Monday, January 18, 2016

ಚೆ೦ದದ ಘಳಿಗೆಗಳಿಗೆ ಆಯಸ್ಸು ಕಮ್ಮಿ..

ವ್ಯವಸ್ಥೆ ಇದ್ದಾಗಲೂ ಗಾಡಿಗಳು ಹಳಿ ತಪ್ಪುತ್ತವೆ. ಆದರೆ ತೀರಾ ನಿಯತ್ತಿನ ಬದುಕಿಗೂ ಕಣ್ಣು ಬೀಳುತ್ತಲ್ಲ...? ನಾವೇನೇ ಬದುಕುತ್ತಿದ್ದೇವೆ೦ದರೂ, ಎಷ್ಟೇ ಚೆ೦ದದ ಗೂಡು ಮಾಡಿಕೊ೦ಡರೂ ಕೊನೆಯಲ್ಲೆಲ್ಲೊೀ ಕೈಮೀರಿದ ಆಘಾತಕ್ಕೆ ಸಿಕ್ಕಿಬಿಡುವುದು ಮಾತ್ರ ದುರ೦ತ. 



ತೀರಾ ಕ್ಲಚ್ಚು, ಪ್ಯಾಡುಗಳಿಗೆ ಕಾಲೂ ನಿಲುಕದಿದ್ದ ಕಾಲದ ಭಯಾನಕ ಸ್ಪೀಡಿನಲ್ಲಿ ಗಾಡಿ ಓಡಿಸುವ, ಇಂಗ್ಲಿಷ್ ಸ್ಟಂಟುಗಳ ಸಾಹಸಕ್ಕೆ ಮನಸೋತಿದ್ದವನು ನಾನು. ಆದರೆ ಗಾಡಿ ಅತ್ಲಾಗಿರಲಿ.. ಓಣಿಯ ಹುಡುಗರೆಲ್ಲ ಮೆಟ್ರಿಕ್ ಹೊತ್ತಿಗೆ ಬೈಕನ್ನು ಸರಾಗವಾಗಿ ಚಲಾಯಿಸುತ್ತಿದ್ದರೆ, ಬಾರ್ ಮೇಲೆ ಸರಿಯಾಗಿ ಕಾಲು ಹಾಕಲೂ ನಾನು ಕಲಿತಿರಲಿಲ್ಲ. ಕಡೆಗೂ ಸ್ವಂತಕ್ಕೊಂದು ಸೈಕಲ್ಲಿನ ಕನಸು ಈಡೇರಲೇ ಇಲ್ಲ. ಕೈಗೆ ದಕ್ಕದ ಆಗಸದ ಬಗ್ಗೆ, ನಿಲುಕುವುದಿಲ್ಲ ಬಿಡು ಎನ್ನಿಸುತ್ತಿದ್ದಂತೆ ಬಿಟ್ಟೂಬಿಡುತ್ತೇನೆ. ಆಗದ್ದನ್ನು ಆಗುವುದಿಲ್ಲ ಎಂದೊಪ್ಪಿಕೊಳ್ಳುವುದರಲ್ಲಿ ನನಗ್ಯಾವ ಅವಮಾನಗಳೂ ಕಾಡಿದ್ದಿಲ್ಲ.
ಆದರೆ ಕೆಲವೊಮ್ಮೆ ಸಮಯ ನಮಗರಿವಿಲ್ಲದೆ ಲಬಕ್ಕನೆ ತಿರುಗಿಬಿಡುತ್ತದೆ. ಹಾಗೆ ತಿರುಗಿದ ಹೊತ್ತಿನಲ್ಲಿ ಅನಾಮತ್ತಾಗಿ ಆಗಿನ ಕಾಲದ ಆರ್ಟಿಝೆಡ್ಡು, ಕಮ್ಯಾಂಡರ್ ಜೀಪು, ಅಂಬಾಸೆಡರು, ಫೀಯೆಟ್ಟು ಕೊನೆಗೆ, ಬೆಳಗಿನ ಹಾಲು ಪೂರೈಸುವ ವ್ಯಾನುಗಳು, ತರಕಾರಿ ವಾಹನ, ಕಾರ್ಪೋರೇಷನ್ನಿನ ನಾಯಿ ಹಿಡಿಯುವ ಗಬ್ಬುಗಾಡಿ ಹೀಗೆ ಕಣ್ಣಿಗೆ ಕಂಡ ಗಾಡಿಗಳೆಲ್ಲ ಕೈಗೆಟುಕಿ ಹೋಗಿದ್ದು ಮತ್ತು ಆ ಕಾಲ ಎರಡೂ ಇತಿಹಾಸ. ಹಾಗೆ ನನ್ನ ಗಾಡಿಗಳ ಹುಕಿಯನ್ನು ಮತ್ತು ಇಲ್ಲಿವರೆಗಿನ ಕನಿಷ್ಠ ಒಂದೂ ಕಾಲು ಲಕ್ಷ ಕಿ.ಮೀ. ಡ್ರೈವಿಂಗನ್ನು  ದೇಶದ ಉದ್ದಗಲಕ್ಕೂ ಯಾವುದೇ ಅಪಘಾತವಿಲ್ಲದೆ ಪೂರೈಸಿದ್ದರೆ ಖಂಡಿತಕ್ಕೂ ಅದರ ಕ್ರೆಡಿಟ್ಟು ಚಂದುಕಾಕನಿಗೆ ಸಲ್ಲಬೇಕು.
‘ಸ್ಟೆರಿಂಗ್ ಮ್ಯಾಲೆ ಕೈಯಿಟ್ಟು ಕಣ್ಮುಚ್ಚಿದರೂ ಕೈಕಾಲು ಅಲ್ಲ ಹೋಗಬೇಕು, ಗಸಕ್ಕಂತ ಬ್ರೇಕ್ ಹೊಡದರೂ ಎದಿ ಒಡ್ಕೊಬಾರದು ನೋಡು. ಅಂದರನ ಪಕ್ಕಾ ಡ್ರೈವಿಂಗ್..’ ಎನ್ನುತ್ತಿದ್ದ ಚಂದುಕಾಕ. ಅವನ ಯೆಜ್ಡಿ ಅತಿದೊಡ್ಡ ಆಕರ್ಷಣೆ ಆಗ. ಸ್ವತಃ ಮೆಕಾನಿಕ್ ಆಗಿದ್ದ ಚಂದುಕಾಕ ಅಗತ್ಯಕ್ಕಿಂತ ದೊಡ್ಡ ಟೈರು, ಮ್ಯಾಚೇ ಆಗದ ಹ್ಯಾಂಡಲ್ಲು, ಒಂಟೆಯ ಡುಬ್ಬದಂತಹ ಸೀಟು, ಮೊರದಂತಹ -ಟ್‌ರೆಸ್ಟು ಇಂತಹ ಅವತಾರಗಳಿಂದ ಪಕ್ಕದ ಹೊಸ ಗಾಡಿ ನಿಲ್ಲಿಸಿದ್ದರೂ, ಜನರ ಕಣ್ಣು ಅಲ್ಲಿಂದ ಕದಲುತ್ತಿರಲಿಲ್ಲ. ತುಂಬ ನುರಿತ ಡ್ರೈವರ್ ಆಗಿದ್ದ ಚಂದುಕಾಕನೇ ನನ್ನಲ್ಲಿ ಡ್ರೈವಿಂಗ್‌ನ ನಶೆ ಏರಿಸಿದವನು ಎಂದರೂ ತಪ್ಪಾಗಲಿಕ್ಕಿಲ್ಲ. ಇವತ್ತಿಗೂ ಸತತ ಹದಿನಾರು ಗಂಟೆ ಕಾರು ಚಲಾಯಿಸುವ ಹವ್ಯಾಸಕ್ಕೆ ಪಕ್ಕದಲ್ಲಿ ಕೂತಿದ್ದವರೇ ಹೈರಾಣಾದರೂ ನಾನು ಆಕ್ಸಿಲೇಟರಿಂದ ಕಾಲ್ತೆಗೆದದ್ದಿಲ್ಲ.
ಚಂದುಕಾಕನ ಗಾಡಿ ರಸ್ತೆಗಿಳಿದರೆ ಸಾಕು ಮುದ್ದು ಮುzಗಿದ್ದ ಅವನ ಮಗಳು ಕಿಂಯ್ಯೋ.. ಎಂದರಚುತ್ತ ಬಾಗಿಲ ಬಳಿಯಲ್ಲಿ ತೆವಳಲು ಪ್ರಯತ್ನಿಸುತ್ತಿತ್ತು. ಐದು ತಿಂಗಳ ಮಗುವನ್ನು ಎದುರಿಗೆ ಕಪ್ಪೆ ತರಹ ಬಾರಲು ಕೂರಿಸಿಕೊಂಡು ಕಾಕಾ ಸುತ್ತು ಹೊಡೆಸುತ್ತಿದ್ದ. ಪಿಳಿಪಿಳಿ ಕಣ್ಣು ಬಿಡುತ್ತಾ ಪುಟ್ಟಿ ಪೆಟ್ರೋಲ್ ಟ್ಯಾಂಕಿನ ಮೇಲೆ ದಬ್ಬಾಕಿಕೊಂಡು ಕೂರುತ್ತಿತ್ತು. ಅವನು ಸೈಡು ಸ್ಟ್ಯಾಂಡ್ ಹಾಕಿದರೂ ಕದಲದೆ ಅದರ ಮೇಲೆ ಗುರಾಯಿಸುತ್ತಾ ಕೂತೇ ಇರುತ್ತಿದ್ದ ಮಗುವನ್ನು ಅವನಿಗಿಂತ ಮೊದಲು ನಾನು ಎತ್ತಿಕೊಂಡು ಇಳಿಸಿಕೊಳ್ಳುತ್ತಿz.‘ಇದೆ ಮಕ್ಳಿಗೆ ಅಭ್ಯಾಸ ಅಗ್ಬೇಕು ಸುಮ್ನಿರ್ ನೀನು..’ ಎಂದು ಗದರುತ್ತಿದ್ದ. ಆದರೆ ಅದೆಲ್ಲಿಂದಲೋ ಸುಂಟರಗಾಳಿಯಂತೆ ಬರುತ್ತಿದ್ದ ಕಕ್ಕಿ, ‘ಇನ್ನೊಮ್ಮೆ ಪುಟ್ಟಿನ್ನ ಕರ್ಕೊಂಡು ಹೋದರ ಬರೀ ಕೊಡ್ತೇನ್ ನೋಡ. ನಡೀರಿ ಅತ್ಲಾಗೆ. ಗಲೀಜ್ ಗಾಡಿ.. ಕರ್ರನ ಬಣ್ಣ, ಗಬ್ಬವಾಸನಿ, ಅದರ ಮೈತೊಳದ ಎಷ್ಟ ದಿನಾ ಆತೋ. ಸಣ್ಣ ಕೂಸ ಅನ್ನೋ ಖಬರ್ ಬ್ಯಾಡ’ ಎಂದು ಯಾವ ಲೆಕ್ಕದಲ್ಲೂ ಪಾಲುದಾರನಲ್ಲದ ನನ್ನನ್ನೂ ಸೇರಿಸಿಕೊಂಡು ಕೈಗೆ ಸಿಕ್ಕಿದ ಪಾತೇಲಿ, ಟುವಾಲು, ಪಿಸವಿ, ಮೊಗಚಿಕಟ್ಟಿಗಿ... ಯಾವುದೆಂದರೆ ಅದರಿಂದ ಅಟ್ಟಾಡಿಸುತ್ತಿದ್ದಳು.
ಆ ಕ್ಷಣಕ್ಕೆ ಮಗುವನ್ನು ಕಿತ್ತುಕೊಂಡು ನಮ್ಮನ್ನು ಬೈದಾಡಿ ಹೋದರೂ ಕಕ್ಕಿಗೆ ಚಂದೂಕಾಕನ ಗಾಡಿಗಳ ವ್ಯಾಮೋಹದ ಬಗ್ಗೆನೂ ಅಷ್ಟೇ ಹೆಮ್ಮೆ ಇತ್ತು. ಅವನ ಗ್ಯಾರೇಜು ಮತ್ತು ಗಾಡಿ ಅಷ್ಟಿಷ್ಟು ಹೊಲಸಾದರೂ, ತಾನೆ ಬೆಳಬೆಳಗ್ಗೆ ನೀರು ಸೋಕಿ ತಿಳಿದಷ್ಟು ಸ್ವಚ್ಛ ಮಾಡಿಡುತ್ತಿದ್ದಳು. ತುಂಬ ಸಂಯಮದಿಂದಲೂ, ಎಚ್ಚರಿಕೆಯಿಂದಲೂ, ಬಳಲಿಕೆ, ಬಾಯರಿಕೆ ಇತ್ಯಾದಿ ಬಾಧೆಗಳಿಗೆ ಒಗ್ಗಿಕೊಂಡೂ, ಸ್ಥೀಮಿತತೆ ಕಳೆದುಕೊಳ್ಳದೆ ಹೇಗೆ ಡ್ರೈವರಿಕೆ ಮಾಡಬೇಕೆನ್ನುವುದರ ಅಪ್ಪಟ ಗುರು ಅವನೇ ನನಗೆ. ಊರಿಗೆಲ್ಲ ಚಂದುಕಾಕಾ -ಮಸ್ಸಾದರೂ ಕಕ್ಕಿಗೆ ಮಾತ್ರ ಆತ ಎಬಡ ಡ್ರೈವರ್.
‘ಬರೇ ಬ್ರೆಕ್ ಹಾಕ್ತಾರು, ಜೋಲಿ ಹೋದಂಗಾಗ್ತದ, ಇವ್ರ ಗಾಡ್ಯಾಗ ಕುಂತಷ್ಟ ಹೊತ್ತೂ ನಿಗರಾಣಿ ಇಟ್ಟ ಕುಂದರಬೇಕ ನೋಡು, ಜೋರ್ ಓಡಸ್ತಾರು, ತಿರುವಿನ್ಯಾಗೂ ಹಾರ್ನ್ ಮಾಡೊಲ್ಲ, ನಡಬರಕ ಓಡಸ್ತಾರು, ಎಡ ಬಲ ಇಲ್ಲ. ಕಿಡಕಿ ತಗದಿಟ್ಟರ ಗಾಳಿ ಭಾಳ, ವಾಂತಿ ಬಂದಂಗಾಗ್ತದ...’ ಹೀಗೆ ಒಂದೆರಡಲ್ಲ ಆಕೆಯ ಕಂಪ್ಲೆಂಟುಗಳು.
‘ಕಂಡವರೆಲ್ಲ ನನ್ನ ಡ್ರೈವರಿಕಿ -ಮಸ್ಸು ಅಂತಾರ. ಈಕೀಗ ಮಾತ್ರ ಗಾಡ್ಯಾಗ ಕುಂಡ್ರಾಕ ಹೆದ್ರಿಕಿ. ಇನ್ನ ಹೆಂಗ ಗಾಡಿ ಹೋಡಿಲ್ಯೋ..? ಬರೇ ಇಪ್ಪತ್ತರಾಗ ಓಡಿಸ್ಲೇನು..’ ಎಂದು ಕಾಕಾ ರವರವ ಚೀರುತ್ತಿದ್ದ. ಅವರಿಬ್ಬರ ಚೆಂದದ ಸರಸಕ್ಕೂ, ಪ್ರೀತಿಯ ಜಗಳಕ್ಕೂ ಎರಡೂ ಕಡೆ ಪಾರ್ಟಿ ವಹಿಸಬೇಕಾದಾಗೆಲ್ಲ ಕಾಕಾನ ಕಡೆಯಿಂದಲೂ ಮೇಜುವಾನಿಗೂ, ಕಕ್ಕಿಯ ಕಡೆಯಿಂದ ಕಜ್ಜಾಯದ ಸಂತೆಗೂ ನಾನು ಪಕ್ಕಾಗುತ್ತಿz.
ಕೆಲದಿನದ ಹಿಂದೆ ಅವನಿಂದ ತಂದುಕೊಂಡಿದ್ದ ಗಾಡಿ ನನ್ನ ಬಳಿಯೇ ಉಳಿದು ಎರಡ್ಮೂರು ವಾರವೇ ಆಗಿತ್ತು. ಗ್ಯಾರೇಜಿಗೆ ಬಿಟ್ಟು ಬರೋಣವೆಂದು ಮನೆ ಕಡೆ ಹೋಗುವ ಹೊತ್ತಿಗೆ ಜನಸಂದಣಿ. ಮನೆ, ಗ್ಯಾರೇಜು, ರಸ್ತೆ ಎಲ್ಲೂ ಜನವೋ ಜನ. ಊರಕಡೆಯಿಂದ ಟೆಂಪೋದಲ್ಲಿ ಬರುತ್ತಿದ್ದ ಕಕ್ಕಿ ಜೀವಂತವಾಗಿ ಈಚೆಗೆ ಬಂದಿಲ್ಲ. ಅರಳುಮರಳಿನ ಕಾಕಾ, ಏನೂ ತಿಳಿಯದ ಮಗು ಪೆಕರು ಪೆಕರಾಗಿ ಅರಬರೆ ಅಳುತ್ತಾ ಕೂತಿದೆ. ಗಾಡಿ, ಅಲ್ಟರೇಷನ್ನು, ಆ ವೇಗ ಎಲ್ಲ ಮಡಚಿಟ್ಟ ಬದುಕು ಬಾರಲು ಬಿದ್ದಿತ್ತು. ಬಂದಿದ್ದ ಜನ ನೆಂಟರು ಎಲ್ಲ ಕರಗಿದರು. ಚಂದುಕಾಕಾ, ಪುಟ್ಟಿ ಮತ್ತು ಗ್ಯಾರೇಜು ಎಲ್ಲ ಮೌನವಾಗಿ ಹೋಗಿದ್ದವು. ಆದರೆ ತಿಂಗಳೊಪ್ಪತ್ತಿನಲ್ಲಿ ಎದ್ದು ನಿಂತಿದ್ದ ಕಾಕಾ.
ಮಗು ಏಳುವ ಮೊದಲೇ ಎದ್ದು ಕಕ್ಕಿ ಮಾಡುತ್ತಿದ್ದಂತೆ ಬೆಳ್‌ಬೆಳಗ್ಗೆ ಹಾಲು, ಆಮೇಲೆ ತಿಂಡಿ, ಮಧ್ಯಾಹ್ನ ತರಕಾರಿ, ಊಟದ ನಂತರ ಒಂದು ಗುಕ್ಕು ನಿz.. ಆಗ ಶುರುವಾಗುತ್ತಿತ್ತು ಮರಣಸಂಕಟ. ಮಗು ‘ನಾನು ಮಧ್ಯ ಮಲಗಬೇಕು. ಅಮ್ಮ ಎಲ್ಲಿ..’ ಎನ್ನುತ್ತಾ ಎದ್ದು ಕೂತು ಬಿಡುತ್ತಿತ್ತು. ಭರಭರನೆ ಮನೆಯೆಲ್ಲ ಹುಡುಕುತ್ತಿತ್ತು. ಕಕ್ಕಿ ಇzಗ ಕರ್ಟನ್ ಹಿಂದೆ ನಿಂತು ಬಚ್ಚಿಟ್ಟುಕೊಂಡು ಆಡಿಸುತ್ತಿದ್ದ ಕಣ್ಣಮುಚ್ಚಾಲೆ ನೆನೆಸಿಕೊಂಡು ಬಾಗಿಲಿನದಷ್ಟೇ ಅಲ್ಲ ಕಿಟಕಿಯ ಕರ್ಟನ್‌ಗಳನ್ನೂ ಅಡಿಸಿ ನೋಡುತ್ತ, ಕುಸುಕುಸು ಮಾಡಿ ಅಳುತ್ತ ‘ಅಮ್ಮ ಕಾತ ಕೊದಲ್ಲ..ಬಾ..’ ಎಂದು ತೊದಲಾಡುತ್ತಾ ನಿಂತು ಬಿಡುತ್ತಿದ್ದರೆ ಜಗತ್ತಿನ ಅಷ್ಟೂ ಅಳು ಅಲ್ಲೇ ಸುರಿಯುತ್ತಿತ್ತು.
ತೀರಾ ಹಲ್ಲು ಕಚ್ಚಿ ಕೂರುತ್ತಿದ್ದ ಕಾಕಾ ಅರೆಬರೆ ಅಳುತ್ತಾ ‘ಅಮ್ಮ ಟಾಯ್ಲೆಟ್ಟಿಗೆ ಹೋಗಿದೆ ಪುಟ್ಟ..’ ಎನ್ನುತ್ತಾ ಸಂಭಾಳಿಸಲು ನೋಡುತ್ತಿದ್ದನಾದರೂ ಮಗು ಸೋಲೊಪ್ಪದೆ, ಅಲ್ಲೂ ಬಾಗಿಲಾಚೆ ನಿಂತು ಸಂದಿಗೆ ಪುಟ್ಟ ಪುಟ್ಟ ಬೆರಳಿಂದ ತಟ್ಟುತ್ತಾ‘ಅಮ್ಮ ಬಾ ..ಬಾ..’ ಎನ್ನುತ್ತಿತ್ತು. ಮನೆಯೆಲ್ಲ ಭಣಭಣ ಎನಿಸುವುದು ಮಗುವಿಗೂ ಸಹ್ಯವಾಗುತ್ತಲೇ ಇರಲಿಲ್ಲ. ಅಂತೂ ಮತ್ತಾರು ತಿಂಗಳು ಕಳೆಯುವ ಹೊತ್ತಿಗೆ ಅಮ್ಮ ಬರುವುದಿಲ್ಲ ಎನ್ನುವ ಕಹಿಸತ್ಯದ ಜೊತೆಗೆ ಅಪ್ಪನಿಗೆ ಹೊಂದಿಕೊಳ್ಳುವ ಅನಿವಾರ್ಯತೆಗೆ ಪಕ್ಕಾಗತೊಡಗಿತ್ತು. ಗ್ಯಾರೇಜನ್ನು ಹುಡುಗರು ನೋಡಿಕೊಳ್ಳುತ್ತಿದ್ದರು. ಅಗತ್ಯ ಬಿzಗ ಮಾತ್ರ ಮಗುವನ್ನು ಬಿಟ್ಟು ಕೈಗೆ ಗವಸು ತೊಡುತ್ತಿದ್ದ ಕಾಕಾ ಮಗುವನ್ನು ಅಪ್ಪಟ ಕಕ್ಕಿಯಂತೆ ದೇಖರೇಖಿ ಮಾಡುತ್ತಿದ್ದ. ಆಗೀಗ ಸುಮ್ಮನೆ ಕಾಕಾ ಜೊತೆ ಕೂತೆದ್ದು ಬರುವುದರ ವಿನಃ ನಮ್ಮ ಹುಡುಗರ ಹಿಂಡಿಗೂ ಮಾತೇ ಇರಲಿಲ್ಲ.
‘ಆಗಿzತು ಕಾಕಾ ಪುಟ್ಟಿ ಬಾಳೆನರ ಹಸನಾಗಬೇಕಲ್ಲ. ಹಿಂಗ ಕೂಡಬ್ಯಾಡ’ ಎನ್ನುತ್ತಿದ್ದರೆ,‘ಆಕೀ ಜೊತಿಗೇ ಅರ್ಧಬದುಕು ಹೋತು ಇನ್ನೇನಿದ್ದರೂ ಪುಟ್ಟಿ ಮಾತ್ರ. ಆಕೀ ಇzಗ ದಿನಾ ನಾವಿಬ್ಬರೂ ಮಲಗೋತಂಕ ನಿಗಾ ಇಡತಿದ್ಲು. ಎಷ್ಟೊ ಸರ್ತಿ ನಾವಿಬ್ಬರೂ ಮಲಗಿದ್ದನ್ನು ಕಣ್ತುಂಬ ನೋಡಕೋತ ಹಂಗ ಕೂತಿರ್ತಿದ್ಲು. ಆಕೀ ಇಲ್ಲದ ವರ್ಷಾದರೂ ಮನೀ ಮಾತ್ರ ಇನ್ನು ಭಣಭಣ ಅನ್ನಿಸ್ತದನೋ. ಪುಟ್ಟಿ ಅಂದರ ಆಕೀಗೆ ಜೀವ. ನಿಮ್ಮ ಕಾಕಿ ನೋಡ್ಕಂಡಂಗ ಆಗೂದಿಲ್ಲ. ಆದರ ಕಸರಿಲ್ದಂಗ ಮಾಡ್ತೇನಿ. ಆಕೀ ಅಲ್ಲಿಂದನ ಪುಟ್ಟಿ ಮ್ಯಾಲ ನಿಗಾ ಇಟ್ಟಿರ್ತಾಳ ಮಾರಾಯ. ಈಗ ನೋಡು... ನಾ ಹೆಂಗಿದ್ದರೂ ಪಿಸವಿ ತೊಗೊಂಡು ಭಾರಸಾಕ ಯಾರೂ ಇಲ್ಲ. ಆದರ ಗಾಡಿ ಹೊಡಿಯೋ ಉಮೇದಿನ ಸತ್ತುಹೋತು ನೋಡ..’ ಚಂದುಕಾಕನ ಮಾತಿಗೆ ಕಣ್ಣೀರು ಕಪಾಳಕ್ಕೆ ಇಳಿಯುತ್ತಿದ್ದರೆ ನಾನೂ ಒzಯಾಗಿ ಹೋಗುತ್ತಿz. ಹೇಗೋ ಬದುಕು ಹಳಿಗೆ ಹತ್ತುತ್ತದಾ ಎನ್ನಿಸತೊಡಗಿತ್ತು. ವರ್ಷಗಳು ಉರುಳಲಾರಂಭಿಸಿದ್ದವು. ಪುಟ್ಟಿ ಬದುಕಿಗೆ ಏಗಿದ್ದಳು. ಆದರೆ ದೇವರು ಯಾಕೋ ಆ ಕುಟುಂಬದ ಮೇಲೆ ಮುನಿಸಿಬಿಟ್ಟಿದ್ದ. ಅದು ಮುಂದಿನ ವಾರಕ್ಕಿರಲಿ.
ಕಾರಣ
ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)

Saturday, January 9, 2016

ಕೈಗೆಟುಕದ ಕಾಡುಬೆಳದಿಂಗಳು...   


ಬಹುಶಃ ಒಳ್ಳೆಯತನ ಎನ್ನುವುದು ಹುಟ್ಟಿನಿಂದಲೇ ಬಂದಿರುತ್ತಾ ಅಥವಾ ಬೆಳೆಯುತ್ತಾ ಹಾಗೊಂದು ಸ್ಥಿತಿಗೆ ಹೆಣ್ಣುಮಕ್ಕಳು ಈಡಾಗಿಬಿಡುತ್ತಾರಾ ಗೊತ್ತಿಲ್ಲ. ಆದರೆ ಗಂಧದಂತೆ ಸ್ವತಃ ತೇಯ್ದು ಕಂಪು ಹರಡುವ ಗಟ್ಟಿತನವಿರುವುದು ಮಾತ್ರ ಆ ಜೀವದ ಎನ್ನುವುದು ಸಾಬೀತಾಗುತ್ತಲೇ ಇರುವ ಸತ್ಯ.
ಬಡತನ ಮತ್ತು ಮಕ್ಕಳೆನ್ನುವುದು ಒಂದಕ್ಕೊಂದು ಸೇರಿಕೊಂಡೆ ಬೆಳೆಯುವುದು ಆಗಿನ ಸಹಜತೆಯಾಗಿತ್ತು. ಅದರಲ್ಲೂ ಹಳ್ಳಿಗಳಲ್ಲಿ ಬದುಕು ಕಳೆಯುತ್ತಿದ್ದುದೇ ಮಕ್ಕಳು ಸಾಲುಸಾಲಾಗಿ ಹುಟ್ಟಿದರೆ ಎನ್ನುವ ಪರಿಸ್ಥಿತಿಯಿದ್ದ ಕಾಲ ಅದು. ಗುಂಪಿನಲ್ಲಿ ಗೋವಿಂದ ಎನ್ನುವಂತೆ ಆರು ಮಕ್ಕಳ ದೊಡ್ಡ ಟೀಮಿನೊಂದಿಗೆ ನಾನು ಏಳನೆಯವನಾಗಿ ಯಾವ ನಾಚಿಕೆಯೂ ಇಲ್ಲದೆ ಸೀತಕ್ಕನ ಮನೆಯಲ್ಲಿ ಗಂಗಾಳ ಹಿಡಿದುಕೊಂಡು ಕೂರುತ್ತಿz. ಲಿಂಗಾಯಿತರ ಮನೆ ರುಚಿಗಳೇ ಬೇರೆ. ಅದರಲ್ಲೂ ಮಾದೇಲಿಯಂತಹ ಗೋಧಿ ಕಜ್ಜಾಯಕ್ಕೆ ಎಂಥವನೂ ‘ಇನ್ನೊಂದ್ಸಲ್ಪ ಹಾಕ..’ಎನ್ನಬೇಕು. ಆದರೆ ಸೀತಕ್ಕ ಮಾತ್ರ ‘ಭಟ್ಟಾ... ನಿಮ್ಮಪ್ಪ ಬೈದ್ರ ನಂಗ್ ಗೊತ್ತಿಲ್ಲ. ಮೊದಲ ಹೇಳಿಲ್ಲ ಅನಬ್ಯಾಡ..’ ಎನ್ನುತ್ತಿದ್ದಳಾದರೂ,‘ಮಾಮಾ ಬೈದ್ರ ನನ್ನೆಸರು ಹೇಳು. ಏನೂ ಅನ್ನಾಂಗಿಲ್ಲ..’ ಎಂದೂ ಮುಚ್ಚಟೆ ಮಾಡುತ್ತಿದ್ದಳು. ಎಲ್ಲರಂತೆ ಸೀತಕ್ಕನ ಕುಟುಂಬವೂ ಆಗೀಗಿನ ಹಳವಂಡಗಳಿಗೆ ಸಿಲುಕುತ್ತಿತ್ತಾದರೂ, ಅದ್ಯಾವ ಸಂಕಟಗಳಿಗೂ ಮನೆಯ ಯಜಮಾನ ಇತ್ತ ತಲೆಯೇ ಹಾಕದಿದ್ದಿದ್ದು ಸೋಜಿಗ.
ಕ್ರಮೇಣ ವಿಷಯ ಈಚೆ ಬಂದಿತ್ತು. ಸೀತಕ್ಕನ ಗಂಡ ಇನ್ಯಾವಳz ಜೊತೆ ಹೋದವನು ಮನೆಗೇ ಬರುತ್ತಿರಲಿಲ್ಲ. ಇದರಿಂದ ಯಜಮಾನನಿಲ್ಲದ ಪರಿಸ್ಥಿತಿ ಏನಾಗಬಹುದಿತ್ತೋ ಅದೇ ಆಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಸೀತಕ್ಕ ಯಾವ ಬಿಸಿಯೂ ತನಗೂ, ತನ್ನ ಅರ್ಧ ಡಜನ್ ಮಕ್ಕಳಿಗೂ ತಟ್ಟಗೊಡಲಿಲ್ಲ. ಜಮೀನು ಪರಭಾರೆ ಮಾಡಿ ವರ್ಷಕ್ಕಿಷ್ಟು ಹಣ, ಊಟಕ್ಕಿಷ್ಟು ಅಕ್ಕಿ ಎಂದು ಪಂಚಾಯ್ತಿಕೆ ಮಾಡಿಸಿ ಬಗೆಹರಿಸಿಕೊಂಡಿದ್ದಳು. ಹಣದ ದಾರಿ ಬಂದಾಗುತ್ತಿದ್ದಂತೆ ಗಂಡ ಮನೆ ಬಾಗಿಲಿಗೆ ನಿಂತು ಗಲಾಟೆಗಿಳಿದಿದ್ದ. ಸೀತಕ್ಕನ ದೊಡ್ಡಮಗ ಮತ್ತು ಊರ ಹಿರಿಯರು ಅವನನ್ನು ಊರಾಚೆ ದಬ್ಬಿದ್ದರು. ಇದೆಲ್ಲದರ ಮಧ್ಯೆಯೂ ಎಲ್ಲ ಮಕ್ಕಳನ್ನು ಎಂಥಾ ಪರಿಸ್ಥಿತಿಯಲ್ಲೂ ಶಾಲೆಗೆ ಕಳಿಸಿ ಓದು ಮತ್ತು ವಿದ್ಯೆ ಎರಡಕ್ಕೂ ವಗಾತಿ ಮಾಡಿಕೊಂಡಿದ್ದಳು.
ಒಬ್ಬರಾದ ಮೇಲೊಬ್ಬರು ಕಲಿತು ನೌಕರಿ, ದಂಧೆ ಎನ್ನುತ್ತ ಊರು ಬಿಟ್ಟು ಪಟ್ಟಣದ ದಾರಿ ಹಿಡಿದಾಗಲೂ, ಹೆಣ್ಣುಮಕ್ಕಳಿಗೆ ಮದುವೆ ಆಗಿ ಹೋಗುವಾಗಲೂ ಸೀತಕ್ಕನ ಮಾತಿನಗಲಿ, ಮುಖದ ಮೇಲಾಗಲಿ ತನ್ನ ಬದುಕು ಹಿಂಗಾಯಿತಲ್ಲ ಎನ್ನಿಸಗೊಡಲಿಲ್ಲ. ವಾರಿಗೆಯ ಹೆಂಗಸರಿಗೂ ಸೀತಕ್ಕ ಗಟ್ಟಿಗಿತ್ತಿ. ಆದರೆ ಕ್ರಮೇಣ ಆಸ್ತಿ ಕೊಡುಕೊಳ್ಳುವಿಕೆಯಲ್ಲಿ ಮನಸ್ತಾಪಗಳಾದಾಗ ಮಾತ್ರ ಸೀತಕ್ಕ ಎಲ್ಲ ಮಕ್ಕಳನ್ನೂ ಕರೆದು ಹೇಳಿದ್ದಳು.
‘ನೋಡ್ರಪಾ.. ಒಬ್ಬ ತಾಯಾಗಿ ಏನು ಮಾಡ್ಬೇಕೊ ಅದನ್ನು ಮಾಡೀನಿ. ನಾ ಇರೋತಂಕ ಜಮೀನು ವ್ಯವಹಾರ ಎಲ್ಲ ಹಿಂಗ ನಡೀತದ. ಆ ಮೇಲೆ ಏನಾರ ಮಾಡ್ಕೊಳ್ರಿ. ಎಲ್ಲ ನಿಮ್ ನಿಮ್ ಊರಾಗ ಅರಾಮದಿರಿ. ನಿಮ್ಮನ್ನೆಲ್ಲ ಒಂದ ದಂಡಿಗೆ ಹಚ್ಚುವ ನನ್ನ ಕರ್ತವ್ಯಾ ನಾ ಮುಗ್ಸೇನಿ. ಕೋರಿಕುಂಟಿ ಅಂತ ಲೆಕ್ಕಾಪತ್ರಾ ಎ ಈಗ ಬ್ಯಾಡ...’ ಇತ್ಯಾದಿ ನುಡಿದದ್ದೇ ತಪ್ಪಾಗಿ ಹೋಯಿತಾ ಗೊತ್ತಿಲ್ಲ. ತೀರಾ ಹೆಣ್ಣುಮಕ್ಕಳೂ ಸಹಿತ ಯಾಕೋ ಮುನಿಸಿಕೊಂಡುಬಿಟ್ಟರು. ಸ್ವತಃ ಬದುಕಿಗೊಂದು ಗಮ್ಯ ಕಲ್ಪಿಸಿಕೊಂಡು, ವ್ಯವಸ್ಥಿತವಾಗಿ ತಾವೆಲ್ಲ ದಡ ಸೇರಿದ್ದರೂ, ಮನೆಯ ಮೂಲದ ಅರಿವಿದ್ದರೂ ಕೇವಲ ಜಮೀನು ಮತ್ತು ಹಣದ ವಿಷಯವಾಗಿ ಸೀತಕ್ಕ ಕೊನೆಕೊನೆಗೆ ಒಂಟಿಯಾಗುವಂತೆ ಮಾಡಿಬಿಟ್ಟಿದ್ದರು.
ಸೀತಕ್ಕ ಮಾತ್ರ ಅನಾಮತ್ತು ಹದಿನೈದು ವರ್ಷ ಥೇಟ್ ಜಿದ್ದಿಗೆ ಬಿದ್ದವರಂತೆ ಯಾರಿಗೂ ದಮ್ಮಯ್ಯ ಎನ್ನದೇ ಬದುಕಿದಳು. ಆದರೆ ಮುಪ್ಪು ಮತ್ತು ಅಸಹಾಯಕತೆ ಕೊನೆಗೊಮ್ಮೆ ಸೀತಕ್ಕನನ್ನು ಕೆಡುವಿ ಹಾಕಿತ್ತು. ಯಾರೂ ನೀಗದ ಹೊತ್ತಲ್ಲಿ ಸೀತಕ್ಕನ ತಂಗಿ ಆಗೀಗ ಬಂದು ನೋಡಿಕೊಳ್ಳುತ್ತ ಉಪಚಾರಕ್ಕೊಬ್ಬ ಹೆಣ್ಣಾಳನ್ನು ಇರಿಸಿzಳೆ. ಸುದ್ದಿ ತಿಳಿದು ಸಮಯ ಹೊಂದಿಸಿಕೊಂಡು ಊರ ಕಡೆ ಹೋಗಿ ಸೀತಕ್ಕನ ಮನೆಗೆ ಕಾಲಿಕ್ಕಿದರೆ, ಸ್ವಾಗತಿಸಿದ್ದು ಮಾತ್ರ ಬದುಕಿನ ಕಷ್ಟಗಳೆಡೆಗೊಂದು ದಿವ್ಯ ನಿರ್ಲಕ್ಷ್ಯ ಬೆಳೆಸಿಕೊಂಡೆ ಬದುಕಿದ್ದ ಸೀತಕ್ಕನ ಅದೇ ಕಾನಿಡೆಂಟ್ ನಗು.
ಮೂರು ದಶಕಗಳ ಹಿಂದೆ ಹೇಗಿತ್ತೋ ಹಾಗೆಯೇ ಇತ್ತು. ಯಾವ ಕಂಪ್ಯೂಟರ್ ಮತ್ತು ತಂತ್ರeನಗಳೂ ಮನುಷ್ಯತ್ವವನ್ನೂ, ಬದುಕಿನೆಡೆಗಿನ ಅವರವರ ಅವಗಾಹನೆಯನ್ನೂ ಬದಲಿಸಲು ಸಾಧ್ಯವಿರಲಿಲ್ಲ. ಏನಿದ್ದರೂ ಮನುಷ್ಯ ತನ್ನೊಳಗೆ ಬದಲಾಗದೆ ಬದುಕು-ಜಗತ್ತೂ ಎರಡೂ ಬದಲಾಗದು ಎನ್ನಿಸಿದ್ದಕ್ಕೆ ಜ್ವಲಂತ ಉದಾಹರಣೆ ಸೀತಕ್ಕನ ಪರಿಸ್ಥಿತಿ. ಇಲ್ಲವಾದರೆ ಜಗತ್ತಿನ ಇಷ್ಟೂ ಅಗಾಧ ಬದಲಾವಣೆಗಳ ನಡುವೆಯೂ ಸೀತಕ್ಕ ಇವತ್ತಿಗೂ ಅದೇ ಕೌದಿಯ ಅಂಚು, ಹುರಿಗಳು ನೇತಾಡುತ್ತಿದ್ದ ಹೊರಸಿನ ಮೇಲೆ ನೆಲಕ್ಕೆ ಜೋಲುವಂತೆ ಮಲಗಿದ್ದ ದೃಶ್ಯ ಎದುರಿಗಿರುವುದು ಬಹುಶಃ ನಾ ಕಂಡ ಜೀವಜಗತ್ತಿನ ಅತಿದೊಡ್ಡ ವಿಪರ್ಯಾಸ.
ಹೊರಸಿನ ಮೇಲೆ ತಿರುಗಿ ಮೇಲಕ್ಕೆ ದಿಟ್ಟಿಸುತ್ತಾ ಮಲಗಿದ್ದ ಸೀತಕ್ಕ ಬಹುಶಃ ಸಾವಿನ ದಾರಿಯನ್ನು ಕಾಯುತ್ತಿದ್ದಳಾ? ಗೊತ್ತಿಲ್ಲ. ಅರೆಬರೆ ಬಟ್ಟೆ. ಉದುರಿದ್ದ ಊಟ ಅವಶೇಷಗಳು. ಡೆಟಾಲ್ ಗಾಢತೆ. ಮುಕುರುತ್ತಿದ್ದ ನೊಣಗಳ ಹಿಂಡು. ಕಣ್ಣಿನಲ್ಲಿ ಮಾತ್ರ ಈಗಲೂ ಬದುಕಿನ ಬಗೆಗೆ.. ಇದಿಷ್ಟೆ ಬಿಡು.. ಎನ್ನುತ್ತಿದ್ದ ಧಾರ್ಷ್ಟ್ಯ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
‘..ಸೀತಕ್ಕ ನಾನು ಭಟ್ಟರ ಹುಡುಗ... ಸಣ್ಣಾಂವ’ ಎಂದು ಪರಿಚಯಿಸಿಕೊಳ್ಳುತ್ತಿದ್ದರೆ ಅರೆಬರೆ ವಾಲುತ್ತಿದ್ದ, ಸ್ಥಿಮಿತದಲ್ಲಿಲ್ಲದ ಕೈ ಆಡಿಸುತ್ತಾ ‘ಯಾಕೋ ಗುರುತು ಸಿಗಲ್ಲ ಅನ್ಕಂಡಿಯೇನು..? ನೀವೆಲ್ಲ ಮರತ್ರೂ ನಾನು ಮರ್ತಿ. ಆದ್ರ ನನ್ನ ಮಾತ್ರ ಆ ದೇವರೂ ಮರ್ತ್ ಬಿಟ್ಟಾನ ನೋಡು..’ ಎನ್ನುತ್ತಿದ್ದರೆ ‘ಏನಿದು ಸೀತಕ್ಕ.. ಯಾಕ ಮಂಜಿ, ಶೀಲಾ ಯಾರೂ ಬರ್ಲಿನು..? ಹಿಂಗ್ಯಾಕ..?’ ಎನ್ನುತ್ತಿದ್ದರೆ ಅದ್ಯಾಕೋ ಸೀತಕ್ಕನಿಗೆ ಆ ಕ್ಷಣದಲ್ಲೂ ಮಕ್ಕಳ ಮತ್ತು ತನ್ನವರ ನಿರ್ಲಕ್ಷತನ, ಆ ಸಂಕಟದ ಬಗ್ಗೆ ಹೇಳಿಕೊಳ್ಳಬೇಕೆನಿಸಲಿಲ್ಲವೋ ಅಥವಾ ಏನಿದ್ದರೂ ನನ್ನ ದುರದಷ್ಟ ಎಂದು ಅದಕ್ಕೆಲ್ಲ ಬದ್ಧಳಾಗಿಬಿಟ್ಟಿದ್ದಳೋ ಎನ್ನುವುದೇ ಆಶ್ಚರ್ಯ.
‘ಏನಿಲ್ಲ ಬಿಡೊ.. ಬದುಕು ಅಂದ ಮ್ಯಾಲ ಇವೆ ಇದ್ದೇ ಇರ್ತಾವ. ಇಲ್ಲಿ ಮಾಡಿದ್ದನ್ನು ಇ ಅನುಭವಿಸಿ ಹೋಗ್ಬೇಕು ನೋಡು ಅದಕ್ಕ ಹಿಂಗೆಲ್ಲ ಆಗ್ತದ. ಯಾಕೋ ಏನೋ ಗೊತ್ತಿಲ್ಲದನ ಏನಾರೆ ತಪ್ಪು ಮಾಡಿರ್ತೇವಿ ಅದಕ್ಕ ದೇವ್ರು ಇ ಶಿಕ್ಷೆ ಕೊಡ್ತಾನಂತ. ನಿಮ್ಮಪ್ಪನೇ... ಇಷ್ಟೆಲ್ಲ ಪುರಾಣ ಹೇಳ್ತಿದ್ದ ಮತ್ತ ನೀನೇ ಕೇಳ್ತಿಯ..?’ ಎನ್ನುತ್ತಿದ್ದರೆ ‘ಅದೆ ಖರೆ ಸೀತಕ್ಕ. ಮದಲಿಂದು ಏನರ ಇರ್ಲಿ. ಕಾಕಾಗ ಈ..ಗರ ಸವಡಾಗಬೇಕಿತ್ತು. ಎಷ್ಟು ದಿನಾ ಅಂತ ನೀಲತ್ತಿ ನೋಡಿಕೊಂಡಾಳು..?’ ಎನ್ನುತ್ತಿದ್ದಂತೆ ಅಲ್ಲಿವರೆಗೂ ನಮ್ಮನ್ನೆಲ್ಲ ಒಂದು ಮಾರು ದೂರ ಇಟ್ಟೆ, ಯಾವ ದುಃಖವೂ ತನಗಲ್ಲ ಎಂದೇ ಬದುಕಿದ್ದ ಸೀತಕ್ಕ ಆ ಒಂದು ವಿಷಯಕ್ಕೆ ಬಂದಾಗ ಪೂರ್ತಿ ಕುಸಿದು ಹೋಗುತ್ತಿದ್ದಳು.
‘ನಿನಗ ಗೊತ್ತಿಲ್ಲದ್ದೇನದನೋ ಮಾರಾಯ. ಆಂವ ಈಗರ ಯಾಕ ಬರ್ತಾನು. ನಾ ಗಟ್ಟಿ ಇzಗ ಎರಿಗೂ ಬೇಕಾಗಿದ್ದೆ. ಇನ್ನೇನು ದಿನಾ ಎಣಿಸೋ ಟೈಮ್ ನೋಡು. ಆರು ಮಕ್ಕಳ ಮೈಗೆ ಅರಬಿ, ಹೊಟ್ಟಿಗ ಹಿಟ್ಟು ಕೂಡಿಸ್ವಾಗ ಹಿಂಗ್ಯಾಕ ಅಂತ ಅವನನ್ನು ಕೇಳಿಲ್ಲ. ಬರ್ಲಿ ಅಂತ ಈಗ್ಯಾಕ ಅನ್ನಸ್ಬೇಕು... ಅಲ್ಲಪಾ, ನಾನೇನೋ ಗಟ್ಟಿ ಇದ್ದೆ. ನಮ್ಮು ಅರ್ಧ ಡಜನ್ ಮಕ್ಕಳೂ ದಂಡಿಗೆ ಹತ್ತಿದ್ವು. ತಮ್ಮ ಮನಿ ಮಕ್ಕಳು ಹಿಂಗಧಿಧಿ.. ಪರದೇಶಿ ಆದ್ರ ಹೆಂಗಾದೀತು ಅಂತ ಆಕೀಗರ ತಿಳಿಬಾರದೇನು..? ವರ್ಷಕ್ಕೊಮ್ಮೆ ಕಂಡ ಗಂಡಸರ ಜೋಡಿ ಮಕ್ಕೋತ ಮಜಾ ಮಾಡೊ ಮುಂಚೆ ತಾನೂ ಒಂದ್ ಹೆಣ್ಣಮಗಳು, ತನ್ನ ಹಾಂಗ ಆಕೀಗೂ ಸಂಕಟಾದೀತು ಅಂತ ಗೊತ್ತಾಗಬೇಕಲ್ಲ. ಅದ ನೋಡು ನನ್ನ ದೊಡ್ಡ ಬ್ಯಾನಿಗ ತಳ್ಳಿದ್ದು. ನಾವ್ ನಾವ ಸರಿ ಇರದಿದ್ರ ಮಂದಿನ ಅಂದು ಏನಾದೀತು..? ಮಕ್ಕಳು ಮರಿ ನಾವು ಬೆಳಸೋತಂಕ. ನನ್ನ ಕೈಲಾದದ್ದು ಮಾಡಿ ಎರ ಬದುಕೂ ನಿಸೂರ ಆಗೋ ಹಂಗ ಮಾಡೇನಿ. ಯಾಕೋ ಕಡಿಗೊಮ್ಮೆ ಮಕ್ಕಳು, ಮೊಮ್ಮಕ್ಕಳು ಬಂದು ಮುಖಾ ತೋರಸ್ಲಿ ಅನ್ಸತದ. ಆದ್ರ ಯಾಕೋ ಯಾರೊಬ್ರೂ ಈ ಕಡೀಗೆ ಹಾಯ್ಲಿಲ್ಲ. ಇರ್ಲಿ ಬಿಡು ದೇವ್ರು ಅವರನ್ನೆಲ್ಲ ಛಲೋತ್‌ನಾಗ್ ಇಡ್ಲಿ. ಎಷ್ಟೆಂದರೂ ನಂದ.. ಸಂತಾನ ಅನು. ನನ್ನಂಗ ಅರಮರ್ಧ ಬದುಕು ಯಾರದೂ ಆಗೋದು ಬ್ಯಾಡ..’
ಈಗಲೂ ಒಳ್ಳೆಯದು ಅಂತ ಭೂಮಿಯ ಮೇಲೆ ಉಳಿದಿದ್ದರೆ ಬಹುಶಃ ಸೀತಕ್ಕನಂತವರಿಂದಲೇ. ತನ್ನ ಮರಣಸಂಕಟದ ಮಧ್ಯೆಯೂ ಅಪ್ಪಿತಪ್ಪಿಯೂ ಕೇಡು ನುಡಿಯದ ಸೀತಕ್ಕ ನಿಜಕ್ಕೂ ಅದ್ಯಾವ ದರ್ದಿಗೆ ಬಿದ್ದು ಅಷ್ಟೊಂದು ಒಳ್ಳೆಯತನದಿಂದ ಬದುಕಿದ್ದಳು..? ಕೇಳೋಣ ಎಂದರೆ ಮತ್ತೆರಡು ತಿಂಗಳಿಗೆ ಸೀತಕ್ಕನ ಜಾತ್ರೆ ಮುಗಿದಿತ್ತು. ಆದರೆ ಆಕೆಯ ನುಡಿ ಮತ್ತು ಜೀವನದುದ್ದಕ್ಕೂ ಏನೇ ಸಂಕಟಗಳಿಗೀಡಾದರೂ ಯಾರೊಬ್ಬರಿಗೂ ಕೇಡು ಹಾರೈಸದ ಮನಸ್ಥಿತಿ ನನ್ನನ್ನು ಇವತ್ತಿಗೂ ಕಲಕುತ್ತಲೇ ಇರುತ್ತದೆ. ಸೀತಕ್ಕ ಎ ಇದ್ದೀಯ. ಎಲ್ಲ ನಿನಗೆ ಕಾಣುತ್ತೆ. ಅದರೂ ನಿನ್ನಾತ್ಮ ನೆಮ್ಮದಿಯಾಗಿರಲಿ. ಅದಕ್ಕಿಂತ ಹೆಚ್ಚಿನದು ನಿನ್ನಂಥ ಅಮ್ಮನಿಗೆ ಏನು ಕೊಡುತ್ತೇನೆಂದರೂ ಕಡಿಮೆಯೇ.ಕಾರಣಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)

Sunday, January 3, 2016

ಎಲ್ಲರ ಮನಸ್ಸುಗಳು ಹೀಗೆ ತುಡಿದರೆ ... 

ಮೇಲ್ನೋಟಕ್ಕೆ ಕಂಡಂತೆ ಒಬ್ಬರ ಬಗ್ಗೆ ಆಡಿಕೊಳ್ಳುವುದು ಸುಲಭ. ಆದರೆ ಬದುಕಿನಲ್ಲಿ ಗಮ್ಯಗಳಿಗೊಂದು ಮಾದರಿಯಾಗುವಂತೆ ಬದುಕುವುದು ತುಂಬ ಕಷ್ಟ ಮತ್ತು ತೀರ ಲಘು ಎನ್ನುವಂತೆ ಕಾಣುವವರೂ ಅಗಾಧ ವ್ಯಕ್ತಿತ್ವದ ಮಾದರಿಯಾಗುತ್ತಾರಲ್ಲ ಅದಕ್ಕೆ ಅಪರೂಪದ ಮನಸ್ಥಿತಿಯ ಗಟ್ಟಿ ಗುಂಡಿಗೆ ಬೇಕಿರುತ್ತದೆ.

ಬದುಕನ್ನು ಹೀಗೂ ಚೆಂದ ಮಾಡಿಕೊಳ್ಳುವವರಿದ್ದಾರಾ ಎನ್ನಿಸಿದ್ದು ಇತ್ತೀಚೆಗೆ ರಾಜಿಯನ್ನು ನೋಡಿದಾಗ. ನಾನು ನೋಡಿದಂತೆ ಬದುಕಿನ ಹಲವು ಮಜಲುಗಳಲ್ಲಿ ಆಕೆ ಯಾವತ್ತೂ ತನ್ನ ಜೀವನಕ್ಕೊಂದು ಶಿಸ್ತು, ಸಂಯಮ ಅಥವಾ ಗಮ್ಯವನ್ನಾಗಲಿ ಒದಗಿಸಿದ್ದವಳೇ ಅಲ್ಲ. ಆವತ್ತಿನ ಮಟ್ಟಿಗೆ ಅದೇ ಜೀವನ ಎನ್ನುತ್ತಿದ್ದ ರಾಜಿ, ನನ್ನಂಥವರಿಂದ ಕೊಂಚ ಅಂತರ ಕಾಯ್ದುಕೊಳ್ಳುವ ಅಸಾಧಾರಣ ಬುದ್ಧಿವಂತೆಯರ ಸಾಲಿನವಳು. ಆದರೆ ನಮ್ಮಿಬ್ಬರಿಗಿದ್ದ ಸಮಾನ ಆಸಕ್ತಿಯಾದ ಕದ್ದು ತಂದು ತಿನ್ನುವುದರಿಂದ ಒಂಥರಾ ಗೆಳೆತನವಿತ್ತು. ಸ್ವತಃ ಅಂಗಡಿಯಿಂದ ನೇರ ಪೊಟ್ಟಣಗಳನ್ನೇ ಎತ್ತಿಕೊಂಡು ಬರುತ್ತಿದ್ದ ತಿಂಡಿಗಳಿಗೆ ಮೋಕ್ಷ ಕಾಣಿಸುವುದೂ, ಉಳಿದಿದ್ದನ್ನು ಸುರಕ್ಷಿತವಾಗಿ ಮತ್ತು ನ್ಯಾಯಯುತವಾಗಿ ಮರುದಿನಕ್ಕೆ ಕಾಯ್ದಿಡುತ್ತಿದ್ದುದರಿಂದ ನಾನು ರಾಜಿಗೆ ಅಗತ್ಯವಾಗುತ್ತಿದ್ದಾ. ಅದಕ್ಕಿಂತಲೂ ಚೆಂದದ ಸಂಗತಿ ಎಂದರೆ ಇದೆಲ್ಲ ಕಂಡೂ ಕಾಣದಂತೆ ಇರುತ್ತಿದ್ದುದು ಅವರವ್ವ. ತೀರ ಜೇಬುಗಟ್ಟಲೇ ತಿಂಡಿ ತುಂಬಿಕೊಂಡು ಓಡಾಡುತ್ತಿದ್ದರೆ ಮಾತ್ರ ‘ಹಂಗ ಕಿಸೆನ್ಯಾಗ ಹಾಕ್ಕೊಂಡು ಓಡ್ಯಾಡಬ್ಯಾಡ್ರಿ. ರಾತ್ರಿ ಇರಬಿ ಬರತಾವ..’ ಎಂದು ನಮ್ಮನ್ನು ಗದರುತ್ತಿದ್ದರು.‘ಇಲ್ಲ ಬಿಡಬೇ ರಾತ್ರಿ ಬ್ಯಾರೆ ಚೆಡ್ಡಿ ಹಾಕ್ಕೊತೇನಿ’ ಎಂದು ನಾನು ಅದಕ್ಕೊಂದು ಸಮಜಾಯಿಸಿ ಕೊಡುವ ಮೊದಲೇ ರಾಜಿ,‘ಇಲ್ಲ ಬಿಡವ್ವ ಹಂಗ ಮಲಗ್ತೇನಿ’ ಎನ್ನುತ್ತ ಕಿಸಕ್ಕೆನ್ನುತ್ತಿದ್ದಳು. ಅವ್ವ ದಬಾರನೆ ಬಾರಿಸುತ್ತಿದ್ದಳು ಬೆನ್ನಿಗೆ.
ಆಕೆಯ ಪೋನಿ ತರಹದ ಜುಟ್ಟು, ಯಾವ ಮುಲಾಜಿಗೂ ಸಿಕ್ಕದ ಬಿರುಸುತನ, ಮಾತಿಗೆ ಸರಕ್ಕನೆ ಎದಿರು ಮಾತಾಡುವ ಅಭ್ಯಾಸಗಳ ಮಧ್ಯೆಯೂ ನೋಡನೋಡುತ್ತಿದ್ದಂತೆ ಒಂದೊಂದೇ ಮೆಟ್ಟಿಲೇರಿದ ರಾಜಿ ನಾವು ಕಣ್ಬಿಡುವ ಹೊತ್ತಿಗೆ ರಾಜದೂತ್ ಬೈಕು ಓಡಿಸುತ್ತಿದ್ದಳು.‘ಕೈಗ ಹತ್ತೊ ಹುಡಿಗಿ ಅಲ್ಲ ಬಿಡ್ರಿ..ಯಾಕೋ ಸ್ವಲ್ಪ ಸುಮಾರ’ ಎನ್ನುವುದು ಸಹಜ ಮಾತಾಗಿತ್ತು ಆಕೆಯ ಮಟ್ಟಿಗೆ. ಆದರೆ ಆಕೆಗೆ ಇದ್ಯಾವುದೂ ತಾಗುತ್ತಿರಲಿಲ್ಲ. ಕ್ರಮೇಣ ನಮ್ಮ ಮಧ್ಯೆ ಸಂಪರ್ಕವೂ ಕಡಿದು ಹೋಗುವುದರೊಂದಿಗೆ ರಾಜಿ ಮರೆಯಾಗಿದ್ದು ಸಹಜವೂ ಆಗಿತ್ತು.ತುಂಬ ಚೆಂದಗೆ ಓದಿಕೊಂಡು ಅದಕ್ಕಿಂತ ಅರಪಾವು ಹೆಚ್ಚಿಗೇ ಗುಂಡಿಗೆಯಿದ್ದ ರಾಜಿಗೆ ನೌಕರಿ ಸುಲಭದ ತುತ್ತಾಗಿತ್ತು. ಆಕೆಯ ಎಲ್ಲ ಲೀಲೆಗಳಿಗೆ ಬೆನ್ನೆಲುಬಾಗಿದ್ದ ಅವಳಪ್ಪ ಇದ್ದಕ್ಕಿದ್ದಂತೆ ಎದೆನೋವಿಗೀಡಾಗಿ ತೀರಿ ಹೋಗಿದ್ದ. ರಾಜಿ ಅವ್ವನನ್ನೂ ಕರೆದೊಯ್ದು ಖುಷಿಯಾಗೊಂದು ಬದುಕು ಕಟ್ಟಿಕೊಳ್ಳುವಾಗಲೇ ಅವನು ಕಾಲಿಟ್ಟಿದ್ದ. ಅವಳಿಗಿಂತ ಎರಡು ವರ್ಷ ಚಿಕ್ಕವ. ಅವ್ವನಿಗೆ ಹುಷಾರು ತಪ್ಪಿ ದವಾಖಾನಿಗೆ ಓಡಾಡುವಾಗ ಪಕ್ಕದ ಬೆಡ್ಡಿಗೆ ಬಂದಿದ್ದವ. ರಾಜಿ ಇಲ್ಲದಾಗಲೆಲ್ಲ ರಾತ್ರಿ ಹಗಲೂ ಅವ್ವನನ್ನು ನೋಡಿಕೊಳ್ಳುತ್ತಲೂ ಇಬ್ಬರಿಗೂ ಹತ್ತಿರವಾಗಿದ್ದಾನೆ. ಅವಳಂತಹ ರೇಸು ಕುದುರೆಗೂ, ಒಪ್ಪ ಓರಣ ಇಲ್ಲದ ಬಸವನ ಹುಳು ನಾಗ್ರಾಜುವಿಗೂ ಅದೆಲ್ಲಿಂದ ಆಕರ್ಷಣೆ ಹುಟ್ಟಿಬಿಟ್ಟಿತ್ತೋ..? ಕೊಂಚ ಪಾಪದವನೂ, ತೀರ ಚೆಂದವಾಗೇನೂ ಓದದ ಹುಡುಗನಿಗೆ ರಾಜಿ ಅದ್ಯಾಕೋ ಒಲಿದಿದ್ದಳೊ ಇವತ್ತಿಗೂ ಗೊತ್ತಿಲ್ಲ.ಅದಾದ ವರ್ಷದೊಳಗೆ ಲಿವ್ ಇನ್ ರಿಲೇಷನ್ನಿನ ಹೆಸರು ಹುಟ್ಟಿರದ ಕಾಲದ ಅವನ ಹಳ್ಳಿಯಿಂದ ಮನೆಗೇ ತಂದಿಟ್ಟುಕೊಂಡು ಬಿಟ್ಟಿದ್ದಳು. ದೊಡ್ಡ ಸಾಹಸ ಅದು. ಇಳಿಸಂಜೆ ಹೊತ್ತಲ್ಲಿ ಕೂತು ಮ್ಯಾಥ್ಸ್, ಸೈನ್ಸು ಬಟ್ಟು ಮಡಚಿ ಕಲಿಸುತ್ತಿದ್ದರೆ ಅವಳವ್ವ ತೀರ ಇಷ್ಟಪಡದಿದ್ದರೂ ರಾಜಿಯ ಬದುಕು ಹಸನಾತು ಬಿಡು ಎಂದುಕೊಂಡಿದ್ದರು. ಆದರೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಂಡ ನಾಗ್ರಾಜು ಎದ್ದು ನಿಂತಿದ್ದ. ವೇಗವಾಗಿ ಕಂಪ್ಯೂಟರಿಗೆ ತಗುಲಿಕೊಂಡು ಸರ್ವೀಸು ಸೆಕ್ಟರ್ ಹಿಡಿದುಕೊಂಡು ಬೆಳೆದ. ಈಗವನ ಓಡಾಟ ಬಿರುಸಾಗಿತ್ತು. ವರ್ಷಗಳು ಉರುಳುತ್ತಿದ್ದರೆ ರಾಜಿ ಗಂಭೀರವಾಗಿ ಮದುವೆ ಎನ್ನುವ ಶಾಸ ಮಾಡಿಕೊಂಡುಬಿಡುವ ಹಂಬಲದಲ್ಲಿದ್ದಳು.ಎಲ್ಲ ಸರಿಹೋಗಿ ಬದುಕಿನ ಬಣ್ಣಗಳು ಬೆರಗೊಡೆಯುತ್ತಿದ್ದಂತೆ, ಹತ್ತಿದ ಏಣಿ ಒದೆಯುವ ಪರಮ ದರಿದ್ರ ಅನುಭವ ರಾಜಿಗೂ ಆಯಿತು. ಬರಗೆಟ್ಟ ಬದುಕಿಗೆ ದಾರಿ ತೋರಿಸಿದವರನ್ನು ಸರಿಸಿ ನಡೆಯೊ ಒರಸೆತನಕ್ಕೆ ರಾಜಿ ಬಲಿಯಾಗಿದ್ದಳು. ಆಕೆಯಿಂದ ಪಡೆದ ಸಹಾಯ, ಲಕ್ಷಾಂತರ ದುಡ್ಡು, ಅಪೂಟು ಗಣಿತ ಟೀಚರಂತೆ ಆಕೆ ಕೂತು ಹೇಳಿದ ಸಂಜೆಯ ಕ್ಲಾಸುಗಳು, ತೀರ ಅವನ ಅಬ್ಬೇಪಾರಿ ಬದುಕನ್ನು ಸರಿ ಮಾಡಿದ್ದಾಲ್ಲವನ್ನೂ ಮರೆತು ಮನೆಗೆ ಬರುವುದನ್ನೇ ತಪ್ಪಿಸುತ್ತ ಬದುಕಿನ ಪಥ ಬದಲಿಸತೊಡಗಿದ್ದ. ಅಸಲಿಗೆ ರಾಜಿಯ ಬದುಕಿನ ಹರಿತ ಎಡೆಗಳೊಂದಿಗೆ ಸೇರಿ ಜಯಿಸುವ ಬದಲಿಗೆ ಕಣ್ಣು ತಪ್ಪಿಸತೊಡಗಿದ್ದ. ಮೊದಲೇ ಬದುಕಿಗೆ ಸಡ್ಡುಹೊಡೆದು ಸೋವಿಯಾದವಳಿಗೆ ಇಂಥವರ ದಗಲುಬಾಜಿತನ ಯಾವ ಲೆಕ್ಕ. ಮುಲಾಜೇ ಇಲ್ಲದೆ ಅವನಿಗಾಗಿ ಹಾಕಿದ್ದ ದುಡ್ಡು ವಸೂಲಿ ಮಾಡಿ ಹೊರಹಾಕಿದ್ದಳು. ಮುಖ ತೋರಿಸಲೂ ಆಗದ ಮಖೇಡಿಯಂತೆ ನಾಗ್ರಾಜ ಹೊರಟು ಹೋಗಿದ್ದ. ಕೆಲಸ, ಜವಾಬ್ದಾರಿ ಮತ್ತು ಬದುಕಿನುದ್ದಕ್ಕೂ ಬಿರುಸಾಗಿ ಬದುಕುತ್ತಿದ್ದವಳು, ಅದೇ ರಾವಿನೊಂದಿಗೆ ಎದ್ದು ನಿಂತು ಹಿಂದಿನಿಂದ ಮಾತಾಡುವವರಿಗೆ ‘ಈಗ ಹೆಂಗೆ..?’ ಎಂದಿದ್ದಳು.‘ಬರ್ತಾ ಹಂಗ ಬಂದಿಯಲ್ಲ. ತಿನ್ನಾಕ ಏನೂ ತಂದಿನು..?’ಎಂದಿನಂತೆ ರಾಜಿ ಕಾಲೆಳೆಯುತ್ತಿದ್ದರೆ ಒಯ್ದಿದ್ದ ಸ್ವೀಟು ಆಕೆಯೆದುರಿಗಿಡುತ್ತಾ ‘ಅವ್ವ ಎದಾಳು..? ನಿನ್ನ ಈ ಉಪರಾಟಿ ಬದುಕು ಅಕಿಗಂತೂ ಭೇಷಾಗಿರೋಲ್ಲ ಬಿಡು’ ಎಂದೆ. ಆಕೆ ನಗುತ್ತಾ ‘ಹೌದೊ ಮಾರಾಯ ನಮ್ಮವ್ವ ಅಂತಲ್ಲ. ಯಾರವ್ವ ಅದರೂ ಸುದೆಕ ಹಿಂಗನ.. ಅದರಾಗೇನದ. ಇನ್ನೇನರ ಭಾನಗಡಿ ಮಾಡ್ಕೊತಿನೇನೋ ಅಂತ ಒಂದಿಟು ಟೆನ್ಸ್ ಆಗಿದ್ಲು ಆವಾಗ. ನಿಂದೇನು ಕತೀ..?ಎಲ್ಲ್ಯದಿ..?’ ಎನ್ನುತ್ತಿದ್ದರೆ ‘ನಡೀ ಮನಿಗ ಹೋಗೋಣು’ ಎಂದು ದಬ್ಬಿಕೊಂಡು ಹೊರಟಿದ್ದಾ. ಕಾರು ಹರಿದಷ್ಟೂ ಹೊತ್ತೂ, ಬದುಕಿನ ಸೆಳಕುಗಳ ಬಗ್ಗೆ ಹೇಳುತ್ತ, ‘ಅಲ್ಲ ಸಂತೂ.. ಆ ನಾಗ್ರಾಜಂಗ ಅದೇನು ಬ್ಯಾನಿ ಆಗಿತ್ತ ನೋಡು. ಏನೂ ಇಲ್ದಿರೋ ದರವೇಶಿಗೆ, ಎಲ್ಲ ಮಾಡಿಕೊಟ್ಟು ಇಷ್ಟ ಚೆಂದದ ಹುಡುಗಿ ಪುಕ್ಕಟ ಇರ್ತೀನಂದರೂ ಬ್ಯಾಡ ಅಂತ ಹೋದನಲ್ಲ ಭಾಡ್ಯಾ.. ಮೈಯೆಲ್ಲ ಉರಿತದ ನೋಡ. ಗಂಡಸರಿಗೆ ಸುಖಾ ಪಡೋದೂ ಗೊತ್ತಿಲ್ಲ ಅನ್ನೋದಕ್ಕಿಂತ ದಕ್ಕಿಸಿಕೊಳ್ಳೊ ದಮ್ಮನೂ ಬೇಕ ನೋಡ’ ಎಂದು ಯಾವ ಸಂಕೋಚ ಮತ್ತು ಪಶ್ಚಾತಾಪ ಎರಡೂ ಇಲ್ಲದೆ ಆಡಿಕೊಳ್ಳುತ್ತ ರಾಜಿ ಹರಟುತ್ತಿದ್ದರೆ ಆಕೆಯ ಚೇತರಿಕೆಗೆ ಖುಷಿಯಾಗಿತ್ತು. ಮತ್ತಾವ ಸಂಕಟಕ್ಕೂ ಸಿಗದೆ ಮದುವೆ, ಮಕ್ಕಳು ಮಾಡಿಕೊಂಡು ಅವ್ವನೊಂದಿಗಿದ್ದಾಳೆ.‘ಅವ್ವಂದಿರಿಗೆ ಹೆಣ್ಮಕ್ಕಳ ಮದುವ್ಯಾಗಿ ಮಕ್ಕಳಾದವು, ಬದುಕು ಬೇಷಾತು ಅನ್ನೋದ ಬಿಟ್ಟರ ಬ್ಯಾರೆ ಬೇಕಿಲ್ಲ ಹೌದಿ’ಎನ್ನುತ್ತಿದ್ದರೆ, ನಾನು ನಗುತ್ತ ನುಡಿದಿದ್ದಾ ‘ರಾಜಿ ನೀ ಬದಲಾಗಿಲ್ಲ ಬಿಡ. ಪುಕ್ಕಟ ಅಂದರ ಯಾವತ್ತೂ ಸೋವಿನ. ನಿನ್ನಂಥಾಕಿ ಜೋಡಿ ಸಂಸಾರ ಮಾಡೋದು ಅವಂಗೆಲ್ಲಿ ಬರ್ಬೇಕು..?ಈಗ ಆರಾಮ ಅದಿ ಹೌದಿ..’ಎನ್ನುತ್ತಲೇ ಆಕೆಯ ಮನೆ ತಲುಪಿದ್ದಾವು. ಸರಿಸುಮಾರು ಎರಡು ದಶಕಗಳ ನಂತರದಲ್ಲಿ ಈಗ ಹೇಗಾಗಿದ್ದಾಳೊ ಎನ್ನುವ ಶಂಕೆ ಸುಳ್ಳು ಮಾಡುತ್ತಾ ಬಾಗಿಲು ತೆಗೆದವಳು ಅವ್ವ. ಯಾರು ಎಂಬ ಪ್ರಶ್ನಾರ್ಥಕ ಚಿನ್ಹೆಗೆ ನಾನೇ ಪರಿಚಯಿಸಿಕೊಂಡಿದ್ದಾ. ‘ಭೇಷಾತು. ಊರ ಕಡಿಂದ ಯಾರರ ಬಂದರ ಚಲೋ ಅನ್ನಸ್ತದ’ ಎನ್ನುತ್ತಿದ್ದಂತೆ ಕಿಂಯ್.. ಕಿಂಯ್.. ಎನ್ನುವ ಗಾಲಿಗಳ ಶಬ್ದಕ್ಕೆ ಅತ್ತ ತಿರುಗಿದೆ.ಗಾಲಿ ಕುರ್ಚಿ ಅದರ ಮೇಲೊಬ್ಬ ನಡುಹರೆಯದ ವ್ಯಕ್ತಿ. ಕಿವಿಗೆ ಇಯರ್ ಫೋನು.. ಕಾಲ ಮೇಲೆ ಲ್ಯಾಪ್‌ಟಾಪು. ಹಿಂದೆಯೇ ನಡೆದು ಬಂದ ಚೆಂದದ ಹೊಸ ಹರೆಯದ ಹುಡುಗಿ. ನನಗೆ ಬೇರೆ ವಿವರ ಬೇಕಾಗಲಿಲ್ಲ. ಚಹದ ಕಪ್ಪು ಹಿಡಿದು ಹೊರಬಂದ ರಾಜಿ ಅದೇ ಹುಡುಗಾಟದ ಧ್ವನಿಯಲ್ಲಿ, ‘ನಾಗ್ರಾಜಂದು ಮುಗದ ಕಥೀ. ಅದಾಗಿ ಎರ್ಡ್ಮೂರು ವರ್ಷ ನಾನು ಅವ್ವ ಅರಾಮ ಇದ್ವಿ. ಮದುವಿ ಮಕ್ಕಳು ಎಲ್ಲ ಯಾಕೋ ನನಗಲ್ಲ ಅನ್ನಿಸಿಬಿಟ್ಟಿತ್ತು. ಗಂಡ ಮಕ್ಕಳು ಇವೆಲ್ಲ ಇದ್ದರನ ಸಂಸಾರ ಅಂತಿಯೇನು..? ಅದನ್ನ ಬಿಟ್ಟೂ ಬದುಕಿನ ಸಂಕಟಕ್ಕ ಜೊತಿ ಆಗೋ ಸುಖಾನ ಬ್ಯಾರೆ ಮಾರಾಯ. ಮೂರ್ತಿನ್ನ ಮದುವಿ ಆಗ್ತೇನಿ ಅಂದಾಗ ತಲಿಗೊಂದ ಮಾತಾಡಿದ್ರು. ಕೈ, ಕಾಲು ಬರೋಬರ್ ಇಲ್ಲದಿದ್ರೂ ಮನಸ್ಸು ಪಸಂದಾಗಿರೋ ಮೂರ್ತಿ ಯಾಕೋ ಭಾಳ ಹಿಡಿಸಿದ್ರು. ಏ ಕುಂತು ಎನ್‌ಜಿಒದ ಕೆಲ್ಸ ಮಾಡಿ ತನಗ.. ಏಳಾಕ ಬರದಿದ್ರೂ ಬ್ಯಾರೇದಾವ್ರ ಬದುಕು ಕಟ್ಟೋದು ನೋಡ್ತಾ ನನ್ನ ಜೊತಿನ ಬರ್ರಿ ಅಂದೆ. ಬರೀ ಮಾರಿ ನೋಡಿ ಏನು ಮಾಡೋದದ. ಅರ್ಧ ಬದುಕು ಕಳಕೊಂಡಿದ್ದ ಮೂರ್ತಿ, ಅವ್ರ ಮಗಳು ಪುಟ್ಟಿ ಖರೆನ ಚೆಂದ ಅದಾರ ನೋಡು. ಇದೆಲ್ಲ ನೋಡಿ ರಾಜಿ ಮತ್ತ ಲಫಡಾ ಮಾಡ್ಕೊಂಡ್ಲು ಅಂತಿಯೇನು..?’ ಚೆಂದದ ಗೇಲಿಯೊಂದಿಗೆ ಪಕ್ಕೆಗೆ ಗುದ್ದುತ್ತ ನುಡಿಯುತ್ತಿದ್ದರೆ, ಮಾರುತ್ತರಕ್ಕೇನೂ ಇರಲಿಲ್ಲ.ಅವಕಾಶ, ಸಹಾಯ, ಸಾಂಗತ್ಯ ಎಲ್ಲ ಪಡೆದೂ ಕೈಯೆತ್ತಿ ಹೋಗುವವರ ಮಧ್ಯೆ ಎಲ್ಲವನ್ನೂ ಪೂರೈಸಿಯೂ, ಇನ್ನೊಬ್ಬರಿಗೆ ಜೀವನ ಕೊಟ್ಟು ಚೆಂದಗೆ ಬದುಕುತ್ತಿರುವ ರಾಜಿ ಖುಷಿಗೂ ಹನಿಗಳುದುರುವುದಕ್ಕೆ ಸಾಕ್ಷಿಯಾಗಿದ್ದಳು. ಎದುರಿಗಿನದ್ದೇನೂ ಕಾಣಿಸುತ್ತಿರಲಿಲ್ಲ. ಅಸಲಿಗೆ ಎತ್ತರ ಕಾಣಿಸದಷ್ಟು ಆಕೆ ಯಾವಾಗಲೋ ಬೆಳೆದಾಗಿತ್ತು.ಕಾರಣ ಅವಳು ಎಂದರೆ...(ಲೇಖಕರು ಕಥೆ-ಕಾದಂಬರಿಕಾರರು)

Saturday, December 26, 2015

ಕಾವಳದ ರಾತ್ರಿಗಳಲ್ಲಿ ಆಕೆ ಜಗತ್ತು ಬೆಳಗುತ್ತಿದ್ದಳು...

ಗಂಡಸರಿಗೆ ಬೇಕಿರೋದಾದರೂ ಏನು..? ಮನಸ್ಸು ಅನ್ನೋದೆ ಇರೋದಿಲ್ವಾ..? ಎಂದು ತೀರಾ ಮರ್ಮಾಘಾತವಾಗುವಂತಹ ಮತ್ತು ಸುಲಭದಲ್ಲಿ ಯಾರೊಬ್ಬರೂ ಉತ್ತರಿಸಲು ಅಶಕ್ಯವಾದ ಪ್ರಶ್ನೆಯನ್ನು ಆಕೆ ಕೇಳಿಬಿಟ್ಟಿದ್ದಳಲ್ಲ. ಅದಕ್ಕುತ್ತರಿಸಲು ನನ್ನಲ್ಲಿ ಪದಗಳಿರಲಿಲ್ಲ. ಕಾರಣ ಏನು ಬೇಕೆನ್ನುವುದು ಅಹಂನ ಉತ್ಪತ್ತಿಯಾಗಿಬಿಟ್ಟಿದ್ದರೆ ಅದಕ್ಕೊಂದು ಆಯಾಮ ಎನ್ನುವುದೇ ಇರುವುದಿಲ್ಲ.
ಚಾಳಿನ ಬೆಚ್ಚಗಿನ ಗೂಡಿನಿಂದ ನಾನು ಹೊರಬೀಳುವ ಕಾಲಕ್ಕೆ ಆಯಿ ಮತ್ತು ಶೋಭಾ ಅಪ್ಪಟ ನನ್ನದೇ ಮನೆಯವರಂತಾಗಿ ಹೋಗಿದ್ದರಲ್ಲ. ತೀರ ಅಳು ಕಚ್ಚಿ ಅವರನ್ನು ತೊರೆದು ಪತ್ರ ಬರೆಯುವುದಾಗಿಯೂ, ಯಾವಾಗಲೂ ನೋಡಲು ಬರುವುದಾಗಿಯೂ ಆಶ್ವಾಸನೆಯಿತ್ತು ಊರು ಬಿಟ್ಟಿದ್ದೆ. ಆದರೆ ಅವೆರಡೂ ಪೂರೈಸುವುದಾಗಿರಲಿಲ್ಲ. ಎದುರಿಗಿಲ್ಲದ್ದು ಮನಸ್ಸಿಗೂ ಇಲ್ಲ ಎನ್ನುವಂತೆ ಕ್ರಮೇಣ ಆಯಿ ಮತ್ತು ಶೋಭಾ ಮಸ್ತಿಷ್ಕದ ಎಡಕ್ಕೆ ಸರಿದಿದ್ದರು.
ಅತ್ತ ಚೆಂದದ ಹುಡುಗಿ ಶೋಭಾ ಹತ್ತಿರದ ಖಾಸಗಿ ದವಾಖಾನೆ, ಅಲ್ಲಿಂದ ದೊಡ್ಡ ದವಾಖಾನೆ ಹೀಗೆ ಮೂರ್ನಾಲ್ಕು ವರ್ಷದಲ್ಲಿ ಜವಾಬ್ದಾರಿಯುತ ನರ್ಸ್ ಆಗಿ ಬೆಳೆದು ನಿಲ್ಲುವ ಹೊತ್ತಿಗೆ, ತಮ್ಮನೂ ಕೆಲಸಕ್ಕೆ ಸೇರುವಷ್ಟು ಓದಿ ಅಮ್ಮನೊಟ್ಟಿಗೆ ನಿಂತಿದ್ದಾನೆ. ಅದೇ ಹೊತ್ತಿಗೆ ಸಂಬಂಧಿಯೊಬ್ಬರ ಸಲಹೆ ಮೇರೆಗೆ ಸುಲಭಕ್ಕೆ ತಾವೇ ಕೈಯಿಂದ ದುಡ್ಡುದುಗ್ಗಾಣಿ ಹಾಕಿ ಮದುವೆ ಮಾಡಿಕೊಳ್ಳುವ ಸುಭಗ ರೂಪಿ ಅಳಿಯನೊಬ್ಬನ ಸಂಬಂಧ ಒದಗಿ ಬಂದಿದೆ. ಮನೆ ಜನ ಎಲ್ಲಾ ಹೋಗಿ ನೋಡಿ ಬಂದಿದ್ದಾರೆ. ಕುಟುಂಬ ಮತ್ತು ಚೆಂದದ ಅಳಿಯ ಆಯಿಯ ಮನಕ್ಕೆ ಒಗ್ಗುತ್ತಲೂ ಇದ್ದುದರಲ್ಲೇ ಚೆಂದಗೆ ಮದುವೆ ಮಾಡಿಕೊಟ್ಟಿದ್ದಾರೆ.
ಅಲ್ಲಿಯವರೆಗೆ ಎಲ್ಲವೂ ಚೆನ್ನಾಗೇ ಇತ್ತು. ಶೋಭಾ ತನ್ನ ನೌಕರಿ, ಹೊಸ ಗಂಡ, ಅದೂ ಮನೆಯಲ್ಲಿ ಏಕಾಂತ ಎಂದು ಚೆನ್ನಾಗಿಯೇ ಇದ್ದಳು ಕೂಡಾ. ಮೊದಲ ವರ್ಷ ಕಳೆಯುವಷ್ಟರಲ್ಲಿ ಹೆಣ್ಣು ಮಗುವಿನ ತಾಯಿಯೂ ಆಗಿದ್ದಾಳೆ. ಮಗುವಿಗೆ ಮೂರ್ನಾಲ್ಕು ವರ್ಷ ಆಗುವ ಹೊತ್ತಿಗೆ ಗಂಡನ ಒಂದೊಂದೆ ರೂಪ ಈಚೆಗೆ ಬರತೊಡಗಿದೆ. ಅಸಲಿಗೆ ಅವನಿಗೆ ಕೆಲಸವೇ ಇರಲಿಲ್ಲ ಎನ್ನುವುದನ್ನು ಇಷ್ಟು ದಿನವೂ ವ್ಯವಸ್ಥಿತವಾಗಿ ಬಚ್ಚಿಡುತ್ತಿದ್ದನಲ್ಲದೆ ಅವಳ ದುಡ್ಡಿನಲ್ಲೇ ಜೀವನ ತೆಗೆಯತೊಡಗಿದ್ದ. ಯಾವಾಗ ಶೋಭಾ ಅದರ ಮೇಲೆ ಹಿಡಿತ ಸಾಧಿಸಿದಳೋ ಬದುಕು ಬದಲಾಗುತ್ತಾ, ಕುಡಿತ ಮನೆಗೆ ಬಂದುಬಿಟ್ಟಿತ್ತು. ಕೈ ಸಾಲ ಪಡೆದವರ ಹಾವಳಿ ವಿಪರೀತ ಆಗತೊಡಗಿತ್ತು. ಇವೆಲ್ಲದಕ್ಕಿಂತಲೂ ಅನಾಹುತಕಾರಿ ಎಂದರೆ ಆಕೆಯ ಎಲ್ಲಾ ಒಡವೆಗಳನ್ನೂ ಮನೆಯಿಂದ ಗೊತ್ತಾಗದಂತೆ ಸಾಗಿಸಿ ಮಾರಿಬಿಟ್ಟಿದ್ದ. ಅವನ ವರ್ಷಾವಧಿ ಖರ್ಚು ಕಳೆದದ್ದೇ ಹಾಗೆ. ಇಂಥದ್ದೊಂದು ವಿಪರೀತವನ್ನು ನಿರೀಕ್ಷಿಸಿರದ ಶೋಭಾ ಅಮ್ಮನಿಗೆ ತಿಳಿಸಿದ್ದಾಳೆ. ಅದಿನ್ನೂ ವಿಪರೀತಕ್ಕೆ ಹೋಯಿತು. ‘ಅತ್ತೆಯ ಎದುರು ಚಾಡಿ ಹೇಳುತ್ತಿಯೇನೆ’...’ ಎಂದು ನೇರ ಅವಳು ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಗಲಾಟೆ ಮಾಡಿಬಿಟ್ಟ. ತಲೆ ತಗ್ಗಿಸಿ ನಿಂತ ಹುಡುಗಿಯ ವರ್ತನೆ ಮತ್ತು ದಕ್ಷತೆಯ ಅರಿವಿದ್ದ ಅಧಿಕಾರಿ ಅವನಿಗೆ ಬುದ್ಧಿ ಹೇಳಿ ಕಳುಹಿಸಿದರೆ ಮನೆಗೆ ಬರುತ್ತಿದ್ದಂತೆ ‘ಅವನೊಂದಿಗೆ ದಿನಾಲೂ ಮಲಗುತ್ತೀಯಾ.. ಅದಕ್ಕೆ ನಿನ್ಗೆ ಸಪೋರ್ಟು ಮಾಡುತ್ತಾನೆ’ ಎಂದು ರಪರಪನೆ ಬಾರಿಸಿಬಿಟ್ಟಿದ್ದ. ಗಂಡಸರ ಕೊನೆಯ ಆರೋಪ ಮತ್ತು ಹೆಣ್ಣಿಗೆ ಮಾಡಬಹುದಾದ ತೇಜೋವಧೆಯ ಕೊನೆಯ ಸ್ಟೆಪ್ಪು ಅದು.
ಅಮ್ಮ ಸಂಧಾನಕ್ಕೆ ಮಾತ್ರವಲ್ಲ ಇನ್ಯಾವತ್ತೂ ಇತ್ತ ಕಡೆ ತಲೆಹಾಕಿಯೂ ಮಲಗಲಿಲ್ಲ. ಶೋಭಾ ದಿನವೂ ಬದುಕಿದ್ದೂ ಸಾಯತೊಡಗಿದಳು. ಅದಕ್ಕೆ ಉಪ್ಪು ಹಾಕುವಂತೆ ಅದ್ಯಾವುದೋ ಹೆಣ್ಣುಗಳೊಡನೆ ವಾರಗಟ್ಟಲೇ ಹೊರಗೆ ಇದ್ದು ಬರತೊಡಗಿಬಿಟ್ಟಿದ್ದ ಗಂಡ. ಈಗ ಮಾತ್ರ ತಿರುಗಿ ಬಿದ್ದಿದ್ದಳು ಶೋಭಾ. ಆದರೆ ಮಧ್ಯರಾತ್ರಿ ನಿದ್ರೆಯಲ್ಲಿದ್ದವಳ ಮೈಮೇಲೆ ಸಿಗರೇಟು ಸುಟ್ಟಾಗಲೇ ಅವನ ತೆಪ್ಪಗಿರುವಿಕೆಯ ಹಿಂದಿನ ಮರ್ಮ ಅರಿವಾಗಿತ್ತು. ಆಕೆ ತಿರುಗಿ ಬಿದ್ದಿದ್ದಕ್ಕೆ ರಾತ್ರಿಯಿಡಿ ಪೀಡಿಸಿ ಬೆಳಗಾಗುವಾಗ ಹೊರಟು ಹೋಗಿದ್ದ. ಅವಳ ಮೈಮೇಲೆ ಡಜನ್ನುಗಟ್ಟಲೇ ಕಲೆಗಳು ಉಳಿದಿದ್ದವು.
ಬರಲಿರುವ ರಾತ್ರಿಗಳ ಸಂಕಟದ ಕುರುಹಾಗಿ.
ಸಹೋದ್ಯೋಗಿಗಳು ಆಗೀಗ ಸಮಾಧಾನಿಸಿದರೂ ಪರಿಸ್ಥಿತಿ ದಿನದಿಂದ ದಿನಕ್ಕೆ ಕೈಮೀರಿ ಹಿಂಸೆಯಲ್ಲಿಯೇ ಕೊನೆಯಾಗುತ್ತಿತ್ತು. ಎರಡ್ಮೂರು ವರ್ಷ ಕಳೆಯುವಷ್ಟರಲ್ಲಿ ಶೋಭಾಳ ದೇಹದ ಮೇಲೆ ಎಲ್ಲಿ ಕಲೆ ಇಲ್ಲ ಎನ್ನುವುದನ್ನು ಹುಡುಕಬೇಕು ಎಂಬಂತಾಗಿ ಹೋಗಿತ್ತು. ಆಸ್ಪತ್ರೆಯ ಹುಡುಗಿಯರು ಯಾವ ಮುಲಾಜೂ ಇಟ್ಟುಕೊಳ್ಳದೇ ಒಂದಿನ ಅವಳ ಮನೆಗೆ ನುಗ್ಗಿ ಶೋಭಾಳನ್ನೂ ಅವಳ ಮಗಳನ್ನೂ ಈಚೆಗೆ ತಂದು ಸಾಕುವ ಕಾರ್ಯಕ್ಕೆ ಚಾಲನೆ ಕೊಟ್ಟು ಪುಣ್ಯಕಟ್ಟಿಕೊಂಡಿದ್ದರು. ಆವತ್ತೇ ಶೋಭಾ ಮುಖ್ಯ ನಿರ್ಧಾರ ಕೈಗೊಂಡು, ಕೂಡಲೇ ಒಂದು ಮನೆ ಮಾಡಿ ಆವತ್ತೆ ಸಂಜೆ ಅಮ್ಮನನ್ನೂ ಕರೆದುಕೊಂಡು ಬರಲು ಹೋಗಿದ್ದಾಳೆ.
ಅದಾಕೆಯ ಜೀವನದ ಇನ್ನೊಂದು ಶಾಕ್. ಸಾದಾ ಗೋಣಿಯಂತಹ ಹಾಸಿಗೆಯ ಮೇಲೆ ಆಯಿ ಹೊರಗಿನ ಜಗಲಿಯ ಮೇಲೆ ಅಪ್ಪಟ ಭಿಕ್ಷುಕಿಯೊಬ್ಬಳು ಬಿದ್ದಂತೆ ಮಲಗಿದ್ದಾಳೆ. ತಮ್ಮನ ಕುಟುಂಬ ಒಳಗೆ ಸೋಫಾದಲ್ಲಿ ಆಸೀನವಾಗಿ ಟಿ.ವಿ. ಸಂಭ್ರಮದಲ್ಲಿದೆ. ಇದ್ದ ರೋಷವೆಲ್ಲಾ ಆವತ್ತು ಕಕ್ಕಿದ್ದಳು ಶೋಭಾ. ದುರದೃಷ್ಟ ಎಂದರೆ ಅದೇ ಇರಬೇಕು. ಹುಟ್ಟಾ ಬಡತನದಲ್ಲೂ ಸರ್ವ ಅನುಭವಕ್ಕೀಡಾಗಿದ್ದ ಹುಡುಗ ಹೆಂಡತಿ ಬರುತ್ತಿದ್ದಂತೆ ಅವರಮ್ಮನನ್ನೂ ರಸ್ತೆಗಿಳಿಸಿದ್ದಾನೆ. ಭಗವಂತಾ.. ಆಯಿಯಾದರೋ ಮಗಳ ಸಂಕಷ್ಟ ಗೊತ್ತಿದ್ದುದರಿಂದ ಮತ್ಯಾಕೆ ಇನ್ನಷ್ಟು ಅವಳಿಗೆ ಕಿರಿಕಿರಿ ಕೊಡುವುದು ಎಂದು, ಆಚೆ ತಲೆಯೇ ಹಾಕದೆ ಕಟ್ಟೆಯ ಮೇಲೆಯೇ ಜೀವನ ನಡೆಸುತ್ತಿದ್ದಾಳೆ.
ಅವಳಿಗೆ ಮಾತಾಡಲು ಮತ್ತು ಕೇಳಲು ನನಗೂ ಏನೂ ಉಳಿದಿರಲಿಲ್ಲ. ನಿಶ್ಶಬ್ದದಲ್ಲಿ ಸುಮ್ಮನೆ ಆವಳ ಕೈ ಹಿಡಿದು ಕೂತುಬಿಟ್ಟಿದ್ದೆ. ನಡೀ ಆಯಿನ್ನ ನೋಡಬೇಕು ಎಂದೆನಾದರೂ ನನ್ನ ಸ್ವರದಲ್ಲೂ, ಆಕೆಯ ಚಲನೆಯಲ್ಲೂ ಜೀವವಿಲ್ಲದ್ದು ಇಬ್ಬರಿಗೂ ಗೊತ್ತಾಗುತ್ತಿತ್ತು.
ಎರಡು ರೂಮಿನ ಚಿಕ್ಕ ಮನೆಯೊಂದರಲ್ಲಿ ಮಗಳು ಅಮ್ಮನೊಂದಿಗೆ ಜೀವ ಸವೆಸುತ್ತಿರುವ ಶೋಭಾ ಮನೆ ಕೀಲಿ ತೆಗೆಯುತ್ತಿದ್ದುದು ಗಮನಿಸಿ ‘ಆಯಿ ಹೊರಕ್ಕೆ ಹೋಗಿದಾಳಾ?’ ಎಂದೆ. ಮಾತಾಡದೆ ರೂಮಿನೊಳಕ್ಕೆ ನಡೆದು ಮಚ್ಚರದಾಣಿ ಕಟ್ಟಿದ್ದ ಮಂಚದ ಪಕ್ಕ ಸುಮ್ಮನೆ ನಿಂತಳು. ತೀರ ತೆಳು ಜೀವವೊಂದು ಬದುಕಿದೆ ಎನ್ನುವಂತೆ ಉಸಿರಾಟಕ್ಕೆ ಮಾತ್ರ ದೇಹ ಸ್ಪಂದಿಸುತ್ತಿದೆ. ಯಾವುದೂ ಈ ಲೋಕದ ಗೊಡವೆ ಬೇಡ ಎನ್ನುವಂತೆ ಶಾಂತವಾಗಿ ಮಲಗಿದ್ದಾಳೆ. ಕಣ್ಣ ಮುಂದೆ ಒಲೆಯ ಎದುರಿಗೆ ಕೂತು ರೊಟ್ಟಿ ಬಡಿಯುತ್ತಿದ್ದ, ಬುಟ್ಟಿಗಟ್ಟಲೇ ಪೂರಿ ಕರಿಯುತ್ತಿದ್ದ, ಚೆಂದ ಚೆಂದದ ಉಂಡೆಗಳನ್ನು ಕಟ್ಟಿಡುತ್ತಾ ಪದೇಪದೆ ಉಲ್ಟಾ ಎಣಿಸುತ್ತಿದ್ದ, ಹೊರಗಿನ ಕಟ್ಟೆಯ ಮೇಲೆ ಮೊರದ ತುಂಬಾ ಜೋಳ ತುಂಬಿಕೊಂಡು ಗುಬ್ಬಿಗಳಿಗಿಷ್ಟಿಷ್ಟು ಎಸೆಯುತ್ತಾ, ಆರಿಸುತ್ತಾ ಕೂರುತ್ತಿದ್ದ ಆಯಿಯ ಚಿತ್ರಗಳು ಒಮ್ಮೆ ಸಾಲುಸಾಲಾಗಿ ಚಲಿಸಿದವು. ಈ ದೇಹಕ್ಕೂ ಆ ಚಿತ್ರಗಳಿಗೂ ಹೋಲಿಕೆಯೇ ಅಗುತ್ತಿಲ್ಲ.
‘ಆಯಿ ಆಯಿ’ ಎಂದು ಪರದೆ ಸರಿಸಿ ಮೂರ್ನಾಲ್ಕು ಬಾರಿ ಕರೆದೆ.. ಕಣ್ಣು ಪಕಪಕ ಆಡಿತು. ಆದರೆ ಮುಖಭಾವಗಳು ಬದಲಾಗಲಿಲ್ಲ. ಆಯಿ ಗುರುತಿಸುತ್ತಿಲ್ಲ. ಸುಮ್ಮನೆ ಮಂಜಾದ ಕಣ್ಣು ಮುಚ್ಚಿಕೊಂಡು ಪೇಲವವಾದ ಕೈಹಿಡಿದು ಕೂತಿದ್ದೆ. ಚಹದ ಕಪ್ಪು ಹಿಡಿದುಕೊಂಡು ಬಂದ
ಶೋಭಾಳ ಹಿಂದೆ ಎದ್ದು ಬಂದೆ.
‘ಇವತ್ತಿಗೂ ರಾತ್ರಿಯಾದರೆ ಮನಸ್ಸಿಗೆ ಅರಿವಾಗದ ಭಯ. ಮಲಗಿದರಂತೂ ಯಾವಾಗ ಏನಾಗುತ್ತದೋ ಹೇಳಲಾಗದ ಭೀತಿ ಆವರಿಸುತ್ತೆ. ಅದಕ್ಕೆ ಪ್ರತಿ ರಾತ್ರಿನೂ ಈ ಹಿಂಸೆಯಿಂದ ಹೊರಕ್ಕೂ ಬರಕ್ಕಾಗದೆ ವರ್ಷಾನುಗಟ್ಟಲೇ ಒದ್ದಾಡಿದೆ. ಅಷ್ಟರಲ್ಲಿ ಅಮ್ಮನಿಗೆ ಸ್ಟ್ರೋಕ್ ಆಯ್ತು. ನೋಡು ನೋಡುತ್ತಿದ್ದಂತೆ ಮಾತುಕತೆ ಕೊನೆಗೆ ಚಲನೆ ಎಲ್ಲಾ ನಿಂತುಹೋಗಿದೆ. ಎಷ್ಟು ದಿನಾನೋ ಗೊತ್ತಿಲ್ಲ. ರಾತ್ರಿ ಹೊತ್ತಲ್ಲಿ ಏನಾದರೂ ಆದರೂ ಮಗಳು ಇರ್ತಾಳೆ. ಹಗಲು ಇಬ್ಬರೂ ಹೊರಗೆ ಹೋದ್ರೆ ಏನೂ ಗೊತ್ತಾಗಲ್ಲ. ನನಗೂ ಹೆಂಗಿದ್ರೂ ರಾತ್ರಿ ಮಲಗೋದು ಅಂದರೆ ಜೀವ ಒದ್ದಾಡುತ್ತೆ. ಆ ನೆನಪು ಸಂಕಟ ಎರಡೂ ಬ್ಯಾಡ. ಅದಕ್ಕೇ ಏಳೆಂಟು ವರ್ಷಾತು ನೋಡು. ನಾನು ರಾತ್ರಿನೇ ಹೋಗ್ತಿದಿನಿ. ಒಂಥರಾ ಮನೆಗಿಂತ ಅಸ್ಪತ್ರೆನೆ ಸೇಫ್..’ ಎನ್ನುತ್ತಿದ್ದರೆ ಎದ್ದು ಒಳಕೋಣೆಯಲ್ಲಿದ್ದ ಆಯಿಯ ಮಂಚದ ಪಕ್ಕ ಸುಮ್ಮನೆ ನಿಂತು ಬಂದೆ. ಅದೆಷ್ಟೊ ವರ್ಷಗಳಾದವು ಆಕೆಯ ಮಾತುಗಳು ಆದರೂ ಮನದಿಂದಾಚೆಗೆ ಹೋಗಿಲ್ಲ. ಆಕೆ ಯಾವತ್ತೂ ಉಲ್ಟಾ ಎಣಿಸುತ್ತಿದ್ದಳು.
‘ಇಪ್ಪತ್ತೈದು ಅಂದರೆ ಅಷ್ಟೆ ಆಗ್ಬೇಕು ಮರಿ. ಅಕಸ್ಮಾತ್ ಇಪ್ಪತ್ನಾಲ್ಕಾದರೆ ಮತ್ತೆ ಮೊದಲಿಂದ ಎಣಿಸಬೇಕಾಗುತ್ತಲ್ಲ ಅದಕೆ ಉಲ್ಟಾ ಎಣಿಸ್ತಾ ಬಂದರೆ ಕೊನೆದು ಒಂದೇ ಆಗ್ಬೇಕಲ್ಲ..’ ಅವಳ ಮಾತು, ಹಾಗೆ ಎಣಿಸುವಾಗ ನಿಷ್ಠೆಯಿಂದ ಕುಕ್ಕರುಗಾಲಲ್ಲಿ ಕೂತು ಎತ್ತಿಡುತ್ತಿದ್ದ ರೀತಿ.. ಆ ಮುಗ್ಧತೆ... ಈಗ ಮಗಳ ದೇಖರೇಖಿಯಲ್ಲಿ ಮಲಗಿದ್ದ ನಿಶ್ಶಬ್ದತನ.. ದೇವರೇ.. ಯಾರನ್ನೂ ಇಂಥಾ ಪರಿಸ್ಥಿತಿಗೆ ತರಬೇಡ ಎಂದು ಕೇಳಿಕೊಳ್ಳಲು ಮನಸ್ಸು, ಹೊರಡುತ್ತೇನೆ ಎಂದು ಹೇಳಲು ಧ್ವನಿ ಎರಡೂ ಉಳಿದಿರಲಿಲ್ಲ. ಆಯಿ.. ಕಣ್ಬಿಟ್ಟು ಪಿಳಿಪಿಳಿ ನೋಡಿದ್ದಳಷ್ಟೆ.. ಅದರೆ ನಾನೆಂದು ಗೊತ್ತಾಗಿರುತ್ತಾ..? ನೆನಪಾಗಿದ್ದರೆ ಅಷ್ಟರ ಮಟ್ಟಿಗೆ ಸಾರ್ಥಕ. ದೇವರು ಒಮ್ಮೆ ಆಯಿಗೆ ನೆನಪು ಮಾಡಲಿ.. ಬಿಸಿನೀರು ಕೆಳಗುರುಳುವ ಮೊದಲೆ ಅಲ್ಲಿಂದ ನಿರ್ಗಮಿಸಿದ್ದೆ. ಮಗಳ ಬದುಕು ಕಟ್ಟಲು ಕಟ್ಟೆಯ ಮೇಲೆ ಬದುಕು ತೆಗೆದ ಅಮ್ಮ, ಅಮ್ಮನಿಗಾಗಿ ಹಗಲಿರುಳೂ ಕಾಯುತ್ತಿರುವ ಮಗಳು.
ಛೇ.. ಅಮ್ಮ- ಮಗಳು ಇಬ್ಬರ ಬದುಕಲ್ಲೂ ಯಾಕೆ ದೇವರು ನಿರ್ವಾತವನ್ನೇ ನಿರ್ಮಿಸಿದ್ದ..? ಉತ್ತರಿಸಬೇಕಾದ ಇಬ್ಬರ ಮನಸ್ಸುಗಳೂ ಬರಿದಾಗಿದ್ದವು.
ಕಾರಣ
ಅವಳು ಎಂದರೆ...

Saturday, December 19, 2015

ಬದುಕಿನ ರೆಕ್ಕೆಗಳಿಗೆ ಬಣ್ಣ ತು೦ಬಿದವಳು...


ತೀರಾ ಪ್ರೀತಿಯ ಗ೦ಡಎಷ್ಟೆ೦ದರೂ ನನ್ನವನುಜೀವನ ಸ೦ಗಾತಿ ಎ೦ಬೆಲ್ಲ ಎಮೋಷನ್ನಿಗೆ ಬೀಳುವಹೆ೦ಡತಿಯರು ಮಾಡಿಕೊಳ್ಳುವ ದೊಡ್ಡ ಅನಾಹುತವೆ೦ದರೆ ಹಾಗೆ ಮಾಡಿಯೇ ಗ೦ಡಸಿಗೆ ಇಲ್ಲದ ಬೆಲೆಯನ್ನುನಿಗದಿಪಡಿಸೋದುಹುಟ್ಟಾ ಅಹ೦ಕಾರಿ ಗ೦ಡಸು ಮತ್ತಷ್ಟು ಕೆಡಲು ಕಾರಣಗಳೇ ಬೇಕಾಗುವುದಿಲ್ಲ.ಸೋಮಾರಿಯಾದವನ ಬದುಕಿನ ಚೆ೦ದದ ಪುಟ ಮಗುಚುವುದೇ ಆವಾಗ.

ಆಸ್ಪತ್ರೆಯ ಬೆತ್ತದ ಕುರ್ಚೀಲಿ ದಿನಾ ರಾತ್ರಿ ಕೂತು ತೂಕಡಿಸುವ ಕಾಯಕಕ್ಕೆ ನಾನು ಅನಿವಾರ್ಯವಾಗಿ ಒಪ್ಪಿಕೊಂಡಿz. ಆ ಹೊತ್ತಿಗೆ ಆ ಹಿರಿಯರು ಪರಿಚಯದವರೂ ಮತ್ತು ಇಂಥಾ ಕೆಲಸಗಳಿಗೆ ‘ನೀನು ಬಾ ಮಾರಾಯ’ ಎಂದು ಗೆಳೆಯ ಅಲವತ್ತುಕೊಂಡಿದ್ದಕ್ಕೆ ಒಪ್ಪಿz. ಎಮರ್ಜೆನ್ಸಿ ವಾರ್ಡುಗಳೆಂದರೆ ಪ್ರತಿ ಬೆಡ್ಡೂ ಸಾವಿನ ಕೊನೆಯ ಮೆಟ್ಟಿಲುಗಳೇ. ತರಹೇವಾರಿ ಕೊಳವೆಗಳ ಬದುಕಿನ ಜೀವದ್ರವ ರೋಗಿಯ ದೇಹದ ಹಲವು ಕೋವೆಗಳಿಗೆ ಹರಿಯುತ್ತಿರುತ್ತದೆ. ಯಾವ ಕೊಳವೆಯಲ್ಲಿಂದ ಜೀವ ಹೊರಕ್ಕೆ ಹೋಗಲಿದೆ ಅಂತ ಮಾತ್ರ ಗೊತ್ತಾಗುವುದಿಲ್ಲ. ಹಾಗಾಗಿ ಅಂಥ ವಾರ್ಡಿನಲ್ಲಿರುವವರೂ ಕೂಡ ಯಾವ ಸ್ಪಂದನೆಗೂ ನಿಲುಕದ, ಅಕ್ಷರಶಃ ಆಗೀಗ ಕಣ್ಣು ಮಾತ್ರ ಮಿಟುಕಿಸುವ, ಅನಿಯಂತ್ರಿತ ವಿಸರ್ಜನೆಗೆ ಈಡಾಗುತ್ತಿರುವ ರೋಗಿಗಳೇ ಆಗಿರುತ್ತಾರಾದ್ದರಿಂದ ಕೇರ್‌ಟೇಕರ್ ಆಗಿ ಕೂರುವವರಿಗೆ ಆ ಜಾಗ ಅಪ್ಪಟ ಓಪನ್ ನರಕ.ನಾನು ಸಾಕಷ್ಟು ಪುಸ್ತಕ, ಪತ್ರಿಕೆಗಳನ್ನು ಹರಡಿಕೊಂಡು ಮೈತುಂಬಾ ‘ಓಡೊಮಸ್ಸು’ ಬಳಿದುಕೊಂಡು ಕಾಲಿಗೆ, ಕೈಗೆ ಸೊಳ್ಳೆ ಕಚ್ಚದಿರಲಿ ಎಂದು ಸಾಕ್ಸ್ ಏರಿಸಿ ಕೂತಿರುತ್ತಿದ್ದರೆ ರೌಂಡ್ಸ್‌ಗೆ ಬರುತ್ತಿದ್ದ ಡಾಕ್ಟ್ರು ‘ಏನ್ರಿ..ನೀವೂ ಪೇಷಂಟ್ ತರಹ ಕೂತಿದ್ದೀರಲ್ಲ..’ಎನ್ನುತ್ತಿದ್ದರು. ಮೊದಲ ಎರಡು ದಿನ ‘ನೈಟ್‌ಡ್ಯೂಟಿ ಶೋಭಾಂದು.. ಆಕೆ ಬಂದಿಲ್ಲ, ರಜಾ.. ಅಮ್ಮಂಗೆ ಹುಶಾರಿಲ್ಲ..’ ಎಂದು ಇತರೆ ನರ್ಸುಗಳು ಮಾತಾಡಿಕೊಳ್ಳುತ್ತಿದ್ದರೆ ಆಕೆ ಯಾರೋ ಎಂಬಂತೆ ನಾನು ಸುಮ್ಮನಾಗಿದ್ದೇನೆ ಹೊರತು, ಮರೆತುಹೋಗಿದ್ದ ಶೋಭಾ ಮರುದಿನ ರಾತ್ರಿ ಸಿಕ್ಕಿ ಬದುಕಿನ ಕರಾಳ ಮುಖದ ಕಥೆಗೀಡಾಗಿzಳೆ ಎಂಬ ಯಾವ ಕಲ್ಪನೆಯೂ ನನ್ನಲ್ಲಿರಲಿಲ್ಲ.ಮೂರನೆಯ ದಿನ ರಾತ್ರಿ ಹನ್ನೊಂದರ ಹೊತ್ತಿಗೆ ರೌಂಡ್ಸ್‌ನಲ್ಲಿ ಶೋಭಾಳನ್ನು ನೋಡುತ್ತಿದ್ದರೆ ನಾನು ನೆನಪು ಹಾರುವ ಸಾಧ್ಯತೆಯೇ ಇರಲಿಲ್ಲ ಎನ್ನಿಸಿತ್ತು. ಚೆಂದದ ಬಿಳಿಬಿಳಿ ಹಲ್ಲುಗಳ ಜಲಪಾತದಂತೆ ಲೂಸು ಲೂಸಾಗಿ ಕೂದಲು ಬೆನ್ನಿಗಿಳಿಬಿಟ್ಟು ಸಾಗುತ್ತಿದ್ದ ನರ್ಸಮ್ಮ. ರೌಂಡ್ಸು ಮುಗಿಸಿ ಬಂದವಳೆ ‘ಏನು ಹೆಂಗಿದ್ದೀ..ಎಲ್ಲ ಬಿಟ್ಟು ಈ ವಾರ್ಡಿಗ್ಯಾಕೆ ಬಂದು ಕೂತಿದ್ದಿ..ಯಾರಿzರೆ..?’ ಎನ್ನುತ್ತ ಮಾತಿಗಿಳಿದಿದ್ದಳು. ನನ್ನ ಪ್ರಕ್ಷುಬ್ಧತೆಯ ದಿನದಲ್ಲಿ ಶೋಭಾ ನೌಕರಿಯ ಬಗೆಗೆ ಇರಬೇಕಾದ ಸ್ಪಷ್ಟ ಅವಗಾಹನೆಗಳ ಪಾಠ ಹೇಳಿಕೊಟ್ಟವಳಾದರೆ, ಮನೆ ಊಟದ ರುಚಿಯ ಮೋದಕ್ಕೂ, ತೀರಾ ಅಮ್ಮನ ಪ್ರೀತಿಗೂ ಈಡುಮಾಡಿದ್ದು ಅವರಮ್ಮ.. ಆಯಿ.ಹೀಗೆ ಆಕಸ್ಮಿಕವಾಗಿ ಸಿಕ್ಕಿದವಳಿಗೆ ‘ಆಯಿ ಹೆಂಗಿದಾಳೆ’ ಎಂದೆನ್ನುತ್ತ ಮಾತಿಗಿಳಿಯುತ್ತಲೇ ಕಣ್ಣಿಗೆ ಬಿದ್ದಿದ್ದು ಮುಖದ ಮೇಲೆ ಅಗಾಧ ಗಾಯದ ಗುರುತುಗಳು, ಒಡೆದು ಸೇರಿಸಿದ್ದ ತುಟಿ, ಹಣೆಯ ಮೇಲೊಂದು ಅಪ್ಪಟ ಕೌಟುಂಬಿಕ ದೌರ್ಜನ್ಯಕ್ಕೀಡಾದ ಸಂಕೇತವಾಗಿ ಗೀರೊಂದು ಗುಬುರು ಗುಬುರಾಗಿ ನಿಂತಿದ್ದರೆ, ಜಜ್ಜಿ ಹೋದರೂ ಹೊಳಪು ಕಡಿಮೆಯಾಗದ ಮುತ್ತಿನಂತೆ ಕಾಣಿಸುತ್ತಿದ್ದಳು ಶೋಭಾ.ಮರಾಠರ ಕುಟುಂಬವೊಂದರ ಊಟದ ರುಚಿಗೂ, ಆ ಖಾರಕ್ಕೂ, ಬೆಲ್ಲದ ತಿನಿಸುಗಳಿಗೂ ಕೊನೆಗೆ ಅವರ ಮನೆಯ ಅನ್ನದ ಋಣಕ್ಕೂ ನನ್ನ ನಾ ಕೆಡುವಿಕೊಂಡದ್ದು ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ. ನೌಕರಿ ಹುಡುಕಿಕೊಂಡು ಅಲೆಯುವಾಗ ಹುಮ್ಮಸ್ಸಿತ್ತಾದರೂ ಅಲ್ಲಿ ಹೆಂಗಿರಬೇಕು, ಹೇಗೆ ದಕ್ಷತೆಯಿಂದ ಕೆಲಸ ಮಾಡಬೇಕು, ರೆಸ್ಪೆಕ್ಟು ಎಂದರೇನು ಎಂಬೆಲ್ಲ ಯಾವ ಗೈಡನ್ಸೂ ಮತ್ತು ತಯಾರಿ ಎರಡೂ ನನಗಿರಲಿಲ್ಲ. ಟೈಮಿಗೆ ಸರಿಯಾಗಿ, ರೀಫಿಟ್ಟಿಂಗ್ ಮಾಡಿದ್ದ ಬಟ್ಟೆಗಳನ್ನು ಕೆಂಡದ ಇಸಿಯಲ್ಲಿ ಒತ್ತಿಕೊಂಡು ನೀಟಾಗಿ ನಿಲ್ಲುವುದರ ವಿನಾ ನೌಕರಿಯ ಬಗ್ಗೆ ಇರಬೇಕಾದ ಸ್ಪಷ್ಟ ಅವಗಾಹನೆ ನನಗಿರಲೇ ಇಲ್ಲ. ಜೈಹಿಂದ್ ಇಂಡಸ್ಟ್ರೀಸ್‌ನಲ್ಲಿ ನಿಕ್ಕಿ ಮಾಡಿದ ದಿನಕ್ಕಿಂತ ಒಂದಿನ ತಡ ಮಾಡಿ ಮೊದಲ ದಿನವೇ ಬೈಸಿಕೊಂಡಿz. ಅದಾದ ಮರುದಿನವೇ ಮತ್ತೆ ಬೈಸಿಕೊಂಡು ಈಚೆ ಬರುವಾಗ ಪಕ್ಕದ ರೂಮಿನಲ್ಲಿ ಆಗಷ್ಟೆ ಕ್ಯಾಂಟಿನ್ ಹುಡುಗ ಇರಿಸಿ ಹೋಗಿದ್ದ ‘ಆಲೂ ಪೊಹೆ’ ತಿನ್ನುತ್ತಿದ್ದ ಶೋಭಾ ಎನ್ನುವ ನನಗಿಂತ ಆರೆಂಟು ವರ್ಷದ ಸೀನಿಯರ್ ಒಬ್ಬಳು ಕಿಸಕ್ಕೆಂದು ನಕ್ಕಿದ್ದು ಮೈಯೆಲ್ಲ ಉರಿದು ಹೋಗಿತ್ತು.ಆವತ್ತೆ ಸಂಜೆ ನಾನಿದ್ದ ಚಾಳಿನ ಪಕ್ಕದ ಆಕೆ ಸಿಕ್ಕಬೇಕೆ. ಹೋಗಿ ನಿಲ್ಲಿಸಿಕೊಂಡು ಎರ್ರಾಬಿರ್ರಿ ಬೈದಾಡಬೇಕೆನ್ನುವ ತಯಾರಿಯಲ್ಲಿದ್ದರೂ ಆಕೆಗೆ ಯಾವ ಕೋಪವೂ ಬಂದಿರಲಿಲ್ಲ. ಆದರೆ, ಜೊತೆಗೆ ಹಿಂದಿನಿಂದ ಬರುತ್ತಿದ್ದ ಅವರಮ್ಮ ಮಾತ್ರ ‘ಕಾಯ್ ಝಾಲ್.. ಸಗಳ್ಯಾ ಕಡೆ ಕಶಾಲಾ ಭಾಂಡಣ್ ಕರತೋ.. ಶೋಭಿ..’ ಎನ್ನುತ್ತಿದ್ದರೆ ‘ಆಯಿ...ಬಗಾ ಇಕಡೆ..’ ಎನ್ನುತ್ತ ನಾನು ಶುದ್ಧ ಮರಾಠಿಯಲ್ಲಿ ಮಾತಿಗಿಳಿಯುತ್ತಿದ್ದಂತೆ ಅರ್ಧ ಗಂಟೆಯಲ್ಲಿ ಅಮ್ಮ-ಮಗನೇ ಎನ್ನುವಂತಾಗಿ ಹೋಗಿದ್ದೆವು. ಅದವಳಿಗೆ ಇನ್ನಷ್ಟು ದುಸುಮುಸು ಮಾಡಲು ಕಾರಣವಾಗಿತ್ತಾದರೂ ಕೆಲವೇ ದಿನದಲ್ಲಿ ಅವರಪ್ಪನ ಸೈಕಲ್ಲು ಹೊಡೆದುಕೊಂಡು ಅದರ ಮೇಲೆ ಅವಳನ್ನೂ ಹೇರಿಕೊಂಡು ಹೊರಡುವ ಮಟ್ಟಿಗಿನ ಸಲಿಗೆ ಬೆಳೆದಿತ್ತು. ದಿನಾ ಬಸ್ಸು, ಆಟೋ ಹಿಡಿಯುವ ಕಸರತ್ತಿಗೆ ಹೊರತಾದುದೂ ಅವಳಿಗೆ ಅನುಕೂಲವೂ ಆಗಿತ್ತು. ತಂದೆ ಇಲ್ಲದ, ತಮ್ಮನೊಬ್ಬ ಓದುತ್ತಿರುವ, ಅಮ್ಮನ ಅಲ್ಲಿ ಇಲ್ಲಿನ ಗಳಿಕೆಯಲ್ಲಿ ಸಾಗಿ ಮೇಲೆ ಬಂದ ಕುಟುಂಬ ಅದು. ಅದರಲ್ಲಿಯೇ ಓದಿ ನರ್ಸಿಂಗ್ ಸೇವೆಗೆ ಸೇರಬೇಕಿದ್ದ ಶೋಭಾ, ತಕ್ಷಣದ ಕೆಲಸಕ್ಕೆಂದು -ಕ್ಟ್ರಿಯ ಲೆಕ್ಕಪತ್ರ ವ್ಯವಹಾರ ನೋಡಿಕೊಳ್ಳುತ್ತಿದ್ದಳು.ಕ್ರಮೇಣ ಅವರಮ್ಮ ನನಗೆ ಕೊಂಚ ಹೆಚ್ಚೇ ಹತ್ತಿರವಾದರು. ಅದರಲ್ಲೂ ಅಪ್ಪನ ಕೋಟೆ ಮತ್ತು ಅಮ್ಮನ ತೆಕ್ಕೆಯಿಂದ ಹೊರಬಿದ್ದು ಬ್ಯಾಚುಲರಾಗಿ ಅರೆಬರೆ ಹೋಟೆಲುಗಳ ಊಟಕ್ಕೆ ತಗುಲಿಕೊಂಡಿರುವ ನನ್ನಂಥವರಿಗೆ ಇಂಥಾ ಸಂಬಂಧ ಬೆಳೆದುಬಿಟ್ಟರೆ ಅದಕ್ಕಿಂತ ದೊಡ್ಡ ಜರೂರತ್ತು ಆ ಹೊತ್ತಿಗಿನ್ನೊಂದು ಇರಲಾರದು. ವಾರದಲ್ಲಿ ನಾಲ್ಕು ದಿನ ಖುದ್ದು ಕೂತು ಅವರಮ್ಮ ಬಡಿದು ಹಾಕುತ್ತಿದ್ದ ರೊಟ್ಟಿ ಸುಡುತ್ತಿz. ಅದರ ಜೊತೆಜೊತೆಗೆ ಕಾಯಿಪಲ್ಯೆ ಹೆಚ್ಚಿ, ಕೆಲವೊಮ್ಮೆ ಬಾಂಡ್ಲಿ ತುಂಬಿ ರವೆ ಹುರಿದಿಡುತ್ತಿz. ಸಾಮಾನ್ಯವಾಗಿ ಬ್ರಾಹ್ಮಣರ ಮನೆಯ ಹುಡುಗರಿಗೆ ಅಡುಗೆಮನೆಯದ್ದು ಹುಟ್ಟಾ ಸಂಬಂಧ. ಹಾಗಾಗಿ ಅದಕ್ಕೆ ಕುದುರಿಕೊಳ್ಳುವುದು ಇನ್ನೂ ಸುಲಭ. ಇಂಥ ಪಾಪದ ಮೂತಿಯ ಅರೆಬರೆ ಹುಂಬತನದ ನನ್ನಂಥ ಎಡವಟ್ಟ ಹುಡುಗ ಆಯಿಗೆ ತುಂಬ ಹೊಂದಿಕೆಯಾಗುತ್ತಿತ್ತು. ನನಗೋ ಅವರ ಮನೆಯ ಸೈಕಲ್ಲು ಅದ್ಭುತ ಆಕರ್ಷಣೆ. ಯಾವ ಕೆಲಸಕ್ಕೆ ಬೇಕಾದರೂ ಅದನ್ನು ಬಳಸುವ ಸ್ವಾತಂತ್ರ್ಯ ಬೇರೆ ದಕ್ಕಿಬಿಟ್ಟಿತ್ತಲ್ಲ. ಶೋಭಾಳ ಅಪ್ಪ ಇಟ್ಟುಹೋಗಿದ್ದ ಸೈಕಲ್ಲು ಯಾರೂ ಬಳಸದೆ ಕೂತಿತ್ತು. ಮೊದಲೆರಡು ದಿನ ಕಿಇಂ.. ಕಿಇಂ.. ಎನ್ನುತ್ತಿತ್ತಾದರೂ ಕ್ರಮೇಣ ನಿಶ್ಶಬ್ದವಾಗಿ ಚಲಿಸತೊಡಗಿತ್ತು ಹರ್ಕ್ಯೂಲೆಸ್ಸು.‘ಆಯಿ ಝುಣಕಾ..ಘೇವುನ್ ಏತೋ..’ ಎಂದು ಅಲ್ಲಿಂದ ಹೊರಟು ಊರೆ ಹರಗ್ಯಾಡಿ ಬರುತ್ತಿz. ಜೊತೆಗೆ ಬೇಕಾದ ಸಾಮಾನುಗಳೂ. ಆದರೆ ಆ ಮನೆಯ ಅನ್ನ ಮತ್ತು ಊರಿನ ಋಣ ಎರಡೂ ನನಗೆ ತುಂಬ ದಿನ ಇರಲಿಲ್ಲ. ತೀರಾ ಅಸಡ್ಡೆಯಿಂದ ಇದ್ದ ನನ್ನನ್ನು ನೌಕರಿಯಿಂದ ನಾಳೆ ಕಿತ್ತಾಕುತ್ತಾರೆ ಎನ್ನಿಸುತ್ತಿದ್ದಂತೆ ನಾನೇ ನಿಗುರಿ ನಿಂತುಕೊಂಡು ‘ನನ್ನ ಸಂಬಳ ಈ ಆಡ್ರೆಸ್ಸಿಗೆ ಎಂ.ಒ. ಮಾಡ್ರಿ’ ಎಂದು ಇನ್ನಿಷ್ಟು ರಾವಾಗಿ ಹೊರಬಂದಿz. ಅಷ್ಟೆ.. ಮರುಮಾತಿಲ್ಲದೆ ಥಾಲಿಪಿಟ್ಟಿಗೆಂದು ಕಟ್ಟಿಕೊಂಡಿದ್ದ ಹಿಟ್ಟು, ಫಿಟ್ಟಿಂಗ್ ಬಟ್ಟೆಗಳ ಗಂಟು ಎರಡೂ ಹಿಡಿದು ಮತ್ತೆ ರಸ್ತೆಗಿಳಿದಿz. ಶೋಭಾ ಮತ್ತು ಆಯಿ ಇಬ್ಬರೂ ಆವತ್ತೆ ಮರೆಯಾಗಿಬಿಟ್ಟಿದ್ದರು.ಆವತ್ತಿನ ಮಟ್ಟಿಗೆ ಶೋಭಾಳೊಂದಿಗೆ ಸಾಕಷ್ಟು ಮಾತಾಡಿದೆನಾದರೂ ತತಕ್ಷಣಕ್ಕೆ ಆಯಿಯನ್ನು ಹೋಗಿ ನೋಡುವುದು ಸಾಧ್ಯವಾಗಲೇ ಇಲ್ಲ. ನನ್ನ ನಿಗರಾಣಿಯಲ್ಲಿದ್ದ ಹಿರಿಯರು ಇಲ್ಲವಾಗಿದ್ದರು. ಇತ್ತ ಶೋಭಾ ರಾತ್ರಿ ಪಾಳಿಯಲ್ಲದೆ ಬೇರೆ ಪಾಳಿಗೆ ಬರುತ್ತಲೇ ಇರಲಿಲ್ಲ. ಕಳೆದ ಎಂಟ್ಹತ್ತು ವರ್ಷಗಳಿಂದ ಆಕೆ ರಾತ್ರಿ ಮಾತ್ರವೇ ಕಾರ್ಯನಿರ್ವಹಿಸುತ್ತಿzಳಂತೆ. ಆ ಕ್ಷಣಕ್ಕೆ ಶೋಭಾಳ ಕಥೆ ಅರಿವಿಗೆ ದಕ್ಕದಿದ್ದರೂ ಆಕೆಗೆ ರಾತ್ರಿಗಳ ಬಗ್ಗೆ ಆವರಿಸಿದ್ದ ಭಯದ ನೆರಳು ಕೇಳಿದಾಗ ಬೆನ್ನಮೂಳೆಯಲ್ಲಿ ಭಯದ ಸೆಳಕೊಂದು ಅರಿವಿಲ್ಲದಂತೆ ಮೂಡಿತ್ತು.‘ರಾತ್ರಿನ್ಯಾಗ ನಿದ್ದಿ ಅನ್ನೊದು ಇಲ್ಲ ಅಂತ ಗೊತ್ತಾತಲ್ಲ. ಅದಕ್ಕೆ ಆವತ್ತಿಂದ ರಾತ್ರಿ ಪಾಳೇಕೆ ಬರ್ಲಿಕ್ಕ ಹತ್ತಿದೆ...’ ಎನ್ನುತ್ತಾ ಕಥೆ ಹೇಳುತ್ತಿದ್ದರೆ ಸರಿರಾತ್ರಿಯಲ್ಲಿ ಕುಡಿದ ಬಾಯಿಯಲ್ಲಿ ಆಕೆಯನ್ನು ಹರಿದುಕೊಳ್ಳುತ್ತಲೂ, ನಿದ್ರೆಯ ಆಳದಲ್ಲಿzಗ ಮೈಮೇಲೆ ಸರಕ್ಕನೆ ಸುಡುತ್ತಿದ್ದ ಸಿಗರೇಟಿನ ಕಿಡಿಗಳೂ, ಕೈಗೆ ಸಿಕ್ಕಿದ ರಿಮೋಟು, ಟವಲ್ಲು, ತಂಬಿಗೆ, ಸಾರಿನ ಸೌಟು, ಉಂಡೆದ್ದ ತಟ್ಟೆಯ ಏಟು, ಹಾಯ್ದು ಹೋಗುತ್ತಿzಗ ಅರಿವಾಗೋ ಮೊದಲೇ ಅ ಬಿದ್ದಿರುತ್ತಿದ್ದ ಮೊನಚು ಪೆನ್ಸಿಲ್ಲು ತುದಿಯಿಂದ ಹಿಂಭಾಗಕ್ಕೆ ಸರಕ್ಕನೆ ತಿವಿದು ಬಿಟ್ಟಲ್ಲಿ ಆಗುವ ಅನಿರೀಕ್ಷಿತ ಭಯ ಮತ್ತು ನೋವು. ಬೆತ್ತಲೆ ನಿಲ್ಲಿಸಿ ಮನೆಯಿಂದ ಹೊರಹಾಕುವ ಬೆದರಿಕೆ, ಮಧ್ಯರಾತ್ರಿಯಲ್ಲಿ ಮೈಮೇಲೆ ಬಿಸಿನೀರು ಬಿzಗ ಆಗಿರಬಹುದಾದ ಯಾತನೆ ಇವನ್ನೆಲ್ಲ ಸುಮ್ಮನೆ ಆಲಿಸುತ್ತಿದ್ದ ನನಗೆ ಎದೆ ಝಂದಿತ್ತು.ಅವನ್ನೆಲ್ಲ ದಾಟಿ ಶೋಭಾ ತನಗೂ ಆಯಿಗೂ ಮತ್ತೊಮ್ಮೆ ಬದುಕು ಗಟ್ಟಿಗೊಳಿಸಿಕೊಂಡಿದ್ದಳು. ಆದರೆ, ಅದಕ್ಕೂ ಮೊದಲು ಸತತವಾಗಿ ಅವಳ ಬದುಕು ನರಕದಲ್ಲಿ ಸವೆದುಹೋಗಿತ್ತಲ್ಲ ಅದೆಲ್ಲ ಮುಂದಿನ ವಾರಕ್ಕಿರಲಿ. ಆದರೆ ಆಕೆಯ ಪ್ರಶ್ನೆಯನ್ನು ಇವತ್ತಿಗೂ ಮನಸ್ಸಿನಿಂದ ತೆಗೆದು ಹಾಕಲಾಗುತ್ತಿಲ್ಲ. ಗಂಡಸರಿಗೆ ಬೇಕಿರೋದಾದರೂ ಏನು..? ಮನಸ್ಸು ಅನ್ನೋದೆ ಇರೋದಿಲ್ವಾ..? ಅದಕ್ಕುತ್ತರಿಸಲು ನನ್ನಲ್ಲಿ ಪದಗಳಿರಲಿಲ್ಲ. ಮನಸ್ಸು ಅದಕ್ಕೂ ಮೊದಲೇ ಖಾಲಿಯಾಗಿತ್ತು ಆಕೆಯ ಕಥೆ ಕೇಳಿ..ಕಾರಣಅವಳು ಎಂದರೆ...