Saturday, July 1, 2017

ಆಕೆಗೆ ಪ್ರೀತಿ...ನೇ ಬೇಕು ಎಂದೇಕೆ ಹೇಳುತ್ತಿದ್ದೇನೆಂದರೆ...?

ಈ ಜೀವಗಳು ಇಂದಿಗೆ ಸರಿಯಾಗಿ ಐವತ್ತು ಸಾವಿರ ವರ್ಷಗಳ ಹಿಂದೆ ಜನಿಸಿದವು ಎಂದು ಇರಿಸಿಕೊಂಡರೂ ಸರಿಯಾಗಿ ನಾವು ಮನುಷ್ಯರಾಗಿ ಬದುಕಲಾರಂಭಿಸಿದ್ದೇ ಐದಾರು ಸಾವಿರ ವರ್ಷಗಳಿಂದೀಚೆಗೆ. ಅಷ್ಟಕ್ಕೂ ಇತ್ತಿಚಿನ ಐದುನೂರು ವರ್ಷಗಳಲ್ಲಿ ಬಾಂಧವ್ಯ.. ಮನಸ್ಥಿತಿ, ಫೆಮಿನಿಸಮ್ಮು, ಮೇಯಿಲ್ ಡಾಮಿನೇಶನ್ನು ಇತ್ಯಾದಿಗಳಲ್ಲಿ ಏರುಗತಿಯಲ್ಲಿ ಬದಲಾಗಿದ್ದು ಹೆಣ್ಣಿನ ಮನಸ್ಥಿತಿ ಮತ್ತು ಆಕೆಯ ನ್ಯೂರಾನ್ಸ್‍ಗಳು. ಆದರೆ ಪುರುಷನ ನೈಸರ್ಗಿಕವಾಗಿ ವಿನ್ಯಾಸದೋಷ ಸರಿಪಡಿಸಲಾಗದ ದುರಂತವೇ.. ಇನ್ನಷ್ಟೆ ನಮ್ಮ ಒಳಗನ್ನು ನಾವೇ ನೋಡಿಕೊಳ್ಳಬೇಕಿದೆ.
ಆಕೆಯ ಮನಸ್ಸಿನಲ್ಲೊಂದು ಪ್ರೀತಿಯ ಕೋಟೆಯಿದೆ. ಅದು ಹದಿನಾರರ ತುದಿಮೊಗ್ಗರಳುವ ನವಿರುತನವಿರಲಿ, ನಲ್ವತೈದರ ಮುಟ್ಟು ನಿಲ್ಲುವ ಮೆಟ್ಟಿಲೇ ಇರಲಿ. ಯಾವನೊಬ್ಬನೂ ಗಂಡಸೆನ್ನುವ ಕಾರಣಕ್ಕೆ ಕೋಟೆಯನ್ನು ಗೆಲ್ಲುವ ಹುಮ್ಮಸಿನಲ್ಲಿ ಅಖಾಡಕ್ಕಿಳಿದು ಆಕೆ ಜಗಮರೆಯುವಂತೆ ಮನಸಾರೆ ಗೆದ್ದು, ಕಾಲೂರಿದ್ದು ತುಂಬ ಕಡಿಮೆ. ಅಕಸ್ಮಾತ ಹಾಗೆ ನಿಜಾಯಿತಿಯಿಂದ ಕಾಲೂರಿದ್ದೇ ಆದರೆ, ಎಂಥದ್ದೇ ಸ್ವರ್ಗವನ್ನೂ ಎಡಗಾಲಲ್ಲಿ ಸರಿಸುವಷ್ಟು ಸುಖವನ್ನು ಇದೇ ಭೂಮಿಯ ಮೇಲೆ ಆಕೆಯಿಂದಲೇ ಸೂರೆ ಹೊಡೆದನೆನ್ನುವುದನ್ನು ದೇವರೇ ದೃಢೀಕರಿಸಿದ್ದಾನೆ.
ಅದಕ್ಕೆ ಕಾರಣ ಆಕೆಯ ಮನಸ್ಸು. ಅದೊಂದು ಯಾರಿಗೂ ತೆರೆಯದ ದಿಡ್ಡಿಬಾಗಿಲಿನಂತಹದ್ದು. ಅಲ್ಲಿ ಪತಾಕೆ ಹಾರಿಸಬೇಕೆಂದರೆ ಆಕೆಯನ್ನು ನಿಷ್ಕಳಂಕವಾಗಿ ಪ್ರೀತಿಸುವ, ಅವನ ನೆನಪಾಗುತ್ತಿದ್ದಂತೆ ಆಕೆಯ ಮೈಮೇಲೆ ಜಾಜಿಯ ಮಳೆಗೆರೆದಂತೆ ಅನುಭೂತಿಯನ್ನು ಉಂಟುಮಾಡಿದ್ದೇ ಆದರೆ ನಿಜಕ್ಕೂ ಅವನು ಆಕೆಯ ಮನಸ್ಸಿನ ಎಲ್ಲ ಕೋಣೆಗಳ ಕದಗಳನ್ನು ಸಮುದ್ರದ ಹೆದ್ದೆರೆಯ ವೇಗದಲ್ಲಿ ಆಕ್ರಮಿಸಿ ತೆರೆದುಬಿಟ್ಟಿದ್ದಾನೆಂದೇ ಅರ್ಥ. ಹಾಗೆ ಅವನು ಒಳಬಂದ ಕೂಡಲೇ.... ದಿಡ್ಡಿ ಬಾಗಿಲೀಗೀಗ ಒಳಗಿನಿಂದ ಅಗುಳಿ.
ಪ್ರತಿ ಹೆಣ್ಣಿನ ಮನಸ್ಸಿನ ಒಂದು ಮೂಲೆಯಲ್ಲೂ ಯಾವನೂ ತಡುವಲಾಗದ, ಒಂದು ಬಂಧದ ವರ್ತುಳ ಸುಮ್ಮನೆ ಕವಚಿಕೊಂಡು ಕೂತು ಬಿಟ್ಟಿರುತ್ತದೆ. ಆ ಮನಸ್ಸಿನ ಭಾವತಂತುವಿಗೆ ಸರಿಸಮಾನವಾಗಿ ತಂತಿಯನ್ನು ಮೀಟುವವನೊಬ್ಬ ಸಿಗುವವರೆಗೂ ಅದೂ ನಿಸ್ಸಂದೇಹ ಹಾಗೆಯೇ ಕವಚಿಕೊಂಡೆ ಇರುತ್ತದೆ. ದುರಂತವೆಂದರೆ ಹೆಚ್ಚಿನ ಹೆಣ್ಣುಮಕ್ಕಳ ಅಂತಹ ದಿಡ್ಡಿ ಬಾಗಿಲು ಜೀವನ ಪೂರ್ತಿ ತೆರೆಯದೇ ಉಳಿದುಬಿಡುವುದೂ ತುಂಬಾ ಕಾಮನ್. ಹಾಗಾದಲ್ಲಿ ನಿಜಕ್ಕೂ ಈ ಭೂ ತೆಕ್ಕೆಗೆ ಬಂದೂ, ಸ್ವರ್ಗವನ್ನು ಇಲ್ಲೇ ಅನುಭವಿಸುವ ಅವಕಾಶದಿಂದ ಯಾವುದೋ ಒಂದು ಗಂಡು ಪ್ರಾಣಿ ವಂಚಿತವಾಗಿದೆ ಎಂದರ್ಥ.
ಹಾಗಾಗಿ ಜಗತ್ತು, ತಾಂತ್ರಿಕತೆ, ವಿಜ್ಞಾನ, ಅತೀಂದ್ರೀಯ ಶಕ್ತಿ, ಲಸ್ಟು, ಟೆಲಿಪತಿ, ಯೋಗ, ಆಲೆಮನೆ, ಮನೆಗಿಬ್ಬರು ನೌಕರಿ, ಮೂರು ಜನಕ್ಕೆ ನಾಲ್ಕು ಗಾಡಿಗಳು, ಇಬ್ಬರಿಗೂ ಪ್ರತ್ಯೇಕ ಬೆಡ್‍ರೂಮು, ಮನೆಗೆರಡು ಟಾಯ್ಲೆಟ್ಟು, ಆಕಾಶದಲ್ಲೂ ತರಕಾರಿ, ಸೂರ್ಯಂಗೆ ಸ್ವಿಚ್ಚು, ಮನೆ ಮನೆಗೂ ಬೋರ್ ವೆಲ್ಲು, ಕಳೆದು ಹೋಗುತ್ತಿರುವ ವೆಲ್‍ಫೇರು, ವಯಸ್ಸನ್ನು ಯಾಮಾರಿಸುವ ದಿರಿಸುಗಳು, ಬಯಸಿ ಬಯಸಿ ಬದಲಾಗುತ್ತಿರುವ ಮೂರನೆಯ ಲಿಂಗಿ, ಸರಕ್ಕನೆ ಅವನ ನೆನಪೇ ಆಕೆಯನ್ನು ಒದ್ದೆಗೀಡುಮಾಡುವ ಫೀಲು.. ಹೀಗೆ ಯಾವ್ಯಾವುದೋ ಸಂಬಂಧವೇ ಇಲ್ಲದ ವಿಷಯದಲ್ಲೂ ಆಕೆ ಬೆಳೆದು ಸರಸರನೇ ಎದ್ದುನಿಂತು ಬಿಡುತ್ತಿದ್ದಾಳೆ.
ಇತ್ತಿಚಿನ ಎರಡು ನೂರು ಚಿಲ್ರೆ ವರ್ಷಗಳಲ್ಲಿ ಹೆಣ್ಣು ತನ್ನನ್ನು ತೆರೆದುಕೊಂಡ ವೇಗಕ್ಕೆ ಗಂಡು ತೆರೆದುಕೊಂಡಿಲ್ಲದ್ದು ಸೂಕ್ಷ್ಮವಾಗಿ ಅವಲೋಕಿಸಿದರೆ ಗೊತ್ತಾಗುತ್ತದೆ. ಕಾರಣ ವೈಜ್ಞಾನಿಕವಾಗಿ ಗಂಡು- ಹೆಣ್ಣಿನ ಮನಸ್ಥಿತಿಯನ್ನು ನಿರ್ಧರಿಸುವ ಮೆದುಳಿನ ಅಂತರ ಮತ್ತು ಅದನ್ನು ಜೋಡಿಸುವ ಭಾಗದಲ್ಲಿರುವ ಮೂಲ ವ್ಯತ್ಯಾಸದಲ್ಲೇ ಪ್ರಮಾದಭರಿತ ಜುಗಾಡಿದೆ. ಹಾಗಾಗಿ ಗಂಡು ಪ್ರಾಣಿಯನ್ನು ಪಳಗಿಸುವ ಹೊತ್ತಿಗೆ ಹೆಣ್ಣು ತನ್ನ ಬದುಕಿನ ಅರ್ಧ ಚಾಪೆ ಸುತ್ತಿರುತ್ತಾಳೆ.
ಅಸಲಿಗೆ ಆಕೆಗೆ ಜೀವನದಲ್ಲಿ ಬೇರೇನೂ ಬೇಕೆ ಆಗಿಲ್ಲ. ಹಾಗಂತ ಉಪವಾಸ ಇಡು.. ನಾನು ನಿನ್ನ ಪ್ರೀತೀಲಿ ಹಂಗೆ ಇದ್ದು ಸಾಯ್ತಿನಿ ಅಂತಾನೂ ಯಾವ ಹೆಣ್ಣೂ ಫಿಲ್ಮಿ ಡೈಲಾಗು ಹೇಳಲಾರಳು. ಆದರೆ ಯಾವತ್ತೂ ತನ್ನ ಹುಡುಗ ತನ್ನನ್ನು ಮಾತ್ರ ಪ್ರೀತಿಸಲಿ, ತನ್ನೊಬಳನ್ನೇ ಪ್ರಾಮಾಣಿಕವಾಗಿ ಪ್ರೀತಿಸಲಿ ಎನ್ನುವುದಿದೆಯಲ್ಲ ಅದನ್ನು ಯಾವತ್ತೂ ಬದಲಿಸಲಾರಳು. ಆದರೆ ಅದು ಗೊತ್ತಾಗುವ ಹೊತ್ತಿಗೆ ಆಕೆಯಲ್ಲಿ ಪ್ರೀತಿ ಸತ್ತು ಹೋಗಿರುತ್ತದೆ. ಇವನಲ್ಲಿ ಹೊಸದಾಗಿ ಚಿಗರೊಡೆಯಲು ಕಾದಾರಿದ ಮೇಲೆ ತೇವವೇ ಇರುವುದಿಲ್ಲ. ಬದುಕು ಅಲ್ಲಲ್ಲೆ ಪಾಚಿಯಂತೆ ಜಾರತೊಡಗುತ್ತದೆ. ಅದ್ಯಾಕೆ ಪುರುಷನೊಬ್ಬ ಹೆಣ್ಣಿನಷ್ಟೆ ವೇಗವಾಗಿ ಬದುಕನ್ನು ನಿರಂತರತೆಯ ದಾರಿಯ ಮೇಲೆ ಹಳಿ ಇಟ್ಟು ಓಡಿಸುತ್ತಿಲ್ಲ..? ಉತ್ತರ ಹೀಗೇ ಎಂದು ಯಾವೊಬ್ಬನೂ ಕೊಡುತ್ತಿಲ್ಲ. ಅಘಾತವೆಂದರೆ ತನ್ನೊಬ್ಬಳನ್ನೆ ಪ್ರೀತಿಸಲಿ ಎಂದಷ್ಟೆ ಆಪ್ತವಾಗಿ ಅವನನ್ನು ಪ್ರೀತಿಸಿ ಕಾಯ್ದಿರಿಸಿಕೊಳ್ಳಬೇಕಿರುವ ಹೆಣ್ಣೂ ಆ ವಿಷಯದಲ್ಲಿ ಬೆಳೆದೇ ಇಲ್ಲವಾ..? ಅವನನ್ನು ಹಾಗಿರಿಸಿಕೊಳ್ಳುತ್ತಿಲ್ಲವೇಕೆ..? ಸುಮ್ಮನೆ ಒಬ್ಬರನ್ನೇ ದೂಷಿಸಬೇಕೆ...? 
ಗಂಡಿಗೆ ಪರಮ ಆಕರ್ಷಣೆಯಾಗಿ ಸೆಕ್ಸೂ, ಹೆಣ್ಣಿಗೆ ಅದು ಕೊನೆಯದಾಗಿ ಸಂದಾಯವಾಗೋ ಕಂತಾಗಿಯೂ  ಬದಲಾಗುವಾಗ, ಗಂಡು ಪುನುಗು ಬೆಕ್ಕಿನಂತೆ ಎದ್ದು ನಿಲ್ಲುವುದಕ್ಕೂ, ಹೆಣ್ಣು ಕೇವಲ ಕಣ್ಣಿನ ನೋಟದಲ್ಲೇ, ಕೂತಲ್ಲೇ, ಮಾತೇ ಆಡದೆ ಒದ್ದೆಯಾಗಿ ಬಿಡುತ್ತಾಳಾದರೆ ಅದಕ್ಕೆ ಕಾರಣ ವೈಯಕ್ತಿಕವಾಗಿ ನೈಸರ್ಗಿಕವಾಗಿ ಇಬ್ಬರ ರಚನೆಂiÀಲ್ಲಿರುವ ವ್ಯತ್ಯಾಸವೇ ಕಾರಣ ಹೊರತಾಗಿ ಉದ್ದೇಶ ಪೂರ್ವಕವಾಗಿ ಪ್ರಕ್ರಿಯೆಯ ಮೂಲಕ ನಮಗೆ ಬೇಕಾದಂತೆ ಆಕೆಯ/ಅವನ ಯಾವ ಕ್ರಿಯೆಯನ್ನು ನಾವು ನಮಗೆ ಬೇಕಾದಂತೆ ನಿಯಂತ್ರಿಸಲಾರೆವು. 
ಇದಕ್ಕೆಲ್ಲಾ ಕಾರಣವಾಗಿರುವ ಮನಸ್ಸನ್ನು ನಾವು ನಿಯಮಿತವಾಗಿ,ಮನಸ್ಸನ್ನು ಆವರಿಸಿಕೊಳ್ಳುವ ಅನುಭೂತಿಯನ್ನು ಅನುಭವಿಸಲು ಅದನ್ನು ಸಿದ್ಧವಾಗುವಂತೆ ಹದಹೊಡೆಯದಿರುವುದೇ ನಮ್ಮ ಪ್ರಮುಖ ಸೋಲು. ಆಕೆಗೆ ಬೇಕಿರುವುದೇ ಪ್ರೇಮವಾದರೆ, ಅವನದ್ದು ಶುದ್ಧ ಕಾಮ ಎಂದುಕೊಂಡಿರೋದು ದೋಷವಲ್ಲ. ಅದರೆ ಅದನ್ನು ಹೆಣ್ಣಿಗೆ ತಿಳಿಸುವ ವಿಧಾನ ಯಾವುದು..? ಕಾರಣ ಉನ್ಮಾದಕ್ಕೆ ಬೀಳುವ ಹೆಣ್ಣು ಪುರುಷನಿಗಿಂತಲೂ ಮೇಲೆ. ಇದನ್ಯಾಕೆ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಇಬ್ಬರೂ ಹಂಚ ಹೊರಟಿದ್ದು ಬರೀ ಹಸಿಹಸಿ ಕಾಮ. ಆಳಕ್ಕಿಳಿದು ಹುಡುಕಿ ನೋಡಿದರೆ ಪ್ರೇಮವೆಲ್ಲಿದೆ..? ಎರಡಕ್ಕೂ ಮ್ಯಾಚೇ ಇಲ್ಲ. ಪ್ರೇಮವಿಲ್ಲದೇ ಕಾಮವಿಲ್ಲ...ಬಾಕಿ ಎಲ್ಲ ಬರೀ ಲಸ್ಟು ಎಂದರೂ ಅದು ಹುಟ್ಟುವುದೂ ಪ್ರೀತಿಯಲ್ಲೆ.
ಒದ್ದೆಯಾದ ಬಾವಿಯೊಂದೆ ಅಂತಿಮವಲ್ಲ. ಹಾಗಂತ ಪುರುಷ ಕಾಮದಿಂದ ಪ್ರೇಮಿಸುತ್ತೇನೆಂದು ಹೊರಟು ನಿಂತು ಆಕೆಯನ್ನು ಗೆದ್ದ ಅಥವಾ ತಾನು ಸೋತಾದರೂ ಗೆದ್ದ ಉದಾಹರಣೆಗಳಿಲ್ಲ. ಆಕೆ ಬರೀ ಪ್ರೀತಿಸುತ್ತೇನೆಂದು ತನ್ನ ಕೋಟೆ ಕಾಯ್ದುಕೊಂಡ ಉದಾ.ಗಳೂ ಇಲ್ಲ.
ಅದೇ ಆಕೆಯಲ್ಲೊಂದು ಪ್ರೀತಿಯ ದೀಪವಿಟ್ಟು ಅಗೀಗಿಷ್ಟು ಅದಕ್ಕೆ ಸರಿಯಾಗಿ ಪ್ರಾಣವಾಯುವೆಂಬ ಮನಸ್ಸಿನ ಎಣ್ಣೆಯನ್ನು ಹದವಾಗಿ ಹರಿಸಿ ನೋಡಿ. ಕಾಮನೆಗಳು ಪ್ರೀತಿಯಿಂದ ಕೆರಳಿದ್ದೇ ಆದಲ್ಲಿ, ಆಕೆಯ ಮನಸ್ಸು ಪ್ರೀತಿಯಿಂದ ಹದ ಹೊಡೆದು ಮಂಚಕ್ಕೆ ಬಂದಿದ್ದೇ ಆದಲ್ಲಿ ಗಂಡಸಿನ ತಾಕತ್ತು ಬಸವಳಿದು ಹೋಗುತ್ತದೆ. ಇದನ್ನು ಅದೇ ಪ್ರೀತಿಯಿಂದ ಸಾಧಿಸುವ ಗಂಡಸು ಎಲ್ಲದರಲ್ಲೂ ಗೆದ್ದು ಬೀಗುತ್ತಾನೆ. ಹಾಗೆ ಗೆಲ್ಲಲು ಸೋಲುವ ಹೆಣ್ಣು ಸೋತು ಗೆಲ್ಲುತ್ತಾಳೆ. ಅಂತಿಮವಾಗಿ ಗೆಲ್ಲುವ ಮುನ್ನಿನ ಸೋಲಿನಲ್ಲೂ ಹಿತವಾದ ಸೊಬಗು ಅವರ ಮೈಮನದಲ್ಲಿ ಅರಳುತ್ತದೆ. ಯಾರಿಗೆ ಬೇಕಿಲ್ಲ ಇಂತಹ ಜೊತೆ. ಪ್ರೀತಿ..ಉಮೇದಿ... ಆ ನಿರಂತರತೆ.. ಆ ಮುದ.. ಆ ಹೊಸ ಹೊನಲು..? ಆದರೆ ಇದ್ದ ಬಾಂಧವ್ಯದಲ್ಲೇ ಅದನ್ನೆಲ್ಲಾ ಅರಳಿಸಿಕೊಳ್ಳೊದು ಹೇಗೆ..? 
ನೀವು ಅವಳಿಗೆ ಹೇಳಲಾರದೆ ಉಳಿಸಿಕೊಂಡ ಅಹಂನ ಉಸಿರುಗಳಿವೆಯಲ್ಲ, ಹುಡುಗಿ ಅವನಿಗೆ ಹೇಳದೆ ತಡವರಿಸುವ ತುಮಲಗಳಿವೆಯಲ್ಲ ಅವನ್ನೆಲ್ಲಾ ಕೊಸರಾಡುತ್ತಾ ಉಸಿರ್ಗರೆದು ಸಮಜಾಯಿಸುವ ಬದಲಿಗೆ ಪ್ರೀತಿಸಿ ಬಿಡಿ. ಏನಾಗಿದ್ದರೂ ಎಲ್ಲಾ ಮರೆತು. ಅದೊಂದು ಚೆಂದದ ಮುಂಜಾನೆಯ ಇಬ್ಬನಿಯಲ್ಲಿ ತೊಯ್ದ ಚೆಂಗುಲಾಬಿಯ.. ಪಕಳೆಯಂತಹದ್ದು. ಹನಿ ಸಿಂಪಡಿಸಿಕೊಳ್ಳಬೇಕಿರುವ ನಾವು ಯೋಚಿಸಬೇಕಿದೆ.. ಅಂತಹ ಹನಿಯ ಮೂಲ ಯಾವುದು..? ಅದು ಪ್ರೀತಿನೇ ಅಲ್ವಾ.. 
ನಾನು ಹೇಳಹೊರಟಿದ್ದೂ ಅದನ್ನೆ.. ಮೊನ್ನೆಯಷ್ಟೆ ವರ್ಷ ತುಂಬಿದ ಈ ಪುಸ್ತಕಕ್ಕೀಗ ನಾಲ್ಕನೆಯ ಮುದ್ರಣದ ಸಂಭ್ರಮ ಇದೇನಿದ್ದರೂ ಬರೀ ಮುನ್ನುಡಿ. ಉಳಿದಂತೆ "ಯಾವ ಪ್ರೀತಿಯೂ ಅನೈತಿಕವಲ್ಲ.." ಅಂತಾ ನಾನು ಪಿಸುನುಡಿಯುವ ಅಗತ್ಯ ಇದೆಯೇ..

No comments:

Post a Comment