Saturday, August 3, 2013


ಅವನಿಗೇನೋ ಕಾರಣಗಳಿದ್ದವು. ನನಗ್ಯಾವ ಕೀಳರಿಮೆ ಕಾಡಿತ್ತು ... ?


SANTOSHKUMAR MEHANDALE's picture
ಬಾಲ್ಯ ಕಾಲದ ಕಥನ 
ಮೌನದ ಮಾತುಗಳು..
 ( ಹತ್ತಾರು ವರ್ಷಗಳ ಹಿಂದೆ ಆತ " ಬೇರೆದಾವ್ರ ಕಡಿಂದ ಹೇಳಿಸಿಕೊಂಡ ನಗೋದಕ್ಕಿಂತ ನಾವ ಹೇಳಿಕೊಂಡ್ರ ಏನೂ ಅನಸಾಂಗಿಲ್ಲ ನೋಡಲೇ..." ಎಂದಿದ್ದ..) ಮೊನ್ನೆ ಮೈಸೂರಿನಲ್ಲೊಂದು ರಾಷ್ಟ್ರಮಟ್ಟದ ಕಾನ್ಫ್‌ರೆನ್ಸಿನಲ್ಲಿ ಪಾಲ್ಗೊಳ್ಳುವ, ತನ್ಮೂಲಕ ಮರಾಠಿಯ ಜನಪ್ರಿಯ ದಿನಪತ್ರಿಕೆ " ಲೋಕಸತ್ತಾ" ದ ಸಂಪಾದಕರಾದ ಶ್ರೀಯುತ ಕುಮಾರ್ ಕೇತ್ಕರ್ ಅವರ ಜೊತೆಯಲ್ಲಿ ವಿಡಿಯೋ ಕಾನ್ಫರೆನ್ಸಿನಲ್ಲಿ ನಮ್ಮವರ ಪರವಾಗಿ ಸಂವಾದ ನಡೆಸುವ ಅಪರೂಪದ ಅವಕಾಶ ದೊರಕಿತ್ತು. ಈ ಸಂವಾದ ಮುಂಬೈನ ಮುಖ್ಯ ವಾಹಿನಿಯಲ್ಲಿ ಪ್ರಸಾರವಾಯಿತು ಕೂಡಾ. ಬಹುಶ: ನನಗಾದ ಒಟ್ಟು ವಯಸ್ಸಿನಷ್ಟು ಅವರ ಪತ್ರಿಕೋದ್ಯಮ ಸೇರಿದಂತೆ ಅನುಭವಕ್ಕೇನೆ ಅಷ್ಟು ವಯಸ್ಸಾಗಿದ್ದಿರಬೇಕು.
ಅದರಲ್ಲಿ ದೇಶದ ಸೈನ್ಸ್‌ಫಿಕ್ಷನ್ ಸಾಹಿತ್ಯ ಜಗತ್ತಿನ ಗಣ್ಯಾತಿಗಣ್ಯರೆಲ್ಲಾ ಪಾಲ್ಗೊಂಡಿದ್ದರು. ಚೆನೈನ ಶ್ರೀ ಪನ್ನೀರ್ ಸೆಲ್ವಂ ಎಂಬ ವಿದೇಶದಲ್ಲೆಲ್ಲಾ ಇನ್ನಿಲ್ಲದಂತೆ ಸೈನ್ ಫಿಕ್ಷನ್ ಬಗ್ಗೆ ಪಾಂಗಿತವಾಗಿ ಮಾತಾಡಿ ಹೆಸರು ಗಳಿಸಿದ ಬುದ್ಧಿಜೀವಿಯೂ ಅಲ್ಲಿದ್ದರು. ದಿನಕರ ಚರಕ ಎಂಬ ತುಂಬು ಮುಖದ ಕಾಶ್ಮೀರಿ ಸುಂದರಾಂಗ ಜಾಗತಿಕವಾಗಿ ಹೆಸರು ಮಾಡಿರುವ ಛಿಜಿezಥಿಛಿ.ಜಣಡಿ ಎಂಬ ವೆಬ್ ಮಾಲೀಕ ಹಾಗು ಸಂಪಾದಕ ಅಮೇರಿಕೆಯಿಂದ ಬಂದು ಅದರಲ್ಲಿ ಪಾಲ್ಗೊಂಡಿದ್ದ. ಹಾಗೆ ತುಂಬ ಅಕಸ್ಮಿಕವಾಗಿ ನನಗೆ ಅವಕಾಶ ಲಭ್ಯವಾಗಿದ್ದ ಆ ಸಮಾರಂಭದಲ್ಲಿ ತುಂಬು ವಯಸ್ಸಿನ ಹಿರಿಯರಾದ ಜಿ.ಟಿ.ನಾರಾಯಣರಾವ್ ಕೂಡಾ ಸೇರಿದ್ದರಲ್ಲದೇ ಕೊನೆಯಲ್ಲಿ ಹೋಗುವಾಗ ಕಾಲಿಗೆ ನಮಸ್ಕರಿಸಲೆಂದು ಹೋದರೆ, ಕೆಳಕ್ಕೆ ಬಿಡದೆ ತಬ್ಬಿಕೊಂಡು "...ಇನ್ನು ತುಂಬಾ ಬೆಳೀಬೇಕಪ್ಪಾ ಚೆನ್ನಾಗಿ ಬರೀತಿ... ಹೀಗೇ ಬರೀತಿರು..." ಎಂದು ಹರಸಿದ್ದರು. ಮಾತಾಡದೆ ಸುಮ್ಮನೆ ಅವರಿಗೆ ತಲೆ ಬಾಗಿದ್ದೆ.
ಅದೇ ದಿನ ಸಂಜೆ ಒಂದು ಕರೆ ನನ್ನ ಅಂಕಣವನ್ನು ಹೊಗಳಿಕೊಂಡು ಬಂದಿತ್ತು. ಅಸಲಿಗೆ ಕರೆ ನೀಡಿರುವ ವ್ಯಕ್ತಿಯನ್ನು ನಾನು ಯಾವುದೇ ಕಾರಣಕ್ಕೂ ನೆನಪಿಸಿಕೊಳ್ಳುವ ಸಂಪಕ೯ವಿರಲೇ ಇಲ್ಲ. ಅಸಲಿಗೆ ಆತ ನಾನಿದ್ದ ಊರಿನವನೂ ಅಲ್ಲ. ಹಿಂದೊಮ್ಮೆ ನಾನಿದ್ದ ಪಕ್ಕದ ಅರ್ಲವಾಡಾದಿಂದ ಕರೆ ನೀಡಿದ್ದ. ತುಂಬು ಧನ್ಯವಾದಗಳೊಂದಿಗೆ ಸಂಪರ್ಕ ಕಡಿಯುವಾಗ ನಮ್ಮೂರಿನ ಹುಡುಗನೊಬ್ಬನ ನೆನಪು ತೂರಿ ಬಂದಿತ್ತು. ಅಲ್ಲಿಯವರೆಗೂ ಆತ ನನ್ನ ನೆನಪಿನಾಳದಲ್ಲಿ ಕದಲಿರಲೇ ಇಲ್ಲ. ಅಸಲಿಗೆ ಅವನ ಹೆಸರೂ ಕೂಡಾ ನನಗೆ ನೆನಪಿಲ್ಲ. ನಾನಿದ್ದ ಊರಿನಲ್ಲಿ ಹಿಂದಿನ ಓಣಿಯಲ್ಲಿ ಅವನು ವಾಸಿಸುತ್ತಿದ್ದ. ಅವನು ಬಹುಶ: ನನಗಿಂತಲೂ ಎರಡ್ಮೂರು ವರ್ಷಕ್ಕೆ ದೊಡ್ಡವನಿದ್ದ. ಒಂದು ಕಾಲು ಕೊಂಚ ಊನವಿತ್ತಾ ಈಗ ಖಚಿತವಾಗಿ ನೆನಪಾಗುತ್ತಿಲ್ಲ. ನಾನು ಬಹುಶ: ಏಳನೆಯ ತರಗತಿಯಲ್ಲಿದ್ದೆ. ಆತ ಆಗಲೇ ಹೊಲದ ಕೆಲಸಕ್ಕೆ ಹೋಗುತ್ತಿದ್ದ. ಕೊಂಚ ವಿಚಿತ್ರವಾಗಿ ಆಡುತ್ತಿದ್ದ ಅವನು. ಆ ಬಗ್ಗೆ ಯಾರೂ ಅಷ್ಟಾಗಿ ಗಮನ ನೀಡಿರದಿದ್ದರೂ ಕೂಡಾ ಅವನಲ್ಲಿ ಒಂದು ಇನ್ಫೀರಿಯಾರಿಟಿ ಬೆಳೆದುಬಿಟ್ಟಿತ್ತಾ ಈಗಲೂ ಖಚಿತವಾಗುತ್ತಿಲ್ಲ.
ಆದರೆ ಇದ್ದಕ್ಕಿದ್ದಂತೆ ಒಂದಿನ ಸಂಜೆಯ ಹೊತ್ತು ಊರ ಹೊರಗಿನ ಬಯಲಲ್ಲಿ ಇತರ ಹುಡುಗರು ಆಟವಾಡುತ್ತಾ ಆನಂದಿಸುತ್ತಿದ್ದ ವಾಲಿ ಬಾಲ್ ಸಂಭ್ರಮದಲ್ಲಿ ಭಾಗಿಯಾಗಿ ತಾನೂ ಇನ್ನಿಲ್ಲದಂತೆ ಕುಣಿಯುತ್ತಿದ್ದವನು ಅಷ್ಟು ದೂರದಲ್ಲಿ ಚಪ್ಪಾಳೆ ತಟ್ಟುತ್ತಾ ಕಾಲು ಕುಣಿಸುತ್ತಾ ನಿಂತಿದ್ದ ನನ್ನ ಬಳಿಗೆ ಸಾಗಿದ್ದ.
ಮೊದ ಮೊದಲು ಮಾಮೂಲಿನ ಮಾತುಕತೆ ಸಾಗಿದವಾದರೂ ಬರುಬರುತ್ತಾ ಆತ ಆಡುತ್ತಿದ್ದ ಮಾತುಗಳಲ್ಲಿ ಹುದುಗಿದ್ದ ಅರ್ಥ ಈಗೀಗ ತುಂಬಾ ಸ್ಪಷ್ಟವಾಗಿ ಆಗುತ್ತಿದೆ. ಬಹುಶ: ಮೊದಲೇ ಹೇಳಿದಂತೆ ಓದಿನಲ್ಲೂ ಅಷ್ಟಕ್ಕಷ್ಟೆ ಎನ್ನಿಸುವಂತಿದ್ದ ಅವನ ಆವರೇಜುತನ ಹಾಗು ಅವನಿಗಿದ್ದ ನೂನ್ಯತೆಗಳು ಅವನನ್ನು ಹಾಗೆ ಆಡಿಸಿತ್ತಾ ಗೊತ್ತಿಲ್ಲ.
" ನಿನಗೇನ್ ಬಿಡೊ ನಿಮ್ಮಕ್ಕ... ಅಣ್ಣ ಹೇಳಿಕೊಡ್ತಾರು. ಭಟ್ಟರ ಹುಡುಗ್ರ ಇದೀರಿ.. ಶಾಣ್ಯಾ ಇರ್ತೇರಿ.. ಓದ್ತೇರಿ... " ಎಂದವನು ನಿಲ್ಲಿಸಿ " ... ನೋಡಲೇ, ನನಗ ಗಣಿತ ತಲ್ಯಾಗ ಹೋಗಾಂಗಿಲ್ಲ... ಮತ್ತ ಹುಡುಗೋರು ಹ೦ಗ.. ಮಾಡ್ತಾರ ನೋಡ... ಸುಮ್ಮ ಸುಮ್ಮನ ಮಶ್ಕೀರಿ ಮಾಡ್ತಾರ. ಅದಕ್ಕ ನನ್ನ ನೋಡಿ ಯಾವನಾರ ನಗೋ ಬದಲಿಗೆ ನಾನ ಜೋಕ್ ಮಾಡಿ ಬಿಡ್ತೇನಿ " ಎಂದಿದ್ದ. ಯಾಕೆ ಅವನಿಗೆ ಆ ವಯಸ್ಸಿನಲ್ಲಾಗಲೇ ಅಂಥದ್ದೊಂದು ಕೀಳರಿಮೆ ಮೂಡಿ ಬಿಟ್ಟಿತ್ತಾ..?ಆಗ ಇದನ್ನೆಲ್ಲ ಅರ್ಥಮಾಡಿಕೊಂಡು ಸಮಾಧಾನಿಸುವ ವಯಸ್ಸೂ ಅಲ್ಲ. ಅದಕ್ಕಿಂತಲೂ ಮಿಗಿಲಾಗಿ ಗಣಿತ ಪಿರಿಯಡ್ ಬಂದಕೂಡಲೇ ನಾನೇ ಎಷ್ಟೋ ಬಾರಿ ಪಿಳಿ ಪಿಳಿ ಕಣ್ಬಿಟ್ಟುಕೊಳ್ಳುತ್ತಿದ್ದವನು. ನಾನೇ ಓದಿನಲ್ಲಿ ತೋರಿಸದ ಶ್ರದ್ಧೆ... ಎಲ್ಲರನ್ನೂ ಪ್ರಶ್ನಿಸುವ... ಮಾತು ಮಾತಿಗೂ ರೇಗುವ ಶಾರ್ಟ್ ಟೆಂಪರ್‌ಮೆಂಟಿನಿಂದಾಗಿ ಕಿಲಾಡಿತನ ಮಾಡಿಕೊಂಡು ಅಲ್ಲಲ್ಲಿ "... ಭಟ್ಟರ ಹುಡುಗ, ಕಡೆದಾಂವ ಸಲ್ಪ ಬರೊಬ್ಬರ ಇಲ್ಲ... ಸುಮಾರ " ಎಂದು ಆಡಿಕೊಳ್ಳುವಷ್ಟು ಆವರೇಜಿಗೆ ಸರಿದು ನಿಂತಿದ್ದವನು. ಹಾಗಾಗಿ ಇನ್ನು ಅವನು ನನ್ನ ಬಗ್ಗೆ ಇವ್ರ ಶಾಣ್ಯಾರ ಮನಿಯಂವ ಅಂತ ಅಂದ್ಕೊಂಡಿದ್ದಕ್ಕೆ ಕೊಂಚ ಒಳಗೊಳಗೇ ಬೀಗಿದ್ದೆನಾ...?
ಯಾಕೆಂದರೆ ನನಗೂ ಓದಿಗೂ ಆವತ್ತಿನ ಮಟ್ಟಿಗೆ ಅಷ್ಟಕ್ಕಷ್ಟೆ. ಆರಂಭದಲ್ಲಿ ಹುಶಾರಿನ ಹುಡುಗ ಅನ್ನಿಸಿಕೊಂಡವ ತೀರ ಎಸ್ಸೆಸ್ಸೆಲ್ಸಿ ಬರುವ ಹೊತ್ತಿಗೆ ಸೆಕೆ೦ಡ್ ಕ್ಲಾಸಿನಲ್ಲಿ ಉಸಿರು ಕಟ್ಟಿ ಪಾಸಾಗಿದ್ದೆ. ನಂತರದ ದಿನದಲ್ಲಿ ಅದ್ಯಾವ ಜಿದ್ದಿಗೆ ಬಿದ್ದೆನೋ ಗೊತ್ತಿಲ್ಲ. ಸಾಕೆನ್ನಿಸುವಷ್ಟು ತೆಕ್ಕೆ ತುಂಬಾ ಡಿಗ್ರಿಗಳನ್ನು ಮಾಡಿಕೊಂಡೆ ಆ ಪ್ರಶ್ನೆ ಬೇರೆ. ಆದರೆ ಹಾಗೆ ಹೇಳಿದ್ದ ಅವನು ನಂತರದಲ್ಲಿ ಎರಡ್ಮೂರು ಸಲ ನಾನು ಗಮನಿಸಿದಂತೆ ತನ್ನಲ್ಲಿ ಕೀಳರಿಮೆಯನ್ನೂ, ಊರಿನಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಒಮ್ಮೆಯಲ್ಲ ಒಮ್ಮೆ ಕಾಡಿಯೇ ಕಾಡಿದ್ದ ಕೊಂಚ ಬಡತನ.. ಇತ್ಯಾದಿಗಳ ಜೊತೆಯಲ್ಲಿ ಓದಿನಲ್ಲೇನೂ ಇಲ್ಲದ ಅವನಿಗೆ ಅದು ಮನದಲ್ಲೆಲ್ಲೋ ತುಂಬಾ ಗಾಯದಂತೆ ತಾಗಿ ಬಿಟ್ಟಿತ್ತಾ. ಆದ್ರೆ ನಂತರದ ಹಲವು ಬಾರಿಯ ಮಾತಿನಲ್ಲಿ ಅವನು ಸಹಜವಾಗಿ ಎಂಬಂತೆ ತನ್ನ ಕೊಂಚ ವಿಶಿಷ್ಟ ಮ್ಯಾನರಿಸಮ್ಮಿನ ಆಂಗಿಕ ಅಭಿನಯದ ಮೂಲಕ ತನಗೇನು ಆಗಿಲ್ಲ ತಾನು ಎಲ್ಲರಂತೆ ಎನ್ನುವ ವಿಷಯವನ್ನು ತೋರಿದ್ದ. ಅದು ಸಹಜವೂ ಆಗಿತ್ತು. ಅವನಾಗಿ ಮಾಡುತ್ತಿದ್ದ ಗುಣ ಲಕ್ಷಣವಲ್ಲ ಅದು. ಮನಸ್ಸು ತನಗೇ ಅರಿವಿಲ್ಲದೇ ಕೀಳರಿಮೆಯನ್ನು ಮುಚ್ಚಿಟ್ಟುಕೊಳ್ಳಲು ಅನುಸರಿಸುವ ಒಂದು ರೀತಿಯ ನಾಟಕ ಅದು.
ಆಗಲೂ ನನಗೆ ಅಂಥಾ ವ್ಯತ್ಯಾಸವೇನೂ ಈ ವಿಷಯದಲ್ಲಿ ಗೋಚರಿಸಿರಲ್ಲಿಲ್ಲ. ಆದರೆ ನಂತರದ ಒಂದು ಸಂಜೆ ಇದ್ದಕ್ಕಿದ್ದಂತೆ ಅವನು ತೀರಿಕೊಂಡ ಸುದ್ದಿ ಬಂದಿತ್ತು. ಕೊನೆ ಕೊನೆಗೆ ನಮ್ಮದೇ ಊರಿನ ಟ್ರಕ್ಕೊಂದರಲ್ಲಿ ಕೆಲಸ ಮಾಡುವಾಗ ಮೇಲಿಂದ ಬಿದ್ದು ತೀರಿಕೊಂಡಿದ್ದ ಎಂಬ ಸುದ್ದಿ ಬಂದಿತ್ತು. ಅದು ಅವನು ಮೇಲಿಂದ ಬಿದ್ದಿದ್ದನೋ ಅಥವಾ ಅವನ ಮೇಲೆ ಅವನು ಲಾರಿಗೆ ತುಂಬಿಸುತ್ತಿದ್ದ ಹತ್ತಿಯ ಅಂಡಿಗೆಗಳು ಬಿದ್ದಿದ್ದವೋ ಒಟ್ಟಾರೆ ಒಂದು ಆಕಸ್ಮಿಕದಲ್ಲಿ ಅವನು ತೀರಿಕೊಂಡಿದ್ದ. ಆ ಹೊತ್ತಿಗೆ ನನಗೂ ಎಲ್ಲರಂತೆ ಛೇ ಪಾಪ ಎನ್ನಿಸಿ ಸುಮ್ಮನಾಗಿಸಿದ್ದ ಆ ಸುದ್ದಿ ಮೊನ್ನೆ ಮೊನ್ನೆಯವರೆಗೂ ಏನೂ ಅನ್ನಿಸಿರಲೇ ಇಲ್ಲ. ಆದರೆ ಇದ್ದಕ್ಕಿದ್ದಂತೆ ಊರ ಕಡೆಯಿಂದ ಚಿಮ್ಮಿ ಬಂದ ಒಂದು ಕರೆ ಅದ್ಯಾಕೋ ತನ್ನ ಪರಿಚಯವನ್ನು ಹೇಳಿಕೊಂಡು ಮಾತಾಡುತ್ತಿದ್ದರೆ ಹತ್ತು ನಿಮಿಷದಲ್ಲಿ ಇನ್ನಿಲ್ಲದಂತೆ ಅವನ ನೆನಪನ್ನು ತಂದಿಟ್ಟು ಬಿಟ್ಟಿತ್ತು. ಹಾಗೆ ತನ್ನನ್ನು ಪರಿಚಯಿಸಿಕೊಂಡು " ನೀವು ಆಗ ಭಾಳ ಸಣ್ಣಗ ಇದ್ರಿ... ಈಗ ಫೋಟೊದಾಗ್ ನೋಡಿದ್ರ ಗುರ್ತ ಸಿಗಧಂಗಾ ಆಗಿದಿರಿ..." ಇತ್ಯಾದಿ ಮಾತಾಡುತ್ತಿದ್ದರೆ ಯಾಕೋ ಅದ್ಯಾರೆಂದು ಎಷ್ಟು ತಲೆ ಕೊಡಹಿದರೂ ನೆನಪಾಗದ ವ್ಯಕ್ತಿಯ ಬದಲಿಗೆ ಇವನ ನೆನಪಾಗಬೇಕೆ.
ವಿಚಿತ್ರವೆಂದರೆ ಹತ್ತಾರು ವರ್ಷಗಳ ಹಿಂದೆ ಆತ " ಬೇರೆದಾವ್ರ ಕಡಿಂದ ಹೇಳಿಸಿಕೊಂಡ ನಗೋದಕ್ಕಿಂತ ನಾವ ಹೇಳಿಕೊಂಡ್ರ ಏನೂ ಅನಸಾಂಗಿಲ್ಲ ನೋಡಲೇ..." ಎಂದಿದ್ದ, ತನ್ನನ್ನು ತಾನೇ ಗೇಲಿಗೊಳಪಡಿಸಿಕೊಳ್ಳುವ ಅಂಥಾ ಬುದ್ಧಿಜೀವಿಯೇನೂ ಅಲ್ಲದ ಅವನ ಆ ಮಾತು ಇವತ್ತು ಇನ್ನಿಲ್ಲದಂತೆ ತಿವಿದದ್ದು ಸುಳ್ಳಲ್ಲ. ಅಸಲಿಗೆ ನನ್ನ ವೃತ್ತಿಗೂ ಓದಿಗೂ ಏನೊಂದು ಸಂಬಂಧವಿಲ್ಲದೆಯೂ, ಅಷ್ಟಕ್ಕೂ ತೀರ ಸೆಕೆಂಡ್ ಕ್ಲಾಸಿನಲ್ಲಿ ಎಸ್ಸೆಲ್ಸಿ ಪಾಸಾದ ನಾನು ಯಾವ ಕೀಳರಿಮೆಯನ್ನು ಮೆಟ್ಟಿ ಹಾಕಲು ಹಾಗೆ ತೆಕ್ಕೆ ತುಂಬಾ ವರ್ಷಕ್ಕೆರಡು ಡಿಪ್ಲೋಮಾಗಳನ್ನು... ಮಾಸ್ಟರ್ ಡಿಗ್ರಿಯನ್ನು ಓದಿಕೊಂಡೆ...?.
ನಾನ್ಯಾವ ಕೀಳರಿಮೆಯನ್ನು ಮೆಟ್ಟಲು ಪ್ರಯತ್ನಿಸಿದೆ. ಗೊತ್ತಾಗುತ್ತಿಲ್ಲ. ಆದರೆ ಹೀಗೆ ತೀರ ಸಂಜೆಯ ಹೊತ್ತಿನಲ್ಲಿ ಕರೆದು ಒಂದು ಯೋಚನೆಯನ್ನು ನನ್ನಲ್ಲಿ ಸ್ಫುರಿಸುವಂತೆ ಮಾಡಿದ ಊರ ಹತ್ತಿರದ ಮಿತ್ರನಿಗೆ ಹೃದಯ ಪೂರ್ವಕ ನಮಸ್ಕಾರಗಳಿದ್ದೆ ಇದೆ.

Thursday, August 1, 2013

ಮೌನದ ಮಾತುಗಳು : ಸಾವಿನ ಹಕ್ಕಿಯ ರೆಕ್ಕೆಯ ಕೆಳಗೆ.

( ಅಷ್ಟು ಸತತ ಪ್ರಯತ್ನಗಳ ಹೊರತಾಗಿಯೂ ಜೀವ ಎನ್ನುವ ಅಮೂಲ್ಯ ಶಕ್ತಿ ಅದ್ಹೇಗೆ ಕೈಯಿಂದ ತಪ್ಪಿಸಿಕೊಳ್ಳುತ್ತಿತ್ತು ಗೊತ್ತಾಗಲೇ ಇಲ್ಲ. ಬಹುಶ: ಅದಕ್ಕಾಗೇ ಸಾವು ಈಗಲೂ ಯಾವಾಗಲೂ ನಿಗೂಢಾ... ವಿವರಿಸಲು ಅದೊಂದಕ್ಕೆ ಮಾತ್ರ ಅನುಭವಿಗಳಿಲ್ಲ... )

ಹೀಗೆ ಸತತವಾಗಿ ಹಲವು ಸಾವುಗಳಿಗೆ ನಾನು ಜೀವಂತ ಸಾಕ್ಷಿಯಾಗಿದ್ದುದು ಬಹುಶ: ಇದೇ ಮೊದಲ ಬಾರಿಯಾ..? ಇರಬೇಕು. ಯಾಕೆಂದರೆ ಕಳೆದ ಮೂರ್ನಾಲ್ಕು ದಿನದಲ್ಲಿ ನಾನು ಕುಳಿತಿದ್ಡ ಜಾಗವೇ ಹಾಗಿತ್ತು. ಹೆಚ್ಚೆ೦ದರೆ ಎಡದಿಂದ ಬಲಕ್ಕೆ ನಾನು ಕುಳಿತ ಸ್ಟೂಲಿನ ದಿಕ್ಕು ಬದಲಾಗುತ್ತಿತ್ತೇ ವಿನಹ ಉಳಿದದ್ದೆಲ್ಲವೂ ಎಂದಿನಂತೆ ಆಚೀಚೆ ಯಾವಾಗ ಪ್ರಾಣ ಹೋದಿತೋ ಎಂದು ಭಯಬೀಳುವ, ಗುಳಿ ಬಿದ್ದ ಕಣ್ಣುಗಳ, ಬಾಯಿಯಲ್ಲಿ, ಕೈಯ್ಯಲ್ಲಿ, ಕೊನೆಗೆ ಅವರ ಸ್ರಾವ ಮತ್ತು ಬಾಹ್ಯ ವಿಸರ್ಜನೆಗಳಿಗೂ ನಳಿಕೆ ಹಾಕಿಕೊಂಡ, ಕೆಲವೊಂದು ದೇಹಗಳು ಊಟಕ್ಕೂ ನಳಿಕೆ ಏರಿಸಿಕೊಂಡು ಮಲಗಿರುವ ಕರುಣಾಜನಕ ಹೃದಯ ವಿದ್ರಾವಕ ದೃಶ್ಯ ಮಾಮೂಲು.
ಅಸಲಿಗೆ ಹಾಗೆ ನಾನು ಮೊದಲ ದಿನ ಹೋಗಿ ಅಲ್ಲಿಗೆ ಕುಳಿತುಕೊಳ್ಳುತ್ತಲೇ ವಾತಾವರಣ ಸಹಜ ಇಲ್ಲ ಎನ್ನಿಸಿತ್ತು. ಯಾಕೆಂದರೆ ನಾನಿದ್ದ ಆ ಕೋಣೆಗೆ ಆಲ್ಲಿದ್ದ ಇತರೆ ಜನರೂ, ಸಿಬ್ಬಂದಿಗಳೇ ಕಾಲಿಡಲು ಯಾಕೋ ಅನುಮಾನಿಸುತ್ತಾ ನಿಂತಿರುತ್ತಿದ್ದುದು ಅದರಲ್ಲೂ ರಾತ್ರಿ ಸರಹೊತ್ತು ಕಳೆಯತೊಡಗುತ್ತಿದ್ದಂತೆ ಎಲ್ಲೆಂದರಲ್ಲಿ ಆಚೀಚೆ ಹರಡಿಕೊ೦ಡಿರುತ್ತಿದ್ದ ಸಿಬ್ಬಂದಿಗಳು ಕಾಫೀಯ ನೆವದಲ್ಲಿ ಒಂದೇ ಟೇಬಲ್ಲಿನ ಬಳಿಗೆ, ಗಾಢ ದೀಪದ ಬುಡದಲ್ಲಿ ಸೇರಿಕೊಂಡು ಯಾವಾಗ ರಾತ್ರಿ ಎರಡರಿಂದ ಬೆಳಗಿನ ಐದರವರೆಗೆ ಹೊತ್ತು ಕಳೆದು ಬೆಳಕು ಮೂಡಿತೋ ಎಂದು ಕಾಯುತ್ತಾ, ಸಮಯ ಸವೆಸಿ ಆಗೀಗ ಮಧ್ಯದ ಹಾಲ್‌ನಿಂದಲೇ ಉಳಿದೆಲ್ಲಾ ಕೋಣೆಗಳಿಗೂ, ಅಲ್ಲಿದ್ದ ಜೀವಚ್ಛವಗಳ ಮೇಲೂ ಅವುಗಳ ಮಧ್ಯದಲ್ಲೇ ಮುಚ್ಚಿರುತ್ತಿದ್ದ ಬೆಳ್ಳಗಿನ ಬಟ್ಟೆಗಳ ಉದ್ದಾನುಉದ್ದ ಮ೦ಚಗಳ ಕಡೆಗೂ ಬೆರಗು ಕಣ್ಣು ಬೀರುತ್ತಾ, ಹೋದ ವೇಗದಲ್ಲೆ ಹಿಂತಿರುಗಿ ಹಾಲ್ ಮಧ್ಯೆ ಸೇರಿಕೊಂಡು ಬಿಡುತ್ತಿದ್ದರು.
ಹೀಗೆ ಸರಿ ರಾತ್ರಿ ಎರಡೂವರೆ ಹೊತ್ತಿಗೆ ಪಿಳಿ ಪಿಳಿ ಕಣ್ಣು ಬಿಟ್ಟು ಕೂತಿರುತ್ತಿದ್ದ ನನ್ನನ್ನು ಒಂದು ಪ್ರೇತವೆಂಬಂತೆ ಕಣ್ಣು ಬಿಟ್ಬಿಟ್ಟು ನೋಡುತ್ತಾ ಇದ್ದಾಗಲೇ ನಾನು ಅದನ್ನು ಗಮನಿಸಿದ್ದು. ಅದಕ್ಕೆ ಕಾರಣ ನನ್ನ ಬೆನ್ನ ಹಿಂದೆ ಒಂದೇ ಒಂದು ಅಡಿಗೂ ಕಮ್ಮಿ ದೂರದಲ್ಲಿ ಪ್ರಯಾಸ ಪಡದೆಯೂ ಕೈಚಾಚಿದರೆ ನಿಲುಕುವಷ್ಟು ಪಕ್ಕದಲ್ಲೇ ಒಂದು ಶವವಿತ್ತು. ನಾನು ಅಂದೇ ಸಂಜೆ ಕೆಲವೇ ಗಂಟೆಯ ಮೊದಲು ಅವರು ಉಸಿರಿಗಾಗಿ ಚಡಪಡಿಸುವುದನ್ನೂ ನೋಡಿದ್ದೆ. ಈಗ ಇದ್ದಕ್ಕಿದ್ದಂತೆ ವ್ಯಕ್ತಿ "ಬಾಡಿ"ಯಾಗಿ ಬದಲಾಗಿದ್ದ. ಭಯ ಹುಟ್ಟಿಸಿದ್ದ. ಅದನ್ನು ಗಮನಿಸುವ ಮೊದಲು ಎಷ್ಟೋ ಬಾರಿ ನಿದ್ರೆಯ ಜೊಂಪು ತಡೆಯುವ ಭರದಲ್ಲಿ ನಾನು ಕೂಡಾ ಅದೇ ಮ೦ಚಕ್ಕೆ ಒರಗಿ ಸಣ್ಣಗೆ ರೆಸ್ಟು ಮಾಡಿದ್ದೆ. ಈಗ ನೋಡಿದರೆ ಸರಿ ರಾತ್ರಿಯಲ್ಲಿ ಹಾಲ್ ಮಧ್ಯದಿಂದ ನನ್ನನ್ನು, ಪಕ್ಕದ ಶವವನ್ನು ಒಂದೇ ಥರಹ ನೋಡುತ್ತಿದ್ದಾರೆ.
ಅಂಗಾತ ಮಲಗಿ, ತೆರೆದ ಬಾಯಿ ಹಾಗೇ ಬಿಟ್ಟುಕೊಂಡಿದ್ದ ಶವ, ಆಗಾಗ ಹಾರಿ ಬರುತ್ತಿದ್ದ ಸಣ್ಣ ಸೊಳ್ಳೆಯ ಗುಂಯ್ ಬಿಟ್ಟರೆ ಈ ಹಾಲ್ ಮಧ್ಯೆ ಸೇರಿಕೊಂಡಿದ್ದ ಹುಡುಗಿಯರ ಪಿಸ ಪಿಸ, ಆಗೀಗೊಮ್ಮೆ ಬದುಕುಳಿದಿದ್ದವರು ಮೈ ಮುರಿಯುತ್ತಿದ್ಡ, ಹೊರಳಿ ಮಗ್ಗಲು ಬದಲಿಸುವ ಸಶಬ್ದಕ್ಕೆ ಸಾಕ್ಷಿಯಾಗುತ್ತಾ ಅವರ ಕಣ್ಣಿಗೆ ಆಹಾರವಾಗಿ ಕುಳಿತೇ ಇದ್ದೆ. ಇದಾದ ಮರುದಿನ ಸಂಜೆ ಎಂದಿನಂತೆ ಅದೇ ರೂಮಿನೊಳಕ್ಕೆ ಕಾಲಿಟ್ಟಾಗ ಪರಿಸ್ಥಿತಿ ಇನ್ನೂ ಗಂಭೀರವಾಗಿತ್ತು. ಯಾಕೆಂದರೆ ನಿನ್ನೆಯ ಹಿಂದಿನ ಮ೦ಚ ಖಾಲಿಯಾಗಿತ್ತು. ಅದರ ಪಕ್ಕದಲ್ಲಿ ಇದ್ದ ವ್ಯಕ್ತಿಗೆ ಕೃತಕವಾಗಿ ಹೃದಯ ಅದುಮಿ ಉಸಿರು ಹೊರಳಿಸುವ ಪ್ರಯತ್ನ ನಡೆದಿತ್ತು. ಬೆಳ್ಳಂಬೆಳಿಗ್ಗೆಯಷ್ಟೆ ಬಂದಿದ್ದ ವ್ಯಕ್ತಿಯತ್ತ ಸಣ್ಣಗೆ ಸಾಂತ್ವನದ ನಗೆ ಬೀರಿ ಎದ್ದು ಹೋಗಿದ್ದೆ. ಈಗ ನೋಡಿದರೆ ಅವನೂ ಶವವಾಗುತ್ತಾನಾ..? ನನ್ನ ಸಂಶಯ ಸುಳ್ಳಾಗಿರಲಿಲ್ಲ.
ರಾತ್ರಿಯ ಭಯಾನಕ ಅವಧಿ ಇನ್ನು ಒಂದು ಗಂಟೆ ಇರುವಂತೆ ಅಷ್ಟು ದೂರದಲ್ಲಿ ಆ ದಿನ ರಾತ್ರೆಯ ಕಂಪೆನಿಗೆಂಬಂತೆ ಮತ್ತೊಂದು ಶವ ತಯಾರಾಗಿತ್ತು. ಇದೇನು ದಿನವೂ ಶವಗಳ ಜೊತೆ ಕುಳಿತುಕೊಳ್ಳುತ್ತಿದ್ದೇನೆ ಎಂದು ದಿಕ್ಕು ತಿರುಗಿಸಿದೆ. ಎಂದಿನಂತೆ ಆ ರಾತ್ರಿಯೂ ನಟ್ಟಿರುಳ ಹೊತ್ತಿನಲ್ಲಿ ಎದುರಿಗಿನ ಹಾಲ್‌ನಲ್ಲಿದ್ದ ಸಿಬ್ಬಂದಿ ನರ್ಸ್ ಹುಡುಗಿಯರ ಕಣ್ಣಿಗೆ ಆಸಕ್ತಿಯ ಪ್ರಾಣಿಯಾಗಿ ಕುಳಿತಿದ್ದೆ. ಯಾಕೆಂದರೆ ನನ್ನಂತೆ ಆ ರೂಮಿನಲ್ಲಿ ಇದ್ದವರಾರೂ ಸರಿರಾತ್ರಿಯ ಹೊತ್ತಿನಲ್ಲಿ ಹೀಗೆ ಅಬ್ಬೆ ಪಾರಿಗಳಂತೆ ಕಣ್ಬಿಟ್ಟು ಕೂರುತ್ತಿರಲಿಲ್ಲ. ಹೇಗೋ ಒಂದು ಜಾಗ ಅಡ್ಜಸ್ಟ್ ಮಾಡಿಕೊಂಡು ಆಯಾ ಮ೦ಚದ ಪಕ್ಕದಲ್ಲಿ ಮಲಗಿರುತ್ತಿದ್ದರು. ನಿದ್ರೆಗೂ ಮೊದಲೇ ಅಥವಾ ತಮ್ಮ ಪಕ್ಕದ ಮ೦ಚದಲ್ಲೊಮ್ಮೆ ಶವವಿದೆ ಎನ್ನುವುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೆ ನಿದ್ರಿಸಿರುತ್ತಿದ್ದರು. ಹೀಗಾಗಿ ನನ್ನ ಮೇಲಿನ ಅನುಕಂಪವೋ, ಆಸಕ್ತಿಯೋ ರಾತ್ರಿಯ ಎರಡೂವರೆಗೆ ಹಾಲ್ ಮಧ್ಯದಿಂದ ಕಾಫಿಗೆ ಕರೆ ಬಂತು.
ಇಷ್ಟಗಲ ಕಣ್ಬಿಡುತ್ತಿದ್ದ ನರ್ಸ್ ಟ್ರೈನಿಂಗ್ ಹುಡುಗಿಯ ಕಣ್ಣಲ್ಲಿ ಸಣ್ಣ ಅನುಮಾನದ ಸೆಳಕು ನನ್ನ ಮೇಲಿತ್ತು "..ಯಾಕೆ ನೀವು ಹೊರಕ್ಕೆ ಬಂದು ಮಲಗೋಲ್ಲ ಅಥ್ವಾ ಆ ಮ೦ಚಗಳಿಂದ ಇತ್ತ ಸರಿಯಲ್ಲ.. ಅಲ್ಲಿ ಪಕ್ಕದಲ್ಲಿ ಬಾಡಿಯಿದೆ..!.." ಏನಂದು ಉತ್ತರಿಸಲಿ. ಜೀವವಿದ್ದಾಗ ಹೆದರಿಸದ ಮನುಶ್ಯ ಶವವಾದ ತಕ್ಷಣ ಅದ್ಯಾಕೆ ಹೆದರಿಸುತ್ತಾನೆ...? ಒ೦ದು ಕಾಲದಲ್ಲಿ ನಾನು ಹೀಗೇ ಶವಗಳನ್ನು ಹೂಳಿದ್ದ/ಸುಟ್ಟಿದ್ದ ಸ್ಮಶಾನದಲ್ಲಿ ಸರಹೊತ್ತಿನವರೆಗೂ ಕಾಲು ಚಾಚಿ ಕುಳಿತಿರುತ್ತಿದ್ದುದು, ಸದ್ದಿಲ್ಲದೇ ಎಡೆ ಎತ್ತಿಕೊಂಡು ಬಿಡುತ್ತಿದ್ದುದು ಈಗಲೂ ಆಡಿಕೊಳ್ಳುವ ವಿಷಯ. ಉತ್ತರ ಬಹುಶ: ಮರುದಿನ ಸಿಗಲಿತ್ತಾ ಗೊತ್ತಿಲ್ಲ. ಮೂರನೆಯ ದಿನದ ರಾತ್ರಿ ಮತ್ತೆ ಶವಗಳ ಜೊತೆ ನನ್ನ ರಾತ್ರಿ ಸಂಸಾರ ಆರ೦ಭವಾಗಿತ್ತು. ಇವತ್ತು ಎದುರಿಗಿದ್ದ ಮ೦ಚ ಬಿಟ್ಟು ಉಳಿದವರು ಜೀವ೦ತ ಇದ್ದಾರಾ..? ಸಂಶಯ.
ಅದರಲ್ಲಿ ಸಂಜೆ ಬೇಗ ಆಗಮಿಸಿದಾಗ ಮೊದಲನೆಯ ಮ೦ಚದಲ್ಲಿದ್ದ ವ್ಯಕ್ತಿ ಸರಿಯಾಗಿ ಕುಡಿದು ಕರಳು ಬಕ್ಕಬಾರಲಾಗುವಂತೆ ಸುಟ್ಟಿದ್ದ. ಕುಡಿದದ್ದು ಅರಗಿಸುವ ತಾಕತ್ತಿರಲಿಲ್ಲ. ಸರಿ ಪ್ರಾಯದ ಹೆಂಡತಿ ಮಗುವನ್ನು ಅನಾಥನನ್ನಾಗಿಸಲು ಸಿದ್ಧನಿದ್ದಂತೆ ತನ್ನ ದೇಹವನ್ನು ಸಿಬ್ಬಂದಿ ಕೈಗೊಪ್ಪಿಸಿ ಆಗೀಗೊಮ್ಮೆ ಉಸಿರೆಳೆಯುತ್ತಾ ಮಲಗಿದ್ದ. ಬಾಯಿ, ಮೂಗು ಎಲ್ಲೆಡೆಯಲ್ಲೂ ಕೊಳವೆ ಹಾಕಿ ನಾಲ್ಕಾರು ಜನ ಜೀವ ಹಿಡಿದಿಡುವ ಪ್ರಯತ್ನಕ್ಕಿದ್ದರು. ಕುತೂಹಲಕ್ಕೆ ಪ್ರಾಣ ಹೋಗುತ್ತದಾದರೆ ಹೇಗೆ ಹೋಗುತ್ತದೆ ಎಂದು ಗಮನಿಸುತ್ತಾ ಅವರ ಹಿಂದೇ ನಿ೦ತಿದ್ದೆ. ಉಹೂ೦ ಅಲ್ಲೇನಿದೆ ಗೊತ್ತಾಗಲು. ತಾಜಾ ವೈದ್ಯನೊಬ್ಬ ಹೃದಯ ಅಮುಕಿ ಪ್ರಾಣವಾಯು ಒಳಕ್ಕೆ ಸೆಳೆಯಲು ಪ್ರಯತ್ನಿಸುತ್ತಾ, ಎದೆ ಗೂಡು ಅಮುಕಿ ಅಮುಕಿ ಸುಸ್ತಾಗುತ್ತಿದ್ದ.
ಉಹೂ೦.. ನೋಡ ನೋಡುತ್ತಿದ್ದಂತೆ ಬಾಯಿಗಿಟ್ಟ ಕೊಳವೆಗಳಲ್ಲಿ ಚಲಿಸುತ್ತಿದ ಜೀವದ್ರವ ಅಲ್ಲೆ ನಿಂತು ಹೊರಕ್ಕೆ ಹರಿಯಿತು. ಯುವ ವೈದ್ಯ ಕೈಚಲ್ಲಿದ್ದ. ಸಣ್ಣ ಹತಾಶೆ ಅವನ ಮುಖದಲ್ಲಿತ್ತು. ವಿಚಿತ್ರವೆಂದರೆ ಅವರು ಅದನ್ನಾರಿಗೂ ನೇರವಾಗಿ ಘೋಷಿಸದೇ ಆಪ್ತರಲ್ಲೊಬ್ಬರಿಗೆ ಮಾತ್ರವೇ ವಿವರಿಸಿ ಆಚೆ ನಡೆದಾಗ, ಅದನ್ನು ಅರಿಯದ ಹೆಂಗರಳು ಬಾಯಿಯಲ್ಲಿದ್ದ, ಕೈಗಿದ್ದ ಕೊಳವೆ ನೋಡುತ್ತಾ, ಆಗೀಗ ಮೈದಡುವುತ್ತಾ ".. ಕಾಫಿ ಕುಡಿತಿಯೇನಪ್ಪಾ..? ಗಂಜಿ ಕಾಯ್ಸ್ಕಂಬರಾಕೆ ಅವ್ಳಿಗೆ ಹೇಳಿದಿನಿ ಇನ್ನೇನು ಬಂದಿಬಿಡ್ತಾಳೆ.." ಎನ್ನುವ ಕಕ್ಕುಲಾತಿಗಳ ಮಧ್ಯೆ, ಎದುರಿಗಿದ್ದುದು ಶವ ಎಂದರಿವಾಗುತ್ತಿದ್ದಂತೆ, ಹಿಂದೆ ಸರಿದು ಸುತ್ತೆಲ್ಲಾ ನೋಡಿದಳು. ಅಲ್ಲಿಯವರೆಗೂ ಕಾಫಿ, ಊಟಕ್ಕೆ ಈಡಾಗುತ್ತಿದ್ದ ಉಪಚಾರದ ಜಾಗದಲ್ಲಿ ಭಯ.. ಭಯ.. ಭಯ... ಅದ್ಹೇಗೆ ಇಮ್ಮಿಡಿಯೇಟ್ ವ್ಯತ್ಯಾಸ...? ನನ್ನರಿವಿಗೆ ಬರಲಿಲ್ಲ. ಆಕೆಯ ಕಂಗಳಲ್ಲಿ ಅಲ್ಲಿಯವರೆಗಿದ್ದ ಕಕ್ಕುಲಾತಿಯ ಬದಲಿಗೆ ಸಾವಿನ ನೆರಳು.
ನಾನು ಎದ್ದು ಹೋಗಿ ಒಮ್ಮೆ ನೋಡಿದೆ. ಅಂಗಾತ ಬಿದ್ದಿದ್ದ ಕುಡುಕನ ಎದೆ ಕೆಂಪಗಿತ್ತು. ಅದುಮಿಸಿಕೊಂಡಿದ್ದಕ್ಕಾ ಅಥವಾ ಎದೆಯಿಂದ ಪ್ರಾಣ ಹಾರಿದ್ದಕ್ಕಾ...? ನೋವಿನ ವಿಕಾರ ಗೆರೆಗಳು ಮುಖದ ಮೇಲೆ ಹಾಗೆ ಇದ್ದವು. ಅಂಗಿ ಸರಿಪಡಿಸಿ, ವಿರುದ್ಧ ದಿಕ್ಕಿಗೆ ತಿರುಗಿಕೊಂಡಿದ್ದ ಕೈಗಳನ್ನು ಸ್ವಸ್ಥಾನಕ್ಕೆಸರಿಸಿ.. ಉಹೂ೦ ಅಷ್ಟು ಸುಲಭಕ್ಕೆ ಸಾಧ್ಯವಾಗಲಿಲ್ಲ. ಯಾಕೆಂದರೆ ಆಗಲೇ ಗಂಟೆಗೂ ಮೇಲ್ಪಟ್ಟ ಅವಧಿಯಲ್ಲಿ ದೇಹ ಸೆಟೆದುಕೊಳ್ಳಲಾರಂಭಿಸಿತ್ತು. ಸುಮ್ಮನೇ ಇದ್ದ ಹಳೆಯ ಬೆಡಶಿಟ್ ತಲೆಗೆ ಎಳೆದು ಬಂದು ಕುಳಿತಾಗಲೇ ಗೊತ್ತಾಗಿದ್ದು ಆ ದಿನ ನನ್ನ ಸುತ್ತಲೂ ಮೂರು ಶವಗಳಿದ್ದವು. ಅವುಗಳತ್ತ ಲಕ್ಷ್ಯಕೊಡದೆ ಹಾಗೆ ನಾನು ಬೆಡ್ ಶೀಟ್ ಎಳೆಯುತ್ತಿದ್ದಾಗಲೇ ಹಾಲ್ ಮಧ್ಯದ ಹೊಸ ನರ್ಸ್ ಟ್ರೈನಿಂಗ್ ಹುಡುಗಿ ಇಷ್ಟಗಲ ಕಣ್ಬಿಟ್ಟು ನನ್ನನ್ನು ಒಂದೇ ತರಹ ಗಮನಿಸುತ್ತಿದ್ದುದು.
ತಲೆ ಕೊಡವಿ ಅಲ್ಲೇ ಇದ್ದ ಡಾಕ್ಟರ್ಸ್‌ಗಳ ಟಬ್ಬಿನೊಳಕ್ಕೆ ಕೈಮುಳುಗಿಸಿ ಸಿಂಕಿನಲ್ಲಿ ತೊಳೆದು ಹೊರಕ್ಕೆಬಂದೆ. ಮಧ್ಯಭಾಗದಲ್ಲಿ ಎಂದಿನಂತೆ ಮಧ್ಯರಾತ್ರಿಯ ಕಾಫ್ಹಿ ಸರಬರಾಜು. ಈ ಬಾರಿ ಸಂಕೋಚವಿಲ್ಲದೇ ಹೋಗಿ ಸ್ಟೂಲೆಳೆದುಕೊಂಡು ಕುಳಿತು ಕಪ್ಪನ್ನೆತ್ತಿಕೊಂಡಿದ್ದೆ. ಹಿಂದೆ ನೋಡಿದೆ ಶವಗಳು ಹಿಂಬಾಲಿಸಿರಲಿಲ್ಲ. ಉಳಿದವರು ನೆಮ್ಮದಿಯಾಗಿ ಕುಳಿತರು. ಆದರೆ ಇನ್ನೊಂದು ಸಾವಿನ ಹಕ್ಕಿ ರೆಕ್ಕೆಯಗಲಿಸುತ್ತಾ ಆಗೀಗ ಅದೇ ಹಾಲ್‌ನ ಮಧ್ಯದಿಂದ ರೂಮಿನೊಳಕ್ಕೆ ಎಷ್ಟೊತ್ತಿಗೂ ಕಾಲಿಡಲಿದೆ ಎಂದು ಅವರಾರಿಗೂ ಗೊತ್ತಿರಲಿಲ್ಲ. ನನ್ನೊಬ್ಬನನ್ನು ಬಿಟ್ಟು. ಕಾಯುತ್ತಲೇ ಕುಳಿತ್ತಿದ್ದೆ. ಯಾಕೋ ಕೊಂಚ ತಡವಾಗಿತ್ತು. ಬಹುಶ: ಅದಕ್ಕೂ ಗೊತ್ತಾಗಿತ್ತೇನೋ ನನ್ನ ಕಾವಲು. ನಾನು ಸತತ ನಾಲ್ಕು ದಿನಗಳ ಶವಾಗಾರದಂತಿದ್ದ ಆ ಆಸ್ಪತ್ರೆಯ ಎಮರ್‌ಜೆನ್ಸಿ ಹಾಲ್‌ನಿಂದ ಈಚೆ ಬಂದಿದ್ದೆ. ಬೆಳಕು ಹರಿಯುವವರೆಗೂ ಯಾವ ಶವಗಳೂ ಹುಲು ಮಾನವರಂತೆ ಕದಲದೇ ಜೀವ ಇದ್ದವರಿಗಿಂತಲೂ ಸಾಧುವಾಗಿ ಸುಮ್ಮನಿದ್ದವು. ಕ್ಷಣ ಕಾಲವೂ ನನ್ನ ಕಾಡಿರಲಿಲ್ಲ. ಜೀವಂತ ಮನುಶ್ಯರಿಗಿಂತ ನಿಜಕ್ಕೂ ಮೇಲೆನಿಸಿದ್ದವು. ಭಯ ಬೀಳಲು ಕಾರಣವೇನಿರಲಿಲ್ಲ. ಆದರೆ ಕಾಯ್ದು ಕೂತಿದ್ದ ಇನ್ನೊಂದು ಸಾವು ತನ್ನ ಕರಿ ನೆರಳ ರೆಕ್ಕೆಯಗಲಿಸಿ ಫಡಫಡಿಸುತ್ತಲೇ ಇತ್ತು. ಅಂತೆಯೇ ನನ್ನ ಕಾವಲು ಕೂಡಾ...!

ಮೌನದ ಮಾತುಗಳು ..! - ಅದು ಬದುಕಿನ ಆರಂಭದ ಹೊಸ ರಾತ್ರಿ

ಬಹುಶ ಚಳಿಗಾಲದ ಡಿಸೆಂಬರ್ ಹದಿನೆಂಟು ಅಥವಾ ಇಪತ್ತೊಂದು ಇರಬೇಕು... ಸರಿಯಾಗಿ ೨೦ ವರ್ಷದ ಹಿಂದೆ ನಾನು ಬೆಂಗಳೂರಿನ ಗಲ್ಲಿಗಳಿಗೆ ಇಷ್ಟಿಷ್ಟೆ ಇಂಚು ಇಂಚಾಗಿ ತೆರೆದುಕೊಳ್ಳುತ್ತಿದ್ದೆ. ದಿನವೂ ಸಂಜೆ ಹೋಗಿ ಎಂ.ಜಿ. ರಸ್ತೆಯ ಪಕ್ಕೆಗೆ ಆತುಕೊಂಡಂತಿದ್ದ ಹೌಸ್ ಆಫ್ ಲಾರ್ಡ್ಸ್‌ನ ಮೇಲ್ಮಹಡಿಯಲ್ಲಿ ಕಂಪ್ಯೂಟರಿಗೆ ಕೈ ಹೂಡಿ ಕುಳಿತುಕೊಂಡರೆ ಬೆಳಗಿನ ಎರಡು ಗಂಟೆಯವರೆಗೂ, ಕುಳಿತಲ್ಲೇ ಕುಳಿತು ಬುಡ ಚಪ್ಪಟೆಯಾಗುತ್ತಿದ್ದವು. ಇದ್ದ ಆರು ಹುಡುಗರ ಪೈಕಿ ಎಲ್ಲರನ್ನೂ ಆಗೀಗ ಗೋಳು ಹೊಯ್ದುಕೊಳ್ಳುತ್ತಿದ್ದ, ನನ್ನ ಕಿರಿಕಿರಿ ಮಾಡುತ್ತಿದ್ದ ಕಮೆಂಟುಗಳು ಮತ್ತು ಗಂಟೆಗೊಮ್ಮೆ ಪ್ಲಾಸ್ಕಿನಿಂದ ಬಗ್ಗಿಸಿಕೊಂಡು ಸೊರ್ರ್ ಎಂದು ಹೀರುತ್ತಿದ್ದ ಕಾಫಿಯ ಶಬ್ದ ಬಿಟ್ಟರೆ, ನಮ್ಮದೇ ಮಾತು ನಗೆ.. ಮಧ್ಯೆ ಮಧ್ಯೆ ..ಬ್ರೆಡ್ಡು.. ಅಪರೂಪಕ್ಕೊಮ್ಮೆ ಯಾರಾದ್ರೂ ಸ್ಪಾನ್ಸರ್ ಮಾಡಿದ್ರೆ ಅಲ್ಲೇ ಪಕ್ಕದಲ್ಲಿದ್ದ ಗಾಡಿಯಂಗಡಿಯಿಂದ ಮೆಣಸಿನಕಾಯಿ ತಂದಿಟ್ಟುಕೊಂಡು ಚಪ್ಪರಿಸುತ್ತಿದ್ದೇವು. ಹಾಗೆ ತಿನ್ನುವಾಗಲೆಲ್ಲಾ ಕದ್ದು ನೋಡುತ್ತಿದ್ದ ನೀಲಿ ಚಿತ್ರದ ತುಣುಕುಗಳಿಗೆ ಬೆಚ್ಚಗಾಗುತ್ತ, ನಮಗೆ ಗೊತ್ತಿರುವ ಹುಡುಗಿಯರನ್ನು ಅದಕ್ಕೆ ಹೋಲಿಸುತ್ತಾ, ಆಗೀಗ ಬಂದು ಕಣ್ಣು ಬಿಡುವ ಸೂಪರ್ ವೈಸರ್ ಆಚೆ ಹೋಗುತ್ತಿದ್ದಂತೆ ಕಿಸಕ್ಕನೆ ನಕ್ಕು, ಅವನು ಇತ್ತ ತಿರುಗುವುದರೊಳಗಾಗಿ ಮತ್ತೆ ಅದೇ ಗಂಭೀರ ಗಣಪತಿಯಂತೆ ಮೂತಿ ಉದ್ದವಾಗಿಸಿಕೊಂಡು, ಹುಳ್ಳಗಾಗುವ ಅವನ ಮುಖವನ್ನು ಊಹಿಸಿಕೊಳ್ಳುತ್ತಾ ಕೀಬೋರ್ಡ್ ಚಟಪಟಗುಟ್ಟಿಸುತ್ತಾ ಕುಳಿತು ಬಿಟ್ಟಿರುತ್ತಿದ್ದೇವು. ದಿನವೂ ನಮ್ಮ ಹುಡುಗು ಗ್ಯಾಂಗಿನ ಸದಸ್ಯರು ಬೆಳಿಗ್ಗೆ ಎದ್ದು ಶಿವಾಜಿನಗರದ ತಿರುವು ಬರುವ ಮುಂಚಿನ ಚಿಕ್ಕ ಟೀ ಅಂಗಡಿಯಲ್ಲಿ ಗದಗುಟ್ಟುತ್ತಾ ನಿಂತು ಬಿಸಿಬಿಸಿ ಟೀ ಕುಡಿದು ಮೊದಲ ಬಸ್ಸಿಗೆ ರೂಮಿನತ್ತ ಮರಳುವುದು ವಾಡಿಕೆ. ಈಗಲೇ ಯಾಕೋ ರೂಮಿಗೆ ಹೋಗುವುದು ಬೇಡ ಎನ್ನಿಸಿದರಂತೂ ಅಲ್ಲೇ ಬೆಳಿಗ್ಗೆಯೇ ಘಮಘಮಿಸುತ್ತಿದ್ದ ಪರೋಟಾ ತಿನ್ನಲು ಕಾಲು ಮಡಚಿ ಕುಳಿತು ಬಿಡುತ್ತಿದ್ದುದು ಇತ್ತು. ನನ್ನೊಬ್ಬನನ್ನು ಬಿಟ್ಟು, ಯಾಕೆಂದರೆ ಹಾಗೆ ನಾನೂ ಅವರೊಂದಿಗೆ ಕುಳಿತು ಕೊಂಡು ಹರಟುವ ಮತ್ತು ತೀರ ಬೆಳಗಿನ ನಿರ್ಜನ ರಸ್ತೆಗಳು ನಮ್ಮವೇ ಎಂದು ಕ್ಯಾಕಿ ಹಾಕಿಕೊಂಡು ಕಿರುಚುತ್ತಾ, ಅಲ್ಲಲ್ಲಿ ಅರ್ಧ ಸಿಗಾರ್ ಉರಿಸುತ್ತಾ ನಲಿಯುತ್ತಿದ್ದ ದಿನಗಳ ಮಧ್ಯದಲ್ಲೇ ನಾನು ಆ ಸಾ೦ಗತ್ಯವನ್ನು ಕಳೆದುಕೊಂಡಿದ್ದೆ. ನಾನೋ ಆ ಹೊತ್ತಿಗೆ ಅಪರೂಪಕ್ಕೆ ನಮ್ಮಂಥವರಿಗೆ ಸುಮ್ಮನೆ ಮುಟ್ಟಿ ನೋಡಲು ಮಾತ್ರ ಸಿಗುತ್ತಿದ್ದ ಕವಾಸಕಿ ಗಾಡಿಯೊಂದನ್ನು ಇರಿಸಿಕೊಂಡಿದ್ದೆ. ಸ್ವಂತದ್ದಲ್ಲ ಆಫೀಸಿನದ್ದು. ತೀರ ಅಪದ್ಧವಾದ ಹೊತ್ತಿನಲ್ಲಿ ನನಗೆ ಆಫೀಸಿಂದ ಕರೆ ಕಳಿಸಿದರೆ, " ನಾನು ಬಸ್ಸು ಪ್ರಾಬ್ಲಮ್ಮು... ಮೂರು ಬಸ್ಸು ಹಿಡಿಯಬೇಕು..." ಎನ್ನುತ್ತಾ, ಇವೆಲ್ಲವೂ ಹಳೆಯದೆನ್ನಿಸಿದರೆ " ಮನೆಯ ಓನರ್ರು ಲೂಸ್ ಮೋಷನ್ ಆಗಿ ಮನೆಯೆಲ್ಲಾ ರಾಡಿ ಮಾಡ್ಕಂಬಿಟ್ಟಿದ್ದಾ " ಎಂದೋ... ಅಥವಾ ಕಟ್ಟಕಡೆಯದಾಗಿ " ಪಕ್ಕದ ರೂಮಿನವನಿಗೆ ಪೈಲ್ಸ್ ಆಪರೇಶನ್ ಇತ್ತು ಸಾರ್ " ಎಂದೋ ಇತ್ಯಾದಿ ಸಬೂಬು ಹೇಳಿ, ಮಧ್ಯಾನ್ಹದ ಹೊತ್ತೆ ಜಿರಾಫ್ಹೆಯಂತೆ ಯಾವಾಗೆಂದರೆ ಆಗ ಕತ್ತೆತ್ತಿ " ಯಾರಾದ್ರೂ ಬೀಯರ್ ಸುರಿರೋ " ಎಂದು ನಾಲಿಗೆ ಚಾಚಿ ನಿಂತು ಬಿಡುತ್ತಿದ್ದ ಅದ್ಭುತ ಜೀವಿ ರವಿಯೊಂದಿಗೆ ಜಾಲಹಳ್ಳಿಯ ಎಂ.ಇ.ಎಸ್. ರಸ್ತೆಯ ಮೂಲೆಯ ಬಾರಿನಲ್ಲಿ ಕುಳಿತುಬಿಟ್ಟಿರುತ್ತಿದ್ದೆ. ಅಲ್ಲಿಲ್ಲವೆಂದರೆ ಎಚ್.ಎಂ.ಟಿ. ಟಾಕೀಸಿನಲ್ಲಿ ಎರಡೂವರೆ ರೂಪಾಯಿ ಕೊಟ್ಟು ಬಾಲ್ಕನಿಗೆ ಕುಳಿತು ಚಿತ್ರ- ನಿದ್ದೆ ಎರಡೂ ಮುಗಿಸಿ ಎದ್ದಿರುತ್ತಿದ್ದೆ.  ಹೀಗಾಗಿ ಕೊಂಚ ಯೋಚಿಸಿದ ಬಾಸು " ನಿನಗೆ ಟ್ರಾನ್ಸ್ ಪೋರ್ಟ್ ಆರೇಂಜ್ ಮಾಡ್ತೇವೆ... ದಿನಾಲು ಸಂಜೆ ಬಂದುಬಿಡು. ರಾತ್ರಿ ಎಷ್ಟಕ್ಕಾದರೂ ಸರಿ ಕೆಲಸ ಮುಗಿಸಿ ಹೋಗಕ್ಕಾಗುತ್ತಾ ? " ಎಂದು ಪ್ರಪೋಸಲ್ಲು ಕೊಟ್ಟ. ಇದೂ ಒಂದು ರೀತಿಯಲ್ಲಿ ಒಳ್ಳೆಯದೇ ಅನ್ನಿಸಿತು. ಯಾಕೆಂದರೆ ಬೆಳಿಗ್ಗೆಯಿಂದ ಸಂಜೆಯವರೆಗೂ ಆರಾಮವಾಗಿ ನಿದ್ರೆ ಊಟ... ಸೀನೇಮಾ... ನಂತರ ಗುಂಡು ಎಲ್ಲಾ ಮುಗಿಸಿಕೊಂಡು ಸಂಜೆ ಆಫೀಸಿಗೆ ಹೋಗಿ ಕುಳಿತರಾಯಿತಲ್ಲ. ಹೇಗೇ ಕೆಲಸ ಮಾಡಿದರೂ ನಾನು ಎರಡು ಗಂಟೆಯ ಮೇಲೆ ಮಾಡುವ ಅಗತ್ಯ ಬರುವುದಿಲ್ಲ ಎನ್ನುವುದು ಆಗಲೇ ತಿಳಿದಿದ್ದರಿಂದಾಗಿ ಹೂಂ ಆಯಿತು... ಎಂದು ಬಿಟ್ಟೆ. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಆ ಹೊತ್ತಿಗೆ ತೀರ ದುರ್ಲಭವಿದ್ದ ಕ್ಯಾಡ್-ಕ್ಯಾಮ್ ಸರ್ವಿಸ್‌ನ್ನು ನಮ್ಮ ಕಂಪೆನಿ ಕೊಟ್ಟಂತೆ ಇನ್ನಾರೂ ಕೊಡುತ್ತಿರಲಿಲ್ಲ. ನಾನು ಅದರಲ್ಲಿ ಆರ್ಟ್‌ವರ್ಕ್ ಮಾಡುತ್ತಿದ್ದೆ. ತುಂಬಾ ವೇಗವಾಗಿ ಡ್ರಾಯಿಂಗುಗಳನ್ನು ಮತ್ತು ಪಿ.ಸಿ.ಬಿ. ಡಿಸೈನ್ ಕೂಡಾ ಮಾಡುತ್ತಿದ್ದೆ. ಅದರಲ್ಲೂ ಈಗಿನಂತೆ ಕಂಪ್ಯೂಟರು ಬೆಳವಣಿಗೆ ಇನ್ನೂ ಅಷ್ಟಾಗಿ ಕಂಡಿರದ ದಿನದಲ್ಲಿ " ಮೈಕೋ ಬಾಶ್ " ಸೇರಿದಂತೆ ದೊಡ್ಡ ಕ್ಲೈಂಟ್‌ಗಳ ಗುಂಪಿನ ಪ್ರಸೆಂಟೇಶನ್ ಸಹಿತ ಯಾವುದೇ ರೀತಿಯ ಪ್ರೊಫಾಯಿಲ್ಸ್ ಬೇಕೆಂದರೂ ನಾನು ಹೂಂ ಎಂದು ಕೂತು ಬಿಡುತ್ತಿದ್ದೆ. ಸತತ ಹದಿನೆಂಟು ಗಂಟೆಗಳ ಕಾಲ ಬೇಕಿದ್ದರೂ ಕೂತು ಕೆಲಸ ಮಾಡುತ್ತಿದ್ದುದು ಇವತ್ತೀಗೂ ನನ್ನ ಸರ್ವಕಾಲಿಕ ದಾಖಲೆ. ಅದಕ್ಕಾಗೇ ನೀನು ದಿನಾ ರಾತ್ರಿ ಬರೋದಾದರೆ ಗಾಡಿ ಕೊಡ್ತೇನಿ ಎಂದು ಅದ್ಯಾವುದೋ ಹೊತ್ತಿನಲ್ಲಿ ನನ್ನ ಕೈಗೆ ಕೀ ಕೊಟ್ಟಿದ್ದ. " ಹೋ ಗಾಡಿ ಕೊಟ್ರೆ ಯಾವ ಸರಹೊತ್ತಿಗಾದರೂ ಸರಿ ಬಂದು ಬಿಡ್ತೇನೆ. ಒಂದು ಪೇಜರ್ರೂ ಕೊಡ್ಸಿ ಬಿಡಿ ಸಾರ್ " ಎಂದು ನಾನೂ ಚಿಗುರಿದ ಹೋರಿಯಂತೆ ಅವನೆದುರು ಪುಟಿದು ನಿಂತಿದ್ದೆ. ಅವನು ಹೂಂ ಎಂದಿದ್ದನಾದರೂ ಅವನು ಪೇಜರು ಆರ್ಡರು ಮಾಡುವ ಮೊದಲೇ ನಾನು ಕೆಲ್ಸಕ್ಕೆ ರಾಜೀನಾಮೆ ಬೀಸಾಡಿ ಎದ್ದು ಬಂದಿದ್ದೆ ಅದು ಬೇರೆ ಕಥೆ. ಸರಿಯಾಗಿ ಆಗಿನ್ನೂ ಮೀಸೆ ಬಲಿಯದ, ಇಪ್ಪತ್ತೂ ತುಂಬದ ಪಡ್ಡೆ ನಾನು. ಅಂತಹ ಹೊತ್ತಿನಲ್ಲಿ ಒಂದು ಬೈಕು ಕೈಗೆ ಸಿಕ್ಕಿ ಬಿಟ್ಟರೆ ಏನಾಗಬೇಕೋ ಅದೇ ಆಗುತ್ತಿತ್ತು. ಗಾಡಿ ಇದೆ ಸರಿ. ಆನಾಮತ್ತು ನೀರಿನಂತೆ ಅದು ಪೆಟ್ರೋಲ್ ಕುಡಿಯುತ್ತಿತ್ತು. ಯಾವತ್ತೋ ಒಂದು ದಿನ ಪೆಟ್ರೋಲ್‌ಗೆ ದುಡ್ಡಿಲ್ಲದೇ, ತೀರ ಮೂರು ಲೀಟರ್ ಹಾಕಿಸಿಕೊಂಡು, ಡ್ರಾಪ್‌ಗೆಂದು ಹತ್ತಿಸಿಕೊಂಡ, ಆಚೆ ನಿಂತಿದ್ದ ದಾರಿ ಹೋಕನನ್ನು ತೋರಿಸಿ ಅವನು ದುಡ್ಡು ಕೊಡ್ತಾನೆ ಎಂದು ಹೇಳಿ, ಬಂಕ್ ಹುಡುಗ ಅವನನ್ನು ವಿಚಾರಿಸಲು ಅತ್ತ ತಿರುಗುವ ಮೊದಲೇ ಗಾಳಿಯಲ್ಲೆಗರುತ್ತಾ ಬಂದವನು ಇಂದಿರಾ ನಗರದ ಆ ಬಂಕಿನ ಕಡೆಗೆ ಆರು ತಿಂಗಳು ಸುಳಿದಿರಲಿಲ್ಲ. ಹಾಗಿದ್ದಾಗ ಉಳಿದವರು ಬೆಳಿಗೆದ್ಡು ಹೋಗ್ತಾರೆ ಅಂತಾದರೆ ನಾನ್ಯಾಕೆ ಹೋಗಲಿ, ನಾನು ರಾತ್ರಿನೆ ರೂಮಿಗೆ ಹೋಗ್ತೇನಿ ಎಂದು ತುಂಬ ಸರಹೊತ್ತಿನಲ್ಲಿ ಬೈಕನ್ನೆರಿಕೊಂಡು ಭರ್ರೊ ಎಂದು ಬೀಸುವ ಗಾಳಿಗೆ ಮುಖವೊಡ್ಡುತ್ತಾ ತೀರ ಚಳಿಯಲ್ಲಿ ರೈಡು ಬೀಳುತ್ತಿದ್ದೆ. ಸೀದಾ ಎಂ.ಜಿ. ರೋಡಿನಿಂದ ಕೆಲವೊಮ್ಮೆ ಟಾಟಾ ಇನ್ಸಿಟ್ಯೂಟ್ ಮೇಲೆ ಹಾಯ್ದು ಬಂದರೆ ಕೆಲವೊಮ್ಮೆ ಚಟಕ್ಕೆ೦ದು ಬೇಕೆಂದೇ ಅರಮನೆಯ ಕಡೆಗೆ ತಿರುಗಿಸಿ ಮೇಖ್ರಿ ಸರ್ಕಲ್ಲು ಹಾಯ್ದು ಅಲ್ಲಿಂದ ಸುಲಭ ದಾರಿಯಾದ ನ್ಯೂ ಬಿ.ಈ.ಎಲ್. ರಸ್ತೆಗಿಳಿಯುವುದನ್ನು ಬಿಟ್ಟು ಮತ್ತೆ ಬಿ.ಎಚ್.ಈ.ಎಲ್. ಕಡೆ ತಿರುಗಿಸಿ ಯಶವಂತಪುರದ ಮೇಲೆ ಹಾಯ್ದು ಮತ್ತಿಕೆರೆಗೆ ಬಂದು ಗೋಕುಲದ ಮಸೀದೆಯ ಮೇಲ್ಗಡೆಯಿದ್ದ ರೂಮನ್ನು ಸೇರಿಕೊಳ್ತಿದ್ದೆ. ಅಷ್ಟಕ್ಕೂ ಬೆ೦ಗಳೂರಿನಲ್ಲಿ ರಾತ್ರಿ ಆಗುವುದೇ ಇಲ್ಲವಲ್ಲ. ಹಾಗಾಗಿ ಬೆಳ್ಳಂಬೆಳಿಗ್ಗೆ ಮೂರರ ಹೊತ್ತಿನಲ್ಲಿ ಮತ್ತಿಕೆರೆಯ ಮೂಲೆಯ ಬಸ್ ಸ್ಟ್ಯಾಂಡಿನ ಪಕ್ಕದಲ್ಲಿ ಇದ್ದ ಗೂಡಂಗಡಿಗೆ ನಿಂತು, ಗಾಡಿಯಿಂದಿಳಿಯದೆ ಅರ್ಧ ಕಾಲು ನೆಲಕ್ಕೆ ತಾಗಿಸಿ ಅಲ್ಲಿಂದಲೇ " ಒಂದ್ ಫುಲ್ " ಎಂದು ಕೂಗಿ ಬಿಸಿಬಿಸಿ ಟೀ ಕುಡಿದು ರೂಮು ಸೇರಿದರೆ ಉಳಿದವರು ಕವಕವ ಎನ್ನುತ್ತಾ ಬಂದು ರೂಮು ಸೇರುವವರೆಗೆ ನನ್ನದು ಮುಕ್ಕಾಲು ನಿದ್ರೆ ಮುಗಿದಿರುತ್ತಿತ್ತು. ಆದರೆ ಅಷ್ಟು ಬೇಗ ಆ ರಾತ್ರಿಗಳಿಗೆ ಭಯ ಅನ್ನೋದು ಸುತ್ತಿಕೊಳ್ಳುತ್ತೆ ಎಂದುಕೊಂಡವನೂ ಅಲ್ಲ ಮತ್ತು ಆ ಒಂದು ರಾತ್ರಿಯೇ ಬಹುಶ ನನಗೆ ಬೆಂಗಳೂರಿನ ಹತ್ತು ಹಲವು ಕೋವೆಗಳಿಗೆ, ಪರಿಚಯದ ಹಾದಿಯನ್ನು ತೋರಿಸಿತು ಎಂದರೂ ತಪ್ಪಲ್ಲ. ಹಾಗೆ ಆ ದಿನ ಸರಹೊತ್ತಿನ ಎರಡೂ ಮುಕ್ಕಾಲಿಗೆ ಹೌಸ್ ಆಫ್ ಲಾರ್ಡ್ಸ್‌ನಿಂದ ಹೊರಬಂದು ಬೈಕನ್ನೇರಿ ದೌಡಾಯಿಸುತ್ತಾ ಇನ್ನೇನು ಶಿವಾಜಿ ನಗರದ ಕ್ರಾಸ್ ತಿರುಗಬೇಕು, ಅಸಲಿಗೆ ಆ ದಿನ ನಾನು ಹಾಗೆ ಹೋಗದೆ ನೇರ ಬಂದು ಎಡಕ್ಕೆ ತಿರುಗಿದ್ದರೂ ಆಗುತ್ತಿತ್ತು. ಅದೇನೋ ಗೊತ್ತಿಲ್ಲ. ಹಾಗೇ ಬಸ್‌ಸ್ಟ್ಯಾಂಡ್ ತಿರುಗಿ ಬಲಕ್ಕೆ ತಿರುಗುವುದಕ್ಕೂ ಎದುರಿನಿಂದ ಕ್ರಿಕೇಟ್ ಪ್ಲೇಯರ್‌ನಂತೆ ಡೈ ಹೊಡೆಯುತ್ತಾ ಬಂದು ಅವನು ಎದ್ದು ನಿಲ್ಲುವುದಕ್ಕೂ ಸರಿ ಹೋಯಿತು. ನಾನು ಇನ್ನಿಲ್ಲದಂತೆ ಬೈಕ್ ಕಂಟ್ರೋಲ್ ಮಾಡುವ ಮುಂಚೆ ಅವನು ಎದುರಿಗೆ ನಿಂತು ಮಚ್ಚನ್ನೆತ್ತಿ ಕತ್ತಿಗಿರಿಸಿದ್ದ. ನಾನು ಕಣ್ಣು ಬಿಡುವ ಮುಂಚೆ ಆತ ಹಿ೦ದಕ್ಕೆ ಕುಳಿತು " ಗುರು. ಗಾಡಿ ನಿಲ್ಲಿಸ್ ಬ್ಯಾಡ. ಅವ್ರ ಅಕ್ಕನ್ ಅವ್ರು ಹಿಂದವ್ರೆ... ಹಂಡ್ರೆಡ್ ಸ್ಪೀಡ್‌ನಲ್ಲಿ ಓಡ್ಸು..." ಎಂದ. ನಾನು ಒಮ್ಮೆ ಉಸಿರೆಳೆದುಕೊಂಡು ಮುಂದಕ್ಕೆ ಚಿಮ್ಮಿಸಿದ್ದೆ. ನಂತರದ್ದು ಬರೆದರೆ ಅದೇ ಮಿನಿ ಕಾದಂಬರಿಯಾದೀತು. ಅದಿನ್ಯಾವತ್ತಾದರೂ ಬರೆದೇನು. ಆದರೆ ಬೆ೦ಗಳೂರಿನ ಕಾಣದ ಗಲ್ಲಿಗಳಿಗೆ ಪರಿಚಯಿಸಿದವನು ಅವನೇ ಮತ್ತು ತುಂಬ ಐನ್ ಟೈಂನಲ್ಲಿ ಸಹಾಯಕ್ಕೆ ಒದಗಿ ಬಂದವನೂ ಹೌದು. ವಿಪರ್ಯಾಸವೆಂದರೆ ಅವನು ಭೇಟಿಯಾದಾಗ ಅವನ ಹಿಂದೆ ಇದ್ದಂತೆ, ತೀರ ಬೆಂಗಳೂರು ಬಿಡುವಾಗ, ನನ್ನ ಹಿಂದೆಯೂ ಜನಗಳು ಬೆನ್ನು ಬಿದ್ದಿದ್ದರು. " ಹೋಗ್ ಗುರು ಈ ಬೆಂಗಳೂರು ಬ್ಯಾಡ " ಎಂದು ಚಿಕ್ಕ ತಮ್ಮನಂತೆ ಪಕ್ಕದಲ್ಲಿ ಕೂರಿಸಿಕೊಂಡು ಪೀಣ್ಯ ಪಕ್ಕದ ಸುದರ್ಶನ ಧಾಬಾದಲ್ಲಿ ಬೆಳಗಿನವರೆಗೂ ಕುಡಿಸುತ್ತಾ ಕುಳಿತಿದ್ದವನ ಬೆಂಗಾವಲಿಗೆಂದೇ ಮೂರು ವಾಹನಗಳು ಕಾದು ನಿಂತಿದ್ದವು ಹೈವೆ ಮೇಲೆ. ಬದುಕು ಎಲ್ಲಿಂದೆಲ್ಲಿಗೋ ಅಪದ್ಧ ಹೊತ್ತಿನಲ್ಲಿ ತಿರುವು ತೆಗೆದುಕೊಳ್ಳುವುದೆಂದರೆ ಇದೇನಾ... ? ಕೇಳಬೇಕೆಂದರೆ ಅವನು ಸಾವಿಗೆ ಸಿಲುಕಿ ಇದೇ ಜನೇವರಿಗೆ ಸರಿಯಾಗಿ ನಾಲ್ಕು ವರ್ಷಗಳಾಗುತ್ತಿವೆ. ಬಹುಶ ಈ ನೆನಪಿನೊಂದಿಗೆ ಅವನ ಆತ್ಮ ಮಗ್ಗುಲು ಬದಲಿಸುತ್ತದಾ ? ಗೊತ್ತಿಲ್ಲ... ಉಳಿದದ್ದು ಮುಂದೆಂದೋ ಬರಲಿದೆ ಇಲ್ಲೇ... - See more at: http://vismayanagari.com/node/12241#sthash.nCDhje3O.dpuf

Wednesday, December 19, 2012

https://www.facebook.com/shashidhar.bhat.9/posts/538684109477566
This blog .. written in the interest of public and reply to Shri shashidhar bhat, who given his own niew about Gujarat.. and i have shared my experience with Gujarat..Please Read out..
ಆತ್ಮೀಯ ಶಶಿಧರ ಭಟ್.. ನಿಮ್ಮ ಲೇಖನ ಅದಕ್ಕೆ ಸಂಭಂದಿಸಿದ ಅನಿಸಿಕೆಗಳನ್ನು ಓದಿದೆ. ಅದವರವರ ಅಭಿಪ್ರಾಯ ಹಾಗೆಯೇ ನಿಮ್ಮದೂ ಕೂಡಾ. ಆದರೆ ನೀವಂದುಕೊಂಡಂತೆ ಅಲ್ಲಿ ಬದಲಾಗಿಲ್ಲ ಎನ್ನುವ ಅಭಿಪ್ರಾಯದ ಬದಲಿಗೆ ನಿಮಗೆ ರಸ್ತೆಯ ಬದಿಯಲ್ಲಿ ಕಂಡದ್ದನ್ನು ಮಾತ್ರ ಬರೆದಿರಿ. ನಾನು ಹಲವು ವರ್ಷದಿಂದ ಇಲ್ಲಿಯೇ ಇದ್ದೇನೆ. ನೀವು ಸಂದರ್ಶಿಸಿದ "ಸೂರತ" ನಗರ ನನಗೆ ಅಂಗೈ ರೇಖೆಯಷ್ಟೇ ಪರಿಚಯ.
( ನೀವು ನಿಜಕ್ಕೂ ಕೂಲಂಕುಶವಾಗಿ ಸೂರತ್ ನಗರ ಗಮನಿಸಿದ್ದರೆ ಎಂಥವರೂ ಪ್ರಸ್ತಾಪಿಸುವ ಒಂದು ವಿಷಯ ಮಾಧ್ಯಮದವರಾಗಿ ಪ್ರಸ್ತಾಪಿಸಲೇ ಬೇಕಿತ್ತು. ಅದನ್ನು ನೀವು ಬರೆದೆ ಇಲ್ಲ. ಸಾಧ್ಯವಾದರೆ ಯೋಚಿಸಿ ಉತ್ತರಿಸಿ. ಇಲ್ಲವಾದರೆ ಮತ್ತೆ ನಾನೇ ಬರೆಯುತ್ತೇನೆ. ಪೂರ್ತಿ ಗುಜರಾತಿನಲ್ಲೆ ಒಂದು ವ್ಯವಸ್ಥೆಯನ್ನು ಇದುವರೆಗೂ ಸ್ಥಾಪಿಸಲಾಗಿಲ್ಲ. ತೀರ ಒಂದೆರಡು ಸ್ಥಳಗಳನ್ನು ಹೊರತು ಪಡಿಸಿ. ಆದರೂ ಆ ವಿಷಯದಲ್ಲಿ ನಂಬಲಾರದ ಶಿಸ್ತು ಇಲ್ಲಿನ ನಾಗರಿಕರಲ್ಲಿ ಇದೆ. ಅದೇನು ಗೊತ್ತೇ.. ? )
ಮಧ್ಯರಾತ್ರಿ ಮೊದಲ ದಿನ ಸೂರತ್ತಿನಿಂದ ಎಂಭತ್ತು ಕಿ.ಮಿ. ದೂರದ ಆದಿವಾಸಿಗಳ ಪ್ರದೇಶಕ್ಕೆ ಯಾವುದೇ ಭಯವಿಲ್ಲದೆ ಪರಿಚಯವಿಲ್ಲದ ಸ್ತ್ರೀಯರೂ ಪಯಣಿಸುತ್ತಿದ್ದ ಅನುಭವ.. ತೀರ ಹಿಂದುಳಿದ ಡಾ೦ಗ್ ಜಿಲ್ಲೆ ಇವತ್ತು ಪಶ್ಚಿಮ ಘಟ್ಟಕ್ಕೆ ಸೆಡ್ಡು ಹೊಡೆಯುತ್ತಿದೆ. ಹೌದು ಮಧ್ಯ/ಸರಾಯಿ ಎಲ್ಲಾ ಕಡೆಯಲ್ಲೂ ಸಿಗುತ್ತದೆ. ಆದರೆ ಅದಕ್ಕೆ ಹೆಚ್ಚಿನ ಕುಮ್ಮಕ್ಕು ನೀಡಿ ಅಭ್ಯಾಸ ಮಾಡಿಸಿದವರು ನಮ್ಮಂತೆ ಹೊರಗಿನಿಂದ ಬಂದವರೇ. (ಸ್ಥಳಿಯರು ಅಧಿಕೃತವಾದ ಸಂತರಾ ಕುಡಿಯುತ್ತಾರೆ.) ನರ್ಮದೆಯ ದಂಡೆಗುಂಟ ಸಾವಿರ ಕಿ.ಮಿ. ಚಲಿಸಿ ವಸ್ತುಸ್ಥಿತಿ ಅಭ್ಯಸಿಸಿದವನು ನಾನು. ನಿಮ್ಮ ಅನಿಸಿಕೆಯನ್ನು ತೆಗಳುತ್ತಿಲ್ಲ.
ಆದರೆ ಬಹುಶ: ಗುಜರಾತಿನ ಅಭಿವೃದ್ಧಿಯ ಬಗ್ಗೆ ನಿಮಗಷ್ಟೇ ಅಲ್ಲ, ಎರಡು ಮೂರು ದಿನ ಅಂತ ಪ್ರವಾಸಕ್ಕೆ ಬಂದವರಿಗೆ ಯಾವತ್ತೂ ಅರ್ಥವಾಗುವುದಿಲ್ಲ. ಸಾಧ್ಯವಿದ್ದರೆ ನಿಜಕ್ಕೂ ವಸ್ತು ಸ್ಥಿತಿ ಅರಿಯಬೇಕಿದ್ದರೆ ಸಮಯವಿದ್ದರೆ ಬನ್ನಿ. ಕಾಡಂಚಿನ ಹಿಂದುಳಿದ ವರ್ಗಗಳಿಗೆ ನೀರು/ನೆರಳು ಒದಗಿಸಿರುವ, ಒಬ್ಬೊಂಟಿ ಮನೆಗಳಿಗೂ ಡಾಂಬರು ರಸ್ತೆ ತಲುಪಿಸಿರುವ... ತಾವೂ ತಿನ್ನುವುದಿಲ್ಲ, ನಮ್ಮನ್ನು ತಿನ್ನಲೂ ಬಿಡುತ್ತಿಲ್ಲ ಎಂದು ಗೊಣಗುವ ಅಧಿಕಾರಷಾಹಿ ವರ್ಗವನ್ನು... ಇಪ್ಪತ್ನಾಲ್ಕು ಗಂಟೆ ಪಂಪಸೆಟ್ಟುಗಳಿಗೆ ಕರೆಂಟು ಹರಿಸುವ ಪಧ್ಧತಿಯನ್ನ.. ( ನಾನು ಇಂಥಾದ್ದೇ ಬುಡಕಟ್ಟು ಜನಾಂಗ ವಾಸಿಸುವ ಸುತ್ತ ಮುತ್ತಲೆಲ್ಲಾ ತೀರ ಹಿಂದುಳಿದ ವರ್ಗಗಳ ಸಮುದಾಯವೇ ಇರುವ ಟ್ರೈಬಲ್ ಏರಿಯಾ(ಆದಿವಾಸಿಗಳ)ಎಂದು ಕರೆಸಿಕೊಳ್ಳುವ ಪ್ರದೇಶದಲ್ಲೇ ವಾಸಿಸುತ್ತಿದ್ದೆನೆ. ) ಇನ್ನು ನಿಮ್ಮ ರೂಮಿನ ಕತೆ ಇತ್ಯಾದಿಗಳೆಲ್ಲಾ ಸತ್ಯವಿದ್ದರೂ, ಈಗಿನ ಸೊ ಕಾಲ್ಡ್ ಸಾಹಿತಿಗಳು ಬರಹದ ಜಿಗುಟು ಕಡಿಮೆಯಾದಾಗ ಅಪದ್ದ ಹೇಳಿಕೆ ನೀಡಿ ತೀವ್ರ ಪ್ರಸಿದ್ಧಿಯನ್ನು ಬಯಸುವ ಪ್ರಕರಣದಂತೆ ಅನ್ನಿಸುತ್ತದೆ. (ಕ್ಷಮೆ ಇರಲಿ. ನೀವು ಅದನ್ನು ಬರೆಯಬಾರದಿತ್ತು) ಬರೆಯುವ ಮುನ್ನ ಒಮ್ಮೆ ಯೋಚಿಸಬೇಕಿತ್ತು. ಕಾರಣ ಕನಿಷ್ಠ ಐವತ್ತು ಬಾರಿ ನಾನು ಇಲ್ಲಿನ ಹೋಟೆಲ್ ಗಳಲ್ಲಿ ತಂಗಿದ್ದೇನೆ. ಎಲ್ಲಿಯೂ ಯಾವತ್ತೂ ಹಾಗೆ ವಿಚಾರಿಸಿಲ್ಲ. ನನಗೆ ಗೊತ್ತಿದ್ದ ಮಟ್ಟಿಗೆ ಇಲ್ಲಿನ ಆತಿಥ್ಯದ ಅನುಭವದೆದುರಿಗೆ ಹಾಗೆ ವಿಚಾರಿಸುವ ಸಂಭವ ತುಂಬಾ ಕಡಿಮೆ. ದಯವಿಟ್ಟು ಅದು ಯಾವ ಹೋಟೆಲ್ ತಿಳಿಸುವಿರಾ..?
ಕಾರಣ ನೀವು ಹೇಳಿದ ದ್ವಾರಕೆ, ಸೋಮನಾಥದ ಸಮುದ್ರ ತೀರದಿಂದ ಹಿಡಿದು ಕೊಟ್ಟ ಕೊನೆಯ ಜಿಲ್ಲೆ ಡಾ೦ಗ್ ವರೆಗೂ ನಿರಂತರ ಪ್ರವಾಸದಲ್ಲಿದ್ದೇನೆ. ಬಹುಶ: ಹೀಗೆ ಅಪರಾತ್ರಿಗಳಲ್ಲಿ, ಅನಿವಾರ್ಯ ಪ್ರವಾಸವನ್ನು ನಾನು ಖಂಡಿತಕ್ಕೂ ಇತರ ರಾಜ್ಯದಲ್ಲಿ ಇಷ್ಟು ಸುರಕ್ಷಿತವಾಗಿ ಕೈಗೊಳ್ಳಲು ಸಾಧ್ಯವೆ ಇರಲಿಲ್ಲ. (ಇಷಾನ್ಯ ರಾಜ್ಯದ ಒಂದೆರಡು ರಾಜ್ಯ ಹೊರತು ಪಡಿಸಿದರೆ ಇ ದೇಶದ ಕೊಟ್ಟ ಕೊನೆಯ ರಾಜ್ಯದ ಕೊನೆಯ ಹಳ್ಳಿಗಳವರೆಗೂ ಪ್ರವಾಸಿಸಿರುವ ನನ್ನ ಅನುಭವವನ್ನು ಸೇರಿಸಿ ಇದನ್ನು ಬರೆದಿದ್ದೇನೆ. ) ಅಂದ ಹಾಗೆ ಸೂರತ್ ಈಗ ನೇಕಾರಿಕೆಯ ಪ್ರದೇಶವೆಂದು ಗುರುತಿಸಿಕೊಳ್ಳುವುದಕ್ಕಿಂತಲೂ ಮೊದಲು ವಜ್ರದ ಕೈಗಾರಿಕೆಗೆ ಹೆಸರುವಾಸಿ. (ವಜ್ರದ ಕಾರ್ಮಿಕರ ದಿನವಹಿ ಸಂಖ್ಯೆ (ಫ್ಲೋಟಿಂಗ್ ವರ್ಕರ್ಸ್) ಎರಡು ಲಕ್ಷದ ಹತ್ತಿರ.) ನಿಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಇಡುವುದಕ್ಕೂ ಮುನ್ನ ಕೆಲವು ವಿಷಯವನ್ನಾದರೂ ತಾವು ಗಮನಿಸಬೇಕಿತ್ತು ಎಂದು ನನ್ನ ಪ್ರಾಮಾಣಿಕ ಅನಿಸಿಕೆ.
ಇನ್ನು ನೀವು ಚಿತ್ರದಲ್ಲಿ ಪ್ರಕಟಿಸಿರುವ (ಅದನ್ನು ನಾನು ಮೂಲ ರಸ್ತೆಗಳ ಚಿತ್ರದೊಂದಿಗೆ ಸಮೀಕರಿಸಿ ಹಾಕಿದ್ದೇನೆ) ಬರೆದಂತೆ ಅದು ಮುಂಬೈ ಮಹಾನಗರಕ್ಕೆ ಜೋಡಿಸುವ ಹೆದ್ದಾರಿ ಅಲ್ಲವೇ ಅಲ್ಲ. ಅದು ತಾಪಿ ನಗರಕ್ಕೆ ಹೋಗುವ ಹೋಟೆಲ್ ಸಹಯೋಗ ( ಹಿಂದೆ ಕಾಣಿಸುತ್ತಿರುವ ಬಿಳಿ ಬಣ್ಣದ ಬಿಲ್ಡಿಂಗು ) ರಸ್ತೆ. ಸಂಪೂರ್ಣ ಮುಂಬೈನಿಂದ ಅಹಮದಾಬಾದ್ ಅಷ್ಟೇ ಅಲ್ಲ ದ್ವಾರಕೆವರೆಗೂ ( ರಾಜ ಕೋಟ , ಜಾಮನಗರ್ ಮಾರ್ಗವಾಗಿ ಆನಂದ, ಮೆಹಸಾನ ಸೇರಿದಂತೆ) ನಾನು ಚಿತ್ರದಲ್ಲಿ ಹಾಕಿರುವ ಅಚ್ಚ ನುಣುಪು ರಸ್ತೆಗಳೇ ಇವೆ ಹೊರತಾಗಿ ನೀವು ವಿವರಿಸಿರುವ ಒಳ ರಸ್ತೆಯಂತೆ ಅಲ್ಲ. ಕನಿಷ್ಠ ೧೨೦ ಕಿ.ಮಿ. ವೇಗದಲ್ಲಿ ಸತತವಾಗಿ ಚಲಿಸುವ ಹೆದ್ದಾರಿ ಇಷ್ಟು ಸುರಕ್ಷಿತವಾಗಿ ಭಾರತದಲ್ಲಿ ಕೆಲವೇ ಕೆಲವು ರಾಜ್ಯಗಳಲ್ಲಿ ಲಭ್ಯ ಇವೆ. ಇದಕ್ಕೆ ಸ್ವತಹ: ಚಾಲಕನಾಗಿ ಇದೆ ಗುಜರಾತಿನ ಹೆಧ್ದಾರಿಯ ಮೇಲೆ ಸಾವಿರಾರು ಕಿ.ಮಿ ಕ್ರಮಿಸಿರುವ ನನ್ನ ಅನುಭವ ಸಾಕ್ಷಿ.
ನಾನು ಬರೆದ ವಿಷಯದಲ್ಲಿ ಯಾವುದಾದರೂ ನಿಮಗೆ ಸ೦ಶಯವಿದ್ದರೆ ಅಥವಾ ಉತ್ಪ್ರೆಕ್ಷೆ ಮಾಡುತ್ತಿದ್ದನೆ ಎನ್ನಿಸಿದ್ದರೆ (ಯಾವುದೇ ಓದುಗರು) ದಯವಿಟ್ಟು ಯಾರೂ ಬೇಕಿದ್ದರೂ ಬನ್ನಿ.( ನನ್ನ ಸಂಖ್ಯೆ : ೯೪೨೮೪೯೪೭೯೫) ಗುಜರಾತಿನ ಅಭಿವೃದ್ಧಿ ಎಲ್ಲಿ ಹೇಗೆ ಮುಟ್ಟಿದೆ ಕಾಣಿಸುತ್ತೇನೆ. ಕಾರಣ ಇದು ನನ್ನ ಹಲವು ವರ್ಷಗಳ ಅನುಭವ. ಸತತವಾಗಿ ಇಪ್ಪತ್ನಾಲ್ಕು ಗಂಟೆಯೂ ಬಸ್ ಸೌಲಭ್ಯ ಸಾಮಾನ್ಯವಾಗಿ ಎಲ್ಲಾ ಹಳ್ಳಿಗಳೂ ಇದರ ಫಲಾನುಭವಿಗಳು. ಅಲ್ಲಲ್ಲಿ ಲಂಚಕ್ಕಾಗಿ ಕೈಯೊಡ್ಡುವ ಪೋಲಿಸರಿದ್ದರೂ ಇತರ ರಾಜ್ಯಗಳಷ್ಟು ಖರಾಬಾಗಿ ಹೋಗಿಲ್ಲ. ಇವತ್ತಿಗೂ ನಾನು ಕೆ.ಎ.(ಕರ್ನಾಟಕ) ಎಂದಿರುವ ನನ್ನ ಕಾರನ್ನೇ ಓಡಿಸುತ್ತಿದ್ದೇನೆ. ಪರ ರಾಜ್ಯದವರೆಂದು ಎಲ್ಲಿಯೂ ಒಮ್ಮೆಯೂ ಕಿರಿಕ್ ಮಾಡಿಲ್ಲ. ನರ್ಮದೆಯ ಕಾಲುವೆಯಲ್ಲಿ ನೀರು ನಿಂತದ್ದೇ ಇಲ್ಲ. ಬರೆದಲ್ಲಿ ಮುಗಿಯುವುದಿಲ್ಲ. ಕಾರಣ ಅಪ್ಪಟ ಗಾಮಿತರು ಮಾತಾಡುವ ಆದಿವಾಸಿಗಳ ಮಧ್ಯೆ ಭಾಷೆ ಬಾರದ ನಾನು ನನ್ನ ತವರು ಜಿಲ್ಲೆಗಿಂತಲೂ ಮಿಗಿಲಾಗಿ ಸ್ವಚ್ಚಂದವಾಗಿ ವಿಹರಿಸಿದ್ದೇನೆ. ವೈರುದ್ಯಗಳೂ ಇವೆ. ಆದರೆ ತಕ್ಷಣಕ್ಕೆ ರಾಜ್ಯದಲ್ಲಿ ಅಸಹಾಯಕನಾಗಿ ನಿಲ್ಲುವಷ್ಟು ಅಲ್ಲ. ಇತರ ರಾಜ್ಯಗಳಲ್ಲಿ ಗಬ್ಬೆದ್ದಿರುವಷ್ಟ೦ತೂ ಖಂಡಿತಕ್ಕೂ ಅಲ್ಲ. ಇನ್ನು ಬೇಕಿದ್ದರೆ ನಾನು ಮಾಹಿತಿ ನೀಡಬಲ್ಲೆ. ಅಕಸ್ಮಾತ ನನ್ನ ಗ್ರಹಿಕೆ ತಪ್ಪಿದ್ದಲ್ಲಿ ತಾವು ನನಗೆ ತಿಳಿಸಬಹುದು.
https://www.facebook.com/media/set/?set=a.4837789220085.2186428.1157382793&type=1

Road of gujarat..
Photos: 6

Monday, December 10, 2012


ಆಡಾಡ್ತ ಹಾಳಾದ ಕನ್ನಡದ ತುಘಲಕ್...

ಮುಂಬೈವಾದ ಸರಣಿಯನ್ನು ಬದಿಗಿರಿಸಿ ನೋಡಿದಾಗಲೂ ಕಾರ್ನಾಡರು ಯಾವ ಹಂತದಲ್ಲೂ ಜ್ಞಾನಪೀಠಿ ಎನ್ನಿಸುವುದೇ ಇಲ್ಲ. ಇವತ್ತಿಗೂ ಜ್ಞಾನಪೀಠ ಪ್ರಶಸ್ತಿ ವಿಜೇತರು ಎಂದಾಕ್ಷಣ ಎದುರಿಗೆ ನಿಲ್ಲುವ ಚಿತ್ರಗಳು ಕುವೆಂಪು, ಬೆಂದ್ರೆ, ಗೋಕಾಕ, ಮಾಸ್ತಿ ಮತ್ತು ಕಾರಂತ ಈಗೀಗ ಕಂಬಾರರದ್ದು. ಅದ್ಭುತ ಲೇಖಕರಲ್ಲಿ ಭೈರಪ್ಪ ಮಾತ್ರ.
ಯಾವತ್ತಿಗಾದರೂ ನಾವು ಇತ್ತಿಚೀನ ಕಂಬಾರ ಹೊರತು ಪಡಿಸಿ ಮಧ್ಯಮಾವಧಿಯಲ್ಲಿ ಪಡೆದ ಪೀಠಿಗಳನ್ನು ನೆನಪಿಸಿಕೊಂಡಿದ್ದೇವಾ..? ಕಾರಣ ಕಾರ್ನಾಡರು ಮತ್ತು ಇನ್ನೊಬ್ಬ ಪೀಠಿ ಕೇವಲ ಶಿಕ್ಷಣ ಕ್ಷೇತ್ರದ ಪ್ರಭೃತಿಗಳಾಗಿ ಜ್ಞಾನಪೀಠದ ಬುಡಕ್ಕೆ ತಲುಪಿದರೆ ವಿನ: ಅವರ ಪ್ರತಿಭೆಯಿಂದಲ್ಲ. ಹಾಗಂತ ಅವರು ಬರೆದಿಲ್ಲ ಅಥವಾ ಅದೆಲ್ಲ ಜೊಳ್ಳು ಎಂದು ನಾನು ಪ್ರತಿಪಾದಿಸುತ್ತಿಲ್ಲ. ಅವರ ಬರಹಗಳೆಷ್ಟು ಗಟ್ಟಿ ಎನ್ನುವುದನ್ನು ಎಲ್ಲರೂ ಬಲ್ಲರು. ಆದರೆ ಕಾರ್ನಾಡರು ಅವಕಾಶ ಸಿಕ್ಕಾಗ ಮತ್ತು "ದೇಶ ಕಾಲ" ನೋಡಿಕೊಂಡು ಹೇಳಿಕೆಗಳನ್ನು ಕೊಡುವುದರಲ್ಲಿ ನಿಸ್ಸಿಮರು.
ಒಂದು ಪ್ರಶ್ನೆ ಕಾರ್ನಾಡರೇ. ನಿಮಗಿರುವ ಕಾಳಜಿ ಹಾಗು ನಿಷ್ಟೆಯಿಂದ ಒಂದಾದರೂ ಪ್ರಾಮಾಣಿಕವಾದ ಕೃತಿ ಬರೆದು ತೋರಿಸಿ. ನೈಪಾಲ್ ಬರೆದದ್ದು ಸುಳ್ಳು ಅಥವಾ ಅವರಿಗೇನೂ ಗೊತ್ತಿಲ್ಲ ಎಂಬ ವಾದಸರಣಿ ಇಡುವ ನೀಮಗೇನು ಗೊತ್ತಿದೆ ಎನ್ನುವುದನ್ನು ಯಾವಾಗ ಒದರುತ್ತಿರಿ..? ಅಥವಾ ಎಲ್ಲಿ ಬರೆದಿದ್ದಿರಿ..? ಹೀಗೆ ಅನಗತ್ಯವಾಗಿ ವೇದಿಕೆ ಬಳಸಿಕೊಂಡು ದಾಳಿ ಮೂಲಕ, ನಿಸ್ಸಾಹಯಕ ಹಾಗು ಸಾಮಾನ್ಯ ಮುಸ್ಲಿಂ ಮನಸ್ಸುಗಳನ್ನೇಕೆ ಕದಡುತ್ತೀರಿ. ನಿಮ್ಮಂತವರಿಂದಲೇ ಅಲ್ಲವೇ ಕೋಮು ಪ್ರಚೋದನೆಗಳು ಹರಡುವುದು..? ನಿಮಗ್ಯಾಕೆ ಬೇಕಿತ್ತು ಇತಿಹಾಸ ಕೆದರುವ ಉಸಾಬರಿ. ಸಮಾಜದಲ್ಲಿ ಕೆಸರು ಹರಡುವ ಹೋಣೆಗೇಡಿತನ..? 
ಅಷ್ಟಕ್ಕೂ ಇತಿಹಾಸದ ಸತ್ಯವನ್ನು ಹೊರಗೆಳೆಯುವ ಹುಕಿ ನಿಮ್ಮಲ್ಲಿದ್ದುದ್ದೇ ಆದರೆ ಅದ್ಯಾಕೆ ತುಘಲಕ್..ನ ರಚನೆ ಹಾಗಾಯಿತು..? ಅಸಲಿ ತುಘಲಕ್ನ ಕಥಾನಕ ಹಾಗು ನಿಮ್ಮ ಕೃತಿಯ ಕುರಿತು ಕುಂತು ಚರ್ಚೆಗಿಳಿಯೋಣ ಸಿದ್ಧರಿದ್ದೀರಾ..? ಅಸಲಿಗೆ ನಿಮಗಷ್ಟು ನೈಪಾಲ್ರನ್ನು ಹೀಗೆಳೆವ ತೃಷೆ ಇದ್ದಿದ್ದೇ ಆದರೆ ಇತಿಹಾಸವನ್ನು ಬಗೆದು ಸರ್ವರೂ ಒಪ್ಪುವಂತಹ ಒಂದೇ ಕೃತಿ ರಚಿಸಿ ತೋರಿಸಿ. ಭೈರಪ್ಪನವರಂತಹ ಸಂಶೋಧನಾತ್ಮಕ ಯಾವ ಮರು ಟೀಕೆಗೂ ಒಳಗಾಗದ "ಆವರಣ"ದಂಥ ಕೃತಿಯನ್ನು ಒಮ್ಮೆಯಾದರೂ ನೀವು ರಚಿಸಿ ನೋಡೊಣ. 
ಇವತ್ತು ಭಾರತದಾದ್ಯಂತ ಸಂಚರಿಸಿ ನಮ್ಮ ಬೇರುಗಳನ್ನು ಅರಸಿ ಇತಿಹಾಸ ಹಾಗು ಅದರ ಪಳೆಯುಳಿಕೆಗಳನ್ನು ಸ್ವಯಂ ಸಂದರ್ಶಿಸುತ್ತಿರುವ ನನಗೆ ಇಲ್ಲಿಯವರೆಗೂ ಸಿಕ್ಕಿದ್ದು ಪ್ರತಿ ಸ್ಮಾರಕದಲ್ಲೂ ಕೇವಲ ಅಡಿಪಾಯ ಅಥವಾ ಸ್ಮಾರಕ ಮಾತ್ರವೇ ಹೊರತಾಗಿ ನಮ್ಮದೇ ಸಂಸ್ಕೃತಿಯ ಪ್ರತೀಕವಾದ ಪರಿಪೂರ್ಣ ಒಂದೇ ಒಂದು ಕಟ್ಟಡ ಅಥವಾ ದೇಗುಲಗಳು ಲಭ್ಯವಿಲ್ಲ. ಏನು ಇವನ್ನೆಲ್ಲಾ ರಾಜಪೂತರು, ಮರಾಠರು, ಕಳಿಂಗರು, ಚಾಲುಕ್ಯರು, ಚೋಳರು ಇತ್ಯಾದಿ ಘನ ವಂಶಸ್ಥರು ನಮ್ಮ ಇತಿಹಾಸದ ರಾಜ ಮಹಾರಾಜರು ಹಾಳು ಮಾಡಿದರೆ..? ಬನ್ನಿ ನನ್ನೊಂದಿಗೆ ಚರಿತ್ರೆ ಏನು ಎನ್ನುವುದನ್ನು ನಾನು ಬಿಚ್ಚಿಡುತ್ತೇನೆ.. ಇತಿಹಾಸವನ್ನು ಅವುಗಳ ಸಮಾಧಿಗಳ ಸಮೇತ ತೋರಿಸುತ್ತೇನೆ. ಅದು ವೇದಿಕೆಯ ಮೇಲೆ ಭಾಷಣ ಮಾಡಿದಂತಲ್ಲ ಇತಿಹಾಸ ಅರಿಯುವುದು.( ಕಾವೇರಿ ನೀರಿಗಾಗಿ, ಕನ್ನಡ ಹೋರಾಟದ ಸಂದರ್ಭದಲ್ಲಿ ಯಾವತ್ತಾದರೂ ನೀವೆಲ್ಲ ಬಿದಿಗಿಳಿದದ್ದು ಇದೆಯೆ..?)
ಹೌದು ಮುಸ್ಲಿಂ ದಾಳಿಗಳಿಂದಲೇ ಸಂಪೂರ್ಣ ನಮ್ಮ ದೇಶ ಜರ್ಜರಿತವಾಗಿದ್ದು ಸತ್ಯ. ಇದಕ್ಕೆ ಇತಿಹಾಸದಿಂದ ವರ್ತಮಾನದವರೆಗೂ ಸಾವಿರಾರು ದಾಖಲೆ ಮತ್ತು ನೈಜ ಮುಖಗಳಿವೆ. ಇದನ್ನು ದೃಢಪಡಿಸಲು ಅಥವಾ ತಿರುಚಲು ನಿಮ್ಮಂತವರ ಸಾಕ್ಷಿಗಳ ಅಗತ್ಯವಿಲ್ಲ. ಇವತ್ತಿಗೂ ಭಾರತ ಚೇತರಿಸಿಕೊಳ್ಳುತ್ತಿರುವ ದೇಶಗಳ ಸಾಲಿನಲ್ಲಿ ನಿಲ್ಲುತ್ತಿದೆಯಂತಾದರೆ ಅದಕ್ಕೆ ಕಾರಣ ಈ ದಾಳಿಗಳು ಮತ್ತು ಲೂಟಿಗಳೇ ಹೊರತಾಗಿ ಬೇರೇನಲ್ಲ. ರತ್ನಗಳನ್ನು ಬಳ್ಳ(ಸೇರು)ಗಳಲ್ಲಿ ಅಳೆದು ಮಾರಿದ ಮಾರುಕಟ್ಟೆ ನಮ್ಮದು ರೀ...! ನಿಮ್ಮಂತೆ ಬಿಕರಿಗೆ ನಿಂತು ಬಡಕೊಂಡ ಸಂಸ್ಕೃತಿಯಲ್ಲ. ಆ ಹೆಮ್ಮೆ ಇರಬೇಕಾದದ್ದೇ. ವಿದ್ಯಾರ್ಥಿಗಳಿಗೆ ಮೇಲ್ಪಂಕ್ತಿಯಾಗಬೇಕಾದ ಕಾಲದಲ್ಲೇ ಬಹಿರಂಗವಾಗಿ ಸ್ವಚ್ಛಂದ ಬದುಕಿನ ಪಾಠವನ್ನು ಅನಾಮತ್ತಾಗಿ ಹೇಳಿದ ನೀವು ಯಾವ ವಿಷಯದಲ್ಲಿ ಪರಿಪೂರ್ಣರಿದ್ದೀರಿ..? ಗ್ರಹಿಸಿದ್ದಿರಿ..? ಅದನ್ನಾದರೂ ಕಲಿಸಿ. ನಾವೂ ಕೊಂಚ ಆಡಾಡ್ತ ಕಲಿತು ಕೃತಾರ್ಥರಾದೇವು..!
ಇನ್ನು ಭೈರಪ್ಪನವರನ್ನು ಹೀಗೆಳೆವ ನಿಮ್ಮಂತಹ ಆಯ್ದ ಜ್ಞಾನಪೀಠಿಗಳಿಗೊಂದು ಪ್ರಶ್ನೆ. ನಿಮ್ಮ ಯಾವ ಪುಸ್ತಕ ಅಥವಾ ಕೃತಿಯನ್ನು ಭೈರಪ್ಪನವರ ಕೃತಿಯಂತೆ ಅಥವಾ ಬೇರೆ ಕೆಲ ಹೆಸರಾಂತ ಬರಹಗಾರರ ಪುಸ್ತಕಗಳಂತೆ ಮುಗಿಬಿದ್ದು ಕೊಂಡುಕೊಂಡು ಓದಿದ ಉದಾಹರಣೆ ಇದೆ. ಒಂದೇ ಒಂದು ಪುಸ್ತಕವನ್ನು ನೀವು ಜನಸಾಮನ್ಯರಿಗೆ ಹಾಗು ಓದುಗರಿಗೆ ಹಪಹಪಿಸುವಂತೆ ಬರೆದಿದ್ದೀರಾ..? ಯಾವ ನಿಮ್ಮ ಕೃತಿ ಇವತ್ತು ಸಾಮನ್ಯ ಓದುಗನ ನಾಲಿಗೆ ತುದಿಯಲ್ಲಿದೆ ಭೈರಪ್ಪನವರ ಹೊರತಾಗಿ..? (ಹೀಗೆ ಬರೆಯುವುದರಿಂದ ನನ್ನನ್ನು ಹಲವು ಬಾರಿ ಭೈರಪ್ಪನವರ ಶಿಷ್ಯ, ಹಿಂಬಾಲಕ ಎಂದೂ ಬರೆದ್ದಿದ್ದಾಗಿದೆ. ಬೇಜಾರಿಲ್ಲ. ಕಾರಣ ಅಂತಹ ದೊಡ್ಡ ಲೇಖಕರ ಜೊತೆ ಗುರುತಿಸಿಕೊಳ್ಳಲು ನನಗ್ಯಾವ ಸಂಕೋಚವೂ ಇಲ್ಲ. ವೈರುದ್ಧ್ಯವೆಂದರೆ ನಾನ್ಯಾವತ್ತೂ ಭೈರಪ್ಪನವರನ್ನು ವೈಯಕ್ತಿಕ ಭೇಟಿಯಾದದ್ದೇ ಇಲ್ಲ.)
ಕಾನರ್ಾಡರೇ ಯಾಕೆ ಪ್ರತಿ ಬಾರಿ ನಿಮ್ಮಂಥವರು ಹೀಗೆ ಪರೋಕ್ಷವಾಗಿ ಕೋಮು ಭಾವನೆಯನ್ನು ಕೆಣಕಿ ಪ್ರಚೋದಿಸುವುದು..? ನಿಮಗೆ ಸುದ್ದಿಯಲ್ಲಿರಲೇ ಬೇಕಾದರೆ ಬೇಕಾದಷ್ಟು ದಾರಿಗಳಿವೆ. ಆದಕ್ಕಾಗಿ ಕೋಮು ಭಾವನೆಗಳ ಆಟವಾಡುವ ನಿಮ್ಮ ಈ ಹುಂಬಹುಕಿಯನ್ನು, ಇಲ್ಲದ ವಿತಂಡವಾದದ ಹುಂಬತನವನ್ನು ನಾನು ಖಂಡಿಸುತ್ತೇನೆ. ಕಾರಣ ಒಮ್ಮೆ ಸಣ್ಣ ಕಿಡಿಯಾಗಿ ಹೊಮ್ಮುವ ಇಂತಹ ಸಂವೇದನಾಶೀಲ ವಿಷಯಗಳ ಫಲಿತಾಂಶ ತಾರಕವಾದರೆ ನಿಮ್ಮಂತವರು ಅದನ್ನು ತಾಳಿಕೊಳ್ಳಲಾರಿರಿ ಮತ್ತು ಅದರಲ್ಲಿ ಬಲಿಯಾಗುವವರು ಮುಗ್ಢರು. (ದಳ್ಳುರಿಯ ಅನುಭವವೇನು..? ಅದರ ಭಯಾನಕತೆಗಳೇನು..? ನಟ್ಟ ನಡುವೆಯ ರಸ್ತೆಯ ಮಧ್ಯೆ ಜೀವ ಕೈಯ್ಯಲ್ಲಿ ಹೀಡಿದು ನಮ್ಮದೇ ಹೆಂಗಸರ ರಕ್ಷಣೆಗೆ ನಿಲ್ಲುವಂತಹ ಪರಿಸ್ಥಿತಿ ಇದೆಯಲ್ಲ. ಅದು ನಿಮ್ಮ ಅನುಭವಕ್ಕೆ ಸಾಯಲಿ ಕನಸಲ್ಲೂ ಬರಲಿಕ್ಕಿಲ್ಲ. ತಣ್ಣಗೆ ಏಸಿ.ಯಲ್ಲಿ ಕೂತು ಹೇಳಿಕೆ ನೀಡಿದಂತಲ್ಲ.. ಸಾಮಾಜಿಕ ಹೋರಾಟದ ಪರಿಸ್ಥಿತಿಗಳು) ನಿಮ್ಮಗ್ಯಾಕೆ ಬೇಕು ಇಂತಹ ಸೂಕ್ಷ್ಮ ವಿಷಯಗಳನ್ನು ಕೆಣಕುವ ಉಸಾಬರಿ..?

ವಯಸ್ಸಾಗುತ್ತಿದ್ದಂತೆ ಬುದ್ಢಿಗೇಡಿಗಳಂತಾಡುವ ನಿಮ್ಮಂತಹ ಬುದ್ಢಿಜೀವಿಗಳಿಂದ ಸಮಾಜಕ್ಕೆ ಯಾವ ಮಹದುಪಕಾರವಾಗುತ್ತಿದೆ ಮತ್ತು ನಿಮ್ಮನ್ನು ನಾವೆಲ್ಲಾ ಯಾಕೆ ಬುದ್ಢಿಜೀವಿ, ಕನ್ನಡ ಮೇರು ಲೇಖಕ(ಪೀಠ ಪಡೆದ ಕಾರಣಕ್ಕೆ), ಅಥವಾ ಸಂವೇದನಾಶೀಲ ವ್ಯಕ್ತಿತ್ವದರೆಂದು ಸೈರಿಸಿಕೊಳ್ಳಬೇಕು..? ಇಂತ ಕೆಸರೆರಚಿ ಮಜಾ ನೋಡುವ ಪ್ರವೃತ್ತಿಯನ್ನು ಇನ್ನಾದರೂ ಕೈ ಬಿಡಿ.
ನೈಪಾಳ್ ಬರೆದ ವಿಷಯ ಸತ್ಯಕ್ಕೆ ಹತ್ತಿರವಾಗಿ ಇದ್ದುದೇ ಇವತ್ತೀಗೂ ಆ ಮನುಶ್ಯ ಅದನ್ನು ಬರೆದೂ ದಕ್ಕಿಸಿಕೊಂಡಿದ್ದು ನೋಬೆಲ್ಗೆ ಭಾಜನರಾದದ್ದು. ಅಂತೆಯೇ ಭೈರಪ್ಪನವರೂ ಆವರಣದಂಥಾ ವಿಷಯವನ್ನು ಬರೆದೂ ದೇಶಾದ್ಯಂತ ಕೃತಿಯನ್ನು ಪಸರಿಸಿ ಗೆದ್ದರು ಕನ್ನಡಕ್ಕೆ ಮೊದಲ ಸರಸ್ವತಿ ಸಮ್ಮಾನ ತಂದುಕೊಟ್ಟರು. ಆದರೆ ನಿಮ್ಮ ಎದೆಯಾಳದ ಕುದಿ ಕಾರಿಕೊಂಡೂ ಮುಂಬೈನಲ್ಲೂ ನಮ್ಮ ಕನ್ನಡದ ಮಾನ ಹರಾಜು ಹಾಕಿದಿರಿ.(ಕಾರಣ ಉತ್ತರ ಭಾರತದ ಕಡೆಯಲ್ಲಿ ಸಾಮಾನ್ಯ ಮಾತುಗಳಲ್ಲಿ ನಿಮ್ಮನ್ನು ಅಥವಾ ಯಾರನ್ನೂ ಇಂತಹ ಸಂದರ್ಭದಲ್ಲಿ ಹೆಸರಿನಿಂದ ಕರೆಯದೆ " ವೋ ಕನ್ನಡವಾಲೇ ಐಸಾ ಬೋಲಾ.." ಎಂದೆ ಪ್ರಚಾರಕ್ಕೆ ಬರುತ್ತದೆ. ಹೋಗುತ್ತಿರುವುದು ಕನ್ನಡದ ಮಾನ.) ಯಾಕೆ ನಿಮಗೆ ನೋಬೆಲ್ "ಪಡೆದುಕೊಳ್ಳುವುದೊಂದು" ಬಾಕಿ ಉಳಿದಿದ್ದು ಅದರ ಬುಡಕ್ಕೆ ಹೆಂಗೆ ಕೈ ಯಿಕ್ಕಲಿ ಎಂದೇ..? ಒಂಚೂರು ಇತರೆ ಭಾಷೆಯ ಪೀಠಿಗಳ ಜೀವನ ಶೈಲಿ ಮಾತಾಡುವ ವೈಖರಿ ಇತ್ಯಾದಿಗಳನ್ನು ಗಮನಿಸಿ. ನಿಮ್ಮಂತೆ ಒಬ್ಬರಾದರೂ ಆಡಾಡ್ತ ಹಲುಬುತಿದ್ದಾರೆಯೇ..? ಕಾರ್ನಾಡರೆ ಆದದ್ದಾಯಿತು. ಇನ್ನಾದರೂ ಇಂತಹ ಕುದಿ ಕಾರಿಕೊಳ್ಳುವ ಭರದಲ್ಲಿ ಕಾಲ ಮೇಲೆ ಕೊಡಲಿ ಬಾರಿಸಿಕೊಳ್ಳದಿರಿ. ಪರಿಣಾಮ ಗಂಭೀರವಾದರೆ ನಿಮ್ಮಂತವರಿಗೆ ಅದನ್ನು ತಡೆದುಕೊಳ್ಳುವುದು ಸಾಧ್ಯವಿಲ್ಲ. ಇನ್ನು ಬರೆದರೆ ಪತ್ರಿಕೆ ಪೂರ್ತಿ ಇದೇ ಆದಿತು.

 
- ಸಂತೋಷಕುಮಾರ ಮೆಹೆಂದಳೆ