Tuesday, September 5, 2017

ನಮ್ಮದಲ್ಲದ ಸಂಕಟಗಳಿಗೆ ಅವಮಾನದ ತೆರಿಗೆ.. 
(ಮೇಲ್ನೋಟಕ್ಕೆ ಗಂಡಸರ ಜೀವನ ಭಾಳ ಆರಾಮ. ಆದರೆ ಬದುಕಿನ ಜಂಜಾಟದಲ್ಲಿ ಸಾಂಸಾರಿಕ ಅವಮಾನ ಅವರಿಗೆ ಹೊಸದೇನಲ್ಲ. ಅಂತಹ ಸಮಕಾಲೀನ ಸಂಕಟ, ತಲ್ಲಣಗಳಿಗೆ ಈಡಾಗಿ ಗಂಡಸರ ಜೀವ ದಡ್ಡಬಿದ್ದು ಹೋಗಿರ್ತದ. ಅಷ್ಟಾಗಿಯೂ ನಮ್ಮ ಮಕ್ಕಳು ನಮ್ಮವರಲ್ಲ ಅನ್ನೋದು ಗೊತ್ತಾಗುವಾಗ ತಡಾ ಆಗಿರ್ತದ.)

ವೆಂಕಟರಮಣ ನಾಯ್ಕ ಅವರ ಪೂರ್ತಿ ಹೆಸರು. ನಾನು ಅವರನ್ನು ಭೇಟಿಯಾಗುವ ವೇಳೆಗಾಗಲೇ ಅವರ ಮುಕ್ಕಾಲು ಜೀವನ ಕಳೆದು ವೆಂಕು ಮಾಸ್ತರರೆಂದೇ ಗುರುತಿಸಲ್ಪಟ್ಟಿದ್ದರು. ಅದ್ಯಾಕೋ ಅವರೊಂದಿಗೆ ತೀರ ಕಡಿಮೆ ಸಮಯದಲ್ಲೇ ಒಂದು ರೀತಿಯ ಬಾಂಧವ್ಯ ಬೆಳೆದು ನನಗೆ ಮಾಸ್ತರಕಾಕಾ ಆಗಿದ್ದರು. ಒಮ್ಮೆ ಶಿರಸಿಯಿಂದ ಬರುತ್ತಿದ್ದವನು ಕುಮ್ಟೆಯ ಗಡಿ ದಾಟುತ್ತಿದ್ದಂತೆ ಹದವಾದ ಉಪ್ಪು ಮಿಶ್ರಿತ ಮೀನು ವಾಸನೆಗೆ ಈಡಾಗುತ್ತಾ, ಗಂಗಾವಳಿಯ ದಡದಲ್ಲಿಂದ ಗೋಕರ್ಣ ಕ್ರಾಸಿನೊಳಕ್ಕೆ ತೂರಿ ಹೋಗಿದ್ದೆ. ಮೊದಲೆ ನಿಕ್ಕಿ ಮಾಡಿಕೊಂಡಿದ್ದಂತೆ ಅವರು `ಮನೆ ಬಿಟ್ಟು ಬೇರೆಡೆಗೆ ಇದ್ದೀನಿ' ಎಂದಿದ್ದ ಗುರುತಿನ ಮೇರೆಗೆ ಗದ್ದೆ ಬದುವಿನ ಮೇಲೆ ನಡೆದುಹೋಗಿದ್ದೆ. ಹರವಾದ ಬಿಸಿಲಿಗೆ ಮೈಯೊಡ್ಡಿ ನಿಂತ ತೀರ ಚಿಕ್ಕ ಜೋಪಡಿಯಂತಹದ್ದು. ಎದುರಿಗೆ ದೊಡ್ಡ ಮರ. ಪಕ್ಕದಲ್ಲಿ ಬಾವಿ ಅದರ ಕೆಳಗೆ ಅರ್ಧ ಕಾಲು ಮುರಿದು ಜೋಡಿಸಿದ್ದ ಮಂಚ. ಅದೆಲ್ಲವೂ ಸೇರಿದರೆ ಅಂಗಳ. ಅದರಲ್ಲೇ ಮರದ ಕೆಳಗೊಂದು ಬೆತ್ತದ ಕುರ್ಚಿ. ಮನೆಗೆ ತಗುಲಿಯೇ ಬಿದಿರು ಬಿಗಿದು ಅರ್ಧ ತಡಿಕೆ ಹಾಕಿದ್ದ ಬಚ್ಚಲು ಮನೆ. ಆಸರೆಗಾಗಿ ಮಾಡಿಕೊಂಡ ಮಾಳ ಎಂದರೂ ಸರಿನೆ.
ಒಂದಿಷ್ಟು ಬಾಳೆ ಹಣ್ಣು, ಸಕ್ಕರೆ, ಒಂದು ಪ್ಲಾಸ್ಕಿನಲ್ಲಿ ಬಿಸಿ ಚಹ. ಸಾಮಾನ್ಯವಾಗಿ ಸಮಯದ ಪರಿಧಿ ಮೀರದ ನಾನು ಆವತ್ತು ಅಧ್ವಾನ್ನದ ರಸ್ತೆಯ ಕಾರಣ ಮುಟ್ಟಿದ್ದು ನಿಗಿನಿಗಿ ಮಧ್ಯಾನ್ಹ ಬಿಸಿಲಿನ ಕಾಲಕ್ಕೆ. `ಮಾಸ್ತರಕಾಕಾ ತಡ ಆಯ್ತು..'ಎನ್ನುತ್ತಿದ್ದಂತೆ, `ಇರ್ಲಿಬಿಡೊ ನಾನೇನು ನೌಕರಿಗ ಹೋಗ್ಬೇಕೇನು..?ನೀ ಅರ್ಜೆಂಟಿಗ್ ಬಿದ್ದ ಕಾರು ಒಡಿಸಬ್ಯಾಡ ಮಾರಾಯ. ಎರಡೆ ತಾಸು ಅಂದ್ರೆ ಜೋರು ಬಂದಿರ್ತಿ.' ಎಂದು ಗದರಿದ್ದರು. ನಾನು ಹುಲ್ಲಿನ ಮಾಡಿನ ನೆರಳು ಹುಡುಕಿಕೊಂಡು ಅಲ್ಲೇ ಇದ್ದ ತಗಡೀನ ಡಬ್ಬದ ಮೇಲೆ ಕೂತೆ. ತುಂಬಾ ಚೆಂದದ ಮನೆ ಮಠ ಇದ್ದ ಮಾಸ್ತರಕಾಕಾ, ಇಳಿ ವಯಸ್ಸಿನಲ್ಲಿ ಊರು ಕೇರಿ ಬಿಟ್ಟು ಗದ್ದೆ ಬದುವಿನ ಜೋಪಡಿಯಲ್ಲಿ ಉಳಿದಿದ್ದರು ಒಂಟಿಯಾಗಿ. ಇತಿಹಾಸ ಭವಿಶ್ಯಕ್ಕಲ್ಲ...
ನಾನು ಹೈಸ್ಕೂಲು ಕೊನೆಯ ವರ್ಷ ಕಳೆಯುವಾಗ ಕುಮ್ಟೆಯಿಂದ ವರ್ಗವಾಗಿ ಊರಿಗೆ ಬಂದಿದ್ದವರು ಮಾಸ್ತರರು. ಸುಮ್ಮನೆ ಒಂದು ಹಂತದಲ್ಲಿ ಪರಿಚಯವಾಗಿದ್ದವರು, ಅಂಕಣಗಾರನಾದಾಗ ಕರೆಮಾಡಿ ಮಾತಾಡಿಸಿದ್ದರು. ನಂತರ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದೇ ಇದ್ದರು. ಅವರೊಂದಿಗಿನ ಒಡನಾಟದಲ್ಲಿ ಕ್ರಮೇಣ ಅವರ ವೈಯಕ್ತಿಕ ವಿಚಾರಗಳು ನುಸುಳತೊಡಗಿ ನಿವೃತ್ತಿ ಮತ್ತು ವೃದ್ದಾಪ್ಯ ಶಾಪವಾ ಎನ್ನಿಸತೊಡಗಿದ್ದು ಹೌದು. ಹಾಗಾಗೇ ಅವರು ನಿವೃತ್ತಿಯ ನಂತರವೂ ಒಮ್ಮೆ ಅವರೂರಿಗೆ ಹೋಗಿದ್ದೆ. 
ಆವತ್ತು ವಯಸ್ಕ ದಂಪತಿಗಳಿಬ್ಬರೂ ಸಂಭ್ರಮಿಸಿದರೂ ನನ್ನನ್ನು ಮನಪೂರ್ವಕ ಬರಮಾಡಿಕೊಳ್ಳುವ ಸ್ವಾತಂತ್ರ ಅವರಿಗಿಲ್ಲದ್ದು ಎದ್ದು ಕಾಣುತ್ತಿತ್ತು. ಮನೆಯಲ್ಲಿದ್ದ ಮಗ, ಸೊಸೆಯ ದರಬಾರಿಗೆ ಅಧಿಕಾರ ಹಸ್ತಾಂತರವಾಗಿದ್ದು ಖಚಿತ. ಮಾಸ್ತರ ಪಿಂಚಣಿ ಇದ್ದುದಕ್ಕೆ ಬಹುಶ: ಮನೆಯಲ್ಲಿ ಉಳಿಯಲು ಅವಕಾಶ ಇತ್ತೇನೋ. ಮಾತಾಡ್ತಾ ಹಾಗೇ ನಗುವಿನಲ್ಲೇ ನನ್ನನ್ನು ಆ ಮುಜುಗರದಿಂದ ಮರೆಮಾಚಲು ಯತ್ನಿಸುತ್ತಿದ್ದುದು ಗೊತ್ತಾಗುತ್ತಲೇ ಇತ್ತು. ಕಾಕಿಗೆ ಎದ್ದು ಓಡಾಡುವಷ್ಟೂ ಸುಲಭದ ಪರಿಸ್ಥಿತಿ ಇರಲಿಲ್ಲ. ಮೊಳಕಾಲು ಕಳಚಿ ಬೀಳುತ್ತಿತ್ತು. ವೈದ್ಯಕೀಯ ಚಿಕಿತ್ಸೆ ದೂರದ ಮಾತಾಗಿತ್ತು. ಒಮ್ಮೊಮ್ಮೆ ಮೊಳಕಾಲು ಕಳಚಿದಾಗಲೂ ವಾರಗಟ್ಟಲೇ ಹಾಸಿಗೆ ಹಿಡಿಯುತ್ತಿದ್ದರು. 
ನನಗೆ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲು ಆಗಿರಲಿಲ್ಲ. ತೀರ ವೃದ್ಧ ಜೀವಗಳಿಗೆ ಸಾಂತ್ವನ ಹೇಳುವ ವಯಸ್ಸು, ಧೈರ್ಯ ಎರಡೂ ನನ್ನವಲ್ಲವಾಗಿದ್ದವು. ಆದರೂ ಮಾಸ್ತರ ಸಲಿಗೆಯಿಂದಾಗಿ ಎನೋ ಒಂದಷ್ಟು ಮಾತಾಡಿದ್ದೆ. ಕಾಕು`ಚಾ.. ಚಾ.. ಮಾಡ್ರಿ'ಎನ್ನುತ್ತಿದ್ದರೂ ಮಾಸ್ತರರು ಮುಲಾಜಿಗೆ ಬಿದ್ದಂತೆ ವರ್ತಿಸುತ್ತಿದ್ದು ಕಾಣಿಸುತ್ತಿತ್ತು. ನಾನೇ ಎದ್ದು ಅಂಗಳಕ್ಕಿಳಿದು ಬರುವಾಗ ಮಾಸ್ತರ ಕೈ ಹಿಡಿದು `ಇರ್ಲಿ ಬಿಡ್ರಿ ಇಂಥವೆಲ್ಲಾ ಮಜಬೂರಿಗಳು ಇರ್ತಾವೆ. ನನಗೇನು ನೀವು ಹೊಸಬರಾ. ಚಹ ಕುಡಿದಿದ್ರೇನು. ನಿಮಗಿಂತ ದೊಡ್ಡದು ಯಾವುದದೆ..? ಬೇರೆ ಸಹಾಯ ಬೇಕಿತ್ತೇನು..?' ಎಂದಿದ್ದೆ. 
`ಏನೂ ಇಲ್ಲಪಾ. ಆದರ ನಿನ್ನ ಕಾಲಂ ಓದಲಿಕ್ಕೆ ಆಗೂದಿಲ್ಲ. ಮನೀಗೆ ಪೇಪರ್ ಬರೂದಿಲ್ಲ. ಇಲ್ಲಿಂದ ರಸ್ತೆ ಕಡೀಗ್ ಹೋಗಿ ಓದೊದು ಅಂದರ ಭಾಳ ದೂರ ಆಗ್ತದ. ಈಕಿಗೇನಾದರೂ ಬೇಕಾದರ ತ್ರಾಸ ನೋಡ. ಅದಕ್ಕ ಯಾವತ್ತರ ಒಮ್ಮೆ ಹೋಗಿ ನೋಡಿಬರ್ತೇನಿ. ಅದಕ್ಕ ಏನೂ ಅಂದ್ಕೊಬ್ಯಾಡ. ಬಾಕಿ ಇನ್ನೇನು ವಯಸ್ಸಾಯ್ತು ನೋಡು..’ ಎಂದಿದ್ದರು. 
`ಕಾಕಾ. ನಾಳೆಯಿಂದ ಒಂದು ಪೇಪರ್ ಮನೀಗೇ ಹಾಕ್ಲಿಕ್ಕೆ ಹೇಳ್ತಿನಿ.' ಎಂದು ಕೈ ಸವರಿ ಕೊಸರಿಕೊಳ್ಳುತ್ತಿದ್ದರೂ ಒಂದಿಷ್ಟು ಪುಡಿಕೆ ನೋಟು ಕೈಗಿಟ್ಟುಬಂದಿದ್ದೆ. ನಂತರದಲ್ಲಿ ಸಂಪರ್ಕಕ್ಕೆತ್ನಿಸಿದಾಗೆಲ್ಲ ಸಿಕ್ಕುತ್ತಿದ್ದರಾದರೂ ಹೆಚ್ಚಾಗಿ, ಅವರ ಮಗನೇ ಫೆÇೀನು ತೆಗೆಯುವುದು, ಮಾಸ್ತರರು ಸಿಗದಿರುವುದೂ ನಡೆದೇ ಇತ್ತು. ಆಮೇಲೆನಾಯಿತೋ ಗೊತ್ತಿಲ್ಲ. ಮಾಸ್ತರರು ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಲಭ್ಯವಾಗಲೇ ಇಲ್ಲ. ನಾನೂ ಎರಡ್ಮೂರು ವರ್ಷ ರಾಜ್ಯದಿಂದ ಹೊರಗಿದ್ದುದೂ ಸೇರಿ ಸಂಪರ್ಕ ಕಳೆದೇ ಹೋಗಿತ್ತು. ಇತ್ತಿಚೆಗೊಮ್ಮೆ ಕರೆ ಮಾಡಿ ನೆನಪಿಸಿದ್ದರಿಂದ, ಗಂಗಾವಳಿ ದಂಡೆಯ ಗದ್ದೆ ಬದುವಿನ ಸಣ್ಣ ಜೋಪಡಿಯಲ್ಲಿದ್ದ ಮಾಸ್ತರೆದುರಿಗೆ ಕೂತಿದ್ದೆ. ಕಾಕು ಹೋಗಿದ್ದು ಪಕ್ಕಾ. ಅದಕ್ಕಿಂತಲೂ ಖೇದವೆಂದರೆ ಅವರ ಅರ್ಧ ಮುರಿದ ಕನ್ನಡಕ ಬದಲಿಸುವವರಿಲ್ಲದೆ, ಅದರಲ್ಲೇ ಓದುವುದಕ್ಕೂ ಒದ್ದಾಡುತ್ತಿದ್ದುದು ಕಾಣಿಸುತ್ತಿತ್ತು.
`ಬಿಸಲಾಗೇ ಬಂದಿದಿ. ಗಡಿಗಿಗೆ ನಿನ್ನೆನ ನೀರು ಹಾಕಿಟ್ಟಿದ್ದೆ. ತಣ್ಣಗಾಗಲಿ ಅಂತ.' ಎನ್ನುತ್ತ ಇದ್ದ ಒಂದೇ ಸ್ಟೀಲಿನ ಚೊಂಬಿನಲ್ಲಿ ನೀರು ಕೊಟ್ಟಿದ್ದರು. ನಾನು ಬಾಯಿ ಬಿಡುವ ಮೊದಲೇ,
`ಅರಾಮಿದಿನಿ ಏನೂ ತಲಿ ಕೆಡಿಸ್ಕೊಬ್ಯಾಡ. ಮಕ್ಕಳೆಲ್ಲ ಎಂತಾ ಮಾಡ್ತವೆ..?' ಎಂದು ವಿಷಯ ತಿರುಗಿಸುವ ಪ್ರಯತ್ನಕ್ಕಿಳಿದರು. ಸುಮ್ಮನೆ ಅವರ ಮುಖವನ್ನೆ ದಿಟ್ಟಿಸುತ್ತ ಕುಳಿತೆ. ಮಾಸ್ತರರು ಮುಖ ಕೆಳಗಿಕ್ಕಿ ಒಮ್ಮೆ ಸೂರು ನೋಡಿ, ನಿಟ್ಟುಸಿರಿಟ್ಟರು. ಪಿಂಚಣಿಯ ಅಧಾರವಿದ್ದುದರಿಂದ ಮಾಸ್ತರರು ಮಗನ ಹಂಗಿನಿಂದ ಹೊರಬಂದಿದಾರೆ.
`ಆಕೀ ಇದ್ದಾಗ ಏನೂ ಮಾಡೊ ಹಂಗಿರಲಿಲ್ಲ. ಹೆಂಗಸರಿಗೆ ಮನೀ ಮಕ್ಕಳು ಅನ್ನೋ ವ್ಯಾಮೋಹನಾ ಬೇರೆ ನೋಡು. ಅಕೀಗೆ ನಾನು ಸರಿ ಬರ್ತಿರಲಿಲ್ಲ ಅನ್ನೋದು ಯಾವತ್ತೋ ಗೊತ್ತಿದ್ರೂ, ಇಷ್ಟ ವರ್ಷ ಸಂಸಾರ ಮಾಡಿದ್ದೇನು ಸುಳ್ಳಾ..? ಕಾಲಿಗೆ ಅಪರೇಶನ್ ಬೇಕಿತ್ತು ಮಾಡಿಸವ್ರು ಯಾರು..? ನಮಗ ಕೆಲವೊಂದು ಸೂಕ್ಷ್ಮ ಗೊತ್ತಾಗೋದಿಲ್ಲ. ಅದಕ್ಕ ಏನೂ ಮಾತಾಡದ ಎಳೆಂಟು ವರ್ಷದಿಂದ, ಮನ್ಯಾಗೆ ಅವಳು ಮಡ್ಬೇಕಾದ ಕೆಲಸಾನೂ ನಾನ ಮಡ್ಕೊಂಡು ಆಕೀ ಹಿಂದ ಸುಮ್ನೆ ಇರ್ತಿದ್ದೆ. ಅರಿಬಿ ಒಣಗಸೋದು, ಮನೀ ಕಸ ಹೊಡೆಯೋದು, ಆದಷ್ಟು ನೀರು ತುಂಬಿಸಿಡೊದು, ಮಕ್ಕಳ ಹರವಿದಾಗ ಮನೀ ನೀಟ ಮಾಡೊದು.. ಇವೆಲ್ಲಾ ಆಗದಿದ್ದರ ಆಕೀ ಮ್ಯಾಲ ಸೊಸಿ ಕೂಗಾಡ್ತಾಳ. ಸೊಸಿ ಮಾತು ಕೇಳಿ ಮಗಾ ನಮಗ ಮನಿಯಿಂದ ಹೊರಗ ಹಾಕಲಿಕ್ಕೆ ಕಾಲ ಮ್ಯಾಲೆ ನಿಂತಿದ್ದ.
ಆದರೆ ಇವಳಿಗೆ ಮನಿ, ಗಂಡ ಮಗಾ, ಮೊಮ್ಮಕ್ಕಳು ಅಂದರೆ ಅವಮಾನದಾಗೂ ಅದೇನೋ ಕಕ್ಕುಲಾತಿ ಮಾರಾಯ. ಕಾಲು ಬ್ಯಾನಿ ಬೇರೆ ಆಗಿತ್ತಲ್ಲ. ಇನ್ನೆಷ್ಟು ವರ್ಷ ಬದುಕೋ ಗೊತ್ತಿಲ್ಲ. ಯಾರ ಮನಸ್ಸಿಗೆ ಯಾಕ ಬೇಜಾರು ಮಾಡೊದು ಅಂತ ನಾನೇ ಸುಮ್ಮನಾಗಿ ಬಿಟ್ಟಿದ್ದೆ. ಹೆಂಗಾರ ಸರಿ ಇರೋ ಅಷ್ಟು ದಿನಾ ಅರಾಮಿರಲಿ. ಮಾಸ್ತರಿಕಿ ನೌಕರಿಯೊಳಗ ಇದಕ್ಕಿಂತ ದೊಡ್ಡದು ಏನೂ ಮಾಡ್ಲಿಕ್ಕೂ ಆಗೋದಿಲ್ಲ ನೋಡು. ಅದಕ್ಕ ಸುಮ್ಮನಾಗಿ ಬಿಟ್ಟಿದ್ನಿ. ಅದರೂ ಏನಾದರೊಂದು ಕಟಿಪಿಟಿ ಆಗತಿತ್ತು. ನೀ ಕಳಿಸ್ತಿದ್ದ ಪೇಪರ್‍ಗೂ ತಕರಾರು. ಏನು ಮಾಡ್ಲಿ. ಕಡಿಕಡಿಗೆ ಎಲ್ಲಾ ಹಾಸಿಗೆ ಮ್ಯಾಲೆ ನಡಿವಾಗ ಮನ್ಯಾಗೆ ಭಾಳ ತ್ರಾಸ ಆತು. ದೇವ್ರ ದೊಡ್ಡಾಂವ. ತಿಂಗಳೊಪ್ಪತಿನ್ಯಾಗ ಆಟ ಮುಗೀತು. ಇಲ್ಲಂದರ ಬರ್ತ ಬರ್ತ ಒಂದ ಗಂಜಿ ಕಾಯಿಸಿಕೊಡವ್ರೂ ಇರಲಿಲ್ಲ. ನಾ ಬಾಜುಗಿಂದ ಎದ್ರ ಆಕಿ ಚಿಟಿಚಿಟಿ ಚೀರತಿದ್ಲು. ಸೊಸಿ ಮಾತು ಮೈಮ್ಯಾಗೆ ಬರೀ ಎಳದಂಗ ಬರತಿದ್ವು. 
ಎನ ಮಾಡೊದಪಾ ಸಂತೋಶಾ.. ಬದುಕಿನ ಜಂಜಾಟದಾಗ ಇಂಥಾ ಅವಮಾನ, ಅವಮರ್ಯಾದಿ ಎಲ್ಲಾ ಅನುಭವಿಸಿ ಗಂಡಸರ ಜೀವ ದಡ್ಡ ಬಿದ್ದು ಹೋಗಿರ್ತದ. ಅದನ್ನ ವಾದಿಸಿಕೋತ ಕೂಡೊದ್ರಾಗ ಅರ್ಥ ಇಲ್ಲ ಅನ್ನಿಸಿ ಅಕೀಗೆ ಎನೂ ಅನ್ಸೋದ ಬ್ಯಾಡ ಅಂತ ಕಡಿಕಡಿಗೆ ಆಕೀಗ ಹೆಂಗ ಬೇಕೋ ಹಂಗ ಇದ್ದ ಬಿಟ್ಟಿದ್ದೆ. ಆಕೀ ಹೋದ ಮ್ಯಾಲೆ ಮನ್ಯಾಗ ಇರಾಕ ಯಾವ ಕಾರಣಾನೂ ಇರ್ಲಿಲ್ಲ. ಆದರೂ ಮೂವತ್ತೈದು ವರ್ಷಗಟ್ಟಲೆ, ಸಾವಿರಾರ ಮಕ್ಕಳಿಗೆ ಅಕ್ಷರ,ಬುದ್ಧಿ ಕಲಿಸಿದ ನಾನು ನಮ್ಮ ಮಕ್ಕಳಿಗೆ ಬುದ್ಧಿ ಕಲಿಸೋದಾಗಲಿಲ್ಲ ಅನ್ಸಿದಾಗ ಆಕಿ ಮುಂದ ನನ್ನ ಮುಖಾ ಸಣ್ಣದಾಗತಿತ್ತೋ ಮಾರಾಯಾ. ಯಾಕ ಹಿಂಗಾತೋ ಗೊತ್ತಿಲ್ಲ. ಹೆಣಮಕ್ಳಿಗೆ ಮನೀ, ಮಕ್ಳು ಅಂದರ ಜೀವಾ. ಆದರ ನಮ್ಮ ಮಕ್ಕಳು ನಾವಂದುಕೊಂಡಂಗ ಇರೋದಿಲ್ಲ ಅನ್ನೊದು ತಿಳಿಯೋ ಹೊತ್ತಿಗೆ ತಡಾ ಅಗಿಬಿಟ್ಟಿತ್ತೋ..'ಮಾತನಾಡಲಾರದೆ ವೃದ್ಧಜೀವ ಸುಮ್ಮನೆ ಬಿಕ್ಕಳಿಸಿದರೆ, ಅವರನ್ನು ಬಳಸಿ ಕೂತಿದ್ದ ನನಗೆ ರಣಬಿಸಿಲಿನಲ್ಲೂ ಆಗಸ ಮಬ್ಬುಮಬ್ಬು. 

1 comment:

  1. ನಿಮ್ಮ ಲೇಖನ ಚೆನ್ನಾಗಿದೆ.ನನಗೆ ಇಷ್ಟವಾಯ್ತು.ಸರ್ ನನ್ನ ಬ್ಲಾಗ್ sarovaradallisuryabimba.blogspot.in ಗೆ ಭೇಟಿ ಕೊಡಿ

    ReplyDelete