ಜೀವನದ ಈ ತಿರುವಿನಲ್ಲಿ ಬಂದು ನಿಂತ ಅವಳ ಬಳಿಯಲ್ಲಿ, ಯಾಕೆ ಅವನಿಗೆ ಒಲಿದೆ ಎಂಬುವುದರ ಬಗ್ಗೆ ಸ್ಪಷ್ಟ ಉತ್ತರವಿಲ್ಲ. ಆಕೆಯಷ್ಟೆ ಯಾಕೆ...? ಈ ಜಗತ್ತಿನಲ್ಲಿ ಯಾವುದೇ ಹೆಣ್ಣಿನ ಈ ರೀತಿಯ ಕಥೆಯ ಹಿಂದೆ ಇಂತಹದ್ದೊಂದು ಪ್ರಶ್ನೆಯನ್ನು ಇರಿಸಿದರೆ ಯಾವ ಬಿಂದುವಿನ ಬಳಿ ತಾನು ಬದಲಾದೆನೆಂದು ಹೇಗೆ ಹೇಳಿಯಾಳು... ? ಗೆದ್ದ ಗಂಡಸಾದರೂ ಹೇಗೆ ಗೆದ್ದೆ... ಎಲ್ಲಿ ಗೆದ್ದೆ ಅವಳನ್ನು ಎಂದು ಹೇಗೆ ಹೇಳಿಯಾನು... ?
ಅಸಲಿಗೆ ಅಲ್ಲಿ ಎಲ್ಲವೂ ಗೆಲುವುಗಳೇ ... ಎಲ್ಲವೂ ಸೋಲುಗಳೇ ಪರಸ್ಪರರಿಗೆ, ಹಾಗಿದ್ದಾಗ ಅದೊಂದು ಬಯಸುವ ಸೋಲು ಮತ್ತು ಗೆಲುವಿನ ಸಂಗಮವಲ್ಲದೇ ಬೇರೇನಲ್ಲ... ಅದೇನು ಮೈಲಿಕಲ್ಲುಗಳೇ...? ಗುರುತಿಸಿಟ್ಟುಕೊಳ್ಳಲು. ಅದೇನಿದ್ದರೂ ಮನಸ್ಸು ಮನಸ್ಸುಗಳು ಸ೦ಬಂಧವಷ್ಟೆ... ಅಲ್ಲೇನಿದ್ದರೂ ಅನುಭೂತಿಗಳಷ್ಟೇ...! ಅವುಗಳನ್ನು ಬೆಸೆದುಕೊಳ್ಳಲು ಇಬ್ಬರಿಗೂ ಅದರಲ್ಲೂ ಗಂಡಸಿಗೆ ಗೊತ್ತಿರಬೇಕಷ್ಟೆ... !!
ಅದಕ್ಕೂ ಮಿಗಿಲಾಗಿ ಗಂಡಸಾದವ ಯಾವಾಗಲು ಸೋತು ಹೆಣ್ಣನ್ನು ಗೆಲ್ಲಬೇಕೆನ್ನುವ ನಿಜವಾದ ಸೂತ್ರ ಇವತ್ತಿಗೂ ತುಂಬ ಪ್ರಸ್ತುತ ಎನ್ನುವುದು ತುಂಬಾ ಗಂಡಸರಿಗೆ ಅರ್ಥವಾಗದಿರುವುದು ಖೇದ. ಜಗತ್ತು ಮುಂದುವರಿಯುತ್ತಿರುವಾಗಲೂ ಅದೇ ಹರಟೆ ಕಟ್ಟೆಯಲ್ಲಿ ಸಮಯ ಕಳೆದು " ನ್ಯೂಸ್ " ಬದಲಾಗಿ ಕಾರ್ಟೂನ್/ಫ್ಯಾಷನ್ ನೋಡುತ್ತ ಸಮಯ ಕಳೆವ, ಕಿರು ಬೆರಳಿನಲ್ಲಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಮೂಗು ಗಿವುಟಿ... ಆ ಉತ್ಪಾದನೆಯನ್ನ ಕುಳಿತಲ್ಲೇ ಮಾಯ ಮಾಡುತ್ತಾ... ಕೆಲವೊಮ್ಮೆ ವಾಕಿಂಗ್ ಹೊರಟರೆ ಎಗ್ಗಿಲ್ಲದೆ ಎಲ್ಲೆಂದರೆ ಅಲ್ಲಿ ಕ್ಯಾಕರಿ ಉಗುಳುವುದು... ಜನ ನೋಡಲಿ ಇಲ್ಲದಿರಲಿ ರಪರಪನೇ ಬುಡ ಕೆರೆದು ಕೊಂಡುಬಿಡುವ...
ಅದೇ ಹಳೆ ಲುಂಗಿಯಲ್ಲಿ ಸಶಬ್ದವಾಗಿ ಹಿಂಗಾಳಿ ಬಿಡುವುದು... ಮನೆಯಲ್ಲಿಯೂ ಬಾಗಿಲು ತೆಗೆದುಕೊಂಡು ನಿಂತುಕೊಂಡೆ ಉಚ್ಚೆ ಹೊಯ್ಯುವುದು... ಬರೀ ಕಾಚಾದಲ್ಲೇ ಓಡಾಡಿಕೊಂಡಿರುವುದು... ಸಾಕ್ಸ್ ಎಲ್ಲೋ ಶೂ ಎಲ್ಲೋ... ಹಾಸಿಗೆಯ ಮೇಲೆ ಆಗಾಗ ಭಾರತದ ಭೂಪಟ... ಹಲ್ಲುಜ್ಜದ ಬಾಯಿಯನ್ನ ನೊಣಗಳಿಗೆ ಹೆದ್ದಾರಿಯನ್ನಾಗಿಸಿ ಅಂಗಾತ ಹೊಟ್ಟೆ ಮೇಲೆ ಮಾಡಿ ಬಿದ್ದುಕೊಳ್ಳೊದು... ರಾತ್ರಿ ಮಲಗುವ ಮುನ್ನವಾದರೂ ಫ್ರೇಶ್ಶಾಗಿ ಇರಬೇಕೆನ್ನುವ ಸಣ್ಣ ಜ್ಞಾನವೂ ಇಲ್ಲದ... ತನ್ನದೇ ಜಗತ್ತಿನಲ್ಲಿ ಅಪ್ಪಟ ಕಟ್ಟಳೆಯಲ್ಲಿ ಬದುಕಿ ನೂರು ವರ್ಷ ತೆಗೆಯುವುದಕ್ಕಿಂತಲೂ ಸ್ವಚ್ಛಂದವಾಗಿ ಜಗತ್ತು ನೋಡುವ ... ಸುಂದರ ಬಾಳು ಕಾಣುವದನ್ನು ತಪ್ಪು ಅನ್ನುತ್ತೀಯಾ...? ಇವೆಲ್ಲಾ ಚಿಕ್ಕ ಅಡ್ಜ್‌ಸ್ಟ್‌ಮೆಂಟ್‌ನಲ್ಲಿ ಸರಿಯಾಗಬಹುದಾದ ಕಿರ್ಕಿರಿಗಳು ಅನ್ನಿಸುತ್ತದನೋ...? ಆದರೆ ಅದೆಲ್ಲವನ್ನೂ ನಿರ೦ತರವಾಗಿ ಅನುಭವಿಸೋದಿದೆಯಲ್ಲ ಅದನ್ನು ಅನುಭವ ಮಾತ್ರ ತಿಳಿಸಬಲ್ಲದು.
ಬೇರೇನೂ ಇಲ್ಲದಿದ್ದರೂ ನಮ್ಮ ಪಿರಿಯಡ್ ಟೈಂನಲ್ಲಾದರೂ ಸೊಂಟ ನೋವೆಂದರೆ ಕೊಂಚ ಒತ್ತಲೇ ಅಂತ ಕೇಳಿದರೂ ಸಾಕು ಅರ್ಧ ನೋವು ಮಾಯವಾಗಿ ಬಿಡುತ್ತೇ... ಈ ಎಲ್ಲ ವಿಷಯಗಳು ಸೆಕ್ಸ್‌ಗಿಂತಲೂ ಅದ್ಭುತ ಸುಖವನ್ನ, ನೆಮ್ಮದಿಯನ್ನ ಹೆಂಡತಿಯರಿಗೆ ಕೊಡುತ್ತವೆ ಅನ್ನೋದು ಯಾವಾಗ ಈ ಗಂಡಸರಿಗೆ ಅರ್ಥವಾಗುತ್ತೆ. ಅಸಲಿಗೆ ಎಲ್ಲೆಡೆಗೂ ಅನೈತಿಕ ಸಂಬಂಧಗಳಿಗೆ ಹೆಣ್ಣೇ ಕಾರಣವೆನ್ನುತ್ತಾರಾದರೂ ವಾಸ್ತವವಾಗಿ ನೋಡಿದರೆ ಗಂಡಸರೇ ಸರಿ ಇಲ್ಲ. ಅದಕ್ಕಾಗೇ ಈ ಅನೈತಿಕಗಳೂ, ತರಹೇವಾರಿ ಕೌಟುಂಬಿಕ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತಿವೆ.
ಆಫ್ ಕೋರ್ಸ್ ಹೆಣ್ಣಾದವಳು ಹೆಚ್ಚಿನಾಂಶ ಗಂಡನ ದರ್ಪ, ಅಧಿಕಾರವನ್ನೂ ಎಂಜಾಯ್ ಮಾಡುತ್ತಾಳೆನ್ನುವುದು ಸುಳ್ಳಲ್ಲವಾದರೂ ಅದು ಪ್ರೀತಿ ಭರಿತವಾಗಿರಬೇಕು. ತನ್ನೆಡೆಗೊಂದು ಕನ್ಸ್‌ರ್ನ ಇರಬೇಕೆಂದು ಬಯಸುತ್ತಾಳೆ. ಪಂಚ ಪಾಂಡವರನ್ನೇ ಭರಿಸಬೇಕಾಗಿ ಬಂದದ್ದು ದ್ರೌಪದಿಯ ಮೇಲೆ ನಡೆದ ದೌರ್ಜನ್ಯ ಎಂದೇ ಎಷ್ಟೋ ಕಡೆಯಲ್ಲಿ ಗುರುತಿಸಲಾಗುತ್ತಿದೆ. ಆದರೆ ನಿಜವಾದ ಪ್ರೇಮದಿಂದ ಬಂದಿದ್ದರೆ, ಆಕೆಗೆ ಶತ ಕೌರವರನ್ನೂ ಬೇಕಾದರೂ ಭರಿಸಬಲ್ಲ ತಾಕತ್ತಿತ್ತು. ಅದಕ್ಕೆ ಬೇಕಾದ ಮಾನಸಿಕ ಪ್ರಭುದ್ಧತೆಯ ಜೊತೆಗೆ ನೈಜ ಮನ್ನಣೆ ನೀಡಬೇಕಾದ ಜಾವಾಬ್ದಾರಿ ಮಾತ್ರ ಪುರುಷರದಲ್ಲದೇ ಇನ್ನೇನು...? ನಿಸ್ವಾರ್ಥ ಪ್ರೀತಿಗೆ ಹೆಣ್ಣು ಒಲಿಯುತ್ತಾಳೆನ್ನುವುದರಲ್ಲಿ ಇವತ್ತಿಗೂ ಸಂಶಯವಿಲ್ಲ.
ಯಾವುದೇ ಗಂಡಸರು ಹೆಣ್ಣಿನ ಆಸೆಗಳನ್ನು ಭೌತಿಕವಾಗಿ ನೂರಕ್ಕೆ ನೂರರಷ್ಟು ಪೂರೈಸುತ್ತಾರೇನೋ, ಆದರೆ ಮಾನಸಿಕವಾಗಿ ಅವರಿಗೆ ಬೇಕಾದ ಜೊತೆಯನ್ನು ನೀಡುವಲ್ಲಿ ವಿಫಲವಾಗುತ್ತಿರುವುದರಲ್ಲಿ ಸ೦ದೇಹವೇ ಇಲ್ಲ. ಹೆಣ್ಣಿಗೆ ಒಂದು ಬೊಗಸೆ ಪ್ರೇಮವನ್ನು ಪ್ರಾಮಾಣಿಕವಾಗಿ ಕೊಡೋದನ್ನ ಈ ಲೋಕದಲ್ಲಿ ಪ್ರತಿಯೊಬ್ಬ ಗಂಡಸು ಅರಿತ ದಿನದಿ೦ದಲೇ ಅನೈತಿಕತೆ ನಾಶವಾಗಬಲ್ಲದು. ಹೊರತಾಗಿ ಬೇರೇನೂ ಕಾರಣವಲ್ಲ. ಹೆಣ್ಣು ಹೇಗೆ ಪ್ರೇಮಕ್ಕೆ... ಪ್ರೀತಿಗೆ ಸೋಲುತ್ತಾಳೋ... ಅಷ್ಟು ಸುಲಭವಾಗಿ ಶಯನೋತ್ಸವಕ್ಕೆ ಮಂಚಕ್ಕೆ ಬಂದು ಬಿಡಲು ಸಜ್ಜಾಗಲಾರಳು, ಮತ್ತದು ಅವಳಿಂದ ಸಾಧ್ಯವಿಲ್ಲ ಕೂಡಾ... !
ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. ಇವತ್ತಿಗೂ ಮನಸ್ಸಿಲ್ಲದ ಮನಸ್ಸಿನಿಂದ ದೈಹಿಕವಾಗಿ ಹೆಣ್ಣನ್ನು ಸೇರೋದಿದೆಯಲ್ಲ ಅದರಷ್ಟು ನೀಚ ಕೆಲಸ ಈ ಲೋಕದಲ್ಲಿ ಮತ್ತಾವುದೂ ಇರಲಾರದು. ಎಷ್ಟೊ ಜನ ಗಂಡಸರಿಗೆ ಇವತ್ತಿಗೂ ಎರಡು ಸೆಕ್ಸ್‌ನ ಮಧ್ಯೆ ಕನಿಷ್ಟ ಅವಧಿಯ ಅಂತರವಾದರೂ ಇರಬೇಕೆನ್ನುವ ಪರಿಜ್ಞಾನವೂ ಇಲ್ಲ. ಅಲ್ಲೂ ಒಂದೇ ಮುಖ್ಯವಾಗುತ್ತಿದೆಯೇ ಹೊರತಾಗಿ ಹೆಂಡತಿಗೆ ಬೇಕೆ ಬೇಡವೇ... ಅವಳ ಮನಸ್ಥಿತಿ ಹೇಗಿದೆ... ಇತ್ಯಾದಿ ಎಲ್ಲವೂ ಅವರಿಗೆ ಸೆಕ್ಸ್ ಬೇಕೆನ್ನುವ ಆಸೆಯೆದುರಿಗೆ ಗೌಣವಾಗುತ್ತದೆ. ತುಂಬಾ ಕೇಸ್‌ಗಳಲ್ಲಿ ಸಾಮಾಜಿಕ ಭದ್ರತೆಗೊಸ್ಕರ ಅವಲ೦ಭಿಸಿರುವುದರಿಂದಾಗಿ ಹೆಣ್ಣು ಗಂಡಸಿನ ಎಲ್ಲಾ ರೀತಿಯ ಅವಗುಣಗಳನ್ನು ಗಣಿಸಿಯೂ ಅವನೊಂದಿಗೆ ಬಾಳುತ್ತಾಳೆ.
ಕೊನೆಯಲ್ಲಿ ಒಂದೇ ಒಂದು ಮಾತು. ಎಲ್ಲರಿಗೂ ಇದು ... ಏನು ಗೊತ್ತೆ... ?
ಈ ಜಗತ್ತಿನ ಎಲ್ಲ ಸ್ತ್ರೀಯರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಅಸೆಗಳು ಗೂಡು ಕಟ್ಟಿಕೊ೦ಡೇ ಇರುತ್ತವೆ. ಆದರೆ ಅವರಿಗೆ ಬದುಕಿನ ಓಟದಲ್ಲಿ ಅದಕ್ಕೊಂದು ಅಗತ್ಯದ ಪ್ರಿಯಾರಿಟಿ ಇರುವುದಿಲ್ಲ ಅಷ್ಟೆ. ಎಲ್ಲರೂ ಯಾಕೆ ಹೀಗೆ ಮಾಡುವುದಿಲ್ಲವೆಂಬ ಪ್ರಶ್ನೆ ಏನಾದರು ಇದ್ದರೆ ಅದಕ್ಕೆ ಕಾರಣ " ಕೇವಲ ಅವಕಾಶ ಮತ್ತು ಸೌಲಭ್ಯ ಹಾಗು ಅವರಲ್ಲಿ ಅಂತಹದ್ದೊಂದು ಧೈರ್ಯದ ಕೊರತೆಯೇ " ಹೊರತಾಗಿ ಅವರಿಗೇನು ಆಸೆ ಇಲ್ಲವೆಂದಲ್ಲ..."
ಹೀಗೆ ಅವಳು ಗಂಟೆಗಟ್ಟಲೆ ಮಾತಾಡುತ್ತಿದ್ದರೆ ನನ್ನ ಧ್ವನಿಗೆ ಅಲ್ಲಿ ಜಾಗವಿರಲಿಲ್ಲ. ಅಷ್ಟಕ್ಕೂ ಒಂದು ನೊಂದ ಜೀವಕ್ಕೆ ಅದರ ಧ್ವನಿಗೆ ಕಿವಿಯಾಗುವುದಕ್ಕಿಂತ ದೊಡ್ಡ ಸಾಂತ್ವನ ಬೇಕಾ...? ಅಷ್ಟೆ. ನಾನು ಕುಳಿತೆ ಇದ್ದೆ. ಅವಳ ಧ್ವನಿಗೆ ಕಿವಿಯಾಗುತ್ತಾ. ಅಷ್ಟಕ್ಕೂ ನಾನು ಹೋದದ್ದೇ ಅದಕ್ಕಾಗಿ. ಅಲ್ಲಿ ಆ ದಿನ ಸೇರಿದವರದೆಲ್ಲರದೂ ಒಂದೊಂದು ಕಥೆ. ಉಳಿದಿದ್ದನ್ನು ಇನ್ಯಾವತ್ತಾದರೂ ಬರೆದೇನು.
No comments:
Post a Comment