Sunday, September 11, 2016

ನಾನೂ ಸಹಕರಿಸದೆ ಉಳಿದಿದ್ದರೆ..?
‘ಫಾರಿನ್‌ನಲ್ಲಿ ಮದುವೆಗೂ ಮೊದಲು ಮೆಡಿಕಲ್ ಸರ್ಟಿಫಿಕೇಟ್ ಕೇಳ್ತಾರಂತೆ ಅಂತ ಓದಿದ ನೆನಪು. ನಮ್ಮಲ್ಲೂ ಅದನ್ನೇ ಜಾರಿಗೆ ತಂದು ಗಂಡನಾಗುವವ ಸರಿ ಇದ್ದಾನ ಇಲ್ವಾ ಅಂತಾ ನೋಡ್ಕೊಂಡು ಈಗಿನ ಹುಡುಗೀರು ಮದುವೆ ಆಗೋದು ಒಳ್ಳೆಯದು ನೋಡು. ನಿನಗಿದೆ ಗೊತ್ತಿರಬೇಕಲ್ಲ..’ ಎನ್ನುತ್ತ ಕ್ರಾಂತಿಕಾರಕ ಅನಧಿಕೃತ ಕಾನೂನನ್ನು ವಿದೇಶದಂತೆ ನಮ್ಮ ಮಡಿವಂತ(?) ಸಮಾಜದಲ್ಲಿ ಹೇರಲೇಬೇಕು ಎನ್ನುವ ರೀತಿಯಲ್ಲಿ  ಫಾರ್ಮಾನು ಹೊರಡಿಸುತ್ತಾ  ಫೋನಿನ ಎಗಾದಿಗಾ ನನಗೆ ಕ್ಲಾಸ್ ತೆಗೆದುಕೊಳ್ಳತೊಡಗಿದ್ದ ತುಂಗಳಿಗೆ ಅಸಲಿಗೆ ಆದ ಲುಕ್ಸಾನಾದರೂ ಏನು ಎನ್ನುವುದೇ ಆರಂಭದಲ್ಲಿ ನನಗರ್ಥವಾಗಿರಲಿಲ್ಲ. ಹೆಚ್ಚಿನಂಶ ಹಣ, ಒಳ್ಳೆಯ ನೌಕರಿ ಜೊತೆ ಸೆಟ್ಲ್, ಎಲಿಜಿಬಲ್ ಬ್ಯಾಚುಲರ್ (?) ಎನ್ನುವ ಗಂಡು ಹುಡುಗರಿಗೆ ಈಗಲೂ ಫುಲ್ ಡಿಮ್ಯಾಂಡು. ಪ್ರತಿಯೊಬ್ಬ ಹೆಣ್ಣುಮಕ್ಕಳ ಕುಟುಂಬ ಯಾವತ್ತಿನಿಂದಲೂ ಇದಕ್ಕೆ ಮಹತ್ವ ಕೊಡುತ್ತಾ ಬಂದಿದ್ದು ಇತಿಹಾಸ. ಜಾತಕ ನೋಡುವ ತಾಂತ್ರಿಕ ಪ್ರಕ್ರಿಯೆಯಲ್ಲಿ (ಅದಾಗುತ್ತದೋ ಇಲ್ಲವೋ ನಂತರ ಮಾತು ಆಚೆಗಿರಲಿ) ಎಲ್ಲದರಂತೆ ಮೈಥುನಕ್ಕೆ ಅದರದ್ದೇ ಆದ ಪ್ರಾಶಸ್ತ್ಯದ ಸ್ಪಷ್ಟ ಲೆಕ್ಕಾಚಾರ ಇರುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇದ್ದರೂ ಅದನ್ನು ಗಣಿಸಿದವರು ಕಡಿಮೆ. ಅದೇನೆ ಇದ್ದರೂ ಸಂಸಾರದ ಬಹಿರಂಗದ ಸರ್ವ ಗುಣಗಳಿಗೆ ಹುಡುಗರನ್ನು ತೂಗಿ ನೋಡುವ ನಮ್ಮ ಪದ್ಧತಿ ಮತ್ತು ನಂಬುಗೆಗಳಲ್ಲಿ ‘ಮದುವೆಯ ನಂತರ ಹುಡುಗ ಸಶಕ್ತವಾಗಿ ದಾಂಪತ್ಯವನ್ನೂ ನಿಭಾಯಿಸುತ್ತಾನಾ..? ಅದನ್ನೂ ನೋಡಬೇಕು..’ ಎನ್ನುವ ಪ್ರಶ್ನೆಗೆ ಯಾವ ಕಿಮ್ಮತ್ತೂ ಇಲ್ಲದಿರುವುದೆ ತುಂಗಳ ಕ್ರೋಧಕ್ಕೆ ಕಾರಣವಾಗಿತ್ತು.
ಇಂದು ವಿಷಯ ಹೇಳಬೇಕು. ಹುಡುಗನಿಗಿಂತಲೂ ನಾಲ್ಕಾರು ವರ್ಷಕ್ಕೆ ಚಿಕ್ಕವಳಿರುವ ಹುಡುಗಿ ಇವತ್ತು ಸಣ್ಣ ಅಂದಾಜಿನ ಗಂಡನಾಗುವವ ಸರಿ ಇದ್ದನಾ ಇಲ್ಲವಾ ಎನ್ನುವಷ್ಟು ಪ್ರಬುದ್ಧಳಾಗಿರುತ್ತಾಳೆ. ಅದರಲ್ಲೂ ಇತ್ತೀಚಿನ ಬಿಡಿ ಕಳೆದೆರಡು ದಶಕಗಳ ಹಿಂದೆಯೂ ಹುಡುಗಿಯರು ಅಗತ್ಯಕ್ಕಿಂತ ಮೊದಲೇ ಗಾಂಭೀರ್ಯ ಮತ್ತು ತಕ್ಕಷ್ಟು ಪ್ರೌಢಿಮೆಯನ್ನೂ ಪಡೆದಿದ್ದರು ಎಂದರೂ ತಪ್ಪಿಲ್ಲ. ಅದಕ್ಕೆ ಅಪ್ಪಟ ಉದಾಹರಣೆ ತುಂಗಳ ಸ್ನೇಹಿತೆ ಸುಶೀಲ. ‘..ನೋಡೇ ಲವ್ವರ್ ಅಂತೀಯಾ. ಒಂದು ವರ್ಷದಿಂದ ಓಡಾಡ್ತ ಇದ್ದೀಯ. ಮನೆಯಲ್ಲೂ ಒಪ್ಪಿಗೆ ಆಗಿದ್ದು ಯಾವ ನಿರ್ಬಂಧನೂ ಇಲ್ಲ ನಿಮಗೆ. ಹಾಗಿದ್ದಾಗಲೂ ಅವನು ಯಾವುದಕ್ಕೂ ಫೋರ್ಸ್ ಮಾಡ್ತಿಲ್ಲ ಅಂದರೆ, ದೈಹಿಕ ಸಾಂಗತ್ಯಕ್ಕೆ ಪ್ರಯತ್ನಿಸಿಲ್ಲ ಅಂದರೆ ಖಂಡಿತ ಏನೋ ಪ್ರಾಬ್ಲಂ ಇರಬೇಕು.. ಹುಷಾರಾಗಿರು. ಇಲ್ಲದಿದ್ರೆ ಹುಡುಗ್ರು, ಗಂಡಸರು ಹಿಂಗೆ ತೆಪ್ಪಗಿರೋ ಪ್ರಾಣಿಗಳೇ ಅಲ್ಲ..’ ಎಂದು ಅದ್ಯಾವ ಬಾಯಿಯಿಂದ ಸುಶೀಲ ನುಡಿದಿದ್ದಳೊ ಅಥವಾ ಅದಿನ್ನೆಂಥಾ ಅನುಭವ ಆಕೆಗೆ ಜೀವನದ ಪಾಠ ಕಲಿಸಿತ್ತೋ ಗೊತ್ತಿಲ್ಲ. ಆದರೆ ಹತ್ತಾರು ವರ್ಷಗಳ ಮೊದಲೇ ಹಾಗೆಂದು ಬಿಟ್ಟಿದ್ದ ಆಕೆಯ ಎಚ್ಚರಿಕೆ, ನಿಜವಾಗಿಬಿಟ್ಟಿದ್ದು ಮಾತ್ರ ತುಂಗಳ ಪಾಲಿಗೆ ದುರದೃಷ್ಟ.
ನನ್ನೊಂದಿಗೆ ಸೈಕಲ್ ಸವಾರಿಯಿಂದ ಹಿಡಿದು ಹೊಂಡದ ಪೌಳಿಯ ಮೇಲೆ ನಿಂತು ನಮ್ಮ ಸಮಸಮಕ್ಕೆ ನೀರಿಗೆ ಡೈವ್ ಹೊಡೆಯುತ್ತಿದ್ದ ಹುಡುಗಿ ತುಂಗ ಒಂದು ಹಂತಕ್ಕೆ ಬರುವವರೆಗೂ ಆಕೆಯನ್ನು ಹುಡುಗಿ ಎಂದು ಯಾರೂ ಕನ್ಸಿಡರೇ ಮಾಡಿರಲಿಲ್ಲ. ಅಷ್ಟಕ್ಕೂ ನಮ್ಮೆಲ್ಲರ ಗುಂಪಿನಲ್ಲಿ ಸೈಕಲ್ಲು ಸೇರಿದಂತೆ ಪ್ರತಿಯೊಂದಕ್ಕೂ ಕಟ್ಟಕಡೆಯದಾಗಿ ಪಕ್ಕಾದವನು ನಾನು. ಅಂದರೆ ಸೀಟಿನ ಮೇಲೆ ಕೂತರೆ ಸರಾಗವಾಗಿ ಕಾಲು ನೆಲಕ್ಕೆ ತಾಗುವಷ್ಟಾಗುವವರೆಗೂ ನನಗೆ ಸೈಕ ಬರುತ್ತಿರಲಿಲ್ಲ. ಹಾಗಾಗಿ ಹಿಂದಿನಿಂದ ಜೋರಾಗಿ ಆಕೆಯ ಸೈಕಲ್ಲು ತಳ್ಳುತ್ತಾ ಲಬಕ್ಕನೆ ಹಾರಿ ಸೀಟು ಹಿಡಿದು ಹಿಂದೆ ಹತ್ತಿ ಕೂರುವುದಷ್ಟೆ ನನ್ನ ಪಾಲಿಗಿತ್ತು. ನಮ್ಮೆಲ್ಲರ ತಿದಿಯೊತ್ತುವಂತೆ ಅಟ್ಟಾಡಿಸಿ ಬಡಿಯಲೂ ಹಿಂದೆ ಮುಂದೆ ನೋಡದ ಕಡ್ಡಿಕಡ್ಡಿ ಹುಡುಗಿ ತುಂಗ ನೀರಿಗೆ ಬಿದ್ದರೆ ಅಪ್ಪಟ ಜಲಕನ್ನಿಕೆಯ ಹಾಗೆ ಕೈ ಬೀಸುತ್ತಿದ್ದಳು. ನಾವೊಂದಿಷ್ಟು ಹುಡುಗರು ‘..ಯೇ ಅಲ್ಲಿ ನೀರಾಗ ಸುಳಿ ಅದಂತ. ಒಳಗ ಎಳ್ಕೋತದಂತ ಅಲ್ಲಿಗೆ ಹೋಗೋದು ಬ್ಯಾಡ..’ ಎಂದು ಕೈಲಾಗದ ದೂರಕ್ಕೆ ಅಪಾಯದ ನೆಪ ಹೇಳುತ್ತಾ ವಾಪಸ್ಸು ಕೈಬೀಸಿ ದಂಡೆಗೆ ಬರುತ್ತಿದ್ದರೆ ಆಕೆ ಮಾತ್ರ ಅದ್ಯಾವುದಕ್ಕೂ ಕ್ಯಾರೆ ಅನ್ನದೆ ಆಚೆ ದಂಡೆಗೆ ನಿಂತು ನಮ್ಮನ್ನೆ ಅವಮರ್ಯಾದೆಗೆ ಈಡು ಮಾಡುತ್ತಿದ್ದಳು. ಅವಳೊಂದಿಗೆ ಕೆಲವು ಕಾಲ ಒಡನಾಡಿದ ಸಮಯದ ಸರಪಳಿಯಲ್ಲಿ ಅಷ್ಟೇ ಬೇಗ ಅವರಪ್ಪನಿಗೆ ವರ್ಗ ಆಯಿತು ಎನ್ನುತ್ತಾ ದೂರದ ಮುಂಡಗೋಡು, ನಂತರ ಹೆಬ್ರಿ ಹೀಗೆ ಎ ಅಪ್ಪನ ಹಿಂದೆ ಸಂಸಾರ ಸರಿದುಹೋಗಿತ್ತು.
ಮಧ್ಯದ ಕಾಲಾವಧಿಯಲ್ಲಿ ಮೊಬೈಲು ಎಲ್ಲರ ಬದುಕಿನಲ್ಲಿ ಬಣ್ಣಗಳ ತರಂಗಗಳನ್ನೆಬ್ಬಿಸುವ ಹೊತ್ತಿಗೆ ಮತ್ತೆ ದೂರ ದೂರಗಿದ್ದವರು ಕ್ರಮೇಣ ಸಂಪರ್ಕಕ್ಕೂ ಸಿಗತೊಡಗಿ ಯಾವ ಊರು ದೇಶ ಎಂಬೆ ಅಂತರಗಳು ಈಡಾಗುವ ಹೊತ್ತಿಗೆ ತುಂಗ ನಾನೀಗ ಬೆಂಗಳೂರ ಇದೀನೋ ಎನ್ನುತ್ತಾ ಮತ್ತೆ ತಗಲಿಕೊಂಡಿದ್ದಳು. ಅತ್ತೆ- ಮಾವ ಸುಖಿ ಕುಟುಂಬ ಎನ್ನುವ ಎಲ್ಲಾ ಸವಲತ್ತುಗಳೊಡನೆ ತುಂಗ ಪುಟಾಣಿ ಬಂಗಲೆಯಲ್ಲಿ ಬದುಕುತ್ತಿದ್ದಾಳೆ. ಮಕ್ಕಳಿಲ್ಲ ಆಗುತ್ತಿಲ್ಲ ಎನ್ನುವ ದೂರು ಹಾಗು ಅಸಮಾಧಾನ ಆಕೆಯ ಮೇಲಿದೆ. ಅದಕ್ಕಾಕೆ ಉತ್ತರಿಸಲಾರಳು.
ಮದುವೆಯಾದ ಮೊದಲ ದಿನದಿಂದಲೇ ಆಕೆಯನ್ನು ದೂರ ಇಟ್ಟಿರುವ ಗಂಡನೆದುರಿಗೆ ಇರುವ ನೆಪ ಆತನೊಬ್ಬ ಗುರುಗಳ ಆರಾಧಕ. ಅವನ ಆರಾಧನೆಯಲ್ಲಿ ದಾಂಪತ್ಯಕ್ಕೆ ಸ್ಥಾನವಿಲ್ಲ. ತಂದೆ, ತಾಯಿ, ಗುರು ಸೇವೆಯೇ ಮುಖ್ಯ ಪ್ರಿಯಾರಿಟಿ. ಅದಕ್ಕೆ ‘..ನಾವು ಹಿಂಗೇ ಇದ್ದು ಬಿಡೋಣ. ನನಗೇನೂ ಬೇಕು ಅಂತಾ ಇಲ್ಲ. ದೀಕ್ಷೆ ತೊಗೊಂಡಿದ್ದೀನಿ’ ಇತ್ಯಾದಿ ಸತ್ಯಗಳು (?) ಅವನ ಬಾಯಿಂದ ಬಂದಾಗ ದಂಗಾದೋಳು ತುಂಗ. ಆದರೆ ಇದನ್ನು ಸುಧಾರಿಸುವುದಾದರೂ ಹೇಗೆ..? ಆಕೆಯ ಅಣ್ಣ, ಹತ್ತಿರದ ವರಸೆಯ ಸೋದರ ಎ ಹೇಳಿ ನೋಡಿದರೂ ಏನೂ ಉಪಯೋಗವಾಗಲೇ ಇಲ್ಲ. ಮೂಲತ: ಅವನ ಏನಾದರೂ ಸಮಸ್ಯೆ ಇದೆಯಾ ಎನ್ನಲು ಅದಕ್ಕಾದರೂ ಒಪ್ಪಬೇಕಲ್ಲ. ಬೇರಾವ ಕಿರಿಕಿರಿಯೂ ಇಲ್ಲವೇ ಇಲ್ಲ. ಆದರೆ ‘ಮದುವೆ ಗಂಡಿಗೆ ಅದೇ ಇಲ್ಲ, ನೀರಿಗೆ ಚಾಣಗಿ ಹಿಡಿದರ ಏನ ಬಂತು’ ಎನ್ನುವಂತೆ ಆತ ತನ್ನ ಸನ್ಯಾಸತ್ವದ ವರಸೆಗೆ ಪಕ್ಕಾಗಿದ್ದಾನೆ. ಇಬ್ಬರಿಗೂ ಬೇಕಾದ ಆತ್ಮೀಯರು ಅವರನ್ನು ಕೂರಿಸಿಕೊಂಡು ಮಾತಾಡಿದರೆ, ಪುಣ್ಯಾತ್ಮ ‘ನಿನಗ ಬೇಕಾದಾರ ನನ್ನ -ಂಡ್ಸ್ ಬರ್ತಾರ. ಎಲ್ಲಾ ಗುಟ್ಟಾಗೇ ಇರ್ತದ’ ಎನ್ನಬೇಕಾ..? ಯಾರಿಗಿದೆ ಇಂಥಾ ಫ್ರೀ ಆಫರ್..?
‘..ಯಾರಿಗರೇ ಹೇಳಿದರ ನಂಬೊ ಮಾತಾ ಇದು. ಕೂಡಿಕಿ ಮಾಡ್ಕೊಂಡು ಇರು ನನಗೇನೂ ಬೇಜಾರಿಲ್ಲ ಅನ್ನೋ ಗಂಡನ್ನ ಕಟ್ಕೊಂಡು ಬಾಳೇ ಮಾಡು ಅಂದರ..? ಅವನಿಗೆ ಅದೇನು ಪ್ರಾಬ್ಲಂ ಐತೋ ಗೊತ್ತಿಲ್ಲ. ಅದರ ಏನೂ ಗೊತ್ತೇ ಆಗದಂಗ ಇದ್ದು ಬಿಟ್ರ ಬಗೆಹರಿಸೋದಾದರ ಹೆಂಗೆ..? ಅಲ್ಲ ಸಂತೋಷಾ.. ಗಂಡ ಹೆಂಡತಿ ಒಟ್ಟಿಗಿದ್ದರ ತಾನೆ ಮಕ್ಕಳಾಗೋದು. ನಿಮ್ಮ ಮಗನಿಗೆ ಕೇಳ್ರಿ ಅಂತ ಅತ್ತಿ, ಮಾವಂಗ ಉತ್ರಾ ಕೊಡಬಹುದು. ಆದರೆ ನನ್ನ ಗಂಡ ನನ್ನ ಜತೆ ಮಕ್ಕೊಳೋದಿಲ್ಲ, ಅದಕ್ಕೆ ಮಕ್ಕಳಾಗ್ತಿಲ್ಲ ಅಂತ ಯಾವ ಹೆಣ್ಣಮಗಳು ಹೇಳ್ಕೋತಾಳ ಹೇಳು ನೋಡೋಣ. ಜನಕ್ಕೆ ಮಾತಾಡಲಿಕ್ಕೆ ಸುಲಭ. ಬಂಗಾರದ ಪೆಟಗಿ ಒಳಗಿದ್ದು ಅನುಭವಿಸೋದು ನನಗ ಗೊತ್ತು’ ಎನ್ನುತ್ತಿದ್ದರೆ ಹೀಗೂ ಜನ ಸುಖಾಸುಮ್ಮನೆ ತಂತಮ್ಮ ಕಾಲ ಮೇಲೆ ಕಲ್ಲು ಚೆಲ್ಲಿಕೊಳ್ಳುತ್ತಾರಾ ಅನ್ನಿಸಿದ್ದು ನಿಜ.
ಅಸಲಿಗೆ ಅವನದ್ದು ಸನ್ಯಾಸತ್ವವಾ, ದೈಹಿಕ ಅಸಮರ್ಥತೆಯಾ ಅತ್ತ ಇರಲಿ. ಆದರೆ ದಾಂಪತ್ಯದಲ್ಲಿ ಲೈಂಗಿಕತೆ ಕೇವಲ ತೀಟೆಯಲ್ಲ. ಅದೊಂದು ಕೊನೆಯವರೆಗೂ ದಂಪತಿಗಳನ್ನು ಬಿಗಿಯಾಗಿರಿಸುವ ಮಧುರ ಅನುಭೂತಿಯ ಬಾಂಧವ್ಯವೂ ಹೌದು. ಅಕಸ್ಮಾತ್ ಮದುವೆಯ ನಂತರ ಹೆಣ್ಣೊಬ್ಬಳು ನಾನು ಸನ್ಯಾಸಿ ಹಂಗಿರ್ತೀನಿ, ನನಗೆ ಆಸಕ್ತಿ ಇಲ್ಲ, ಇದು ಆರಾಧನೆ ಎಂಬಿತ್ಯಾದಿ ಕಾರಣಗಳೊಂದಿಗೆ, ಗಂಡನಿಂದ ದೂರ ಉಳಿದ ಇತಿಹಾಸ ಇದೆಯಾ..? ಯಾವುದೇ ತೀರ ಹೌದೇ ಎನ್ನುವಂತಹ ಅನಾರೋಗ್ಯದ ಕಾರಣಗಳಿದ್ದರೂ ಸಹಿಸಿಕೊಂಡು ಮಲಗಿದ್ದಿದೆಯೇ ಹೊರತು ಹೆಂಡತಿಯಾದವಳು ಹೀಗೆ ಗೆರೆ ಕೊರೆದದ್ದೇ ಇಲ್ಲ. ಹಾಗಿದ್ದೇ ಆದಲ್ಲಿ ಮೊದಲ ವಾರವೇ ಆಕೆಯನ್ನು ಯಾವ ಮುಲಾಜೂ ಇಲ್ದೆ, ‘ನನ್ನ ಜತೆ ಇವಳು ಮಲಗುತ್ತಿಲ್ಲ’ ಎಂದು ನಿರ್ಲಜ್ಜವಾಗಿ ಹರಾಜು ಹಾಕಿಯೇ ಮನೆಯಿಂದ ಹೊರದಬ್ಬುತ್ತಿದ್ದರು, ಇಲ್ಲಾ ಆಕೆ ತಡೆದುಕೊಂಡಷ್ಟು ದಿನವೂ ರೇಪು ನಿರಂತರವಾಗಿರುತ್ತಿತ್ತು. ಹೆಂಡತಿಯನ್ನು ಒತ್ತಾಯದಿಂದ ಸೇರುವುದೂ ರೇಪೆ ಅಲ್ವಾ..? ದಿನಗಳ ಲೆಕ್ಕಾಚಾರ ನನಗೆ ಗೊತ್ತಿಲ್ಲ. ಆದರೆ ಇವತ್ತಿಗೂ ನನ್ನ ಗಂಡ ನನಗೆ ಸರಿಯಾಗಿ ಸಾಂಗತ್ಯ ಕೊಡುತ್ತಿಲ್ಲ ಎಂದು ದೂರು ಕೊಟ್ಟು ದಾಂಪತ್ಯ ಸಂಬಂಧಕ್ಕೆ ಎಳ್ಳು ನೀರು ಬಿಡುವ ಹೆಣ್ಣುಮಕ್ಕಳನ್ನು ನಾನು ಕಂಡಿಲ್ಲ ಇಲ್ಲಿವರೆಗೂ. ಅಕಸ್ಮಾತ್ ಹಾಗಾಗಿದ್ದೇ ಆದಲ್ಲಿ ಹೆಚ್ಚಿನ ಡಿವೋರ್ಸ್ ಕೇಸುಗಳಲ್ಲಿ ಇದೇ ಪ್ರಮುಖ ಕಾರಣವಾಗಿರುತ್ತಿತ್ತು ಅಷ್ಟರ ಮಟ್ಟಿಗೆ ಗಂಡಸರು ಈಗಲೂ ಬಚಾವ್. ಆದರೆ ಕಳೆದುಹೋಗುವ ಇಂತಹ ಜೀವಂತಿಕೆಯ ಬದುಕನ್ನು ಮರಳಿ ಕಟ್ಟಿ ಕೊಡುವವರಾದರೂ ಯಾರು..?
ಕಾರಣ ಅವಳು ಎಂದರೆ...

No comments:

Post a Comment