Monday, November 16, 2015

ಅದು ಗುಣಸಂಧಿಯಂತಹ ಕಾಲ…

Ed 2ಗಂಡನೆಂಬುವ ಮಗು ಹುಟ್ಟಿಸಿ ಕೈಬಿಟ್ಟುಬಿಟ್ಟರೆ, ಸಾಮಾಜಿಕ ಜವಾಬ್ದಾರಿ ಮತ್ತು ಕೌಟುಂಬಿಕ ಸಾಮರಸ್ಯ ಒಲ್ಲೆ ಎನ್ನುವ ಗಂಡಸರಿಗೆ ಮದುವೇನೂ ಒಂದು ತೆವಲಾಗಿಬಿಟ್ಟರೆ ಆ ಸುಳಿಯೊಳಗೆ ಸಿಗುವ ಅವಳಂತೂ ಬಿಡಿ, ಮಕ್ಕಳೂ ದುರ್ಭರ ಪರಿಸ್ಥಿತಿಗೆ ಈಡಾಗಿಬಿಡುತ್ತಾರೆ. ಬದುಕಿಸುವವರು ಯಾರು..?
‘ಹೆಣ್ಣುಗಳೆಂದರೆ ಬರೀ ಸೆಕ್ಸ್​ಗೆ ಮಾತ್ರ ಅಂತಾ ಗಂಡಸರಿಗೆ ಯಾಕೆ ಅನ್ನಿಸ್ತದೆ..? ಹಂಗ ಅನ್ನಿಸೋದೆ ಆದರೆ ಮದುವೆ ಯಾಕ ಆಗಬೇಕು? ಯಾವಾಗ ಬೇಕು ಆವಾಗ ಉಪಯೋಗಿಸ್ಕೊಳ್ಳೊಕೆ ಅಂತಾ ಇರ್ತಾರಲ್ಲ ಅಲ್ಲೇ ಕೆಲಸ ಮುಗಿಸ್ಕೊಬಹುದಲ್ಲ…’ ಕಟ್ಟೆಯ ಮೇಲೆ ಪಕ್ಕದಲ್ಲಿ ಕೂತಿದ್ದು ಶೂನ್ಯವನ್ನು ದಿಟ್ಟಿಸುತ್ತ, ಜೀವನದ ತಿರುವಿನಲ್ಲಿ ಅರ್ಥವಾಗದೆ ನಿಂತುಬಿಟ್ಟಿದ್ದ ಉಷಾ ಸೋತು ಸುಣ್ಣವಾದ ಧ್ವನಿಯಲ್ಲಿ ವಿಚಾರಿಸುತ್ತಿದ್ದರೆ ಯಾವ ಉತ್ತರಕ್ಕೂ ಈಡಾಗದೆ ನಾನು ಪಿಳಿಪಿಳಿ ಮಾಡುತ್ತ ಸುಮ್ಮನೆ ಕೂತಿದ್ದೆ. ತಕ್ಷಣಕ್ಕೆ ಉತ್ತರಿಸುವ ಸಂದರ್ಭವೂ ಅದಾಗಿರಲಿಲ್ಲ. ಸಹಜ ಕೌಟುಂಬಿಕ ದೌರ್ಜನ್ಯದ ಕೇಸಿಗಾದರೆ ‘ಎಲ್ಲಿ ನಿನ್ನ ಗಂಡ.. ತಂದು ಕೂರಿಸಿಕೊಂಡು ಸರಿ ಮಾಡೊಣ್ವಾ..’ ಎನ್ನಬಹುದಾದ ಸೀನ್ ಕೂಡ ಅಲ್ಲಿರಲಿಲ್ಲ.
ತೀರಾ ಗಂಭೀರ ಇರಲಿಕ್ಕಿಲ್ಲ ಬಿಡು ಎಂದು ನಾನೂ ಆಕೆಯ ಕರೆಗಳಿಗೆ ಆಗೀಗ ಹೂಂ.. ಹಾಂ.. ಎನ್ನುತ್ತಲೇ ನಿರ್ಲಕ್ಷ್ಯ ಮಾಡಿ ನನ್ನ ಪಾಡಿಗೆ ಉಳಿದುಬಿಟ್ಟಿದ್ದೆ. ಇನ್ಯಾವತ್ತೋ ಕರೆ ಮಾಡಿ ಮಾತಾಡಿದಾಗಲೇ ಗೊತ್ತಾಗಿದ್ದು ಆಕೆ ಆಗಲೇ ಮನೆ ಬಿಟ್ಟು ಸುಮಾರು ಸಮಯವಾಗಿದೆ ಎನ್ನುವ ವಿಷಯ. ಬಾಕಿ ಏನೇ ಆದರೂ ಹೆಣ್ಣುಮಕ್ಕಳು ಸಹಿಸಿಬಿಡುತ್ತಾರೆ. ಆದರೆ ಮಕ್ಕಳು ಮತ್ತು ಕುಟುಂಬ ದಾಂಪತ್ಯದ ವಿಷಯದಲ್ಲಿ ಅವರ ಡೆಡಿಕೇಶನ್ನಿನ ತಾಕತ್ತೇ ಬೇರೆ. ಅವಶ್ಯಕತೆ ಮತ್ತು ಅಗತ್ಯತೆ ಇದ್ರೆ ದೇವರಿಗೆ ಬೇಕಿದ್ದರೂ ಸೆಡ್ಡು ಹೊಡೆದು ಬಿಡುತ್ತಾರೆ.
ಕೌಟುಂಬಿಕ ದೌರ್ಜನ್ಯವನ್ನೂ ಸಹಿಸಿಕೊಂಡು ಜೀವನ ದೂಡುತ್ತಿದ್ದ ಉಷಾ, ಯಾವಾಗ ಮಗುವಿನ ಬದುಕು ಹಳ್ಳ ಹಿಡಿದೀತು ಎನ್ನಿಸಿತೋ ಸಟಕ್ಕನೆ ಎದ್ದು ನಿಂತಿದ್ದಳು. ಮುಂದೇನು? ಎನ್ನುವ ಎರಡನೆಯ ಯೋಚನೆಗೂ ಮೊದಲೆ ಮನೆ ತೊರೆದಿದ್ದಳು. ತೀರಾ ಏನೆಂದರೆ ಏನೂ ಆದಾಯವಿಲ್ಲದಿದ್ದರೂ ನಾಳೆ ಏನು ಎನ್ನುವುದು ಗೊತ್ತೇ ಇಲ್ಲದ ಪರಿಸ್ಥಿತಿ. ಹೆಣ್ಣುಮಗಳೊಬ್ಬಳ ಸ್ವಾಭಿಮಾನ ಅದು. ಅಮ್ಮನ ಮನಸ್ಥಿತಿಯ ಔನ್ನತ್ಯದ ಹೆಜ್ಜೆ ಅದು. ಉಷಾಳ ಎದುರಿಗೆ ಇದ್ದುದು ಬರೀ ಮಗುವಿನ ಬದುಕು ರೂಪಿಸುವ ಏಕಮಾತ್ರ ಗುರಿ. ಆದರೆ ಅವಳಿಗೂ ಅರಿವಿಲ್ಲದ್ದೇನೆಂದರೆ ಪರಿಸ್ಥಿತಿ ತೀರಾ ಅಂಚಿನಲ್ಲಿ ಬಂದು ನಿಂತಿತ್ತು.
ಆವತ್ತು ಆಕೆಯ ಮಗುವಿನ ರಿಪೋರ್ಟ್ ಬರುವುದಿತ್ತು. ತೀರಾ ನಾಲ್ಕೈದು ವರ್ಷದ ಪುಟ್ಟ ಹುಡುಗಿ ಅದು. ಪದೇಪದೆ ರಕ್ತ ಬಸಿದುಕೊಳ್ಳುತ್ತಿದ್ದ ನರ್ಸ್​ಗಳಿಗೂ, ‘ಆಗೀಗೊಮ್ಮೆ ಕೈಕಾಲು ಆಡಿಸಿ ನೋಡು ಕಣ್ಣ ಕೆಳಗಿನ ಪಾಪೆ ಹಿರಿದಿರಿದು ನೋಡಿ, ಉಸಿರೆಳೆದುಕೋ.. ಹಾಂ.. ಈಗ ಬಿಡು,’ ಎನ್ನುವ ಅರ್ಥವಾಗದ ಕ್ರಿಯೆಗಳಿಂದ ಬದುಕಿದ್ದಾಗಲೇ ಸಾಯಿಸುತ್ತಿದ್ದ ಪರೀಕ್ಷೆಗಳಿಗೀಡಾಗಿ, ಯಾವಾಗ ಆಸ್ಪತ್ರೆಯಿಂದ ಹೊರಕ್ಕೆ ಹೋದೇನೋ ಎಂದು ಚಡಪಡಿಸುತ್ತಿತ್ತು ಮಗು. ತುಂಬ ಬೆಳ್ಳಗೆ ಗುಂಡಗೆ ಮುದ್ದು ಮುದ್ದಾಗಿತ್ತು. ಮುಗ್ಧತೆಗಿಂತಲೂ ಚೆಂದವಿತ್ತು ಅದು. ಕಡುಕಪ್ಪು ಕಂಗಳ ಮೇಲೆ ಹಾರಾಡುತ್ತಿದ್ದ ಜೊಂಪೆ ಕೂದಲನ್ನು ಗದರಿಸುವಂತೆ ಎಡಗೈಯಿಂದ ಆಚೀಚೆ ತಳ್ಳುತ್ತಾ, ಇನ್ನೊಂದು ಕೈಯಿಂದ ದೊಗಳೆ ಚೆಡ್ಡಿ ಎಳೆದುಕೊಂಡು ಓಡಾಡುತ್ತಿದ್ದರೆ ..ಒಹ್.. ನಾನೂ ಮತ್ತೊಮ್ಮೆ ಮಗುವಾಗಬಾರದಿತ್ತೆ ಎನ್ನಿಸುತ್ತಿತ್ತು ಅದರ ಮುಗ್ಧತೆಗೆ. ಅದು ಎಲ್ಲೆಂದರಲ್ಲಿ ಲುಟುಲುಟು ಉರುಳುತ್ತಿದ್ದರೆ ಉಷಾಳಿಗಂತೂ ದೇವರೇ ದೃಷ್ಟಿ ಹಾಕಬೇಡಪ್ಪಾ ಎನ್ನುವಂತಾಗುತ್ತಿತ್ತು.
ಅದಕ್ಕಾಗಿ ಕಾಡಿಗೆಯ ಎರಡ್ಮೂರು ಗೆರೆಗಳನ್ನು ಅದರ ಮುಖಕ್ಕೆಳೆದು, ಮುಖವನ್ನೂ ಗಲೀಜು ಮಾಡಿ, ತಿಂದಾದ ನಂತರ ಕೆನ್ನೆಗೆ ಮೆತ್ತಿಕೊಂಡಿದ್ದನ್ನು ಒರೆಸದೆ ಹಾಗೆ ಬಿಟ್ಟು, ಕೂದಲನ್ನು ಬಾಚದೆ, ಮಾಸಿದ ಅಂಗಿ ಅದರ ಮೇಲೆ ಅದಕ್ಕೊಪ್ಪದ ಒಂದು ದೊಗಳೆ ಚೆಡ್ಡಿ ಹಾಕಿ ಹುಡುಗಿನಾ, ಹುಡುಗನಾ ಎನ್ನುವಂತೆ ಕನ್ಪ್ಯೂಸ್ ಮಾಡಿ, ಹೀಗೆ ಹಲವು ವಿಧದಲ್ಲಿ ಅದರ ಚೆಂದವನ್ನು ನೋಡುಗರ ದೃಷ್ಟಿಯಿಂದ ಮರೆಮಾಚಲು ಯತ್ನಿಸುತ್ತಿದ್ದಳು. ಆದರೆ ಹೂವಿಗೆ ಬೇಲಿಯ ಹಂಗೇ..? ಅಂಥ ಅರೆಬರೆ ವೇಷದಲ್ಲೂ ಮಗು ಪೆದ್ದ ನಗೆ ನಗುತ್ತಾ, ಕೈ ಬೀಸುತ್ತ, ಸರಸರನೇ ಕಾಂಪೌಂಡು ಗೋಡೆ ಹತ್ತಿ ಕೂರುತ್ತ ದಾರಿಯಲ್ಲಿ ಹೋಗುವವರ ಅಕರ್ಷಿಸುತ್ತಿತ್ತು. ಆದರೆ ಅದು ಆಡಾಡುತ್ತಲೇ ಉಸಿರು ಬಿಗಿ ಹಿಡಿದಂತಾಗಿ ಕಿರುಚುತ್ತಿತ್ತು. ಇದ್ದಕ್ಕಿದ್ದಂತೆ ತಿದಿಯೊತ್ತಿದ್ದಂತೆ ಅದಕ್ಕೆ ಉಸಿರುಕಟ್ಟುತ್ತಿತ್ತು.
ಅಸಲಿಗೆ ಮಗುವಿಗೂ ಏನೂ ತೋಚುತ್ತಿರಲಿಲ್ಲ. ಆಗೀಗ ಉಸಿರು ಕಟ್ಟುತ್ತಲೇ ಮೂಗು ಸಿಂಡರಿಸಿಕೊಂಡು ಓಡಾಡುತ್ತಿತ್ತು. ರಾತ್ರಿಯಾದಂತೆ ಸಮಸ್ಯೆ ಉಲ್ಬಣಿಸುತ್ತಿತ್ತು. ಶ್ವಾಸಕೋಶಕ್ಕೆ ವಾಯುವಿನ ಕೊರತೆಯಾಗಿಬಿಡುತ್ತಿತ್ತು. ಅಷ್ಟೆ.. ಮಗು ಎದ್ದು ಕೂತು ಬಿಡುತ್ತಿತ್ತು. ರಾತ್ರಿಯಿಡೀ ಜಾಗರಣೆ. ಪರಿಸ್ಥಿತಿ ಹೀಗೆ ಮುಂದುವರಿಯುತ್ತಿದ್ದಂತೆ ಗಂಭೀರವಾದ ಚಿಕಿತ್ಸೆಯ ಅಗತ್ಯ ಕಂಡುಬರತೊಡಗಿತ್ತು. ಆದರೆ ಮೊದಲ ಒಂದೆರಡು ಮಾಮೂಲಿನ ಚಿಕಿತ್ಸೆ ಫಲಕಾರಿಯಾಗದೆ ಸ್ಥಳೀಯ ವೈದ್ಯರು ಮಗುವನ್ನು ಪರಿಣಿತರ ಕಡೆಗೆ ಒಯ್ಯುವಂತೆ ಸೂಚಿಸುತ್ತಿದ್ದಂತೆ ಮನೆಯಲ್ಲಿದ್ದವರ ವರ್ತನೆ ಬದಲಾಗತೊಡಗಿತ್ತು.
ಆದರೆ ದುರದೃಷ್ಟ ಎಂದರೆ ಪುಟ್ಟ ಕಲಾಕೃತಿಯಂತಹ ಮಗುವನ್ನು ಕೂಡಲೇ ರಕ್ಷಿಸಿಕೊಳ್ಳಬೇಕಾಗಿದ್ದ ಅಪ್ಪನಾದವ, ಮೊದಲೇ ಹೆಣ್ಣು ಮಗು ಎಂದು ಬೇಸರಿಸುತ್ತಿದ್ದವ ಈಗ ತೀರಾ ಹೋದರೆ ಹೋಗಲಿ ಎನ್ನುವ ಹಂತ ತಲುಪಿಬಿಟ್ಟಿದ್ದ. ಯಾವ ಲೆಕ್ಕದಲ್ಲೂ ಚಿಕಿತ್ಸೆಗೆ ಖರ್ಚು ಮಾಡುವ ಲಕ್ಷಣವೇ ಇರಲಿಲ್ಲ. ಅವನ ನಿರ್ಲಕ್ಷ್ಯಂದ ಮತ್ತು ಪ್ರತಿ ದಿನ ಮಗು ಒದ್ದಾಡುತ್ತಿದ್ದ ಪರಿಸ್ಥಿತಿಗೆ ಉಷಾ ನಿಮಿಷಗಳಲ್ಲಿ ಸಮಯವನ್ನು ಲೆಕ್ಕ ಹಾಕುವ ಹಂತಕ್ಕೆ ಬಂದಿದ್ದಳು. ಅಮ್ಮನ ಮನೆಯಿಂದ ಅನುಕೂಲಕರವಾದ ಪರಿಸಿತ್ಥಿಯೇನೂ ಇರಲಿಲ್ಲ. ಆದರೆ ಇವತ್ತಿಗೂ ಪ್ರತಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಬೆಂಬಲ ಮತ್ತು ಒಂದು ಒಲವು ಅಂತಾ ಸಿಕ್ಕುತ್ತಿದ್ದರೆ ಅದು ಅಮ್ಮನ ಮನೆಯಿಂದಲೇ ಎನ್ನುವುದು ಇತರ ಹೆಣ್ಣುಮಕ್ಕಳಿಗಾದಂತೆ ಉಷಾಳಿಗೂ ಆಗಿದ್ದು ನಮ್ಮ ಪ್ರಸ್ತುತ ಪರಿಸ್ಥಿಯ ವ್ಯಂಗ್ಯ ಮತ್ತು ವಿಪರ್ಯಾಸ. ಯಾವ ಲೆಕ್ಕದಲ್ಲೂ ಸಹಾಯ ಸಲ್ಲಿಸುವ ಸ್ಥಿತಿಯಲ್ಲಿ ಇಲ್ಲದ ಅವಳಮ್ಮ, ಉಷಾಳ ಕೈಯಿಂದ ಮಗುವನ್ನು ಒಯ್ದು ಡಾಕ್ಟರರ ಎದುರಿಗಿಟ್ಟು ಕೈ ಮುಗಿದಿದ್ದಳು. ಕೆಂಪು ಕೆನ್ನೆಯ ಲುಟು ಲುಟು ಎನ್ನುತ್ತಿದ್ದ, ಒಂದು ನಿಮಿಷ ನಿಲ್ಲದ, ಚೆಂದಗೆ ಟೇಬಲ್ ಪಕ್ಕ ನಿಂತು ಅವರ ಸ್ಟೇತಾಸ್ಕೋಪನ್ನೆ ಕಿತ್ತುಕೊಳ್ಳುವಂತೆ ನೋಡುತ್ತಿದ್ದ ಮಗುವಿನ ಆ ಚೆಲುವಿನ ಹಿಂದೆ ಕಹಿ ಸತ್ಯವೊಂದು ಮನೆ ಮಾಡಿರಬಹುದೆನ್ನುವ ಅಂದಾಜು ಆ ಕ್ಷಣಕ್ಕೆ ವೈದ್ಯರಿಗೂ ಇರಲಿಲ್ಲ. ಆದರೆ ಅಮ್ಮನಾದವಳು ಹೇಗೆ ಸುಮ್ಮನಿದ್ದಾಳು..?
ಅಲ್ಲಿಂದಿಲ್ಲಿಗೆ ಓಡಾಡಿದ ಮಗುವಿನ ಮೈಯಿಂದ ಕಾಲು ಲೀಟರ್​ನಷ್ಟು ರಕ್ತ ಹಲವು ಪರೀಕ್ಷೆಗೆಂದು ಬಸಿದು ಆದ ಮೇಲೆ ಗೊತ್ತಾಗಿತ್ತು. ಮಗುವಿನ ಮೂಗಿನ ಮೇಲ್ಭಾಗದಲ್ಲಿ ಅದ್ಯಾವುದೋ ಅರಿವಿಗೆ ಸಿಗದ ಗಡ್ಡೆ ಬೆಳೆದು ಕೂತುಬಿಟ್ಟಿತ್ತು. ಅದನ್ನು ಮೂಗಿನ ಮೂಲಕ ನಳಿಕೆ ತೂರಿಸಿ, ಬಾಯಿಯಿಂದ ಅದರ ಒಂದಷ್ಟು ಮಾದರಿ ಸಂಗ್ರಹಿಸಿ ಹೀಗೆ ಏನು ಮಾಡಿದರೂ ಸಾಧ್ಯವಾಗದೆ ಈಗ ಮೂರನೆಯ ಬಾರಿಗೆ ಆ ಪರೀಕ್ಷೆ ಫಲಿತಾಂಶಕ್ಕಾಗಿ ಕಾದು ಕೂತಿದ್ದಳು ಉಷಾ. ಒಂಟಿಯಾಗಿ ನಿಂತ ಅವಳ ಜತೆಗಿದ್ದು ‘ಏನಾಗಲ್ಲ ಬಿಡು’ ಎಂದು ಕೊಂಚ ಧೈರ್ಯ ಹೇಳಲೂ ಯಾರೂ ಇರಲಿಲ್ಲ. ಪ್ರತಿಯೊಬ್ಬರ ಅಸಲಿತನ ಗೊತ್ತಾಗುವುದೇ ಇಂಥ ಸಂದರ್ಭದಲ್ಲಿ. ಚೂರುಪಾರು ಸ್ನೇಹಿತರೂ ‘ಹೌದಾ.. ಒಳ್ಳೇ ಡಾಕ್ಟರಿಗೆ ತೋರಿಸು’ ಎಂದು ಅತ್ಯಂತ ಉಚಿತ ಸಲಹೆ ಕೊಟ್ಟರೇ ವಿನಾ ‘ನಿನ್ನ ಜೊತೆ ನಾನೂ ಇದ್ದೀನಮ್ಮ’ ಎನ್ನಲಿಲ್ಲ.
ಸರಿಯಾಗಿ ಆಟೋದಲ್ಲಿ ಓಡಾಡಲು ಆಗುವಷ್ಟೂ ದುಡ್ಡಿರಲಿಲ್ಲ. ಅಮ್ಮನಾದವಳು ಉಷಾಳಿಗೆ ಮಗುವನ್ನು ಕರೆದೊಯ್ಯುವ ಹೊತ್ತಿಗೆ ಹೇಗೋ ಎಲ್ಲಿಂದಲೋ ಹೊಂಚಿ ಒಂದಿಷ್ಟು ನೋಟುಗಳ ಮುದ್ದೆಯನ್ನು ಕೈಗಿಟ್ಟು ಮಗುವಿಗೆ ಲೊಚ ಲೊಚ ಮುತ್ತಿಟ್ಟು ಕಳಿಸುತ್ತಿದ್ದಳು. ಬೆಂಗಳೂರಿನ ಒಂದು ತುದಿಯಿಂದ ಇನ್ನೊಂದು ತುದಿಗೂ, ಅದರ ಪರೀಕ್ಷೆಗಳಿಗೆ ಇನ್ಯಾವುದೋ ಮೂಲೆಯ ಲ್ಯಾಬಿಗೆ ಹೋಗುವಾಗಲೇ ಅವಳ ಜೀವ ಅರ್ಧವಾಗುತ್ತಿತ್ತು. ಅದಕ್ಕಿಂತಲೂ ದೊಡ್ಡದೆಂದರೆ ಅಂಥ ಆಸ್ಪತ್ರೆಗೆ ಹೋದಾಗಲೇ ಜನರಿಗೂ ಅರ್ಥವಾಗಿ ಬಿಟ್ಟಿರುತ್ತೆ ಏನಾಗಿರಬಹುದೆಂದು. ಈ ಮಗೂಗಾ..? ಎಂದು ಹುಬ್ಬೇರಿಸಿ ನಿಲ್ಲುತ್ತಿದ್ದರು ಎದುರಿಗೆ ಸಿಕ್ಕವರೆಲ್ಲ. ದೇವರಂಥ ವೈದ್ಯ ಶ್ರೀಕುಮಾರ್ ಮಾತ್ರ ಮಗುವಿನ ಬಿಳಿ ಕೆನ್ನೆ ಮೆಲ್ಲಗೆ ತಾಡಿಸುತ್ತಾ, ‘ಇದನ್ನು ಪಾರಾನಾಸಲ್ ಕ್ಯಾವಿಟಿ ಸೈನಸ್ ಕ್ಯಾನ್ಸರ್ ಎನ್ನುತ್ತಾರೆ. ಇದಕ್ಕೆ ನಾಳೆ ಗುರುವಾರವೇ ಆಪರೇಟ್ ಮಾಡೋಣ. ಕೊಂಚ ತಡವಾಗಿದೆ. ಆದರೂ ಮಗುವಿಗೆ ಏನಾದರೂ ಆಗಲು ಬಿಟ್ರೆ ಆ ದೇವರೂ ನನ್ನ ಕ್ಷಮಿಸಲ್ಲ. ಧೈರ್ಯವಾಗಿರು’ ಎಂದುಬಿಟ್ಟರು. ಅಲ್ಲಿಗೆ ಕೆಂಗುಲಾಬಿಯಂತಹ ಮಗು ಇನ್ನೆರಡು ದಿನದಲ್ಲಿ ಕಾಯಂ ಆಗಿ ಆಸ್ಪತ್ರೆಯ ಮಂಚಕ್ಕೆ ಬರಲಿತ್ತು. ಉಷಾ ಎದುರಿಗಿದ್ದ ವೈದ್ಯರೇ ಸ್ವತಃ ದೇವರೇನೋ ಎನ್ನುವಂತೆ ಕಾಲು ಹಿಡಿದು ಕೂತು ಬಿಟ್ಟಿದ್ದಳು. ಅವರೂ ಕೈ ಬಿಡಲಿಲ್ಲ. ನಿಧಾನಕ್ಕೆ ಅವಳನ್ನೆಬ್ಬಿಸಿ ಕೂರಿಸಿ ನೀರು ಕುಡಿಸಿ, ‘‘ಪ್ರತಿ ಬಾರಿಯೂ ದೇವರು ನಮ್ಮನ್ನು ಪರೀಕ್ಷಿಸುತ್ತಾನಮ್ಮ. ಆದರೆ ಅಮ್ಮಂದಿರು ನಮ್ಮನ್ನು ಬದುಕಿಸುತ್ತಾರೆ. ನಿಮ್ಮ ಈ ನಂಬಿಕೇನೇ ನಮಗೆ ಪ್ರತಿ ಸಾರಿಯೂ ಕೊನೇ ಕ್ಷಣದವರೆಗೂ ಗುದ್ದಾಡಿಸುತ್ತದೆ. ನಾವು ಮತ್ತೆ ಮತ್ತೆ ಸಾವಿಗೆ ಧಿಕ್ಕಾರ ಕೂಗ್ತಿದೀವಿ…’’ ಎನ್ನುತ್ತಿದ್ದಂತೆ ಆಕೆ ಎದ್ದು ನಿಂತಿದ್ದಳು. ಉಳಿದದ್ದು ಮುಂದಿನ ವಾರಕ್ಕಿರಲಿ.
ಕಾರಣ
ಅವಳು ಎಂದರೆ…

No comments:

Post a Comment