Saturday, August 6, 2016

ಹುಂಬತನಕ್ಕೆ ಹಾಳಾಗುವ ಹೊಸ ಹರೆಯ...

ಮನಸ್ಸು ಮತ್ತು ಬುದ್ಧಿ ಎರಡನ್ನೂ ಯಾವ್ಯಾವುದಕ್ಕೋ ಧಾರೆ ಎರೆಯುವ ಹೆಣ್ಣುಮಕ್ಕಳಿಗೆ ಒಂದು ಅರ್ಥವಾಗಬೇಕಿದೆ. ಕಾಳು ಹಿಡಿದು ಓಡಾಡುತ್ತಿರುವ ಪುರುಷರು ಮಾಡುವ ಯೋಜನೆಗಳು ಮತ್ತು ಹಾಕುವ ಸೋಗು ಎರಡೂ ಯಾರ ಅಂದಾಜಿಗೂ ನಿಲುಕದಷ್ಟಿವೆ.

‘ಕಾ ಲೇಜ್ ಶುರು ಆಗೋದು ಆಗಸ್ಟ್ 28ಕ್ಕೆ ಅಂತೆ’ ಎಂದು ಸ್ನೇಹಿತೆಯೊಬ್ಬಳಿಗೆ ಕರೆ ಮಾಡಿ ಮಾತಾಡುತ್ತಿದ್ದರೆ, ಪ್ರಾಣಕ್ಕಿಂತ ಹೆಚ್ಚಾಗಿ ಮಗಳನ್ನು ಪ್ರೀತಿಸುವ ಆಕೆ ಕೇಳಿದ್ದೇನು ಗೊತ್ತೆ? ‘ಅಯ್ಯೋ ಇನ್ನೂ ಎರಡು ತಿಂಗಳು ಇವರನ್ನು ಕಾಯ್ಬೇಕೇನೋ? ಏನು ಮಾಡೋದು ಗೊತ್ತಾಗ್ತಿಲ್ಲ. ನೀ ಏನು ಮಾಡಬೇಕೂಂತಾ ಇದೀಯಾ?’ ಎನ್ನುವ ಮಗಳನ್ನು ಕಾಯುವ ಅವ್ಯಕ್ತ ಭಯ ಆಕೆಯ ಧ್ವನಿ ಮತ್ತು ಉಸಿರು ಎರಡರಲ್ಲೂ ವ್ಯಕ್ತವಾಗುತ್ತಿತ್ತು. ಹೆಚ್ಚಿನ ತಂದೆ ತಾಯಿಯಂದಿರಿಗೆ ಅದೊಂದು ರೀತಿಯ ಅವ್ಯಕ್ತ ಭಯ.ಅದಕ್ಕೆ ಕಾರಣವೂ ಇಲ್ಲದಿಲ್ಲ. ಕುದಿವಯಸ್ಸಿನ ಹುಡುಗಿಯರಿಗೆ ಇದು ಅರ್ಥವಾಗುತ್ತಲೂ ಇಲ್ಲ. ಅವರದ್ದೇನಿದ್ದರೂ ಬಣ್ಣಗಳನ್ನು ಅರಸುವುದೇ ಕೆಲಸ. ಕಾರಣ ಏನಾಗುತ್ತದೆ ಅಥವಾ ಏನಾದರೂ ಆಗಿಹೋಗುತ್ತದೆ ಎನ್ನುವುದರ ಆತಂಕಕ್ಕಿಂತ ಅಯ್ಯೋ ಯಾವ ಘಳಿಗೆಯಲ್ಲಿ ಯಾವ ಹುಡುಗರ ಮನಸ್ಸು ಎಂಥಾ ಯೋಜನೆ ರೂಪಿಸುತ್ತದೋ, ಇಷ್ಟು ದಿವಸ ಹೂವಿನಂತೆ ಸಾಕಿದ ಮಗಳು ಹೊಸ ಹರೆಯದ ಅಲೆಗಳಿಗೆ ಹೇಗೆ ಸ್ಪಂದಿಸುತ್ತಾಳೋ ಎನ್ನುವ ತಲ್ಲಣದ ಜೊತೆಯಲ್ಲಿ ಬದಲಾಗುತ್ತಿರುವ ಸಾಮಾಜಿಕ ಸ್ಥಿತಿಗಳಲ್ಲಿ ಆಕೆ ಸಿಲುಕಿ ಹೋಗಬಹುದಾದ ಪರಿಸ್ಥಿತಿಗೆ ಕಾಳಜಿ ಮತ್ತು ಭಯ ಎರಡೂ ಮಿಳಿತ ಕರುಳಿನ ಸಂಕಟ ಅದು. ಅಸಹಾಯಕತೆ ಅದು. ಹೊರತಾಗಿ ಮಗಳನ್ನು ಸಂಶಯಿಸುವ ಅಥವಾ ಆಕೆಯನ್ನು ಕೂಡಿ ಹಾಕಿ ಕಾಯಬೇಕು ಎನ್ನುವ ಯಾವ ಇರಾದೆಯೂ ಆಕೆಗಿಲ್ಲ. ಆದರೆ ನಿನ್ನೆ ಮೊನ್ನೆಯವರೆಗೂ ಬಾಗಿಲ ಬಳಿ ನಿಂತುಕೊಂಡೆ ಅಮ್ಮನ ಕೈತುತ್ತು ತಿಂದು ಓಡುತ್ತಿದ್ದ ಹುಡುಗಿಯರು ಇವತ್ತು ಅದೇ ಅಮ್ಮನ ಮುಖಕ್ಕೆ ಗುರಾಯಿಸಿ ಬಾಗಿಲಿಕ್ಕಿಕೊಂಡು ಕೂರುತ್ತಿದ್ದಾ ರೆ, ಉಪವಾಸ ಎನ್ನುವುದು ಕಾಮನ್ ಆಗುತ್ತಿದೆ. ಕಾರಣ ಹೊತ್ತಲ್ಲದ ಹೊತ್ತಲ್ಲಿ ಮೇಸೇಜು ಮತ್ತು ಚಾಟ್ ನಡೆಸಲು ಪಾಲಕರು ಅಡ್ಡಿಯಾಗಬಾರದು. ಈ ಘಟನೆ ಕೇವಲ ಆರೆಂಟು ತಿಂಗಳ ಹಿಂದಿನದು. ನಿಮಗೂ ನೆನಪಿರಬಹುದು. ಸಹನಾ ತುಂಬ ಮುದ್ದು ಮುದ್ದಾಗಿ ಬೆಳೆದ ಹುಡುಗಿ. ಓದು, ಹಾಡು, ಡಾನ್ಸು, ಟ್ರೆಕ್ಕಿಂಗು ಹೀಗೆ ಎಲ್ಲದರಲ್ಲಿ ಕ್ಲಾಸು, ಮಾಸು ಎರಡರಲ್ಲೂ ಬೆಳೆದು ನಿಲ್ಲುತ್ತಿದ್ದ ಆಕೆಯ ವೇಗ ಎಂಥವರ ಕಣ್ಣು ಕೊರೈಸುವಂತಹದ್ದು. ಅದಕ್ಕೆ ಸರಿಯಾಗಿ ಸುಮಾರು ಕಾಲದಿಂದಲೂ ಆ ಕುಟುಂಬದ ಬದುಕು, ಸಂಸಾರ ಅಂತೆಲ್ಲ ಅಗೀಗ ಸಮಕಾಲೀನ ಸ್ಥಿತಿಯಲ್ಲಿ ಕಷ್ಟ ಸುಖ ಹಂಚಿಕೊಳ್ಳುತ್ತಲೂ ಆಪ್ತನಾಗಿ ನಾನು ಗಮನಿಸುತ್ತಿರುವ ಚೆಂದದ ಸಂಸಾರದಲ್ಲಿ ಅಷ್ಟೆ ಮುದ್ಮುದ್ದು ಹುಡುಗಿ. ವಿಪರೀತ ಎನ್ನಿಸುವಷ್ಟು ಕ್ರಿಯೇಟಿವಿಟಿಯೇ ಹುಡುಗಿಗೆ ಮುಳುವಾಯಿತಾ ಅಥವಾ ಈಗಿನ ಹುಡುಗರೆನ್ನುವ ಸಂತತಿಯೇ ಹಾದಿ ತಪ್ಪುತ್ತಿದೆಯಾ? ಇತ್ತೀಚೆಗೆ ನನ್ನನ್ನು ತೀವ್ರ ಗೊಂದಲಕ್ಕೀಡು ಮಾಡಿದ ವಿಷಯ. ಹನ್ನೆರಡು-ಹದಿಮೂರು ದಾಟಿದ ಯಾವುದೇ ಹುಡುಗನ ಪ್ರಥಮ ಆಯ್ಕೆ ಸೆಕ್ಸು ಎಂಬಂತಾಗಿದೆ.
ಪ್ರತಿ ಹುಡುಗಿಯರಲ್ಲಿ ಅವನಿಗೊಬ್ಬ ಹೀರೋಯಿನ್ ಕಾಣುತ್ತಿದ್ದಾ ಳೆ. ಅವನ ಮನಸ್ಸಿನಲ್ಲಿ ಅವನದ್ದೇ ಪಿಕ್ಚರು ಶುರು. ಅವನೇ ಅಲ್ಲಿ ಕಬಾಲಿ. ಅವನೇ ಸುಲ್ತಾನು. ಅದಕ್ಕೆ ಸರಿಹೊಂದಿಸಿಕೊಳ್ಳಲು ಹುಡುಗಿ. ಹೀಗೆ ಮನಸ್ಸು ಪಕ್ವಗೊಳ್ಳುವ ಮೊದಲೇ ಹಾದಿತಪ್ಪುವ, ತಪ್ಪುತ್ತಿರುವ ಹುಡುಗರಿಗೆ ತೀವ್ರವಾಗಿ ಕೈಗೆ ಸಿಕ್ಕಿರುವ ಅಸ ಮೊಬೈಲು ಮತ್ತು ಚೆಂದದ ಮಾತುಗಳು. ಶೇ.90ಕ್ಕೂ ಹೆಚ್ಚು ಹುಡುಗರ ಮನಸ್ಥಿತಿ ಇದೇ ಇದ್ದರೂ ಶೇ.60ರಷ್ಟು ಹುಡುಗರಿಗೆ ಪೂರೈಸಿಕೊಳ್ಳುವ ಧೈರ್ಯವಿಲ್ಲದಿರುವುದೂ, ಬಾಹ್ಯ ಬೆದರಿಕೆಯಿಂದಲೂ ತೆಪ್ಪಗಿರುತ್ತಿದ್ದಾ ರೆ ಎನ್ನುತ್ತಿದೆ ಸಮೀಕ್ಷೆ. ಸಹನಾ ಅನ್ನುವ ಹುಡುಗಿ ಅದೆಷ್ಟು ಚೆಂದವಾಗಿ ಇದ್ದಳೋ ಮನೆಯಲ್ಲೂ ಅದ್ಭುತ ಎನ್ನುವ ಕೌಟುಂಬಿಕ ಸಾಂಗತ್ಯ ಆಕೆಗಿತ್ತು. ಆ ಹುಡುಗಿಯ ಬೆಳವಣಿಗೆಗೆ ಮಾರುಹೋಗಿ ಅದ್ಯಾವ ಘಳಿಗೆಯಲ್ಲಿ ಅವರಪ್ಪ ಮೊಬೈಲು ಕೊಡಿಸಿದನೋ ಆಕೆಯ ಬದುಕು ಬರಗೆಡಲು ಅಷ್ಟು ಸಾಕಾಗಿತ್ತು. ಸಮೀರ್ ಎನ್ನುವ ಮೋಟರ್ ಸೈಕಲ್ ಮೇಲೆ ಸರ್ಕಸ್ಸು ಮಾಡುವ ಹುಡುಗ ಆಕೆಯ ಸುತ್ತ ತಿರುಗುತ್ತಿದ್ದುದೇ ಅವನ ಅಂಗಡಿಗೆ ಸರ್ವೀಸ್ಗೆ ಬರುತ್ತಿದ್ದ ಗಾಡಿಗಳ ಮೇಲೆ ಎನ್ನುವುದನ್ನು ಅರಿಯುವ ವೇಳೆಗೆ ತಡವಾಗಿದೆ. ಅದ್ಹೇಗೋ ಆಕೆಯ ಮೊಬೈಲ್ ನಂಬರು ಸಂಪಾದಿಸಿದವನು ಹಗಲು ಹನ್ನೆರಡು ತಾಸು ಆಕೆಯ ಹಿಂದೆ ಬಿದ್ದು ಮೆಸೇಜುಗಳ ಮೇಲೆ ಮೆಸೇಜು ಹಾಕಿದ್ದಾನೆ. ಮೊದಮೊದಲು ನಿರ್ಲಕ್ಷಿಸಿದರೂ ಕ್ರಮೇಣ ಅಪರಿಚಿತ ನಂಬರಿಗೆ ಪ್ರತಿಕ್ರಿಯೆ ಮಾಡಲು ಆರಂಭಿಸಿದ ಸಹನಾ ಚಾಟಿನಲ್ಲಿ ಸಿಲುಕಿದ್ದಾ ಳೆ. ಹುಡುಗ ತೀವ್ರವಾಗಿ ಆಕೆಯ ಮನಸ್ಸಿನ ಮೇಲೆ ಬಣ್ಣಗಳ ಚಿತ್ತಾರ ಬಿಡಿಸಿದ್ದಾ ನೆ. ಅಪ್ಪಟ ಚಿತ್ರಕಥಾನಕದಂತೆ ಬದುಕಿನ ಸುಂದರ ಮುಖವನ್ನಷ್ಟೇ ಇನ್‌ಬಾಕ್ಸಿನಲ್ಲಿ ತೆರೆದಿರಿಸಿದ್ದಾ ನೆ. ಅವನಾರೆಂದು ಗೊತ್ತಾಗುವ ವೇಳೆಗಾಗಲೇ ಆಕೆ ಕದಲಲಾರದಷ್ಟು ಭಾವಗಳಲ್ಲಿ ಆಕೆಯನ್ನು ಬೆಸೆದಾಗಿತ್ತು. ಹುಡುಗಿ ಯಾಮಾರಿದ್ದಾ ಳೆ. ಕದ್ದುಕದ್ದು ಮೊಬೈಲು ಬಳಸತೊಡಗಿದ್ದಾ ಳೆ. ಆದರೆ ಎಷ್ಟೆ ಕದ್ದಾ ಡಿದರೂ ತೀರಾ ಉರಿದುಕೊಳ್ಳುವ ಒಂದು ವರ್ಗವಿರುತ್ತದಲ್ಲ ಅವರು ಇಂತಹ ವಿಷಯದಲ್ಲಿ ಸಮಯ ಕಾಯುತ್ತಿರುತ್ತಾರೆ. ಸಮಯಕ್ಕೆ ಸರಿಯಾಗಿ ಅಪ್ಪನಿಗೆ ಸುದ್ದಿ ಸಿಕ್ಕಿದೆ. ಮನೆಯಲ್ಲಿ ರಂಪಾಟ ಆರಂಭವಾಗಿದೆ. ಬೈದಾಡಿ ಏನು ಮಾಡಿದರೂ ಹುಡುಗಿ ತಕ್ಷಣಕ್ಕೆ ಸುಧಾರಿಸಿಯಾಳು ಎನ್ನುವ ಹಂತವನ್ನಾಕೆ ದಾಟಿ ಹೋಗಿದ್ದಾ ಳೆ ಎನ್ನುವುದು ಆಗ ಅರಿವಾಗಿಲ್ಲ. ಮೇಲ್ಮಾತಿಗೆ ಎ ಸರಿ ಹೋಗಿದೆ ಎನ್ನುವಂತೆ ನಂಬಿಸಿದ್ದಾ ಳೆ.ಎಲ್ಲ ಸರಿ ಹೋಯಿತು ಎಂದುಕೊಂಡರೆ ಕೆಲವೇ ತಿಂಗಳಲ್ಲಿ ಮತ್ತೆ ಅವನ ಜೊತೆ ಕದ್ದು ಕಾಣಿಸಿಕೊಳ್ಳತೊಡಗಿದ್ದಾ ಳೆ. ಈಗ ಪರಿಸ್ಥಿತಿ ಗಂಭೀರವಾಗಿದೆ. ಸರಿಯಾಗಿ ಇನ್ನೂ ನೆತ್ತಿಯ ಮಾಸು ಹಾರದಿದ್ದ ಹುಡುಗಿ ಮನೆಯಲ್ಲಿ ‘ಏನೀಗ’ ಎಂದು ಅವನ ಕುಮ್ಮಕ್ಕಿನಿಂದ ಕಾಲೂರಿದ್ದಾಳೆ. ಅದೆಲ್ಲಿತ್ತೋ ಸಿಟ್ಟು, ಅಲ್ಲಿವರೆಗೂ ಇದ್ದ ಅಸಹನೆ, ಅಷ್ಟೂ ವರ್ಷಗಳ ಮುದ್ದುತನ ಒಮ್ಮೆಲೆ ತನಗೆ ವಿರುದ್ಧವಾಗಿದ್ದು ಎ ಸೇರಿ ರಪರಪನೆ ಬಾರಿಸಿದ್ದಾ ನೆ. ಅಷ್ಟೆ. ಅತ್ತಲಿಂದಹುಡುಗ ಆತ್ಮಹತ್ಯೆಯ ನಾಟಕದ ಐಡಿಯಾ ಕೊಟ್ಟಿದ್ದಾನೆ.
ಕೊಂಚ ಎಡವಟ್ಟಾಗಿ ಹುಡುಗಿ ಅರಳುವ ಮೊದಲೇ ಶಾಶ್ವತವಾಗಿ ಅಪ್ಪ-ಅಮ್ಮಂದಿರನ್ನು ಕಣ್ಣೀರಿನಲ್ಲಿ ಕೈತೊಳೆಯಲು ಬಿಟ್ಟು ಜೀವ ಕಳೆದುಕೊಂಡಿದ್ದಾಳೆ. ಆದರೆ, ಸಹನಾ ಸತ್ತು ಮೂರು ತಿಂಗಳಾಗುವ ಮೊದಲೇ ಆ ಹುಡುಗ ಇನ್ನೊಬ್ಬಳಿಗೆ ಮೆಸೇಜು ರವಾನಿಸತೊಡಗಿದ್ದಾನೆ! ಇದೆಲ್ಲ ಗೊತ್ತಿದ್ದೂ ಅವನ ಜೊತೆಗೆ ಇನ್ನೊಬ್ಬಾಕೆ ಕಾಣಿಸಿಕೊಳ್ಳತೊಡಗಿದ್ದಾ ಳೆ. ಅವನಿಗೆ ಈಗ ಈಕೆಯ ಯಾವ ನೆನಪು ಸಂಕಟ ಏನೂ ಇದ್ದಂತಿಲ್ಲ. ಏನಯ್ಯ ಎಂದು ವಿಚಾರಿಸಿದರೆ ‘ಸುಮ್ನೆ ಒಂದಷ್ಟು ಸುತ್ತಿದ್ವಿ ಎಂದು ಆಕೆಯನ್ನೇ ನೆನಸ್ಕೊಂಡು ಕೂರೋಕಾಗುತ್ತಾ ಅಂಕಲ್. ಈ ವಯಸ್ನಲ್ಲಿ ಇದೆ ಕಾಮನ್’ ಎನ್ನುತ್ತಾ ಅವನು ಸ್ಪ್ಯಾನರ್ ತಿರುವುತ್ತಿದ್ದಾನೆ. ಅವನಿಗೆ ಬದುಕು, ಹುಡುಗಿಯರು ಮತ್ತು ಸಂಬಂಧಗಳು ನಟ್ಟು, ಬೋಲ್ಟು ಬದಲಿಸಿದಷ್ಟೇ ಸಲೀಸು. ‘ಯಾಕ್ರಮ್ಮ ಹಿಂಗೆಲ್ಲ ಮನೆಬಿಟ್ಟು ಓಡಿ ಹೋಗ್ತೀರಿ’ ಎಂದು ಕೆಲ ಹುಡುಗಿಯರನ್ನು ಮಾತನಾಡಿಸಿದಾಗ ಬಂದ ಉತ್ತರ ದಂಗು ಬಡಿಸುವಂತಹದ್ದು. ‘ಸರ್. ಅವರೆಲ್ಲ ದುಬಾರಿ ಗಿಫ್ಟ್ ಕೊಡ್ತಾರೆ. ಒಳ್ಳೆ ಮೊಬೈಲ್ ಕೊಡಿಸ್ತಾರೆ’ ಎನ್ನುವುದು. ‘ಇವೂ ಒಂದು ಕಾರಣವಾ ಓಡಿ ಹೊಗಲು’ ಎಂದರೆ ಪೆದ್ದ ನಗುವಿಗಿಂತ ಬೇರೆ ಉತ್ತರವಿರಲಿಲ್ಲ. ಹೀಗೆ ಮನಸ್ಸು ಮತ್ತು ಬುದ್ಧಿ ಎರಡನ್ನೂ ಯಾವ್ಯಾವುದಕ್ಕೋ ಧಾರೆ ಎರೆಯುವ ಸಹನಾಳಂತಹ ಹುಡುಗಿಯರಿಗೆ ಒಂದು ಅರ್ಥವಾಗಬೇಕಿತ್ತು. ಕಾಳು ಹಿಡಿದು ಓಡಾಡುತ್ತಿರುವವರ ಸಂಖ್ಯೆ ಇವತ್ತು ಅವರ ಕಲ್ಪನೆಗೂ ಮೀರಿದೆ. ಅದಕ್ಕಾಗಿ ಹುಡುಗರು ಮಾಡುವ ಯೋಜನೆಗಳು, ಹಾಕುವ ಸೋಗುಗಳೂ ಯಾರ ಅಂದಾಜಿಗೂ ನಿಲುಕದಷ್ಟಿವೆ. ಅದಕ್ಕೆ ಸರಿಯಾಗಿ ತಾವು ‘ಗುಡ್ ಇನ-’ ಎಂದುಕೊಂಡು ಗುಂಡಿಗೆ ಬೀಳುತ್ತಿರುವ, ಅಲ್ಲಿವರೆಗೂ ಬಳ್ಳಿಯಂತೆ ಎದೆಗಪ್ಪಿ ಸಂತೈಸಿದ ಅಪ್ಪ-ಅಮ್ಮ ಮತ್ತು ಅನಾಮತ್ತಾಗಿ ಬದುಕಿನ ಅಷ್ಟೂ ಸಂಕಟಕ್ಕೆ ಜೊತೆಗೊಡುವ ಸಹೋದರರು ಹೀಗೆ ಎಲ್ಲರ ಬಂಧನಕ್ಕೆ ಎಳ್ಳು ನೀರು ಬಿಡುವ ಹುಡುಗಿಯರು ಸಮಾಜದ ಮತ್ತು ನೋವಿನ ಬದುಕಿಗೆ ಮೂಲವಾಗುತ್ತಿದ್ದಾ ರೆ. ಕನಿಷ್ಠ ಯಾರ ಜತೆಗೆ ಹೋಗಬೇಕು, ಬಾರದು ಎನ್ನುವ ಸಣ್ಣ ವಿವೇಚನೆಯೂ ಮಾಡದೆ ಹುಡುಗಾಟಕ್ಕಿಳಿದು ಎಷ್ಟೋ ಕಡೆಗಳಲ್ಲಿ ಇವತ್ತು ಸಾಮರಸ್ಯ ಸಮಾಜ ಹೋಳಾಗಲು ಕಾರಣವಾಗುತ್ತಿದ್ದಾ ರೆ. ಏನೇ ಆದರೂ ಕೊನೆಯಲ್ಲಿ ಮತ್ತೆ ‘ಸರಿಯಾಗಿ ಮಗಳನ್ನು ನೋಡಿಕೊಳ್ಳಬೇಕಿತ್ತಮ್ಮ’ ಎಂದೆನ್ನಿಸಿಕೊಳ್ಳುವ ಅಮ್ಮ, ಕಳೆದು ಹೋಗಿದ್ದ ಮಗಳು, ಭವಿಷ್ಯದ ಕತ್ತಲೆ ಎರಡಕ್ಕೂ ಈಡಾಗಿ ನಿಡುಸುಯುತ್ತಿದ್ದಾ ಳೆ. ಕಾರಣಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)

1 comment:

  1. ಇಂದಿನ ಯುವಜನತೆಯ ಸ್ವೇಚ್ಚಾಚಾರದ ಬದುಕಿಗೆ ಹಿಡಿದ ಕೈಗನ್ನಡಿ ನಿಮ್ಮ ಲೇಖನ. ಹೆತ್ತವರನ್ನೇ ಶತ್ರುಗಳಂತೆ ಭಾವಿಸಿ ಹುಡುಗರ ಹಿಂದೆ ಬೀಳುವ, ಕೊನೆಗೆ ನೇಣಿಗೆ ಕೊರಳೊಡ್ಡುವ ಹೆಣ್ಣು ಮಕ್ಕಳಿಗೆ ಕಪಾಳಕ್ಕೆ ಬಾರಿಸಿದಂತಿದೆ! :-(

    ReplyDelete