ಜಗತ್ತಿನ ಅಷ್ಟೂ ಒಳ್ಳೆಯತನ ಅವಳದ್ದೇ...
ಇಂಥಾ ಚೆಂದದ ಮನಸ್ಸು ಮತ್ತು ತ್ಯಾಗ ಹೆಣ್ಣುಮಕ್ಕಳಿಗೆ ಮಾತ್ರ ಹೆಂಗೆ ಬರುತ್ತದೋ..? ಆ ಆರ್ದ್ರತೆ ಮತ್ತು ತಾಯ್ತನ ಎನ್ನುವುದು ಅವಳ ಆತ್ಮದೊಂದಿಗೇ ಇರುವ ಸತ್ತ್ವವೇನೋ. ತೀರ ಜೀವನದ ಆಖೈರಿನವರೆಗೂ ಬದ್ಧತೆ ತೋರುವುದು ಆಕೆಯಿಂದ ಮಾತ್ರ ಸಾಧ್ಯವಾ..?
ಇವತ್ತಿಗೂ ತೀರ ಸಂಯಮದಿಂದ, ಇದ್ದುದರಲ್ಲಿ ಅದ್ಭುತ ಆನಂದದಿಂದ ದಿನಗಳನ್ನು ಕಳೆದುಬಿಡಲು ಕಾರಣ ನಾಳಿನದ್ದು ನನಗೆ ಗೊತ್ತಿಲ್ಲ. ಅದಕ್ಕಿಂತಲೂ ಇವತ್ತಿನ ದಿನವನ್ನು ಚೆಂದವಾಗಿ ಕಳೆದಲ್ಲಿ ಮಾತ್ರವೇ, ನಾಳೆಗಳು ಇನ್ನೂ ಅದ್ಭುತವಾಗಿರುತ್ತವೆ ಎನ್ನುವುದರಲ್ಲಿ ಅಪೂಟ ನಂಬಿಕೆ ಇರಿಸಿದವನು ನಾನು. ಆದರೆ ಕೆಲವೊಮ್ಮೆ ನಮಗೇ ಗೊತ್ತಿಲ್ಲದೆ ಅದೃಷ್ಟ ಕೈಕೊಟ್ಟಿರುತ್ತದಲ್ಲ ಅವರಿಗೆ ಮಾತ್ರ ದಿನಗಳೆಯುವುದಿರಲಿ, ಗಂಟೆಗಳೂ ಕೈಹಿಡಿಯುವುದಿಲ್ಲ. ಯಾವಾಗ ಈ ಲೋಕದಿಂದ ಎದ್ದು ಹೋಗುತ್ತೇವೆಯೋ ಎನ್ನುವುದಕ್ಕೇ ಕಾಯುತ್ತಿರುತ್ತಾರೆ. ಆದರೆ ಅದ್ಯಾವುದೂ ಅವರ ಕೈಯ್ಯಲ್ಲೂ ಇರುವುದಿಲ್ಲ. ದುರದೃಷ್ಟ ಬೆನ್ನಿಗೆ ಬಿದ್ದಾಗ ಬದುಕು ದುರ್ಭರವೂ ಅಗಿಬಿಟ್ಟಿರುತ್ತದೆ.
ಬದುಕಿನ ದೀರ್ಘ ದಾರಿಯ ಮಧ್ಯೆ ಹಳಿತಪ್ಪಿದ್ದ ಚಂದುಕಾಕನ ಬದುಕು ಯಾಕೋ ತಡವಾದರೂ ಪರವಾಗಿಲ್ಲ ಎನ್ನುವ ಹಂತಕ್ಕೆ ಬರುವ ಹೊತ್ತಿಗೆ ಹುಡುಗಿ ಕೈಗೆ ಬಂದಳು. ಅಪ್ಪ, ಮಗಳಿಗೆ ಒಬ್ಬರಿಗೊಬ್ಬರು ಸಂತೈಸಿಕೊಂಡು ಬದುಕುವುದು ಅಭ್ಯಾಸವಾಗಿಬಿಟ್ಟಿತ್ತಾ ಅಥವಾ ಅಭ್ಯಾಸ ಮಾಡಿಕೊಂಡಿದ್ದರಾ ಗೊತ್ತಿಲ್ಲ. ಅದರೆ ದಿವೀನಾಗಿ ಮಗಳೊಂದಿಗೆ ಯಾವ ಬಾಧೆಯೂ ಬರದಂತೆ ಚಂದುಕಾಕ ಗ್ಯಾರೇಜು ಕೆಲಸ ಇತ್ಯಾದಿಗಳೊಂದಿಗೆ ಸಮಯ ಅಳತೆ ಮಾಡುತ್ತ ಕಳೆಯತೊಡಗಿದ್ದ.
ಹುಡುಗರೂ ಕೈಯ್ಯಲ್ಲಿ ಪಳಗಿದ್ದುದರಿಂದ ಚಂದೂಕಾಕ ಮತ್ತು ಪುಟ್ಟಿ ನೀಸೂರಾಗಿದ್ದಂತೆ ಕಾಣಿಸುತ್ತಿತ್ತು. ಈ ಮಧ್ಯೆ ನಾನು ಎಲ್ಲೆಲ್ಲೋ ತಿರುಗಿ ವಾಪಸ್ ಇಲ್ಲೇ ಬಂದು ಕಾಲೂರುವ ಹೊತ್ತಿಗೆ ದಶಕಗಳೇ ಉರುಳಿದ್ದವು. ಹಾಗೆಯೇ ಚಂದುಕಾಕ ಮತ್ತು ಪುಟ್ಟಿ ಮರೆತಿರಲಿಲ್ಲವಾದರೂ ಕಣ್ಣಿಂದ ದೂರಾದವರೂ ಮನಸ್ಸಿನಿಂದನೂ ದೂರವಾಗೋದು ಸಹಜ ಎನ್ನುವಂತೆ, ಸ್ಟೇರಿಂಗ್ ಮತ್ತು ಗೇರಿಗೆ ಕೈಹಾಕುವಾಗೆಲ್ಲ ಚಂದುಕಾಕ ನೆನಪಾಗುತ್ತಿದ್ದನಾದರೂ ಸಂಪರ್ಕ ತಪ್ಪಿ ಹೋಗಿತ್ತು. ಆತ ಮನಸ್ಸಿಗೆ ನಾಟುವಂತೆ ಕಲಿಸಿದ್ದ ಡ್ರೈವರಿಕೆಗೆ ಇವತ್ತೂ ನನ್ನದೊಂದು ಕೃತಜ್ಞತೆ ಸಲ್ಲಿಸದಿದ್ದರೆ ಅಷ್ಟರಮಟ್ಟಿಗೆ ಕೃತಘ್ನನಾದೇನು.
‘ಹೆಂಗದಿಪಾ..? ನನ್ನ ನೆನಪ ಅದ ಏನೂ..’ ಎನುತ್ತಾ ಆವತ್ತು ಕರೆ ಬಂದಾಗ ಸರಿಯಾಗಿ ನಡುರಾತ್ರಿಗೆ ಇನ್ನರ್ಧ ಗಂಟೆ ಮಾತ್ರ ಬಾಕಿ ಇತ್ತು. ಇಷ್ಟು ಹೊತ್ತಿನಲ್ಲಿ ಯಾರು ಎಂದುಕೊಳ್ಳುತ್ತಲೇ ನಾನು ‘ನೆನಪಾಗ್ಲಿಲ್ಲ ಕ್ಷಮಾ ಮಾಡ್ರಿ.ಯಾರು ಮಾತಾಡೋದು..?’ ಎನ್ನುತ್ತಿದ್ದರೆ..
‘ಹ್ಹ..ಹ್ಹ... ಅನ್ಕೊಂಡ್ನಿ ನೆನಪಿರಲಿಕ್ಕಿಲ್ಲ ಧ್ವನಿ ಗುರುತು ಹಿಡಿಲಿಕ್ಕಿಲ್ಲ ಅಂತ. ಆದರ ಮೊನ್ನೆ ನೀ ಸ್ಟೇಜ್ ಮ್ಯಾಲೆ ಊರ ಬಗ್ಗೆ, ಸಾಲಿ ಬಗ್ಗೆ ಮಾತಾಡಿದ್ದು ಮಾತ್ರ ಭೇಷಾಗಿತ್ತು ನೋಡಪಾ.. ಏನ ಅಂದರೂ ಊರ ಮಕ್ಳು ನೆನಸ್ಕೊಂಡಾಗ ಆಗೋ ಖುಷಿನ ಬ್ಯಾರೇ..’ ಎನ್ನುತ್ತಿದ್ದರೆ ವರ್ಷಗಳ ಹಿಂದೆ ‘ಹಳಿಯಾಳದ ಹಬ್ಬ’ದಲ್ಲಿ ಶಾಲು ಸನ್ಮಾನ, ನನ್ನ ಪರಾಕು ಇತ್ಯಾದಿಗಳೆಲ್ಲ ಮುಗಿದ ಮೇಲೆ ವೇದಿಕೆಯ ಕೆಳಗೆ ಪ್ರೀತಿಯಿಂದ ಸಿಕ್ಕಿದವರನ್ನೆಲ್ಲ ನೆನಪಿಸಿಕೊಂಡೆ. ಅದರಿಲ್ಲಿದ್ದವರಾರೂ ಇವರಲ್ಲ ಎನ್ನಿಸಿತು. ಉಹೂಂ ನೆನಪಾಗಲಿಲ್ಲ.‘ಬೇಜಾರಾಗಬ್ಯಾಡ್ರಿ ಯಾರಂತ ನೆನಪಾಗವಲ್ದು..’ ಎನ್ನುತ್ತಿದ್ದಂತೆ, ‘ಇರ್ಲಿ ಬಿಡ್ರಿ. ಆವತ್ತು ನಾನು ದೂರ ಇದ್ದೆ. ಅಲ್ಲಿಗಂಟ ಬಂದ ಮಾತಾಡ್ಸೊ ಹಂಗೂ ಇರಲಿಲ್ಲ. ಗಾಡಿ ಹೊಡಿಯೋದು ಮರತಿಲ್ಲ ಹೌದಿಲ್ಲೋ.’ ಎನ್ನಬೇಕೆ..? ಚಂದುಕಾಕ. ಅದೆಂಗೆ ಮರೆತೇನು..?ಒಂದಿಷ್ಟು ಮಾತಾಡಿ ಎಲ್ಲಿದ್ದಾರೆಂದು ವಿಚಾರಿಸಿಕೊಂಡೆ.
ಕಾಲಾಂತರದಲ್ಲಿ ಆದ ಬದಲಾವಣೆಯಲ್ಲಿ ಚಂದುಕಾಕ ಗ್ಯಾರೇಜು ಮುಚ್ಚಿ ಮಗಳೊಂದಿಗೆ ನಗರಕ್ಕೆ ಹೋಗಿ ನೆಲೆಸಿದ್ದಾನಂತೆ. ಇನ್ನೇನು ಮಗಳ ಮದುವೆಗೆ ಓಡಾಡುತ್ತಿದ್ದಾನಿರಬೇಕು. ಧ್ವನಿಯಲ್ಲಿ ಸಂಭ್ರಮ. ನಾನೂ ಖುಷಿಗೊಳ್ಳುತ್ತ ‘ಪುಟ್ಟಿ ಮದ್ವಿಗೂ ಮದಲ ಬರೋನೇಳು ಕಾಕ. ಹೇಳಿಬಿಡ್ರಿ..’ ಎಂದು ಇರಿಸಿದ್ದೆ. ನಂತರದ ಓಡಾಟದಲ್ಲೂ ಆಗೀಗ ಚಂದುಕಾಕ ನೆನಪಾಗುತ್ತಿದ್ದರೂ ಹೋಗುವುದಾಗಿರಲೇ ಇಲ್ಲ. ಆವತ್ತೊಂದಿನ ಹುಬ್ಬಳ್ಳಿಗೆ ಹೋದವನು ಅಚಾನಕ್ ಆಗಿ ಆತ್ತ ಕಡೆ ಕಾರು ನಡೆಸಿದ್ದೆ. ಕರೆ ಮಾಡಿ ಸರಿಯಾದ ಅಡ್ರೆಸ್ಸು ಕೇಳಿಕೊಂಡು ಮನೆ ತಲುಪಿದಾಗ ಮಧ್ಯಾಹ್ನ ಊಟದ ಹೊತ್ತು.
ಥೇಟ್ ಕಕ್ಕಿಯ ರೂಪ ಮತ್ತು ಎತ್ತರದ ಹುಡುಗಿಯನ್ನು ಗುರುತಿಸುವುದು ಕಷ್ಟವಾಗಲಿಲ್ಲ. ಪುಟ್ಟಿ ಸಮಾ ಎದೆಯೆತ್ತರಕ್ಕೆ ಬೆಳೆದು ನಿಂತಿದ್ದಾಳೆ. ಚೆಂದಗೆ ಕಂಪ್ಯೂಟರ್ ಓದಿಕೊಂಡು ತುರ್ತಿಗೂ, ಅನುಭವಕ್ಕೀಡಾಗಲು ಸಾಕು ಎಂಬಂತೆ ಕೆಲಸವೊಂದನ್ನು ಹುಡುಕಿಕೊಂಡಿದ್ದಾಳೆ. ಎರಡು ನಿಮಿಷದಲ್ಲಿ ಹುಡುಗಿ ಚಹಾ ಮಾಡಿಕೊಂಡು ಬಂದಳು. ಕಾಕ ಕಾಣಿಸುತ್ತಿಲ್ಲ ಎನ್ನುತ್ತಿದ್ದರೆ,‘ಅಪ್ಪ ಮಲ್ಗಿದಾನೆ. ಎಬ್ಬಿಸ್ತೇನಿ ಇರ್ರಿ’ ಎನ್ನುವಷ್ಟರಲ್ಲಿ ಒಳಗಿನಿಂದ ‘ಯಾರೂ’ ಎನ್ನುವ ಚಂದುಕಾಕನ ಧ್ವನಿ ಕೇಳಿಬಂತು. ಮುಂದಿನ ಹತ್ತು ನಿಮಿಷದಲ್ಲಿ ವ್ಹೀಲ್ ಚೇರ್ ಮೇಲೆ ಕೂತಿದ್ದ ಚಂದುಕಾಕ ಗಾಲಿಯುರುಳಿಸುತ್ತಾ ಹೊರಬಂದ.
‘ಕಾಕ..’ ಎನ್ನುತ್ತಾ ನಿಂತುಬಿಟ್ಟೆ. ಇಳಿದುಹೋದ ಮುಖ, ಅರ್ಧಮರ್ಧ ಇರುವ ಎಡಗೈ, ಬಕ್ಕ ತಲೆ, ಅದಕ್ಕಿಂತಲೂ ಬದುಕು ಇನ್ಯಾವತ್ತೂ ಗಾಡಿಯ ಮೇಲೆ ಕೂರದಂತಾಯಿತಲ್ಲ ಎಂಬ ಮುಖದಲ್ಲೇ ವ್ಯಕ್ತವಾಗುತ್ತಿದ್ದ ದೀನಭಾವ. ಯಾಕೋ ಒಮ್ಮೆ ಹಳೆಯ ಕಾಕಾನ ವೇಗಗಳೆಲ್ಲ ನೆನಪಾಗಿ ನೇರವಾಗಿ ಚಂದುಕಾಕನ ಕಣ್ಣುಗಳನ್ನು ದಿಟ್ಟಿಸಲಾಗಲೇ ಇಲ್ಲ. ಸುಮ್ಮನೆ ಅವನ ಪಕ್ಕ ಕೂತು ಜೀವವಿಲ್ಲದ ಕೈ ಸವರುತ್ತಿದ್ದರೆ ಇದಕ್ಕೆ ಪಕ್ಕಾಗಿದ್ದ ಪುಟ್ಟಿ ಮಾತ್ರ ‘ಮಾಮ ಇದೆಲ್ಲ ತಲೀಗ ಹಚ್ಕೊಬ್ಯಾಡ್ರಿ. ಊಟಕ್ಕೆ ಏಳ್ರಿ..’ ಎನ್ನುತ್ತಿದ್ದಳು. ಆಗಿದ್ದಿಷ್ಟು, ಕಾಕಿ ಹೋದ ಮೇಲೆ ಜೊತೆಜೊತೆಗೆ ಮಗುವನ್ನು ಬೆಳೆಸುತ್ತಾ ಬದುಕು ಕಟ್ಟಿಕೊಂಡ ಚಂದುಕಾಕ. ಮಗಳು ವಯಸ್ಸಿಗೆ ಬರುವವರೆಗೂ ಯಾವ ರೀತಿಯಲ್ಲೂ ಅದಕ್ಕೆ ನೋವಾಗದಂತೆ ಅಪ್ಪಟ ಅಮ್ಮನಾಗಿ ಬೆಳೆಸಿದ. ಅಪ್ಪನಾಗಿ ಜೊತೆಯಾದ. ಪುಟ್ಟ ಹುಡುಗಿಗೆ ಥೇಟು ಹುಡುಗಾಟದ ಸ್ನೇಹಿತನಂತೆ ಚಂದುಕಾಕ ಜೊತೆಗಿದ್ದ. ಹುಡುಗಿ ವಯಸ್ಸಿಗೂ ಮೊದಲೇ ಅಪ್ಪನಂತೆ ಗಾಡಿ ಕಲಿತಳು. ಕಾರು, ಗಾಡಿಗಳೆಲ್ಲ ಪಳಗಿದವು. ಶಾಲೆಯಲ್ಲೂ, ಸಮಾಜದಲ್ಲೂ ಅಮ್ಮನಿಲ್ಲದ ಮಗುವಿಗೆ ಸಿಗಬೇಕಾದ ಕನ್ಸೆಷನ್ ಸಿಕ್ಕುತ್ತಿದ್ದುದರಿಂದ ಪುಟ್ಟಿ, ಕಾಕಿಯ ನೆನಪು ಮತ್ತು ಆರ್ದ್ರತೆಯಿಂದ ಹೊರಬಂದರೂ ಹಬ್ಬಹರಿದಿನಗಳಲ್ಲಿ ಎಲ್ಲ ಮಾಡಿಕೊಂಡು ಕೂರುತ್ತಿದ್ದರೆ ಪಕ್ಕನೆ ಆಕೆಯ ಗೈರುಹಾಜರಿ ಅವರಿಬ್ಬರನ್ನೂ ಕಾಡುತ್ತಿತ್ತು. ಅದ್ಯಾಕೋ ತುಂಬಿದ ಮನೆ ಒಮ್ಮೆಲೇ ಖಾಲಿಯಾದಂತೆನ್ನಿಸಿ ಇಬ್ಬರೂ ಕಣ್ಣೀರಾಗುತ್ತಿದ್ದರು. ಎದ್ದೊಡನೆ ಅಮ್ಮನ ಪಟಕ್ಕೆ ಕೈ ಮುಗಿದು ಹುಡುಗಿ ಶಾಲೆಗೆ ಹೊರಡುತ್ತಿದ್ದರೆ ಕಾಕ ಒದ್ದೆಯಾಗುತ್ತಿದ್ದ. ಆಕೆಯಿಲ್ಲದ ಮನೆ, ಮನಸ್ಸು ಏನೂ ಮಾಡಿದರೂ ತುಂಬುತ್ತಿರಲಿಲ್ಲ. ಇನ್ನಾಕೆ ಇಲ್ಲ ಎನ್ನುವುದರ ಅರಿವು ಇದ್ದರೂ ಕಾಕಿ ಉಳಿಸಿದ್ದ ಗುರುತು ಅಷ್ಟು ಸುಲಭಕ್ಕೆ ಮಾಯುವಂಥದ್ದಾಗಿರಲಿಲ್ಲ.
ಪುಟ್ಟಿ ಓದಿಕೊಂಡು ಇನ್ನೇನು ಕೊನೆಯ ವರ್ಷದ ಪರೀಕ್ಷೆಗೆ ತಯಾರಾಗುತ್ತಿದ್ದಳು. ಕಾಕ ಈಗ ಗ್ಯಾರೇಜಿನಲ್ಲಿ ಮತ್ತೆ ಬಿರುಸಾಗಿದ್ದ. ಆದರೆ ಸಮಯ ಮತ್ತೊಮ್ಮೆ ಕೈಕೊಟ್ಟಿತ್ತು. ಆವತ್ತು ಟ್ರಯಲ್ಲಿಗೆ ಹೋದ ಗಾಡಿಯೊಂದಿಗೆ ಕಾಕ ವಾಪಸ್ ಬರಲಿಲ್ಲ. ಅವನ ಪುಟಾಣಿ ಮಾರುತಿಯ ಮೇಲೆ ಯಮವೇಗದಿಂದ ಬಂದ ಟಿಪ್ಪರು ಹತ್ತಿ ಬಿಟ್ಟಿತ್ತು. ಹುಡುಗ ಓಡುತ್ತ ಬಂದು ಪುಟ್ಟಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಮಾರುತಿಯಿಂದ ಹೊರಗೆಳೆಯುವಾಗ ಕಾಲುಗಳೆರಡೂ ಅಪ್ಪಚ್ಚಿಯಾಗಿ ನರಗಳು ಲಾಡಿಯಂತೆ ನೇತಾಡುತ್ತಿದ್ದವು. ಕಾರಿನಲ್ಲಿ ಹೋಗಿದ್ದ ಕಾಕ ಮನೆಗೆ ಬರುವಾಗ ಯಾವ ಲೆಕ್ಕದಲ್ಲೂ ರಿಪೇರಿಯಾಗದೆ ಗಾಲಿಕುರ್ಚಿಯಲ್ಲಿ ಬಂದಿದ್ದ. ಬಗಲು ಕೋಲಿಡಿದು ಮನೆ ಮಟ್ಟಿಗೆ ನಡೆಯುತ್ತನಾದರೂ ಮೊದಲಿನ ಬದುಕಿರಲಿಲ್ಲ. ಇತ್ತ ಪರೀಕ್ಷೆ, ಅತ್ತ ಅಪ್ಪನ ಜವಾಬ್ದಾರಿ, ಆರೈಕೆ, ದವಾಖಾನೆ, ಓಡಾಟ ಎಲ್ಲವನ್ನು ಹುಡುಗಿ ಪೂರೈಸಿದ್ದಳು. ಗ್ಯಾರೇಜ್ ಹುಡುಗರನ್ನಿಟ್ಟುಕೊಂಡು ಪುಟ್ಟಿ ತಿಂಗಳೊಪ್ಪತ್ತಿನಲ್ಲಿ ಸಂಭಾಳಿಸಿದ್ದಳು. ಆದರೆ ಕಾಕನ ಗಾಡಿಯ ಬದುಕಿನ ಮಜಲು ಕಾಯಂ ಆಗಿ ಮುಗಿದು ಹೋಗಿತ್ತು. ಆವತ್ತು ಕಳೆದ ಜೀವನೋತ್ಸಾಹ ಇವತ್ತಿಗೂ ಕಾಕನ ಮುಖದಲ್ಲಿ ಮೂಡಿಸಲಾಗುತ್ತಿಲ್ಲ. ಮಗಳು ದಂಡೆಗೆ ಹತ್ತಿದ, ಜವಾಬ್ದಾರಿ ಕಳೆಯುವ ಸಂತೃಪ್ತಿ ಕಾಣುತ್ತದೆಯಾದರೂ ಪೂರ್ತಿ ಬದುಕಲ್ಲಿ ಏಟಿನ ಮೇಲೇ ಏಟು ಬಿದ್ದು ಹಣ್ಣಾದಾಗ ಆಗುವ ಯಾತನೆ ಮಾತ್ರ ಮನಸ್ಸಿಗೆ ಗೊತ್ತಾಗುವಂಥದ್ದು.
‘ಮೊದಲ ಆಕಿ ಹೋದಳು. ಈಗ ಹಿಂಗಾತು. ಒಂದು ಹೇಳ್ ತಮ್ಮಾ, ಈ ಹೆಣ್‌ಮಕ್ಕಳಿಗೆ ಹೆಂಗಾದರ ಇಂಥಾ ಶಕ್ತಿ ಬರತದ..? ನಮ್ಮಾಕಿ ಹೋಗಿದ್ದ... ನನಗಿನ್ನೂ ಅರವಗಲ್ದು ಆದರ ಈ ಪುಟ್ಟಿ ನೋಡು. ನನ್ನ ಪರಿಸ್ಥಿತಿ ಹಿಂಗಾಗಿದ್ದಕ್ಕ ನಾ ಇರೋತಂಕ ಮದ್ವಿನೂ ಬ್ಯಾಡ ಅಂತಾ ಕುಂತಾಳು. ಹಿಂಗಂದರ ಆಗ್ತದೇನೋ..? ನಾನೇನೋ ಬಿದ್ದು ಹೋಗೋ ಮರ. ಗ್ಯಾರೇಜ್ ಹುಡುಗೋರು ಒಬ್ರಲ್ಲ ಒಬ್ರು ನನ್ನ ನೋಡ್ಕೋತಾರು. ಅಗದೀ ಎದ್ದು ಓಡಾಡೋದಿಲ್ಲ ಖರೆ. ಆದರೂ ಮನಿಮಟ್ಟಿಗ ಕೋಲು ಸಾತ್ ಕೊಡ್ತದ ಸಾಕು, ಹೆಂಗರೆ ನನ್ನ ಟೈಮ್ ಮುಗಿತದ ಅಂದರ ಪುಟ್ಟಿ ಏಕ್‌ದಂ ಹಿರೇರಗತೇ ಆಡತಾಳು. ನಿನ್ನ ಯಾರು ನೋಡ್ಕೊತಾರು..?’ ಅಂತಾಳ ಮಾರಾಯ ಥೇಟ್ ಅವರವ್ವನಂಗ. ಗದರೋದರಾಗಂತೂ ಒಂದು ಕೈಮುಂದ..’ ಎನ್ನುತ್ತಿದ್ದರೆ,
‘ಸುಮ್ನಿರಪ್ಪ. ಬಂದಾವ್ರ ಮುಂದೆಲ್ಲ ಇದ ಕತೀ ಹೇಳ್ತಿಯಲ್ಲ. ಅಪ್ಪಂಗ ಅರ್ಜೆಂಟ್ ಆಗಿ ನನ್ನ ಮದ್ವಿ ಮಾಡಿ ಕಳಿಸ್ಬೇಕಾಗೇದ ನೋಡ ಮಾಮಾ..’ ಎನ್ನುತ್ತಿದ್ದರೆ ಇಬ್ಬರ ಯಾವ ಭಾವಕ್ಕೂ ಪ್ರತಿಕ್ರಿಯಿಸದ ನಾನು ಸುಮ್ಮನೆ ಕುಳಿತಿದ್ದೆ. ಮನೆಯ ಹೆಣ್ಣುಮಕ್ಕಳಿಗಾಗಿ ಮರುಗುತ್ತಿರುವ ಕಾಕ, ತಾನು ಹೋದರೆ ಮುಂದೆ ಅಪ್ಪನ ಗತಿಯೇನು ಎನ್ನುವ ಮಗಳು.. ಇಷ್ಟು ಚೆಂದದ ಮನಸ್ಸು ಮತ್ತು ಆತ್ಮ ಅವಳಿಗೆ ಮಾತ್ರ ಇರಲು ಸಾಧ್ಯವೇನೋ..?
ಕಾರಣ
ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)
No comments:
Post a Comment