Sunday, November 22, 2015

ಅವಳಿಲ್ಲದೆ ಬದುಕು ಭೂಮಿ ಎರಡೂ ಇಲ್ಲ 

ಬದುಕಿದರೆ ಸಾಕು ಎನ್ನುವ ಪರಿಸ್ಥಿತಿ ಬಂದಾಗ, ತಾಕತ್ತನ್ನೆಲ್ಲ ಸೇರಿಸಿಕೊಂಡು ಎದ್ದು ನಿಲ್ಲುವವಳೇ ಅವಳು. ಆ ಧಿಶಕ್ತಿಗೆ ಇದಿರಿಲ್ಲ. ಎಲ್ಲ ಇದ್ದವರು ಇವತ್ತು ಬದುಕು ಗೆಲ್ಲುವುದು ದೊಡ್ಡದಲ್ಲ. ಆದರೆ ಏನೂ ಇಲ್ಲದ ಸ್ಥಿತಿಯಲ್ಲಿ ಕಾಲೂರಿ ನಿಲ್ಲುವುದಿದೆಯಲ್ಲ ಅದನ್ನು ಅಮ್ಮ... ಮಾತ್ರ ಮಾಡಬಲ್ಲಳು.

ಶ್ರೀಕುಮಾರ್ ಎನ್ನುವ ದೇವರೂಪಿ ಮಲೆಯಾಳಿ ಡಾಕ್ಟ್ರು ಆ ಮಗುವಿನ ಮುಗ್ಧತೆಗೂ ಅದರ ತುಂಟತನಕ್ಕೂ ಯಾವ ಪ್ರಶ್ನೆಯನ್ನೂ ಕೇಳದೆ ಅರ್ಧ ಖರ್ಚನ್ನು ಮಾಫಿ ಮಾಡಿಸಿದ್ದರು. ಇನ್ನರ್ಧದ ವ್ಯವಸ್ಥೆ ಮಾಡಿಕೊಂಡು ಬನ್ನಿ ಎಂದಿದ್ದರು. ಬರುವ ಗುರುವಾರಕ್ಕೆ ದಿನಾಂಕ ನಿಗದಿಯಾಗಿದ್ದನ್ನು ಯಾವ ಕಾರಣಕ್ಕೂ ಮುಂದಕ್ಕೆ ಹಾಕುವಂತಿರಲಿಲ್ಲ. ಪ್ರತಿ ನಿಮಿಷವೂ ಮಗು ಕೈಯಿಂದ ಜಾರುತ್ತಲೇ ಇತ್ತು. ಕಾರಣ ವೈದ್ಯರು ನೇರವಾಗಿ ಮಗು ಆಗಲೇ ಎರಡನೇ ಹಂತ ದಾಟುವ ಸ್ಥಿತಿಯಲ್ಲಿದೆ ಎನ್ನದಿದ್ದರೂ, ಅವರ ಮಾತಿನ ಧಾಟಿಯಲ್ಲೇ ಯಾವುದೋ ಅನಾಹುತದ ಮುನ್ನೆಚ್ಚರಿಕೆ ಉಷಾಳಿಗೆ ಸಿಕ್ಕಿಹೋಗಿತ್ತು. ಆಕೆಯ ಎದುರಿಗೆ ಕೇವಲ ಬದುಕು ಮತ್ತು ಮಗು ಎರಡೇ ಕಾಣಿಸುತ್ತಿತ್ತು. ಅಷ್ಟೆ..
ಯಾವ ಧೈರ್ಯವೋ ಉಷಾ ಆವತ್ತು ನೇರ ಗಂಡನ ಮನೆಗೆ ನುಗ್ಗಿ ಹೋಗಿದ್ದಳು. ಮನೆಯಲ್ಲಿದ್ದವರು ಏನು, ಯಾಕೆ, ಎನ್ನುತ್ತಾ ಎಂದು ಆಕೆಯನ್ನು ತಡೀಬೇಕಾ..ಬೇಡವಾ.. ಎನ್ನುವಷ್ಟರಲ್ಲಿ ತನ್ನ ರೂಮಿಗೆ ನುಗ್ಗಿದವಳೆ ತನ್ನದೆನ್ನುವ ಚೂರುಪಾರು ಬಂಗಾರ, ಒಡವೆ ಇತ್ಯಾದಿಯನ್ನೆಲ್ಲಾ ಗಂಟು ಕಟ್ಟಿಕೊಂಡು ಅದಾಗಲೇ ಅರ್ಧ ಜೀರ್ಣವಾಗಿದ್ದ ಗಾಡಿ ಹತ್ತಿ ಹೊರಬಿದ್ದಿದ್ದಳು. ಆಕೆಯನ್ನು ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ.
ಆ ಕ್ಷಣಕ್ಕೆ ಅಕೆಗೆ ತೋಚಿದ್ದು ಅದೊಂದೆ. ಮೊದಲು ಮಗುವಿನ ಮೂಗಿನಿಂದ ಆ ಗಲೀಜು ಗೆಡ್ಡೆಯನ್ನು ಕಿತ್ತು ಹಾಕಿಸಬೇಕು. ಆಮೇಲೆ ಏನೇ ಕಷ್ಟವಾಗಲಿ ಮಗುವನ್ನು ಸಾಕುತ್ತೇನೆ. ಹಾಗೆಂದುಕೊಂಡವಳೆ ಇದ್ದಬದ್ದ ಪುಡಿಗಾಸು, ಸ್ನೇಹಿತೆಯರ ಕೈಸಾಲ ವೈದ್ಯರ ಮುಂದೆ ಗುಡ್ಡೆ ಹಾಕಿ ಕೈಮುಗಿದಿದ್ದಳು. ಅವರಿಗೂ ಇದೊಂದು ರೀತಿಯ ಕಷ್ಟದ ಕೆಲಸವಾಗಿಬಿಟ್ಟಿತ್ತು. ಕ್ಯಾನ್ಸರ್‌ನ ಚಿಕಿತ್ಸೆಗೆ ಆಪರೇಷನ್ ಒಂದು ಹಂತವಾದರೆ ಅದರ ನಂತರದ್ದೇ ಒಂದು ಅವಸ್ಥೆ. ಅದರಲ್ಲೂ ಇಂತಹ ತೀರ ಕ್ಲಿಷ್ಟಕರವಾದ ಜಾಗದಲ್ಲಿ ದುರ್ಮಾಂಸ ವ್ಯಾಪಿಸಿದ್ದರೆ ಅದೊಂದು ಅತಿದೊಡ್ಡ ಚಾಲೆಂಜು. ಕತ್ತರಿ ಪ್ರಯೋಗ ನಡೆಯುವಾಗ ದೇಹದ ಇತರ ಸಂಕೀರ್ಣ ಭಾಗಗಳೂ ಅಲ್ಲಿ ಬಲಿಯಾಗಿಬಿಡುವ ಸಾಧ್ಯತೆ ಹೆಚ್ಚು. ಹಾಗಾಗಿ ಇಲ್ಲಿ ಬರೀ ಕ್ಯಾನ್ಸರ್ ಆಗಿದೆ ಎನ್ನುವಂತೆ ಅಲ್ಲದಿದ್ದರೂ ಮೂಗಿನ ಒಳಭಾಗದಿಂದ ಆರಂಭವಾದ ದುರ್ಮಾಂಸದ ಬೆಳೆವಣಿಗೆ ಕಣ್ಣಿನ ಹಿಂಭಾಗಕ್ಕೂ ವ್ಯಾಪಿಸಿ ಅಲ್ಲಿಂದ ಗಂಟಲಿನ ಅನ್ನನಾಳದ ಮೇಲೂ ಬೇರು ಬಿಡಲಾರಂಭಿಸಿತ್ತು (‘ಮೆನಿಂಗ್‌ಝಿಯೋಮಾ’ದ ಮೂರನೆಯ ಹಂತದಿಂದ ವಾಪಸ್ಸು ಬಂದೂ ಚೆಂದವಾಗಿ ಬದುಕುತ್ತಿರುವ ಗೆಳತಿಯದ್ದೊಂದು ಸೂರ್ತಿದಾಯಕ ಕಥೆ. (ಅವಳು ಹೂಂ.. ಅಂದಲ್ಲಿ ಬರೆದೇನು..)
ಅಷ್ಟಕ್ಕೂ ವೈದ್ಯರೇನು ದೇವರಲ್ಲವಲ್ಲ. ಪೂರ್ತಿ ಸ್ವಚ್ಛ ಮಾಡುವ ಭರದಲ್ಲಿ ಯಾವ ಭಾಗ ಹಾನಿಗೊಳಗಾದರೂ ಆಯಾ ಅಂಗಾಂಗಗಳು ಕೈಕೊಡುತ್ತವೆ. ಅದರಲ್ಲೂ ಮೂಗಿನ ಒಳಭಾಗದಿಂದ ಆರಂಭವಾಗಿ, ಪ್ರಮುಖ ಅಂಗವಾಗಿರುವ ಕಣ್ಣಿನ ಹಿಂಭಾಗಕ್ಕೆ ಲಗ್ಗೆ ಇಟ್ಟಿರುವ ಮಾಂಸವನ್ನು ಕತ್ತರಿಸುವುದರೊಂದಿಗೆ ಮತ್ತೆ ಬೆಳೆಯದಂತೆ ನೋಡಿಕೊಳ್ಳಬೇಕು. ಇದೆಲ್ಲವೂ ಒಂದು ಹಂತವಾದರೆ, ಮುಖ ಮೂತಿ ಕತ್ತರಿಸದೆ ಎಲ್ಲವನ್ನೂ ನಳಿಕೆಯ ಮೂಲಕ ಮಾಡಲು ನಿರ್ಧರಿಸಿದ್ದರಿಂದ ಆಗುವ ತೊಡಕಿನ ಕಾರ್ಯಾಚರಣೆ ಎನ್ನುವುದಿನ್ನೂ ದೊಡ್ಡ ತೊಡಕು. ಪ್ರತಿ ಹಂತದಲ್ಲೂ ದೇಹ ಸವಾಲೊಡ್ಡುತ್ತಿರುತ್ತದೆ.
ಇವತ್ತಿಗೂ ಜನಸಾಮಾನ್ಯರಿಗೆ ವಿಸ್ಮಯಕಾರಿ ಕ್ಷೇತ್ರವಾಗಿರುವ ವೈದ್ಯಕೀಯದ ತಜ್ಞರು ಮಗುವನ್ನು ಕರೆದೊಯ್ಯುವಾಗ ಕೈಯದುಮಿ ಸಾಂತ್ವನ ಹೇಳಿದ್ದಲ್ಲದೇ, ಸತತವಾಗಿ ಮೂರೂವರೆ ತಾಸುಗಳ ಗುದ್ದಾಟದ ನಂತರ ಅಂಗೈ ಹಿಡಿ ತುಂಬುವಷ್ಟಿದ್ದ ದುರ್ಮಾಂಸವನ್ನು ತೆಗೆದು ಈಚೆ ತಂದು ಹಾಕಿದ್ದರು. ನಿರಿಕ್ಷೆಗೂ ಮೀರಿದ ಯಶಸ್ಸು ಅವರ ಕೈಗೂಡಿತ್ತು. ಮಗು ಸರಿಯಾಗಿ ಮರುದಿನ ಮಧ್ಯಾಹ್ನ ಕಣ್ಣು ಬಿಟ್ಟಿತ್ತು. ಆದರೆ ಅದರ ಅತಿ ದೊಡ್ಡ ಸಂಪತ್ತಾಗಿದ್ದ ಧ್ವನಿ ಸತ್ತುಹೋಗಿತ್ತು. ಆತುರಕ್ಕೆ ಬಿದ್ದು ಮಗು ಬಾಯಿ ಬಿಟ್ಟೀತು ಎಂದು ಅದರ ತುದಿಗಳನ್ನು ಸೇರಿಸಿಟ್ಟಿದ್ದರು. ಇನ್ನೇನಿದ್ದರೂ ಅದು ಪೂರ್ತಿ ಹಂತಕ್ಕೆ ಬರುವವರೆಗೆ ಕಣ್ಣಲ್ಲೇ ಮಾತಾಡಬೇಕಿತ್ತು.
ಆವತ್ತಿನ ಸ್ಥಿತಿಯನ್ನು ನೋಡಿ ನಾನಂದುಕೊಂಡಿದ್ದೆ. ಸ್ವತಃ ದೇವರಿಗೂ ಮಗುವಿನ ಚೆಂದಕ್ಕೆ ಒಳಗೊಳಗೇ ಉರಿದಿರಬೇಕು. ಇಲ್ಲದಿದ್ದರೆ ಇಂಥಾ ಮಗುವಿಗೆ ಇಂಥದ್ದೊಂದು ನೋವನ್ನು ಯಾಕಾದರೂ ಕೊಡಬೇಕಿತ್ತು? ಆದರೆ ಅದರಮ್ಮನಿಗೆ ಆದರ ಕಡೆಗೂ ಲಕ್ಷ್ಯವಿರಲಿಲ್ಲ. ಸದ್ಯಕ್ಕೆ ಮೊದಲು ಮಗು ನೆಟ್ಟಗಾಗಬೇಕು. ಆಕೆ ಈಗ ಅರ್ಧ ನಿಟ್ಟುಸಿರು ಬಿಟ್ಟಿದ್ದಳು. ಕಾರಣ ಆಪರೇಷನ್ ನಂತರದ ಎರಡು ವರ್ಷ ಕಾಲ ಸತತ ಉಳಿದ ಅಂಶವನ್ನು ಕಿಮೋ ಮೂಲಕ ಸುಡುವ ಕಾರ್ಯವಿತ್ತಲ್ಲ. ಅದು ಪೂರ್ತಿ ಅವಳ ಬದುಕನ್ನೇ ನುಂಗುವಂತೆ ಮಾಡಲಿತ್ತು. ಇವತ್ತು ಇದ್ದುದರಲ್ಲಿ ಬೆಂಗಳೂರಿನಲ್ಲಿ ಕೈಗೆಟುಕುವ ದರದಲ್ಲಿ ಕಿಮೋ ಮಾಡುತ್ತಿರುವುದು ಕಿದ್ವಾಯಿಯೇ ಎಂದರೂ ಸರಿನೇ. ಉಳಿದೆಡೆ ಇಂಥಾ ಒಂದು ಸಾವಿನ ಬಾಯಿಯಿಂದ ಜೀವವನ್ನು ಬದುಕಿಸಿಕೊಳ್ಳೋದಿದೆಯಲ್ಲ ಅದು ಕನಿಷ್ಠ ಐದೂ ಚಿಲ್ರೆ ಲಕ್ಷ ರೂಪಾಯಿಗಳ ಬಾಬತ್ತು. ಉಷಾದಿನ್ನೆಂಗೆ ಭರಿಸಿದಳೊ..? ಅಂತೂ ಮಗುವಿನ ಉಳಿವಿಗೆ ಆಕೆ ದೇವರಿಗೂ ಸವಾಲೊಡ್ಡಿದ್ದು ಸ್ಪಷ್ಟವಿತ್ತು.
ಮೊದಲು ಮಗು ಚೇತರಿಸಿಕೊಂಡಿತೇನೋ ಸರಿ. ಆದರೆ ಮೊದಲ ಕಿಮೋ ಆಗುತ್ತಿದ್ದಂತೆ ಮತ್ತು ಅದರ ಸೈಡ್ ಎಫೆಕ್ಟುಗಳಿಂದ ಚಿಟಿಚಿಟಿ ಮಗು ಚೀರುತ್ತಿದ್ದರೆ ಎಂತಹವರ ಎದೆಯೂ ಒಡೆದು ಹೋಗುತ್ತಿತ್ತು. ಕೈಯಿಂದ ಮುಖವನ್ನು ಅದುಮಿಕೊಳ್ಳುತ್ತಾ, ಆಗುತ್ತಿದ್ದ ನೋವನ್ನು ಭರಿಸದೆ ಚೆಂದದ ಕೆಂಪು ಕೆನ್ನೆಯ ಮಗು ಹೊರಳಾಡುತ್ತಾ ಕಿರುಚುತ್ತಿದ್ದರೆ ಮೊದಲ ಆಪತ್ತು ಬಂದಿದ್ದು ಮನೆಯ ಮಾಲೀಕನಿಂದ. ಗಂಡನ ಮನೆಯಿಂದ ಹೊರಬಿದ್ದು ಚಿಕ್ಕ ಆಸರೆ ಮಾಡಿಕೊಂಡಿದ್ದಳಲ್ಲ. ಆತ ತನ್ನ ಬಾಡಿಗೆಗೆ ಸಂಚಕಾರ ಬಂದೀತೆಂದು ನಿರ್ದಾಕ್ಷಿಣ್ಯವಾಗಿ ಹೊರ ಹೋಗಲು ಬಲವಂತ ಮಾಡಿದ್ದ. ಇದಾಗುತ್ತಿದ್ದಂತೆ ಆಕೆಯ ಗಂಡ ಕಳ್ಳತನದ ಕೇಸನ್ನು ದಾಖಲಿಸಿದ್ದ. ಪುಣ್ಯಕ್ಕೆ ಖಾಸಾ ಪರಿಚಯದ ಡಿಸಿಪಿಯೊಬ್ಬರು ಮಧ್ಯೆ ಪ್ರವೇಶಿಸಿ ಅಲ್ಲೇ ಸರಿಮಾಡಿದ್ದರು. ಉಷಾ ಯಾವ ಮುಲಾಜೂ ಉಳಿಸಿಕೊಳ್ಳದೆ, ಸ್ನೇಹಿತೆಯೊಬ್ಬಳ ಮನೆಯ ಚಿಕ್ಕ ಹೊರಕೋಣೆಯಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದಳು. ಸಣ್ಣ ಕೆಲಸಕ್ಕೆ ಹೊರಟಾಗ ಅವಳಮ್ಮ ಬಂದು ಬೆನ್ನಿಗೆ ನಿಲ್ಲುತ್ತಿದ್ದಳು.
ಅದಕ್ಕಿಂತಲೂ ಸಮಸ್ಯೆ ಶುಚಿತ್ವದ್ದು. ತೀವ್ರ ಶುಚಿತ್ವ ಮತ್ತು ಜಾಗೃತೆಯನ್ನು ಬೇಡುವ ಹಂತದಲ್ಲಿದ್ದಾಗ, ಇಂಥಾ ಮನೆಯೆನ್ನುವ ಕಿಷ್ಕಿಂಧೆಯಲ್ಲಿ ಅದನ್ನೆಲ್ಲಾ ಪಾಲಿಸಲು ಪೂರೈಸಲು ಸಾಧ್ಯವೇ ಇರಲಿಲ್ಲ. ಯಾವ ಕಾರಣಕ್ಕೂ ಮಗುವಿಗೆ ಕಾಯಿಸಿ ಆರಿಸಿದ ನೀರಿನ ಹೊರತು ಬೇರೆ ನೀರು ಪಾನೀಯ ಕುಡಿಸುವಂತಿರಲಿಲ್ಲ. ಕಾಯಿಸಿದ ನೀರಿನ ರುಚಿಗೆ ಮಗು ರೋಸಿ ಹೋಗುತ್ತಿತ್ತು. ಪಥ್ಯ ಆಹಾರ ಮತ್ತು ಕಟ್ಟು ನಿಟ್ಟಿನ ಔಷಧವನ್ನೂ ತಿನ್ನುವುದಕ್ಕೂ ತಕರಾರು ತೆಗೆಯುತ್ತಿತ್ತು. ಅದಕ್ಕಿಂತಲೂ ಮಗುವಿಗೆ ಮೈಯ್ಯೆಲ್ಲಾ ಯಾತನೆಯಾಗಿ ಚೀರುತ್ತಿತ್ತಲ್ಲ. ಆಗ ಎಂತಹವರ ಎದೆಯೂ ಒಡೆದು ಹೋಗುತ್ತಿತ್ತು. ಎರಡ್ಮೂರು ವಾರ ಕಳೆಯುವಷ್ಟರಲ್ಲಿ ಮೈಯೆಲ್ಲಾ ಕಪ್ಪಾಗಿ ಅಲ್ಲಲ್ಲಿ ಬಿಳಿಯ ಪಳೆಯುಳಿಕೆ ಉಳಿದು ತಲೆಕೂದಲೆಲ್ಲ ಉದುರಿ ಉಗುರುಗಳು ಕಪ್ಪುಗಟ್ಟಿದಂತಾಗಿ ಅದರಲ್ಲೂ ಅದಕ್ಕೆ ಗಂಟುಗಳೆಲ್ಲಾ ಹಿಂಡಿದಂತಾಗಿ, ಒಂದಾ ಎರಡಾ.. ದೇವರೇ .. ಅದರ ಎರಡೂ ಸ್ಥಿತಿಯನ್ನು ನೋಡಿದವರು ಇಂಥಾ ಪರಿಸ್ಥಿತಿಗಿಂತ ಮಗು ಹೋಗಿದ್ದರೆ ಚೆನ್ನಾಗಿತ್ತಾ ಎನ್ನಿಸದಿರುತ್ತಿರಲಿಲ್ಲ. ಪ್ರತಿ ನಿಮಿಷವೂ ಮಗುವಿನ ಬಗ್ಗೆ ಎಣಿಸುವಂತಾಗಿ ಹೋಗಿತ್ತು ಬದುಕು.
ಇದೆಲ್ಲಾ ಒಂದು ಹಂತವಾದರೆ ಪ್ರತಿ ಬಾರಿ ಆಸ್ಪತ್ರೆಗೆ ಹೋಗುವಾಗಲೂ ದುಡ್ಡು, ಸಂಬಂಧಿಸಿದ ಇತರೆ ಖರ್ಚಿಗಾಗಿ ಉಷಾಳಿಗೆ ಇನ್ನೇನು ಸ್ವತಃ ರಕ್ತ ಮಾರಿಕೊಳ್ಳುವುದೊಂದು ಬಾಕಿ ಉಳಿದಿತ್ತು. ಅವಳಮ್ಮ ಎಲ್ಲೆಲ್ಲಿಂದಲೋ ಹೊಂಚುತ್ತಿದ್ದರಾದರೂ ಅದು ದುಬಾರಿಯ ದಿನದಲ್ಲಿ ಹಿಡಿಯ ಮರಳಿನಂತೆ ಸರಿದು ಹೋಗುತ್ತಿತ್ತು. ಉಷಾ ತೀರ ನಡುಬೀದಿಗೆ ಬಂದಿದ್ದಳು. ಈ ಹಂತದಲ್ಲಿ ನನ್ನ ತಂಡ ಮತ್ತು ಸ್ನೇಹಿತರು, ಎಡಗೈದು ಬಲಗೈಗೆ ಗೊತ್ತಾಗದಂತೆ ಸಹಾಯ ಮಾಡುವ ಒಂದಿಷ್ಟು ಪುಣ್ಯಾತ್ಮರು ಜೊತೆಗೆ ನಿಂತರು. ಕೆಲವರು ವೈದ್ಯರ ಮೇಲೆ ಶಿಫಾರಸ್ಸು ತಂದು ಚಿಕಿತ್ಸೆಯ ವೆಚ್ಚ ತಗ್ಗಿಸಿದರು. ಇನ್ಯಾರೋ ಇನ್ಯಾವುದೋ ರೂಪದಲ್ಲಿ ಒಂದಿಷ್ಟು ಸಹಾಯ ಸಲ್ಲಿಸಿದರು. ಸತತ ಮೂರು ವರ್ಷದ ಹೋರಾಟದಲ್ಲಿ ಉಷಾ ಕಾಲೂರಿ ನಿಂತು ನಡೆಸಿದ ಹಣಾಹಣಿಗೆ ದೇವರೂ ಸೋತುಹೋಗಿದ್ದ. ಮಗು ಬಾಯ್ದೆರೆದು ಸ್ಪಷ್ಟವಾಗಿ ‘ಅಮ್ಮ’ ಎಂದುಬಿಟ್ಟಿತ್ತು. ಅಷ್ಟೆ ಸ್ವರ್ಗ ಎದುರಿಗಿತ್ತು. ಮಗುವಿನ ಐದನೆಯ ವರ್ಷದಿಂದ ಆರಂಭವಾಗಿದ್ದ ಕುರುಕ್ಷೇತ್ರ ಎಂಟನೇ ವರ್ಷದ ಹುಟ್ಟುಹಬ್ಬದ ಹೊತ್ತಿಗೆ ನಮ್ಮ ಟೀಮು ಅದನ್ನೆತ್ತಿ ನೆಲಕ್ಕಿಳಿಯಲು ಬಿಡದೆ ಸೆಲಿ ತೆಗೆಸಿಕೊಳ್ಳುತ್ತಿದ್ದರೆ, ಉಷ ಸುಮ್ಮನೆ ನಿಂತು ಒಮ್ಮೆ ಕಣ್ಣೊರೆಸಿಕೊಂಡಿದ್ದಳು. ಹುಟ್ಟಿಸಲಿಕ್ಕೆ ಮಾತ್ರ ಕಾರಣವಾಗಿದ್ದ ಅಪ್ಪ ಇತ್ತ ಸುಳಿದಿರಲಿಲ್ಲ.
‘ಅಲ್ಲ..ಹೆಣ್ಣು ಮಗು ಹುಟ್ಟಿದರೆ ಯಾಕೆ ಹಿಂಗಾಡ್ತಾರೆ..? ಹೆಣ್ಣೆ ಹುಟ್ಟದಿದ್ರೆ ಇವರ ತೆವಲಿಗೆ ಯಾರು ಸಿಗ್ತಿದ್ರು..? ಹೆಂಡತಿ ಅಂದರೆ ಬರೀ ಸೆಕ್ಸ್‌ಗೆ, ಗಂಡು ಮಕ್ಕಳು ಹುಟ್ಟಿಸಲಿಕ್ಕೆ ಅಂತಾ ಯಾವನು ಇವರ ತಲೆಗೆ ತುಂಬಿದನೋ ಮಾರಾಯ ಅವನನ್ನು ಹಡೆದವಳೂ ಹೆಂಗಸೇ ಅಲ್ವಾ..? ಹೀಗಾಗೋದೇ ಆದರೆ ಮದುವೆ ಅಂತಾ ಮಾಡ್ಕೊಂಡು ಯಾಕೆ ಹೆಣ್ಮಕ್ಕಳ ಬದುಕು ಹಾಳು ಮಾಡ್ಬೇಕು..? ಇಂಥಾ ಹಗರಣಕ್ಕಿಂತ ಸುಮ್ಮನೆ ಇರೋದೆ ಸುಖ..’ ಉಷಾ ಪಡಬಾರದ ಕಷ್ಟಕ್ಕೀಡಾಗಿ ಹೊರಬಂದು ಅಲವತ್ತುಕೊಳ್ಳುತ್ತಿದ್ದರೆ ಪಕ್ಕ ನಿಂತಿದ್ದವನು ಸುಮ್ಮನೆ ಬೆನ್ನು ತಡುವಿ ಸಮಾಧಾನಿಸಿದ್ದೆ. ಹೆಚ್ಚಿಗೆ ಹೇಳಲು ದೇವರು ಪದಗಳನ್ನೂ ಉಳಿಸಿರಲಿಲ್ಲ.ಕಾರಣಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)


Monday, November 16, 2015

ಅದು ಗುಣಸಂಧಿಯಂತಹ ಕಾಲ…

Ed 2ಗಂಡನೆಂಬುವ ಮಗು ಹುಟ್ಟಿಸಿ ಕೈಬಿಟ್ಟುಬಿಟ್ಟರೆ, ಸಾಮಾಜಿಕ ಜವಾಬ್ದಾರಿ ಮತ್ತು ಕೌಟುಂಬಿಕ ಸಾಮರಸ್ಯ ಒಲ್ಲೆ ಎನ್ನುವ ಗಂಡಸರಿಗೆ ಮದುವೇನೂ ಒಂದು ತೆವಲಾಗಿಬಿಟ್ಟರೆ ಆ ಸುಳಿಯೊಳಗೆ ಸಿಗುವ ಅವಳಂತೂ ಬಿಡಿ, ಮಕ್ಕಳೂ ದುರ್ಭರ ಪರಿಸ್ಥಿತಿಗೆ ಈಡಾಗಿಬಿಡುತ್ತಾರೆ. ಬದುಕಿಸುವವರು ಯಾರು..?
‘ಹೆಣ್ಣುಗಳೆಂದರೆ ಬರೀ ಸೆಕ್ಸ್​ಗೆ ಮಾತ್ರ ಅಂತಾ ಗಂಡಸರಿಗೆ ಯಾಕೆ ಅನ್ನಿಸ್ತದೆ..? ಹಂಗ ಅನ್ನಿಸೋದೆ ಆದರೆ ಮದುವೆ ಯಾಕ ಆಗಬೇಕು? ಯಾವಾಗ ಬೇಕು ಆವಾಗ ಉಪಯೋಗಿಸ್ಕೊಳ್ಳೊಕೆ ಅಂತಾ ಇರ್ತಾರಲ್ಲ ಅಲ್ಲೇ ಕೆಲಸ ಮುಗಿಸ್ಕೊಬಹುದಲ್ಲ…’ ಕಟ್ಟೆಯ ಮೇಲೆ ಪಕ್ಕದಲ್ಲಿ ಕೂತಿದ್ದು ಶೂನ್ಯವನ್ನು ದಿಟ್ಟಿಸುತ್ತ, ಜೀವನದ ತಿರುವಿನಲ್ಲಿ ಅರ್ಥವಾಗದೆ ನಿಂತುಬಿಟ್ಟಿದ್ದ ಉಷಾ ಸೋತು ಸುಣ್ಣವಾದ ಧ್ವನಿಯಲ್ಲಿ ವಿಚಾರಿಸುತ್ತಿದ್ದರೆ ಯಾವ ಉತ್ತರಕ್ಕೂ ಈಡಾಗದೆ ನಾನು ಪಿಳಿಪಿಳಿ ಮಾಡುತ್ತ ಸುಮ್ಮನೆ ಕೂತಿದ್ದೆ. ತಕ್ಷಣಕ್ಕೆ ಉತ್ತರಿಸುವ ಸಂದರ್ಭವೂ ಅದಾಗಿರಲಿಲ್ಲ. ಸಹಜ ಕೌಟುಂಬಿಕ ದೌರ್ಜನ್ಯದ ಕೇಸಿಗಾದರೆ ‘ಎಲ್ಲಿ ನಿನ್ನ ಗಂಡ.. ತಂದು ಕೂರಿಸಿಕೊಂಡು ಸರಿ ಮಾಡೊಣ್ವಾ..’ ಎನ್ನಬಹುದಾದ ಸೀನ್ ಕೂಡ ಅಲ್ಲಿರಲಿಲ್ಲ.
ತೀರಾ ಗಂಭೀರ ಇರಲಿಕ್ಕಿಲ್ಲ ಬಿಡು ಎಂದು ನಾನೂ ಆಕೆಯ ಕರೆಗಳಿಗೆ ಆಗೀಗ ಹೂಂ.. ಹಾಂ.. ಎನ್ನುತ್ತಲೇ ನಿರ್ಲಕ್ಷ್ಯ ಮಾಡಿ ನನ್ನ ಪಾಡಿಗೆ ಉಳಿದುಬಿಟ್ಟಿದ್ದೆ. ಇನ್ಯಾವತ್ತೋ ಕರೆ ಮಾಡಿ ಮಾತಾಡಿದಾಗಲೇ ಗೊತ್ತಾಗಿದ್ದು ಆಕೆ ಆಗಲೇ ಮನೆ ಬಿಟ್ಟು ಸುಮಾರು ಸಮಯವಾಗಿದೆ ಎನ್ನುವ ವಿಷಯ. ಬಾಕಿ ಏನೇ ಆದರೂ ಹೆಣ್ಣುಮಕ್ಕಳು ಸಹಿಸಿಬಿಡುತ್ತಾರೆ. ಆದರೆ ಮಕ್ಕಳು ಮತ್ತು ಕುಟುಂಬ ದಾಂಪತ್ಯದ ವಿಷಯದಲ್ಲಿ ಅವರ ಡೆಡಿಕೇಶನ್ನಿನ ತಾಕತ್ತೇ ಬೇರೆ. ಅವಶ್ಯಕತೆ ಮತ್ತು ಅಗತ್ಯತೆ ಇದ್ರೆ ದೇವರಿಗೆ ಬೇಕಿದ್ದರೂ ಸೆಡ್ಡು ಹೊಡೆದು ಬಿಡುತ್ತಾರೆ.
ಕೌಟುಂಬಿಕ ದೌರ್ಜನ್ಯವನ್ನೂ ಸಹಿಸಿಕೊಂಡು ಜೀವನ ದೂಡುತ್ತಿದ್ದ ಉಷಾ, ಯಾವಾಗ ಮಗುವಿನ ಬದುಕು ಹಳ್ಳ ಹಿಡಿದೀತು ಎನ್ನಿಸಿತೋ ಸಟಕ್ಕನೆ ಎದ್ದು ನಿಂತಿದ್ದಳು. ಮುಂದೇನು? ಎನ್ನುವ ಎರಡನೆಯ ಯೋಚನೆಗೂ ಮೊದಲೆ ಮನೆ ತೊರೆದಿದ್ದಳು. ತೀರಾ ಏನೆಂದರೆ ಏನೂ ಆದಾಯವಿಲ್ಲದಿದ್ದರೂ ನಾಳೆ ಏನು ಎನ್ನುವುದು ಗೊತ್ತೇ ಇಲ್ಲದ ಪರಿಸ್ಥಿತಿ. ಹೆಣ್ಣುಮಗಳೊಬ್ಬಳ ಸ್ವಾಭಿಮಾನ ಅದು. ಅಮ್ಮನ ಮನಸ್ಥಿತಿಯ ಔನ್ನತ್ಯದ ಹೆಜ್ಜೆ ಅದು. ಉಷಾಳ ಎದುರಿಗೆ ಇದ್ದುದು ಬರೀ ಮಗುವಿನ ಬದುಕು ರೂಪಿಸುವ ಏಕಮಾತ್ರ ಗುರಿ. ಆದರೆ ಅವಳಿಗೂ ಅರಿವಿಲ್ಲದ್ದೇನೆಂದರೆ ಪರಿಸ್ಥಿತಿ ತೀರಾ ಅಂಚಿನಲ್ಲಿ ಬಂದು ನಿಂತಿತ್ತು.
ಆವತ್ತು ಆಕೆಯ ಮಗುವಿನ ರಿಪೋರ್ಟ್ ಬರುವುದಿತ್ತು. ತೀರಾ ನಾಲ್ಕೈದು ವರ್ಷದ ಪುಟ್ಟ ಹುಡುಗಿ ಅದು. ಪದೇಪದೆ ರಕ್ತ ಬಸಿದುಕೊಳ್ಳುತ್ತಿದ್ದ ನರ್ಸ್​ಗಳಿಗೂ, ‘ಆಗೀಗೊಮ್ಮೆ ಕೈಕಾಲು ಆಡಿಸಿ ನೋಡು ಕಣ್ಣ ಕೆಳಗಿನ ಪಾಪೆ ಹಿರಿದಿರಿದು ನೋಡಿ, ಉಸಿರೆಳೆದುಕೋ.. ಹಾಂ.. ಈಗ ಬಿಡು,’ ಎನ್ನುವ ಅರ್ಥವಾಗದ ಕ್ರಿಯೆಗಳಿಂದ ಬದುಕಿದ್ದಾಗಲೇ ಸಾಯಿಸುತ್ತಿದ್ದ ಪರೀಕ್ಷೆಗಳಿಗೀಡಾಗಿ, ಯಾವಾಗ ಆಸ್ಪತ್ರೆಯಿಂದ ಹೊರಕ್ಕೆ ಹೋದೇನೋ ಎಂದು ಚಡಪಡಿಸುತ್ತಿತ್ತು ಮಗು. ತುಂಬ ಬೆಳ್ಳಗೆ ಗುಂಡಗೆ ಮುದ್ದು ಮುದ್ದಾಗಿತ್ತು. ಮುಗ್ಧತೆಗಿಂತಲೂ ಚೆಂದವಿತ್ತು ಅದು. ಕಡುಕಪ್ಪು ಕಂಗಳ ಮೇಲೆ ಹಾರಾಡುತ್ತಿದ್ದ ಜೊಂಪೆ ಕೂದಲನ್ನು ಗದರಿಸುವಂತೆ ಎಡಗೈಯಿಂದ ಆಚೀಚೆ ತಳ್ಳುತ್ತಾ, ಇನ್ನೊಂದು ಕೈಯಿಂದ ದೊಗಳೆ ಚೆಡ್ಡಿ ಎಳೆದುಕೊಂಡು ಓಡಾಡುತ್ತಿದ್ದರೆ ..ಒಹ್.. ನಾನೂ ಮತ್ತೊಮ್ಮೆ ಮಗುವಾಗಬಾರದಿತ್ತೆ ಎನ್ನಿಸುತ್ತಿತ್ತು ಅದರ ಮುಗ್ಧತೆಗೆ. ಅದು ಎಲ್ಲೆಂದರಲ್ಲಿ ಲುಟುಲುಟು ಉರುಳುತ್ತಿದ್ದರೆ ಉಷಾಳಿಗಂತೂ ದೇವರೇ ದೃಷ್ಟಿ ಹಾಕಬೇಡಪ್ಪಾ ಎನ್ನುವಂತಾಗುತ್ತಿತ್ತು.
ಅದಕ್ಕಾಗಿ ಕಾಡಿಗೆಯ ಎರಡ್ಮೂರು ಗೆರೆಗಳನ್ನು ಅದರ ಮುಖಕ್ಕೆಳೆದು, ಮುಖವನ್ನೂ ಗಲೀಜು ಮಾಡಿ, ತಿಂದಾದ ನಂತರ ಕೆನ್ನೆಗೆ ಮೆತ್ತಿಕೊಂಡಿದ್ದನ್ನು ಒರೆಸದೆ ಹಾಗೆ ಬಿಟ್ಟು, ಕೂದಲನ್ನು ಬಾಚದೆ, ಮಾಸಿದ ಅಂಗಿ ಅದರ ಮೇಲೆ ಅದಕ್ಕೊಪ್ಪದ ಒಂದು ದೊಗಳೆ ಚೆಡ್ಡಿ ಹಾಕಿ ಹುಡುಗಿನಾ, ಹುಡುಗನಾ ಎನ್ನುವಂತೆ ಕನ್ಪ್ಯೂಸ್ ಮಾಡಿ, ಹೀಗೆ ಹಲವು ವಿಧದಲ್ಲಿ ಅದರ ಚೆಂದವನ್ನು ನೋಡುಗರ ದೃಷ್ಟಿಯಿಂದ ಮರೆಮಾಚಲು ಯತ್ನಿಸುತ್ತಿದ್ದಳು. ಆದರೆ ಹೂವಿಗೆ ಬೇಲಿಯ ಹಂಗೇ..? ಅಂಥ ಅರೆಬರೆ ವೇಷದಲ್ಲೂ ಮಗು ಪೆದ್ದ ನಗೆ ನಗುತ್ತಾ, ಕೈ ಬೀಸುತ್ತ, ಸರಸರನೇ ಕಾಂಪೌಂಡು ಗೋಡೆ ಹತ್ತಿ ಕೂರುತ್ತ ದಾರಿಯಲ್ಲಿ ಹೋಗುವವರ ಅಕರ್ಷಿಸುತ್ತಿತ್ತು. ಆದರೆ ಅದು ಆಡಾಡುತ್ತಲೇ ಉಸಿರು ಬಿಗಿ ಹಿಡಿದಂತಾಗಿ ಕಿರುಚುತ್ತಿತ್ತು. ಇದ್ದಕ್ಕಿದ್ದಂತೆ ತಿದಿಯೊತ್ತಿದ್ದಂತೆ ಅದಕ್ಕೆ ಉಸಿರುಕಟ್ಟುತ್ತಿತ್ತು.
ಅಸಲಿಗೆ ಮಗುವಿಗೂ ಏನೂ ತೋಚುತ್ತಿರಲಿಲ್ಲ. ಆಗೀಗ ಉಸಿರು ಕಟ್ಟುತ್ತಲೇ ಮೂಗು ಸಿಂಡರಿಸಿಕೊಂಡು ಓಡಾಡುತ್ತಿತ್ತು. ರಾತ್ರಿಯಾದಂತೆ ಸಮಸ್ಯೆ ಉಲ್ಬಣಿಸುತ್ತಿತ್ತು. ಶ್ವಾಸಕೋಶಕ್ಕೆ ವಾಯುವಿನ ಕೊರತೆಯಾಗಿಬಿಡುತ್ತಿತ್ತು. ಅಷ್ಟೆ.. ಮಗು ಎದ್ದು ಕೂತು ಬಿಡುತ್ತಿತ್ತು. ರಾತ್ರಿಯಿಡೀ ಜಾಗರಣೆ. ಪರಿಸ್ಥಿತಿ ಹೀಗೆ ಮುಂದುವರಿಯುತ್ತಿದ್ದಂತೆ ಗಂಭೀರವಾದ ಚಿಕಿತ್ಸೆಯ ಅಗತ್ಯ ಕಂಡುಬರತೊಡಗಿತ್ತು. ಆದರೆ ಮೊದಲ ಒಂದೆರಡು ಮಾಮೂಲಿನ ಚಿಕಿತ್ಸೆ ಫಲಕಾರಿಯಾಗದೆ ಸ್ಥಳೀಯ ವೈದ್ಯರು ಮಗುವನ್ನು ಪರಿಣಿತರ ಕಡೆಗೆ ಒಯ್ಯುವಂತೆ ಸೂಚಿಸುತ್ತಿದ್ದಂತೆ ಮನೆಯಲ್ಲಿದ್ದವರ ವರ್ತನೆ ಬದಲಾಗತೊಡಗಿತ್ತು.
ಆದರೆ ದುರದೃಷ್ಟ ಎಂದರೆ ಪುಟ್ಟ ಕಲಾಕೃತಿಯಂತಹ ಮಗುವನ್ನು ಕೂಡಲೇ ರಕ್ಷಿಸಿಕೊಳ್ಳಬೇಕಾಗಿದ್ದ ಅಪ್ಪನಾದವ, ಮೊದಲೇ ಹೆಣ್ಣು ಮಗು ಎಂದು ಬೇಸರಿಸುತ್ತಿದ್ದವ ಈಗ ತೀರಾ ಹೋದರೆ ಹೋಗಲಿ ಎನ್ನುವ ಹಂತ ತಲುಪಿಬಿಟ್ಟಿದ್ದ. ಯಾವ ಲೆಕ್ಕದಲ್ಲೂ ಚಿಕಿತ್ಸೆಗೆ ಖರ್ಚು ಮಾಡುವ ಲಕ್ಷಣವೇ ಇರಲಿಲ್ಲ. ಅವನ ನಿರ್ಲಕ್ಷ್ಯಂದ ಮತ್ತು ಪ್ರತಿ ದಿನ ಮಗು ಒದ್ದಾಡುತ್ತಿದ್ದ ಪರಿಸ್ಥಿತಿಗೆ ಉಷಾ ನಿಮಿಷಗಳಲ್ಲಿ ಸಮಯವನ್ನು ಲೆಕ್ಕ ಹಾಕುವ ಹಂತಕ್ಕೆ ಬಂದಿದ್ದಳು. ಅಮ್ಮನ ಮನೆಯಿಂದ ಅನುಕೂಲಕರವಾದ ಪರಿಸಿತ್ಥಿಯೇನೂ ಇರಲಿಲ್ಲ. ಆದರೆ ಇವತ್ತಿಗೂ ಪ್ರತಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಬೆಂಬಲ ಮತ್ತು ಒಂದು ಒಲವು ಅಂತಾ ಸಿಕ್ಕುತ್ತಿದ್ದರೆ ಅದು ಅಮ್ಮನ ಮನೆಯಿಂದಲೇ ಎನ್ನುವುದು ಇತರ ಹೆಣ್ಣುಮಕ್ಕಳಿಗಾದಂತೆ ಉಷಾಳಿಗೂ ಆಗಿದ್ದು ನಮ್ಮ ಪ್ರಸ್ತುತ ಪರಿಸ್ಥಿಯ ವ್ಯಂಗ್ಯ ಮತ್ತು ವಿಪರ್ಯಾಸ. ಯಾವ ಲೆಕ್ಕದಲ್ಲೂ ಸಹಾಯ ಸಲ್ಲಿಸುವ ಸ್ಥಿತಿಯಲ್ಲಿ ಇಲ್ಲದ ಅವಳಮ್ಮ, ಉಷಾಳ ಕೈಯಿಂದ ಮಗುವನ್ನು ಒಯ್ದು ಡಾಕ್ಟರರ ಎದುರಿಗಿಟ್ಟು ಕೈ ಮುಗಿದಿದ್ದಳು. ಕೆಂಪು ಕೆನ್ನೆಯ ಲುಟು ಲುಟು ಎನ್ನುತ್ತಿದ್ದ, ಒಂದು ನಿಮಿಷ ನಿಲ್ಲದ, ಚೆಂದಗೆ ಟೇಬಲ್ ಪಕ್ಕ ನಿಂತು ಅವರ ಸ್ಟೇತಾಸ್ಕೋಪನ್ನೆ ಕಿತ್ತುಕೊಳ್ಳುವಂತೆ ನೋಡುತ್ತಿದ್ದ ಮಗುವಿನ ಆ ಚೆಲುವಿನ ಹಿಂದೆ ಕಹಿ ಸತ್ಯವೊಂದು ಮನೆ ಮಾಡಿರಬಹುದೆನ್ನುವ ಅಂದಾಜು ಆ ಕ್ಷಣಕ್ಕೆ ವೈದ್ಯರಿಗೂ ಇರಲಿಲ್ಲ. ಆದರೆ ಅಮ್ಮನಾದವಳು ಹೇಗೆ ಸುಮ್ಮನಿದ್ದಾಳು..?
ಅಲ್ಲಿಂದಿಲ್ಲಿಗೆ ಓಡಾಡಿದ ಮಗುವಿನ ಮೈಯಿಂದ ಕಾಲು ಲೀಟರ್​ನಷ್ಟು ರಕ್ತ ಹಲವು ಪರೀಕ್ಷೆಗೆಂದು ಬಸಿದು ಆದ ಮೇಲೆ ಗೊತ್ತಾಗಿತ್ತು. ಮಗುವಿನ ಮೂಗಿನ ಮೇಲ್ಭಾಗದಲ್ಲಿ ಅದ್ಯಾವುದೋ ಅರಿವಿಗೆ ಸಿಗದ ಗಡ್ಡೆ ಬೆಳೆದು ಕೂತುಬಿಟ್ಟಿತ್ತು. ಅದನ್ನು ಮೂಗಿನ ಮೂಲಕ ನಳಿಕೆ ತೂರಿಸಿ, ಬಾಯಿಯಿಂದ ಅದರ ಒಂದಷ್ಟು ಮಾದರಿ ಸಂಗ್ರಹಿಸಿ ಹೀಗೆ ಏನು ಮಾಡಿದರೂ ಸಾಧ್ಯವಾಗದೆ ಈಗ ಮೂರನೆಯ ಬಾರಿಗೆ ಆ ಪರೀಕ್ಷೆ ಫಲಿತಾಂಶಕ್ಕಾಗಿ ಕಾದು ಕೂತಿದ್ದಳು ಉಷಾ. ಒಂಟಿಯಾಗಿ ನಿಂತ ಅವಳ ಜತೆಗಿದ್ದು ‘ಏನಾಗಲ್ಲ ಬಿಡು’ ಎಂದು ಕೊಂಚ ಧೈರ್ಯ ಹೇಳಲೂ ಯಾರೂ ಇರಲಿಲ್ಲ. ಪ್ರತಿಯೊಬ್ಬರ ಅಸಲಿತನ ಗೊತ್ತಾಗುವುದೇ ಇಂಥ ಸಂದರ್ಭದಲ್ಲಿ. ಚೂರುಪಾರು ಸ್ನೇಹಿತರೂ ‘ಹೌದಾ.. ಒಳ್ಳೇ ಡಾಕ್ಟರಿಗೆ ತೋರಿಸು’ ಎಂದು ಅತ್ಯಂತ ಉಚಿತ ಸಲಹೆ ಕೊಟ್ಟರೇ ವಿನಾ ‘ನಿನ್ನ ಜೊತೆ ನಾನೂ ಇದ್ದೀನಮ್ಮ’ ಎನ್ನಲಿಲ್ಲ.
ಸರಿಯಾಗಿ ಆಟೋದಲ್ಲಿ ಓಡಾಡಲು ಆಗುವಷ್ಟೂ ದುಡ್ಡಿರಲಿಲ್ಲ. ಅಮ್ಮನಾದವಳು ಉಷಾಳಿಗೆ ಮಗುವನ್ನು ಕರೆದೊಯ್ಯುವ ಹೊತ್ತಿಗೆ ಹೇಗೋ ಎಲ್ಲಿಂದಲೋ ಹೊಂಚಿ ಒಂದಿಷ್ಟು ನೋಟುಗಳ ಮುದ್ದೆಯನ್ನು ಕೈಗಿಟ್ಟು ಮಗುವಿಗೆ ಲೊಚ ಲೊಚ ಮುತ್ತಿಟ್ಟು ಕಳಿಸುತ್ತಿದ್ದಳು. ಬೆಂಗಳೂರಿನ ಒಂದು ತುದಿಯಿಂದ ಇನ್ನೊಂದು ತುದಿಗೂ, ಅದರ ಪರೀಕ್ಷೆಗಳಿಗೆ ಇನ್ಯಾವುದೋ ಮೂಲೆಯ ಲ್ಯಾಬಿಗೆ ಹೋಗುವಾಗಲೇ ಅವಳ ಜೀವ ಅರ್ಧವಾಗುತ್ತಿತ್ತು. ಅದಕ್ಕಿಂತಲೂ ದೊಡ್ಡದೆಂದರೆ ಅಂಥ ಆಸ್ಪತ್ರೆಗೆ ಹೋದಾಗಲೇ ಜನರಿಗೂ ಅರ್ಥವಾಗಿ ಬಿಟ್ಟಿರುತ್ತೆ ಏನಾಗಿರಬಹುದೆಂದು. ಈ ಮಗೂಗಾ..? ಎಂದು ಹುಬ್ಬೇರಿಸಿ ನಿಲ್ಲುತ್ತಿದ್ದರು ಎದುರಿಗೆ ಸಿಕ್ಕವರೆಲ್ಲ. ದೇವರಂಥ ವೈದ್ಯ ಶ್ರೀಕುಮಾರ್ ಮಾತ್ರ ಮಗುವಿನ ಬಿಳಿ ಕೆನ್ನೆ ಮೆಲ್ಲಗೆ ತಾಡಿಸುತ್ತಾ, ‘ಇದನ್ನು ಪಾರಾನಾಸಲ್ ಕ್ಯಾವಿಟಿ ಸೈನಸ್ ಕ್ಯಾನ್ಸರ್ ಎನ್ನುತ್ತಾರೆ. ಇದಕ್ಕೆ ನಾಳೆ ಗುರುವಾರವೇ ಆಪರೇಟ್ ಮಾಡೋಣ. ಕೊಂಚ ತಡವಾಗಿದೆ. ಆದರೂ ಮಗುವಿಗೆ ಏನಾದರೂ ಆಗಲು ಬಿಟ್ರೆ ಆ ದೇವರೂ ನನ್ನ ಕ್ಷಮಿಸಲ್ಲ. ಧೈರ್ಯವಾಗಿರು’ ಎಂದುಬಿಟ್ಟರು. ಅಲ್ಲಿಗೆ ಕೆಂಗುಲಾಬಿಯಂತಹ ಮಗು ಇನ್ನೆರಡು ದಿನದಲ್ಲಿ ಕಾಯಂ ಆಗಿ ಆಸ್ಪತ್ರೆಯ ಮಂಚಕ್ಕೆ ಬರಲಿತ್ತು. ಉಷಾ ಎದುರಿಗಿದ್ದ ವೈದ್ಯರೇ ಸ್ವತಃ ದೇವರೇನೋ ಎನ್ನುವಂತೆ ಕಾಲು ಹಿಡಿದು ಕೂತು ಬಿಟ್ಟಿದ್ದಳು. ಅವರೂ ಕೈ ಬಿಡಲಿಲ್ಲ. ನಿಧಾನಕ್ಕೆ ಅವಳನ್ನೆಬ್ಬಿಸಿ ಕೂರಿಸಿ ನೀರು ಕುಡಿಸಿ, ‘‘ಪ್ರತಿ ಬಾರಿಯೂ ದೇವರು ನಮ್ಮನ್ನು ಪರೀಕ್ಷಿಸುತ್ತಾನಮ್ಮ. ಆದರೆ ಅಮ್ಮಂದಿರು ನಮ್ಮನ್ನು ಬದುಕಿಸುತ್ತಾರೆ. ನಿಮ್ಮ ಈ ನಂಬಿಕೇನೇ ನಮಗೆ ಪ್ರತಿ ಸಾರಿಯೂ ಕೊನೇ ಕ್ಷಣದವರೆಗೂ ಗುದ್ದಾಡಿಸುತ್ತದೆ. ನಾವು ಮತ್ತೆ ಮತ್ತೆ ಸಾವಿಗೆ ಧಿಕ್ಕಾರ ಕೂಗ್ತಿದೀವಿ…’’ ಎನ್ನುತ್ತಿದ್ದಂತೆ ಆಕೆ ಎದ್ದು ನಿಂತಿದ್ದಳು. ಉಳಿದದ್ದು ಮುಂದಿನ ವಾರಕ್ಕಿರಲಿ.
ಕಾರಣ
ಅವಳು ಎಂದರೆ…

Sunday, November 8, 2015

ಏರುವ ಮೆಟ್ಟಿಲ ಮರೆತ ಘಳಿಗೆಯಲಿ...

ನಾ ಲ್ಕಾರು ವರ್ಷಗಳ ಹಿಂದೆ, ತೀರಾ ವೈಯಕ್ತಿಕ ಹಂತದ ಚರ್ಚೆಯ ಕೌನ್ಸಿಲಿಂಗ್‌ಗಾಗಿ ತಂಡದ ಹಿರಿಯ ಸದಸ್ಯೆ ವಿಮಲಾ ಅರ್ಗಾ ಆಕೆಯನ್ನು ಕಳಿಸಿದ್ದರು. ‘ನೋಡಪಾ ಸ್ವಲ್ಪ ಪರ್ಸನಲ್ ಪ್ರಾಬ್ಲಂ ಇದ್ದಂಗಿದೆ. ಮಾತಾಡ್ಸು’ ಎಂದಿದ್ದರು. ನೋಡಿದರೆ ಒಂದಿಷ್ಟು ಈ ಮೊದಲೇ ಪರಿಚಯವಿದ್ದ ವನಜಳ ಕೇಸು ಅದು. ಸಂಸಾರ ಅಂತಾ ಒಂದೆರಡು ವರ್ಷ ಅವನ ಜೊತೆಗಿದ್ದೀನಿ, ಹಾಗಂತ ಆಕೆ ಹೇಳಿಕೊಳ್ಳುತ್ತ ಎರಡು ವರ್ಷದಿಂದ ಎಲ್ಲ ಬಿಟ್ಟು ಅಪ್ಪನ ಮನೆಯಲ್ಲೇ ಉಳಿದಿದ್ದು ಈಗ ಕಾನೂನು ಪ್ರಕಾರ ನೋಟಿಸ್ ಬಂದಿದ್ದರಿಂದ ಡಿವೋರ್ಸ್‌ಗಾಗಿ ಓಡಾಡುತ್ತಿದ್ದಾಳೆ.ಅಸಲಿಗೆ ಪ್ರತಿ ಹೆಂಗಸರೂ ಎಲ್ಲೋ ಒಂದು ಕಡೆಯಲ್ಲಿ ಕಿರಿಕ್‌ಗಳಿಗೆ ಈಡಾದವರೆ. ಇದು ಸಾಮಾನ್ಯವಾಗಿ ಎದ್ದು ಕಾಣುವ ಅಂಶ. ಕೊಂಚ ಹೈಪ್ರೊ-ಲ್ ಕೇಸುಗಳಾದರೆ ಆಸ್ತಿಗಾಗಿ ಜೀವಮಾನದ ಸುರಕ್ಷತೆ, ಮಕ್ಕಳ ನಿರ್ವಹಣೆ ಹೆಸರಿನಲ್ಲಿ ಸಿಕ್ಕಷ್ಟು ಗುಂಜಿಕೊಳ್ಳೋಣ ಎನ್ನುವ ಜಟಾಪಟಿ ಸಹಜ. ಆದರಿಲ್ಲಿ ಅಂಥ ಯಾವ ಸಂಗತಿಯೂ ಇರಲಿಲ್ಲ.
ಗಂಡನೆಂಬ ಜೋಭದ್ರನ ಜೊತೆ ಎರಡು ವರ್ಷಕಾಲ ಮಲಗಿದ್ದು (ಹಾಗಂತ ಆಕೆಯ ನಿಲುವು) ಬಿಟ್ಟರೆ ಇನ್ನೇನೂ ಇರಲಿಲ್ಲ. ತಕ್ಷಣಕ್ಕೆ ಬೋರಲು ಹಿಡಿದು ಮಾಡಿ ಕುಲುಕಿದರೆ ಅವನಿಂದ ಎಂಟಾಣೆ ಉದುರುವುದೂ ಸಾಧ್ಯವಿರಲಿಲ್ಲ. ಅಸ್ತಿಪಾಸ್ತಿಯ ಬಡಿದಾಟ ಎಲ್ಲಿಯದು..? ಸುಲಭವಾಗಿ ಇಬ್ಬರೂ ಸಂಬಂಧ ಕಿತ್ತುಕೊಂಡರು. ಅಂತೂ ಬಿಡುಗಡೆ ಸಿಕ್ಕಿ ಆಕೆ ಹೊರಬಿದ್ದು ಹೋಗಿದ್ದಳು. ಪವಾಡದಂತೆ ಬದುಕಲ್ಲೂ ಕೆಲವೊಮ್ಮೆ ಅನಿರೀಕ್ಷಿತಗಳು ನಡೆದುಬಿಡುತ್ತವೆ. ಡಿವೋರ್ಸಾದ ಹುಡುಗಿಗೆ ಸರ್ಕಾರಿ ನೌಕರಿಯೂ ಸಿಕ್ಕುಬಿಟ್ಟಿದೆ. ಚಿಕ್ಕ ಸಂಬಳದ್ದಾದರೂ ಕಾಯಂ ನೌಕರಿ ಬದುಕಿನ ಬಗ್ಗೆ ಇನ್ನಿಲ್ಲದ ಭರವಸೆ ನೀಡಿದೆ.ಹೆಚ್ಚಿನಂಶ ಎಡವಟ್ಟುಗಳು ನಡೆಯುವುದೇ ಈ ಹಂತದಲ್ಲಿ. ಕಾರಣ ಬದುಕು ಹಸನಾದ ಸಂಭ್ರಮಕ್ಕೆ ಮನಸ್ಸು ಮತ್ತೆ ಚಿಗಿತುಕೊಂಡಿರುತ್ತದೆ. ಹಳೆಯ ಗಾಯ ವಾಸಿಯಾಗುತ್ತಿದ್ದಂತೆ ಹೊಸ ಕೆರೆತಕ್ಕೆ ಹಾತೊರೆದಿದ್ದಳು. ಹುಡುಗಿ ಅನ್ಯಕೋಮಿನವನೊಂದಿಗೆ ಸಾಂಗತ್ಯಕ್ಕೆ ಬಿದ್ದಿದ್ದಳು. ಮತ್ತೆ ಮದುವೆ ಇತ್ಯಾದಿ ರಗಳೆಯೇ ಬೇಡವೆಂದು ಗೌಪ್ಯ ಸಂಸಾರಕ್ಕೆ ಕೈಹೂಡಿದ್ದಳು. ಅದಕ್ಕಾಗಿ ಮನೆಗೆ ಬರುತ್ತಿದ್ದ ಅಪ್ಪ, ಅಮ್ಮನನ್ನೂ ದೂರಮಾಡಿದ್ದಳು.
ಒಂಟಿಯಾಗಿ ಗೂಡು ಮಾಡಿಕೊಂಡು ದಿನವಿಡೀ ಮೈಮರೆತು ಅವನೊಂದಿಗೆ ಸ್ಪೈಸಿ ಬದುಕಿಗೆ ಹಾತೊರೆದು ಸುತ್ತತೊಡಗಿದ್ದಳು. ಆದರೆ ಇಂಥವು ತುಂಬ ದಿನ ಬಾಳುವುದಿಲ್ಲ. ಇಬ್ಬರ ಮಧ್ಯೆ ಮನಸ್ಸು ಮುರಿದು, ಸಂಬಂಧ ಕಡಿದುಕೊಳ್ಳಲು ಸ್ನೇಹಿತರನ್ನು ಕಟ್ಟಿಕೊಂಡು ನನ್ನ ಮೇಲೆ ಒತ್ತಡ ತಂದಿಟ್ಟಿದ್ದಳು. ಏನಾದರೂ ಮಾಡು ಮಾರಾಯಾ ಎಂದು ಉಳಿದವರೂ ಕೋರಸ್ಸಾದಾಗ, ವನಜಾಳ ಕೆಟ್ಟ ಪರಿಸ್ಥಿತಿ ಅರಿವಿಗೆ ಬಂದಿದ್ದು. ಆಗಿದ್ದಿಷ್ಟು...ಹೊಸ ಸಂಗಾತಿ ಯಾವ ಮುಲಾಜು ಇಲ್ಲದೆ ಬಳಸಿಕೊಂಡಿದ್ದಾನೆ. ದಿನವೂ ಅವನ ಬುಲ್ಲೆಟ್ಟು ಹತ್ತಿ ಗಲ್ಲಿಗಳನ್ನೂ ಸುತ್ತಿದ್ದಾಳೆ. ಕೊಂಚ ಸಲುಗೆಯಾದರೂ ಸಾಕು ಸ್ನೇಹಿತರು ಸೊಂಟಕ್ಕೆ ಕೈಹೂಡಿ ಓಡಾಡುವಷ್ಟು ಸಲುಗೆ ಕೊಡುತ್ತಾಳೆ.
ತಾನೇ ಮೇಲೆ ಬಿದ್ದು ಹುಡುಗರ ಬಗಲಿಗೆ ಕೈಯಿಕ್ಕಿ ಓಡಾಡುವುದು ಆಕೆಯ ಸೋಷಿಯಲ್ ವರಸೆ. ಅದಕ್ಕಾಗೇ ಹುಡುಗರು ಅವಳನ್ನು ಸುತ್ತಿಸುತ್ತಾರೆ. ಅದವನಿಗೆ ಪಚನವಾಗಲಿಲ್ಲವೋ, ಆಕೆಗೆ ಸಾಕೆನ್ನಿಸಿತ್ತೋ ಒಟ್ಟಾರೆ ಕಳಚಿಕೊಳ್ಳಲೆತ್ನಿಸುವಾಗ ಅವನು ಮೂಗುದಾರ ಹಿಡಿದ. ಮೇಜವಾನಿಗಾಗಿ ಮದುವೇನೂ ಆಗುತ್ತೀನಿ ಎಂದು ಭೋಂಗುಬಿಟ್ಟ.ಆಕೆಯೊಂದಿಗಿನ ಅಪ್ಪಟ ತಡರಾತ್ರಿಯ ಚಿತ್ರಗಳನ್ನಿಟ್ಟು ಬೆದರಿಸಿದ್ದಾನೆ. ಇಬ್ಬರೂ ಮೈಮರೆತಾಗಿನ ತೀರಾ ಖಾಸಗಿ ಕ್ಷಣಗಳ ಚಿತ್ರಣ ಇಂಥ ಸಮಯದಲ್ಲಿ ಉಪಯೋಗಿಸಲೆತ್ನಿಸಿದ್ದಾನೆ. ಹೆಂಗಸರ ಮಾಮೂಲಿನ ವರಸೆಯಂತೆ ಆಕೆ ಅಳುಮುಖ ಮಾಡಿ ನಿಂತಿದ್ದಾಳೆ, ಎಲ್ಲ ಮುಗಿಸಿಕೊಂಡು. ನೌಕರಿಯ ಆಸರೆ ಹೊರತುಪಡಿಸಿದರೆ, ಮನೆಯವರನ್ನೂ ಆಗಲೇ ದೂರಮಾಡಿಕೊಂಡಿದ್ದರಿಂದ ಆಕೆಯೊಂದಿಗೆ ನಿಲ್ಲುವರಾರೂ ಇಲ್ಲ. ಅನಧಿಕೃತವಾಗಿ ಕೇಸು ಮುಗಿಸಬೇಕಿತ್ತು. ತಡರಾತ್ರಿ ಅವನನ್ನು ಕರೆತಂದು ಎದುರಿಗೆ ಕುಳ್ಳಿರಿಸಿಕೊಂಡು ‘ಏನಪ್ಪಾ ಏನು ವಿಷಯ’ ಎನ್ನುತ್ತಿದ್ದಂತೆ ನಮಗೆಲ್ಲ ಅಶ್ಚರ್ಯವಾಗುವಂತೆ ಸಿ.ಡಿ.ಗಳನ್ನೂ, ಪೆನ್‌ಡ್ರೈವ್‌ನ್ನು ಎದುರಿಗಿಟ್ಟು ಕೇಸು ನಿಕಾಲಿ ಮಾಡಿಕೊಳ್ಳುವ ಮಾತಿಗಿಳಿದಿದ್ದಾನೆ.
ತನ್ನಿಂದ ಆಕೆ ಎತ್ತಿಕೊಂಡಿರುವ ಬುಲೆಟ್ಟು, ಜಾಕೆಟ್ಟು, ಹೆಲ್ಮೆಟ್ಟು ವಾಪಸ್ ಕೊಡಿಸಿ ಎನ್ನುವ ಪಂಚಾಯ್ತಿಕೆ ಆರಂಭವಾಗುತ್ತಿದ್ದಂತೆ ಎದ್ದು ಈಚೆಗೆ ಬಂದಿದ್ದೆ. ಕಾರಣ ಜೊತೆಗಿದ್ದಾಗ ಅನುಭವಿಸುವ ಮುದ ಮತ್ತು ಇಳಿದ ಮದ ಎರಡರಲ್ಲೂ ತಮ್ಮದೆನ್ನುವ ಪಾಲುದಾರಿಕೆಗೆ ಇಳಿಯುವ ಹೇಯ ಮನಸ್ಥಿತಿ ಹೊಲಸು ಹೇಸಿಗೆ. ಅದೇನೇನು ಹಣಕಾಸಿನ ವ್ಯವಹಾರಗಳಿದ್ದವೋ ಅದನ್ನೆಲ್ಲ ಒಂದು ಹಂತಕ್ಕೆ ಪೂರೈಸಿಕೊಂಡ ವನಜಾ ನಿರುಮ್ಮಳವಾಗಿ, ‘ನೀನು ಇದ್ದಿ ಅಂತಾ ಎಲ್ಲ ಸೆಟ್ಲಾಯಿತು. ಎಷ್ಟು ಟೆನ್ಷನ್ ಆಗಿತ್ತು. ಅದೆಂಗೆ ನಾನು ಅವನನ್ನ ಮದುವೆ ಆಗ್ತಿನಿ ಅಂತ ಅವ್ನು ಅನ್ಕೊಂಡ..’ ಎನ್ನುವ ಸಮಜಾಯಿಷಿಗಿಳಿದಾಗ‘ನೋಡು, ಮಲಗುವಾಗ ಇರದ ಜಾತಿ, ಧರ್ಮ ಬೇರಾದಾಗ ಪ್ರತಿಯೊಂದರಲ್ಲೂ ಹುಳುಕು ಕಾಣಿಸೋದು ಮನುಷ್ಯನ ನೀಚ ನಡವಳಿಕೆ ವಿನಾ ಬೇರೇನಲ್ಲ. ಅನಧಿಕೃತ ಸಂಬಂಧ ಇರಿಸಿಕೊಂಡೂ, ಇದೇ ಕಾಯಂ ಜೀವನ ಎನ್ನುವಂತೆ ಬೇಕಾದ್ದಕ್ಕೆಲ್ಲ ಪೋಸು ಕೊಟ್ಟಿದ್ದೀಯಲ್ಲ ನಾಲ್ಕಾರು ಜನ ಹುಡುಗರನ್ನು ಕಟ್ಟಿಕೊಂಡು ಅವನು ತಿರುಗಿ ಬಿದ್ದಿದ್ರೆ? ನಿನ್ನ ಪುಣ್ಯ. ಅಷ್ಟಕ್ಕೆ ಮುಗಿಸಿದ. ಏನು ಸುಖಾ ಸುರಕೊಂಡರೂ ಪರವಾಗಿಲ್ಲ, ಈ ರಗಳೆಗಳ್ಯಾಕೆ ಗೊತ್ತಾಗಲ್ಲ. ಕುತೂಹಲ ಮನುಷ್ಯನ ಸಹಜತೆ. ಆದರೆ ಅಲ್ಲಲ್ಲೇ ಸಾಕ್ಷಿಯಾಗುಳಿಸುವ ಹುಂಬತನ ನಿಮ್ಮ ಮುಠ್ಠಾಳತನಕ್ಕೆ ಸಾಕ್ಷಿ.
ಸಮಜಾಯಿಷಿ ಬೇಡ. ಗಂಡಸರು ಎಷ್ಟು ಜನ ಬೇಕಾದರೂ ಸಿಕ್ಕಿಯಾರು. ಆದರೆ ಒಮ್ಮೆ ಅಮ್ಮ ಕಳೆದುಹೋದರೆ ಮತ್ಯಾವತ್ತೂ ಬರಲ್ಲ. ಅಷ್ಟಕ್ಕೂ ಅಮ್ಮನ ಮಹತ್ವ ಗೊತ್ತಾಗೋದೆ ಕಳಕೊಂಡ ಮೇಲೆ. ನನಗಿಂತ ಬೇರೆ ಅನುಭವ ಅದಕ್ಕೆ ಬೇಕಿಲ್ಲ. ಅಮ್ಮನ್ನ ಕರಕೊಂಡು ಬಂದು ನನಗೆ ಕಾಲ್ ಮಾಡು’ ಎಂದು ಗದರಿಸಿದೆ. ಎಷ್ಟು ಆಕೆಗೆ ಪಥ್ಯವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಮತ್ತೆ ಇಂಥದನ್ನು ಮೈಗೆ ಅಂಟಿಸಿಕೊಳ್ಳದಂತೆ ಹುಡುಗರನ್ನೂ ಗದರಿದ್ದೆ. ಇದಾಗಿ ವರ್ಷವೊಂದು ಕಳೆದಿರಬೇಕು. ‘ಸರ್ ಫ್ರೀ ಇದ್ರೆ ಭೇಟಿಯಾಗ್ಬೇಕು..’ ದನಿ ಗುರುತಿಗೆ ನಿಲುಕಲಿಲ್ಲ. ಅವನೇ ವನಜಾಳೊಟ್ಟಿಗೆ ವರ್ಷಗಟ್ಟಲೆ ಓಡಾಡಿದ್ದವ. ಸದ್ಯಕ್ಕಿಲ್ಲ ಎಂದೇನಾದರೂ ಬಂದು ಎದುರಿಗೆ ಕೂತಾಗ ಎದ್ದುನಡಿ ಅನ್ನಲಾಗಲಿಲ್ಲ. ‘ಸಾರ್.. ನಿಮಗೂ ಗೊತ್ತಿರುತ್ತೆ. ಆವತ್ತು ವನಜಂದು ಸಿ.ಡಿ.ಕೊಟ್ನಲ್ಲ ಅದರ ಕಾಪಿ ನನ್ನ ಹತ್ತಿರ ಇಟ್ಕೊಂಡಿರಲ್ಲ ಅಂತಹೆಂಗೆ ಭಾವಿಸಿದ್ರಿ.?’ ಎಂದ. ‘ಇಲ್ಲ ನೀನು ಪೂರ್ತಿ ಡಿಲೀಟ್ ಮಾಡಿರಲ್ಲ ಅಂತ ಗೊತ್ತಿತ್ತು. ಆದರೆ ಅನವಶ್ಯಕ ತಡವಿಕೊಳ್ಳಲಿಕ್ಕಿಲ್ಲ ಅಂತಾ ಕಾನಿಡೆನ್ಸು.
ಈವಾಗೇನು?’ ಎಂದೆ. ‘ಸರ್ ಜಗಳಕ್ಕೇನೂ ಬಂದಿಲ್ಲ. ಆವತ್ತು ನೀವು ವನಜಾಂಗೆ ಸಪೋರ್ಟ್ ಮಾಡಿದ್ರಿ. ಈಗ ಎಲ್ಲಿದಾಳೆ ಗೊತ್ತೆ?’ ಎಂದ. ಮತ್ಯಾಕೆ ಕೇಸು ಕೆದರುತ್ತಿದ್ದಾನೆ ಎನ್ನಿಸುತ್ತಿದ್ದಂತೆ,‘ನೀವೇನೋ ಆವತ್ತಿಗೆ ನನ್ನನ್ನು ಕೂರಿಸಿಕೊಂಡು ತಾಕೀತು ಮಾಡಿದ್ರಿ. ಅಸಲಿಗೆ ನನಗೂ ಒತ್ತಾಯದ ಸಂಬಂಧ ಬೇಕಿರಲಿಲ್ಲ. ಸಂಬಂಧದಲ್ಲಿ ಚೆನ್ನಾಗಿರು, ಮೋಸ ಮಾಡ್ಬೇಡ ಅಂತಾ ಹೇಳ್ತಿದ್ದೆ. ಹಾದರತನವಾದ್ರೂ ಕನಿಷ್ಠ ನಿಯತ್ತಿರಬೇಕು ಸರ್. ಅದಾಕೆಗೆ ಇರ್ಲಿಲ್ಲ. ವರ್ಷಕ್ಕೊಬ್ಬೊಬ್ಬ ಗಂಡಸರನ್ನು ಬದಲಾಯಿಸ್ತಾಳೆ. ಅದನ್ನು ಬಯಲಿಗೆಳೆಯೋಕೆ ಅಂತಾನೆ ಮದುವೇನೂ ಆಗ್ತೀನಿ ಅಂದೆ. ದಿನಾ ಸಂಜೆ ಬುಲೆಟ್ ಮೇಲೆ ಕರ್ಕೊಂಡು ಕಂಡಲ್ಲೆಲ್ಲ ಸ್ಪೈಸಿ ತಿನ್ನಿಸೋಕೆ, ಖರ್ಚಿಗೆ ಸಾಮಾನು ಕೊಡಿಸೋಕೆ, ಪಬ್ಲಿಕ್ನಲ್ಲಿ ಕೈಹಿಡ್ಕೊಂಡಿರೋಕೆ ಒಬ್ಬಾತನ್ನ ಇಟ್ಕೊಳ್ಳೊ ಖಯಾಲಿ ಹೆಂಗಸು ಆಕೆ. ಸುಖ, ಚಟ ಎರಡಕ್ಕೂ ಆಯ್ತು. ನಂದು ತಪ್ಪಿದ್ರೆ ಮೆಟ್ಟಲ್ಲಿ ಹೊಡಿರಿ. ಆದರೆ ಅವಳೇನೂಂತ ನೀವೆ ಕೇಳಿ ನೋಡಿ’ ಅಂದ. ಅವನ ಕಣ್ಣಲ್ಲಿನ ನಿಜಾಯಿತಿಗೆ ಒಂದರೆಕ್ಷಣ ಹಿಮ್ಮೆಟ್ಟಿದೆ. ತಕ್ಷಣ ವನಜಗೆ ರಿಂಗಿಸಿದೆ.‘ಎಲ್ಲಿದ್ದೀಯಾ? ಯಾರಿದ್ದಾರೆ ಜೊತೆಗೆ?’ ಎನ್ನುತ್ತಿದ್ದಂತೆ ತಡವರಿಸುತ್ತಿದ್ದವಳಿಗೆ, ‘...ನ ಜೊತೆಲಿರೋದು ನಿಜಾನಾ?’ ಅಂದೆ. ಅಷ್ಟೆ, ಸಂಪರ್ಕ ಕಡಿದು ಬಿತ್ತು. ಮತ್ತೆರಡು ದಿನದಲ್ಲಿ ಆಕೆಯ ಹೊಸ ಸಂಸಾರದ ಕತೆ.
ಒಂದೇ ವರ್ಷದಲ್ಲಿ ಮೂರನೆಯವನ ಜೊತೆ.‘ಸರ್.. ಗಂಡಸರು ಯಾಮಾರಿಸಿದರೆ ಎಲ್ಲರೂ ತಿರುಗಿ ಬೀಳೊರೇ. ಆದರೆ ಹೆಚ್ಚಿನಂಶ ಹೆಂಗಸರೆ ಕಿರಿಕ್ ಮಾಡ್ಕೊಂಡಿರ್ತಾರೆ. ಇವತ್ತಿಗೂ ಪಾಪ ಅಂತಾ ಹಿಂದೆ ಬೀಳೋರು ಗಂಡಸರೇ ಗಮನಿಸಿ ಸರ್. ಹೆಂಗ್ಸು ಒಂದೇ ದಿವಸದಲ್ಲಿ ಬೇಕಿದ್ರೂ ಪಲ್ಟಿ.. ಆದರೆ ಗಂಡಸರು ಹಂಗೆ ತಿರುಗಿ ಬಿದ್ದಿದ್ದು ಇದ್ಯಾ? ಒದೆ ಬೀಳ್ತಾವೆ ಅಷ್ಟೆ. ಇನ್ನೊಮ್ಮೆ ಯಾರನ್ನಾದರೂ ಎತ್ತಾಕ್ಕೊಂಡು ಬರೋ ಮೊದ್ಲು ಯೋಚನೆ ಮಾಡಿ ಸರ್. ನಾನು ಈ ಚಿತ್ರ ಎಲ್ಲ ಅಪ್‌ಲೋಡ್ ಮಾಡಿದ್ದಿದ್ರೆ..?’ ಎಂದವನ ಮುಖ ಎದುರಿಸಲಾಗಲಿಲ್ಲ. ಪೇಲವವಾಗಿ ಕಾಫಿ ಎಂದೆ. ಸುಮ್ಮನೆ ಪ್ಯಾಕೆಟ್ ಕೊಟ್ಟು ಎದ್ದುಹೋದ. ಇವಳಿತ್ತ ಬೆಂಗಳೂರಿನ ಸಂಜೆಗಳಿಗೆ ವರ್ಷಕ್ಕೊಬ್ಬ ಗಂಡಸಿನೊಡನೆ ರಂಗೇರುತ್ತಿದ್ದಾಳೆ. ಅತ್ತ ಇದೇನೂ ಗೊತ್ತಿಲ್ಲದೆ, ‘ಮಗಳು ತುಂಬ ಕಷ್ಟಪಡುತ್ತಿದ್ದಾಳೆ, ಪಾಪ ಒಬ್ಬಳೇ ಏನು ಮಾಡಿಕೊಂಡಿದ್ದಾಳೊ..’ ಎಂದು ಕನವರಿಸುತ್ತ ಮೈಸೂರು ಹೆದ್ದಾರಿಯ ಪುಟ್ಟ ಕೋಣೆಯಲ್ಲಿ, ಇವತ್ತಲ್ಲ ನಾಳೆ ಕರೆದೊಯ್ದಾಳು ಎಂದು ಕಾಯುತ್ತಿರುವ ಅಮ್ಮ ಕೂತೆ ಇದ್ದಾಳೆ. ಅವಳಿಗೆ ತಿಳಿಸಿದರೂ ಈ ವಯಸ್ಸಿನಲ್ಲಿ ಆ ಜೀವ ಇನ್ನಷ್ಟು ನೊಂದುಕೊಳ್ಳುತ್ತದೆ ಹೊರತಾಗಿ ಮಗಳು ಕೆಟ್ಟಿದ್ದಾಳೆ ಎನ್ನಲಾರಳು. ಹೆಂಗೋ ಒಂದು ಮಗಳು ಸುಖವಾಗಿದ್ದರೆ ಸಾಕು ಎನ್ನುತ್ತದೆ ಆ ಜೀವ. ಯಾವ ಅಮ್ಮನೂ ಮಗಳ ಸುಖಕ್ಕೆ ಅಡ್ಡ ಬಂದ ಉದಾಹರಣೆಗಳಿಲ್ಲ. ಆದರೆ ಮಗಳು ಅಮ್ಮ ಆದಾಳೆಯೇ...?ಕಾರಣಅವಳು ಎಂದರೆ...

Sunday, November 1, 2015

ಮಕ್ಕಳೇ, ಮನಸುಗಳ ಕೊಲ್ಲಬೇಡಿ…

edit-ankana-1
ಇವತ್ತು ಸಾವಿರ ರೂಪಾಯಿ ಕೊಡುವುದು ಸುಲಭ. ಆದರೆ, ಮನೆಯವರಿಗಾಗಿ ಒಂದು ಗಂಟೆ ಕೊಡುವ ಮನಸ್ಸು ನಮಗಿಲ್ಲ. ತೀರಾ ಆತ್ಮೀಯರಿಗೆ ಬೇಕಿರುವುದು ಮುಷ್ಟಿಗಟ್ಟಲೇ ಹಣದ ಪಿಂಡಿಯಲ್ಲ. ಒಂದು ಹಿಡಿ ಚೆಂದದ ಮಾತು ಮತ್ತು ಅವರೊಂದಿಗೆ ಒಂದಿಷ್ಟು ಲಭ್ಯತೆ. ಆ ವಿಷಯದಲ್ಲಿ ನಮ್ಮದು ಅಪ್ಪಟ ದಾರಿದ್ರ್ಯ
***
ಕಳೆದ ಎರಡ್ಮೂರು ದಶಕಗಳ ಅವಧಿಯಲ್ಲಿ ಸಂಪರ್ಕ ತಪ್ಪಿದಾಗೆಲ್ಲ ನಾನೇ ಕರೆ ಮಾಡಿ ಎಟುಕಿಸಿಕೊಳ್ಳುವಂತೆ, ನಾನೂ ಇನ್ನೇನು ಮರೆತು ಬಿಡುತ್ತೇನೆ ಎನ್ನುವಾಗ ಫಕ್ಕನೇ ನನ್ನ ನೆನಪಿಸಿ ತಡವಿಕೊಂಡು ನನ್ನ ಬಾಲ್ಯದಿಂದಲೂ ಅಪಾರ ಅನುಭವಕ್ಕೀಡು ಮಾಡುವಲ್ಲಿ ಹಿರಿಯರ ಕೊಡುಗೆ ಸಾಕಷ್ಟಿದೆ. ಅದರಲ್ಲೂ ಮಲೆನಾಡಿನ ಮೂಲೆಮೂಲೆಗಳ ಒಂಟಿ ಮನೆಗಳಲ್ಲಿ ಪಡೆದ ಅನುಭವಗಳೇ ಬಹುಶಃ ನನ್ನನ್ನಿವತ್ತು ಈ ಮಟ್ಟಿಗಿಟ್ಟಿದೆ ಎಂದರೆ ಸುಳ್ಳಲ್ಲ.
ಆಗಿನ ಮಳೆಗಾಲದ ಪರಿಸ್ಥಿತಿ ಗಂಭೀರ. ರಾಡಿಯೇಳುವ ರಸ್ತೆಗಳು, ಅದಕ್ಕೂ ಮೊದಲೇ ಕಾಲಿಗೇರುವ ಉಂಬಳಗಳು, ಭಯಾನಕ ಚಳಿ, ಜಿಟಿಜಿಟಿ ಮಳೆಯಿಂದ ತಿಂಗಳಾನುಗಟ್ಟಲೇ ಮನೆಯಿಂದಾಚೆ ಬಾರದಿರುವವರೂ ಇದ್ದರು. ಮನೆಯಂಗಳದ ಒಲೆಯ ಬೆಂಕಿ, ಮಾಡಿಗೆ ತೂಗುತ್ತಿದ್ದ ಮೊಗೆಕಾಯಿ, ನಾಗಂದಿಗೆಯಲ್ಲಿ ತುಂಬಿಸಿಟ್ಟ ಬೆಲ್ಲದ ಡಬ್ಬಿಗಳಲ್ಲಿ ಬದುಕು ಮುಗಿದು ಹೋಗುತ್ತಿದ್ದುದು ಸುಳ್ಳಲ್ಲ.
ಮೇಲಿನ ಮನೆಯ ಚಂದ್ರಿಕತ್ತೆ, ಮಾವ ಇಂಥ ಚೆಂದದ ಅನುಭವಕ್ಕೀಡು ಮಾಡಿದವರು. ಇವತ್ತಿನ ಮಟ್ಟಿಗೆ ತೀರಾ ಮಾಯವಾಗಿರುವ ಮುಳ್ಳಣ್ಣು ಆಗ ಯಥೇಚ್ಛವಾಗಿ ನಾನು ಸವಿದಿದ್ದರೆ ಅದಕ್ಕೆ ಕಾರಣ ಚಂದ್ರತ್ತೆಯೇ. ಸಂಜೆಯ ಹೊತ್ತಿಗೆ ದೊಡ್ಡ ಮುಳ್ಳಿನ ಹೆಣೆಯನ್ನೇ ಕಡಿದು ತಂದು ಅಂಗಳದಲ್ಲಿ ಬಿಸಾಕುತ್ತಿದ್ದ ಮಾವ. ರಾಚುತ್ತಿದ್ದ ಮಳೆಯ ಇರಚಲು, ಅದನ್ನು ತಡೆಯಲು ಕಟ್ಟಿದ್ದ ಸೋಗೆಯ ತಡಸಲು, ಜಿಬಿರು ಜಿಬಿರಾಗಿ ಬೀಳುತ್ತಿದ್ದ ಬೆಳಕಿನಲ್ಲೇ ಉರಿಯುತ್ತಿದ್ದ ಒಲೆಯ ಎದುರಿಗೆ ಕೂತು ಮುಳ್ಳಣ್ಣು ಹರಿದದ್ದೇ ಕೊನೆ. ಬಹುಶಃ ಅದರ ನಂತರದಲ್ಲಿ ಬದಲಾದ ನಿಸರ್ಗದ ಹೊಡೆತಕ್ಕೆ ಹಣ್ಣು ಮತ್ತು ಕರಡದ ಬ್ಯಾಣ ಎರಡೂ ಇವತ್ತಿಲ್ಲ.
ಆಗೆಲ್ಲ ಬ್ಯಾಣದಲ್ಲಿ ಮುಖಕ್ಕೆ ರಾಚುವಷ್ಟೆತ್ತರ ಬೆಳೆಯುತ್ತಿದ್ದ ಕರಡ, ಇವತ್ತು ಒಂದಡಿಗಿಳಿದಿದೆ ಎನ್ನುವುದು ವಾಸ್ತವ. ಆದರೆ ಮಕ್ಕಳು, ಬಂದವರಿಗೆಲ್ಲ ಮಾಡುವುದು ಮಟ್ಟುವುದರಲ್ಲಿ ಚಂದ್ರತ್ತೆ ಮಾತ್ರ ಯಾವತ್ತೂ ಕಡಿಮೆ ಮಾಡಿದ್ದಿಲ್ಲ. ತೀರಾ ಬೆಳಗ್ಗೆನೆ ಮಕ್ಕಳು ತೆಳ್ಳವು ತಿಂದು ಹೊರಟರೆ, ಕಂಬಳಿಗೊಪ್ಪೆ ಹಾಕಿಕೊಂಡು ಸೈಕಲ್ಲಿನ ಟೈರು ಹುಗಿಯುತ್ತಿದ್ದ ಕಚ್ಚಾ ರಸ್ತೆಯಲ್ಲೂ ಒದ್ದಾಡುತ್ತಲೇ ಪೆಡಲು ತುಳಿಯುತ್ತಿದ್ದ ಮಾವ. ಅವನ ಹಿಂದೆ ಮುಂದೆ ಬಾರಿನ ಮೇಲೆ ಮುದುರಿ ಕೂರುತ್ತಿದ್ದ ಮಕ್ಕಳೊಂದಿಗೆ, ಆಚೀಚೆ ಬ್ಯಾಣದ ಬುಡದಿಂದ ಹೊರಬರುತ್ತಿದ್ದ ಇತರೆ ಮಕ್ಕಳನ್ನೂ ಸೈಕಲ್ಲಿನ ಬಾರ್ ಮಧ್ಯೆ ಕೂರಿಸಿಕೊಳ್ಳುತ್ತಿದ್ದ.
ಅಷ್ಟೆಲ್ಲ ಮಾಡಿ ಮಕ್ಕಳನ್ನು ಸ್ಕೂಲಿಗೆ ಕಳುಹಿಸಿ ಬಂದು ತೋಟಕ್ಕೆ ಹೋದರೆ ಮಧ್ಯಾಹ್ನದವರೆಗೆ ಕೆಲಸ. ನಂತರ ಉರಿನೆತ್ತಿಯ ಹೊತ್ತು ಕೆಂಪಗಾಗಿರುತ್ತಿದ್ದ ಮಾವ ಮೊಗೆಕಾಯಿ ಹುಳಿ ಉಂಡು ಒಂದರ್ಧ ಗಂಟೆ ವಿರಮಿಸಿ ಮತ್ತೆ ತೋಟಕ್ಕಿಳಿದರೆ, ಐದರ ಹೊತ್ತಿಗೆ ಸೈಕಲ್ಲು ತುಳಿಯುತ್ತ ಸ್ಕೂಲಿಗೆ ದೌಡಾಯಿಸುತ್ತಿದ್ದ. ಓದಿಗೆ ಪ್ರಾಮುಖ್ಯತೆ ಬಹಳವಿತ್ತು. ಕಾರಣ ಮಾವನ ಕಾಲಕ್ಕೆ ಇಂಥ ಭಾಗ್ಯವೇ ಇರಲಿಲ್ಲ. ಶಾಲೆಯ ಮುಖ ನಾಲ್ಕನೆಯ ಇಯತ್ತೆಗೆ ಮುಗಿದಿತ್ತು. ಅದಕ್ಕಾಗೇ ‘ನಂಗಳ ಬದೀಗೆಲ್ಲ ಆವಾಗ ಶಾಲಿನೇ ಇರ್ಲಿಲ್ಯೆ. ನಮಗಾದ ಕಷ್ಟ ಮಕ್ಕಳಿಗೂ ಬ್ಯಾಡ ಹೇಳಿ. ಸರಿಯಾಗಿ ಕಲಿದಿದ್ರೆ ಈಗ ಎಂಥದ್ದೂ ಅಗದಿಲ್ಲ ಅಲ್ದನಾ..’ ಎನ್ನುತ್ತಿದ್ದರೆ ಮಕ್ಕಳು ಮುಸುಮುಸು ಮಾಡುತ್ತ ಪುಸ್ತಕ ಎತ್ತಿ ಓಡುತ್ತಿದ್ದವು. ಓದುವ ಮಕ್ಕಳಿಗೆ ಕಷ್ಟ ತಾಗದಂತೆ ಜೋಪಾನ ಮಾಡಿದರು. ಮಕ್ಕಳಿಬ್ಬರೂ ಚೆನ್ನಾಗೇ ಓದಿದರು. ‘ಸುತ್ತಲಿನ ಶಾಲೆಗೆಲ್ಲ ತಮ್ಮ ಮಕ್ಕಳೇ ಫಸ್ಟು’ ಎನ್ನುವಾಗ ಚಂದ್ರತ್ತೆಯ ಹೆಮ್ಮೆಯ ಡೌಲು. ಪ್ರತಿವರ್ಷವೂ ಫಲಿತಾಂಶಕ್ಕೆ ಮನೆಯಲ್ಲಿ ಹಬ್ಬದೂಟ. ಆಳುಗಳಿಗೂ ಊಟೋಪಚಾರ. ಮನೆಗೂ ಹೋಳಿಗೆ ಕಟ್ಟಿಕೊಡುತ್ತಿದ್ದಳು ಚಂದ್ರತ್ತೆ. ಅವಳ ಈ ಸಡಗರಕ್ಕೆ ನಾನು ಸಣ್ಣಗೆ ಹಲ್ಕಿರಿಯುತ್ತಿದ್ದೆ. ಕಾರಣ ಅಂತೂ ಎಸ್ಸೆಸ್ಸೆಲ್ಸಿ ಉಸುರುಕಟ್ಟಿ ಸೆಕೆಂಡ್ ಕ್ಲಾಸು ನಾನು. ಆ ಹುಡುಗ ತೊಂಭತ್ನಾಲ್ಕು ಮಾರ್ಕಿಗೆ, ಹೇಗೆ ಆರು ಕಮ್ಮಿಯಾಯಿತೆಂದು ಬಟ್ಟು ಮಡಚಿ ಎಣಿಸುತ್ತಿದ್ದರೆ ನಾನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆ. ‘ನನಗಿದರ ಮುಕ್ಕಾಲು ಬಂದರೂ ಸಾಕಿತ್ತು’ ಮಾರಾಯ ಎಂದು ಗೊಣಗಿಕೊಳ್ಳುತ್ತಿದ್ದರೆ ಮಾವ, ‘ಅಲ್ಲಲೇ ಗೊಣಗಬ್ಯಾಡ ಮಾಣಿ. ಎಂಥಾದ್ದೋ ನಾಲ್ಕು ಪರ್ಸೆಂಟು ಹೇಳಿ ಅವಂದು ಸಂಕಟ ಅಂವಂಗೆ. ನಿಂಗೆ ಎಂತಾ ಮಾರಿಜಾತ್ರೆಗೆ ಹೋಗ ಅರ್ಜೆಂಟಾ..’ ಎಂದು ಗದರುತ್ತಿದ್ದ. ನಾನು ಕಿಸಕ್ಕೆನ್ನುತ್ತಿದ್ದೆ. ಹುಡುಗ ಹುಡುಗಿ ಸಾಲಾಗಿ ಇಂಜಿನಿಯರಿಂಗ್ ಓದಿದರು. ಅತ್ತೆಗಂತೂ ಸಂಭ್ರಮವೋ ಸಂಭ್ರಮ. ಬೆಂಗಳೂರಿನಲ್ಲಿ ಆಗಷ್ಟೆ ಐ.ಟಿ. ಕಣ್ಬಿಡುತ್ತಿತ್ತು. ಕೆಲಸ, ದುಡ್ಡು ಎರಡೂ ಕೈಗೆ ಹತ್ತಲು ತಡವಾಗಲಿಲ್ಲ. ದೂರವಾಗಿದ್ದು ಹಳ್ಳಿ ಮನೆಯ ಅಪ್ಪ-ಅಮ್ಮ ಮಾತ್ರ.
ಹುಡುಗ ಬೆಂಗಳೂರಿನಲ್ಲಿ ಜೊತೆಲಿದ್ದ ಹುಡುಗಿಯನ್ನೇ ಮದುವೆ ಆದ. ಅತ್ತೆ ಏನೋ ಹೇಳಲು ಬಾಯಿ ತೆರೆವ ಮೊದಲೇ, ಮಾವ ಸಂಭಾಳಿಸುತ್ತ ಹುಡುಗನಿಗೆ ‘ಆಯ್ತು ಮಾರಾಯಾ.. ನಿನ್ನಿಷ್ಟ. ಆದರೆ ಮನೆ ತೋಟ ಎಲ್ಲ ನೋಡ್ಕಳವಲಿ. ಈ ಬದೀಗೂ ಲಕ್ಷ್ಯ ಇಲೋ ಮತ್ತೆ’ ಎಂದಿದ್ದ. ಅದೇ ಮುಳುವಾಯಿತಾ? ಗೊತ್ತಿಲ್ಲ. ಮಗಳಂತೂ ಮೊದಲೇ ಹಳ್ಳಿಮನೆ ಬಿಡಲು ನಿರ್ಧರಿಸಿದ್ದಳಂತೆ. ಎಲ್ಲ ಮಲೆನಾಡ ಹುಡುಗಿಯರಂತೆ. ‘ಹೋಗಾ ಹಳ್ಳಿ ಬದೀಗ ಯಾರಿರ್ತಾರೆ…’ ಎಂದು ಬಿಟ್ಟಿದ್ದಳು. ನೋಡನೋಡುತ್ತಿದ್ದಂತೆ ಮಕ್ಕಳ ವರಸೆ ಬದಲಾಗಿತ್ತು. ವಯಸ್ಸಾಗುತ್ತಿದ್ದ ದಂಪತಿ ಮನಸ್ಸು ಮುರಿದು ಹೋಗಿತ್ತು. ಮಾವ ಇತ್ತೀಚೆಗೆ ಮಾತಾಡುವುದನ್ನೂ ಬಿಟ್ಟಿದ್ದ. ಮನೆಲೂ ಮಾತೇ ಆಡುತ್ತಿಲ್ಲವಂತೆ. ಯಾಕೋ ಒಮ್ಮೆ ನೋಡಿಯೇ ಬರೋಣ ಎನ್ನಿಸಿ ಹೊರಬಿದ್ದು ನಾನು ಮನೆಯ ಹೆಬ್ಬಾಗಿಲಿಗೆ ಕಾಲಿಟ್ಟಾಗಲೇ ಅನ್ನಿಸಿದ್ದು ಮನೆಯಿಂದ ಸಂಭ್ರಮ ಎನ್ನುವುದು ಒಮ್ಮೆ ಆಚೆ ಹೋಗಿಬಿಟ್ಟರೆ, ಹೇಗೆ ಗರ ಹೊಡೆಯುತ್ತದೆ ಎಂದು. ಅಂಗಳದಲ್ಲಿ ಅನಾಯಾಸವಾಗಿ ಅಡರುತ್ತಿದ್ದ ಲವಲವಿಕೆ ಸತ್ತು ಹೋಗಿತ್ತು.
ಇಬ್ಬರ ಕಣ್ಣಲ್ಲೂ ಆಸೆ ಬಿಡಿ, ಭರವಸೆಯ ಬೆಳಕೂ ಗೋಚರಿಸುತ್ತಿರಲಿಲ್ಲ. ಮುಖದಲ್ಲಿ ಬದುಕಿನ ಗಮ್ಯಗಳ ಕಡೆಗಿನ ನಿರೀಕ್ಷೆಯ ಆಸೆ ಕಮರಿದ್ದು ಸ್ಪಷ್ಟ. ಬದುಕಿನಲ್ಲಿ ಉತ್ಸಾಹ ಸೋರಿದ್ದರ ಸಂಕೇತ ಎನ್ನುವಂತೆ ಹಾರುಹೊಡೆದಂತಿದ್ದ ಅಂಗಳ, ಬೂದಿ ತುಂಬಿದ್ದ ಒಲೆ, ದೊಡ್ಡ ಅಡುಗೆ ಮನೆಯ ಮಧ್ಯದಲ್ಲಿ ಖಾಲಿ ಖಾಲಿ ಜಾಗ. ಮೂಲೆಯಲ್ಲಿ ಒಂದಿಬ್ಬರ ಬದುಕಿನ ಅನಿವಾರ್ಯವಾಗಿದ್ದ ಒಂದೆರಡು ಪಾತ್ರೆಗಳು. ಎಲ್ಲಕ್ಕಿಂತಲೂ ತೀರಾ ಘಾಸಿಗೊಳಿಸಿದ್ದು ಅವರಿಬ್ಬರ ಮೌನ. ತೀರಾ ಉಸಿರುಕಟ್ಟುವ ಅಸಹನೀಯ ಮೌನ ಆ ಮನೆಗೆ ಭರಿಸುವಂತಹದ್ದಾಗಿರಲಿಲ್ಲ. ಎಲ್ಲೆಲ್ಲೂ ಹರಿಯುತ್ತಿದ್ದ ಗೌಜಿಯ ಹೊನಲು ಇಲ್ಲದ್ದು ಅರಗಿಸಿಕೊಳ್ಳಲೇ ಕೆಲನಿಮಿಷ ಬೇಕಾದವು.
ಆದರೂ ಅತ್ತೆಯ ಮನಸ್ಸು ದೊಡ್ಡದು. ಒತ್ತಾಯದ ನಗು ಮೂಡಿಸಿಕೊಳ್ಳುತ್ತ, ‘ಕಷಾಯ್ ಮಾಡ್ತೀನಾ ಮಾಣಿ’ ಎನ್ನುತ್ತ ಎದ್ದರೆ ದೇಹ ಕೂಡ ಅದ್ಯಾವ ಪರಿ ಸೋತು ಹೋಗಿತ್ತೆಂದರೆ ಸುಮ್ಮನೆ ಮಾನವಾಕೃತಿಯೊಂದು ಚಲಿಸುವಂತೆ ಕಾಣಿಸುತ್ತಿತ್ತು. ಮಾವ ತಲೆ ಬಾಗಿಲಿಗೆ ಕೂತಿದ್ದವ ಎದ್ದು ಒಳ ಬಂದಿರಲಿಲ್ಲ. ಮಾತು ಮೊದಲೇ ನಿಲ್ಲಿಸಿಬಿಟ್ಟಿದ್ದ.
‘ಮಾಣಿ.. ನಮ್ಮುಡುಗ ಮನೆ ತೋಟ ನೋಡ್ಕಳದಿಲ್ಲ ಸರಿನೇ, ಆದರೆ ಆಗೀಗ ಬಂದು ಹೋಗಲೂ ಅಗದಿಲ್ಯೆ? ಇಷ್ಟೆಲ್ಲ ಓದಿಸಿ, ಹುಡುಗ್ರನ್ನ ಮುಂದಕ್ಕ ತಂದಿದ್ದು ನಮ್ಗೆ ತಿಂಗ್ಳು ತಿಂಗ್ಳು ದುಡ್ಡು ದುಗ್ಗಾಣಿ ಕೊಡಲಿ ಅಂತಲ್ಲ. ಬದುಕಲು ಕಲೀಲಿ ಅಂತಾ ಶಾಲಿಗೆ ಕಳಿಸಿದ್ದಾಗಿತ್ತು. ನಮ್ಮ ನಂತರ ಏನಾರ ಮಾಡಿಕೊಳ್ಳಲಿ. ಆದರೆ ಈ ತೋಟ ಬ್ಯಾಣಾ ಕಟ್ಟೊಕ್ಕೆ ನಿಮ್ಮಾವ ಜೀವಾನೆ ತೆಯ್ದಿದಾರೆ ಮಾಣಿ. ಅವ್ರು ಇರೋ ತಂಕಾ ಬಂದು ಹೋಗಿ ಮಾಡಿದ್ರೆ ಸಾಕಿತ್ತು. ನಾನಾದರೂ ಒತ್ತಾಯ ಮಾಡಲ್ಲ. ಆದರೆ ಇದನ್ನೆಲ್ಲ ನಾವಿದ್ದಾಗ್ಲೇ ಮಾರಿ ಬೆಂಗಳೂರಲ್ಲಿ ಅಸ್ತಿ ಮಾಡ್ತೀನಿ ಅಂತಾ ಹೊರಟಿದಾನಲ್ಲ ಸರಿನೇನೋ..? ನಿಮ್ಮಾವಂಗೆ ಈ ಭೂಮಿ ಅಂದ್ರೆ ಜೀವಾ. ಭೂಮಿ ಬೆಲೆ ಏನೂಂತ ಓದದಿರೋ ನಮಗೇ ತಿಳಿಬೇಕಾದರೆ ಇಷ್ಟೆಲ್ಲ ಚೆಂದ ಓದಿದ ಇವ್ನಿಗೆ ತಿಳಿಯದಿಲ್ವ..? ಈಗ ನಾವು ಹೂಂ ಅನ್ಲಿಲ್ಲ ಅಂತ ಮೂರು ವರ್ಷದಿಂದ ಮನೆಗೆ ಬಂದಿಲ್ಲ. ಮಗಳೂ ನನ್ನ ಕೇಳದೆ ಮಾರೋ ಹಂಗಿಲ್ಲ ಅಂತ ಕಾನೂನು ಮಾತಾಡ್ತಾಳೆ.
ಮಾಣಿ ನೀನೊಮ್ಮೆ ಅವರಿಬ್ರಿಗೂ ಮಾತಾಡ್ತೀಯಾ..? ನಾವು ಹೋದ ಮ್ಯಾಲೆ ಏನಾದರೂ ಮಾಡಿಕೊಳ್ಳಲಿ. ಆದರೆ ನಾವಿರುವಾಗಲೇ ಮಾರಿ, ನಮ್ಮನ್ನು ಸಿಮೆಂಟಿನ ಮನೇಲಿ ಕೂರಿಸೋದು ಬ್ಯಾಡಪ್ಪ. ಇನ್ನೆಷ್ಟು ದಿನಾನೋ ನಮ್ಮದೂ ಟೈಮಾಯ್ತು. ಆದರೂ ಮಕ್ಕಳ ಬಗ್ಗೆ ಬೇಜಾರಿಲ್ಲ. ಇಬ್ರಿಗೂ ಮೊದ್ಲಿನ ಹಂಗೆ ಬಂದು ಹೋಗಿ ಮಾಡ್ಕಂಡಿರೋಕೆ ಹೇಳು. ನನ್ನದೂ ಅಂತಿರೋ ಬಂಗಾರ, ಒಡವೆ ಎಲ್ಲ ಕೊಡ್ತೀನಿ ಅದನ್ನು ಒಯ್ಲಿ. ಆದರೆ ನಾವಿದ್ದಾಗ್ಲೇ ಭೂಮಿ ಮಾರಿ ಮಾವನ್ನ ಬದುಕಿದ್ದಾಗ್ಲೆ ಸಾಯಿಸ್ಬ್ಯಾಡ ಅಂತ ಹೇಳ್ತೀಯ.. ಅವ್ರಿಗೆ ಮಾತೇ ನಿಂತಂಗಾಗಿದೆ. ಹು..ಹಾ ಅನ್ನೋದು ಬಿಟ್ರೆ ಬೇರೆ ಮಾತೇ ಆಡ್ತಿಲ್ಲ..’ ಅತ್ತೆ ಮೆಲುದನಿಯಲ್ಲಿ ಬೇಡಿಕೊಳ್ಳುತ್ತಿದ್ದರೆ ಯಾಕೋ ಮುಳ್ಳಣ್ಣಿನ ಮುಳ್ಳು ಎದೆಯಲ್ಲಿ ಮುರಿದ ಸಂಕಟ. ಯಾಕೋ ನಾನು ಸೆಕೆಂಡ್ ಕ್ಲಾಸು ಬಂದಿದ್ದೇ ಒಳ್ಳೆಯದಾಯ್ತು ಅನ್ನಿಸಿತೊಮ್ಮೆ. ಹೊರಟವನೊಮ್ಮೆ ದಣಪೆಯಿಂದ ತಿರುಗಿ ನೋಡಿದೆ. ಬಾಗಿಲಲ್ಲಿ ನಿರೀಕ್ಷೆಯ ಸಣ್ಣ ಆಸೆಯಲ್ಲಿ ಕೈ.. ಸೆರಗು..ಎರಡೂ ಬಾಯಿಗಿಟ್ಟುಕೊಂಡು ಹೊಸ್ತಿಲ ಮೇಲೆ ಸಣ್ಣ ಆಕೃತಿ ಬಾಯಿ ಕಚ್ಚಿ ನಿಂತಿದ್ದು ಕಾಣಿಸಿತು. ನನಗರಿವಿಗೂ ಮೊದಲೆ ಬಿಕ್ಕಳಿಕೆ ಬಂತು..
ಕಾರಣ ..
ಅವಳು ಎಂದರೆ…
(ಲೇಖಕರು ಕಥೆ-ಕಾದಂಬರಿಕಾರರು)