ಮನಸ್ಸು ಊನವಿಲ್ಲದಿರೆ ಬದುಕು ಬಂಗಾರ…
BY ವಿಜಯವಾಣಿ · DEC 6, 2015
(ಅವರ ಮನೆ ಮಾತ್ರ ಮಾಸಿತ್ತು, ಮನಸ್ಸಲ್ಲ. ಬಹುಶಃ ಮನಸ್ಸಿನ ಸುಂದರತೆ ಎದುರಿಗೆ ದೈಹಿಕ ಕುರೂಪಗಳೂ ಸೇರಿದಂತೆ ಸರ್ವವೂ ಸಹ್ಯವಾಗುವುದು ಜೀವನದ ಬಗ್ಗೆ ಸ್ಪಷ್ಟ ಅವಗಾಹನೆ ಇದ್ದಾಗ ಮಾತ್ರವೇ. ಆದರೆ, ಊನ ಬದುಕಿನಲ್ಲೂ ಇನ್ನೊಬ್ಬರ ಬದುಕಿಗೆ ಊರುಗೋಲಾಗುವುದಿದೆಯಲ್ಲ ಅದನ್ನು ದೊಡ್ಡಮನಸ್ಸು ಮಾತ್ರ ನಿರ್ವಹಿಸಬಲ್ಲದು.)
ತೀರ ಅಪರಾತ್ರಿಯ ಹೊತ್ತಿನಲ್ಲಿ ಕಾರು ಓಡಿಸುವ ನನ್ನ ಉಮೇದಿಗೆ ತಡೆ ಬಿದ್ದಿದ್ದು ಏನಾದರೂ ತಿನ್ನಲೇಬೇಕೆನ್ನುವಷ್ಟು ಹಸಿವಾಗಿದ್ದಕ್ಕೆ. ಅದಕ್ಕಾಗಿ ಹುಬ್ಬಳ್ಳಿ ಹೊರವಲಯದಲ್ಲೇ ಕಾರು ತಿರುಗಿಸುವ ಬದಲಿಗೆ ಬಸ್ಸ್ಟ್ಯಾಂಡಿಗೆ ತಿರುಗಿಸಿದ್ದೆ. ಅಂಥಾ ಅಪರಾತ್ರಿಯಲ್ಲೂ ಬೆಂಗಳೂರಿನ ಜಂಗುಳಿಯಷ್ಟೆ ಲಕಲಕ ಅನ್ನುತ್ತಿರುತ್ತದೆ ಹುಬ್ಬಳ್ಳಿ ಬಸ್ಸ್ಟ್ಯಾಂಡು. ತೀರ ದೊಡ್ಡ ಹೋಟೆಲ್ಗಳಿಲ್ಲದಿದ್ದರೂ ಚಿಕ್ಕ ತಳ್ಳು ಗಾಡಿಗಳಲ್ಲಿ ಅವಲಕ್ಕಿ, ಸೂಸಲಾ, ಇಡ್ಲಿವಡೆಗೆ ಖಂಡಿತಾ ಮೋಸ ಇಲ್ಲ ಅಲ್ಲಿ.
ಹಾಗೆ ಅಟೋಸ್ಟ್ಯಾಂಡಿನ ಪಕ್ಕದ ಅಂಗಡಿಯಲ್ಲಿ ಅವಲಕ್ಕಿ ತಿಂದು, ಟೀ ಕುಡಿದು ಇನ್ನೇನು ಕಾರು ಹತ್ತಬೇಕು.‘ಮೆಂದಳ್ಯಾರ ಹುಡುಗ ಅಲ್ರಿ ನೀವ್’ ಎಂದದ್ದು ಕೇಳಿಸಿ ನಿಂತೆ. ಅವಲಕ್ಕಿ ಕೊಟ್ಟವನು. ನಡೆಯುವಾಗ ಊನವಾದ ಕಾಲೆಳೆಯುತ್ತ ಬರುತ್ತಿದ್ದಾನೆ. ಹಳೆಯ ನೆನಪು ಸಳಕ್ಕನೆ ಮಗ್ಗಲು ಬದಲಿಸಿತ್ತು. ಹೌದೋ ಅಲ್ಲವೋ ಅನ್ನುವಷ್ಟರಲ್ಲಿ ಅವನೇ ‘ಮರತಿದಿ ಬಿಡಪಾ. ನಾ ಕುಂಟ ಬಸ್ಯಾ..ದಿನಾ ಬೆಳಗ್ಗೆ’ ಎನ್ನುತ್ತಿದ್ದಂತೆ ನಾನು ಮಾತುಮುರಿದು ‘ಎ.ಪಿ.ಎಂ.ಸಿ. ಯಾರ್ಡ..ಹಳ್ಯಾಳ ಕಾಲೇಜು ಕಟ್ಟಿ..ಕಲಘಟಗಿ ರಸ್ತೆ’ ಎಂದು ಪೂರ್ತಿಗೊಳಿಸಿದ್ದೆ. ಅಪೂಟು ಖುಷಿಯಾಗಿತ್ತು ಬಸವನಿಗೆ. ಸರಿಸುಮಾರು ಎರಡು ದಶಕದ ನಂತರದ ಭೇಟಿ ಅದು. ತೀರ ಪ್ರಕ್ಷುಬ್ಧತೆಯ ದಿನಗಳಲ್ಲಿ ನನ್ನ ಜೊತೆ ನೀಡಿದ್ದೂ ಅಲ್ಲದೆ ನನ್ನಲ್ಲಿ ಮತ್ತೆ ಮತ್ತೆ ಬದುಕಿನ ಅವಗಾಹನೆಯನ್ನು ಬದಲಿಸಿದವನು ಅವನು. ಹಾಗಾಗಿ ಮನಸಾರೆ ಅವನ ತಬ್ಬಿಕೊಂಡು, ‘ಏನೋ ಇದು..? ರಾತ್ರಿ ಹೊತ್ತಿನ್ಯಾಗ..? ಏನ್ ಧಂದೆ ಇದು..’ ಎಂದೆ. ‘ಏನೂ ಇಲ್ಲ, ಮನೀಗ ನಡಿ. ಬೆಳಗ್ಗೆ ಮನ್ಯಾಗ ನಾಸ್ಟಾ ಮಾಡಿ ಹೋಗುವಂತಿ’ ಎಂದ. ಅವನನ್ನು ಸಂಭಾಳಿಸಿ ಮತ್ತೆ ಖಂಡಿತವಾಗಿಯೂ ಮನೆಗೆ ಬರುವುದಾಗಿ ಮಾತು, ನಂಬರು ಎರಡೂ ಕೊಟ್ಟು ಬಂದಿದ್ದೆ. ಅದಾಗಿ ವರ್ಷಗಳೇ ಕಳೆದಿದ್ದವು. ನಿರಂತರ ಮಾತುಕತೆ ಜಾರಿಯಲ್ಲಿದ್ದವು. ಜತೆಗೆ ಇನ್ಯಾವತ್ತೂ ದಿನಪತ್ರಿಕೆಯಲ್ಲಿ ನನ್ನ ಬರಹ ಇದ್ದ ಪುಟವನ್ನು ಅವಲಕ್ಕಿ ಕಟ್ಟಲು ಬಳಸುವುದಿಲ್ಲ ಎನ್ನುವವರೆಗೂ ಅವನ ಭಾವುಕತೆ ಬೆಳೆದಿತ್ತು.
ವರ್ಷಗಳು ಸರಿಯಾಗಿ ತುಂಬುವ ಮೊದಲೇ ನಾನು ಮೆಟ್ರಿಕ್ ಕಟ್ಟೆ ಏರಿ, ಉಸಿರುಕಟ್ಟಿ ಸೆಕೆಂಡ್ ಕ್ಲಾಸಿನ ಮೊದಲ ಮೆಟ್ಟಿಲ ಮೇಲೆ ನಿಂತೆದ್ದು ಹೊರಬಿದ್ದಿದ್ದೆನಲ್ಲ. ಬದುಕಿಗೆ ಯಾವುದೇ ಗೊತ್ತು ಗುರಿ, ನಿರ್ದಿಷ್ಟ ಭರವಸೆ ಇಲ್ಲದ ದಿನಗಳವು. ವಕೀಲನಾಗಬೇಕೆನ್ನುವ ಗುಪ್ತ ಬಾಲ್ಯದಾಸೆ ಯಾವತ್ತೋ ಮುರುಟಿ ಹೋಗಿತ್ತು. ತಾಂತ್ರಿಕ ತರಬೇತಿ ಭವಿಷ್ಯತ್ತಿನಲ್ಲಿ ಅನ್ನ ನೀಡುತ್ತದಾ ಗೊತ್ತಿರಲಿಲ್ಲ. ಆದರೆ, ಆ ದಿನಗಳಲ್ಲಿ ಮಾಸಕ್ಕೆ ಐವತ್ತು ರೂಪಾಯಿ ಸ್ಟೈಪಂಡು ಬಹುದೊಡ್ಡ ಆಕರ್ಷಣೆಯಾಗಿದ್ದು ಸುಳ್ಳಲ್ಲ. ಬಸ್ ವ್ಯವಸ್ಥೆ ಇಲ್ಲದ ಕಾರಣ ಸತತ ಎರಡು ವರ್ಷ ಬೆಳಗ್ಗೆ ಎರಡೂವರೆ ಗಂಟೆ ಕಾಲ ಕಾಲೇಜು ಕಟ್ಟೆ ಮೇಲೆ ಕೂತು ಕಳೆಯುವ ಅನಿವಾರ್ಯತೆಗೆ ಒಡ್ಡಿಕೊಂಡಾಗಿತ್ತು.
ಅದರ ಬದಲಿಗೆ ಸೈಕಲ್ಲು ಬಳಸುವುದಾ, ಇನ್ಯಾವುದಾದರೂ ಟೈಪಿಂಗ್ ಕಲಿಯುವುದಾ, ಮಾರ್ನಿಂಗ್ ಕೋರ್ಸ ಇಂಥಾ ಯಾವುದೇ ಆಯ್ಕೆ, ಸಮಯ ಸದುಪಯೋಗದ ಅವಕಾಶಗಳು ನನ್ನೆದುರಿಗಿರಲಿಲ್ಲ. ಅಸಲಿಗೆ ಅಂಥ ಅವಶ್ಯಕತೆಗಳನ್ನು ರೂಪಿಸಿಕೊಂಡು ಏನಾದರೂ ಮಾಡಿಕೊಳ್ಳಬಹುದೆನ್ನುವ ಕಾರ್ಯವಾಹಿ ಯೋಚನೆಗಳನ್ನು ಮಾಡುವ ಪರಿಸ್ಥಿತಿಯಲ್ಲೂ ನಾನಿರಲಿಲ್ಲ. ಹೀಗಾಗಿ ಕೂತೆದ್ದು ಹೊರಡುವ ಅನಿವಾರ್ಯತೆಯಲ್ಲಿದ್ದಾಗ ಹತ್ತಿರದ ಹಳ್ಳಿಯಿಂದ ಬರುತ್ತಿದ್ದ ಬಸವ ಜೊತೆಗಾರನಾಗುತ್ತಿದ್ದ. ಹೆಚ್ಚಿನಂಶ ಬಲಗಾಲು ಊನವಾಗಿದ್ದು ಅವನು ‘ಕುಂಟಬಸ್ಯಾ’ ಎನ್ನುವ ವಿಶೇಷಣಕ್ಕೆ ಈಡಾಗಿದ್ದ. ಅವನಿಗೆ ಹೆಚ್ಚಿನಂಶ ನನ್ನೂರಿನ ಎಲ್ಲ ವಿವರಗಳೂ ಗೊತ್ತಿದ್ದವು. ಅದೇನೂ ದೊಡ್ಡ ವಿಷಯವಲ್ಲ ಅಕ್ಕಪಕ್ಕದ ಹಳ್ಳಿಗಳ ವಿಷಯ ಹಂಚಿಕೆಯಾಗುವುದು. ಅವನ ಲೆಕ್ಕದಲ್ಲಿ ನಾನು ಶಾಣ್ಯಾ ಹುಡುಗ ಆಗ. ‘ನಿಮಗೇನ್ ಬಿಡಪಾ. ನೀವೆಲ್ಲ ಹುಡುಗರು ಶಾಣ್ಯಾ ಅದೀರಿ. ಓದೋದು ಮಾಡಿದರ ನೌಕರಿ ಸಿಕ್ತಾವೇಳು..’ ಎನ್ನುತ್ತಿದ್ದ. ಆದರೆ ಅದಕ್ಕೆ ಪಕ್ಕಾಗುವ ಪರಿಸ್ಥಿಯಲ್ಲಿ ನಾನಿರಲಿಲ್ಲ. ಆ ಮಾತು ಬೇರೆ. ಆದರೆ ಬಸವನ ಪರಿಸ್ಥಿತಿ ಇನ್ನೂ ಗಂಭೀರವಿತ್ತು. ಅಕ್ಷರ ತಲೆಗೇರುತ್ತಿರಲಿಲ್ಲ. ಕೆಲಸಕ್ಕೆ ದೇಹ ಶಿಥಿಲ. ಕಾಲು ಸಹಕರಿಸುವುದಿಲ್ಲ. ಭವಿಷ್ಯದಲ್ಲಿ ಬದುಕು ಹೇಗೆ ಎನ್ನುವುದರ ಅರಿವು ಅಪೂಟ ಇರಲಿಲ್ಲ. ಅಲ್ಲಿಂದೀಚೆಗೆ ಯಾವ ಮಾಹಿತಿಯೂ ಇಲ್ಲದೆ ನಾನು ಊರು ಬಿಟ್ಟಮೇಲೆ ಸಂಪರ್ಕ ಕಡಿದೇ ಹೋಗಿತ್ತು.
ಇದಾದ ವರ್ಷದ ಮೇಲೆ ಬಸವನಿಗೆ ಬರುತ್ತಿದ್ದೇನೆ ಎಂದೆ. ‘ನಾಸ್ಟಾಕ್ಕ ಬಂದಬಿಡ’ಎಂದ. ಮನೆಯಲ್ಲಿ ‘ಗಾಡಿ ಅಂಗಡಿ ಅವಲಕ್ಕಿ ಅಲ್ಲ. ನಮ್ಮನ್ಯಾಗ ಮಾಡಿದ್ದೋ. ತಗೋ ಮಸರ ಹಾಕ್ಲೇನು.. ಚಲೋ ಶಟಗೊಂಡವರಂಗ ತಿಂತಿ ಬಿಡಪಾ..’ ಎನ್ನುತ್ತ ಜುಲುಮಿ ಮಾಡಿದ್ದ. ಬಸವನ ಮಗ ಹೈಸ್ಕೂಲಿಗೆ ಹೊರಟಿದ್ದವನು ನಮಸ್ತೆ ಅಂಕಲ್ ಎಂದು ಚುರುಕಾಗಿ ಸರಿದು ಹೋಗಿದ್ದ. ಅಂದರೆ ಬಸ್ಯಾನ ಮದುವೇನೂ ಆಗಿದೆ. ಕೂತಲ್ಲಿಂದಲೇ ಕಣ್ಣು ಹರಿಸಿದೆ. ಮಾಸಿದ ಬದುಕು ಅವನಷ್ಟೆ ಊನವಾಗಿದ್ದಂತೇನೂ ಕಾಣಲಿಲ್ಲ. ಆದರೆ ಬಣ್ಣ ಕಾಣದ ಗೋಡೆಗಳು. ಚಿಕ್ಕ ಹಾಲ್ನಂತಹ ಜಾಗದಲ್ಲೇ ಧೂಳು ಹಿಡಿದ ಟಿ.ವಿ. ಪರದೆಗಳು. ಬಣ್ಣ ಬದಲಿಸಿದ್ದ ನೆಲ. ದಿನವಹಿ ಹೋಟೆಲ್ ಕೆಲಸ ಅಲ್ಲೇ ನಡೆಯುತ್ತಿದ್ದುದು ಸ್ಪಷ್ಟ. ಮಾಸಲು ಮಾಸಲಾಗಿದ್ದ ಸೋಫಾದ ಹಿಂದಿದ್ದ ಗೋಡೆಯ ಮೇಲೆ ‘ಬಸವ ಬುಕ್ಸ್ಟಾಲ್’ ಎನ್ನುವ ಫ್ರೇಮು ಹಾಕಿದ ಫೋಟೊ. ಇದ್ಯಾವ ಹೊಸವೇಷ ಎನ್ನುತ್ತ ಅವನತ್ತ ನೋಡುತ್ತಿದ್ದಂತೆ,
‘ಅಣ್ಣಾ.. ಯಾವಾಗ್ಲೂ ಮೆಂದಳ್ಯಾರ ಹುಡುಗ ಬಂದಿದ್ದ ನಮ್ಮ ಅಂಗಡಿಗೆ ಅಂತಿರ್ತಾರು. ಮನೀಗೇ ಬಂದ್ರಿ ಇವತ್ತು ಭಾಳ ಚಲೋ ಆತು. ಬಸವ ಹೇಳತಿರ್ತಾನ…’ಎನ್ನುತ್ತಿದ್ದಂತೆ ನಾನು ಎದ್ದು ಗೌರಿ ಕೂತಲ್ಲೇ ಹೋಗಿ ಹಾಸಿದ್ದ ಜಮಖಾನೆ ಮೇಲೆ ಕಾಲು ಚಾಚಿದ್ದೆ.
ಊರಲ್ಲಿ ಅವಹೇಳನ ಮತ್ತು ಯಾವ ಕೆಲಸಕ್ಕೂ ಬಾರದ ಬಸವ ಅದ್ಯಾಕೋ ಹುಬ್ಬಳ್ಳಿಗೆ ಹೋದವನಿಗೆ ಅಚಾನಕ್ ಆಗಿ ಇಂಥದ್ದೊಂದು ಯೋಚನೆ ತಲೆಗೆ ಬಂದಿದೆ. ಊರು ಬಿಡದೆ ಉದ್ಧಾರವಾಗುವುದಿಲ್ಲ ಎನ್ನುವುದನ್ನು ಅರಿತವನು ಇದ್ದಕ್ಕಿದ್ದಂತೆ ಕಾಲು ಹೊಸೆಯುತ್ತ ಹೊರಬಿದ್ದಿದ್ದಾನೆ. ಹಗಲು ಕೆಲಸಕ್ಕಿಂತ ರಾತ್ರಿ ಕೆಲಸ ಮತ್ತು ಇಂಥಾ ಜಾಗದಲ್ಲಿ ಹೋಟೆಲ್ ನಡೆಸುವುದು ಸುಲಭ ಅನ್ನಿಸಿದರೂ ಬಂಡವಾಳ ಇಲ್ಲದೆ ಮೊದಲ ಎರಡು ವರ್ಷ ಏನೂ ಮಾಡಲಾಗಿಲ್ಲ. ಮತ್ತೆರಡು ವರ್ಷ ಕಳೆಯುವಷ್ಟರಲ್ಲಿ ಚಿಕ್ಕದೊಂದು ಕೈಗಾಡಿ ಬಾಡಿಗೆಗೆ ಪಡೆದು ಬ್ರೆಡ್-ಆಮ್ಲೇಟ್ ಅಂಗಡಿ ಆರಂಭಿಸಿದ್ದಾನೆ. ಆರಂಭದಲ್ಲಿ ಸ್ವತಃ ಕಾಲು ಊನವಿದ್ದ ಬಸವನಿಗೆ ಕೆಲಸದ ಜವಾಬ್ದಾರಿ, ಸಾಮಾನು ತರುವುದು, ನಿರ್ವಹಣೆ ತೀರ ಕಷ್ಟಕ್ಕೀಡು ಮಾಡಿದ್ದು ಹೌದಾದರೂ ಜತೆಗಿದ್ದ ಸಹಾಯಕ ಹುಡುಗ ಮತ್ತು ಇತರ ಸ್ನೇಹಿತರು ಕ್ರಮೇಣ ಎದ್ದು ನಿಲ್ಲುವಂತೆ ಮಾಡಿದ್ದಾರೆ. ಇದರ ಮಧ್ಯೆ ಸಂಕ್ರಮಣ ಕಾಲ ಎನ್ನುವಂತೆ ಬದುಕು ಸಾಗಿಸಲು ಅವಶ್ಯ ಎನ್ನಲು ಪಳೆಯುಳಿಕೆ ಎನ್ನುವಂತಿದ್ದ ಖೋಲಿಯ ಆಚೇಗಿದ್ದ ಗೌರಿ ಅವನ ಬದುಕಿಗೆ ಕಾಲಿರಿಸಿದ್ದಾಳೆ. ದೈಹಿಕ ಊನಸ್ಥಿತಿಯ ಕಷ್ಟ ಸುಖದ ಅರಿವಿದ್ದ ಬಸವ ಗೌರಿಯನ್ನು ಬಗಲಿಗೆ ಕಟ್ಟಿಕೊಂಡಿದ್ದಾನೆ.
ಅವನ ಹೆಂಡತಿ ಕೂತಲ್ಲಿಂದಲೇ ಎರಡೂ ಕೈಗಳಿಂದ ದೇಹ ಸರಿಸುತ್ತ ಈಚೆ ಬಂದಳು. ಬೆಪ್ಪಾಗಿ ನೋಡುತ್ತಿದ್ದೆ ನಾನು. ಸೌಂದರ್ಯಕ್ಕೂ ಸಂಸಾರಕ್ಕೂ ಸಂಬಂಧವಿಲ್ಲ ಎನ್ನುವುದನ್ನು ಅವರ ಮಧ್ಯೆ ಇದ್ದ ಹುಡುಗ ಸ್ಪಷ್ಟಪಡಿಸಿದ್ದ. ಬಸವನಿಗೆ ಒಂದು ಕಾಲು ಊನವಿದ್ದರೆ ಗೌರಿಗೆ ಎರಡೂ ಕಾಲಿಲ್ಲ. ಬದುಕು ಮಾತ್ರ ದಿವಿನಾಗಿ ನಡಿತಿದೆ.
‘ಏನಿಲ್ಲ. ಕೈಗಾಡಿ ಅಂಗಡಿ ನಡಸ್ತೀನಿ ಅಂದರೆ ಶಾಲ್ಯಾಗ ಅಡ್ಮಿಷನ್ ಸಿಗವಲ್ದು. ಅದಕ್ಕ ಈ ಅವತಾರ. ನಾನು ಮೊದಲ ಹೆಳವ. ನಂದು ಈಕಿದು ಬದುಕು ಹೆಂಗೋ ನಡಿಲಿಕ್ಕ ಹತ್ತೇದ. ಆದರ ಶಾಲ್ಯಾಗ ನಮ್ಮಪ್ಪ ಕೈಗಾಡ್ಯಾಗ ಅವಲಕ್ಕಿ ಮಾರ್ತಾನ ಅಂದರ ವಾರಗಿ ಹುಡುಗರು ಮರ್ಯಾದಿ ಕಳಿತಾರು ಅನ್ನೊ ಅಂಜಕಿ. ಅಷ್ಟ್ಯಾಕ ಸಾಲಿ ಒಳಗನೂ ಬರಬ್ಯಾಡ ಅಂತಾರ. ನಮಗ ಇಂಗ್ಲಿಷು ತಲಿಗ ಹತ್ತಲಿಲ್ಲ. ಗಣಿತ ಅಂತೂ ಮದಲ ಬರ್ಲಿಲ್ಲ. ಮಕ್ಕಳೂ ಹಂಗ ಆಗೋದು ಬ್ಯಾಡ. ಅದಕ್ಕ ಹೆಸರಿಗೊಂದಿರ್ಲಿ ಅಂತಾ ಬಸವ ಬುಕ್ಸ್ಟಾಲ್. ಖಾಲಿ ಹೊತ್ತಿನ್ಯಾಗ ಗೌರಿ ಹೋಗಿ ಕುಂದರ್ತಾಳು’ ಎನ್ನುತ್ತಿದ್ದರೆ ನೆಲದ ಮೇಲೆ ಹೊಸೆದು ಆಚೀಚೆ ಸರಿಯುತ್ತಿದ್ದ ಗೌರಿ ನುಡಿದ್ದದ್ದು ಇನ್ನೂ ಕಿವಿಯಲ್ಲಿ ಗುಂಯ್ಗುಡುತ್ತಿದೆ.
‘ಮೊದಲೇ ಕಾಲ ಇಲ್ಲದ ಗುದ್ದಾಡತಿದ್ದಾಂವ, ಎರಡೂ ಕಾಲಿಲ್ಲದ ನನ್ನಂಥಾಕಿನ ಕಟಕೊಂಡು ಏನು ಸುಖಾ ಸುರಕೋತಿ ಅಂದರೂ ಕೇಳಲಿಲ್ಲ ಅಣ್ಣಾ. ಉಳಿದವರಿಗಿಂತ ನಿನ್ನ ಜೊತಿಗೆ ಬದುಕು ಚೆಂದ ಇರ್ತದ ಬಾ. ಎಲ್ಲ ಇದ್ದವರು ಇವತ್ತು ಏನೂ ಇಲ್ಲದಂಗಿರೋದು ಕಾಣ್ತದ. ಅಂಥಾದರಾಗ ನಿಂದೇನೂ ದೊಡ್ಡದಲ್ಲ. ಇರೋದರಾಗ ಚೆಂದಕ ಇರೋಣ ಅಂದ..’ ಎಂಥಾ ಮಾತು. ಅವಳ ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ.
ಕುಂಟ ಬಸ್ಯಾ.. ಅಲ್ಲ ಬಸವ ಬೃಹದಕಾರವಾಗಿ ಬೆಳೆದು ನಿಂತಿದ್ದ. ತನ್ನ ಊನತೆಯಾಚೆಗೂ ಬೆಳೆದು ಗೌರಿಯನ್ನು ಮದುವೆಯಾಗುವುದರ ಮೂಲಕ ಔನ್ನತ್ಯವನ್ನು ದಾಟಿದ್ದ. ಗೌರಿ ಮುಖದಲ್ಲಿ ಥೇಟ್ ಅಮ್ಮಂದಿರ ನೆಮ್ಮದಿ. ಅದಕ್ಕೂ ದೊಡ್ಡದು ಕಣ್ಣಲ್ಲಿ ಸಂತಸದ ಪುಟ್ಟ ಕಿರುನಗೆ. ದೇವರು ಮರೆತು ದೇಹ ಊನ ಮಾಡಿದರೂ ಅವರ ಮನಸ್ಸನ್ನು ಮಾತ್ರ ಬಸವನಂತಿರಿಸಲಿ..
ಕಾರಣ
ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)
No comments:
Post a Comment