( ಬರೆಯದಿದ್ದರೂ ಸಾಹಿತಿಯಾಗಿ ಚಲಾವಣೆಯಲ್ಲಿರುವವರನ್ನು ಅವರ ಸಾಹಿತ್ಯಕ್ಕಿಂತಲೂ ವ್ಯವಸ್ಥಿತವಾಗಿ ಮುಖ್ಯವಾಹಿನಿಯಲ್ಲಿ ಚಲಾವಣೆಯಲ್ಲಿಡಲಾಗಿದೆಯೇ ಹೊರತಾಗಿ ಸರಿಯಾದ ಮೂರ್ತ ರೂಪವೇ ಇಲ್ಲದ ಬರಹಗಳನ್ನು ಕೇವಲ ಪ್ರಚಾರದ ರೂಪದಲ್ಲಿ ಸಾಹಿತ್ಯವನ್ನಾಗಿಸಿ ಪ್ರಶಸ್ತಿಯತ್ತಲೂ ಎಳೆದ ಉದಾ. ನಮ್ಮ ಮುಂದಿವೆ )
ಇತ್ತೀಚಿನ ಸಾಹಿತ್ಯ ಮತ್ತು ಹಿರಿ-ಕಿರಿಯ ಸಾಹಿತಿಗಳ ಧೋರಣೆಗಳನ್ನು ಗಮನಿಸಿದರೆ ಬಹುಶ: ಇನ್ನೊಂದು ದಶಕದೊಳಗಾಗಿ ನಾವು ಸಾಹಿತ್ಯವೆಂದರೆ ನಿರ್ಧಿಷ್ಟ ಗುಂಪುಗಳಲ್ಲಿದ್ದರೆ ಮಾತ್ರ ಆತ ಬರೆದದ್ದು ಸಾಹಿತ್ಯ ಅಥವಾ ಆತ ಸಾಹಿತಿ ಎನ್ನುವ ಕಾಲ ಬರುತ್ತದಾ..? ನಿಸ್ಸಂಶಯ. ಯಾಕೆಂದರೆ ಕಳೆದ ಒಂದೂವರೆ ದಶಕಗಳಿಂದ ನಾನು ಗಮನಿಸುತ್ತಿರುವ ಸಾಹಿತ್ಯ ಲೋಕದಲ್ಲಿ ಇವತ್ತಿನ ದಿನದವರೆಗೂ ಬದಲಾಗುತ್ತಿರುವ ತೀವ್ರಗಾಮಿ ಗುಂಪುಗಾರಿಕೆಯ ಧೋರಣೆಯಿಂದಾಗಿ ಬಹುಶ: ಸಾಹಿತಿ ಮತ್ತು ಸಾಹಿತ್ಯಕ್ಕೆ ಹೊಸ ವಾಖ್ಯಾನ ರೂಪಿಸಬೇಕಾಗಿ ಬರುತ್ತದೇನೋ ಎನ್ನುವಂತಾಗಿ ಹೋಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ತಾಲೂಕಾ ಸಾಹಿತ್ಯ ಸಮ್ಮೇಳನದಿಂದ ಹಿಡಿದು ಯಾವುದೇ ಜಿಲ್ಲಾವಾರು ಕೊನೆಗೆ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದವರೆಗೂ ಗಮನಿಸುವಾಗ ಅಲ್ಲಿ ವಲಯವಾರು ಗುಂಪುಗಾರಿಕೆಯನ್ನು ಅದರ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಆಯಾ ಕಾಲಕಾಲಕ್ಕೆ ಬದಲಾಗುವ ಅಧ್ಯಕ್ಷರುಗಳಿಂದ ಹಿಡಿದು ಪದಾಧಿಕಾರಿಗಳವರೆಗೆ ಬೇಕಾದವರಿಗೆ ಇವತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಲು ಅವಕಾಶ ಲಭ್ಯವಾಗುತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ. ಅದಕ್ಕಿಂತಲೂ ಮಿಗಿಲಾಗಿ ಆಯಾ ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸೋತು ಹೋಗುವ ಸಾಹಿತ್ಯ ಪರಿಷತ್ ಅಭ್ಯರ್ಥಿಗಳದ್ದೇ ಒಂದು ಬದಲಾದ, ಬಲವಾದ ಗುಂಪುಗಳು ಇನ್ನೊಂದೆಡೆಗೆ ಸೀಮಿತ ಮಟ್ಟದಲ್ಲಿ ಹೆಸರು ಪ್ರತಿಸ್ಪರ್ಧೆ ನಡೆಸಲು ಹೋರಾಟ ನಡೆದಿರುತ್ತದೆ. ಯಾಕೆ ಒಮ್ಮೆ ಈ ಅಧ್ಯಕ್ಷ ಪದವಿಯ ಹಣಾಹಣಿ ನಡೆದ ನಂತರದ ದಿನಗಳಲ್ಲಿ ಇವರೆಲ್ಲಾ ಸಾಹಿತ್ಯಿಕವಾಗಿ ಒಂದಾಗಬಾರದು. ಉಹೂಂ ಸಾಧ್ಯವೇ ಇಲ್ಲ.
ಆಯಾ ಭಾಗದಲ್ಲಿ ಅವಕಾಶ ಪಡೆವ ಸಮ್ಮೇಳನಗಳು ಮತ್ತು ಆಗಾಗ ಕಾಲಕಾಲಕ್ಕೆ ನಡೆವ ಚರ್ಚೆಗಳು ಇತ್ಯಾದಿಗಳಲ್ಲಿ ಭಾಗವಹಿಸಿ ವಹಿಸಿಯೇ ಸಾಹಿತ್ಯ ಲೋಕದಲ್ಲಿ ಚಲಾವಣೆಗೆ ಬಂದು ಬಿಡುವವರೂ ಇಲ್ಲದಿಲ್ಲ. ಕವನ ಸಂಕಲನದ ಚರ್ಚೆ ಇರಲಿ, ವಿಮರ್ಶೆ ಇರಲಿ, ಹಳೆಯ ಮತ್ತು ಹೊಸ ತಲೆಮಾರಿನ ಸಾಹಿತ್ಯದ ಬೆಳವಣಿಗೆಗಳ ತುಲನಾತ್ಮಕ ಸಾಮೂಹಿಕ ದೃಷ್ಟಿಕೋನ ಎನ್ನುವ ಇಷ್ಟುದ್ದದ ಹೆಸರಿನ, ಹೆಸರಲ್ಲೇ ಗೊಂದಲ ಹುಟ್ಟಿಸುವ ಚರ್ಚೆ ಇರಲಿ, ಹಿರಿಯರೊಬ್ಬರಿಗೆ ಅಭಿನಂದನಾ ಗ್ರಂಥ ಸಮರ್ಪಣೆ, ಅದರ ಚರ್ಚೆ, ಬಿಡುಗಡೆ, ಕೊನೆಯಲ್ಲಿ ಹಿರಿಯ ಸಾಹಿತಿಯೊಬ್ಬರು ತೀರಿಕೊಂಡಾಗಿನ ಅಶ್ರು ತರ್ಪಣ ಕಾರ್ಯಕ್ರಮವಿರಲಿ... ಇತ್ಯಾದಿಗಳ ಯಾವುದೇ ಸಮಾರಂಭವಿರಲಿ. ಅಲ್ಲೆಲ್ಲಾ ಆಯಾ ಭಾಗದಲ್ಲಿ ನಿರ್ದಿಷ್ಟ ಸಂಗಡಿಗರದ್ದೇ ಗುಂಪುಗಳು ಭಾಗವಸಿರುತ್ತವೆ. ಆಯಾ ಗುಂಪಿನ ವ್ಯಕ್ತಿಗಳು ಭಾಗವಹಿಸಿದ್ದರೆ ಅವರ ವಿರೊಧಿ ಗುಂಪು ಅಲ್ಲಿ ತಲೆ ಹಾಕೋದಿಲ್ಲ. ಅವರ ಪಾಡಿಗೆ ಅವರು ಇವರನ್ನು ಬೈಯುತ್ತಾ ಗಂಭೀರ ಚರ್ಚೆಗಿಳಿದಿರುತ್ತಾರೆ. ಇಲ್ಲ ಒಬ್ಬರನ್ನು ಕರೆದರೆ ಇನ್ನೊಬ್ಬರನ್ನು ಶಿಫಾರಸ್ಸು ಮಾಡುವ ವಶೀಲಿಯೂ ಇರುತ್ತದೆ.
ಯಾವುದೇ ಇವತ್ತಿನ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದವರ, ಪರಿಷತ್ ಖರ್ಚಿನಲ್ಲಿ ಬಿಡುಗಡೆಯಾದವರ ಪುಸ್ತಕಗಳ ಲೇಖಕರ ಹೆಸರು ಇತರ ವಿವರ ಜಾಲಾಡಿದರೆ ಸಾಹಿತ್ಯಕ್ಕೆ ಅವರ ಕೊಡುಗೆ ಏನು ಎನ್ನುವುದು ನಿಚ್ಚಳ. ಇದರಲ್ಲಿ ನಿಜವಾದ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿರುವವರು ಬಹಳವೆಂದರೆ ಒಂದ್ಹತ್ತು ಶೇ. ಇದ್ದಾರು ಅಷ್ಟೆ. ಉಳಿದಂತೆ ಪೇಪರು ಮತ್ತು ಪಬ್ಲಿಸಿಟಿ ಹಾಗು ಸಮ್ಮೇಳನದ ಗಾದಿಯೇರಲು ಹವಣಿಸಿದವರಲ್ಲಿ ಎಷ್ಟು ಜನರ ಸಾಹಿತ್ಯ ಇವತ್ತಿನ ಕನ್ನಡದ ದಿಗ್ಗಜ ಪತ್ರಿಕೆಗಲ್ಲಿ ಪ್ರಕಟವಾಗುವ ಅರ್ಹತೆ ಪಡೆದಿವೆ...? ಇದರರ್ಥ ಎಲ್ಲಾ ಪತ್ರಿಕೆಯಲ್ಲೂ ಪ್ರಕಟವಾಗೋದೆಲ್ಲಾ ಅದ್ಭುತ ಸಾಹಿತ್ಯವೆಂದಲ್ಲ. ಆದರೆ ಇವತ್ತಿಗೂ ಪ್ರತಿ ಹೊಸಪತ್ರಕರ್ತನಿಗೆ ಅಲ್ಟಿಮೇಟ್ಲಿ ದಶಕಗಳಿಂದ ಕಾಲೂರಿ ನಿಂತ ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡಬೇಕು ಎಂದು ಅನ್ನಿಸುವ ಮಾತು ಎಷ್ಟು ಹಸಿ ಸತ್ಯವೋ... ಇತ್ತೀಚಿನ ಬರಹಗಾರರಿಗೆ ಕನಿಷ್ಟ ಅವರ ಬರಹಗಳು ಪ್ರಜಾವಾಣಿ, ಸುಧಾ, ತರಂಗದ, ಕ.ಪ್ರ. ವಿಜಯವಾಹಿನಿ. ವಿ.ಕ ದ. ಸಖಿಯಲ್ಲಿ - ಸಾಪ್ತಾಹಿಕದಲ್ಲಿ ಪ್ರಕಟವಾಗಬೇಕೆನ್ನುವ ಒಳಾಭಿಲಾಷೆ ತುಡಿತಗಳಿರುವುದು ಅಷ್ಟೆ ನಿಜ.
ಹೀಗಿದ್ದಾಗ ಎಷ್ಟೆ ಇಲ್ಲವೆಂದರೂ ಪ್ರಜಾವಾಣಿ ಬಳಗ ಸೇರಿದಂತೆ ತರಂಗ,ಸುದಾ, ಸಖಿ ಇತ್ಯಾದಿಗಳಲ್ಲಿ ಮತ್ತು ಇತ್ತೀಚೆಗೆ ಕ್ವಾಂಟಿಟಿಯಿಂದಾಗಿ ಎಲ್ಲ ಹಿರಿ ಕಿರಿ ಬರಹಗಾರರನ್ನು ಆಪೋಶನವಾಗಿಸಿಕೊಂಡು ಹೆಸರು ಮಾಡಿದ ಕ. ಪ್ರ. ಗುಂಪಿನಲ್ಲಿ ಎಷ್ಟು ಜನ ಈ ಗಾದಿಸಾಹಿತಿಗಳು ಕಾಲಕಾಲಕ್ಕೆ ಕಾಣಿಸಿಕೊಂಡಿದ್ದಾರೆ...? ಒಂದೊಮ್ಮೆ ಹೆಸರು ಮಾಡಿ ಕೇವಲ ಸ್ಟೇಜಿಗೇ ಸೀಮಿತರಾಗಿ ಹೋದ, ಕಳೆದ ತಲೆಮಾರಿನ ಸಾಹಿತಿಗಳು ಕೂಡಾ ಇವತ್ತೂ ಎಷ್ಟು ಜನ ನಿರಂತರತೆಯನ್ನು ಉಳಿಸಿಕೊಂಡಿದ್ದಾರೆ...? ಇನ್ನು ದೊಡ್ಡದೊಂದು ಸನ್ಮಾನ ಮತ್ತು ಪ್ರಶಸ್ತಿ ಬರುತ್ತಿದ್ದಂತೆ ಬರೆಯುವುದನ್ನೇ ನಿಲ್ಲಿಸಿ ಬಿಟ್ಟ ಕಳೆದೆರಡು ದಶಕಗಳಿಂದಲೂ ಬರೆಯದೇ ಸಾಹಿತಿಯಾಗಿ ಚಲಾವಣೆಯಲ್ಲಿರುವವರು ಎಷ್ಟು ಜನ ಬೇಕು ನಿಮಗೆ..? ಇವರೆಲ್ಲರನ್ನೂ ಅವರ ಸಾಹಿತ್ಯಕ್ಕಿಂತಲೂ ಬರೆದದ್ದಕ್ಕಿ೦ತಲೂ ವ್ಯವಸ್ಥಿತವಾಗಿ ಮುಖ್ಯವಾಹಿನಿಯಲ್ಲಿ ಚಲಾವಣೆಯಲ್ಲಿಡಲಾಗಿದೆಯೇ ಹೊರತಾಗಿ ಇವತ್ತಿಗೂ ಅಮುಖ್ಯ ಎನ್ನಿಸುವ ಸರಿಯಾದ ಮೂರ್ತ ರೂಪವೇ ಇಲ್ಲದ ಬರಹಗಳನ್ನು ಕೇವಲ ಪ್ರಚಾರದ ರೂಪದಲ್ಲಿ ಸಾಹಿತ್ಯವನ್ನಾಗಿಸಿ ಅವರನ್ನು ಪ್ರಶಸ್ತಿಯತ್ತಲೂ ಎಳೆದ ಉದಾ. ನಮ್ಮ ಮುಂದಿವೆ.
ಒಂದು ಸಾಹಿತ್ಯವನ್ನು ಎಷ್ಟು ಚೆನ್ನಾಗಿ ಮತ್ತು ಅಷ್ಟೆ ಕೆಟ್ಟದಾಗಿ ವಿಮರ್ಶೆ ಮಾಡಲು ಸಾಧ್ಯವೆನ್ನುವುದು ಹೇಗೆ ಸತ್ಯವೋ ಇದನ್ನು ಬಳಸಿಕೊಂಡೇ ಕೆಲವರನ್ನು ತುಳಿದದ್ದೂ, ಕೆಲವರನ್ನೂ ಬೆಳೆಸಿದ್ದು ಇದೇ ಗುಂಪು ಎಂಬುವುದು ಸಾಹಿತ್ಯದ ಇತ್ತೀಚಿನ ವಿಪರ್ಯಾಸ. ಇತ್ತಿಚಿಗೆ ಬರಹಗಳಲ್ಲಿ ಎಷ್ಟು ಜನ ಇವತ್ತಿಗೂ ಸಾಹಿತ್ಯಿಕವಾಗಿ ಜೀವಂತವಾಗಿದ್ದಾರೆ ಎಂದರೆ ಉತ್ತರ ನಿರಾಶೆ ಮೂಡಿಸುತ್ತದೆ. ಹಳೆಯ ದಾಖಲೆಗಳು ಬರೆದ ಬರಹಗಳ ಮೌಲ್ಯವನ್ನು ನಾನು ಕಡಿಮೆ ಮಾಡುತ್ತಿಲ್ಲ ಅಥವಾ ಅವನ್ನು ಗಣಿಸಬಾರದು ಎಂದು ನಾನಿಲ್ಲಿ ಪ್ರತಿಪಾದಿಸುತ್ತಿಲ್ಲ. ಆದರೆ ಇವರೊಂದಿಗೆ ಪ್ರಸ್ತುತದಲ್ಲಿರುವ ಆದರೆ ಇವರ ಸಂಪರ್ಕಕ್ಕೆ ಬಾರದಿರುವ ಆದರೆ ಪ್ರಸ್ತುತ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಅವರನ್ನು ಒಪ್ಪಿಕೊಂಡಿರುವ, ಆದರಿಸುವ ಓದುಗರು ಇರುವವರನ್ನು ಯಾಕೆ ಪರಿಗಣಿಸಲಾಗುತ್ತಿಲ್ಲ..? ಅದಕ್ಕಾಗಿ ಅವರೆಲ್ಲಾ ಇವತ್ತು ಇವುಗಳೆಲ್ಲದಕ್ಕಿಂತಲೂ ವೇಗವಾಗಿ ಮತ್ತು ಉತ್ತಮವಾಗಿ ಟ್ಯಾಬ್ಲಾಯಿಡ್‌ಗಳ ಮುಖಾಂತರ ಓದುಗರನ್ನು ಆವರಿಸಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಇವತ್ತಿನ ಕೆಲವು ಟ್ಯಾಬ್ಲಾಯಿಡ್‌ಗಳು ಸಮಾಜ ಮುಖಿಯಾಗಿ ಬೆಳೆಯುತ್ತಿದ್ದರೆ ರಾಜ್ಯದ ಪ್ರಮುಖ ಪತ್ರಿಕೆಗಳು ಮಾತ್ರ ಅದೇ ಮಡಿವಂತಿಕೆ ಪ್ರದರ್ಶಿಸುತ್ತಲೇ ಇವೆ.
ಸಮ್ಮೇಳನ ಅಥವಾ ಸಾಹಿತ್ಯದ ಚಟುವಟಿಕೆಗಳು ನಡೆಯುವ ಈ ಸಂದರ್ಭದಲ್ಲಿ ಆಯ್ಕೆ ಮಾಡುವಾಗ ಇವರು ಅನುಸರಿಸುವ ಮಾನದ೦ಡ ಯಾವುದು ಹಾಗಿದ್ದರೆ...? ಬರಿ ಅವರೊಂದಿಗಿನ ಒಡನಾಟವೊಂದೇ ಮಾನದಂಡವಾಗುವುದಾದರೆ ನಾನೂ ತುಂಬಾ ಚೆನ್ನಾಗಿ ಸಂಬಂಧವಿರಿಸಿಕೊಳ್ಳಬಲ್ಲೆ ಎನ್ನುತ್ತಾರೆ ಕೆಲವರು. ಇದೇ ಕಾರಣಕ್ಕೆ ಇವತ್ತು ಗಡಿ ಭಾಷೆ ಮೀರಿ ಜನಪ್ರಿಯತೆ ಪಡೆದಿರುವ ಯಂಡಮೂರಿಯವರನ್ನು ವ್ಯವಸ್ಥಿತವಾಗಿ ಪ್ರತ್ಯೇಕಿಸಿದಂತೆ ಆಯಾ ಕಾಲ ಘಟಕ್ಕೆ ಅನುಗುಣವಾಗಿ ಭೈರಪ್ಪನವರು ನೇಪಥ್ಯದತ್ತ ಸರಿದರು ಎನ್ನುವುದನ್ನು ಗುಟ್ಟಾಗಿ ಒಪ್ಪಿಕೊಳ್ಳುತ್ತಾರೆ ಆ ಕಾಲದ ಬರಹಗಾರರು. ಆದರೆ ಹೀಗೆ ಗುಂಪುಗಾರಿಕೆಯನ್ನು ಮೆರೆದ ಜ್ಞಾನಪೀಠಿಗಳ ಮಟ್ಟ ಎಷ್ಟು,..? ಯಾಕೆಂದರೆ ಇಂತಹ ಗುಂಪುಗಾರಿಕೆ ಹಿಂದಿರಲಿಲ್ಲವೆಂದಲ್ಲ. ಭೈರಪ್ಪನ೦ಥವರು ಅದನ್ನು ಪೋಶಿಸಲಿಲ್ಲ ಅಷ್ಟೆ.
ತಮ್ಮ ಪಾಡಿಗೆ ಪತ್ರಿಕೆಗಳಿಗೆ ಬರೆದುಕೊಂಡಿದ್ಡು, ಪ್ರಕಾಶಕರು ಕಾಯ್ದು, ಪ್ರಕಟಿಸಿ ನಿಮ್ಮ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರೂ ಕೂಡಾ ನೀವು ಅವರ ಕಣ್ಣಿಗೆ ಬೀಳದೆ ಗುಂಪಿನಲ್ಲಿ ಗೋವಿಂದಾ ಆಗಿಬಿಡುತ್ತೀರಿ. ಅಸಲಿಗೆ ಎಲ್ಲಾ ರೀತಿಯ ಪುಸ್ತಕ ಬರಹಗಾರರು ಇದರಲ್ಲಿ ಬರುವುದಿಲ್ಲ ಆ ಪ್ರಶ್ನೆ ಬೇರೆ. ಆದರೆ ಅಪ್ಪಟ ಕಥೆ, ಕಾದಂಬರಿ ಮತ್ತು ವಿಮರ್ಶೆ ಬರೆದುಕೊಂಡು ನಿರಂತರವಾಗಿ ಪ್ರಮುಖ ನಿಯತಕಾಲಿಕೆಗಳಲ್ಲಿ ಸ್ಥಾನ ಉಳಿಸಿಕೊಂಡಿರೋ ಎಷ್ಟೋ ಬರಹಗಾರರು ಇವತ್ತಿಗೂ ಅವರವರ ಸ್ಥಳದಲ್ಲೇ ಅಪರಿಚಿತರು. ಒ೦ದೋ ಅದಕ್ಕೆ ಕಾರಣ ಅವರೊಂದಿಗರು ಅವರನ್ನು ಉದ್ದೇಶಪೂರ್ವಕವಾಗಿ ಬೆಳೆಯಲು ಬಿಡದಿರುವುದು. ಇಲ್ಲ ಅಗತ್ಯ ಸಂದರ್ಭದಲ್ಲಿ ಹೆಸರನ್ನು ಸೂಚಿಸಬೇಕಾದವರು ಜಾಣ ಮೌನ ವಹಿಸಿಬಿಡುವುದರ ಮೂಲಕ ತಳ್ಳಿ ಬಿಡುವುದು. ಇದಕ್ಕೆ ಇನ್ನೊಂದು ಗುಂಪು ಕೂಡಾ ಕೆಲಸ ಮಾಡುತ್ತದೆ. ಇತ್ತೀಚೆಗೆ ಸಾಹಿತ್ಯಕ್ಕೆ ಸಂಗೀತ ಬೆರೆಸಿ ತಮ್ಮ ಹೆಸರು ಅದರಲ್ಲಿ ಸೇರಿಸಿಕೊಂಡು ಸಾಹಿತ್ಯದ ಗಂಧ ಗಾಳಿ ಇಲ್ಲದವರೂ ಅದರಲ್ಲಿ ಕೈಯ್ಯಾಡಿಸಿ ಸುದ್ದಿಗೆ ಬರುವುದು ಈ ಗುಂಪಿನ ಕ್ಷಮತೆ. ಸಂಗೀತದಲ್ಲಿ ಸಾಹಿತ್ಯದಲ್ಲಿ ಎರಡೂ ಇಲ್ಲದಿದ್ದರೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುವುದು. ಗೀತ-ಸಂಗೀತ. ಸಾಹಿತ್ಯ-ಗೀತ ಇತ್ಯಾದಿ ಗೋಷ್ಠಿಗಳು ಈ ಗುಂಪಿನವರ ಬಳುವಳಿಗಳು.
ಒಂದಷ್ಟು ತಮಗೆ ಬೇಕಾದ ಕವಿಯಿತ್ರಿಯರನ್ನು ಮೇಲೆ ಕೂಡಿಸಿ ಯಾರೊಬ್ಬ ಸಂಗೀತಗಾರನನ್ನು ಹಿಡಿದು ಅವರ ಕವನವನ್ನೇ ಹಾಡಿಸುವುದರ ಮೂಲಕ ಜನರ ಗಮನ ಸೆಳೆಯುವ ಜಾಯಮಾನ. ಇನ್ನು ಮುಂದೆ ಹೋಗುವವರು ಚಿತ್ರಗಳನ್ನೂ ಬರೆಸುತ್ತಿದ್ದಾರೆ. ಇವೆಲ್ಲ ಗುಂಪುಗಾರಿಕೆ ಹೊರತುಪಡಿಸಿದರೆ ಸೃಜನ ಶೀಲತೆಯನ್ನು ಹೊರ ಹೊಮ್ಮಿಸುವುದಾದರೂ ಹೇಗೆ...? ಕೆಲವರ ಪ್ರಶ್ನೆ. ಏಕೆಂದರೆ ಅಷ್ಟು ಮಾತ್ರದ ಪ್ರಸಿದ್ಧಿ, ಹೆಸರು, ಪಬ್ಲಿಸಿಟಿ ಬಿಟ್ಟು ಈಗಿನ ಬರಹಗಾರರು ಬದುಕುವುದಾದರೂ ಹೇಗೆ...? ಅದೆಲ್ಲಾ ಬೇಕೆಂದರೆ ಮತ್ತೇ ಗುಂಪುಗಾರಿಕೆ ಬೇಕೆ ಬೇಕಲ್ಲ...? ಮತ್ತೆ ಅದ್ಹೇಗೆ ಹಿಂದಿನ ತಲೆ ಮಾರಿನಂತೆ ಸೃಜನ ಶೀಲತೆ ಹೊರಹೊಮ್ಮೀತು...? ನನಗೆ ಅನುಭವಕ್ಕೆ ಮತ್ತು ಇಷ್ಟು ವರ್ಷಗಳ ಸಾಹಿತ್ಯ ಲ್ಕವನ್ನು ಕಂಡಂತೆ ಬರೆದಿದ್ದೇನೆ.. ಅನುಭವಿಗಳು, ಜ್ಞಾನಿಗಳು ನನ್ನನ್ನು ತಿದ್ದಬಹುದು. ಅದಕ್ಕೆ ಧಾರಾಳ ಅವಕಾಶ ಮತ್ತು ಸ್ವಾಗತ ಎರಡೂ ಇದೆ.
ಲಾಸ್ಟ್ ಬಿಟ್ : ಈಗಿನ ರೆಬೆಲ್ ಬರಹಗಾರರೆನ್ನಿಸಿಕೊಂಡ ಹೊಸ ಪೀಳಿಗೆಯ ಲೇಖಕರಾದರೂ ಈ ಸಂಪ್ರದಾಯವನ್ನು ಮುರಿದು ಹೊರಗೆ ಬರಲಿ. ಕೇವಲ ಬರಹದ ಮೂಲಕವೇ ಓದುಗರನ್ನು ತಲುಪುವ ಪ್ರಯತ್ನ ಮಾಡೋಣ. ಆ ದಿಶೆಯಲ್ಲಿಯೇ ನನ್ನ ಪ್ರಯತ್ನವಿದೆ ಆದ್ದರಿಂದಲೇ ನಾನಿವತ್ತಿಗೂ ಸಾಹಿತ್ಯಿಕವಾಗಿ ಯಾವ ಗುಂಪಿನೊಂದಿಗೂ ಗುರುತಿಸಿಕೊಂಡಿಲ್ಲ ಓದುಗರನ್ನು ಹೊರತು ಪಡಿಸಿ. ಕನಿಷ್ಟ ಹೀಗೆ ಬಹಿರಂಗ ಲೇಖನವಾಗಿಸಿ ಸಂದೇಶ ನೀಡಿದ ನಂತರವಾದರೂ ಆ ದಿಶೆಯಲ್ಲಿ ಪ್ರಯತ್ನ ಆರಂಭಗೊಂಡಲ್ಲಿ ಅಷ್ಟರ ಮಟ್ಟಿಗೆ ಸಾರಸ್ವತ ಲೋಕ ಬದುಕಿದೆ ಎಂದೇ ಅರ್ಥ.
ಸೂಪರ್ ಗೆಳೆಯ. ಸಾಹಿತಿಯೊಬ್ಬ ಓದುಗರ ಗುಂಪಿನೊಂದಿಗೆ ಗುರುತಿಸಿಕೊಳ್ಳಬೇಕಷ್ಟೇ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದೀರ. ಇದನ್ನು ಓದಿಯಾದರೂ ಒಂದಷ್ಟು ಮನಸ್ಸುಗಳು ರೋಗಮುಕ್ತವಾಗಲಿ ಎಂಬ ಆಶಯದೊಂದಿಗೆ..........
ReplyDeleteಸಂತು.
ಧನ್ಯವಾದಗಳು.. ಸಂತೋಷ್.. ಹೌದು ಓದುಗರಿಲ್ಲದ ಸಾಹಿತಿಯ ಬದುಕು / ಬರಹಗಾರನಿಗೆ.. ಮರೂಭೂಮಿಯಲ್ಲಿ ನ ಗುಲಾಬಿ ಇದ್ದಂತೆ.. ಎಸ್ಟೆ ನಲನಲಿಸಿದರೂ ಅದಕ್ಕೆ ಯಾವುದೇ ಪ್ರಾಧಾನ್ಯತೆ ಇಲ್ಲೆನ್ನುವುದು ನನ್ನ ಅನಿಸಿಕೆ.. ಕಾರಣ ಬರಹಗಾರನ ಸಾರ್ಥಕತೆ ಓದುಗನಿಂದ ಮಾತ್ರ ಸಾಧ್ಯ... ಪ್ರಶಸ್ತಿ ವೇದಿಕೆಗಲಿಂದಲ್ಲ.. ( ಈ ವಿಷಯದಲ್ಲಿ ನಾನೀಗಲೂ ಬದ್ಧ.. ಹಾಗೆ ಹಾರ ತುರಾಯಿಗಲಿನ್ದಲ್ಲೂ )
ReplyDeleteವ್ಯಕ್ತಿ, ಪ್ರಶಸ್ತಿಗಳು, ಸಮ್ಮಾನಗಳಂತೇ ಪರಂಪರೆಯಿಂದ ಬಂದ ಸಾಹಿತ್ಯಿಕ ಸಂಸ್ಥೆಗಳೂ ಇಂದು ನೀವು ಆರೋಪಿಸುವ ಗುಂಪುಗಾರಿಕೆಯ ಭಾಗಗಳೇ ಆಗಿ ವರ್ಷ ಹಲವಾಗಿವೆ. ಸುಮಾರು ಮೂರು ದಶಕಗಳ ಹಿಂದೆ ವೋಟ್ ಬ್ಯಾಂಕ್ ತಯಾರು ಮಾಡಿ, ಕಸಾಪ ಅಧ್ಯಕ್ಷರಾಗಿ ‘ಆಯ್ಕೆ’ಯಾಗಿ ಬಂದವರ(ಇಂದು ನಾಡೋಜ ಬಿರುದಾಂಕಿತರೂ ಹೌದು) ಕಾಲದಿಂದಲೇ ನಾನಿದನ್ನು ಕಾಣುತ್ತಿದ್ದೇನೆ. ರಾಜ್ಯ ಸಾಹಿತ್ಯ ಅಕಾಡೆಮಿ (ಎಲ್ಲಾ ಅಕಾಡೆಮಿಗಳೂ), ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾಲಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಎಲ್ಲವನ್ನೂ ನನ್ನ ಮೂವತ್ತಾರು ವರ್ಷಗಳ ಪುಸ್ತಕೋದ್ಯಮಿಯ ಜೀವನದಲ್ಲಿ ಅನುಭವಿಸಿ, ವಿರುದ್ಧ ಹೋರಾಡಿ ಹೊರಬಂದಿದ್ದೇನೆ.ನನ್ನ ‘ಪುಸ್ತಕ ಮಾರಾಟ ಹೋರಾಟ’ ಎಂಬ ಪುಸ್ತಕ ಎಲ್ಲಾದರೂ ಸಿಕ್ಕರೆ ಓದಿನೋಡಿ. ನಡುನಡುವೆ ಯೋಗ್ಯರು, ಒಳ್ಳೆಯ ಕೆಲಸ ಮಾಡಿದವರು ಬಂದಿಲ್ಲ ಎಂದಲ್ಲ. ಆದರೆ ಅವರು ಒಂದು ತರದಲ್ಲಿ ಸಂಸ್ಥೆಗೆ ಸಾರ್ವಜನಿಕ ವಿಶ್ವಾಸಾರ್ಹತೆ ಉಂಟಾಗಲು ಅನಿವಾರ್ಯವಾಗಿ ಗುಂಪುಗಾರಿಕೆಯವರೇ ವ್ಯವಸ್ಥೆ ಮಾಡಿದ ಕ್ರಮಗಳು. ಅಂಥವರು ಬಹಳ ಕಾಲ ನಿಲ್ಲದಂತೆಯೂ ಈ ಸ್ವಾರ್ಥ-ಗುಂಪುಗಳು ನೋಡಿಕೊಂಡಿವೆ. ಇವುಗಳನ್ನು ಸಾಂದ್ರೀಕರಿಸಿದಂತೇ ಇರುವ ಈ ಲೇಖನವನ್ನು ಓದಿನೋಡಿ:http://www.athreebook.com/2012/01/blog-post_20.html#more ಹಾಗೇ ಇನ್ನು ಹೆಚ್ಚಿನವಕ್ಕೆ ಇದೇ ನನ್ನ ಜಾಲತಾಣದಲ್ಲಿ (www.athreebook.com)
ReplyDelete