Friday, February 12, 2016

ತರ್ಸರ್ ಮರ್ಸರ್.
ಸಂತೋಷಕುಮಾರ ಮೆಹೆಂದಳೆ.
ಅಲ್ಲಿ ಅಗಾಧ ಎತ್ತರದ ಪರ್ವತದ ಏರು ದಾರಿಯಿದೆ, ವ್ಯಾಲಿ ಆಫ್ ಪ್ಲಾವರ್‍ಗೆ ಸೆಡ್ಡು ಹೊಡೆಯುವ ಹೂ ಕಣಿವೆಗಳಿವೆ. ಜೀವನದಲ್ಲೊಮ್ಮೆಯಾದರೂ ಅನುಭವಿಸಬೇಕೆನ್ನುವ ಮೈಲುಗಟ್ಟಲೆ ಮಂಜಿನ ಹುಡಿಯ ಹಿಮ ಅಲ್ಲಿ ಸುರಿಯುತ್ತಿರುತ್ತದೆ. ನಡೆದಷ್ಟೂ ದೂರದಲ್ಲಿ ದೇವತೆಗಳ ಸ್ನಾನಕ್ಕೆ ಒಂದೆರಡಲ್ಲ ಸಾಲು ಸಾಲು ಸರೋವರಗಳು ತಿಳಿಯಾಗಿ ಸಾಲು ಸಾಲಾಗಿ ಕಾದಿವೆ. ಅದೆಲ್ಲಕ್ಕೂ ಮಿಗಿಲಾಗಿ ಒಂಚೂರೇ ಚೂರು ಬೇಕೆಂದರೂ ಗಲೀಜು, ಮಾಲಿನ್ಯ, ಪ್ಲಾಸ್ಟಿಕ್ಕು ಅಲ್ಲಿ ಸಿಕ್ಕುವುದಿಲ್ಲ. ಹಾಗಂತ ಸುಲಭಕ್ಕೆ ಬಾಟಲಿ ಒಯ್ದಿಟ್ಟುಕೊಂಡು ಪಾರ್ಟಿಗೆ ಕೂರಲೂ ಸಾಧ್ಯವಿಲ್ಲ. ಕಾರಣ ಹೀಗೆ ಹೋಗಿ ಹಾಗೆ ಬಂದೆನ್ನಲಾಗುವುದಿಲ್ಲ. ಹಾಗಂತ ಹೋಗದೆ ಉಳಿದರೆ ಬಹುಶ: ಪ್ರವಾಸಿಯೊಬ್ಬನ ಜೀವಮಾನದ ನಷ್ಟವೂ ಹೌದು ಅದು.
ಅದು ತರ್ಸರ್ ಮರ್ಸರ್ ..
ಕಾಶ್ಮಿರ ಕಣಿವೆಯ ತುತ್ತ ತುದಿಯಲ್ಲಿ ಇವತ್ತಿಗೂ ಅನಾಮಧೇಯವಾಗಿ ಕೇವಲ ಚಾರಣಿಗರ ಮತ್ತು ಆಸಕ್ತಿಯಿಂದ ಹುಡುಕಿ ಹೋಗುವವರಿಗೆ ಮಾತ್ರ ಲಭ್ಯವಾಗುತ್ತಲಿದೆ. ಸಾಮಾನ್ಯವಾಗಿ ಶ್ರೀನಗರದಿಂದ ಪೆಹಲ್ಗಾಂವ್ ಮಾರ್ಗವಾಗಿ ಈ ಸ್ಥಳವನ್ನು ಹುಡುಕಿ ಹೋಗುವವರು ಜಾಸ್ತಿ. ಆದರೆ ನಾನು ಶ್ರೀನಗರದಿಂದ ಭಿಜ್‍ಬೇರ್ ಮಾರ್ಗವಾಗಿ ತಲುಪಲು ಸಲಹೆ ಕೊಡುತ್ತೇನೆ. ಕಾರಣ ಈ ಮಾರ್ಗದಲ್ಲಿ ಕ್ರಮಿಸುವಾಗ ಸಿಕ್ಕುವ ನೈಜ ಕಾಶ್ಮೀರ ಮತ್ತು ಅತ್ಯಂತ ಸ್ವಚ್ಚ ಭಾರತದ ಹಸಿರು ಪರಿಸರ, ಬಹುಶ: ಇದಕ್ಕಿಂತ ಶುದ್ಧ ಸರೋವರ ಜಾಲ ತಾಣ ಇನ್ನೊಂದೆಡೆಯಲ್ಲಿ ಸಿಗಲಿಕ್ಕಿಲ್ಲ ಎನ್ನುವುದು ನನ್ನ ಹಲವು ಚಾರಣದ ಅನುಭವದ ಮಾತು.
ಬೇಸ್‍ಕ್ಯಾಂಪ್ ಆಗಿ ಅರು(ಪೆಹೆಲ್ ಗಾಂವ್‍ನಿಂದ ಹನ್ನೆರಡು ಕಿ.ಮೀ.)ವಿನಲ್ಲಿ ಉಳಿದುಕೊಂಡು ಹೊರಡುವ ಮುನ್ನ ಪಾಸ್‍ಪೆÇೀರ್ಟ್ ಪ್ರತಿ, ಅಗತ್ಯದ ಔಷಧಿ ಇತ್ಯಾದಿಗಳನ್ನು ಒಬ್ಬ ಪಕ್ಕಾ ಚಾರಣಿಗನಿಗೆ ಇರಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲೇಬೇಕು. ನಂತರದಲ್ಲಿ ಯಾವ ರೀತಿಯ ಸಂಪರ್ಕದ ಸಾಧ್ಯತೆ ಅಲ್ಲಿರುವುದಿಲ್ಲ. ಯಾವುದೇ ಮೊಬೈಲ್ ಅಥವಾ ಸಂಪರ್ಕ ಸಾಧನದ ಬೆಂಬಲ ಇಲ್ಲಿಲ್ಲ.
ಅರುವಿನಿಂದ "ಲಿದ್ಢರ್ ವಾಟ್" ಮೂಲಕ ಸುಮಾರು ಆರು ತಾಸುಗಳನ್ನು ಕ್ರಮಿಸಿದರೆ ಅಧ್ಬುತವಾದ ಹಂತ ಪೂರೈಸಿದಂತಾಗುತ್ತದೆ. ಈ ಲಿದ್ದರ್‍ವಾಟ್ ಒಂದು ಚೆಂದದ ಹಳ್ಳಿ. ಅರುವಿನಿಂದ ಹೊರಟು ಇಲ್ಲಿಗೆ ತಲುಪುವವರೆಗೂ ಈ ಲಿದ್ದರ್ ನದಿಯ ಎಡದಂಡೆಯ ಮೇಲೆ ನಮ್ಮ ಪಯಣ ಸಾಗುತ್ತಿರುತ್ತದೆ.
 ಮರುದಿನ "ಲಿದ್ದರ್ ವಾಟ್"ನಿಂದ "ಶೇಕ್ವಾ" ಹಳ್ಳಿಗೆ ಸುಮಾರು 12000 ಅಡಿ ಎತ್ತರಕ್ಕೆ ಏರು ಮುಖದ ಚಲನೆ. ಇದಕ್ಕಾಗಿ 6 ಕಿ.ಮೀ. ಅಂತರಕ್ಕಾಗಿ ನಾಲ್ಕು ತಾಸು ತಗಲುತ್ತದೆ. ಮಧ್ಯದಲ್ಲಿ ಯಾವುದೇ ಸೌಕರ್ಯವೂ ಇಲ. ಅಲ್ಲಲ್ಲಿ ಚಹ ಮತ್ತು ರೋಟಿದಾಲ್‍ನ್ನು ಪೂರೈಸುವ ಚಿಕ್ಕ ಗುಡಿಸಲುಗಳಿವೆ. ಇಂಥಾ ತಂಗುದಾಣಗಳನ್ನು ಅವುಗಳನ್ನು "ಗುಜ್ಜರ್ ಹಟ್" ಎಂದು ಕರೆಯುತ್ತಾರೆ. ಇಲ್ಲಿ ಚಹ ಮತ್ತು ಬಿಸ್ಕೆಟು ಲಭ್ಯ.
ಶೇಕ್ವಾದಿಂದ ಚಾರಣದಾರಿ ಅನಾಮತ್ತು ಐದು ತಾಸಿನದು. ಅದಾದ ಮರುಕ್ಷಣ ಅಧ್ಬುತ ತರ್ಸರ್ ಕಣ್ಣೆದುರಿಗೆ ಇರುತ್ತದೆ ಯಾವ ಜಾಗದಲ್ಲಿ ನಿಂತರೂ ಚಿತ್ರ ತೆಗೆಯಲು ಸೆಲ್ಫಿಗೆ ಕೊರತೆಯಿಲ್ಲ. ಅದಕ್ಕಾಗೇ ಚಿಕ್ಕ ಅಂತರ ಕೂಡಾ ಅಗಾಧ ಸಮಯ ಬೇಡುತ್ತದೆ. 14000 ಅಡಿ ಎತ್ತರದಲ್ಲಿ ಸರ್ವವೂ ಹಿಮಗಟ್ಟುತ್ತಿರುವಾಗ ಈ ಸರೋವರ ಮಾತ್ರ ನೀರಾಗಿ ನೀಲಿ ಅಗಸ ಪ್ರತಿಫಲಿಸುತ್ತಾ ನಿಂತಿರುತ್ತದೆ. ಅಧ್ಬುತ ಮತ್ತು ಪ್ರಕೃತಿಯ ಒಂದು ಸುಂದರ ಕಲ್ಪನೆಗೆ ಸಾಕ್ಷಿಯಾಗಲು ಇಲ್ಲಿ ಮಾತ್ರ ಸಾಧ್ಯ. ತರ್ಸರ್ ಪ್ರಕೃತಿಯ ವಿಸ್ಮಯವೂ ಹೌದು. ಈ ಎತ್ತರಕ್ಕೇ ಏರಿ ನಿಲ್ಲುವ ವೇಳೆಗಾಗಲೇ ಪ್ರವಾಸಿಯೊಬ್ಬನ ಉಸಿರು ನೆತ್ತಿಗೇರಿರುತ್ತದೆ.
ತರ್ಸರ್ ಹಿಂದೇಯೆ ಮರ್ಸರ್ ಇದ್ದು ಅದನ್ನು ಮತ್ತೆ ಮರುದಿನದ ಐದು ತಾಸಿನ ಏರು ಮುಖ ಚಾರಣದ ದಾರಿ ಕ್ರಮಿಸಲೇಬೇಕು. ಆದರೆ ಅಧ್ಬುತ ಹಸಿರಿನ ಚಳಿಯ ಮಧ್ಯೆ ಒಳಗೊಳಗೇ ಬೆವರುತ್ತಾ ಸಾಗುವಾಗ ಯಾವ ಎತ್ತರವೂ ಎದುರಿಗೆ ನಿಲ್ಲುವುದಿಲ್ಲ. ಅದಕ್ಕಿಂತಲೂ ಮಿಗಿಲು ಮರ್ಸರ್‍ನ ದಾರಿಯಲ್ಲಿ ಸಿಕ್ಕುವ "ಸುಂದರ್‍ಸರ್" ಇನ್ನೊಂದು ಭೂ ಮುಖದ ಅಧ್ಬುತ. ಇಲ್ಲಿಂದ ಮುಂದಿನ ದಾರಿಯೆಲ್ಲಾ ಭೂ ಸ್ವರ್ಗ ಎಂದರೂ ತಪ್ಪೇನಿಲ್ಲ. ಅಗಾಧ ಇಳಿಜಾರಿನ ಹಿಮದ ಜಾರು ಹಾದಿ ಹೆಚ್ಚಿನಂಶ ಕೆಲವೊಮ್ಮೆ ಹಗ್ಗದ ಸಹಾಯ ಹಾಗು ರ್ಯಾಪ್ಪೆಲಿಂಗ್ ಸಹಾಯವನ್ನೂ ಬೇಡುತ್ತದೆ. ಕಾರಣ ಈ ಅಂತರವನ್ನು ರಾಪೇಲಿಂಗ್ ಮೂಲಕ ಇಳಿಯುವದಾದಲ್ಲಿ ತಾಸುಗಟ್ಟಲೇ ನಡಿಗೆಯ ಮೂಲಕ ಕ್ರಮಿಸುವುದನ್ನು ತಪ್ಪಿಸಬಹುದು. ಇದೆಲ್ಲದರ ಸಾಹಸಕಾರಿ ಯಾತ್ರೆ ಮಾಡಿಸುವ ಸುಂದರ್‍ಸರ್‍ನಿಂದ ಮರ್ಸರ್‍ದ ದಾರಿ ನಿಸರ್ಗದ ರಹಸ್ಯಗಳಲ್ಲಿ ಒಂದು.
ಹಾಗೆ ವಾಪಸ್ಸು ಹೊರಟು ಹೊರಳು ಹಾದಿಯಲ್ಲಿ ಮರ್ಸರ್‍ನಿಂದ ಸುಂದರ್‍ಸರ್ ತಲುಪಿ ಒಂದು ಕಷ್ಟಕರವಾದ ಅಡ್ಡದಾರಿಯ ಮೂಲಕ ಕೆಳಕ್ಕಿಳಿಯತೊಡಗಿದರೆ ಒಂದೇ ದಿನದಲ್ಲಿ ಸೋನಾಮಾತಿ ತಲುಪುತ್ತೇವೆ. ಆದರೆ ಕಿ.ಮಿ.ಗಟ್ಟಲೇ ಹಿಮದ ಹಾದಿಯನ್ನು ಜರಿದು ಕ್ರಮಿಸುವಾಗ ಆಯ ತಪ್ಪುವ, ಆ ಮೂಲಕ ಕಣಿವೆಯ ಆಳಗಳಿಗೆ ಬಿದ್ದು ಹೋಗುವ ಅಪಾಯವಿದ್ದೇ ಇದೆ. ಸ್ಥಳೀಯರು ಅಥವಾ ನುರಿತ ನಾಯಕನ ಅಗತ್ಯತೆ ಈ ಚಾರಣಕ್ಕೆ ಆಗತ್ಯ. ಹಿಮದ ಅಪಾಯಕಾರಿ ಕುಳಿಗಳ ಆಳ ಅಗಲದ ಅರಿವು ಸಾಮಾನ್ಯ ಪ್ರವಾಸಿಗಾಗುವುದಿಲ್ಲ.
ಅದಾಗ್ಯೂ ಪ್ರಕೃತಿಯ ಅಪರೂಪದ ಸೃಷ್ಠಿ ಸೌಂದರ್ಯವನ್ನು ಅನುಭವಿಸಲೇಬೇಕೆನ್ನುವ ಮತ್ತು ಅಂತಹ ಅನುಭೂತಿಗೆ ಈಡಾಗುವ ದಾರಿಯಲ್ಲಿ ಸಣ್ಣ ಪುಟ್ಟ ಸಾಹಸಗಳು ಅನಿವಾರ್ಯವೂ ಹೌದು. ಕಾರಣ ತರ್ಸರ್ ಮರ್ಸರ್ ಪ್ರವಾಸದ ಒಂದು ವರ್ಷದ ನಂತರವೂ ಅದರ ನಡಿಗೆಯ ಅನುಭವ ನಿನ್ನೆಯಷ್ಠೆ ಹೋಗಿದ್ದೆನ್ನಿಸುವಷ್ಟು ಹಸಿರಾಗಿಸಿರುತ್ತದೆ.


Saturday, February 6, 2016

ಸುಖದ ಸೋನೆಯಲ್ಲಿ ಹಿಮದ ಹನಿಗಳು...
ಅರಿವಾಗದ ಕಳೆದುಹೋಗುವ ಮತ್ತು ಜೀವನದ ಬಹುಪಾಲನ್ನು ಸೇವೆಯಲ್ಲಿ ಅಥವಾ ಇನ್ನಾವುದೋ ಹುಸಿತೃಪ್ತಿಗೆ ತಮ್ಮ ಅಮೂಲ್ಯ ಘಳಿಗೆಗಳನ್ನು ಕಳೆದುಕೊಂಡವರೇ ಹೆಚ್ಚು. ಆದರೆ ಹೀಗಾ ಎಂದು ವಾಸ್ತವಕ್ಕೆ ತೆರೆದುಕೊಳ್ಳುವ ಹೊತ್ತಿಗೆ ತುಂಬ ತಡವಾಗಿರುತ್ತದೆ. ವಿಪರ್ಯಾಸವೆಂದರೆ ಇವೆಲ್ಲ ಯಾವ ಡೊಮೆಸ್ಟಿಕ್ ವಯಲೆನ್ಸಿನ ಡೆಫಿನಿಶನ್ನಿಗೂ ದೊರಕುವುದಿಲ್ಲ.


‘ನೀನು ಬರಿತಿಯ, ಅಂಥಾ ದೊಡ್ಡ ಹೊಡೆತಗಳಿಗೂ, ಸಲ್ಲದ ಸಂಕಟಗಳಿಗೆ ಈಡಾಗೋದೇನೂ ದೊಡ್ಡದಲ್ಲ. ಆದರೆ ಕಲಿತು, ದುಡ್ಡು ದುಗ್ಗಾಣಿ ಎಲ್ಲ ಇದ್ದರೂ ನೆಮ್ಮದಿ ಅನ್ನೋದು ಅಂದ್ರೆ ಏನು ಎನ್ನುವುದನ್ನೇ ಗೊತ್ತಿಲ್ಲದಿರೋರೂ ಇದಾರೆ. ಅದು ಗೊತ್ತಾಗುವ ಹೊತ್ತಿಗಾಗಲೇ ಬದುಕೇ ಕಳೆದುಹೋಗಿರುತ್ತೆ ಗೊತ್ತಾ..?’ ಎಂದಾಕೆ ಹೇಳಿದಾಗ ಒಮ್ಮೆ ಯೋಚಿಸುವಂತಾಗಿದ್ದು ಹೌದು.
ಕಾರಣ ಶಾಂತಕ್ಕ ಪ್ರಥಮ ದಿನದಿಂದಲೂ ‘ಅವಳು..’ ಅಂಕಣವನ್ನು ಹಿಂಬಾಲಿಸಿದ್ದೇ ಅಲ್ಲದೇ ಒಂದು ಹಂತದಲ್ಲಿ ಪರಿಚಯಕ್ಕೀಡಾದರೂ ಯಾವತ್ತೂ ಹೀಗೂ ಇರುತ್ತದೆ, ಸಂಸಾರದ ಒಳಸುಳಿಗಳಲ್ಲಿ ಹೀಗೂ, ಗೊತ್ತೇ ಆಗದ ಮೌನಸಂಕಟಗಳಿರುತ್ತವೆನ್ನುವ ಸುಳಿವೂ ಕೊಡದ ಗಟ್ಟಿಗಿತ್ತಿ. ಅಸಲಿಗೆ ಅವೆಲ್ಲವೂ ಆಕೆಗೂ ಅರ್ಥವಾಗತೊಡಗಿದ್ದೇ ಇತ್ತೀಚೆಗೆ. ನನ್ನ ಲೇಖನದ ಹಲವು ನಾಯಕಿಯರನ್ನು ತಾನೇ ಪತ್ತೆ ಹಚ್ಚಿ ‘ಇದು ಇವರೇನಾ.. ನಂಗೆ ಗೊತ್ತು..’ ಎಂದು ಅಚ್ಚರಿಗೀಡು ಮಾಡುತ್ತಿದ್ದ ಅಪ್ಪಟ ಚಿಕ್ಕಮ್ಮನಂತಹ ಹೆಣ್ಣುಮಗಳು ಶಾಂತಕ್ಕ. ‘ಹೌದು ಇದು ಅವಳದ್ದೇ. ಆದ್ರೆ ಪಂಚಾಯ್ತಿಕೆ ಎಲ್ಲ ಯಾಕೆ ಮಾಡ್ತಿ ಸುಮ್ನಿರು ಮಾರಾಯ್ತಿ’ ಎನ್ನುತ್ತಿದ್ದ. ಅದರೆ ಅದ್ಯಾಕೊ ಶೈಲತ್ತೆಯ ಕಥೆಯನ್ನು ಓದುತ್ತಿದ್ದಂತೆ, ಶಾಂತಕ್ಕ ತಡೆಯಲಾರದೆ ಅನ್ನಿಸಿದ್ದನ್ನು ಹೇಳಿಕೊಂಡಿದ್ದಳು. ಇದೇನೂ ಹೊಸದಲ್ಲ ಆದರೂ ಇಂಥದ್ದಲ್ಲ ಡೊಮೆಸ್ಟಿಕ್ ವಯಲೆನ್ಸ್‌ನ ಡೆಫಿನಿಶನ್ನಿಗೂ ಸಿಕ್ಕುವುದಿಲ್ಲ. ಇಂಥಾ ಕೇಸುಗಳಲ್ಲಿ ಯಾವ ರೀತಿಯ ಆರೋಪಕ್ಕೂ, ದೌರ್ಜ್ಯನಕ್ಕೂ ಬೆರಳು ಮಾಡಲು ಅವಕಾಶವೇ ಇರುವುದಿಲ್ಲ.
ಕಾರಣ ಗಂಡ, ಮಾವ, ಸಂಭಾವಿತ ಅತ್ತೆ ಎಲ್ಲರೂ ಯಾವತ್ತೂ ಜಗಳವಾಡುವುದಿಲ್ಲ. ಬೈಯ್ಯುವುದಿಲ್ಲ. ದೈಹಿಕ ಹಿಂಸೆ ಇಲ್ಲವೇ ಇಲ್ಲ. ಅನಾವಶ್ಯಕ ಹೀಗಳೆಯುವುದಿಲ್ಲ ಕಡೆಗೆ ಉಪವಾಸ ಕೆಡುವುತ್ತಾರೆ ಎಂದಾದರೂ ಹೇಳೋಣ ಎಂದರೆ ಯಾವತ್ತೂ ಇಷ್ಟ್ಯಾಕೆ ತಿಂದೆ ಎಂದೂ ಪ್ರಶ್ನಿಸಿದ್ದಿಲ್ಲ. ಆಯ್ತಲ್ಲ ಇನ್ನೇನು ಪ್ರಾಬ್ಲಮು..? ನೀನೆ ಒಂಚೂರು ಹೊಂದ್ಕೊಂಡು ಹೋಗಮ್ಮ ಎಂದು ಬಿಡುತ್ತಾರೆ ಮಧ್ಯದಲ್ಲಿ ಇದ್ದವರು. ಅಲ್ಲಿಗೆ ಬದುಕು ಅಪೂಟು ಬಂಧಿಖಾನೆಯಂತಾಗಿ ಬಿಡುತ್ತದೆ. ಹೊರಗಡೆಗೆ ಯಾವುದೂ, ಯಾರಿಗೂ ಇದು ಸಂಕಟ ಎನ್ನಿಸುವುದೇ ಇಲ್ಲ. ಮನೆ.. ಮಕ್ಕಳು.. ಹೊಟ್ಟೆ ಬಟ್ಟೆಗೆ.. ಆಗೀಗ ದೇಹಕ್ಕೂ ಅಡುಗೆ ಮನೆಗೆ ಸಾಮಾನು ಒದಗಿಸಿದಂತೆ ನಿಮಿಷಗಳ ಕಾಲ ಪೂರೈಸಿಬಿಡಬಹುದಾದ ಸಾಂಗತ್ಯದ ನಿರಂತರತೆಯ ಮಧ್ಯದಲ್ಲಿ ತುಂಬ ಸೂಕ್ಷ್ಮ ಅನುಭವಗಳಿಗೂ, ಶಾಂತಕ್ಕನ ಜಾಗದಲ್ಲಿ ನಿಂತಾಗಲೇ ಗೊತ್ತಾಗೋದು ನಿರುಮ್ಮಳ ನೆಮ್ಮದಿಗೂ, ಸಹಜ ಸುಖಕ್ಕೂ ಇರುವ ವ್ಯತ್ಯಾಸ.
ಶಾಂತಕ್ಕನದು ತೀರ ದೊಡ್ಡದಲ್ಲದಿದ್ದರೂ ಅತ್ತೆ, ಮಾವ ಮತ್ತು ನಾದಿನಿಯರ ನಡುವಿನ ಕೂಡು ಕುಟುಂಬ ಆಕೆಗೆ ಹೊಸದೇನೂ ಆಗಿರಲಿಲ್ಲ. ಮೊದಮೊದಲು ಹೊಸ ಹುಡುಗಿ ಮತ್ತು ಓಡಾಟದಲ್ಲಿ ಮಕ್ಕಳು ಎಂದೆಲ್ಲ ಅಷ್ಟಾಗಿ ಯಾವಾಗಲೂ ವೈಯಕ್ತಿಕ ಹಿತಾಸಕ್ತಿಯ ಮತ್ತು ಬದುಕಿನ ಬದಲಾವಣೆಗಳು, ಬೇಕು ಬೇಡಗಳ ಚಿಂತನೆ ಅವಗಾಹನೆಗೆ ಬಂದಿದ್ದೇ ಇಲ್ಲ.
ತೀರ ಬೆಳಗ್ಗೆ ಎದ್ದಗಿಂದಲೂ ಎಲ್ಲರಿಂದಲೂ ಏನಾದರೊಂದು ಕಮೆಂಟ್ ಕೇಳಿಸಿಕೊಳುತ್ತಲೇ ಇರುವುದಿದೆಯಲ್ಲ. ಅದು ಎಂಥಾ ಕಿರಿಕಿರಿ ಮಾಡಿಬಿಡುತ್ತದೆಂದರೆ ಉಣ್ಣಲಾರೆ ಉಗಿಯಲಾರೆ ಎಂಬಂತೆ, ಚಪಾತಿ ಹಿಟ್ಟು ಕಲೆಸಿದರೆ ಜಾಸ್ತಿ ಬ್ಯಾಡ ಸಂಜೆಗೆ ಬೇರೆ ಕಲಿಸಿಕೊಂಡರಾಗಿತ್ತು ಗಟ್ಟಿಯಾಗಿ ಬಿಡುತ್ತಮ್ಮ.. ಎನ್ನುವ ಅತ್ತೆಯ ಮಾತಿಗೆ ಎದುರಾಡುವುದಾರೂ ಹೇಗೆ..? ಅದರಲ್ಲಿ ದೂರುವಂತಹದ್ದೇನೂ ಇಲ್ಲವೇ ಇಲ್ಲ. ಸರಿ ಬೆಳಗ್ಗೆಗೆ ಸಾಕು ಸಂಜೆಗೆ ಬೇರೆ ಕಲಿಸಿಡೋಣ ಎಂದುಕೊಂಡ ದಿನ ‘ಹೆಚ್ಚೇ ಕಲಿಸಿಬಿಡಬೇಕಿತ್ತಮ್ಮ.. ಸಂಜೆ ನೀನು ಹೊರಗೆದರೂ ಹೋದರೆ ನಾನೇ ನಾಲ್ಕು ಬೇಯಿಸುತ್ತಿದ್ದ..’ ಎನ್ನುವ ಮಾತಿಗೆ ಹೇಗೆ ಸಮಜಾಯಿಷಿ ಕೊಡುತ್ತೀರಿ..?
ಬಟ್ಟೆ ಮಡಚಿಡುವುದು ಬೇಡಾಗಿತ್ತು ಅವರವರ ಅಭ್ಯಾಸ ಅವರವರೇ ಕಲಿತುಕೊಳ್ಳಬೇಕು. ಎಂದಿದ್ದಕ್ಕೆ ಎರಡ್ಮೂರು ದಿನದಿಂದ ಬಟ್ಟೆಗಳನ್ನು ಅಲ್ಲಿಯೇ ಬಿಟ್ಟರೆ, ‘ಅವರವರ ಜಾಗಕ್ಕೆ ಒಯ್ದು ಕೊಟ್ಟು ಬಿಡಮ್ಮ. ಇಟ್ಟುಕೊಳ್ಳೊದನ್ನು ಕಲಿಯಲಿ..’ ಎಂದರೆ ಮಡಚಿಡುವುದಕ್ಕೂ ಕೊಡುವುದಕ್ಕೂ ಏನು ವ್ಯತ್ಯಾಸವೋ..? ಸತತ ಅಡುಗೆ ಮನೆ ಹಾಲ್..ಅಲ್ಲಿಂದ ಟೇರಸ್ ಹೀಗೆ ಎಡೆಯೂ ಹಿಂದಿದೆ ಅಲೆಯುತ್ತಾ ಕೆಲಸದಲ್ಲಿ ಕಸರನ್ನೂ, ಸಹಾನುಭೂತಿಯನ್ನೂ ಒಟ್ಟೊಟ್ಟಿಗೆ ವ್ಯಕ್ತಿಪಡಿಸಿದರೆ ಅದನ್ನು ಪರಿಗಣಿಸುವ ಬಗೆಯಾದರೂ ಯಾವ ತರಹದ್ದು..? ಉತ್ತರ ಯಾವ ಹೆಣ್ಣೂ ಕೊಡಲಾರಳು. ಯಾವ ಕರೆ ಬಂದರೂ ‘ಯಾರದಮ್ಮ..? ಫೋನ್’ ಎಂದು ಮುಗುಮ್ಮಾಗಿ ಪ್ರಶ್ನೆಯನ್ನು ಎದುರಿಸುವ, ಹಿಂದೆಯೇ...‘ಯಾಕಂತೆ..?’ ಎಂದೆಲ್ಲ ಸಂದೇಹಗಳಿಗೆ, ಆಗೆಲ್ಲ ಉಂಟಾಗುವ ಸಣ್ಣ ಅಸಹನೆಗೆ ಯಾವ ಕೌನ್ಸೆಲ್ಲಿಂಗ್ ಉತ್ತರ ಕೊಡುತ್ತೆ..?
ಗಂಡನೊಡನೆ ಒಂದಿಷ್ಟು ಮಾತುಕತೆ ಆಡುವ ಹೊತ್ತಿಗೆ ‘ಇದೊಂಚುರು ಓದಿ ಹೇಳಮ್ಮ. ಸಂಜೆ ಹೊತ್ತಿಗೆ ಸರಿಯಾಗಿ ಕಾಣ್ತಿಲ್ಲ..’ ಎಂದು ಆತ್ಮೀಯತೆಯಿಂದ ಎದುರಿಗೆ ಕೂರಿಸಿಕೊಂಡರೇ ಯಾವ ಮಾನಸಿಕ ಹಿಂಸೆ ಕಾಣಿಸಲು ಸಾಧ್ಯ..? ತರಕಾರಿ ಇತ್ಯಾದಿಗೆ ಹೊರಗಡೆ ಹೋಗುವಾಗ ಗಂಡನೊಡನೆ ಹೋದದ್ದೇ ಆದಲ್ಲಿ ಅದೇ ಹೊತ್ತಿಗೆ ಮುಂದಿನ ಬಾರಿ ಹೋಗುವಾಗ ಮನೆಯಲ್ಲಿದ್ದವರಿಗೂ ಏನೋ ಖರೀದಿ ಮಾಡಲೇ ಬೇಕಿರುತ್ತೆ.
‘ಅರುಣ.. ನಾನೂ ಬರ್ತೀನೋ. ಎರ್ಡ್ಮೂರು ಸರ್ತಿ ನೀನು ಕಾರು ಓಡಿಸೋದೇನೂ ಬೇಡ. ಸುಮ್ಮನೆ ಪೆಟ್ರೋಲ್ ವೇಸ್ಟು. ಮೇನ್‌ರೋಡ್ ಹತ್ತಿರ ಇರೋ ಅಂಗಡಿಯಿಂದ ಮುಂದಿನ ವಾರದ ಪೂಜೆ ಸಾಮಾನು ತಂದು ಬಿಡೋಣ.. ಬರೋ ಹಬ್ಬಕ್ಕೆ ಹತ್ತಿ ತರ್ಬೇಕು.. ಬ್ಲೌಸ್ ಪೀಸು ಹೊಲೆಯೊಕೆ ಕೊಟ್ಟಿದ್ದೆ. ಏನಾಯಿತು ವಿಚಾರಿಸ್ತೀನಿ.’ ಎನ್ನುತ್ತಾ ಕೊನೆಗೊಮ್ಮೆ ‘ಹೊರಗೆಲ್ಲ ತುಂಬಾ ಚಳಿ ಗಾಳಿ ಶಾಂತ. ಬರೀ ಕೊತಂಬ್ರಿ ತರೋಕೆ ನೀನ್ಯಾಕಮ್ಮ ಬರಬೇಕು..? ನಾನೇ ಹೋಗ್ತಿದಿನಲ್ಲ ತರ್ತೀನಿ..’ ಎಂದಾಗ ನನ್ನೆಡೆಗಿದ್ದುದು ಕಾಳಜಿ ಅಥವಾ ಕಾರಸ್ಥಾನ ಎಂದು ಹೇಗೆ ಖಚಿತಪಡಿಸುವದು..?
ಯಾರಾದರೂ ಬಂದಾಗ ಹೋದಾಗ, ಯಾವ ಕೆಲಸವನ್ನೂ ಮಾಡಲು ಕೊಡದೇ, ಅಡುಗೆಯ ಅಷ್ಟೂ ಜವಾಬ್ದಾರಿ ವಹಿಸಿಕೊಳುವ ಅತ್ತೆ, ಮಾತಿಗೊಮ್ಮೆ ನನ್ನನ್ನು ನಮ್ಮಪ್ಪನೆದುರಿಗೆ ಕೂರಿಸಿ ‘ಶಾಂತ.. ದಿನಾ ನೀನೇ ಮಾಡ್ತಿಯಮ್ಮ. ಇವತ್ತು ಅಪ್ಪ, ಅಮ್ಮನ ಜೊತೆ ಮಾತಾಡಿಕೊಂಡಿರು ನಾನೇ ಏನೋ ಕೈಲಾದ್ದು ಮಾಡ್ತೀನಿ..’ ಎನ್ನುತ್ತ ‘ಹಾಗೇ ಕೂತ ಇದೊಂದು ನಾಲ್ಕು ಈರುಳ್ಳಿ ಹೆಚ್ಚಿ, ಕೊತಂಬ್ರಿ ಬಿಡಿಸಿ, ಎರಡು ಕಾಯ್‌ಪಲ್ಯೆ ಮಾತಾಡ್ತಾನೆ ಹೆಚ್ಚಿಡು, ಸಮಯ ಮಿಗುತ್ತಲ್ವಾ ಇದಿಷ್ಟು ಪೂರಿ ಲಟ್ಟಿಸಿಡು. ಉಳಿದದ್ದು ನಾನೇ ಮಾಡಿಕೊಳ್ತಿನಿ..’ ಎಂದರೆ ಇದು ಯಾವ ಲೆಕ್ಕದಲ್ಲಿ ನನಗೆ ಬಿಡುಗಡೆಯೋ ಗೊತ್ತೇ ಆಗಿರಲಿಲ್ಲ.
ಸ್ನೇಹಿತೆಯರು ಬಂದಾಗ ಅಥವಾ ಊರಲ್ಲಿಯೇ ಆಗೀಗ ಏನಾದರೂ ಒಂದಷ್ಟು ಮಾಡೋಣ ತೀರಾ ಬದುಕು ಯಾಂತ್ರೀಕೃತ ಆಗುತ್ತಿದೆ ಎಂದು ಒಂದೆರಡು ದಿನ ಸ್ನೇಹಿತೆಯರ ಮನೆಗೂ ಅಲ್ಲಿಲ್ಲಿ ಓಡಾಡುತ್ತಿದ್ದರೆ ಮೂರನೆಯ ದಿನವೇ, ‘ಹೊರಗಡೆ ಹೋಗುವಾಗ ನನಗೂ ಅಂಚೂರು ಬಿಡು, ಇಂಚೂರು ಕರ್ಕೊಂಡು ಹೋಗು, ಯಾಕೋ ಹುಷಾರಿಲ್ಲದಂಗಿದೆ ಒಂದಿಷ್ಟು ಕುಕ್ಕರ್ ಇಟ್ಟು ಹೋಗಿಬಿಡಮ್ಮ.. ಡಬ್ಬಿ ಅವನಿಗೆ ಕಳಿಸುವಾಗ ಮಾಡಿದ್ದೇ ಯಾಕಮ್ಮ ನೀನು ತಂಗಳಾಗಿಸಿ ತಿನ್ನಬೇಕು. ಸುಮನೆ ಮಧ್ಯಾಹ್ನಕ್ಕೆ ಬಿಸಿ ಬಿಸಿ ಮಾಡ್ಕೋಬಾರದಾ’ ಎನ್ನುತ್ತಿದ್ದರೆ, ಅದು ಹೊಸದಾಗಿ -ಶ್ ಅಡುಗೆ ಮಾಡಿಸಲು ನನ್ನನ್ನು ಅಡುಗೆ ಮನೆಗೆ ಕಟ್ಟಿಹಾಕಿಸಿದ್ದ..? ಎಂದು ನನಗರಿವಾಗುವ ಹೊತ್ತಿಗೆ ಕಳೆದದ್ದು ದಶಕಗಳು.
ಮಕ್ಕಳು ಅಪೂಟು ಅಜ್ಜ-ಅಜ್ಜಿಯರ ಮಡಿಲಿಗೆ ಬಿದ್ದು ಹೊರಳಾಡುತ್ತಾ ಇರಬೇಕಿತ್ತು. ಅಪರೂಪಕ್ಕೆ ಮಕ್ಕಳೊಂದಿಗೆ ಅಂಗಳಕ್ಕಿಳಿದರೆ ಮರುದಿನ ಅದೇ ಹೊತ್ತಿಗೆ ಸರಿಯಾಗಿ ನನಗ್ಯಾವುದೋ ಹೊಸದಾಗಿ ಕೆಲಸವೊಂದು ಕಾಯಲಿದೆ ಎನ್ನುವುದ್ಯಾಕೆ ಆವತ್ತಿಗೆ ಹೊಳೀತಿರಲಿಲ್ಲ..? ಅದೇ ಈಗ ಮೊಮ್ಮಗಳಿಗೆ, ತನ್ನನ್ನು ಬಿಡು ಅಲ್ಲಿಗೆ ಡ್ರಾಪ್ ಮಾಡು ಎನ್ನುತ್ತಿದ್ದಂತೆ, ‘ಅಜ್ಜಿ... ಡ್ರಾಪ್ ಮಾಡ್ತೀನಿ ಅದರೆ ಪಿಕ್ ಅಪ್ ಆಗಲ್ಲ. ನಿಮ್ಮ ಪಾಡಿಗೆ ವಾಪಸ್ಸು ಬನ್ನಿ. ನನ್ನ ಫ್ರೇಂಡ್ಸ್ ಮನೆ ಹತ್ತಿರ ಬರೋದು ಬೇಡ..’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಬದುಕು ರೂಪಿಸಿಕೊಳ್ಳುವುದೂ, ಸಂಜೆಗೆ ಇನ್ನೆ ಹೊರಟಾಗ ‘ಎಷ್ಟೊತ್ತಾಗುತ್ತಮ್ಮ ಊಟಾ..’ ಎಂದೇನೋ ರಾಗ ಎಳೆಯುವಾಗ ‘ಅಜ್ಜಿ. ಕ್ಲಾಸು ಪ್ರಾಕ್ಟಿಕಲ್ಸು ಎಲ್ಲ ಲೆಕ್ಕಾ ಹಾಕಿ ಆಗೋದಿಲ್ಲ. ಅವುಗಳಿಗೆ ಅದರದ್ದೇ ಟೈಂ ಇರುತ್ತೆ. ನನ್ನ ಬಗ್ಗೆ ಚಿಂತೆ ಬೇಡಾ. ಏನೂ ಇಲ್ಲದಿದ್ರೆ ನಾನು ಬ್ರೆಡ್ ತಿಂತೀನಿ. ಸುಮ್ನೆ ತಲೆ ತಿನ್ಬೇಡಾ..’ ಎಂದು ತನ್ನ ಅಂತರ ಮತ್ತು ಸ್ವಾತಂತ್ರ್ಯ ಎರಡೂ ಕಾಯ್ದುಕೊಳ್ಳುತ್ತಲೇ ಯಾವ ರೀತಿಯಲ್ಲೂ ಸಂಬಂಧವೂ ಹಾಳಾಗದಂತೆ ನಿಷ್ಠುರತೆಯನ್ನು ವ್ಯಕ್ತಪಡಿಸಿದ್ದದರೂ ಹೇಗೆ..?
‘ಎಲ್ಲರೂ ನನ್ನನ್ನು ಕಾಳಜಿ ಮಾಡ್ತಾರೆ ಅಂದುಕೊಂಡೆ ಒಳ್ಳೆಯತನಕ್ಕೂ ಮಿತಿ ಇಲ್ಲದ ಪರಿಧಿಯಲ್ಲಿ ಬದುಕಿ ಬಿಟ್ಟಿದ್ದ ನೋಡು. ಚೆಂದದ ಸಂಸಾರದ ಹೀಗೆ ಬದುಕು ಬಂಧಿಯಾಗಿರುತ್ತೆ ಅಂತಾ ಪ್ರಾಕ್ಟಿಕಲ್ ಆಗಿ ಗೊತ್ತಾಗೋಕೆ ಇನ್ನೊಂದು ತಲೆಮಾರು ಬರ್ಬೇಕಾಯ್ತು. ಆದ್ರೆ ಕಳೆದ ಸಮಯ ಮತ್ತು ಜೀವನ ಎರಡೂ ಹಿಂದಕ್ಕೆ ತಿರುಗೋದಿಲ್ವಲ್ಲ..’ಎನ್ನುತ್ತಾ ಶಾಂತಕ್ಕ ‘ಇದೆಂಥಾ ಕತೆ ಅಂತಿಯೇನೋ’ ಎನ್ನುತ್ತಿದ್ದರೆ ‘ಇಲ್ಲ ಶಾಂತಕ್ಕ ನಿಜವಾಗಿಯೂ ಬದುಕಿಗೂ ಮತ್ತು ಚೆಂದದ ನೆಮ್ಮದಿಗೂ ವ್ಯತ್ಯಾಸ ತೋರ್ಸ್ತಿರೋದೇ ನೀನು. ಬರೀ ಅದ್ಭುತ ಅಥವಾ ಗಂಭೀರ ಸಮಸ್ಯೆಯ ಮಧ್ಯದಿಂದ ಎದ್ದು ಬಂದು ಅದನ್ನೇ ಡಂಗೂರವಾಗಿಸಿಕೊಳ್ಳುತ್ತಾ ಬದುಕು ಕಟ್ಟಿಕೊಳ್ಳುವುದಷ್ಟೆ ಜೀವನವಲ್ಲ. ಎಲ್ಲ ಇದ್ದೂ ಏನೂ ಇಲ್ಲದಂತೆ ಗೊತ್ತಾಗದ ಲುಕ್ಷಾನಿಗೆ ಈಡಾಗಿಯೂ ಸಹಿಸಿಕೊಂಡೂ ಜೀವನ ಮಾಡೋದಿದೆಯಲ್ಲ ಅದು ನಿನ್ನಂಥವರಿಂದ ಮಾತ್ರ ಸಾಧ್ಯ ಸುಮ್ನಿರು..’ಎಂದೆ. ಹನಿಗಟ್ಟಿದ ಕಣ್ಣು ಪಿಳಿಪಿಳಿ ಮಾಡುತ್ತಾ ನಿರುಮ್ಮಳ ನಗೆ ನಕ್ಕಳು ಶಾಂತಕ್ಕ.
ಕಾರಣ
ಅವಳು ಎಂದರೆ..

Monday, February 1, 2016

ಕಪ್ಪುಬಿಳುಪಿನ ವರ್ಣ ಸಾಂಗತ್ಯ...
ಬಹುಶಃ ಚೆಂದ ಮತ್ತು ಬಣ್ಣ ಎನ್ನುವುದು ಸಾರ್ವತ್ರಿಕವಾಗಿ ಆವರಿಸಿಕೊಂಡಿರುವ ಪಿಡುಗು. ಬದುಕಿನಲ್ಲಿ ಬಣ್ಣ ಮತ್ತು ರೂಪ ವಹಿಸಿದಷ್ಟು ದೊಡ್ಡಪಾತ್ರ ಇನ್ನಾವುದೂ ವಹಿಸಿರಲಿಕ್ಕಿಲ್ಲ. ಆದರೆ ಜೀವನದ ಐನ್‌ಟೈಮಿನಲ್ಲಿ, ದುರ್ಬರ ಘಳಿಗೆಗಳಲ್ಲಿ ಆರ್ದ್ರತೆ ಹೊರತಾದ ವಾಸ್ತವ ಇನ್ನೊಂದಿಲ್ಲ.

ಚೆಂದ ಇದ್ದವರು ಮೆರೆದಾಡುವುದು ಸಹಜವೇ ಆಗಿರುವ ಕಾಲದಲ್ಲಿ, ಏನೂ ಇಲ್ಲದಿರುವವರೂ ಇವತ್ತು ಸೆಲಿಗೆ, ಪ್ರೊಫೈಲ್ ಪಿಕ್‌ಗೆ ಇಂತಿಷ್ಟು ಲೈಕು, ಪೋಸುಗಳಲ್ಲಿ ಮೈಮರೆಯುವಾಗ, ಮಿಲಿಟರಿಗೊಂದು ಸೆಲ್ಯೂಟು, ನಾಯಿಗೊಂದು ಮುದ್ದು ಎನ್ನುವ ಹಲ್ಕಿರಿತದ ಅಪಸವ್ಯಗಳಲ್ಲಿ, ಬಾಡಿಗೆ ಬೂಟಿನೊಂದಿಗೆ ಬೊಗಳೆ ಬದುಕಿನ ಸೌಂದರ್ಯ ಪ್ರದರ್ಶಿಸುವವರು, ತೀರಾ ವಯಸ್ಸಿನ ಪರಿವೆಯೇ ಇಲ್ಲದೆ ಬೆಡ್‌ರೂಮ್ ನಿಲುಮೆಗಳೊಂದಿಗೆ ಐಡೆಂಟಿಟಿ ಕಂಡುಕೊಳ್ಳುತ್ತ, ಮನಸ್ಸಿನ ಕತ್ತಲೆಗಳ ಬೆತ್ತಲೆತನಗಳನ್ನೂ ಒಬ್ಬೊಂಟಿ ಬದುಕಿನಲ್ಲಿ ಕಳೆದುಕೊಳ್ಳುವಾಗ ವಾಸಂತಿಯಂಥವರು ವಾಸ್ತವದಲ್ಲಿ ಜೀವನದ ಅವಗಾಹನೆಯನ್ನೇ ಬದಲಿಸಿಬಿಡುತ್ತಾರೆ. ಕಾರಣ ಸೌಂದರ್ಯ, ಥಳಕು, ವರ್ಷಕ್ಕೊಮ್ಮೆ ಬದಲಿಸುವ ಸಾಂಗತ್ಯಗಳ ಹೊರತಾಗಿಯೂ ಬದುಕಿನೆಡೆಗೂ, ಅದು ಕದಲಿಸುವ ಪಥದಲ್ಲಿ ಮೂಡಿಸುವ ಹೆಜ್ಜೆಗಳೂ ಇವೆಯಲ್ಲ ಅವು ಇವತ್ತಿಗೂ ನಮ್ಮನ್ನು ಧನಾತ್ಮಕದೆಡೆಗೆ ಪ್ರೇರೇಪಿಸುತ್ತಿವೆ.
ಏನೆಲ್ಲ ಇದ್ದರೂ ಸೌಂದರ್ಯ ಎನ್ನುವುದು ಇಷ್ಟೂ ಮುಖ್ಯವಾಗುತ್ತದಾ ಎನ್ನಿಸಿದ್ದು ವಾಸಂತಿಯನ್ನು ಮಗದೊಮ್ಮೆ ಎರಡು ದಶಕಗಳ ನಂತರ ಭೇಟಿಯಾದಾಗಲೇ. ಆದರೆ ಆಕೆ ಅದೆಲ್ಲವನ್ನೂ ಮೀರಿ ಬದುಕಿನಲ್ಲಿ ಕಾಲೂರಿ ನಿಂತ ತಾಕತ್ತಿದೆಯಲ್ಲ ಅದು ಬಹುಶಃ ಬದುಕಿನ ಬಣ್ಣಗಳನ್ನೂ ಚೆಂದಗಳನ್ನೂ ಅನಾವರಣಗೊಳಿದ್ದು ಎಂದರೂ ತಪ್ಪಿಲ್ಲ.
ಮನೆಯಲ್ಲಿ ನಾಲ್ಕು ಜನರ ತುಂಬು ಮಕ್ಕಳಿನ ಕುಟುಂಬದಲ್ಲಿ ಮೂರನೆಯ ಹುಡುಗಿಯಾಗಿ ಬೆಳೆದ ವಾಸಂತಿ ಅದ್ಯಾಕೋ ಹುಟ್ಟುತ್ತಲೇ ಡಾಂಬರು ಕುಡಿದಂತಿದ್ದಳು. ಅದರಲ್ಲೂ ಮೂರನೆಯದ್ದೂ ಹೆಣ್ಣೇ ಎಂದು ಮಾತು ಅರಿಯುವ ಮೊದಲೇ ಮೂದಲಿಕೆಗಳನ್ನು ಆಲಿಸಬೇಕಾಗಿ ಬಂದಿದ್ದು ಆಘಾತಕಾರಿ. ಮೊದಲಿನವೆರಡು ಅಪ್ಪಟ ಅವರಮ್ಮನ ಪಡಿಯಚ್ಚಾಗಿದ್ದರೆ ಈ ಹುಡುಗಿ ಮಾತ್ರ ಅದ್ಯಾಕೋ ಅವರ ವಂಶಸ್ಥರಲ್ಲಿಯ ಯಾವುದೋ ನಿರ್ದಿಷ್ಟ ಜೀನಿನ ತೆಕ್ಕೆಗೆ ಸಿಕ್ಕು ಬಣ್ಣ ಮತ್ತು ಬದುಕು ಎರಡಕ್ಕೂ ಕಪ್ಪು ಪರದೆ ಎಳೆದುಕೊಂಡುಬಿಟ್ಟಿದ್ದಳು. ಇವಳ ಹಿಂದೇನೇ ಅದರಲ್ಲೂ ಕೆಂಪು ಕೆಂಪು ಗಂಡು ಮಗು ಹುಟ್ಟಿದ ಮೇಲಂತೂ ವಾಸಂತಿ ಹುಟ್ಟಾ ಅನಾದರಕ್ಕೊಳಗಾಗಿದ್ದು, ಸಮಾಜದ ರೋಗಗ್ರಸ್ಥ ಮನಸ್ಥಿತಿಗೆ ಹಿಡಿದ ಕನ್ನಡಿಯಂತಾಗಿ ಹೋಗಿತ್ತು. ತೀರಾ ಚಿಕ್ಕಂದಿನಿಂದಲೇ ಇಂಥದ್ದಕ್ಕೆಲ್ಲ ತಲೆಕೆಡಿಸಿಕೊಳ್ಳುವುದರಿಂದ ಹೊರಬಂದಿದ್ದ ಹುಡುಗಿ ಅಪ್ಪಟ ಗಂಡು ಬೀರಿಯಾಗುವಾಗ, ಹುಡುಗಿ ‘ಧಡ ಇಲ್ಲ..ಬಿಡ್ರಿ’ ಎನ್ನುವ ಅನ್ವರ್ಥಕ್ಕೆ ಪಕ್ಕಾಗಿದ್ದು ಖರೇ ಎನ್ನಿಸತೊಡಗಿತ್ತು.
ಅದಕ್ಕೆ ಸರಿಯಾಗಿ ವಾಸಂತಿ ಹೆಸರಿನ ಕೃಷ್ಣಸುಂದರಿಗೆ ಅದ್ಯಾಕೋ ಸರಸ್ವತಿಯೂ ಕೈಕೊಟ್ಟಿದ್ದರಿಂದ ಆಕೆ ಇನ್ನಷ್ಟು ರಾವಾಗತೊಡಗಿದ್ದಳು. ಓದು ತಲೆಗೇರುವುದಿಲ್ಲ. ಬೇರಾವ ಚಟುವಟಿಕೆಯಲ್ಲೂ ಸಣ್ಣದಾದ ಮನಸ್ಸಿನ ಒಳಗುದಿ ಆಕೆಯನ್ನು ಸೇರದಂತೆ ಮಾಡಿದ್ದು, ಎಲ್ಲ ಕಡೆಯಲ್ಲೂ ಈ ಸಮಾಜವನ್ನು ಕಾಡುತ್ತಿರುವ ಬಣ್ಣದ ಸಮಸ್ಯೆ ಆಕೆಗೂ ಅರಿವಿಲ್ಲದೆ ತಟ್ಟತೊಡಗಿದ್ದು, ಸರಿಬಿಡು ಹೆಂಗಾದರೂ ಬದುಕು ಸಾಗುತ್ತದೆ. ಅಪ್ಪ ಎ ಒಂದು ಕಡೆಯಲ್ಲಿ ಮದುವೆ ಮಾಡಿಕೊಟ್ಟಾಗ ಎದ್ದು ಹೋದರಾಯಿತು ಎಂದು ತೆಪ್ಪಗಿದ್ದುಬಿಟ್ಟಿದ್ದಳು.ಆದರೆ ಅದಕ್ಕೂ ಬರಕತ್ತಾಗಲಿಲ್ಲ ಬದುಕು. ಮೊದಲಿನ ಹುಡುಗಿಯರಿಬ್ಬರೂ ಸೇರಿದಂತೆ ಕೊನೆಯಲ್ಲಿ ಚೆಂದಗೆ ಕುಟುಂಬದ ಸಂಪೂರ್ಣ ಪ್ರೀತಿ ಸ್ವೇಚ್ಛೆ ಅನುಭವಿಸಿ ಬೆಳೆದಿದ್ದ ತಮ್ಮನೂ ತನಗಿಷ್ಟದವಳನ್ನು ಕಟ್ಟಿಕೊಂಡು ಎದ್ದು ಹೋದರೆ ವಾಸಂತಿ ಮಾತ್ರ ಆಡಲಾರದೇ ಅನುಭವಿಸಲಾರದೆ ಅಮ್ಮನ ಕಣ್ಣಿನ ದೀನದೃಷ್ಟಿಯನ್ನೇ ದುರಿಸುತ್ತಾ, ಯಾವ ಮಾತಿಗೂ ದೂಸರಾ ಆಡದೆ ಬದುಕಿನ ಕಾಲಕ್ಕೆ ತನ್ನ ಸಮಯ ಸೇರಿಸುತ್ತಾ ಉಳಿದುಬಿಟ್ಟಿದ್ದಳು. ವಯಸ್ಸು ಮೂವತ್ತೆರಡಾಗುತ್ತಿದ್ದರೂ ಆಗದ ಮದುವೆ, ಅಪ್ಪ ಅಮ್ಮನಿಗೂ ಇದ್ಯಾಕೊ ಮಗಳು ಭಾರವಾಗುತ್ತಿದ್ದಾಳೆ ಎನ್ನಿಸುತ್ತಿದ್ದ ಘಳಿಗೆಗಳು, ಎಲ್ಲ ಕಡೆ ಅಪ್ಪ ‘ನಮ್ಮ ವಾಸಿಗೂ ಒಂದು ವರ ನೋಡ್ರೆಲಾ..?’ ಎನ್ನುತ್ತಲೇ ‘ಹುಡುಗಿ ಏನ್ ಮಾಡ್ತಾಳು.. ಯಾಕ ಮೂವತ್ತೆರಡಾದ್ವು..?’ ಎನ್ನುತ್ತಾ ಒಂದೊಂದು ತೀಡಿ ಇಟ್ಟಂತಹ ಪ್ರಶ್ನೆ ಎದುರಿಸಿ ಮತ್ತೆ ಅಲ್ಲಿಗೇ ಬಂದು ನಿಲ್ಲುತ್ತಿದ್ದ ಪರಿಸ್ಥಿತಿಗೆ ಕುಟುಂಬ ರೋಸಿಹೋಗಿತ್ತು. ಆದರೂ ಅಪ್ಪಂದಿರಿಗೆ ಹೆಣ್ಣುಮಕ್ಕಳು ಹೆಂಗಿದ್ದರೂ ಒಂದಿಷ್ಟು ಮಮತೆ ಹೆಚ್ಚೇ. ಹಾಗಾಗೇ ಇದೆಲ್ಲದರಾಚೆಗೂ ಅವಳಪ್ಪ ‘ನಮ್ಮ ವಾಸಿ, ಒಂದೀಟು ಕಪ್ಪಗ ಆದರೆ ಕೆಲಸಾ ಬಗಸಿ ಛಲೋ ಮಾಡ್ತಾಳು..’ ಎಂದು ಶಿ-ರಸಿಗೆ ನಿಂತು ಗಂಡು ಕೇಳುತ್ತಿದ್ದ. ಆಗೆಲ್ಲ ಅವನ ಮುಖದ ಮುದುರುಗಳಲ್ಲಿ ಅಡಗಿರುತ್ತಿದ್ದ ದೈನೇಸಿತನ ನೋಡಲಾಗದೆ ವಾಸಿ ಒಂದು ದಿನ,
‘ಅಪ್ಪ ನಿನಗೆ ಮಗಳು ಬ್ಯಾಡ, ಮನಿಯಿಂದ ಒಮ್ಮೆ ಹೋಗಲಿ ಅನ್ನಿಸಿದ್ದರೆ ಹೇಳು.. ನಾ ಏನಾರ ವ್ಯವಸ್ಥಾ ಮಾಡಿಕೊಳ್ತೇನಿ. ಹಿಂಗ ಮಂದಿ ಮುಂದ ಮೈ ಹಿಡಿ ಮಾಡ್ಕೊಂಡು ನಿಲ್ಲಬ್ಯಾಡ..’ ಎಂದು ಜಬರಿಸಿದ್ದಳು. ಉಳಿದ ಅಕ್ಕಂದಿರಿಗೂ ಈ ವಾಸಿಯದ್ದು ಏನೂ ಆಗದ ಬದುಕಾಗಿ, ಚಿಂತೆ ಕಾಳಜಿ ಎರಡೂ ಇಲ್ಲದಾಗಿ ಆಕೆಯ ಪ್ರಿಯಾರಿಟಿ ಕಡಿಮೆಯಾಗತೊಡಗಿತ್ತು. ಕಾಲ ಬದಲಾಗಿತ್ತು. ಬ್ರಹ್ಮ ಆಕೆಗೂ ಒಂದು ಗಂಡು ಬರೆದಿದ್ದ. ವಾಸಿಗೂ ಧಿಡೀರನೇ ಮದುವೆಯಾಗಿ ಊರು ಬಿಟ್ಟಿದ್ದಳು. ಒಂದಕ್ಷರವೂ ಸರಿಯಾಗಿ ತಲೆಗೆ ಹತ್ತದಿದ್ದ ವಾಸಂತಿಗೆ ವ್ಯಾಪಾರ, ವ್ಯವಹಾರ ಎಷ್ಟು ಸಲೀಸು ಎನ್ನುವುದು ಗೊತ್ತಾಗಿದ್ದೇ ಮದುವೆಯಾದ ಮೇಲೆ.
ಗಂಡನ ಮನೆಯ ಚಿಕ್ಕ ಕಿರಾಣಿ ಅಂಗಡಿಯನ್ನು ತುಂಬ ಮುತುವರ್ಜಿಯಿಂದ ಬೆಳೆಸಿದ ಹುಡುಗಿ ಎರಡ್ಮೂರು ವರ್ಷದಲ್ಲಿ ಹುಬ್ಬೇರುವಂತೆ ವ್ಯವಹಾರ ಬೆಳೆಸಿದ್ದಳು. ವಾಸಿಯ ಅಪ್ಪ ಆಗೀಗ ಬಂದು ಆಕೆಯ ಜೊತೆ ಕೂತೆದ್ದು, ತಲೆ ಸವರಿ ‘ಕಡಿಗೂ ದೇವ್ರುಕಣ್ಣಬಿಟ್ಟ ಬಿಡವಾ..’ ಎಂದು ಹರಸಿ, ಮನತುಂಬಿಕೊಂಡು ಹೋಗುತ್ತಿದ್ದ. ಆದರೆ ಆ ಖುಷಿ ಬಹಳ ದಿನ ಉಳಿಯಲಿಲ್ಲ. ಸುಲಭಕ್ಕೆ ತನ್ನನ್ಯಾಕೆ ಇಂಥವನು ಮದುವೆಯಾಗಿದ್ದ ಎನ್ನುವ ಅಸಲಿಯತ್ತು ವಾಸಿಗೆ ಗೊತ್ತಾಗಿಬಿಟ್ಟಿತ್ತು.
ಆಕೆಯ ಗಂಡ ಆಗಲೇ ಇನ್ಯಾವಳನ್ನೋ ವ್ಯವಸ್ಥಿತವಾಗಿ ಕೂಡಿಕೆಯಲ್ಲಿರಿಸಿಕೊಂಡಿದ್ದ. ಮನೆಯವರು ಕುಟುಂಬದ ಮರ್ಯಾದೆ, ಸಮಾಜ, ಆರ್ಥಿಕತೆ ಇತ್ಯಾದಿ ಕಾರಣಗಳಿಗೆ ವಾಸಿಯನ್ನೂ ಹೂಂ ಎಂದು ಪುಕ್ಕಟೆ ಮನೆ ಕೆಲಸದ ಲೆಕ್ಕದಲ್ಲಿ ಒಪ್ಪಿಕೊಂಡಿದ್ದಾರೆ. ಆಕೆ ಮನೆಯ ವ್ಯಾಪಾರಕ್ಕೂ ಉಪಯೋಗವಾಗಿದ್ದು ಅವರ ಬೋನಸ್. ಅಸಲು ಲುಕ್ಷಾನಿಗೆ ಈಡಾಗಿದ್ದು ಮತ್ತೆ ವಾಸಂತಿ ಮಾತ್ರ. ಆಕೆ ಸುಮ್ಮನೆ ಕೂರಲ್ಲೂ ಇಲ್ಲ ಹಾಗಂತ ವಿಷಯ ಗೊತ್ತಾಗುತ್ತಿದ್ದಂತೆ ಎಲ್ಲ ಹೆಣ್ಣುಗಳಂತೆ ಗದರಲಿಲ್ಲ. ಅಳಲೂ ಇಲ್ಲ. ಪೂರ್ತಿ ವಿಷಯ ಅರಿತುಕೊಂಡು ಒಂದಾರು ತಿಂಗಳು ಕಳೆಯುತ್ತಿದ್ದಂತೆ ಬೆಳಬೆಳಗ್ಗೆನೆ ಮನೆಯ ಹೆಬ್ಬಾಗಲಿಗೆ ನೀರು ಬಿಟ್ಟು ಹೊರಬಿದ್ದವಳು. ಮೊದಲೇ ನಿರ್ಧರಿಸಿಕೊಂಡಿದ್ದ ಜಾಗದಲ್ಲಿ ಪುಟ್ಟ ಮನೆ ಮತ್ತು ಈಗಾಗಲೇ ಒಳ ಹೊರ ಎರಡೂ ಗೊತ್ತಾಗಿದ್ದ ಮಹಿಳೆಯರ ವಸ್ತುಗಳ ಬಾಟಿಕ್ ತರಹದ ವ್ಯಾಪಾರ ಆರಂಭಿಸಿ ಬದುಕು ಕಟ್ಟಿಕೊಂಡಿದ್ದಳು.ಇತ್ತ ವಿಷಯ ತಿಳಿದ ಗಂಡ ಮನೆಯ ವ್ಯಾಪಾರ ಸೊಗಸಾಗಿ ನಿರ್ವಹಿಸುತ್ತಿದ್ದ ಹೆಂಡತಿ ಕಮ್ ಕೆಲಸದ ವಾಸಂತಿ ಕೈಬಿಡುತ್ತಿದ್ದಂತೆ ದಿಗಿಲಿಗೆ ಬಿದ್ದ. ಆಗಿದ್ದ ಅನಾಹುತ ಸರಿಯಾಗಿಸುವ ಆತುರದಲ್ಲಿ ಗಲಾಟೆಗೆ ಬಂದ. ಆದರೆ ವಾಸಿ ಹೇಗೆ ಬದುಕಬೇಕೆನ್ನುವುದನ್ನು ಕಲಿತು ಬಿಟ್ಟಿದ್ದಳು. ಅವನಿಗೆ ಉಸಿರಾಡಲೂ ಕೊಡದೆ ಆಚೆಗೆ ಗದುಮಿದವಳು. ಹೆಂಗಸರನ್ನೇ ಕೇಂದ್ರೀಕರಿಸಿ ವ್ಯವಹಾರಕ್ಕಿಳಿದವಳು ಅಕ್ಷರಶಃ ಹುಬ್ಬೇರುವಂತೆ ಬೆಳೆದಿದ್ದಾಳೆ.
‘ಛಲೋ ಆತು ಬಿಡ. ಹೋದರ ಹೋಗಲಿ. ಈಗ ಎಲ್ಲ ನಿಂದ ಆಗೇದಲ್ಲ. ಅಪ್ಪ- ಅವ್ವ ಎದಾರು? ಮಕ್ಕಳು..’ ಎಂದು ನಾನು ವಿಚಾರಿಸಿಕೊಳ್ಳುತ್ತಿದ್ದರೆ ‘ನಡೀ ಮನೀಗೆ ಹೋಗಿ ಮಾತಾಡೋಣು..’ ಎಂದು ಕರೆದೊಯ್ದಳು. ಮನೆ ತುಂಬ ಮಕ್ಕಳು. ಸುಮಾರು ನಾಲ್ಕೈದು ಇವೆ. ವಯಸ್ಸಾಗಿರುವ ನಿಂಗಪ್ಪಜ್ಜ ಗುರುತು ಹಿಡಿಯದಿದ್ದರೂ ಊರ ಕಡಿಯಿಂದ ಯಾರೋ ಬಂದಾರು ಎನ್ನುತ್ತಿದ್ದಂತೆ ಎದ್ದು ನಿಂತು ಕೈಹಿಡಿದು ಕಕ್ಕುಲಾತಿ ತೋರಿದ್ದರು.‘ನಾವಾಗೇ ಕಾಲೂರೋ ತನಕ ಎಲ್ಲ ಒಂದ ನಮೂನಿಯಾದರ ಆಮ್ಯಾಲಿಂದೇ ಒಂದು ನೋಡು. ಇದರಾಗ ಎರಡು ಮಕ್ಕಳು ನನ್ನ ತಮ್ಮಂದು. ಅವನ ಹೆಣ್ತಿ ನಾಲ್ಕು ವರ್ಷಾನೂ ದಢ್ ಆಗಿ ಸಂಸಾರ ಮಾಡ್ಲಿಲ್ಲ. ಅದಕ್ಕ ಮಕ್ಕಳನ್ನು ಕರಕೊಂಡು ಬಂದೆ. ಇನ್ನೆರಡು ನನಗಿರಲಿ ಅಂತ ಆಶ್ರಮದಿಂದ ಮೊದಲೇ ತಂದಿದ್ದಾ.
ಇವತ್ತು ಎನೂ ಚಂದ, ಬಣ್ಣ ಇದ್ದರ ಆತು. ಆದರ ಬದುಕು ಬಣ್ಣ ಹಚ್ಕೊಳ್ಳೋದರಿಂದ, ಚಂದ ಇರೋದರಿಂದ ನಡೆಯೋದಿಲ್ಲ ಅನ್ನೋದು ದಡ ಬಿಟ್ಟಾಗೇನ ಗೊತ್ತಾಗೋದು ನೋಡು. ತಾತ್ಪೂರ್ತಿಕ ಆಗಿ ಎಲ್ಲರ್ಗೂ ಹಲ್ಕಿರಿಯೋದರಿಂದ, ಮುಖ ನೋಡಿ ಕೆಲಸ ಸುಲಭಾಗತದಾದರೂ ಅದು ಭಾಳ ದಿನಾ ನಡೆಯೋದಿಲ್ಲ. ನನ್ನದು ಹೆಂಗರಾ ಆತು ಅಂತ ಅಪ್ಪ-ಅವ್ವನ ಕೈಬಿಡ್ಲಿಕ್ಕೆ ಆಗ್ತದನೂ. ತಮ್ಮ ಹೆಣ್ತಿ ಸಂಗಕ್ಕ ಬಿದ್ದು ಅವರನ್ನ ರಸ್ತೆಗೆ ದಬ್ಬಿದ ಅಂತಾ ನಾನೂ ಬಿಡ್ಲಿಕ್ಕ ಹೆಂಗಾಗ್ತದ..? ನನಗೇನು ನಂದ ಮಕ್ಕಳಾಗಬೇಕೂಂತೇನಿಲ್ಲ. ಮತ್ತ ಅವೂ ನನ್ನಂಗೆ ಆಗಿದ್ದರ..? ಆದ್ರ ಬೆಳಸುವಾಗ ಬದುಕು ಕಟ್ಕೊಳ್ಳಾಕ ಒಂದು ದಮ್ ಬರೋಹಂಗ ಬೆಳೆಸಿದರ ಅದಕ್ಕಿಂತ ದೊಡ್ಡ ಬಣ್ಣ ಇಲ್ಲ ಅಂತಾ ಗೊತ್ತಾಗೇದ ನೋಡು. ಏನಂತಿ..?’ ವಾಸಿ ಮರುಪ್ರಶ್ನಿಸುತ್ತಿದ್ದರೆ ಸುಮ್ಮನೆ ಮುಖ ದಿಟ್ಟಿಸಿದೆ.ವಾಸಿ ದೃಷ್ಟಿಗೆ ನಿಲುಕದಷ್ಟು ಬೆಳೆದಿದ್ದರೂ ತಡುವಬಹುದಿತ್ತು. ಆದರೆ ವ್ಯವಸ್ಥೆಯಲ್ಲಿ ಬಣ್ಣದ ಹುಚ್ಚಿಗೂ, ಥಳುಕಿಗೂ ಬಿದ್ದವರನ್ನು ಹೇಗೆ ವಾಸಿ ಮಾಡುವುದೋ..? ಅದೆಲ್ಲ ವಾಸಿಗೆ ತಿಳಿದಿರದಿದ್ದರೂ ಆಕೆ ಬದುಕನ್ನು ಗೆದ್ದು ತೋರಿಸಿದ್ದಳು. ಬದುಕಿದ್ದ ಬಣ್ಣಗಳು ಆಕೆಯೆದುರಿಗೆ ಕಪ್ಪಾಗಿದ್ದವು.
ಕಾರಣ ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)

Saturday, January 30, 2016

ದಪ್ಪ  ಕೊಕ್ಕಿನ ಹಕ್ಕಿಯ ದಾಂಪತ್ಯ ನಿಷ್ಥೆ .... 
ಅಪರೂಪದ ಹಾಗೂ ಜಗತ್ತಿನ ಯಾವ ಜೀವಸ೦ಕುಲದಲ್ಲೂ ಕ೦ಡುಬರದ ಪ್ರಾಮಾಣಿಕ ದಾ೦ಪತ್ಯ ಮ೦ಗಟ್ಟೆಯದು. ತನ್ನ ಜೀವಮಾನದಲ್ಲಿ ಒಮ್ಮೆ ಮಾತ್ರ ಜೋಡಿಯಾಗುವ ಮ೦ಗಟ್ಟೆಗಳಲ್ಲಿ ಅಕಸ್ಮಾತಾಗಿ ಸ೦ಗಾತಿ ತೀರಿಹೋದರೆ ಇನ್ನೊ೦ದು ಕೂಡ ಜೀವ ಕೊಡುತ್ತದೆ. ಹೆಚ್ಚಿನ೦ಶ ಇದು ಸ೦ತಾನೋತ³ತ್ತಿಯ ಕಾಲದಲ್ಲಿ ಜರುಗಿಬಿಡುವ ವಿದ್ರಾವಕ ಕಥಾನಕ.
ಈ ಪಕ್ಷಿ ಕಾಡು ತೊರೆದರೆ ಅಥವಾ ಇದ್ದಕ್ಕಿದ್ದ೦ತೆ ಕಾಡಿನಲ್ಲಿ ಕಾಣದಾದರೆ ಆ ಕಾಡಿಗೆ ನೈಸಗಿ೯ಕ ಕೇಡು ಕಾದಿದೆ ಎ೦ದೇ ಅಥೆç೯ಸಲಾಗುತ್ತದೆ. ಕಾಡೊ೦ದರ ವåèಲ್ಯಮಾಪನ ನಡೆಯುವುದೇ ಈ ಪಕ್ಷಿ ಕಾಡಿನಲ್ಲಿ ಸ೦ತಾನೋತ³ತ್ತಿ ಮಾಡುತ್ತಿದೆಯೇ ಎ೦ಬುದರ ಮೇಲೆ. ಎಲ್ಲಕ್ಕಿ೦ತಲೂ ಮಿಗಿಲಾಗಿ ಈ ಹಕ್ಕಿ ಸುಲಭಕ್ಕೆ ತನ್ನ ಸ೦ತಾನೋತ³ತ್ತಿಯ ಮಾಹಿತಿಯನ್ನು ಯಾವ ಪಕ್ಷಿ ಪರಿಣತರಿಗೂ ಬಿಟ್ಟುಕೊಟ್ಟಿಲ್ಲ. ಜಾಗತಿಕವಾಗಿ, ಕನಾ೯ಟಕದ ಅಣಶಿ ಅಭಯಾರಣ್ಯದಲ್ಲಿ ಅತ್ಯಧಿಕವಾಗಿ ಇವು ವಾಸವಾಗಿರುವುದು ದಾಖಲೆಗೆ ಪಾತ್ರವಾಗಿದ್ದರೆ ಅಷ್ಟರ ಮಟ್ಟಿಗೆ ಕಾಳಿ ಅರಣ್ಯಪ್ರದೇಶ ಅತ್ಯ೦ತ ಸುರಕ್ಷಿತ ಎ೦ದೇ ವ್ಯಾಖ್ಯಾನಿಸಲು ಪೂರಕವಾಗುತ್ತಿದೆ. ಇದೇ ಮ೦ಗಟ್ಟೆ ಅಥವಾ ಹಾನ್‍೯ ಬಿಲ್. 
     ಪಕ್ಷಿಪ್ರಭೇದದಲ್ಲಿ ವಿಭೀನ್ನ ಎ೦ದೇ ಗುರುತಿಸಲಾಗುವ ಮ೦ಗಟ್ಟೆಗೆ ಪ್ರಾಧಾನ್ಯವಿರುವುದು ಮೂಗಿನ ಮೇಲಿರುವ ಹೆಚ್ಚುವರಿ ಕೊ೦ಬಿನಿ೦ದಾಗಿ. ಅದು ತೀವ್ರತರವಾದ ಆಥ೯ರೈಟಿಸ್ ಕಾಯಿಲೆಗೆ ಸ್ಥಳೀಯ ಮದ್ದಾಗಿ ಬಳಕೆಯಾಗುತ್ತಿರುವುದರಿ೦ದ ಅವ್ಯಾಹತವಾಗಿ ಬೇಟೆಗೆ ಬಲಿಯಾಗುತ್ತಿತ್ತು. 2004ರ ಹೊತ್ತಿಗೆ ತೀವ್ರವಾಗಿ ನಾಶವಾಗುತ್ತಿರುವ ಪಕ್ಷಿಸ೦ಕುಲದಲ್ಲಿ ಮ೦ಗಟ್ಟೆ ದಾಖಲಾಗಿತ್ತು. ಪ್ರಸ್ತುತ ಕಾಳಿ ಹುಲಿ ಅಭಯಾರಣ್ಯದಲ್ಲೇ ಸುಮಾರು ಆರು ಸಾವಿರಕ್ಕೂ ಹೆಚ್ಚು ಮ೦ಗಟ್ಟೆಗಳು ಗಣತಿಯಲ್ಲಿ ದಾಖಲಾಗಿದ್ದು 2010ರಲ್ಲಿ ಕನಾ೯ಟಕ ಸಕಾ೯ರ ಈ ವಲಯವನ್ನು ಮ೦ಗಟ್ಟೆ ಸ೦ರಕ್ಷಿತ ಅರಣ್ಯ ವಲಯ ಎ೦ದು ಗುರುತಿಸಿ ರಕ್ಷಣಾಕಾಯ೯ಕ್ರಮಕ್ಕೆ ಒ೦ದು ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಇಷ್ಟೆಲ್ಲ ಮುತುವಜಿ೯ ವಹಿಸಲು ಕಾರಣ ಮ೦ಗಟ್ಟೆ ಎನ್ನುವ ಈ ದಪ್ಪ ಕೊಕ್ಕಿನ ಹಕ್ಕಿಯ ದಾ೦ಪತ್ಯ. ಅದು ಜಗತ್ತಿನ ಯಾವ ಜೀವ ಸ೦ಕುಲದಲ್ಲಿಯೂ ಕ೦ಡುಬರದ ಅಪರೂಪದ ಪ್ರಾಮಾಣಿಕ ದಾ೦ಪತ್ಯ. (ಮೂರು ಬಾರಿ ಸೂಕ್ಷ್ಮ ಕ್ಯಾಮರಾ ಲಗತ್ತಿಸಿ ಇದರ ಪೊಟರೆ ಪ್ರವೇಶಿಸುವ ಪ್ರಯತ್ನಗಳು ವಿಫಲವಾಗಿವೆ.) 
    ಬರಲಿರುವ ಮಾಚ್‍೯ನಿ೦ದ ಜೂನ್ ತಿ೦ಗಳವರೆಗೆ ನಡೆಯುವ ಮ೦ಗಟ್ಟೆ ಕುಟು೦ಬ ವ್ಯವಸ್ಥೆಗಾಗಿ ಹೆಚ್ಚಿನ ಜೋಡಿಗಳು ಸಿದ್ಧವಾಗಿದ್ದು, ಪ್ರತಿವಷ೯ ಕಾಳಿ ಹುಲಿ ಅಭಯಾರಣ್ಯದ ವ್ಯಾಪ್ತಿಗೆ ಸರಿಸುಮಾರು 350ಕ್ಕೂ ಹೆಚ್ಚಿನ ಮರಿಗಳು ಯಶಸ್ವಿಯಾಗಿ ಸೇಪ೯ಡೆಯಾಗುತ್ತಿದ್ದರೆ, ಗೂಡಿನಲ್ಲೇ ಪ್ರತಿ ವಷ೯ ಮರಣಿಸುತ್ತಿರುವ, ಹೊರಗೆ ಜೋಡಿಗಾಗಿ ಜೀವ ಕೊಡುವ ಮ೦ಗಟ್ಟೆಗಳ ಸ೦ಖ್ಯೆ ಇನ್ನೂರರ ಆಸುಪಾಸು. ಪ್ರತಿ ಜನವರಿಯ ಹೊತ್ತಿಗೆ ಕನಿಷ್ಠ 60 ಅಡಿಗೂ ಮಿಗಿಲಾದ ಎತ್ತರದಲ್ಲಿ ನೀಳಮರವನ್ನು ಗುರುತಿಸಿ, ಅದರಲ್ಲಿ ಪೊಟರೆಯನ್ನು ಕೊರೆದು ಜೋಡಿಗಳು ಗೂಡನ್ನು ನಿಮಿ೯ಸಿಕೊಳ್ಳುತ್ತವೆ. ಅಲ್ಲಿ೦ದ ಸುಮಾರು ಮೂರು ವಾರಗಳ ಕಾಲ ಗೂಡು, ನದಿತೀರ, ನಿಮಾ೯ನುಷ ಪ್ರದೇಶಗಳಲ್ಲಿ ಸರಸ ಸಲ್ಲಾಪ ಮುಗಿಸಿ ಇನ್ನೇನು ಹೆಣ್ಣು, ಮೊಟ್ಟೆ ಇಡುವ ಸಮಯ ಬರುತ್ತಿದ್ದ೦ತೆ ಗೂಡಿನೊಳಗೆ ಸೇರಿಕೊ೦ಡು ಪ್ರವೇಶ ದ್ವಾರವನ್ನು ಮುಚ್ಚಿಕೊಳ್ಳುತ್ತದೆ. ಇದಕ್ಕಾಗಿ ಈ ನಿದಿ೯ಷ್ಟ ಅವಧಿಯಲ್ಲಿ ಅ೦ದರೆ ಸಲ್ಲಾಪೋತ್ತರ ಅವಧಿಯಲ್ಲಿ ಮೂಗಿನ ಮೇಲ್ಗಡೆಯ ಕೊ೦ಬಿನಿ೦ದ ದಪ್ಪ ಮೇಣ ಒಸರಲಾರ೦ಭೀಸುತ್ತದೆ. ಬ೦ಧಿಯಾಗುವ ಹೆಣ್ಣು 
     ಈ ಮೇಣ ಮತ್ತು ಪೊಟರೆಯ ಒಳಗಡೆಯ ಮರದ ಹುಡಿಯನ್ನು ಸೇರಿಸಿ ಬಾಗಿಲನ್ನು ಲ೦ಬಾಕಾರವಾಗಿ ಪರಿವತಿ೯ಸಿ ಉಳಿದದ್ದನ್ನು ಮುಚ್ಚಿಬಿಡುತ್ತದೆ. ಗ೦ಡಿನ ಕೊಕ್ಕು ಮೇಲ್ಮುಖವಾಗಿ ಪ್ರವೇಶಿಸಲು ಮಾತ್ರ ಸಾಧ್ಯವಾಗುವ೦ತೆ ರ೦ಧ್ರ ಉಳಿಸಲಾಗುತ್ತದೆ. ಒಳಗಿರುವ ಹೆಣ್ಣು ಗೂಡಿನ ತಳಭಾಗ ಸೇರಿಕೊಳ್ಳುವುದರೊ೦ದಿಗೆ ಸ೦ಪೂಣ೯ ಬ೦ಧಿಯಾಗಿಬಿಡುತ್ತದೆ. ಹೊರಗಿದ್ದ ಗ೦ಡು ಹಕ್ಕಿಗೆ, ಹೆಣ್ಣು ತಾನೀಗ ವ್ಯವಸ್ಥಿತವಾಗಿದ್ದೇನೆ ಎನ್ನುವ ಸ೦ದೇಶ ಕೊಡುತ್ತಿದ್ದ೦ತೆ ಹೊರ ಬಾಗಿಲನ್ನು ತನ್ನ ಅನುಕೂಲಕ್ಕೆ ತಕ್ಕಷ್ಟು ಮಾತ್ರ ಉಳಿಸಿಕೊ೦ಡು ಉಳಿದದ್ದನ್ನು ಇನ್ನಷ್ಟು ಭದ್ರಪಡಿಸಿಬಿಡುತ್ತದೆ. 
    ಇದಾದ ಎರಡು ಅಥವಾ ಮೂರನೆಯ ದಿನ ಹೆಣ್ಣು ಒ೦ದರಿ೦ದ ಎರಡು ಮೊಟ್ಟೆಗಳನ್ನಿಡುತ್ತದೆ. ಕೆಲವೊಮ್ಮೆ ಮೂರರಿ೦ದ ಐದು ಮೊಟ್ಟೆ ಇರಿಸುತ್ತದಲ್ಲದೆ, ಯಶಸ್ವಿಯಾಗಿ ಮರಿಯಾಗಿ ಹೊರಬ೦ದ ದಾಖಲೆಗಳೂ ಇವೆ. ಒಳಗಿದ್ದ ಹೆಣ್ಣಿಗೆ ಹೊರಗಿನಿ೦ದ ದಿನಕ್ಕೆ ಎ೦ಟರಿ೦ದ ಹತ್ತು ಬಾರಿ ಆಹಾರವನ್ನು ಕೊಕ್ಕಿನ ಮೂಲಕ ಪೂರೈಸುತ್ತ, ತನ್ನ ಕತ೯ವ್ಯ ಪೂರೈಸುತ್ತದೆ ಗ೦ಡು. ಹೆಣ್ಣು ಸುಮಾರು ಮೂವತ್ತು ದಿನ ಕಾವು ಕೊಟ್ಟು ಮರಿ ಮಾಡುತ್ತಿದ್ದ೦ತೆ ಆಹಾರ ಪೂರೈಕೆಯ ವಿಧ ಮತ್ತು ಸಮಯದಲ್ಲೂ ಬದಲಾವಣೆ ಮಾಡಿಕೊಳ್ಳುವ ಗ೦ಡು ಈಗ ದಿನಕ್ಕೆ ಸರಿ ಸುಮಾರು ಹದಿನಾರು ಬಾರಿ ವಿವಿಧ ರೀತಿಯ ಹಣ್ಣು, ಚೂಗರು ಸೇರಿದ೦ತೆ ಅಗತ್ಯದ ಅಹಾರ ಪೂರೈಕೆ ಮಾಡುತ್ತದೆ. ಪೊಟರೆಯಲ್ಲಿ ಮೆತ್ತೆಯ ಅಗತ್ಯತೆಗೆ ತನ್ನದೇ ಮ್ಯೆಯ ಗರಿಗಳನ್ನು ಉದುರಿಸುತ್ತ, ರೆಕ್ಕೆಪುಕ್ಕ ಕಳಚಿಕೊ೦ಡು, ಆಹಾರ ಕಡಿಮೆ ಮಾಡಿಕೊ೦ಡು, ದೇಹ ಗಾತ್ರವನ್ನೂ ಕುಗ್ಗಿಸಿಕೊ೦ಡು ಮರಿಗಳ ಪಾಲನೆ ಮಾಡುತ್ತ ಹೆಣ್ಣು ತೀರ ಇನ್ನೇನು ತೀರಿಬಿಡುತ್ತದೆನ್ನುವ ಹ೦ತ ತಲುಪಿರುವಾಗ ಮರಿಗಳು ಹೊರ ಪ್ರಪ೦ಚಕ್ಕೆ ಕಾಲಿಡಲು ತಯಾರಾಗುತ್ತವೆ.  
  ಹೊರಗಿನಿ೦ದ ಸ೦ದೇಶ ಸ್ವೀಕರಿಸುವ ಗ೦ಡು ಈಗ ಮತ್ತೊಮ್ಮೆ ಬಾಗಿಲನ್ನು ಕೊರೆದು ಅವುಗಳನ್ನು ಒ೦ದೊ೦ದಾಗಿ ಹೊರಕ್ಕೆ ಸಾಗಿಸುತ್ತದೆ. ಹೆಣ್ಣಿಗೆ ಆಹಾರ, ಭದ್ರತೆ ಇತ್ಯಾದಿಗಳ ಸ೦ಪೂಣ೯ ಕೌಟು೦ಬಿಕ ಪರಿಸರ ಒದಗಿಸುತ್ತದೆ. ಈ ಬಾರಿ ಎರಡೇ ವಾರದಲ್ಲಿ ಚಿಗಿತುಕೊಳ್ಳುವ ಹೆಣ್ಣು ಮತ್ತೊಮ್ಮೆ ಪುನಜ೯ನ್ಮ ಪಡೆದ೦ತೆ ಪೊಟರೆಯಿ೦ದ ಹೊರಬರುತ್ತದೆ. ಈಗ ಗು೦ಪಾಗಿ ಸ೦ಸಾರ ಸಾಗಿಸುವ ಮ೦ಗಟ್ಟೆ ಜೋಡಿ, ವಷ೯ದವರೆಗೆ ಮರಿಗಳನ್ನು ಪೋಷಿಸುತ್ತ, ಮತ್ತೆ ಹಳೆಯ ಪೊಟರೆ ಹುಡುಕಿ ಬರುತ್ತವೆ.
 
ದಾ೦ಪತ್ಯನಿಷೆ 
ಮೊದಲ ಬಾರಿ ನಿಮಿ೯ತ ಪೊಟರೆ ಸ೦ಪೂಣ೯ ನಾಶವಾಗುವವರೆಗೂ ಅಲ್ಲೇ ಸ೦ತಾನೋತ³ತ್ತಿ ಮಾಡುವ ಮ೦ಗಟ್ಟೆ ಜೀವಿತಾವ˜ಯಲ್ಲಿ ಕನಿಷ್ಠ 6ರಿ೦ದ 14 ಬಾರಿಯವರೆಗೂ ಇದನ್ನು ಪುನರಾವತಿ೯ಸುತ್ತದೆ. ಪ್ರತಿ ಆವತ೯ನೆಯಲ್ಲೂ ಯಾವತ್ತಿಗೂ ಜೋಡಿ ಬದಲಾಗುವುದಿಲ್ಲ. ದಾರುಣ ಎ೦ದರೆ ಸ೦ತಾನೋತ³ತ್ತಿಯ ಕಾಲದಲ್ಲಿ ಹೊರಗಿದ್ದ ಗ೦ಡು ಅಕಸ್ಮಾತ್ ಮರಣಕ್ಕೀ ಡಾದರೆ ಒಳಗಿದ್ದ ಹೆಣ್ಣು ಯಾವ ಕಾರಣಕ್ಕೂ ಹೊರಬರದೆ ಅಲ್ಲೇ ಜೀವ ಕೊಡುತ್ತದೆ. ಕೆಲವೊಮ್ಮೆ ಒಳಗಿದ್ದ ಹೆಣ್ಣು ಪೋಷಿಸುವ ಭರದಲ್ಲಿ ಮರಿಗಳಿಗಾಗಿ ರೆಕ್ಕೆ ಪುಕ್ಕ ಕಿತ್ತುಕೊ೦ಡು ಅಹಾರ ಕಡಿಮೆ ಮಾಡಿಕೊ೦ಡು ನಿಶ್ಯಕ್ತಿಯಾಗಿ ಅಥವಾ ಶತ್ರುದಾಳಿಗೆ ಸಿಕ್ಕಿ ಸಾಯುವುದೂ ಇದೆ. ಆಗ ಮರಿಗಳು ಕೂಡ ಹೊರಬರದೆ ಅಲ್ಲೇ ಸತ್ತು ಹೋದರೆ, ಹೊರಗಿದ್ದ ಮ೦ಗಟ್ಟೆ ಹೃದಯ ವಿದ್ರಾವಕವಾಗಿ ಕೂಗುತ್ತ ಕೆಲವು ದಿನದವರೆಗೆ ಏಕಾ೦ಗಿಯಾಗಿ ತಿರುಗಾಡಿ ಮಾಸದೊಳಗೇ ಜೀವ ಬಿಡುತ್ತದೆ. ಈ ಜೋಡಿಗಳ ದಾ೦ಪತ್ಯ ನಿಷೆ ಜಾಗತಿಕವಾಗಿ ಚಚೆ೯ಯಲ್ಲಿದೆಯಲ್ಲದೆ, ಇವತ್ತಿಗೂ ಕದಲದಿರುವ ಅದರ ನಿಷೆ ಮನುಕುಲಕ್ಕೂ ಮಾದರಿಯಾಗಿದೆ. 
 
 ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚು 
ಪ್ರಸ್ತುತ ಪಶ್ಚಿಮಘಟ್ಟ ಪ್ರದೇಶದಲ್ಲಿ ಅತಿ ಹೆಚ್ಚು ಮ೦ಗಟ್ಟೆಗಳಿದ್ದು; ನೇಪಾಳ, ಶ್ರೀಲ೦ಕಾ, ಇ೦ಡೋನೇಷ್ಯಾದಲ್ಲಿ 7-8 ಪ್ರಭೇದಗಳ ಮ೦ಗಟ್ಟೆಗಳಿವೆ. ಈಶಾನ್ಯರಾಜ್ಯದ ನಾಗಾ ಬುಡುಕಟ್ಟುಗಳಲ್ಲಿ ಇದರ ರೆಕ್ಕೆಪುಕ್ಕಗಳಿಲ್ಲದೆ ಹಬ್ಬದ ದಿನ ವೇಷಭೂಷಣಗಳು ಪೂಣ೯ಗೊಳ್ಳುವುದಿಲ್ಲ. ಹಾಗಾಗಿ ಈಶಾನ್ಯ ರಾಜ್ಯದಲ್ಲಿ ಬೇಟೆ ಅವ್ಯಾಹತ. ಬಮಾ೯ ರಾಜಪತಾಕೆಯಲ್ಲಿ ಮ೦ಗಟ್ಟೆಗೆ ಶಾಶ್ವತ ಸ್ಥಾನವಿದ್ದು, ಮೊದಲೆರಡು ವಷ೯ದ ಯುವ ಮ೦ಗಟ್ಟೆ ಮಾ೦ಸಕ್ಕೆ ಅಪಾರ ಬೇಡಿಕೆ ಇದೆ. ಅನಿಮಾಲಿಯಾ ಗು೦ಪಿನ ಕೋಡಾ೯ಟ್ ಪ್ರಭೇದದಲ್ಲಿ ಬ್ಯೂಸೆರೋಟೆಡಿಯಾ ಕುಟು೦ಬಕ್ಕೆ ಸೇರಿದ ಹಕ್ಕಿಯಾಗಿ ಗುರುತಿಸಲಾಗಿದ್ದು ಇದನ್ನು ಅವೇಸ್‍ನ ಗು೦ಪಿನಲ್ಲಿ ವಗೀ೯ಕರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಈಗ ಇವುಗಳ ಗಲಾಟೆಯಿ೦ದ ತು೦ಬಿಹೋಗುತ್ತಿದ್ದು; ಹೊ೦ಡಗದ್ದೆ, ಬಿರೂರು, ಬಾರೆ, ಕೈಗಾ, ಕದ್ರಾ, ಅಣಶಿ, ಬರಪಾಲಿ, ಬಿಡೋಲಿ, ಜಾಲವಳಿ, ದುದಗಾಳಿ, ಖಾಮಸೆತಡಿ, ನುಜ್ಜಿ, ಮಾಸೇತ್, ಕು೦ಬಾರವಾಡ, ಜೋಯಿಡಾ ಸೇರಿದ೦ತೆ ಕಾಳಿಹುಲಿ ಸ೦ರಕ್ಷಿತ ವಲಯ ಈಗ ಸ೦ಪೂಣ೯ ಸುರಕ್ಷತೆಯನ್ನು ಕೊಡುತ್ತಿದ್ದುದರಿ೦ದ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.

Wednesday, January 27, 2016



ಜಗತ್ತಿನ ಅಷ್ಟೂ ಒಳ್ಳೆಯತನ ಅವಳದ್ದೇ...
ಇಂಥಾ ಚೆಂದದ ಮನಸ್ಸು ಮತ್ತು ತ್ಯಾಗ ಹೆಣ್ಣುಮಕ್ಕಳಿಗೆ ಮಾತ್ರ ಹೆಂಗೆ ಬರುತ್ತದೋ..? ಆ ಆರ್ದ್ರತೆ ಮತ್ತು ತಾಯ್ತನ ಎನ್ನುವುದು ಅವಳ ಆತ್ಮದೊಂದಿಗೇ ಇರುವ ಸತ್ತ್ವವೇನೋ. ತೀರ ಜೀವನದ ಆಖೈರಿನವರೆಗೂ ಬದ್ಧತೆ ತೋರುವುದು ಆಕೆಯಿಂದ ಮಾತ್ರ ಸಾಧ್ಯವಾ..?
ಇವತ್ತಿಗೂ ತೀರ ಸಂಯಮದಿಂದ, ಇದ್ದುದರಲ್ಲಿ ಅದ್ಭುತ ಆನಂದದಿಂದ ದಿನಗಳನ್ನು ಕಳೆದುಬಿಡಲು ಕಾರಣ ನಾಳಿನದ್ದು ನನಗೆ ಗೊತ್ತಿಲ್ಲ. ಅದಕ್ಕಿಂತಲೂ ಇವತ್ತಿನ ದಿನವನ್ನು ಚೆಂದವಾಗಿ ಕಳೆದಲ್ಲಿ ಮಾತ್ರವೇ, ನಾಳೆಗಳು ಇನ್ನೂ ಅದ್ಭುತವಾಗಿರುತ್ತವೆ ಎನ್ನುವುದರಲ್ಲಿ ಅಪೂಟ ನಂಬಿಕೆ ಇರಿಸಿದವನು ನಾನು. ಆದರೆ ಕೆಲವೊಮ್ಮೆ ನಮಗೇ ಗೊತ್ತಿಲ್ಲದೆ ಅದೃಷ್ಟ ಕೈಕೊಟ್ಟಿರುತ್ತದಲ್ಲ ಅವರಿಗೆ ಮಾತ್ರ ದಿನಗಳೆಯುವುದಿರಲಿ, ಗಂಟೆಗಳೂ ಕೈಹಿಡಿಯುವುದಿಲ್ಲ. ಯಾವಾಗ ಈ ಲೋಕದಿಂದ ಎದ್ದು ಹೋಗುತ್ತೇವೆಯೋ ಎನ್ನುವುದಕ್ಕೇ ಕಾಯುತ್ತಿರುತ್ತಾರೆ. ಆದರೆ ಅದ್ಯಾವುದೂ ಅವರ ಕೈಯ್ಯಲ್ಲೂ ಇರುವುದಿಲ್ಲ. ದುರದೃಷ್ಟ ಬೆನ್ನಿಗೆ ಬಿದ್ದಾಗ ಬದುಕು ದುರ್ಭರವೂ ಅಗಿಬಿಟ್ಟಿರುತ್ತದೆ.
ಬದುಕಿನ ದೀರ್ಘ ದಾರಿಯ ಮಧ್ಯೆ ಹಳಿತಪ್ಪಿದ್ದ ಚಂದುಕಾಕನ ಬದುಕು ಯಾಕೋ ತಡವಾದರೂ ಪರವಾಗಿಲ್ಲ ಎನ್ನುವ ಹಂತಕ್ಕೆ ಬರುವ ಹೊತ್ತಿಗೆ ಹುಡುಗಿ ಕೈಗೆ ಬಂದಳು. ಅಪ್ಪ, ಮಗಳಿಗೆ ಒಬ್ಬರಿಗೊಬ್ಬರು ಸಂತೈಸಿಕೊಂಡು ಬದುಕುವುದು ಅಭ್ಯಾಸವಾಗಿಬಿಟ್ಟಿತ್ತಾ ಅಥವಾ ಅಭ್ಯಾಸ ಮಾಡಿಕೊಂಡಿದ್ದರಾ ಗೊತ್ತಿಲ್ಲ. ಅದರೆ ದಿವೀನಾಗಿ ಮಗಳೊಂದಿಗೆ ಯಾವ ಬಾಧೆಯೂ ಬರದಂತೆ ಚಂದುಕಾಕ ಗ್ಯಾರೇಜು ಕೆಲಸ ಇತ್ಯಾದಿಗಳೊಂದಿಗೆ ಸಮಯ ಅಳತೆ ಮಾಡುತ್ತ ಕಳೆಯತೊಡಗಿದ್ದ.
ಹುಡುಗರೂ ಕೈಯ್ಯಲ್ಲಿ ಪಳಗಿದ್ದುದರಿಂದ ಚಂದೂಕಾಕ ಮತ್ತು ಪುಟ್ಟಿ ನೀಸೂರಾಗಿದ್ದಂತೆ ಕಾಣಿಸುತ್ತಿತ್ತು. ಈ ಮಧ್ಯೆ ನಾನು ಎಲ್ಲೆಲ್ಲೋ ತಿರುಗಿ ವಾಪಸ್ ಇಲ್ಲೇ ಬಂದು ಕಾಲೂರುವ ಹೊತ್ತಿಗೆ ದಶಕಗಳೇ ಉರುಳಿದ್ದವು. ಹಾಗೆಯೇ ಚಂದುಕಾಕ ಮತ್ತು ಪುಟ್ಟಿ ಮರೆತಿರಲಿಲ್ಲವಾದರೂ ಕಣ್ಣಿಂದ ದೂರಾದವರೂ ಮನಸ್ಸಿನಿಂದನೂ ದೂರವಾಗೋದು ಸಹಜ ಎನ್ನುವಂತೆ, ಸ್ಟೇರಿಂಗ್ ಮತ್ತು ಗೇರಿಗೆ ಕೈಹಾಕುವಾಗೆಲ್ಲ ಚಂದುಕಾಕ ನೆನಪಾಗುತ್ತಿದ್ದನಾದರೂ ಸಂಪರ್ಕ ತಪ್ಪಿ ಹೋಗಿತ್ತು. ಆತ ಮನಸ್ಸಿಗೆ ನಾಟುವಂತೆ ಕಲಿಸಿದ್ದ ಡ್ರೈವರಿಕೆಗೆ ಇವತ್ತೂ ನನ್ನದೊಂದು ಕೃತಜ್ಞತೆ ಸಲ್ಲಿಸದಿದ್ದರೆ ಅಷ್ಟರಮಟ್ಟಿಗೆ ಕೃತಘ್ನನಾದೇನು.
‘ಹೆಂಗದಿಪಾ..? ನನ್ನ ನೆನಪ ಅದ ಏನೂ..’ ಎನುತ್ತಾ ಆವತ್ತು ಕರೆ ಬಂದಾಗ ಸರಿಯಾಗಿ ನಡುರಾತ್ರಿಗೆ ಇನ್ನರ್ಧ ಗಂಟೆ ಮಾತ್ರ ಬಾಕಿ ಇತ್ತು. ಇಷ್ಟು ಹೊತ್ತಿನಲ್ಲಿ ಯಾರು ಎಂದುಕೊಳ್ಳುತ್ತಲೇ ನಾನು ‘ನೆನಪಾಗ್ಲಿಲ್ಲ ಕ್ಷಮಾ ಮಾಡ್ರಿ.ಯಾರು ಮಾತಾಡೋದು..?’ ಎನ್ನುತ್ತಿದ್ದರೆ..
‘ಹ್ಹ..ಹ್ಹ... ಅನ್ಕೊಂಡ್ನಿ ನೆನಪಿರಲಿಕ್ಕಿಲ್ಲ ಧ್ವನಿ ಗುರುತು ಹಿಡಿಲಿಕ್ಕಿಲ್ಲ ಅಂತ. ಆದರ ಮೊನ್ನೆ ನೀ ಸ್ಟೇಜ್ ಮ್ಯಾಲೆ ಊರ ಬಗ್ಗೆ, ಸಾಲಿ ಬಗ್ಗೆ ಮಾತಾಡಿದ್ದು ಮಾತ್ರ ಭೇಷಾಗಿತ್ತು ನೋಡಪಾ.. ಏನ ಅಂದರೂ ಊರ ಮಕ್ಳು ನೆನಸ್ಕೊಂಡಾಗ ಆಗೋ ಖುಷಿನ ಬ್ಯಾರೇ..’ ಎನ್ನುತ್ತಿದ್ದರೆ ವರ್ಷಗಳ ಹಿಂದೆ ‘ಹಳಿಯಾಳದ ಹಬ್ಬ’ದಲ್ಲಿ ಶಾಲು ಸನ್ಮಾನ, ನನ್ನ ಪರಾಕು ಇತ್ಯಾದಿಗಳೆಲ್ಲ ಮುಗಿದ ಮೇಲೆ ವೇದಿಕೆಯ ಕೆಳಗೆ ಪ್ರೀತಿಯಿಂದ ಸಿಕ್ಕಿದವರನ್ನೆಲ್ಲ ನೆನಪಿಸಿಕೊಂಡೆ. ಅದರಿಲ್ಲಿದ್ದವರಾರೂ ಇವರಲ್ಲ ಎನ್ನಿಸಿತು. ಉಹೂಂ ನೆನಪಾಗಲಿಲ್ಲ.‘ಬೇಜಾರಾಗಬ್ಯಾಡ್ರಿ ಯಾರಂತ ನೆನಪಾಗವಲ್ದು..’ ಎನ್ನುತ್ತಿದ್ದಂತೆ, ‘ಇರ್ಲಿ ಬಿಡ್ರಿ. ಆವತ್ತು ನಾನು ದೂರ ಇದ್ದೆ. ಅಲ್ಲಿಗಂಟ ಬಂದ ಮಾತಾಡ್ಸೊ ಹಂಗೂ ಇರಲಿಲ್ಲ. ಗಾಡಿ ಹೊಡಿಯೋದು ಮರತಿಲ್ಲ ಹೌದಿಲ್ಲೋ.’ ಎನ್ನಬೇಕೆ..? ಚಂದುಕಾಕ. ಅದೆಂಗೆ ಮರೆತೇನು..?ಒಂದಿಷ್ಟು ಮಾತಾಡಿ ಎಲ್ಲಿದ್ದಾರೆಂದು ವಿಚಾರಿಸಿಕೊಂಡೆ.
ಕಾಲಾಂತರದಲ್ಲಿ ಆದ ಬದಲಾವಣೆಯಲ್ಲಿ ಚಂದುಕಾಕ ಗ್ಯಾರೇಜು ಮುಚ್ಚಿ ಮಗಳೊಂದಿಗೆ ನಗರಕ್ಕೆ ಹೋಗಿ ನೆಲೆಸಿದ್ದಾನಂತೆ. ಇನ್ನೇನು ಮಗಳ ಮದುವೆಗೆ ಓಡಾಡುತ್ತಿದ್ದಾನಿರಬೇಕು. ಧ್ವನಿಯಲ್ಲಿ ಸಂಭ್ರಮ. ನಾನೂ ಖುಷಿಗೊಳ್ಳುತ್ತ ‘ಪುಟ್ಟಿ ಮದ್ವಿಗೂ ಮದಲ ಬರೋನೇಳು ಕಾಕ. ಹೇಳಿಬಿಡ್ರಿ..’ ಎಂದು ಇರಿಸಿದ್ದೆ. ನಂತರದ ಓಡಾಟದಲ್ಲೂ ಆಗೀಗ ಚಂದುಕಾಕ ನೆನಪಾಗುತ್ತಿದ್ದರೂ ಹೋಗುವುದಾಗಿರಲೇ ಇಲ್ಲ. ಆವತ್ತೊಂದಿನ ಹುಬ್ಬಳ್ಳಿಗೆ ಹೋದವನು ಅಚಾನಕ್ ಆಗಿ ಆತ್ತ ಕಡೆ ಕಾರು ನಡೆಸಿದ್ದೆ. ಕರೆ ಮಾಡಿ ಸರಿಯಾದ ಅಡ್ರೆಸ್ಸು ಕೇಳಿಕೊಂಡು ಮನೆ ತಲುಪಿದಾಗ ಮಧ್ಯಾಹ್ನ ಊಟದ ಹೊತ್ತು.
ಥೇಟ್ ಕಕ್ಕಿಯ ರೂಪ ಮತ್ತು ಎತ್ತರದ ಹುಡುಗಿಯನ್ನು ಗುರುತಿಸುವುದು ಕಷ್ಟವಾಗಲಿಲ್ಲ. ಪುಟ್ಟಿ ಸಮಾ ಎದೆಯೆತ್ತರಕ್ಕೆ ಬೆಳೆದು ನಿಂತಿದ್ದಾಳೆ. ಚೆಂದಗೆ ಕಂಪ್ಯೂಟರ್ ಓದಿಕೊಂಡು ತುರ್ತಿಗೂ, ಅನುಭವಕ್ಕೀಡಾಗಲು ಸಾಕು ಎಂಬಂತೆ ಕೆಲಸವೊಂದನ್ನು ಹುಡುಕಿಕೊಂಡಿದ್ದಾಳೆ. ಎರಡು ನಿಮಿಷದಲ್ಲಿ ಹುಡುಗಿ ಚಹಾ ಮಾಡಿಕೊಂಡು ಬಂದಳು. ಕಾಕ ಕಾಣಿಸುತ್ತಿಲ್ಲ ಎನ್ನುತ್ತಿದ್ದರೆ,‘ಅಪ್ಪ ಮಲ್ಗಿದಾನೆ. ಎಬ್ಬಿಸ್ತೇನಿ ಇರ್ರಿ’ ಎನ್ನುವಷ್ಟರಲ್ಲಿ ಒಳಗಿನಿಂದ ‘ಯಾರೂ’ ಎನ್ನುವ ಚಂದುಕಾಕನ ಧ್ವನಿ ಕೇಳಿಬಂತು. ಮುಂದಿನ ಹತ್ತು ನಿಮಿಷದಲ್ಲಿ ವ್ಹೀಲ್ ಚೇರ್ ಮೇಲೆ ಕೂತಿದ್ದ ಚಂದುಕಾಕ ಗಾಲಿಯುರುಳಿಸುತ್ತಾ ಹೊರಬಂದ.
‘ಕಾಕ..’ ಎನ್ನುತ್ತಾ ನಿಂತುಬಿಟ್ಟೆ. ಇಳಿದುಹೋದ ಮುಖ, ಅರ್ಧಮರ್ಧ ಇರುವ ಎಡಗೈ, ಬಕ್ಕ ತಲೆ, ಅದಕ್ಕಿಂತಲೂ ಬದುಕು ಇನ್ಯಾವತ್ತೂ ಗಾಡಿಯ ಮೇಲೆ ಕೂರದಂತಾಯಿತಲ್ಲ ಎಂಬ ಮುಖದಲ್ಲೇ ವ್ಯಕ್ತವಾಗುತ್ತಿದ್ದ ದೀನಭಾವ. ಯಾಕೋ ಒಮ್ಮೆ ಹಳೆಯ ಕಾಕಾನ ವೇಗಗಳೆಲ್ಲ ನೆನಪಾಗಿ ನೇರವಾಗಿ ಚಂದುಕಾಕನ ಕಣ್ಣುಗಳನ್ನು ದಿಟ್ಟಿಸಲಾಗಲೇ ಇಲ್ಲ. ಸುಮ್ಮನೆ ಅವನ ಪಕ್ಕ ಕೂತು ಜೀವವಿಲ್ಲದ ಕೈ ಸವರುತ್ತಿದ್ದರೆ ಇದಕ್ಕೆ ಪಕ್ಕಾಗಿದ್ದ ಪುಟ್ಟಿ ಮಾತ್ರ ‘ಮಾಮ ಇದೆಲ್ಲ ತಲೀಗ ಹಚ್ಕೊಬ್ಯಾಡ್ರಿ. ಊಟಕ್ಕೆ ಏಳ್ರಿ..’ ಎನ್ನುತ್ತಿದ್ದಳು. ಆಗಿದ್ದಿಷ್ಟು, ಕಾಕಿ ಹೋದ ಮೇಲೆ ಜೊತೆಜೊತೆಗೆ ಮಗುವನ್ನು ಬೆಳೆಸುತ್ತಾ ಬದುಕು ಕಟ್ಟಿಕೊಂಡ ಚಂದುಕಾಕ. ಮಗಳು ವಯಸ್ಸಿಗೆ ಬರುವವರೆಗೂ ಯಾವ ರೀತಿಯಲ್ಲೂ ಅದಕ್ಕೆ ನೋವಾಗದಂತೆ ಅಪ್ಪಟ ಅಮ್ಮನಾಗಿ ಬೆಳೆಸಿದ. ಅಪ್ಪನಾಗಿ ಜೊತೆಯಾದ. ಪುಟ್ಟ ಹುಡುಗಿಗೆ ಥೇಟು ಹುಡುಗಾಟದ ಸ್ನೇಹಿತನಂತೆ ಚಂದುಕಾಕ ಜೊತೆಗಿದ್ದ. ಹುಡುಗಿ ವಯಸ್ಸಿಗೂ ಮೊದಲೇ ಅಪ್ಪನಂತೆ ಗಾಡಿ ಕಲಿತಳು. ಕಾರು, ಗಾಡಿಗಳೆಲ್ಲ ಪಳಗಿದವು. ಶಾಲೆಯಲ್ಲೂ, ಸಮಾಜದಲ್ಲೂ ಅಮ್ಮನಿಲ್ಲದ ಮಗುವಿಗೆ ಸಿಗಬೇಕಾದ ಕನ್ಸೆಷನ್ ಸಿಕ್ಕುತ್ತಿದ್ದುದರಿಂದ ಪುಟ್ಟಿ, ಕಾಕಿಯ ನೆನಪು ಮತ್ತು ಆರ್ದ್ರತೆಯಿಂದ ಹೊರಬಂದರೂ ಹಬ್ಬಹರಿದಿನಗಳಲ್ಲಿ ಎಲ್ಲ ಮಾಡಿಕೊಂಡು ಕೂರುತ್ತಿದ್ದರೆ ಪಕ್ಕನೆ ಆಕೆಯ ಗೈರುಹಾಜರಿ ಅವರಿಬ್ಬರನ್ನೂ ಕಾಡುತ್ತಿತ್ತು. ಅದ್ಯಾಕೋ ತುಂಬಿದ ಮನೆ ಒಮ್ಮೆಲೇ ಖಾಲಿಯಾದಂತೆನ್ನಿಸಿ ಇಬ್ಬರೂ ಕಣ್ಣೀರಾಗುತ್ತಿದ್ದರು. ಎದ್ದೊಡನೆ ಅಮ್ಮನ ಪಟಕ್ಕೆ ಕೈ ಮುಗಿದು ಹುಡುಗಿ ಶಾಲೆಗೆ ಹೊರಡುತ್ತಿದ್ದರೆ ಕಾಕ ಒದ್ದೆಯಾಗುತ್ತಿದ್ದ. ಆಕೆಯಿಲ್ಲದ ಮನೆ, ಮನಸ್ಸು ಏನೂ ಮಾಡಿದರೂ ತುಂಬುತ್ತಿರಲಿಲ್ಲ. ಇನ್ನಾಕೆ ಇಲ್ಲ ಎನ್ನುವುದರ ಅರಿವು ಇದ್ದರೂ ಕಾಕಿ ಉಳಿಸಿದ್ದ ಗುರುತು ಅಷ್ಟು ಸುಲಭಕ್ಕೆ ಮಾಯುವಂಥದ್ದಾಗಿರಲಿಲ್ಲ.
ಪುಟ್ಟಿ ಓದಿಕೊಂಡು ಇನ್ನೇನು ಕೊನೆಯ ವರ್ಷದ ಪರೀಕ್ಷೆಗೆ ತಯಾರಾಗುತ್ತಿದ್ದಳು. ಕಾಕ ಈಗ ಗ್ಯಾರೇಜಿನಲ್ಲಿ ಮತ್ತೆ ಬಿರುಸಾಗಿದ್ದ. ಆದರೆ ಸಮಯ ಮತ್ತೊಮ್ಮೆ ಕೈಕೊಟ್ಟಿತ್ತು. ಆವತ್ತು ಟ್ರಯಲ್ಲಿಗೆ ಹೋದ ಗಾಡಿಯೊಂದಿಗೆ ಕಾಕ ವಾಪಸ್ ಬರಲಿಲ್ಲ. ಅವನ ಪುಟಾಣಿ ಮಾರುತಿಯ ಮೇಲೆ ಯಮವೇಗದಿಂದ ಬಂದ ಟಿಪ್ಪರು ಹತ್ತಿ ಬಿಟ್ಟಿತ್ತು. ಹುಡುಗ ಓಡುತ್ತ ಬಂದು ಪುಟ್ಟಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಮಾರುತಿಯಿಂದ ಹೊರಗೆಳೆಯುವಾಗ ಕಾಲುಗಳೆರಡೂ ಅಪ್ಪಚ್ಚಿಯಾಗಿ ನರಗಳು ಲಾಡಿಯಂತೆ ನೇತಾಡುತ್ತಿದ್ದವು. ಕಾರಿನಲ್ಲಿ ಹೋಗಿದ್ದ ಕಾಕ ಮನೆಗೆ ಬರುವಾಗ ಯಾವ ಲೆಕ್ಕದಲ್ಲೂ ರಿಪೇರಿಯಾಗದೆ ಗಾಲಿಕುರ್ಚಿಯಲ್ಲಿ ಬಂದಿದ್ದ. ಬಗಲು ಕೋಲಿಡಿದು ಮನೆ ಮಟ್ಟಿಗೆ ನಡೆಯುತ್ತನಾದರೂ ಮೊದಲಿನ ಬದುಕಿರಲಿಲ್ಲ. ಇತ್ತ ಪರೀಕ್ಷೆ, ಅತ್ತ ಅಪ್ಪನ ಜವಾಬ್ದಾರಿ, ಆರೈಕೆ, ದವಾಖಾನೆ, ಓಡಾಟ ಎಲ್ಲವನ್ನು ಹುಡುಗಿ ಪೂರೈಸಿದ್ದಳು. ಗ್ಯಾರೇಜ್ ಹುಡುಗರನ್ನಿಟ್ಟುಕೊಂಡು ಪುಟ್ಟಿ ತಿಂಗಳೊಪ್ಪತ್ತಿನಲ್ಲಿ ಸಂಭಾಳಿಸಿದ್ದಳು. ಆದರೆ ಕಾಕನ ಗಾಡಿಯ ಬದುಕಿನ ಮಜಲು ಕಾಯಂ ಆಗಿ ಮುಗಿದು ಹೋಗಿತ್ತು. ಆವತ್ತು ಕಳೆದ ಜೀವನೋತ್ಸಾಹ ಇವತ್ತಿಗೂ ಕಾಕನ ಮುಖದಲ್ಲಿ ಮೂಡಿಸಲಾಗುತ್ತಿಲ್ಲ. ಮಗಳು ದಂಡೆಗೆ ಹತ್ತಿದ, ಜವಾಬ್ದಾರಿ ಕಳೆಯುವ ಸಂತೃಪ್ತಿ ಕಾಣುತ್ತದೆಯಾದರೂ ಪೂರ್ತಿ ಬದುಕಲ್ಲಿ ಏಟಿನ ಮೇಲೇ ಏಟು ಬಿದ್ದು ಹಣ್ಣಾದಾಗ ಆಗುವ ಯಾತನೆ ಮಾತ್ರ ಮನಸ್ಸಿಗೆ ಗೊತ್ತಾಗುವಂಥದ್ದು.
‘ಮೊದಲ ಆಕಿ ಹೋದಳು. ಈಗ ಹಿಂಗಾತು. ಒಂದು ಹೇಳ್ ತಮ್ಮಾ, ಈ ಹೆಣ್‌ಮಕ್ಕಳಿಗೆ ಹೆಂಗಾದರ ಇಂಥಾ ಶಕ್ತಿ ಬರತದ..? ನಮ್ಮಾಕಿ ಹೋಗಿದ್ದ... ನನಗಿನ್ನೂ ಅರವಗಲ್ದು ಆದರ ಈ ಪುಟ್ಟಿ ನೋಡು. ನನ್ನ ಪರಿಸ್ಥಿತಿ ಹಿಂಗಾಗಿದ್ದಕ್ಕ ನಾ ಇರೋತಂಕ ಮದ್ವಿನೂ ಬ್ಯಾಡ ಅಂತಾ ಕುಂತಾಳು. ಹಿಂಗಂದರ ಆಗ್ತದೇನೋ..? ನಾನೇನೋ ಬಿದ್ದು ಹೋಗೋ ಮರ. ಗ್ಯಾರೇಜ್ ಹುಡುಗೋರು ಒಬ್ರಲ್ಲ ಒಬ್ರು ನನ್ನ ನೋಡ್ಕೋತಾರು. ಅಗದೀ ಎದ್ದು ಓಡಾಡೋದಿಲ್ಲ ಖರೆ. ಆದರೂ ಮನಿಮಟ್ಟಿಗ ಕೋಲು ಸಾತ್ ಕೊಡ್ತದ ಸಾಕು, ಹೆಂಗರೆ ನನ್ನ ಟೈಮ್ ಮುಗಿತದ ಅಂದರ ಪುಟ್ಟಿ ಏಕ್‌ದಂ ಹಿರೇರಗತೇ ಆಡತಾಳು. ನಿನ್ನ ಯಾರು ನೋಡ್ಕೊತಾರು..?’ ಅಂತಾಳ ಮಾರಾಯ ಥೇಟ್ ಅವರವ್ವನಂಗ. ಗದರೋದರಾಗಂತೂ ಒಂದು ಕೈಮುಂದ..’ ಎನ್ನುತ್ತಿದ್ದರೆ,
 ‘ಸುಮ್ನಿರಪ್ಪ. ಬಂದಾವ್ರ ಮುಂದೆಲ್ಲ ಇದ ಕತೀ ಹೇಳ್ತಿಯಲ್ಲ. ಅಪ್ಪಂಗ ಅರ್ಜೆಂಟ್ ಆಗಿ ನನ್ನ ಮದ್ವಿ ಮಾಡಿ ಕಳಿಸ್ಬೇಕಾಗೇದ ನೋಡ ಮಾಮಾ..’ ಎನ್ನುತ್ತಿದ್ದರೆ ಇಬ್ಬರ ಯಾವ ಭಾವಕ್ಕೂ ಪ್ರತಿಕ್ರಿಯಿಸದ ನಾನು ಸುಮ್ಮನೆ ಕುಳಿತಿದ್ದೆ. ಮನೆಯ ಹೆಣ್ಣುಮಕ್ಕಳಿಗಾಗಿ ಮರುಗುತ್ತಿರುವ ಕಾಕ, ತಾನು ಹೋದರೆ ಮುಂದೆ ಅಪ್ಪನ ಗತಿಯೇನು ಎನ್ನುವ ಮಗಳು.. ಇಷ್ಟು ಚೆಂದದ ಮನಸ್ಸು ಮತ್ತು ಆತ್ಮ ಅವಳಿಗೆ ಮಾತ್ರ ಇರಲು ಸಾಧ್ಯವೇನೋ..?
ಕಾರಣ
ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)