Sunday, July 16, 2017

ಸಾಂಗತ್ಯವಿಲ್ಲದ ಬದುಕಿಗೆ ಬಣ್ಣಗಳೆಲ್ಲಿಂದ ಬರಬೇಕು...?


 ಸರಿಯಾಗಿ ಮೂರೇ ವರ್ಷದ ಹಿಂದೆ ಗಂಡನೆಂಬ ಬಾಟಲಿಬಾಯ್‍ನನ್ನು ಕಳೆದುಕೊಂಡು ಕುರ್ಚಿ ತುದಿಗೆ ಪಿಳಿಪಿಳಿ ಮಾಡುತ್ತಾ ಕೂತಿದ್ದವಳು ಇವಳೇನಾ ಎನ್ನುವಂತೆ ಮಾತಾಡುತ್ತಿದ್ದಾಳೆ ಶೋಭಾ. ಆವತ್ತು ಗಂಡನೆಂಬ ಮನುಷ್ಯಾಕೃತಿಯಲ್ಲಿದ್ದ ಜೀವಂತ ಕೃತಿ ನೆಗೆದು ಬಿದ್ದಾಗ ಜಗತ್ತೇ ಆಕೆಯ ತಲೆ ಮೇಲೆ ಬಿದ್ದಿತ್ತು. ಇವತ್ತು ಆಕೆ ಒಂದು ಕಾಲು ಮೇಲೆತ್ತಿ ಯಾರ ತಲೆ ಮೇಲಿಡಲಿ ಎನ್ನುವಷ್ಟು ಗಟ್ಟಿಯಾಗಿದ್ದಾಳೆ. ಹೌದು ಇವತ್ತಿಗೂ ಮದುವೆ ಅಂತಾಗಿಬಿಟ್ಟರೆ ಆ ಗಂಡನೆಂಬುವನು ಹೇಗಿದ್ದರೂ ಅವನಿಗೆ ಗಂಡ ಎಂಬ ಪಟ್ಟದೊಂದಿಗೆ ಸಾವರಿಸಿಕೊಂಡು ಹೋಗುವ ಸಂಸಾರಗಳು ನಮ್ಮಲ್ಲಿ ಲೆಕ್ಕದ ಹೊರಗಿವೆ.

ಅದೇನೆ ಇರಲಿ ಮದುವೆ ಆಗಿದೆ ಮಕ್ಕಳೂ ಆಗಿವೆ ಅಂತಾದ ಮೇಲೆ ಸುಮ್ನೆ ತಿಂದಾದರೂ ಬಿದ್ದಿರಲಿ ಬಿಡು ಎನ್ನುವದಿದ್ದರೂ ಕೈಲಾಗದಂತೆ ಎನೇ ಮಾಡದೆ ಸುಮ್ಮನಿದ್ದರೂ, ಅಪೂಟು ಸೋಮಾರಿ ಎಲ್ಲವನ್ನೂ ಕೈಗೆ ಹಿಡಿಸಿಯೂ ಬುಡ ಮಾತ್ರ ಸ್ವಂತ ತೊಳೆದುಕೊಳ್ಳುವ ಕ್ಷಮತೆಯ, ಆಗೀಗ ಕುಡಿದು ಗಲಾಟೆ ಮಾಡುವವನಿದ್ದರೂ, ಸುಖಾಸುಮ್ಮನೆ ಬಡಿದೆದ್ದು ಹೋಗುವವನಿದ್ದರೂ, ಕೆಲವೊಮ್ಮೆ ನಾಪತ್ತೆ ಆಗಿ ಇನ್ಯಾವಾಗಲೋ ಪ್ರತ್ಯಕ್ಷನಾಗುವವನಿದ್ದರೂ, ಏಷ್ಟೊ ಸರಿ ಮನೆಯದೆ ದುಡ್ಡು ಕದ್ದು ಕೆಲವೊಮ್ಮೆ ಹೆಂಡತಿಯ ಹೆಸರು ಹೇಳಿ ಇದ್ದಬದ್ದವರಿಂದ ದುಡ್ಡು ದುಗ್ಗಾಣಿ ಎತ್ತಿಕೊಂಡು, ಸಂಬಂಧಿಕರ ಸ್ನೇಹಿತರ ಹತ್ತಿರ ಸಾಲ ಸೋಲ ಮಾಡಿಕೊಂಡು, ಯಾವ ದಂಧೆಯೂ ಬರಕತ್ತಾಗದೆ, ಮಾತೆತ್ತಿದ್ದರೆ ಅಟೋದವನು ಇವತ್ತು ಐದು ರೂಪಾಯ್ ಕಡಿಮೆ ಅಂದರೆ ಬರಲ್ಲ, ನಾನು ಯಾವ ಲೆಕ್ಕದಲ್ಲಿ ಕಮ್ಮಿ ಎಂಬ ಧಿಮಾಕಿಗೇನೂ ಕಮ್ಮಿ ಇರದ, ಅದರೆ ಎಂಟಾಣಿ ದುಡಿಯಲೊಲ್ಲದ ಅಪೂಟು ಸೋಮಾರಿ ಅದರೆ ಊರಿಗೆಲ್ಲಾ ಹಂಚುವಷ್ಟು ಸೊಕ್ಕಿನ ಮಾತುಗಳ ಮತ್ತು ಜಂಭದ ಹೀಗೆ ಹಲವು ತಗಾದೆಗಳ ಅಪಕ್ವ ಗಂಡಸು, ಗಂಡ ಅಂತಾದ ಮೇಲೆ ಇರಬಹುದಾದ ಎಲ್ಲಾ ರೂಪದಾಚೆಗೊ ಅವನು ಗಂಡನಾಗೆ ಇರುತ್ತಾನೆ.

ಅದರೆ ಅದೆಲ್ಲಾ ಉಸಾಬರಿ, ಜಗಳ, ಮುನಿಸು, ಕೋಪ, ಸರಸ, ಕುಡಿತ, ಬಡಿತ, ಇವಳದ್ದೂ ಇದ್ದೇ ಇರುವ ಕಿರಿಕ್ರಿರಿತನದ ಮಾತುಗಳು, ಅದಕ್ಕವನ ಮತ್ತೆ ಪಿಸಣಾರಿತನ, ಊರಿಗಿಲ್ಲದ ಬಿಂಕಕ್ಕೇನೂ ಕಡಿಮೆ ಇಲ್ಲದ, ಏನೂ ಮಾಡಲೊಲ್ಲನಾದರೂ ಯಾರಾದರೂ ಬಂದಾಗ ಅತ್ಯಂತ ಸುಭಗನಂತೆ ಮಾತಾಡಿ ಅಯ್ಯೋ ಇವರ ಯಜಮಾನ ಎಷ್ಟು ಆದರ ಸದರ ಮಾಡುತ್ತಾರೆ ಎನ್ನಿಸಿಕೊಳ್ಳುವ, ಮನೇಲಿ ಕಾಫಿ ಪುಡಿ ಇದಿಯಾ ಇಲ್ವಾ ನೋಡದೆ " ಏಯ್ ಇವಳೆ ನೆಸ್ ಕಫೆ ಮಾಡೆ " ಎಂದು ಕೂಗಿಕೊಂಡು ಆರ್ಡರ್ ಮಾಡುವ, ಅವರೊಂದಿಗೆ ತಾನೂ ಲಯಬದ್ಧವಾಗಿ ಕೂತು ವರಚ್ಚಾಗಿ ಕಾಫಿ ಹೀರುವ ಬಂದ ಅಭ್ಯಾಗತರು ಅದೇನು ಒಳ್ಳೆಯವರು ಎನ್ನಬೇಕು ಹಾಗೆ ನಾಜೂಕಿನ ಮಾತಾಡುವ, (ಈ ಯಜಮಾನ ಎನ್ನುವ ಪದ ಬಳಕೆಗೆ ನನ್ನ ವಿರೋಧವಿದೆ. ಗಂಡ ಗಂಡ ಅಷ್ಟೇ.. ಹೆಂಡತಿ ಕೂಡಾ ಹೆಂಡತಿ ಅಷ್ಟೆ. ಅದ್ಯಾಕೆ ಯಜಮಾನ ಯಜಮಾನತಿ ಆಗುತ್ತಾರೋ ಅದೇನು ಒಬ್ಬರಿಗೊಬ್ಬರು ದುಡ್ಡು ದುಗ್ಗಾಣಿ ಪೇಮೆಂಟು ಮಾಡುತ್ತಾರಾ..? ಇದು ನನ್ನ ವೈಯಕ್ತಿಕ ಮತ್ತು ನನಗೀಗಲೂ ಅರ್ಥವಾಗದ ವಿಷಯ) ಎಷ್ಟೂ ದುಡಿದರೂ ಒಯ್ದು ಗಡಂಗಿಗೂ ತನ್ನ ಸಿನೇಮಾಕ್ಕೂ ಖರ್ಚು ಮಾಡಿಕೊಂಡು ಉಳಿದದ್ದು ಮಾತ್ರ ದಾಕ್ಷಿಣ್ಯಕ್ಕೆ ಮನೆಗೆ ಖರ್ಚು ಮಾಡುವ ಹೀಗೆ ತರಹೇವಾರಿ ಗಂಡಸರು ಗಂಡ ಅಂತಾದ ಮೇಲೆ ಗಂಡನೇ ಆಗಿ ಹೋಗಿರುತ್ತಾನೆ ಹೊರತಾಗಿ ಬೇರಾವ ರೀತಿಯಲ್ಲೂ ಬದುಕಿನ ಅಂಗಳದಲ್ಲಿ ಬದಲಾಗುವುದೇ ಇಲ್ಲ. ಅದು ನಮ್ಮ ಅನುಭವದ ಜೀವನ ರೀತಿಯೋ ಇನ್ನೇನೋ ಒಟ್ಟಾರೆ ಹೆಣ್ಣು ಮಕ್ಕಳೂ ಅದನ್ನೂ ಹೆಚ್ಚು ಕಡಿಮೆ ಹಾಗೆಯೇ ಸ್ವೀಕರಿಸಿ ಬಿಟ್ಟಿರುತ್ತಾರೆ.

ಈಗಿನ ಹುಡುಗಿಯರನ್ನು ಈ ಕೆಟಗರಿಗೆ ನಾನು ಸೇರಿಸಿಲ್ಲ. ಕಾರಣ ಮದುವೆ ಆದ ಮೂರೇ ತಿಂಗಳಿಗೆ ಕಡ್ಡಿಹಿಡಿ ಎತ್ತಿಕೊಂಡು ನಿಲ್ಲುವ ಹುಡುಗಿಯರೂ ಈಗ ಸಹಜವಾಗಿದ್ದಾರೆ ಮತ್ತು ಬದುಕಿಗೆ ಅನುಭವಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವವರೂ ಇದ್ದಾರೆ. ಅದರೆ ಕೆಲವರು ಮಾತ್ರ ಈಗಲೂ ಮನಸ್ಸಿನ ಕೈಗೆ ವಾಸ್ತವವನ್ನು ಕೊಟ್ಟು, ಬಂದಂತೆ ಸ್ವೀಕರಿಸದೆ ಬದುಕು ತಾವಾಗೇ ಹಾಳು ಮಾಡಿಕೊಳ್ಳುವುದೂ ಇದೆ. ಹಾಗಾಗಿ ಶೋಭಾಳ ಎನ್ನುವ ಮಿಡ್ಲಕ್ಲಾಸ್ ಬದುಕಿನ ಗಂಡ ಗಂಡನಾಗಿದ್ದೂ ಹೊಸದೇನಿರಲಿಲ್ಲ. ಅದರೆ ಏನೆಲ್ಲಾ ಅಗದಿದ್ದವನು ಸತ್ತಾಗ ಮಾತ್ರ ಅಯ್ಯಯ್ಯೋ ಎನ್ನುವುದಿದೆಯಲ್ಲ ಅದು ಆ ಬಾಂಧವ್ಯವನ್ನು ತೋರಿಸುತ್ತಿತ್ತೇನೋ. ಆದರೆ ಆಕೆ ಅಷ್ಟೇ ಬೇಗ ಚೇತರಿಸಿಕೊಂಡು ಬದುಕು ಕಟ್ಟಿಕೊಂಡಿದ್ದಳು. ಜೊತೆಗೆ ಮಗಳು ಅಮ್ಮನ ಬಾಲಂಗೋಚಿ ಅಧ್ಬುತವಾಗಿ ಓದುತ್ತಾ, ದಿನದ ಉಳಿದ ಹೊತ್ತಲ್ಲಿ ಹಪ್ಪಳ ಒತ್ತುತ್ತಾಳೆ ಸಾಲುಸಾಲಾಗಿ. (ಅಂದಹಾಗೆ ಕೆಲವರು ನನ್ನೊಂದಿಗೆ ಇಂತಹ ಮನೆಯ ಕೆಲಸಗಳು ಈಗಲೂ ನಡೆಯುತ್ತವಾ ಎಂದು ಕೇಳಿದ್ದಿದೆ. ನಿಜ ಹೇಳ ಬೇಕೆಂದರೆ ಹೀಗೆ ಮನೆಯ ಹಪ್ಪಳ,ಉಪ್ಪಿನಕಾಯಿ, ಚಟ್ನಿಪುಡಿ ಮಾಡಲು ಎಷ್ಟು ಜನರಿದ್ದರೂ ಇವತ್ತು ಕಮ್ಮಿ ಎನ್ನುವ ಕನಿಷ್ಟ ಆರೆಂಟು ಸಂಸ್ಥೆಗಳು ನನಗೇ ಗೊತ್ತು. ಆದರೆ ಜನರಿಗೆ ಸುಲಭದ ದುಡ್ಡು ಮಾಡಬೇಕಿರುವುದರಿಂದ ಮತ್ತು ಸರಕಾರದ ಪುಕ್ಸಟ್ಟೆ ಅಕ್ಕಿ, ಎಣ್ಣೆ ಎಂದು ಸೋಮಾರಿಗಳಾಗಿಸಿದ ಫಲವಾಗಿ ಯಾವುದಕ್ಕೂ ಮೈಮುರಿಯಲು ಜನರಿವತ್ತು ತಯಾರಿಲ್ಲ. ಹೊರತಾಗಿ ಇಂತಹ ಹೋಮ್‍ಮೇಡ್‍ಗಳಿಗೆ ಅದ್ಯಾವ ಪರಿಯಲ್ಲಿ ಬೇಡಿಕೆ ಇದೆಯೆಂದರೆ ಸರಾಸರಿ ಸಾವಿರ ಕೂಲಿಗಳು ಪ್ರತಿ ದಿನದ ಉತ್ಪನ್ನಕ್ಕೆ ಇದ್ದರೂ ಸಾಕಾಗಲಿಕ್ಕಿಲ್ಲ)

ತೀವ್ರವಾಗಿ ಸಾಮಾಜಿಕ ಬದುಕಿನ ಶ್ರೀಮಂತಿಕೆ ಮತ್ತು ಬಡತನ ರೇಖೆ ದಪ್ಪವಾಗುತ್ತಲೆ ಸುಲಭಕ್ಕೆ ಜೀವನದಲ್ಲಿ ದುಡ್ಡು ಕೈಗೆ ಹತ್ತುವುದಿಲ್ಲ. ಅದೇನಿದ್ದರೂ ಇದ್ದಲ್ಲೇ ಬೆಳೆಯುವ ಸಂಭ್ರಮವೇ ಜಾಸ್ತಿ. ಹೀಗಿದ್ದಾಗ ಬಂದಿದ್ದರಲ್ಲಿ ಅರ್ಧ ಕುಡಿದೇ ಹಾಳು ಮಾಡುತ್ತೇನೆ ಎಂದು ನಿಂತ ಮನೆಯ ಯಜಮಾನನನ್ನು ನಂಬಿ ಉದ್ಧಾರವಾದ ಕುಟುಂಬಗಳಿಲ್ಲವೇ ಇಲ್ಲ ಎಂದರೂ ಸರಿನೇ. ಆವತ್ತು ಆಗಿದ್ದು ಕೂಡಾ ಹಾಗೇನೆ. ಕರೆಂಟು ಕಂಪೆನಿಯಲ್ಲಿ ಕೆಲಸಕ್ಕಿದ್ದಾನೆ ಎಂದು ಬಂದ ಸಂಬಂಧಕ್ಕೆ ಹುಡುಗಿಯನ್ನು ಕೊಡದಿರಲು ಯಾವ ಕಾರಣವೂ ಇರಲಿಲ್ಲ. ದುಡ್ಡು ಬರುತ್ತದಂತಾದರೆ ಕೋತಿಯೊಂದಿಗೂ ಮದುವೆ ಆಗೋಕೆ ರೆಡಿ ಇರುವ ಹುಡುಗಿಯರೂ, ದುಡ್ಡಿದ್ದರೆ ಸಾಕು ಸಂಸಾರ ಸಂಭ್ರಮದಲ್ಲಿರುತ್ತದೆ ಎಂದುಕೊಳ್ಳುವ ಪಾಲಕರದ್ದು ಈಗಲೂ ಕಮ್ಮಿ ಇಲ್ಲ. ಆಗಲೂ ಇರಲಿಲ್ಲ. ಹಾಗಾಗಿ ಶೋಭಾ ಏನೆಲ್ಲಾ ಘಟಿಸುವ ಹೊತ್ತಿಗೆ ಒಮ್ಮೆ ಕುಸಿದುಹೋಗಿದ್ದಳಾದರೂ ಗಂಡನೆನ್ನುವ ಪ್ರಾಣಿ ನೆಗೆದು ಬಿದ್ದ ಮೂರ್ನಾಲ್ಕು ವರ್ಷದಲ್ಲೇ ಎಲ್ಲಾ ವ್ಯವಸ್ಥಿತ ಮಾಡಿಕೊಳ್ಳುವ ಹೊತ್ತಿಗೆ ಹೊಸತೊಂದು ಸಂಬಂಧಕ್ಕೂ ಈಡಾಗಿದ್ದಳು. ಬದುಕು ಹೊಸ ದಾರಿ ಹೊಸ ತಿರುವು ತೆಗೆದುಕೊಂಡಿತ್ತು.

"...ಅಯ್ಯೋ ಹೀಗಾಯ್ತಲ್ಲ ಎನ್ನುವುದಕ್ಕಿಂತ ಬದುಕು ಒಂಥರಾ ಬದಲಾಗಿದೆ, ನಾನೂ ಹೊಸದಾಗಿ ಎಲ್ಲವನ್ನೂ ಅರಂಭಿಸಿದರೂ ಚಾಲೆಂಜಿಂಗ್ ಆಗಿ ಎದುರಿಸಿದ್ದೇನೆ.. ಹಾಗೆ ಅವನೊಂದಿಗೇ ಇದ್ದರೆ ಯಾವತ್ತೂ ಯಾವ ಬದುಕಿಗೂ ಹೊಸ ಧಡಾಪಡಿಗೂ ತೆರೆದುಕೊಳ್ತಾನೆ ಇರಲಿಲ್ವೇನೋ. ಅದೊಂಥರಾ ಗೊತ್ತಿದ್ದೂ ಉಸಿರು ಗಟ್ಟಿದಂಗಿರ್ತದೆ. ಜನ  ಎನಂದುಕೊಳ್ತಾರೆ ಬಿಟ್ಟಾಕು. ಆದರೆ ನಾನು ಯಾರ ಜೊತೆಗೋ ರಿಲೇಶನ್‍ನಲ್ಲಿದ್ದೇನೆ ಅನ್ನೋದು ಉಳಿದವರಿಗೆ ಏನೋ ಅನ್ನಿಸಬಹುದು ಅದರೆ.." ಎಂದು ಮಾತು ನಿಲ್ಲಿಸಿದವಳ ಕತೆ ಮುಂದಿನ ವಾರಕ್ಕಿರಲಿ. ಶೋಭಾ ಹೇಳಿದುದರಲ್ಲಿ ಎರಡು ಮಾತಿರಲಿಲ್ಲ. ಅಷ್ಟಕ್ಕೂ ಸಾಂಗತ್ಯವಿಲ್ಲದ ಬದುಕಿನಲ್ಲಿ ಬಣ್ಣಗಳ ವಿಜೃಂಭಣೆಯಾದರೂ ಎಲ್ಲಿಂದ ಬಂದೀತು..? ಬದುಕಿಗೆ ಒಲವಿಲ್ಲದೆ, ಪ್ರೇಮ, ಕಾಮವಿಲ್ಲದೆರಂಗಿನ ಹರವು ರೂಪ ಪಡೆಯುವುದಾದರೂ ಹೇಗೆ..? ಉಳಿದದ್ದು ಮುಂದಿನ ವಾರಕ್ಕೆ..

1 comment: