Saturday, August 5, 2017

ಅಪನಂಬಿಕೆ ಎಂಬ ಅಪರಿಚಿತ ಅತಿಥಿ...
(ಇರುವ ಎರಡು ದಿನದಲ್ಲಿ ಏನೆ ಆದರೂ ಕಳೆದುಕೊಳ್ಳುವುದು ಎಂದು ಏನೂ ಇಲ್ಲ. ಎಲ್ಲಾ ಆಯಾ ಸಮಯದ ಕರ್ಮವಷ್ಟೆ. ಸಮಯಕ್ಕೆ ತಕ್ಕಂತೆ ಬದಲಾಗದಿದ್ದರೆ ನೀವು ಅಲ್ಲೆ ಇರುತ್ತಿರಿ)

ನಮಗೆ ಬೇಕಿದ್ದೋ ಬೇಡದೆಯೋ ಒಂದು ಘಟನೆ ನಡೆದು ಹೋಗುತ್ತದೆ. ಇದ್ದಕ್ಕಿದ್ದಂತೆ ಇಬ್ಬರ ಮಧ್ಯೆ ಒಂದು ಅಂತರ ಹುಟ್ಟಿಬಿಡುತ್ತದೆ ಅಪರಾತ್ರಿಯಲ್ಲಿ ಸರಕ್ಕನೆ ಹುಟ್ಟಿ ಅಲ್ಲೆ ಸತ್ತು ಹೋಗುವ ಅಪಸವ್ಯದ ಕಾಮದಂತೆ. ಅದಿಬ್ಬರಿಗೂ ಬೇಕಿರಲಿಲ್ಲ ಅದರೆ ಮನಸ್ಸು ಬಹಳ ಸೂಕ್ಷ ಎನ್ನುವ ಸತ್ಯ ನಮಗೆ ಗೊತ್ತಿರಬೇಕು ಮತ್ತು ಗಂಡಸು ಅಂಡು ಒದರಿಕೊಂಡು ಹೋಗುತ್ತಾನೆಂದ ಮಾತ್ರಕ್ಕೆ ಅವನಿಗೆ ಭಾವನೆಗಳಿಲ್ಲ ಅಥವಾ ಹೆಂಗಸರಿಗಾಗುವ ಮತ್ತು ಅವರ ಸೆಂಟಿಮೆಂಟಿಗಾಗುವ ಫೀಲಿಂಗು ಮಾತ್ರವೇ ಕಿಮ್ಮತ್ತಿನದು ಅಂತಲ್ಲ. ಗಂಡಸು ಪ್ರಿಯಾರಿಟಿಗೆ ಮತ್ತು ಪ್ರಾಕ್ಟಿಕಾಲಿಟಿಗೆ ಒತ್ತು ಕೊಡುವುದರಿಂದ ಸ್ವಲ್ಪ ಈಜಿ ಗೋಯಿಂಗ್ ಅಂತನ್ನಿಸಿ ಬಿಡುತ್ತಾನೆ. ಅದಕ್ಕಿಂತಲೂ ಪ್ರತಿಘಳಿಗೆ ಮತ್ತು ಕಾಲದಲ್ಲೂ ಅವನಿಗೆ ಬದುಕು 360 ಕೋನದಿಂದಲೂ ಆವರಿಸಿಕೊಂಡು ಹಣಿಯುತ್ತಿರುತ್ತದೆ ಎನ್ನುವುದು ಸಂಬಂಧದಲ್ಲಿ (ಎಂದರೆ ಬರೀ ಅಫೇರ್ ಅಂತಲ್ಲ. ಅದು ಯಾವುದೇ ರೀತಿಯದ್ದು ಅಣ್ಣ/ತಮ್ಮ ತಂಗಿ ಮಾವ ಹೀಗೆ) ನಂಬಿಕೆ ಇರಿಸಿಕೊಂಡವರ ಅರಿವಿಗೆ ಬರುವವರೆಗೆ ತೀರ ತಡವಾಗಿರುತ್ತದೆ. ಕಾರಣ ಇವತ್ತು ಸ್ವಂತ ಗಂಡ ಹೆಂಡತಿಯರಿಗೇ ಎಷ್ಟೊ ಸರ್ತಿ ದಿನಕೊಮ್ಮೆ ಮುಖ ಕೊಟ್ಟು ಮಾತಾಡುವ ವ್ಯವಧಾನ ಉಳಿದಿಲ್ಲ. ಅಷ್ಟರ ಮಟ್ಟಿಗೆ ಅವರಿಬ್ಬರ ಪ್ರಿಯಾರಿಟಿ ಮತ್ತು ಸಣ್ಣಮಟ್ಟಿಗಿನ ಇಗೋ ಅವರ ಸಮಯ ಮತ್ತು ಬದುಕು ಎರಡನ್ನೂ ತಿಂದುಹಾಕುತ್ತಿರುತ್ತದೆ. ಅಂತಹದರಲ್ಲಿ ಹೆಂಗೋ ಚೆಂದವಾಗಿ ಬದುಕಿ ಬಿಡೋಣ ಎನ್ನುವ ಸಣ್ಣಸಣ್ಣ ಸಂಬಂಧಗಳಲ್ಲಿ ತಲೆ ಮೇಲೆ ಹತ್ತಿ ಕೂರುವಂತಹ ಮನಸ್ಥಿತಿ ಒಕ್ಕರಿಸಿಬಿಟ್ಟರೆ ದೇವರಾಣೆ ಅವರಲ್ಲಿ ಬದುಕು ತೇಪೆ ಹಾಕಿದ ಕೌದಿಯಾಗುತದೆ ಹೊರತಾಗಿ ಯಾವತ್ತೂ ಹರವಾದ ದುಪ್ಪಟಿಯಾಗಿ ಮಚ್ಚಟೆಗೀಡು ಮಾಡುವುದು ಕಷ್ಟಕಷ್ಟ.
ಅದಾಗಿದ್ದು ಹಾಗೆಯೇ ಅವಳಿಗೂ ಅವನಿಗೂ ಅದ್ಯಾಕೋ ಸ್ವಲ್ಪ ಅಪನಂಬಿಕೆ ಹುಟ್ಟಿಬಿಟ್ಟಿದೆ. ಅದಲ್ಲಿಗಲ್ಲಿಗೆ ಸರಿ ಹೋಗುವ ಮೊದಲೇ ಒಬ್ಬರಿಗೊಬ್ಬರು ಶರಂಪರ ಕಿತ್ತುಕೊಂಡಿದ್ದಾರೆ. ಅದರಲೂ ಯಾವಾಗ ಯಾರಿಗೆ ಅವನ/ಳ ಮಾತು ಮತ್ತು ಮೆಸೇಜು ಇನ್ನಾವುದೇ ರೀತಿಯ ಸಂವಹನ ಬೇಕಿರುವುದಿಲ್ಲವೋ ಆಗ ಮೇಲೆ ಬಿದ್ದಷ್ಟೂ ಒಂದು ರೀತಿಯ ಹೇವರಿಕೆ ಹುಟ್ಟುತ್ತದೆಯೇ ಹೊರತಾಗಿ ಅಪ್ತತೆ ಬೆಳೆಯುವುದೇ ಇಲ್ಲ. ಅದು ಮೀರಿ ನಾನು ಮಾತಾಡಿಸಿಕೊಂಡೆ ತೀರುತ್ತೇನೆ, ಅವನನ್ನು/ಳನ್ನು ಮತ್ತೆ ಒಲಿಸಿಕೊಳ್ಳುತ್ತೇನೆ ಎಂದು ದಿನವಿಡೀ ಅದರಲ್ಲೇ ಮುಳುಗೆದ್ದು ಹಿಂಬಾಲಿಸಿ ವರಾತಕ್ಕಿಟ್ಟುಕೊಳ್ಳುವುದಿದೆಯಲ್ಲ ಅದು ಸರಿಪಡಿಸಿಕೊಳ್ಳುವ ಸ್ಥಿತಿಯಲ್ಲ. ಅದೊಂದು ರೀತಿಯಲ್ಲಿ ಇಗೋಗೆ ಸಿಕ್ಕ ಮನಸ್ಸಿನ ಮತ್ತು ಅಯ್ಯೋ ಎಂಬ ಸ್ವಯಂ ಸಹಾನುಭೂತಿಯ, ತಾನು ಅಪ್ಪಟ ಚಿನ್ನದ ಮನಸ್ಥಿತಿಯ ಸುಪಿರಿಯಾರಿಟಿ ಕಾಂಪ್ಲೆಕ್ಸಿನ ಡೆಸ್ಪರೇಷನ್ನು.
ಅಯ್ಯೋ ನನ್ನ ಬದುಕು, ನನ್ನ ಪಾಲಿಸಿ, ನನ್ನ ನೈತಿಕತೆ, ನನ್ನ ಬದುಕಿನ ರೀತಿ, ನಾನು ಯಾವತ್ತು ತಪ್ಪೇ ಮಾಡಿಲ್ಲ, ನನ್ನ ಬದುಕಿನ ಸಂಸ್ಕಾರವೇ ಹಿಂಗಿತ್ತು, ಇನ್ನೆಂಗೆ ನನ್ನ ಗಂಡ/ಹೆಂಡತಿನ್ನ ಎದುರಿಸಲಿ, ನನ್ನ ಪ್ರಿನ್ಸಿಪಲ್ಲೇ ಕಿತ್ತುಹೋಯ್ತು, ಇನ್ನು ನನ್ನ ಬದುಕಿಡೀ ನರಕವೇ ಎಂದು ಅಲವತ್ತುಕೊಳ್ಳುವ ವ್ಯಕ್ತಿತ್ವಕ್ಕೆ ಬೇಕಿರುವುದು ಸಾಂತ್ವನ ಅಥವಾ ಪ್ರೀತಿ ಅಥವಾ ಬೆಂಬಲ ಅಥವಾ ಒತ್ತಾಸೆ ಅಲ್ಲವೇ ಅಲ್ಲ. ಅವರಿಗೆ ಆಗಿದ್ದಿದ್ದು ಮೊದಲೇ ಹೇಳಿದಂತೆ ಡೆಸ್ಪರೇಶನ್ನಿನ ಕಾಂಪ್ಲೆಕ್ಸು. ಅದರಿಂದ ಹೊರಗೆ ಬರಲು ಅವರಿಗೆ ತೋಚುವುದೊಂದೇ ಮಾರ್ಗ ಮೊದಲು ಆಗಿರುವ ಸಂಕಟವನ್ನು ಸರಿಪಡಿಸಿಕೊಂಡು ತನ್ನ ಮನಸ್ಸಿಗೆ ತಾನು ನಂಬಿದ್ದಕ್ಕೆ ಸರಿ ಎನ್ನಿಸುವ ಮನಸ್ಥಿತಿಗೆ ಒಂದು ಶಭಾಶಗಿರಿ ಕೊಟ್ಟುಕೊಂಡು ಅಯ್ಯಪ್ಪಾ ಎಲ್ಲಾ ಸರಿಯಾಗಿಬಿಟ್ಟಿತು ಅದಕ್ಕೆ ತಕ್ಕಂತೆ ನಾನೂ ಸರಿ, ನನ್ನ ಬದುಕು ಸರಿಯಾಯಿತು ಎನ್ನುವ ಮನಸ್ಸಿನ ಕಾಂಪ್ಲೆಕ್ಸಿಗೆ ಹಾಯೆನ್ನಿಸುವ ಅವಶ್ಯಕತೆಯ ತರಾತುರಿಗೆ ಬಿದ್ದಿರುತ್ತಾರೆ ಹೊರತಾಗಿ ಅದರಿಂದ ಯಾವತ್ತೂ ಶಾಶ್ವತ ಪರಿಹಾರವಾಗಿರುವುದೇ ಇಲ್ಲ ಎನ್ನುವುದು ಅವರ ಮೆದುಳಿಗಿಳಿಯುವುದೇ ಇಲ್ಲ. ಕಾರಣ ಅವರಿಗೆ ತತಕ್ಷಣಕ್ಕೆ ಮನಸ್ಸಿನ ಭರವಸೆಗೆ ತಾನು ಸರಿ ಇದ್ದೇನೆ ಎನ್ನುವ ಒಳಗುದಿಗೆ ಅರ್ಜೆಂಟಾಗಿ ಒಂದು ಪ್ರಾಮಿಸ್ಸು ಬೇಕಿರುತ್ತದೆ. ಅದಾಗಿಬಿಟ್ಟರೆ ಅಲ್ಲಿಗೆ ಅಯ್ಯಪ್ಪಾ ಎಂದು ಹೊರಟು ಬಿಡುತ್ತಾರೆ. ಮುಂದೊಮ್ಮೆ ಇನ್ನೇನೋ ತಲೆ ಕೆದರಿಕೊಳ್ಳುವವರೆಗೂ ಯಾವ ಉಸಾಬರಿಯೂ ಇರುವುದಿಲ್ಲ. 
ನೆನಪಿರಲಿ ಹೀಗೆ ಮಾಡುವವರ ಬದುಕಿನಲ್ಲಿ ಯಾವತ್ತೂ ಖುಶಿಯೆನ್ನುವುದು ಅಡರುವುದು ಕಷ್ಟ. ಕಾರಣ ಪ್ರತಿ ಬಾರಿಯೂ ಅವರ ಮನಸ್ಸು ಒಳಗೊಳಗೆ ಯುದ್ಧಮಾಡುತ್ತಲೇ ಇರುತ್ತದೆ. ಅವರಿಗೇ ಗೊತ್ತಿಲ್ಲದಂತೆ ತಾನಂದುಕೊಂಡಂತೆ ಬದುಕುತ್ತಿರುವ ಸರಿ ತಪ್ಪಿಗೆ ತಿಕ್ಕಾಟದಲ್ಲೇ ಇರುತ್ತಾರೆ. ಎಲ್ಲರನ್ನೂ ಖುಶಿಯಾಗಿಡುವ ಹ್ಯಾಂವಕ್ಕೆ ಹೆಣಗಾಡುತ್ತಿರುತ್ತಾರೆ. ಆದರೆ ಯಾವತ್ತೂ ಜತೆಗಿರುವವರಾಗಲಿ ಇತರರಾಗಲಿ ಮೇಲೆ ನೀ ಮಾಡಿದ್ದು ಸರಿ ಎನ್ನುವಂತೆ ವರ್ತಿಸಬಹುದಾದರೂ ಮನಸ್ಸು ಪೂರ್ವಕವಾಗಿ ಜತೆಯಾಗಲಾರರು.
ಕಾರಣ ಇಂತಹ ಸಂಬಂಧಗಳಲ್ಲಿ ಅಯ್ಯೋ ಅದೇ ಕಿರಿಕಿರಿ ಹೋಗಲಿ ಹೂಂ..ಅಂದು ಸುಮ್ನಾಗೋಣ ಎಂದಿರುತ್ತದೆಯೇ ಹೊರತಾಗಿ ಯಾವತ್ತೂ ಅವರೊಂದಿಗೆ ಒಂದು ನಂಬಿಗಸ್ಥ ವ್ಯವಸ್ಥೆ ಪುನರ್‍ಸ್ಥಾಪನೆ ಬಲು ಕಷ್ಟ. ಕಾರಣ ಅವರ ಡೆಸ್ಪರೇಶನ್ನು ಮತ್ತು ಸರಿ ಮಾಡಿಕೊಳ್ಳುವ ಅತಿ ಎನ್ನುವ ಕಾಂಪ್ಲೆಕ್ಸು ಎದುರಿನವರಿಗೆ ಹೇವರಿಕೆಯಾಗಿಬಿಟ್ಟಿರುತ್ತದೆ. ಅದಕ್ಕೂ ಮಿಗಿಲು ದಿಗಿಲು ಹುಟ್ಟಿಸುತ್ತದೆ. ಯಾವಾಗ ಯಾವ ಹೊತ್ತಿನಲ್ಲಿ ತಲೆ ಏರುತ್ತಾರೋ ಯಾರಿಗೆ ಗೊತ್ತು..? ಅಂತಹ ಭರವಸೆ ಮತ್ತು ನಂಬಿಕೆಯ ಜೊತೆ ಹುಟ್ಟಿಸುವಲ್ಲಿ ವಿಫಲವಾಗಿರುವ ಮನಸ್ಥಿತಿಯಿಂದಾಗಿ ಇದ್ದಬದ್ದ ಚೆಂದದ ಘಳಿಗೆಗಳನ್ನೂ ಹಾಳುಮಾಡಿಕೊಳ್ಳುತ್ತಿರುತ್ತಾರೆ.
ಬದುಕು ಬಂದಂತೆ ಸ್ವೀಕರಿಸಿ ಚೆಂದವಾಗಿಸಿಕೊಳ್ಳುವ ಹೊಂದಾಣಿಕೆ ಎನ್ನುವ ಸ್ವಭಾವ ಅರ್ಥವೇ ಆಗಿರುವುದಿಲ್ಲ. ಅಕಸ್ಮಾತ ಇದನ್ನು ವಿವರಿಸಲು ಹೋಗಿ ತಾನು ಇದ್ದಬದ್ದವರೊಂದಿಗೆ ಹೇಗೆಲ್ಲಾ ಸಾವರಿಸಿಕೊಂಡು ಹೋಗುತ್ತಿದ್ದೇನೆ ಎನ್ನುವುದಕ್ಕೆ ಅಂಟಿಕೊಳ್ಳುತ್ತಾರೆ ಹೊರತಾಗಿ ವಾಸ್ತವ ಅರಿವಿಗೆ ತಂದುಕೊಳ್ಳುವುದಿಲ್ಲ. ಬರೀ ಹೆಣ್ಣು ಗಂಡಿನ ಮಧ್ಯೆ ಅಂತಲ್ಲ ಇದು ಇಬ್ಬರಲ್ಲೂ ಅಷ್ಟೆ. ಯಾವುದೇ ಸ್ನೇಹ, ಅವಳೊಂದಿಗಿನ ಗೆಳೆತನ, ಚಿಕ್ಕಪ್ಪನೊಂದಿಗಿನ ಮುಯ್ಯಿ, ಸ್ವಂತ ಹೆಂಡತಿಯೊಂದಿಗಿನ ಅರೆಮುನಿಸು, ಕಚೇರಿ ಸಹೋದ್ಯೋಗಿಯೊಂದಿಗೆ ಒಂದು ದಿವ್ಯವಾದ ಮುಖಸಿಂಡರಿಸುವ ಪಢಪೆÇೀಶಿತನ, ಕೆಲಸದಾಳಿನ ಜೊತೆಗಿನ ಒಣಉಸಾಬರಿ, ಪಕ್ಕದ ಮನೆಯಾತನ ಹಲ್ಕಟಗಿರಿ, ನಿಮ್ಮ ಫೇಸ್‍ಬುಕ್ ವಾಲ್ ಮೇಲೆ ಬಂದು ಕ್ಯಾತೆ ತೆಗೆಯುವ ನಿಮ್ಮ ಕಮೆಂಟಿಗೆ ಆಕೆ/ಅವನು ಲೈಕ್ ಒತ್ತಿದ್ದಾನೆ ಎಂದು ನೋಡುವ ಸಣ್ಣತನ, ಎದೆಯುದ್ದ ಮಗನ ಸರಿಬರದ ನಡವಳಿಕೆ, ನಮ್ಮ ನಮ್ಮ ಸ್ನೇಹದವರೊಂದಿಗಿನ ಲೈಕು ಕಮೆಂಟಿಗೆ ಸಂಕಟ ಪಟ್ಟುಕೊಂಡು ಇನ್ನೊಬ್ಬರ ಇನ್‍ಬಾಕ್ಸಿಗೆ ಹೋಗಿ ತಿಪ್ಪೆ ಸಾರಿಸುವವರು, ತಮ್ಮತಮ್ಮ ಬದುಕೇ ಕಿತ್ತು ಹೋಗಿದ್ದರೂ ಅಕೆಯ ಸಂಕಟಕ್ಕೆ ಕೈಯೊಡ್ಡುವ ಸಹಾನುಭೂತಿಗಳಿಸುವ ಹೀಗೆ ಯಾರಿದ್ದಾರೆ ಯಾರಿಲ್ಲ ಇದರಲ್ಲಿ. ಎಲ್ಲರದ್ದೂ ವರಾತ ಒಂದೇ ತಾವು ಸರಿ ಎನ್ನಿಸಿಕೊಳ್ಳುವ ಮತ್ತು ಮೊದಲಿನಂತೆ ಎಲ್ಲಾ ಚೆಂದವಾಗಿ ನಡೆದುಬಿಡಲಿ ಎನ್ನುವ ಧಾವಂತ.
ಅರೇ ಸುಮನೆ ಬಿದ್ದ ನೀರೂ ಆರಲು ಅದರದ್ದೇ ಸಮಯ ತೆಗೆದುಕೊಳ್ಳುವಾಗ ಪ್ರತಿಯೊಂದೂ ಸರಿ ಹೋಗಲು ಅಥವಾ ಹೋದಂತೆ ಅನ್ನಿಸಲು ಅದರದ್ದೇ ಸಮಯಗಳಿರುತ್ತವೆ. ಹಾಗಾದಲ್ಲಿ ಮಾತ್ರ ಅಂತಹದ್ದು ತಣಿದು ಸೂಕ್ತವಾದ ಸಮಯಕ್ಕೆ ಮಾಯ್ದು ಏನೂ ಆಗಿಲ್ಲವೆಂಬಂತೆ ನೆಟ್ಟಗಾಗುವುದು. ಇದು ಪ್ರಕೃತಿಯೇ ಕೊಟ್ಟ ಸುಲಭದ ಸಲೀಸು ವಿಧಾನ. ಇದರಿಂದ ನೀವು ಯಾರನ್ನು ಸಂತೈಸಲು ಸರಿ ಮಾಡಲು ಹೊರಡುತ್ತಿರೋ ಅವಳೆ/ನೇ ಕೊನೆಗೊಮ್ಮೆ ಅಯ್ಯೋ ಸುಖಾ ಸುಮ್ಮನೆ ಸಮಯ ವ್ಯರ್ಥ ಮಾಡಿಕೊಂಡೆ ಎನ್ನುವ ಹಂತಕ್ಕೆ ಬಂದಿರುವ ಉದಾ. ಸಾವಿರ. ನನ್ನ ಕೌನ್ಸೆಲಿಂಗ್ ಹಲವು ವಿಧಾನದಲ್ಲಿ ಸುಮ್ಮನಿರಿಸಿಬಿಡುವುದು ಅತ್ಯಂತ ಉಪಯುಕ್ತ ವಿಧಾನವಾಗಿ ಯಶಸ್ಸಾಗಿದ್ದಿದೆ. ಕಾರಣ ಎದುರಿನವರ ಮೌನ ಕೆಲವೊಮೆ ನಿಮ್ಮ ಅಹಂನ್ನು ಹಣಿದರೆ ಕೆಲವೊಮ್ಮೆ ಅಯ್ಯೋ ಪಾಪ ಎನ್ನುವ ಮನಸ್ಥಿತಿಯನ್ನು ಕ್ರಮೇಣ ತಯಾರು ಮಾಡುತ್ತದೆ. ಇದನ್ನು ಬಿಟ್ಟು ನನಗೆ ಹಿಂಗೇ ನನಗೇ ಹಂಗೇ ಬದುಕು ಎಂದು ನಿಲ್ಲಲು ಹೋದಲ್ಲಿ ಅದು ಬದುಕಾಗುವುದಿಲ್ಲ. ಇದ್ದ ಬದ್ದ ಎಲ್ಲರ ಜೀವ ತಿನ್ನುವ ಸರಕಾಗುತ್ತದೆ. ಕಾರಣ ಇರುವ ಎರಡು ದಿನದಲ್ಲಿ ಏನೆ ಆದರೂ ಕಳೆದುಕೊಳ್ಳುವುದು ಎಂದು ಏನೂ ಇಲ್ಲ. ಎಲ್ಲಾ ಆಯಾ ಸಮಯದ ಕರ್ಮವಷ್ಟೆ. ಸಮಯಕ್ಕೆ ತಕ್ಕಂತೆ ಬದಲಾಗದಿದ್ದರೆ ನೀವು ಅಲ್ಲೆ ಇರುತ್ತಿರಿ. ಕಾಲ

No comments:

Post a Comment