ಎಲ್ಲಾ ಇದ್ದರೂ ದುರ್ಬುದ್ಧಿಯ ಬದುಕು..?
ಎಷ್ಟೇ ಓದಿದ ಮತ್ತು ಸಂಸ್ಕಾರಯುತ ಮನುಷ್ಯ ಎಂದುಕೊಂಡರೂ ವಿಶಾಲ ಮನೋಭಾವನೆ ತಳೆಯುವಲ್ಲಿ ಮಾತ್ರ ಪುರುಷ ಇವತ್ತಿಗೂ ಕಂಜೂಸ್‌ನಂತಾಡಲು ಕಾರಣ ಸಹವರ್ತಿಯ ಮೇಲಿನ ಅಪನಂಬಿಕೆಯಾ ಅಥವಾ ಸ್ವಯಂ ನಂಬಿಕೆ ಇಲ್ಲದಿರುವುದಾ..?
ಬಹುಶಃ ಆ ಕಾಲಕ್ಕೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಓದುವುದೆಂದರೆ ನನ್ನ ಲೆಕ್ಕದಲ್ಲಿ ಅದ್ಭುತ. ಬುದ್ಧಿವಂತಿಕೆಯ ತುಂಡುಗಳು ಮಾತ್ರ ಅಷ್ಟೆ ಓದಲು ಸಾಧ್ಯ ಎನ್ನುವ ತಿಳಿವಳಿಕೆಯ ಜತೆಗೆ, ಅಂತಹ ಸಹಪಾಠಿಗಳನ್ನೇ ಭಯಫಭಕ್ತಿಯಿಂದ ನೋಡುತ್ತಿದ್ದಾ. ಅಜಮಾಸು ಕೊನೆಯ ಆರೆಂಟು ವರ್ಷದ ಗಣಿತ ಮತ್ತು ಇಂಗ್ಲಿಷು ಪೇಪರನ್ನು ಉಸುರುಗಟ್ಟಿ ಪಾಸು ಮಾಡಿದ್ದ ನನಗೆ, ಭಯಪಡಿಸುವ ಮೀಡಿಯಂನಲ್ಲಿ ಸೈನ್ಸ್ ಡಿಗ್ರಿ ಓದುವವರು ಅದ್ಭುತ ಹುಡುಗರಾಗಿ ಕಾಣಿಸುತ್ತಿದ್ದರು.
ನಮ್ಮೂರಿನ ಹಿರಿಯ ಸಹಪಾಠಿಗಳಾದ ಶಂಕರ, ನಾರಾಯಣ, ದಾಕ್ಷಾಯಿಣಿ ಎ ಮೆಡಿಕಲ್ಲು ಎನ್ನುತ್ತಾ ಎ ಹೋಗಿ, ರಜಕ್ಕೆಂದು ಬಂದಾಗೆಲ್ಲ ಅವರದೇ ಟೀಮು ಕಟ್ಟಿಕೊಂಡು ಕೊಂಚವೇ ತಲೆ ಮೇಲೆತ್ತಿ, ಅದುರಿ ಬೀಳದಿದ್ದರೂ ಕನ್ನಡಕ ಸರಿಪಡಿಸುತ್ತಾ, ನನ್ನಂತೆ ನೋಡುತ್ತಾ ನಿಲ್ಲುತ್ತಿದ್ದ ನಮ್ಮ ಕಡೆಗೆ ಮಧ್ಯೆ ಮಧ್ಯೆ ಸಣ್ಣ ನಗುವನ್ನು ಬಿಸಾಕುತ್ತ, ಮುಂದಿನ ಸೆಕೆಂಡ್‌ನಲ್ಲಿ ‘ಯು ನೋ.. ಲಾಸ್ಟ್ ಸೆಮ್..’ ಎಂದು ಸಂಪೂರ್ಣ ಇಂಗ್ಲಿಷಿನ ಗುತ್ತಿಗೆ ಪಡೆದವರಂತೆ ಟುಸ್ಸು.. ಪುಸ್ಸು.. ಅನ್ನುತ್ತಿದ್ದರೆ, ಅಷ್ಟು ದೂರದಲ್ಲಿ ನಿಂತಿರುತ್ತಿದ್ದ ನಾನು ‘ಅವರ ಕೈಯನಾದರೂ ಬರೆದಿರುವ ಚೀಟಿ ಇರಬಹುದಾ, ಅದನ್ನು ನೋಡಿ ಹೀಗೆ ಸರಾಗವಾಗಿ ಮಾತಾಡುತ್ತಾರಾ..’ ಎಂದು ನಿರುಕಿಸುತ್ತಿದ್ದಾ. ಹಾಗೇನೂ ಕಾಣದೇ ಸಣ್ಣ ನಿರಾಸೆಯೂ, ಅದರ ಹಿಂದೇನೆ ಬಾರದ ಭಾಷೆಯ ಬಗ್ಗೆ ಆಂದೋಳನೆಯೂ ಆಗುತ್ತಿತ್ತು.
ಇವತ್ತಿಗೂ ಸರಿಯಾಗಿ ಇಂಗ್ಲಿಷು ಬಾರದ ನಾನು ಯಾವತ್ತೂ ಆ ಭಾಷೆಯ ಗೋಜಿಗೇ ಹೋಗಿಲ್ಲ. ಜಗತ್ತಿನಲ್ಲಿ ಎಲ್ಲಿ ಹೋದರೂ ಬದುಕಬಲ್ಲಷ್ಟು ಅಂಗ್ರೇಜಿ ಬರುತ್ತದೆಯಾದುದರಿಂದ ಓದುವ ಪ್ರಮೇಯ ಬರಲೂ ಇಲ್ಲ. ಅಷ್ಟಕ್ಕೂ ಜಗತ್ತಿನ ಯಾವ ಮೂಲೆಯಲ್ಲೂ ಬದುಕುತ್ತೇನೆನ್ನುವುದಕ್ಕೆ ಭಾಷೆ ಬೇಕಿಲ್ಲ. ಎದೆಯಲ್ಲಿ ಮೀಟರು, ಒಂದಿಷ್ಟು ನಿಜಾಯಿತಿ ಎರಡಿದ್ರೆ ಸಾಕು ಎನ್ನುವ ‘ಚಿರಂಜೀವಿ ರಹಸ್ಯ’ ಗೊತ್ತಾದ ದಿನವೇ, ಇಂಗ್ಲಿಷು ಕಲಿತವರು ಎಂದೇ ಜಾಗ ಪಡೆದಿದ್ದ ನಾಣಿ, ಶಂಕ್ರ, ದಾಕ್ಷಿ ಸೇರಿದಂತೆ ನೂರಾರು ಜನರನ್ನು ಮನಸ್ಸಿನಿಂದ ಹೊರದಬ್ಬಿ ನಿರುಮ್ಮಳವಾಗಿದ್ದಾ. ಆದರೆ ಕುಸುಮ ಮಾತ್ರ ಇಂತಹ ಇಬ್ಬಂದಿತನವನ್ನು ನನಗ್ಯಾವತ್ತೂ ಉಂಟುಮಾಡಿರಲಿಲ್ಲ. ಎಷ್ಟು ಸೂಕ್ಷ್ಮ ಹುಡುಗಿಯೆಂದರೆ ಆಕೆ ಪುಸ್ತಕದ ಪುಟ ತೆರೆಯುವುದೂ ಗೊತ್ತಾಗದಷ್ಟು ನಿಶ್ಶಬ್ದವಾಗಿ ಬದುಕಿಬಿಟ್ಟವಳು. ಹಾಗಾಗೇ ದೇವರು ಆಕೆಯ ಮಿದುಳಿಗೆ ನೇರ ಭೈರಿಗೆ ಮೂಲಕ ಬುದ್ಧಿವಂತಿಕೆ ತುಂಬಿದ್ದನೇನೋ. ನಾನು, ‘ಐವತ್ತು ಪರ್ಸೆಂಟ್ ದಾಟೆದ, ನಂದೂ ಸೆಕೆಂಡ್ ಕ್ಲಾಸ್..’ ಎಂದು ಎದೆಯುಬ್ಬಿಸುವ ಹೊತ್ತಿಗೆ ಆಕೆ, ‘ನೂರಕ್ಕೆ ಎರಡು ಮಾರ್ಕು ಕಮ್ಮಿ ಬಂದುವಲ್ಲ. ಎಲ್ಲಿ ಹೋದವು’ ಎಂಬ ಹುಡುಕಾಟಕ್ಕಿಳಿದಿದ್ದವಳು.
‘ಹೇ ಕುಸ್ಮಿ.. ನಿನ್ನ ಮಾರ್ಕ್ಸಿನ್ಯಾಗ ಮೂರು ಹುಡುಗ್ರು ಪಾಸ್ ಅಗಿರ್ತಾವ ಬಿಡಲೆ. ಎರಡ್ ಹೋದ್ರ ಹೋಗಲಿ..’ ಎಂದು ಗೇಲಿಯಾಡಿದ್ದಾ. ಆಕೆ ಅಷ್ಟೆ ತಣ್ಣಗೆ ‘ಇ ಒಂದು ಉಣಾ ಹಾಕೋದು ಮರತಿದ್ನಿ ನೋಡು, ಅದಕ್ಕ ಎರಡು ಮಾರ್ಕು ಹೋಗಿದಾವು..’ ಎನ್ನುತ್ತಾ ಎದ್ದುಹೋಗಿದ್ದಳು. ನಂತರದ್ದು ಆಕೆಯದು ನಾಗಾಲೋಟ. ರ‍್ಯಾಂಕು ಕೈತಪ್ಪಿದ್ದರೂ ‘ಬೆಂಗ್ಳೂರ್ ನೋಡ್ಬೆಕಲೆ ಒಮ್ಮೆ..’ ಎಂದು ನಾವೆ ಅದೇ ದೊಡ್ಡ ಪ್ರಾಜೆಕ್ಟು ಎಂಬಂತೆ ಮಾತಾಡಿಕೊಳ್ಳುವ ಹೊತ್ತಿಗೆ ಆಕೆ ಅಲ್ಲಿಗೇ ಮೆಡಿಕಲ್ಲು ಓದಲು ಹೊರಟುಹೋಗಿದ್ದಳು.
ಬದುಕಿನ ತಿರುಗಣಿಯಲ್ಲಿ eನೋದಯವಾದಂತೆ ನಾನು ಇದ್ದಕ್ಕಿದ್ದಂತೆ ತಾಂತ್ರಿಕ ತರಬೇತಿ ಅವಧಿಯಲ್ಲಿ ಓದಲು ಎದ್ದು ಕೂತಿದ್ದಾ. ತೆಕ್ಕೆ ತುಂಬ ಮಾರ್ಕು ಕೈಗೆತ್ತಿಕೊಂಡು ಹೊರಬೀಳುವ ಹೊತ್ತಿಗೆ ‘ಆಕೆಗೆ ಮದುವೆ’ ಇತ್ಯಾದಿ ತುಣುಕು ತುಣುಕು ಸುದ್ದಿಗಳು ಲಭ್ಯವಾಗುತ್ತಿದ್ದವು. ಆಗೆಲ್ಲ ‘ಇಬ್ಬರೂ ಡಾಕ್ಟರಂತ.. ತಿಂಗಳಿಗೆ ಒಂದ ಲಕ್ಷ ಪಗಾರ ಬರ್ತದಂತಲೇ..’ ಎಂದು ಹುಡುಗರು ಮಾತಾಡುತ್ತಿದ್ದರೆ ನಾನು ಒಂದರ ಮುಂದೆ ಎಷ್ಟು ಸೊನ್ನೆ ಹಾಕಿದರೆ ಲಕ್ಷ ಆದೀತು ಎನ್ನುತ್ತ ಬಟ್ಟು ಮಡಚುತ್ತಾ ಎಣಿಸಿದರೂ ಲೆಕ್ಕ ತಪ್ಪುತ್ತಿದ್ದಾ. ಕಾರಣ ಆಗೆ ಒಂದು ಸಾವಿರ ರೂ. ಪಗಾರ ಕೂಡಾ ಮುಟ್ಟಿರಲಿಲ್ಲ ನಾನು. ಆದರೆ ಬೆಂಗಳೂರಿನ ಗಲ್ಲಿಗಳಿಗೆ ಪರಿಚಿತನಾಗುವ ಮೊದಲೇ ಬಾರುಗಳಲ್ಲಿ ಅನಾಮಧೇಯನಾಗಿ ಗ್ಲಾಸೆತ್ತುತ್ತಿದ್ದೇನಲ್ಲ, ಆ ಕೆಲಸ ಜಗತ್ತನ್ನು ನನಗೆ ತುಂಬ ಚೆನ್ನಾಗಿ ಪರಿಚಯಿಸಿಬಿಟ್ಟಿತು.
‘ವಸಂತ ನಗರದ ನಿಮ್ಮ ಕ್ಲಿನಿಕ್ಕಿಗೆ ಬರ್ತೀನಿ.. ನಿನ್ನ ಮನೆಗಿಂತ ದವಾಖಾನಿ ಹುಡಕೋದು ಬೇಷ್‌ಬಿಡ..’ ಎನ್ನುತ್ತಾ ಕುಸುಮಳಿಗೆ ಮಾತಾಡುತ್ತಿದ್ದರೆ, ‘ಬೇಡ ಬೇಡ, ದವಾಖಾನಿಗಂತೂ ಬರೋದ ಬ್ಯಾಡ ಮಾರಾಯ, ಮನೀಗೆ ಬಾ. ನಾ ಹೇಳಿದಾಗ ಬಾ.. ಅರ್ಜೆಂಟ್ ಮಾಡ್ಬ್ಯಾಡ’ ಎನ್ನುತ್ತಾ ಪ್ರತಿ ಹಂತದಲೂ ಸೂಕ್ತ ಸಂದೇಶ ರವಾನಿಸತೊಡಗಿದ್ದು, ಇವಳೇನಾ ಹಳೆಯ ಕುಸ್ಮಿ ಎನ್ನಿಸತೊಡಗಿತ್ತು.
ಚೆಂದದ ಮನೆ ಎನ್ನುವುದಕ್ಕಿಂತಲೂ ಪುಟಾಣಿ ಬಂಗಲೆ ಎಂದರೆ ಸರಿಹೋದೀತೇನೋ. ತಿವಾಸಿಯ ಮೇಲೆ ಎಲ್ಲಿ ನನ್ನ ಬೂಟುಗಳ ಮಾರ್ಕು ಮೂಡುತ್ತವೆಯೇನೋ ಎನ್ನಿಸುವಷ್ಟು ಚೆಂದ, ಸ್ವಚ್ಛ, ಹಸಿರು ಇತ್ಯಾದಿ ನಳನಳಿಸುತ್ತಿತ್ತು. ಪ್ರತಿ ಕೋಣೆಯಲ್ಲೂ ಸಾಗುವಾನಿಯ ಕೆಲಸ ಅಲ್ಲ ನಿಂತು ನೋಡುವಂತೆ ಮಾಡುತ್ತಿತ್ತು. ಎದೆಯೆತ್ತರದ ಆವಾರದಾಚೆಗೆ ಒಳಗಿನ ಬದುಕಿನ ಗಂಧಗಾಳಿಯೂ ಸೋಕದಂತಿತ್ತು. ‘ಏನ್ ತಗೋತಿ..?’ ಎನ್ನುವ ಮೊದಲೇ, ‘ಸ್ವಲ್ಪ್ ಸಕ್ರಿ ಮತ್ತ ಚಾ ಪುಡಿ ಜಾಸ್ತಿ.. ಚಾನೆ ಇರ್ಲಿ..’ ಎಂದಿದ್ದಾ. ವಯಸ್ಸು ಮತ್ತು ಓದು, ಜತೆಗೆ ವೃತ್ತಿಯ ಅನುಭವಕ್ಕನುಗುಣವಾಗಿ ಬಂದುಬಿಡುವ ಗಾಂಭೀರ್ಯವಿದೆಯಲ್ಲ ಅದು ಆಕೆಯ ಮುಖದಲ್ಲೂ ಎದ್ದು ಕಾಣುತ್ತಿತ್ತು. ಯಾರೇ ಇರಲಿ ಅವರವರ ವೃತ್ತಿಯಲ್ಲಿ ಒಳಗೊಳ್ಳುವಿಕೆಯಿಂದ ಅವರ ದೇಹಭಾಷೆ ಕೂಡಾ ಅವರಿಗರಿವಿಲ್ಲದೆ ಬದಲಾಗುತ್ತಿರುತ್ತದೆ. ಹಾಗಾಗಿ ಎದುರಿನವರಿಗೆ ಅರಿವಾಗುವ ಮೊದಲೇ ಒಂದು ರೀತಿಯ ಗೌರವವೂ ಬರುವುದು ಸುಳ್ಳಲ್ಲ. ಹಾಗಾಗಿ ಕುಸುಮ ಎನ್ನುವ ಬಾಲ್ಯಕಾಲದ ಗೆಳತಿಯ ಡಾಕ್ಟರಿಕೆ ನನಗೆ ಈಗಲೂ ಸೋಜಿಗಮಯ ವೃತ್ತಿ. ಬಹುಶಃ ವೈದ್ಯರು ಮತ್ತು ಲಾಯರುಗಳು ಕಂಡಷ್ಟು ತರಹೇವಾರಿ ಬದುಕಿನ, ಸೂಕ್ಷ್ಮ ಮತ್ತು ಸಾವಿರ ತರಹದ ಕತೆಗಳನ್ನು ಇನ್ಯಾರೂ ಕಾಣಲಿಕ್ಕಿಲ್ಲ. ಅದನ್ನೆ ಕುಸುಮಳಿಗೆ ವಿವರಿಸುತ್ತಿದ್ದರೆ.. ‘ಕತೆ ಅಂತೆ.. ಸುಮ್ನಿರೋ ಮಾರಾಯ. ಹಾಸ್ಪಿಟಲ್‌ಗೆ ಬರೋ ಪೇಷಂಟ್ಸ್ ಇನ್ಮುಂದೂ ಬರೋ ಹಂಗಾದರ ಸಾಕು ಅನ್ನೋ ಹಂಗಾಗೇದ ನೋಡು. ಎಷ್ಟು ಕಲತಿದ್ದರೇನು, ಗಂಡನ ಕೈಯಾಗೆ ಸಿಕ್ಕಮ್ಯಾಲೆ ಬದುಕು ಚೌಕಟ್ಟಿನ್ಯಾಗೇ ಸುತ್ತದ.. ಇರ್ಲಿ.. ನಿನ್ನ ಕತೀ ಏನು. ಬರೀ ಕತೀ ಬರ್ಕೊಂಡೆ ಓಡಾಡ್ತಿದ್ದೀಯೇನು..’ ಎನ್ನುತ್ತಿದ್ದರೆ ಮೆತ್ತನೆಯ ತಿವಾಸಿಯ ಮೇಲೆ ಇರಿಸಿದ್ದ ಪಾದಗಳಿಗೆ ಅರಿಯದ ಹಿಂಸೆ. ಇಬ್ಬರಿಗೂ ಸಮಾನ ವೃತ್ತಿ, ಡಾಕ್ಟರರು. ಆದರೆ ಅವನು ಮಾತ್ರ ಗಂಡಸಿನ ಬದುಕಿನ ನಿರ್ಲಜ್ಜ ಧೋರಣೆಯಿಂದ ಹೊರತಾಗೇ ಇಲ್ಲ.
ಆಕೆ ಯಾವುದೇ ಪುರುಷ ರೋಗಿಗಳನ್ನು ನೋಡುವಂತಿಲ್ಲ, ಅವರೊಡನೆ ಮಾತಾಡುವಂತಿಲ್ಲ. ಒಮ್ಮೆ ಚಿಕಿತ್ಸೆ ಪಡೆದ ರೋಗಿ ಅದೇ ವೈದ್ಯರನ್ನು ಬಯಸುವುದು ಸಹಜ. ಹಾಗಾಗಿ ಅವನು ಖಾಲಿ ಇದ್ದರೂ ಬಾರದೆ ಪಕ್ಕದ ಕ್ಯಾಬಿನ್‌ನಲ್ಲಿದ್ದ ಕುಸುಮಳ ಬಳಿ ಚಿಕಿತ್ಸೆಗೆ ರೋಗಿಗಳು ಸಾಲು ನಿಲ್ಲುತ್ತಿದ್ದರೆ ಅವನು ಕೂತ ಉರಿಯುತ್ತಾನೆ. ಅಷ್ಟಕ್ಕೂ ಮಿಗಿಲಾಗಿ ಪೇಷಂಟ್ಸ್ ಬಂದು ಹೋಗುತ್ತಿದ್ದಂತೆ, ‘ಅವ್ನೇನು... ತೋರ್ಸಾಕ ಬಂದಿದ್ನೇನು? ಯಾಕ ಎ ಪೇಷಂಟ್ಸ್‌ಗೆ ನೀನ ಬೇಕು..? ನಿಂದೇನ್.. ತೋರಸ್ತಿ ಅಂಥಾದ್ದು, ಅದೂ ನಾನು ನೋಡಿಲ್ಲದ್ದು..’ ಎಂದು ಪರಮ ಕೊಳಕು ಶಬ್ದಗಳಿಂದ ಹೀಯಾಳಿಸುತ್ತಾನೆ. ಇತ್ತ ಬಿಡುವಂತಿಲ್ಲ ಅತ್ತ ಬದುಕುವಂತೆಯೂ ಇಲ್ಲ. ಬರುಬರುತ್ತಾ ಕ್ರಮೇಣ ಮಹಿಳೆಯರನ್ನಷ್ಟೆ ನೋಡಿದರೂ ಅದಕ್ಕೂ ಒಂದು ಫರ್ಮಾನು ರೆಡಿ ಇದೆ. ‘ಇನ್ಮೇಲೆ ದಿನಕ್ಕ ಎರಡು ಸಾವಿರ ರೂ. ಮಿನಿಮಮ್ ಕಲೆಕ್ಷನ್ ಆಗಬೇಕು. ನಾ ಹೇಳಿದ ಮೆಡಿಸಿನ್ ಮಾತ್ರ ಬರೀಬೇಕು..’ ಎನ್ನುತ್ತಾ ಕುತ್ತಿಗೆ ಮೇಲೆ ಕೂತಿದ್ದಾನೆ. ಫರ್ಮಸಿಗಳ ಜತೆ ಕೈ ಸೇರಿಸಿದ್ದು, ಅದರಲ್ಲೂ ದುಡ್ಡು ಮಾಡಿಕೊಳ್ಳುವ ಹವಣಿಕೆ ಅವನದ್ದಾದರೆ, ಪಾಪ ಹೆಣ್ಣುಮಕ್ಕಳು, ಬಡವರು ಎಂದು ಮರುಗುವ ಕುಸುಮಳ ಸರಳ ಬದುಕು ಅರ್ಧದಾರಿಯಲ್ಲಿ ಬೆತ್ತಲಾಗುತ್ತಿದೆ.
‘ಅವನಿಗೆ ಹೆಣ್ಣಂದರ ಹೆಣ್ಣು ಅಷ್ಟ. ನೂರಾರು ಜನ ಗಂಡಸರ ಬಂದರೂ ನನಗ ಪೇಷಂಟ್ಸ್ ಅಷ್ಟ. ಅವರದ್ದೇನು ನೋಡ್ತಿ ಅಂತ ಕೇಳಿದರ ಏನ್ ಹೇಳಲಿಕ್ಕಾಗ್ತದ..? ಇಷ್ಟೆಲ್ಲ ಓದಿ, ಪಾಪದ ಪೇಷಂಟ್ಸ್‌ನ್ನ ಮಿಸ್‌ಗೈಡ್ ಮಾಡೊ ಮನಸ್ಸು ನನಗಿಲ್ಲ. ಅದರೆ ಇವ್ನ ಕೈಗೆ ಮತ್ತು ಬರೀ ಲೆಕ್ಕಾಚಾರಕ್ಕ ಸಿಕ್ಕು ಬದುಕು ಹೈರಾಣಾಗೇದ ನೋಡು. ಅಲ್ಲ ಈ ಗಂಡಸರಿಗೆ ಹಣ, ಓದು, ಚೆಂದನ ಹೆಂಡತಿ, ಮರ್ಯಾದಿ ಎ ಇದ್ರೂ ಇಂಥಾ ದುರ್ಬುದ್ಧಿ ಯಾಕ ಇರ್ತದ..?’.
ಕುಸುಮ ಮಾತಾಡುತ್ತಾ ತಲೆ ತಗ್ಗಿಸಿ ಕತೆಯಾಗುತ್ತಿದ್ದರೆ ತಲೆ ಮೇಲೆತ್ತುವ ಧೈರ್ಯ ನನಗಾದರೂ ಎಲ್ಲಿಂದ ಬಂದೀತು ..? ಅಸಲಿಗೆ ಇದಕ್ಕೆ ಅಪವಾದಗಳಿವೆಯಾದರೂ ಕುಸುಮಳಂಥವಳ ಬದುಕಿಗೆ ಬದಲಾವಣೆ ಬರುತ್ತದಾ..? ಗೊತ್ತಿಲ್ಲ.ಕಾರಣ
No comments:
Post a Comment