Saturday, April 9, 2016

ನಿಮ್ಮ ಹನಿಗಳ ಋಣ ಬಾಕಿಯಿದೆ...!

ಎಲ್ಲರ ಕತೆಗಳ್ಯಾಕೆ ಅಕ್ಷರ ಮೋಕ್ಷಕ್ಕೀಡಾಗುವುದಿಲ್ಲ ಎನ್ನುವುದಕ್ಕೆ ನನ್ನಲ್ಲಿ ಪ್ರಾಮಾಣಿಕವಾಗಿ ದನಿಯಿಲ್ಲ. ಆದರೆ ಎಲ್ಲ ಅನುಭವಗಳೂ ಮಾತ್ರ ಛೇ... ಎನ್ನಿಸುವ ಅಸಹಾಯಕ ಉದ್ಗಾರವನ್ನು ಹೊರಡಿಸುತ್ತವಲ್ಲ ಎನ್ನುವುದೇ ಪರಮಸಂಕಟ. ಒಂದು ವರ್ಷದ ಕೊನೆಯಲ್ಲಿ ಕತೆಯ ಜೋಳಿಗೆ ಬಿಚ್ಚಿ ನಿಂತಿರುವ ಅಮ್ಮಂದಿರ ಸರದಿ, ನೋಡಿ ದಿಗಿಲು ಬಡಿದು ಕೂತಿದ್ದೇನೆ.

‘ನಿಮ್ಮ ಬರಹ ನನ್ನ ಕತೆಯೇ ಬರದಂಗಿತ್ತು. ಯಾಕೋ ಗೊತ್ತಿಲ್ಲ. ಬ್ಯಾಡ ಅಂದರೂ ನಮ್ಮವ್ವ ನೆನಪಾಗತಿದ್ಲು. ಇಪ್ಪತ್ತು ವರ್ಷಾಗಿ ಹೋಗಿತ್ತು ಇವತ್ತು ಕಣ್ಣೀರು ಬಂದ್ವು ನೋಡು. ಇಷ್ಟ ವರ್ಷದ ಮ್ಯಾಲೇ ಕಣ್ಣೀರ ಹಾಕಿಸಿದ ಪಾಪ ನಿನಗ ತಟ್ಟಲಿ ಅನ್ಲೇನು?’ ಎಂದು ಗದ್ಗದಿತರಾಗಿಯೂ ಛೇಡಿಸುತ್ತಲೂ ಮಾತಾಡಿದ ಉತ್ತರ ಕರ್ನಾಟಕದ ಪರಿಚಯವೇ ಇರದ ಅಪ್ಪಟ ವಯಸ್ಕ ಮಹಿಳೆಗೆ ‘ನಿಮ್ಮ ಕಣ್ಣೀರ ಋಣ ನನ್ನ ಮೇಲಿರಲಿ ಬಿಟ್ಟು ಬಿಡಿ ಅಮ್ಮಾ’ ಎಂದಷ್ಟೇ ಹೇಳಿದ್ದಾ.
‘ನನ್ನ ಕತೆನೇ ಅದು, ನಿನಗ ಯಾರಾದರೂ ಹೇಳಿದ್ದರೇನು? ಎಲ್ಲ ಗೊತ್ತಾಗಿದ್ದರೂ ನಿಮ್ಮದಲ್ಲ ಮಾಮಿ ಅಂದುಬಿಡ್ತೀಪಾ’ ಎನ್ನುವ ಪ್ರೀತಿಭರಿತ ಆರೋಪ ಒಂದೆಡೆಯಾದರೆ ‘ಹಲೋ, ನೀ ಮೊನ್ನೆ ಬರದಿದ್ದ ಕಾಲಂ ಇತ್ತಲ್ಲ ಆ ಶಾಂತಕ್ಕ ನಾನೇನೋ ಮಾರಾಯ. ನೀ ಮಾತ್ರ ಇನ್ನು ತನಕ ನಮ್ಮನೀ ಕಡೀಗೆ ಬರ್ಲಿಲ್ಲ ನೋಡು’ ಎಂದು ಆಚೆಕಡೆಯಿಂದ ಅಲವತ್ತುಕೊಂಡ ಆ ತಾಯಿ ಜೀವ ತಣ್ಣಗಿರಲಿ. ಯಾರದ್ದೋ ಅನುಭವಗಳಿಗೆ ಮತ್ತು ನನ್ನ ಬದುಕಿನಾವಧಿಯ ಉದ್ದಕ್ಕೂ ನೋಡಿದ ನೆನಪುಗಳಲ್ಲ ಕಾಡುತ್ತಿದ್ದ ಹೆಣ್ಣುಮಕ್ಕಳ ಸಂಕಟದ ಮರೆಯಲಾಗದ ಅನುಭೂತಿಗಳಿಗೆ ನಾನು ಅಕ್ಷರವಾಗುತ್ತಿದ್ದೇನೆ ಅಷ್ಟೆ. ಸರಿಯಾಗಿ ಒಂದು ವರ್ಷದ ಹಿಂದೆ ಆರಂಭವಾದ ‘ಅವಳು ಎಂದರೆ’ ಸರಣಿಗೆ ಸಿಕ್ಕಿರುವ, ಸಿಗುತ್ತಿರುವ ವೈಯಕ್ತಿಕ ಪ್ರತಿಕ್ರಿಯೆ ಅದ್ಭುತ. ನಿಮ್ಮೆಲ್ಲ ನಿರೀಕ್ಷೆಗೆ ತಕ್ಕಂತೆ ಉತ್ತರಿಸುವಲ್ಲಿ ವಿಫಲನಾಗುತ್ತಿದ್ದಲ್ಲಿ ಕ್ಷಮಿಸಲೇಬೇಕು.
‘ನಮ್ಮಮ್ಮನ್ನು ಹಿಂಗೆ ಸುಮ್ ಸುಮ್ನೇ ಬೈತಿದ್ದಾ. ಏನು ಹಿಂಸೆ ಆದರೂ ಅದಕ್ಕೆ ಅಮ್ಮನೇ ಕಾರಣ ಅನ್ನಿಸ್ತಿತ್ತು. ನನ್ನೆಲ್ಲ ಸಂಕಟ, ಅಸಹಾಯಕತೆ, ವಯಸ್ಸಿನ ತಾಕಲಾಟ, ತುಮುಲಗಳಿಗೂ ಅಮ್ಮನೇ ಕಾರಣ ಅನ್ನಿಸಿಬಿಡುತ್ತಿತ್ತು. ಅದ್ಯಾಕೋ ನನ್ನ ಮೇಲೆ ಪತ್ತೆದಾರಿಕೆ ಮಾಡ್ತಾಳೆ, ಕಣ್ಣಿಡುತ್ತಿದ್ದಾಳೆ ಅನ್ನಿಸುತ್ತಿತ್ತು. ಆದರೆ ಅಮ್ಮನ ಮನಸ್ಸಿನ ತಳಮಳ ಏನಂತಾ ಗೊತ್ತಾಗಿದ್ದೇ ಈಗ. ಇನ್ಮುಂದ್ಯಾವತ್ತೂ ಅಮ್ಮಂಗೆ ತಿರುಗಿ ಮಾತಾಡಲ್ಲ’ ಹೀಗೊಂದು ಮೆಸೇಜು ಬಿಟ್ಟು ಪ್ರಾಮಿಸ್ ಮಾಡಿದ್ದು, ಯೌವ್ವನದ ಹೊಸ್ತಿಲಿನ ಹುಡುಗಿ.
‘ಹದಿನೈದು ವರ್ಷದ ನಂತರ ನನ್ನ ವಾರಗಿತ್ತಿಯ ಜೊತೆಗೆ ಕೂತು ಮನಸ್ಸು ಬಿಚ್ಚಿ ಮಾತಾಡಿದ್ದು ನಿಮ್ಮ ಕಾಲಂ ಓದೋಕೆ ಶುರು ಮಾಡಿದ್ಮೇಲೆ. ಅದ್ಯಾಕೋ ಎಲ್ಲದಕ್ಕೂ ಸವಾಲಾಗುತ್ತಾ, ಕದ್ದು ಮುಚ್ಚಿ ನಾನು ಏನು ಮಾಡ್ತೀದಿನಿ ಅನ್ನೋದನ್ನು ನೋಡ್ತಿದ್ದಾಳು ಈಗ ಫ್ರೆಂಡ್ ಆಗಿದಾಳೆ. ನಿಮ್ಮ ಬರಹದಲ್ಲಿ ಬಿಚ್ಚಿಟ್ಟ ಸತ್ಯಗಳೇ ಅಂತಹವು. ನಾವು ಹೇಳಿಕೊಳ್ಳಲಾಗದ್ದನ್ನು ನೀನು ಬಿಡುಬೀಸಾಗಿ ಹೇಳಿ ನಮಗೊಂಥರಾ ದನಿಯಾಗುತ್ತಿದ್ದೀಯ’ ಎಂದು ಯಾವತ್ತೂ ಪುಟಿಯುತ್ತಿದ್ದರೂ, ಎ ಉಳಿದು ಹೋಗಿದ್ದ ಕಸರನ್ನು ಸರಿಪಡಿಸಿಕೊಂಡ ಸ್ನೇಹಿತೆಗೆ ‘ಇನ್ಮುಂದೆ ಹಂಗೆ ಇರ್ರಿ. ಮುಖ್ಯವಾಗಿ, ಇನ್ಮುಂದೆನೂ ನೀವಿಬ್ಬರೂ ಫ್ರೆಂಡ್ ಆಗೇ ಇರಿ’ಎಂದು ಹಾರೈಸಿದ್ದಾ.
ಫೋನಿನಲ್ಲೇ ಮಾತಾಡುವ ಹಿರಿಯಕ್ಕನಂತಹ ಡಾಕ್ಟರು ‘ಹೋದ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿದ್ರೇನೋ? ಅದಕ್ಕೆ ನಿಮಗೆ ಹೆಣ್ಮಕ್ಕಳ ಮನಸ್ಸಿನ ಮಾತೆಲ್ಲ ತಿಳಿತದ. ಇಲದಿದ್ರ ಹ್ಯಾಂಗ ಗೊತ್ತಾಗ್ತಾವ? ನಿಮ್ಮ ಮನಿಯವ್ರ ಹೇಳ್ತಾರೇನೋ?’ ಎಂದು ಒಂದು ಮಟ್ಟದ ಸಂಶಯದ ನನ್ನ ಮಾತಾಡಿಸುತ್ತಿದ್ದರೂ ಅಪರಿಚಿತರೆನ್ನಿಸುವುದಿಲ್ಲ.
‘ನೀನು ಬರೆಯೋದು ಬರಹ ಅಲ್ಲ. ನಮ್ಮ ಮನಸ್ಸಿಗೆ ಹಿಡಿಯೋ ಕನ್ನಡಿ ಅನ್ನಿಸ್ತಿ ಮಾರಾಯ. ಅದಕ್ಕೆ ಗೊತ್ತಿಲ್ಲದೆ ಕಪಾಳಕ್ಕೆ ನೀರು ಹನಿಯುತ್ತವೆ’ ಹೀಗೆಂದು ನನ್ನ ಎದೆಯುಬ್ಬಿಸಿದ್ದು ಸಾಹಿತ್ಯ ಲೋಕದ ಹಿರಿಯ ಬರಹಗಾರ್ತಿಯೊಬ್ಬರು.
ಇಳಿವಯಸ್ಸಿನ ಅಜ್ಜಿಯೊಬ್ಬರು ವಿಜಯಪುರದ ಕಡೆಯಿಂದ ಮಾತಾಡುತ್ತಾ, ‘ಚಷ್ಮಾ ಸರಿಗಿಲ್ಲ. ಅದಕ್ಕ ಹ್ವಾದ (ಹೋದ) ವಾರ ಓದ್ಲಿಲ್ಲ ನೋಡು. ಒಮ್ಮೆ ಬಂದು ಮಕಾ ತೋರ್ಸಿ ಹೋಗೋ ಮಾರಾಯ. ಅದೆಲ್ಲಿಂದರ ಹಿಂತಾದೆಲ್ಲ ಬರೀತಿ’ ಎನ್ನುತ್ತಿದ್ದರೆ ನಾನು ದೌಡು ಬೀಳಲು ದಿನಗಳನ್ನು ಹುಡುಕತೊಡಗಿದ್ದಾ. ಮೊನ್ನೆ ಮೊನ್ನೆ ಯಜಮಾನರು ತೀರಿಕೊಂಡ ಖಾನಾಪುರದ ಕಡೆಯ ಕಾಕಿ, ಮದುವೆಯಾದ ಇಪ್ಪತ್ಮೂರೇ ದಿನಕ್ಕೆ ಗಂಡನನ್ನು ಕಳೆದುಕೊಂಡ ವಿಜಯಪುರದ ನತದೃಷ್ಟ ಎಳೆಯ ಮದುಮಗಳು, ಹಳೆಯ ನಮ್ಮೂರ ಕನ್ನಡ ಶಾಲೆಯ ಟೀಚರು, ನನ್ನ ಕಿತ್ತುಹೋಗಿದ್ದ ಪಾಟಿ ಮತ್ತದರ ಅವಸ್ಥೆ ನೋಡಲಾಗದೆ ಪ್ರತಿ ವರ್ಷಕ್ಕೊಂದು ಹೊಸದನ್ನು ಕೊಡಿಸುತ್ತಿದ್ದ ಗಣಿತ ಮಾಸ್ತರರ ಮಕ್ಕಳು, ಊರ ಕಡೆಯ ಹಿರಿಯರು, ಆಲೆಮನೆಯ ಹಸಿವು ಇಂಗಿಸುವ ಶಾರದಕ್ಕ, ‘ಊರ ಕಡೆ ಬರ್ತೀಯೋ? ಅ ಬರಕೋತನ ಇರ್ತೀಯೋ’ಎಂದು ಪ್ರೀತಿಯಿಂದ ಗದರುವ ಚೆಡ್ಡಿ ದೋಸ್ತರು.
‘ಮಾರಾಯ ಅಷ್ಟು ವರ್ಷದ ಹಿಂದಿಂದೆಲ್ಲ ನೆನಪಿಟ್ಕೊಂಡಿದಿಯಲ್ಲ. ಹೆಂಗಿತ್ತು ಹಂಗ ಬರ್ದಿದೀಯಲ್ಲ’ ಎಂದು ಹಳೆಯ ಕತೆಗಳನ್ನು ನೆನಪಿಸಿಕೊಂಡು ಗುಟ್ಟಾಗಿ ಸಂಭ್ರಮಿಸಿದ ಅಮ್ಮಂದಿರು, ‘ಸರ್, ನನ್ನ ಹೆಸರು ಬರಿಯೋದಿಲ್ಲ ಅಂದರ ಇದನ್ನು ಬರೀರಿ. ನಂದೆ ಕತೆ ಅಂತಾ ಗೊತ್ತಾದ್ರ ಮತ್ತ ಕಷ್ಟ ಆಗುತ್ತೆ’ ಎಂದು ದೈನೇಸಿಯಾಗಿಯೂ, ಅದರಿಂದ ಹೊರಬರಲಾರದ, ಆದರೆ ಹೇಗೋ ಒಂದು ಕಡೆಯಲ್ಲಿ ಮನಸ್ಸಿನ ಕಹಿ ಸ್ರವಿಸಿ ಉಸಿರ್ಗರೆಯುವ ಅಸಹಾಯಕತನದಲ್ಲಿರುವ ಸಹೋದರಿಯರು, ಎ ಒಂದು ಕತೆ ಅಕ್ಷರರೂಪಕ್ಕಿಳಿದಾಗ ಹತ್ತಾರು ಬಾರಿ ಓದಿಕೊಂಡು ದನಿಯಾದ, ಅಷ್ಟೆ ಸಣ್ಣ ಸುಖಕ್ಕೆ ಎದೆಯುಬ್ಬಿಸಿಕೊಂಡವರು, ಗೋವೆಯ ತೀರದಲ್ಲಿ ಅರೆಬರೆ ಜೀವನ ನಡೆಸುತ್ತಿದ್ದುದನ್ನು ಬಿಟ್ಟು ಕೊನೆಗೂ ಸೆಟ್ಲಾದ ಸ್ನೇಹಿತೆ... ಹೀಗೆ ವರ್ಷವೊಂದರಲ್ಲಿ ಸರಿದುಹೋದ ಪಾತ್ರಗಳು ನೆನಪಿಸಿಕೊಳ್ಳುವಂತಹ ಅಚ್ಚರಿಗಳು.
ಕತೆ ಹೇಳಿಕೊಂಡು, ಜೊತೆ ನಿಲ್ಲಿಸಿಕೊಂಡು ಕೈ ಎತ್ತಿದ ಮಿತ್ರದ್ರೋಹಿಗಳಾದ ಹೈಟೆಕ್ ಹೆಂಗಸರು, ಯಾರದ್ದಾ ಕತೆಗೆ ತಮ್ಮ ಕತೆಯನ್ನು ಹೋಲಿಸಿಕೊಂಡು ಹಳಹಳಿಸಿದವರು,‘ಇನ್ನು ನಿನ್ನ ಸಮಾಜಸೇವೆ ಸಾಕು ಸುಮ್ನೆ ಬರಕೊಂಡಿರು’ ಎಂದು ಬುದ್ಧಿಹೇಳುವ ಫೇಸ್‌ಬುಕ್ ಅಮ್ಮಂದಿರು, ಪ್ರತಿ ವಾರ ಕಾಯಲಿಕ್ಕಾಗದೆ ಕೆಲವೊಮ್ಮೆ ‘ಇನ್ನೂ ಹದಿನೆಂಟು ಗಂಟೆ ಮಾರಾಯ. ಪಿ.ಡಿ.ಎಫ್. ಫೈಲಾದರೂ ಕಳಿಸೋ’ ಎಂದು ಗೋಗರೆದವರು, ಒಮ್ಮೆ ಇಂಥವರನ್ನು ಭೇಟಿಯಾಗಬೇಕು ಎಂದು ಗುಟ್ಟಾಗಿ ನನ್ನಿಂದ ನಂಬರು ಪಡೆದು ಎ ಮೂಲೆಯಲ್ಲಿದ್ದ ತಾಯಂದಿರನ್ನು ಮೈದಡುವಿ ಸಮಾಧಾನಿಸಿ ಬಂದ (ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದನ್ನು ಸುಳ್ಳು ಮಾಡಿದ) ಆಪ್ತೆಯರು, ಹಾಸಿಗೆ ಹಿಡಿದಿದ್ದವರ ಬೆಂಬಲಕ್ಕೆ ಧಾವಿಸಿ ಅವರನ್ನು ಮನೆಯವರು ಕೊನೆಗಾಲದದರೂ ಕೈ ಹಿಡಿಯುವಂತೆ ಮಾಡಲು ಶ್ರಮಿಸಿದ ಸ್ನೇಹಿತರು, ಹೆಣ್ಣುಮಕ್ಕಳ ನಿಂತುಹೋಗಿದ್ದ ಶಿಕ್ಷಣಕ್ಕೋಸ್ಕರ ಚಂದಾ ಎತ್ತಿದ ಪರಿಚಯವೇ ಇರದ ಯಾವ್ಯಾವುದೋ ಊರಿನ ಮಹಿಳೆಯರು, ಹೀಗೆ ‘ಅವಳು ಎಂದರೆ’ ಅನುಭವದ ಕಥಾನಕಕ್ಕೆ ದಕ್ಕಿದ ಪ್ರಕ್ರಿಯೆ, ಎದುರಾಗುತ್ತಿರುವ ನಂಬಲಶಕ್ಯವಾಗುತ್ತಿರುವ ಬೆಳವಣಿಗೆಗಳ ಮಹಾಪೂರ ನನ್ನ ಹುಬ್ಬೇರಿಸಿದೆ.
ಮೊದಮೊದಲು ಇದು ಇಷ್ಟೆಲ್ಲ ಪ್ರಕ್ರಿಯೆಗೆ ಪಕ್ಕಾಗುತ್ತದೆ ಎಂದು ನನಗೂ ಅನ್ನಿಸಿರಲಿಲ್ಲ. ಬಹುಶಃ ಪ್ರತಿಯೊಬ್ಬನಲ್ಲೂ ಇರಬಹುದಾದ ಆರ್ದ್ರ ಹೃದಯದ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದು ಈ ಸರಣಿ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಎಲ್ಲೂ ಹೇಳಿಕೊಳ್ಳದಿದ್ದ ಭಾವಗಳಿಗೆ, ಅಕ್ಷರ ರೂಪದಲ್ಲಿ ಓದಲು ಸಿಕ್ಕಿದಾಗ ಮತ್ತು ಹೇಗೆ ಹೇಳುವುದು ಎನ್ನುವ ಮುಜುಗರ, ಆತಂಕ, ಇದನ್ನೆಲ್ಲ ಹೇಳಿಕೊಳ್ಳಬೇಕಾ ಎಂಬಿತ್ಯಾದಿ ಸಂಶಯ, ಅಪನಂಬುಗೆ, ಧಾವಂತದ ಆಚೆಗೆ ಸ್ಪಷ್ಟತೆ ಲಭ್ಯವಾಗಿದ್ದೇ ‘ಅವಳ...’ ಮೂಲಕ.
ಹಾಗಾಗಿ, ಇಲ್ಲಿ ಪ್ರಕಟಿತ ಅನುಭವಗಳು ಎಲ್ಲರಿಗೂ ಅವರಿಗರಿವಿಲ್ಲದೆ ಒಳಗೊಳ್ಳುವಂತೆ ಮಾಡಿಸಿ ಓದಿಸಲು ಪ್ರೇರೇಪಿಸಿವೆ. ಪ್ರತಿಕ್ರಿಯಿಸಲು ಅನುಮತಿಸಿವೆ. ತಮ್ಮದೂ ಕತೆ ಹೇಳಲು ಧೈರ್ಯ ನೀಡಿವೆ. ಮತ್ತದಕ್ಕಿಂತಲೂ ಮಿಗಿಲಾಗಿ ಒಳಮನದಲ್ಲಿ ಗೂಡು ಕಟ್ಟಿದ್ದ, ಸಂಕಟದ ಶಬ್ದಗಳಿಗೆ ರೂಪ ಒದಗಿಸಿದೆ, ಆಡಲಾಗದ ಅನುಭವಿಸಲಾಗದ ಭಾವಗಳಿಗೆ ಹೊರಹರಿವಿನ ವಿಸ್ತಾರ ಒದಗಿಸಿದೆ. ಹಾಗಾಗಿ ಬರಹ ರೂಪದಲ್ಲಿ ಬಂದ ಈ ಅನುಭವ ಕಥಾನಕಗಳು ‘ಇವು ನಮ್ಮದೇ,’ ‘ಇದು ನನ್ನ ಕತೆ ಇದ್ದಂತಿದೆಯಲ್ಲ’, ‘ಇದೆಲ್ಲ ನಿನಗೆ ಹ್ಯಾಗೆ ಗೊತ್ತಾಯ್ತು?’ ಎನ್ನುವಲ್ಲಿಗೆ ಬಂದು ನಿಲ್ಲಿಸಲು ಕಾರಣ ಎಲ್ಲ ಅಮ್ಮಂದಿರ, ಸಹೋದರಿಯರ, ಆಪ್ತೆಯರ, ಸ್ನೇಹಿತೆಯರ ನಂಬುಗೆಯ ಒತ್ತಾಸೆಯ ದನಿಯಾಗಿ ಅಂಕಣ ಗರಿಗೆದರಿದ್ದು.
ಸರದಿಯಲ್ಲಿರುವ ಹಲವರ ವಿಷಯಕ್ಕೆ ನನಗಿನ್ನೂ ತಾಕಲಾಗಿಲ್ಲ. ಅಷ್ಟು ಮಾತ್ರದ ಕ್ಷಮೆಗೆ ನಾನು ಬೇಷರತ್ ಅರ್ಹ. ವರ್ಷದ ಹಿಂದೆ ಹಲವು ವಿಷಯ ಎದುರಿಗಿಟ್ಟುಕೊಂಡಾಗ ಯಾವ ಎರಡನೆಯ ಯೋಚನೆ ಮಾಡದೆ ‘ಈ ವಿಷಯ ನೀವು ಬರೀರಿ. ಆಯ್ತು ಫೈನಲ್’ ಎಂದು ನನ್ನನ್ನೆಬ್ಬಿಸಿ ನಿಲ್ಲಿಸಿದ ಸಂಪಾದಕರ ವಿಶ್ವಾಸಕ್ಕೆ ನಾನು ಚಿರಋಣಿ. ಇದು ವರ್ಷದ ರಿಪೋರ್ಟ್. ಅಂಕಣ ಮುಂದೆಯೂ ಇನ್ನಷ್ಟು ಸಂವೇದನೆಗಳಿಗೆ ಧನಾತ್ಮಕ ದನಿಯಾಗಿ ಮುನ್ನಡೆಯಲಿದೆ. ನೋವು, ನಲಿವು, ನಂಬಲಶ್ಯಕವಾದ, ಇದೂ ನಮ್ಮದು ಎನ್ನಿಸುವ ಅನುಭವಗಳ ಸರಣಿ ಕಥಾನಕ ಕಟ್ಟಿಕೊಡಲು ಆಕೆ ಮಾತ್ರವೇ ಉಖವಾಗಬಲ್ಲಳು. ಕಾರಣ ಇಂಥ ವೈವಿಧ್ಯತೆ, ಭಾವ ತೀವ್ರತೆ ಇನ್ನಾವ ವಿಷಯದಲ್ಲಿ ಹುಡುಕಲು ಸಾಧ್ಯ?
ಕಾರಣ ಅವಳು ಎಂದರೆ...

No comments:

Post a Comment