Monday, September 9, 2013

ಮಿಸ್ ಮಾಡಿಕೊಳ್ಳುವುದು ಎಂದರೇನು ..?

" ಐ ಮಿಸ್ ಯು ಟೂ ಮಚ್... " ಮೊನ್ನೆ ಒಂದು ಎಸ್ಸೆಮ್ಮೆಸ್ಸು ಇದ್ದಕ್ಕಿದ್ದಂತೆ ಮೂಡಿ ಬಂತು. ನಂಬರು ಕೊಂಚ ಪರಿಚಿತವೇ. ರಿಡೈಲ್ ತಿರುಗಿಸಿದೆ. " ಹೈ ಸ್ಯಾಂ... ಎಲ್ಲಿದ್ಡಿ. ಮಿಸ್ಸಿಂಗ್ ಯೂ ರಿಯಲಿ..." ದೂರದೂರಿನ ಗೆಳತಿ ವಿಹಾರದ ತಾಣವೊಂದರಿಂದ ಕರೆ ನೀಡಿದ್ದಳು. ಅಷ್ಟರ ಮಟ್ಟಿಗೆ ನಾನು ಪುಣ್ಯವಂತ. ತುಂಬ ಸಂತೋಷದ ಸಮಯದಲ್ಲಿ ನೆನಪಾಗಿದೆ. " ಹ್ಯಾವ್ ಎ ನೈಸ್ ಡೇ... ನೀರಿಗಿಳಿಯುತ್ತಾ ನಿನ್ನ ಗಂಡನ್ನ ತುಂಬಾ ಗೋಳು ಹೊಯ್ಕೋಬೇಡಾ. " ಎನ್ನುತ್ತಾ ಮೇಲ್ ಕೀ ಹಿಂಡಿದೆ. ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತೇವಾ..? ಕೆಲವರಿಗಂತೂ ಈ ಮಿಸ್ ಮಾಡಿಕೊಳ್ಳೊ ಬಗ್ಗೆ ಒಂದು ಸ್ಪಷ್ಟತೆ ಇಲ್ಲದಿದ್ದಾಗಲೂ ರಾತ್ರಿ ಮಲಗುವಾಗಲೂ ಐ ಮಿಸ್ ಯು ಅಂತಾ ಒಂದು ಎಸ್ಸೆಮ್ಮೆಸ್ಸು ತೂರಿ ಬಿಟ್ಟು ಮಲಗಿ ಬಿಡೋದು.
      ಅರೇ ಮಲಗುವಾಗಲೂ ಬೇಕು ಅಂತಾದರೆ, ನೆನಪಾದರೆ ಅದು ಮಿಸ್ ಮಾಡಿಕೊಂಡಂತಲ್ಲ. ಅಥವಾ ನಿನಗೆ ಆಕೆಯ ನೆನಪಾದಾಗೆಲ್ಲ ಮಿಸ್ ಅಂತನ್ನಿಸುತ್ತೆ ಅಂತಾದರೆ ಅದೂ ಮಿಸ್ ಅಂತಲ್ಲಪ್ಪ ಎಂದು ವಿವರಿಸಿದರೆ ಸಧ್ಯಕ್ಕೆ ಅದ್ಯಾರಿಗೂ ಅರ್ಥ್ವಾಗುವ ಪರಿಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ನಮಗೆ ಬೇಕಾದಾಗೆಲ್ಲ ನೆನಪಾದಾಗೆಲ್ಲ ಆಕೆಯೋ ಅವನೋ ಇಲ್ಲದಿದ್ದರೆ ಅದು ಒಂದು ಮಿಸ್ಸೇ ಎನ್ನುವಂತಾಗಿಬಿಟ್ಟಿದೆ. ಅದೇ ಸಮಸ್ಯೆಯಾಗಿರೋದು. ತುಂಬಾ ಹೇಳ ಬೇಕಿಲ್ಲದಿದ್ಹರೂ " ಕೊನೆಯಲ್ಲಿ ಐ ಮಿಸ್ ಯು ಯಾರ್.." ಎಂದೋ ಅಥವಾ ಅಲ್ಲೆಲ್ಲಿಂದಲೋ ಒಮ್ಮೆ ಎಸ್ಸೆಮ್ಮೆಸ್ಸು ತೂರಿ ಬಿಟ್ಟು " ಮಿಸ್ಸಿಂಗ್ ಯು ರಿಯಲ್ಲಿ... ಲಾಸ್ಟಿಂಗ್ ಲಾಟ್ ಆಫ್ " ಎಂದು ಬಿಡೋದು ನಿಜಕ್ಕೂ ನಮ್ಮ ಮೇಲಿನ ಅಥವಾ ನಮಗೆ ಅವರ ಮೇಲಿನ ತುಂಬು ಪ್ರೀತಿಯನ್ನು ವ್ಯಕ್ತ ಪಡಿಸಿದಂತೆನ್ನಿಸುತ್ತಾ ? ಇಲ್ಲ ಅದೊಂದು ಗೀಳಾಗಿ ಬದಲಾಗುತ್ತಿದೆಯಾ...? ಸದ್ಯಕ್ಕೆ ಮಿಸ್ಸುಗಳು ಅಂತಾ ಮಿಸ್ ಮಾಡಿಕೊಳ್ಲುವವರೆ ಉತ್ತರಿಸಿಕೊಳ್ಳಬೇಕಾಗಿದೆ.
       ತುಂಬು ಆತ್ಮೀಯ ಹೃದಯಕ್ಕೆ ಮನಸ್ಸು ತೀವೃವಾಗಿ ಜೊತೆಗಾರರನ್ನು ಅಥವಾ ಜೊತೆಗಾತಿಯನ್ನು ತನ್ನ ಈ ಸಂತೋಷದ ಕ್ಷಣದಲ್ಲಿ ಪಾಲ್ಗೊಳ್ಳಬೇಕಿತ್ತು ಎಂದೆನ್ನಿಸುವಾಗ, ಮನಸ್ಸು ಇನ್ನಿಲ್ಲದಂತೆ ಅವರನ್ನು ನೆನೆದರೆ ಅದೊಂದು ರೀತಿಯಲ್ಲಿ ಮನಸ್ಸಿಗೆ ಮುದವನ್ನೂ, ಅರಿಯದೇ ಅಂತರಾಳದಲ್ಲಿ ಪ್ರೀತಿಯನ್ನು ಉಕ್ಕಿಸುತ್ತಾ ಮುದವನ್ನು ನೀಡುತ್ತಿದ್ದರೆ ಅದು ಯೆಸ್... ರಿಯಲಿ ಐ ಮಿಸ್ ಯು... ಅನ್ನಬಹುದೇನೋ. ಅಸಲಿಗೆ ಹೀಗೆ ಮಿಸ್ ಮಾಡಿಕೊಳ್ಳೋದ್ಯಾಕೆ ? ಅದೂ ಕೇವಲ ಫ್ರೆಂಡ್ಸನ್ನ ತುಂಬು ಸ್ನೇಹಿತೆಯನ್ನ ಪ್ರೀತಿಸುವವರನ್ನ ಮಾತ್ರ ಮಿಸ್ ಮಾಡ್ಕೋತಿವಲ್ಲ. ಉಳಿದವರೆಲ್ಲಾ ಯಾಕೆ  ಈ ಲಿಸ್ಟ್‌ನಲ್ಲಿ ಬರ್ತಿಲ್ಲ. ಪಕ್ಕದೂರಿನ ಅಂಕಲ್ಲು... ಹಳೆಯ ಮೇಸ್ಟ್ರೂ... ಹೋದ ವರ್ಷ ಟ್ರಾನ್ಸ್‌ಫರಾದ ಕ್ಲೋಸ್ ಅಧಿಕಾರಿ... ಇನ್ಯಾರೋ ಪೋಸ್ಟ್ ಮಾಸ್ತರು... ಆಚೆ ಕಡೆಯ ರಸ್ತೆಯ ಊರು ಬಿಟ್ಟು ಹೋದ ವಂದನಾ ಮಾಮಿ... ಆವತ್ತು ಇದ್ದಕ್ಕಿದ್ಡಂತೆ ಮನೆಯವರಿಗೆಲ್ಲ ಔತಣ ನೀಡಿ ನಿಜಕ್ಕೊ ಖುಷಿ ಪಡಿಸಿದ್ದ ಮಾವ... ಇವರೆಲ್ಲಾ ಯಾಕೆ ಒಂದು ಸಲವಾದರೂ ನಮಗೆ ಮಿಸ್ ಅನ್ನಿಸೋಲ್ಲ
           ಅಷ್ಟೇಕೆ ಜೊತೆ ಜೊತೆಯಲ್ಲೇ ಬೆಳೆದ ಕನಿಷ್ಟ ಇಪ್ಪತ್ತು ವಸಂತಗಳನ್ನಾದರೂ ಜೊತೆಯಲ್ಲೇ ಕಳೆದ ಅಣ್ಣ ತಮ್ಮ ಅಕ್ಕಂದಿರನ್ನು ಯಾಕೆ ಮಿಸ್ ಮಾಡ್ಕೋಳ್ಳಲ್ಲ... ಅದ್ಯಾಕೆ ಇಷ್ಟು ನಮ್ಮನ್ನು ಪ್ರೀತಿಯಿಂದ ಬೆಳೆಸಿ ಪಡಬಾರದ ಕಷ್ಟಪಟ್ಟು ಬೆಳೆಸಿದ ಅಮ್ಮನ್ನ .. ನಮಲ್ಲೊಂದು ನಮ್ಮ ಮನಸ್ಸು ದೇಹಕ್ಕೊಂದು ತುಂಬು ತಾಕತ್ತನ್ನು ಬೆಳೆಸಿದ ಅಪ್ಪನನ್ನು ಯಾಕೆ ಮಿಸ್ ಮಾಡಿಕೊಳ್ಳಲ್ಲ...? ಎಂದಾದರೂ ನಿಮ್ಮಮ್ಮನಿಗೋ ಅಪ್ಪನಿಗೋ... ತುಂಬಾ ಮನಸ್ಸಿನಿಂದ ಪುಟ್ಟ ತಂಗಿಗೋ " ಐ ಮಿಸ್ ಯು ರಿಯಲ್ಲಿ ..." ಎಂದು ಎಸ್ಸೆಮ್ಮೆಸ್ಸು ಕಳುಹಿಸಿದ್ದು ಇದೆಯಾ..? ಇದೆ ಎಂದಾದರೆ ನಿಜಕ್ಕೂ ಆ ಮೆಸೇಜು ಪಡೆದಾತ ತುಂಬಾ ಪುಣ್ಯವಂತ. ಅಪರೂಪಕ್ಕೊಮ್ಮೆ ಅಕ್ಕತಂಗಿಯರು ಫ್ರೆಂಡ್ಸ್ ತರಹದವರು " ಸೆಂಡ್ " ಎಂದು ಕೀ ಕುಟ್ಟಿರಬಹುದು ಅಷ್ಟೆ.
        ವಿಚಿತ್ರ ಅನ್ನಿಸಲ್ವಾ... ನಮ್ಮದೇ ರಕ್ತಗಳ ಜೊತೆಗೆ ನಮ್ಮದೇ ಸಂತೋಷವನ್ನು ಹಂಚಿಕೊಳ್ಳುವಾಗ ನಾವ್ಯಾವತ್ತೂ ಮಿಸ್ ಮಾಡಿಕೊಳ್ಳೊದೇ ಇಲ್ಲ. ಇವನಿಗೆ ಅದೇ ನಿನ್ನೆ ಮೊನ್ನೆ ಪರಿಚಯವಾದ ತುಂಡು ಮಿಡಿಯ ಹುಡುಗಿಯದೇ ಹಗಲೂ ರಾತ್ರಿ ಧ್ಯಾನ... ಮೊನ್ನೆಯಷ್ಟೆ ಪರಿಚಯವಾಗಿ ಕೈಗೊಂದಿಷ್ಟು ಹೂವಿನೆಸಳು ಸೇರಿಸಿದ ಬೊಕ್ಕೆ ಇಟ್ಟು, ಕೈಗೊಂದು ಗ್ರೀಟಿಂಗ್ಸು ಕೊಟ್ಟು " ಸೊ ನೈಸ್ ಆಫ್ ಯು " ಎಂದುಬಿಟ್ಟ ಆ ಪಡ್ಡೆಯ ಕೆದರಿದ ಕೂದಲಿನ ಹಳೆಯ ಜೀನ್ಸ್‌ನ ರಂಗೇ... ಮನದಲ್ಲಿ ಕ್ಯಾನ್ವಾಸ್ ಬರೆದು ತಾನೇ ತಾನಾಗಿ ಚಿತ್ರಿಸುತ್ತಿದೆ ಹುಡುಗಿಯ ಮನದಲ್ಲಿ. ಯಾಕ್ಹೀಗೆ...? ಮನಸ್ಸು ತನಗೆ ಇಷ್ಟವಾದಾಗ  ಇಷ್ಟವಾಗೋ ರೀತಿಯಲ್ಲಿ ಸ್ವೀಕರಿಸುತ್ತದೋ ಆಗ ಆಗೋದೇ ಹೀಗೆ.
          ಹದಿವಯಸ್ಸಿನ ರಂಗು ರಂಗೇರುವ ಕಾಲಕ್ಕೆ ನಡೆಯುವ ವಿದ್ಯಮಾನದಲ್ಲಿ ಹೃದಯಗಳಿಗೆ ಮನಸ್ಸಿನದೋ ಪ್ರೀತಿಯದ್ದೋ ಮೊರೆತ ಬಿಟ್ಟರೆ ಬೇರೆ ಕೇಳಿಸುವುದೇ ಇಲ್ಲ. ಯಾವಾಗಲೂ ಅದೇ ಧ್ಯಾನ. ಹೀಗಾಗುವುದರಿಂದಲೇ ಇದ್ಡಕ್ಕಿದ್ದಂತೆ ಇಬ್ಬರಿಗೂ " ಮಿಸ್ " ಎನ್ನಿಸಲಿಕ್ಕೆ ಶುರುವಾಗಿಬಿಡುತ್ತದೆ. " ಡು ಯು ರಿಯಲಿ ಮಿಸ್ ಮಿ... ? " ಎಂದು ಮೇಲಿಂದ ಕೇಳೋದು ಬೇರೆ. ಅಷ್ಟಕ್ಕೆ ಆ ಹುಡುಗ " ನಿಜವಾಗ್ಲೂ ಕಣೆ... ನಂಗೆ ನಿನ್ನ ನೆನಪಾದ್ರೆ ನಿದ್ರೆ ಊಟ ಯಾವುದೂ ಸೇರ್ತಾನೆ ಇಲ್ಲ... ಟಿ.ವಿ. ನೋಡ್ತಾನೂ ನಿನ್ನ ಮಿಸ್ ಮಾಡ್ಕೋಳ್ತಿನಿ ಗೊತ್ತಾ" ಎಂದು ಗೋಗರೆಯುತ್ತಾ ಹಲಬುತ್ತಾನೆ. ಮಾತುಗಳನ್ನು ಹರ್ಭಜನ್‌ಗಿಂತಲೂ ಕೊಂಚ ಜಾಸ್ತಿನೇ ಎನ್ನುವಂತೆ ಸ್ಪಿನ್ ಮಾಡುತ್ತಾನೆ. ಅಷ್ಟೆ ಸರಿಯಾಗಿ ನೆತ್ತಿ ಮಾಸು ಹಾರದ, ಬ್ರಾ ಸೈಜು ಅಳತೆ ಮಾಡಿಕೊಳ್ಳಕ್ಕೆ ಬರದ ಹುಡುಗಿ ಅಷ್ಟಕ್ಕೆ ಕ್ಲೀನ್ ಬೋಲ್ಡ್. ಆಚೀಚೆ ಸರಿಸಿ ನೋಡಿದರೆ ಆಕೆಗಿನ್ನೂ ತಿಂಗಳು ಯಾವಾಗ ಬರುತ್ತದೆ ಎಂದು ಲೆಕ್ಕ ಹಾಕಿಕೊಳ್ಳಲೇ ಬರುತ್ತಿರುವುದಿಲ್ಲ. ಕೊನೆ ಕ್ಷಣದಲ್ಲಿ ಪ್ಯಾಡ್ ತಂದುಕೊಳ್ಳುವ ಧಾವಂತದ ಕನ್ಪ್ಯೂಸ್ ಸ್ಟೇಟ್‌ನವಳು ಆಕೆ. ಅವಳೂ ಬೇರೆನೂ ಹುಡುಗನಷ್ಟು ನಾಚಿಕೆ ಬಿಟ್ಟು ಸಲೀಸಾಗಿ ಬೇರೇನೂ ಹೇಳಲು ಆಗದಿದ್ದರೂ ಅದಕ್ಕೊಂದು ಕೊನೆಯಲ್ಲಿ " ಐ ಟೂ " ಎಂದು ಉಸುರಿ ಸೇರಿ ಬಿಡುತ್ತಾಳೆ.
        ಅಲ್ಲಿಂದ ಶುರುವಾಗೋ ಮಿಸ್ಸಿಂಗು ಕೊನೆ ಕೊನೆಗೆ ಇಬ್ಬರೂ ಮಿಸ್ ಆಗುವವರೆಗೂ ನಡೆಯುತ್ತಲೇ ಇರುತ್ತದೆ. ಕೊಂಚ ಯೋಚಿಸಿ. ನಿದ್ರೆ ಊಟ ಬೇಡವಾದ ಹುಡುಗನಿಗೆ ಕಕ್ಕಸಿಗೆ ಅರ್ಜೆಂಟು ಆದ್ರೆ ತಡೆಯೋ ತಾಕತ್ತಿದೆಯಾ. " ನಿನ್ನ ನೆನಪಲ್ಲಿ ಕಕ್ಕಸಿಗೆ ಹೋಗೋದನ್ನೆ ಮರೆತು ಬಿಟ್ಟೆ ಕಣೆ... ಐ ಮಿಸ್ ಯು " ಎಂದ್ಯಾವನಾದ್ರೂ ಹೇಳಲಿ ನೋಡೋಣ... ಅಥವಾ ನಿನ್ನ ನೆನಪಲ್ಲಿ ಸ್ನಾನ ಮಾಡೋದು ಮರೆತು ಬಿಟ್ಟೆ ಹಲ್ಲುಜ್ಜೋದು ಮರೆತು ಬಿಟ್ಟೆ  ಆಗೆಲ್ಲ " ಐ ಮಿಸ್ ಯು " ಅನ್ನಲಿ ನೋಡೋಣ. ಅದು ಬಿಟ್ಟು ಕಾಸಿಗೊಮ್ಮೆ ಕೊಸರಿಗೊಮ್ಮೆ ಮನಸ್ಸಿಗೆ ಖುಷಿಯಾಗೋ ಅನ್ನಿಸೋ ಮೊಮೆ೦ಟಿಗೆ ಮಾತ್ರ ಮಿಸ್ಸಿಂಗು ಅಂತಾರಲ್ಲ ಈಗ ಹೇಳಿ ನಿಜವಾಗಿಯೂ ಅದು ಮಿಸ್ಸಿಂಗು ಅನ್ನಿಸುತ್ತಾ... ?
        ಅದೇ ಒಮ್ಮೆ ತಪ್ಪದೇ ನಿಮ್ಮ ರಿಸಲ್ಟ್ ಬಂದಾಗ್ಲೋ ಅಥವಾ ಯಾವುದಾದರು ಸಣ್ಣ ಪ್ರಶಸ್ತಿ ಬಂದಾಗಲಾದರೂ ಅಪ್ಪನಿಗೆ ಫೋನು ಮಾಡಿ " ನಿಜವಾಗಿಯೂ ನೀನಿರಬೇಕಿತ್ತು ಪಪ್ಪ. ನಾನು ಸ್ಟೇಜ್ ಮೇಲಿದ್ದಾಗ ರಿಯಲಿ ಐ ಮಿಸ್ಡ್ ಯು... " ಎಂದು ಬಿಡಿ. ಅಷ್ಟು ಸಾಕು ಆ ಹಿರಿಯ ಜೀವಕ್ಕೆ. ಜೀವನದಲ್ಲಿ ಅದಕ್ಕಿಂತಲೂ ದೊಡ್ಡ ಮಿಸ್ಸಿಂಗು ಆಗಿರಲು ಸಾಧ್ಯವೇ ಇಲ್ಲ ಅನ್ನಿಸಿಬಿಡುತ್ತೇ. ಪುಟ್ಟ ತಂಗಿಗೆ ಫೋನು ಮಾಡಿ " ಚಿಕ್ಕ ಪಾರ್ಟಿಲಿ ಫ್ರೆಂಡ್ಸ್ ಮನೇಲಿ ಇದೇನೆ... ನೀನಿರಬೇಕಿತ್ತಮ್ಮ. ಐಸ್ ಕ್ರೀ೦ ಅಂದ್ರೆ ನಿಂಗೆ ತುಂಬಾ ಇಷ್ಟ ಅನ್ನಿಸಿ ನೆನಪಾಯಿತು. ಮಿಸ್ಸಿಂಗ್ ಯು " ಅಂದು ನೋಡಿ.. ನಿಜಕ್ಕೂ ಮಿಸ್ ಆಗುತ್ತಿರುವುದೇನೆಂದು ಗೊತ್ತಾಗುತ್ತದೆ. ಇದರರ್ಥ ಪ್ರೀತಿಸುವವರೂ ಹುಡುಗರೂ ಹದಿ ವಯಸಿನವರೂ ಮಿಸ್ಸ್ ಮಾಡಿಕೋಬಾರದು ಅಂತಲ್ಲವಾದರೂ ನಿಜಕ್ಕೂ ನಾವು ಮಿಸ್ ಮಾಡಿಕೊಳ್ತಿರೋದಾದರೂ ಏನು ಗೊತ್ತಾಗಬೇಕಲ್ವಾ ?
      ನಿಜಕ್ಕೂ ನನಗೊಂದು ಎಸ್ಸೆಮ್ಮೆಸ್ಸೋ ಅಥವಾ ನೇರ ಕರೆಯೊ ಮಾತಾಡಿ ನಿಜಕ್ಕೂ ಮಿಸ್ ಮಾಡಿಕೊಂಡದ್ದನ್ನು ಖಚಿತಪಡಿಸಿದಾಗ ಮಾತ್ರ. ಈ ರೀತಿ ಮಾತಾಡಿದಾಗ ನಾನೂ ನಿಜಕ್ಕೂ ಕೆಲವಾದರೂ ಓದುಗರನ್ನ ಮಿಸ್ ಮಾಡಿಕೊಂಡಿದ್ದು ಸುಳ್ಲಲ್ಲ ಎನ್ನಿಸಿತು. ಎಷ್ಟೆ ಬರೆದರೂ ಎಷ್ಟೆ ಓದಿದರೂ ಇಂಥದ್ದೊಂದು ಇದೆ ಎಂದು ನೆನಪಿನಲ್ಲುಳಿಯುತ್ತದಲ್ಲ... ಬಾರದಿದ್ದಾಗ ಅರೇ ಬರಲಿಲ್ಲ. ಛೇ ಎನ್ನಿಸುತ್ತದಲ್ಲ... ಅದಕ್ಕಿಂತ ಮಿಸ್ ಬೇಕಾ ?


Saturday, September 7, 2013

ಏಕಾಂತ ಎನ್ನುವ ಪರಮ ಸುಖ .... !!!

      ನಿಜಕ್ಕೂ ಮನುಶ್ಯನೊಬ್ಬ ತನ್ನ ಬಗ್ಗೆ ಯೋಚಿಸಿಕೊಳ್ಳಲು ಸಿಗುವ ಪ್ರಶಸ್ತ ಏಕಾಂತ ಸ್ಥಳವೆಂದರೆ ಒಂದು ಬಾತ್ ರೂಮಿನಲ್ಲಿ... ಎರಡನೆಯದ್ದು ಟಾಯ್ಲೆಟ್ಟಿನಲ್ಲಿ... ಬೃಹತ್ ಯೋಚನೆಗಳು ಕೆಲವೊಮ್ಮೆ ಅದ್ಭುತ ಐಡಿಯಾಗಳು ಹೊಳೆಯುವುದೇ ಏಕಾಂತದಲ್ಲಿ ಅದೂ ಈ ಇರುಕಾದ ಟಾಯ್ಲೆಟ್ಟು ಎನ್ನುವ ಮೂರು ಬೈ ನಾಲ್ಕರ ರೂಮಿನಲ್ಲಿ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ದಿನದಲ್ಲಿ ಒಮ್ಮೆ ಅಥವಾ ಎರಡು ಬಾರಿ ಲಭ್ಯವಾಗುವ ಕೆಲವು ನಿಮಿಷಗಳು ಏನೇನೆಲ್ಲಾ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗುತ್ತವೆ ಎನ್ನೋದು ಅನುಭವಿಸಿದವರಿಗೇ ಗೊತ್ತು. ನಿಜಕ್ಕೂ ಮನೆಯಲ್ಲೊಂದು ಸಂಗೀತ ಸಾಧನ ಟೇಪ್.. ಸಿ.ಡಿ.ಪ್ಲೇಯರಿದ್ದು ಅದ್ಭುತವಾದ ಸಂಗೀತವನ್ನು ಕೇಳುವ ಮತ್ತು ಅಂತಹ ಹಾಡುಗಳ ಒಂದು ಸಂಗ್ರಹ ಬಳಿಯಲ್ಲಿದ್ದರೆ ಅದರ ಮಜವೇ ಬೇರೆ.
        ಅದರ ಜೊತೆಗೆ ಏಕಾಂತದಲ್ಲಿ ಸರಕ್ಕನೆ ಬಂದು ಅಡರಿಕೊಳ್ಳುವ ಕಾಮ... ಕುಡಿತ... ದೂರವಾಣಿಲಿ ಸಂಭಾಷಿಸುವಂತಹ ವ್ಯಸನಗಳು ಮನುಶ್ಯನಿಗಿಲ್ಲದಿದ್ದರೆ ಆ ಏಕಾಂತದ ಅನುಭವವೇ ಅದ್ಭುತ. ಎಷ್ಟೊಂದು ಕೆಲಸಗಳು... ಐಡಿಯಾಗಳು... ಅಛೀವ್‌ಮೆಂಟುಗಳಿಗೆ ಬೇಕಾಗುವ ಅಪರೂಪದ ಎಲಿಮೆಂಟುಗಳ ವಿವರಗಳು.. ಅಷ್ಟೇಕೆ ಕಟ್ಟಕಡೆಯಲ್ಲಿ ಸ್ನಾನ ಮಾಡಿ ಬರುವಾಗ ಹೇಗಿದ್ದರೂ ಯಾರೂ ಇಲ್ಲ.. ಹೇಗಿದ್ದರೇನು ಎಂದುಕೊಂಡು ನೇರಾ ನೇರ ನಗ್ನ ಮುನಿಯಂತೆ ಬಾತ್ ರೂಮಿನಿಂದ ಬೀಳುತ್ತಿರುವ ಟವಲ್ ಲೆಕ್ಕಿಸದೇ ಈಚೆಗೆ ಬಂದೂ ಬಿಡುವ ಖಯಾಲಿ ಬಹುಶ: ಏಕಾಂತದಲ್ಲಲ್ಲದೇ ಬೇರೆಯ ಹೊತ್ತಿನಲ್ಲಿ ಬರಲು ಸಾಧ್ಯವೇ ಇಲ್ಲವೇನೋ...? ಸುಖಾಸುಮ್ಮನೆ ಬಿದ್ದುಕೊಂಡಿರುವುದೂ ಅಲ್ಲದೇ... ಗಂಟೆಗಟ್ಟಲೇ ಮಾತೇ ಆಡದೇ ನಮ್ಮಷ್ಟಕ್ಕೆ ಗುನುಗುನಿಸಿಕೊಳ್ಳದೇ... ಸುಮ್ಮನೇ ಚಾಚಿದ ಕಾಲು ಸರಿಸದೆ.. ಉರಿಯುವ ಬಲ್ಬು... ಹೊಡೆದುಕೊಳ್ಳುತ್ತಿದ್ದ ಟಿ.ವಿ. ಉಹೂಂ.. ಯಾವೆಂದರೆ ಯಾವೂದೂ ಕೂಡಾ ಬದಲಿಸದೆ ಬಿದ್ದುಕೊಂಡು ಬಿಡುವ... ಇದ್ದ ಇಷ್ಟೆ ಹಳೆಯ ಸಾರು.. ಬ್ರೆಡ್ಡು.. ನಿನ್ನೆಯ ರೋಟಿ.. ಎಲ್ಲ ಓ..ಕೆ.. ಆದರೆ ಈ ಅದ್ಬುತ ಏಕಾಂತವನ್ನು ಅನುಭವಿಸುವ ಮತ್ತು ಅದನ್ನು ಉಪಯೋಗಿಸಿಕೊಳ್ಳುವ ಮನಸ್ಸು ನಮಗಿರಬೇಕು ಅಷ್ಟೆ. ಅಂತಹದ್ದೊಂದು ಏಕಾಂತಕ್ಕಾಗಿ ನಾನು ಯಾವಾಗ್ಲೂ ಹಾತೊರೆಯುತ್ತೇನೆ. ತೀರ ಟೆಲಿಫೋನ್ ಲೈನಗಳನ್ನು ತೆಗೆದಿಟ್ಟು ಕಂಪ್ಯೂಟರಿನಲ್ಲಿರುವ ಆಶಾಳಿಗೆ ಜೀವ ಕೊಟ್ಟು, ಸಣ್ಣಗೆ ಆಕೆ " ಲಗ ಜಾ ಗಲೇ ಕೆ ಫೀರ್ ಯೆ ಹಸಿ ರಾತ್ ಹೋನ ಹೋ..." ಹಾಡುತ್ತಿದ್ದರೆ ಕುಳಿತಲ್ಲೇ ಜೀವ ಕಂಪಿಸಿಬಿಡಬೇಕು. ಹಾಗೇ ಅನಾಮತ್ತು ಆರು ದಿನ ಒಂದೇ ಒಂದು ಹೊರಗಿನ ಜೀವಿಯ ಸಂಪರ್ಕವೂ ಇಲ್ಲದಂತೆ ಬದುಕಿಬಿಟ್ಟಿದ್ದೆ ಕೇವಲ ಎಕ್ಸ್‌ಫೆರಿಮೆಂಟು ಎಂದು.

         ಬಹುಶ: ೧೯೯೮ ನವೆಂಬರ್ ಮಧ್ಯಭಾಗವಿರಬೇಕು. ನಾನು ಬೆ೦ಗಳೂರಿನಿಂದ ಪಯಣಿಸುತ್ತಿದ್ದೆ. ಸರಿ ಸುಮಾರು ಮಧ್ಯರಾತ್ರಿ ಒಂದೂವರೆ ಹೊತ್ತಿಗೆ ಮಲಗಿದ್ದವರು ಅಲ್ಲೆ ಮಗುಚಿ ಬೀಳುವಂತೆ ಡ್ರೈವರು ಬ್ರೇಕಿಸಿದ. ಸರಿಯಾಗಿ ಹರಿಹರ ದಾಟಿ ರಾಣೆಬೆನ್ನೂರು ಕಡೆ ಹೋಗುವ ದಾರಿಯಲ್ಲಿ ನಡೆದ ಆಕ್ಸಿಡೆಂಟ್ ಅದು. ಮುಂದೆ ನಿಂತಿದ್ದ ಲಾರಿ ಮತ್ತು ಬೇರೊಂದು ಬಸ್ಸಿನ ನಡುವೆ ನುಜ್ಜುಗುಜ್ಜಾಗಿದ್ದ ಮಾರುತಿ ವ್ಯಾನಿನಿಂದ ಅರೆ ಜೀವಗಳು ಒದ್ದಾಡುತ್ತಿದ್ದವು. ತೀರ ಕತ್ತಲಿನ ಅಪರಾತ್ರಿ. ದೇಹವೊಂದು ಈಚೆಗೆ ಬಂದು, ಬರೀ ಕೈ ಮಾತ್ರ ಗಾಳಿಯಲ್ಲಿ ಅಲುಗಾಡುತ್ತಾ ರಸ್ತೆಯ ಮಧ್ಯದಲ್ಲಿ ಭೀಕರತೆಯನ್ನು ಸೃಷ್ಟಿಸಿತ್ತು. ಬಹುಶ: ಯಾರೆಂದರೆ ಯಾರೂ ಬದುಕಿರಲಿಲ್ಲ. ಡ್ರೈವರ್ ಸೀಟಿನಲ್ಲಿದ್ದ ವ್ಯಕ್ತಿಯ ತಲೆ ಹೊಟ್ಟೆಯ ಭಾಗದಲ್ಲಿತ್ತು. ಆ ಅಫಘಾತಕ್ಕೂ ನಮ್ಮ ಬಸ್ಸಿಗೂ ಏನೆಂದರೆ ಏನೂ ಸಂಬಂಧವಿರಲಿಲ್ಲ. ಆದರೆ ಅದನ್ನು ಕೊಟ್ಟಕೊನೆಯಲ್ಲಿ ನೋಡಿದ ಚಾಲಕ ಸರಕ್ಕನೇ ಬ್ರೇಕ್ ತುಳಿದಿದ್ದ. ಸೀಟಿನ ಕೆಳಗೆ ಕಾಲು ಚಾಚಿ ಹಿಂದಕ್ಕೆ ಒರಗಿಕೊಂಡಿದ್ದ ನಾನು ಆ ವೇಗಕ್ಕೆ ಸಿದ್ಧನಿರಲಿಲ್ಲ. ಕಾಲು ಅಲ್ಲೇ ಇತ್ತು ದೇಹ ಮುಂದಕ್ಕೆ ಸರಿಯಿತು. ಪಾದ ಕದಲಿಸಲಾಗದಂತೆ ಲಗೇಜು ಇದ್ದುದರಿಂದಾಗಿ ಅಲ್ಲಿ ಹೊರಳಿಕೊಂಡು ಬಿಟ್ಟಿತು.

     ಎಲ್ಲರಿಗೂ ಅಷ್ಟಿಷ್ಟು ಏಟಾಗಿದ್ದವು. ಅಂತಹ ದೊಡ್ಡ ಗಾಯಗಳೇನೂ ಆಗಿರಲಿಲ್ಲ. ಆದರೆ ನನಗೆ ಎಲ್ಲಿ ಫ್ರಾಕ್ಚರ್ ಆಗಿದೆಯಾ ಎಂದು ಅನುಮಾನ ಬರುತ್ತಿತ್ತು. ಯಾಕೆಂದರೆ ಅದು ಕ್ಷಣ ಕ್ಷಣಕ್ಕೂ ಊದಿಕೊಳ್ಳುತ್ತಿತ್ತು. ಕೂಡಲೇ ಶೂ ತೆಗೆದು ನೀಟಾಗಿ ಇನ್ನೊಂದು ಸಾಕ್ಸ್ ಹಾಕಿ ಕಟ್ಟಿ ಮತ್ತಷ್ಟು ಊದಿಕೊಳ್ಳದಂತೆಯೂ, ಅಲುಗಾಡದಂತೆಯೂ ಬಿಗಿದು ಬೆಳಗಿನವರೆಗೆ ಹಾಗೇ ಕುಳಿತು ಬಿಟ್ಟೆ. ಊರಿಗೆ ತಲುಪಿದವನೇ ಇಳಿದು ಅಲ್ಲೇ ಇದ್ದ ಲೈಟು ಕಂಭಕ್ಕೊರಗಿ ನಿಂತು ಆಟೋ ಕರೆದು ಅವನ ಸಹಾಯದಿಂದ ಮನೆ ಸೇರಿಕೊಂಡಾಗ ಆ ಆದ್ಭುತ ಐಡಿಯಾ ಹೊಳೆದಿದ್ದು. ಕೂಡಲೇ ಆಟೋದವನಿಗೆ ಹೇಳಿದೆ. ಒಂದು ಗಂಟೆಯ ನಂತರ ಹಿಂದಿರುಗಿ ಬರುವಂತೆ. ಮನೆಯಲ್ಲಿ ಒಂಟಿಗಾಲಲ್ಲಿ ಓಡಾಡುತ್ತಾ ಸ್ನಾನ ಮುಗಿಸಿ ಹಾಸ್ಪಿಟಲ್‌ಗೆ ಹೋಗಿ ಎಕ್ಸರೇ ತೆಗೆಸಿದರೆ, ಸದ್ಯ ಮೂಳೆ ಮೂರಿದಿರಲಿಲ್ಲ. ಬಿರುಕೂ ಇರಲಿಲ್ಲ.

          ಆದರೆ ಹೊರಳಿದ ರಭಸಕ್ಕೆ ನರಗಳು ತಿರುಚಿಕೊಂಡು ಬಿಟ್ಟಿದ್ದವು. ಹಾಗಾಗಿ ಒಂದು ವಾರ ಬೆಡ್ ರೆಸ್ಟ್ ಎಂದು ಬ್ಯಾಂಡೇಜು ಬಿಗಿದು ನನ್ನನ್ನು ಮೂಟೆಯಂತೆ ಆಟೋಗೆ ತುಂಬಿಸಿದರು. ಡ್ರೈವರ್ ಸಹಾಯ ಪಡೆದು ಆರು ದಿನಕ್ಕಾಗುವಷ್ಟು ಹಾಲಿನ ಪುಡಿ... ಮೊಟ್ಟೆ... ಬ್ರೆಡ್ಡು... ವೆಜಿಟೇಬಲ್ಸ್ ತೆಗೆದುಕೊಂಡು ಮನೆಯೊಳಕ್ಕೆ ನಡೆದು ಹೋದವನ ಮನೆಯ ಬಾಗಿಲು ತೆಗೆಯುತ್ತಿದ್ದುದು ಬೆಳಿಗ್ಗೆ ಎಚ್ಚರಾಗಿ ಪೇಪರು ತೆಗೆದುಕೊಳ್ಳುವಾಗ ಮಾತ್ರ. ಇಲ್ಲದಿದ್ದರೆ ಅನಾಮತ್ತು ಆರು ದಿನ ಬಾಗಿಲು ತೆಗೆಯದೆ ಹೊರಕ್ಕೆ ಹೋಗದೆ... ಸ್ನಾನ... ಟಾಯ್ಲೆಟ್ಟು. ತಿಂಡಿ.. ಪೇಪರು..ಟಿ.ವಿ. ಸಿ.ಡಿ.ಯಲ್ಲಿ ಕಿಶೋರನ ಹಾಡು... ಕಣ್ತುಂಬಾ ನಿದ್ದೆ. ರಾತ್ರಿಗೆ ಫ್ರಿಜ್ಜಿನಲ್ಲಿ ಇದ್ದೇ ಇರುತ್ತಿದ್ದ ಬಿಯರು....

       ಅಷ್ಟೆ... ಹಾಗೆ ಕಳೆದ ತೀರ ಆರನೆಯ ದಿನ ಸಂಜೆ ಬೆಲ್ ಆಯಿತು. ದಿನಾಲು ಲೈಟು ಉರಿಯುತ್ತಿತ್ತು. ಪೇಪರು ಕಾಣೆಯಾಗುತ್ತಿದೆ. ಆದರೆ ಈ ಮನುಶ್ಯ ಯಾಕೆ ಹೊರಗೆ ಬರುತ್ತಿಲ್ಲ ಎಂದು ಸ್ನೇಹಿತ ಬಂದು ಬೆಲ್ ಬಾರಿಸಿದ್ದ. ಅಲ್ಲಿಗೆ ನನ್ನ ಏಕಾಂತ ವಾಸ ಕೊನೆಗೊಂಡಿತ್ತು. ಕಾಲು ಸುಮಾರಾಗಿ ವಾಸಿಯಾಗಿತ್ತಾದರೂ ಇನ್ನೂ ಊರಲಾಗುತ್ತಿರಲಿಲ್ಲ. ಹಾಗಾಗಿ ಅವನೇ ಮುಂದೆ ನೋಡಿಕೊಂಡ. ಆದರೆ ಅದ್ಭುತವಾಗಿ ಕಳೆದು ಹೋದ ಆ ಆರು ದಿನಗಳು ನಿಜಕ್ಕೂ ಒಬ್ಬಂಟಿತನದ ಮುಕ್ತತೆಗೊಂದು ಅರ್ಥ ಕಲ್ಪಿಸಿದ್ದವೆಂದರೂ ಸರಿನೇ. ಯಾಕೆಂದರೆ ಮಾಮೂಲಿನಂತೆ ಬೆಳಗು... ರಾತ್ರಿ... ಮಧ್ಯೆ ಅನಾವಶ್ಯಕ ಕಿರಿಕಿರಿಗಳಿಲ್ಲ. ಇನ್ನೇನು ಬೇಕು.

      ತೀರ ನಿಜಕ್ಕೂ ಅನುಭವಿಸಬೇಕಾದಂತಹ ಶಾಂತತೆ ಇರುತ್ತಿತ್ತು. ಮಾತು ಅಸಲಿಗೆ ಇಲ್ಲವೇ ಇಲ್ಲ. ತೀರ ಯಾವಾಗಲಾದರೊಮ್ಮೆ ಸಣ್ಣದಾಗಿ ಮೊದಲೆರಡು ದಿನ ಹಾಡು ಗುನುಗಿಸಿದ್ದೆ ಅನ್ನೋದು ಬಿಟ್ಟರೆ ಕೊನೆಕೊನೆಗೆ ಮನಸ್ಸಿನಲ್ಲೂ ಯೋಚನೆಗಳೂ ಸ್ಥಗಿತಗೊಳ್ಳಲಾರಂಭಿಸಿದ್ದವು. ಮನಸ್ಸು ಮತ್ತು ದೇಹದೊಂದಿಗಿನ ಸಂಬಂಧವೇ ಕಡಿದು ಹೋಗುತ್ತಿರುವ ಫೀಲಿಂಗ್ ಆರ೦ಭಗೊಳ್ಳುವ ಅಪರೂಪದ ಕ್ಷಣ ಆಗ ಆರಂಭವಾಗಿತ್ತು. ಮಾತಂತೂ ನಿಂತು ಹೋಗಿತ್ತು. ಮನಸ್ಸು ತನ್ನಷ್ಟಕ್ಕೆ ಮೌನವಾಗಿ ಸ್ಥಮ್ಭಿಸಿಬಿದುತ್ತಿತ್ತು. ಯಾಕೆಂದರೆ ಎಲ್ಲ ಯೋಚನೆಗಳಿಂದ ಚಿಂತೆಗಳಿಂದ ಮುಕ್ತವಾಗಿ ಮನಸ್ಸನ್ನು ಹರಿಯಲು ಬಿಟ್ಟು ತುಂಬು ಏಕಾಗ್ರತೆಯಿಂದ ಕುಳಿತುಬಿಡೋದೇ ಧ್ಯಾನ ಅಲ್ಲವಾ... ? ಏನು ಮಾಡುತ್ತಿದ್ದೇನೆ ಎನ್ನುವ ಅರಿವೂ ಇಲ್ಲದ ಹಾಗೆ ಗಂಟೆಗಳು ಕಳೆದುಹೋಗುತ್ತಿದ್ದವು. ತೀರ ನಿಸರ್ಗ ಸಹಜ ಬಾಧೆಗಳನ್ನು ಹೊರತು ಪಡಿಸಿದರೆ ಮತ್ತಾವ ಸಂವೇದನೆಗಳೂ ಅರಿವಿಗೆ ಬರುವುದನ್ನು ಕಡಿಮೆ ಮಾದತೊದಗಿದ್ದವು. ನಿಶಬ್ದ.. ಸಂಗೀತ.. ಶಾಂತಿ... ಓದು.. ಮೌನದಲ್ಲೇ ನಿದ್ದೆ.. ನಿದ್ದೆಯಲ್ಲೂ ಮೌನ.... ಇನೇನು ಬೇಕು.. ಆದರೆ ಹಾಗೊಂದು ಅಪರೂಪದ ಕ್ಷಣಗಣನೆಯ ಹಂತವನ್ನು ನಾನು ತಲುಪುವ ಸಮಯಕ್ಕೆ ಆ ಏಕಾಂತ ಮುಗಿದಿತ್ತು. ಬಹುಶ: ಬೇರೆ ಬೇರೆ ರೀತಿಯ ಅನುಭವಗಳೂ ಆಗಬಹುದೇನೋ. ಆದರೆ ನಾವು ಯಾವ ಯಾವ ರೀತಿಯ ಪರಿಸರದಲ್ಲಿ ಏಕಾಂತ ಕಳೆಯುತ್ತೇವೆಯೋ ಅದರ ಮೇಲೆ ಅವಲಂಬಿಸುತ್ತದೆ ಎನ್ನುವುದೂ ಅಷ್ಟೆ ಸತ್ಯ.

ಯಾಕೆಂದರೆ ಒಮ್ಮೆ ಗಂಡ ಮನೆಯಿಂದ ಹೊರಟ ಮೇಲೆ ಎಷ್ಟೊ ಮಹಿಳೆಯರಿಗೆ ವಾಪಸ್ಸು ಮಗು ಬರುವವರೆಗೆ ಅದ್ಭುತ ಏಕಾಂತ ಬೇಡವೆಂದರೂ ಲಭ್ಯ. ನಮ್ಮಲ್ಲೊಂದು ಗಮ್ಯವಿದ್ದರೆ ಲಭ್ಯವಾಗುವ ಏಕಾಂತ ನಿಜಕ್ಕೂ ತುಂಬಾ ದಿವ್ಯ ಅನುಭವವೇ. ಆದರೆ ಏಕಾಂತ ಕೆಲವೊಬ್ಬರಿಗೆ ಹಿಂಸೆಯಾಗಿ ಪರಿವರ್ತಿತವಾಗುವುದೂ ಇದ್ದೇಇದೆ. ಯಾಕೆಂದರೆ ಯಾವಾಗಲೂ ಲಭ್ಯವಾಗುವ ಏಕಾಂತವೇ ಕೆಲವೊಮ್ಮೆ ಬೇಡ ಎನ್ನಿಸಿಬಿಡಲೂ ಬಹುದು. ನಮ್ಮ ಬಗೆಗೆ ನಾವೇನು ಎಂದು ಆತ್ಮ ವಿಮರ್ಶೆಗೆ ಬಹುಶ: ಏಕಾಂತದಷ್ಟು ಸೂಕ್ತ ಸಮಯ ಬೇರೊಂದಿಲ್ಲವೇನೋ...? ಆದರೆ ಮನಸ್ಸೆ ಗೊಬ್ಬರದ ಗುಂಡಿಯಂತೆ ಮಾಡಿಕೊಂಡವರಿಗೆ ಏಕಾಂತ ಖಂಡಿತಕ್ಕೂ ದೆವ್ವದ ಕಾರ್ಖಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Monday, September 2, 2013

ಕುಡಿತವನ್ನು ಕುಟುಂಬ ಪದ್ಧತಿಯಾಗಿಸುವ ಯೋಜನೆಯೇ...?

         ಬೆಳಿಗ್ಗೆದ್ದರೆ ಮಕ್ಕಳಿಗೆ ಸ್ಕೂಲು, ಗಂಡನೊಂದಿಗೆ ಸ್ವಂತ ನೌಕರಿಗೆ ಹೊರಡುವ ತಯಾರಿ, ಕಟ್ಟಬೇಕಾದ ಕರೆಂಟು, ಸಿಲೆಂಡರ್ರು ಬಿಲ್ಲು,  ಹಾಲು ಬಂದಿಲ್ಲ, ನೀರು ಸರಬರಾಜಿಲ್ಲ, ಅಸ್ಪತ್ರೆಯಲಿರುವ ಹಿರಿಯರಿಗೆ ಡಬ್ಬಿ, ಹಿಂದಿನ ದಿನ ರುಬ್ಬಿಟ್ಟುಕೊಳ್ಳದಿದ್ದರೆ ಇವತ್ತಿಗೆ ದೋಸೆ ಇಲ್ಲ, ನಾಳೆಯಿಂದ ಆಟೋ ಮುಷ್ಕರ ಮಕ್ಕಳನ್ನು ಡ್ರಾಪ್ ಮಾಡು, ಈ ಮಧ್ಯೆ ಕರೆಂಟು ಖೋತಾದಿಂದ ಆಫೀಸು ದಿರಿಸು ಇಸ್ತ್ರೀಯಾಗಿಲ್ಲ, ಮಗಳ ಶೂ ಪಾಲಿಶ್ ಇಲ್ಲ.. ಅಕಾಲಿಕ ಪೀರಿಯೆಡ್ಡಿನಿಂದಾಗಿ ರಾತ್ರಿ ಸಾಕಾಗದ ನಿದ್ರೆ, ಟ್ರಾಫಿಕ್ಕಿನ ಕಿರಿಕಿಗೆ ಮೈಗ್ರೇನ್‍ನ ಕಾಟ ತಪ್ಪುತ್ತಿಲ್ಲ... ಹೀಗೆ ಹಲವು ದೈನಂದಿನ ಜೀವನ ವಿಧಾನದೊಂದಿಗೆ ನೌಕರಿ, ಅಲ್ಲಿನ ಸವಾಲುಗಳು, ಈ ಮಧ್ಯೆ ಮನೆಯ ಸರ್ವ ಸಾರಥ್ಯಕ್ಕೆ ಸಮಾನ ಹೆಗಲು ಕೊಡುತ್ತಲೇ ಸ್ವಂತಿಕೆಯ ಹೆಸರು, ಹಣ ಎರಡನ್ನೂ ಸಮಾನವಾಗಿ ಪುರುಷನೊಂದಿಗೆ ನಿಭಾಯಿಸುತ್ತಾ ಮನೆಗಳನ್ನು ನಡೆಸುತ್ತಿರುವ ನಮ್ಮ ಹೆಣ್ಣು ಮಕ್ಕಳಿಗೆ ದಿನಾ ರಾತ್ರಿ-ಹಗಲೂ ನೀವು ಕುಳಿತು ಸಮಾನವಾಗಿ ಕಂಠ ತನಕ ಕುಡಿರವ್ವ ಎಂದು ಹೇಳುತ್ತಿರುವ ಅಖಿಲೇಶ್ವರಿಯವರೇ ನಮ್ಮದು ಭಾರತೀಯ ಸಂಸ್ಕೃತಿಯ ಕುಂಟುಂಬ ಆಧಾರಿತ ಸಮಾಜ ಪದ್ಧತಿ ಎನ್ನುವುದನ್ನೇಕೆ ಮರೆತಿರಿ..?
             ಮನೆಯಲ್ಲಿ ಮಧ್ಯ ತಯಾರಿಸುವ, ಮತ್ತದನ್ನು ಮಕ್ಕಳಿಗೆ ಕುಡಿಸಿ ಬೆಳೆಸುವ ಪ್ರಮಾಣ ಭಾರತದ ನಮ್ಮ ಸಂಸ್ಕೃತಿಯಲ್ಲಿ ಎಷ್ಟು ಜನರಿದ್ದಾರೆ.. ಗೊತ್ತೇ ಶೇ. 0.03 ಕೂಡಾ ದಾಟುವುದಿಲ್ಲ. (ನಾನು ಸಂದರ್ಶಿಸಿದ ಅಪ್ಪಟ ಬುಡಕಟ್ಟುಗಳಲ್ಲೂ ಮಹಿಳೆಯರು ಮನೆಯಲ್ಲಿ ಮಧ್ಯ ತಯಾರಿಸಿದರೂ ಕುಡಿಯಲು ಸ್ವತ: ಒಪ್ಪದ ದೃಷ್ಟಾಂತ ನನ್ನ ಎದುರಿಗೆ ಇವೆ.) ಅದ್ಯಾವ ಸಾವಿರಗಟಲೇ ಬುಡಕಟ್ಟುಗಳು ಹೀಗೆ ಸಮಾನಾಂತರ ಹೆಂಡದ ಕಾರ್ಯಕ್ರಮ ಆಚರಿಸುತ್ತಿವೆ ತಿಳಿಸ್ತಿರಾ..? ಅಧಿಕೃತ ಬುಡಕಟ್ಟುಗಳ ಸಂಖ್ಯೆಯೇ ನಮ್ಮಲ್ಲಿ ಸಾವಿರ ದಾಟುವುದಿಲ್ಲ ಗೊತ್ತಿರಲಿ. (ದೇಶಾದ್ಯಂತ ಸಂಚರಿಸುತ್ತಾ ವಿಭೀನ್ನ ಜನಜೀವನ ಅಧ್ಯಯನಕ್ಕೆ ಸಾಕಷ್ಟು ಸಮಯ ಸುರಿವ ನನಗೆ ಎಲ್ಲೂ ಹೆಂಡದ ಬಲದಿಂದಲೇ ಸಾಮೂಹಿಕ ಆನಂದಕ್ಕೀಡಾಗುತ್ತಿರುವ ಅಂಶ ಎದ್ದು ಕಂಡಿಲ್ಲ. ಸಾಮೂಹಿಕ ಕುಡಿತ ಎನ್ನುವದು ಹಬ್ಬ ಹರಿದಿನ ಆಚರಣೆಯಲ್ಲಿ ಕೆಲವು ಕಡೆಯಲ್ಲಿದೆ ಅಷ್ಟೆ) 
         ಯಾಕೆ ಈಗಾಗಲೇ ದೇಶಾದ್ಯಂತ 2-3 ನಿಮಿಷಕ್ಕೊಮ್ಮೆ ಕುಡಿದ ಅಮಲಿನಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆಯಂತಹ ಅಪರಾಧಗಳು ದೌರ್ಜನ್ಯಗಳು ಸಾಕಾಗುತ್ತಿಲ್ಲವೆ..? ಹೆಚ್ಚಿನ ಘಟನೆಗಳು ನಡೆಯುತ್ತಿರುವುದು ಕುಡಿದ ಅಮಲಿನಲ್ಲಿ ಮತ್ತು ಮಹಿಳೆಯರ ಸಹಭಾಗಿತ್ವದಲ್ಲಿಯೇ ಅನೈತಿಕ ಸಂಬಂಧಗಳ ಅಪರಾಧಗಳು ಜಾರಿಯಾಗುತ್ತಿವೆ. ಅದರಲ್ಲೂ ಈ ದೇಶದಲ್ಲಿ ಕುಡಿತದ ಬೆಂಬಲಿಂದಿಂದಾಗಿ ಆದ ಕ್ರೈಂ ರೇಟು ಶೇ. 63. ಎನ್ನುವುದು ನಿಮ್ಮ ಗಮನದಲ್ಲೇನಾದರೂ ಇದೆಯಾ ಅಥವಾ ಸಮಾನತೆಯ ಹೆಸರಲ್ಲಿ ಅದೂ ನಿಮಗೆ ಸಮ್ಮತವಾ..?
         ಹೆಚ್ಚಿನಂಶ ಮನೆಯಲ್ಲಿ ಮಕ್ಕಳಿಗೂ ರುಚಿ ತೋರಿಸುವ, ಜೊತೆಗೆ ಕೂರಿಸಿಕೊಂಡು ಕುಡಿವ, ಹುಟ್ಟುತ್ತಲೇ ಕುಡುಕರನ್ನಾಗಿಸುವ ಕುಟುಂಬದ ವ್ಯವಸ್ಥೆ, ನಿಮ್ಮದೂ ಸೇರಿದರೂ ಈ ದೇಶದಲ್ಲಿ ಶೇ. 0.01 ಕೂಡಾ ಇಲ್ಲ. ನಮ್ಮಲ್ಲಿ ಕುಡಿತ ಎನ್ನುವುದು ಸಾಮೂಹಿಕ ಮತ್ತು ಮಹಿಳೆಗೂ ಬೇಕಾಬಿಟ್ಟಿ ಕುಡಿಯಲು (ಗಂಡಸರಂತೆ) ಬೇಕು ಎನ್ನುವ ಹೆಂಗಸರನ್ನು ನೀವು ಹತ್ತು ತೋರಿಸಿದರೆ, ಬೇಡವೇ ಬೇಡ ಎನ್ನುವ ಮಹಿಳೆಯರನ್ನೇ ನಾನು ಲಕ್ಷದ ಲೆಕ್ಕದಲ್ಲಿ ತೋರಿಸುತ್ತೇನೆ. ಹದ ತಪ್ಪಿದಂತೆ ಹವಾಮಾನ ವೈಪರಿತ್ಯ ಅನುಭವಿಸುವ ರಷ್ಯಾದಿಂದ ಅಂಟಾರ್ಟಿಕಾ ಗಡಿಯವರೆಗಿನ ಯಾವ ಭಾಗದಲ್ಲೂ ಮಹಿಳೆಯರ ಕುಡಿತದ ಒಲವಿರುವ ಶೇ.ಪ್ರಮಾಣ 6.6 ಕ್ಕಿಂತ ಜಾಸ್ತಿ ಇಲ್ಲ ಅದೂ ಪ್ರಕೃತಿಗೆ ಒಗ್ಗಿಕೊಳ್ಳಲು. ಅಂಥಾದರಲ್ಲಿ ನಮ್ಮ ಹವಾಮಾನಕ್ಕೆ ಬೇಕಾಗೇ ಇಲ್ಲದ ಕುಡಿತಕ್ಕೆ ಸಮಾನತೆ ಬಯಸುವ ನಿಮಗೆ ಯಾವ ಕೋನದಲ್ಲಿ ಮಹಿಳೆ ಕುಡಿದು ಮುಂದೆ ಬರಬಹುದು ಎನ್ನಿಸಿದ್ದು..? ( ಒಮ್ಮೆ ಈ ಬಗ್ಗೆ ಅ0ತರ್ಜಾಲವನ್ನೂ ಗೂಗಲಿಸಿ ನೋಡಿ ಬೇಕಿದ್ದರೆ )
           ಅಸಲಿಗೆ ಸಾಮಾಜಿಕವಾಗಿ ಪಿಡುಗಾಗಿರುವ ಕುಡಿತವನ್ನೆ ಬಹಿಶ್ಕರಿಸಿ ಪುರುಷರನ್ನೂ ಅದರಿ0ದ ಹೊರತರುವ ಕ್ರಿಯಾತ್ಮಕ ಯೋಜನೆಗಳಿಗೆ ಇಂಬುಕೊಡುವ ಬದಲಾಗಿ, ಮಹಿಳೆಯರನ್ನೂ ಕುಡಿತಕ್ಕೆಳಸಿ ಹಾಳು ಮಾಡುವ ನಿಮ್ಮ ಬಳಿ, ಬರೆದಿರುವ ಈ ಲೇಖನಕ್ಕೆ ಸೂಕ್ತ ಆಧಾರಗಳಿದ್ದರೆ ಬನ್ನಿ ಬಹಿರಂಗ ಚರ್ಚೆಗೆ. ಯಾವ ಸಮಾಜದಲ್ಲಿ ಕುಡಿತದ ಸಮಾನತೆಗೆ ಸಾಮಾಜಿಕ ಮೌಲ್ಯಗಳ ಬೆಂಬಲ ಇದೆ ಅಥವಾ ಇಲ್ಲ, ಯಾವ್ಯಾವ ಬುಡಕಟ್ಟುಗಳು ಹೇಗೆ ಆಚರಣೆಯಲ್ಲಿವೆ ಎಂದು. ಸೂಕ್ತವಾಗಿ ಹೇಳಬೇಕೆಂದರೆ, ಬದಲಾವಣೆಯ ಈ ಕಾಲಘಟ್ಟದಲ್ಲಿ ನೀವು ತಿಳಿದಂತೆ ಈಗಲೂ ಮಹಿಳೆಯ ಮೇಲೆ ಸವಾರಿ ನಡೆಯುತ್ತಿದೆ ಎನ್ನುತ್ತಿದ್ದೀರಲ್ಲ, ನಿಮ್ಮ ಬರಹದ ಧಾಟಿಯನ್ನು ಗಮನಿಸಿದರೆ ಸ್ವತ: ನೀವಿನ್ನೂ ಎರಡು ದಶಕದಿಂದಿಚೇಗೆ ಬೆಳೆದೇ ಇಲ್ಲ.
         ಆಂಧ್ರ ಪ್ರದೇಶವನ್ನು ತಾಲಿಬಾನ್‍ಗೆ ಹೋಲಿಸುವ ನೀವು ನಿಮ್ಮ ಮನೆಗೆ ಬರುವ ಅತಿಥಿಗೆ ಮದ್ಯವನ್ನು ಅಹಾರದೊಂದಿಗೆ ಪೂರೈಸುವ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದೀರಾ..? ನೀವು ನಿಮ್ಮ ಹಿತೈಸಿಗಳ/ಸ್ನೇಹಿತರ ಮನೆಗೆ ಹೋದಾಗ ಅಲ್ಲಿನ ಮಹಿಳೆಯರನ್ನು ನನ್ನೊಂದಿಗೆ ಕೂತು ಕುಡಿಯಿರಿ, ನನಗೂ ಕುಡಿಯಲು ಹೆಂಡ ಕೊಟ್ಟು ಸತ್ಕರಿಸಿ ಎಂದು ಕೋರಿದ್ದೀರಾ..? ಇಲ್ಲ ಎಂದಾದಲ್ಲಿ ಹೀಗೆ ಬಹಿರಂಗವಾಗಿ ಮಹಿಳೆಯರಿಗೆ ಕುಡಿತದಲ್ಲಿ ಸಮಾನತೆಗಾಗಿ ಕಾನೂನು ಮತ್ತು ಅದಕ್ಕೆ ಬ್ರಾಹ್ಮಣೀಕರಣ, ಮೇಲ್ವರ್ಗದಲ್ಲಿ ಸಾಮೂಹಿಕ ಕುಡಿತ, ಕೆಳವರ್ಗದಲ್ಲಿ ಇದು ಅಸಮಾನತೆ ಎಂಬಿತ್ಯಾದಿ ನಿಮ್ಮ ಪೂರ್ವಾಗ್ರಹ ಪೀಡಿತಗಳಿಂದ ಮೊದಲು ಹೊರಬಂದು ಸ್ವಾಸ್ಥ್ಯ ಸಮಾಜಕ್ಕೆ ಕುಡಿತ ಎಷ್ಟು ಅವಶ್ಯಕ ಮತ್ತು ಅದರಲ್ಲೂ ಮಹಿಳೆಯರಿಗೂ ಪುರುಷರಷ್ಟೆ ದಿನವೂ ಸಮಾನ ಕ್ವಾಂಟಿಟಿ ಕುಡಿತ ಇರಬೇಕಾ ಎನ್ನುವುದನ್ನು ಯೋಚಿಸಿ. 
           ಕಾರಣ ತಾವು ಮುಂದುವರಿದಿದ್ದೇನೆ, ಸಮಾನತೆ ಸಾಧಿಸಿದ್ದೇವೆ(?) ಎಂದು ನಂಬಿರುವ ಮಹಿಳೆಯರು ಬೀಡುಬೀಸಾಗಿ ಪುರುಷರಿಗಿಂತ ಮುಂದಾಗಿ ಕುಡಿತ, ಪುರುಷ ನಗ್ನ ನೃತ್ಯ, ಸೀಗರೇಟು ಸೇವನೆ, ಗುಂಪು ಕುಡಿತ, ಸಾಮೂಹಿಕ ಸೆಕ್ಸ್.. ಹೀಗೆ ಇರುವ ಜಗತ್ತಿನ ಅಷ್ಟೂ ಅಪಸವ್ಯಗಳಿಗೂ ಈಡಾಗುತ್ತಿದ್ದಾರಲ್ಲ ಅದು ಅತಿ ಸಮಾನತೆಯಾಯಿತು ಅವರನ್ನು ಹಿಂದಕ್ಕೆ ಕರೆಸೋಣ ಎಂದು ಹೇಳಿಕೆ ಕೊಡ್ತಿರಾ..? ( ನಮ್ಮ ಪುಣ್ಯ, ಈ ದೇಶದಲ್ಲಿ ಎಷ್ಟೆ ಮುಂದು ವರೆದಿದ್ದರೂ ಇಂಥಹ ಅಪಸವ್ಯಗಳಿಗೆ ಈಡಾದವರ ಮನಸ್ಥಿತಿಯವರ ಸಂಖ್ಯೆ ತುಂಬ ಕಡಿಮೆ)
             ಈ ಲೇಖನದ ವಿಷಯಕ್ಕೂ, ಕಾನೂನಿಗೆ ಎಲ್ಲಿಯೂ ಸಂಬಂಧಿಸದ ಬ್ರಾಹ್ಮಣರನ್ನು ಎಳೆತರುವ ಮೂಲಕ ಅದನ್ನೂ ಕೂಡಾ ಜಾತಿಯಾಧಾರಿತ ಮಾಡ ಹೊರಟಿರುವ, ಕುಡಿತದ ಮೂಲಕ ಪುರುಷ ಪ್ರಧಾನ ವ್ಯವಸ್ಥೆ(?)ಯನ್ನು ಧಿಕ್ಕರಿಸುವ ನಿಮ್ಮ ಕ್ರಾಂತಿಕಾರಿ ಯೋಚನೆಗೆ ಅವಾರ್ಡು ಕೊಡಬೇಕು. (ಹಾಗಿದ್ದರೆ ಈಶಾನ್ಯ ರಾಜ್ಯಗಳು ಸೇರಿದಂತೆ ಮಹಿಳಾ ಪ್ರಧಾನ ಕುಟುಂಬ ವ್ಯವಸ್ಥೆಯಿರುವ ಗುಜರಾತಿನ ಕೆಲ ಭಾಗಗಳು, ಉತ್ತರಾಖಂಡ/ಹಿಮಾಚಲದ ಬುಡಕಟ್ಟುಗಳಲ್ಲಿ ಮಹಿಳೆಯರದ್ದೇ ದರ್ಬಾರು ನಡೆಯುವಾಗ ಅಲ್ಲಿ ಯಾವ ರೀತಿಯಲ್ಲಿ ಇದನ್ನು ವ್ಯಾಖ್ಯಾನಿಸೋಣ....? ) ಅಷ್ಟಕ್ಕೂ ಒಂದು ಮನೆಯಲ್ಲಿ ಯಾರು ಕುಡಿಯಬೇಕು ಅಥವಾ ವೈಯಕ್ತಿಕವಾಗಿ ಯಾರು ಕುಡಿಯಬಾರದು ಎನ್ನುವ ವಿಷಯ ಬ್ರಾಹ್ಮಣೀಕರಣದ ವ್ಯವಸ್ಥೆ ಹೇಗಾಗುತ್ತದೆ..? ಅಸಲಿಗೆ ಕುಡಿತ ಎನ್ನುವುದೇ ಸಂಸ್ಕಾರಯುತ ಕುಟುಂಬದ ಅಧ:ಪತನದ ಪರಮಾವಧಿಯ ಅಸ್ತ್ರ. ( ಕುಟುಂಬ ಪೂರ್ತಿ ಸಮಾನತೆಯಲ್ಲಿ ಕುಳಿತು ಕುಡಿದು ಉದ್ಧಾರವಾದ ಒಂದೇ ಒಂದು ಉದಾ. ತೋರಿಸಿ. ಹಾಳಾದ ಸಾವಿರ ಉದಾ. ನಾನು ಕೊಡಬಲ್ಲೆ)
          ಯಾವ ಜಾತಿಯೇ ಆಗಿರಲಿ ಕುಡಿಯುವುದನ್ನು ಪುರುಷ ಸಮಾಜ ನಿರ್ಬಂಧಿಸುತ್ತಿದೆ ಎನ್ನುವುದು ಬ್ರಾಹ್ಮಣೀಕರಣ ಎಂದು ಎಲ್ಲೋ ಬಂದೂಕು, ಇಟ್ಟು ಇನ್ನೆಲ್ಲೋ ಗುಂಡು ಹಾರಿಸುವ ನಿಮಗೆ ದೇಶಾದ್ಯಂತ ಜಾತಿವಾರು ಲೆಕ್ಕದಲ್ಲಿ ಯಾರು ಅಲ್ಪ ಸಂಖ್ಯಾತರು ಎಂದು ಗೊತ್ತೆ..? ಅಷ್ಟಿದ್ದಾಗಲೂ ಅವರೇ ನೈತಿಕ ಮತ್ತು ಸಾಮಾಜಿಕ ಕಟ್ಟು ಪಾಡಿನಲ್ಲಿ ಮಹಿಳೆಯರನ್ನು ಕುಡಿತಕ್ಕೆ ಬಿಡುತ್ತಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿರುವ ನಿಮಗೆ, ಬೆಳಿಗ್ಗೆ/ಸಂಜೆ ಮಹಿಳೆಯರೂ ಸಮಾನವಾಗಿ ಕಂಠ ತನಕ ಕುಡಿದು ಉದ್ಧಾರ ಮಾಡಬೇಕಿರುವ ಘನಕಾರ್ಯವಾದರೂ ಯಾವುದು.. ತಿಳಿಸುತ್ತಿರಾ..? 
         ಮಾವ- ಸೊಸೆ ಸೇರಿ ಕುಡಿಯುವುದು, ಮಗು ಅಜ್ಜನಿಗೆ ಹೆಂಡ ತಂದು ಕೊಡುವುದು, ಸಹೋದರಿಯರಿಗೆ ಅಣ್ಣ ತಮ್ಮಂದಿರೇ ಹೆಂಡ ಕುಡಿಸುವುದು (ಸಹೋದರಿಯರ ರಕ್ಷಣೆಗೆ ಪ್ರಾಣ ಕೊಟ್ಟು ನಿಲ್ಲುವ ಪದ್ಧತಿ..ಹೆಂಡದ ಬಾಟಲಿಯಲ್ಲ.. ಅಖಿಲೇಶ್ವರಿ.. ರಾಖಿ ಕಟ್ಟುವ ಹೆಣ್ಣು ಸಹೋದರನ ಪ್ರೀತಿಯ ಕಾಣಿಕೆಯ ಖುಷಿ ಅನುಭವಿಸುತ್ತಾಳೆ ವಿನ: ಬಾಟಲಿ ಕೊಡಲಿ ಎಂದಲ್ಲ) ಯಾರ್ರಿ ಇಂಥಾ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ..? 
            ನಿಮ್ಮಂತೆ ಯೋಚಿಸಿದ್ದೆ ಆದರೆ ಈ ದೇಶದಲ್ಲಿ ಮೊಟ್ಟ ಮೊದಲಿಗೆ ಈ ಎಲ್ಲಾ ಸಾಮಾಜಿಕ ದುಷ್ಕೃತ್ಯಗಳಿಗೆ ಬಲಿಯಾಗುವುದು ನಮ್ಮದೇ ಮನೆಯ ಹೆಣ್ಣು ಮಕ್ಕಳೆ.. ಅಸಲಿಗೆ ನೀವು ಇದಕ್ಕೆಲ್ಲಾ ಸಮಾನತೆಯ ಲೇಪ ಅ0ಟಿಸುತ್ತಿದ್ದೀರಲ್ಲಾ... ನಿಮ್ಮದೇ ಮನೆಯ ಹೆಣ್ಣು ಮಕ್ಕಳು ದಿನವೂ ಕುಡಿದು ಸ್ಕೂಲು/ ಕಾಲೇಜಿಗೆ ಹೋಗುತ್ತಾರಾ..? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ " ಒಂದು ಕ್ವಾರ್ಟರು ಬ್ರಾಂಡಿ ಕುಡಿದು ಕಾಲೇಜಿಗೆ ಹೋಗು ಮಗಳೇ.." ಎಂದು ಕಳಿಸುವ ಹುಂಬತನಕ್ಕೆ ನೀವು ಇಳಿಯಬಲ್ಲಿರಾ..?
ಪ್ರಚಾರಕ್ಕಾಗಿ ಯಾರದ್ದೋ ಬಂದೂಕು, ಎಲ್ಲೋ ಗುರಿ, ಇನೇಲ್ಲೋ ಕಣ್ಣಿರಿಸಿ ಬರೆಯಬೇಡಿ ದಯವಿಟ್ಟು.

Wednesday, August 28, 2013

ವಿಫಲವಾಗುವ ಪ್ರೇಮ ಸಾವಿಗಿ೦ತಲೂ ಭೀಕರವಾ .. ?


" ಅವಳನ್ನ ಒಮ್ಮೆ ನಾನು ನೋಡಿಬಿಟ್ಟರೆ ಸಾಕು ಕಣೋ... ಮತ್ತೆ ಬೇರೇನೂ ಬೇಕಿಲ್ಲ ನಂಗೆ..." ಹಳಿಯಾಳದ ಬಸ್ ಸ್ಟ್ಯಾಂಡಿನಿಂದ ಬೆಂಗಳೂರಿಗೆ ಕೆಲಸಕ್ಕೆ ಸೇರಲು ಹೊರಟವನ ಮನದಲ್ಲಿದ್ದುದು ನೌಕರಿಯ ಚಿಂತೆಯಾಗಿರಲಿಲ್ಲ. ಹೇಗಾದರೂ ಒಮ್ಮೆ ಅವಳನ್ನು ನೋಡಬೇಕು ಅನ್ನೋದು. ಅದು ೯೦ ರ ಜುಲೈ ೧೦. ವಿಚಿತ್ರವೆಂದರೆ ಹಾಗೆ ಹೊರಟವನ ಬಳಿಯಲ್ಲಿ ಆಕೆಯ ಅಡ್ರೆಸ್ಸು ಹೋಗಲಿ ಕನಿಷ್ಟ ಬೆಂಗಳೂರಿನ ಯಾವ ದಿಕ್ಕಿಗೆ ಆಕೆ ಗೂಡು ಮಾಡಿಕೊಂಡಿದ್ದಾಳೆ ಎನ್ನುವ ಮಾಹಿತಿಯೂ ಇರಲಿಲ್ಲ. ಆಕೆಯ ಮದುವೆ ಬೆಂಗಳೂರಿನ ಹುಡುಗನೊಂದಿಗೆ ಆಗಿದೆ. ಅಷ್ಟನ್ನೆ ನಂಬಿಕೊಂಡು ಯಲ್ಲಾಪುರ ತಾಶಿಲ್ದಾರರ ಮಗ ಹೊರಟು ನಿಂತಿದ್ದ. ಅಸಲಿಗೆ ಅವರಿಬ್ಬರ ಪ್ರೇಮವನ್ನು ನಾನು ತೀರ ಇತ್ತಿಚೆಗೇನೂ ನೋಡುತ್ತಿರಲಿಲ್ಲ. ಬಹುಶ: ೮೬ರ ಆರ೦ಭದಲ್ಲಿ ಒಮ್ಮೆ ಇದೇ ಬಸ್‌ಸ್ಟ್ಯಾಂಡಿನಲ್ಲಿ ಆಕೆಯನ್ನು ತೋರಿಸಿದ್ದ ನೆನಪು. ಅದೂ ಕೂಡಾ ಮಧ್ಯಾನ್ಹದ ಮೂರೂವರೆಗೆ ಹೊರಡುತ್ತಿದ್ದ ಬೆಳಗಾಂ-ಶಿರಶಿ ಬಸ್ಸಿನಲ್ಲಿ ಕಿಟಕಿ ಪಕ್ಕ ಕುಳಿತವಳ ಆಕಸ್ಮಿಕ ದರ್ಶನಕ್ಕೆ ಅವನು ಬೆರಗಾಗಿ ಬಿಟ್ಟಿದ್ದ. ಅಷ್ಟಕ್ಕೂ ಅನಾಮತ್ತು ಎರಡು ಕೀ.ಮಿ.ದೂರದ ಎ.ಪಿ.ಎಂ.ಸಿ. ಯಾರ್ಡಿನಲ್ಲಿದ್ದ ನಮ್ಮ ಕಾಲೇಜಿನಿಂದ ಮಧ್ಯಾನ್ಹದ ಬಿರು ಬಿಸಿಲಿನಲ್ಲೂ ಬಂದು ಆಗಷ್ಟೆ ಉಳಿದ ಕಾಲೇಜಿನಿಂದ ಬರುತ್ತಿದ್ದ ಹುಡುಗಿಯರನ್ನ ನೋಡಿ ಹೋಗುತ್ತಿದ್ದ ಶುದ್ಧ ಪಡ್ಡೆಗಳ ಗುಂಪು ನಮ್ಮದು. ಆ ಹೊತ್ತಿನಲ್ಲಿ ನಮ್ಮ ಈ ಹೀರೊಗೆ ತನ್ನ ಹುಡುಗಿ ಕಂಡು ಬಿಟ್ಟಿದಾಳೆ. ಎಲ್ಲರಿಗೂ ತೋರಿಸಿದ. " ಎ ನೋಡ್ರೋ... ಅವಳೆ...ದೀಪಾ " ಎಂದ. 
      ನಮಗೆಲ್ಲಾ ಅವನಿಗೊಬ್ಬ ಗರ್ಲ್‌ಫ್ರೆಂಡ್ ಇರುವ ವಿಚಾರ ಗೊತ್ತಿತ್ತಾದರೂ ನಾವು ಅದರ ವಿಷಯದಲ್ಲಿ ಗಂಭೀರವಾಗಿರಲಿಲ್ಲ. ಈಗ ನೋಡಿದರೆ ಆಕೆ ಜೊತೆಯಲ್ಲೇ ಯಲ್ಲಾಪುರಕ್ಕೆ ಹೊರಟು ಬಿಟ್ಟಿದಾನೆ. ಅಸಲಿಗೆ ಅವನು ಹೋಗಬೇಕಾಗಿದ್ದುದು ಸಾಯಂಕಾಲದ ಕಡೆಯ ಐದೂವರೆ ಬಸ್ಸಿಗೆ. ಆಕೆ ಕಂಡಿದ್ದೆ ಕೈಲಿದ್ದ ಸಣ್ಣ ನೋಟಬುಕ್ಕನ್ನು ನಮ್ಮೆಡೆಗೆ ಎಸೆದು ಕಾಲೇಜಿನಲ್ಲಿದ್ದ ಉಳಿದವಕ್ಕೆ ವ್ಯವಸ್ಥೆ ಮಾಡಿರೋ ಎಂದೆನ್ನುತ್ತಲೇ ಢರ್ರಗುಟ್ಟಿದ ಬಸ್ಸನ್ನೇರಿದ್ದ. ಅಲ್ಲಿಗೆ ಸುದೀಪ ಎಂಬ ನಮ್ಮ ಸುಂದರಾಂಗ ಸ್ನೇಹಿತನ ಪ್ರೇಮ ಪ್ರಕರಣಕ್ಕೆ ನಾವೆಲ್ಲ ಸೀರಿಯಸ್ಸಾಗಿದ್ದೆವು. ಒಂದು ವರ್ಷ ಕಳೆಯುವಷ್ಟರಲ್ಲಿ ಆ ಪ್ರಕರಣ ಹಾಗೇ ಮುಂದುವರಿದದ್ದು ಕೊನೆಗೊಮ್ಮೆ ಅಂತಿಮ ತಿರುವಿನಲ್ಲಿ ಆಕೆ ಬೇರೆಯವನನ್ನು ಮದುವೆಯಾದಾಗ ನಮ್ಮ ಅಂತಿಮ ವರ್ಷದ ಪರೀಕ್ಷೆಗೆ ಕೇವಲ ಮೂರು ದಿನವಿದ್ದವು. 
     ಹುಡುಗಿ ಕೈತಪ್ಪಿ ಹೋದದ್ದಕ್ಕೂ ಅದನ್ನು ತಡೆಯಲು ಏನೂ ಮಾಡಲೂ ಆಗದ ಅವನ ಅಸಹಾಯಕತನಕ್ಕೂ... ಅದಕ್ಕೂ ಮಿಗಿಲಾಗಿ ಬೇರೇನೂ ಮಾಡಲೇ ಸಾಧ್ಯವಿಲ್ಲದ ನಮ್ಮ ಅಬ್ಬೇಪಾರಿಗಳ ಗೆಳೆತನಕ್ಕೂ ಒಂದು ರೀತಿಯಲ್ಲಿ ಗ್ರಹಣ ಹಿಡಿದಂತಾಗಿ ಬಿಟ್ಟಿತ್ತು. ಆದರೂ ಆಗ ನಮಗಾರಿಗೂ ಅಷ್ಟಾಗಿ ಅದು ಬಾಧಿಸಿರಲಿಲ್ಲವಾದರೂ ನಾನು ಮತ್ತು ಇನ್ನೊಬ್ಬ ಸ್ನೇಹಿತ ರವಿ ವೋಲೆಕರ್ (ಮುಂದೆ ಈತ ಒಂದೂವರೆ ಮರ್ಡರು ಮಾಡಿ, ದಕ್ಕಿಸಿಕೊಂಡು ಬಿಡುಗಡೆಯೂ ಆಗಿ ನೌಕರಿಯನ್ನೂ ಗಿಟ್ಟಿಸಿಕೊಂಡ. ಅದಿನ್ಯಾವತ್ತಾದರೂ ಬರೆದೇನು) ಮಾತ್ರ ಕೊಂಚ ಸುದೀಪನ ಬಗ್ಗೆ ಆಂದೋಳನೆಗೊಂಡದ್ಡು ನಿಜ. ಆ ಕ್ಷಣಕ್ಕೆ ಬೇರೇನೂ ತೋಚಿಲ್ಲವಾದರೂ ಅವನನ್ನು ಹೇಗಾದರೂ ಪಾಸು ಮಾಡಿಸುವ ಸರ್ವಾನುಮತದ ನಿರ್ಣಯ ತೆಗೆದುಕೊಂಡಿತು ಮಿತ್ರ ಪಡೆ. 
    ಅವನೋ ದಿನಕ್ಕೆ ಸಿಗರೇಟು ಸೇದಿ ಹೊಗೆ ಬಿಡುತ್ತಾ ಅಪ್ಪಟ ವಿರಹದ ಅಪರಾವತಾರವೇ ಆಗಿಬಿಟ್ಟಿದ್ದ. ಕೊನೆಗೆ ಅಂತೂ ಇಂತೂ ಎಕ್ಸಾಂನಲ್ಲಿ ಮುಂದೆ ಮತ್ತು ಹಿಂದೆ ಇದ್ದ ನಾನು ಇನ್ನೊಬ್ಬ ಅವನನ್ನು ಹೇಗ್ಹೆಗೋ ಮಾಡಿ ನಮ್ಮೊಂದಿಗೆ ಪಾಸು ಮಾಡಿಸಿಕೊಳ್ಳುವಲ್ಲಿ ಸಫಲನಾಗಿದ್ದೆ. ಇದಾದ ಮೇಲೆ ಕೊಂಚ ಗೆಲುವಾಗಿದ್ದವನು ಇದ್ದಕ್ಕಿದ್ದಂತೆ ಒಂದಿನ ನಾನಿದ್ದ ಊರಾದ ತೇರಗಾಂವಕ್ಕೆ ಬಂದವನೇ " ಸಂತೋಷಾ... ಎಲ್ಲಡಿಯೋ.. ನಾ ಬೆಂಗಳೂರಿಗ ಹೋಗ್ತಿದಿನಿ. ಅಪ್ರೇಂಟಿಸ್ ಸಿಕ್ಕೆದ " ಎಂದವನ ಕಣ್ಣಿನಲ್ಲಿ ಮತ್ತೆ ದೀಪದ ಬೆಳಕು. ಬೆಂಗಳೂರಿಗೆ ಹೋದವನ ಉದ್ದೇಶ ನೌಕರಿಯಲ್ಲವೇ ಅಲ್ಲ ಅನ್ನೋದು ಹೊರಟಾಗಲೇ ತಿಳಿದಿತ್ತಾದರೂ ಕೂಡಾ ಕ್ರಮೇಣ ಜೀವನದ ಬಗ್ಗೆ... ಬದುಕಿನ ಆಟದಲ್ಲಿ ಕೊಂಚ ಬೆಂಗಳೂರಿನ ಹವೆಗೆ ಗಂಭೀರವಾಗಿ ಒಗ್ಗಿಕೊಂಡ. 
    ಈ ಮಧ್ಯೆ ನಾನೂ ಕೂಡಾ ಸಣ್ಣದಾದ ನೌಕರಿ ಹಿಡಿದು ಬೆಂಗಳೂರು ಸೇರಿಕೊಂಡೆ. ೯೦ ರಲ್ಲಿ ಬೆಂಗಳೂರೆಂಬ ಮಾಯಾನಗರಿಗೆ ೩೫೦ ರೂಪಾಯಿ ಸಂಬಳ ನಂಬಿಕೊಂಡು ಹೋದವನನ್ನು ಈ ಬಾರಿ ಸ್ವಾಗತಿಸಿದ್ದು ಸುದೀಪನ ಭವ್ಯ ನಿಲವು... ಅಜಾನುಬಾಹುವಾಗಿ ಬೆಳೆದಿದ್ದ ಆಕೃತಿ. ಹಳೆಯ ಸ್ನೇಹಿತರಿಬ್ಬರೂ ಒಂದಾಗುತ್ತಿದ್ದಂತೆ ಎರಡನೆಯ ದಿನ ಸಂಜೆಯೇ ಪುನ: ದೀಪ ಪ್ರಸ್ತಾಪವಾಗಿದ್ದಳು. " ಒಂದು ವರ್ಷ ಪೂರ್ತಿ ಕಣ್ಣು ಹರಿದೆಡೆಯಲ್ಲೆಲ್ಲಾ ಹುಡುಕಿದೆ ಆಕೆ ಕಾಣಲೆ ಇಲ್ಲ ಕಣೋ " ಎಂದವನ ಧ್ವನಿಯಲ್ಲಿ ಸೋತ ನಿರಾಶೆ ಸಣ್ಣದಾಗಿ ಮಡುಗಟ್ಟಿತ್ತು. " ಏ ಇನ್ನ ಆಕಿನ್ನ ಮರತಿಲ್ಲೇನು..? " ಎಂದರೆ " ಇಲ್ಲ. ಈಗ ನೀ ಬಂದಿದಿಯಲ್ಲ. ಇಬ್ಬರೂ ಕೂಡಾ ಆಕಿನ್ನ ಹುಡುಕೋಣ... ಸಿಕ್ಕೇ ಸಿಗ್ತಾಳೆ..." ಎಂದು ನನ್ನನ್ನು ಸುತ್ತಿನೊಳಕ್ಕೆ ಎಳೆದುಕೊಳ್ಳತೊಡಗಿದ್ದ. ಆ ಬಿ.ಟಿ.ಎಸ್ಸು... ಹಗಲು ರಾತ್ರಿಯ ಪಾಳಿಗಳು... ಆ ಮಧ್ಯೆ ಆಗೀಗ ಜರಗುತ್ತಿದ್ದ ನಮ್ಮ ಪಾನಕಗೋಷ್ಠಿ... ಎಲ್ಲದರ ಮಧ್ಯೆಯೂ ಆಕೆಯನ್ನು ಹುಡುಕುವ ಅವನ ಉತ್ಸಾಹ ಮಾತ್ರ ನನ್ನನ್ನು ಇವತ್ತಿಗೂ ಅಚ್ಚರಿಗೆ ತಳ್ಳುತ್ತದೆ. 
   ಪ್ರೇಮವೆನ್ನುವುದು ಅಷ್ಟೊಂದು ಗಾಢವಾ ಎಂದು. ಮತ್ತೆ ಎರಡು ವರ್ಷಗಳು ಕಳೆದವು. ೯೨ರ ಜುಲೈ ೧೦. ಶುಕ್ರವಾರವಿರಬೇಕು. ಇಬ್ಬರೂ ಮೆಜೆಸ್ಟಿಕ್ಕಿನಲ್ಲಿ ಸುತ್ತಾಡಿ ಹೊರಟವರು ಮಲ್ಲೇಶ್ವರದಲ್ಲಿ ಇಳಿದೆವು. ಮಳೆ ಹನಿಯತೊಡಗಿತ್ತು. ಇದ್ದಕ್ಕಿದ್ದಂತೆ ಗಲಾಟೆ ಆರಂಭವಾಗಿತ್ತು. ನನಗೋ ಬೆ೦ಗಳೂರು ಹೊಸದು. ಏನೆಂದರೆ ಏನೂ ಗೊತ್ತಿರಲಿಲ್ಲ. ಪಕ್ಕದಲ್ಲಿದ್ದವ "ಬೆಂಗಳೂರು ಗಲಾಟೆ ಇದು. ಬಾ " ಎನ್ನುತ್ತಾ ಎದುರಿಗೆ ಸಿಕ್ಕಿದ್ದ ಬಸ್ಸನ್ನೇರಿದ. ಮಲ್ಲೇಶ್ವರ ಸರ್ಕಲ್ ದಾಟಿ ಒಂಭತ್ತನೆಯ ಕ್ರಾಸ್ ದಾಟುವ ಮುಂಚೆ ಕಿರುಚಿಕೊಂಡ. " ಸಂತೋಷಾ ಹಾರಲೇ.. ಜಿಗಿ ಜಿಗಿ..... ಜಂಪ್..." ಎನ್ನುತ್ತ ಹಾರಿಬಿಟ್ಟ. ನಿಧಾನಕ್ಕೆ ಸಾಗುತ್ತಿದ್ದ ಬಸ್ಸಿನಿಂದ ನಾನೂ ಕೆಳಕ್ಕೆ ನೆಗೆದೆ. ಯಾಕೆ ಏನು ಎಂದು ಕೇಳುವ ಸಮಯವಲ್ಲ. ಬಹುಶ ಗಲಾಟೆಯದ್ದೇ ಕಾರಣವಿರಬೇಕು ಎಂದುಕೊಂಡೆ. ಆದರೆ ಅಸಲಿಗೆ ವಿಚಾರವೇ ಬೇರೆ ಇತ್ತು. ಏದುಸಿರಿಡುತ್ತಾ ಉದ್ವೇಗದಲ್ಲಿ ಕಣ್ಣರಳಿಸುತ್ತಾ ನುಡಿದಿದ್ದ. " ನಾನು ದೀಪಾಳನ್ನ ನೋಡಿದೆ.." ಹಾಂ ಎಂದಷ್ಟೆ ಎಂದೆ. ಆಕೆ ಸಿಕ್ಕಿದಳಲ್ಲ ಎನ್ನುವುದಕ್ಕಿಂತಲೂ ಆ ಗಲಾಟೆ... ಹನಿಯುತ್ತಿರುವ ಮಳೆ... ಚಲಿಸುತ್ತಿರುವ ಬಸ್ಸಿನಿಂದಲೂ ಇಣುಕಿ ಆಕೆಯನ್ನು ಹುಡುಕಿದ್ದು ಇವತ್ತಿಗೂ ನನ್ನ ಅಚ್ಚರಿಗಳಲ್ಲೊಂದು. ಅವನು ಮುಂದೆ ಮಾತಿಗೆ ಅವಕಾಶ ಕೊಡದೆ ನನ್ನ ಕೈ ಹಿಡಿದು ಹತ್ತನೆ ಕ್ರಾಸಿನತ್ತ ಹೆಜ್ಜೆ ಸರಿದವನ ಮುಖದಲ್ಲಿ ಎಂದಿಲ್ಲದ ಪ್ರಕಾಶ. ಇನ್ನೇನು ಸ್ವರ್ಗ ತನ್ನೆದುರಿಗೆ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ಸಂಭ್ರಮ. ಆ ಓಟ.. ಗಲಾಟೆ... ಚದುರುತ್ತಿರುವ ಜನಗಳು.. ಪೋಲಿಸ್ ಹಾರ್ನ್.. ಅದ್ಯಾವುದೂ ಅವನ ಲಕ್ಷಕ್ಕಿಲ್ಲ. ಅವನ ಗಮ್ಯ ಅದಾವುದೋ ಆಕೃತಿಯನ್ನು ಬೆನ್ನಟ್ಟುವುದೇ ಆಗಿತ್ತು. 
       ಐದೇ ನಿಮಿಷದಲ್ಲಿ ಆಕೆಯನ್ನು ಸಮೀಪಸಿ ಎದುರಿಗೆ ಹೋದವನು " ದೀಪಾ ನಾನು... ಸುದೀಪ..." ಎಂದು ಧುತ್ತನೇ ಪ್ರತ್ಯಕ್ಷನಾದ. ಆಕೆ ಇದನ್ನು ಅಂದಾಜು ಹೋಗಲಿ ಕನಸಲ್ಲೂ ನೆನೆಸಿರಲಿಲ್ಲವೇನೋ...? ಅಥವಾ ಮಾಮೂಲಿನ ಪ್ರೇಮವಿರಬೇಕು ಎಂದು ಇವನನ್ನು ಮರೆತೇ ಬಿಟ್ಟಿದ್ದಳೊ...? ಒಟ್ಟಾರೆ " ಸುದೀ.. ನಾನು ಈಗ ಮದುವೆಯಾಗಿದ್ದೇನೆ.. ನೀನು ಇದನ್ನೆಲ್ಲ ಮರೆತಿಲ್ಲವಾ... ನೀವೆಲ್ಲ ಗಂಡಸರೇ ಹೀಗೆ " ಇತ್ಯಾದಿ... ಇತ್ಯಾದಿ ನುಡಿದು ರಪ್ಪನೆ ಮುಖಕ್ಕೆ ರಾಚಿ ಹೋರಟು ಹೋದಳು. ಆಕೆಯತ್ತಲೇ ನೋಡುತ್ತಿದ್ದ ನಾನು ದೊಪ್ಪನೆ ಬಿದ್ದ ಶಬ್ದ ಕೇಳಿ... ಇತ್ತ ತಿರುಗಿದೆ. ಬಹುಶ: ಇದನ್ನು ನಿರೀಕ್ಷಿಸದ ಸುದೀಗೆ ಆ ಇಪ್ಪತ್ತೇಳರ ಹರೆಯದಲ್ಲೇ ಸಣ್ಣದಾಗಿ ಹೃದಯಾಘಾತವಾಗಿತ್ತು. ಹೆಗ್ಹೇಗೋ ಗೊತ್ತಿಲ್ಲದ ಬೆ೦ಗಳೂರಿನಲ್ಲಿ ಅವನನ್ನು ಎತ್ತಿಕೊಂಡು ಯಾವ್ಯಾವುದೋ ವಾಹನ ಕಾಡಿ ಬೇಡಿ ಜಾಲಹಳ್ಳಿ ಸೇರಿಕೊಂಡಾಗ ರಾತ್ರಿ ಹನ್ನೊಂದು ಗಂಟೆ. 
        ಯಥಾ ಪ್ರಕಾರ... ಔಷಧಿ ಚೇತರಿಸಿಕೊಳ್ಳುವಿಕೆ ನಡೆಯಿತಾದರೂ ಆ ಘಟನೆಯಿಂದ ಸುದೀಪ ಹೊರಗೆ ಬರಲೆ ಇಲ್ಲವೇನೊ ಅನ್ನಿಸುತ್ತದೆ. ಮತ್ತೆ ಸರಿ ಸುಮಾರು ಐದು ವರ್ಷಗಳು ಕಳೆದವು. ನಾನು ಕಾರವಾರಕ್ಕೆ ಮರಳಿ ಬಂದು ಸರಕಾರಿ ನೌಕರಿ ಸೇರಿಕೊಂಡಿದ್ದೆ. ವ್ಯವಸ್ಥಿತವಾಗಿ ಗೂಡು ನಿರ್ಮಿಸಿಕೊಳ್ಳುವ ತವಕದಲ್ಲಿ ಅವನೊಂದಿಗಿದ್ದ ಇತರ ಮಿತ್ರರೂ ಹಗಲಿರುಳು ಕನವರಿಸುತ್ತಿದ್ದರೆ ಅವನು ಮಾತ್ರ ವರ್ಷದಿಂದ ವರ್ಷಕ್ಕೆ ಸಣ್ಣಗಾಗುತ್ತಾ... ಹತ್ತು ಹಲವು ಕಡೆಯಲ್ಲಿ ನೌಕರಿ ಬದಲಿಸುತ್ತಾ ಬದುಕಿದ್ದ. ಎಷ್ಟು ಹೇಳಿದರೂ ಹೇಳಿದಷ್ಟು ಹೊತ್ತು ಆಕೆಯನ್ನು ಮರೆತಂತೆ ಇರುತ್ತಿದ್ದನಾದರೂ ಏಕಾಂತ ಅವನನ್ನು ಬಹುಶ: ಕೊಂದು ಹಾಕುತ್ತಿತ್ತು. ಕಾರಣ ಮಧ್ಯದಲ್ಲಿ ಒಂದಷ್ಟು ತಿಂಗಳು ತುಮಕೂರಿನಲ್ಲಿ ಕೆಲಸ ಮಾಡಿ ಬಂದ. ಅನೀಲ ಕಪೂರನನ್ನು ಹೋಲುತ್ತಿದ್ದವ ವರ್ಷ ಕಳೆಯುವಷ್ಟರಲ್ಲಿ ಶಕ್ತಿ ಕಪೂರನಂತಾಗಿ ಬಿಟ್ಟಿದ್ದ. ೯೭ರ ಅದೇ ಜುಲೈ ತಿಂಗಳ ೧೦. ಗುರುವಾರ. ಅಲ್ಲಿಯವರೆಗೆ ಇದೆಲ್ಲ ಘಟಿಸಿ ಸುಮಾರು ವರ್ಷಗಳೇ ಕಳೆದಿದ್ದರಿಂದ ಯಾರಿಗೂ ಏನಾಗುತ್ತದೆ ಎನ್ನುವ ಅಂದಾಜು ಹೋಗಲಿ ಸಣ್ಣ ಯೋಚನೆಯೂ ಇದ್ದಿರಲಾರದು. 
         ಬೆಳಿಗ್ಗೆ ಮಿತ್ರರೊಂದಿಗೆ ಸೇರಿಕೊಂಡು ಮೊದಲಿನಿಂದ ಬಂದಿದ್ದ ಅಭ್ಯಾಸದಂತೆ " ಮುತ್ತತ್ತಿ " ಫಾಲ್ಸ್‌ಗೆ ಹೊರಟು ನಿಂತಿತ್ತು ಮಿತ್ರ ತಂಡ. ಆದಾಗಲೇ ಮದುವೆಯಾದವರು ಕುಟುಂಬದೊಂದಿಗೆ.. ಮಕ್ಕಳು ಸ್ನೇಹಿತರೂ ಎಲ್ಲಾ ಸೇರಿ ಸುಮಾರು ನಾಲ್ವತ್ತು ಜನ. ಮುತ್ತತ್ತಿ ತಲುಪಿ ಇನ್ನೇನು ಇಳಿಯ ಬೇಕೆನ್ನುವಾಗ... ಇದ್ದಕ್ಕಿದ್ದಂತೆ " ಸಂತೋಷಾ ಆಕಿ diipa ನಮಗ ಸಿಕ್ಕಿ ಇವತ್ತೀಗ ಎಷ್ಟ ವರ್ಷಾತು..? " ಎಂದು ಕೇಳಿದವನು..." ಬಹುಶ: ಐದು ವರ್ಷಾ. ದೀಪಾಗ ನೆನಪಿರುತ್ತಾ...? " ಎಂದು ಬಿಟ್ಟ. ಏಳ ಹೊರಟಿದ್ದವನು ಅವನ ಪಕ್ಕ ಕುಳಿತು ಮುಖ ನೋಡಿದೆ. ದೊಡ್ಡ ದುಂಡು ಕಣ್ಣಿನ ಹಿಂದೆ ಸಣ್ಣನೆಯ ನೀರಿನ ಪೊರೆ. ಸಮಾಧಾನ ಎನ್ನುವಂತೆ ಹೆಗಲು ತಟ್ಟಿ ಕೆಳಗಿಳಿಸಿಕೊಂಡು ಬಂದೆ. ನಂತರದ್ದು ಇತಿಹಾಸ. ಮಧ್ಯಾನ್ಹದವರೆಗೂ ಅಲ್ಲಲ್ಲಿ ನಮ್ಮೊಂದಿಗೆ ಇದ್ದವನು ಊಟದ ಹೊತ್ತಿಗೆ ಕಾಣೆಯಾಗಿ ಬಿಟ್ಟ.
 ಆ ದಿನ ಮಾತ್ರ ನಮ್ಮೊಂದಿಗೆ ಪಾನಕ ಗೋಷ್ಟಿಗೆ ಸೇರದೆ ಇವತ್ತು ಬೇಡ ನೀವು ತಗೊಳ್ಳಿ ಎಂದು ಬಲವಂತದಿಂದ ತನ್ನದು ಎನ್ನುತ್ತ ನನ್ನ ಗ್ಲಾಸಿಗೆ ಎರಡು ಗುಕ್ಕು ಹೆಚ್ಚಿಗೆ ಸುರಿದಿದ್ದ. ಊಟಕ್ಕೆ ಮುಂಚೆ ಹುಡುಕಿದರೆ ಸುದೀಪ ಎಲ್ಲೂ ಇಲ್ಲ. ಊಟ ಅರ್ಧಕ್ಕೆ ನಿಂತು ಹೋಯಿತು. ನಾಲ್ವತ್ತು ಜನ ಇನ್ನಿಲ್ಲದಂತೆ ಶೋಧಿಸಿ ಬಿಟ್ಟರು. ಏನೂ ಅಗಲಿಲ್ಲ. ಸುದೀಪ ಸಿಕ್ಕಾಗ ಸಂಜೆಯ ಆರು ಗಂಟೆ. ಅತ್ಯುತ್ತಮ ಈಜು ಪಟುವಾಗಿದ್ದವ ಕೇವಲ ಮೊಳಕಾಲು ಉದ್ದದ ನೀರಿನಲ್ಲಿ ಅಂಗಾತ ಮಲಗಿ ಹಾಗೆ ಪ್ರಾಣ ಬಿಟ್ಟು ಬಿಟ್ಟಿದ್ದ. ಅವನನ್ನು ಹುಡುಕಲು ನೀರಿಗಿಳಿದವರು ಅದೆಷ್ಟು ಬಾರಿ ಅವನ ದೇಹದ ಮೇಲೆ ಓಡಾಡಿದ್ದರೋ ದೇವರಿಗೆ ಗೊತ್ತು. ಸುಂದರಾಂಗ ಅಂಗಾತ ಮಲಗಿದವನ ಕೈಯ್ಯಲ್ಲಿ ಬರೆದುಕೊಂಡಿದ್ದು ಕೇವಲ " ದೀಪ ". ಆದರೆ ಆವತ್ತಿನದು ಆತ್ಮಹತ್ಯೆಯಾ...? ಆಕಸ್ಮಿಕವಾ...? ನೋಡಿದವರು ಒಬ್ಬರೂ ಇಲ್ಲ. ಅಸಲಿಗೆ ಅವನಲ್ಲಿ ಅದೆಷ್ಟು ದೊಡ್ಡ ಮಟ್ಟದ ಹೋಪ್ ಇತ್ತೆಂದರೆ ಖಂಡಿತಾ ಆಕೆ ತನ್ನನ್ನು ನೋಡುತ್ತಲೇ ಕಣ್ಣರಳಿಸಿ ಇನ್ನಿಲ್ಲದ ಸಂಭ್ರಮ ಪಡುತ್ತಾಳೆ ಎಂದುಕೊಂಡಿದ್ದ.
 ಆಕೆ ಒಮ್ಮೆ ಅವನಲ್ಲಿ ಮೊದಲಿನ ಸ್ನೇಹ ಸಹಜತೆಯಿಂದ ಮಾತಾಡಿ " ನೀನು ಚೆನ್ನಾಗಿರು ... ನಿನಗೆ ನಾನು ಮೋಸ ಮಾಡಿಲ್ಲ. ಪರಿಸ್ಥಿತಿಯಿಂದಾಗಿ ನಿನ್ನ ಮದುವೆಯಾಗಲಾಗಲಿಲ್ಲ..." ಇತ್ಯಾದಿಯ ಕೇವಲ ಒಂದು ಸಾಂತ್ವನ ಆಕೆಯಿಂದ ಅವನು ನಿರೀಕ್ಷಿಸಿದ್ದ. ಅಸಲಿಗೆ ಅವನು ಮೊದಲಿಗೆ ನಮ್ಮಲ್ಲಿ ಹೀಗೇ ಹೇಳಿಕೊಂಡಿದ್ದನಾದರೂ ಅದು ಎಲ್ಲಾ ಪ್ರೇಮಿಗಳು ಹೇಳುವ ಮಾತೇ ಅಂದುಕೊಂಡಿದ್ದೆವಾದರೂ, ಕೊನೆಯಲ್ಲಿ ಅವನಲ್ಲಿದ್ದ ಸಣ್ಣ ನೋಟ್ ಬುಕ್ಕಿನಲ್ಲಿ ಬೆಂಗಳೂರಿಗೆ ಹೊರಡುವ ದಿನ ಬರೆದುಕೊಂಡಿದ್ದ ವಾಕ್ಯ ನೋಡುವವರೆಗೂ ಯಾರಿಗೂ ಅವನ ಪ್ರೇಮದ ಗಾಢತನ ಅರಿವಾಗಿರಲೇ ಇಲ್ಲ. ಅಲ್ಲಿದ್ದುದು ಇಷ್ಟೆ " ದೀಪಾ ನನ್ನ ಒಮ್ಮೆ ಪ್ರೇಮದಿಂದ ನೋಡಿಬಿಡು. ನಾನು ನಿನ್ನ ನೆನಪಿನಲ್ಲೇ ಒಂದು ಬದುಕು ಕಂಡುಕೊಳ್ಳುತ್ತೇನೆ. ಇನ್ನೇನು ಬೇಡ. ಆದರೆ ಯಾವುದೇ ಕಾರಣಕ್ಕೂ ನನ್ನ ಪ್ರೀತಿಯ ನಂಬಿಕೆ ಕುಸಿಯದಿರಲಿ ಅಷ್ಟೆ " ದಿನಾ೦ಕ ೧೦. ಜುಲೈ ೯೦. ವಿಪರ್ಯಾಸವೆಂದರೆ ಅವನ ಬದುಕಿನಲ್ಲಿ ಘಟಿಸಿದ ಎಲ್ಲಾ ತಿರುವುಗಳಿಗೂ ಅಕ್ಷರಶ: ಮೂಕ ಸಾಕ್ಷಿ ಆ ತಾರೀಕು. ಇದಕ್ಕಿಂತಾ ಬೇರೆ ಪ್ರೇಮ ಕಥೆ ನಮಗೆ ಸಿಕ್ಕೀತೆ...? ಅಸಲಿಗೆ ಆಕೆ ತಿರಸ್ಕರಿಸಿದ ಮೇಲೆ ಅವನೆಂದೂ ಆಕೆಯನ್ನು ಮತ್ತೆ ಕಾಣುವ ತವಕವನ್ನೇ ಮಾಡಲಿಲ್ಲವಾದರೂ ಅವನಲ್ಲಿ ಆಕೆಯೆಡೆಗಿದ್ದ ಕನ್ಸರ್ನ್... ಆ ಪ್ರೇಮ ಇವತ್ತಿಗೂ ನನ್ನನ್ನು ಇನ್ನಿಲ್ಲದಂತೆ ಹಿಂಡುತ್ತದೆ. ಕೀ ಬೋರ್ಡ್ ಬಿಡುವ ಮುನ್ನ ಹೃದಯ ದ್ರವಿಸಿ ಬಿಟ್ಟಿತ್ತು. - ( ಕಳೆದ ತಿಂಗಳು ಇನ್ನಿಲ್ಲದೆ ಕಾಡಿದ ನೆನಪಿನ ಆವರಣ ಇದು.. ಆಗಲೇ ನನ್ನ ವಿಸ್ಮಯ ನಗರಿ ಬ್ಲಾಗ್ ನಲ್ಲಿ ಇದೆ.. ಮತ್ತೆ ಇಲ್ಲೊಮ್ಮೆ ಕಾಪಿ ಮಾಡಿದ್ದೇನೆ )

Wednesday, August 21, 2013

ಮನಸ್ಸು ಯಾಕೆ ಚೇಂಜ್ ಕೇಳುತ್ತೆ... ?

ಮನಸ್ಸು ಬಯಸೋದನ್ನು ಹೀಗೇ ಅಂತಾ ಪ್ರಿಡಿಕ್ಟ್ ಮಾಡಿರೋರು ತುಂಬಾ ಕಡಿಮೆ. ಯಾಕೆಂದರೆ ಪ್ರಕೃತಿಯಂತೆ ಮನುಶ್ಯನೂ ಬದಲಾವಣೆ ಬಯಸುತ್ತಾನಾ...? ಹೌದೆಂದು ಬಿಡುತ್ತದೆ ಕೂಡಲೇ ಕಳ್ಳ ಮನಸ್ಸು. ಹಾಗಾದರೆ ಯಾವುದೆಲ್ಲಾ ಬದಲಾವಣೆ ಮಾಡ್ತೀರಿ...? ಯಾಕೆಂದರೆ ಬಹಳಷ್ಟು ವಿಷಯದಲ್ಲಿ ಸಾಮಾನ್ಯವಾಗಿ ಬದಲಾವಣೆ ಬಯಸಿ ನಮ್ಮ ಕೈಲಾದ ಮಟ್ಟಿಗೆ ಬದುಕಿನಲ್ಲಿ ಅನುಭವವನ್ನು ಪಡೆಯುತ್ತಲೇ ಇರುತ್ತೇವೆ. ಹೊಸ ಮೊಬೈಲ್ ಬಂತು ಹಳೆಯದನ್ನು ಬಿಸಾಡಿದಿರಿ... ಹೊಸ ಶರ್ಟ್ ಬಂತು ಹಳೆಯದು ಮೂಲೆಗೆ ಹಾಕಿದಿರಿ... ಹೊಸ ಶೂ ಬರ್ತಿದ್ದಂತೆ ನಿನ್ನೆಯವರೆಗೆ ಇದ್ದ ಆತ್ಮೀಯತೆ ಹಳೆಯ ಶೂ ಮೇಲೆ ಇಲ್ಲವಾಗುತ್ತೆ...
          ಮೊನ್ನೆಯವರೆಗೂ ಚೆನ್ನಾಗೇ ಇದ್ದ ಪಿಂಕ್ ಸೀರೆ ಫ್ಯಾಶನ್ ಶೋ ಗೆ ಹೋಗಿ ಬಂದ ಮೇಲೆ ಬೇಡವಾಗತೊಡಗುತ್ತದೆ... ಅದಕ್ಕೂ ಮೊದಲೇ ಲ೦ಗವನ್ನೆತ್ತಿ ಬಿಸಾಡಿದರೆ... ಆಸ್ಟ್ರೇಲಿಯಾ ಖಂಡದಂತೆ ತೂತಾಗಿರೋ ಬನಿಯನ್ನು ಗೂಟದಿಂದೀಚೆಗೆ ಬರುವುದೇ ಇಲ್ಲ. ಶಾರುಖನನ್ನು ನೋಡಿದಾಗ ಹೀಗೆ ಏನಾದರೂ ಆಗೋಣ ಎನ್ನಿಸುವ ಮನಸ್ಸಿಗೆ, ಅವನ ಚಿತ್ರದಿಂದ ಎದ್ದೀಚೆಗೆ ಬರುವಷ್ಟರಲ್ಲಿ ನಾಳೆಯ ಗುಂಡಿನ ಪಾರ್ಟಿಯ ಬಗ್ಗೆ ಚಿಂತೆ ಆರಂಭವಾಗಿರುತ್ತದೆ. ಹೊಸ ಹೆಣ್ಣಿನೊಂದಿಗೆ ಪರಿಚಯವಾಗುತ್ತಿದ್ದಂತೆ ದೇಹ ಇದ್ದಕ್ಕಿದ್ದಂತೆ ಸೆಟೆದು ನಿಲ್ಲುತ್ತದೆ. ನಾಳೆ ಜಿನ್ಸ್ ಹಾಕೋಣ ಅನ್ನಿಸುತ್ತದೆ. ಆಗೀಗ ಇನ್ ಶರ್ಟ್ ಕರೆಕ್ಟಾಗಿದೆಯಾ ಇಲ್ಲವಾ ನೋಡಿಕೊಳ್ಳುತ್ತೇವೆ. ಮಾತಿಗೊಮ್ಮೆ ಮುಖದಲ್ಲಿ ಮುಗುಳ್ನಗೆ. ಮೈಯೆಲ್ಲಾ ಉದಾರತೆ. ನಿಮಿಷಕ್ಕೊಮ್ಮೆ ಕೂದಲು ಸವರುವ ಬೆವರು ಅಂಗೈ. ಆಚೆ ಮನೆ ಆಂಟಿ ವಿಚಾರಿಸಿದರೆ ಎದ್ದು ಬಿದ್ಡು ಮಾಹಿತಿ ನೀಡುತ್ತೇವೆ. ಮನೆಯಾಕೆ ಕೇಳಿದರೆ ಟಿ.ವಿ. ನ್ಯೂಸ್ ಬರುವಾಗ ನಿಂದೇನೆ ಕಿರಿಕಿರಿ ಎನ್ನುತ್ತೇವೆ. ಅಷ್ಟೇಕೆ ಹೋದ ವಾರವಷ್ಟೆ ಖರೀದಿಸಿ ಹಾಕಲಾರಂಭಿಸಿದ್ದ ಚಪ್ಪಲಿ ಇದ್ದಕಿದ್ಡಂತೆ ಯಾಕೋ ಬೇಡವೆನ್ನಿಸಿ ಮೂಲೆಗೆ ತಳ್ಳುತ್ತೇವೆ... ಇದೆಲ್ಲಾ ಸರಿ ಹೇಗೋ ಅಡ್ಜಸ್ಟ್ ಮಾಡಿಕೊಂಡು ಬಿಡುತ್ತಾರೆ. ಯಾಕೆಂದರೆ ಇವುಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಾ ವರ್ಗದವರ ಅನುಕೂಲಕ್ಕೆ ತಕ್ಕಂತೆ ಪಾಕೆಟ್ಟಿಗೆ ಸರಿದೂಗುವಂತಹ ಆಲ್ಟರ್‌ನೇಟ್ ಲಭ್ಯವಿದೆ.
        ಆದರೆ ಅಕಸ್ಮಾತಾಗಿ ಇದ್ದಕ್ಕಿದ್ಡಂತೆ ಹೆಂಡತಿ ಬೇಡವೆನ್ನಿಸಿಬಿಟ್ಟರೆ...? ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಅಸಲಿಗೆ ಹಾಗಂತ ಹೇಳಲು ಯಾರಿಗೂ ನೇರಾ ನೇರ ಧೈರ್ಯವಿರುವುದಿಲ್ಲ. ಆದರೆ ಅದ್ಯಾವುದಾದರೂ ಪಾರ್ಟಿಗಳಲ್ಲಿ ಒಂದು ಪೆಗ್ಗು ಮುಗಿಯುತ್ತಿದ್ದಂತೆ ಕೊ೦ಚ ಪಡ್ಡೆ ಥರದವನೊಬ್ಬ ಇಂತಹದಕ್ಕೆ ಪೀಠಿಕೆ ಹಾಕಿ ನೋಡಲಿ. ಹೆಚ್ಚಿನಂಶ ಕಂಪ್ಲೇಂಟು ಒಂದೇ " ಹೆಂಡತಿ ಸರಿ ಇಲ್ಲ ಮಾರಾಯಾ ? " ಹಾಗಾದರೆ ಬದಲಾಯಿಸಿ ಬಿಡಿ. ಊಹುಂ... ಬೇರೇನನ್ನಾದರೂ, ಏನಾದರೂ ಮಾಡಿ ಬದಲಾಯಿಸಿ ಬಿಡಬಲ್ಲ ಗಂಡಸು ಈ ವಿಷಯದಲ್ಲಿ ಹೇಗೋ ಇರಲಿ ಬಿಡು ಎಂದು ಬುಡ ಒದರಿಕೊಂಡು ಎದ್ದು ಬಿಡುತ್ತಾನೆ ಯಾಕೆ...? ಧೈರ್ಯವಿರುವುದಿಲ್ಲವಾ ಅಥವಾ ಅದಕ್ಕೂ ಆಲ್ಟರ್‌ನೇಟ್ ಸಿಕ್ಕುವುದಿಲ್ಲವಾ...? ಎರಡೂ ಅಲ್ಲ. ಉಳಿದ ವಿಷಯದಂತೆ ಹೆಂಡತಿಯನ್ನು ಬದಲಿಸಲು ಸಾಮಾಜಿಕವಾಗಿ ಅಥವಾ ವೈಯಕ್ತಿಕವಾಗಿ ಲಭ್ಯತೆ ಅಥವಾ ವ್ಯಾಪ್ತಿ ಇಲ್ಲವೆಂದೆ...? ಅದಕ್ಕೂ ಅಲ್ಲ. ವ್ಯವಸ್ಥೆ. ಈಗಾಗಲೇ ಒಪ್ಪಿಕೊಂಡಿರುವ ವ್ಯವಸ್ಥೆ. 
          ಇಲ್ಲಿಯವರೆಗೆ ಅಧಿಕಾರ ಬದ್ಧವಾಗಿ, ಸಾಮಾಜಿಕವಾಗಿ ಒಪ್ಪಿಕೊಂಡಿರುವ ವ್ಯವಸ್ಥೆಯ ವಿರುದ್ಧ ಹೋಗುವ ಧೈರ್ಯವಿಲ್ಲವೆನ್ನುವುದು ಒಂದೆಡೆಯಾದರೆ ಮೊದಲೇ ಹೇಳಿದಂತೆ ಅದಕ್ಕೆ ವಸ್ತುವಿನ ರೂಪ ಕಲ್ಪಿಸುವ ಮಟ್ಟಕ್ಕೆ ಇನ್ನೂ ನಮ್ಮ ನೈತಿಕತೆ ಹೋಗಿಲ್ಲದಿರುವುದು ನಮ್ಮ ಹೆಣ್ಣು ಮಕ್ಕಳ ಪುಣ್ಯ. ಅಸಲಿಗೆ ಯಾಕೆ ಹೀಗನ್ನಿಸುತ್ತದೆ ? ಐದಾರು ವರ್ಷದಲ್ಲಿ ಅದ್ಯಾಕೆ ಕೆಲವು ಗಂಡಸರು ಹಾಗೆ ಹೊರಗೆ ಬಿದ್ಡು ಅಂಡಲೆಯಲು ಆರಂಭಿಸಿಬಿಡುತ್ತಾನೆ ? ಅದೇ ಹಳೆಯ ಫ್ರೆಂಡ್ಸು... ಪಾರ್ಟೀ... ಸಂಜೆಯ ವಾಕಿಂಗ್ ನೆಪ. ಇಲ್ಲವಾದರೆ ಮೂಕ ಕೋಲೆ ಬಸವನಂತೆ ಟಿ.ವಿ. ಮುಂದೆ ಬಟನ್ ಒತ್ತುತ್ತಾ ಅದರಲ್ಲೇನೋ ಡಾಕ್ಟರೇಟ್ ಮಾಡುವವನಂತೆ ಕೂತು ಬಿಟ್ಟಿರುತ್ತಾನೆ. ಇದಕ್ಕೆ ಕಾರಣ ಬರಿ ಗಂಡಸರಷ್ಟೆ ಎಂದರೆ ತಪ್ಪಾಗುತ್ತದೆ. ಅದೂ ಇತ್ತೀಚೆಗಿನ ನಾನು ಗಮನಿಸಿದ ಎಲ್ಲ ಸ್ಥರದ ಪುರುಷರಲ್ಲೂ ಈ ಭಾವನೆ ತುಂಬಾ ಜಾಗೃತವಾಗಿದ್ಡು ಹುಬ್ಬೇರಿಸುತ್ತಿದೆ. ಎಲ್ಲ ಕುಟುಂಬದಲ್ಲೂ ಎಲ್ಲ ಕಾಲದಲ್ಲೂ ಸುಖ ಶಾಂತಿ ಸಮೃದ್ಧಿಯೇ ತುಂಬಿ ತುಳುಕುತ್ತಿರುತ್ತದೆ ಎಂದು ನಿರೀಕ್ಷಿಸೋದು ತಪ್ಪು. ಆದರೆ ಎಲ್ಲ ಇದ್ದೂ ಹೀಗೊಂದು ಭಾವನೆಗಳು ಕಾಣಿಸುತ್ತಿದೆಯಂತಾದರೆ ಅದ್ಯಾಕೆ...? ಇದನ್ನು ಆಯಾ ದಂಪತಿಗಳೇ ಚರ್ಚಿಸಿಕೊಳ್ಳಬೇಕು. 
         ಎಲ್ಲೋ ಒಂದೆಡೆಯಲ್ಲಿ ಒಬ್ಬರಿಗೊಬ್ಬರು ಅನ್ ಕಂಫರ್ಟ್ ಮಾಡಿಕೊಳ್ಳುತ್ತಿದ್ದೇವೆಯಾ... ಪರಸ್ಪರರಿಗೆ ಸಹಾಯ ಸಲ್ಲಿಸುತ್ತಿಲ್ಲವಾ..? ಕೆಲಸದ ಹೊರೆ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿಲ್ಲವಾ ? ಅಥವಾ ವೃತ್ತಿಯ ಒತ್ತಡದಲ್ಲಿ ಹೆಂಡತಿ /ಗಂಡ ಸಹಕಾರ ಅಗತ್ಯವಾದಾಗ ಲಭ್ಯವಾಗುತ್ತಿಲ್ಲವಾ..? ಇದೆಲ್ಲಕ್ಕಿಂತಲೂ ಇಬ್ಬರು ಗಂಡಸರು ಕೊಂಚ ಕ್ಲೋಸ್ ಆಗಿ ಚರ್ಚಿಸುತ್ತಿದ್ದಾರೆಂದರೆ ಖಂಡಿತಕ್ಕೂ ಕೆಲವರಲ್ಲಾದರೂ ಬರೋ ವಿಷಯ ಸೆಕ್ಸ್. ನಿಜಕ್ಕೂ ದಾಂಪತ್ಯದ ಪ್ರಮುಖ ಭಾವಾನುಬಂಧವಾಗಿ ಚಲಾವಣೆಯಾಗಬೇಕಾಗಿರುವ ಈ ವಿಷಯ ಐದೇ ವರ್ಷದಲ್ಲಿ ಪರಸ್ಪರರು ಮುಖ ತಿರುಗಿಸುವಂತೆ ಮಾಡುತ್ತದೆ, ಇಲ್ಲ ಆಕೆ ಆಸಕ್ತಿ ಕಳೆದುಕೊ೦ಡಿರುತ್ತಾಳೆ. ಅಚ್ಚರಿ ಎಂದರೆ ಇಬ್ಬರೂ ಕುಳಿತು ಆ ಬಗ್ಗೆ ಚರ್ಚಿಸುವುದೇ ಇಲ್ಲ. ಬದಲಾಗಿ ಬಂದು ಗೆಳೆಯನಲ್ಲೋ ಇನ್ನಾರಲ್ಲೋ ತೋಡಿಕೊಳ್ತಾರೆ " ಛೇ ನಮ್ಮಾಕೆಗೆ ಇಂಟರೆಸ್ಟೇ ಇಲ್ಲ ಮಾರಾಯ ? "  ಹೆಚ್ಚಿನಂಶ ಗಂಡಸರ ಕಂಪ್ಲೆ೦ಟ್ ಇದು. ಇದು ಎಷ್ಟೊ ಕಡೆಯಲ್ಲಿ ಉಲ್ಟಾ ಕೂಡಾ ಇರಬಹುದು. 
     ಆದರೆ ಆಕೆಯಲ್ಲಿ ಇರುವ ಕೊರತೆ ಏನು..? ಎಲ್ಲೋ ಗಂಡನ ಭಾವ ಪೂರ್ವಕ ಅನುಬಂಧದ ಕೊರತೆ ಕಾಡಿರಬಹುದಾ...? ಅಥವಾ ನಿಮ್ಮ ವರ್ತನೆ ಕೂಡಾ ಅದಕ್ಕೆ ಕಾರಣವಾಗಿರಬಹುದಾ..? ಜೊತೆಗೆ ಸಾಕಷ್ಟು ಸ್ತ್ರೀಯರಲ್ಲಿ ಒಂದು ಮಗುವಾಗುತ್ತಿದ್ದಂತೆ ಈ ಬಗ್ಗೆ ಒಂದು ರೀತಿಯ ಅನಾದರ ಬೆಳೆದು ಬಿಡುತ್ತಿದೆ. ಕೆಲವೊಮ್ಮೆ ಲಭ್ಯವಾಗದಿರೋ ಏಕಾಂತತೆ ಇತ್ಯಾದಿಗಳು ಕಾರಣವಾಗಿರಬಹುದಾದರೂ, ಎಷ್ಟೋ ಕಡೆಯಲ್ಲಿ ಸ್ತ್ರೀಯರು ಇವತ್ತಿಗೂ ಸೆಕ್ಸ್ ಎಂದರೆ ಅಸಹ್ಯ ಎನ್ನುವಂತೆ ಮುಖ ತಿರುಗಿಸೋದು ತುಂಬ ಕಾಮನ್ ಅಭಿಪ್ರಾಯ. ಅಂದರೆ ಅವರಲ್ಲಿ ಭಾವನೆಗಳೇ ಇಲ್ಲವೆಂದಲ್ಲ ಆದರೆ ಅದ್ಯಾವ ಕಾರಣಕ್ಕೋ ಮುರಿದು ಹೋಗಿರುವ ಮನಸ್ಸು ಅರಳುತ್ತಲೇ ಇಲ್ಲ ಅನ್ನೋದು ಅವರು ಸೆಕ್ಸ್‌ನತ್ತ ಅಭಿಮುಖವಾಗುವಂತೆ ಮಾಡಿರುತ್ತದೆ. ಅಷ್ಟೆ ಪ್ರಮಾಣದಲ್ಲಿ ಪುರುಷರು ಕೂಡಾ ತೋರಿಸುವ ಅನಾದರ ಆಕೆಯನ್ನು ಇನ್ನಷ್ಟು ನಿರ್ಲಿಪ್ತತೆಯತ್ತ ದೂಡುತ್ತದೆ. ಹೀಗೆ ಇಬ್ಬರಲ್ಲೂ ತಲೆದೋರುವ ಸಣ್ಣ ಪುಟ್ಟ ಕಾರಣಗಳು ಕ್ರಮೇಣ ಅಂತರವನ್ನಾಗಿಸುವುದರೊಂದಿಗೆ ಅಲ್ಟಿಮೇಟ್ಲಿ ಅದು ಇಬ್ಬರಿಗೂ ಬೇಡ ಎನ್ನಿಸುವ ವಿಷಯವಾಗಿ ಬದಲಾಗುತ್ತದೆ. ಒಟ್ಟಾರೆ ಇದರ ಪರಿಣಾಮ ಇಬ್ಬರ ಮೇಲೂ ಆಗುತ್ತದೆಯಲ್ಲದೇ ಗಂಡಸಾದವನಿಗೆ ಲಭ್ಯತೆ, ಅವಕಾಶ ಸಮಾಜ ಕಲ್ಪಿಸಿರೋ ಸೌಲಭ್ಯಗಳಿಂದಾಗಿ ಇಲ್ಲೂ ಬದಲಾವಣೆ ಬೇಕೆನ್ನಿಸಲಾರಂಭಿಸುತ್ತದೆ. 
            ಅದಕ್ಕೆ ಸರಿಯಾಗಿ ತುಂಬಾ ಪ್ರಬಲ ಮಾಧ್ಯಮಗಳಾದ ಟಿ.ವಿ. ಮತ್ತು ಸಿನೇಮಾಗಳೂ ಕೂಡಾ ಒಂದಾದರೂ ಅನೈತಿಕ ಸಂಬಂಧವಿರೋ ಚಿತ್ರಗಳನ್ನೆ ನೀಡೋದು ಅವರ ನಂಬಿಕೆಗೆ ಇನ್ನಷ್ಟು ಬಲ ನೀಡುತ್ತದೆ. ಸೋ. ಮನದಲ್ಲಿ ಮನೆ ಮಾಡುವ ಆಸೆಯ ಸುಖಕ್ಕಾಗಿ ಪುರುಷ ಸಹಜವಾಗಿ ಇನ್ನೊಂದು ಅಫೇರ್‌ನತ್ತ ಮುಖ ಮಾಡುತ್ತಾನೆ.  ( ಕೇವಲ ಸೆಕ್ಸ್‌ನ ಮೋಜಿಗಾಗೇ ಸ್ತ್ರೀಯರನ್ನು ಬದಲಾಯಿಸುವ ಗಂಡಸರಿಗೆ ಈ ಬರಹ ಅಪ್ಲಿಕೇಬಲ್ ಅಲ್ಲ ) ಇಲ್ಲೊಂದು ಉದಾ. ರಾತ್ರಿ ಹೊತ್ತು ಮನೆಯಲ್ಲಿಯೇ ಚಿಕ್ಕದಾಗಿ ಪೆಗ್ ತೆಗೆದುಕೊಂಡು ಕುಳಿತುಕೊಂಡು ಹರಟುವ ಗಂಡ, ಹೆಂಡತಿಯಲ್ಲಿ ಅದೆಷ್ಟು ಪ್ರೀತಿ ಆಸೆ ಹುಟ್ಟಿಸಿರುತ್ತಾನೆಂದರೆ, ಬೆಳಿಗ್ಗೆ ಆಕೆ ಅದೇ ಖುಷಿಯಲ್ಲಿದ್ದರೆ ಇವನಿಗೆ ಕುಡಿತ ಇಳಿದ ಪರಿಣಾಮವೋ ಅಥವಾ ಕುಡಿದಾಗ ಮಾತ್ರ ಆ ಹುಮ್ಮಸ್ಸು ಬರುತ್ತದೋ... ಒಟ್ಟಾರೆ ಮಾತೇ ಹೊರಡುತ್ತಿಲ್ಲ. " ನಿನ್ನೆ ಅಷ್ಟು ಚೆನ್ನಾಗಿ ಮಾತಾಡಿದ್ರಲ್ಲ ಈಗೆನ್ರಿ ಆಗಿದೆ ಮಾತಾಡಲು ... " ಎಂದರೆ " ತುಂಬಾ ಬ್ಯೂಸಿ ಕಣೆ " ಎಂದು ಹರಿ ಹಾಯ್ದು ಎದ್ಡು ಹೋಗುತ್ತಾನೆ.
         ಈ ಗಂಡಸರ ಹಣೆ ಬರಹವೇ ಇಷ್ಟು ಎಂದುಕೊಳ್ಳದೇ ಇನ್ನೇನು ಮಾಡಿಯಾಳು ಪಾಪ. ಬದಲಾವಣೆ ಬೇಕು. ಖಂಡಿತಾ ಅದು ಬದುಕನ್ನು ಹಸಿರನ್ನಾಗಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಯಾವುದು ಎಷ್ಟು ಎಂದು ನಿರ್ಧರಿಸ ಬೇಕಾದದ್ದು ಗೊತ್ತಿರಬೇಕು. ಅದಕ್ಕೂ ಮಿಗಿಲಾಗಿ ಬಿನ್ನಾಭಿಪ್ರಾಯಗಳ ಬಗ್ಗೆ ನೇರಾನೇರ ಚರ್ಚಿಸುವ ಯಾವ ಗಂಡ ಹೆಂಡತಿಯರೂ ಬಹುಶ: ಬದುಕಿನಲ್ಲಿ ಯಾವತ್ತೂ ಬದಲಾವಣೆ ಬಯಸಲಿಕ್ಕಿಲ್ಲ. ಆದರೆ ಇದರಲ್ಲಿ ಸ್ತ್ರೀಯರು ಕೊಂಚ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ ಎನ್ನುವುದು ಅನಿವಾರ್ಯ ಮತ್ತು ಅದು ಪುರುಷ ಧೋರಣೆಯ ಇನ್ನೊಂದು ಮುಖ ಅನ್ನೋದು ವಿಪರ್ಯಾಸ ಕೂಡಾ. ಹಾಗಾಗಿ ಹೆಂಡತಿಯಲ್ಲೂ ಬದಲಾವಣೆ ಬೇಕು ಎನ್ನುವವರಲ್ಲಿ ಎಲ್ಲ ಓ.ಕೆ... ಇದೊಂದು ಯಾಕೆ ? ಎಂದರೆ ಸ್ಪಷ್ಟ ಉತ್ತರವಿಲ್ಲದಿದ್ದರೆ ಖಂಡಿತಾ ಅದು ಸರಿಪಡಿಸಬಹುದಾದ ಕಾರಣವೇ ಇರುತ್ತೆ ಅಷ್ಟೆ. ಇಂಗ್ಲೀಷಿನಲ್ಲಿ ಅದಕ್ಕೆ ...ಇನ್‌ಫ್ಯಾಚುಯೇಶನ್... ಎನ್ನುತ್ತಾರೆ. ಅದಕ್ಕೇ ಮನಸ್ಸು ಚೇ೦ಜ್ ಕೇಳುತ್ತೆ... ! ಮತ್ತು ಬಹಳಷ್ಟು ಜನ ಒಂದಲ್ಲ ಒಂದು ಸಾರಿ ಈ ಇನ್‌ಫ್ಯಾಚುಯೇಶನ್‌ಗೆ ಒಳಗಾಗಿಯೇ ಇರುತ್ತಾರೆ ಹೊರತಾಗಿ ಎಲ್ಲರಲ್ಲೂ ಹೆಂಡತಿಯರನ್ನು ಬದಲಿಸಬೇಕೆಂದೇನೂ ಇರುವುದಿಲ್ಲ.

.dpuf