Saturday, April 4, 2015


ಅಮ್ಮ ಅಂದ್ರೆ ಬರೀ ತಾಯಿಯಲ್ಲ.. !



( ನಗುವಿನ ಆರಂಭದಲ್ಲೂ ಆಕೆಯ ಹೆಸರೇ ಮೊದಲ ಉಚ್ಛಾರ. ಕೊನೆಯ ಉಸಿರಿಗೂ ಆಕೆಯೇ ಶ್ರೀಕಾರ. ಅಮ್ಮ .. ಎನ್ನುವುದು ಬರೀ ಹೆಣ್ಣು ಅಥವಾ ತಾಯಿ ಸೂಚಕವಲ್ಲ. ಅದೊಂದು ಮನಸ್ಥಿತಿ. ಯಾವ ರೂಪದಲ್ಲೂ ಯಾವ ಕ್ಷಣದಲ್ಲೂ, ಎಂಥವರಲ್ಲೂ ಉಧ್ಬವಾಗಬಲ್ಲ ಅಪರೂಪದ, ಆದರೆ ಅವಗಾಹನೆಗೆ ಸಿಕ್ಕದ ಆದ್ರ್ರ ಮನಸ್ಸಿನ ಪ್ರತಿರೂಪ ಅದು. )
ಆಳಕ್ಕಿಳಿಯದೇ ಆಕೆ ಪ್ರೀತಿಸಲಾರಳು.. ಪ್ರೀತಿಸದೇ ಆಳಕ್ಕಿಳಿಯಲಾರಳು.. ಎರಡೂ ಇಲ್ಲದೆಯೂ ಮನಸ್ಸನ್ನು ಆದ್ರ್ರವಾಗಿ ತಟ್ಟಿಬಿಡಬಲ್ಲ ಆಕೆಯ ಮನಸ್ಥಿತಿಗೆ, ಕೊಡಬಲ್ಲ ಏಕೈಕ ಸಮೀಕರಣವೆಂದರೆ ಆಕೆಯ ಮನಸ್ಸು ಮಾತ್ರವೇ. ದೇವರು ತಾನು ಎಲ್ಲೆಡೆಯೂ ಇರಲಾರೆನೆಂಬ ಕಾರಣಕ್ಕೇನೆ ಆಕೆಯನ್ನು ಸೃಷ್ಟಿಸಿದ. ಮತ್ತಾಕೆ ಈ ಜಗದ ಅಪರೂಪದ ಅಚ್ಚರಿಯಾದಳು.. ಮನುಶ್ಯ ಕುಲದಲ್ಲಿ ಜೀವಂತ ದೇವರಾದಳು. ಸಾಮಾನ್ಯ ಮನಸ್ಥಿತಿಗಳ ತುಚ್ಛತೆಯೊಂದಿಗೆ ಏಗುತ್ತಲೇ ಭೂ ಮುಖದಲ್ಲಿನ್ನೂ ಮಾನವೀಯತೆ ನಳನಳಿಸುವಂತೆ ಮಾಡಿದಳು.
ಯಾವ ಭಾಷೆ, ನೆಲ, ಕುಲ ಜಾತಿ ಇತ್ಯಾದಿಗಳ ಹೊರತಾಗಿಯೂ ಯಾವುದೇ ಎರಡನೆಯ ಯೋಚನೆ ಇಲ್ಲದೆ ಮನುಷ್ಯ ಒಪ್ಪಿಕೊಂಡ ಜೀವಂತ ದೇವರು ಆಕೆ. ಉಚ್ಚಾರಣೆ ಮತ್ತು ಭಾಷೆಯ ಹಂಗಿಲ್ಲದೆ ಜಾಗತಿಕವಾಗಿ ಗುರುತಿಸಿಕೊಂಡಳು. ಭೂಮಿಗೆ ಕಾಲಿಡುವ ಯಾವ ಬೊಮ್ಮಟೆಯೂ ಆಕೆಯ ಹೆಸರನ್ನು ಉಚ್ಚರಿಸದೇ, ಬದುಕಿನ  ಜೀವಾಭಿವ್ಯಕ್ತಿಗೆ ತನ್ನನ್ನು ಒಡ್ಡಿಕೊಂಡ ಉದಾಹರಣೆಗಳಿಲ್ಲ.
ಅಳು.. ನಗುವಿನ ಆರಂಭದಲ್ಲೂ ಆಕೆಯ ಹೆಸರೇ ಮೊದಲ ಉಚ್ಛಾರ. ಕೊನೆಯ ಉಸಿರಿಗೂ ಆಕೆಯೇ ಶ್ರೀಕಾರ. ತೀರ ಯಾರೂ ಇಲ್ಲವೆಂದರೂ ಎಂಥವರಿಗೂ ಕೊನೆಯಲ್ಲೊಮ್ಮೆ ನೆನಪಾಗಿಬಿಡುವ, ನೆನಪಾಗುತ್ತಲೆ ತಲ್ಲಣಗೊಳಿಸುವ ಆಕೆ ದೇದೀಪ್ಯಮಾನ. ಹಾಗಾಗಿ ಆಕೆಯನ್ನು ತೊರೆದವರಿಲ್ಲ. ತೊರೆದು ಬದುಕಿದವರಿಲ್ಲ. ಬದುಕಿದ್ದರೂ ಬವಣೆಗೀಡಾಗದೆ ಬಾಳಲಿಲ್ಲ. ಎಂಥಾ ಮಗನನ್ನೂ ಎಂಥಾ ಗಂಡನನ್ನೂ, ಎಂಥದ್ದೇ ಮನಸ್ಥಿತಿಯ ಸಂಗತಿಗಳಿರಲಿ, ಸಹೋದರರಿರಲಿ, ರಕ್ತ ಹಂಚಿಕೊಂಡ, ಹಂಚಿಕೊಂಡಿಲ್ಲದ ಸಂಬಂಧೀಯೇ ಇರಲಿ ಯಾರೂ ಮಿಡಿಯದಿದ್ದರೂ ಇವರೆಲ್ಲರಿಗಾಗಿ ಆ ಮನ ಮಿಡಿಯದೆ ಉಳಿದಿಲ್ಲ. ಮಿಡಿಯದಿದ್ದರೆ ಅದು ಆಕೆಯ ಮನಸ್ಥಿತಿಯಲ್ಲ.. ಆಕೆಯ ಹೃದಯವದಲ್ಲ. ಕಾರಣ ಎಂಥ ಕಠೋರ ಮನಸಿಗೂ ಆಕೆ ಕರುಣಿಸಬಲ್ಲಳು.
ಆಕೆ ...ಅಮ್ಮ...
ಸಕಲ ಚರಾಚರಗಳ ನಡೆದಾಡುವ ಜೀವಂತ ದೇವರು..
ದೇವರನ್ನು ನೋಡಿದವರಿಲ್ಲ. ಅದು ಸಾಧ್ಯವೂ ಇಲ್ಲ. ಇದ್ದಲ್ಲೇ ಜೀವಂತ ದೇವರನ್ನು ಆರಾಧಿಸಿದವರು ಮಾತ್ರ ಯಾವತ್ತೂ ನೋಯಲಿಲ್ಲ. ಆ ಪ್ರತಿರೂಪದ ಕೃಪೆಗೆ ಒಳಗಾದವರು ಇಲ್ಲೇ ಸ್ವರ್ಗ ಕಂಡಿದ್ದೂ ಸುಳ್ಳಲ್ಲ..
ಹಾಗೆಂದು ಎಲ್ಲಾ ಹೆಣ್ಣು ಮಕ್ಕಳೂ ಅಮ್ಮಂದಿರಾ..?
ಮಕ್ಕಳನ್ನು ಹಡೆದವರೆಲ್ಲರೂ ಅಮ್ಮಂದಿರಾ..?
ಮಕ್ಕಳೆ ಆಗದಿದ್ದ ಹೆಣ್ಣೂ ಕೂಡಾ ಅಮ್ಮನಿಗಿಂತಲೂ ಚೆನ್ನಾಗಿ ಅಮ್ಮನೆನೆಸಿದಳಲ್ಲ. ಆವ್ರೆಲ್ಲಾ ಯಾರು ಹಾಗಿದ್ದರೆ..?
ಯಾಕೆ ಎಲ್ಲಾ ತಾಯಂದಿರೂ ಅಮ್ಮಂದಿರಾಗಲಿಲ್ಲ..? ಹಡೆದ ತಾಯಂದಿರ ತಾಯ್ತನವೆಲ್ಲಾ ಯಾಕೆ ಅಮ್ಮನ ವಾತ್ಸಲ್ಯವನ್ನು ಹೊಂದಲಿಲ್ಲ..?
ಅಮ್ಮಾ.. ಧ್ವನಿಸುವಿಕೆಗೆ ಒಂದೇ ಒಂದು ಸಮಾನಾರ್ಥ ಬಳಕೆಯಲ್ಲಿ ಹುಟ್ಟಲೆ ಇಲ್ಲವಲ್ಲ..?
ಹಾಗಂತ ಬರೀ ಹೆಣ್ಣುಮಕ್ಕಳು ಅಮ್ಮಂದಿರಾದರಾ..? ಖಂಡಿತಾ ಇಲ್ಲ.
ಅಮ್ಮ ಯಾವತ್ತೂ ಮೂರ್ತ ರೂಪಕ್ಕೆ ಸಿಗದ ಒಂದು ಸ್ಥಿತಿ ಎನ್ನುವುದರಿಯದೆ ಹೋದದ್ದೇ ಅರಿವಾಗದಿರಲು ಕಾರಣ. ದೇವರು ಯಾವತ್ತಾದರೂ ಅರಿವಿಗೆ ಬಂದಾನೆಯೇ..?
ಅಮ್ಮ .. ಎನ್ನುವುದು ಬರೀ ಹೆಣ್ಣು ಅಥವಾ ತಾಯಿ ಸೂಚಕವಲ್ಲ. ಅದೊಂದು ಮನಸ್ಥಿತಿ. ಯಾವ ರೂಪದಲ್ಲೂ ಯಾವ ಕ್ಷಣದಲ್ಲೂ, ಎಂಥವರಲ್ಲೂ ಉಧ್ಬವಾಗಬಲ್ಲ ಅಪರೂಪದ, ಆದರೆ ಅವಗಾಹನೆಗೆ ಸಿಕ್ಕದ ಆದ್ರ್ರ ಮನಸ್ಸಿನ ಪ್ರತಿರೂಪ ಅದು. ನಾನು ಆಕೆಯನ್ನು ಅಮ್ಮ ಎನ್ನುವುದಕ್ಕಿಂತಲೂ ಮಿಗಿಲಾದ ವ್ಯಾಪ್ತಿಗೊಳಪಡಿಸಿ ಹುಡುಕಲೆತ್ನಿಸಿದ್ದೇನೆ. ಹಲವು ರೂಪದಲ್ಲಿ ಕಂಡಿದ್ದೇನೆ. ಜೀವಂತ ದೇವರೆನ್ನುವುದು ಇದ್ದಿದಾದರೆ ಅದು ಕೇವಲ ಅಮ್ಮ... ಎನ್ನುವಷ್ಟು ನಿಕಟವಾದ ಹೆಜ್ಜೆ ಗುರುತನ್ನು ಅಮ್ಮಂದಿರು ನನ್ನ ಜೀವನದಲ್ಲಿ ಉಳಿಸಿಬಿಟ್ಟಿದ್ದಾರೆ.
ಹುಟ್ಟಿದಾರಭ್ಯ ಅಮ್ಮ.. ಸಲುಹಿದ ಅಕ್ಕನಂತಹ ಅಮ್ಮ.. ತಲೆಗೆ ಮೊಟಕಿ ನನ್ನ ತಿದ್ದಿದ ಅಕ್ಕೋರು ಎನ್ನುವಾಕೆ ನನ್ನ ಮೆದುಳಿಗೇ ಕೈ ಹಾಕಿದ್ದರೆ, ಅಪ್ಪನ ಏಟಿಗೆ ಸಿಕ್ಕು ಬೆತ್ತಲೆಯಾಗಿ ನೇತಾಡುವಾಗ ಅನಾಮತ್ತಾಗಿ ನನ್ನನ್ನು ಇಳಿಸಿಕೊಂಡು ಸೆರಗಿನಡಿ ಬಚ್ಚಿಟ್ಟು ಸಲುಹಿದ ಯಾರದ್ದೋ ಮನೆಯವಳೂ ಅಮ್ಮನೆ.. ಆಕಸ್ಮಿಕವಾಗಿ ಸಿಕ್ಕು ಅಷ್ಟೆ ವೇಗವಾಗಿ ಕದಲಿ ಹೋದ ಸ್ನೇಹಿತನ ರೂಪದಲ್ಲಿದ್ದ ಅಮ್ಮ.. ಕೃಷ್ಣವರ್ಣದಲ್ಲಿದ್ದ ನನ್ನನ್ನು ಗೇಲಿ ಮಾಡಿ ಮುದ್ದಿಸುತ್ತಿದ್ದ ನನ್ನೂರ ಓಣಿಯ ಅಮ್ಮಂದಿರು.. ಶಾಲೆಯಲ್ಲಿ ಬರೆಯದಿದ್ದರೂ ನನ್ನನ್ನು ಏಟಿನಿಂದ ಬಚಾವ್ ಮಾಡುತ್ತಿದ್ದ ತುಂಡುಲಂಗದ ಪುಟಾಣಿ ಅಮ್ಮಂದಿರು.. " ಭಟ್ರ ಹುಡ್ಗ್ .." ಎನ್ನುತ್ತಲೇ ನನಗೆ ಬದುಕು ಕಲಿಸಿದ ಮಾಸ್ತರಮ್ಮ.. ಬುಡ ಕೆಟ್ಟು ಕುರ ಆದಾಗ ಮನೆಗೆ ಬಂದು ಪಾಠ ಮಾಡಿ ನನ್ನ ಮರ್ಯಾದೆ, ಶಾಲೆಯ ಒಂದು ವರ್ಷ ಎರಡನ್ನೂ ಉಳಿಸಿದ ಅಮ್ಮನಂತಹ ಮೇಷ್ಟ್ರು.
ಮಗಳ ಮುಖ ನೋಡದೆಯೂ ಜೀವನ ಕಳೆಯುತ್ತಿರುವ ಅಮ್ಮ.. ತೀರ ತಿಳುವಳಿಕೆ ಕೆಟ್ಟಿದ್ದರೂ ಮಾನವೀಯತೆ ಮರೆಯದ ಹುಚ್ಚಮ್ಮ.. ನೀನು ಚೆನ್ನಾಗಿರ್ಬೆಕಪ್ಪಾ ಎಂದು ಇದ್ದಲ್ಲಿಂದಲೇ ಸಂದೇಶ, ಸ್ವೀಟು ಎರಡೂ ಕಳಿಸುವ ವ್ಯಾಟ್ಸಾಪ್ ಅಮ್ಮ.. ಬಾರದ ಭಾಷೆಯಲ್ಲೂ ಮುದ ನೀಡುತ್ತಾ ಇದ್ದ ಅನ್ನ ಕೈ ಎತ್ತಿಕೊಡುವ ಪರದೇಶಿ ಅಮ್ಮ.. ಅಪರಾತ್ರಿಯಲ್ಲಿ ಬಂದವನಿಗೆ ಮಾತು ಅರಿಯದಿದ್ದರೂ ಮನಸು ಅರಿತು ಅರಪಾವು ಅಕ್ಕಿಲಿ ಗಂಜಿ ಮಾಡಿ ಇಷ್ಟೇ ಇರೋದು ಎಂದು ಅಲವತ್ತುಕೊಳ್ಳುವ ಅಮ್ಮ.
ಅಷ್ಟ್ಯಾಕೆ ಬೆಳೆಯುತ್ತಲೇ ನನ್ನನ್ನು ಜೀವನಪ್ರೀತಿ ಎಂದರೆ ಹೆಣ್ಣು ಎನ್ನುವ ಅನೂಭೂತಿಗೆ ದೂಡಿದ್ದೂ, ಬದುಕಿನ ಪ್ರೀತಿ ಮತ್ತು ಬದುಕುವ ಪ್ರೀತಿಗೆ ನನ್ನನ್ನು ಆತುಕೊಳ್ಳುವಂತೆ ಮಾಡಿದ್ದು, ಅಗಾಧ ಹಸಿವಿನ ನನ್ನ ಹೊಟ್ಟೆಗೆ ಕದ್ದು ತಂದು, ಕದ್ದು ಬಡಿಸಿ, ಬಕಬಕನೇ ತಿನ್ನುತ್ತಿದ್ದರೆ "ಹಂಗ್ಯಾಕೆ ತಿಂತಿ ಅನ್ನ ಕಂಡಿಲ್ಲೇನು" ಎನ್ನುತ್ತಾ ಪ್ರೀತಿಯಿಂದಲೇ ಇನ್ನೊಂದು ಮುಟಿಕೆಯಿಂದ ಬೆಲ್ಲ ಎತ್ತಿ ಕೊಡುತ್ತಿದ್ದ, ಜೊತೆಗೆ ಬದುಕಿನ ಮತ್ತು ವಯಸ್ಸಿನ ಮದ, ಮುದ ಎರಡೂ ಹದ ತಪ್ಪದಂತೆ ಜೋಪಾನ ಮಾಡಿದವರೂ ಅಮ್ಮನ ಮನಸ್ಸಿನ ಚಿಕ್ಕ ಚಿಕ್ಕ ಹುಡುಗಿಯರೇ.
ಹೀಗೆ ಭಾಷೆ ಗಡಿಗಳ ಹಂಗಿಲ್ಲದೆ ಅಮ್ಮನನ್ನು ನಾನು ಕಂಡಿದ್ದೇನೆ. ಪ್ರತಿ ಬಾರಿ ಆ ಮನಸ್ಥಿತಿಯ ಅಗಾಧ ವ್ಯಾಪ್ತಿಗೆ, ಅದರ ಅಚ್ಚರಿಗೆ ಈಡಾಗಿದ್ದೇನೆ. ಹಲವು ಬಾರಿ ಆಳ ತಿಳಿಯದೆ ಅಲ್ಲೇ ಕೇಳಿ ಅರಿವಾಗದೆ ಪೆದ್ದನಂತೆ ಮಡಿಲಲ್ಲಿ ಸುಮ್ಮನೆ ತಲೆ ಇರಿಸಿ ವಿರಮಿಸಿದ್ದೇನೆ. ಅಮ್ಮನೆಂಬ ಅಚ್ಚರಿಗೆ ಆದ್ರ್ರವಾಗಿ ಸ್ಪಂದಿಸಿದ್ದೇನೆ.
ಇಲ್ಲದಿದ್ದರೆ.. ನಾನೀಗ ಏನು ಮಾಡುತ್ತಿದ್ದೇನೆ ಎಂದು ಎಲ್ಲಿದ್ದರೂ ಊಹಿಸುವ ಅಮ್ಮನಾಗಲಿ, ಪ್ರತಿ ಬಾರಿ ಸಂಕಷ್ಟಕ್ಕೀಡಾದಾಗಲೆಲ್ಲಾ ಕ್ಷಣಾರ್ಧದಲ್ಲಿ " ಅಷ್ಟ ಏನೂ.. ಅದಕ್ಯಾಕೆ ಚಿಂತಿ ಮಾಡ್ತಿ. ಹೋಳಿಗ್ಗಿ ಉಂಡು ಹೋಗ್ ಬಾ. " ಎಂದು ನಿರಾಳಗೊಳಿಸುತ್ತಿದ್ದ ಅಮ್ಮಂದಿರು, ಆವತ್ತು ಆಕೆಯನ್ನು ನೋಡುತ್ತಿದ್ದರೆ "ಮಗ ಇನ್ನೇನು ನೋಡಲು ಸಿಕ್ಕಲಿಕ್ಕಿಲ್ಲ" ಎನ್ನುವ ಕೊನೆಯ ಭಾವವನ್ನು ನಾನು ಆ ಕಣ್ಣಲ್ಲಿ ಅಷ್ಟು ಸ್ಪಷ್ಟವಾಗಿ ಓದಿದ್ದಾದರೂ ಹೇಗೆ..? ಆವತ್ತು ಅಮ್ಮನಿಗೆ ಗೊತ್ತಾಗಿ ಹೋಗಿತ್ತಾ ಇದೇ ಕಡೆಯ ಬಾರಿಯ ದರ್ಶನ ಎಂದು..?
ಕೆಲವೊಮ್ಮೆ ಆ ಮನಸ್ಥಿತಿಗೆ ಒಗ್ಗಿಕೊಂಡು ಒಲುಮೆ ಹರಿಸುವ ಹಲವು ಅಪ್ಪಂದಿರೂ ಇವತ್ತು ಅಕಾರಣವಾಗಿಯೋ, ಅನಿವಾರ್ಯವಾಗಿಯೋ ಅಮ್ಮನಾದದ್ದೂ ಇದೆ. ಆದರೆ ಆತ ಅವಳಾಗಿ, ಅವಳಾಗುತ್ತಲೇ ತನ್ನ ಪುರುಷತನವನ್ನು ತಾತ್ಕಾಲಿಕವಾಗಿ ಮರೆತು ಬಿಡುವ ಅಪರೂಪದ ಮನಸ್ಥಿತಿಯೇ ನನ್ನ ಆಸಕ್ತಿಯ ವಿಷಯ. ಅಮ್ಮ.. ಬಹುಶ: ಮನಸ್ಸಿನ ಸಂವೇದನೆಗೆ ಮಾತ್ರ ಸಿಕ್ಕುವ ವಾತ್ಸಲ್ಯವದು.
ನನ್ನ ಅಮ್ಮಂದಿರಾರೂ ಜಗದ್ವಿಖ್ಯಾತರಲ್ಲ. ಇತಿಹಾಸ ರಚಿಸಿಲ್ಲ. ಯಾವತ್ತೂ ಕಥೆಯಾಗಲು ಬಯಸಿದವರಲ್ಲ.  ಯಾವತ್ತಾದರೂ ಒಬ್ಬಾತ ತಮ್ಮ ಅಪರೂಪದ ಈ ಮನಸ್ಥಿತಿಯನ್ನು ವಿಶ್ಲೇಶಿಸಿಯಾನಾ ಎಂದೂಹಿಸಿದವರೂ ಅಲ್ಲ. ಅದರ ಕಲ್ಪನೆ ಕೂಡಾ ಇರಲಿಲ್ಲ.
ಇಂಧ್ರಧನುಸ್ಸಿನಂತೆ ಹಲವರ ಬಾಳಿನಲ್ಲಿ ಕ್ಷಣಕ್ಕಾಲ ಬಂದು ಹೋದರೂ ಮೂಡಿಸಿದ ಹೆಜ್ಜೆ ಗುರುತುಗಳು, ಬದಲಿಸಿದ ಬದುಕಿನ ದಾರಿಗಳ ಅಗಾಧ ಅರಿವಿಗೆ ನಿಲುಕದ್ದು. ಹಾಗಾಗಿ ಕಥೆಯಂತೆ ಐನೂರು ಶಬ್ದಗಳಲ್ಲಿ ಮುಗಿದು ಹೋಗದೆ ಶಾಶ್ವತವಾಗಿ ಯಾರ್ಯಾರದ್ದೋ ಎದೆಯ ತಿರುವಿನ ಕೋವೆಗಳಲ್ಲಿ ಕದವಿಕ್ಕಿಕೊಂಡು ಕೂತು ಬಿಟ್ಟಿದ್ದಾರೆ ಸಾವಿರಾರು ಅಮ್ಮಂದಿರು. ಕಳೆದು ಹೋಗಿದ್ದಾರೆ ಕಾಲನ ಕತ್ತಲೆಯ ತಿರುವುಗಳಲ್ಲಿ. ಹಾಗಾಗಿ ತಾಯಂದಿರೆಲ್ಲಾ ಅಮ್ಮನಾಗಿಲ್ಲ. ಆದರೆ ಅಮ್ಮನಾದವರ ಕಥೆ ಅವರೊಂದಿಗೆ ಮುಗಿದು ಹೋಗದಿರಲಿ ಎನ್ನುವುದೇ ಈ ಸರಣಿಯ ಕಾಳಜಿ.
ಅವರೆಲ್ಲರನ್ನೂ ಮತ್ತೊಮ್ಮೆ ಹೊರಗೆಳೆದು, ಜಗತ್ತಿನ ಅಗಾಧ ವಿಸ್ಮಯತೆಯ ಅಮ್ಮಂದಿರನ್ನು ನಿಮ್ಮ ಮುಂದೆ ತರಲಿದ್ದೇನೆ.. ಪ್ರತಿ ವಾರ.. ಒಬ್ಬೊಬ್ಬಳು ಅಮ್ಮನೊಂದಿಗೆ ನನ್ನ ಈ ಅಕ್ಷರ ಲೋಕದ ಪಯಣ ಆರಂಭ.. ಕಾರಣ ಕೆಟ್ಟ ತಾಯಂದಿರಿರಬಹುದು.. ಆದರೆ ಕೆಟ್ಟ ಅಮ್ಮಂದಿರು..
ಉಹೂಂ..
ವಿರುದ್ಧ ಶಬ್ದವಿಲ್ಲದ ಏಕೈಕ ಪದವೆಂದರೇ ಅಮ್ಮ..
ಕಾರಣ
"..ಅವಳು ಎಂದರೆ... "

1 comment: