ಮನಸ್ಸು ಬಯಸೋದನ್ನು ಹೀಗೇ ಅಂತಾ ಪ್ರಿಡಿಕ್ಟ್ ಮಾಡಿರೋರು ತುಂಬಾ ಕಡಿಮೆ. ಯಾಕೆಂದರೆ ಪ್ರಕೃತಿಯಂತೆ ಮನುಶ್ಯನೂ ಬದಲಾವಣೆ ಬಯಸುತ್ತಾನಾ...? ಹೌದೆಂದು ಬಿಡುತ್ತದೆ ಕೂಡಲೇ ಕಳ್ಳ ಮನಸ್ಸು. ಹಾಗಾದರೆ ಯಾವುದೆಲ್ಲಾ ಬದಲಾವಣೆ ಮಾಡ್ತೀರಿ...? ಯಾಕೆಂದರೆ ಬಹಳಷ್ಟು ವಿಷಯದಲ್ಲಿ ಸಾಮಾನ್ಯವಾಗಿ ಬದಲಾವಣೆ ಬಯಸಿ ನಮ್ಮ ಕೈಲಾದ ಮಟ್ಟಿಗೆ ಬದುಕಿನಲ್ಲಿ ಅನುಭವವನ್ನು ಪಡೆಯುತ್ತಲೇ ಇರುತ್ತೇವೆ. ಹೊಸ ಮೊಬೈಲ್ ಬಂತು ಹಳೆಯದನ್ನು ಬಿಸಾಡಿದಿರಿ... ಹೊಸ ಶರ್ಟ್ ಬಂತು ಹಳೆಯದು ಮೂಲೆಗೆ ಹಾಕಿದಿರಿ... ಹೊಸ ಶೂ ಬರ್ತಿದ್ದಂತೆ ನಿನ್ನೆಯವರೆಗೆ ಇದ್ದ ಆತ್ಮೀಯತೆ ಹಳೆಯ ಶೂ ಮೇಲೆ ಇಲ್ಲವಾಗುತ್ತೆ...
ಮೊನ್ನೆಯವರೆಗೂ ಚೆನ್ನಾಗೇ ಇದ್ದ ಪಿಂಕ್ ಸೀರೆ ಫ್ಯಾಶನ್ ಶೋ ಗೆ ಹೋಗಿ ಬಂದ ಮೇಲೆ ಬೇಡವಾಗತೊಡಗುತ್ತದೆ... ಅದಕ್ಕೂ ಮೊದಲೇ ಲ೦ಗವನ್ನೆತ್ತಿ ಬಿಸಾಡಿದರೆ... ಆಸ್ಟ್ರೇಲಿಯಾ ಖಂಡದಂತೆ ತೂತಾಗಿರೋ ಬನಿಯನ್ನು ಗೂಟದಿಂದೀಚೆಗೆ ಬರುವುದೇ ಇಲ್ಲ. ಶಾರುಖನನ್ನು ನೋಡಿದಾಗ ಹೀಗೆ ಏನಾದರೂ ಆಗೋಣ ಎನ್ನಿಸುವ ಮನಸ್ಸಿಗೆ, ಅವನ ಚಿತ್ರದಿಂದ ಎದ್ದೀಚೆಗೆ ಬರುವಷ್ಟರಲ್ಲಿ ನಾಳೆಯ ಗುಂಡಿನ ಪಾರ್ಟಿಯ ಬಗ್ಗೆ ಚಿಂತೆ ಆರಂಭವಾಗಿರುತ್ತದೆ. ಹೊಸ ಹೆಣ್ಣಿನೊಂದಿಗೆ ಪರಿಚಯವಾಗುತ್ತಿದ್ದಂತೆ ದೇಹ ಇದ್ದಕ್ಕಿದ್ದಂತೆ ಸೆಟೆದು ನಿಲ್ಲುತ್ತದೆ. ನಾಳೆ ಜಿನ್ಸ್ ಹಾಕೋಣ ಅನ್ನಿಸುತ್ತದೆ. ಆಗೀಗ ಇನ್ ಶರ್ಟ್ ಕರೆಕ್ಟಾಗಿದೆಯಾ ಇಲ್ಲವಾ ನೋಡಿಕೊಳ್ಳುತ್ತೇವೆ. ಮಾತಿಗೊಮ್ಮೆ ಮುಖದಲ್ಲಿ ಮುಗುಳ್ನಗೆ. ಮೈಯೆಲ್ಲಾ ಉದಾರತೆ. ನಿಮಿಷಕ್ಕೊಮ್ಮೆ ಕೂದಲು ಸವರುವ ಬೆವರು ಅಂಗೈ. ಆಚೆ ಮನೆ ಆಂಟಿ ವಿಚಾರಿಸಿದರೆ ಎದ್ದು ಬಿದ್ಡು ಮಾಹಿತಿ ನೀಡುತ್ತೇವೆ. ಮನೆಯಾಕೆ ಕೇಳಿದರೆ ಟಿ.ವಿ. ನ್ಯೂಸ್ ಬರುವಾಗ ನಿಂದೇನೆ ಕಿರಿಕಿರಿ ಎನ್ನುತ್ತೇವೆ. ಅಷ್ಟೇಕೆ ಹೋದ ವಾರವಷ್ಟೆ ಖರೀದಿಸಿ ಹಾಕಲಾರಂಭಿಸಿದ್ದ ಚಪ್ಪಲಿ ಇದ್ದಕಿದ್ಡಂತೆ ಯಾಕೋ ಬೇಡವೆನ್ನಿಸಿ ಮೂಲೆಗೆ ತಳ್ಳುತ್ತೇವೆ... ಇದೆಲ್ಲಾ ಸರಿ ಹೇಗೋ ಅಡ್ಜಸ್ಟ್ ಮಾಡಿಕೊಂಡು ಬಿಡುತ್ತಾರೆ. ಯಾಕೆಂದರೆ ಇವುಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಾ ವರ್ಗದವರ ಅನುಕೂಲಕ್ಕೆ ತಕ್ಕಂತೆ ಪಾಕೆಟ್ಟಿಗೆ ಸರಿದೂಗುವಂತಹ ಆಲ್ಟರ್‌ನೇಟ್ ಲಭ್ಯವಿದೆ.
ಆದರೆ ಅಕಸ್ಮಾತಾಗಿ ಇದ್ದಕ್ಕಿದ್ಡಂತೆ ಹೆಂಡತಿ ಬೇಡವೆನ್ನಿಸಿಬಿಟ್ಟರೆ...? ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಅಸಲಿಗೆ ಹಾಗಂತ ಹೇಳಲು ಯಾರಿಗೂ ನೇರಾ ನೇರ ಧೈರ್ಯವಿರುವುದಿಲ್ಲ. ಆದರೆ ಅದ್ಯಾವುದಾದರೂ ಪಾರ್ಟಿಗಳಲ್ಲಿ ಒಂದು ಪೆಗ್ಗು ಮುಗಿಯುತ್ತಿದ್ದಂತೆ ಕೊ೦ಚ ಪಡ್ಡೆ ಥರದವನೊಬ್ಬ ಇಂತಹದಕ್ಕೆ ಪೀಠಿಕೆ ಹಾಕಿ ನೋಡಲಿ. ಹೆಚ್ಚಿನಂಶ ಕಂಪ್ಲೇಂಟು ಒಂದೇ " ಹೆಂಡತಿ ಸರಿ ಇಲ್ಲ ಮಾರಾಯಾ ? " ಹಾಗಾದರೆ ಬದಲಾಯಿಸಿ ಬಿಡಿ. ಊಹುಂ... ಬೇರೇನನ್ನಾದರೂ, ಏನಾದರೂ ಮಾಡಿ ಬದಲಾಯಿಸಿ ಬಿಡಬಲ್ಲ ಗಂಡಸು ಈ ವಿಷಯದಲ್ಲಿ ಹೇಗೋ ಇರಲಿ ಬಿಡು ಎಂದು ಬುಡ ಒದರಿಕೊಂಡು ಎದ್ದು ಬಿಡುತ್ತಾನೆ ಯಾಕೆ...? ಧೈರ್ಯವಿರುವುದಿಲ್ಲವಾ ಅಥವಾ ಅದಕ್ಕೂ ಆಲ್ಟರ್‌ನೇಟ್ ಸಿಕ್ಕುವುದಿಲ್ಲವಾ...? ಎರಡೂ ಅಲ್ಲ. ಉಳಿದ ವಿಷಯದಂತೆ ಹೆಂಡತಿಯನ್ನು ಬದಲಿಸಲು ಸಾಮಾಜಿಕವಾಗಿ ಅಥವಾ ವೈಯಕ್ತಿಕವಾಗಿ ಲಭ್ಯತೆ ಅಥವಾ ವ್ಯಾಪ್ತಿ ಇಲ್ಲವೆಂದೆ...? ಅದಕ್ಕೂ ಅಲ್ಲ. ವ್ಯವಸ್ಥೆ. ಈಗಾಗಲೇ ಒಪ್ಪಿಕೊಂಡಿರುವ ವ್ಯವಸ್ಥೆ.
ಇಲ್ಲಿಯವರೆಗೆ ಅಧಿಕಾರ ಬದ್ಧವಾಗಿ, ಸಾಮಾಜಿಕವಾಗಿ ಒಪ್ಪಿಕೊಂಡಿರುವ ವ್ಯವಸ್ಥೆಯ ವಿರುದ್ಧ ಹೋಗುವ ಧೈರ್ಯವಿಲ್ಲವೆನ್ನುವುದು ಒಂದೆಡೆಯಾದರೆ ಮೊದಲೇ ಹೇಳಿದಂತೆ ಅದಕ್ಕೆ ವಸ್ತುವಿನ ರೂಪ ಕಲ್ಪಿಸುವ ಮಟ್ಟಕ್ಕೆ ಇನ್ನೂ ನಮ್ಮ ನೈತಿಕತೆ ಹೋಗಿಲ್ಲದಿರುವುದು ನಮ್ಮ ಹೆಣ್ಣು ಮಕ್ಕಳ ಪುಣ್ಯ. ಅಸಲಿಗೆ ಯಾಕೆ ಹೀಗನ್ನಿಸುತ್ತದೆ ? ಐದಾರು ವರ್ಷದಲ್ಲಿ ಅದ್ಯಾಕೆ ಕೆಲವು ಗಂಡಸರು ಹಾಗೆ ಹೊರಗೆ ಬಿದ್ಡು ಅಂಡಲೆಯಲು ಆರಂಭಿಸಿಬಿಡುತ್ತಾನೆ ? ಅದೇ ಹಳೆಯ ಫ್ರೆಂಡ್ಸು... ಪಾರ್ಟೀ... ಸಂಜೆಯ ವಾಕಿಂಗ್ ನೆಪ. ಇಲ್ಲವಾದರೆ ಮೂಕ ಕೋಲೆ ಬಸವನಂತೆ ಟಿ.ವಿ. ಮುಂದೆ ಬಟನ್ ಒತ್ತುತ್ತಾ ಅದರಲ್ಲೇನೋ ಡಾಕ್ಟರೇಟ್ ಮಾಡುವವನಂತೆ ಕೂತು ಬಿಟ್ಟಿರುತ್ತಾನೆ. ಇದಕ್ಕೆ ಕಾರಣ ಬರಿ ಗಂಡಸರಷ್ಟೆ ಎಂದರೆ ತಪ್ಪಾಗುತ್ತದೆ. ಅದೂ ಇತ್ತೀಚೆಗಿನ ನಾನು ಗಮನಿಸಿದ ಎಲ್ಲ ಸ್ಥರದ ಪುರುಷರಲ್ಲೂ ಈ ಭಾವನೆ ತುಂಬಾ ಜಾಗೃತವಾಗಿದ್ಡು ಹುಬ್ಬೇರಿಸುತ್ತಿದೆ. ಎಲ್ಲ ಕುಟುಂಬದಲ್ಲೂ ಎಲ್ಲ ಕಾಲದಲ್ಲೂ ಸುಖ ಶಾಂತಿ ಸಮೃದ್ಧಿಯೇ ತುಂಬಿ ತುಳುಕುತ್ತಿರುತ್ತದೆ ಎಂದು ನಿರೀಕ್ಷಿಸೋದು ತಪ್ಪು. ಆದರೆ ಎಲ್ಲ ಇದ್ದೂ ಹೀಗೊಂದು ಭಾವನೆಗಳು ಕಾಣಿಸುತ್ತಿದೆಯಂತಾದರೆ ಅದ್ಯಾಕೆ...? ಇದನ್ನು ಆಯಾ ದಂಪತಿಗಳೇ ಚರ್ಚಿಸಿಕೊಳ್ಳಬೇಕು.
ಎಲ್ಲೋ ಒಂದೆಡೆಯಲ್ಲಿ ಒಬ್ಬರಿಗೊಬ್ಬರು ಅನ್ ಕಂಫರ್ಟ್ ಮಾಡಿಕೊಳ್ಳುತ್ತಿದ್ದೇವೆಯಾ... ಪರಸ್ಪರರಿಗೆ ಸಹಾಯ ಸಲ್ಲಿಸುತ್ತಿಲ್ಲವಾ..? ಕೆಲಸದ ಹೊರೆ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿಲ್ಲವಾ ? ಅಥವಾ ವೃತ್ತಿಯ ಒತ್ತಡದಲ್ಲಿ ಹೆಂಡತಿ /ಗಂಡ ಸಹಕಾರ ಅಗತ್ಯವಾದಾಗ ಲಭ್ಯವಾಗುತ್ತಿಲ್ಲವಾ..? ಇದೆಲ್ಲಕ್ಕಿಂತಲೂ ಇಬ್ಬರು ಗಂಡಸರು ಕೊಂಚ ಕ್ಲೋಸ್ ಆಗಿ ಚರ್ಚಿಸುತ್ತಿದ್ದಾರೆಂದರೆ ಖಂಡಿತಕ್ಕೂ ಕೆಲವರಲ್ಲಾದರೂ ಬರೋ ವಿಷಯ ಸೆಕ್ಸ್. ನಿಜಕ್ಕೂ ದಾಂಪತ್ಯದ ಪ್ರಮುಖ ಭಾವಾನುಬಂಧವಾಗಿ ಚಲಾವಣೆಯಾಗಬೇಕಾಗಿರುವ ಈ ವಿಷಯ ಐದೇ ವರ್ಷದಲ್ಲಿ ಪರಸ್ಪರರು ಮುಖ ತಿರುಗಿಸುವಂತೆ ಮಾಡುತ್ತದೆ, ಇಲ್ಲ ಆಕೆ ಆಸಕ್ತಿ ಕಳೆದುಕೊ೦ಡಿರುತ್ತಾಳೆ. ಅಚ್ಚರಿ ಎಂದರೆ ಇಬ್ಬರೂ ಕುಳಿತು ಆ ಬಗ್ಗೆ ಚರ್ಚಿಸುವುದೇ ಇಲ್ಲ. ಬದಲಾಗಿ ಬಂದು ಗೆಳೆಯನಲ್ಲೋ ಇನ್ನಾರಲ್ಲೋ ತೋಡಿಕೊಳ್ತಾರೆ " ಛೇ ನಮ್ಮಾಕೆಗೆ ಇಂಟರೆಸ್ಟೇ ಇಲ್ಲ ಮಾರಾಯ ? " ಹೆಚ್ಚಿನಂಶ ಗಂಡಸರ ಕಂಪ್ಲೆ೦ಟ್ ಇದು. ಇದು ಎಷ್ಟೊ ಕಡೆಯಲ್ಲಿ ಉಲ್ಟಾ ಕೂಡಾ ಇರಬಹುದು.
ಆದರೆ ಆಕೆಯಲ್ಲಿ ಇರುವ ಕೊರತೆ ಏನು..? ಎಲ್ಲೋ ಗಂಡನ ಭಾವ ಪೂರ್ವಕ ಅನುಬಂಧದ ಕೊರತೆ ಕಾಡಿರಬಹುದಾ...? ಅಥವಾ ನಿಮ್ಮ ವರ್ತನೆ ಕೂಡಾ ಅದಕ್ಕೆ ಕಾರಣವಾಗಿರಬಹುದಾ..? ಜೊತೆಗೆ ಸಾಕಷ್ಟು ಸ್ತ್ರೀಯರಲ್ಲಿ ಒಂದು ಮಗುವಾಗುತ್ತಿದ್ದಂತೆ ಈ ಬಗ್ಗೆ ಒಂದು ರೀತಿಯ ಅನಾದರ ಬೆಳೆದು ಬಿಡುತ್ತಿದೆ. ಕೆಲವೊಮ್ಮೆ ಲಭ್ಯವಾಗದಿರೋ ಏಕಾಂತತೆ ಇತ್ಯಾದಿಗಳು ಕಾರಣವಾಗಿರಬಹುದಾದರೂ, ಎಷ್ಟೋ ಕಡೆಯಲ್ಲಿ ಸ್ತ್ರೀಯರು ಇವತ್ತಿಗೂ ಸೆಕ್ಸ್ ಎಂದರೆ ಅಸಹ್ಯ ಎನ್ನುವಂತೆ ಮುಖ ತಿರುಗಿಸೋದು ತುಂಬ ಕಾಮನ್ ಅಭಿಪ್ರಾಯ. ಅಂದರೆ ಅವರಲ್ಲಿ ಭಾವನೆಗಳೇ ಇಲ್ಲವೆಂದಲ್ಲ ಆದರೆ ಅದ್ಯಾವ ಕಾರಣಕ್ಕೋ ಮುರಿದು ಹೋಗಿರುವ ಮನಸ್ಸು ಅರಳುತ್ತಲೇ ಇಲ್ಲ ಅನ್ನೋದು ಅವರು ಸೆಕ್ಸ್‌ನತ್ತ ಅಭಿಮುಖವಾಗುವಂತೆ ಮಾಡಿರುತ್ತದೆ. ಅಷ್ಟೆ ಪ್ರಮಾಣದಲ್ಲಿ ಪುರುಷರು ಕೂಡಾ ತೋರಿಸುವ ಅನಾದರ ಆಕೆಯನ್ನು ಇನ್ನಷ್ಟು ನಿರ್ಲಿಪ್ತತೆಯತ್ತ ದೂಡುತ್ತದೆ. ಹೀಗೆ ಇಬ್ಬರಲ್ಲೂ ತಲೆದೋರುವ ಸಣ್ಣ ಪುಟ್ಟ ಕಾರಣಗಳು ಕ್ರಮೇಣ ಅಂತರವನ್ನಾಗಿಸುವುದರೊಂದಿಗೆ ಅಲ್ಟಿಮೇಟ್ಲಿ ಅದು ಇಬ್ಬರಿಗೂ ಬೇಡ ಎನ್ನಿಸುವ ವಿಷಯವಾಗಿ ಬದಲಾಗುತ್ತದೆ. ಒಟ್ಟಾರೆ ಇದರ ಪರಿಣಾಮ ಇಬ್ಬರ ಮೇಲೂ ಆಗುತ್ತದೆಯಲ್ಲದೇ ಗಂಡಸಾದವನಿಗೆ ಲಭ್ಯತೆ, ಅವಕಾಶ ಸಮಾಜ ಕಲ್ಪಿಸಿರೋ ಸೌಲಭ್ಯಗಳಿಂದಾಗಿ ಇಲ್ಲೂ ಬದಲಾವಣೆ ಬೇಕೆನ್ನಿಸಲಾರಂಭಿಸುತ್ತದೆ.
ಅದಕ್ಕೆ ಸರಿಯಾಗಿ ತುಂಬಾ ಪ್ರಬಲ ಮಾಧ್ಯಮಗಳಾದ ಟಿ.ವಿ. ಮತ್ತು ಸಿನೇಮಾಗಳೂ ಕೂಡಾ ಒಂದಾದರೂ ಅನೈತಿಕ ಸಂಬಂಧವಿರೋ ಚಿತ್ರಗಳನ್ನೆ ನೀಡೋದು ಅವರ ನಂಬಿಕೆಗೆ ಇನ್ನಷ್ಟು ಬಲ ನೀಡುತ್ತದೆ. ಸೋ. ಮನದಲ್ಲಿ ಮನೆ ಮಾಡುವ ಆಸೆಯ ಸುಖಕ್ಕಾಗಿ ಪುರುಷ ಸಹಜವಾಗಿ ಇನ್ನೊಂದು ಅಫೇರ್‌ನತ್ತ ಮುಖ ಮಾಡುತ್ತಾನೆ. ( ಕೇವಲ ಸೆಕ್ಸ್‌ನ ಮೋಜಿಗಾಗೇ ಸ್ತ್ರೀಯರನ್ನು ಬದಲಾಯಿಸುವ ಗಂಡಸರಿಗೆ ಈ ಬರಹ ಅಪ್ಲಿಕೇಬಲ್ ಅಲ್ಲ ) ಇಲ್ಲೊಂದು ಉದಾ. ರಾತ್ರಿ ಹೊತ್ತು ಮನೆಯಲ್ಲಿಯೇ ಚಿಕ್ಕದಾಗಿ ಪೆಗ್ ತೆಗೆದುಕೊಂಡು ಕುಳಿತುಕೊಂಡು ಹರಟುವ ಗಂಡ, ಹೆಂಡತಿಯಲ್ಲಿ ಅದೆಷ್ಟು ಪ್ರೀತಿ ಆಸೆ ಹುಟ್ಟಿಸಿರುತ್ತಾನೆಂದರೆ, ಬೆಳಿಗ್ಗೆ ಆಕೆ ಅದೇ ಖುಷಿಯಲ್ಲಿದ್ದರೆ ಇವನಿಗೆ ಕುಡಿತ ಇಳಿದ ಪರಿಣಾಮವೋ ಅಥವಾ ಕುಡಿದಾಗ ಮಾತ್ರ ಆ ಹುಮ್ಮಸ್ಸು ಬರುತ್ತದೋ... ಒಟ್ಟಾರೆ ಮಾತೇ ಹೊರಡುತ್ತಿಲ್ಲ. " ನಿನ್ನೆ ಅಷ್ಟು ಚೆನ್ನಾಗಿ ಮಾತಾಡಿದ್ರಲ್ಲ ಈಗೆನ್ರಿ ಆಗಿದೆ ಮಾತಾಡಲು ... " ಎಂದರೆ " ತುಂಬಾ ಬ್ಯೂಸಿ ಕಣೆ " ಎಂದು ಹರಿ ಹಾಯ್ದು ಎದ್ಡು ಹೋಗುತ್ತಾನೆ.
ಈ ಗಂಡಸರ ಹಣೆ ಬರಹವೇ ಇಷ್ಟು ಎಂದುಕೊಳ್ಳದೇ ಇನ್ನೇನು ಮಾಡಿಯಾಳು ಪಾಪ. ಬದಲಾವಣೆ ಬೇಕು. ಖಂಡಿತಾ ಅದು ಬದುಕನ್ನು ಹಸಿರನ್ನಾಗಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಯಾವುದು ಎಷ್ಟು ಎಂದು ನಿರ್ಧರಿಸ ಬೇಕಾದದ್ದು ಗೊತ್ತಿರಬೇಕು. ಅದಕ್ಕೂ ಮಿಗಿಲಾಗಿ ಬಿನ್ನಾಭಿಪ್ರಾಯಗಳ ಬಗ್ಗೆ ನೇರಾನೇರ ಚರ್ಚಿಸುವ ಯಾವ ಗಂಡ ಹೆಂಡತಿಯರೂ ಬಹುಶ: ಬದುಕಿನಲ್ಲಿ ಯಾವತ್ತೂ ಬದಲಾವಣೆ ಬಯಸಲಿಕ್ಕಿಲ್ಲ. ಆದರೆ ಇದರಲ್ಲಿ ಸ್ತ್ರೀಯರು ಕೊಂಚ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ ಎನ್ನುವುದು ಅನಿವಾರ್ಯ ಮತ್ತು ಅದು ಪುರುಷ ಧೋರಣೆಯ ಇನ್ನೊಂದು ಮುಖ ಅನ್ನೋದು ವಿಪರ್ಯಾಸ ಕೂಡಾ. ಹಾಗಾಗಿ ಹೆಂಡತಿಯಲ್ಲೂ ಬದಲಾವಣೆ ಬೇಕು ಎನ್ನುವವರಲ್ಲಿ ಎಲ್ಲ ಓ.ಕೆ... ಇದೊಂದು ಯಾಕೆ ? ಎಂದರೆ ಸ್ಪಷ್ಟ ಉತ್ತರವಿಲ್ಲದಿದ್ದರೆ ಖಂಡಿತಾ ಅದು ಸರಿಪಡಿಸಬಹುದಾದ ಕಾರಣವೇ ಇರುತ್ತೆ ಅಷ್ಟೆ. ಇಂಗ್ಲೀಷಿನಲ್ಲಿ ಅದಕ್ಕೆ ...ಇನ್‌ಫ್ಯಾಚುಯೇಶನ್... ಎನ್ನುತ್ತಾರೆ. ಅದಕ್ಕೇ ಮನಸ್ಸು ಚೇ೦ಜ್ ಕೇಳುತ್ತೆ... ! ಮತ್ತು ಬಹಳಷ್ಟು ಜನ ಒಂದಲ್ಲ ಒಂದು ಸಾರಿ ಈ ಇನ್‌ಫ್ಯಾಚುಯೇಶನ್‌ಗೆ ಒಳಗಾಗಿಯೇ ಇರುತ್ತಾರೆ ಹೊರತಾಗಿ ಎಲ್ಲರಲ್ಲೂ ಹೆಂಡತಿಯರನ್ನು ಬದಲಿಸಬೇಕೆಂದೇನೂ ಇರುವುದಿಲ್ಲ.
.dpuf
No comments:
Post a Comment