Saturday, July 29, 2017


ಉತ್ಸಾಹವನ್ನೆಲ್ಲಿಂದ ಆಕೆ ಕಡ ತರುತ್ತಾಳೆ...?

ಸರಹೊತ್ತಿನಲ್ಲಿ ಹೆಂಡತಿ ಸತ್ತು ಹೋಗುವ ಗಂಡಸಿನ ಕತೆ ಮತ್ತೆರಡ್ಮೂರು ವರ್ಷದಲ್ಲೇ ಮುಗಿದು ಹೋಗುತ್ತದೆ. ಅದರಲ್ಲೂ ವಯಸ್ಸು ಮಾಗುತ್ತಿದ್ದರಂತೂ ಮಾರ್ಜಿನಲ್ ಬದುಕು ಅವನದು. ಅದೇ ಗಂಡ ನೆಗೆದು ಬಿದ್ದಾಗ ಸ್ವರ್ಗ ಕಿತ್ತು ಹೋಗುವಂತೆ ಭೋರಾಡುವ ಹೆಣ್ಣು ಅದರ ನಂತರವೂ ದಶಕಗಳ ಕಾಲ ಅದೇ ಸ್ವಾಸ್ಥ್ಯದಿಂದ ಬದುಕು ಕಟ್ಟಲು ಎದ್ದು ನಿಲ್ಲುತ್ತಾಳೆ. ಅದಕ್ಕೆ ವಯಸ್ಸಿನ ಹಂಗೇ ಇರುವುದಿಲ್ಲ. ಮತ್ತೂ ದಶಕಗಳ ಕಾಲ ಓಟ ಸಾಗುತ್ತಿರುತ್ತದೆ...ಅದ್ಯಾಕೆ ಗಂಡಸಿಗೆ ಬದುಕುವ ಛಲ ಅಥವಾ ಸ್ವಾಸ್ಥ್ಯ ಸತ್ತೇ ಹೋಗುತ್ತದೆ..? ಆಕೆ ಅದೆಲ್ಲಿಂದ ಬದುಕುವ ಉತ್ಸಾಹ ಕಡ ತರುತ್ತಾಳೆ..? ಗೊತ್ತಿಲ್ಲ. ಅದನ್ನಾಕೇಯೆ ಉತ್ತರಿಸಿಬೇಕು.. ಆದರೆ ಅದರ ನಂತರವೂ ಬದುಕಿಗೆ ಆಗತ್ಯದ ಅಹಾರ, ಮೈಥುನ ನಿದ್ರೆ ಎಂದು ಬೇಸಿಕ್ಕುಗಳನ್ನು ಪಾಂಗಿತವಾಗಿ ಪೂರೈಸಿಕೊಳ್ಳುವುದಿದೆಯಲ್ಲ ಅದು ಮಾತ್ರ ನಿಜಕ್ಕೂ ಜೀವವನ್ನು ಬದುಕಿಸಿಕೊಳ್ಳುವ ಪರಿಯಾ...? ನನಗೆ ಗೊತ್ತಿಲ್ಲ. ಅದರೆ ತೀರ ತಾನು ಹೆಣ್ಣು ಎಂದು ಬಯಸುವ ರಿಸರ್ವೇಶನ್ನಿಗೂ, ಅಗತ್ಯ ಬಿದ್ದಾಗ ಆ ಬೌಂಡರಿಯಾಚೆ ಬದುಕುವ ಹೆಣ್ಣಿಗೂ ಮಧ್ಯೆ ಒಂದು ಢಾಳಾದ ವ್ಯತ್ಯಾಸ ಇದ್ದೆ ಇದೆ ಮತ್ತು ಆ ಮುಖವಾಡದ ಅಗತ್ಯ ಇವತ್ತಿನ ದಿನಗಳಿಗಿಲ್ಲ ಎನ್ನುವುದೇ ಒಳಗೊಳಗೇ ಒಪ್ಪಿಕೊಳ್ಳುತ್ತಿರುವ ಪರಮ ಸತ್ಯವೂ ಹೌದಾ ಎನ್ನಿಸಿತ್ತು ಆಕೆಯ ಮಾತು ಕೇಳುತ್ತಿದ್ದರೆ.
ಕಾರಣ ನೈತಿಕತೆ ಎನ್ನುವುದನ್ನು ಕೇವಲ ಏಕಪಕ್ಷೀಯವಾಗಿಸುವ ಪುರುಷ, ಸಮಾಜ ಮತ್ತು ಅಗತ್ಯ ಬಿದ್ದಾಗ ಅದಕ್ಕೆ ತನ್ನ ಪರಮಶೀಲತೆಯನ್ನು ಢಾಳಾಗಿಸುವ ಆಕೆ ಇಬ್ಬರೂ ಪುರಸ್ಕರಿಸಿದಾಗಲೇ ಒಂದು ಸಮಾಗಮ ನಡೆದು ಹೋಗುತ್ತದೆ ಎನ್ನುವುದನ್ನು ಏಕೆ ಮರೆತುಬಿಡುತ್ತಾರೋ...? ನೆನಪಿರಲೇಬೇಕಲ್ಲವಾ ಎರಡೂ ಕೈ ಸೇರಿದಾಗಲೇ ಚಪ್ಪಾಳೆ ಎಂದು. ಅಗುವುದೆಲ್ಲಾ ಆದ ನಂತರ ನನ್ನ ಶೀಲ ಹೋಯಿತು, ನಾನು ಕಳೆದುಕೊಂಡದ್ದು ಯಾರು ಕೊಡುತ್ತಾರೆ..? ಅಯ್ಯೋ.. ಹುಂಯ್ಯೋ.. ನಾನು ನಂಬಿದ್ದು ಮೋಸವಾಗ್ತಿದೆ ಎಂದು ರಣಾರಂಪ ಮಾಡುತ್ತಿದ್ದರೆ, ಸಿಕ್ಕಿದಾಗೆಲ್ಲಾ ಅಲವತ್ತುಕೊಳ್ಳುತ್ತಿದ್ದರೆ ಅದಕ್ಕಿಂತ ದೊಡ್ಡ ಅಪಹಾಸ್ಯ ಇನ್ನೊಂದಿಲ್ಲ. ಅಂತಹದ್ದೊಂದು ಸಂಬಂಧ ಬೆಳೆದಿತಾದರೂ ಹೇಗೆ..? ಹಾಗೆ ನೋಡಿದರೆ ಅದು ಪುರುಷರಿಗೂ ಅಷ್ಟೆ ಅಪ್ಲಿಕೇಬಲ್ ಆಗುತ್ತೆ ಆದರೆ ಜನ್ಮತ: ತನಗೇನೂ ಆಗಿಲ್ಲ ಎಂಬಂತೆ ಬದುಕುವುದೇ ಪುರುಷತ್ವ ಎಂಬಂತಿರುವ ಗಂಡು ಪ್ರಾಣಿ(ಅನಿವಾರ್ಯ ಮತ್ತು ಅವಿಷ್ಕಾರ ರೂಪಿಯಾ.?)ಅದರಿಂದ ಸುಲಭಕ್ಕೆ ಹೊರಬಂದಿದ್ದಾನೆ ಎನ್ನಿಸಿದರೂ ಯಾವೊಂದು ಸೂತ್ರ ಇಬ್ಬರಿಗೂ ಅಪ್ಲಿಕೇಬಲ್ಲೇ ಅಲ್ವಾ..?
ನಾನು ಮಾತಾಡಲಿಲ್ಲ ಮಧ್ಯದಲ್ಲಿ. ಕಾರಣ ಇರುವುದನ್ನು ಇರುವಂತೆ ಅದರಲ್ಲೂ ಮರುತ್ತರಕ್ಕೆ ಅವಕಾಶ ಇಲ್ಲದಂತೆ ಸ್ಪಷ್ಟೀಕರಿಸುವ ಸ್ತ್ರೀಯರ ಎದುರಿಗೆ ವಿತಂಡವಾದಕ್ಕೆ ಇಳಿಯುವ ಅಗತ್ಯತೆ ಅವಶ್ಯಕತೆ ಎರಡೂ ಇರಿಸಿಕೊಳ್ಳಬಾರದು.
ಕಾರಣ ಮದುವೆ ಎನ್ನುವ ಸಂಭ್ರಮವೇ ಇವತ್ತು ಮೊದಲ ಮೂರು ವರ್ಷದಲ್ಲೇ ತನ್ನ ನಂಬಿಕೆ ಮತ್ತು ತಾನು ಅನ್ನಿಸಿಕೊಂಡ ಕನಸಿನ ಪ್ರಪಂಪಚವಲ್ಲ ಅಥವಾ ಮದುವೆಯ ನಂತರದ ಬದುಕು ಹೀಗೀಗಿರುತ್ತೆ ಎಂದುಕೊಂಡಂತಿಲ್ಲ ಎನ್ನುವ ನಗ್ನಸತ್ಯ ಅರಿವಾಗುತ್ತಿದ್ದರೆ ಅಯ್ಯೋ ನನಗೆ ಮೋಸ ಆಯಿತು ಎನ್ನುವ ಅವಕಾಶ ಅಥವಾ ಅಲ್ಲೂ ನನ್ನ ಶೀಲ ಹಾಳಾಯಿತು ಎಂದು ಬೊಬ್ಬೆ ಹೊಡೆವ, ಹೊಡೆದ ಹೆಂಗಸರಿದ್ದಾರಾ..? (ಹೆಚ್ಚಿನವು ಆರ್ಥಿಕ,ಕೌಟುಂಬಿಕ ಬೆಂಬಲ ಇರುವಲ್ಲಿ ಡೈವರ್ಸಿಗೆ ಹೋಗುತ್ತವೆ. ಅಲ್ಲೆಲ್ಲಾ ನನ್ನ ಶೀಲ ವಾಪಸ್ಸು ಕೊಡು ಎಂದು ಕಾಲುಚಾಚಿ ಕೂತ್ತಿದ್ದಿದೆಯಾ..?) ಬಾಯಿ ಮುಚ್ಚಿಕೊಂಡೊ, ಜಗಳ ಮಾಡಿಕೊಂಡೋ ಕೊನೆಗೆ ಯಾವುದೋ ಒಂದು ಪಾಯಿಂಟ್‍ನಲ್ಲಿ ಕಾಂಪ್ರಮೈಸಿಗೆ ಬದುಕು ಬಂದು ನಿಲ್ಲೋದಿಲ್ವಾ..? ಹಾಗಿದ್ದಾಗ ಹೀಗೊಂದು ನಂಬಿಕೆ ಮೂಡಿ ಒಂದು ಸಂಬಂಧ ಬೆಳೆದು ಇಬ್ಬರಲ್ಲೂ ಇಂಟಿಮಸಿ ಎನ್ನುವ ಬೌಂಡರಿ ಸಿPಕ್ಸರಿಗೇರಿದಾಗ ನಿಜಕ್ಕೂ ಆತ್ಮಸಾಂಗತ್ಯ ಒಡಮೂಡತೊಡಗುತ್ತಿರುತ್ತದೆ. ಹೇಗೆ ಇದ್ದರೂ ಎಲ್ಲೇ ಇದ್ದರೂ ಒಬ್ರಿಗೊಬ್ಬರು ಹತ್ತಾರು ದಿನದ ನಂತರವೂ ಸಂಪರ್ಕ ಇಟ್ಟುಕೊಂಡೆ ಬದುಕುವ ಹುಮ್ಮಸ್ಸು ಗುಪ್ತವಾಗಿ ಹನಿಯುತ್ತಿರುತ್ತದೆ. ಆದರೆ ಹೀಗೊಂದು ಸಂಬಂಧದಲ್ಲೆ ಚೆಂದವಾಗಿ ಬದುಕುತ್ತೇನೆ ಎಂದು ಹೊರಟುನಿಲ್ಲುವ, ಒಬ್ಬರ ತಲೆಯ ಮೇಲೊಬ್ಬರು ಹತ್ತಿ ಕೂರುವ ಸಂದರ್ಭ ಉಂಟಾಗಿಬಿಟ್ಟರೆ ದೇವರಾಣೆ ಮತ್ತಲ್ಲಿ ಚಿಗುರು ಕೊನರುವುದು ಕಡಿಮೆಯೇ. ಕಾರಣ ಸಂಬಂಧ ಎನ್ನೋದು ಇಂತಹ ನಂಬಿಕೆಯಲ್ಲಿ ಒಳಗೊಳಗೇ ಹನಿಸುವ ಚಿಗುರಾಗುತ್ತದೆಯೇ ವಿನ: ಅದಕ್ಕೊಂದು ಅಧಿಕೃತ ಅಥವಾ ತನಗೆ ಬೇಕಾದಂತೆ ಬದುಕುವ ಹೊರಾಂಗಣ ಲಭ್ಯವಿರುವುದೇ ಇಲ್ಲ. ಅದೇನಿದ್ದರೂ ಅವರವರ ಮಟ್ಟಿಗೆ ತುಂಬ ಪ್ರಿಯ ಸಂಗತಿ. ಆದರೆ ಎಷ್ಟೆ ಆತ್ಮೀಯರಿಗೆ ಅದೊಂದು ಸರಿಯಲ್ಲ ಎನ್ನುವ ವಿಷಯವೇ ಆಗುತ್ತದೆ ಹೊರತಾಗಿ ಅದರಿಂದ ಇನ್ನಾವ ಉತ್ಪನ್ನಗಳೂ ಹುಟ್ಟುವುದೇ ಇಲ್ಲ.
ಅಂತಹದರಲ್ಲಿ ನೀನು ಅದನ್ನು ಸಂಬಂಧ ಎನ್ನುತ್ತಿಯೋ, ಪ್ರೀತಿನೋ ಏನೋ ಒಂದಿರಲಿ. ಆದರೆ ಮದುವೆ ಅಂತಾಗಿ ಏನೆಲ್ಲಾ ಕನಸಿಸುವ ಮೊದಲೇ ಪ್ರತಿ ಪೈಸೆಗೂ, ಕೊನೆಗೆ ಪೇಪರ್ ಓದುವುದಕ್ಕೂ, ಎಲ್ಲಿಯಾದರೂ ಹೋಗುವುದಕ್ಕೂ, ಸ್ನೇಹಿತೆಯೊಂದಿಗೆ ಮಾತಾಡುವುದಕ್ಕೂ, ಯಾರದ್ದೋ ಮಿಸ್‍ಕಾಲ್ ಅಂದರೆ ಯಾರದ್ದು ಎನ್ನುವದಕ್ಕೆ ಜವಾಬು ಕೊಡುವ ಹೊತ್ತಿನಲ್ಲಾಗುವ ಸಣ್ಣ ಎಂಬ್ರಾಸಿಂಗು, ನನ್ನದೇ ಸ್ವಾತಂತ್ರ್ಯ ಇರಿಸಿಕೊಳ್ಳಲಾಗದ ದಾಂಪತ್ಯಗಳು, ಇಷ್ಟೆಲ್ಲಾ ಓದಿನ, ಜಗತ್ತು ಉದ್ಧಾರ ಮಾಡುತ್ತಿರುವ ಹೊಸ ಆಧುನಿಕ ಬದುಕಿನಲ್ಲೂ ನಡೆಯುತ್ತಿರುವಾಗ ನಾನು ಮತ್ತೊಮ್ಮೆ ಮದುವೆ ಎನ್ನುವ ಬಾಣಲೆಗೆ ಬೀಳಬೇಕಿತ್ತಾ..? ಇದ್ದಾರು ಅಂತಹ ಸೆಂಟಿಮೆಂಟುಗಳು. ಆದರೆ ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಅದನ್ನೇ ಮಾಡಿಕೊಳ್ಳುವವಳು ನಾನಲ್ಲ. ಇನ್ನು ಪುರುಷರು ಏನು ಬೇಕಾದರೂ ಮಾಡಿಕೊಂಡಿರುವಾಗ, ಅಂತಹದ್ದೊಂದಕ್ಕೆ ಯಾವ ಅಬ್ಜಕ್ಷನ್ನೂ ಇಲ್ಲದಿರುವಾಗ ನನ್ನ ವೈಯಕ್ತಿಕ ಸುಖ ದುಖ:ಗಳ ಪರಿಚಾರಿಕೆಯ ಉಸಾಬರಿ ಬೇಕಾ..? ಹೌದು ಅವನೊಂದಿಗೆ ನನಗೆ ಸ್ನೇಹವಿದೆ ವಿಶ್ವಾಸ ಇದೆ. ಆದರೆ ನನ್ನನ್ನು ಮಾತ್ರ ಕುಲಟೆ ಎಂಬಂತೆ ನೋಡುವ ಜನರಿಗೆ ಸಿಕ್ಕಿದರೆ ಒಂದು ಕೈ ನನಗೂ ಎನ್ನುವವರಿಗೇನೂ ಬರವಿಲ್ಲ ಮಾರಾಯ. ಅಲ್ಟಿಮೇಟ್ಲಿ ಹೆಚ್ಚಿನ ಮಾತಾಡುವ ಗಂಡಸು/ಹೆಂಗಸರ ಇಬ್ಬರದೂ ಅಂತರಾಳದ ವರ್ಷನ್ನು ಒಂದೇ. ಏನೆಂದರೆ ತಾವು ಬದುಕಲಾಗದ ಸ್ವಂತಂತ್ರ ಬದುಕಿನ ಫ್ಯಾಂಟಸ್ಸಿ ಬದುಕು ಆಕೆ ಕಟ್ಟಿಕೊಳ್ಳುತ್ತಿದ್ದಾಳೆ, ಬದುಕುತ್ತಿದ್ದಾಳೆ ಎನ್ನುವುದೆ ಇವರೆಲ್ಲರಿಗೆ ಪರಮಘಾತಕ ಅಷ್ಟೆ ಹೊರತಾಗಿ ಯಾರಿಗೂ ಮನಸ್ಸಿನಲ್ಲಿ ಆಸೆ ಗೂಡು ಕಟ್ಟಿಕೊಂಡಿಲ್ಲವೆಂದಲ್ಲ. ಅಷ್ಟೆ.."
ಆಕೆಯ ಬದುಕಿಗೆ ಆಕೆಯೇ ಜವಾಬುದಾರಳು. ತೀರ ಸ್ಪಷ್ಟ ನಡೆಯ ಶೋಭಳ ಸ್ಥಿತಿಗೆ ಡಿಬೇಟ್ ಮಾಡುವಂತಹದ್ದೇನೂ ಇರಲಿಲ್ಲ. ಆಕೆ ಮಾನಸಿಕವಾಗಿ ಅನುಭವಿಸಿರಬಹುದಾದ ಹಿಂಸೆ ಆಕೆಯ ಹೊರತು ಇನ್ನಾರಿಗೂ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ಅವಕಾಶ ಸಿಕ್ಕಿದಾಗ ಸ್ವತಂತ್ರವಾಗಿ ಚೆಂದದ ಬದುಕು ಕಟ್ಟಿಕೊಳ್ಳುತ್ತಿರುವಾಗ ಅದನ್ನು ಆಡಿಕೊಳ್ಳುವ, ಕಮೆಂಟು ಮಾಡುವ ಹಕ್ಕಾದರೂ ನಮಗೆ ಎಲ್ಲಿರುತ್ತದೆ..? ಬೀದಿಗೆ ಬಂದ ಬದುಕಿಗೊ ಈಗ ಆಕೆ ಕಾಲೂರಿ ನಿಂತಿರುವ ಬದುಕಿಗೆ ಸ್ವತ: ರಿಸ್ಕು ತೆಗೆದುಕೊಂಡವಳನ್ನು ನಾವು ಯಾಕಾದರೂ ಆಡಿಕೊಳ್ಳಬೇಕು.
ಕಾರಣ ಶೋಭಾ ಅಂತಹದ್ದೊಂದು ಗಂಡನ ಮರಣದ ಆಕಸ್ಮಿಕದ ಪ್ರಪಾತದಿಂದೆದ್ದು ನಿಂತ ಪರಿಯಿದೆಯಲ್ಲ ಅದರ ಕತೆಯೇ ಬೇರೆ. ಸರಹೊತ್ತಿಗೆ ನೆಗೆದುಬಿದ್ದ ಗಂಡ, ಪೂರ್ತಿ ಸಾಲ ಮತ್ತು ಎದುರಿಗೆ ಮೈ ಚೆಲ್ಲಿಕೊಂಡು ಮಲಗಿದ್ದ ಖಾಲಿ ಬದುಕು ಎರಡನ್ನೂ ಪುಷ್ಕಳವಾಗಿಯೇ ಬಿಟ್ಟು ಹೋಗಿದ್ದ. ಆದರೆ ಅದಾವುದಕ್ಕೂ ಜಗ್ಗದೆ ಗೃಹಕೈಗಾರಿಯ ಅಂಗವಾಗಿ ಹಪ್ಪಳ ಸಂಡಿಗೆ ಪೂರೈಸುವುದಕ್ಕೆ ಕೈ ಹಾಕಿ ಗೆದ್ದಿದ್ದಳು. ಕೆಲಸಕ್ಕೂ ಪ್ರೀತಿಗೂ ಬಿದ್ದರೆ ಹೆಣ್ಣನ್ನು ಸಂಭಾಳಿಸುವುದು ಕಷ್ಟ ಎನ್ನುವುದಕ್ಕೆ ಆಕೆ ಉದಾ.ಯಾಗಿದ್ದಳು. ಬದುಕನ್ನು ನೋಡುನೋಡುವಷ್ಟರಲ್ಲಿ ಕಟ್ಟಿಕೊಂಡಿದ್ದ ಆಕೆ ಈಗ ಯಾರೊಂದಿಗೋ ಇದ್ದಾಳೆನ್ನುವುದನ್ನು ಆಕೆಯ ಸ್ಥಿತಿಗೆ ಜೊತೆಯಾಗದ ನಾವು ಆಡಿಕೊಳ್ಳಲು ಯೋಗ್ಯರಾ..?
ಅಸಲಿಗೆ ಇವತ್ತು ಅಫೇರು ಎನ್ನುವುದೋ ಅಥವಾ ಒಂದು ಸಾಂಗತ್ಯ ಎನ್ನುವುದನ್ನು ಹೆಚ್ಚಿನಂಶ ಪ್ರತಿಯೊಬ್ಬರು ಒಳಗೊಳಗೇ ಅಂಗಿಕರಿಸುವ ಆದರೆ ಎದುರಾ ಎದುರು ಬಂದಾಗ ಮಾತ್ರ ಮುಖವಾಡ ತೊಟ್ಟು ತಾವು ಸಭ್ಯಸ್ಥರಂತೆ ನಿಲ್ಲುವ ಮನಸ್ಥಿತಿಯವರಾಗಿರುವುದೇ ಪ್ರಸ್ತುತ ಸಮಾಜದ ಅತಿ ದೊಡ್ಡ ಹಾದರತನ. ಕಾರಣ ಬದಲಾಗುವ ಮತ್ತು ಬದಲಾಗಿದ್ದ ಪರಿಸ್ಥಿತ್ಯಲಿ ಆಕೆಯ ಜಾಗದಲ್ಲಿ ಇನ್ಯಾರಾದರೂ ಗಂಡಸಿದ್ದಿದ್ದರೆ ಇದ್ದ ಸಂಸಾರ ಆಚೆಗಿಟ್ಟು ಮೊದಲು ಇನ್ನೊಬ್ಬಳನ್ನು ಮದುವೆ ಅಗುವುದೋ ಇನ್ನೊಂದೊ ಮಾಡಿಕೊಳ್ಳುತ್ತಿದ್ದ ಮತ್ತು ಯಾರು ಹೇಗೆಲ್ಲಾ ಸಂಸಾರ ಸುಧಾರಿಸುತ್ತಾರೆ ಎನ್ನುವುದು ನಮ್ಮ ಕಣ್ಣುಗಳೆದುರಿಗೆ ಸಾವಿರ ಇದ್ದರೂ ತನಗೆ ತನ್ನ ಬದುಕಿಗೆ ಏನು ಬೇಕೋ ಅದನ್ನು ಮಾಡಿಕೊಂಡು ಮಕ್ಕಳನ್ನು, ಪರಿಸ್ಥಿಯನ್ನು ಸುಧಾರಿಸಿದ ಆಕೆಗೆ ಕಮೆಂಟು ಮಾಡಲು ನಾವ್ಯಾರು...? ಎಲ್ಲಾ ಅವರವರಿಗೆ ಹಾಸಿ ಹೊದೆಯುವಷ್ಟಿದ್ದರೂ ಪರರ ಚಾದರಿನೊಳಾಗೆ ಇಣುಕುವುದನ್ನು ಬಿಡದ ಕಾರಣವೆ ಬದುಕು ಕಾಲೊರೆಸುವ ಬಟ್ಟೆಯಾಗುತ್ತಿರುವುದು. ಇಲ್ಲದಿದ್ದರೆ ಇದನ್ನೆಲಾ ನಾನು ಪಿಸುನುಡಿಯುವ ಅಗತ್ಯವಾದರೂ ಏನಿರುತ್ತೆ..?

No comments:

Post a Comment