ಅಪಾಯಕಾರಿ ಒಳ್ಳೆಯತನಗಳು…
(ಮೆಸೆಂಜರು, ವಾಟ್ಸಾಪುಗಳ ಹಾವಳಿಯಿಂದಾಗಿ ಕುಲ ಗೋತ್ರ ಗೊತ್ತಿಲ್ಲದವರೂ
ಅಡ್ವೈಸರುಗಳಾಗಿ ಅವತರಿಸುತ್ತಿರುವ ಸಂದರ್ಭದಲ್ಲಿ ಯಾವಾಗ ಯಾರ ಮುಖವಾಡ ಬಿಚ್ಚಿಕೊಳ್ಳುತ್ತದೆ,
ಯಾರೆಲ್ಲಾ ಹರಾಜಾಗುತ್ತಾರೆ ಹೇಳಲಾಗುವುದಿಲ್ಲ. ಆಗ ಇಂಥವರನ್ನು ನಂಬಿ
ಕತೆ ಕೊಟ್ಟು ಕೂತವರ ಪರಿಸ್ಥಿತಿ..?)
ಇಂಥವರು ಯಾರದೇ ಬದುಕಿನಲ್ಲೂ
ತೀರ ಅಪಾಯಕಾರಿ. ಸ್ವಂತದ ಬದುಕಂತೂ ನಿಸ್ಸಂಶಯ ಗಬ್ಬೆಬ್ಬಿಸಿಕೊಂಡಿರುತ್ತಾರೆ ಆದರೆ ಹೊರಗೆ
ಬರುತ್ತಿದ್ದಂತೆ ಅದೆಲ್ಲಿರುತ್ತದೋ ಬ್ರಹ್ಮಕಳೆ ಮುಖದಲ್ಲಿಟ್ಟುಕೊಂಡು, ಒಳಗಿನ ವೃಣದ ಮೇಲೆ ಸ್ಪ್ರೇ ಹೊಡೆದುಕೊಂಡೆ ರಸ್ತೆಗಿಳಿದಿರುತ್ತಾರೆ. ನೋಡಿದವರು ಮಾತಾಡಿದವರು
ಯಾರೂ ಇವರನ್ನು ನಾಲಾಯಕ್ ಎಂದಾಗಲಿ, ಅಪಾಯಕಾರಿ ಎಂದಾಗಲಿ
ಅವಗಾಹನೆಗೆ ತಂದುಕೊಳ್ಳುವುದು ಸಾಧ್ಯವೇ ಇರುವುದಿಲ್ಲ. ಯಾವಾಗ ಬೇಕಾದರೂ ಸಹಾನುಭೂತಿಗೆ ಒಳಗಾಗಲು,
ಕೈ ಕಾಲು ಹಿಡಿಯಲು ತನ್ನ ತಪ್ಪೇನು ಇಲ್ಲ ಎಂದು ಚೆಂದವಾಗಿ ವಾದಿಸಲು,
ಎದುರಿನವರೂ ಎಲ್ಲೂ ಅನಾವಶ್ಯಕ ತೊಂದರೆಗೀಡಾಗಬಾರದು ಎನ್ನುವ ಕಾಳಜಿಯುತ
ಮಾತುಕತೆಯೊಂದಿಗೆ, ಹಾಗೆ ಸೆಂಟಿಮೆಂಟಾಗಿ
ಅವರನ್ನು ನಂಬಿಸಿ, ಮಾತುಕತೆಗೆಳೆಯುವುದು ಬೇಡದ
ಅವರ ಸಂಸಾರದ ಕತೆ ವಿಚಾರಿಕೊಳ್ಳುತ್ತಾ ಬಳಸಿಕೊಳ್ಳುವುದರಲ್ಲಿ ಇವರದು ಎತ್ತಿದ ಕೈ. ಇಂಥವರು ತೀರ
ಮನೆ ಹೊರಗೆ ದೂರದಲ್ಲಿ ಎಲ್ಲೋ ಇರುತ್ತಾರೆಂದಲ್ಲ. ಮನೆಯಲ್ಲೇ, ತೀರ ಸಂಬಂಧಿಗಳಲ್ಲಿ, ಆಪ್ತೇಷ್ಟರಲ್ಲಿ, ಬಂಧುವಾಗಿಯೂ ಇರುತ್ತಾರೆ.
ಅಗತ್ಯ ಬಿದ್ದಾಗ
"...ನೋಡು ನಾನು ಆವತ್ತೇ ಹೇಳಿರಲಿಲ್ವಾ.." ಎಂದು ಸಾಧಿಸಿಕೊಂಡು ತನ್ನ ನಂಬುಗೆ
ಮತ್ತು ತನಗನ್ನಿಸಿದ್ದೇ ಸರಿ ಎಂಬುವುದನ್ನು ಸಾಧಿಸಲು ಕಾಯುತ್ತಾ ಅದಕ್ಕಾಗಿ ಏನೂ ಮಾಡಲು ಹಿಂದೆ
ಮುಂದೆ ನೋಡದ, ಯಾರ ಸಂಸಾರದ ವಿಷಯದಲ್ಲೂ ತಲೆ
ಹಾಕಲು ಹೇಸದ, ಇನ್ಯಾರದ್ದೋ ಗಂಡ
ಹೆಂಡತಿಯನ್ನು ಸರಿಪಡಿಸುತ್ತೇನೆಂದು ಹೊರಟು ನಿಲ್ಲುವ, ಇಂತಹ ನಿರಪಾಯಕಾರಿಯಂತೆ ಕಾಣಿಸುವ ಸಮೀಪ ಸಂಬಂಧಿಗಳು ನಿಜಕ್ಕೂ ಅಪಾಯಕಾರಿ. ವಿಚಿತ್ರ ಎಂದರೆ
ಕಿತ್ತು ಹೋಗುತ್ತಿದ್ದ ಸ್ವತ: ಹೆಂಡತಿಯೊಂದಿಗಿನ ಸಂಬಂಧ ಪುನರ್ ಸ್ಥಾಪಿಸಿಕೊಳ್ಳಲು ಮತ್ತೆ
ಇನ್ಯಾರದ್ದೋ ಸಹಾಯ ಇವರಿಗೇ ಬೇಕಿರುತ್ತದೆ. ಸ್ವಂತದ ಮನೆಯಲ್ಲಿ ಅದೆಂಥಾ ಶರಂಪರ
ಕಿತ್ತಾಟಗಳಿರುತ್ತವೆಂದರೆ ಗಂಡ/ಹೆಂಡತಿ ಒಬ್ಬರನ್ನೊಬ್ಬರು ತಿರುಗಿಯೂ ನೋಡದೆ ವಾರಗಟ್ಟಲೆ ಬದ್ಧ
ದ್ವೇಷಿಗಳಾಗುತ್ತಿರುತ್ತಾರೆ. (ಈಗಿನ ಕಾಲವಾದ್ದರಿಂದ ಫೇಸ್‍ಬುಕ್ಕು/ವಾಟ್ಸಾಪುಗಳಲ್ಲೆಲ್ಲಾ
ಬ್ಲಾಕು ಮಾಡಿಕೊಂಡು ರೇಜಿಗೆ ಹುಟ್ಟಿಸುವಂತಹ ದಂಪತಿಗಳಿದ್ದಾರೆ ಎಂದರೆ ನೀವು ನಂಬಲೇಬೇಕು. ಅದರ
ಸ್ಕ್ರೀನ್‍ಶಾಟ್‍ಗಳನ್ನೂ ಗ್ಯಾರಂಟಿಗಾಗಿ ಕಳುಹಿಸಿಕೊಳ್ಳುವ ಇವರು ಅದಿನ್ನೆಂಥಾ ನಂಬಿಕೆ
ಸ್ವಂತದರಲ್ಲಿ ಉಳಿಸಿಕೊಂಡಿದ್ದಾರು..? ಮೊದಲಾದರೆ ಬರೀ
ಮಾತು ನಿಂತುಹೋಗಿ ಅವಕಾಶ ಸಿಕ್ಕಿದಾಗೆಲ್ಲಾ ಅಪರೋಕ್ಷ ಹರಿಹಾಯುವುದು ನಡೆಯುತ್ತಿತ್ತು. ಈಗೀಗ
ಇಬ್ಬರೂ ನೌಕರಿಯಲ್ಲೂ ಇರುವುದರಿಂದ ಮುಲಾಜಿಲ್ಲದೆ ಬ್ಲಾಕ್ ಮಾಡಿ ಬಿಸಾಡಿ ಜತೆಗೆ ಇತರರೊಂದಿಗೆ
ಚಾಟ್‍ನಲ್ಲಿದ್ದು ಸಮಯ/ಸಂಕಟ ಕಳೆದುಕೊಂಡು ಹಗುರಾಗುವವರಿದ್ದಾರೆ. ಹೊರಗೆ ಕೆಲಸ ಮಾಡುವ
ಅಡ್ವಾಂಟೇಜೂ / ಡಿಸ್ ಅಡ್ವಾಂಟೆಜೂ ಎರಡೂ ಇದು ಹೌದಾದರೂ ಒಳಗೊಳಗೆ ಬೇರೆಯವರ ವಿಷಯದಲ್ಲಿ ತಮಾಷೆ
ನೋಡುವ ಮೊದಲು ತಮಗೇ ಆದಾಗ ಏನಾಗುತ್ತದೆನ್ನುವ ಅರಿವಿರಬೇಕು. ಅದರೆ ಇಂಥವರಿಗೆ ಇದೆಲ್ಲಾ
ತಾಗುವುದೂ ಇಲ್ಲ.)
ಕಾರಣ ಬೇಕಿದೆಯೋ ಬೇಡವೋ
ಅವರಿಗೊಂದಿಷ್ಟು ನಮ್ಮ ನಮ್ಮ ಸಂಸಾರದ ರಗಳೆಗಳು ಗೊತ್ತಿರುತ್ತವೆ. ಅದನ್ನೆ ಹಿಡಿದುಕೊಂಡು ಇಂಟರ್‍ಫೀಯರು
ಮಾಡುತ್ತಾ, ಇಬ್ಬರಿಗೂ ಆಪ್ತವಾಗಿ ಮಾತಾಡುತ್ತ ಹೇಗೋ ಅವರಿಗೂ ಒಬ್ಬ
ಆಪ್ತನ ಮಧ್ಯಸ್ಥಿಕೆ ಬೇಕಾಗುತ್ತಿರುತ್ತದೆ ಅಂತ ಅನ್ನಿಸಿರುತ್ತದೆಯೇ ವಿನ: ಪ್ರಾಕ್ಟಿಕಲೀ ಹಾಗೆ
ಬೇಕಿರುವುದೇ ಇಲ್ಲ. ಆದರೂ ಆ ಹೊತ್ತಿಗಿನ ಸಂಕಟಕ್ಕೆ ಹೌದೆಂದು ಬಿಡುತ್ತಾರೆ. ಇಂಥವರು ಬರದಿದ್ದರೂ
ಅವರೇನೂ ಮರ್ಡರ್ ಮಾಡಿಕೊಳ್ಳುವುದಿಲ್ಲ. ಅದರೆ ಇಬ್ಬರಲ್ಲೂ ಅವನೇ/ಳೇ ಮೊದಲು ಮಾತಾಡಿಸಲಿ
ಸರಿಪಡಿಸಲಿ ಎಂಬೆಲ್ಲ ಪುರಾತನ ಇಗೋಗಳು ಒಂದಿಷ್ಟು ಇರುತ್ತವಲ್ಲ. ಅದಕ್ಕೆ ಸರಿಯಾಗಿ ಇಂಥವನೊಬ್ಬ
ಎಟುಕಿ ಸರಿ ಹೋಗಿದ್ದು ಅ ಸಂಸಾರದ ಕತೆ ಸುಖಾಂತ್ಯವಾಗುತ್ತದೆ. ಅದರೆ ಅವನ ಕತೆ ಅಲ್ಲಿಂದ
ಶುರುವಾಗುತ್ತದೆ. ಅವಕಾಶ ಇದ್ದಾಗಲೆಲ್ಲ " ಅವರಿಬ್ಬರನ್ನೂ ಸರಿ ಮಾಡಿದ್ದು ನಾನೇಯಾ. ಇಲ್ದಿದ್ರೆ
ಇಷ್ಟೊತ್ತಿಗೆ ಡೈವೋರ್ಸೆ.." ಎಂದು ಕತೆ ಶುರುವಿಟ್ಟು ಬಿಟ್ಟಿರುತ್ತಾರೆ. ಅದನ್ನೆ ಕೇಳಿದ
ತಲೆಮಾಸಿದ ಇನ್ಯಾವನೋ/ಳೋ " ಅಯ್ಯೋ ನಮ್ಮವಳೂ ಹಂಗೇ ಮಾರಾಯ.." ಎಂದು ಬಾಯ್ ತಪ್ಪಿ
ಅಂದು ಬಿಟ್ಟರೆ ಅಷ್ಟೆ ಅಲ್ಲಿ ಅಡರಿಕೊಂಡುಬಿಡುತ್ತಾರೆ.
ಇವತ್ತು ವಾಟ್ಸಾಪಿನ
ಒಳಕೋಣೆಗಳಲ್ಲಿ ಬಹಳಷ್ಟು ಗಂಡಸರು ತಂತಮ್ಮ ಸಂಸಾರದ ಗುಟ್ಟುಗಳನ್ನೇ ಬಿಚ್ಚಿಟ್ಟು
ಬಿಡುತ್ತಿರುತ್ತಾರೆ ಅದರಲ್ಲೂ ಎದುರಿಗೆ ಹೆಂಗಸಿದ್ದರಂತೂ ಮುಗಿದೇ ಹೋಯಿತು.
" ಅಯ್ಯೋ ಇಲ್ಲ ಮಾರಾಯ್ತಿ ಅವಳು
ಸ್ವಲ್ಪ ಹಂಗೇ...ಇತ್ಯಾದಿ.." ಕತೆ ಹೊಡೆಯುತ್ತಾ "..ನೋಡು ನಾನು ಏನು ಬೇಕಿದ್ದರೂ
ಹೇಳುತ್ತಿದ್ದೇನೆ ಅಂದರೆ ನಿನ್ನ ಮೇಲೆಷ್ಟು ವಿಶ್ವಾಸ ಇಡುತ್ತಿದ್ದೇನೆ.."ಎಂದೇ
ಪ್ರತಿಧ್ವನಿಸುತ್ತಿರುತ್ತಾರೆ. ವಿಪರ್ಯಾಸ ಎಂದರೆ ಮುಖಮೂತಿ ಪರಿಚಯ ಇಲ್ಲದ ಕೇವಲ ಚಾಟು/ಫೇಸ್‍ಬುಕ್ಕಿನ
ಪರಿಚಯದವರೆದುರಿಗೆ ಸಂಸಾರದ ವಿಷಯ ಬಿಚ್ಚಿ ಕೂಡುವ ಗಂಡಸು/ಹೆಂಗಸರ ಮೇಲೆ ಅದಿನ್ನೆಂಥಾ ಭರವಸೆ
ಹುಟ್ಟೀತು. ಇವತ್ತು ಇದನ್ನೆಲ್ಲಾ ಹೇಳುವ ಆತ/ಆಕೆ ತನ್ನ ವಿಷಯವನೂ ಬೇರೆಡೆ ಬಾಯ್ಬಿಡುವುದಿಲ್ಲ
ಎಂದು ಯಾರಿಗೆ ಗೊತ್ತು..?
ಅಸಲಿಗೆ ಇಲ್ಲಿ ತನ್ನ ಹೆಂಡತಿ
ಸರಿ ಇಲ್ಲ ಎನ್ನುವುದನ್ನು ಬಾಯಿ ತಪ್ಪಿ ಮಾತಾಡುವ ಗಂಡಸು ಇನ್ನೇನಾದರೂ ಕೂಡಾ ಮಾತಾಡಬಹುದೆನ್ನುವ
ಒಂದು ಅವಗಾಹನೆ ಒಳಗೊಳಗೇ ಹುಟ್ಟಬೇಕು. ಇಂಥಾ ಹರಕು ಬಾಯಿಯವರಿಗೆ ಎದುರಿನವರನ್ನು ತಪ್ಪಿತಸ್ಥ
ಅಥವಾ ತಾನು ಹೇಳಿದ್ದು ನಂಬಿದ್ದೇ ಸರಿ ಎನ್ನುವ ಹುಕಿಯಿರುತ್ತದಲ್ಲ ಅದಕ್ಕಾಗಿ ಎಂಥಾ ಸನ್ನಿವೇಶ
ನಿರ್ಮಾಣಕ್ಕೂ ಅದಕ್ಕಾಗಿ ಭಯಾನಕ ಡೆಡಿಕೇಶನ್ನಿನಲ್ಲಿ ನಿಂತುಬಿಟ್ಟಿರುತ್ತಾರೆ. ಕಾರಣ ಇಂಥವರು
ಎಂಥಾ ಮುಖವಾಡದ ಹಿಂದಿರುತ್ತಾರೆಂದರೆ ಭಯಾನಕ ಅಸಂತೃಪ್ತಿಯೊಂದು ಮನಸ್ಸಿನಲ್ಲಿ ಮನೆಮಾಡಿರುತ್ತದೆ.
ಬದುಕು ಒಳಗೊಳಗೇ ನಾಲ್ಕು ದಿನ ಚೆಂದವಿದ್ದರೆ ಇನ್ನೂ ನಾಲ್ಕು ತಿಂಗಳು ಕೈಕೊಡುತ್ತಿರುತ್ತದೆ. ತೀರ
ಖಾಸಗಿ ಬದುಕು ಯಾವತ್ತೊ ಕೈಬಿಟ್ಟಿರುತ್ತದೆ. ಸೆಕ್ಸು ಎನ್ನುವ ಫ್ಯಾಂಟಸ್ಸಿ ಮನದ ಮೂಲೆಯಲ್ಲಿ
ವಿಷವಾಗಿ ಕೂತುಬಿಟ್ಟಿರುತ್ತದೆ. ಎದುರಿಗೆ ಇರುವ ಸ್ನೇಹಿತರು ಸಂಬಂಧಿ ಏನಾದರೂ ಮಾಡುತ್ತಾ
ಸಾಧಿಸುತ್ತ ಎದ್ದು ನಿಲ್ಲುತ್ತಿದ್ದರೆ ಅದಕ್ಕೆ ಕಾಂಪಿಟೇಶನ್ನು ಕೊಡಲಾಗದ ತಮ್ಮ ಕೀಳರಿಮೆಯ
ಹಿಂಜರಿತನ ಒಳಗೊಳಗೇ ಕಾಡುತ್ತಿರುತ್ತದೆ.
ಇಂಥವರ ವಿರುದ್ಧ ಮಾಡಲು
ನಿಮ್ಮಲ್ಲಿ ಯಾವುದೇ ಗಹನವಾದ ಆದರೆ ಹೌದೆನ್ನಿಸುವ ಆರೋಪಗಳು ಸಾಕ್ಷಿ ಸಮೇತ ಲಭ್ಯವಿರುವುದಿಲ್ಲ.
ಆದರೆ ಹಿಂದಿನಿಂದ ಆಡಿಸುವ ಕಡ್ಡಿಗೆ ಎದುರಿನವರ ಬದುಕು ಬರಬಾದಾಗುತ್ತಿರುತ್ತದೆ. ಇವರು ಮಾತ್ರ
ಯಾರಿಗೋ ಎನೋ ಉಪಕಾರ ಮಾಡಿದ್ದೇನೆ ಅಥವಾ ಮಾಡುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿ ತಮ್ಮದೆನ್ನುವ
ಬದುಕು ಎಕ್ಕುಟ್ಟಿ ಹೋಗುತ್ತಿದ್ದರೂ ಅನಾಯಾಸವಾಗಿರುತ್ತಾರೆ. ಇಂಥವರಿಗೆ ಈಗೀಗ ಸಾಮಾಜಿಕ
ಜಾಲತಾಣದಲ್ಲಿ ಸುಲಭಕ್ಕೆ ಪಾಪದ ಮಾತಿಗೆ ಬೀಳುವ ಹೆಣ್ಣುಮಕ್ಕಳೂ ಕಡಿಮೆ ಇಲ್ಲ. ಬಾಕಿ ಏನೂ
ಮಾಡಲಾಗದಿದ್ದರೂ ಅವರವರ ಕತೆಗೆ ಪಾಪ ಎನ್ನುತ್ತಾ ಬೆರಳು ಕಚ್ಚುತ್ತಾ ಸರಿ ಪಡಿಸಬೇಕಾದ ಜಾಗದಲ್ಲಿ
ನಿಧಾನಕ್ಕೆ ತುಪ್ಪ ಸುರಿಯುತ್ತಿರುತ್ತಾರೆ. ಎಲ್ಲೋ ಎನೋ ನಡೆಯುವ ಅತೃಪ್ತಿ ಇವರನ್ನು ಸಂಕಟಕ್ಕೀಡು
ಮಾಡುತ್ತಿರುತ್ತದೆ.
ಒಟ್ಟಾರೆ ಒಳ್ಳೆಯತನದ
ಮುಖವಾಡದ ಹಿಂದೆ ತೀರ ಒಂದು ಕುತ್ಸಿತ ಮನಸ್ಥಿತಿ ಇರುವುದು ಗೊತ್ತಾಗುವ ಹೊತ್ತಿಗೆ
ತಡವಾಗಿರುತ್ತದೆ. ತೀರ ಅತ್ತು ನಂಬಿಸಲು ಹಿಂದೆ ಮುಂದೇ ನೋಡದ ಇಂಥವರ ಒಳ್ಳೆಯತನದ ಬದಲಿಗೆ ನಮ್ಮ
ನಮ್ಮ ಸಂಕಟಗಳನ್ನು ನಾವೇ ಅರಗಿಸಿಕೊಳ್ಳುವುದು ಗೊತ್ತಿರಬೇಕು. ಆದರೆ ಮೆಸೆಂಜರು, ವಾಟ್ಸಾಪುಗಳ ಹಾವಳಿಯಿಂದಾಗಿ ಕುಲ ಗೋತ್ರ ಗೊತ್ತಿಲ್ಲದವರೂ
ಅಡ್ವೈಸರುಗಳಾಗಿ ಅವತರಿಸುತ್ತಿರುವ ಸಂದರ್ಭದಲ್ಲಿ ಯಾವಾಗ ಯಾರ ಮುಖವಾಡ ಬಿಚ್ಚಿಕೊಳ್ಳುತ್ತದೆ,
ಯಾರೆಲ್ಲಾ ಹರಾಜಾಗುತ್ತಾರೆ ಹೇಳಲಾಗುವುದಿಲ್ಲ. ಆಗ ಇಂಥವರನ್ನು ನಂಬಿ
ಕತೆ ಕೊಟ್ಟು ಕೂತವರ ಪರಿಸ್ಥಿತಿ..?
No comments:
Post a Comment