Saturday, August 3, 2013

ಅವರ ಕೊನೆಯ ಆಸೆಗಳು ನನಗೆ ಗೊತ್ತಾಗಲೇ ಇಲ್ಲ...!

ಹಿರಿಯರಾಗಿದ್ದಷ್ಟೂ ನಿರ್ಗಮನದ ಬಾಗಿಲು ತುಂಬ ಹತ್ತಿರಕ್ಕಿರುತ್ತವೆ. ನನಗೆ ಅಂಥ ಆತ್ಮೀಯರ ವಲಯ ದೊಡ್ಡದು. -

ಆ ದಿನಗಳಲ್ಲಿ ನಾನು ವಿಪರೀತ ಕೋಪಕ್ಕೆ ಬೀಳುತ್ತಿದ್ದೆ. ಅದರಲ್ಲೂ ದಿನಾ ರಾತ್ರೆಯಿಡೀ ಕಂಪ್ಯೂಟರ್ ಮುಂದೆ ಕೂತು ಡ್ರಾಯಿಂಗುಗಳನ್ನು ಮಾಡಿ ಅದರದ್ದೇ ಲೈನುಗಳು ತಲೆಯಲ್ಲಿ ಕದಲುತ್ತಿರುವಾಗಲೇ ಎಂ. ಜಿ. ರೋಡ್ ಆಚೆಗೆ ಶಿವಾಜಿನಗರದ ಚೌಕಿನಿಂದ ಆಚೆಗೆ ಸರಿದು ರೂಮಿಗೆ ಬಂದು ಬಿದ್ದರೆ ಎಚ್ಚರವಾಗುತ್ತಿದ್ದುದು ಮಧ್ಯಾನ್ಹದ ಐದು ಗಂಟೆಗೆ ಹಾಸ್ಟೆಲ್ ಆವರಣದಲ್ಲಿ ಟ್ರೇನಿಂಗ್ ಹುಡುಗರು ಬಂದು ಗಿಜಿಗಿಜಿ ಶುರು ಮಾಡಿದಾಗಲೇ. ಅದಕ್ಕೂ ಭಯಂಕರವಾಗಿ ಬೊಬ್ಬಿರಿಯುತ್ತಿದ್ದುದೆಂದರೆ ಯಮ ಹಸಿವು. ಬೆಳ್ಳಿಗೆ ಪಕ್ಕದ ಕಾಕಾನ ಹೊಟೇಲ್ ಭಾರತ ರೆಸ್ಟೋರಾಂಟಿನಲ್ಲಿ ಪರಾಟಾ ತಿಂದು ಮಲಗಿದವನಿಗೆ, ಹಸಿವು ಆ ಹೊತ್ತಿಗೆ ಏನೂ ಆಗಬಹುದೆನ್ನುವಂತಹ ಹಪಾಹಪಿಯನ್ನು ತಂದಿಟ್ಟಿರುತ್ತಿತ್ತು. ಪಕ್ಕದಲ್ಲಿ ನನಗಿಂತಲೂ ಜೋರಾಗಿ ನಿದ್ರೆ ತೆಗೆಯುತ್ತಿದ್ದ ಬಸವನ ಲುಂಗಿ ಒಂದು ಕಡೆ ತಾನೊಂದು ಕಡೆಯಾದರೆ ಅವನ ಪಕ್ಕದಲ್ಲಿ ಮಲಗಿರುತ್ತಿದ್ದ ತಿಪ್ಟೂರು ರವಿಗೆ ಬಾಯಿಯಲ್ಲಿ ಆಗ್ಲೇ ನೊಣವೊಂದು ಸಂಸಾರ ಹೂಡಿ, ಹೊರಡುವ ತಯಾರಿಯಲ್ಲಿದ್ದುದೂ ಗೊತ್ತಾಗದಷ್ಟು ಯಮ ನಿದ್ರೆ. ಅವರಿಬ್ಬರ ಬುಡಕ್ಕೊಂದು ಒದೆ ಒದ್ದು ಬ್ರಶ್ಶು, ನೀರು ಹುಡುಕುವಾಗ ಅಡರುತ್ತಿದ್ದ ಆಗೀನ ಬೆಂಗಳೂರು ಚಳಿ ಹೊರಬೀಳುವ ಮುನ್ನ ಜಾಕೆಟ್ಟು ಹುಡುಕುವಂತೆ ಮಾಡುತ್ತಿತ್ತು. ಹಾಗೆ ಹೊರಟು ಎಂ.ಈ.ಎಸ್. ರೋಡಿನ ಕೊನೆಯ ಬಾರಿನಲ್ಲಿ ಕುಳಿತು ಇಷ್ಟಿಷ್ಟು ಬೀಯರು ಕುಡಿದು, ಮಿಲ್ಟ್ರಿ ಕ್ಯಾಂಟಿನಿನಲ್ಲಿ ಅವರಿಬ್ಬರು ಹೊಂತೆ ತಿಂದರೆ, ನನ್ನದು ಮಾತ್ರ ಅದೇ ಒಣಕಲು ಚಪಾತಿ ಮತ್ತು ಮೊಟ್ಟೆ ಸಾರಿನ ಸುಗ್ಗಿ ಜಾಲಹಳ್ಳಿಯ ರಾಘವೆಂದ್ರ ಭವನದಲ್ಲಿ. ಹಾಗೆ ಕುಳಿತಾಗಲೇ ಅದೊಂದಿನ ಅವರು ಪರಿಚಯವಾಗಿದ್ದು. ಆ ದಿನ ಶನಿವಾರವಾದ್ದರಿಂದ ಕುಡುಕರ ನಿಯಮದಂತೆ ಕೊಂಚ ಹೆಚ್ಚೇ ಕುಡಿದು, ಇನ್ನೇನು ಉಂಡು ಮುಗಿಯಬೇಕು ಮಾಣಿ ಇದ್ದಕ್ಕಿದ್ದಂತೆ "...ಸಾರ್ ಚಪಾತಿ ಖಾಲಿ..." ಅಂದು ಬಿಡಬೇಕೆ. ಸಮಯ ನೋಡಿಕೊಂಡೆ ಆಗಿನ್ನು ಎಳೂ ಮುಕ್ಕಾಲು ಆಗಿಲ್ಲ. ಅಸಲಿಗೆ ಅದು ತುಂಬಾ ಚಿಕ್ಕ ಹೊಟೇಲು. ದಿನಕ್ಕೆ ಇಪ್ಪತ್ತು ಊಟ ಹೋದರೆ ಜಾಸ್ತಿ. ಅದಕ್ಕಾಗಿ ಲಿಮಿಟೆಡ್ಡು ಪ್ರಿಪರೇಶನ್‌ನಲ್ಲಿ ಅವನಿದ್ದರೆ ನನಗೆ ಉರಿ ಉರಿ. ಬಾಯಿಗೆ ಬಂದದ್ದು ಕಕ್ಕಿ ಅವನನ್ನು ಸಿಗಿದು ಬಿಡುವ ಕೋಪದಲ್ಲಿ ಕೂಗಾಡುತ್ತಿದ್ದರೆ ಆಚೆ ಟೇಬಲ್ಲಿಗೆ ಕುಳಿತಿದ್ದ ವೃದ್ಧರೊಬ್ಬರು ತಣ್ಣಗೆ, " ಯಾಕಪ್ಪಾ ಚಪಾತಿ ತಾನೆ ಇದು ತೊಗೊ... " ಎನ್ನುತ್ತಾ ತಮಗೆಂದು ತಂದಿರಿಸಿದ್ದ ತಟ್ಟೆಯನ್ನು ನನ್ನೆದುರಿಗೆ ತಳ್ಳಿ ಕೈ ತೊಳೆದು ನಡೆದುಬಿಟ್ಟಿದ್ದರು. ಕುಳಿತಲ್ಲೇ ನಾನು ನೀರಾಗಿದ್ದೆ. ಮುಂದಿನ ಕೆಲವೇ ದಿನಗಳಲ್ಲಿ ನನ್ನ ಅವರ ಮಧ್ಯೆ ಬೆಳೆದ ಬಾಂಧವ್ಯ, ವಯಸ್ಸು ಹೊರತು ಪಡಿಸಿ ಅವರು ಎಲ್ಲದರಲ್ಲೂ ಅಪ್ಪಟ್ಟ ಹೆಗಲು ತಬ್ಬಿ ನಡೆವ ಸ್ನೇಹಿತನಂತೆ. ವಯಸ್ಸಿನಲ್ಲಿ ಮಾತ್ರ ಬಹುಶ: ಅವರಿಗಾದ ಜೀವನಾನುಭವದ ಅರ್ಧದಷ್ಟು ನನಗಾಗಿರಲಿಲ್ಲ. ಈ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟ ಶಾಲಿಯೋ ಅಥವಾ ಒಂದು ರೀತಿಯಲ್ಲಿ ವಿಚಿತ್ರ ಪ್ರಾಣಿನೋ ಗೊತ್ತಿಲ್ಲ. ಮೊದಲಿನಿಂದಲೂ ಇವತ್ತಿನವರೆಗೂ ನನ್ನ ಗಾಢ ಗೆಳೆತನ ಎನ್ನುವುದು ಏನಿದ್ದರೂ ತೀರ ವಯಸ್ಸಾದ ಜೀವಗಳೊಂದಿಗೆ ಹೆಜ್ಜೆ ಹಾಕಿ ಬೆಳೆದದ್ದೇ. ಹಾಗೆ ಎಲ್ಲಾ ಹಿರಿಯರೂ ಕೂಡಾ ತೀರ ಪಕ್ಕದ ವಯಸ್ಸಿನ ಹುಡುಗರಂತೆ ನನ್ನ ಪರಿಗಣಿಸಿದರು ಆನ್ನೋದು ಇವತ್ತಿಗೂ ವಿಸ್ಮಯಕಾರಿನೇ. ಮೊದಮೊದಲಿಗೆ ತೀರ ಚಿಕ್ಕವನಾಗಿದ್ದಾಗ ನಾಲ್ಕನೆಯತ್ತೆ ದಾಟದ ನಾನು ಮಧ್ಯಾನ್ಹದ ಉರಿ ಬಿಸಿಲಲ್ಲಿ ಬ್ಯಾಣಕ್ಕೆ ಬೆಂಕಿ ಇಕ್ಕಲು, ಅಗಳದ ಮಧ್ಯೆ ಕಟ್ಟಿಕೊಂಡಿದ್ದ ಹೆಜ್ಜೇನು ಹುಡುಕಲು ಕಂಬಳಿ ಗೊಪ್ಪೆ ಹಾಕಿಕೊಂಡು, ಕೊನೆಗೆ ಏನಿಲ್ಲವೆಂದರೂ ಪೇರು, ಮುಳ್ಳಣ್ಣು, ಹಲಸಿನಣ್ಣು, ಪನ್ನಿರಲ ಕಿತ್ತಲು, ಕೊನೆಗೆ ಕಾನಿನಲ್ಲಿ ಬಿಳಲು ತರಲು, ಗೂಟ ಕಡಿದುಕೊಂಡು ಬರಲೆಂದು ಅಕ್ಷರಶ: ನನ್ನ ಮೂರರಷ್ಟು ಹೆಚ್ಚಿನ ವಯಸ್ಸಿನ ಸೋದರ ಮಾವನೊಂದಿಗೆ, ನನ್ನ ಸಮ ಸಮಕ್ಕೆ ಬರುತ್ತಿದ್ದ ಹಿಡಿಗತ್ತಿಯನ್ನು ಎಳೆಯುತ್ತಾ ಹೊರಟಿರುತ್ತಿದ್ದೆ. ಹಾಗೆ ಸರಿ ಸುಮಾರು ಇಪ್ಪತ್ತೈದು ವರ್ಷ ಕಳೆದರೂ ಹಳೆಯದನ್ನು ನೆನೆಸಿಕೊಳ್ಳುತ್ತಾ ಮಾತಿಗೆ ಕುಳಿತರೆ ಮಾವ ಈಗಲೂ ಅದೇ ಹರೆಯದ ಮಲೆನಾಡಿನ ಹುಲಿಯೇ. ನಂತರದಲ್ಲಿ ನನ್ನೊಂದಿಗೆ ಎರ್ಡ್ಮೂರು ವರ್ಷ ಸೇವೆಯ ಆರಂಭದ ದಿನದಲ್ಲಿ ಹೆಜ್ಜೆ ಹಾಕಿದ ಪವಿತ್ರನ್ ಎಂಬ ಜೀವ ಕೂಡಾ ಕನಿಷ್ಟ ಎರಡು ದಶಕದಷ್ಟು ಹಿರಿತನದ್ದು. ಅಲ್ಲಿಂದ ಮತ್ತೆ ತಿರುಗಣಿ ತಿರುಗಿ ಇದೇ ಉ.ಕ. ಜಿಲ್ಲೆಗೆ ಬಂದು ಕುಳಿತ ಮೊಟ್ಟ ಮೊದಲ ದಿನದಿಂದ ಹಿಡಿದು ಮೊನ್ನೆ ಮೊನ್ನೆ ರಿಟೈರಾಗುವವರೆಗೂ ನನ್ನೊಂದಿಗೆ ಕೆಲಸದಿಂದ ಹಿಡಿದು ಕಾರು-ಬಾರು, ಎಲ್ಲಾ ಹಂಚಿಕೊಂಡು ಹೋದವರೂ ಕೂಡಾ ನಾನು ಹುಟ್ಟುವ ಮೊದಲೇ ನೌಕರಿಗೆ ಸೇರಿದ್ದಷ್ಟು ದೊಡ್ಡ ಹಿರಿಯರು. ಅತ್ತ ಸಾಹಿತ್ಯಿಕ ವಲಯದಲ್ಲಿ ಇವತ್ತೀಗೂ ಗಾಢ್‌ಫಾದರ್‌ಗಳಿಲ್ಲದೇ ಕಾಲೂರುವಾಗ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನಕ್ಕೆಂದು ನಿಂತಿದ್ದವರು ಕೊನೆಕೊನೆಗೆ ನನ್ನೊಂದಿಗೆ ಬಾ ಹೋಗು ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಸ್ನೇಹಿತರ ವಲಯಕ್ಕೆ ಲಗ್ಗೆ ಇಟ್ಟು ಬಿಟ್ಟರು. ಮೊನ್ನೆ ಮೊನ್ನೆ ಆಕಸ್ಮಿಕವಾಗಿ ಹೀಗೆ ಯಾವತ್ತೋ ಬದುಕಿನ ರೈಲಿನಲ್ಲಿ ಸ್ಟೇಶನ್ನು ಬಂದಾಗ ಇಳಿದು ಹೋದ ಪ್ರಯಾಣಿಕರಂತೆ ಮರೆಯಾಗಿದ್ದ ವಯಸ್ಕ ಆತ್ಮೀಯರು ಕರೆ ಮಾಡಿ ಮಾತಾಡಿಸಿದಾಗ ಆಘಾತ. ನಾನು ಅವರು ಬಹುಶ: ತೀರಿಯೇ ಹೋಗಿದ್ದಾರೆಂದು ಭಾವಿಸಿದ್ದೆ. ಅವರಲ್ಲಿ ಹಾಗೆ ಹೇಳಿ ಕ್ಷಮೆ ಕೇಳಿ ಬೈಸಿಕೊಂಡೆ. ಈಗಲೂ ಅವರಲ್ಲಿ ಆಗಿನಿಂದಲೂ ಇದ್ದ ಅದೇ ಹಾಸ್ಯಮಯ ಧಾಟಿ. ಕೊನೆಯಲ್ಲಿ " ಇಷ್ಟು ಬೇಗ ಕಳಿಸ್ಬೇಡವೋ ಇನ್ನೊಂದು ಮದುವೆಯಾಗಿ ಸಂಸಾರ ಮಾಡಬೇಕಿದೆ... " ಎಂದು ಲಂಪಟ ಗಂಡಸಿನಂತೆ ಹಾಸ್ಯ ಮಾಡಿ ಫೋನಿಟ್ಟರು. ಕಳೆದ ವರ್ಷ ಹಿಮಾಲಯದ ಪಾದಕ್ಕೆ, ಅಲ್ಲಿನ ಚಳಿಗೆ ನಮ್ಮ ಸೊಕ್ಕು ಕರಗಿಸಿಕೊಳ್ಳಲೆಂದು ಹೋದಾಗ, ನಮಗಿಂತಲೂ ವೇಗವಾಗಿ ಹಿಮದಲ್ಲಿ ಪರ್ವತಗಳನ್ನು ಏರಿ ನಿಂತು, ಬನ್ನಿ ಬನ್ನಿ ಎಂದು ಕರೆಯುತ್ತಿದ್ದ ದ.ಕ. ವೃದ್ಧ(?)ರೊಬ್ಬರು ಭೇಟಿಯಾದರು. ಕೇವಲ ಮೂರು ತಾಸುಗಳ ಆರಂಭಿಕ ಭೇಟಿ ಅದು. ಚಾರಣದ ಹದಿನೈದು ದಿನದ ನಂತರ ಬೇರ್ಪಡೆಯಾದರೂ ಇವತ್ತಿಗಾಗಲೇ ಅವರು ಕನಿಷ್ಟ ವಾರಕ್ಕೊಮ್ಮೆಯಾದರೂ ಕರೆ ಮಾತಾಡುವಷ್ಟು ಆತ್ಮಿಯರು. ಅಷ್ಟೇಕೆ ಕಳೆದ ರಾಷ್ಟ್ರ ಮಟ್ಟದ ವೈಜ್ಞಾನಿಕ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ, ಅದಕ್ಕೂ ಮೊದಲು ಪಾಂಡಿಯಲ್ಲಿ ನಡೆದಾಗ ಎರಡೂ ಕಡೆಯಲ್ಲೂ ನೆರೆದಿದ್ದ ಗುಂಡು ಕಂಪೆನಿಯಲ್ಲಿ ಕುಳಿತುಕೊಳ್ಳಲು ಅನುಮಾನಿಸುವಷ್ಟು ಹಿರಿಯರು ನನ್ನೊಂದಿಗಿದ್ದರು.  ಆಗ ಬೆಂಗಳೂರಿನಲ್ಲಿ ಹೀಗೆ ಚಪಾತಿಯಿಂದ ಆರಂಭವಾದ ಸ್ನೇಹ ಆಗೀಗ ಕುಳಿತು ಗುಂಡು ಹಾಕುವವರೆಗೂ ಸಲುಗೆ ಬೆಳೆದು, ಉಳಿದಂತೆ ಅದ್ಭುತ ಮಾತುಗಾರರಾದ ಅವರು ರಾಮಕೃಷ್ಣ ಹೆಗಡೆಯಿಂದ ಹಿಡಿದು, ಪೋರೆನ್ಸಿಕ್ ಸೈನ್ಸ್‌ನಿಂದ ತೀರ ಪೋಲಿಸ್ ಟಾರ್ಚರುಗಳು, ಅದರಲ್ಲಿ ವಿವಿಧ ದೇಶದ ವಿಧಾನಗಳನ್ನು ಉಲ್ಲೇಖಿಸುತ್ತಾ, ತಾವು ಉತ್ತರ ಭಾರತದಲ್ಲಿ ಕಳೆದ ದಿನಗಳ ಬಗ್ಗೆ ವಿವರಿಸುತ್ತಿದ್ದರೆ ರಾತ್ರಿಗಳಿಗೆ ಬೆಂಕಿ ಬೀಳಬೇಕು. ಅದೊಂದಿನ ನಾನು ಭಾರತ ರೆಸ್ಟೋರಾಂಟಿಗೆ ಹೋಗುವಾಗ ಅಕಸ್ಮಾತಾಗಿ ಅವರು ರಾಯಚೂರಿನ ರಾಜರಾಂನೊಂದಿಗೆ ನಿ೦ತಿದ್ದು ಕಾಣಿಸಿತ್ತು. ಯಾವತ್ತೂ ಹೀಗೆ ಅದರಲ್ಲೂ ಲಫಂಗರಿಗೆ ಗುರುವಿನಂತಿದ್ದ ರಾಜಾರಾಮನೊ೦ದಿಗೆ ಪರಿಚಯ ಇದ್ದಿರಬಹುದೆನ್ನುವ ಅಂದಾಜಿರದ ನನಗೆ ಅವರು ಅವನ ತಂದೆಯೆಂದೂ, ಇವನ ಕಾಟಾಚಾರಕ್ಕೆ ಬೇಸತ್ತು ಬೆಂಗಳೂರಿಗೆ ಬಂದರೆ ಈ ಪುಣ್ಯಾತ್ಮ ಕೂಡಾ ಬಂದು ಇದೇ ಜಾಲಹಳ್ಳಿಯಲ್ಲಿ ಕಾಲೂರಿರಬೇಕೆ...? ಆ ದಿನ ಅವರು ಕುಸಿದು ಹೋಗಿದ್ದರು. ಆಗ್ಲೇ ಊರು ಬಿಟ್ಟು ನಾಲ್ಕು ವರ್ಷಗಳಾಗಿದ್ದುವಂತೆ. ಅವರಿಗೆ ಪೆನ್ಶನ್ ಇತ್ತು. ಬೊಮ್ಮಸಂದ್ರದ ಮೂಲೆಯಲ್ಲಿ ಚಿಕ್ಕ ರೂಮು ಮಾಡಿಕೊಂಡಿದ್ದರು. ಪೇಪರು ಓದು, ವಾಕಿಂಗ್, ಸಂಜೆ ಮೂಡಿದ್ದರೆ ಗುಂಡು, ಪಾನಿ ಪೂರಿ ಆರಾಮವಾಗಿ ಎಲ್ಲ ಗೋಜಲು ಬಿಟ್ಟು ಸ್ವಂತ್ರತ್ರವಾಗಿ ಕಳೆದವರಿಗೆ ಇದ್ದಕ್ಕಿದ್ದಂತೆ ವಕ್ಕರಿಸಿದ್ದ ರಾಜಾರಾಂ ತಲೆ ನೋವು ತಂದಿಟ್ಟಿದ್ದ. ನಾನು ಅವರ ಪರವಾಗಿ ಮಾತಾಡಿ ಅವನು ಬೊಮ್ಮಸಂದ್ರದ ರೂಮಿಗೆ ಹೋಗಿ ಕಾಡದಂತೆಯೂ, ಕಾಸು ಮತ್ತೊಂದು ಎಂದು ಹಿಂದೆ ಬೀಳದಂತೆ ಮಾಡಿದ್ದೇನಾದರೂ ಅವರಲ್ಲಿ ಮೊದಲಿದ್ದ ಖುಶಿ ಉಳಿದಿರಲಿಲ್ಲ. ಅವರವರ ವೈಯಕ್ತಿಕ ವಿಷಯಗಳೇನೇನಿದ್ದವು...? ವೃದ್ಧ ಜೀವ ಜೀವನದಲ್ಲಿ ಆಸಕ್ತಿ ಕಳೆದುಕೊಂಡಂತಿತ್ತು. ಇದ್ದಕ್ಕಿದ್ದಂತೆ ಒ೦ದಿನ ನಾಪತ್ತೆ ಆಗಿ ಬಿಟ್ಟಿದ್ದರು. ಸುತ್ತ ಮುತ್ತೆಲ್ಲಾ ಹುಡುಕಾಡಿದೆವು. ಬಸು, ರವಿ, ಪ್ರದೀಪ, ಮೈಸೂರಿನ ಮುಕುಂದ ಎಲ್ಲಾ ಜಾಲಹಳ್ಳಿಯಿಂದ ಎಂ.ಎಸ್. ರಾಮಯ್ಯವರೆಗೂ ಗಲ್ಲಿಗಳನ್ನು ತಿರುವ್ಯಾಡಿ ಬಿಟ್ಟಿದ್ದೆವು. ಬಹುಶ: ರಾಜಾರಾಂ ಕಿರಿಕಿರಿ ಮಾಡಿದನೇನೋ ಎಂದು ಎತ್ತಾಕಿಕೊಂಡು ಸಮಾ ರೂಮಿನಲ್ಲಿ ಚಚ್ಚುತ್ತಿದ್ದರೆ ಅವನೋ ಊರೇ ಸೇರುವಂತೆ ಏಟಿಗೂ ಮುಂಚೆ ಕಿರುಚಲಾರಂಭಿಸಿದ್ದ. ಅದಾಗಿ ನಂತರದಲ್ಲಿ ಅವರು ಕಂಡಿರಲೇ ಇಲ್ಲ. ಇದ್ದಕ್ಕಿದ್ದಂತೆ ಒಂದಿನ ನಾಲೈದು ವರ್ಷದ ಹಿಂದೆ ಮೆಜೆಸ್ಟಿಕ್ಕಿನಲ್ಲಿ ಕಂಡವರು ತಾವಾಗೆ ಕೂಗಿ ಮಾತಾಡಿಸಿದ್ದರು. ಕೊಂಚ ಇಳಿದು ಹೋಗಿದ್ದಾರೆ ಅನಿಸಿದ್ದು ಬಿಟ್ಟರೆ ಅದೇ ವಿಶಾಲ ನಗೆ. ಅದೇ ನಿರರ್ಗಳ ಮಾತು. ಮಧ್ಯಾನ್ಹದ ಹೊತ್ತೆ ಬಿಟ್ಟು ಬಿಡದೆ ಕರೆದೊಯ್ದು ಗ್ರಿನ್ ಹೋಟೆಲಿನಲ್ಲಿ ಕೂಡಿಸಿಕೊಂಡಿದ್ದರು. ಬೇಕೆಂದೇ ಜಾಲಹಳ್ಳಿ ಬಿಟ್ಟು ಬೆಂಗಳೂರಿನ ಇನ್ನೊಂದು ದಿಕ್ಕಿನ ಇಂದಿರಾನಗರದ ಕಡೆಗೆ ಸರಿದು ಹೋಗಿ ರೂಮು ಮಾಡಿಕೊಂಡಿದ್ದಾಗಿ ತಿಳಿಸಿದ್ದರು. ನಾನೂ ಹೆಚ್ಚು ಕೆದಕಿರಲಿಲ್ಲ. ಅದಾಗಿ ವರ್ಷಗಳೇ ಸರಿದವು.  ಮೊನ್ನೆ ಇದ್ದಕ್ಕಿದ್ದಂತೆ ಅದೇ ಬಿ.ಇ.ಎಲ್.ನಲ್ಲಿ ಈಗ ಎಂಪ್ಲಾಯಿ ಆಗಿರುವ ಶ್ರೀನಿವಾಸ ಕರೆ ಮಾಡಿದವನು "...ನಿನ್ನ ಒಲ್ಡ್ ಫ್ರೆಂಡ್ ಹೋಗಿ ಬಿಟ್ಟರಂತೆ ಕಣೊ..." ಎಂದರೆ ಒಮ್ಮೆ ಕ್ಷಣಕ್ಕೆ ಅರಿವಾಗಲಿಲ್ಲ " ಯಾರು ಎಂದೆ...?" " ಅದೇ ಬೊಮ್ಮ ಸಂದ್ರದಲ್ಲಿದ್ದರಲ್ಲ ಅವರು..." ಒಹೋ.. ಮುಂದೆ ಮಾತಾಡಲಾಗಲಿಲ್ಲ. ... ನಾಲ್ಕು ದಿನ ಮೊದಲು ಇಲ್ಲಿ ಗಣಪತಿ ದೇವಸ್ಥಾನದ ಹತ್ತಿರ ಸಿಕ್ಕಿದವರು ನನ್ನ ಬಗ್ಗೆ ವಿಚಾರಿಸಿದ್ದರಂತೆ. ಮೊಬೈಲು ನಂಬರು ಕೊಡು ಎಂದಿದ್ಡಾರೆ. ಇವನು ಆಯಿತು ವಿಚಾರಿಸಿ ಕೊಡುತ್ತೇನೆ ಎಂದು ಎರಡ್ಮೂರು ದಿನವಾದರೂ ನನ್ನನ್ನು ಸಂಪರ್ಕಿಸಿಲ್ಲ. ಮರುದಿನ ಕೂಡಾ ಸಿಕ್ಕಿದಾಗ ನಂಬರು ಇನ್ನು ತೆಗೆದುಕೊಳ್ಳಲಾಗಿಲ್ಲ ಅಂದಿದ್ದಕ್ಕೆ ಮುಖ ಸಣ್ಣದು ಮಾಡಿ ಅವನ ಹತ್ತಿರ ಮಾತಾಡಬೇಕಿತ್ತು .. ಛೇ... ಎಂದು ಗೊಣಗಿಕೊಂಡಿದ್ದಾರೆ ಅಷ್ಟೆ. ಮರುದಿನಕ್ಕೆ ಅವರಿಲ್ಲ. ಜಾಲಹಳ್ಳಿಯಲ್ಲಿ ಎಂದಿನಂತೆ ಭೇಏಯಾಗುತ್ತಿದ್ದ ಗಣೇಶ ದೇವಸ್ಥಾನದ ಹತ್ತಿರ ಕಲ್ಲು ಬೆಂಚಿನ ಮೇಲೆ ಕುಳಿತಲ್ಲೇ ಪ್ರಾಣ ಬಿಟ್ಟಿದಾರೆ.." ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ. ಕೊನೆಯ ಕ್ಷಣದಲ್ಲಿ ಮನಸ್ಸು ಖಾಲಿ ಖಾಲಿಯಾದಂತೆನಿಸಿತು. ಯಾಕೆಂದರೆ ಹಿರಿಯರಾಗಿದ್ದಷ್ಟೂ ನಿರ್ಗಮನದ ಬಾಗಿಲು ತುಂಬ ಹತ್ತಿರಕ್ಕಿರುತ್ತವೆ. ನನಗೆ ಅಂಥ ಆತ್ಮೀಯರ ವಲಯ ದೊಡ್ಡದು. ಮತ್ಯಾವ ಕರೆಯೂ ಅಂತಹದ್ದು ಬಾರದಿರಲಿ ಅನ್ನಿಸಿ ಎರಡು ನಿಮಿಷ ಮೌನವಾಗಿದ್ದು ಬಿಟ್ಟೆ. ಆ ದಿನ ಪೂರ್ತಿ ಮೊಬೈಲಿಗೆ ಕಿವಿಗೊಡಲೇ ಕಿರ್ಕಿರಿ. ಪಾಪ ಒಂದು ದಶಕಕ್ಕೂ ಹೆಚ್ಚಿನ ಕಾಲ ಒಬ್ಬಂಟಿಯಾಗಿ ಕಳೆದು ಹೋದ ಆ ಹಿರಿಯ ಜೀವಕ್ಕೆ ಏನು ಹೇಳಿಕೊಳ್ಳುವುದಿತ್ತೋ...? 

1 comment:

  1. ಸಂಬಂಧಗಳೇ ಹಾಗೇ ಯಾವಾಗ, ಯಾರೊಡನೆ, ಯಾಕಾಗಿ ಬೆಸೆಯುತ್ತೋ !!!!
    ಮನ ಕಲಕುತ್ತೆ, ಒಂದಷ್ಟು ಹೊತ್ತು ಕಾಡುತ್ತೆ.
    ಇಷ್ಟವಾಯ್ತು ಸರ್ ನಿಮ್ಮ ಬರಹ.

    ReplyDelete