ಕಪ್ಪುಬಿಳುಪಿನ ವರ್ಣ ಸಾಂಗತ್ಯ...
ಬಹುಶಃ ಚೆಂದ ಮತ್ತು ಬಣ್ಣ ಎನ್ನುವುದು ಸಾರ್ವತ್ರಿಕವಾಗಿ ಆವರಿಸಿಕೊಂಡಿರುವ ಪಿಡುಗು. ಬದುಕಿನಲ್ಲಿ ಬಣ್ಣ ಮತ್ತು ರೂಪ ವಹಿಸಿದಷ್ಟು ದೊಡ್ಡಪಾತ್ರ ಇನ್ನಾವುದೂ ವಹಿಸಿರಲಿಕ್ಕಿಲ್ಲ. ಆದರೆ ಜೀವನದ ಐನ್‌ಟೈಮಿನಲ್ಲಿ, ದುರ್ಬರ ಘಳಿಗೆಗಳಲ್ಲಿ ಆರ್ದ್ರತೆ ಹೊರತಾದ ವಾಸ್ತವ ಇನ್ನೊಂದಿಲ್ಲ.
ಚೆಂದ ಇದ್ದವರು ಮೆರೆದಾಡುವುದು ಸಹಜವೇ ಆಗಿರುವ ಕಾಲದಲ್ಲಿ, ಏನೂ ಇಲ್ಲದಿರುವವರೂ ಇವತ್ತು ಸೆಲಿಗೆ, ಪ್ರೊಫೈಲ್ ಪಿಕ್‌ಗೆ ಇಂತಿಷ್ಟು ಲೈಕು, ಪೋಸುಗಳಲ್ಲಿ ಮೈಮರೆಯುವಾಗ, ಮಿಲಿಟರಿಗೊಂದು ಸೆಲ್ಯೂಟು, ನಾಯಿಗೊಂದು ಮುದ್ದು ಎನ್ನುವ ಹಲ್ಕಿರಿತದ ಅಪಸವ್ಯಗಳಲ್ಲಿ, ಬಾಡಿಗೆ ಬೂಟಿನೊಂದಿಗೆ ಬೊಗಳೆ ಬದುಕಿನ ಸೌಂದರ್ಯ ಪ್ರದರ್ಶಿಸುವವರು, ತೀರಾ ವಯಸ್ಸಿನ ಪರಿವೆಯೇ ಇಲ್ಲದೆ ಬೆಡ್‌ರೂಮ್ ನಿಲುಮೆಗಳೊಂದಿಗೆ ಐಡೆಂಟಿಟಿ ಕಂಡುಕೊಳ್ಳುತ್ತ, ಮನಸ್ಸಿನ ಕತ್ತಲೆಗಳ ಬೆತ್ತಲೆತನಗಳನ್ನೂ ಒಬ್ಬೊಂಟಿ ಬದುಕಿನಲ್ಲಿ ಕಳೆದುಕೊಳ್ಳುವಾಗ ವಾಸಂತಿಯಂಥವರು ವಾಸ್ತವದಲ್ಲಿ ಜೀವನದ ಅವಗಾಹನೆಯನ್ನೇ ಬದಲಿಸಿಬಿಡುತ್ತಾರೆ. ಕಾರಣ ಸೌಂದರ್ಯ, ಥಳಕು, ವರ್ಷಕ್ಕೊಮ್ಮೆ ಬದಲಿಸುವ ಸಾಂಗತ್ಯಗಳ ಹೊರತಾಗಿಯೂ ಬದುಕಿನೆಡೆಗೂ, ಅದು ಕದಲಿಸುವ ಪಥದಲ್ಲಿ ಮೂಡಿಸುವ ಹೆಜ್ಜೆಗಳೂ ಇವೆಯಲ್ಲ ಅವು ಇವತ್ತಿಗೂ ನಮ್ಮನ್ನು ಧನಾತ್ಮಕದೆಡೆಗೆ ಪ್ರೇರೇಪಿಸುತ್ತಿವೆ.
ಏನೆಲ್ಲ ಇದ್ದರೂ ಸೌಂದರ್ಯ ಎನ್ನುವುದು ಇಷ್ಟೂ ಮುಖ್ಯವಾಗುತ್ತದಾ ಎನ್ನಿಸಿದ್ದು ವಾಸಂತಿಯನ್ನು ಮಗದೊಮ್ಮೆ ಎರಡು ದಶಕಗಳ ನಂತರ ಭೇಟಿಯಾದಾಗಲೇ. ಆದರೆ ಆಕೆ ಅದೆಲ್ಲವನ್ನೂ ಮೀರಿ ಬದುಕಿನಲ್ಲಿ ಕಾಲೂರಿ ನಿಂತ ತಾಕತ್ತಿದೆಯಲ್ಲ ಅದು ಬಹುಶಃ ಬದುಕಿನ ಬಣ್ಣಗಳನ್ನೂ ಚೆಂದಗಳನ್ನೂ ಅನಾವರಣಗೊಳಿದ್ದು ಎಂದರೂ ತಪ್ಪಿಲ್ಲ.
ಮನೆಯಲ್ಲಿ ನಾಲ್ಕು ಜನರ ತುಂಬು ಮಕ್ಕಳಿನ ಕುಟುಂಬದಲ್ಲಿ ಮೂರನೆಯ ಹುಡುಗಿಯಾಗಿ ಬೆಳೆದ ವಾಸಂತಿ ಅದ್ಯಾಕೋ ಹುಟ್ಟುತ್ತಲೇ ಡಾಂಬರು ಕುಡಿದಂತಿದ್ದಳು. ಅದರಲ್ಲೂ ಮೂರನೆಯದ್ದೂ ಹೆಣ್ಣೇ ಎಂದು ಮಾತು ಅರಿಯುವ ಮೊದಲೇ ಮೂದಲಿಕೆಗಳನ್ನು ಆಲಿಸಬೇಕಾಗಿ ಬಂದಿದ್ದು ಆಘಾತಕಾರಿ. ಮೊದಲಿನವೆರಡು ಅಪ್ಪಟ ಅವರಮ್ಮನ ಪಡಿಯಚ್ಚಾಗಿದ್ದರೆ ಈ ಹುಡುಗಿ ಮಾತ್ರ ಅದ್ಯಾಕೋ ಅವರ ವಂಶಸ್ಥರಲ್ಲಿಯ ಯಾವುದೋ ನಿರ್ದಿಷ್ಟ ಜೀನಿನ ತೆಕ್ಕೆಗೆ ಸಿಕ್ಕು ಬಣ್ಣ ಮತ್ತು ಬದುಕು ಎರಡಕ್ಕೂ ಕಪ್ಪು ಪರದೆ ಎಳೆದುಕೊಂಡುಬಿಟ್ಟಿದ್ದಳು. ಇವಳ ಹಿಂದೇನೇ ಅದರಲ್ಲೂ ಕೆಂಪು ಕೆಂಪು ಗಂಡು ಮಗು ಹುಟ್ಟಿದ ಮೇಲಂತೂ ವಾಸಂತಿ ಹುಟ್ಟಾ ಅನಾದರಕ್ಕೊಳಗಾಗಿದ್ದು, ಸಮಾಜದ ರೋಗಗ್ರಸ್ಥ ಮನಸ್ಥಿತಿಗೆ ಹಿಡಿದ ಕನ್ನಡಿಯಂತಾಗಿ ಹೋಗಿತ್ತು. ತೀರಾ ಚಿಕ್ಕಂದಿನಿಂದಲೇ ಇಂಥದ್ದಕ್ಕೆಲ್ಲ ತಲೆಕೆಡಿಸಿಕೊಳ್ಳುವುದರಿಂದ ಹೊರಬಂದಿದ್ದ ಹುಡುಗಿ ಅಪ್ಪಟ ಗಂಡು ಬೀರಿಯಾಗುವಾಗ, ಹುಡುಗಿ ‘ಧಡ ಇಲ್ಲ..ಬಿಡ್ರಿ’ ಎನ್ನುವ ಅನ್ವರ್ಥಕ್ಕೆ ಪಕ್ಕಾಗಿದ್ದು ಖರೇ ಎನ್ನಿಸತೊಡಗಿತ್ತು.
ಅದಕ್ಕೆ ಸರಿಯಾಗಿ ವಾಸಂತಿ ಹೆಸರಿನ ಕೃಷ್ಣಸುಂದರಿಗೆ ಅದ್ಯಾಕೋ ಸರಸ್ವತಿಯೂ ಕೈಕೊಟ್ಟಿದ್ದರಿಂದ ಆಕೆ ಇನ್ನಷ್ಟು ರಾವಾಗತೊಡಗಿದ್ದಳು. ಓದು ತಲೆಗೇರುವುದಿಲ್ಲ. ಬೇರಾವ ಚಟುವಟಿಕೆಯಲ್ಲೂ ಸಣ್ಣದಾದ ಮನಸ್ಸಿನ ಒಳಗುದಿ ಆಕೆಯನ್ನು ಸೇರದಂತೆ ಮಾಡಿದ್ದು, ಎಲ್ಲ ಕಡೆಯಲ್ಲೂ ಈ ಸಮಾಜವನ್ನು ಕಾಡುತ್ತಿರುವ ಬಣ್ಣದ ಸಮಸ್ಯೆ ಆಕೆಗೂ ಅರಿವಿಲ್ಲದೆ ತಟ್ಟತೊಡಗಿದ್ದು, ಸರಿಬಿಡು ಹೆಂಗಾದರೂ ಬದುಕು ಸಾಗುತ್ತದೆ. ಅಪ್ಪ ಎ ಒಂದು ಕಡೆಯಲ್ಲಿ ಮದುವೆ ಮಾಡಿಕೊಟ್ಟಾಗ ಎದ್ದು ಹೋದರಾಯಿತು ಎಂದು ತೆಪ್ಪಗಿದ್ದುಬಿಟ್ಟಿದ್ದಳು.ಆದರೆ ಅದಕ್ಕೂ ಬರಕತ್ತಾಗಲಿಲ್ಲ ಬದುಕು. ಮೊದಲಿನ ಹುಡುಗಿಯರಿಬ್ಬರೂ ಸೇರಿದಂತೆ ಕೊನೆಯಲ್ಲಿ ಚೆಂದಗೆ ಕುಟುಂಬದ ಸಂಪೂರ್ಣ ಪ್ರೀತಿ ಸ್ವೇಚ್ಛೆ ಅನುಭವಿಸಿ ಬೆಳೆದಿದ್ದ ತಮ್ಮನೂ ತನಗಿಷ್ಟದವಳನ್ನು ಕಟ್ಟಿಕೊಂಡು ಎದ್ದು ಹೋದರೆ ವಾಸಂತಿ ಮಾತ್ರ ಆಡಲಾರದೇ ಅನುಭವಿಸಲಾರದೆ ಅಮ್ಮನ ಕಣ್ಣಿನ ದೀನದೃಷ್ಟಿಯನ್ನೇ ದುರಿಸುತ್ತಾ, ಯಾವ ಮಾತಿಗೂ ದೂಸರಾ ಆಡದೆ ಬದುಕಿನ ಕಾಲಕ್ಕೆ ತನ್ನ ಸಮಯ ಸೇರಿಸುತ್ತಾ ಉಳಿದುಬಿಟ್ಟಿದ್ದಳು. ವಯಸ್ಸು ಮೂವತ್ತೆರಡಾಗುತ್ತಿದ್ದರೂ ಆಗದ ಮದುವೆ, ಅಪ್ಪ ಅಮ್ಮನಿಗೂ ಇದ್ಯಾಕೊ ಮಗಳು ಭಾರವಾಗುತ್ತಿದ್ದಾಳೆ ಎನ್ನಿಸುತ್ತಿದ್ದ ಘಳಿಗೆಗಳು, ಎಲ್ಲ ಕಡೆ ಅಪ್ಪ ‘ನಮ್ಮ ವಾಸಿಗೂ ಒಂದು ವರ ನೋಡ್ರೆಲಾ..?’ ಎನ್ನುತ್ತಲೇ ‘ಹುಡುಗಿ ಏನ್ ಮಾಡ್ತಾಳು.. ಯಾಕ ಮೂವತ್ತೆರಡಾದ್ವು..?’ ಎನ್ನುತ್ತಾ ಒಂದೊಂದು ತೀಡಿ ಇಟ್ಟಂತಹ ಪ್ರಶ್ನೆ ಎದುರಿಸಿ ಮತ್ತೆ ಅಲ್ಲಿಗೇ ಬಂದು ನಿಲ್ಲುತ್ತಿದ್ದ ಪರಿಸ್ಥಿತಿಗೆ ಕುಟುಂಬ ರೋಸಿಹೋಗಿತ್ತು. ಆದರೂ ಅಪ್ಪಂದಿರಿಗೆ ಹೆಣ್ಣುಮಕ್ಕಳು ಹೆಂಗಿದ್ದರೂ ಒಂದಿಷ್ಟು ಮಮತೆ ಹೆಚ್ಚೇ. ಹಾಗಾಗೇ ಇದೆಲ್ಲದರಾಚೆಗೂ ಅವಳಪ್ಪ ‘ನಮ್ಮ ವಾಸಿ, ಒಂದೀಟು ಕಪ್ಪಗ ಆದರೆ ಕೆಲಸಾ ಬಗಸಿ ಛಲೋ ಮಾಡ್ತಾಳು..’ ಎಂದು ಶಿ-ರಸಿಗೆ ನಿಂತು ಗಂಡು ಕೇಳುತ್ತಿದ್ದ. ಆಗೆಲ್ಲ ಅವನ ಮುಖದ ಮುದುರುಗಳಲ್ಲಿ ಅಡಗಿರುತ್ತಿದ್ದ ದೈನೇಸಿತನ ನೋಡಲಾಗದೆ ವಾಸಿ ಒಂದು ದಿನ,
‘ಅಪ್ಪ ನಿನಗೆ ಮಗಳು ಬ್ಯಾಡ, ಮನಿಯಿಂದ ಒಮ್ಮೆ ಹೋಗಲಿ ಅನ್ನಿಸಿದ್ದರೆ ಹೇಳು.. ನಾ ಏನಾರ ವ್ಯವಸ್ಥಾ ಮಾಡಿಕೊಳ್ತೇನಿ. ಹಿಂಗ ಮಂದಿ ಮುಂದ ಮೈ ಹಿಡಿ ಮಾಡ್ಕೊಂಡು ನಿಲ್ಲಬ್ಯಾಡ..’ ಎಂದು ಜಬರಿಸಿದ್ದಳು. ಉಳಿದ ಅಕ್ಕಂದಿರಿಗೂ ಈ ವಾಸಿಯದ್ದು ಏನೂ ಆಗದ ಬದುಕಾಗಿ, ಚಿಂತೆ ಕಾಳಜಿ ಎರಡೂ ಇಲ್ಲದಾಗಿ ಆಕೆಯ ಪ್ರಿಯಾರಿಟಿ ಕಡಿಮೆಯಾಗತೊಡಗಿತ್ತು. ಕಾಲ ಬದಲಾಗಿತ್ತು. ಬ್ರಹ್ಮ ಆಕೆಗೂ ಒಂದು ಗಂಡು ಬರೆದಿದ್ದ. ವಾಸಿಗೂ ಧಿಡೀರನೇ ಮದುವೆಯಾಗಿ ಊರು ಬಿಟ್ಟಿದ್ದಳು. ಒಂದಕ್ಷರವೂ ಸರಿಯಾಗಿ ತಲೆಗೆ ಹತ್ತದಿದ್ದ ವಾಸಂತಿಗೆ ವ್ಯಾಪಾರ, ವ್ಯವಹಾರ ಎಷ್ಟು ಸಲೀಸು ಎನ್ನುವುದು ಗೊತ್ತಾಗಿದ್ದೇ ಮದುವೆಯಾದ ಮೇಲೆ.
ಗಂಡನ ಮನೆಯ ಚಿಕ್ಕ ಕಿರಾಣಿ ಅಂಗಡಿಯನ್ನು ತುಂಬ ಮುತುವರ್ಜಿಯಿಂದ ಬೆಳೆಸಿದ ಹುಡುಗಿ ಎರಡ್ಮೂರು ವರ್ಷದಲ್ಲಿ ಹುಬ್ಬೇರುವಂತೆ ವ್ಯವಹಾರ ಬೆಳೆಸಿದ್ದಳು. ವಾಸಿಯ ಅಪ್ಪ ಆಗೀಗ ಬಂದು ಆಕೆಯ ಜೊತೆ ಕೂತೆದ್ದು, ತಲೆ ಸವರಿ ‘ಕಡಿಗೂ ದೇವ್ರುಕಣ್ಣಬಿಟ್ಟ ಬಿಡವಾ..’ ಎಂದು ಹರಸಿ, ಮನತುಂಬಿಕೊಂಡು ಹೋಗುತ್ತಿದ್ದ. ಆದರೆ ಆ ಖುಷಿ ಬಹಳ ದಿನ ಉಳಿಯಲಿಲ್ಲ. ಸುಲಭಕ್ಕೆ ತನ್ನನ್ಯಾಕೆ ಇಂಥವನು ಮದುವೆಯಾಗಿದ್ದ ಎನ್ನುವ ಅಸಲಿಯತ್ತು ವಾಸಿಗೆ ಗೊತ್ತಾಗಿಬಿಟ್ಟಿತ್ತು.
ಆಕೆಯ ಗಂಡ ಆಗಲೇ ಇನ್ಯಾವಳನ್ನೋ ವ್ಯವಸ್ಥಿತವಾಗಿ ಕೂಡಿಕೆಯಲ್ಲಿರಿಸಿಕೊಂಡಿದ್ದ. ಮನೆಯವರು ಕುಟುಂಬದ ಮರ್ಯಾದೆ, ಸಮಾಜ, ಆರ್ಥಿಕತೆ ಇತ್ಯಾದಿ ಕಾರಣಗಳಿಗೆ ವಾಸಿಯನ್ನೂ ಹೂಂ ಎಂದು ಪುಕ್ಕಟೆ ಮನೆ ಕೆಲಸದ ಲೆಕ್ಕದಲ್ಲಿ ಒಪ್ಪಿಕೊಂಡಿದ್ದಾರೆ. ಆಕೆ ಮನೆಯ ವ್ಯಾಪಾರಕ್ಕೂ ಉಪಯೋಗವಾಗಿದ್ದು ಅವರ ಬೋನಸ್. ಅಸಲು ಲುಕ್ಷಾನಿಗೆ ಈಡಾಗಿದ್ದು ಮತ್ತೆ ವಾಸಂತಿ ಮಾತ್ರ. ಆಕೆ ಸುಮ್ಮನೆ ಕೂರಲ್ಲೂ ಇಲ್ಲ ಹಾಗಂತ ವಿಷಯ ಗೊತ್ತಾಗುತ್ತಿದ್ದಂತೆ ಎಲ್ಲ ಹೆಣ್ಣುಗಳಂತೆ ಗದರಲಿಲ್ಲ. ಅಳಲೂ ಇಲ್ಲ. ಪೂರ್ತಿ ವಿಷಯ ಅರಿತುಕೊಂಡು ಒಂದಾರು ತಿಂಗಳು ಕಳೆಯುತ್ತಿದ್ದಂತೆ ಬೆಳಬೆಳಗ್ಗೆನೆ ಮನೆಯ ಹೆಬ್ಬಾಗಲಿಗೆ ನೀರು ಬಿಟ್ಟು ಹೊರಬಿದ್ದವಳು. ಮೊದಲೇ ನಿರ್ಧರಿಸಿಕೊಂಡಿದ್ದ ಜಾಗದಲ್ಲಿ ಪುಟ್ಟ ಮನೆ ಮತ್ತು ಈಗಾಗಲೇ ಒಳ ಹೊರ ಎರಡೂ ಗೊತ್ತಾಗಿದ್ದ ಮಹಿಳೆಯರ ವಸ್ತುಗಳ ಬಾಟಿಕ್ ತರಹದ ವ್ಯಾಪಾರ ಆರಂಭಿಸಿ ಬದುಕು ಕಟ್ಟಿಕೊಂಡಿದ್ದಳು.ಇತ್ತ ವಿಷಯ ತಿಳಿದ ಗಂಡ ಮನೆಯ ವ್ಯಾಪಾರ ಸೊಗಸಾಗಿ ನಿರ್ವಹಿಸುತ್ತಿದ್ದ ಹೆಂಡತಿ ಕಮ್ ಕೆಲಸದ ವಾಸಂತಿ ಕೈಬಿಡುತ್ತಿದ್ದಂತೆ ದಿಗಿಲಿಗೆ ಬಿದ್ದ. ಆಗಿದ್ದ ಅನಾಹುತ ಸರಿಯಾಗಿಸುವ ಆತುರದಲ್ಲಿ ಗಲಾಟೆಗೆ ಬಂದ. ಆದರೆ ವಾಸಿ ಹೇಗೆ ಬದುಕಬೇಕೆನ್ನುವುದನ್ನು ಕಲಿತು ಬಿಟ್ಟಿದ್ದಳು. ಅವನಿಗೆ ಉಸಿರಾಡಲೂ ಕೊಡದೆ ಆಚೆಗೆ ಗದುಮಿದವಳು. ಹೆಂಗಸರನ್ನೇ ಕೇಂದ್ರೀಕರಿಸಿ ವ್ಯವಹಾರಕ್ಕಿಳಿದವಳು ಅಕ್ಷರಶಃ ಹುಬ್ಬೇರುವಂತೆ ಬೆಳೆದಿದ್ದಾಳೆ.
‘ಛಲೋ ಆತು ಬಿಡ. ಹೋದರ ಹೋಗಲಿ. ಈಗ ಎಲ್ಲ ನಿಂದ ಆಗೇದಲ್ಲ. ಅಪ್ಪ- ಅವ್ವ ಎದಾರು? ಮಕ್ಕಳು..’ ಎಂದು ನಾನು ವಿಚಾರಿಸಿಕೊಳ್ಳುತ್ತಿದ್ದರೆ ‘ನಡೀ ಮನೀಗೆ ಹೋಗಿ ಮಾತಾಡೋಣು..’ ಎಂದು ಕರೆದೊಯ್ದಳು. ಮನೆ ತುಂಬ ಮಕ್ಕಳು. ಸುಮಾರು ನಾಲ್ಕೈದು ಇವೆ. ವಯಸ್ಸಾಗಿರುವ ನಿಂಗಪ್ಪಜ್ಜ ಗುರುತು ಹಿಡಿಯದಿದ್ದರೂ ಊರ ಕಡಿಯಿಂದ ಯಾರೋ ಬಂದಾರು ಎನ್ನುತ್ತಿದ್ದಂತೆ ಎದ್ದು ನಿಂತು ಕೈಹಿಡಿದು ಕಕ್ಕುಲಾತಿ ತೋರಿದ್ದರು.‘ನಾವಾಗೇ ಕಾಲೂರೋ ತನಕ ಎಲ್ಲ ಒಂದ ನಮೂನಿಯಾದರ ಆಮ್ಯಾಲಿಂದೇ ಒಂದು ನೋಡು. ಇದರಾಗ ಎರಡು ಮಕ್ಕಳು ನನ್ನ ತಮ್ಮಂದು. ಅವನ ಹೆಣ್ತಿ ನಾಲ್ಕು ವರ್ಷಾನೂ ದಢ್ ಆಗಿ ಸಂಸಾರ ಮಾಡ್ಲಿಲ್ಲ. ಅದಕ್ಕ ಮಕ್ಕಳನ್ನು ಕರಕೊಂಡು ಬಂದೆ. ಇನ್ನೆರಡು ನನಗಿರಲಿ ಅಂತ ಆಶ್ರಮದಿಂದ ಮೊದಲೇ ತಂದಿದ್ದಾ.
ಇವತ್ತು ಎನೂ ಚಂದ, ಬಣ್ಣ ಇದ್ದರ ಆತು. ಆದರ ಬದುಕು ಬಣ್ಣ ಹಚ್ಕೊಳ್ಳೋದರಿಂದ, ಚಂದ ಇರೋದರಿಂದ ನಡೆಯೋದಿಲ್ಲ ಅನ್ನೋದು ದಡ ಬಿಟ್ಟಾಗೇನ ಗೊತ್ತಾಗೋದು ನೋಡು. ತಾತ್ಪೂರ್ತಿಕ ಆಗಿ ಎಲ್ಲರ್ಗೂ ಹಲ್ಕಿರಿಯೋದರಿಂದ, ಮುಖ ನೋಡಿ ಕೆಲಸ ಸುಲಭಾಗತದಾದರೂ ಅದು ಭಾಳ ದಿನಾ ನಡೆಯೋದಿಲ್ಲ. ನನ್ನದು ಹೆಂಗರಾ ಆತು ಅಂತ ಅಪ್ಪ-ಅವ್ವನ ಕೈಬಿಡ್ಲಿಕ್ಕೆ ಆಗ್ತದನೂ. ತಮ್ಮ ಹೆಣ್ತಿ ಸಂಗಕ್ಕ ಬಿದ್ದು ಅವರನ್ನ ರಸ್ತೆಗೆ ದಬ್ಬಿದ ಅಂತಾ ನಾನೂ ಬಿಡ್ಲಿಕ್ಕ ಹೆಂಗಾಗ್ತದ..? ನನಗೇನು ನಂದ ಮಕ್ಕಳಾಗಬೇಕೂಂತೇನಿಲ್ಲ. ಮತ್ತ ಅವೂ ನನ್ನಂಗೆ ಆಗಿದ್ದರ..? ಆದ್ರ ಬೆಳಸುವಾಗ ಬದುಕು ಕಟ್ಕೊಳ್ಳಾಕ ಒಂದು ದಮ್ ಬರೋಹಂಗ ಬೆಳೆಸಿದರ ಅದಕ್ಕಿಂತ ದೊಡ್ಡ ಬಣ್ಣ ಇಲ್ಲ ಅಂತಾ ಗೊತ್ತಾಗೇದ ನೋಡು. ಏನಂತಿ..?’ ವಾಸಿ ಮರುಪ್ರಶ್ನಿಸುತ್ತಿದ್ದರೆ ಸುಮ್ಮನೆ ಮುಖ ದಿಟ್ಟಿಸಿದೆ.ವಾಸಿ ದೃಷ್ಟಿಗೆ ನಿಲುಕದಷ್ಟು ಬೆಳೆದಿದ್ದರೂ ತಡುವಬಹುದಿತ್ತು. ಆದರೆ ವ್ಯವಸ್ಥೆಯಲ್ಲಿ ಬಣ್ಣದ ಹುಚ್ಚಿಗೂ, ಥಳುಕಿಗೂ ಬಿದ್ದವರನ್ನು ಹೇಗೆ ವಾಸಿ ಮಾಡುವುದೋ..? ಅದೆಲ್ಲ ವಾಸಿಗೆ ತಿಳಿದಿರದಿದ್ದರೂ ಆಕೆ ಬದುಕನ್ನು ಗೆದ್ದು ತೋರಿಸಿದ್ದಳು. ಬದುಕಿದ್ದ ಬಣ್ಣಗಳು ಆಕೆಯೆದುರಿಗೆ ಕಪ್ಪಾಗಿದ್ದವು.
ಕಾರಣ ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)
No comments:
Post a Comment