ಬದುಕು ಬಣ್ಣಗಳ ಸಂತೆ...!
(ನಾನು ಅನ್ನೋ ಇಗೋಕ್ಕೆ ಬಿದ್ದರೆ ಎಂತಹ ಸಂಬಂಧಗಳೂ ಎಕ್ಕುಟ್ಟಿ ಹೋಗುತ್ತವೆ ಅಂತಹದರಲ್ಲಿ ಯಾರೊಬ್ಬರು ಮೇಲೆದ್ದು ನಿಂತರೂ ಬದುಕು ಮುರಟುವುದರಲ್ಲಿ ಸಂಶಯವೇ ಇಲ್ಲ)
ಹೆಚ್ಚಾಗಿ ಮನೆಯನ್ನು ನೋಡಿಕೊಳ್ಳುವುದು ಹೆಂಗಸರೂ ಮತ್ತು ದುಡಿಯುವದು ಗಂಡಸರು ಎಂಬ ಸಾರ್ವತ್ರಿಕ ಪದ್ಧತಿ ಅನೂಚಾನವಾಗಿ ನಡೆದದ್ದು ನಮ್ಮ ಇತಿಹಾಸದ ಭಾಗವಾದರೂ, ಅದರಲ್ಲಿ ತೀವ್ರ ಬದಲಾವಣೆ ಬಂದಿದ್ದು ಮತ್ತು ಮನೆಯ ಹೆಣ್ಣುಮಕ್ಕಳೂ ಸರಿ ಸುಮಾರಿಗೆ ಸಮಸಮನಾಗಿ ದುಡಿಯಲು, ನಾನೂ ನೌಕರಿ ಮಾಡಲೇಬೇಕೆನ್ನುವ, ದುಡಿಯುವ ವರ್ಗದ ಭಾಗವಾಗಬೇಕೆನ್ನುವ ಮನಸ್ಥಿತಿಯ ಹ್ಯಾಂವಕ್ಕೆ ಬೀಳತೊಡಗಿದ್ದು ಇತ್ತಿಚಿನ ಒಂದೆರಡು ದಶಕದಿಂದೀಚೆಗೆ. ಕೊನೆಯ ತಲೆಮಾರಿನವರೆಗೂ ಯಜಮಾನ್ರು ಎನ್ನುವುದಕ್ಕೆ ಅಷ್ಟು ಸಹಮತವಿರಲಿಲ್ಲ. ಸರಾಸರಿ ಅವರಪ್ಪ- ಅಮ್ಮಂದಿರ ಸಂಸ್ಕೃತಿಯಲ್ಲೂ ಎಲ್ಲಾ ಕಡೆಯಲ್ಲೂ ಇದು ಹಾಸು ಹೊಕ್ಕಾಗಿರಲಿಲ್ಲ. ಆದರೆ ತೀರ ಮತ್ತು ಇತ್ತಿಚಿನ ವಯೋಮಾನದವರಲ್ಲೂ ಅಂದರೆ ಪ್ರಸ್ತುತದಲ್ಲೂ ಸಾಕಷ್ಟು ವಿದ್ಯಾವಂತರಲ್ಲೂ ಚಾಲ್ತಿಯಲ್ಲಿದ್ದು ಗಮನಿಸಿದಾಗ ಅದರಲ್ಲೂ ದೀಪಾಳಂತಹ ಹೆಣ್ಣು ಮಗಳು ಯಜಮಾನ್ರು ಸಂಸ್ಕೃತಿ ಜಾರಿಯಲ್ಲಿಟ್ಟಿದ್ದು ನನ್ನ ಅಚ್ಚರಿಗೂ, ಹುಬ್ಬೇರಲೂ ಕಾರಣವಾಗಿತ್ತು.
ಮೊದಲೆಲ್ಲಾ ಶಾಲೆ ಓದುವುದೇ ದೊಡ್ಡ ವಿಷಯವಾಗಿದ್ದ ನಮ್ಮ ದೇಶದಲ್ಲಿ ನಿಜಕ್ಕೂ ಕೆಲಸಕ್ಕೆಂದು ದೂರದೂರಿಗೆ ಹೆಣ್ಣುಮಕ್ಕಳು ಹೊರಟು ನಿಲ್ಲುವ ಪರಿಸ್ಥಿಯೇ ಇರಲಿಲ್ಲ. ಏನಿದ್ದರೂ ಮಾಸ್ತರಿಕೆ ಮತ್ತು ತಾಲೂಕು ಆಫೀಸುಗಳಲ್ಲಿ ದುಡಿಯುತ್ತಿದ್ದುದೇ ದೊಡ್ಡದು. ಆದರೆ ಇಂಜಿನಿಯರಿಂಗೂ, ಹಗಲು ರಾತ್ರಿ ಕೆಲಸ ಎನ್ನುವುದೆಲ್ಲಾ ಶುರುವಾದದ್ದೇ ಇತ್ತಿಚಿನ ಎರಡು ದಶಕದ ಬದಲಾವಣೆಯಲ್ಲಿ ಅದರಲ್ಲೂ ಆರ್ಥಿಕ ಸಧೃಢತೆ ಮುಖ್ಯ ನೆಲೆಗೆ ಬಂದ ಮೇಲೆ.
ಇವತ್ತಿಗೂ ಆರ್ಥಿಕ ಬೆಂಬಲ, ನೌಕರಿಯಲ್ಲಿದ್ದಾಳೆ ಎನ್ನುವ ಕಾರಣಕ್ಕೇನೆ ಹುಡುಗಿ ಹೇಗಿದ್ದರೂ ಪರವಾಗಿಲ್ಲ ಎಂದು ಮದುವೆ ಮಾಡಿಕೊಳ್ಳುವ ಗಂಡಸರಿಗೇನೂ ಬರವಿಲ್ಲ. ಅದಾಯ ಮತ್ತು ಮನೆಗೆ ಸರ್ವೀಸು ಹೀಗೆ ಎರಡೆರಡು ಸೌಲಭ್ಯ ಎಲ್ಲಿ ಸಿಗುತ್ತದೆ..? ಕಾರಣ ಆವ್ರ ಲೆಕ್ಕದಲ್ಲಿ ಹುಡುಗಿ ಎಂದರೆ ಕಮಾಡಿಟಿ. ಇಂಥಾ ಜೋಡಿಗಳ ಬಗ್ಗೆ `..ಕಂಬಳಿ-ಶಾಲು ಜೋಡಿ. ಪಗಾರದ ಮಾರಿ ನೋಡಿ ಮದುವ್ಯಾಗ್ಯಾನು ಬಿಡು..' ಎನ್ನುವುದನ್ನು ತುಂಬ ಹತ್ತಿರದಿಂದ ಕೇಳಿದ್ದೇನೆ. ಇರಲಿ ಕಳೆದ ವಾರ ನಿಲ್ಲಿಸಿದ್ದ ಕತೆಗೆ ಬರುತ್ತೇನೆ.
ಆ ಹುಡುಗಿಗೇ ಅದ್ಯಾಕೆ ಶಿಕ್ಷಣ ತಲೆಗೆ ಹತ್ತಲಿಲ್ಲವೋ ಅಥವಾ ಕಲಿಯಲು ಮನೆಯಲ್ಲಿನ ಪರಿಸ್ಥಿತಿಯೂ ಸರಿಗಿರಲಿಲ್ಲವೋ ಒಟ್ಟಾರೆ ಮೆಟ್ರಿಕ್ಕಿಗೆ ಆಕೆಯ ಓದು ಗೊಟಕ್ಕೆಂದಿತ್ತು. ಬಹುಶ: ಹುಡುಗಿ ಹದವಾಗಿ ಬೆಳೆದಿದ್ದಾಳೆ ಇನ್ನೇನಿದ್ದರೂ ಮದುವೆ ಮಾಡುವುದು ಎಂಬಲ್ಲಿಗೆ ಸೀಮಿತವಾಗಿತ್ತಲ್ಲ. ಹಾಗಾಗಿ ಆಕೆ ಮನೆ ಕೆಲಸ, ಮಧ್ಯಾನ್ಹ ಭರ್ತಿ ನಿದ್ದೆ, ಸಂಜೆ ಪಕ್ಕದ ಮನೆಯ ಹೆಂಗಸರೊಂದಿಗೆ ಒಂದಿಷ್ಟು ಹರಟೆ, ಸರಿಯಾಗಿ ರಾತ್ರಿಗೆ ಅಮ್ಮನೊಂದಿಗೆ ನಿಂತು ಅಡುಗೆ. ಉಳಿದಂತೆ ಆಕೆಗಿದ್ದ ಇಬ್ಬರೂ ಅಕ್ಕಂದಿರು ಒಂದಿಷ್ಟು ದಿವೀನಾಗಿ ಓದಿಕೊಂಡಿದ್ದರೂ ಕೆಲಸ ನೌಕರಿ ಎರಡೂ ಬರಕತ್ತಾಗಿರಲಿಲ್ಲ. ಆದರೂ ಓದಿದವರು ಎನ್ನುವ ಕಾರಣಕ್ಕೇ ಮನೆಯ ಕಸ ಮುಸುರೆಗೆ ವಿನಾಯಿತಿ ಇರುತ್ತಿತ್ತು. ಮೂರನೆಯವಳಿಗೆ ಅಂಥಾ ಯಾವ ವಿನಾಯಿತಿ ಏನೂ ಇರಲಿಲ್ಲ. ಆಕೆಗೂ ಅದರ ಗೊಡವೆ ಇರಲಿಲ್ಲ. ಹೇಗಿದ್ದರೂ ಮೆಟ್ರಿಕ್ಕು ಫೇಯಿಲ್, ಯಾರೋ ಒಬ್ಬ ಮದುವೆ ಮಾಡಿಕೊಳ್ಳುತ್ತಾನೆ ಆತ್ಲಾಗೆ ಎದ್ದು ಹೋದರಾಯಿತು ಎಂದು ಸುಮ್ಮನಾಗಿದ್ದಳು.
ಆದರೆ ಮನೆಗೆ ಅಕ್ಕಂದಿರನ್ನು ನೋಡಲಿಕ್ಕೆ ಬರುವ ಹುಡುಗರು, ಹೊರಗೆದ್ದು ಹೋಗಿ ಮಧ್ಯಸ್ಥಿಕೆಯವನ ಹತ್ತಿರ `ತೋರ್ಸಿದ ಹುಡುಗಿ ಬ್ಯಾಡ. ಬಾಗಲ ಕಡೆ ನಿಂತಿದ್ಲಲ್ಲ ಆಕೀನ ಕೊಡ್ತಾರೇನು ಕೇಳ್ರಿ' ಎನ್ನುತ್ತಿದ್ದರು. ಮನೆಯಲ್ಲಿ ಪರಿಸ್ಥಿತಿ ವಿಷಮಿಸತೊಡಗಿತ್ತು. ಕೊನೆಕೊನೆಗೆ ಆಕೆಯನ್ನು ಅಕ್ಷರಶ: ಬಚ್ಚಿಟ್ಟು ಬಿಡುತ್ತಿದ್ದರು. ಪಕ್ಕದ ಮನೆಗೆ ಯಾರಾದರು ಕನ್ಯಾ ನೋಡ್ಲಿಕ್ಕೆ ಬಂದರೂ ಇಲ್ಲಿ ಈಕೆಯನ್ನು ಕೂಡಿ ಹಾಕುತ್ತಿದ್ದರು. ಹೊರಗೆ ಮಾತ್ರ `..ಮನ್ಯಾಗ ಮೂರು ಮಂದಿ ಅದಾರು ಯಾವಾಗ ಖಾಲಿ ಅಗ್ತದ ಗೊತ್ತಿಲ್ಲ..' ಎನ್ನುವ ಡೈಲಾಗಿಗೆ ಕಿವುಡಿಯಾವುದರ ವಿನ: ಬೇರೆ ದಾರಿ ಇರಲಿಲ್ಲ. ಕಾಲ ಬದಲಾಯಿತು. ಮೊದಲಿನವರು ಮದುವೆಯಾಗುವ ಮೊದಲೇ ಡಾಕ್ಟರಿಕೆ ಓದಿದವನೊಬ್ಬನಿಗೆ ಅಚಾನಕ್ ಆಗಿ ಕಣ್ಣಿಗೆ ಬಿದ್ದ ಹುಡುಗಿಗೆ ತಿಂಗಳೊಪ್ಪತ್ತಿನಲ್ಲಿ ಮದುವೆಯ ಬಾಸಿಂಗ ಕಟ್ಟಲಾಗಿತ್ತು. ಅದರೆ ಎಲ್ಲರೂ ಹುಬ್ಬೇರುವಂತೆ ಆಕೆ ಆ ಕಾಲದಲ್ಲೇ ಮದುವೆಗೂ ಮೊದಲೇ ಅವನನ್ನು ಖಾಸಗಿಯಾಗಿ ಅರ್ಧಗಂಟೆ ಮಾತಾಡಿಕೊಂಡು ಹತ್ತನ್ನೆರಡು ವರ್ಷ ಅಂತರದಲ್ಲಿದ್ದವನನ್ನು ಮದುವೆಯಾಗಲು ಸಮ್ಮತಿಸಿದ್ದಳು. `ಎರಡೂ ಕಡೆ ಖರ್ಚು ನಮ್ದ..' ಎನ್ನುತ್ತಿದ್ದಂತೆ ಮೊದಲಿನ ಮಾಲು ಇದ್ದರೂ ಪರವಾಗಿಲ್ಲ ಇದೊಂದು `ಖರ್ಚಾದರೆ' ಖುಲಾಯಿಸಬಹುದೆಂದು ಅವರಪ್ಪ ಹುಳ್ಳಗಾಗಿದ್ದರು. ಅಲ್ಲಿಂದ ಬರೊಬ್ಬರಿ ಎರಡೂವರೆ ದಶಕದ ಹಾದಿಯಲ್ಲಿ ಆಕೆ ಇವತ್ತಿಗೂ ಕುಟುಂಬಕ್ಕೆ ಬಡಿದಾಡಿಕೊಳ್ಳುವ ಬಗ್ಗೆ ನನಗಿದ್ದ ಕುತೂಹಲ ಮಾತ್ರ ತಣಿದಿರಲಿಲ್ಲ. ಅದಕ್ಕೆ ಸರಿಯಾಗಿ ಆಕೆ `ನನ್ನದ ಕತೀ ಬರ್ದೀದಿ ಆದರ ಪಸಿ ಹೀಡಿಲಿಕ್ಕ ಮಾತ್ರ ಆಗಿಲ್ಲ ನೋಡು ನಿನಕಡೆ..' ಎನ್ನುತ್ತಿದ್ದರೆ ನಾನು ಪ್ಯಾಲಿ ನಗೆ ನಕ್ಕಿದ್ದೆ.
ತೀರ ಹತ್ತನೆತ್ತಿ ಪಾಸಾಗದ ಹುಡುಗಿ ಇವತ್ತು ಗಂಡನ ಖಾಸಗಿ ನರ್ಸಿಂಗ್‍ಹೋಮ್‍ನ ಮೇಲ್ಗಡೆ ತನ್ನ ಟ್ಯೂಟರ್ ನಡೆಸುತ್ತಿದ್ದಾಳೆ. ಯಜಮಾನ್ರ ಸರಿ ಸಮಕ್ಕೆ ತಿಂಗಳಿಗೆ ಲಕ್ಷದ ಲೆಕ್ಕದಲ್ಲಿ ಗುಡ್ಡೆ ಹಾಕುತ್ತಿದ್ದಾಳೆ. ಕಾರಣ ಮದುವೆ ಆಗುತ್ತಿದ್ದಂತೆ ಮತ್ತೆ ಓದಿಗೆ ಕುದುರಿಕೊಂಡಿದ್ದ ದೀಪಾ ಅರೇ.. ಎನ್ನುವಷ್ಟು ಮಾರ್ಕು ಬರುತ್ತಿದ್ದಂತೆ ಡಿಗ್ರಿಯಿಂದ ಮುಂದುವರೆದಿದ್ದಾಳೆ. ಆತ ಮೊದಲೇ ಎಂ.ಬಿ.ಬಿ.ಎಸ್ಸು. ಈಗ ಹುಡುಗಿ ಬಸರು, ಬಾಣಂತನ ಜತೆಗೇ ಪಿಹೆಚ್ಡಿ.
`ಏನು ಹಂಗ ನೋಡ್ತಿ.. ನನಗೂ ಮೆಟ್ರಿಕ್ ಫೇಲಾದಾಗ ಅನ್ನಿಸಿತ್ತು ಚಲೋತ್ನಾಗ ಓದಿದರ ಏನಾರ ಮಾಡಬೋದಿತ್ತು ಅಂತ. ಆದರೆ ಮನ್ಯಾಗ ಮೂರು ಜನ ಹೆಣ್ಮಕ್ಕಳು ಖರ್ಚಾಗದ ಸಾಮಾನಗತೆ ಕುಂತಿದ್ವಿ ನೋಡು. ಅದಕ್ಕ ಯಜಮಾನ್ರ ವಯಸ್ಸಿನ ಫರಕ್ಕ ಇದ್ದರೂ ಚಾನ್ಸ್ ತೊಗೊಂಡೆ. ಹೆಂಗಿದ್ದರೂ ಒಂದ ರಿಸ್ಕ್ ತೊಗೊಳ್ಳಬೇಕಿತ್ತು. ಒಂದಂತೂ ಖರೇ, `ಹುಡುಗ ಸುಮಾರು ಅವನ ವಯಸ್ಸ ಹೆಚ್ಚಿಗ ಐತಿ, ರೊಕ್ಕದ ಮಾರಿ ನೋಡಿ ಹೂಂ ಅಂದ್ಲು ದೀಪೀ...' ಅಂತ ಮಂದೀ ಮಾತಾಡಿದ್ದೂ ಖರೇನ ಇತ್ತು. ಮನ್ಯಾಗ ಸಾಮಾನಗತೆ ಇರೋದಕಿಂತ್ಲೂ ಇಲ್ಲಿ ಸ್ವಲ್ಪ ಹೊಂದಿಸ್ಕೊಂಡ್ರೆ ಚೋಲೊದಲ್ಲ. ಲೆಕ್ಕ ತಪ್ಪಲಿಲ್ಲ. ನನಗೂ ಅದ್ಯಾಕ ಬುದ್ಧಿ ಬಂತೋ ಓದು ಕೈಗೆ ಹತ್ತತು. ಇವತ್ತು ನನಗ ಯಾವುದಕ್ಕೂ ಕಮ್ಮಿ ಇಲ್ಲ. ಮನ್ಯಾಗ ನಾನೂ, ಇಬ್ರೂ ಅಕ್ಕಂದರು ಖರ್ಚಾಗದ ಮಾಲು ಅನ್ನಿಸಿಕೊಂಡಿದ್ದು ಹೆಂಗ ಮರೀಲಿ. ಅದಕ್ಕ ಆವತ್ತು ರಿಸ್ಕ ತೊಗೊಂಡು ಹೊರಗ ಬಿದ್ದೆ. ಮನಿಯವ್ರು ನನಗ ಯಾವತ್ತೂ ಯಾವದಕ್ಕೂ ಬ್ಯಾಡ ಅನ್ನೋದಿಲ್ಲ. ನನಗ ಕೊಟ್ಟ ಮಾತೂ ಉಳಿಸ್ಕೊಂಡಾರ ಅವರನ್ನ ಯಜಮಾನ್ರು ಅಂದರ, ನನಗ ಖುಶಿಯಾಗೋ ಸೇವಾ ಮಾಡಿದರ ತಪ್ಪೇನದ..? ಅದರಾಗೂ ತನ್ನ ಮನೀ, ಸಂಸಾರ ಅಂತಂದರ ಯಾವ ಹೆಂಣಮಗಳಿಗೂ ಹೊರೀ ಅನ್ಸಾಂಗಿಲ್ಲ. ಅದೇನಿದ್ರೂ ಫ್ಯಾಶನಿನ್ನ ಲೆಕ್ಕಕ್ಕ, ನಾನು ಅನ್ನೋ ಇಗೋಕ್ಕ ಬಿದ್ದಾವ್ರಿಗೇ ಯಾಕ ಯಜಮಾನ್ರು ಅನ್ನಬೇಕು ಅಂತ ಅನ್ನಿಸಬೋದು. ದೇವರೂ ಹಿಂಗ ಸವಲತ್ತು ಕೊಡ್ತಿದ್ನೋ ಇಲ್ವೋ ಹಂಗದೀನಿ ಇವತ್ತು. ಅವರನ್ನ ಯಜಮಾನ್ರು ಅನ್ನೋದಾರಗ ಖುಷಿನ ಅದಾ..' ದೀಪಾ ಕುಲುಕುಲು ಮಾತಾಡುತ್ತಿದ್ದರೆ ಮಧ್ಯದಲ್ಲೇ ತಡೆದೆ.
`..ಆದೇನು ಆವತ್ತು ಮದುವಿಗೂ ಮದಲು ಮಾತಾಡಿದ್ಯಲ್ಲ ಏನದು..? ಅಕಸ್ಮಾತ ಅವ್ರು ಅಮೇಲೆ ಆಗೋದಿಲ್ಲ ಅಂದಿದ್ರ ಏನ ಮಾಡ್ತಿದ್ದಿ..?'ಎಂದೆ.
` ಏನು ಮಾಡ್ಲಿಕ್ಕ ಆಗ್ತಿತ್ತು. ಏನಾರ ಒಂದು ಚಾನ್ಸ್ ತೊಗೊಳ್ಳಬೇಕಿತ್ತಲ್ಲ ತೊಗೊಂಡೆ. ಊಟ ಉಣಿಸು ಆರಾಮ ಅಂತೂ ಇದ್ದ ಇರ್ತದ ಅಂತ ಗೊತ್ತಿತ್ತು. ಆದರೂ ಅವರ ಬಂದೂ ಇದ ಹುಡುಗಿ ಬೇಕಂದಾಗ, `ನಿಮಗ ಹೆಂಗ ಬೇಕು ಹಂಗ ಬದುಕು, ಸಂಸಾರ ಮಾಡ್ಕೊಂಡ ಇರ್ತೇನಿ. ಆದರ ನನಗ ಮತ್ತ ಓದಿಸ್ತೀರೇನು ಅಂದಿದ್ದೇ..'. ಡಾಕ್ಟರರು ಒಮ್ಮೆ ನಕ್ಕ `ಆತು ಬಿಡು ಅಷ್ಟ ಹೌದಿಲ್ಲೋ ಓದ್ಕೊವಂತಿ ಬಾ' ಅಂದಿದ್ದರು. ಆವತ್ತು ಅವರಿಗೂ ಭರವಸೆ ಇರ್ಲಿಲ್ಲಂತ. ಎಸ್ಸೆಲ್ಸಿ ಫೇಲ್ ಏನು ಓದಾತಾಳು ಅಂತ ಸುಮ್ನ ಹೂಂ.. ಅಂದಿದ್ರಂತ. ಆದರ ಯಾವಾಗ ಪಿಯುಸಿ ತೆಕ್ಕಿಗಟ್ಟಲೇ ಮಾರ್ಕು ಬಂದ್ವು ನೋಡು ಒಂದು ವಿಶ್ವಾಸ ಬಂತು. ಅಲ್ಲಿಂದ ಮುಂದೆ ಲೆಕ್ಚರ್ ಆಗೋವರಿಗೂ ನಡೀತು. ಆದರ ನಾನು ಓದ್ಕೊತಿದ್ದರೂ ಇತ್ತ ಮಕ್ಕಳು ಮರಿ ಆದರೂ, ನಾ ಮದಲ ಹೇಳಿದಂಗ ಅವರ ಕಡೀಗಿನ ಗಮನ ಯಾವತ್ತೂ ಕಡಿಮೆ ಮಾಡ್ಲಿಲ್ಲ. ಎಲ್ಲಾ ಹೆಂಗಸರ ಕೈಯಾಗಿರ್ತದ. ಗಂಡಸರು ಮಣ್ಣಿನ ಮುದ್ದಿ ಇದ್ದಾಂಗ. ಯಾವಾಗ ಹೆಂಗ ಬೇಕಾದರೂ ತೀಡ್ಕೊಬಹುದು. ಹಂಗಂತ ಜಾಸ್ತಿ ಸುಟ್ಟರ ಒಡದ ಹೋಗ್ತಾವ. ಈಗೀನ ಹೆಂಗಸರಿಗೆ ಗೊತ್ತಾಗೋ ಹೊತ್ತಿಗೆ ಟೈಮ್ ಹೋಗಿರ್ತದ..' ಎನ್ನುತ್ತಾ`..ಚಾ.. ಕುಡಿ ಆರಿ ಹೋಗ್ತದ.. ಇನ್ನೇನು ಯಜಮಾನ್ರು ಬರ್ತಾರ ನಾಸ್ಟಾ ಮಾಡುವಂತಿ..' ಎನ್ನುತ್ತಿದ್ದರೆ ಈ ಬಾರಿ ಆಕೆಯ ಬಾಯಿಂದ ಬಂದ ಯಜಮಾನ್ರು ಎನ್ನುವ ಪದ ನನಗೆ ಅಹಿತ ಅನ್ನಿಸಲಿಲ್ಲ.
ಕಾರಣ
ಅವಳು ಎಂದರೆ...
Kathe alla jeevana 😊
ReplyDeleteChennagide
Inspired