Monday, June 26, 2017

ಯಾರೂ ಯಾವತ್ತೂ ನಿಕೃಷ್ಟರಲ್ಲ... ಕಾಲ ಬದಲಿಸುತ್ತದೆ.
ನಾವು ನಾಳೆ ಯಾರು ಏನಾಗುತ್ತೇವೆಯೋ ಯಾರಿಗೂ ಗೊತ್ತಿಲ್ಲ. ಅದರೆ ಪ್ರತಿಯೊಬ್ಬರೂ ನನಗೆ ಮಾತ್ರ ಏನೂ ಆಗುವುದಿಲ್ಲ ಎನ್ನುವ ಗ್ಯಾರಂಟಿಯೊಂದಿಗೆ ಬದುಕುತ್ತಿರುತ್ತೇವೆ. ಪಕ್ಕದಲ್ಲೇ ಮಾರಣಾಂತಿಕ ಆಕ್ಸಿಡೆಂಟ್ ಆಗಿದ್ದರೂ ನಮ್ಮ ಕಾನ್ಫಿಡೆನ್ಸು ಹೇಗಿರುತ್ತದೆಂದರೆ, ಮರುಕ್ಷಣದಲ್ಲೇ ಎಂಭತ್ತರ ವೇಗಕ್ಕೆ ಪೆಡಲು ಒತ್ತುತ್ತಿರುತ್ತೇವೆ. ಅದು ಆಗಿನ ಕ್ಷಣಿಕ ದಿಗಿಲು. ಕಾರಣ ನಮ್ಮ ಬದುಕಿಗೆ ಸಮ್ಮತವಲ್ಲದ ಸಂಬಂಧಿಸಿಲ್ಲದ ಕ್ರಿಯೆಯಿಂದಾಗಿ ನಾವು ನಿರಾಳ. ಆದರೆ ದಶಕಗಳ ಕಾಲಾವಧಿಯಲ್ಲಿ ನಾವು ಏನಾಗಲಿಕ್ಕಿಲ್ಲ ಎಂದು ನಿರ್ಧರಿಸಿರುತ್ತೇವೆಯೋ ಅದು ತಿರುಗುಮುರಾಗಾಗಿ ಎದುರು ನಿಂತಾಗಿ ಬದುಕು, ಮನಸ್ಸು ಎಲ್ಲಾ ಕಕ್ಕಾಬಿಕ್ಕಿ ಎನ್ನುವುದಕ್ಕಿಂತಾ ಅಂತಹ ಪರಿಸ್ಥಿತಿಯಲ್ಲಿ ಮುಖ ಮತ್ತು ಮನಸ್ಸು ಎದ್ದು ನಿಲ್ಲಲೆತ್ನಿಸಿದರೂ ಏನೂ ಇರುವುದಿಲ್ಲ.ಸುಮಾರು ವರ್ಷಗಳ ಹಿಂದೆ ನಾನು ಏನೂ ಅಲ್ಲದಿದ್ದಾಗ, ನನಗೊಂದು ದಿಕ್ಕು ದೆಸೆ ಅಂತಲೇ ಇಲ್ಲದಿದ್ದಾಗ ಇದ್ದ ಚಿಕ್ಕ ಆಸರೆಯಂತಹ ನೌಕರಿಯ ಭಾಗವಾಗಿ ದಿನಾ ಬೆಳಿಗೆದ್ದು ಕಾರಿಡಾರನಲ್ಲಿ ನಡೆದುಕೊಂಡು ಹೋಗುವಾಗ ಮೊದ ಮೊದಲು ಅರ್ಥವಾಗದ ಮಾತಿಗೆ ಕಿವಿಗೊಡುತ್ತಿರಲಿಲ್ಲ. ಅಮೇಲಾಮೇಲೆ ಅದು ನಮ್ಮನ್ನೆ ಗೇಲಿ ಮಾಡಿಕೊಂಡು ಆಡಿಕೊಳ್ಳುತ್ತಿದ್ದಾರೆ ಎಂದರಿವಾಗಿತ್ತು. ಬೇರೇನೂ ಸಿಗದಿದ್ದರೂ ನಮ್ಮ ಬಟ್ಟೆ ಬರೆಗಳೂ ಗೇಲಿಗೀಡಾಗುತ್ತಿದ್ದವು. ಉಳಿದ ವಿಷಯಗಳೇನೆ ಇರಲಿ ಮೊದಲಿನಿಂದಲೂ ನಾನು ಡ್ರೆಸ್ಸು ಮತ್ತು ಆಯಾ ಹೊತ್ತಿಗಿನ ಕೆಲಸದ ವಿಷಯದಲ್ಲಿ ಅಚ್ಚುಕಟ್ಟು. ಅಂತಹ ಶಿಸ್ತು ನಮಗೆ ಇನ್ನಿಲ್ಲದ ವಿಶ್ವಾಸ ಕೊಡುತ್ತಿರುತ್ತದೆ. ಇದು ಆಗಲೂ ಈಗಲೂ ಹಲವರ ಕಿರಿಕಿರಿಗೂ, ಕಹಿಗೂ ಕಾರಣವಾಗಿದೆ. ಆಗಿನ ಕಾಲದಲ್ಲಿ ಹಾಗೆ ಗೇಲಿ ಮಾಡುತ್ತಿದ್ದವರಲ್ಲಿ ಅವನೊಬ್ಬನಿದ್ದ. ಅವನೇನು ಕೆಲಸ ಮಾಡುತ್ತಿದ್ದ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಆದರೆ ಕಂಡೊರ ಮೇಲೆಲ್ಲಾ ಸುಖಾಸುಮ್ಮನೆ ಏರಿ ಹೋಗುವುದೂ, ನಾಲ್ಕಾರು ಹುಡುಗರನ್ನು ಕಟ್ಟಿಕೊಂಡು ಧುಮಡಿ ಮಾಡುವುದು ಮಾಮೂಲಿಯಾಗಿತ್ತು. ಸಣ್ಣಸಣ್ಣ ಕಾರಣಕ್ಕೂ, ನಮಸ್ಕಾರ ಎಂದರೂ ಮೇಮೇಲೆ ಏರಿಬರುತ್ತಿದ್ದ. ಅವನಿಗೆ ಇಂತಹದ್ದಕ್ಕೆಲ್ಲಾ ಕೇವಲ ಅವಕಾಶ ಬೇಕಿತ್ತು ತನ್ನ ರುಬಾಬು ತೋರಿಸಲು ಅಷ್ಟೆ. ಯಾರೂ ಮಾತಾಡದಷ್ಟು ಕೆಟ್ಟಾ ಕೊಳಕಾಗಿಯೂ, ತಲೆ ಬುಡವಿಲ್ಲದ ಗೇಲಿ ಮಾಡುವುದರಿಂದಲೂ ಅವನು ಸುತ್ತಮುತ್ತಲಿಗೆ ಯಾರೂ ತಡುವಿಕೊಳ್ಳಲಾಗದಷ್ಟು ಅಸಹ್ಯದ ಪರಮಾವಧಿಯಲ್ಲಿದ್ದ.ಆಗಲೇ ನಾನು ಒಂದಿಷ್ಟು ಅವನ ಬಗ್ಗೆ ಮಾಹಿತಿ ಕಲೆ ಹಾಕಿದೆ. ಅವನೊಬ್ಬ ಆಫೀಸ್‍ಬಾಯ್. ನೀರು ಟೀ ತಂದು, ಟೇಬಲ್ ಒರೆಸಿ ಸಾಹೇಬರಿಗೆ ಊಟಕ್ಕಿಟ್ಟು, ಅವರ ತಟ್ಟೆ ಎತ್ತುತ್ತಿದ್ದ. ಅದರೆ ರೋಪು ಮಾತ್ರ ಆ ಅಧಿಕಾರಿಗಿಂತಲೂ ದೊಡ್ಡದಿತ್ತು. ಕಲಿತು ಬಿಟ್ಟಿದ್ದು ಏಳನೆಯ ತರಗತಿ. ಅದಕ್ಕಿಂತ ದೊಡ್ಡ ಕೆಲಸ ದೊರಕುವುದೂ ಸಾಧ್ಯವಿರಲಿಲ್ಲ. ಅದವನ ಕೀಳರಿಮೆಯೋ, ಸಂಕಟವೋ ನಮ್ಮ ಮೇಲೆಲ್ಲಾ ಎಗರುತ್ತಾ ಪಬ್ಲಿಕ್ಕಾಗಿ ಬೈದು ಮರ್ಯಾದೆಗೀಡು ಮಾಡುತ್ತಿದ್ದ.ನಾನೂ ಅಲ್ಲಿಂದ ಹೊರಬಿದ್ದೆ. ದಶಕಗಳೇ ಉರುಳಿದವು. ಊರು ರಾಜ್ಯ ಮತ್ತೆ ನಗರ ಎಲ್ಲಾ ಬದಲಾದವು. ಆದರೂ ಮನುಶ್ಯ ಅವನ ಚಹರೆ ಬದಲಾಗುತ್ತದೆಯೇ..? ಮೊನ್ನೆ ಮೊನ್ನೆ ಒಂದು ಖಾಸಗಿ ಕಾರ್ಯಕ್ರಮಕ್ಕೆ ಫಾರ್ಮ್‍ಹೌಸಿಗೆ ಹೋಗಿದ್ದೆ. ಅಲ್ಲೊಂದು ಚಿಕ್ಕ ಸಮಾರಂಭವಿತ್ತು. ಸುಮ್ಮನೆ ಒಂದಿಪ್ಪತ್ತು ಸ್ನೇಹಿತರು ಸೇರಿದ್ದೆವು. ಮಾತುಕತೆ, ಮೊಗೆಯ ಗೋಷ್ಠಿ. ನನಗೂ ಹೆಚ್ಚಿನ ಹಳೆಯ ಸ್ನೇಹಿತರು ಸಿಕ್ಕ ಖುಶಿಯಲ್ಲಿ ಲೋಕಾಭಿರಾಮವಾಗಿ ಹರಟಿ ಎದ್ದು ಬರುವಾಗ ಬೇಡ ಎಂದರೂ ಹಿಂದಿರುಗಿ ನೋಡಿದ್ದೆ.ನನ್ನ ಸಂಶಯ ನಿಜವಾಗಿತ್ತು. ಟೇಬಲ್ಲು ಒರೆಸಿ ನೆಲಕ್ಕೆ ಬಿದ್ದಿದ್ದ ತಿನಿಸಿನ ತುಣುಕುಗಳನ್ನು ಬಗ್ಗಿ ಎತ್ತಿಟ್ಟು, ಹಳೆಯ ಬಟ್ಟೆಯಿಂದ ನೆಲ ಒರೆಸುತ್ತ, ಕುಡಿದ ಗ್ಲಾಸುಗಳನ್ನು ಎತ್ತುತ್ತಾ ಅವನು ನೋಡುತ್ತಿದ್ದಾನೆ. ಅದು ಎದುರಿನವರು ನನ್ನ ಗುರುತು ಹಿಡಿದರಾ..? ನಾನು ಯಾರೆಂದು ಗೊತ್ತಾಗಿ ಹೋಯಿತಾ..? ಎನ್ನುವ ಅನುಮಾನ ಮತ್ತು ಅವಮಾನ ಭರಿತದ ದೃಷ್ಟಿ. ಆ ನೋಟದಲ್ಲಿ ತಾನೀಗಲೂ ತಟ್ಟೆ ಲೋಟ ಎತ್ತುತ್ತಿದ್ದೇನೆ, ನೆಲ ಒರೆಸುತ್ತಿದ್ದೇನೆ, ಹಿಂದ್ಯಾವತ್ತೋ ತಾನು ಎಗರುತ್ತಿದ್ದಾಗ "ನಿನ್ನ ಹಣೆ ಬರಹ ಇಷ್ಟೆ" ಎಂದು ಸುಮ್ಮನೆ ತಡುವಿಕೊಳ್ಳದೆ ಹೋಗುತ್ತಿದ್ದವನ ಮುಖದಲ್ಲಿ, ತನ್ನ ಬಗ್ಗೆ ಅವಹೇಳನ ಇದೆಯಾ ಎಂದು ಮುಖದ ಗೆರೆಗಳಲ್ಲಿ, ತನ್ನ ಬಗೆಗಿನ ಭಾವವನ್ನು ಹುಡುಕುವ ಅಪಸವ್ಯ ಭರಿತ, ಅವಮಾನಿತ ನೋಟ ಅದು. ಬೇರೇನೂ ಮಾಡಲಾಗದ ಆದರೆ ಹಿಂದಿನ ಕತೆ, ಈಗಿನ ಅವಮಾನಕರ ಸ್ಥಿತಿ ಎರಡಕ್ಕೂ ಏಗಲಾಗದ ಎಂಬ್ರಾಸಿಂಗ್ ನೋಟ ಅದು. ಕೆಲವೇ ಸೆಕೆಂಡು...ಬಿಟ್ಟು ಬಿಟ್ಟೆ. ಮತ್ತೆ ನಾನು ಅವನನ್ನು ದೃಷ್ಟಿಸಲಿಲ್ಲ.ಕಾರಣ ಈಗ ಅವನಿಗೆ ಏನಾದರೂ ಹೇಳಿ ಅಥವಾ ಮತ್ತೆ ನೋಡು ಈಗ ಹೆಂಗೆ...? ಎಂದು ಅವನನ್ನು ದೃಷ್ಟಿಸಿ ಆಗಬೇಕಾದುದೇನೂ ಇರಲಿಲ್ಲ. ಅಸಲಿಗೆ ಹಾಗೆ ಅವನ ಸ್ಥಿತಿಯನ್ನು ನಾನು ಮತ್ತೊಮ್ಮೆ ಅವನಿಗೆ ನೆನಪಿಸುವ ಅಗತ್ಯವೂ ಇರಲಿಲ್ಲ. ಅವನಿಗೆ ತನ್ನೆರಡೂ ಪರಿಸ್ಥಿತಿಗಳೂ ಅರಿವಿಗೆ ತಾನಾಗೇ ಬಂದಿರುತ್ತದೆ. ಅವಕಾಶ ಅಗತ್ಯ ಮತ್ತು ತಾಕತ್ತು ಇದ್ದಾಗ ಹಾರಾಡುವ ಮನುಶ್ಯ ನೆಲಕಚ್ಚಿದಾಗ ಮುಖದ ಮೇಲೆ ಚದರುವ ಅಂತಹ ಅವಮಾನಿತ ಖದರಿನ ಸತ್ತು ಹೋಗುವಷ್ಟು ಸಂಕಟದ ಲಕ್ಷಣಗಳನ್ನು ನಾನು ಸುಲಭವಾಗಿ ಗುರುತಿಸಬಲ್ಲೆ ಮತ್ತು ಹಾಗೆ ನನಗೆ ಗೊತ್ತಾಗುತ್ತಿದೆ ಎನ್ನುವುದನ್ನೂ ಎದುರಿನ ಅಪಮಾನಿತ ಸುಲಭಕ್ಕೆ ಅರಿತುಬಿಡುತ್ತಾನೆ ಸುಮ್ಮನೆ ಒಂದು ನೋಟಕ್ಕೆ. ಅದನ್ನು ಉದ್ದೇಶ ಪೂರ್ವಕವಾಗಿ ಮಾಡಲೇಬೇಕಿರುವುದಿಲ್ಲ. ಆದರೆ ಆ ಒಂದೆರಡು ಕ್ಷಣದಲ್ಲಿ ನಮಗರಿವಿಲ್ಲದೆ ಕೆಲವೊಂದು ಭಾವವನ್ನು ಹೊಮ್ಮಿಸುವ ಮನಸ್ಸು ಮತ್ತು ಮುಖ ಹಾಗು ನೆನಪು ಮತ್ತು ಎಲ್ಲಾ ಘಟನೆಗಳ ಇತಿಹಾಸ ಕ್ಷಣಾರ್ಧದಲ್ಲಿ ಮುಖಕ್ಕೆ ನುಗ್ಗಿ ಎಲ್ಲವನ್ನು ಮೇಳೈಸಿಬಿಡುತ್ತದೆ. ಕಾರಣ ಅದನ್ನು ಮರೆತಿರದ ಮನಸ್ಸು ನಿಮ್ಮ ಪ್ರತಿಕ್ರಿಯೆಗೂ ಮೊದಲೇ ಪ್ರತಿಬಿಂಬಿಸಿ ಬಿಟ್ಟಿರುತ್ತದೆ. ಅಷ್ಟೆ..ನೆಲಕ್ಕೆ ಕೂತೇ ಇದ್ದ ಅವನ ಭಂಗಿ, ಕೈಯ್ಯಲ್ಲಿದ್ದ ಮಾಪಿಂಗ್ ಬಟ್ಟೆ, ಎತ್ತಿದ್ದ ತಟ್ಟೆ ಜೊತೆ ತಲೆ ತಗ್ಗಿಸಿದ್ದ ಹುಳ್ಳಗಿನ ಮುಖ ಎಲ್ಲ ಒಂದೆರಡು ಸೆಕೆಂಡಿನಲ್ಲಿ ಗಮನಿಸಿದವನು ಸುಮ್ಮನೆ ನಡೆದು ಬಂದಿದ್ದೆ. ಅವನಿಗೆ ನೆನಪಿಸಿ ಆಗಬೇಕಾದುದೇನೂ ಇರಲಿಲ್ಲ. ಅವನೆದುರಿಗೆ ಈಗ ಹೆಂಗೆ..? ಎಂದು ನಾನು ಎದೆಯುಬ್ಬಿಸುವುದರ ಅವಶ್ಯಕತೆಯೂ ನನಗಿರಲಿಲ್ಲ. ಕೊಂಚವಾದರೂ ಮನುಶ್ಯ ಆಂತರಿಕವಾಗಿ ಬೆಳೆದಿದ್ದರೆ ಬದುಕು ಕಾಲಾನುಕ್ರಮದಲ್ಲಿ ಗಮ್ಯಗಳನ್ನು ಹೇಗೆ ತೋರಿಸಿತ್ತು ಎನ್ನುವುದವನ ಅರಿವಿಗೆ ಬಂದಿರುತ್ತೆ. ಆದರೆ ಇಂತಹ ಹಲವು ಘಟನೆಗಳಿಂದ ಪದೆ ಪದೆ ನನ್ನನ್ನು ನಾನು ಅಳೆದುಕೊಳ್ಳಲು ಅನುಕೂಲವಾಗುತ್ತಲೇ ಇರುತ್ತದೆ. ಪ್ರತಿ ದಿನ, ಘಟನೆಗಳು ನಮಗೆ ಸುತ್ತಿ ಹೊಡೆದಂತಹ ಪಾಠ. ಹಾಗೆ ಅವಕಾಶ ಇದ್ದಾಗ ಕಲಿತಷ್ಟೂ ಒಳ್ಳೆಯ ವಿದ್ಯಾರ್ಥಿಯಾಗುತ್ತೇನೆ. ಕಲಿಯುವ ಹಂಬಲ, ಅರ್ಜಿಸುವ ಮನಸ್ಸು ಹುಡುಕುತ್ತಲೇ ಇರುತ್ತದೆ. ಕಾಲ ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತಲೇ ಇರುತ್ತದೆ. ಕೆಲವರಿಗೆ ಅರಿವಿಗೆ ಬರುತ್ತದೆ.. ಕೆಲವರಿಗೆ ಅರಿವಾಗುವ ಹೊತ್ತಿಗೆ ಜೀವನವೇ ಮುಗಿದಿರುತ್ತದೆ.ಲೈಫು ಇಷ್ಟೆ ಕಣ್ರಿ...

1 comment:

  1. ಖಂಡಿತಾ ಕಾಲದ ಶಕ್ತಿ ಅಂತಹದ್ದು, ಒಳ್ಳೆಯ ಬರಹ

    ReplyDelete