ಹುತ್ತ... !
" ಈ ಸರ್ತಿ ಜಾತ್ರಿಗ ಮೊದ್ಲು ಮಕ್ಕಳಾಗಲಿಲ್ಲ ಅಂದರೆ ಹುತ್ತದದೇವ್ರ ಪೂಜಿ ಮಾಡ್ಬೇಕ ನೋಡ...ಸರೋಜಿ.." ಎನ್ನುವ ಮಾತು ಬರುತ್ತಿದ್ದಂತೆ ಒಳಗೆ ಕೂತಲ್ಲೆ ಅಂಜಿದಳು ಸರೋಜ. ಮದುವೆಯಾಗಿ ಐದನೆಯ ವರ್ಷಕ್ಕೆ ಕೆಲವೇ ತಿಂಗಳಿದೆ. ಊರ ಜನರೂ ಆಗೀಗ ಕುಹಕವಾಡುವುದೂ ಇದ್ದೇ ಇದೆ. ಒಮ್ಮೆ ಹುತ್ತದದೇವ್ರ ಬನದಲ್ಲಿ ಪೂಜೆ ಮಾಡಿದರೆ ಮುಂದೆ ಮೂರು ವರ್ಷ ಬೇಕು. ಅಲ್ಲಿವರೆಗೂ ಸಮಯ ಇದ್ದೇ ಇರ್ತದೆ. ಅಷ್ಟ್ಯಾಕೆ ಮೊನ್ನೆ ಮೊನ್ನೆ ಮದುವೆಯಾದ ಕುಂಬಾರ ಓಣಿಯ ಸಾವಂತ್ರಿಯೂ ಆಗಲೇ ಹೊಟ್ಟೆ ಉಬ್ಬರಿಸಿಕೊಂಡು, ಕಿಲಕಿಲ ನಗುತ್ತಾ ನಾಚಿಕೊಳ್ಳುವುದು ರಹಸ್ಯವಾಗೇನೂ ಉಳಿದಿಲ್ಲ. ಊರಿಗೇ ಅವಾಜು ಹಾಕಬಲ್ಲಷ್ಟು ಗುಂಡಿಗೆಯ ತನ್ನ ಗಂಡ ವೆಂಕೋಜಿ ದೇಸಾಯಿ ಮೀಸೆ ತಿರುವಿಕೊಂಡು ಹೇಳಿಕೆ ಕೊಡುವುದರಲ್ಲೇ ಮುಂದು.
"...ಈ ವರ್ಷ ನನ್ನ ಹೆಂಡತಿನ ಬೆಂಗಳೂರ್ಗೆ ತೋರ್ಸಿಕೊಂಡ ಬರ್ತೆನಿ... ಆಗ ನೋಡ್ರೆಲ್ಲೆ ಮಕ್ಳಾ.. ಸಾಲು ಸಾಲು ಮಕ್ಕಳ ಹುಟ್ಟಿಸ್ತೇನಿ.. ನಮ್ಮದು ನಸೀಬ್ ಸರಿಗೀಲ್ಲ. ನಮ್ಮಪ್ಪಗೂ ನಾನು ಮದುವೆ ಆಗಿ ಆರು ವರ್ಷದ ಮ್ಯಾಗ ಹುಟ್ಟಿದಾಂವ. ನಮ್ಮವ್ವನೂ ಮದುವ್ಯಾಗಿ ಆರು ವರ್ಷದ ಮ್ಯಾಗೇ ಹಡದಾಕಿ.. ನಮ್ಮಪ್ಪನೂ ಅವರಪ್ಪಗ ಆರು ವರ್ಷದ ಮ್ಯಾಗೇ ಹುಟ್ಟಿದಾಂವ್.. ತಿಳಿತೇನ್ರಲೇ ಬೋಸುಡಿಕೆ.. ಮನತನಾದಾಗ ಹಂಗ ಬಂದಿರೂ ವಾಡಿಕಿ ಅದೂ... ದೇಸಾಯರ ಮನತಾನ ನಮ್ಮುದು.." ಎಂದು ಟವಲ್ ಕೊಡುವುತ್ತಿದ್ದರೆ, ಊರು ಬಾಯಿ ಮುಚ್ಚಿಕೊಂಡು ಯಾರ ಮನೆ ಉಸಾಬರಿ ನಮಗ್ಯಾಕೆ ಎಂದು ಸುಮ್ಮನಾಗಿ ಬಿಡುತ್ತಿತ್ತು. ಕಾರಣ ಹಿಂದೊಮ್ಮೆ ಇದೇ ವೆಂಕೋಜಿ, ಆಗಿನ್ನು ಮಾತ್ರ ಮೀಸೆ ಬಲಿಯುವ ಕಾಲದಲ್ಲಿ ಪಟೇಲ್‍ರ ಹುಡುಗಿ ಚೊಣ್ಣಕ್ಕ ಕೈ ಹಾಕಿದ್ಲು ಅಂತಾ ತಾನೇ ಮ್ಯಾಲೆ ಬಿದ್ದು ಕಿರುಚಾಡಿ ಕಂಗಾಲು ಮಾಡಿದ್ದ. ಹುಡುಗ ಸಣ್ಣಂವ ಅಂತಾ ಎಲ್ಲಾ ಅಲ್ಲೆ ಮುಗಿಸಿದ್ದರು.
ಅತ್ತ ಶಹರನೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಹೆದ್ದಾರಿಯ ಮೇಲೆ ಕೆಡುವಿದ ಟವಲಿನಂತೆ ಅಡ್ಡಾದಿಡ್ಡಿ ಬೆಳೆದಿದ್ದ ಊರು ಬೋರಗಾಂವಿ. ಅಷ್ಟು ದೂರದ ಕೆರೆಯ ನೀರೆ ಊರಿಗೆ ಆಸರೆಯಾದರೆ, ಪಕ್ಕದ ಗುಡ್ಡದ ಕಾಡು ಪ್ರದೇಶ ಊರ ಜಾನುವಾರುಗಳಿಗೆ ಯಥೇಚ್ಚ ಮೇವಿನ ಕಣಜ. ಊರಿಗೆಲ್ಲಾ ಇದ್ದುದು ಒಂದೆ ತಾಪತ್ರಯ ಕಾಡಿಗೆ ಮೇಯಲು ಜಾನುವಾರು ನುಗ್ಗಿಸಿದರೆ ಯಾವುದೋ ಸರ ಹೊತ್ತಿನಲ್ಲಿ ಹೆಡೆ ಎತ್ತಿ, ಆಗೀಗ ದನವೊಂದರ ಹೆಣ ಕೆಡುವಿ ಬಿಡುತ್ತಿದ್ದ ಹಾವಿನ ಕಾಟದ್ದು. ಕೆಲವೊಮ್ಮೆ ಎರಡ್ಮೂರು ದಿನಗಟ್ಟಲೆ ಜಾನುವಾರು ಬಾರದಿದ್ದಾಗ ಗಂಬೂಟು ತೊಟ್ಟು ಕಾಡು ಹೊಕ್ಕುತ್ತಿದ್ದ ಯುವಕರ ಪಡೆ ಕರಿಗಟ್ಟಿ ಬಿದ್ದಿದ್ದ ದನವನ್ನು ಅಲ್ಲೇ ಬಿಟ್ಟು ಹಿಂದಿಗುತ್ತಿತ್ತು. ಅಪ್ಪಿ ತಪ್ಪಿ ಊರಿನ ಜನರೂ ಬಲಿಯಾಗಿ ಬಿಡುವ ಘಟನೆಗಳೂ ಜರುಗುತ್ತಿದ್ದವು. ಊರಿನಿಂದ ಮೂರು ಕಿ.ಮಿ ದೂರದ, ಭಾಗವತಿಯ ಸರಕಾರಿ ದವಾಖನೆ ಡಾಕ್ಟ್ರು ಶತ ಪ್ರಯತ್ನ ಪಟ್ಟು ಕೆಲವರನ್ನು ಉಳಿಸಿಕೊಂಡರೆ ಹೆಚ್ಚಿನಂಶ ಬಲಿಯಾಗಿ, ಮೈ ಕರಿಗಟ್ಟಿಸಿಕೊಂಡು ಶವವಾಗಿ ಊರು ಸೇರುತ್ತಿದ್ದ ಜನರೇ ಜಾಸ್ತಿ.
ಪಂಚಾಯ್ತಿ ಸೇರಿ ಸರಕಾರ, ಸೇವಾ ಸಂಸ್ಥೆಗಳು ಎಲ್ಲವನ್ನೂ ತೊಡಗಿಸಿದರೂ ಹಾವನ್ನು ಅದರ ಕುಟುಂಬವನ್ನು ನಿಷೇಧಿಸಲು ಆಗುತ್ಯೆ..? ಆಗೀಗ ಊರು ಹೊಕ್ಕುವ ಹಾವಿನ ದಂಡು ಒಂದೆರಡು ಕುರಿಗಳೊ, ದಿನಕ್ಕೆ ಹದಿನೈದಕ್ಕೂ ಹೆಚ್ಚು ಹಾಲು ಹಿಂಡುತ್ತಿದ್ದ ಪಂಗು ನಾಯ್ಕರ "ಲಕ್ಸ್ಮಿ" ಆಕಳನ್ನೋ ಕಬಳಿಸಿ ಹೋಗಿ ಬಿಡುತ್ತಿತ್ತು. ಬೆಳಗಾದಾಗಲೇ ಗೊತ್ತಾಗುತ್ತಿತ್ತು ಊರಿಗೆ ಹಾವಿನ ಹಿಂಡು ನುಗ್ಗಿರುವ ವಿಷಯ. ಊರ ತುಂಬೆಲ್ಲ ಹುಡುಕಿ ಒಂದೆರಡು ಹಾವನ್ನು ಹಿಡಿಯುತ್ತಿದ್ದರಾದರೂ ಆವು ಕೆರೆ ಹಾವೋ, ಇಲಿ ಹಾವೋ ಆಗಿರುತ್ತಿದ್ದವೆ ಹೊರತಾಗಿ ಜೀವ ತಿಂದು ಬಿಡುವ ನಾಗರ ಮರಿಗಳು, ಉರಗ ಮಂಡಲದಂತಹ ಮೆದುಳು ಘಾಸಿ ಮಾಡಿ ಸಾಯಿಸುತ್ತಿದ್ದ ಘಟಸರ್ಪಗಳು ಕೈಗೆ ಸಿಗುತ್ತಿದ್ದ ಸಂದರ್ಭ ಕಡಿಮೆಯೇ.
ಒಟ್ಟಾರೆ ಊರಿಗೆ ವರ್ಷಕ್ಕೊಮ್ಮೆಯಾದರೂ ಯಾರಾದರೊಬ್ಬರು ಬಲಿಯಾಗುವುದೂ, ಆಗೀಗ ಕಾಡಿಗೆ ನುಗ್ಗುವ ದನಗಳನ್ನು ಕೈಬಿಡುವುದೂ ಊರವರಿಗೂ ಮಾಮೂಲಿಯಾಗಿ ಬಿಟ್ಟಿದ್ದರಿಂದ ಊರ ತುಂಬ ಕತ್ತಲಾಯಿತೆಂದರೆ ಕಟ ಕಟ ಎಂದು ಶಬ್ದಿಸುತ್ತಾ ಒಡಾಡುವ ಗಂಬೂಟುಗಳ ಶಬ್ದ ಮಾಮೂಲಿಯಾಗಿತ್ತು. ಮೊದ ಮೊದಲಿಗೆ ಈ ರೀತಿ ಸಂಜೆಯ ವೇಳೆಯಾಗುತ್ತಿದ್ದಂತೆ ಊರ ಜನವೆಲ್ಲಾ ಓಡಾಟಕ್ಕೆ ಕರಿ ಕರಿ ಗಂಬೂಟು ತೊಟ್ಟು ರಸ್ತೆಗೆ ಇಳಿಯುತ್ತಿದ್ದರೆ ಎಲ್ಲೆಲ್ಲೋ ಇದ್ದ ನಾಯಿಗಳು ಬೀದಿ ನಾಯಿಗಳೂ ಸೇರಿ ಊರಿಗೆ ಊರೆ ಎದ್ದು ಕೂಡುವಂತೆ ಭಯಂಕರವಾಗಿ ಬೊಬ್ಬಿರಿಯಲು ಶುರು ಮಾಡಿಬಿಡುತ್ತಿದ್ದವು. ಓಡಾಡುವವರಿಗೂ ಇದು ಕಿರಿಕ್ ಆಗಿ ಕೊನೆಕೊನೆಗೆ ನಾಯಿಗಳೂ ಈ ಫ್ಯಾಶ್‍ನ್ ಪರೇಡ್‍ಗೆ ಹೊಂದಿಕೊಂಡು ಒಮ್ಮೆ ಕುಂಯ್‍ಗುಟ್ಟಿ ಸುಮ್ಮನಾಗುತ್ತಿದ್ದವು.
ಭಯಾನಕ ಮಳೆ, ಗುಡುಗು ಸಿಡಿಲು ಹರಿಯಲಾರಂಭಿಸುತ್ತಿದ್ದಂತೆ ಹುತ್ತದಿಂದ ಹೊರಬಿಳುತ್ತಿದ್ದ ಸರ್ಪ ಸಂತತಿ ಅತ್ತಿತ ಹರಿದಾಡುತ್ತಾ ಊರಿನ ಕಡೆ ನುಗ್ಗುವುದೂ ಸಹಜವೇ ಆಗಿತ್ತು. ಇಂಥಾ ಬೋರಗಾಂವಿ ಊರಿಗೆ ಹತ್ತಿರದ ಅದೇ ಸರಕಾರಿ ವೈದ್ಯ ಬಿಟ್ಟರೆ ದೂರದ ಧಾರವಾಡ ಶಹರಕ್ಕೆ ಹೋಗಬೇಕು. ಅದಕ್ಕೆ ಮುಂಚೆ ಕಡಿಸಿಕೊಂಡ ಯಾವನೂ ಉಳಿದಿರುವ ಉದಾಹರಣೆಗಳೆ ಇರಲಿಲ್ಲ. ಅದ್ಯಾವುದೋ ಸಂಕರ ತಳಿಯ ಹಾವು ಕಡಿದರೆ ಅರೆಂಟು ತಾಸು ಬದುಕುವ ಕಾರಣ ಅಂಥಾ ಕೇಸುಗಳು ಅಲ್ಲಲ್ಲಿ ಮರು ಜೀವ ಕೊಟ್ಟು ಊರು ನಿರುಮ್ಮಳವಾಗುತ್ತಿದ್ದರೆ, ಗೊತ್ತೆ ಆಗದಂತೆ ಹಲ್ಲೂರಿ ನಡೆದು ಬಿಡುತ್ತಿದ್ದ ಕಾಳ ಸರ್ಪಗಳ ಕಾಟಕ್ಕೆ ಆಗೀಗ, ಗೊತ್ತಾಗುವ ಮುಂಚೆ ಹೆಣ ಬಿದ್ದು ಬಿಡುತ್ತಿದ್ದವು.
ಅಲ್ಲಲ್ಲಿ ಮನೆ ಮದ್ದು ಇತ್ತಾದರೂ ಯಾರನ್ನಾದರೂ ಬದುಕಿಸಿದ ಸಾಕ್ಷಿ ಇರಲಿಲ್ಲ. ಇತ್ತ ಘಟ್ಟದ ಕೆಳಗಿರುವ ಗುಂದದಿಂದ ಬರುವಾಗಲೋ, ಅತ್ತ ಧಾರವಾಡಕ್ಕೆ ಹೋಗಲು ಭಗವತಿ ಹಾಯ್ದು ದಾಂಡೆಲಿ ಕ್ರಾಸಿನಿಂದ ಹಳಿಯಾಳ ದಾಟಿ ಹೋಗುವವರೆಗೆ ಪ್ರಾಣ ಅದ್ಯಾವಾಗಲೊ ಆ ರಸ್ತೆಯ ಕುಲುಕುವಿಕೆಗೆ ಹಾರಿ ಹೋಗಿರುತ್ತಿತ್ತು.
ಇಂಥಾ ಊರಿಗಿರುವ ಆರಾಧ್ಯ ದೈವ ಕೂಡಾ ಗುಡ್ಡದ ಬುಡದ ಹುತ್ತದ ದೇವ್ರೆ. ಎನೇ ನಡೆದರೂ ದೈವ ನಿರ್ಣಯ ಅಲ್ಲಿಂದಲೇ ಬರುತ್ತಿದ್ದುದು ಊರಿಗೂ ಅದೇನೋ ನೆಮ್ಮದಿ, ನಂಬಿಕೆ ಅದರ ಮೇಲೆ. ಕೊನೆಗೆ ಯಾವುದಾದರೂ ಕೆಲಸ ಆಗದೇ ಹೋದಾಗ, ಬನದಲ್ಲಿ ಪೂರ್ತಿ ಒಂದಿನ ಇದ್ದು ಉಪವಾಸ ಸೇವೆಗೈಯುವ ಮತ್ತು ಕೊನೆಯಲ್ಲಿ ಹುತ್ತಕ್ಕೆ ಕೈಬಿಟ್ಟು ನಡೆಸುವ ಪೂಜಾ ಕೈಂಕರ್ಯದಿಂದ ಅಂದುಕೊಂಡ ಕಾರ್ಯ ಸಿದ್ಧಿಸುತ್ತದೆ ಎನ್ನುವ ನಂಬಿಕೆ ಆಗೀಗ ಕಾಕತಾಳಿಯ ಎಂಬಂತೆ ನಡೆದಿದ್ದೂ ಹೌದು.
ಕೆಳಗಿನ ಕೇರಿ ಭಟ್ಟರ ಆಕಳು ಗಬ್ಬ ನಿಂತಿದ್ದು, ಪೆÇೀಸ್ಟ್ ಮಾಸ್ತರ ಮಗನಿಗೆ ನೌಕರಿ, ಪತ್ತಾರ ಶಿವುಗೆ ಅಂಡು ಕುರ ವಾಸಿಯಾದದ್ದು, ಕಂಡಕ್ಟರ್ ಎಂದು ಹೋಗಿ ಕ್ಲೀನರ್ ಆಗಿದ್ದ ಬುಡೆನ್‍ಸಾಬಿಯ ಮಗ ಅಲ್ಥಾಪ್, ಮಗಳ ಮದುವೆ ಬದಲಿಗೆ ಮಗನಿಗೆ ಮದುವೆ ಹೀಗೆ ಉದ್ದುದ್ದ ಪಟ್ಟಿ ಊರ ಜನರ ಬಾಯಲ್ಲಿದೆ. ಆಗೀಗ ಬನದ ದೈವದ ಪೂಜೆಗೆ ಕೈಯಿಟ್ಟ ವ್ಯಕ್ತಿಯ ಕೈಗೆ ಹಾವು ಕಚ್ಚಿ ಅಲ್ಲೆ ಹೆಣವಾಗಿದ್ದೂ ಇದೆ. ಆಗೆಲ್ಲಾ ದೈವ ಲೀಲೆ ಅದು.
ಇಂತಿಪ್ಪ ಈಗ ಊರ ಜನರ ಬಾಯಿಂದ ತಪ್ಪಿಸಿಕೊಳ್ಳಲು ಸರೋಜಿಯ ಆತ್ತೆಗೆ ಇರುವ ಸುಲಭ ದಾರಿ ಅದು. ಅದಾಗದೆ ಹುತ್ತಕ್ಕೆ ಕೈ ಇಟ್ಟು ಹಾವು ಕಚ್ಚಿ ಹೋದರೂ ಹೋಗಲಿ. ವೆಂಕೋಜಿಗೆ ಸಾಲು ಬಿದ್ದು ಹೆಣ್ಣು ಕೊಡ್ತಾರೆ. ಅದಕ್ಕಾಗೇ ಊರ ಜಾತ್ರೆಗೂ ಮುನ್ನ ಪೂಜೆಗೆ ದುಂಬಾಲು ಬಿದ್ದಿದ್ದು ಆಕೆ. ಆದರೆ ಯಾವಾಗ ಊರಲ್ಲಷ್ಟೆ ಅಲ್ಲದೆ ಮಾವನ ಊರಿನಲ್ಲೂ ವಿಷಯ ಪ್ರಸ್ತಾಪವಾಯಿತೋ ವೆಂಕೋಜಿ ರೇಗಗೊಡಗಿದ. ಮನೆಗೆ ಬಂದವನೆ ಅವ್ವನಿಗೆ "ಆಕಿನ ಕೇಳಬೇ... ಅದ್ಯಾಕರ ಹಂಗಾಗತೈತಿ ಅಂತಾ..?" ಎಂದು ಹೆಂಡತಿಯ ಸಮಸ್ಯೆಗೆ ತಾಯಿಯನ್ನು ಮುಂದೆ ಮಾಡಿ ದಾರಿ ಕಾಯತೊಡಗಿದ್ದ.
ಇತ್ತ ಸರೋಜನ ಪರಿಸ್ಥಿತಿ ಗಂಭೀರವಾಗತೊಡಗಿ ಮನೆಯಲ್ಲಿ ದಿನವೂ ಅತ್ತೆ-ಸೊಸೆಯ ಕದನ ಆರಂಭವಾಗತೊಡಗಿದಂತೆ ವೆಂಕೋಜಿ ಪರಿಸ್ಥಿತಿ ತಿಳಿಗೊಳಿಸಲು ಹೆಂಡತಿಯನ್ನು "ರವಷ್ಟು ದಿನ ಮನಿಗ್ ಹೋಗಿ ಬಾ.. ಬಂದ ಕೂಡಲೆ ಬೆಂಗಳೂರಿಗ್ ಹೋಗೂಣು..." ಎಂದು ನೂರು ಕಿ.ಮಿ ದೂರದ ಶಿಗ್ಗಾಂವಿಯ ಮಗ್ಗುಲಿನ ಬಂಕಾಪುರಕ್ಕೆ ಬಿಟ್ಟು ಬಂದ. ಆದರೆ ಎಷ್ಟು ದಿನ..? ಊರ ಜಾತ್ರೆ, ಅದಕ್ಕೂ ಮೊದಲೇ ದೇವರ ಹಬ್ಬ ಬಂದೇ ಬಂದವು. ಆಕೆಯ ಜೊತೆಗೆ ಅವರವ್ವ, ಕಾಕಿ, ಊರಿನ ಜಮೀನ್ದಾರ ಜೈನರ ಅಜೀತಪ್ಪ ಗೌಡ, ಅವರಪ್ಪ ಹೀಗೆ ಅವಳ ಕಡೆಯ ಅರ್ಧ ಊರಿಗೆ ಊರೇ ಬಂತು. ಬೇರೆ ದಾರಿ ಕಾಣದ ಸರೋಜಿ ಕಾಕಿಯೊಂದಿಗೆ ಊರ ಹೊರಗಿನ ಬನಕ್ಕೆ ಕಾಲಿಟ್ಟಳು. ಹೆಂಗಸರಿಬ್ಬರ ರಕ್ಷಣೆಗೆ ನಾಲ್ಕಾರು ಹುಡುಗರ ಪಡೆ ಅಷ್ಟು ದೂರದಲ್ಲಿ ಬಂಡಿ ಹೂಡಿಕೊಂಡು ದುನಿ ಹಾಕಿಕೊಂಡು ಕೂತಿತು.
ಪೂರ್ತಿ ದಿನ ಅಂದರೆ ನಾಳೆ ಬೆಳಿಗ್ಗೆ ಸುಮಾರು ಒಂಭತ್ತು ಗಂಟೆಯವರೆಗೆ. ಅಷ್ಟು ದೂರದಲ್ಲಿ ಕಾಕಿ ಸರೋಜಿಯೊಂದಿಗೆ ಕೂತಿದ್ದರೆ, ಕಾಯಲು ಹುಡುಗರಲ್ಲಿ ಕೊಂಚ ಎಬಡನಂತಿದ್ದ ಬಾಯವ್ವನ ಮಗ ಮಲ್ಲೇಶಿ ಮಾತಿಗೆ ಕೂತ. ಎತ್ತರಕ್ಕೆ ದಿವೀನಾಗಿದ್ದ ಹುಡುಗ ವಯಸ್ಸು ಬೆಳೆದಿದ್ದರೂ ಮೆದುಳು ಬೆಳೆಯದ ಪೆದ್ದ ಸೈಂಧವ. ಯಾವತ್ತೂ ಇತರ ಕೇರಿ ಹುಡುಗರಂತೆ ಕೆಡುತನಕ್ಕೆ ಇಳಿದವನಲ್ಲ. ಯಾರೇ ಕರೆದರೂ ತಲೆ ತಗ್ಗಿಸಿ ಅಚ್ಚುಕಟ್ಟಾಗಿ ಸಹಾಯಕ್ಕೆ ನಿಲ್ಲುತ್ತಿದ್ದುದು ಊರವರಿಗೂ ಅವನ ಮೇಲೆ ಅನುಕಂಪ. ಹಾಗಾಗೇ ಉಳಿದ ಹುಡುಗರು ರೇಗಿಸತೊಡಗಿದ್ದರೆ ಅವನು ಈಚೆಗೆ ಬಂದು ಕಾಕಿ ಜೊತೆಗೆ ಕೂತು ಸರೋಜಿಯನ್ನೂ ಮಾತಾಡಿಸಿಕೊಂಡು ಸಮಯ ಕಳೆಯತೊಡಗಿದ. ರಾತ್ರಿಯಿಡಿ ಕಳೆಯ ಬೇಕಿದ್ದ ಕಾಕಿಗೂ ಅವನು ಹಿಡಿಸಿದ.
ಮರುದಿನ ಬೆಳಿಗ್ಗೆ ಊರ ಪೂಜಾರಿ ಗುಗ್ಗುಳ ಜಾಡಿನೊ0ದಿಗೆ ಕಾಡಬನಕ್ಕೆ ಕಾಲಿಟ್ಟ. ದಿನವಿಡಿ ದಟ್ಟಬನದಲ್ಲಿ ಕೂತು ಸುಸ್ತಾಗಿದ್ದ ಸರೋಜಿ ಎದ್ದು ನಿಂತಳು. ಅಷ್ಟು ದೂರದಲ್ಲಿ ರಾತ್ರಿ ಯಾವ ಹಾವೂ ಹಾಯದಂತೆ ಕಾಯ್ದಿದ್ದ ಮಲ್ಲಯ್ಯ ಗೊದಡಿ ಎತ್ತಿಕೊಂಡು, ಕಣ್ಣುಜ್ಜಿಕೊಳ್ಳುತ್ತಾ ಕೆಂಪಗೇ ಮಾಡಿಕೊಂಡು ನಿಂತಿದ್ದ. ಕಾಕಿ ತುರುಬು ಕಟ್ಟಿಕೊಂಡು, ರಾತ್ರಿ ಕಳೆಯುವಾಗ ತಗುಲಿದ್ದ ಹಸಿರು ಹೊಲಸನ್ನು ಕೈಯಿಂದ ಕೊಡುವುತ್ತಿದ್ದಳು. ಸಮಯಕ್ಕೆ ಸರಿಯಾಗಿ ಮೆರವಣಿಗೆ ಹೊರಟು ಅಷ್ಟು ದೂರದ ಹುತ್ತಕ್ಕೆ ಬಂದು ನಿಂತಿತು. ಶೃದ್ಧೆಯಿಂದ ಸರೋಜಿ ಕೈಬಿಟ್ಟು ಪೂಜೆ ಮಾಡಿದಳು. ಯಾವ ಹಾವೂ ಬರಲಿಲ್ಲ. ಹುಳವೂ ಕಡಿಯಲಿಲ್ಲ.
"..ನಡಿಯವ್ವ ಮನಿಕಡಿಗೆ ಮೂರು ವರ್ಷ ಟೈಂ ಐತಿ..." ಎನ್ನುತ್ತಾ ಪೂಜಾರಿ ಗುಗ್ಗುಳ ಹೊಗೆ ಎಬ್ಬಿಸಿ ನಡೆಯುತ್ತಿದ್ದರೆ, ಕೊನೆಗಣ್ಣಲ್ಲೆ ನಗು ತುಳುಕಿಸುತ್ತಾ ಕಾಕಿ ತನ್ನೂರ ದಾರಿ ಹಿಡಿದಳು. ಈ ಸಂಭ್ರಮದ ಮಧ್ಯೆ ಸರೋಜಿಯ ಕೈಗಳೆರಡೂ ಹಸಿರಾಗಿದ್ದುದು ಯಾರ ಗಮನಕ್ಕೂ ಬಾರದಿದ್ದರೂ ಮಲ್ಲೇಶಿಯ ಕಣ್ಣು ಅದರಿಂದ ಚಲಿಸದಿರುವುದು ಸರೋಜಿಯ ಗಮನಕ್ಕೂ ಬಂತು. ಅವನನ್ನು ಕಣ್ಣಲ್ಲೇ ಗದರಿಕೊಂಡು ಮನೆ ಸೇರಿದಳು. ಇನ್ನು ಮೂರು ವರ್ಷ ಯಾರೂ ಏನೂ ಅನ್ನುವಂತಿಲ್ಲ. ಒಮ್ಮೆ ಪೂಜೆಯಾದರೆ ಅಲ್ಲಿವರೆಗೂ ಸಮಯವಿದೆ ಫಲಿತಾಂಶ ಬರಲು.
ಆದರೆ ಅದಕ್ಕೂ ಮೊದಲೆ ಬೇರೆ ಬೆಳವಣಿಗೆ ನಡೆಯಿತು. ಆ ದಿನ ಬೆಳಿಗ್ಗೆ ಹಾಲಿಗೆಂದು ಎಮ್ಮೆ ಕೆಚ್ಚಲಿಗೆ ಕೈಯಿಡುವ ಮೊದಲೆ ಮರಿ ಹಾವು ಕಡಿಸಿಕೊಂಡ ಬಸಿರು ಸಾವಂತ್ರಿಯದು ಇನ್ನೇನು ಜೀವ ಹೋಗುತ್ತಿತ್ತು. ಆಗ ನುಗ್ಗಿ ಬಂದಳು ಸರೋಜಿ. ಅದೆಲ್ಲಿಂದಲೋ ಹಸಿರೆಲೆಗಳ ಮದ್ದು ಮಾಡಿದಳು. ಬೇರನ್ನು ಜಜ್ಜಿ ಬಾಯಿಗೆ ರಸ ಹಿಂಡಿದಳು. ಇನ್ನಷ್ಟು ಬೇರನ್ನು ತೇಯಲು ಹೇಳಿದಳು. ಅಷ್ಟೊತ್ತಿಗೆ ಸ್ರಾವಂತಿ ಕಣ್ಮುಚ್ಚಲು ತೊಡಗಿದ್ದಳು.
ಕೂಡಲೆ "..ಲೇ ಮಲ್ಯಾ ಹಲಗಿ ಬಡಿಯಲೇ... " ಎನ್ನುತ್ತ ಅವನ ಬುಡಕ್ಕೆ ಭತ್ತದ ದೇಣಿನಿಂದ ಬಾರಿಸಿದಳು. ಆಗ ಈ ಜಗತ್ತಿಗೆ ಬಂದವನಂತೆ ಕಣ್ಬಿಟ್ಟ ಮಲ್ಲೇಶಿ ಕೂಡಲೆ ಹಾರಿ ಬಿದ್ದು, ತಳವಾರ ಮನೆಯಿಂದ ಹಲಿಗೆ ತಂದು ತನಗೆ ತಿಳಿದಂತೆ "...ಡಂಕ್ ಣಕ್ಕ್ ಡಖ್..." ಎಂದು ಬಾರಿಸಿ ಹುಯಿಲೆಬ್ಬಿಸಿತೊಡಗಿದ. ಆ ಶಬ್ದಕ್ಕೆ ಕೂಡಲೆ ಕಣ್ಬಿಟ್ಟ ಸ್ರಾವಂತಿಯನ್ನು ನೋಡಿ "...ಹಾಂ ಹಂಗ ಆಕಿಗೆ ಕಣ್ಣ ಮುಚ್ಚ ಕೊಡಬ್ಯಾಡರಿ..ಬಾರಸತಿರು ಮಲ್ಲೇಶಿ.." ಎನ್ನುತ್ತಾ ಶೂಶ್ರುಸೆಗೆ ತೊಡಗಿದಳು. ಎರಡ್ಮೂರು ತಾಸು ಕಳೆಯುವಷ್ಟರಲ್ಲಿ ಬೆವರು ನೀರಾಗಿ ಹರಿದು, ಕಪ್ಪಡರಿದ್ದ ಸ್ರಾವಂತಿ ಮತ್ತೆ ಕೆಂಪಗಾದಳು. ಮೊದಲ ಬಾರಿಗೆ ಪವಾಡ ಘಟಿಸಿತ್ತು. ಕಾಳಸರ್ಪಕ್ಕೆ ಕೈಯ್ಯಳತೆಯಲ್ಲಿ ಮದ್ದು ಸಿಕ್ಕಿತ್ತು. ಬೋರಗಾಂವಿ ಅಂಬೊ ಊರು ಸರೋಜಿಯ ಪಾದಕ್ಕೆ ಬಿದ್ದಿತ್ತು. ಅಷ್ಟು ದೂರದಲ್ಲಿ ಎಂದಿನಂತೆ ಟವಲ್ ಹಾರಿಸುತ್ತಿದ್ದ ವೆಂಕೋಜಿಯ ಜರ್ಬಿಗೆ ಈಗ ಇನ್ನೊಂದು ಕೋಡು.
" ...ನಮ್ಮಾಕಿ ಊರ ಮಂದಿಗ್ ಜೀವ ಕೋಡ್ತಾಳ.. ನೋಡ್ರೀ... " ಏನ್ನುತ್ತಾ ನಿಂತಿದ್ದ. ಮಾತಾಡದೆ ಕೈ ಒದರಿಕೊಂಡು, ಕೈಗಂಟಿದ್ದ ಹಸಿರು ಕೆಡುವುತ್ತಾ. "...ಬಾರಲಾ ಮಲ್ಲೇಶಿ.." ಎನ್ನುತ್ತಾ ಪ್ರತಿಫಲವಾಗಿ ವೀಳ್ಯೆದೆಲೆ, ಕಾಯಿ, ಒಂದು ರೂಪಾಯಿ ಪಾವ್ಲಿಯೊಂದಿಗೆ ನಡೆದುಹೋಗಿದ್ದಳು ಸರೋಜಿ.
ಆವತ್ತಿಗೆ ಬೋರಗಾಂವಿಯ ಕಷ್ಟಗಳು ಒಂದು ಹಂತಕ್ಕೆ ಬಂದವು. ಯಾವ ದನಗಳೂ, ಜನರೂ ಪ್ರಾಣ ಕೊಡುವುದಾಗಲಿಲ್ಲ. ಇದ್ದಕ್ಕಿದ್ದಂತೆ ಹೆಂಗೆ ಸರೋಜಿ ಮದ್ದು ಅರೆಯೊದಿಕ್ಕ ಶುರು ಮಾಡಿದ್ಲು ಗೊತ್ತಾಗಲಿಲ್ಲ. ಕೇಳಾಕ ಬಂದವರಿಗೆ "..ನಿಮಗ ಅಗುಸುದ್ದೆ ಬೇಕೋ, ಬ್ಯಾಡ್ವೊ.. ನಡಿರೆವ್ವಾ..ಅದನೆಲ್ಲಾ ಕಟಗೊಂಡ ಎನ್ ಮಾಡಾವ್ರು.." ಎಂದು ಗದರಿಸಿದಳು. ಬಹುಶ: ಹುತ್ತದ ದೇವ್ರಿಗೆ ನಡೆದುಕೊಂಡಾಗ ದೈವದ ಆಶಿರ್ವಾದ ಸಿಕ್ಕಿರಬೇಕು ಎಂದಾಡಿಕೊಂಡಿತು ಊರಜನ. ಸರೋಜಿಯ ಹಿಂದಿಂದೆ ಮಲ್ಲೇಶಿ ಸಹಾಯಕನಾಗಿ ಅಲೆಯತೊಡಗಿದ. ಮಂಕುದಿಣ್ಣೆ ಮಲ್ಲೇಶಿಗೂ ಒಂದು ದಿಕ್ಕಾದಳು ಸರೋಜಿ. ಆಗೀಗ ಔಷಧಿ ತಯಾರಿಸಲು ಬೇಕಾದ ಸಾಮಾನು ತರಬೇಕಾದಾಗೆಲ್ಲ ಅವನೊಂದಿಗೆ ಕಾಡುಹೊಕ್ಕತೊಡಗಿದಳು ಸರೋಜಿ.
ಆಚೆ ಮನಿ ಶಕುಂತಲವ್ವನ ಸೊಸಿ, ಕಡೀ ಊರಿನ ಬೈರಿಗಿ ಆಕಳು, ಮ್ಯಾಗಿನ ಕೇರಿ ಆಳು ಸುಂದ್ರಪ್ಪ ಹೀಗೆ ಯಾರ ಬುಡಕ್ಕೆ ವಿಷ ನುಗ್ಗಿದರೂ ಕ್ಷಣಾರ್ಧದಲ್ಲಿ ಧಾವಿಸಿ ಬಂದು ಬೇರು ತಿಕ್ಕಿ ಮೂಗಿಗೆ ಹಿಂಡತೊಡಗಿದಳು. ಬಾಯಿಗೆ ಹಸಿರು ಔಶಧಿ ಹೊಯ್ಯುತ್ತಾ ಮಲ್ಲಯ್ಯನನ್ನು ಹಲಿಗೆ ಬಡಿದು ಕುಣಿಸತೊಡಗಿದಳು. ಎರಡ್ಮೂರು ತಾಸಿನ ತಲ್ಲಣಗಳ ನಂತರ ಬೆವರು ಬಸಿಯ ತೊಡಗಿದರೆ ಸರೋಜ ಕೈ ಒದರಿ ಹೊರಡಲು ಅನುವಾಗುತ್ತಿದ್ದಳು. ಯಾರೆಂದರೆ ಯಾರಿಂದಲೂ ಇಂಥಾದ್ದು ಬೇಕು ಅನ್ನಲಿಲ್ಲ ಸರೋಜಿ. ಸುತ್ತ ಮುತ್ತಲಿನ ಪ್ರಾಣ ಕಾಯತೊಡಗಿದಳು.
ಆದರೆ ವರ್ಷ ಎರಡು ಕಳೆದು ಮೂರನೆಯದು ಕಾಲಿಡತೊಡಗಿತ್ತು. ಮಾವಿನ ಗಿಡ ಹೂವರಳತಿತ್ತು. ಆದರೆ ಸರೋಜಿ ಯಾಕೋ ಹಂಗೆ ಇದ್ಲು. ಹೊಟ್ಯಾಗೆ ಚಿಗುರು ಒಡಿಲೇ ಇಲ್ಲ. ವೆಂಕೋಜಿ ಸಣ್ಣಗೆ ವರಾತ ಶುರು ಇಟ್ಟುಕೊಳ್ಳತೊಡಗಿದ್ದ. ಸರೋಜಿಗೂ ಈಗ ಬೇರೆ ದಾರಿ ಹುಡುಕಲೇ ಬೇಕಿತ್ತು. ಆವತ್ತು ಅದು ಘಟಿಸಿತ್ತು. ಅದ್ಯಾವುದೋ ಮಾಯೆಯಲ್ಲಿ ಬಲಗೈಯಾಗಿದ್ದ ಮಲ್ಲೇಶಿಗೇ ಹುಳ ಕಡಿದುಬಿಟ್ಟಿತ್ತು. ಹಾರಿಕೊಂಡು ಹೋದ ಸರೋಜಿ ನೋಡಿದಳು. ಕಲ್ಲ ಗುಂಡಿನಂತಿದ್ದ ಮಂಕು ಮಲ್ಲೇಶಿ ದೊಡ್ಡ ಕರಿಮತ್ತಿ ತುಂಡಿನಂತೆ ಬಿದ್ದಿದ್ದಾನೆ. ಸರ ಸರ ಬಟ್ಟೆ ಬಿಚ್ಚಿಸಿ ಮೈಗೆ ನೀರು ಹಾಕಿ ಕಾವು ಏರದಂತೆ ನೋಡಿಕೊಂಡು, ಬಾಯಿಗೆ ಮೂಗಿಗೆ ಔಶಧಿ ಹಿಂಡಿದವಳೆ ಅವರಪ್ಪನನ್ನೆ ಹಲಿಗೆ ಬಡಿಯಲು ನಿಲ್ಲಿಸಿದಳು. ಅವನ ಗೆಳ್ಯಾರು ಬಂದು ಇನ್ನು ನಾಲ್ಕು ಮಂದಿ ಜಗ್ಗಲಿಗಿ ಬಡಿಯಾಕ ಹತ್ತಿದರು.
ಒಳಗೆ ಹೊರಸ ಮ್ಯಾಲೆ ಗುಡ್ಡದ ಕಲ್ಲಿನಂತೆ ಬಿದ್ದಿದ್ದ ಮಲ್ಲೇಶಿ ಕಣ್ಣ ಬಿಟ್ಟ. ಅರಬೆತ್ತಲೆ ಮೈಯಿ, ಯಾರೂ ತಡುವಿರದ ಸೊಂಪಾದ ಕಾಡು ಗೂಳಿಯಂತೆ ಹದವಾಗಿದ್ದ ಮಂಕು ಹುಡುಗ ಹರವಾಗಿ ಬಿದ್ದಿದ್ದಾನೆ. ಎದ್ರಿಗೆ ಹೊಕ್ಕಳ ಕಡೆ ಕೈ ಇಟ್ಗೊಂಡ ಕೂತ ಸರೋಜಿ. ಕಣ್ಬಿಟ್ಟ ಮಲ್ಲೇಶಿಗೆ ಕಂಡಿದ್ದು ದಣಿವಿಗೋ, ತಲ್ಲಣಕ್ಕೋ ಏರಿಳಿಯುತ್ತಿದ್ದ ಆಕೆಯ ಗೋಪುರದಂತಹ ಎದೆಗಳು. ನಿಧಾನಕ್ಕ ತನ್ನ ಹೊಕ್ಕಳ ಮ್ಯಾಲಿದ್ದ ಆಕಿ ಕೈ ಸರಿಸಬೇಕಂತಾ ಕೈ ಹಿಡಿದ. ಆದರೆ ಅವನ ಕೈ ಸೇರಿಸ್ಕೊಂಡೆ ಅವನ ಹೊಕ್ಕಳು ನೀವಿದ್ದಳು ಸರೋಜಿ. ಕಳಕ್ಕನೇ ಅವನ ಜೀವ ಹೊರಳಿತ್ತು. ಇನ್ನೊಮ್ಮೆ ಕಣ್ಬಿಟ್ಟ. ಈ ಸರ್ತಿ ಎಗರಿ ನಿಂತಿದ್ದ ಎದೆಗೆ ಸೆರಗು ಹೊದಿಸಲಿಲ್ಲ ಸರೋಜಿ. ಕುಪ್ಪಸ ಕಿತ್ತುವಂತೆ ಬಿಗಿಯಾದ ಎದೆಗೆ ಆವತ್ತು ಗುಂಡಿ ಕೀಳಗೊಡಲಿಲ್ಲ. ಆದರೆ ಅವನ್ನು ನೀವಿದ್ದ ಮಲ್ಲೇಶಿಯ ಕೈ, ಸಂಕಟದಲ್ಲೂ ಹಾವು ಕಡಿಸಿಕೊಂಡಿದ್ದಕ್ಕಿಂತ ಹೆಚ್ಚಿಗೆ ನಡುಗತೊಡಗಿದ್ದವು.
"..ಸುಮ್ಮನ ಬಿದ್ಕೊಳ್ಳಲೇ ಹೆದರಬ್ಯಾಡ. ನಾನದೀನಿ.. ಊರ ಮಂದಿ ನಾ ಹಾಕಿದ ಗೆರಿ ದಾಟಾಂಗಿಲ್ಲ. ನೀ ನೋಡಿದರ ಗೆರಿ ಕೊರಿಯಾಕ ಅಂಜತಿಯಲ್ಲ ಮೊದ್ಲು ಹುಶಾರಾಗು.." ಎಂದು ಗದರಿದವಳೆ, ಅವನ ಗಲ್ಲ, ಮೀಸಿ ಸವರಿ ಹೊರಗ ಬಂದಳು.
"..ಮಲ್ಲೇಶಿಗ್ ಕಡದಿದ್ದು ಸಾಧಾರಣ ಹಾವಲ್ಲ. ಕರಿಮಂಡಲ. ನಾಗರ ಮತ್ತು ಉರಿ ಮಂಡಲ ಸೇರಿದಾಗ ಹುಟ್ಟೊ ಹಾಂವ ಅದು. ಇನ್ನ ಮ್ಯಾಲೆ ವಾರಕ್ಕೊಮ್ಮೆ ಅವನಿಗೆ ಮದ್ದ ಕೊಡ್ಬೇಕು ಇಲ್ಲಂದ್ರ ಮಲ್ಲೇಶಿ ಉಳಿಯಾಂಗಿಲ್ಲ. ಬಾಯವ್ವ... ಮೊದಲು ಮೂರ ದಿನಕ್ಕೊಮ್ಮೆ, ಆಮ್ಯಾಲೆ ವಾರಕ್ಕೊಮ್ಮೆ ಮಲ್ಲೇಶಿನ ಔಷಧಾ ಒಯ್ಯಾಕ ಕಳಸು.. ಬದಿಕಿಕೊತಾನ" ಎನ್ನುತ್ತಿದ್ದಂತೆ,
" ಅವ್ವಾ ಸರೋಜಿ..ನೀನ ಅವನ್ನ ಬೆಳಸಿದಾಕಿ. ದಡ್ಡ ರಂಡೆಗಂಡ ಆಂವಾ. ನನ್ನ ಕೇಳೊದೇನದ. ಅವನ ಜೀವ ನಿನ್ನ ಕಯ್ಯಾಗ. ನಿನ್ನ ಕಟ್ಟಿ ಮ್ಯಾಲ ಕೆಡುವಿರ್ತೆನಿ. ನನ್ನ ಮಗನ್ನ ಬದುಕ್ಸವ್ವಾ.." ಎಂದು ಕಾಲಿಗೆ ಬಿದ್ದಳು ಬಾಯವ್ವ. ಮಲ್ಲೇಶಿ ವಾರದಲ್ಲಿ ಎರಡ್ಮೂರು ದಿನ, ಕೆಲವೊಮ್ಮೆ ವಾರಕ್ಕೊಮ್ಮೆ ಸರೋಜಿ ಹೇಳಿದಾಗೆಲ್ಲಾ ಹೋಗಿ ಬೇರು ಹಿಂಡಿಸಿಕೊಂಡು ಬರತೊಡಗಿದ. ಊರ ಮಂದಿಗೆ ಜೀವ ಕೊಟ್ಟು ತಾಯಿ ಆಗಿದ್ದ ಸರೋಜಿ, ಇದ್ದಕ್ಕಿದ್ದಂತೆ ಬೆಳಿಗ್ಗೆ ವಯಿಕ್ ವಯಿಖ್ ಅಂತಾ ವಾಂತಿ ಮಾಡ್ಕೊತಾ ಕಾರಿಕೊಳ್ಳತೊಡಗಿದ್ಲು. ಅರ್ಧ ತಾಸಿನೊಳಗ ಭಾಗವತಿ ಡಾಕ್ಟರು ಬಂದವರೆ,
"..ವೆಂಕೊಜಿ ಸಾವ್ಕಾರಾ... ಫೇಡೆ ನೋ.. ಜೀಲೇಬಿ ನೋ ನೊಡಪಾ. ನಮಗೂ ಒ0ದಷ್ಟು ಕಳಸು.." ಎಂದು ಔಶಧಿ ಬರೆದು ಹೋದರು. ಎರಡು ತಿಂಗಳಿಂದ ಹೊರಗಾಗದ ಸರೋಜಿ ಬಸರಾಗಿದ್ಲು. ಹೊರಸಿನ ಮೇಲೆ ಮಲಗಿದ್ದವಳು ಅಲ್ಲಿಂದಲೇ ಕಿಲಕಿಲ ನಕ್ಕಳು. ಅಷ್ಟು ದೂರ ನಿಂತಿದ್ದ ಮಲ್ಲೇಶಿ ಬಾಯವ್ವನ ಕಡೆಗೆ ಓಡಿದ. ಡಾಕ್ಟರು ಹೋಗೋವರೆಗೆ ನಿಂತಿದ್ದ ವೆಂಕೋಜಿ ಈಗ ಕುರ್ಚಿಯಲ್ಲಿ ಕುಸಿದು ಕುಳಿತ. ನಂತರ ಸಾವಕಾಶವಾಗಿ ಸರೋಜಿ ಕಡೆಗೆ ತಿರುಗಿದ. ಒಮ್ಮೆ ದುರುಗುಟ್ಟಿ ನೋಡಿದ, ಸರೋಜಿ ಕಣ್ಣಲೇ ಏನು ಎನ್ನುವಂತೆ ತಿವಿದಳು..
" ಇದು ಹೆಂಗಾತು..? " ತೊದಲಿದ್ದ. ಅವನ ಕೈ ಬಂದೂಕು ಹುಡುಕುತ್ತಿತ್ತು. ಸಿಟ್ಟಿಗೆ ರಾತ್ರಿಗಳಂತೆ ಕಂಪಿಸುತ್ತಿದ್ದ ಆತ.
" ಹೆ0ಗಂದರೆ.. ಊರಿಗೆಲ್ಲಾ ಮದ್ದು ಕೊಡತೇನಿ. ಎಲ್ಲದಕ್ಕೂ ಔಶಧಿ ಐತಿ. ಆದರೆ ಅದಕ್ಕಿಲ್ಲ. ಮನಸನ್ಯಾಗಿನ ಹುಳ ಹೊರಗ ಹೋದರ ಯಾವ ಮದ್ದೂ ಬೇಕಾಗಿಲ್ಲ. ಊರ ಮಂದಿ ಮುಂದ ಯಾಕ ಮರ್ಯಾದಿ ಕಳ್ಕೊತಿ. ಸುಮ್ನ ಕುಂಡರು. ಕಿರಿಕಿರಿ ಮಾಡ್ಬ್ಯಾಡ. ನಿನ್ನಿಂದೆನೂ ಮಾಡಕಾಗೋದಿಲ್ಲ ಅಂತಾ ಗೊತ್ತಾ ಆದ ದಿನಾ ಹಗ್ಗ ಹಾಕ್ಕೋಬೇಕಾದೀತು. ಸುಮ್ನ ಹೆಂಗ ನಡದದ ಹಂಗ ಗಾಡಿ ನಡಿಲಿ. ಗಂಡಸ್ತನ ಬಂದೂಕ ಹಾರ್ಸೊದ್ರಾಗ ಇಲ್ಲ. ಹುತ್ತದಾಗ ಹಾಂವ ಬಿಡೊದ್ರಾಗ ತೋಸ್ರ್ಬೇಕು.
ಹಂಗೂ ಬಂದೂಕ ಹಾರಸ್ತಿಯಾದರ ಹಾರಸು. ನಿನ್ನ ಎಲ್ಲಿ ಕೆಡುವು ಬೇಕೊ ಅದಕ್ಕ ಎಲ್ಲಾ ವ್ಯವಸ್ಥೆ ಮಾಡೀನಿ. ಆವತ್ತ ಹುತ್ತದ ದೇವ್ರಿಗೆ ಪೂಜಿ ಮಾಡು ಹೊತ್ತಿನ್ಯಾಗ ಎಲ್ಲಿ ಹೋಗಿತ್ತ ನಿನ್ನ ಗಂಡಸ್ತನಾ..? ಆವತ್ತ ಸತ್ತರ ಸಾಯಲಿ ಅಂತ ನೀನು, ನಿಮ್ಮವ್ವ ಕಾಯ್ಕೊಂಡ ಕೂತಿದ್ರಿಲ್ಲೋ. ಈಗೇನು ಹೆದರಸ್ತಿ. ನಡಿ ನಡಿ.. ಛೇರ್ಮನ್ ಗಿರಿ ಮಾಡ್ಕೊಂಡಿರು.. ಅದ ಇಬ್ರಿಗೂ ಹಿತ. ಇಲ್ಲಂದರ ಪೂರಾ ಮನಿ ಮರ್ಯಾದಿ ಬಂಕಾಪುರ ತನಾ ರಸ್ತಿಗೆ ಬರತೈತಿ ನೋಡ.."ಎಂದಳು. ಅಷ್ಟೆ..
ವೇಂಕೋಜಿ.. ರಾತ್ರಿಗಳಂತೆ ಹಗಲಲ್ಲೂ ನಿರ್ವಿಣ್ಣನಾಗಿಬಿಟ್ಟ. ಪ್ರತಿ ದಿನಾ ರಾತ್ರಿ ಕೈ ಕೈ ಹೊಸಕಿಕೊಂಡು, ಎನೂ ಮಾಡಲಾಗದೆ, ತನ್ನನ್ನು ಹಿಂಸಿಸುತ್ತಿದ್ದ ವೆಂಕೊಜಿ ಇವತ್ತೂ ಬೆಳ್ಳಂಬೆಳಿಗ್ಗೆ ಕೈ ಹೊಸೆಯುತ್ತಿದ್ದುದನ್ನು ನೋಡಿಯೂ ನೋಡದಂತೆ ಎದ್ದು ಸರೋಜಿ ಒಳಕ್ಕೆ ನಡೆಯುವಾಗ ಆದ ಶಬ್ದದಲ್ಲಿ, ವೆಂಕೋಜಿ ಗೊಣಗಿದಂತೆ " ಯಾರಂವ..ಅದನಾರ ಹೇಳು.." ಎಂದು ಕೇಳಿದ ಪ್ರಶ್ನೆ ಅಲ್ಲೆ ಮುರುಟಿ ಹೋಯಿತು.
* * *
ಮೂರು ವರ್ಷದ ಹಿಂದೆ ಹುತ್ತದ ದೇವ್ರ ಪೂಜೆ ಹೊತ್ತಿಗೆ ರಾತ್ರಿಯಿಡಿ ಕೂತಿದ್ದ ಬಂಕಾಪುರದ ಕಾಕಿ, ಅದರ ಬಾಯಿಗೆ ಹಸರ ಬೇರಿನ ಔಷಧ ಹಿಂಡಿ ಹುತ್ತ ಸುರಕ್ಷಿತವಾಗುವಂತೆ ನೋಡಿಕೊಂಡಿದ್ದಳು. ಆವತ್ತೇ ರಾತ್ರಿ ಹಾವಿನ ವಿಷಕ್ಕೆ ಮದ್ದು ಅರೆಯುವ ವಿದ್ಯೇನೂ ಹೇಳಿಕೊಟ್ಟಿದ್ದಳು. ಅದನ್ನು ಕಲಿತು ಬದುಕು ಕಟ್ಟಿಕೊಂಡಿದ್ದ ಸರೋಜಿ, ಜೊತೆಗಿಟ್ಟುಕೊಂಡಿದ್ದ ಮಲ್ಲೇಶಿಯಿಂದ ಜೀವ ಕಟ್ಟಿಕೊಂಡಿದ್ದಳು. ಇಲ್ಲಿದ್ದರೆ ಜೀವಕ್ಕೆ ಅಪಾಯ ಎಂದರಿತು ರಾತ್ರೋ ರಾತ್ರಿ ಅವನಿಗೆ ಮದ್ದರೆಯುವುದನ್ನು ಕಲಿಸಿ ಇನ್ನಾವುದೋ ಊರಿಗೆ ಸಾಗಿಸಿದ್ದಳು.
ಇದಾದ ದಿನಾ ರಾತ್ರಿನೇ ಊರು ಬಿಟ್ಟ ಮಲ್ಲೇಶಿ ಸಾಕಷ್ಟು ಹಾವಿನ ಬಾಧೆ ಇರುವ ಮಲೆನಾಡಿನ ಕಮ್ಮರಡಿ ದಾಟಿ ಬೋಗಿಬೈಲಿನ ಒಳಭಾಗದ ಕಾಡೂರಿನಲ್ಲಿ ಕೂತು ಔಷಧಿ ಅರೆಯತೊಡಗಿದ್ದ. ಅವನ ಕಿವಿಯಲ್ಲಿನ್ನೂ ಸರೋಜಿ ಹೇಳಿದ ಮಾತೇ ಗ್‍ಂಯ್ ಗುಡುತ್ತಿದ್ದವು.
" ಅಂತೂ ಮನೆತನದ ಮೂರನೆ ತಲಮಾರು ಬರೋ ಹೊತ್ತಿನ್ಯಾಗೆ, ಗಂಡಗ ಅಲ್ಲದಿದ್ರೂ ಮಿಂಡಗರ ಹೇಳಿಕೊಡೊ ಹಂಗಾಯಿತಲ್ಲ. ಮಲ್ಲೇಶಿ ಇಲ್ಲಿದ್ದರ ಇಬ್ಬರೂ ಮತ್ತ ಹುತ್ತದ ಬಾಯಿಗೆ ಕೈ ಇಡಬೇಕಾಗ್ತದ. ಎಲ್ಲೆರ ಬದುಕು ಕಟ್ಕೊ ಹೋಗು. ಈ ಔಷಧಿ ಅರಿಯೋ ತನಕ ನಿನಗೆ ಜನಾನೇ ಬದುಕು ಕಟ್ಟತಾರ. ಆದರೆ ಜೀವಾ ಕಳಿಯೋ ಕೆಲ್ಸಕ್ಕ ಮಾತ್ರ ಕೈ ಹಾಕಬ್ಯಾಡ..." ಮಲ್ಲೇಶಿಗೆ ಅದನ್ನು ಮೀರುವಷ್ಟು ಬುದ್ಧಿನಾದರೂ ಎಲ್ಲಿ ಬೆಳೆದಿತ್ತು..?
* * *
- ಸಂತೋಷಕುಮಾರ ಮೆಹೆಂದಳೆ

No comments:
Post a Comment