Sunday, February 21, 2016

ಕುಟುಂಬದಲ್ಲೂ ಚಿಕ್ಕ ಸ್ಪೇಸ್ ಬೇಕಾಗುತ್ತೆ...


ಮೊಬೈಲು ಅನ್ನೋದು ಬರದೆ ಇದ್ದಿದ್ದರೆ, ಬಹುಶಃ ಆಕೆ ಸಂಪರ್ಕಕ್ಕೇ ಸಿಗುತ್ತಿರಲಿಲ್ಲವೇನೋ.. ಅದು ತೀರ ಕಾಲು ಶತಮಾನದ ನಂತರದ ಭೇಟಿ. ಯಾರ ಹತ್ತಿರವೊ ನಂಬರು ಪಡೆದುಕೊಂಡು ಅದು ನಾನೇ ಅಂತ ಖಾತರಿ ಆದ ಮೇಲೆ ಮೆಸೇಜು ಮಾಡಿದ್ದಾಳೆ. ಹುಡುಗಿಯ ಮುಖ ನೆನಪಿಗೆ ದಕ್ಕುತ್ತಿಲ್ಲವಾದರೂ ಅಷ್ಟು ಸುಲಭಕ್ಕೆ ಆಕೆಯನ್ನು ಮರೆತಿರಲಿಲ್ಲ ಕೂಡಾ.
‘ನಾನು ಗುಲ್ಬಿ.. ಹೆಂಗಿದ್ದಿ..? ಈಗಲೂ ಚಿತ್ರ ಬರೀತಿಯೇನು..?’ ಎಂದು ಮೆಸೇಜು ಬಂದಾಗ ಒಮ್ಮೆ ಇತಿಹಾಸ ಮರುಕಳಿಸಿತ್ತು. ‘..ಎಲ್ಲಿದ್ದಿ..? ಏನು ಕಥೆ.., ಕೇಳೋಣವೆಂದು ರಿಂಗಿಸಿದರೆ -ನೆತ್ತಲಿಲ್ಲ. ಸಾಮಾನ್ಯವಾಗಿ ಉದ್ದುದ್ದ ಟೈಪಿಸುವುದಕ್ಕಿಂತಲೂ ಎರಡು ನಿಮಿಷದಲ್ಲಿ ಎಲ್ಲ ಮಾತಾಡಬಹುದು. ಅದಕ್ಕೆ ಕಾಲ್ ಮಾಡಿದರೆ ಗುಲಾಬಿಯದು ‘ಕಾಲ್ ಬೇಡಾ, ಮೆಸೇಜ್ ಮಾಡು. ಮಾತಾಡಕ್ಕಾಗಲ್ಲ..’ ಎಂದು ಮರುತ್ತರಬಂತು. ಹೆಣ್ಣುಮಕ್ಕಳ ಇಂತಹ ಇಬ್ಬಂದಿತನ ನನಗೆ ಹೊಸದೇನಲ್ಲ. ತೀರ ಮಾತಾಡಬೇಕು, ಮನಸ್ಸಿಗೆ ತೋಚಿದ್ದನ್ನು ಸ್ವಂತದ ಅಕ್ಕ ತಂಗಿಯರಿಗೆ, ಏನಕ್ಕಲ್ಲದಿದ್ದರೂ ಸಂಕಟಕ್ಕೆ ಕಿವಿಯಾಗುವ ಸ್ನೇಹಿತನಿಗೋ, ಪಾಪದ ಸಹೋದ್ಯೋಗಿ ಹತ್ತಿರವೋ ಹೇಳಿಕೊಳ್ಳೋಣ ಎಂದರೂ ಮಾತನಾಡಲಾಗದ ಬಿಗುವಾತಾವರಣ ಇರುತ್ತದೆ.
ತೀರ ಮನೆಯಲ್ಲಿದ್ದವರು ಏನೂ ಹೇಳದಿದ್ದರೂ ಯಾರೋ ಅಪರಿಚಿತರೇನೋ ಎನ್ನುವ ಭಾವವನ್ನು ಕಣ್ಣ ತುಳುಕಿಸಿರುವುದು, ಇನ್ನಿತರ ಪರಿವಾರದೆದುರಿಗೆ ಮಾತನಾಡಲು ಮುಜುಗರವಾಗುವುದು, ಇದ್ಯಾವುದು ಇರದಿದ್ದರೂ ಮಾತಾಡಲು ಆರಂಭಿಸುತ್ತಿದ್ದಂತೆ ಆಚೆ ಬದಿಯವರಿಗೂ ಕೇಳಿಸಿತು ಎನ್ನುವ ಕಾಮನ್‌ಸೆನ್ಸೂ ಇಲ್ಲದೆ ಮನೆಯವರು ‘.. ಯಾರದ್ದು’ ಎಂದು ಬಿಡುವ ಕಿರಿಕಿರಿ. ಗಂಡನಿಗೆ ಹೇಳಲೇಬೇಕಾದ ಅಗತ್ಯತೆಯ ಮಧ್ಯೆ ಹೇಳುವ ರೀತಿ ಮತ್ತು ಧಾಟಿಯಲ್ಲಿ ಮನೆಯಲ್ಲಿ ಸ್ಥಾನ ಪರಿಸ್ಥಿತಿ ಏನು ಎನ್ನುವುದು ಆಚೆ ಬದಿಯವರಿಗೂ ಗೊತ್ತಾಗುತ್ತದಲ್ಲ ಎನ್ನುವ ಭರಿಸಲಾಗದ ಒಳಗುದಿ ಆಕೆಯನ್ನು ಕಾಡುತ್ತಿದ್ದರೆ, ಇತ್ತಲಿನವರ ಧ್ವನಿ ಕೊಂಚ ಗಡುಸಾಗಿದ್ದರೆ ‘..ಯಾರೋ ಗಂಡಸರು ಮಾತಾಡಿದಂಗಿತ್ತು..’ ಎನ್ನುವುದು ಅತ್ತ ಇದ್ದವರಿಗೂ ಕೇಳಿಸಿಬಿಟ್ಟಿರುತ್ತದೆ. ಅದರಲ್ಲಿ ದೊಡ್ಡ ಅವಮಾನ ಅಥವಾ  ರಹಸ್ಯ ಏನೂ ಇರುವುದಿಲ್ಲವಾದರೂ, ಯಾವತ್ತೋ ಯಾರೋ ಮಾಡಿರುವ ಆ ಕಡೆಯ -ನಿನವರಿಗೆ ಇವಳ ಪರಿಸ್ಥಿತಿಯ ಬಗ್ಗೆ ಎಂಥಾ ಭಾವ ಬರಲಿಕ್ಕಿಲ್ಲ..? ಉತ್ತಮ ಸ್ಥಾನಮಾನದಲ್ಲಿದ್ದೂ ಕೂಡು ಕುಟುಂಬದಲ್ಲಿರುವ ಕೆಲ ಮಹಿಳೆಯರಂತೂ ಸಂಜೆಯ ಮೇಲೆ -ನೇ ಎತ್ತುವುದಿಲ್ಲ.
ಏನೇನು ಕಥೆಗಳೊ..?ಹಾಗಾಗಿ ಅಂತಹ ಸುಳಿವು ಲಭ್ಯವಾಗುತ್ತಲೇ ಓಕೆ.. ಓಕೆ.. ಎನ್ನುತ್ತಾ ಇಟ್ಟುಬಿಡುತ್ತೇನೆ. ಆದರೆ ಮನೆಯಲ್ಲಿ ಮಾತಾಡುವ ಹೆಂಡತಿ, ಹುಡುಗಿ ಕನಿಷ್ಠ ಕರೆ ಮುಗಿಸುವವರೆಗಾದರೂ ಕಾಯುವ ಸಹನೆ ಯಾಕೆ ಸಾಯಿಸಿಕೊಂಡಿರುತ್ತಾರೆ..? ಕಾರಣ ಆಕೆ ಮಾತಾಡುವಾಗ ಸ್ನೇಹಿತೆಯ ಜೊತೆಯ ಕುಲುಕುಲು.. ಆಗೆ ಆಕೆಯ ಮುಖದಲ್ಲೂ, ದೇಹ ಭಂಗಿಯಲೂ ಬದಲಾಗುವ ಕದಲಿಕೆಗಳು.. ಸರಕ್ಕನೆ ಕೂತಲ್ಲಿಂದ ಎದ್ದು ಏಕಾಂತ ಬಯಸಿ ಅದರಲ್ಲಿ ಯಾವ ಸರಸ ಸಪ ರಹಸ್ಯ ಇಲ್ಲದಿದ್ದರೂ ವಿರಾಮವಾಗಿ ಕೂತು ಆಚೆ ಬದಿಯಿಂದ ಕೇಳುವ ದನಿಗೆ ಇತ್ತಲಿಂದ ದನಿಯಾಗುವ ಸಂತಸವಿದೆಯಲ್ಲ ಅದನ್ನು ಆಕೆ ಎಲ್ಲರೆದುರು ಮಾಡಲಾರಳು.
ಅಂತಹ ಆರಾಮದಾಯಕ ಸಮಯ ಮತ್ತು ಸ್ವಾತಂತ್ರ್ಯ ತುಂಬಕಮ್ಮಿ ಹೆಣ್ಣುಮಕ್ಕಳಿಗೆ ಲಭ್ಯವಾಗುತ್ತದೆ.
ಅದಕ್ಕಾಗಿ ಮಾತಿನ ಮಧ್ಯದ ‘..ಆಮೇಲೆ ಮಾತಾಡ್ತೇನೆ’ ಎನ್ನುತ್ತಲೋ.. ಇಲ್ಲ ಇದ್ದಕ್ಕಿದ್ದಂತೆ..‘ಮಗ ಸ್ಕೂಲಿಗೆ ಹೋದ್ನಾ.. ಆಗಲೇ ಚಪಾತಿ ಮಾಡಿದ್ಯಾ..? ಇಲ್ಲಿ ಕಾಯಿಪಲ್ಲೆ ಸಿಗ್ತಾಇಲ್ಲ’ ಎನ್ನುವ ಮಾತನ್ನು ಆ ಬದಿಯವರಿಗೆ ಬೇಕಿರಲಿ, ಇಲ್ಲದಿರಲಿ ಮಾತಾಡುತ್ತಾ ರೂಮಿನವರೆಗೆ ಬಂದು..‘ಹೂಂ ಈಗ ಹೇಳು..’ ಎಂದು ಬೇರೆಯದೇ ಆಪ್ತ ಧ್ವನಿಯಲ್ಲಿ ಸಂಭಾಷಣೆಗೆ ಇಳಿಯುವುದೂ ಹೊಸದೇನಲ್ಲ. ಆದರೆ ತೀರ ‘..ಒನ್ಲಿ ಮೆಸೇಜ್..’ ಎನ್ನುವ, ಆಯ್ತು ಎಂದೇನೋ ಮಾತಾಡಿ ಮುಗಿಸುವ ಕರೆಗಳಿಂದ ಸುಲಭಕ್ಕೆ ಆಚೆ ತುದಿಯಲ್ಲಿರುವವರ ಸ್ಥಿತಿಯ ಅರಿವಾಗುತ್ತದೆ. ಆದರೆ ಗುಲಾಬಿ ಮೊದಲಿನಿಂದಲೂ ಅಂಥಾ ವ್ಯವಸ್ಥೆಗೆ ಒಗ್ಗಿಕೊಳ್ಳುವ, ಪಕ್ಕಾಗುವ ಹುಡುಗಿಯಾಗಿರಲಿಲ್ಲ. ಆದರೂ ಇದು ಯಾಕೋ ಸರಿ ಹೋಗ್ತಿಲ್ಲ ಎನ್ನಿಸುತ್ತಿದ್ದಂತೆ ಮೆಸೇಜು ಮಾಡಿದರೆ, ‘..ಮಾತಾಡಕ್ಕಾಗಲ್ಲ. ಸಿಕ್ಕಿದಾಗ ಹೇಳ್ತೀನಿ..’ ಎಂದುಸುರಿದ ರೀತಿಗೆ ಏನೋ ಸರಿ ಇಲ್ಲ ಎನ್ನಿಸಿಬಿಟ್ಟಿತ್ತು. ಮೊದಲಿನಿಂದಲೂ ಗುಲಾಬಿ ಗಲಗಲ ಮಾತಿನ ಹುಡುಗಿ.
ನೀವು ಗಮನಿಸಿರಬಹುದು, ಮೇಷ್ಟ್ರುಗಳ ಮೆಚ್ಚಿನ, ಬುದ್ಧಿವಂತ ಮಕ್ಕಳ ನಡವಳಿಕೆಗಳೆ ಬೇರೆ ಇರುತ್ತದೆ. ಅವು ತೀರ ಅಪ್ಡೇಟೂ, ಪುಸ್ತಕಗಳಿಗೆ ಕಾಲು ತಾಗಿದರೆ ದೇವರಿಗೆ ಒದ್ದಂತೆ ಕೆನ್ನೆ ಬಡಿದುಕೊಳ್ಳುವುದೂ ಮಾಡುತ್ತಿರುತ್ತವೆ. ಕ್ಲಾಸು ನಡೆಯುತ್ತಿದ್ದಷ್ಟೂ ಹೊತ್ತು ಮೇಷ್ಟ್ರ ಮೇಲಿಂದ ಕಣ್ಣು ಆಚೀಚೆ ಕದಲಿಸುವುದಿಲ್ಲ. ಪಾಠ ಮಾಡುತ್ತಿದ್ದಷ್ಟೂ ಹೊತ್ತೂ ನಿರಂತರವಾಗಿ ಕರೆಕ್ಟ್.. ಎನ್ನಿಸುವಂತೆ ಹುಬ್ಬು ಮೇಲೇರಿಸುವುದೂ, ಕಣ್ಣರಳಿಸುವುದೂ, ಹೌದು ಅರ್ಥವಾಯಿತು.. ಆಗೀಗ, ನೀವು ಹೇಳಿದ್ದು ಸರಿ.. ಎಂಬೆ ಅರ್ಥ ಸೂಚಿಸುವಂತೆ ಅಡ್ಡಡ್ಡ ಗೋಣು ಅಡಿಸುವ ಮಕ್ಕಳು ಹೆಚ್ಚಿನಂಶ ಮೊದಲ ಎರಡು ಸಾಲಿನ ಕುಳಿತಿರುತ್ತವೆ.
ಅವರ ನೋಟ್‌ಬುಕ್ಕು, ಮನೆ ಕೆಲಸದ ಪಟ್ಟಿ, ಮರುದಿನಕ್ಕೆ ಏನು ಹೇಳುತ್ತಾರೆ, ಯಾವ ಚಿತ್ರ ಬರೆದು ತರಬೇಕು ಇತ್ಯಾದಿಗಳೆಲ್ಲ ಕೊನೆಯ ಪುಟದಲ್ಲಿ ಬರೆದುಕೊಂಡು, ಮರುದಿನ ನಿಯತ್ತಾಗಿ ವರದಿ ಒಪ್ಪಿಸುವದಷ್ಟೆ ಅಲ್ಲ ಬರುತ್ತಿದ್ದಂತೆ ಒಮ್ಮೆ ಎಲ್ಲರ ಮುಖ, ನೋಟಬುಕ್ಕು ಸರ್ವೆ ಮಾಡಿ ಮೇಷ್ಟ್ರು ಒಳಗೆ ಕಾಲಿಡುತ್ತಿದಂತೆ, ‘ಸರ್.. ಇಂತಿಂಥವರು ಹೋಮ್ ವರ್ಕ್ ಬರೆದಿಲ್ಲ. ಇಂತಿಂಥವರ ಚಿತ್ರ ಅರ್ಧ ಆಗಿದೆ..’ ಹೀಗೆ ಒಂದೇ ಉಸಿರಿನಲ್ಲಿ ಬಾಕಿಯವರ ಚರಮಗೀತೆ ಹಾಡಿ ಕೂತು ಬಿಡುತ್ತಿರುತ್ತವೆ.
ಅಲ್ಲಿಗೆ ನನ್ನಂಥ ಅಕ್ಷರದ್ವೇಷಿಯ ಕಥೆ ಮತ್ತು ಪರಿಸ್ಥಿತಿ ಎರಡೂ ಗಂಭೀರ. ಇಂಥದ್ದೇ ಬುದ್ಧಿವಂತಿಕೆಯ ಗುಲಾಬಿ ಆಗೀಗ ಜೀವಶಾಸದ ಚಿತ್ರಗಳನ್ನೆ ನೀಟಾಗಿ ಬರೆಸಿಕೊಂಡು, ತಮ್ಮ ಕ್ಲಾಸಿನಲ್ಲಿ ಉಳಿದವರ ಬೆಂಡು ತೆಗೆಯುತ್ತಿದ್ದಳು. ನಾವು ಗುಲ್ಬಿ.. ಗುಲ್ಬಿ.. ಎಂದೇ ಕೂಗುತ್ತಿದ್ದೆವು. ಅಷ್ಟಕ್ಕೂ ಊರ ಕಡೆಯಲ್ಲಿ ಯಾರ ಹೆಸರೂ ಪೂರ್ತಿ ಶುದ್ಧವಾಗಿದ್ದುದು ಇವತ್ತಿಗೂ ನನ್ನ ನೆನಪಿನಲ್ಲಿ ಇಲ್ಲ. ಗೋಪ್ಯಾ, ವಮ್ಮಿ, ಚಂದ್ರು ಚಂದ್ರ್ಯಾ, ಪಂಕಜ ಪಂಕಿ, ಅನಿಲ ಅನ್ಯಾ, ಶಂಕರ ಶಂಕ್ರ್ಯಾ, ಸುನಿಲ ಸುನ್ಯಾ, ನಾನು ಸಂತ್ಯಾ... ಹೀಗೆ ಎಲ್ಲವೂ ಅರೆಬರೆ ಹೆಸರುಗಳೆ.
ನಾನು ಓದುವ ಗುಂಪಿನವನಲ್ಲದಿದ್ದರೂ ಗುಲ್ಬಿಯ ಬಳಗದಲ್ಲಿದ್ದಾ. ಹಾಗಂತ ನಾನಂದುಕೊಂಡಿದ್ದಾ. ಕಾರಣ ಕೆಲಸವಿದ್ದಾಗ ಮಾತ್ರ ‘ಸಂತೂ..ನಾನ್ ಚಿತ್ರ ಬರಿಯಾಕ ಆಗವಲ್ದು ನೀನ್ ಭಾಳಾ ಚೆಂದ ಬರ್ಕೊಡ್ತಿ’ ಎಂದು ಪುಸಲಾಯಿಸುತ್ತಿದ್ದರೆ ಹಲ್ಕಿರಿಯುತ್ತಾ ಚಿತ್ರ ಬರೆಯಲು ಕೂರುತ್ತಿದ್ದಾ. ನೀಟಾಗಿ ಪೆನ್ಸಿಲಿನಿಂದ ಬರೆಸಿಕೊಂಡು ಒಂದು ಮೂಲೆಂiಲ್ಲಿ ಚಿತ್ರ ಬರೆದವರು ಎಂದು ಎರಡು ಚುಕ್ಕಿ ಇಡಿಸಿ ನನ್ನ ಹೆಸರು ತಾನೇ ಹೇಳಿ ಬರೆಸಿ ‘..ಈಗ ಚೆಂದಾತು ನೋಡು..’ ಎನ್ನುತ್ತಿದ್ದಳು.
ಜೊತೆಗೆ ಮರುಸಲ ಬಂದಾಗ ‘ಏಯ್.. ನೀನು ಬರ್ಕೊಡೊ ಚಿತ್ರಕ್ಕೆ ಪಂಕಿ ತನ್ನ ಹೆಸರು ಹಾಕ್ಕೊತಾಳೋ.. ಹಂಗೆ ಬೇರೇವ್ರಿಗೆ ಬರ್ಕೊತಾ ಕೂಡಬ್ಯಾಡ. ನಿನ್ನ ಅಭ್ಯಾಸ ಆಗೋದ್ಯಾವಾಗ. ಬಾ ಗಣಿತ ಹೇಳಿಕೊಡ್ತೀನಿ’ ಎಂದು ತಲೆ ಸವರುತ್ತಿದ್ದಳು. ಆದರೆ ಯಾವತ್ತೂ ಗಣಿತವೇನು ಯಾವ ಅಕ್ಷರವನ್ನೂ ಹೇಳಿಕೊಡಲಿಲ್ಲ. ಅದನ್ನು ನಂಬಿಕೊಂಡ ನಾನೂ ಪಂಕಿಯ ನೋಟ್‌ಬುಕ್ಕು ಬರುತ್ತಿದ್ದಂತೆ ರಪ್ಪನೆ ಕುಕ್ಕಿ, ‘..ಚಿತ್ರ ಬರೆದವರು ಅಂತಿರೋ ನನ್ನ ಹೆಸರು ರಬ್ ಮಾಡ್ತಿಯಂತಲ್ಲ ಒಂಚೂರು ಮರ್ಯಾದಿ ಬ್ಯಾಡ ನಿಮಗೆ..’ ಎಂದು ದಭದಭ ಬಾಯಿ ಮಾಡುತ್ತಿದ್ದರೆ ಅವರೆ ಇದ್ಯಾಕೆ ಇವನನ್ನು ತಡುವಿಕೊಂಡೆವು ಎಂದು ಎದ್ದು ಹೋಗಿರುತ್ತಿದ್ದರು.
ಆಹಾ ಚೆಂದದ ಬುದ್ಧಿವಂತ ಹುಡುಗಿಗೆ ಚಿತ್ರಕ್ಕಾಗಿ ನಾನೇ ಬೇಕು, ನನ್ನ ಮೇಲೆ ಡಿಪೆಂಡ್ ಆಗಿದಾಳೆ ಎಂದುಕೊಂಡು ಒಳಗೊಳಗೇ ಖುಷಿಗೆ ಎದೆಯುಬ್ಬಿಸಿ ಅಡ್ಡಾಡುತ್ತಿದ್ದೆನಾದರೂ, ಕೆಲಸದ ಹೊರತುಪಡಿಸಿ ಇನ್ನುಳಿದ ಸಮಯದಲ್ಲಿ ನನ್ನನ್ನು ಕಂಡೂ ಕಾಣದಂತೆ ಇದ್ದು ಬಿಡುತ್ತಿದ್ದುದು, ದೂರವೇ ಇರುತ್ತಿದ್ದುದು ಒಳಗೆ ಕಿರಿಕಿರಿ ಎನ್ನಿಸುತ್ತಿತ್ತು. ಆದರೂ ಹುಷಾರಿ ಹುಡುಗಿ ನನ್ನ ಸಹಾಯ ಪಡೆಯುತ್ತಾಳೆ ಎನ್ನುವುದರ ಮುಂದೆ ಉಳಿದ ಸಂಕಟಗಳು ಮರೆಯಾಗುತ್ತಿದ್ದವು. ಆದರೆ ಇದೆಲ್ಲ ತುಂಬಾ ದಿನ ನಡೆಯಲಿಲ್ಲ.
ಬೇರೆಯವರ ಮೇಲೆ ಗೂಬೆ ಕೂರಿಸಿಯಿದೆ ತೆಗೆದುಕೊಳ್ಳುತ್ತಿದ್ದ ಗುಲ್ಬಿ ತಾನೂ ಅದನ್ನೇ ಮಾಡಿದ್ದಳು. ಪೆನ್ಸಿಲಿನಲ್ಲಿರುತ್ತಿದ್ದ ನನ್ನ ಹೆಸರು ಒರೆಸಿ ಸ್ಕೆಚ್‌ಪೆನ್ನಿಂದ ತನ್ನ ಹೆಸರು ಬರೆದುಕೊಂಡು, ನಾನು ಬಾಯಿ ಮಾಡುವ ಮೊದಲೇ ಜೋರಾಗಿ ‘ಏಯ್.. ಏನೋ ಒಂದೆರಡು ಚಿತ್ರ ಬರ್ಕೊಟ್ಟ ಬಂದ್‌ಬಿಟ್ಟಾ. ಗಣಿತ ಹೇಳ್ಕೊಡ್ತೀನಿ ಅಂದರ ಅಭ್ಯಾಸಕ್ಕ ಕೂರ್ತಾ ಇಲ್ಲ ಅಂತಾ ನಿಮ್ಯಾನಗ ಹೇಳಲೇನು..’ ಎಂದು ರಿವರ್ಸ್ ಬ್ಯ್ಲಾಕ್‌ಮೇಲ್ ಮಾಡಿಸಿಕೊಂಡು ತೆಪ್ಪಗಾಗಿದ್ದಾ. ಬುದ್ಧಿವಂತರು ಊರು ಬಿಡೋದು, ಊರಿಗೆ ಹಿಂದಿರುಗದಿರುವುದೂ ಸಾಮಾನ್ಯ. ಹಾಗೇ ಆಯಿತು ಕೂಡಾ. ಊರುಬಿಟ್ಟು ನೌಕರಿ ಇತ್ಯಾದಿ ಎಂದು ಹೊರಟು ಹೋದ ಗುಲಾಬಿ ಮತ್ತೆ ಯಾವತ್ತೂ ಮಾತಿಗೆ ಇರಲಿ, ಸುದ್ದಿಗೂ ಸಿಕ್ಕಿರಲಿಲ್ಲ.
ಆದರೆ ಗಲಗಲ ಮಾತಿನ ಗುಲ್ಬಿ ಜೀವಮಾನದಲ್ಲಿ ಮೌನವಾಗಿ ಹೋಗಿದ್ದಳು. ಆದರೆ ಅದನ್ನು ನಂಬುವುದೂ ನನಗೆ ಕಷ್ಟವಿತ್ತು. ತೀರ ಒತ್ತಾಯಿಸಿದಾಗ ತಡವಾಗಿ ಮೆಸೇಜು ಬಂದಿತ್ತು. ‘..ನನ್ನ ಧ್ವನಿ ಪೆಟ್ಟಿಗೆತೆಗೆದು ಹಾಕಿದಾರೆ..’ ನನ್ನ ಧ್ವನಿ ಉಡುಗಿ ಬೆನ್ನಿನಾಳದಲ್ಲಿ ಚಳಿ ಅಡರಿತ್ತು. ಉಳಿದದ್ದು ಮುಂದಿನ ವಾರಕ್ಕಿರಲಿ. ಆದರೆ ಗುಲಾಬಿ ಮಾತ್ರ ಧ್ವನಿ ಮತ್ತು ಬದುಕು ಎರಡಕ್ಕೂ ಸವಾಲಾಗಿ ಬದುಕುತ್ತಿದ್ದಳು.ಕಾರಣ  ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)

3 comments:

  1. dhvanipettige tegeduhakida eshto hennugalu jivanta ive.. bereyavarige dhvaniyagi.. bennelubonde iruva betalagalamte.. ivara maneyalli geyalikke, ivara makkalige avvanagalikke bennelubantu ondu bekalla.. tale eke beku.. illada chinte madalikka? kathaputaliyante gonalladisidare saku... adakkondu nirbhavuka mukha... sakallave.. ishtu vastugalu ondu hennu srushtiyagalikke...

    ReplyDelete
  2. ಗುಲಾಬಿ ಕಥನ ಮನತಟ್ಟುವಂತೆ ಇದೆ ಆಪ್ತತೆ, ಆರ್ದ್ರತೆಯೇ ನಿಮ್ಮ ಬರಹಗಳ ವಿಶೇಷ ಆಕರ್ಷಣೆ

    ReplyDelete
  3. Thanks ellarigoo.. kathana anubhava janya aadaga adu haralugattaballadu ennuvudu nanna anisike mattu anubhava

    ReplyDelete