Saturday, July 23, 2016


ಕದಡಿದಷ್ಟೂ ಕಲಕುವುದು ಮನಸ್ಸು ಮಾತ್ರ...

ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದನ್ನು ಸಾಬೀತು ಮಾಡುವಂತೆ, ಮನೆಗಳಲ್ಲೂ, ಕಚೇರಿಯ ವ್ಯಾಪ್ತಿಯಲ್ಲೂ, ಹೆಸರು ದುಡ್ಡು ದುಗ್ಗಾಣಿ ಬರುತ್ತೇ ಅಂದಾಗಲೂ ತೀರಾ ಬರಗೆಟ್ಟವರಂತೆ ಆಡುವುದೇಕೋ ಅರ್ಥವಾಗುತ್ತಿಲ್ಲ.


ಅಮ್ಮನ ಕಿರಿಕ್ಕು, ಇತ್ತ ಅತ್ತೆಯ ಅಸಹನೆ, ಕೈಗೆ ಹತ್ತಿಯೂ ಹತ್ತದ ನೌಕರಿಗಳು, ಎಡೆಯೂ ಅನಿವಾರ್ಯತೆಯ ಕೊಂಚ ಸುಳಿವು ಸಿಗುತ್ತಿದ್ದಂತೆ ಹರಿದು ತಿನ್ನಲೆತ್ನಿಸುವ ಕಾಮುಕ ಅಧಿಕಾರಿ ವರ್ಗಫಹೀಗೆ ಬದುಕು ಯಾವ ರೀತಿಯಲ್ಲೂ ಹಳಿಗೆ ಹತ್ತದೆ ತೇಲುತ್ತಲೇ ಇರುವಾಗಲೂ ವಾಣಿ ಮಾತ್ರ ಛಲ ಬೀಡದೆ ಛಲಾಂಗು ಹಾಕುತ್ತಲೇ ಇದ್ದಳು. ಮೊದಮೊದಲು ಮದುವೆ ಇಷ್ಟ ಇರದಿದ್ದಾಗ್ಯೂ ಒಂದು ಗಂಡು ಮಗು ಆಗಿದೆ. ಕೆಲಸ, ಮಗು ಜತೆಗೆ ಓದು ಮುಂದುವರಿಸಿ ಅತ್ಯುತ್ತಮ ಎನ್ನಿಸುವಂತೆ ಮತ್ತೆರಡು ಕಂಪ್ಯೂಟರ್ ಡಿಗ್ರಿಗಳು ತೆಕ್ಕೆಗೆ ಬಂದಿವೆ. ಕೆಲವು ಕಡೆಗಳಲ್ಲಿ ಅಮ್ಮಂದಿರೇ ಬದುಕಿಗೆ ಉರುಳಾಗಿ ಕಾಡಿಬಿಡುತ್ತಾರೆ. ತೀರಾ ಅದ್ಯಾವುದೋ ಅವರವರದ್ದೇ ಅನಿವಾರ್ಯತೆಗೆ ಸಿಲುಕಿ ಬಿದ್ದಿರುತ್ತಾರೋ ಗೊತ್ತಿಲ್ಲ. ಆದರೆ, ಮಕ್ಕಳಿಗೆ ಯಾಕಾದರೂ ಅಮ್ಮ ಹಿಂಗೆ ಅನ್ನಿಸಿಬಿಡುವುದೂ ಇದೆ.
ಇತ್ತ ಅತ್ತೆ ಯಾವ ಮಾತಿಗೆ ಮಗನ ತಲೆ ತಿರುಗಿಸುವಲ್ಲಿ ಶಕ್ತಳಾಗಿದ್ದಳೋ ಗೊತ್ತಿಲ್ಲ. ಸ್ನೇಹಿತನಾಗಿದ್ದವ ಅಮ್ಮ ಮಾಡಿದ್ದ ಹಳವಂಡದಿಂದಾಗಿ ಗಂಡನಾಗಿಬಿಟ್ಟಿದ್ದನಲ್ಲ. ಅವನೂ ಅಂದಿಂದು ಕೆಲಸ ಮಾಡಿಕೊಂಡು ಬೆಂಗಳೂರಿನ ಬದುಕಿನಲ್ಲಿ ಹಾಯಾಗಿ ಉಸಿರಾಡುತ್ತಿದ್ದ. ‘ಜಮೀನು ನೋಡಿಕೊಳ್ಳಲು ಜನಬೇಕು’ ಎಂದು ತನ್ನ ಗಂಡನನ್ನೇ ಕರೆದೊಯ್ದು ಬಿಡುವುದರೊಂದಿಗೆ ವಾಣಿ ಮತ್ತೊಮ್ಮೆ ಅತಂತ್ರಳಾಗಿದ್ದಳು. ಹಾಗೆ ಹೋದ ಹುಡುಗನಿಗೆ ನಯಾಪೈಸೆಯ ಕಿಮ್ಮತ್ತು ಮತ್ತು ಆದಾಯ ಎರಡೂ ಇರಲಿಲ್ಲ. ಆದರೆ, ಅಪ್ಪಫಅಮ್ಮಂದಿರ ಮಾತು ಮುಖ್ಯವಾಗಿ, ಭವಿಷ್ಯದ ಅಸುರಕ್ಷತೆಯಿಂದಾಗಿ ಸುಲಭಕ್ಕೆ ಲಭ್ಯವಾದ ಆಶ್ರಯದ ಮನೆಯಲ್ಲಿ ಉಳಿದುಬಿಟ್ಟಿದ್ದಾನೆ. ಜತೆಗೆ ಅಮ್ಮನ ಚೀತಾವಣಿಯಿಂದ ವಾಣಿಗೂ ಕೆಲಸ ಬಿಟ್ಟು ಮನೆಗೆ ಬರುವಂತೆ ಕಿರಿಕಿರಿ ಆರಂಭಿಸಿದ್ದಾನೆ. ಗಂಡನನ್ನು ನಂಬಿಕೊಂಡು ಬದುಕು ಮಾಡೊಣ, ಅಲ್ಲಿಗೇ ಹೋಗೋಣ ಎಂದರೆ ತೋಟ ಗದ್ದಾ ಎಂದರೆ ಸುಲಭವೇ.
ಹೋಗಲಿ ಆ ಆಸ್ತಿನಾದರೂ ಇವನಿಗಿದೆಯಾ? ಇನ್ಯಾರದ್ದಾ ಹೆಸರು ಅದರೊಂದಿಗೆ ತಳುಕು ಹಾಕಿಕೊಂಡಿದೆ. ಈಗ ಮನೆಯಲ್ಲೂ ಇನ್ನೊಬ್ಬ ಹೆಣ್ಣಾಳು ಬೇಕಿರುವುದರಿಂದ ವಾಣಿಯನ್ನೂ ಅಲ್ಲಿಗೆ ಕರೆದೊಯ್ಯಲು ನೋಡುತ್ತಿದ್ದಾರೆ. ಈ ಹಂತದಲ್ಲಿ ಇದೆಲ್ಲ ಅಂದಾಜು ಮಾಡುತ್ತಲೇ ವಾಣಿ ಸೆಟೆದು ನಿಂತಿದ್ದಾಳೆ.
ವಾಣಿಯನ್ನು ಮಣಿಸಲು ಆಗದಿದ್ದಾಗಫ‘ನಿನಗೆ ಮಗುವನ್ನು ನೋಡಿಕೊಳ್ಳಲು ಆಗುವುದಿಲ್ಲ ಕೆಲಸ, ಮಗುವಿನ ಆರೈಕೆ ಎರಡೂ ಕಷ್ಟ. ಹಾಗಾಗಿ ಮಗುವನ್ನು ಊರಿಗೆ ಕರೆದೊಯ್ಯುತ್ತೇನೆ’ ಎಂದು ಇನ್ನೊಂದು ಕ್ಯಾತೆ ತೆಗೆದಿದ್ದಾರೆ. ಅತಿ ಹೆಚ್ಚಿನ ಪ್ರಕರಣಗಳಲ್ಲಿ ಆಗುವ ಮತ್ತು ಸುಲಭಕ್ಕೆ ಸಿಕ್ಕುವ ತಂತ್ರವೇ ಇದು. ಅಮ್ಮನ ಕೈಯಿಂದ ಮಗುವನ್ನು ಕಿತ್ತುಕೊಳ್ಳುವ ಹುನ್ನಾರ. ಆಗ ಸುಲಭವಾಗಿ ಮಗುವಿನ ಜತೆಯಲ್ಲಿ ಅಮ್ಮನೂ ಬಗ್ಗುತ್ತಾಳೆ ಎನ್ನುವ ಲೆಕ್ಕಾಚಾರ. ಅದು ಆಕೆಯ ಮಗು ಇರಬಹುದು, ಆದರೆ ಹುಟ್ಟಿದ್ದು ತಮ್ಮ ಮಗನಿಗೆ ಎನ್ನುವ ವಾದವಿದೆಯಲ್ಲ, ಇದು ನಾನು ಕಂಡ ಹಲವು ಪ್ರಕರಣಗಳಲ್ಲಿ ಅಮ್ಮನ ಪಾತ್ರವನ್ನು ಹಳ್ಳಹಿಡಿಸುವ ತಂತ್ರಗಾರಿಕೆ. ಮಗು ಯಾವತ್ತಿಗೂ ಅಮ್ಮನ ಪಾಲು. ಅದರಲ್ಲೂ ಅಮ್ಮನೊಂದಿಗೆ ಅದು ಇದ್ದಷ್ಟು ಚೆಂದವಾಗಿ ಇನ್ನಾವುದೇ ಕಡೆಯಲ್ಲೂ ಇರಲಾರದು. ಆದರೆ, ಪ್ರತಿ ಬಾರಿಯೂ ಗಂಡನ ಕಡೆಯವರು, ಮೊದಲು ಮಾಡುವ ಕೆಲಸವೇ ‘ನಮ್ಮ ಮಗುವನ್ನು ಕೊಡು’ ಎನ್ನುವುದು. ಆಕೆಯ ಕೈಯಿಂದ ಮಗು ಕಿತ್ತುಕೊಳ್ಳುವ ಬೆದರಿಕೆ ಬರುತ್ತಿದ್ದಂತೆ ಹೆಚ್ಚಿನ ಹೆಣ್ಣುಮಕ್ಕಳು ಕಂಗಾಲಾಗುತ್ತಾರೆ.
ಏನಾದರೂ ಸಹಾಯವಾದೀತಾ ಎಂದರೆ, ನಮ್ಮ ವ್ಯವಸ್ಥೆಯ ದರಿದ್ರತನಕ್ಕೆ ಯಾವ ಸಹಾಯವಾಣಿ ಸುಡುಗಾಡು ಯಾವುದೂ ಧನಾತ್ಮಕ ಚಿಂತನೆ ಮಾಡದೆ ನೇರವಾಗಿ, ‘ಒಂದಿಷ್ಟು ಅಡ್ಜಸ್ಟ್ ಮಾಡಿಕೊಂಡು ಹೋಗಮ್ಮ’ ಎನ್ನುವುದೇ ಮಹಿಳಾ ಅಧಿಕಾರಿಗಳ ಮೊದಲ ಮಾತು. ಇವತ್ತು ಹೆಚ್ಚಿನ ಸರ್ಕಾರಿ ವ್ಯವಸ್ಥೆಗಳಲ್ಲಿ ಆಕೆಯ ಪರವಾಗಿ ಸಮಸ್ಯೆಯ ಮೂಲಕ್ಕೆ ಕೈ ಹಾಕುವ ಯಾವ ಪ್ರಯತ್ನಗಳೂ ನಡೆದಿದ್ದು ನನಗೆ ಕಾಣಿಸುತ್ತಿಲ್ಲ. ಏನಿದ್ದರೂ ಇಬ್ಬರನ್ನೂ ಕರೆಸಿ ಒಂದಷ್ಟು ಮಾತಾಡುತ್ತಾರೆ ಹೊರತಾಗಿ ಇನ್ನೇನೂ ಆಗುತ್ತಲೇ ಇಲ್ಲ. ಹಾಗಾಗಿ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಬೆಂಬಲ ಕೂಡ ಮಾತಿನ ತಿವಿತದ, ವ್ಯಂಗ್ಯದ ಮುಕ್ತಾಯವಾಗುತ್ತಿದೆ. ಅಲ್ಲಿಗೆ ಏನೂ ಮಾಡಲೂ ತೋರದೆ ಹೆಣ್ಣುಮಕ್ಕಳು ಪರಿಸ್ಥಿತಿಯ ವಶಕ್ಕೆ ಸಿಕ್ಕು ಕಂಗಾಲಾಗಿ ಹೋಗುತ್ತಾರೆ. ಇಲ್ಲದಿದ್ದರೆ ಇತ್ತ ಮಗು, ಅತ್ತ ಪರಿಸ್ಥಿತಿ ಎರಡೂ ಗಂಭೀರ.
ಇತ್ತ ಗಂಡನಾದವ ಮಗುವನ್ನು ಅಲ್ಲಿಗೆ ಕಳುಹಿಸುವಂತೆ ಒತ್ತಡ ಹೇರುತ್ತಾ ಕೂತಿದ್ದರೆ, ಕನಿಷ್ಠ ಅಮ್ಮನಾದರೂ ಜೊತೆಗಿದ್ದು ಪರಿಸ್ಥಿತಿ ಸುಧಾರಿಸಿಯಾಳೆ ಅದೂ ಇಲ್ಲ. ಅದರ ಬದಲಿಗೆ ‘ನಿನ್ನದೇ ತಪ್ಪು’ ಎನ್ನುವಂತೆ ವಾಣಿಯನ್ನೇ ಮೂದಲಿಸುವಲ್ಲಿಗೆ ವಸ್ತುಸ್ಥಿತಿ ಬಂದುನಿಂತಿದೆ. ಹೀಗೆ ಎಲ್ಲ ಕಡೆಯಿಂದಲೂ ಒತ್ತಡ ಸೃಷ್ಟಿಯಾದರೆ ಎಲ್ಲಿ ಹೋಗಬೇಕು?
‘ಈ ಜಂಜಡಗಳ ಮಧ್ಯೆ ಹೆಚ್ಚಿನ ಓದು ಇದ್ದರೆ ಒಳ್ಳೆಯ ಕೆಲಸ ಹಿಡಿಯಬಹುದು’ ಎನ್ನುವ ಆಶಾವಾದವನ್ನು ಬೆನ್ನುಹತ್ತಿರುವ ವಾಣಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿಕೊಂಡಿದ್ದಾಳೆ. ನಿರಂತರ ಕೆಲಸ, ಓದು, ಮಗುವಿನ ಆರೈಕೆ, ಅಲ್ಲಲ್ಲಿ ಕಿರಿಕಿರಿಗಳುಫಹೀಗೆ ಯಾವ ಆಯಾಮದಲ್ಲೂ ಆಕೆ ಹಿಂದೆ ಸರಿಯದೇ ಜೀವನದ ಬಂಡಿ ಎಳೆಯುತ್ತಿದ್ದಾಳೆ. ಕಾರಣ, ಮಗುವನ್ನು ಊರಿಗೂ ಗಂಡನೊಂದಿಗೂ ಕಳುಹಿಸಿದರೆ ಅದಕ್ಕೆ ಯಾವುದೇ ರೀತಿಯ ಭವಿಷ್ಯವಿಲ್ಲ ಎಂಬುದು ಆಕೆಗೆ ಚೆನ್ನಾಗಿ ಗೊತ್ತು. ಕೆಲಸ ಬಿಡುವ ಪ್ರಶ್ನೆಯೇ ಇಲ್ಲ. ಕೆಲಸ ಬಿಟ್ಟರೆ ಬದುಕು ಇನ್ನಷ್ಟು ಅಧ್ವಾನ್ನಗೊಳ್ಳುತ್ತದೆ.
ಈ ಮಧ್ಯೆ, ತಾನು ದುಡಿದು ಕಷ್ಟಪಟ್ಟು ಕಲಿಸಿ ಬೆಳೆಸಿದ ತಂಗಿಗೆ ಇವತ್ತು ಸರ್ಕಾರಿ ನೌಕರಿ ಸಿಕ್ಕಿದೆ. ಒಂದಿಷ್ಟು ಸಹಾಯ, ಸಾಂತ್ವನಕ್ಕಾದರೂ ಆದಾಳಾ? ಅದೂ ಇಲ್ಲ. ಮಾತೆತ್ತಿದರೆ ನೌಕರಿಯ ಹೆಮ್ಮೆ ಈಗ ಆಕೆಯ ಹೆಗಲೇರಿದೆ. ಓದಿಸಿದ, ಪೊರೆದ ತಾನು ಯಾವ ಲೆಕ್ಕದಲ್ಲೂ ಇಲ್ಲ. ಅತ್ತ ಸರ್ಕಾರಿ ನೌಕರಿ ಎನ್ನುವ ತುರಾಯಿಗೀಡಾಗಿರುವುದರಿಂದ ಅಮ್ಮನಾದವಳ ಆದರ ಮತ್ತು ನಡವಳಿಕೆ ಎರಡೂ ಆಕೆಯೆಡೆಗೆ ಸಲ್ಲುತ್ತಿದ್ದರೆ ತಾನು ಇದ್ದೂ ಇಲ್ಲದ ಪರಿಸ್ಥಿತಿ. ತವರುಮನೆಯೆಂದು ಎರಡ್ಮೂರು ದಿನದ ಮಟ್ಟಿಗೆ ಕಾಲಿಟ್ಟರೂ ಬರುವಾಗ ಅತ್ತು ಕರೆದು ಸಂಕಟ ಪಡದೆ ಬಂದದ್ದೇ ಇಲ್ಲ. ಕಾರಣ ತನ್ನ ಮದುವೆಗೂ ಮೊದಲು ಪೂರ್ತಿ ಸಂಬಳ ಮನೆಗೆಂದೆ ತಂಗಿ ತಮ್ಮಂದಿರ ಓದಿಗೆ ಖರ್ಚು ಮಾಡುತ್ತಿದ್ದೇನಲ್ಲ. ತನಗೇ ಮದುವೆಯಂತಾದ ಮೇಲೆ ಅನಿವಾರ್ಯವಾಗಿ ಅಲ್ಲ ಕೈಕಟ್ಟುವುದೂ ಸಹಜವೇ. ಅದರಲ್ಲೂ ದುಡಿಯದೇ ಕೂತು ಬಿಡುವ ಗಂಡನಿದ್ದರಂತೂ ಎಷ್ಟಿದ್ದರೂ ಸಾಕು ಎನ್ನುವ ಮಾತೇ ಇಲ್ಲ. ತಮ್ಮನಂತೂ ಕಾಲೂರಿ ನಿಲ್ಲುತ್ತಿದ್ದಂತೆ ಈ ಯಾವ ಆಗುಹೋಗೂ ಅವನಿಗೆ ಬೇಕಿಲ್ಲವಾಗಿದೆ. ಎಲ್ಲಿ ಮನೆಯನಾದರೂ ಪಾಲು ಕೇಳಿಯೇನು ಎಂಬ ಅಪನಂಬಿಕೆಯಾ? ಹಾಗೇ ಕೇಳಿದರೆ ಕೊಡಲಾದರೂ ಏನಿದೆ ಅವರಲ್ಲಿ?
 “ಅಣ್ಣಾ, ಏನು ಮಾಡಲಿ ವರ್ಷ ಕಳೆಯುತ್ತಾ ಬಂತು ಗಂಡ ಅಂತ ಇದ್ದವನು ಬರದೆ. ಅವನು ಬೇಕೂಂತಾ ಮಗುವನ್ನು ಅವನ ಬಳಿಗೆ ಕಳಿಸೋಕಾಗುತ್ತಾ? ಹೇಗೋ ಏನೋ ಆದರೂ ಅಮ್ಮನಾದರೂ ಜತೆಗಿರಲಿ ಬಾ ಎಂದರೆ  ಇವೆ ರಗಳೆ ಎನ್ನಿಸುತ್ತಿದ್ದಂತೆ ಆಕೆಯೂ ಕಾಲಿಡುವುದನ್ನು ನಿಲ್ಲಿಸಿದ್ದಾಳೆ. ಹೇಗೋ ಸರಿ ಗಂಡನ ಜೊತೆಗೆ ಇರೋಣ ಎಂದರೆ ಅತ್ತೆಯ ಕಿರಿಕಿರಿಗೆ ಸಿಕ್ಕು ಎರಡು ಬಾರಿ ಭಯಾನಕವಾಗಿ ಆರೋಗ್ಯ ಕೆಡಿಸಿಕೊಂಡಿದ್ದೇನೆ. ಬಸರಿ ಬಾಣಂತಿ ಎಂದೇ ನೋಡದಿದ್ದವರು ಈಗ ನೋಡಿಯಾರೇ? ಇನ್ನು ಅವನು ಪ್ರೀತಿಯಿಂದ ಇರ್ತಾನೆ ಎನ್ನುವುದು ಯಾವ ಲೆಕ್ಕದಲ್ಲೂ ಗ್ಯಾರಂಟಿಯಾಗುತ್ತಿಲ್ಲ. ಹೇಗೆ ಯೋಚಿಸಿದರೂ ಏನೂ ಹೊಳೆಯುತ್ತಿಲ್ಲ. ಏನ್ಮಾಡ್ಲಿ ಅಣ್ಣಾ" ಎನ್ನುತ್ತಿದ್ದರೆ ಕೆಲವೊಮ್ಮೆ ಈ ಹೆಂಗಸರು ಯಾಕಿಂಗಾಗುತ್ತಿದ್ದಾರೆ ಎನ್ನಿಸಿದ್ದು ಸುಳ್ಳಲ್ಲ.
ಮಗನ ಕುಡಿ ಬೇಕು. ಆದರೆ ಅದರ ಹಡೆದವಳು ಬೇಡ ಎನ್ನುವ ಅತ್ತೆ, ತನ್ನ ನೆತ್ತಿಯ ಮೇಲೆ ಮಾಸು ಹಾರುವವರೆಗೂ ಕಾಯ್ದ ಅಕ್ಕನಿಗೆ ತಂಗಿಯೇ ತಿರುಗಿ ನೋಡುತ್ತಿಲ್ಲ. ಸ್ವಂತ ಅಮ್ಮನೇ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಏನಾಗಿದೆ ಇವರಿಗೆಲ್ಲ? ಇವರೂ ಹೆಣ್ಣೆ ಅಲ್ಲವಾ? ಕನಿಷ್ಠ ಆ ಕೋನದದರೂ ವಾಣಿಯೊಂದಿಗೆ ಜೀವ ಬೆಸೆಯುವ ಕಾರ್ಯ ಮಾಡಬೇಕಿತ್ತು. ಆದರೆ, ‘ಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವುದನ್ನು ಯಾವಾಗಲೂ ಇಂಥ ಮನೆಗಳಲ್ಲೂ, ಕಚೇರಿಯ ವ್ಯಾಪ್ತಿಯಲ್ಲೂ, ಹೆಸರು ದುಡ್ಡು ದುಗ್ಗಾಣಿ ಬರುತ್ತೇ ಅಂದಾಗಲೂ ತೀರಾ ಬರಗೆಟ್ಟವರಂತೆ ಆಡುವುದೇಕೋ ಅರ್ಥವಾಗಲಿಲ್ಲ.
‘ಏನ್ಮಾಡ್ಲಿ’ ಎನ್ನುವ ವಾಣಿಯ ಕಣ್ಣಲ್ಲಿನ ಪ್ರಶ್ನೆಯ ಅಲಗು ನನ್ನನ್ನು ಇರಿಯುತ್ತಲೇ ಇದೆ. ಕೂತಿದ್ದ ಮಾಸಿದ ಸೋಫಾದಿಂದ ಎದ್ದು ಈಚೆಗೆ ಬರುವಾಗ ಯಾಕೋ ಎಲ್ಲ ಬಸಿದು ಹೋದಂತೆನ್ನಿಸುತ್ತಿತ್ತು. ನನಗೇ ಹಿಗನ್ನಿಸುವುದಾದರೆ ಅದನ್ನು ಅನುಭವಿಸುತ್ತಲೇ ಕಾಲೂರಿ ಹೋರಾಡುತ್ತಿರುವ ಆಕೆಯ ಮನಸ್ಸು ದೇಹ ಪರಿಸ್ಥಿತಿ ಹೇಗೆ ಇದನ್ನೆ ಎದುರಿಸುತ್ತಿದೆ. ಹಿಂದಿರುಗಿ ನಿಂತು ಒಮ್ಮೆ ಕೈ ಮುಗಿಯೋಣ ಅನ್ನಿಸಿತು. ನೋಡಿದರೆ ಅದೇ ಚಿಕ್ಕ ಬಣ್ಣಗೆಟ್ಟ ಪರದೆಯ ಮೂಲೆಯಲ್ಲಿ ನಿಂತು ಮಗುವಿಗೆ ತೋರಿಸುತ್ತಾ ‘ಟಾ..ಟಾ.. ಮಾಡು’ ಎನ್ನುತ್ತಿದ್ದಾಳೆ. ನನ್ನಲ್ಲಿ ಮಾತುಗಳಿರಲಿಲ್ಲ.
ಕಾರಣ
 ಅವಳು ಎಂದರೆ...

No comments:

Post a Comment