡೆದಿದ್ದ. ಸಕಾರಣವಿರಲಿಲ್ಲ ಸಂಬಂಧಗಳು ತೆಳುವಾಗಿದ್ದವು ಅಷ್ಟೇ.
ಆಕಸ್ಮಿಕವಾಗಿ ನಾನು ಮಾಸ್ತರರ ಕುಟುಂಬವನ್ನು ಭೇಟಿಯಾದಾಗ ಕಾಲದ ಪ್ರಹಾರಕ್ಕೆ ಸಿಕ್ಕು ಮನುಷ್ಯ ಎಷ್ಟು ಹುಲುವಾಗಿಬಿಡುತ್ತಾನೆ ಎನ್ನುವುದಕ್ಕೆ ಜೀವಂತ ಉದಾಹರಣೆಯಂತಿದ್ದರು. ಕೃಶ ದೇಹ.. ಅದಕ್ಕೂ ಮೊದಲೇ ನೆರೆತಂತಿದ್ದ ಬದುಕು ದಂಪತಿಯನ್ನು ಹೈರಾಣಾಗಿಸಿದ್ದು ಸ್ಪಷ್ಟ. ಕಾರಣ ಆ ಕಾಲಕ್ಕೇನೆ ಶಾಲೆಯನ್ನು ಕೆಂಗಣ್ಣ ನಿಯಂತ್ರಿಸುತ್ತಿದ್ದ ಸಾಬು ಮಾಸ್ತರರು ಇವತ್ತು ಸರಿಯಾಗಿ ನಿಂತು ಮಾತಾಡಲೂ ಉಸಿರೆಳೆಯುತ್ತಿದ್ದರು. ಅವರ ಪತ್ನಿ ಒಂದಷ್ಟು ಗಟ್ಟಿ ಇಲ್ಲದಿದ್ದಲ್ಲಿ ಯಾವತ್ತೊ ಕಥೆ ಕೊನೆಯಾಗುತ್ತಿತ್ತಾ? ‘ಮತ್ತೊಮ್ಮೆ ಮನೆಗೆ ಬರುತ್ತೇನೆ’ ಎಂದು ಆವತ್ತು ಒಂದಷ್ಟು ಹೊತ್ತು ಅವರೊಡನೆ ಕಳೆದು ಮೇಲಕ್ಕೆದ್ದಿದ್ದಾ. ನಂತರದ ಅವಧಿಯಲ್ಲಿ ಅವರ ಮನೆಕಡೆ ಹೋಗಲಾಗಿರಲಿಲ್ಲ. ಅದ್ಯಾಕೋ ಕೆಲಸದ ಮೇಲೆ ಅತ್ತ ಹೋದವನು ವಿಳಾಸ ಹುಡುಕಿಕೊಂಡು ಬಾಗಿಲು ತಟ್ಟಿದ್ದಾ.
ನನಗವತ್ತು ಮನುಷ್ಯನೊಬ್ಬನಿಗೆ ಇಂಥ ಬಾಳು ಬರದೇ ಇರಲಿ ಎನ್ನಿಸಿದ್ದು ಹೌದು ಮತ್ತು ಹೀಗಾಗುವುದೇ ಆದಲ್ಲಿ ನನ್ನ ಬದುಕು ಅದಕ್ಕೂ ಮೊದಲೇ ಮುಗಿದು ಹೋಗಲಿ ಎಂದನ್ನಿಸಿದ್ದೂ ದಿಟ. ಹಾಲ್‌ನ ಕಸ ಹೊಡೆಯದೇ ಯಾವ ಕಾಲವಾಗಿತ್ತೋ? ಅದರ ಮಧ್ಯದ ಜಾಗದಲ್ಲಿ ಮಾತ್ರ ಓಡಾಟದ ಕುರುಹುಗಳಿದ್ದವು. ಪಕ್ಕದ ಧೂಳು ಹಿಡಿದ ಟೀಪಾಯ್ ಮೇಲೆ ಪೇರಿಸಿಟ್ಟ ಊಟದ ತಟ್ಟೆಗಳಿಂದ ಹಳಸಿ ಕರೆಗಟ್ಟಿದ್ದ ವಾಸನೆ. ಅವು ಬಳಸಿ ಬೀಸಾಡುವ ಪೇಪರ್ ತಟ್ಟೆಗಳು. ಮನೆ ಎನ್ನುವುದು ಅಕ್ಷರಶಃ ಕೊಟ್ಟಿಗೆಯಂತಾಗಿತ್ತು. ಬಾಗಿಲ ಶಬ್ದಕ್ಕೆ ನಿಧಾನಕ್ಕೆ ಮಾಸ್ತರ್ ಪತ್ನಿ ಬಂದರೆ ಕೃಷಕಾಯದ ಆತ್ಮವೊಂದು ಸುಮ್ಮನೆ ಉಸಿರುಳಿಸಿಕೊಂಡು ಚಲಿಸುತ್ತಿದೆ ಎನ್ನಿಸುತ್ತಿತ್ತು. ಆಗಿದ್ದಿಷ್ಟು.
ಕಿರಿಮಗ ಮದುವೆಯಾಗಿ ಕೆಲವೇ ಸಮಯದಲ್ಲಿ, ಅಣ್ಣ ಬೇರೆ ಮನೆ ಮಾಡಿಕೊಂಡು ಹಾಯಾಗಿದ್ದಾನೆ. ನನಗೊಬ್ಬನಿಗೇ ಯಾಕೆ ಅಪ್ಪ ಅಮ್ಮನ ಜವಾಬ್ದಾರಿ. ನಾನೂ ಬೇರೆಯಾಗಿರುತ್ತೇನೆ ಎಂಬುದವನ ತರ್ಕ. ಹಾಗಂತ ಮನೆ ಬಿಟ್ಟು ಹೋಗುವ ಮೀಟರು ಬೇಕಲ್ಲ. ನಗರದಲ್ಲಿ ಮನೆ ಮಾಡುವುದೇನು ಹುಡುಗಾಟವಾ? ಈ ಮೊದಲೇ ಅಣ್ಣ ಮಾಡಿದ ಯೋಜನೆಯನ್ನು ತಮ್ಮನೂ ಪ್ರಯೋಗಿಸಿದ. ಮನೆಗೆ ಎರಡನೆ ಮಹಡಿ ಕಟ್ಟಿಸಿದ. ಕಾರಣ ಇಲ್ಲಿಂದ ಹೋದರೆ ಆಸ್ತಿಯ ಮೇಲಿನ ಹಿಡಿತ ಕೈತಪ್ಪುತ್ತದೆ. ಆ ಅನಾಹುತ ಯಾರಿಗೆ ಬೇಕು? ಮಹಡಿಯ ಮೇಲೊಂದು ಮಹಡಿ ಎದ್ದು ನಿಂತಿತ್ತು. ಇಬ್ಬರೂ ಅವರವರ ಪಾಡಿಗೆ ಮಹಡಿ ಸೇರಿಕೊಂಡು ಬಿಟ್ಟರು. ಕೆಳಗೆ ಉಳಿದವರು ಇಬ್ಬರೇ. ಮಾಸ್ತರರಂತೂ ಹಾಸಿಗೆಗೆ ಬಿದ್ದಿದ್ದರಲ್ಲ. ಪರಿಸ್ಥಿತಿ ಗಂಭೀರವಾಗಿತ್ತು. ಮಾತು ನಿಂತು ಹೋಗಿದೆ. ದೇಹ ಸ್ವಾಧಿನಕ್ಕೆ ಬರುವ ಸಾಧ್ಯತೆ ಕಡಿಮೆ. ಆದರೆ ಬದುಕು ಸಾಗಿಸಲೇಬೇಕಲ್ಲ, ಮಕ್ಕಳು ತಮ್ಮ ಆಟಕ್ಕೆ ಮಾಡಿರುವ ವ್ಯವಸ್ಥೆ ನೋಡಿ!
ವಯಸ್ಸಾಗಿದೆ ಏನೂ ಮಾಡಲಾಗಲ್ಲ. ಇರುವಷ್ಟು ದಿನ ಊಟಕ್ಕಿಡಬೇಕಲ್ಲ. ವಾರಕ್ಕೊಬ್ಬರಂತೆ ಮೂರು ಹೊತ್ತು ಊಟ, ತಿಂಡಿ ತಂದಿಟ್ಟು ಹೋಗುತ್ತಾರೆ. ತಟ್ಟೆ ಇಟ್ಟರೆ ಮತ್ತೆ ಬರಬೇಕಾಗುತ್ತದೆ ಅದಕ್ಕೆ ಪೇಪರ್ ಪ್ಲೇಟಿನಲ್ಲಿ ಆಹಾರ ಬರುತ್ತಿದೆ. ಅದೂ ಅವರ ಸಮಯಕ್ಕನುಸಾರ. ಬೆಳಗಿನ ಕಾಫಿ, ಬೇಕೆಂದಾಗ ಬಿಸಿನೀರು ಯಾವೆಂದರೆ ಯಾವ ಉಪಚಾರಕ್ಕೂ ದಂಪತಿ ಪಕ್ಕಾಗುತ್ತಿಲ್ಲ. ಮಾಡಿಕೊಳ್ಳಲೂ ಏನೂ ಇಲ್ಲ. ಕಾರಣ ಮೊದಲು ಮನೆ ಮಾಡುವಾಗ ಅಣ್ಣ ಒಂದಷ್ಟು ಸಾಮಾನು ಸಾಗಿಸಿಕೊಂಡು ಬಿಟ್ಟಿದ್ದನಲ್ಲ. ತನ್ನ ಪಾಲು ಎಂದು ತಮ್ಮನೂ ಇದ್ದಬದ್ದ ಸಾಮಾನು ಸಹಿತ ಸಿಲಿಂಡರ್ ಕೂಡ ಹೊತ್ತೊಯ್ದಿದ್ದಾನೆ. ಸರಿಯಾಗಿ ಚೊಂಬು ನೀರು ಹಿಡಿಯಲಾಗದ ವೃದ್ಧರಿಬ್ಬರು ಇನ್ನೆಲ್ಲಿಂದ ಹೊಸ ಸಿಲೆಂಡರು ತಂದುಕೊಂಡಾರು? ಉರಿಯದ ಬಲ್ಬು, ಅಡಿಸಲಾಗದ ಕಿಟಕಿ ಬಾಗಿಲುಗಳು, ನಾಪತ್ತೆಯಾಗಿರುವ ಪರದೆಗಳು ಯಾಕೊ ಮಾತಾಡಲೇ ಆಗಲಿಲ್ಲ. ಮಾಸ್ತರರಿಗೆ ಎಲ್ಲ ಕೇಳಿಸುತ್ತೇ ಆದರೆ ಏನೂ ಪ್ರತಿಕ್ರಿಯೆ ನೀಡಲಾರರು. ಬಣ್ಣಗೆಟ್ಟಿದ್ದ ಪ್ಲಾಸ್ಟಿಕ್ ಸ್ಟೂಲಿನ ಅರ್ಧ ಮಡಚಿದ ಕಾಲು ಸರಿ ಮಾಡಿಕೊಂಡು ಅವರೆದುರಿಗೆ ಕೂತಿದ್ದಾ. ಸುಮ್ಮನೆ ಪಿಳಿಪಿಳಿ ಮಾಡುತ್ತಿದ್ದರು. ಬಾಗಿಲ ಬಳಿಯಲ್ಲಿ ಸೋತು ನಿಂತಿದ್ದ ಅಮ್ಮನ ಮುಖ ನೋಡುವ ಚೈತನ್ಯ ನನಗುಳಿದಿರಲಿಲ್ಲ.
 ‘ಬ್ಯಾರೆ ಇದ್ರೂ ಪರವಾಗಿರಲಿಲ್ಲ. ಒಂಥರಾ ಹಂಗಿಗೆ ಬಿದ್ದಂಗೆ ಆಗಿದಿವಲ್ಲ ಅದು ಹಸಿವಿನಗಿಂತಲೂ ಜೀವಕ್ಕ ದೊಡ್ಡ ಸಂಕಟ ಕೊಡ್ತದ. ಪುಣ್ಯಕ್ಕ ಮಾಸ್ತರರು ಮನಿ ಕಟ್ಟಿಕೊಂಡಿದ್ರು. ಇಲ್ಲಂದರ ರಸ್ತೆ ಮ್ಯಾಲೇ ಇರಬೇಕಾಗುತಿತ್ತು. ಜೀವ ಹೋಗಬೇಕೂ ಅಂದರ ಅದೂ ಆಗ್ತಿಲ್ಲ ಮಾರಾಯ. ಹಿಂಗೆ ಅನುಭವಿಸಬೇಕಾಗ್ತದ ಅಂತ ಗೊತ್ತಿದ್ದರ...’ ಅಮ್ಮ ಮುಂದಕ್ಕೆ ಮಾತಾಡಲಾರದೆ ಬಾಯಿ ಹಿಡಿದು ಚೌಕಟ್ಟಿಗೆ ಆತು ನಿಂತರು. ಮಾಸ್ತರರು ಒಂಚೂರು ಅಡಿದರು. ಕಣ್ಣು ಕೂಡ ಕಷ್ಟದಲ್ಲಿ ಒದ್ದಾಯಾಗುತ್ತಿತ್ತೇನೋ. ಬದುಕಿನ ರಸವೇ ಹೀರಲಾಗಿತ್ತು. ಹೊರಗಿಟ್ಟ ತಟ್ಟೆಗಳ ಹಳಸಿದ ವಾಸನೆಗಿಂತಲೂ ಮಾಸ್ತರರ ಹಾಸಿಗೆಯ ಮೇಲಿನ ವಿಸರ್ಜನೆ, ಅಲ್ಲಿನ ವಾಸನೆ ಎಷ್ಟೊ ಸಹ್ಯ ಎನ್ನಿಸಿತ್ತು. ಅದ್ಯಾಕೋ ನಾನು ಸಣ್ಣವನಿದ್ದಾಗಿಂದಲೂ ಆಯಿ ಹೇಳುತ್ತಿದ್ದ ಮಾತುಗಳು ನೆನಪಾದವು.‘ಏನೂ ಇಲ್ಲದಿದ್ರೂ ನಡೀತದೆ. ಸ್ವಂತದ್ದಾಂದು ಮನೆ ಇರ್ಲೇಬೇಕು ನೋಡು’.
ಮಾಸ್ತರರು ಮನೆಯನ್ನಾದರೂ ಮಾಡಿಕೊಂಡಿದ್ದರು. ಅದೂ ಇಲ್ಲದಿದ್ದರೆ? ಒಳಬಾಗಿಲಲ್ಲಿದ್ದ ಅಮ್ಮನ ಮುಖ ನೋಡಲಾಗಲಿಲ್ಲ. ಅಸಹಾಯಕತನ, ದೈನೇಸಿಯಾದ ಪರಿಸ್ಥಿತಿ, ಬದಲಿಸಲಾಗದ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾದ ಸಂಕಟದ ತಲ್ಲಣಗಳು, ಏನಾಗಿ ಹೋಯಿತಲ್ಲ ಎನ್ನುವ ಹಳಹಳಿಕೆಯ ಮಧ್ಯೆ ಕೊನೆ ನಿರ್ಧರಿತವಾಗಿದ್ದಾಗ್ಯೂ ಜೀವ ನಿಲ್ಲಿಸಲೆತ್ನಿಸುತ್ತಿದ್ದ ಅಮ್ಮನ ಮುಖ ಕತ್ತಲೆಯಲ್ಲೂ ನಿರುಕಿಸುವ ಧೈರ್ಯವಾಗಲಿಲ್ಲ ನನಗೆ. ಕಾಣಲಾದರೂ ಏನಿತ್ತಲ್ಲಿ? ಛೇ...
 ಕಾರಣ ಆವಳು ಎಂದರೆ...

No comments:

Post a Comment