Saturday, September 17, 2016

ಯಜಮಾನ್ರು ಅನ್ನೋಕೆ ಮಂಡಿ ಮಾಲೀಕರಾ?

ಮಾತಿಗೊಮ್ಮೆ ನಮ್ಮ ಯಜಮಾನ್ರು ಎಂದು ಓಡುವುದೂ, ಆತ ಆಕೆಯನ್ನು ಕರೆಕರೆದು ಸರ್ವೀಸು ಮಾಡಿಸಿಕೊಳ್ಳುವುದು, ಆಕೆ ಪತ್ನಿಯಾ ಅಥವಾ ಸರ್ವರಾ..? ಉತ್ತರಿಸುವವರು ಯಾರು..?
 

ಬಹುಶಃ ಮೂರ್ನಾಲ್ಕು ವರ್ಷದ ಹಿಂದಿನ ಮಾತು. ಆ ಹೊತ್ತಿಗೆ ನನ್ನ ಗಾಂಪರ ಗುಂಪು ಇದ್ದಕ್ಕಿದ್ದಂತೆ ಸೇರಿಕೊಂಡು ಪಾರ್ಟಿ ಎನ್ನುತ್ತಾ ಅಥವಾ ಔಟಿಂಗ್ ಎನ್ನುತ್ತಾ ಹೊರಟು ಯಾರದ್ದಾ ತೋಟದ ಮನೆಯ, ಇನ್ನೆ ಸೇರಿಕೊಂಡು ಒಂದರ್ಧ ದಿನ ಕಾಲಕ್ಷೇಪ ಮಾಡುವುದೂ ಇತ್ತು. ಆಗೆ ಸೇರಿಕೊಳ್ಳುತ್ತಿದ್ದ ಇತರ ಸ್ನೇಹಿತರ ಮಧ್ಯದಲ್ಲಿದ್ದೂ ತನ್ನದೇ ಲೋಕ ಸೃಷ್ಟಿಸಿಕೊಂಡಂತಿರುತ್ತಿದ್ದ ದೀಪಾಳದ್ದು ಇವತ್ತಿಗೂ ನನಗೆ ಅರಿವಾಗದ ಪರಿಸ್ಥಿತಿ. ಅದ್ಯಾವತ್ತೂ ಗಂಡನ ನೆರಳಿನಿಂದ, ಮಕ್ಕಳ ಮೈದಾನದಿಂದ ಹೊರಬಂದೇ ಗೊತ್ತಿಲ್ಲ ಎನ್ನುವಂತಿದ್ದಾಳೆ. ಎಲ್ಲದರ ಹಿಂದೆಯೂ ಬರೀ ಗಂಡ, ಮಕ್ಕಳ ಕಾಳಜಿ. ಇಂಥದ್ದಾಂದು ಸ್ವಭಾವ ಅಷ್ಟು ಸುಲಭವಾಗಿ ಮೈಗೂಡುತ್ತದಾ ಅಥವಾ ಹೀಗೆ ಮನೆ, ಮಕ್ಕಳು-ಮರಿ ಎನ್ನುತ್ತಲೇ ಕಣ್ಣಿಕಟ್ಟಿದ ದನದಂತೆ ದುಡಿಯಲು ನಿಂತುಬಿಡುವುದನ್ನೇ ಹೆಣ್ಣುಮಕ್ಕಳಿಗೆ ಕಲಿಸಿರುತ್ತಾರಾ..? ಅಥವಾ ಮದುವೆಯಾದ ಮೇಲೆ ಇದೆ ಕಡ್ಡಾಯ ಎಂದು ಬ್ರೇನ್‌ವಾಶ್ ಮಾಡಿರುತ್ತಾರಾ..? ನನ್ನ ಯಾವೊಬ್ಬಳೂ ಸ್ನೇಹಿತೆಯೂ ಯಾವತ್ತೂ ಇದಕ್ಕೆ ನೇರ ಉತ್ತರ ಕೊಟ್ಟಿದ್ದಿಲ್ಲ. ಕಳೆದ ಬಾರಿ ಹಾಗೇ ಆಯಿತು. ಬರುತ್ತಲೇ ನಾವೆಲ್ಲ ಆಗಲೇ ಮೈಸೂರು ರಸ್ತೆಯಲ್ಲಿ ಕಾಲುಚಾಚಿ ನಿಂತುಕೊಂಡು, ಹೆಚ್ಚಿನ ಅವಧಿಗಾಗಿ ಅರ್ಧರ್ಧ ಕಾಫಿಯನ್ನೂ ಕುಡಿದಾಗಿತ್ತು. ಆಕೆಯ ಸವಾರಿ ಬಂದು ತಲುಪದಿದ್ದಾಗ, ಇಂತಲ್ಲಿ ತೋಟಕ್ಕೆ ಬಾ, ಇದು ದಾರಿಗುರುತು, ನಾವು ಮುಂದೆ ಹೋಗಿರ್ತೀವಿ ಎಂದು ಸುದ್ದಿ ಕೊಟ್ಟು ಹೇಳಿ ಹೊರಟಾಗಿತ್ತು.
  ಇನ್ನೇನು ಸಮಯ ಮೀರುತ್ತಿದೆ ಎನ್ನುವಾಗ ಕಾರಿನಲ್ಲಿ ‘ಯಜಮಾನ’ರೊಂದಿಗೆ ಆಗಮಿಸಿದ್ದಳು ದೀಪಾ. ಮಕ್ಕಳು, ಜತೆಗೆ ಅಷ್ಟೇ ಸೈಜಿನ ಬ್ಯಾಗು ಎತ್ತಿಕೊಂಡು ಬಂದು ಕಟ್ಟೆಯ ಮೇಲಿಟ್ಟು, ಒಂದೆರಡು ಐಟಮ್ಮು, ಟವೆಲ್ಲು ಇತ್ಯಾದಿ ಜೋಡಿಸಿಟ್ಟುಕೊಂಡು ಮಕ್ಕಳಿಗೆ ಏನೋ ಒಂದಷ್ಟು ಹೇಳಿ, ಅಷ್ಟರಲ್ಲಿ ನಮ್ಮ ಮಿತ್ರರೊಬ್ಬರು ‘ಟೀ ಬಂತು ಬನ್ನಿ’ ಎನ್ನುತ್ತಿದ್ದಂತೆ ಎಲ್ಲ ಅವರ ಇಷ್ಟಕ್ಕೆ ತಕ್ಕಂತೆ ಅರ್ಧ ಕಪ್ಪೋ, ಮುಕ್ಕಾಲೋ ತೆಗೆದುಕೊಂಡು ಹೊರಟು ಸುತ್ತ ಕುಳಿತುಕೊಳ್ಳುತ್ತಿದ್ದರೆ, ದೀಪಾ ಮಾತ್ರ ಅಲ್ಲಿಯೇ ಸನಿಹದಲ್ಲಿ ಮೊದಲೇ ಒಂದು ಚೇರ್ ಹಾಕಿಟ್ಟು ಅಲ್ಲಿ ಗಂಡನಿಗೆ ಕೂರಿಸಲು ವ್ಯವಸ್ಥೆ ಮಾಡಿ, ಅಲ್ಲಿಗೆ ಬಂದು ಒಂದು ಕಪ್ಪು ಟೀ ತೆಗೆದುಕೊಂಡು ಹೊರಟವಳು ವಾಪಸ್ಸು ಬಂದು ಒಂದು ಖಾಲಿ ಕಪ್ಪನ್ನು ಎತ್ತಿಕೊಂಡು ಹೋದಳು. ಅಲ್ಲಿ ಏನೋ ಒಂದಷ್ಟು ಗುಸ-ಪಿಸ ಎಂದು ಇಬ್ಬರೂ ಮಾತಾಡಿಕೊಂಡು, ಗಂಡನಿಗೆ ಅದರಿಂದ ಎಷ್ಟು ಬೇಕೊ ಅಷ್ಟು ಸುರಿದುಕೊಟ್ಟು, ಅದಕ್ಕೂ ಮೊದಲೇ ‘ಸಕ್ರೆ ಬೇಕಾ..?’ ಎನ್ನುತ್ತಾ ವಿಚಾರಿಸಿಕೊಂಡು, ‘ಮಕ್ಕಳಿಗೂ ಕೊಡಬೇಕು’ ಎನ್ನುತ್ತಾ ಇನ್ನೆರಡು ಕಪ್ಪುಗಳಲ್ಲಿ ಅರ್ಧರ್ಧ ಹಿಡಿದುಕೊಂಡು, ಮೇಲೆ ಕೆಳಗೆ ಮಾಡಿ ಆರಿಸಿ, ಮುಗಿಯುವ ಹೊತ್ತಿಗೆ ನಾವು ಟೀ ಕುಡಿದು ದುಂಡುಮೇಜಿನ ಪರಿಷತ್ತೂ ಮುಗಿಯುವ ಹಂತಕ್ಕೆ ಬಂದಿತ್ತು. ಆಕೆ ಹಾಗೆ ನಿಂತ ಒಂದು ಗುಕ್ಕು ಕುಡಿದು, ಸೊರ ಸೊರ ಮಾಡಿ.. ಅರ್ಧ ಕುಡಿಯುವ ಮೊದಲೇ ಅವನ ಕೂಗು ಬಂತು.
  ‘ನಮ್ಮ ಯಜಮಾನ್ರು ಕರೀತಿದಾರೆ.. ಬಂದೆ..’ ಎನ್ನುತ್ತಾ ಅರ್ಧಕ್ಕೆ ಆ ಕಪ್ಪನ್ನು ಬಿಟ್ಟು ಹೋಗಿ, ಯಜಮಾನ್ರ ಕೈಯಿಂದ ಖಾಲಿ ಕಪ್ಪನ್ನು ಪಡೆದು ಡಸ್ಟ್ ಬಿನ್‌ಗೆ ಹಾಕುವ ಹೊತ್ತಿಗೆ, ಮಕ್ಕಳ ಬುಲಾವ್. ಅಲ್ಲಿಗೆ ಹೋಗಿ ಅವರ ಸೇವೆ ಮಾಡಿ ಟೀ ಪ್ರಹಸನ ಮುಗಿಸುವ ಹೊತ್ತಿಗೆ ಮತ್ತೆ ಯಜಮಾನ್ರ ಅಪ್ಪಣೆ.
  ‘ಸಣ್ಣವನಿಗೆ ಶೀತ ಆಗಿತ್ತಲ್ಲ. ದೀಪಾ.. ಸಿರಪ್ ಕುಡಿಸಿದ್ಯಾ?’ ಎನ್ನುತ್ತಿದ್ದಂತೆ ಕಟ್ಟೆಯ ಮೇಲಿನ ಬ್ಯಾಗಿನಿಂದ ಬಾಟಲ್ ತೆಗೆದು ಅವನನ್ನು ಹುಡುಕಿಕೊಂಡು ಹೋಗಿ, ಅಕ್ಷರಶಃ ಅವನು ಈಕೆಗೆ ಮ್ಯಾರಾಥಾನ್ ಮಾಡಿಸಿ ಅಂತೂ ಕುಡಿದು ಬಾಯಿ ಒರೆಸಿ ಅದು ಅಂಟಂಟಾಗಿ, ಮತ್ತೆ ನೀರಿನ ಕೈಯಿಂದ ಬಾಯಿ ಒರೆಸಿ, ಅಷ್ಟರಲ್ಲಿ ಅವಕ್ಕೆ ಆಡುವ ಮೂಡ್ ಬಂದು ಬ್ಯಾಗಿನಿಂದ ಅವರ ಆಟದ ಸಾಮಾನು ತೆಗೆದುಕೊಟ್ಟು, ಅವರಿಬ್ಬರನ್ನೂ ಎಂಗೇಜ್ ಮಾಡುವ ಹೊತ್ತಿಗೆ ಮತ್ತೆ ಕರೆ ‘ಇವತ್ತಿನ ಪೇಪರ್ ತಂದಿದೀಯಾ?’. ದುಡುದುಡು ಓಡಿದ ಆಕೆ ಬ್ಯಾಗಿನ ಪಕ್ಕದ ಜಿಪ್ ತೆಗೆದು, ಅದರಲ್ಲಿ ಇರಿಸಿಕೊಂಡಿದ್ದ ಆವತ್ತಿನ ಪೇಪರ್ ತೆಗೆದುಕೊಂಡು ಅವನಿದ್ದಲ್ಲಿಗೆ ಒಯ್ದು ಕೊಟ್ಟು, ತನ್ನ ಪ್ಲೇಟೆತ್ತಿಕೊಂಡು ತಿನ್ನುವ ಹೊತ್ತಿಗೆ ನಮ್ಮದೆ ಮಾತುಕತೆ ಮುಗಿದು ಇನ್ನೊಂದು ರೌಂಡು ಹೊಸ ಐಟಂ ಏನು ಎಂದು ಹುಡುಕತೊಡಗಿದ್ದೆವು.
  ಮಧ್ಯಾಹ್ನದ ಊಟದ ಹೊತ್ತಿಗೂ ಆಕೆಯ ಯಜಮಾನ್ರು ಕೂತಲ್ಲಿಗೇ ಪ್ಲೇಟು, ಸ್ಪೂನುಗಳ ಸರಬರಾಜು, ಮಕ್ಕಳಿಗೆ ಆಯಾ ಮಕ್ಕಳ ರುಚಿ ಆಶೋತ್ತರಗಳಿಗೆ ತಕ್ಕಂತೆ ಬಡಿಸಿ, ಉಣಿಸಿ ಯಜಮಾನ್ರಿಗೆ ಒಂದೊಂದೇ ಐಟಮ್ಮು ಎರಡೆರಡು ಸರ್ತಿನೂ ಕೇಳಿ, ಕೊನೆಯ ಮೊಸರನ್ನದವರೆಗೂ ‘ಎರಡು ಸ್ಪೂನ್ ಕೊಡ್ಲಾ.. ನಿಮಗೆ ಹುಳಿ ಜಾಸ್ತಿ ಆಗಲ್ಲ. ಪಲಾವ್ ತಂದುಕೊಡ್ಲಾ’ ಎನ್ನುತ್ತಾ ಯಥೇಚ್ಛ ಸೇವೆ ಸಲ್ಲಿಸಿ, ಅಷ್ಟಾಗುವ ಹೊತ್ತಿಗೆ ಸಣ್ಣ ಹುಡುಗನಿಗೆ ಉಂಡು ತಿಂದು ಕುಣಿದು ಕುಪ್ಪಳಿಸಿ ಆಗಿತ್ತಲ್ಲ, ಈಗ ‘ಸೂಸ್ಸೂ’ ಎಂದು ಚಡ್ಡಿ ಹಿಡಿದುಕೊಂಡು ನಿಂತಿತ್ತು. ಅದನ್ನು ಅಷ್ಟು ದೂರದ ಪಾರ್ಕಿನ ಕೊನೆಯ ಮೂಲೆಯಲ್ಲಿದ್ದ ತಿರುವಿನ ಬಳಿಗೆ ಕರೆದೊಯ್ದು, ಅಷ್ಟೂ ಹೊತ್ತು ಹೊರಗೆ ನಿಂತಿದ್ದು ಅದಕ್ಕೆ ಕೈ ಕಾಲು ತೊಳೆಸಿ, ಅದರ ಡ್ರೆಸ್ಸು ಸರಿಮಾಡಿ ಅಷ್ಟರಲ್ಲಿ ಅದು ಬಿಸಿಲು ಎನ್ನುತ್ತಾ ನಿಂತುಕೊಂಡರೆ, ಅದನ್ನೂ ಹೊತ್ತುಕೊಂಡು ಇಲ್ಲಿ ಕರೆತಂದು ಇಳಿಸುವ ಹೊತ್ತಿಗೆ ಯಜಮಾನ್ರು ಊಟ ಮುಗಿಸಿ ಪ್ಲೇಟು ಸ್ಪೂನ್ ಹಿಡಿದುಕೊಂಡು ಕೈನೀಡಿ ಕೂತಿದ್ದರಲ್ಲ.
  ಅದನ್ನು ಕೈಗೆತ್ತಿಕೊಂಡು ಅ ನಲ್ಲಿಯ ಪಕ್ಕದ ಡಸ್ಟ್‌ಬಿನ್ನಿಗೆ ಹಾಕಿ, ಮನೆಯಿಂದ ತಂದಿದ್ದ ನೀರಿನ ಬಾಟ್ಲಿಯಿಂದ ಅದನ್ನು ಬಗ್ಗಿಸಿ ಗ್ಲಾಸಿಗಿಷ್ಟು ಸುರಿದು ಅವರಿಗೆ ಕೊಟ್ಟು ಮಗುವಿಗೂ ಕುಡಿಸಿ, ವಾಪಸ್ಸು ಮುಚ್ಚಿಟ್ಟು ಬ್ಯಾಗು ಸರಿಮಾಡಿ ಅಲ್ಲಿವರೆಗೆ ಅರೆಬರೆ ಖಾಲಿ ಆಗಿದ್ದನ್ನೆಲ್ಲ ಸರಿಪಡಿಸಿ, ಉಸ್ಸೆನ್ನುತ್ತಾ ನಿಂತ ಪೇಪರ್ ತಟ್ಟೆಗೆ ಒಂದಿಷ್ಟು ಸುರಿದುಕೊಂಡು ಗಬಗಬ ತಿನ್ನುತ್ತಿದ್ದರೆ ನಿರಂತರವಾಗಿ ಗಮನಿಸುತ್ತಿದ್ದ ನನಗೆ ಇಷ್ಟೆ ಮಾಡಿಕೊಂಡಿರುವುದಾದರೆ ಆಕೆ ಹೊರಗೆ ಕೊಂಚ ಚೇಂಜ್ ಇರಲಿ ಅಂತಾ ರಜಾದಿನಕ್ಕೆ ಬಂದಿದ್ದಾದರೂ ಯಾಕೆ ಅನ್ನಿಸತೊಡಗಿತ್ತು. ಊಟ, ಗಾಳಿ, ಸೊಂಪಾದ ನೆರಳು; ಈಗ ಯಜಮಾನರು ಕೂತ ನಿದ್ರೆಗೆ ಜಾರಿದ್ದರು. ಪೇಪರು ಗಾಳಿಗೆಗರುತ್ತಿದ್ದವು. ಮಕ್ಕಳು ಅಲ್ಲ ಕಿರುಚಾಡಿ ಕೈಕಾಲು ಬಡಿಯುತ್ತಿದ್ದರೆ, ದೀಪಾ ಪ್ಲೇಟಿಟ್ಟು ಓಡುವ ಆತುರಕ್ಕೆ ಬೀಳುತ್ತಿದ್ದವಳನ್ನು ತಡೆದು ನಿಲ್ಲಿಸಿದೆ. ಆಕೆಯ ಕಣ್ಣಲ್ಲಿ ಪ್ರಶ್ನೆ ಮತ್ತು ಅರ್ಧ ಉತ್ತರ ಎರಡೂ ನೋಡಿ ನಿಜಕ್ಕೂ ನಾನು ದಿಗಿಲಾಗಿದ್ದಾ.
  ಅವನೇನೂ ತೀರಾ ಅರಿಯದ ಪುರಾತನ ಗಂಡಸಲ್ಲ. ಇಬ್ಬರೂ ಸರಿಸಮಾನಾಗಿ ಡಾಕ್ಟರಿಕೆ ಓದಿದ್ದಾರೆ. ಅವನಿಗಿಂತ ಒಂದು ಕೈ ಮೇಲೆ ಎನ್ನುವಂತೆ ಆಕೆ ದುಡಿಯುತ್ತಾಳೆ. ಆದರೆ ಇದೇನು, ಮಾತಿಗೊಮ್ಮೆ ನಮ್ಮ ಯಜಮಾನ್ರು ಎಂದು ಓಡುವುದೂ, ಆತ ಆಕೆಯನ್ನು ಕರೆಕರೆದು ಸರ್ವೀಸು ಮಾಡಿಸಿಕೊಳ್ಳುವುದೂ, ಆಕೆಯೇನು ವೇಟರ್ರಾ..? ಉತ್ತರಿಸುವವರು ಯಾರು..?
  ಅದೆಲ್ಲಕ್ಕಿಂತಲೂ ದಿಗಿಲು ಮತ್ತು ಹಿಂಸೆ ಹುಟ್ಟಿಸಿದ್ದಾಂದರೆ ಮಾತಿಗೊಮ್ಮೆ ‘ಯಜಮಾನ್ರು’ ಎನ್ನುವ ಪದ. ಅದ್ಯಾವ ರೀತಿಯಲ್ಲಿ ದಾಂಪತ್ಯ ಸಂಬಂಧ ಅನುಬಂಧವಾದೀತೋ ನನಗಂತೂ ಗೊತ್ತಿಲ್ಲ. ಮನೆ ಎನ್ನುವುದು ಫ್ಯಾಕ್ಟರಿನಾ, ಅಡಕೆ ಮಂಡಿನಾ..? ಅವನಿಗೆ ಯಜಮಾನ್ರು ಎನ್ನುವ ಸಂಬೋಧನೆಯೇ ನನಗಿವತ್ತಿಗೂ ವಿಚಿತ್ರ ಭಾವನೆ ಮೂಡಿಸುತ್ತದೆ. ಸಂಸಾರದ ಚೆಂದದ ಘಳಿಗೆಗಳಲ್ಲಿ ಆಕೆ ಸೇವಕಿಯಾಗುವುದಾದರೆ ಅದಿನ್ನೆಂಥಾ ಬಾಂಧವ್ಯ?
  ಮಾತಿಗೊಮ್ಮೆ, ‘ಟ್ರಿಪ್ ಹೋಗೋಕೆ ಯಜಮಾನ್ರ ಹತ್ತಿರ ಪರ್ಮಿಷನ್‌ಗೆ
  ಅಪ್ಲಿಕೇಷನ್ ಹಾಕ್ತೀನಿ’, ‘ಯಜಮಾನ್ರ ಮೂಡ್ ನೋಡ್ಕೊಂಡು ಇವತ್ತು ಅವರಿಗೆ ಅಪ್ಲೈ ಮಾಡ್ತೀನಿ’, ‘ಅವರ ಲೆಕ್ಕಾಚಾರ ಗೊತ್ತಿಲ್ಲ. ಇವತ್ತು ಟ್ರಿಪ್‌ಗೆ
  ಸ್ಯಾಂಕ್ಷನ್ ಕೇಳ್ತೀನಿ’ ಇಂಥ ಹಲವು ಮಾತುಗಳನ್ನು ನನ್ನ ಸ್ನೇಹಿತೆಯರು ಉದುರಿಸುತ್ತಲೇ ಇರುತ್ತಾರೆ. ಅವರೆ ದೀಪಾಳಿಗಿಂತ ಭಿನ್ನವೆಂದೇನೂ ಅನ್ನಿಸುತ್ತಿಲ್ಲ. ಇದೇನು ಆಫೀಸಾ ಮನೇನಾ..? ಸ್ಯಾಂಕ್ಷನ್ನು, ಅಪ್ಲಿಕೇಷನ್ನು, ಪರ್ಮಿಷನ್ನು, ಇದನ್ನೇ ಅವನು ಮಾಡುವುದಾರೆ ಅವನಿಗೆ ಪತ್ನಿ ಯಾಕೆ ಬೇಕು, ಕೆಲಸಕ್ಕೊಬ್ಬರನ್ನು ನೇಮಿಸಿಕೊಂಡಿದ್ದರೆ ಆಗ್ತಿತ್ತಲ್ವಾ..? ಮಾತಿಗೆ ಮುಂಚೆ ಲೆಕ್ಕಾಚಾರ, ಆಕೆ ಜೀವನಪೂರ್ತಿ ಜತೆಗಿರಬೇಕಾದವನನ್ನು ಅಡಿಕೆಮಂಡಿ ಮಾಲೀಕ ಎನ್ನುವಂತೆ ಘಳಿಗೆಗೊಮ್ಮೆ ‘ಯಜಮಾನ್ರು’ ಎನ್ನುತ್ತಾ ಇರುವುದು ಸರಿನಾ..?
  ನನ್ನ ಪ್ರಶ್ನೆಗಳೇನೇ ಇರಲಿ, ‘ಜೀವನಪೂರ್ತಿ ಇರಬೇಕಾದವಳು ಎನ್ನುವ ಅರಿವಿದ್ದೂ ಒಂದು ಮೆಟ್ಟಿಲು ಕೆಳಗೆ ಎನ್ನುವಂತಹ ಮನಸ್ಥಿತಿಯೊಂದಿಗೆ ಬದುಕಬೇಕಾದ ಅನಿವಾರ್ಯತೆ ಬರೀ ಹಣದ್ದಲ್ಲ. ಇನ್ನಿತರ ಆಯಾಮಗಳೂ ಇರ್ತಾವೆ. ಅದು ನಿನ್ನಂಗೆ ಇರೋರಿಗೆ ಅರ್ಥವಾಗಲ್ಲ. ನೆಮ್ಮದಿ ಮುಖ್ಯ’ ಎನ್ನುತ್ತಾ ಮತ್ತೆ ಮಕ್ಕಳ ಚಾಪೆ ಎತ್ತಿಡಲು ಹೋದ ದೀಪಾಳ ಕತೆ ಮುಂದಿನ ವಾರಕ್ಕಿರಲಿ. ಆದರೆ ನನ್ನ ಪ್ರಶ್ನೆಗಳಿಗೆ ಮಾತ್ರ ಕೊನೆಗೂ ಉತ್ತರವಿರಲಿಲ್ಲ.
ಕಾರಣ
   ಅವಳು ಎಂದರೆ...

                      (ಲೇಖಕರು ಕಥೆ-ಕಾದಂಬರಿಕಾರರು)

No comments:

Post a Comment