Sunday, May 15, 2016

ಬೇಗ ದೊಡ್ಡವಳಾದದ್ದು ನನ್ನ ತಪ್ಪಾ...?

ಕೆಲವೊಮ್ಮೆ ಬೇಕಿದ್ದಾ ಬೇಡದೆಯೋ ಅರಿವಿಲ್ಲದೆ ದ್ವೇಷ ಬೆಳೆಸಿಕೊಂಡು ಬಿಡುವ ಹೆಂಗಸರು ಕೊನೆಯವರೆಗೂ ಅದರಿಂದ ಹೊರಬರದೆ ಹೋಗುತ್ತಾರೆ. ಆದರೆ, ಅಂಥ ಯಾವುದೇ ಸಂಕಟಗಳಿದ್ದರೂ ಅವನ್ನೆಲ್ಲ ಮೀರಿ ಸಹ್ಯವಾಗುವಂತೆ, ಬದುಕೋದಿದೆಯಲ್ಲ ಅದನ್ನೂ ಬಹುಶಃ ಹೆಣ್ಣುಮಕ್ಕಳಷ್ಟು ಚೆನ್ನಾಗಿ ಇನ್ನಾರೂ ಮಾಡಲಿಕ್ಕಿಲ್ಲ.

 ತುಂಬಾ ಹೆಣ್ಣುಮಕ್ಕಳು ಕಾರಣವೇ ಇಲ್ಲದೆ ಅಸಹನೆ ಪ್ರಕಟಿಸುತ್ತಿರುತ್ತಾರೆ. ಕಾಮೆಂಟು, ರೇಗುವುದು ಕೊನೆಯಲ್ಲಿ ಮುಖ ದಪ್ಪಮಾಡಿ ಹೊರಡುವುದು. ಅದರಲ್ಲೂ ಕಿರಿಕಿರಿಯಾಗುವಂತೆ ಸಣ್ಣ ಸಣ್ಣದಕ್ಕೂ ರೇಗುತ್ತಿರುತ್ತಾರೆ. ಪದ್ದಿ ಚಿಕ್ಕಿ ಹೀಗೆ ಬೈದು ಬೈದೇ ಕೊನೆಯಲ್ಲಿ ತೀವ್ರ ಹೊಡೆದಾಟದವರೆಗೂ ಪ್ರಕರಣ ಬೆಳೆಯಲು ಕಾರಣವಾದದ್ದು ಲಕ್ಷ್ಮೀ ಬೇಗ ದೊಡ್ಡವಳಾದಳೆಂಬ ಕಾರಣಕ್ಕೆ ಆಕೆಯನ್ನು ನಿರಂತರವಾಗಿ ಹಂಗಿಸುತ್ತಿದ್ದುದು!ನಮ್ಮೆಲ್ಲ ಹುಡುಗರ ಗುಂಪಿನಲ್ಲಿ ಅಪರೂಪದ ದೈತ್ಯ ಹುಡುಗಿ ಲಕ್ಷ್ಮೀ. ನಮ್ಮೆಲ್ಲರನ್ನು ಹಿಂದಿಕ್ಕಿ ಮರ ಏರುವುದು, ನದಿಗೆ ಬೀಳುವುದು, ಗೇರಣ್ಣು, ಕ್ಯಾರಣ್ಣು ಸೇರಿದಂತೆ ಬ್ಯಾಣದಲ್ಲಿ ತಿರುಗುತ್ತಾ, ಕೊನೆಗೆ ಕಂಬಳಿಗೊಪ್ಪೆ ಹಾಕಿಕೊಂಡು ‘ಉಂಬಳ ಹಿಡಿತದೆ’ ಎಂದು ನಾವೆಲ್ಲ ನೀರಿಗೆ, ಗದ್ದಾಗೆ ಇಳಿಯಲು ಹಿಂದೇಟು ಹಾಕುತ್ತಿದ್ದರೆ ಗದ್ದಾಯಲ್ಲಿ ಆಕೆಯ ಗುದಮುರಿಗೆ ಶುರುವಾಗಿ ಆಗಲೇ ಒಂದು ಗಂಟೆಯಾಗಿರುತ್ತಿತ್ತು. ಅಷ್ಟಾಗಿ ಆಕೆಗೇನೂ ಇಂಥಾದ್ದೇ ಕೆಲಸ, ಆಟ, ಊಟ ಎಂದೇನೂ ನಿಯಮವೂ ಇರುತ್ತಿರಲಿಲ್ಲ. ಅನಾಮತ್ತಾಗಿ ಮರ ಹತ್ತುವುದೂ ಸೇರಿದಂತೆ ಎಲ್ಲ ರೀತಿಯ ಗೌಜಿಗೂ ಪಕ್ಕಾಗುತ್ತಿದ್ದಳು. ‘ಶೀ... ಹುಡ್ಗಿ ಎಂತಾ ನಮನೀ ಇದು’ ಎಂದು ರೇಗಿಸಿದರೆ, ‘ನಾನಿಲ್ದಿದ್ರೆ ಒಂದ್ ಸೌಂಡೂ ಇರದಿಲ್ಯೆ ತಿಳ್ಕಾ’ ಎಂದು ಕಣ್ಣು ಬೀಡುತ್ತಿದ್ದಳು. ಅದು ನಿಜವೂ ಆಗಿತ್ತು. ಲಕ್ಷ್ಮೀ ಇದ್ದಲ್ಲಿ ಜೀವಂತಿಕೆ ಇರುತ್ತಿತ್ತು.
ಆದರೆ, ಆಕೆ ತೀರಾ ಹತ್ತರ ಆಸುಪಾಸಿಗೆ ದೊಡ್ಡವಳಾದಳಲ್ಲ, ಆಗ ಶುರುವಾಯಿತು ನೋಡಿ ಜಟಾಪಟಿ! ಆಕೆ ಹುಡುಗರೊಂದಿಗೆ ಬೆರೆಯುವಂತಿಲ್ಲ. ಮರ ಹತ್ತುವಂತಿಲ್ಲ. ಈಸು ಬೀಳುವಂತಿಲ್ಲ. ‘ತಿಂಗಳಿಗೆ ಮೂರು ದಿನ ಕಟ್ಟುನಿಟ್ಟು ಹೊರಗೆ ಕೂತುಕೋ’ ‘ಅಲ್ಲಿ ಅದು ಮುಟ್ಬೇಡಾ, ಇಲ್ಲಿ ಹಾಯಬೇಡಾ ಮೈಲಿಗೆ’ ಎನ್ನುವುದೆಲ್ಲ ಹೇಗೋ ಸೈರಿಸಿಕೊಳ್ಳುತ್ತಿದ್ದಳೇನೋ ಆದರೆ ತಿನ್ನುವ ವಿಷಯದಲ್ಲಿ ಅತ್ತೆ ಪದ್ದಿ ಚಿಕ್ಕಿಗೂ ಆಕೆಗೂ ಶರಂಪರ ಹೊಯ್ದಾಟಗಳಾಗುತ್ತಿದ್ದವು. ಅಷ್ಟಕ್ಕೂ ಪದ್ದಿ ಚಿಕ್ಕಿಯ ಮಗಳೂ ಜೊತೆಗಿದ್ದಳಲ್ಲ. ಹದಿನಾಲ್ಕಾದರೂ ಹಾಗೇಯೆ ಇದ್ದಳಲ್ಲ. ಅದಂತೂ ಚಿಕ್ಕಿಗೆ ಒಳಗೊಳಗೆ ಭಯಾನಕ ಸಂಕಟವನ್ನುಂಟು ಮಾಡುತಿತ್ತು. ಆವತ್ತೊಂದಿನ ಲಕ್ಷ್ಮೀ ಮುಂಜಾನೆ ಉಳಿದ ಹುಡುಗರೊಂದಿಗೆ ದೋಸೆ ತಿನ್ನುತ್ತಿದ್ದಳು. ಸಾಲಾಗಿ ಆರೆಂಟು ದೋಸೆ ಬೀಳದೆ ಏಳುವ ಹುಡುಗಿಯಲ್ಲ, ಅತ್ತ ಹಂಚಿನ ಮುಂದೆ ಕೂತಿದ್ದ ಪದ್ದಿ ಚಿಕ್ಕಿಗೆ, ಅದೆಲ್ಲಿಯ ಅಸಹನೆ ಎದ್ದಿತ್ತೋ, ‘ಹಿಂಗೆ ತಿಂದ್ರೆ ಇನ್ನೇನಾಗುತ್ತೇ? ನಯಾ ಪೈಸೆ ಉತ್ಪನ್ನ ಇಲ್ಲ. ಶಾಮಣ್ಣ ನಿನ್ ಮಗಳು ತಿನ್ನೋದ್ರಲ್ಲಿ ಮಾತ್ರ ಹುಷಾರಿ ಅನ್ಕಂಡಿದ್ದಾ. ಇಷ್ಟು ಬೇಗ ಮೈಗೂ ಸಮಾ ಬಿಸಿ ಅಂತಾ ಗೊತ್ತಾಗಿದ್ದೇ ಈಗ ನೋಡು’ ಎನ್ನುತ್ತಾ ಆಕೆಯ ತಿನ್ನುವ ಪರಿಗೂ ಆಕೆಯ ದೇಹಭಾಷೆಗೂ ಸೇರಿಸಿಯೇ ರೇಗಿದ್ದಳು. ಅಷ್ಟೆ, ಎಲೆಯ ತುದಿಗಿದ್ದ ಬೆಲ್ಲದ ಮೇಲೆ ಕೈಲಿದ್ದ ದೋಸೆಯನ್ನು ರಪ್ಪನೆ ಕುಕ್ಕಿ, ‘ನಾನು ಹೆಂಗೆ ಬೆಳೆದ್ರೂ, ತಿಂದ್ರೂ ನಮಪ್ಪಂದು ಚಿಕ್ಕಿ. ನಾನೇನು ಬ್ಯಾರೆವ್ರ ಮನೇಲಿ ನಿಮ್ಮ ಥರಾ ಗುಪ್ಪೆ ಹಾಕ್ಕೊಂಡು ಕೂತು ಪುಕ್ಸಟ್ಟೆ ಮೇಯ್ತಿಲ್ಲ’ ಎಂದು ಮಾತು ಸಿಡಿಸಿಬಿಟ್ಟಿದ್ದಳು. ಆವತ್ತಿನ ಬಿರುಕು ಇನ್ಯಾವತ್ತಿಗೂ ಮುಚ್ಚಲಾಗಲೇ ಇಲ್ಲ. ಅಸಲಿಗೆ ಚಿಕ್ಕಿಯ ಮತ್ತು ಲಕ್ಷ್ಮೀಯ ಅಪ್ಪನ ಇಬ್ಬರ ಅನಿವಾರ್ಯತೆಗಳು ಆಸ್ತಿಗೆ ಸಂಬಂಧಿಸಿದಂತೆ ಇದ್ದಿದ್ದೂ ಹೌದೇ ಆಗಿತ್ತು. ಹಾಗಾಗಿ ಆಕೆ ಇಲ್ಲಿಯೇ ಬೀಡುಬಿಟ್ಟಿದ್ದು ಇತ್ತು. ಆದರೆ, ಸುಲಭಕ್ಕೆ ಸೂಕ್ಷ್ಮಗಳಿಗೆ ಒಗ್ಗದ ಲಕ್ಷ್ಮೀ ಎಲ್ಲಾ ಸೇರಿಸಿಕೊಂಡು ಮೇಲೆ ಬಿದ್ದಿದ್ದಳು. ಆವತ್ತಿಂದ ಅವರಿಬ್ಬರ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗಧಗನೇ ಉರಿಯುವ ಪರಿಸ್ಥಿತಿ ನಿರ್ಮಾಣವಾಗಿ ಹೋಗಿತ್ತು. ಅದರಲ್ಲೂ ಕಾಲೇಜು ಮುಗಿಯುವ ಹೊತ್ತಿಗೆ ಚಿಕ್ಕಿಗೂ ಲಕ್ಷ್ಮೀಗೂ ಅದ್ಯಾಕೋ ತೀರಾ ನೀರಿಗೂ ಬೆಂಕಿ ಬೀಳುವಂಗಾಡುತ್ತಿದ್ದರು. ‘ಹುಡುಗಿಯರಿಗ್ಯಾಕೆ ಕಾಲೇಜು? ಅದೂ ಅಷ್ಟೊಂದು ಖರ್ಚು ಮಾಡಿ ಇಂಜಿನೀಯರಿಂಗ್ ಓದಿಸ್ಬೇಕು...’ ಎಂಬೆಲ್ಲಾ ಚರ್ಚೆಗಳೂ ಭಯಾನಕ ಜಗಳದಲ್ಲಿ ಕೊನೆಯಾಗುತ್ತಿದ್ದವು. ಆಕೆಗೆ ಲಕ್ಷ್ಮೀಯನ್ನು ಓದಿಸುವುದು ಬೇಡಿತ್ತು. ಕಾರಣ ಚಿಕ್ಕಿ ಮಗಳು ಏನೇ ಮಾಡಿದರೂ ಪಿಯುಸಿನೇ ದಾಟುವುದು ಡೌಟಿತ್ತು. ಹಾಗಾಗಿ ವಿದ್ಯೆ, ಮದುವೆ ಎನ್ನುವ ವಿಷಯದಲ್ಲಿ ರಂಪವೇ ನಡೆಯತೊಡಗಿ ಕೊನೆಗೆ ಅಪ್ಪ ಲಕ್ಷ್ಮೀಯನ್ನು ಮಂಗಳೂರು ಕಡೆ ಹಾಸ್ಟೇಲ್‌ಗೆ ಬಿಟ್ಟು ಒಂದು ಹಂತಕ್ಕೆ ಸುಧಾರಿಸಿದ್ದ. ಅದಾದ ನಂತರ ಕಾಲೇಜು, ಇಂಜಿನಿಯರಿಂಗ್ ಎಂದೆ ಲಕ್ಷ್ಮೀ ಓದುತ್ತಿದ್ದಾಳೆನ್ನುವುದರ ಮಾಹಿತಿಗಳಿದ್ದವಾದರೂ, ಅವೆಲ್ಲಕ್ಕಿಂತಲೂ ಹೆಚ್ಚು ಆಕೆಯ ಚಿಕ್ಕಂದಿನ ಹಳವಂಡಗಳೇ ನೆನಪಾಗುತ್ತಿದ್ದವು. ಬಾರ.. ಹೋಗಾ.. ಎನ್ನುತ್ತಿದ್ದ ನನ್ನನ್ನೀಗ ಮಾವಾ ಎಂದೇ ಕೂಗುತ್ತಿದ್ದಳು.
ಈ ಮಧ್ಯೆ ಒಂದಿನ ಹುಡುಕಿ ಕರೆ ಮಾಡಿದ್ದೂ ಅಲ್ಲದೆ, ‘ಮಾಮಾ ಎಂಥದ್ದಾ ಕತೆ ಗಿತೆ ಬರಿತಿಯಂತ.. ಎಂತಕ್ಕೆ ನಿಂಗೆಂತೂ ಬ್ಯಾರೆ ಕೆಲ್ಸಾ ಇಲ್ದೆನಾ?’ ಎಂದು ನನ್ನ ಬರಹ ಮತ್ತದರ ದೊಡ್ಡಸ್ತಿಕೆಯನ್ನೆಲ್ಲ ಒಂದೇ ಏಟಿಗೆ ಗುಡಿಸಿ ಹಾಕುತ್ತಿದ್ದರೆ, ‘ಹೌದೇ ಮಾರಾಯ್ತಿ ನಿನ್ನಂಗೆ ನನ್ನ ಕೂರಿಸಿ ಯಾರೇ ಅನ್ನ ಹಾಕ್ತಾರೆ? ನೀನೋ ಮಹಾಲಕ್ಷ್ಮೀ’ ಎಂದು ರೇಗಿಸುತ್ತಾ ಆವತ್ತಿಗೆ ಮಾತು ಮುಗಿಸಿದ್ದಾ. ಕಳೆದ ವರ್ಷ ಒಮ್ಮೆ ಅಪರಾತ್ರಿಯಲ್ಲಿ ಜಡ್ಡಿಗದ್ದಾಯಿಂದ ವಾಪಸ್ಸು ಬರುವಾಗ ನೆನಪಾಗಿ-‘ಬೆಳಗ್ಗೆ ಮನೆ ಹತ್ತಿರ ಬರ್ತೇನೆ ಮಾರಾಯ್ತಿ ಇದ್ದಿಯಾ’ ಎಂದು ಮೆಸೇಜು ಬಿಟ್ಟಿದ್ದಾ. ಉಹೂಂ.. ಯಾವ ಉತ್ತರವೂ ಇರಲಿಲ್ಲ. ಇನ್ಯಾವತ್ತೋ ಸಿಕ್ಕಿ ಆಕೆಯೊಂದಿಗೆ ಮನೆ ಕಡೆ ನಡೆದು ಹೋಗುತ್ತಿದ್ದರೆ ಲಕ್ಷ್ಮೀಯ ಬಿರುಸಿನಲ್ಲಿ ಒಂದಿನಿತೂ ಕಡಿಮೆಯಾಗಿಲ್ಲ ಎನ್ನಿಸಿತ್ತು. ಆಗಲೇ ಆಕೆಯ ಅಪ್ಪ ತೀರಿಹೋಗಿ ವರ್ಷ ಕಳೆದುಹೋಗಿತ್ತು. ಮದುವೆನೂ ಯಾಕೋ ಬರಕತ್ತಾಗಿರಲಿಲ್ಲ ಅನ್ನೋದು ಕಿವಿಗೆ ಬಿದ್ದಿತ್ತಾದರೂ ನಿರ್ದಿಷ್ಟ ಕಾರಣಗಳೂ ಗೊತ್ತಿರದೆ ನಾನು ಮಾತಾಡಲಿಲ್ಲ. ಈಗಲೂ ಅದೇ ವಡ್ಡಿಯಂತಹ ಭರಾಟೆ ಆಕೆಯದ್ದು.
ಚೆನ್ನಾಗೇ ಓದಿಕೊಂಡ ಲಕ್ಷ್ಮೀ ಸರಹೊತ್ತಿಗೆ ಪ್ರೀತಿಗೆ ಬಿದ್ದವಳು ಅದ್ಯಾಕೋ ಬರಕ್ಕತ್ತಾಗದೆ ಅಪ್ಪ ತೋರಿಸಿದವನನ್ನು ಮದುವೆ ಆಗಿದ್ದಾಳೆ. ಆದರೆ, ಮದುವೆ ಜೊತೆಜೊತೆಗೆ ಆಕೆಯ ಪ್ರೇಮ ಕಥಾನಕದ ಇತಿಹಾಸ ಅವಳ ಗಂಡನ ಮನೆ ತಲುಪಿ ಹುಯಿಲಿಗೀಡಾಗಿತ್ತು. ಎಲ್ಲ ಗೊತ್ತಿದ್ದವರೇ ಅಡ್ವಾನ್ಸ್ ಫಿಟ್ಟಿಂಗು ಇಟ್ಟುಬಿಟ್ಟಿದ್ದರು ಲಕ್ಷ್ಮೀಯ ಬದುಕಿಗೆ. ಆದರೆ, ಒರಟು ಹುಡುಗಿ ಒಂದಿಷ್ಟು ಸಹಿಸಿಕೊಂಡವಳು ಸಹನೆ ಮುಗಿಯುತ್ತಿದ್ದಂತೆ ನಿರಂತರ ಕಿತ್ತಾಟ ನಿಲ್ಲಿಸಿ ಎದ್ದು ಬಂದಿದ್ದಾಳೆ. ಗಂಡನಿಗೂ ಬೇಡವಾಗಿತ್ತೋ, ಊರಕಡೆಯಿಂದ ಎಗ್ಗಿಲ್ಲದೆ ಸಲ್ಲದ ಚಾಡಿ ಹೇಳಿದ್ದು ವರ್ಕೌಟ್ ಆಗಿತ್ತೋ ಒಟ್ಟಾರೆ ಲಕ್ಷ್ಮೀ ಮನೆಗೆ ಬರುವ ಹೊತ್ತಿಗೆ ಇಲ್ಲೂ ಅಪ್ಪ ಹಾಸಿಗೆಗೆ ಬಿದ್ದಿದ್ದ. ಚಿಕ್ಕಿಯ ಹಿಡಿತ ಮತ್ತು ಆಕೆಯ ಮಗಳ ಮದುವೆ ಇತ್ಯಾದಿಗಳ ತಿಕ್ಕಾಟದಲ್ಲಿ ಮನೆಯ ಪರಿಸ್ಥಿತಿ ಸುಧಾರಿಸೋ ಲಕ್ಷಣವೇ ಕಾಣಿಸುತ್ತಿರಲಿಲ್ಲ. ಆದರೂ ಅಪ್ಪನ ಜೊತೆಯಲ್ಲಿರಬೇಕಾದ ಅನಿವಾರ್ಯತೆ ಮತ್ತು ವ್ಯವಹಾರಕ್ಕೂ ಕೈಯಿಕ್ಕಿದ ಲಕ್ಷ್ಮೀ ಆವತ್ತು ದೊಡ್ಡವಳಾದ ದಿನದಿಂದಲೂ ಎದುರಿಸಿದ್ದಕ್ಕೇ ಪಕ್ಕಾಗುತ್ತಾ ಚಿಕ್ಕಿಯ ಎದುರು ಕಾಲೂರಿದ್ದಾಳೆ.
ಚಿಕ್ಕಿಯ ಪ್ರೀತಿಯ ಮಗಳು ಮದುವೆಯಾಗುತ್ತಿದ್ದಂತೆ ಚಿಕ್ಕಿಯ ಕೈಬಿಟ್ಟಿದ್ದಳು. ವ್ಯವಹಾರಗಳು ಸಂಬಂಧವನ್ನು ಮುರಿಯತೊಡಗಿದ್ದವು. ಅದರಲ್ಲೂ ಲಕ್ಷ್ಮೀ ಮನೆಗೆ ಬಂದು ಅವರಪ್ಪನ ವ್ಯವಹಾರ ಕೈಗೆ ತೆಗೆದುಕೊಂಡಿದ್ದು ಯಾರಿಗೂ ಸಹ್ಯವಾಗಿರಲೇ ಇಲ್ಲ. ಅದರಲ್ಲೂ ಚಿಕ್ಕಿಯ ಮಗಳಿಗೆ. ಕೊನೆಗೆ ಸಮಯ ಎಲ್ಲದಕ್ಕೂ ಮದ್ದರೆಯುವಂತೆ ಯಾರೊಂದಿಗೂ ಈಡಾಗದ ಚಿಕ್ಕಿ ಹಾಸಿಗೆ ಪಾಲಾಗಿದ್ದಾಳೆ. ವಯಸ್ಸಿನ ಜತೆಗೆ ನಡುವಿನ ಎಲಬುಗಳು ಕರಗಿ ಹೋಗಿ ಕಾಬಾಳೆ ದಂಟಿನಂತಾಗಿದ್ದಾಳೆ. ಲಕ್ಷ್ಮೀ ಸರಿಯಾಗಿ ನೋಡಿಕೊಳ್ಳದಿದ್ದರೆ ಇಷ್ಟೊತ್ತಿಗೆ ಚಿಕ್ಕಿನೂ ಹೋಗಿರುತ್ತಿದ್ದಳೇನೊ. ಆದರೆ ಎಂಥಹದ್ದೇ ವಡ್ಡಿಯಾದರೂ, ಹೆಣ್ಣು ಮಾಡುವ ವಗಾತಿಯೇ ಬೇರೆ.
‘ಚಿಕ್ಕಿ ಒಂದೇ ಸಮನೆ ಕಾಡಿದ್ಲು ಅಂತಾ ನಾನು ಬಿಡ್ಲಿಕ್ಕಾಗ್ತದೇನೋ? ನಂಗೊತ್ತು. ನನ್ನ ಗಂಡನ ಮನೆಗೆ ಸುದ್ದಿ ಕೊಡ್ತಿದ್ದಾರೆ ಈ ಅಮ್ಮ-ಮಗಳು. ಆಗ ನನ್ನ ಟೈಂ ಸರಿ ಇರ‍್ಲಿಲ್ಲ. ಈಗ ಚಿಕ್ಕಿದು. ಅಪ್ಪನ ಬೆನ್ನಿಗೆ ಹುಟ್ಟಿದೋಳು ಅಲ್ವಾ ಬಿಡೋಕಾಗುತ್ತಾ? ಮಾಡಿಕೊಂಡ ಕರ್ಮಕ್ಕೆ ಈಗ ಸ್ವಂತ ಮಗಳೂ ಜತೆಗಿಲ್ಲ. ಅಷ್ಟು ಮುಚ್ಚಟೆಯಿಂದ ಬೆಳೆಸಿದ್ಲು. ಎಂಥಾ ಪ್ರೀತಿ? ಆದರೆ ಹೆಣ್ಣುಮಕ್ಳಿಗೆ ಅಪವಾದ ಅನ್ನೋ ಹಂಗೆ ಅವರಮ್ಮನ್ನೇ ಬಿಟ್ಟು ಹೋಗಿದ್ದಾಳೆ. ಈಗ ನಾನೂ ಬಿಟ್ರೆ ಇನ್ಯಾರಿದಾರೆ ಕುಟುಂಬದಲ್ಲಿ? ಚಿಕ್ಕಿ ಇನ್ನು ಬದುಕಿದ್ದಾಗಲೇ ಅವಳಿಗೆ ಅಮ್ಮನ ಆಸ್ತಿ ಮೇಲೆ ಕಣ್ಣು. ದುಡ್ಡು ದುಗ್ಗಾಣಿ ಹೆಂಗೆ ಮನುಷ್ಯರನ್ನ ಹಾಳು ಮಾಡ್ತದೆ ನೋಡು ಮಾವ. ಚಿಂತೆಲಿ ಚಿಕ್ಕಿ ಇತ್ತ ಬದುಕಿದ್ರೂ ಇಲ್ಲದಂಗಾಗಿದಾಳೆ’.
ಸಂಪತ್ತು, ಬಡಿದಾಡಿ ಸ್ಥಾಪಿಸಿಕೊಂಡಿದ್ದ ಅಧಿಕಾರ, ಮಗಳಿಗೊಂದು ದಿಕ್ಕು ಎಲ್ಲ ಮಾಡಿದ ಚಿಕ್ಕಿ ಯಾವ ದಿಕ್ಕು ದೆಸೆ ಇಲ್ಲದಂತೆ ಮಲಗಿದ್ದಳು. ಜೀವಮಾನಕ್ಕಾಗುವಷ್ಟು ದ್ವೇಷವನ್ನಾಕೆಯ ಮೇಲೆ ಕಾರಿದ್ದರೂ, ಬದುಕಿರುವಷ್ಟೂ ದಿನವೂ ಆಕೆಯ ಜತೆಗೇ ಇರಬೇಕಿದೆ. ಅಸಲಿಗೆ  ಲಕ್ಷ್ಮೀ ಬೇಗ ದೊಡ್ಡವಳಾದ ದಿನದಿಂದಲೂ ನಿರಂತರ ಅಸಹನೆಗೆ ಕಾರಣವಾಗಿದ್ದು, ಈಗ ಲಕ್ಷ್ಮೀಯ ದೊಡ್ಡತನ ಚಿಕ್ಕಿಯ ಅರಿವಿಗೆ ಬಂದಿರುತ್ತದಾ? ಹಾಗಂತ ಹೇಳಿಯಾಳೇ? ಚಿಕ್ಕಿಯ ಬೆಡ್ ಪಕ್ಕ ಸ್ಟೂಲಿನ ಮೇಲೆ ಕೂತೇ ಮುಖ ನೋಡಿದೆ. ಕಣ್ಣು ಪಿಳಿ ಪಿಳಿ ಆಡಿದವು. ಕೊಂಚ ಗೆರೆಗಳು ಕದಲಿದವು. ಊಹೂಂ, ಏನು ಹೇಳಬೇಕಿತ್ತೋ? ದನಿ, ದೃಷ್ಟಿ ಎರಡೂ ಕದಲಲ್ಲಿಲ್ಲ.
                           ಕಾರಣ  ಅವಳು ಎಂದರೆ...

No comments:

Post a Comment