Wednesday, August 31, 2016

ಹೆರಿಗೆ ನೋವೆಂಬ ಮಧುರ ಯಾತನೆ...

(ಈ ಜೀವಜಗತ್ತಿನಲ್ಲಿ ದೇವರು ಹೆಣ್ಣಿಗೆ ಮಾತ್ರ ಕೊಟ್ಟಿರುವ ಅಪರಿಚಿತ ಸುಖ ಅದು. ಬಾಡಿಗೆ ತಾಯ್ತನದ ವಿರುದ್ಧ ಕೇಂದ್ರ ನಿಷೇಧ ಹೇರುವುದರೊಂದಿಗೆ ಹೆಣ್ಣುಮಕ್ಕಳ ಅಪರೂಪದ ಐಡೆಂಟಿಟಿಯಾಗಿದ್ದ ತಾಯ್ತನದ ಹಕ್ಕು ರಕ್ಷಿಸಿದೆ.)

ಬಹುಷ: ಅದನ್ನು ಆಕೆ ಮಾತ್ರ ವಿವರಿಸಬಲ್ಲಳು. ಕೇಳುವಾಗ ಮತ್ತು ಆಡಿಕೊಳ್ಳುವಾಗ ಹೆರಿಗೆ ಅಂದರೆ `..ಅಯ್ಯಪ್ಪ ತುಂಬಾ ನೋವಾಗತ್ತಂತೆ..' ಎನ್ನುವ ತಾಯ್ತನದ ನೋವಿನ ಮಟ್ಟ, ಹೆಣ್ಣು ಸಾಮಾಜಿಕವಾಗಿ ಕೌಟುಂಬಿಕ ದೌರ್ಜನ್ಯದ ಅಡಿಯಲ್ಲಿ ಎದುರಿಸುವುದಕ್ಕೆ ಹೋಲಿಸಿದರೆ ಏನೂ ಅಲ್ಲ. ಅದನ್ನು ಆಕೆಯ ಮಾತಲ್ಲೇ ಹೇಳುವುದಾದರೆ, 
`.. ಇದ್ದಕ್ಕಿದ್ದಂತೆ ಜೀವ ಮೊಳೆಯುವ ಮತ್ತು ನನ್ನೊಳಗೊಂದು ಜೀವ ಹೊಸದಾಗಿ ಮಿಡಿಯುತ್ತಿದೆ ಎನ್ನುವ ಅಂಶ ಮನಸ್ಸಿಗೆ ತಾಕಿದಾಗೆಲ್ಲಾ ನನಗೇ ಗೊತ್ತಿಲ್ಲದಂತೆ ಎದೆ ಬಡಿತ ಏರುತ್ತಿತ್ತು. ಬಸ್ಸು ಪ್ರಯಾಣದ ತಿರುವಿನಲ್ಲಿ ಕಾರಿಕೊಂಡು, ದಿನವಿಡಿ ಅದೇ ವಾಸನೆಗೆ ಸಿಂಡರಿಸಿಕೊಳ್ಳುವುದಕ್ಕೂ, ದಿನಕ್ಕೆ ನಾಲ್ಕು ಬಾರಿ ದೇಹ ತನ್ನ ನೈಸರ್ಗಿಕ ಕ್ರಿಯೆಯಾಗಿ ಹೊರತಳ್ಳುತ್ತಾ ತನ್ನ ವ್ಯವಸ್ಥೆ ಬಲ ಪಡಿಸಿಕೊಳ್ಳುತ್ತಿದ್ದರೆ ಅಂತಹ ಯಾವ ಅಸಹ್ಯದ ಭಾವಕ್ಕೂ ಈಡಾಗದೆ ಇರುವುದು ಬಹುಶ: ತಾಯಿಯಾಗುತ್ತೇನೆನ್ನುವ ಅನೂಹ್ಯ ಅನುಭೂತಿಯಲ್ಲದೇ ಬೇರೇನಿದ್ದೀತು..?
ಮೊದಲ ಬಾರಿ ಮುಟ್ಟು ನಿಂತು ಹೋಗಿ ನನ್ನವ ಕೈ ಹಿಡಿದು ಮೆಟ್ಟಿಲು ಏರಲೂ ಬಿಡದೆ, ಅಧ್ಬುತ ಎನ್ನುವಂತೆ ನನ್ನ ಮುಖ ನೋಡುತ್ತಾ ತನ್ನ ಮಗುವಿಗಾಗಿ ಎದುರು ನಿಂತ ಅವನ ಕಣ್ಣಲ್ಲಿ ಜಗತ್ತಿನ ಯಾವ ಪುರುಷ ಪುಂಗವನಿಗೂ ಇಲ್ಲದ ಶಕ್ತಿ ನಿನಗೆ ಕೊಟ್ಟು ಬಿಟ್ಟಿದ್ದಾನೆ ದೇವರು.. ಅಬ್ಬಾ ಎಂದಾಗ ಅದರೆ ಪುಳಕವೇ ಬೇರೆ.
ತಿಂಗಳಾವಧಿಯಲ್ಲಿ ಏರತೊಡಗುವ ಭಾರ, ಅವ್ಯಾಹತವಾಗಿ ಯಾವ ಕೆಲಸ ಮಾಡಿದರೂ ಮಾಡತೊಡಗಿದರೂ ಮೊದಲ ಆದ್ಯತೆ ಹೊಟ್ಟೆಯೆಡೆಗೆ ನನಗರಿವಿಲ್ಲದೆ ಚಲಿಸಿಬಿಡುವ ಕೈ, ಮನಸ್ಸು ಮತ್ತು ದೇಹ ನನ್ನ ನಿಯಂತ್ರಣದ ಹೊರತಾಗಿ ತೋರುವ ರಿಫ್ಲೆಕ್ಸುಗಳನ್ನು ಬಹುಶ: ಜಗತ್ತಿನ ಇನ್ನಾವುದೇ ಕ್ರಿಯೆಯಲ್ಲೂ ದೇಹ ತೋರ್ಪಡಿಸಲಾರದು.  ಕೊಂಚ ಮಾತ್ರದ ದೈಹಿಕ ಬದಲಾವಣೆಯಲ್ಲೂ, ಪ್ರತಿ ಆಸರೆಯೂ ಹೊಟ್ಟೆಯ ಕಡೆಗೆ ಹೋಗುವ ಮೂಲಕ ಮನಸ್ಸಿನ ನಿಯಂತ್ರಣ ನಮ್ಮ ಹೊರತಾಗಿ ದೇಹ ತಾನೇ ತಾನಾಗಿ ಪಡೆದುಬಿಡುವ ಪರಿಯಿದೆಯಲ್ಲ, ಅದು ಬಹುಶ: ತಾಯ್ತನಕ್ಕೆ ಸಜ್ಜಾಗುತ್ತಿದ್ದಂತೆ ದೇಹಗಳಿಸಿಕೊಳ್ಳುವ ಅಧ್ಬುತ ನಿಯಂತ್ರಣ. ಬೆಳಿಗ್ಗೆ ಏಳುವ ಮೊದಲು ಹೊಟ್ಟೆಯ ಮೇಲೆ ಭಾರ ಬೀಳದಂತೆ ಮಗ್ಗಲು ನಿಧಾನಕ್ಕೆ ಬದಲಿಸಿ ಏಳುವ, ಬೀಸಿ ನೀರು ದೇಹದ ಮೇಲೆ ಹರಿಯುತ್ತಿದ್ದರೆ ಆಗಲೇ ಮಗುವಿನ ಮೇಲೆ ಸುರಿದಿತಾ ಎನ್ನುವಂತೆ ಅಡ್ಡ ಕೈಯಿಟ್ಟು ಮಾಡುವ ಸ್ನಾನ, ಇನ್ನೂ ಮೊಳಕೆಯಲ್ಲಿದ್ದರೂ ತಿಂಡಿಗೆ ಕೂರುವಾಗಲೂ ಅದೆಲ್ಲಿ ಬಿದ್ದುಗಿದ್ದು ಹೋದೀತಾ ಎನ್ನುವ ಅನೂಹ್ಯ ಸಂಭಾವ್ಯ ಅನುಭೂತಿಯಲ್ಲಿ ಗೊತ್ತಿಲ್ಲದೆ ಆ ಬಿಳಿ ಮಲ್ಲಿಗೆ ಮೊಗ್ಗಿನ ಆಧಾರಕ್ಕೆ ಕೈ ಆಸರೆ ಕೊಡುತ್ತಾ, ಆಕಸ್ಮಿಕವಾಗಿ ಅದರ ಮೊದಲ ಒದೆತಕ್ಕೆ ಕಾಲು ಒಳ ಬೀಸುತ್ತಿದ್ದಂತೆ `.. ಅಹ್..' ಎನ್ನುವ ಅನಿಯಂತ್ರಿತ ಮುಲುಗು ಕಣ್ಣರಳಿ ಹೊರಡುತ್ತಿದ್ದರೆ.. ಯಾವ ಸಂಕೋಚವಿಲ್ಲದೆ ಭಯಮಿಶ್ರಿತ ಸಣ್ಣ ಆಂದೋಳನೆಯಲ್ಲಿ ಹೊಟ್ಟೆಯನ್ನೊಮ್ಮೆ ನೋಡಿಕೊಂಡು, ಅದು ಆಚೆಯಿಂದ ಈಚೆಗೆ ಒದೆಯಿತಲ್ಲ, ಹಾಗಿದ್ದರೆ ತಲೆ ಮೇಲೆ ಮಾಡಿ ಮುರುಟಿ ಮಲಗಿಕೊಂಡು ಮಗ್ಗಲು ಬದಲಾಯಿಸಿದ್ದಾ..?  ಅಬ್ಬ ಈಗಲೇ ಹಿಂಗೆ ಇನ್ನು ಹಿಡಿಯಲು ಆದೀತಾ..? ಎನ್ನುವ ರಮ್ಯ ರೋಚಕ ಕಲ್ಪನೆಗೆ ಮೈ ನವಿರೆದ್ದು, ಅದನ್ನು ಅಷ್ಟೆ ಆಸ್ಥೆಯಿಂದ, ಈಗಾಗಲೇ ಇಂತಹ ಹಲವು ಮಧುರ ನೋವಿಗೆ ಒಡಲು ಒಡ್ಡಿದ್ದರೂ `..ಹೌದೇನೆ ನೀನು ಹಂಗೆ ತ್ರಾಸು ಕೊಡ್ತಿದ್ದಿ ನೋಡು.' ಎಂದು ಹೊಸದಾಗಿ ಕಣ್ಣರಳಿಸಿ ಕೇಳಿಸಿಕೊಳ್ಳುವ ತಾಯಿ ಜೀವದೆದುರಿಗೆ ಕಣ್ಣು ಬಾಯಿ ಅರಳಿಸಿ ನುಡಿಯುತ್ತಾ,`..ಜಾಸ್ತಿ ಕುಣೀಬೇಡ. ಹೊಟ್ಟೆ ಕುಲುಕುತ್ತೇ.. ಸುಮ್ನೆ ವಾಕಿಂಗ್ ಮಾಡು.. ಟಿ.ವಿ.ಲಿ ಹಾಳುಮೂಳು ನೋಡ್ಬೇಡ. ಮಗು ಬೆಚ್ಚಿ ಬೀಳುತ್ತೆ..' ಎಂದೆಲ್ಲಾ ತಾಕೀತು ಮಾಡಿಸಿಕೊಳ್ಳುತ್ತಾ, ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಅದ್ಯಾಕೋ ಹೊಟ್ಟೆ ಸರಸರನೇ ಕುಲುಕಿದಂತಾಗಿ ಸಣ್ಣಗೆ ಆಂದೊಳನೆಯಲ್ಲಿ ಮನಸ್ಸು ಕಲಕಿ, ಇವತ್ತು ಯಾವ ಪಿಕ್ಷರು ನೋಡಿದೆ, ಅದಕ್ಕೆ ಇದು ಭಯ ಬಿತ್ತಾ ಎಂದು ಕೈಗೆ ಸಿಗದ ಅದರ ನೆತ್ತಿ ಸವರುತ್ತಾ, ಪ್ರತಿ ದಿನವೂ ಹೊಸ ಹೊಸ ಅನುಭವಕ್ಕೂ ಹೊಸ ಅನುಭೂತಿಗಳಿಗೂ ಈಡಾಗುತ್ತಾ, ಹತ್ತು ಹಲವು ವೈದ್ಯಕೀಯ ಪರಿಭಾಷೆಯ ಕಾಂಪ್ಲಿಕೇಶನ್ಸ್‍ಗಳೆದುರಾಗುತ್ತಿದ್ದರೂ, ಪಕ್ಕದಲ್ಲಿರುವ ಅನುಭವಿ ಅಮ್ಮನ `.. ಆ ಡಾಕ್ಟ್ರೆಲ್ಲಾ ಹಂಗೇ ಹೇಳ್ತಾರೆ.. ನಂಗೆ ಅಜ್ಜಿ ಬಿಟ್ರೆ ಯಾರಿದ್ದರು.. ಸುಮ್ನಿರು ' ಎನ್ನುವ ಕಾನ್ಫಿಡೆಂಟ್ ಮಾತುಗಳಿಗೆ ಸಮಾಧಾನಗೊಳಿಸಿಕೊಳ್ಳುತ್ತಾ, ನೋಡುನೋಡುತ್ತಲೇ ಇನ್ನೂರೆಪ್ಪತ್ತು ದಿನದ ಆಸುಪಾಸು ಕಳೆದು, ಅದ್ಯಾಕೋ ಭರಿಸಲಸಾಧ್ಯವಾದ ನೋವು, ಎನೋ ಸಂಕಟ ಕೈಕಾಲುಗಳ ಎಳೆತ ಕಿಬ್ಬೊಟ್ಟೆ ಹರಿದೇ ಹೋಗುತ್ತಾ ಎನ್ನುವ ಅಸಹನೀಯ ನೋವಿಗೆ ಮಗು ಆಚೆ ಬಂತಾ ಎಂದು ಊಹಿಸುತ್ತಲೇ ಸರಕ್ಕನೇ.. `.. ಮ್.. ಊಃ.. ' ಎನ್ನುವ ಸಣ್ಣ ಕೀರಲು ದನಿಯ ಸದ್ದಿಗೆ ಎಲ್ಲ ಮರೆತು ಹೋಗುವ ಅಧ್ಬುತ ತಾಯ್ತನದ ಸ್ವರ್ಗ ಸುಖ. ಬಹುಶ: ಜಗತ್ತಿನಲ್ಲಿ ವಿವರಿಸಲಾಗದೆ ಉಳಿದ, ಹೆಣ್ಣು ಮಾತ್ರ ನುಭವಿಸಬಹುದಾದ ಸುಖ ಎಂದರೆ ಇದೊಂದೆ ಇರಬೇಕು. ಅದನ್ನು ಬಾಡಿಗೆಗೆ ಮಕ್ಕಳು ಮಾಡಿಕೊಳ್ಳುವ ಹೆಣ್ಣು, ಬಾಡಿಗೆ ತಾಯಿಯಾಗಬಹುದೇ ಆ ಮಗುವಿಗೆ ಆ ನೋವಿಗೆ ಏಕ ಮಾತ್ರದ ಅಮ್ಮನಾಗಲಾರಳು. ಕಾರಣ ಆ ಸುಖ ಹೆರುವವಳ ಸೊತ್ತು.

- ಸಂಜೆ.

No comments:

Post a Comment