Monday, August 12, 2013

ಅವಳು ನೋಡಿದ್ದು " ಅದಕ್ಕೆ...! " ಅಂತ ಯಾಕಂದ್ಕೊಬೇಕು...?

ಸಹಜವಾಗಿ ಎಲ್ಲರೂ ಒಂದು ಕ್ಷಣ ಸುಂದರಿಯರನ್ನು ಕಂಡರೆ ದೃಷ್ಟಿ ಹರಿಸುತ್ತಾರಾ...? ಎಲ್ಲರೂ ಹೀಗೇ ಮಾಡ್ತಾರಾ...? ನನಗೆ ಗೊತ್ತಿಲ್ಲ.  ಆದರೆ ಅವನು ಹದಿನಾರರ ರಾಹುಲ್ ಎಂಬ ಹುಡುಗನಿರಲಿ ಅಥವಾ ಅರವತ್ತರ ರಿಟೈರ್ ಮಹಾದೇವ ಸ್ವಾಮಿಯೇ ಇರಲಿ. ಖಂಡಿತಕ್ಕೂ ಗಂಡು ಮನಸ್ಸು ಒಂದು ಕ್ಷಣ ಕಣ್ಣರಳಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಸಲಿಗೆ ಇದನ್ನು ಓದಿದವರು ಎದುರಿಗೆ ಎಷ್ಟೇ ನಿರಾಕರಿಸಲಿ ಮನಸ್ಸಿನಲ್ಲಿ ಮಾತ್ರ ಅದನ್ನು ಒಪ್ಪಿಕೊಳ್ಳಲೇಬೇಕು. ಅಷ್ಟಕ್ಕೂ ಇಲ್ಲವೆನ್ನೋದಾದರೆ ಕೊಂಚ ಮಾತ್ರದ ನಿಜಾಯಿತಿ ಅನ್ನೋದು ಕೂಡಾ ಈ ಲೋಕದಿಂದ ಹೊರಟು ಹೋಗಿದೆ ಎಂದೇ ಅರ್ಥ.  ( ಬಟ್ಟೆಯಂತೆ ಗರ್ಲ್‌ಫ್ರೆಂಡ್ಸ್‌ನ್ನು ಬದಲಾಯಿಸುವವರಿಗೆ ಇದು ಅನ್ವಯವಾಗುವುದಿಲ್ಲ )
          ಹಾಗಿದ್ರೆ ಸ್ತ್ರೀಯರು ನೋಡೋದೇ ಇಲ್ಲವಾ ? ನೋಡ್ತಾರೆ. ಅವರೂ ಕೂಡಾ ನಮ್ಮ ನಿಮ್ಮಂತೆ ಒಮ್ಮೆ ಕನಿಷ್ಟ ಒಂದು ಸುತ್ತನ್ನಾದರೂ ಕಣ್ಣರಳಿಸಿರುತ್ತಾರೆ. ಆದರೆ ಖಂಡಿತಾ ನಮ್ಮ ಮತ್ತು ಅವರ ನೋಟದಲ್ಲಿ ಒಂದು ಅಗಾಧವಾದ ವ್ಯತ್ಯಾಸ ಇದ್ದೇ ಇದೆ. ಯಾಕೆಂದರೆ ಒಂದು ಹೆಣ್ಣು ನಮ್ಮನ್ನು ನೋಡಿದ ಮಾತ್ರಕ್ಕೆ ಅದರಲ್ಲಿ ಒಂದು ಅದಮ್ಯ ವಾಂಛೆ ಇದೆ ಎಂದರ್ಥವಲ್ಲ. ಆ ಕೂಡಲೇ ಆಕೆ ನಿಮ್ಮನ್ನು ಬಯಸುತ್ತಿದ್ದಾಳೆ ಎಂದರ್ಥವಲ್ಲ. ಆದರೆ ನಮಗರ್ಥವಾಗೋದೆ ಅದು. ಯಾಕೆಂದರೆ ನಾವು ನೋಡುವ ದೃಷ್ಟಿಯಲ್ಲಿ ಬರಿ ಆಸೆಯ ಗೋಪುರಗಳೇ ಇವೆ. ಅಕಸ್ಮಾತ ಕಾಲೇಜು ಹುಡುಗನೊಬ್ಬನನ್ನು ಒಂದು ಹುಡುಗಿ ಎರಡ್ಮೂರು ಬಾರಿ ತಿರುಗಿ ನೋಡಿದಳೆಂದಿಟ್ಟುಕೊಳ್ಳಿ. ಅದೆಷ್ಟು ವ್ಯವಸ್ಥಿತವಾಗಿ ಅವನ ದಿನಚರಿ ಬದಲಾಗುತ್ತದೆ ಎಂದರೆ ದಿನಾಲು ಮೊದಲನೆ ಪಿರಿಯಡ್ ಅರ್ಧಕ್ಕೆ ಹೋಗುತ್ತಿದ್ದವನು ಇವತ್ತು ಬೆಳಿಗ್ಗೆ ಪ್ರೇಯರ್ ಮುಂಚೆ ಕಿಣಿ ಕಿಣಿ ಎನ್ನಿಸುತ್ತಾ ಗೇಟಿನೊಳಕ್ಕೆ ನುಗ್ಗುತ್ತಿದ್ದಾನೆ... ಮುಖದಲ್ಲೇನೋ ಹುಮ್ಮಸ್ಸು.. ಯಾರಾದರೂ ತನ್ನನ್ನು ನೋಡುತ್ತಿದ್ದಾರಾ ಎಂದು ಪದೇ ಪದೇ ಅತ್ತಿತ್ತ ದೃಷ್ಟಿ ಹರಿಸುತ್ತಾ ಆಕೆಯನ್ನು ಹೇಗೆ ಆದಷ್ಟು ನೇರವಾಗಿ ನೋಡುತ್ತಾ ನಿಲ್ಲಲು ಸಾಧ್ಯವಾಗುತ್ತೆ ಎಂದು ಪದೇ ಪದೇ ನಿಂತಲ್ಲೇ ಭಂಗಿ ಬದಲಿಸುತ್ತಾ... ಆ ಕಡೆಗೆ ಕ್ಲಾಸಿನಲ್ಲೂ ಹಿಂದಿನ ಕಾರ್ನರ್ರೆ ಆಗಬೇಕು. ಇಲ್ಲವಾದರೆ ತಿರುಗಿ ನೋಡಿದರೆ ಲೆಕ್ಚರರ್ ಕಣ್ಣು ಬಿಡ್ತಾನಲ್ಲ. 
            ಆಕೆ ಎಷ್ಟು ಹೊತ್ತಿಗೆ ಕಾರಿಡಾರ್‌ನಲ್ಲಿ ಎದುರಿಗೆ ಬರ್ತಾಳೆ. ಬಸ್ಸಿನಲ್ಲಿ ಕರೆಕ್ಟಾಗಿ ಎಷ್ಟು ದೂರದಿಂದ ಬರ್ತಾಳೆ... ಯಾವ ಸ್ಟಾಪಿಗೆ ಹತ್ತಬೇಕು... ದರಿದ್ರ ಶೂ ಈ ಬಾರಿ ಬದಲಿಸಬೇಕು... ಚೆನ್ನಾಗಿ ಕಾಣುತ್ತಿಲ್ಲ ಅನ್ನೋದನ್ನ ಗಮನಿಸ್ತಾಳಾ... ? ಅವಳಿಗೂ ಹೀಗೆ ಅನ್ನಿಸುತ್ತದಾ...? ಒಂದೇ ಎರಡೇ... ಆದರೆ ವಿಪರ್ಯಾಸವೆಂದರೆ ನಮಗೆ ಅರ್ಥವಾಗುತ್ತಿರೋದು ಬರೀ ಬಾಡಿ ಲಾಂಗ್ವೇಜ್ ಮಾತ್ರ ಅನ್ನೋದು. ಅಸಲಿಗೆ ಅದಕ್ಕೆ ಪೂರಕವಾಗಿ ನಮ್ಮ ಟಿ.ವಿ. ಹಾಗೂ ಸಿನೇಮಾದ ಪ್ರಭಾವ ಹೇಗಿದೆ ಎಂದರೆ ನೈಜತೆಯಿಂದ ದೂರವಾಗಿ ಕೇವಲ ಆಕರ್ಷಣೆಯ ಸರಕನ್ನೇ ಬಿಂಬಿಸುವುದರಿಂದ ಪ್ರಬಲ ಮಾಧ್ಯಮದ ಪ್ರಭಾವವನ್ನು ಮನಸ್ಸು ಸುಲಭವಾಗಿ ನಂಬಿಕೊಂಡು ಬಿಡುತ್ತದೆ. ಅಸಲಿಗೆ ಯಾರೋ ಒಬ್ಬಳು ನಮ್ಮನ್ನು ನೋಡಿದ ಮಾತ್ರಕ್ಕೆ ಆಕೆಗೆ ನೀವು ಇಷ್ಟವಾಗಿ ಭಯಂಕರ ಪ್ರೀತಿ ಮೂಡಿ ಬಿಟ್ಟಿದೆ ಎಂದಲ್ಲ.
            ಅದರ ಬದಲಾಗಿ ಅದೇಕೋ ಅದ್ಯಾವುದೋ ನಿಮ್ಮ ಪ್ಯಾಂಟಿನ ಕಲರ್ ಸು೦ದರವಾಗಿ ಕಂಡಿರಬಹುದು... ನಿಮ್ಮ ಹೇರ್ ಸ್ಟೈಲ್ ಬದಲಾಯಿಸಿದ್ದನ್ನು ಗಮನಿಸಿರಬಹುದು.. ನಿಮ್ಮ ಕೈಲಿದ್ದ ಬುಕ್ಸ್ ಮೇಲಿನ ಸ್ಟ್ಯಾಲ್ಲೋನ್ ಚಿತ್ರ... ಬೆಲ್ಟ್‌ಗೆ ಇದ್ದ ಮೆಟಾಲಿಕ್ ಬಕ್ಕಲ್‌ನ ಮಿಂಚು... ಕೂದಲಿಗೆ ಕೊಂಚವೇ ಹಚ್ಚಿಸಿರುವ ಬ್ರೌನ್ ಶೇಡ್ ... ನಿಮ್ಮ ನಡಿಗೆಯ ವಿಚಿತ್ರ ಭಂಗಿ.. ವಿಭಿನ್ನವಾಗಿ ನಿಂತುಕೊಳ್ಳುವ ಶೈಲಿ.. ಅಥವಾ ನಗೆ ತರಿಸಬಹುದಾದ ನಿಮ್ಮ ಅಗಲ ಹಸ್ತ.. ಗಿಡ್ಡ ಕೈ... ಅಗತ್ಯಕ್ಕಿಂತ ಹೆಚ್ಚು ಬಾರಿ ಬಾಚಿಕೊಳ್ಳುವ ಕೂದಲು... ಆಗಾಗ ತೆಗೆದು ನೋಡಿ ಸುಖಾಸುಮ್ಮನೆ ಆನ್ ಮಾಡಿ ಒಳಗಿರಿಸುತ್ತಿರುವ ಮೊಬೈಲು.... ರಿಂಗ್ ಟೋನ್ ಇಲ್ಲದಿದ್ದರೂ ಕಿವಿಗಿರಿಸಿಕೊಂಡು ಜೀವವಿದೆಯಾ ಎಂದು ಸುಖಾ ಸುಮ್ಮನೇ ನೋಡುವ ನಿಮ್ಮ ಎಡಬಿಡಂಗಿತನ... ಅನಾವಶ್ಯಕವಾಗಿ ಕಿರಿಯುತ್ತಿರುವ ಹಲ್ಲು... ನಿಮ್ಮ ಬ್ಯಾಗಿನ ಮೇಲಿರುವ ಹಳೆಯ ಹೇಮಾಮಾಲಿನಿಯ ಹೊಸ ಪ್ರಿಂಟು... ನೀವವಳನ್ನು ಆಗಾಗ ಕದ್ದು ಗಮನಿಸುತ್ತಿರೋದು... ಆ ಕಡೆಯವಳ ಗುಂಗುರಾದರೂ ನೀಟಾಗಿ ಕಾಣುವ ಫ್ರ೦ಟ್ ಕಟ್ ಜೊಂಪೆ ಕೂದಲು... 
              ಹೊರಗೆ ಎಲ್ಲೋ ನೋಡಿದರೂ ನಿಮ್ಮ ಅಕ್ಕಪಕ್ಕವೇ ಇರುವ ದೃಷ್ಟಿ... ಎಷ್ಟೆ ರಿಸರ್ವ್ ಆಗಿದ್ದರೂ ಕೊಂಚ ಸುಂದರಿ ರಸಿಕ ಹುಡುಗಿ ಸಹಜ ಮಾತುಕತೆಗೆ ಇಳಿದ ಕೂಡಲೇ ಬದ್ಲಾಗಿ ಬಿಡುವ ನಿಯತ್ತು.. ಮಾತಾಡುತ್ತಲೇ ಬದಲಾಗುವ ನಿಮ್ಮ ಬಾಡಿ ಲಾಂಗ್ವೇಜು... ಅದರಲ್ಲಿನ ಅಧೀರತೆ... ಕಂಡು ಕಾಣದಂತೆ ಹಲ್ಬಿಡುತ್ತಾ ಅಗಲಿಸುತ್ತಲೇ ಇರುವ ಬಾಯಿ... ಆಗಾಗ ಕೆರೆದುಕೊಳ್ಳುವ ಕಿವಿಯ, ಮೂಗಿನ ತುದಿಗಳು... ಕೊಂಚ ಬಿಸಿಲಿದ್ದರೂ ಹಾಕಿಕೊಂಡು ನಿಂತು ಬಿಡೋ ತಂಪು ಕನ್ನಡಕ... ಒಂದೇ ಎರಡೇ ಆಕೆಗೆ ಈ ಎಲ್ಲಾ ವಿಷಯಗಳು ಒಮ್ಮೆಲೇ ಗಮನಕ್ಕೆ ಬಂದಿರಬಹುದು ಅಥವ ಒಂದೂ ಬಾರದಿರಬಹುದು. ಆದರೆ ಖಂಡಿತಾ ಇಂತಹ ಎಷ್ಟೊ ವಿಷಯದಲ್ಲಿ ಒಂದನ್ನಾದರೂ ಆಕೆ ಗಮನಿಸಿರುತ್ತಾಳೆ. ಅದಕ್ಕಾಗಿ ಒಮ್ಮೆ ತಪ್ಪಿದರೆ ಎರಡು ಬಾರಿ ನಿಮ್ಮತ್ತ ನೋಡಿರಬಹುದು. ಆದರೆ ಹಾಗೆ ನೋಡಿದ ಮಾತ್ರಕ್ಕೆ ನಾವು ಮನದಲ್ಲಿ ಮಂಡಿಗೆ ತಿನ್ನಲಾರಂಭಿಸಿಬಿಡುತ್ತೇವೆ. ತೀರ ಆಘಾತಕಾರಿ ಸಂಗತಿ ಎಂದರೆ ಸಂಜೆಯ ಹೊತ್ತಿಗೆ ಕೊಂಚ ಮಾತ್ರ ಗುಂಡು ಹಾಕಿಕೊಂಡೋ ಅಥವಾ ಅದಿಲ್ಲದೆಯೋ " ಸಖತ್ತಾಗಿ ಲೈನ್ ಕೊಡ್ತಾಳಮ್ಮ" ಎಂದು ಆ ಕಡೆಯವನು ಆಡಿಕೊಳ್ಳುತ್ತಿದ್ದರೆ, ಇಲ್ಲಿನ ಪಕ್ಕದ ಊರಿನಲ್ಲೊಮ್ಮೆ " ಆದ್ ಯಾ ನಮನಿ ನೋಡ್ತು ಮಾರಾಯ., ಯಂಗಂತೂ ಹ್ಯಾಂಗ್ಯಾಂಗೋ ಆಗ್ ಹೋಯ್ತಾ... ಸಾಯಲಿ ನಿನ್ನೆ ಸರ‍್ಯಾಗಿ ಮನಿಕಳಾಕೂ ಆಗ್ಲಿಲಾ ಹೇಳಿ... ಎಂತಾ ಸ್ಟ್ರಾಂಗು ಅದರ ಕಣ್ಣು ಹೇಳಿ... " ಎಂದು ಮಾಣಿ ತನ್ನದೇ ಜೊತೆಗಿನವನ ಕಿವಿ ಕಚ್ಚುತ್ತಿರುತ್ತದೆ. 
            ಅಸಲಿಗೆ ಇವನ ಅದೇ ನೇತಾಡುವ ಲೂಸು ಪ್ಯಾಂಟು, ಸೊಂಟದ ಮೇಲೆ ನಿಲ್ಲದೇ ಒದ್ದಾಡುವ ದೊಗಳೆ ಜೀನ್ಸು... ಅದಕ್ಕೆ ಹಲ್ಲು ಕಚ್ಚಿ ನೇಣು ಹಾಕಿದ೦ತೆ ಬಿಗಿದ ಅವನ ಕೈಗಿಂತ ದಪ್ಪದ ಲೆದರ್ ಬೆಲ್ಟು... ಮತ್ತು ಹೊಟ್ಟೆಗಿಲ್ಲದವರಂತಹ ಬಡಕಲು ಬೆನ್ನು, ಆಕೆಯನ್ನು ಅದಿನ್ಯಾವ ಪರಿ ಆಕರ್ಷಿಸುತ್ತದೋ ಆ ಮಾಣಿಯೇ ವಿವರಿಸಬೇಕು. ಅಸಲಿಗೆ ಇದೇ ಪುರುಷ ಪುಂಗವ ತನಗೇ ಗೊತ್ತಿಲ್ಲದಂತೆ ನಿನ್ನೆಯ ಬದಲಾಯಿಸದ ಅ೦ಡರ್‌ವೇರ್ ಉಂಟು ಮಾಡುತ್ತಿದ್ದ ಕಿರ್ಕಿರಿಗೆ ಅದು ಬಸ್ ಸ್ಟ್ಯಾಂಡೋ... ಮಾರ್ಕೇಟ್ಟಾ... ಶಾಪಿಂಗ್ ಕಾಂಪ್ಲೆಕ್ಸಾ... ನೋಡದೆ ಎಲ್ಲರೆದುರಲ್ಲೇ ಹಿಂಭಾಗ, ಮುಂಭಾಗ ಕೆರೆದುಕೊಳ್ಳುತ್ತಾ ನಿಂತಿದ್ದಾಗಲೂ ನೋಡಿದ ಹೆಂಗಸರಷ್ಟೆ ಅಲ್ಲ, ಗಂಡಸರೂ ಕೂಡಾ " ಅದ್ನೋಡು ಅದ್ಯಾವ ರೀತಿ ಗಿಟಾರ್ ಬಾರಿಸ್ತಾನೆ... ಸಾಯಲಿ ಸರ್ಯಾಗಿ ಸ್ನಾನ ಮಾಡೋಕು ಬರಲ್ಲವಾ " ಎಂದು ಹಲ್ಲು ಕಚ್ಚುತ್ತಿದ್ದರೆ, ಪಕ್ಕದ ರಸ್ತೆ ದಾಟುತ್ತಿದ್ದ ಆಂಟಿಯನ್ನು ನೋಡುತ್ತಾ ನಿಂತು ಬಿಡುವ ನಮ್ಮ ಕಂಠೀರವನಿಗೆ ಅರ್ಥವೇ ಆಗುವುದಿಲ್ಲ. ಬದಲಿಗೆ ಕೈ ಇನ್ನೊಮ್ಮೆ ಸಂದುಗಳತ್ತ ಬಿಡು ಬೀಸಾಗಿ ಸರಿಸುತ್ತಲೇ ನಿಂತಿರುತ್ತಾನೆ.
           ಯಾಕೆ ಹೀಗೆ ಯಾವುದೇ ಪುರುಷರು, ಹುಡುಗಿಯರು ಅಥವಾ ಹೆಣ್ಣೊಬ್ಬಳು ಒಂದೆರಡು ಬಾರಿ ಹೆಚ್ಚಾಗಿಯೇ ನೋಡಿದಳೆಂದರೆ ಅದರಲ್ಲಿ ಕಾಮದ ವಾಸನೆಯನ್ನೇ ಹುಡುಕುತ್ತಾರೆ... ? ಯಾಕೆಂದರೆ ಅದೊಂದು ರೀತಿಯಲ್ಲಿ ನಮ್ಮ ಮನಸ್ಸು ಹಾಗೇ ಯೋಚಿಸುತ್ತಾದ್ದರಿಂದಾಗಿನಾ ಅಥವಾ ಹಾಗೊಂದು ಆಸೆ ಹೊಕ್ಕುಳಿನಾಳದಿಂದ ಹುಟ್ಟಿಕೊಂಡು ಬಿಡುತ್ತದಾ ? ಅದನ್ನು ಹಾಗೆ ಮ೦ಡಿಗೆ ತಿನ್ನುವವರೇ ಹೇಳಬೇಕು. ಅಸಲಿಗೆ ಹಾಗೆ ನಾವು ನೋಡುವ ಮಟ್ಟಕ್ಕೆ ಈ ದೇಶದ ಹೆಣ್ಣು ಮಕ್ಕಳೇನಾದರೂ ಇಳಿದು ಬಿಟ್ಟಿದ್ದರೆ ನಾವು ಇಷ್ಟೊತ್ತಿಗೆ ನೈತಿಕವಾಗಿ ಅಷ್ಟೇ ಅಲ್ಲ ಸರ್ವತೋಮುಖವಾಗಿ ದಿವಾಳಿತನದ ಅಂಚಿನಲ್ಲಿ ನಿಂತಿರುತ್ತಿದ್ದೆವು. ಅಕಸ್ಮಾತಾಗಿ ಎಲ್ಲಾ ರಂಗದಲ್ಲೂ ಇವತ್ತು ಪುರುಷ ನಿಂತು ಸಾಧಿಸುತ್ತಿದ್ದಾನೆಂದರೆ ಎಲ್ಲಾ ಕಡೆಯಲ್ಲೂ ಅಷ್ಟೆ ಬೆ೦ಗಾವಲಾಗಿ ಬೆಂಬಲವಾಗಿ ನಿಂತು ಬಿಟ್ಟಿರೋ ಹೆಣ್ಣೇ ಕಾರಣ. ಜೊತೆಗೆ ನಮ್ಮಷ್ಟು ಕಚ್ಚೆ ಹರುಕತನವಿನ್ನೂ ಈ ನಮ್ಮ ದೇಶದ ಹೆಣ್ಣುಗಳಿಗೆ ಕಾಡಿಲ್ಲ ಎನ್ನುವುದೂ ಕೂಡಾ ನಮ್ಮ ನಮ್ಮ ಓಡುವ, ನೋಡುವ ನೋಟಗಳಿಗೆ ಅರ್ಥವಾದರೆ ನಮ್ಮ ಸರ್ವತೋಮುಖ ಪ್ರಖರತೆ ಇನ್ನಷ್ಟು ಹೆಚ್ಚಾದೀತು... ! ಇನ್ನು ಮುಂದೆ ನೋಡುವಾಗ ಹುಶಾರು.

Sunday, August 11, 2013

ಅವಳ ಸ್ವಗತಗಳಿಗೆ ನಾನು ದನಿಯಾಗುತ್ತಾ...!!!


ಜೀವನದ ಈ ತಿರುವಿನಲ್ಲಿ ಬಂದು ನಿಂತ ಅವಳ ಬಳಿಯಲ್ಲಿ, ಯಾಕೆ ಅವನಿಗೆ ಒಲಿದೆ ಎಂಬುವುದರ ಬಗ್ಗೆ ಸ್ಪಷ್ಟ ಉತ್ತರವಿಲ್ಲ. ಆಕೆಯಷ್ಟೆ ಯಾಕೆ...? ಈ ಜಗತ್ತಿನಲ್ಲಿ ಯಾವುದೇ ಹೆಣ್ಣಿನ ಈ ರೀತಿಯ ಕಥೆಯ ಹಿಂದೆ ಇಂತಹದ್ದೊಂದು ಪ್ರಶ್ನೆಯನ್ನು ಇರಿಸಿದರೆ ಯಾವ ಬಿಂದುವಿನ ಬಳಿ ತಾನು ಬದಲಾದೆನೆಂದು ಹೇಗೆ ಹೇಳಿಯಾಳು... ? ಗೆದ್ದ ಗಂಡಸಾದರೂ ಹೇಗೆ ಗೆದ್ದೆ... ಎಲ್ಲಿ ಗೆದ್ದೆ ಅವಳನ್ನು ಎಂದು ಹೇಗೆ ಹೇಳಿಯಾನು... ? 
ಅಸಲಿಗೆ ಅಲ್ಲಿ ಎಲ್ಲವೂ ಗೆಲುವುಗಳೇ ... ಎಲ್ಲವೂ ಸೋಲುಗಳೇ ಪರಸ್ಪರರಿಗೆ, ಹಾಗಿದ್ದಾಗ ಅದೊಂದು ಬಯಸುವ ಸೋಲು ಮತ್ತು ಗೆಲುವಿನ ಸಂಗಮವಲ್ಲದೇ ಬೇರೇನಲ್ಲ... ಅದೇನು ಮೈಲಿಕಲ್ಲುಗಳೇ...? ಗುರುತಿಸಿಟ್ಟುಕೊಳ್ಳಲು. ಅದೇನಿದ್ದರೂ ಮನಸ್ಸು ಮನಸ್ಸುಗಳು ಸ೦ಬಂಧವಷ್ಟೆ... ಅಲ್ಲೇನಿದ್ದರೂ ಅನುಭೂತಿಗಳಷ್ಟೇ...! ಅವುಗಳನ್ನು ಬೆಸೆದುಕೊಳ್ಳಲು ಇಬ್ಬರಿಗೂ ಅದರಲ್ಲೂ ಗಂಡಸಿಗೆ ಗೊತ್ತಿರಬೇಕಷ್ಟೆ... !!
ಅದಕ್ಕೂ ಮಿಗಿಲಾಗಿ ಗಂಡಸಾದವ ಯಾವಾಗಲು ಸೋತು ಹೆಣ್ಣನ್ನು ಗೆಲ್ಲಬೇಕೆನ್ನುವ ನಿಜವಾದ ಸೂತ್ರ ಇವತ್ತಿಗೂ ತುಂಬ ಪ್ರಸ್ತುತ ಎನ್ನುವುದು ತುಂಬಾ ಗಂಡಸರಿಗೆ ಅರ್ಥವಾಗದಿರುವುದು ಖೇದ. ಜಗತ್ತು ಮುಂದುವರಿಯುತ್ತಿರುವಾಗಲೂ ಅದೇ ಹರಟೆ ಕಟ್ಟೆಯಲ್ಲಿ ಸಮಯ ಕಳೆದು " ನ್ಯೂಸ್ " ಬದಲಾಗಿ ಕಾರ್ಟೂನ್/ಫ್ಯಾಷನ್ ನೋಡುತ್ತ ಸಮಯ ಕಳೆವ, ಕಿರು ಬೆರಳಿನಲ್ಲಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಮೂಗು ಗಿವುಟಿ... ಆ ಉತ್ಪಾದನೆಯನ್ನ ಕುಳಿತಲ್ಲೇ ಮಾಯ ಮಾಡುತ್ತಾ... ಕೆಲವೊಮ್ಮೆ ವಾಕಿಂಗ್ ಹೊರಟರೆ ಎಗ್ಗಿಲ್ಲದೆ ಎಲ್ಲೆಂದರೆ ಅಲ್ಲಿ ಕ್ಯಾಕರಿ ಉಗುಳುವುದು... ಜನ ನೋಡಲಿ ಇಲ್ಲದಿರಲಿ ರಪರಪನೇ ಬುಡ ಕೆರೆದು ಕೊಂಡುಬಿಡುವ... 
            ಅದೇ ಹಳೆ ಲುಂಗಿಯಲ್ಲಿ ಸಶಬ್ದವಾಗಿ ಹಿಂಗಾಳಿ ಬಿಡುವುದು... ಮನೆಯಲ್ಲಿಯೂ ಬಾಗಿಲು ತೆಗೆದುಕೊಂಡು ನಿಂತುಕೊಂಡೆ ಉಚ್ಚೆ ಹೊಯ್ಯುವುದು... ಬರೀ ಕಾಚಾದಲ್ಲೇ ಓಡಾಡಿಕೊಂಡಿರುವುದು... ಸಾಕ್ಸ್ ಎಲ್ಲೋ ಶೂ ಎಲ್ಲೋ... ಹಾಸಿಗೆಯ ಮೇಲೆ ಆಗಾಗ ಭಾರತದ ಭೂಪಟ... ಹಲ್ಲುಜ್ಜದ ಬಾಯಿಯನ್ನ ನೊಣಗಳಿಗೆ ಹೆದ್ದಾರಿಯನ್ನಾಗಿಸಿ ಅಂಗಾತ ಹೊಟ್ಟೆ ಮೇಲೆ ಮಾಡಿ ಬಿದ್ದುಕೊಳ್ಳೊದು... ರಾತ್ರಿ ಮಲಗುವ ಮುನ್ನವಾದರೂ ಫ್ರೇಶ್ಶಾಗಿ ಇರಬೇಕೆನ್ನುವ ಸಣ್ಣ ಜ್ಞಾನವೂ ಇಲ್ಲದ...  ತನ್ನದೇ ಜಗತ್ತಿನಲ್ಲಿ ಅಪ್ಪಟ ಕಟ್ಟಳೆಯಲ್ಲಿ ಬದುಕಿ ನೂರು ವರ್ಷ ತೆಗೆಯುವುದಕ್ಕಿಂತಲೂ ಸ್ವಚ್ಛಂದವಾಗಿ ಜಗತ್ತು ನೋಡುವ ... ಸುಂದರ ಬಾಳು ಕಾಣುವದನ್ನು ತಪ್ಪು ಅನ್ನುತ್ತೀಯಾ...? ಇವೆಲ್ಲಾ ಚಿಕ್ಕ ಅಡ್ಜ್‌ಸ್ಟ್‌ಮೆಂಟ್‌ನಲ್ಲಿ ಸರಿಯಾಗಬಹುದಾದ ಕಿರ್ಕಿರಿಗಳು ಅನ್ನಿಸುತ್ತದನೋ...? ಆದರೆ ಅದೆಲ್ಲವನ್ನೂ ನಿರ೦ತರವಾಗಿ ಅನುಭವಿಸೋದಿದೆಯಲ್ಲ ಅದನ್ನು ಅನುಭವ ಮಾತ್ರ ತಿಳಿಸಬಲ್ಲದು.
          ಬೇರೇನೂ ಇಲ್ಲದಿದ್ದರೂ ನಮ್ಮ ಪಿರಿಯಡ್ ಟೈಂನಲ್ಲಾದರೂ ಸೊಂಟ ನೋವೆಂದರೆ ಕೊಂಚ ಒತ್ತಲೇ ಅಂತ ಕೇಳಿದರೂ ಸಾಕು ಅರ್ಧ ನೋವು ಮಾಯವಾಗಿ ಬಿಡುತ್ತೇ... ಈ ಎಲ್ಲ ವಿಷಯಗಳು ಸೆಕ್ಸ್‌ಗಿಂತಲೂ ಅದ್ಭುತ ಸುಖವನ್ನ, ನೆಮ್ಮದಿಯನ್ನ ಹೆಂಡತಿಯರಿಗೆ ಕೊಡುತ್ತವೆ ಅನ್ನೋದು ಯಾವಾಗ ಈ ಗಂಡಸರಿಗೆ ಅರ್ಥವಾಗುತ್ತೆ. ಅಸಲಿಗೆ ಎಲ್ಲೆಡೆಗೂ ಅನೈತಿಕ ಸಂಬಂಧಗಳಿಗೆ ಹೆಣ್ಣೇ ಕಾರಣವೆನ್ನುತ್ತಾರಾದರೂ ವಾಸ್ತವವಾಗಿ ನೋಡಿದರೆ ಗಂಡಸರೇ ಸರಿ ಇಲ್ಲ. ಅದಕ್ಕಾಗೇ ಈ ಅನೈತಿಕಗಳೂ, ತರಹೇವಾರಿ ಕೌಟುಂಬಿಕ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತಿವೆ. 
         ಆಫ್ ಕೋರ್ಸ್ ಹೆಣ್ಣಾದವಳು ಹೆಚ್ಚಿನಾಂಶ ಗಂಡನ ದರ್ಪ, ಅಧಿಕಾರವನ್ನೂ ಎಂಜಾಯ್ ಮಾಡುತ್ತಾಳೆನ್ನುವುದು ಸುಳ್ಳಲ್ಲವಾದರೂ ಅದು ಪ್ರೀತಿ ಭರಿತವಾಗಿರಬೇಕು. ತನ್ನೆಡೆಗೊಂದು ಕನ್ಸ್‌ರ್ನ ಇರಬೇಕೆಂದು ಬಯಸುತ್ತಾಳೆ. ಪಂಚ ಪಾಂಡವರನ್ನೇ ಭರಿಸಬೇಕಾಗಿ ಬಂದದ್ದು ದ್ರೌಪದಿಯ ಮೇಲೆ ನಡೆದ ದೌರ್ಜನ್ಯ ಎಂದೇ ಎಷ್ಟೋ ಕಡೆಯಲ್ಲಿ ಗುರುತಿಸಲಾಗುತ್ತಿದೆ. ಆದರೆ ನಿಜವಾದ ಪ್ರೇಮದಿಂದ ಬಂದಿದ್ದರೆ, ಆಕೆಗೆ ಶತ ಕೌರವರನ್ನೂ ಬೇಕಾದರೂ ಭರಿಸಬಲ್ಲ ತಾಕತ್ತಿತ್ತು. ಅದಕ್ಕೆ ಬೇಕಾದ ಮಾನಸಿಕ ಪ್ರಭುದ್ಧತೆಯ ಜೊತೆಗೆ ನೈಜ ಮನ್ನಣೆ ನೀಡಬೇಕಾದ ಜಾವಾಬ್ದಾರಿ ಮಾತ್ರ ಪುರುಷರದಲ್ಲದೇ ಇನ್ನೇನು...? ನಿಸ್ವಾರ್ಥ ಪ್ರೀತಿಗೆ ಹೆಣ್ಣು ಒಲಿಯುತ್ತಾಳೆನ್ನುವುದರಲ್ಲಿ ಇವತ್ತಿಗೂ ಸಂಶಯವಿಲ್ಲ.
         ಯಾವುದೇ ಗಂಡಸರು ಹೆಣ್ಣಿನ ಆಸೆಗಳನ್ನು ಭೌತಿಕವಾಗಿ ನೂರಕ್ಕೆ ನೂರರಷ್ಟು ಪೂರೈಸುತ್ತಾರೇನೋ, ಆದರೆ ಮಾನಸಿಕವಾಗಿ ಅವರಿಗೆ ಬೇಕಾದ ಜೊತೆಯನ್ನು ನೀಡುವಲ್ಲಿ ವಿಫಲವಾಗುತ್ತಿರುವುದರಲ್ಲಿ ಸ೦ದೇಹವೇ ಇಲ್ಲ. ಹೆಣ್ಣಿಗೆ ಒಂದು ಬೊಗಸೆ ಪ್ರೇಮವನ್ನು ಪ್ರಾಮಾಣಿಕವಾಗಿ ಕೊಡೋದನ್ನ ಈ ಲೋಕದಲ್ಲಿ ಪ್ರತಿಯೊಬ್ಬ ಗಂಡಸು ಅರಿತ ದಿನದಿ೦ದಲೇ ಅನೈತಿಕತೆ ನಾಶವಾಗಬಲ್ಲದು. ಹೊರತಾಗಿ ಬೇರೇನೂ ಕಾರಣವಲ್ಲ. ಹೆಣ್ಣು ಹೇಗೆ ಪ್ರೇಮಕ್ಕೆ... ಪ್ರೀತಿಗೆ ಸೋಲುತ್ತಾಳೋ... ಅಷ್ಟು ಸುಲಭವಾಗಿ ಶಯನೋತ್ಸವಕ್ಕೆ ಮಂಚಕ್ಕೆ ಬಂದು ಬಿಡಲು ಸಜ್ಜಾಗಲಾರಳು, ಮತ್ತದು ಅವಳಿಂದ ಸಾಧ್ಯವಿಲ್ಲ ಕೂಡಾ... ! 
           ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. ಇವತ್ತಿಗೂ ಮನಸ್ಸಿಲ್ಲದ ಮನಸ್ಸಿನಿಂದ ದೈಹಿಕವಾಗಿ ಹೆಣ್ಣನ್ನು ಸೇರೋದಿದೆಯಲ್ಲ ಅದರಷ್ಟು ನೀಚ ಕೆಲಸ ಈ ಲೋಕದಲ್ಲಿ ಮತ್ತಾವುದೂ ಇರಲಾರದು. ಎಷ್ಟೊ ಜನ ಗಂಡಸರಿಗೆ ಇವತ್ತಿಗೂ ಎರಡು ಸೆಕ್ಸ್‌ನ ಮಧ್ಯೆ ಕನಿಷ್ಟ ಅವಧಿಯ ಅಂತರವಾದರೂ ಇರಬೇಕೆನ್ನುವ ಪರಿಜ್ಞಾನವೂ ಇಲ್ಲ. ಅಲ್ಲೂ ಒಂದೇ ಮುಖ್ಯವಾಗುತ್ತಿದೆಯೇ ಹೊರತಾಗಿ ಹೆಂಡತಿಗೆ ಬೇಕೆ ಬೇಡವೇ... ಅವಳ ಮನಸ್ಥಿತಿ ಹೇಗಿದೆ... ಇತ್ಯಾದಿ ಎಲ್ಲವೂ ಅವರಿಗೆ ಸೆಕ್ಸ್ ಬೇಕೆನ್ನುವ ಆಸೆಯೆದುರಿಗೆ ಗೌಣವಾಗುತ್ತದೆ.  ತುಂಬಾ ಕೇಸ್‌ಗಳಲ್ಲಿ ಸಾಮಾಜಿಕ ಭದ್ರತೆಗೊಸ್ಕರ ಅವಲ೦ಭಿಸಿರುವುದರಿಂದಾಗಿ ಹೆಣ್ಣು ಗಂಡಸಿನ ಎಲ್ಲಾ ರೀತಿಯ ಅವಗುಣಗಳನ್ನು ಗಣಿಸಿಯೂ ಅವನೊಂದಿಗೆ ಬಾಳುತ್ತಾಳೆ.
ಕೊನೆಯಲ್ಲಿ ಒಂದೇ ಒಂದು ಮಾತು. ಎಲ್ಲರಿಗೂ ಇದು ... ಏನು ಗೊತ್ತೆ... ?
ಈ ಜಗತ್ತಿನ ಎಲ್ಲ ಸ್ತ್ರೀಯರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಅಸೆಗಳು ಗೂಡು ಕಟ್ಟಿಕೊ೦ಡೇ ಇರುತ್ತವೆ. ಆದರೆ ಅವರಿಗೆ ಬದುಕಿನ ಓಟದಲ್ಲಿ ಅದಕ್ಕೊಂದು ಅಗತ್ಯದ ಪ್ರಿಯಾರಿಟಿ ಇರುವುದಿಲ್ಲ ಅಷ್ಟೆ. ಎಲ್ಲರೂ ಯಾಕೆ ಹೀಗೆ ಮಾಡುವುದಿಲ್ಲವೆಂಬ ಪ್ರಶ್ನೆ ಏನಾದರು ಇದ್ದರೆ ಅದಕ್ಕೆ ಕಾರಣ " ಕೇವಲ ಅವಕಾಶ ಮತ್ತು ಸೌಲಭ್ಯ ಹಾಗು ಅವರಲ್ಲಿ ಅಂತಹದ್ದೊಂದು ಧೈರ್ಯದ ಕೊರತೆಯೇ " ಹೊರತಾಗಿ ಅವರಿಗೇನು ಆಸೆ ಇಲ್ಲವೆಂದಲ್ಲ..."
ಹೀಗೆ ಅವಳು ಗಂಟೆಗಟ್ಟಲೆ ಮಾತಾಡುತ್ತಿದ್ದರೆ ನನ್ನ ಧ್ವನಿಗೆ ಅಲ್ಲಿ ಜಾಗವಿರಲಿಲ್ಲ. ಅಷ್ಟಕ್ಕೂ ಒಂದು ನೊಂದ ಜೀವಕ್ಕೆ ಅದರ ಧ್ವನಿಗೆ ಕಿವಿಯಾಗುವುದಕ್ಕಿಂತ ದೊಡ್ಡ ಸಾಂತ್ವನ ಬೇಕಾ...? ಅಷ್ಟೆ. ನಾನು ಕುಳಿತೆ ಇದ್ದೆ. ಅವಳ ಧ್ವನಿಗೆ ಕಿವಿಯಾಗುತ್ತಾ. ಅಷ್ಟಕ್ಕೂ ನಾನು ಹೋದದ್ದೇ ಅದಕ್ಕಾಗಿ. ಅಲ್ಲಿ ಆ ದಿನ ಸೇರಿದವರದೆಲ್ಲರದೂ ಒಂದೊಂದು ಕಥೆ. ಉಳಿದಿದ್ದನ್ನು ಇನ್ಯಾವತ್ತಾದರೂ ಬರೆದೇನು.

Friday, August 9, 2013

ಸಾಹಿತ್ಯದ ಗು೦ಪುಗಾರಿಕೆಯಲ್ಲೇ ಕಳೆದುಹೋಗುತ್ತಿರುವ ಸೃಜನ ಶೀಲತೆ.

( ಬರೆಯದಿದ್ದರೂ ಸಾಹಿತಿಯಾಗಿ ಚಲಾವಣೆಯಲ್ಲಿರುವವರನ್ನು ಅವರ ಸಾಹಿತ್ಯಕ್ಕಿಂತಲೂ ವ್ಯವಸ್ಥಿತವಾಗಿ ಮುಖ್ಯವಾಹಿನಿಯಲ್ಲಿ ಚಲಾವಣೆಯಲ್ಲಿಡಲಾಗಿದೆಯೇ ಹೊರತಾಗಿ ಸರಿಯಾದ ಮೂರ್ತ ರೂಪವೇ ಇಲ್ಲದ ಬರಹಗಳನ್ನು ಕೇವಲ ಪ್ರಚಾರದ ರೂಪದಲ್ಲಿ ಸಾಹಿತ್ಯವನ್ನಾಗಿಸಿ ಪ್ರಶಸ್ತಿಯತ್ತಲೂ ಎಳೆದ ಉದಾ. ನಮ್ಮ ಮುಂದಿವೆ )
ಇತ್ತೀಚಿನ ಸಾಹಿತ್ಯ ಮತ್ತು ಹಿರಿ-ಕಿರಿಯ ಸಾಹಿತಿಗಳ ಧೋರಣೆಗಳನ್ನು ಗಮನಿಸಿದರೆ ಬಹುಶ: ಇನ್ನೊಂದು ದಶಕದೊಳಗಾಗಿ ನಾವು ಸಾಹಿತ್ಯವೆಂದರೆ ನಿರ್ಧಿಷ್ಟ ಗುಂಪುಗಳಲ್ಲಿದ್ದರೆ ಮಾತ್ರ ಆತ ಬರೆದದ್ದು ಸಾಹಿತ್ಯ ಅಥವಾ ಆತ ಸಾಹಿತಿ ಎನ್ನುವ ಕಾಲ ಬರುತ್ತದಾ..? ನಿಸ್ಸಂಶಯ. ಯಾಕೆಂದರೆ ಕಳೆದ ಒಂದೂವರೆ ದಶಕಗಳಿಂದ ನಾನು ಗಮನಿಸುತ್ತಿರುವ ಸಾಹಿತ್ಯ ಲೋಕದಲ್ಲಿ ಇವತ್ತಿನ ದಿನದವರೆಗೂ ಬದಲಾಗುತ್ತಿರುವ ತೀವ್ರಗಾಮಿ ಗುಂಪುಗಾರಿಕೆಯ ಧೋರಣೆಯಿಂದಾಗಿ ಬಹುಶ: ಸಾಹಿತಿ ಮತ್ತು ಸಾಹಿತ್ಯಕ್ಕೆ ಹೊಸ ವಾಖ್ಯಾನ ರೂಪಿಸಬೇಕಾಗಿ ಬರುತ್ತದೇನೋ ಎನ್ನುವಂತಾಗಿ ಹೋಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ತಾಲೂಕಾ ಸಾಹಿತ್ಯ ಸಮ್ಮೇಳನದಿಂದ ಹಿಡಿದು ಯಾವುದೇ ಜಿಲ್ಲಾವಾರು ಕೊನೆಗೆ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದವರೆಗೂ ಗಮನಿಸುವಾಗ ಅಲ್ಲಿ ವಲಯವಾರು ಗುಂಪುಗಾರಿಕೆಯನ್ನು ಅದರ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. 
ಆಯಾ ಕಾಲಕಾಲಕ್ಕೆ ಬದಲಾಗುವ ಅಧ್ಯಕ್ಷರುಗಳಿಂದ ಹಿಡಿದು ಪದಾಧಿಕಾರಿಗಳವರೆಗೆ ಬೇಕಾದವರಿಗೆ ಇವತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಲು ಅವಕಾಶ ಲಭ್ಯವಾಗುತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ. ಅದಕ್ಕಿಂತಲೂ ಮಿಗಿಲಾಗಿ ಆಯಾ ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸೋತು ಹೋಗುವ ಸಾಹಿತ್ಯ ಪರಿಷತ್ ಅಭ್ಯರ್ಥಿಗಳದ್ದೇ ಒಂದು ಬದಲಾದ, ಬಲವಾದ ಗುಂಪುಗಳು ಇನ್ನೊಂದೆಡೆಗೆ ಸೀಮಿತ ಮಟ್ಟದಲ್ಲಿ ಹೆಸರು ಪ್ರತಿಸ್ಪರ್ಧೆ ನಡೆಸಲು ಹೋರಾಟ ನಡೆದಿರುತ್ತದೆ. ಯಾಕೆ ಒಮ್ಮೆ ಈ ಅಧ್ಯಕ್ಷ ಪದವಿಯ ಹಣಾಹಣಿ ನಡೆದ ನಂತರದ ದಿನಗಳಲ್ಲಿ ಇವರೆಲ್ಲಾ ಸಾಹಿತ್ಯಿಕವಾಗಿ ಒಂದಾಗಬಾರದು. ಉಹೂಂ ಸಾಧ್ಯವೇ ಇಲ್ಲ. 
ಆಯಾ ಭಾಗದಲ್ಲಿ ಅವಕಾಶ ಪಡೆವ ಸಮ್ಮೇಳನಗಳು ಮತ್ತು ಆಗಾಗ ಕಾಲಕಾಲಕ್ಕೆ ನಡೆವ ಚರ್ಚೆಗಳು ಇತ್ಯಾದಿಗಳಲ್ಲಿ ಭಾಗವಹಿಸಿ ವಹಿಸಿಯೇ ಸಾಹಿತ್ಯ ಲೋಕದಲ್ಲಿ ಚಲಾವಣೆಗೆ ಬಂದು ಬಿಡುವವರೂ ಇಲ್ಲದಿಲ್ಲ. ಕವನ ಸಂಕಲನದ ಚರ್ಚೆ ಇರಲಿ, ವಿಮರ್ಶೆ ಇರಲಿ, ಹಳೆಯ ಮತ್ತು ಹೊಸ ತಲೆಮಾರಿನ ಸಾಹಿತ್ಯದ ಬೆಳವಣಿಗೆಗಳ ತುಲನಾತ್ಮಕ ಸಾಮೂಹಿಕ ದೃಷ್ಟಿಕೋನ ಎನ್ನುವ ಇಷ್ಟುದ್ದದ ಹೆಸರಿನ, ಹೆಸರಲ್ಲೇ ಗೊಂದಲ ಹುಟ್ಟಿಸುವ ಚರ್ಚೆ ಇರಲಿ, ಹಿರಿಯರೊಬ್ಬರಿಗೆ ಅಭಿನಂದನಾ ಗ್ರಂಥ ಸಮರ್ಪಣೆ, ಅದರ ಚರ್ಚೆ, ಬಿಡುಗಡೆ, ಕೊನೆಯಲ್ಲಿ ಹಿರಿಯ ಸಾಹಿತಿಯೊಬ್ಬರು ತೀರಿಕೊಂಡಾಗಿನ ಅಶ್ರು ತರ್ಪಣ ಕಾರ್ಯಕ್ರಮವಿರಲಿ... ಇತ್ಯಾದಿಗಳ ಯಾವುದೇ ಸಮಾರಂಭವಿರಲಿ. ಅಲ್ಲೆಲ್ಲಾ ಆಯಾ ಭಾಗದಲ್ಲಿ ನಿರ್ದಿಷ್ಟ ಸಂಗಡಿಗರದ್ದೇ ಗುಂಪುಗಳು ಭಾಗವಸಿರುತ್ತವೆ. ಆಯಾ ಗುಂಪಿನ ವ್ಯಕ್ತಿಗಳು ಭಾಗವಹಿಸಿದ್ದರೆ ಅವರ ವಿರೊಧಿ ಗುಂಪು ಅಲ್ಲಿ ತಲೆ ಹಾಕೋದಿಲ್ಲ. ಅವರ ಪಾಡಿಗೆ ಅವರು ಇವರನ್ನು ಬೈಯುತ್ತಾ ಗಂಭೀರ ಚರ್ಚೆಗಿಳಿದಿರುತ್ತಾರೆ. ಇಲ್ಲ ಒಬ್ಬರನ್ನು ಕರೆದರೆ ಇನ್ನೊಬ್ಬರನ್ನು ಶಿಫಾರಸ್ಸು ಮಾಡುವ ವಶೀಲಿಯೂ ಇರುತ್ತದೆ.  
       ಯಾವುದೇ ಇವತ್ತಿನ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದವರ, ಪರಿಷತ್ ಖರ್ಚಿನಲ್ಲಿ ಬಿಡುಗಡೆಯಾದವರ ಪುಸ್ತಕಗಳ ಲೇಖಕರ ಹೆಸರು ಇತರ ವಿವರ ಜಾಲಾಡಿದರೆ ಸಾಹಿತ್ಯಕ್ಕೆ ಅವರ ಕೊಡುಗೆ ಏನು ಎನ್ನುವುದು ನಿಚ್ಚಳ. ಇದರಲ್ಲಿ ನಿಜವಾದ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿರುವವರು ಬಹಳವೆಂದರೆ ಒಂದ್ಹತ್ತು ಶೇ. ಇದ್ದಾರು ಅಷ್ಟೆ. ಉಳಿದಂತೆ ಪೇಪರು ಮತ್ತು ಪಬ್ಲಿಸಿಟಿ ಹಾಗು ಸಮ್ಮೇಳನದ ಗಾದಿಯೇರಲು ಹವಣಿಸಿದವರಲ್ಲಿ ಎಷ್ಟು ಜನರ ಸಾಹಿತ್ಯ ಇವತ್ತಿನ ಕನ್ನಡದ ದಿಗ್ಗಜ ಪತ್ರಿಕೆಗಲ್ಲಿ ಪ್ರಕಟವಾಗುವ ಅರ್ಹತೆ ಪಡೆದಿವೆ...? ಇದರರ್ಥ ಎಲ್ಲಾ ಪತ್ರಿಕೆಯಲ್ಲೂ ಪ್ರಕಟವಾಗೋದೆಲ್ಲಾ ಅದ್ಭುತ ಸಾಹಿತ್ಯವೆಂದಲ್ಲ. ಆದರೆ ಇವತ್ತಿಗೂ ಪ್ರತಿ ಹೊಸಪತ್ರಕರ್ತನಿಗೆ ಅಲ್ಟಿಮೇಟ್ಲಿ ದಶಕಗಳಿಂದ ಕಾಲೂರಿ ನಿಂತ ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡಬೇಕು ಎಂದು ಅನ್ನಿಸುವ ಮಾತು ಎಷ್ಟು ಹಸಿ ಸತ್ಯವೋ... ಇತ್ತೀಚಿನ ಬರಹಗಾರರಿಗೆ ಕನಿಷ್ಟ ಅವರ ಬರಹಗಳು ಪ್ರಜಾವಾಣಿ, ಸುಧಾ, ತರಂಗದ, ಕ.ಪ್ರ. ವಿಜಯವಾಹಿನಿ. ವಿ.ಕ ದ. ಸಖಿಯಲ್ಲಿ -  ಸಾಪ್ತಾಹಿಕದಲ್ಲಿ ಪ್ರಕಟವಾಗಬೇಕೆನ್ನುವ ಒಳಾಭಿಲಾಷೆ ತುಡಿತಗಳಿರುವುದು ಅಷ್ಟೆ ನಿಜ. 
           ಹೀಗಿದ್ದಾಗ ಎಷ್ಟೆ ಇಲ್ಲವೆಂದರೂ ಪ್ರಜಾವಾಣಿ ಬಳಗ ಸೇರಿದಂತೆ  ತರಂಗ,ಸುದಾ, ಸಖಿ ಇತ್ಯಾದಿಗಳಲ್ಲಿ ಮತ್ತು ಇತ್ತೀಚೆಗೆ  ಕ್ವಾಂಟಿಟಿಯಿಂದಾಗಿ ಎಲ್ಲ ಹಿರಿ ಕಿರಿ ಬರಹಗಾರರನ್ನು ಆಪೋಶನವಾಗಿಸಿಕೊಂಡು ಹೆಸರು ಮಾಡಿದ ಕ. ಪ್ರ. ಗುಂಪಿನಲ್ಲಿ ಎಷ್ಟು ಜನ ಈ ಗಾದಿಸಾಹಿತಿಗಳು ಕಾಲಕಾಲಕ್ಕೆ ಕಾಣಿಸಿಕೊಂಡಿದ್ದಾರೆ...? ಒಂದೊಮ್ಮೆ ಹೆಸರು ಮಾಡಿ ಕೇವಲ ಸ್ಟೇಜಿಗೇ ಸೀಮಿತರಾಗಿ ಹೋದ, ಕಳೆದ ತಲೆಮಾರಿನ ಸಾಹಿತಿಗಳು ಕೂಡಾ ಇವತ್ತೂ ಎಷ್ಟು ಜನ ನಿರಂತರತೆಯನ್ನು ಉಳಿಸಿಕೊಂಡಿದ್ದಾರೆ...? ಇನ್ನು ದೊಡ್ಡದೊಂದು ಸನ್ಮಾನ ಮತ್ತು ಪ್ರಶಸ್ತಿ ಬರುತ್ತಿದ್ದಂತೆ ಬರೆಯುವುದನ್ನೇ ನಿಲ್ಲಿಸಿ ಬಿಟ್ಟ ಕಳೆದೆರಡು ದಶಕಗಳಿಂದಲೂ ಬರೆಯದೇ ಸಾಹಿತಿಯಾಗಿ ಚಲಾವಣೆಯಲ್ಲಿರುವವರು ಎಷ್ಟು ಜನ ಬೇಕು ನಿಮಗೆ..? ಇವರೆಲ್ಲರನ್ನೂ ಅವರ ಸಾಹಿತ್ಯಕ್ಕಿಂತಲೂ ಬರೆದದ್ದಕ್ಕಿ೦ತಲೂ ವ್ಯವಸ್ಥಿತವಾಗಿ ಮುಖ್ಯವಾಹಿನಿಯಲ್ಲಿ ಚಲಾವಣೆಯಲ್ಲಿಡಲಾಗಿದೆಯೇ ಹೊರತಾಗಿ ಇವತ್ತಿಗೂ ಅಮುಖ್ಯ ಎನ್ನಿಸುವ ಸರಿಯಾದ ಮೂರ್ತ ರೂಪವೇ ಇಲ್ಲದ ಬರಹಗಳನ್ನು ಕೇವಲ ಪ್ರಚಾರದ ರೂಪದಲ್ಲಿ ಸಾಹಿತ್ಯವನ್ನಾಗಿಸಿ ಅವರನ್ನು ಪ್ರಶಸ್ತಿಯತ್ತಲೂ ಎಳೆದ ಉದಾ. ನಮ್ಮ ಮುಂದಿವೆ. 
          ಒಂದು ಸಾಹಿತ್ಯವನ್ನು ಎಷ್ಟು ಚೆನ್ನಾಗಿ ಮತ್ತು ಅಷ್ಟೆ ಕೆಟ್ಟದಾಗಿ ವಿಮರ್ಶೆ ಮಾಡಲು ಸಾಧ್ಯವೆನ್ನುವುದು ಹೇಗೆ ಸತ್ಯವೋ ಇದನ್ನು ಬಳಸಿಕೊಂಡೇ ಕೆಲವರನ್ನು ತುಳಿದದ್ದೂ, ಕೆಲವರನ್ನೂ ಬೆಳೆಸಿದ್ದು ಇದೇ ಗುಂಪು ಎಂಬುವುದು ಸಾಹಿತ್ಯದ ಇತ್ತೀಚಿನ ವಿಪರ್ಯಾಸ. ಇತ್ತಿಚಿಗೆ ಬರಹಗಳಲ್ಲಿ ಎಷ್ಟು ಜನ ಇವತ್ತಿಗೂ ಸಾಹಿತ್ಯಿಕವಾಗಿ ಜೀವಂತವಾಗಿದ್ದಾರೆ ಎಂದರೆ ಉತ್ತರ ನಿರಾಶೆ ಮೂಡಿಸುತ್ತದೆ. ಹಳೆಯ ದಾಖಲೆಗಳು ಬರೆದ ಬರಹಗಳ ಮೌಲ್ಯವನ್ನು ನಾನು ಕಡಿಮೆ ಮಾಡುತ್ತಿಲ್ಲ ಅಥವಾ ಅವನ್ನು ಗಣಿಸಬಾರದು ಎಂದು ನಾನಿಲ್ಲಿ ಪ್ರತಿಪಾದಿಸುತ್ತಿಲ್ಲ. ಆದರೆ ಇವರೊಂದಿಗೆ ಪ್ರಸ್ತುತದಲ್ಲಿರುವ ಆದರೆ ಇವರ ಸಂಪರ್ಕಕ್ಕೆ ಬಾರದಿರುವ ಆದರೆ ಪ್ರಸ್ತುತ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಅವರನ್ನು ಒಪ್ಪಿಕೊಂಡಿರುವ, ಆದರಿಸುವ ಓದುಗರು ಇರುವವರನ್ನು ಯಾಕೆ ಪರಿಗಣಿಸಲಾಗುತ್ತಿಲ್ಲ..? ಅದಕ್ಕಾಗಿ ಅವರೆಲ್ಲಾ ಇವತ್ತು ಇವುಗಳೆಲ್ಲದಕ್ಕಿಂತಲೂ ವೇಗವಾಗಿ ಮತ್ತು ಉತ್ತಮವಾಗಿ ಟ್ಯಾಬ್ಲಾಯಿಡ್‌ಗಳ ಮುಖಾಂತರ ಓದುಗರನ್ನು ಆವರಿಸಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಇವತ್ತಿನ ಕೆಲವು ಟ್ಯಾಬ್ಲಾಯಿಡ್‌ಗಳು ಸಮಾಜ ಮುಖಿಯಾಗಿ ಬೆಳೆಯುತ್ತಿದ್ದರೆ ರಾಜ್ಯದ ಪ್ರಮುಖ ಪತ್ರಿಕೆಗಳು ಮಾತ್ರ ಅದೇ ಮಡಿವಂತಿಕೆ ಪ್ರದರ್ಶಿಸುತ್ತಲೇ ಇವೆ. 
           ಸಮ್ಮೇಳನ ಅಥವಾ ಸಾಹಿತ್ಯದ ಚಟುವಟಿಕೆಗಳು ನಡೆಯುವ ಈ ಸಂದರ್ಭದಲ್ಲಿ ಆಯ್ಕೆ ಮಾಡುವಾಗ ಇವರು ಅನುಸರಿಸುವ ಮಾನದ೦ಡ ಯಾವುದು ಹಾಗಿದ್ದರೆ...? ಬರಿ ಅವರೊಂದಿಗಿನ ಒಡನಾಟವೊಂದೇ ಮಾನದಂಡವಾಗುವುದಾದರೆ ನಾನೂ ತುಂಬಾ ಚೆನ್ನಾಗಿ ಸಂಬಂಧವಿರಿಸಿಕೊಳ್ಳಬಲ್ಲೆ ಎನ್ನುತ್ತಾರೆ ಕೆಲವರು. ಇದೇ ಕಾರಣಕ್ಕೆ ಇವತ್ತು ಗಡಿ ಭಾಷೆ ಮೀರಿ ಜನಪ್ರಿಯತೆ ಪಡೆದಿರುವ ಯಂಡಮೂರಿಯವರನ್ನು ವ್ಯವಸ್ಥಿತವಾಗಿ ಪ್ರತ್ಯೇಕಿಸಿದಂತೆ ಆಯಾ ಕಾಲ ಘಟಕ್ಕೆ ಅನುಗುಣವಾಗಿ ಭೈರಪ್ಪನವರು ನೇಪಥ್ಯದತ್ತ ಸರಿದರು ಎನ್ನುವುದನ್ನು ಗುಟ್ಟಾಗಿ ಒಪ್ಪಿಕೊಳ್ಳುತ್ತಾರೆ ಆ ಕಾಲದ ಬರಹಗಾರರು. ಆದರೆ ಹೀಗೆ ಗುಂಪುಗಾರಿಕೆಯನ್ನು ಮೆರೆದ ಜ್ಞಾನಪೀಠಿಗಳ ಮಟ್ಟ ಎಷ್ಟು,..?  ಯಾಕೆಂದರೆ ಇಂತಹ ಗುಂಪುಗಾರಿಕೆ ಹಿಂದಿರಲಿಲ್ಲವೆಂದಲ್ಲ. ಭೈರಪ್ಪನ೦ಥವರು ಅದನ್ನು ಪೋಶಿಸಲಿಲ್ಲ ಅಷ್ಟೆ. 
       ತಮ್ಮ ಪಾಡಿಗೆ ಪತ್ರಿಕೆಗಳಿಗೆ ಬರೆದುಕೊಂಡಿದ್ಡು, ಪ್ರಕಾಶಕರು ಕಾಯ್ದು, ಪ್ರಕಟಿಸಿ ನಿಮ್ಮ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರೂ ಕೂಡಾ ನೀವು ಅವರ ಕಣ್ಣಿಗೆ ಬೀಳದೆ ಗುಂಪಿನಲ್ಲಿ ಗೋವಿಂದಾ ಆಗಿಬಿಡುತ್ತೀರಿ. ಅಸಲಿಗೆ ಎಲ್ಲಾ ರೀತಿಯ ಪುಸ್ತಕ ಬರಹಗಾರರು ಇದರಲ್ಲಿ ಬರುವುದಿಲ್ಲ ಆ ಪ್ರಶ್ನೆ ಬೇರೆ. ಆದರೆ ಅಪ್ಪಟ ಕಥೆ, ಕಾದಂಬರಿ ಮತ್ತು ವಿಮರ್ಶೆ ಬರೆದುಕೊಂಡು ನಿರಂತರವಾಗಿ ಪ್ರಮುಖ ನಿಯತಕಾಲಿಕೆಗಳಲ್ಲಿ ಸ್ಥಾನ ಉಳಿಸಿಕೊಂಡಿರೋ ಎಷ್ಟೋ ಬರಹಗಾರರು ಇವತ್ತಿಗೂ ಅವರವರ ಸ್ಥಳದಲ್ಲೇ ಅಪರಿಚಿತರು. ಒ೦ದೋ ಅದಕ್ಕೆ ಕಾರಣ ಅವರೊಂದಿಗರು ಅವರನ್ನು ಉದ್ದೇಶಪೂರ್ವಕವಾಗಿ ಬೆಳೆಯಲು ಬಿಡದಿರುವುದು. ಇಲ್ಲ ಅಗತ್ಯ ಸಂದರ್ಭದಲ್ಲಿ ಹೆಸರನ್ನು ಸೂಚಿಸಬೇಕಾದವರು ಜಾಣ ಮೌನ ವಹಿಸಿಬಿಡುವುದರ ಮೂಲಕ ತಳ್ಳಿ ಬಿಡುವುದು. ಇದಕ್ಕೆ ಇನ್ನೊಂದು ಗುಂಪು ಕೂಡಾ ಕೆಲಸ ಮಾಡುತ್ತದೆ. ಇತ್ತೀಚೆಗೆ ಸಾಹಿತ್ಯಕ್ಕೆ ಸಂಗೀತ ಬೆರೆಸಿ ತಮ್ಮ ಹೆಸರು ಅದರಲ್ಲಿ ಸೇರಿಸಿಕೊಂಡು ಸಾಹಿತ್ಯದ ಗಂಧ ಗಾಳಿ ಇಲ್ಲದವರೂ ಅದರಲ್ಲಿ ಕೈಯ್ಯಾಡಿಸಿ ಸುದ್ದಿಗೆ ಬರುವುದು ಈ ಗುಂಪಿನ ಕ್ಷಮತೆ. ಸಂಗೀತದಲ್ಲಿ ಸಾಹಿತ್ಯದಲ್ಲಿ ಎರಡೂ ಇಲ್ಲದಿದ್ದರೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುವುದು. ಗೀತ-ಸಂಗೀತ. ಸಾಹಿತ್ಯ-ಗೀತ ಇತ್ಯಾದಿ ಗೋಷ್ಠಿಗಳು ಈ ಗುಂಪಿನವರ ಬಳುವಳಿಗಳು. 
        ಒಂದಷ್ಟು ತಮಗೆ ಬೇಕಾದ ಕವಿಯಿತ್ರಿಯರನ್ನು ಮೇಲೆ ಕೂಡಿಸಿ ಯಾರೊಬ್ಬ ಸಂಗೀತಗಾರನನ್ನು ಹಿಡಿದು ಅವರ ಕವನವನ್ನೇ ಹಾಡಿಸುವುದರ ಮೂಲಕ ಜನರ ಗಮನ ಸೆಳೆಯುವ ಜಾಯಮಾನ. ಇನ್ನು ಮುಂದೆ ಹೋಗುವವರು ಚಿತ್ರಗಳನ್ನೂ ಬರೆಸುತ್ತಿದ್ದಾರೆ. ಇವೆಲ್ಲ ಗುಂಪುಗಾರಿಕೆ ಹೊರತುಪಡಿಸಿದರೆ ಸೃಜನ ಶೀಲತೆಯನ್ನು ಹೊರ ಹೊಮ್ಮಿಸುವುದಾದರೂ ಹೇಗೆ...? ಕೆಲವರ ಪ್ರಶ್ನೆ. ಏಕೆಂದರೆ ಅಷ್ಟು ಮಾತ್ರದ ಪ್ರಸಿದ್ಧಿ, ಹೆಸರು, ಪಬ್ಲಿಸಿಟಿ ಬಿಟ್ಟು ಈಗಿನ ಬರಹಗಾರರು ಬದುಕುವುದಾದರೂ ಹೇಗೆ...? ಅದೆಲ್ಲಾ ಬೇಕೆಂದರೆ ಮತ್ತೇ ಗುಂಪುಗಾರಿಕೆ ಬೇಕೆ ಬೇಕಲ್ಲ...? ಮತ್ತೆ ಅದ್ಹೇಗೆ ಹಿಂದಿನ ತಲೆ ಮಾರಿನಂತೆ ಸೃಜನ ಶೀಲತೆ ಹೊರಹೊಮ್ಮೀತು...? ನನಗೆ ಅನುಭವಕ್ಕೆ ಮತ್ತು ಇಷ್ಟು ವರ್ಷಗಳ ಸಾಹಿತ್ಯ ಲ್ಕವನ್ನು ಕಂಡಂತೆ ಬರೆದಿದ್ದೇನೆ.. ಅನುಭವಿಗಳು, ಜ್ಞಾನಿಗಳು ನನ್ನನ್ನು ತಿದ್ದಬಹುದು. ಅದಕ್ಕೆ ಧಾರಾಳ ಅವಕಾಶ ಮತ್ತು ಸ್ವಾಗತ ಎರಡೂ ಇದೆ.  
      ಲಾಸ್ಟ್ ಬಿಟ್ : ಈಗಿನ ರೆಬೆಲ್ ಬರಹಗಾರರೆನ್ನಿಸಿಕೊಂಡ ಹೊಸ ಪೀಳಿಗೆಯ ಲೇಖಕರಾದರೂ ಈ ಸಂಪ್ರದಾಯವನ್ನು ಮುರಿದು ಹೊರಗೆ ಬರಲಿ. ಕೇವಲ ಬರಹದ ಮೂಲಕವೇ ಓದುಗರನ್ನು ತಲುಪುವ ಪ್ರಯತ್ನ ಮಾಡೋಣ. ಆ ದಿಶೆಯಲ್ಲಿಯೇ ನನ್ನ ಪ್ರಯತ್ನವಿದೆ ಆದ್ದರಿಂದಲೇ ನಾನಿವತ್ತಿಗೂ ಸಾಹಿತ್ಯಿಕವಾಗಿ ಯಾವ ಗುಂಪಿನೊಂದಿಗೂ ಗುರುತಿಸಿಕೊಂಡಿಲ್ಲ ಓದುಗರನ್ನು ಹೊರತು ಪಡಿಸಿ. ಕನಿಷ್ಟ ಹೀಗೆ ಬಹಿರಂಗ ಲೇಖನವಾಗಿಸಿ ಸಂದೇಶ ನೀಡಿದ ನಂತರವಾದರೂ ಆ ದಿಶೆಯಲ್ಲಿ ಪ್ರಯತ್ನ ಆರಂಭಗೊಂಡಲ್ಲಿ ಅಷ್ಟರ ಮಟ್ಟಿಗೆ ಸಾರಸ್ವತ ಲೋಕ ಬದುಕಿದೆ ಎಂದೇ ಅರ್ಥ.


Monday, August 5, 2013

ಅವಳಿಗಾಗಿ ಯಾರನ್ನು ಕೂಗಲಿ ....?

( ಅಂದಿನಿಂದಲೂ ಸಣ್ಣ ಸಣ್ಣ ಕೆಂಪು ಹೂವಿನ ಅಂಗಿಯ ಪುಟ್ಟ ಹುಡುಗಿ ಬಿಸಿಲಿಗೆ ಮುಂಗುರುಳ ಹಾರಿಸುತ್ತಾ, ಹಸಿವಿನ ಕಂಗಳಿಂದ ಸಂಜೆಯ ಆಸೆಗಳಿಗೆ ಈಡಾಗುತ್ತಾ ಕಟ್ಟಿಗೆಗೆ ಕಾಡು ನುಗ್ಗುವುದು ಕಾಣಿಸುತ್ತಲೇ ಇದೆ. ಕೈಗೆ ಸಿಕ್ಕಷ್ಟು ನೋಟು-ಚಿಲ್ಲರೆಗಳನ್ನು ಅದರ ಕೈಗಿಟ್ಟು ಬಂದಿದ್ದೆ. ಎದೆಯೊಳಗೆನೋ ಅರ್ಥವಾಗದ ಮುಳ್ಳು ಮುರಿದ ಸಂಕಟ )

ಬಾಲ್ಯ ಮತ್ತು ಹಳ್ಳಿಯ ಜೀವನ ಬೆರಗು, ಭಯ, ಅದ್ಭುತ, ಎಂಜಾಯೇಬಲ್ ಅನ್ನಿಸಿದಷ್ಟು ಬೇರಾವುದೂ ನನಗನ್ನಿಸಿಲ್ಲ. ಬಾಲ್ಯದ ಹುಡುಗಾಟಗಳು, ನಾಳಿನ ಯೋಚನೆಗಳಿಲ್ಲದ, ಮುಲಾಜಿಲ್ಲದ, ಮರ್ಜಿ ಕಾಯಬೇಕಿಲ್ಲದ, ಊರ ಹೊರಗಿನ ತೋಪಿನಿಂದ ಹಿಡಿದು, ಸ್ಮಶಾನದ ಗೋರಿಯ ಬೆನ್ನಿನವರೆಗೂ ನಮ್ಮದೇ ಆಟದ ಆಡ್ಡೆಗಳು. ಅದರಲ್ಲೂ ಮಲೆನಾಡಿನ ಮನೆಗಳಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಹಸಿರಾಗಿಟ್ಟಿವೆ.
ಆ ಸೆಳೆತವೇ ಈಗಲೂ ನನ್ನನ್ನು ಪದೇ ಪದೇ ಹಳ್ಳಿಗೆ, ಅಲ್ಲಿನ ಮಣ್ಣಿನ ವಾಸನೆಗೆ ತೆರಳುವಂತೆ ಮಾಡುತ್ತಲೇ ಇವೆ. ಎಂದಿಗೂ ಮುಗಿದ ನೆನಪುಗಳ ಸರಮಾಲೆ ಎನ್ನುವುದಕ್ಕಿಂತಲೂ ಅನುಭವಿಸಿದ ಹಸಿರಿನ ಕ್ಷಣ ಉಸಿರು ಕೂಡಾ ಇವತ್ತಿಗೂ ನನ್ನನ್ನು ಹಳ್ಳಿಗಳ ಮೋಹಿಯನ್ನಾಗಿಸಿದ್ದು ಸುಳ್ಳಲ್ಲ. ತೀರ ಸ್ಟಾರ್ ಹೋಟೇಲ್ ಒಂದರ ಸುವಾಸನೆಯ ಕೋಣೆಯಲ್ಲಿ ಹಿತವಾದ ಏ.ಸಿ. ಹೊಟ್ಟೆ ಬೀರಿಯುವಂತೆ ಊಟ, ಡ್ರಿಂಕ್ಸು.. ಏಲ್ಲವೂ ಇದ್ದರೂ ಅಂತಹ ಅನುಭವಗಳಿಗೆ ಐಚ್ಛಿಕ್ಕವೋ, ಅನೈಚ್ಛಿಕ್ಕವೋ ಹಲವು ಬಾರಿ ಈಡಾಗಿದ್ದರೂ ರಾತ್ರಿ ತಲೆ ಕೊಟ್ಟೊಡನೆ ಬೆಳಿಗ್ಗೆವರೆಗೂ ನಿದ್ರೆ ಎನ್ನುವುದನ್ನು ಸುಖವಾಗಿ ಅಂತಲ್ಲಿ ಅನುಭವಿಸಿದ್ದೇ ಇಲ್ಲ.
ಅದೇನಿದ್ದರೂ ಒಂದೋ ನನ್ನ ಮನೆಯಲ್ಲಿ, ಇಲ್ಲ ತೀರಾ ಕಟ್ಟಾನು ಕಾನಿನ ಮೂಲೆಯ ನನ್ನ ಬೈಕು ಮಾತ್ರ ತೂರಿ ಹೋಗುವ ಕಾಲ್ದಾರಿಯ ಕೊಟ್ಟಕೊನೆಯ ಹಳ್ಳಿಗಳಲ್ಲಿ, ಅದರ ಹುಲ್ಲು ಗೊಣಬೆಯ ಮಾಳದ ಮೇಲಾದರೂ ಸರಿನೇ, ಕೊನೆಗೆ ಹಿನ್ನೀರ ಮಧ್ಯದ ಕಡಲ ದಂಡೆಯಾದರೂ ಸರಿನೇ, ಅಲ್ಲಿ ಇರುವ ಸಣ್ಣ ಹೊರಸು, ಗುಡಿಸಲಿನಂತಹ ಮನೆ, ನಾಲ್ಕಾರು ಆತ್ಮಿಯರು, ಅದರಲ್ಲೊಬ್ಬರು ಹಿರಿಯರು, ಬೇಕೆಂದಾಗ ಎಳೆನೀರು, ಪಕ್ಕ ಸಮುದ್ರ ಕುತ್ತಿಗೆಯ ಕೆಂಪು ಬಾಯಿ ಮೀನುಗಳು, ತಪ್ಪಲೆಯಲ್ಲಿ ಗಂಜಿ.
ಉಳಿದ ಕಡೆಯಲ್ಲಾದರೆ ಅವರ ಮನೆಗಳಲ್ಲಿ ಮಾಡಿನ ಮೇಲೆ ಒಂದೇ ಸಮನೇ ಇಲಿ ಕರ ಕರನೆ ಕೊರೆಯುವ ಸದ್ದಿನ ನಡುವೆಯೂ, ಆಗೀಗ ಕಡಿದು ಹಾಕುವ ಕಾಡು ಹುಳಗಳ ನಡುವೆಯೂ ನಿದ್ರೆ ಮತ್ತು ಅಲ್ಲಿ ಅವರ ಮನೆಗಳಲಿ ಸಿಗುವ ಸೀದಾ ಸಾದಾ, ಆದರೆ ಮನೆ ಮಂದಿಯೆಲ್ಲ ಕುಳಿತು ಉಣ್ಣುವ ಲೋಕಾಭಿರಾಮ ಕಪಟವಿಲ್ಲದ ಮಾತಿನ ನಗು, ಹರಟೆಯ ನಡುವೆ ಒಂಡೆದ್ದು ಕಣ್ತುಂಬಾ ನಿದ್ರೆ ಮಾಡುವ ಹಳ್ಳಿಗಳ ಜೀವನವನ್ನು ಹುಡುಕಿಕೊಂಡು ಹೋಗಿ ದಿನಗಟ್ಟಲೇ ಇದ್ದು ಬರುವುದೂ ಸುಳ್ಳಲ್ಲ. ಹಾಗಾಗೇ ನನ್ನ ಬರಹ ಮತ್ತು ಬದುಕಿನ ಹಲವು ಮಜಲುಗಳಿಗೆ ಪ್ರೇರಣೆ ಆ ಜೀವನಾನುಭವವೇ ಹೊರತು ಬೇರೇನಲ್ಲ. ಆಗೀನ ಬಾಲ್ಯದ ಶ್ರೀಮಂತಿಕೆ, ಕಳೆದ ದಿನಗಳ ನಾಸ್ಜಾಲಿಯಾಗಳೆಡೆಗೆ ಕಣ್ಣು ಹೊರಳುವಂತೆ ಮಾಡಿದ್ದು ಮೊನ್ನಿನ ಸಣ್ಣ ಘಟನೆ.
ಯಾವುದೋ ಕೆಲಸದ ನಿಮಿತ್ತ ನಾಲ್ಕಾರು ವರ್ಷಗಳಿಂದ ಅಣಿಶಿಯ ಕಾಡಿನಲ್ಲಿ ಕಾಲಿಡದವನು ಅನಿವಾರ್ಯವಾಗಿ ನನ್ನ ಕಾರನ್ನು ಹೊರಗೆಳೆದು ಹೂಳು ದಾರಿಯಲ್ಲಿ ಹತ್ತಿಸಬೇಕಾಗಿತ್ತು. ಅವಡುಗಚ್ಚಿ ಚಕ್ರ ತಿರುವಬೇಕಾದ ರೀತಿಯಲ್ಲಿ ಹೊಂಡಗಳಿಂದ ಗಬ್ಬೆದ್ದು ಹೋಗಿರುವ ಆ ರಸ್ತೆ, ಅಧ್ವಾನ್ನಗಳ ಮಧ್ಯೆಯೂ ನನ್ನನ್ನು ಆಗೀಗ ಉಲ್ಲಸಿತನನ್ನಾಗಿಸುವುದೆಂದರೆ ಪ್ರವಾಸ ಮತ್ತು ಬೆಳ್ಳಂಬೆಳಿಗ್ಗೆ ಕಾಡು ದಾರಿಯಲ್ಲಿ ಸಾಗುವ ಡ್ರೈವಿಂಗು ಮಾತ್ರವೇ.
ಮೊನ್ನೆ ಹಾಗು ಹೀಗೂ ಅನಾಹುತಕಾರಿ ಹೊಂಡಗಳ ಅಣಶಿಯ ಮುಖ್ಯ ರಸ್ತೆಯ ಬದಲಾಗಿ ಉಳವಿಯ ಕಾಡಿನಲ್ಲಿ ಕಾರು ತಿರುಗಿಸಿ ಹಳಿಯಾಳದ ಕಡೆಗೆ ಸರಿದು ಹೋಗಿದ್ದೆ. ಜೋಯಿಡಾ, ಡಿಗ್ಗಿ, ಕರನ್‌ಜೋಯಿಡಾ, ಆ ಕಡೆಯ ಸಾಂಬ್ರಾಣಿ, ಭಗವತಿ, ದಾಂಡೇಲಿಯ ಆಸು ಪಾಸಿನ ಕಾಡುಗಳು ನನಗೆ ಮುಂಚಿನಿಂದಲೂ ಅಪ್ಯಾಯಮಾನ ಸ್ಥಳಗಳೆ. ಹಾಗಾಗಿ ಸಣ್ಣನೆ ಸಿಳ್ಳು ಹೊಡೆದುಕೊಂಡು, ಅಲ್ಲೇ ರಸ್ತೆ ಬದಿಯಲ್ಲೊಮ್ಮೆ ಅರ್ಧ ಕಪ್ಪು ಬಿಸಿ ಬಿಸಿ ಟೀ ಕುಡಿದು ಇನ್ನು ದಾಂಡೇಲಿ ಕಣ್ಣು ಬಿಡುವ ಮುಂಚೆ ಕಾಳಿ ನದಿಯ ಮಗ್ಗುಲಲ್ಲಿ ನಿಂತುಕೊಡಿದ್ದೆ ಸುಮ್ಮನೆ ಅದರ ಶಬ್ದ ಕೇಳುತ್ತಾ.
ನಂತರದ್ದು ಎಂದಿನಂತೆ ದಿನವಹಿ ಕಾರ್ಯಗಳು, ವಾಹನಗಳ ಧೂಳು, ಪೇಪರ್ ಮಿಲ್ ವಾಸನೆ, ಆತ್ಮೀಯ ಸ್ನೇಹಿತರ ಹಿಂಡು, ಎದುರಿಗೆ ಜನ, ದನ, ವಾಹನ, ಬೈಸೈಕಲ್ಲು ಭರಾಟೆ ಎಲ್ಲದ ಮಧ್ಯೆ ಅಲ್ಲಲ್ಲಿ ನಿಂತುಕೊಂಡು ನನ್ನ ಕೆಲಸ ಮುಗಿಸಿ ಮಿತ್ರ ಹಿಂಡಿನೊಂದಿಗೆ ಸಟ್ಟ ಸರಹೊತ್ತಿನ ರಣ ಬಿಸಿಲಿನ ಝಳಕ್ಕೆ ಈಡಾಗುತ್ತಾ ತಂಪಾಗಲು ಬೀಯರು, ಹಿಂದಿರುಗಿ ಕಾಡು ರಸ್ತೆಗೆ ಕಾಲಿಟ್ಟು ಇನ್ನೇನು ಅಣಶಿಯ ತೆಕ್ಕೆ ಸೇರಿಕೊಳ್ಳಬೇಕು. ಉಳವಿ ರಸ್ತೆ ತಿರುವಿನ ನಂತರ ನಾಲ್ಕಾರು ಕೀ.ಮಿ. ದಾಟಿ ಖಾಮ್ಸೆತಡಿಗಿಂತಲೂ ಮುಂಚೆ ಕಟ್ಟಾನು ಕಾಡಿನ ಪಕ್ಕದಲ್ಲಿ ನಿಲ್ಲಿಸಿದೆ. ನೀರು ಕುಡಿದು ಇನ್ನೇನು ತಿರುಗ ಬೇಕು, ಕಾಡಿನ ಅಂಚಿನಿಂದ ಚರ ಪರ ಸದ್ದು. ತಿರುಗಿದೆ.
ತೀರ ಪುಟ್ಟ ಪುಟ್ಟ ಕೈಗಳ ಪಿಳಿ ಪಿಳಿ ಕಣ್ಣಿನ ಪುಟ್ಟ ಹುಡುಗಿ, ಕೈಗಳಲ್ಲಿ ಸಣ್ಣ ಸಣ್ಣ ಕಟ್ಟಿಗೆ ತುಂಡುಗಳನ್ನು ಹಿಡಿದು ಬರಿಗಾಲಲ್ಲಿ ಈಚೆಗೆ ಬಂದು ಅಷ್ಟು ದೂರದಲ್ಲಿದ್ದ ಆಗಲೇ ಸೇರಿದ್ದ ರಾಶಿಗೆ ಸೇರಿಸುತ್ತಿತ್ತು. ಮತ್ತೊಮ್ಮೆ ಕಾಡಿನೊಳಗೆ ಹೋಗಿ ಮತ್ತೆ ಹದಿನೈದು ನಿಮೀಷದಲ್ಲಿ ಹಿಂದಿರುಗಿದ್ದಳು ಆ ಹುಡುಗಿ. ಸಟ್ಟ ಸರಹೊತ್ತಿನ ಮಧ್ಯಾನ್ಹ, ಕಾಡೆಂದರೆ ಕಾಡು, ಬಿರು ಬಿಸಿಲಿನ ಮೂರೂವರೆ, ಶಾಲೆಯೋ ಮನೆಯಲ್ಲಿ ಅಮ್ಮನೊಂದಿಗೆ ಇರಬೇಕಿದ್ದ ಮಗು ಕಟ್ಟಿಗೆ ಆಯುತ್ತಿತ್ತು.
" ಏನಮ್ಮ ಒಬ್ಬಳೆ ಕೆಲಸ ಮಾಡುತ್ತಿದೀಯಾ. ನಿನ್ನ ಹೆಸರೇನು ..? " ಎಂದೆ. ಆಗಿದ್ದಿಷ್ಟು. ಮಗು ಎರಡನೆಯ ತರಗತಿ ಓದುತ್ತಿದೆ. ಆದರೆ ಅನಿವಾರ್ಯದ ಕೆಲಸಗಳ ನಿಮಿತ್ತ ಹೆಚ್ಚಿನ ದಿನಗಳನ್ನು ಅಮ್ಮನೊಂದಿಗೆ ಕಾಡಿನಲ್ಲೇ ಬಿರು ಬಿಸಿಲಿನಲ್ಲಿ ಕಳೆಯುತ್ತಿದೆ. ಅಮ್ಮ ದಿನಗೂಲಿಯ ಲೆಕ್ಕದಲ್ಲಿ ಕಾಡಿನ ದರಗಲನ್ನು ಆರಿಸಿ ಒಟ್ಟು ಮಾಡಿ ತಂದು ತುಂಬಿಸಿ ದಿನಕ್ಕೆ ನಲ್ವತೈವತ್ತು ರೂಪಾಯಿ ದುಡಿಯುತ್ತಾಳೆ. ಆ ಹೊತ್ತಿನಲ್ಲಿ ಮಗು ಸಣ್ಣ ಪುಟ್ಟ ಕಟ್ಟಿಗೆ ಆರಿಸಿ ಆರಿಸಿ ತಂದು ರಸ್ತೆ ಪಕ್ಕದಲ್ಲಿ ಗುಡ್ಡೆ ಹಾಕಿ ಇಡುತ್ತೆ. ನಾಲ್ಕು ಗಂಟೆಯ ಹೊತ್ತಿಗೆ ಅಮ್ಮ ಬಂದು ದರಗಲು ಮುಟ್ಟಿಸಿ, ಕಟ್ಟಿಗೆ ಗಂಟಿಗೆ ಕೈಯಿಡುತ್ತಾಳೆ. ತಾಯಿ ಮಗಳಿಬ್ಬರು ನಡೆದು ಹೋಗುತ್ತಾರೆ.
" ದಿನಕ್ಕೆ ಅಮ್ಮಂಗೆ ಕೂಲಿ ಸಿಗ್ತದೆ. ಆದ್ರೆ ಕಟ್ಟಿಗೆ ಒಳ್ಳೆಯದಿಲ್ಲಾಂದ್ರೆ ರಾತ್ರಿ ಬ್ಯಾಗ್ನೇ ಅಡಿಗೆ ಆಗೋದಿಲ್ಲ. ನ೦ಗೆ ಹಸಿವಾಗಿರ್ತದೆ. ಅದ್ಕೆ ನಾನು ಅಮ್ಮ ಬರೋ ಹೊತ್ತಿಗೆ ಒಣ ಕಟ್ಟಿಗೆ ಆರಿಸಿ ಇಡ್ತಿನಿ. ಅಮ್ಮ ಕೆಲ್ಸ ಮುಗ್ಸಿ ಸಂಜೆ ಬೇಗ ಹೋಗಿ ಬೆಂಕಿ ಹಾಕಿದ್ರೆ ಬೇಗ ಅಡ್ಗೆ ಆದ್ರೆ ನಂಗೆ ಊಟಾ ಬೇಗ ಸಿಗ್ತದೆ.." ಮನಸ್ಸಿನಾಳದಲ್ಲೆಲ್ಲೋ ಒಮ್ಮೆ ಛುಳ್ ಎಂದು ಬಿಟ್ಟಿತು. ಇವತ್ತೀಗೂ ನನ್ನನ್ನು ಕಲಕುತ್ತಿರುವ ಧ್ವನಿ ಅದು. ಬೆಳಗಿನಿಂದ ಸಂಜೆಯವರೆಗೂ ಹೀಗೆ ಕೆಲಸ, ಮನೆಯೆಡೆಗಿನ ಕಕ್ಕುಲಾತಿ, ಅದರ ಮೇಲೆ ಹಸಿವು ಅದೂ ಗಂಜಿಯಾದರೂ ಒಂಚೂರು ಬೇಗ ಸಿಗುವುದಾದರೆ ಸಿಗಲಿ ಅದಕ್ಕೆ ಒಣ ಕಟ್ಟಿಗೆ ಆರಿಸಿ ಗುಡ್ಡೆ ಹಾಕುತ್ತಿದೆ ಮಗು. ಮಗುವನ್ನೊಮ್ಮೆ ನೋಡಿದೆ ಛೆ ಎನ್ನಿಸಿತು. ಶಾಲೆ ಎಂದೆ..?.
" ನಾನು ವಾರಕ್ಕೆರಡೆ ಸರ್ತಿ ಹೋಗ್ತೇ. ಬಾಕಿ ಸರ್ತಿ ಒಂದೆರಡು ದಿನಾ ನಾಯ್ಕ ಮಾಸ್ತರು ಮನೆಗೇ ಬಂದು ಹೇಳಿಕೊಡ್ತಾರೆ.." ನಿಜಕ್ಕೂ ಧನ್ಯ ಆ ಮಾಸ್ತರ ಜೀವನ. ಅಂದಿನಿಂದಲೂ ಸಣ್ಣ ಸಣ್ಣ ಕೆಂಪು ಹೂವಿನ ಪುಟ್ಟ ಹುಡುಗಿ ಬಿಸಿಲಿಗೆ ಮುಂಗುರುಳ ಹಾರಿಸುತ್ತಾ, ಸಣ್ಣ ಹಸಿವಿನ ಕಂಗಳಿಂದ ಸಂಜೆಯ ಆಸೆಗಳಿಗೆ ಈಡಾಗುತ್ತಾ ಕಟ್ಟಿಗೆಗೆ ಕಾಡು ನುಗ್ಗುವುದು ಕಾಣಿಸುತ್ತಲೇ ಇದೆ. ಕೈಗೆ ಸಿಕ್ಕಷ್ಟು ನೋಟು-ಚಿಲ್ಲರೆಗಳನ್ನು ಅದರ ಕೈಗಿಟ್ಟು ಬಂದಿದ್ದೆ. ಎದೆಯೊಳಗೆನೋ ಅರ್ಥವಾಗದ ಮುಳ್ಳು ಮುರಿದ ಸಂಕಟ. ಊಟದಿಂದ ಹಿಡಿದು ನೀರು ಕುಡಿಯುವಾಗಲೂ ಮಗುವಿನ ಮುಖ ನೆನಪಾದರೆ ಗಂಟಲು ಕಟ್ಟದೇ ಇನ್ನೇನು ಮಾಡೀತು. ಎಲ್ಲಿದ್ದೇವೆ ನಾವು..? ಬೆಚ್ಚನೆ ಗೂಡು, ಮಧ್ಯಾನ್ಹ ಶಾಲೆ ಊಟ, ಪುಕ್ಕಟೆ ಸೈಕಲ್ಲು ಯಾವಾಗ ಆ ಮಗುವಿಗೆ ತಲುಪೋದು...? ಯಾರಿಗೆ ಕೂಗಲಿ.

ಅವರ ಕೊನೆಯ ಆಸೆಗಳು ನನಗೆ ಗೊತ್ತಾಗಲೇ ಇಲ್ಲ...!

ಪಾಪ ಒಂದು ದಶಕಕ್ಕೂ ಹೆಚ್ಚಿನ ಕಾಲ ಒಬ್ಬಂಟಿಯಾಗಿ ಕಳೆದು ಹೋದ ಆ ಹಿರಿಯ ಜೀವಕ್ಕೆ ಏನು ಹೇಳಿಕೊಳ್ಳುವುದಿತ್ತೋ...? 

ಆ ದಿನಗಳಲ್ಲಿ ನಾನು ವಿಪರೀತ ಕೋಪಕ್ಕೆ ಬೀಳುತ್ತಿದ್ದೆ. ಅದರಲ್ಲೂ ದಿನಾ ರಾತ್ರೆಯಿಡೀ ಕಂಪ್ಯೂಟರ್ ಮುಂದೆ ಕೂತು ಡ್ರಾಯಿಂಗುಗಳನ್ನು ಮಾಡಿ ಅದರದ್ದೇ ಲೈನುಗಳು ತಲೆಯಲ್ಲಿ ಕದಲುತ್ತಿರುವಾಗಲೇ ಎಂ. ಜಿ. ರೋಡ್ ಆಚೆಗೆ ಶಿವಾಜಿನಗರದ ಚೌಕಿನಿಂದ ಆಚೆಗೆ ಸರಿದು ರೂಮಿಗೆ ಬಂದು ಬಿದ್ದರೆ ಎಚ್ಚರವಾಗುತ್ತಿದ್ದುದು ಮಧ್ಯಾನ್ಹದ ಐದು ಗಂಟೆಗೆ ಹಾಸ್ಟೆಲ್ ಆವರಣದಲ್ಲಿ ಟ್ರೇನಿಂಗ್ ಹುಡುಗರು ಬಂದು ಗಿಜಿಗಿಜಿ ಶುರು ಮಾಡಿದಾಗಲೇ. ಅದಕ್ಕೂ ಭಯಂಕರವಾಗಿ ಬೊಬ್ಬಿರಿಯುತ್ತಿದ್ದುದೆಂದರೆ ಯಮ ಹಸಿವು. ಬೆಳ್ಳಿಗೆ ಪಕ್ಕದ ಕಾಕಾನ ಹೊಟೇಲ್ ಭಾರತ ರೆಸ್ಟೋರಾಂಟಿನಲ್ಲಿ ಪರಾಟಾ ತಿಂದು ಮಲಗಿದವನಿಗೆ, ಹಸಿವು ಆ ಹೊತ್ತಿಗೆ ಏನೂ ಆಗಬಹುದೆನ್ನುವಂತಹ ಹಪಾಹಪಿಯನ್ನು ತಂದಿಟ್ಟಿರುತ್ತಿತ್ತು. ಪಕ್ಕದಲ್ಲಿ ನನಗಿಂತಲೂ ಜೋರಾಗಿ ನಿದ್ರೆ ತೆಗೆಯುತ್ತಿದ್ದ ಬಸವನ ಲುಂಗಿ ಒಂದು ಕಡೆ ತಾನೊಂದು ಕಡೆಯಾದರೆ ಅವನ ಪಕ್ಕದಲ್ಲಿ ಮಲಗಿರುತ್ತಿದ್ದ ತಿಪ್ಟೂರು ರವಿಗೆ ಬಾಯಿಯಲ್ಲಿ ಆಗ್ಲೇ ನೊಣವೊಂದು ಸಂಸಾರ ಹೂಡಿ, ಹೊರಡುವ ತಯಾರಿಯಲ್ಲಿದ್ದುದೂ ಗೊತ್ತಾಗದಷ್ಟು ಯಮ ನಿದ್ರೆ. ಅವರಿಬ್ಬರ ಬುಡಕ್ಕೊಂದು ಒದೆ ಒದ್ದು ಬ್ರಶ್ಶು, ನೀರು ಹುಡುಕುವಾಗ ಅಡರುತ್ತಿದ್ದ ಆಗೀನ ಬೆಂಗಳೂರು ಚಳಿ ಹೊರಬೀಳುವ ಮುನ್ನ ಜಾಕೆಟ್ಟು ಹುಡುಕುವಂತೆ ಮಾಡುತ್ತಿತ್ತು. 
     ಹಾಗೆ ಹೊರಟು ಎಂ.ಈ.ಎಸ್. ರೋಡಿನ ಕೊನೆಯ ಬಾರಿನಲ್ಲಿ ಕುಳಿತು ಇಷ್ಟಿಷ್ಟು ಬೀಯರು ಕುಡಿದು, ಮಿಲ್ಟ್ರಿ ಕ್ಯಾಂಟಿನಿನಲ್ಲಿ ಅವರಿಬ್ಬರು ಹೊಂತೆ ತಿಂದರೆ, ನನ್ನದು ಮಾತ್ರ ಅದೇ ಒಣಕಲು ಚಪಾತಿ ಮತ್ತು ಮೊಟ್ಟೆ ಸಾರಿನ ಸುಗ್ಗಿ ಜಾಲಹಳ್ಳಿಯ ರಾಘವೆಂದ್ರ ಭವನದಲ್ಲಿ. ಹಾಗೆ ಕುಳಿತಾಗಲೇ ಅದೊಂದಿನ ಅವರು ಪರಿಚಯವಾಗಿದ್ದು. ಆ ದಿನ ಶನಿವಾರವಾದ್ದರಿಂದ ಕುಡುಕರ ನಿಯಮದಂತೆ ಕೊಂಚ ಹೆಚ್ಚೇ ಕುಡಿದು, ಇನ್ನೇನು ಉಂಡು ಮುಗಿಯಬೇಕು ಮಾಣಿ ಇದ್ದಕ್ಕಿದ್ದಂತೆ "...ಸಾರ್ ಚಪಾತಿ ಖಾಲಿ..." ಅಂದು ಬಿಡಬೇಕೆ. ಸಮಯ ನೋಡಿಕೊಂಡೆ ಆಗಿನ್ನು ಎಳೂ ಮುಕ್ಕಾಲು ಆಗಿಲ್ಲ. ಅಸಲಿಗೆ ಅದು ತುಂಬಾ ಚಿಕ್ಕ ಹೊಟೇಲು. ದಿನಕ್ಕೆ ಇಪ್ಪತ್ತು ಊಟ ಹೋದರೆ ಜಾಸ್ತಿ. ಅದಕ್ಕಾಗಿ ಲಿಮಿಟೆಡ್ಡು ಪ್ರಿಪರೇಶನ್‌ನಲ್ಲಿ ಅವನಿದ್ದರೆ ನನಗೆ ಉರಿ ಉರಿ. ಬಾಯಿಗೆ ಬಂದದ್ದು ಕಕ್ಕಿ ಅವನನ್ನು ಸಿಗಿದು ಬಿಡುವ ಕೋಪದಲ್ಲಿ ಕೂಗಾಡುತ್ತಿದ್ದರೆ ಆಚೆ ಟೇಬಲ್ಲಿಗೆ ಕುಳಿತಿದ್ದ ವೃದ್ಧರೊಬ್ಬರು ತಣ್ಣಗೆ, " ಯಾಕಪ್ಪಾ ಚಪಾತಿ ತಾನೆ ಇದು ತೊಗೊ... " ಎನ್ನುತ್ತಾ ತಮಗೆಂದು ತಂದಿರಿಸಿದ್ದ ತಟ್ಟೆಯನ್ನು ನನ್ನೆದುರಿಗೆ ತಳ್ಳಿ ಕೈ ತೊಳೆದು ನಡೆದುಬಿಟ್ಟಿದ್ದರು. ಕುಳಿತಲ್ಲೇ ನಾನು ನೀರಾಗಿದ್ದೆ.
       ಮುಂದಿನ ಕೆಲವೇ ದಿನಗಳಲ್ಲಿ ನನ್ನ ಅವರ ಮಧ್ಯೆ ಬೆಳೆದ ಬಾಂಧವ್ಯ, ವಯಸ್ಸು ಹೊರತು ಪಡಿಸಿ ಅವರು ಎಲ್ಲದರಲ್ಲೂ ಅಪ್ಪಟ್ಟ ಹೆಗಲು ತಬ್ಬಿ ನಡೆವ ಸ್ನೇಹಿತನಂತೆ. ವಯಸ್ಸಿನಲ್ಲಿ ಮಾತ್ರ ಬಹುಶ: ಅವರಿಗಾದ ಜೀವನಾನುಭವದ ಅರ್ಧದಷ್ಟು ನನಗಾಗಿರಲಿಲ್ಲ. ಈ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟ ಶಾಲಿಯೋ ಅಥವಾ ಒಂದು ರೀತಿಯಲ್ಲಿ ವಿಚಿತ್ರ ಪ್ರಾಣಿನೋ ಗೊತ್ತಿಲ್ಲ. ಮೊದಲಿನಿಂದಲೂ ಇವತ್ತಿನವರೆಗೂ ನನ್ನ ಗಾಢ ಗೆಳೆತನ ಎನ್ನುವುದು ಏನಿದ್ದರೂ ತೀರ ವಯಸ್ಸಾದ ಜೀವಗಳೊಂದಿಗೆ ಹೆಜ್ಜೆ ಹಾಕಿ ಬೆಳೆದದ್ದೇ. ಹಾಗೆ ಎಲ್ಲಾ ಹಿರಿಯರೂ ಕೂಡಾ ತೀರ ಪಕ್ಕದ ವಯಸ್ಸಿನ ಹುಡುಗರಂತೆ ನನ್ನ ಪರಿಗಣಿಸಿದರು ಆನ್ನೋದು ಇವತ್ತಿಗೂ ವಿಸ್ಮಯಕಾರಿನೇ.
        ಮೊದಮೊದಲಿಗೆ ತೀರ ಚಿಕ್ಕವನಾಗಿದ್ದಾಗ ನಾಲ್ಕನೆಯತ್ತೆ ದಾಟದ ನಾನು ಮಧ್ಯಾನ್ಹದ ಉರಿ ಬಿಸಿಲಲ್ಲಿ ಬ್ಯಾಣಕ್ಕೆ ಬೆಂಕಿ ಇಕ್ಕಲು, ಅಗಳದ ಮಧ್ಯೆ ಕಟ್ಟಿಕೊಂಡಿದ್ದ ಹೆಜ್ಜೇನು ಹುಡುಕಲು ಕಂಬಳಿ ಗೊಪ್ಪೆ ಹಾಕಿಕೊಂಡು, ಕೊನೆಗೆ ಏನಿಲ್ಲವೆಂದರೂ ಪೇರು, ಮುಳ್ಳಣ್ಣು, ಹಲಸಿನಣ್ಣು, ಪನ್ನಿರಲ ಕಿತ್ತಲು, ಕೊನೆಗೆ ಕಾನಿನಲ್ಲಿ ಬಿಳಲು ತರಲು, ಗೂಟ ಕಡಿದುಕೊಂಡು ಬರಲೆಂದು ಅಕ್ಷರಶ: ನನ್ನ ಮೂರರಷ್ಟು ಹೆಚ್ಚಿನ ವಯಸ್ಸಿನ ಸೋದರ ಮಾವನೊಂದಿಗೆ, ನನ್ನ ಸಮ ಸಮಕ್ಕೆ ಬರುತ್ತಿದ್ದ ಹಿಡಿಗತ್ತಿಯನ್ನು ಎಳೆಯುತ್ತಾ ಹೊರಟಿರುತ್ತಿದ್ದೆ. ಹಾಗೆ ಸರಿ ಸುಮಾರು ಇಪ್ಪತ್ತೈದು ವರ್ಷ ಕಳೆದರೂ ಹಳೆಯದನ್ನು ನೆನೆಸಿಕೊಳ್ಳುತ್ತಾ ಮಾತಿಗೆ ಕುಳಿತರೆ ಮಾವ ಈಗಲೂ ಅದೇ ಹರೆಯದ ಮಲೆನಾಡಿನ ಹುಲಿಯೇ. ನಂತರದಲ್ಲಿ ನನ್ನೊಂದಿಗೆ ಎರ್ಡ್ಮೂರು ವರ್ಷ ಸೇವೆಯ ಆರಂಭದ ದಿನದಲ್ಲಿ ಹೆಜ್ಜೆ ಹಾಕಿದ ಪವಿತ್ರನ್ ಎಂಬ ಜೀವ ಕೂಡಾ ಕನಿಷ್ಟ ಎರಡು ದಶಕದಷ್ಟು ಹಿರಿತನದ್ದು. ಅಲ್ಲಿಂದ ಮತ್ತೆ ತಿರುಗಣಿ ತಿರುಗಿ ಇದೇ ಉ.ಕ. ಜಿಲ್ಲೆಗೆ ಬಂದು ಕುಳಿತ ಮೊಟ್ಟ ಮೊದಲ ದಿನದಿಂದ ಹಿಡಿದು ಮೊನ್ನೆ ಮೊನ್ನೆ ರಿಟೈರಾಗುವವರೆಗೂ ನನ್ನೊಂದಿಗೆ ಕೆಲಸದಿಂದ ಹಿಡಿದು ಕಾರು-ಬಾರು, ಎಲ್ಲಾ ಹಂಚಿಕೊಂಡು ಹೋದವರೂ ಕೂಡಾ ನಾನು ಹುಟ್ಟುವ ಮೊದಲೇ ನೌಕರಿಗೆ ಸೇರಿದ್ದಷ್ಟು ದೊಡ್ಡ ಹಿರಿಯರು.
     ಅತ್ತ ಸಾಹಿತ್ಯಿಕ ವಲಯದಲ್ಲಿ ಇವತ್ತೀಗೂ ಗಾಢ್‌ಫಾದರ್‌ಗಳಿಲ್ಲದೇ ಕಾಲೂರುವಾಗ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನಕ್ಕೆಂದು ನಿಂತಿದ್ದವರು ಕೊನೆಕೊನೆಗೆ ನನ್ನೊಂದಿಗೆ ಬಾ ಹೋಗು ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಸ್ನೇಹಿತರ ವಲಯಕ್ಕೆ ಲಗ್ಗೆ ಇಟ್ಟು ಬಿಟ್ಟರು. ಮೊನ್ನೆ ಮೊನ್ನೆ ಆಕಸ್ಮಿಕವಾಗಿ ಹೀಗೆ ಯಾವತ್ತೋ ಬದುಕಿನ ರೈಲಿನಲ್ಲಿ ಸ್ಟೇಶನ್ನು ಬಂದಾಗ ಇಳಿದು ಹೋದ ಪ್ರಯಾಣಿಕರಂತೆ ಮರೆಯಾಗಿದ್ದ ವಯಸ್ಕ ಆತ್ಮೀಯರು ಕರೆ ಮಾಡಿ ಮಾತಾಡಿಸಿದಾಗ ಆಘಾತ. ನಾನು ಅವರು ಬಹುಶ: ತೀರಿಯೇ ಹೋಗಿದ್ದಾರೆಂದು ಭಾವಿಸಿದ್ದೆ. ಅವರಲ್ಲಿ ಹಾಗೆ ಹೇಳಿ ಕ್ಷಮೆ ಕೇಳಿ ಬೈಸಿಕೊಂಡೆ. ಈಗಲೂ ಅವರಲ್ಲಿ ಆಗಿನಿಂದಲೂ ಇದ್ದ ಅದೇ ಹಾಸ್ಯಮಯ ಧಾಟಿ. ಕೊನೆಯಲ್ಲಿ " ಇಷ್ಟು ಬೇಗ ಕಳಿಸ್ಬೇಡವೋ ಇನ್ನೊಂದು ಮದುವೆಯಾಗಿ ಸಂಸಾರ ಮಾಡಬೇಕಿದೆ... " ಎಂದು ಲಂಪಟ ಗಂಡಸಿನಂತೆ ಹಾಸ್ಯ ಮಾಡಿ ಫೋನಿಟ್ಟರು. ಕಳೆದ ವರ್ಷ ಹಿಮಾಲಯದ ಪಾದಕ್ಕೆ, ಅಲ್ಲಿನ ಚಳಿಗೆ ನಮ್ಮ ಸೊಕ್ಕು ಕರಗಿಸಿಕೊಳ್ಳಲೆಂದು ಹೋದಾಗ, ನಮಗಿಂತಲೂ ವೇಗವಾಗಿ ಹಿಮದಲ್ಲಿ ಪರ್ವತಗಳನ್ನು ಏರಿ ನಿಂತು, ಬನ್ನಿ ಬನ್ನಿ ಎಂದು ಕರೆಯುತ್ತಿದ್ದ ದ.ಕ. ವೃದ್ಧ(?)ರೊಬ್ಬರು ಭೇಟಿಯಾದರು. ಕೇವಲ ಮೂರು ತಾಸುಗಳ ಆರಂಭಿಕ ಭೇಟಿ ಅದು. ಚಾರಣದ ಹದಿನೈದು ದಿನದ ನಂತರ ಬೇರ್ಪಡೆಯಾದರೂ ಇವತ್ತಿಗಾಗಲೇ ಅವರು ಕನಿಷ್ಟ ವಾರಕ್ಕೊಮ್ಮೆಯಾದರೂ ಕರೆ ಮಾತಾಡುವಷ್ಟು ಆತ್ಮಿಯರು. 
          ಅಷ್ಟೇಕೆ ಕಳೆದ ರಾಷ್ಟ್ರ ಮಟ್ಟದ ವೈಜ್ಞಾನಿಕ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ, ಅದಕ್ಕೂ ಮೊದಲು ಪಾಂಡಿಯಲ್ಲಿ ನಡೆದಾಗ ಎರಡೂ ಕಡೆಯಲ್ಲೂ ನೆರೆದಿದ್ದ ಗುಂಡು ಕಂಪೆನಿಯಲ್ಲಿ ಕುಳಿತುಕೊಳ್ಳಲು ಅನುಮಾನಿಸುವಷ್ಟು ಹಿರಿಯರು ನನ್ನೊಂದಿಗಿದ್ದರು.  ಆಗ ಬೆಂಗಳೂರಿನಲ್ಲಿ ಹೀಗೆ ಚಪಾತಿಯಿಂದ ಆರಂಭವಾದ ಸ್ನೇಹ ಆಗೀಗ ಕುಳಿತು ಗುಂಡು ಹಾಕುವವರೆಗೂ ಸಲುಗೆ ಬೆಳೆದು, ಉಳಿದಂತೆ ಅದ್ಭುತ ಮಾತುಗಾರರಾದ ಅವರು ರಾಮಕೃಷ್ಣ ಹೆಗಡೆಯಿಂದ ಹಿಡಿದು, ಪೋರೆನ್ಸಿಕ್ ಸೈನ್ಸ್‌ನಿಂದ ತೀರ ಪೋಲಿಸ್ ಟಾರ್ಚರುಗಳು, ಅದರಲ್ಲಿ ವಿವಿಧ ದೇಶದ ವಿಧಾನಗಳನ್ನು ಉಲ್ಲೇಖಿಸುತ್ತಾ, ತಾವು ಉತ್ತರ ಭಾರತದಲ್ಲಿ ಕಳೆದ ದಿನಗಳ ಬಗ್ಗೆ ವಿವರಿಸುತ್ತಿದ್ದರೆ ರಾತ್ರಿಗಳಿಗೆ ಬೆಂಕಿ ಬೀಳಬೇಕು.
           ಅದೊಂದಿನ ನಾನು ಭಾರತ ರೆಸ್ಟೋರಾಂಟಿಗೆ ಹೋಗುವಾಗ ಅಕಸ್ಮಾತಾಗಿ ಅವರು ರಾಯಚೂರಿನ ರಾಜರಾಂನೊಂದಿಗೆ ನಿ೦ತಿದ್ದು ಕಾಣಿಸಿತ್ತು. ಯಾವತ್ತೂ ಹೀಗೆ ಅದರಲ್ಲೂ ಲಫಂಗರಿಗೆ ಗುರುವಿನಂತಿದ್ದ ರಾಜಾರಾಮನೊ೦ದಿಗೆ ಪರಿಚಯ ಇದ್ದಿರಬಹುದೆನ್ನುವ ಅಂದಾಜಿರದ ನನಗೆ ಅವರು ಅವನ ತಂದೆಯೆಂದೂ, ಇವನ ಕಾಟಾಚಾರಕ್ಕೆ ಬೇಸತ್ತು ಬೆಂಗಳೂರಿಗೆ ಬಂದರೆ ಈ ಪುಣ್ಯಾತ್ಮ ಕೂಡಾ ಬಂದು ಇದೇ ಜಾಲಹಳ್ಳಿಯಲ್ಲಿ ಕಾಲೂರಿರಬೇಕೆ...? ಆ ದಿನ ಅವರು ಕುಸಿದು ಹೋಗಿದ್ದರು. ಆಗ್ಲೇ ಊರು ಬಿಟ್ಟು ನಾಲ್ಕು ವರ್ಷಗಳಾಗಿದ್ದುವಂತೆ. ಅವರಿಗೆ ಪೆನ್ಶನ್ ಇತ್ತು. ಬೊಮ್ಮಸಂದ್ರದ ಮೂಲೆಯಲ್ಲಿ ಚಿಕ್ಕ ರೂಮು ಮಾಡಿಕೊಂಡಿದ್ದರು. ಪೇಪರು ಓದು, ವಾಕಿಂಗ್, ಸಂಜೆ ಮೂಡಿದ್ದರೆ ಗುಂಡು, ಪಾನಿ ಪೂರಿ ಆರಾಮವಾಗಿ ಎಲ್ಲ ಗೋಜಲು ಬಿಟ್ಟು ಸ್ವಂತ್ರತ್ರವಾಗಿ ಕಳೆದವರಿಗೆ ಇದ್ದಕ್ಕಿದ್ದಂತೆ ವಕ್ಕರಿಸಿದ್ದ ರಾಜಾರಾಂ ತಲೆ ನೋವು ತಂದಿಟ್ಟಿದ್ದ. ನಾನು ಅವರ ಪರವಾಗಿ ಮಾತಾಡಿ ಅವನು ಬೊಮ್ಮಸಂದ್ರದ ರೂಮಿಗೆ ಹೋಗಿ ಕಾಡದಂತೆಯೂ, ಕಾಸು ಮತ್ತೊಂದು ಎಂದು ಹಿಂದೆ ಬೀಳದಂತೆ ಮಾಡಿದ್ದೇನಾದರೂ ಅವರಲ್ಲಿ ಮೊದಲಿದ್ದ ಖುಶಿ ಉಳಿದಿರಲಿಲ್ಲ. ಅವರವರ ವೈಯಕ್ತಿಕ ವಿಷಯಗಳೇನೇನಿದ್ದವು...? ವೃದ್ಧ ಜೀವ ಜೀವನದಲ್ಲಿ ಆಸಕ್ತಿ ಕಳೆದುಕೊಂಡಂತಿತ್ತು. 
           ಇದ್ದಕ್ಕಿದ್ದಂತೆ ಒ೦ದಿನ ನಾಪತ್ತೆ ಆಗಿ ಬಿಟ್ಟಿದ್ದರು. ಸುತ್ತ ಮುತ್ತೆಲ್ಲಾ ಹುಡುಕಾಡಿದೆವು. ಬಸು, ರವಿ, ಪ್ರದೀಪ, ಮೈಸೂರಿನ ಮುಕುಂದ ಎಲ್ಲಾ ಜಾಲಹಳ್ಳಿಯಿಂದ ಎಂ.ಎಸ್. ರಾಮಯ್ಯವರೆಗೂ ಗಲ್ಲಿಗಳನ್ನು ತಿರುವ್ಯಾಡಿ ಬಿಟ್ಟಿದ್ದೆವು. ಬಹುಶ: ರಾಜಾರಾಂ ಕಿರಿಕಿರಿ ಮಾಡಿದನೇನೋ ಎಂದು ಎತ್ತಾಕಿಕೊಂಡು ಸಮಾ ರೂಮಿನಲ್ಲಿ ಚಚ್ಚುತ್ತಿದ್ದರೆ ಅವನೋ ಊರೇ ಸೇರುವಂತೆ ಏಟಿಗೂ ಮುಂಚೆ ಕಿರುಚಲಾರಂಭಿಸಿದ್ದ. ಅದಾಗಿ ನಂತರದಲ್ಲಿ ಅವರು ಕಂಡಿರಲೇ ಇಲ್ಲ. ಇದ್ದಕ್ಕಿದ್ದಂತೆ ಒಂದಿನ ನಾಲೈದು ವರ್ಷದ ಹಿಂದೆ ಮೆಜೆಸ್ಟಿಕ್ಕಿನಲ್ಲಿ ಕಂಡವರು ತಾವಾಗೆ ಕೂಗಿ ಮಾತಾಡಿಸಿದ್ದರು. ಕೊಂಚ ಇಳಿದು ಹೋಗಿದ್ದಾರೆ ಅನಿಸಿದ್ದು ಬಿಟ್ಟರೆ ಅದೇ ವಿಶಾಲ ನಗೆ. ಅದೇ ನಿರರ್ಗಳ ಮಾತು. ಮಧ್ಯಾನ್ಹದ ಹೊತ್ತೆ ಬಿಟ್ಟು ಬಿಡದೆ ಕರೆದೊಯ್ದು ಗ್ರಿನ್ ಹೋಟೆಲಿನಲ್ಲಿ ಕೂಡಿಸಿಕೊಂಡಿದ್ದರು. ಬೇಕೆಂದೇ ಜಾಲಹಳ್ಳಿ ಬಿಟ್ಟು ಬೆಂಗಳೂರಿನ ಇನ್ನೊಂದು ದಿಕ್ಕಿನ ಇಂದಿರಾನಗರದ ಕಡೆಗೆ ಸರಿದು ಹೋಗಿ ರೂಮು ಮಾಡಿಕೊಂಡಿದ್ದಾಗಿ ತಿಳಿಸಿದ್ದರು.
            ನಾನೂ ಹೆಚ್ಚು ಕೆದಕಿರಲಿಲ್ಲ. ಅದಾಗಿ ವರ್ಷಗಳೇ ಸರಿದವು.  ಮೊನ್ನೆ ಇದ್ದಕ್ಕಿದ್ದಂತೆ ಅದೇ ಬಿ.ಇ.ಎಲ್.ನಲ್ಲಿ ಈಗ ಎಂಪ್ಲಾಯಿ ಆಗಿರುವ ಶ್ರೀನಿವಾಸ ಕರೆ ಮಾಡಿದವನು "...ನಿನ್ನ ಒಲ್ಡ್ ಫ್ರೆಂಡ್ ಹೋಗಿ ಬಿಟ್ಟರಂತೆ ಕಣೊ..." ಎಂದರೆ ಒಮ್ಮೆ ಕ್ಷಣಕ್ಕೆ ಅರಿವಾಗಲಿಲ್ಲ " ಯಾರು ಎಂದೆ...?" " ಅದೇ ಬೊಮ್ಮ ಸಂದ್ರದಲ್ಲಿದ್ದರಲ್ಲ ಅವರು..." ಒಹೋ.. ಮುಂದೆ ಮಾತಾಡಲಾಗಲಿಲ್ಲ. ... ನಾಲ್ಕು ದಿನ ಮೊದಲು ಇಲ್ಲಿ ಗಣಪತಿ ದೇವಸ್ಥಾನದ ಹತ್ತಿರ ಸಿಕ್ಕಿದವರು ನನ್ನ ಬಗ್ಗೆ ವಿಚಾರಿಸಿದ್ದರಂತೆ. ಮೊಬೈಲು ನಂಬರು ಕೊಡು ಎಂದಿದ್ಡಾರೆ. ಇವನು ಆಯಿತು ವಿಚಾರಿಸಿ ಕೊಡುತ್ತೇನೆ ಎಂದು ಎರಡ್ಮೂರು ದಿನವಾದರೂ ನನ್ನನ್ನು ಸಂಪರ್ಕಿಸಿಲ್ಲ. ಮರುದಿನ ಕೂಡಾ ಸಿಕ್ಕಿದಾಗ ನಂಬರು ಇನ್ನು ತೆಗೆದುಕೊಳ್ಳಲಾಗಿಲ್ಲ ಅಂದಿದ್ದಕ್ಕೆ ಮುಖ ಸಣ್ಣದು ಮಾಡಿ ಅವನ ಹತ್ತಿರ ಮಾತಾಡಬೇಕಿತ್ತು .. ಛೇ... ಎಂದು ಗೊಣಗಿಕೊಂಡಿದ್ದಾರೆ ಅಷ್ಟೆ. ಮರುದಿನಕ್ಕೆ ಅವರಿಲ್ಲ. ಜಾಲಹಳ್ಳಿಯಲ್ಲಿ ಎಂದಿನಂತೆ ಭೇಏಯಾಗುತ್ತಿದ್ದ ಗಣೇಶ ದೇವಸ್ಥಾನದ ಹತ್ತಿರ ಕಲ್ಲು ಬೆಂಚಿನ ಮೇಲೆ ಕುಳಿತಲ್ಲೇ ಪ್ರಾಣ ಬಿಟ್ಟಿದಾರೆ.." ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ. ಕೊನೆಯ ಕ್ಷಣದಲ್ಲಿ ಮನಸ್ಸು ಖಾಲಿ ಖಾಲಿಯಾದಂತೆನಿಸಿತು. ಯಾಕೆಂದರೆ ಹಿರಿಯರಾಗಿದ್ದಷ್ಟೂ ನಿರ್ಗಮನದ ಬಾಗಿಲು ತುಂಬ ಹತ್ತಿರಕ್ಕಿರುತ್ತವೆ. ನನಗೆ ಅಂಥ ಆತ್ಮೀಯರ ವಲಯ ದೊಡ್ಡದು. ಮತ್ಯಾವ ಕರೆಯೂ ಅಂತಹದ್ದು ಬಾರದಿರಲಿ ಅನ್ನಿಸಿ ಎರಡು ನಿಮಿಷ ಮೌನವಾಗಿದ್ದು ಬಿಟ್ಟೆ. ಆ ದಿನ ಪೂರ್ತಿ ಮೊಬೈಲಿಗೆ ಕಿವಿಗೊಡಲೇ ಕಿರ್ಕಿರಿ. ಪಾಪ ಒಂದು ದಶಕಕ್ಕೂ ಹೆಚ್ಚಿನ ಕಾಲ ಒಬ್ಬಂಟಿಯಾಗಿ ಕಳೆದು ಹೋದ ಆ ಹಿರಿಯ ಜೀವಕ್ಕೆ ಏನು ಹೇಳಿಕೊಳ್ಳುವುದಿತ್ತೋ...?