Saturday, February 6, 2016

ಸುಖದ ಸೋನೆಯಲ್ಲಿ ಹಿಮದ ಹನಿಗಳು...
ಅರಿವಾಗದ ಕಳೆದುಹೋಗುವ ಮತ್ತು ಜೀವನದ ಬಹುಪಾಲನ್ನು ಸೇವೆಯಲ್ಲಿ ಅಥವಾ ಇನ್ನಾವುದೋ ಹುಸಿತೃಪ್ತಿಗೆ ತಮ್ಮ ಅಮೂಲ್ಯ ಘಳಿಗೆಗಳನ್ನು ಕಳೆದುಕೊಂಡವರೇ ಹೆಚ್ಚು. ಆದರೆ ಹೀಗಾ ಎಂದು ವಾಸ್ತವಕ್ಕೆ ತೆರೆದುಕೊಳ್ಳುವ ಹೊತ್ತಿಗೆ ತುಂಬ ತಡವಾಗಿರುತ್ತದೆ. ವಿಪರ್ಯಾಸವೆಂದರೆ ಇವೆಲ್ಲ ಯಾವ ಡೊಮೆಸ್ಟಿಕ್ ವಯಲೆನ್ಸಿನ ಡೆಫಿನಿಶನ್ನಿಗೂ ದೊರಕುವುದಿಲ್ಲ.


‘ನೀನು ಬರಿತಿಯ, ಅಂಥಾ ದೊಡ್ಡ ಹೊಡೆತಗಳಿಗೂ, ಸಲ್ಲದ ಸಂಕಟಗಳಿಗೆ ಈಡಾಗೋದೇನೂ ದೊಡ್ಡದಲ್ಲ. ಆದರೆ ಕಲಿತು, ದುಡ್ಡು ದುಗ್ಗಾಣಿ ಎಲ್ಲ ಇದ್ದರೂ ನೆಮ್ಮದಿ ಅನ್ನೋದು ಅಂದ್ರೆ ಏನು ಎನ್ನುವುದನ್ನೇ ಗೊತ್ತಿಲ್ಲದಿರೋರೂ ಇದಾರೆ. ಅದು ಗೊತ್ತಾಗುವ ಹೊತ್ತಿಗಾಗಲೇ ಬದುಕೇ ಕಳೆದುಹೋಗಿರುತ್ತೆ ಗೊತ್ತಾ..?’ ಎಂದಾಕೆ ಹೇಳಿದಾಗ ಒಮ್ಮೆ ಯೋಚಿಸುವಂತಾಗಿದ್ದು ಹೌದು.
ಕಾರಣ ಶಾಂತಕ್ಕ ಪ್ರಥಮ ದಿನದಿಂದಲೂ ‘ಅವಳು..’ ಅಂಕಣವನ್ನು ಹಿಂಬಾಲಿಸಿದ್ದೇ ಅಲ್ಲದೇ ಒಂದು ಹಂತದಲ್ಲಿ ಪರಿಚಯಕ್ಕೀಡಾದರೂ ಯಾವತ್ತೂ ಹೀಗೂ ಇರುತ್ತದೆ, ಸಂಸಾರದ ಒಳಸುಳಿಗಳಲ್ಲಿ ಹೀಗೂ, ಗೊತ್ತೇ ಆಗದ ಮೌನಸಂಕಟಗಳಿರುತ್ತವೆನ್ನುವ ಸುಳಿವೂ ಕೊಡದ ಗಟ್ಟಿಗಿತ್ತಿ. ಅಸಲಿಗೆ ಅವೆಲ್ಲವೂ ಆಕೆಗೂ ಅರ್ಥವಾಗತೊಡಗಿದ್ದೇ ಇತ್ತೀಚೆಗೆ. ನನ್ನ ಲೇಖನದ ಹಲವು ನಾಯಕಿಯರನ್ನು ತಾನೇ ಪತ್ತೆ ಹಚ್ಚಿ ‘ಇದು ಇವರೇನಾ.. ನಂಗೆ ಗೊತ್ತು..’ ಎಂದು ಅಚ್ಚರಿಗೀಡು ಮಾಡುತ್ತಿದ್ದ ಅಪ್ಪಟ ಚಿಕ್ಕಮ್ಮನಂತಹ ಹೆಣ್ಣುಮಗಳು ಶಾಂತಕ್ಕ. ‘ಹೌದು ಇದು ಅವಳದ್ದೇ. ಆದ್ರೆ ಪಂಚಾಯ್ತಿಕೆ ಎಲ್ಲ ಯಾಕೆ ಮಾಡ್ತಿ ಸುಮ್ನಿರು ಮಾರಾಯ್ತಿ’ ಎನ್ನುತ್ತಿದ್ದ. ಅದರೆ ಅದ್ಯಾಕೊ ಶೈಲತ್ತೆಯ ಕಥೆಯನ್ನು ಓದುತ್ತಿದ್ದಂತೆ, ಶಾಂತಕ್ಕ ತಡೆಯಲಾರದೆ ಅನ್ನಿಸಿದ್ದನ್ನು ಹೇಳಿಕೊಂಡಿದ್ದಳು. ಇದೇನೂ ಹೊಸದಲ್ಲ ಆದರೂ ಇಂಥದ್ದಲ್ಲ ಡೊಮೆಸ್ಟಿಕ್ ವಯಲೆನ್ಸ್‌ನ ಡೆಫಿನಿಶನ್ನಿಗೂ ಸಿಕ್ಕುವುದಿಲ್ಲ. ಇಂಥಾ ಕೇಸುಗಳಲ್ಲಿ ಯಾವ ರೀತಿಯ ಆರೋಪಕ್ಕೂ, ದೌರ್ಜ್ಯನಕ್ಕೂ ಬೆರಳು ಮಾಡಲು ಅವಕಾಶವೇ ಇರುವುದಿಲ್ಲ.
ಕಾರಣ ಗಂಡ, ಮಾವ, ಸಂಭಾವಿತ ಅತ್ತೆ ಎಲ್ಲರೂ ಯಾವತ್ತೂ ಜಗಳವಾಡುವುದಿಲ್ಲ. ಬೈಯ್ಯುವುದಿಲ್ಲ. ದೈಹಿಕ ಹಿಂಸೆ ಇಲ್ಲವೇ ಇಲ್ಲ. ಅನಾವಶ್ಯಕ ಹೀಗಳೆಯುವುದಿಲ್ಲ ಕಡೆಗೆ ಉಪವಾಸ ಕೆಡುವುತ್ತಾರೆ ಎಂದಾದರೂ ಹೇಳೋಣ ಎಂದರೆ ಯಾವತ್ತೂ ಇಷ್ಟ್ಯಾಕೆ ತಿಂದೆ ಎಂದೂ ಪ್ರಶ್ನಿಸಿದ್ದಿಲ್ಲ. ಆಯ್ತಲ್ಲ ಇನ್ನೇನು ಪ್ರಾಬ್ಲಮು..? ನೀನೆ ಒಂಚೂರು ಹೊಂದ್ಕೊಂಡು ಹೋಗಮ್ಮ ಎಂದು ಬಿಡುತ್ತಾರೆ ಮಧ್ಯದಲ್ಲಿ ಇದ್ದವರು. ಅಲ್ಲಿಗೆ ಬದುಕು ಅಪೂಟು ಬಂಧಿಖಾನೆಯಂತಾಗಿ ಬಿಡುತ್ತದೆ. ಹೊರಗಡೆಗೆ ಯಾವುದೂ, ಯಾರಿಗೂ ಇದು ಸಂಕಟ ಎನ್ನಿಸುವುದೇ ಇಲ್ಲ. ಮನೆ.. ಮಕ್ಕಳು.. ಹೊಟ್ಟೆ ಬಟ್ಟೆಗೆ.. ಆಗೀಗ ದೇಹಕ್ಕೂ ಅಡುಗೆ ಮನೆಗೆ ಸಾಮಾನು ಒದಗಿಸಿದಂತೆ ನಿಮಿಷಗಳ ಕಾಲ ಪೂರೈಸಿಬಿಡಬಹುದಾದ ಸಾಂಗತ್ಯದ ನಿರಂತರತೆಯ ಮಧ್ಯದಲ್ಲಿ ತುಂಬ ಸೂಕ್ಷ್ಮ ಅನುಭವಗಳಿಗೂ, ಶಾಂತಕ್ಕನ ಜಾಗದಲ್ಲಿ ನಿಂತಾಗಲೇ ಗೊತ್ತಾಗೋದು ನಿರುಮ್ಮಳ ನೆಮ್ಮದಿಗೂ, ಸಹಜ ಸುಖಕ್ಕೂ ಇರುವ ವ್ಯತ್ಯಾಸ.
ಶಾಂತಕ್ಕನದು ತೀರ ದೊಡ್ಡದಲ್ಲದಿದ್ದರೂ ಅತ್ತೆ, ಮಾವ ಮತ್ತು ನಾದಿನಿಯರ ನಡುವಿನ ಕೂಡು ಕುಟುಂಬ ಆಕೆಗೆ ಹೊಸದೇನೂ ಆಗಿರಲಿಲ್ಲ. ಮೊದಮೊದಲು ಹೊಸ ಹುಡುಗಿ ಮತ್ತು ಓಡಾಟದಲ್ಲಿ ಮಕ್ಕಳು ಎಂದೆಲ್ಲ ಅಷ್ಟಾಗಿ ಯಾವಾಗಲೂ ವೈಯಕ್ತಿಕ ಹಿತಾಸಕ್ತಿಯ ಮತ್ತು ಬದುಕಿನ ಬದಲಾವಣೆಗಳು, ಬೇಕು ಬೇಡಗಳ ಚಿಂತನೆ ಅವಗಾಹನೆಗೆ ಬಂದಿದ್ದೇ ಇಲ್ಲ.
ತೀರ ಬೆಳಗ್ಗೆ ಎದ್ದಗಿಂದಲೂ ಎಲ್ಲರಿಂದಲೂ ಏನಾದರೊಂದು ಕಮೆಂಟ್ ಕೇಳಿಸಿಕೊಳುತ್ತಲೇ ಇರುವುದಿದೆಯಲ್ಲ. ಅದು ಎಂಥಾ ಕಿರಿಕಿರಿ ಮಾಡಿಬಿಡುತ್ತದೆಂದರೆ ಉಣ್ಣಲಾರೆ ಉಗಿಯಲಾರೆ ಎಂಬಂತೆ, ಚಪಾತಿ ಹಿಟ್ಟು ಕಲೆಸಿದರೆ ಜಾಸ್ತಿ ಬ್ಯಾಡ ಸಂಜೆಗೆ ಬೇರೆ ಕಲಿಸಿಕೊಂಡರಾಗಿತ್ತು ಗಟ್ಟಿಯಾಗಿ ಬಿಡುತ್ತಮ್ಮ.. ಎನ್ನುವ ಅತ್ತೆಯ ಮಾತಿಗೆ ಎದುರಾಡುವುದಾರೂ ಹೇಗೆ..? ಅದರಲ್ಲಿ ದೂರುವಂತಹದ್ದೇನೂ ಇಲ್ಲವೇ ಇಲ್ಲ. ಸರಿ ಬೆಳಗ್ಗೆಗೆ ಸಾಕು ಸಂಜೆಗೆ ಬೇರೆ ಕಲಿಸಿಡೋಣ ಎಂದುಕೊಂಡ ದಿನ ‘ಹೆಚ್ಚೇ ಕಲಿಸಿಬಿಡಬೇಕಿತ್ತಮ್ಮ.. ಸಂಜೆ ನೀನು ಹೊರಗೆದರೂ ಹೋದರೆ ನಾನೇ ನಾಲ್ಕು ಬೇಯಿಸುತ್ತಿದ್ದ..’ ಎನ್ನುವ ಮಾತಿಗೆ ಹೇಗೆ ಸಮಜಾಯಿಷಿ ಕೊಡುತ್ತೀರಿ..?
ಬಟ್ಟೆ ಮಡಚಿಡುವುದು ಬೇಡಾಗಿತ್ತು ಅವರವರ ಅಭ್ಯಾಸ ಅವರವರೇ ಕಲಿತುಕೊಳ್ಳಬೇಕು. ಎಂದಿದ್ದಕ್ಕೆ ಎರಡ್ಮೂರು ದಿನದಿಂದ ಬಟ್ಟೆಗಳನ್ನು ಅಲ್ಲಿಯೇ ಬಿಟ್ಟರೆ, ‘ಅವರವರ ಜಾಗಕ್ಕೆ ಒಯ್ದು ಕೊಟ್ಟು ಬಿಡಮ್ಮ. ಇಟ್ಟುಕೊಳ್ಳೊದನ್ನು ಕಲಿಯಲಿ..’ ಎಂದರೆ ಮಡಚಿಡುವುದಕ್ಕೂ ಕೊಡುವುದಕ್ಕೂ ಏನು ವ್ಯತ್ಯಾಸವೋ..? ಸತತ ಅಡುಗೆ ಮನೆ ಹಾಲ್..ಅಲ್ಲಿಂದ ಟೇರಸ್ ಹೀಗೆ ಎಡೆಯೂ ಹಿಂದಿದೆ ಅಲೆಯುತ್ತಾ ಕೆಲಸದಲ್ಲಿ ಕಸರನ್ನೂ, ಸಹಾನುಭೂತಿಯನ್ನೂ ಒಟ್ಟೊಟ್ಟಿಗೆ ವ್ಯಕ್ತಿಪಡಿಸಿದರೆ ಅದನ್ನು ಪರಿಗಣಿಸುವ ಬಗೆಯಾದರೂ ಯಾವ ತರಹದ್ದು..? ಉತ್ತರ ಯಾವ ಹೆಣ್ಣೂ ಕೊಡಲಾರಳು. ಯಾವ ಕರೆ ಬಂದರೂ ‘ಯಾರದಮ್ಮ..? ಫೋನ್’ ಎಂದು ಮುಗುಮ್ಮಾಗಿ ಪ್ರಶ್ನೆಯನ್ನು ಎದುರಿಸುವ, ಹಿಂದೆಯೇ...‘ಯಾಕಂತೆ..?’ ಎಂದೆಲ್ಲ ಸಂದೇಹಗಳಿಗೆ, ಆಗೆಲ್ಲ ಉಂಟಾಗುವ ಸಣ್ಣ ಅಸಹನೆಗೆ ಯಾವ ಕೌನ್ಸೆಲ್ಲಿಂಗ್ ಉತ್ತರ ಕೊಡುತ್ತೆ..?
ಗಂಡನೊಡನೆ ಒಂದಿಷ್ಟು ಮಾತುಕತೆ ಆಡುವ ಹೊತ್ತಿಗೆ ‘ಇದೊಂಚುರು ಓದಿ ಹೇಳಮ್ಮ. ಸಂಜೆ ಹೊತ್ತಿಗೆ ಸರಿಯಾಗಿ ಕಾಣ್ತಿಲ್ಲ..’ ಎಂದು ಆತ್ಮೀಯತೆಯಿಂದ ಎದುರಿಗೆ ಕೂರಿಸಿಕೊಂಡರೇ ಯಾವ ಮಾನಸಿಕ ಹಿಂಸೆ ಕಾಣಿಸಲು ಸಾಧ್ಯ..? ತರಕಾರಿ ಇತ್ಯಾದಿಗೆ ಹೊರಗಡೆ ಹೋಗುವಾಗ ಗಂಡನೊಡನೆ ಹೋದದ್ದೇ ಆದಲ್ಲಿ ಅದೇ ಹೊತ್ತಿಗೆ ಮುಂದಿನ ಬಾರಿ ಹೋಗುವಾಗ ಮನೆಯಲ್ಲಿದ್ದವರಿಗೂ ಏನೋ ಖರೀದಿ ಮಾಡಲೇ ಬೇಕಿರುತ್ತೆ.
‘ಅರುಣ.. ನಾನೂ ಬರ್ತೀನೋ. ಎರ್ಡ್ಮೂರು ಸರ್ತಿ ನೀನು ಕಾರು ಓಡಿಸೋದೇನೂ ಬೇಡ. ಸುಮ್ಮನೆ ಪೆಟ್ರೋಲ್ ವೇಸ್ಟು. ಮೇನ್‌ರೋಡ್ ಹತ್ತಿರ ಇರೋ ಅಂಗಡಿಯಿಂದ ಮುಂದಿನ ವಾರದ ಪೂಜೆ ಸಾಮಾನು ತಂದು ಬಿಡೋಣ.. ಬರೋ ಹಬ್ಬಕ್ಕೆ ಹತ್ತಿ ತರ್ಬೇಕು.. ಬ್ಲೌಸ್ ಪೀಸು ಹೊಲೆಯೊಕೆ ಕೊಟ್ಟಿದ್ದೆ. ಏನಾಯಿತು ವಿಚಾರಿಸ್ತೀನಿ.’ ಎನ್ನುತ್ತಾ ಕೊನೆಗೊಮ್ಮೆ ‘ಹೊರಗೆಲ್ಲ ತುಂಬಾ ಚಳಿ ಗಾಳಿ ಶಾಂತ. ಬರೀ ಕೊತಂಬ್ರಿ ತರೋಕೆ ನೀನ್ಯಾಕಮ್ಮ ಬರಬೇಕು..? ನಾನೇ ಹೋಗ್ತಿದಿನಲ್ಲ ತರ್ತೀನಿ..’ ಎಂದಾಗ ನನ್ನೆಡೆಗಿದ್ದುದು ಕಾಳಜಿ ಅಥವಾ ಕಾರಸ್ಥಾನ ಎಂದು ಹೇಗೆ ಖಚಿತಪಡಿಸುವದು..?
ಯಾರಾದರೂ ಬಂದಾಗ ಹೋದಾಗ, ಯಾವ ಕೆಲಸವನ್ನೂ ಮಾಡಲು ಕೊಡದೇ, ಅಡುಗೆಯ ಅಷ್ಟೂ ಜವಾಬ್ದಾರಿ ವಹಿಸಿಕೊಳುವ ಅತ್ತೆ, ಮಾತಿಗೊಮ್ಮೆ ನನ್ನನ್ನು ನಮ್ಮಪ್ಪನೆದುರಿಗೆ ಕೂರಿಸಿ ‘ಶಾಂತ.. ದಿನಾ ನೀನೇ ಮಾಡ್ತಿಯಮ್ಮ. ಇವತ್ತು ಅಪ್ಪ, ಅಮ್ಮನ ಜೊತೆ ಮಾತಾಡಿಕೊಂಡಿರು ನಾನೇ ಏನೋ ಕೈಲಾದ್ದು ಮಾಡ್ತೀನಿ..’ ಎನ್ನುತ್ತ ‘ಹಾಗೇ ಕೂತ ಇದೊಂದು ನಾಲ್ಕು ಈರುಳ್ಳಿ ಹೆಚ್ಚಿ, ಕೊತಂಬ್ರಿ ಬಿಡಿಸಿ, ಎರಡು ಕಾಯ್‌ಪಲ್ಯೆ ಮಾತಾಡ್ತಾನೆ ಹೆಚ್ಚಿಡು, ಸಮಯ ಮಿಗುತ್ತಲ್ವಾ ಇದಿಷ್ಟು ಪೂರಿ ಲಟ್ಟಿಸಿಡು. ಉಳಿದದ್ದು ನಾನೇ ಮಾಡಿಕೊಳ್ತಿನಿ..’ ಎಂದರೆ ಇದು ಯಾವ ಲೆಕ್ಕದಲ್ಲಿ ನನಗೆ ಬಿಡುಗಡೆಯೋ ಗೊತ್ತೇ ಆಗಿರಲಿಲ್ಲ.
ಸ್ನೇಹಿತೆಯರು ಬಂದಾಗ ಅಥವಾ ಊರಲ್ಲಿಯೇ ಆಗೀಗ ಏನಾದರೂ ಒಂದಷ್ಟು ಮಾಡೋಣ ತೀರಾ ಬದುಕು ಯಾಂತ್ರೀಕೃತ ಆಗುತ್ತಿದೆ ಎಂದು ಒಂದೆರಡು ದಿನ ಸ್ನೇಹಿತೆಯರ ಮನೆಗೂ ಅಲ್ಲಿಲ್ಲಿ ಓಡಾಡುತ್ತಿದ್ದರೆ ಮೂರನೆಯ ದಿನವೇ, ‘ಹೊರಗಡೆ ಹೋಗುವಾಗ ನನಗೂ ಅಂಚೂರು ಬಿಡು, ಇಂಚೂರು ಕರ್ಕೊಂಡು ಹೋಗು, ಯಾಕೋ ಹುಷಾರಿಲ್ಲದಂಗಿದೆ ಒಂದಿಷ್ಟು ಕುಕ್ಕರ್ ಇಟ್ಟು ಹೋಗಿಬಿಡಮ್ಮ.. ಡಬ್ಬಿ ಅವನಿಗೆ ಕಳಿಸುವಾಗ ಮಾಡಿದ್ದೇ ಯಾಕಮ್ಮ ನೀನು ತಂಗಳಾಗಿಸಿ ತಿನ್ನಬೇಕು. ಸುಮನೆ ಮಧ್ಯಾಹ್ನಕ್ಕೆ ಬಿಸಿ ಬಿಸಿ ಮಾಡ್ಕೋಬಾರದಾ’ ಎನ್ನುತ್ತಿದ್ದರೆ, ಅದು ಹೊಸದಾಗಿ -ಶ್ ಅಡುಗೆ ಮಾಡಿಸಲು ನನ್ನನ್ನು ಅಡುಗೆ ಮನೆಗೆ ಕಟ್ಟಿಹಾಕಿಸಿದ್ದ..? ಎಂದು ನನಗರಿವಾಗುವ ಹೊತ್ತಿಗೆ ಕಳೆದದ್ದು ದಶಕಗಳು.
ಮಕ್ಕಳು ಅಪೂಟು ಅಜ್ಜ-ಅಜ್ಜಿಯರ ಮಡಿಲಿಗೆ ಬಿದ್ದು ಹೊರಳಾಡುತ್ತಾ ಇರಬೇಕಿತ್ತು. ಅಪರೂಪಕ್ಕೆ ಮಕ್ಕಳೊಂದಿಗೆ ಅಂಗಳಕ್ಕಿಳಿದರೆ ಮರುದಿನ ಅದೇ ಹೊತ್ತಿಗೆ ಸರಿಯಾಗಿ ನನಗ್ಯಾವುದೋ ಹೊಸದಾಗಿ ಕೆಲಸವೊಂದು ಕಾಯಲಿದೆ ಎನ್ನುವುದ್ಯಾಕೆ ಆವತ್ತಿಗೆ ಹೊಳೀತಿರಲಿಲ್ಲ..? ಅದೇ ಈಗ ಮೊಮ್ಮಗಳಿಗೆ, ತನ್ನನ್ನು ಬಿಡು ಅಲ್ಲಿಗೆ ಡ್ರಾಪ್ ಮಾಡು ಎನ್ನುತ್ತಿದ್ದಂತೆ, ‘ಅಜ್ಜಿ... ಡ್ರಾಪ್ ಮಾಡ್ತೀನಿ ಅದರೆ ಪಿಕ್ ಅಪ್ ಆಗಲ್ಲ. ನಿಮ್ಮ ಪಾಡಿಗೆ ವಾಪಸ್ಸು ಬನ್ನಿ. ನನ್ನ ಫ್ರೇಂಡ್ಸ್ ಮನೆ ಹತ್ತಿರ ಬರೋದು ಬೇಡ..’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಬದುಕು ರೂಪಿಸಿಕೊಳ್ಳುವುದೂ, ಸಂಜೆಗೆ ಇನ್ನೆ ಹೊರಟಾಗ ‘ಎಷ್ಟೊತ್ತಾಗುತ್ತಮ್ಮ ಊಟಾ..’ ಎಂದೇನೋ ರಾಗ ಎಳೆಯುವಾಗ ‘ಅಜ್ಜಿ. ಕ್ಲಾಸು ಪ್ರಾಕ್ಟಿಕಲ್ಸು ಎಲ್ಲ ಲೆಕ್ಕಾ ಹಾಕಿ ಆಗೋದಿಲ್ಲ. ಅವುಗಳಿಗೆ ಅದರದ್ದೇ ಟೈಂ ಇರುತ್ತೆ. ನನ್ನ ಬಗ್ಗೆ ಚಿಂತೆ ಬೇಡಾ. ಏನೂ ಇಲ್ಲದಿದ್ರೆ ನಾನು ಬ್ರೆಡ್ ತಿಂತೀನಿ. ಸುಮ್ನೆ ತಲೆ ತಿನ್ಬೇಡಾ..’ ಎಂದು ತನ್ನ ಅಂತರ ಮತ್ತು ಸ್ವಾತಂತ್ರ್ಯ ಎರಡೂ ಕಾಯ್ದುಕೊಳ್ಳುತ್ತಲೇ ಯಾವ ರೀತಿಯಲ್ಲೂ ಸಂಬಂಧವೂ ಹಾಳಾಗದಂತೆ ನಿಷ್ಠುರತೆಯನ್ನು ವ್ಯಕ್ತಪಡಿಸಿದ್ದದರೂ ಹೇಗೆ..?
‘ಎಲ್ಲರೂ ನನ್ನನ್ನು ಕಾಳಜಿ ಮಾಡ್ತಾರೆ ಅಂದುಕೊಂಡೆ ಒಳ್ಳೆಯತನಕ್ಕೂ ಮಿತಿ ಇಲ್ಲದ ಪರಿಧಿಯಲ್ಲಿ ಬದುಕಿ ಬಿಟ್ಟಿದ್ದ ನೋಡು. ಚೆಂದದ ಸಂಸಾರದ ಹೀಗೆ ಬದುಕು ಬಂಧಿಯಾಗಿರುತ್ತೆ ಅಂತಾ ಪ್ರಾಕ್ಟಿಕಲ್ ಆಗಿ ಗೊತ್ತಾಗೋಕೆ ಇನ್ನೊಂದು ತಲೆಮಾರು ಬರ್ಬೇಕಾಯ್ತು. ಆದ್ರೆ ಕಳೆದ ಸಮಯ ಮತ್ತು ಜೀವನ ಎರಡೂ ಹಿಂದಕ್ಕೆ ತಿರುಗೋದಿಲ್ವಲ್ಲ..’ಎನ್ನುತ್ತಾ ಶಾಂತಕ್ಕ ‘ಇದೆಂಥಾ ಕತೆ ಅಂತಿಯೇನೋ’ ಎನ್ನುತ್ತಿದ್ದರೆ ‘ಇಲ್ಲ ಶಾಂತಕ್ಕ ನಿಜವಾಗಿಯೂ ಬದುಕಿಗೂ ಮತ್ತು ಚೆಂದದ ನೆಮ್ಮದಿಗೂ ವ್ಯತ್ಯಾಸ ತೋರ್ಸ್ತಿರೋದೇ ನೀನು. ಬರೀ ಅದ್ಭುತ ಅಥವಾ ಗಂಭೀರ ಸಮಸ್ಯೆಯ ಮಧ್ಯದಿಂದ ಎದ್ದು ಬಂದು ಅದನ್ನೇ ಡಂಗೂರವಾಗಿಸಿಕೊಳ್ಳುತ್ತಾ ಬದುಕು ಕಟ್ಟಿಕೊಳ್ಳುವುದಷ್ಟೆ ಜೀವನವಲ್ಲ. ಎಲ್ಲ ಇದ್ದೂ ಏನೂ ಇಲ್ಲದಂತೆ ಗೊತ್ತಾಗದ ಲುಕ್ಷಾನಿಗೆ ಈಡಾಗಿಯೂ ಸಹಿಸಿಕೊಂಡೂ ಜೀವನ ಮಾಡೋದಿದೆಯಲ್ಲ ಅದು ನಿನ್ನಂಥವರಿಂದ ಮಾತ್ರ ಸಾಧ್ಯ ಸುಮ್ನಿರು..’ಎಂದೆ. ಹನಿಗಟ್ಟಿದ ಕಣ್ಣು ಪಿಳಿಪಿಳಿ ಮಾಡುತ್ತಾ ನಿರುಮ್ಮಳ ನಗೆ ನಕ್ಕಳು ಶಾಂತಕ್ಕ.
ಕಾರಣ
ಅವಳು ಎಂದರೆ..

No comments:

Post a Comment