Monday, December 10, 2012


ಆಡಾಡ್ತ ಹಾಳಾದ ಕನ್ನಡದ ತುಘಲಕ್...

ಮುಂಬೈವಾದ ಸರಣಿಯನ್ನು ಬದಿಗಿರಿಸಿ ನೋಡಿದಾಗಲೂ ಕಾರ್ನಾಡರು ಯಾವ ಹಂತದಲ್ಲೂ ಜ್ಞಾನಪೀಠಿ ಎನ್ನಿಸುವುದೇ ಇಲ್ಲ. ಇವತ್ತಿಗೂ ಜ್ಞಾನಪೀಠ ಪ್ರಶಸ್ತಿ ವಿಜೇತರು ಎಂದಾಕ್ಷಣ ಎದುರಿಗೆ ನಿಲ್ಲುವ ಚಿತ್ರಗಳು ಕುವೆಂಪು, ಬೆಂದ್ರೆ, ಗೋಕಾಕ, ಮಾಸ್ತಿ ಮತ್ತು ಕಾರಂತ ಈಗೀಗ ಕಂಬಾರರದ್ದು. ಅದ್ಭುತ ಲೇಖಕರಲ್ಲಿ ಭೈರಪ್ಪ ಮಾತ್ರ.
ಯಾವತ್ತಿಗಾದರೂ ನಾವು ಇತ್ತಿಚೀನ ಕಂಬಾರ ಹೊರತು ಪಡಿಸಿ ಮಧ್ಯಮಾವಧಿಯಲ್ಲಿ ಪಡೆದ ಪೀಠಿಗಳನ್ನು ನೆನಪಿಸಿಕೊಂಡಿದ್ದೇವಾ..? ಕಾರಣ ಕಾರ್ನಾಡರು ಮತ್ತು ಇನ್ನೊಬ್ಬ ಪೀಠಿ ಕೇವಲ ಶಿಕ್ಷಣ ಕ್ಷೇತ್ರದ ಪ್ರಭೃತಿಗಳಾಗಿ ಜ್ಞಾನಪೀಠದ ಬುಡಕ್ಕೆ ತಲುಪಿದರೆ ವಿನ: ಅವರ ಪ್ರತಿಭೆಯಿಂದಲ್ಲ. ಹಾಗಂತ ಅವರು ಬರೆದಿಲ್ಲ ಅಥವಾ ಅದೆಲ್ಲ ಜೊಳ್ಳು ಎಂದು ನಾನು ಪ್ರತಿಪಾದಿಸುತ್ತಿಲ್ಲ. ಅವರ ಬರಹಗಳೆಷ್ಟು ಗಟ್ಟಿ ಎನ್ನುವುದನ್ನು ಎಲ್ಲರೂ ಬಲ್ಲರು. ಆದರೆ ಕಾರ್ನಾಡರು ಅವಕಾಶ ಸಿಕ್ಕಾಗ ಮತ್ತು "ದೇಶ ಕಾಲ" ನೋಡಿಕೊಂಡು ಹೇಳಿಕೆಗಳನ್ನು ಕೊಡುವುದರಲ್ಲಿ ನಿಸ್ಸಿಮರು.
ಒಂದು ಪ್ರಶ್ನೆ ಕಾರ್ನಾಡರೇ. ನಿಮಗಿರುವ ಕಾಳಜಿ ಹಾಗು ನಿಷ್ಟೆಯಿಂದ ಒಂದಾದರೂ ಪ್ರಾಮಾಣಿಕವಾದ ಕೃತಿ ಬರೆದು ತೋರಿಸಿ. ನೈಪಾಲ್ ಬರೆದದ್ದು ಸುಳ್ಳು ಅಥವಾ ಅವರಿಗೇನೂ ಗೊತ್ತಿಲ್ಲ ಎಂಬ ವಾದಸರಣಿ ಇಡುವ ನೀಮಗೇನು ಗೊತ್ತಿದೆ ಎನ್ನುವುದನ್ನು ಯಾವಾಗ ಒದರುತ್ತಿರಿ..? ಅಥವಾ ಎಲ್ಲಿ ಬರೆದಿದ್ದಿರಿ..? ಹೀಗೆ ಅನಗತ್ಯವಾಗಿ ವೇದಿಕೆ ಬಳಸಿಕೊಂಡು ದಾಳಿ ಮೂಲಕ, ನಿಸ್ಸಾಹಯಕ ಹಾಗು ಸಾಮಾನ್ಯ ಮುಸ್ಲಿಂ ಮನಸ್ಸುಗಳನ್ನೇಕೆ ಕದಡುತ್ತೀರಿ. ನಿಮ್ಮಂತವರಿಂದಲೇ ಅಲ್ಲವೇ ಕೋಮು ಪ್ರಚೋದನೆಗಳು ಹರಡುವುದು..? ನಿಮಗ್ಯಾಕೆ ಬೇಕಿತ್ತು ಇತಿಹಾಸ ಕೆದರುವ ಉಸಾಬರಿ. ಸಮಾಜದಲ್ಲಿ ಕೆಸರು ಹರಡುವ ಹೋಣೆಗೇಡಿತನ..? 
ಅಷ್ಟಕ್ಕೂ ಇತಿಹಾಸದ ಸತ್ಯವನ್ನು ಹೊರಗೆಳೆಯುವ ಹುಕಿ ನಿಮ್ಮಲ್ಲಿದ್ದುದ್ದೇ ಆದರೆ ಅದ್ಯಾಕೆ ತುಘಲಕ್..ನ ರಚನೆ ಹಾಗಾಯಿತು..? ಅಸಲಿ ತುಘಲಕ್ನ ಕಥಾನಕ ಹಾಗು ನಿಮ್ಮ ಕೃತಿಯ ಕುರಿತು ಕುಂತು ಚರ್ಚೆಗಿಳಿಯೋಣ ಸಿದ್ಧರಿದ್ದೀರಾ..? ಅಸಲಿಗೆ ನಿಮಗಷ್ಟು ನೈಪಾಲ್ರನ್ನು ಹೀಗೆಳೆವ ತೃಷೆ ಇದ್ದಿದ್ದೇ ಆದರೆ ಇತಿಹಾಸವನ್ನು ಬಗೆದು ಸರ್ವರೂ ಒಪ್ಪುವಂತಹ ಒಂದೇ ಕೃತಿ ರಚಿಸಿ ತೋರಿಸಿ. ಭೈರಪ್ಪನವರಂತಹ ಸಂಶೋಧನಾತ್ಮಕ ಯಾವ ಮರು ಟೀಕೆಗೂ ಒಳಗಾಗದ "ಆವರಣ"ದಂಥ ಕೃತಿಯನ್ನು ಒಮ್ಮೆಯಾದರೂ ನೀವು ರಚಿಸಿ ನೋಡೊಣ. 
ಇವತ್ತು ಭಾರತದಾದ್ಯಂತ ಸಂಚರಿಸಿ ನಮ್ಮ ಬೇರುಗಳನ್ನು ಅರಸಿ ಇತಿಹಾಸ ಹಾಗು ಅದರ ಪಳೆಯುಳಿಕೆಗಳನ್ನು ಸ್ವಯಂ ಸಂದರ್ಶಿಸುತ್ತಿರುವ ನನಗೆ ಇಲ್ಲಿಯವರೆಗೂ ಸಿಕ್ಕಿದ್ದು ಪ್ರತಿ ಸ್ಮಾರಕದಲ್ಲೂ ಕೇವಲ ಅಡಿಪಾಯ ಅಥವಾ ಸ್ಮಾರಕ ಮಾತ್ರವೇ ಹೊರತಾಗಿ ನಮ್ಮದೇ ಸಂಸ್ಕೃತಿಯ ಪ್ರತೀಕವಾದ ಪರಿಪೂರ್ಣ ಒಂದೇ ಒಂದು ಕಟ್ಟಡ ಅಥವಾ ದೇಗುಲಗಳು ಲಭ್ಯವಿಲ್ಲ. ಏನು ಇವನ್ನೆಲ್ಲಾ ರಾಜಪೂತರು, ಮರಾಠರು, ಕಳಿಂಗರು, ಚಾಲುಕ್ಯರು, ಚೋಳರು ಇತ್ಯಾದಿ ಘನ ವಂಶಸ್ಥರು ನಮ್ಮ ಇತಿಹಾಸದ ರಾಜ ಮಹಾರಾಜರು ಹಾಳು ಮಾಡಿದರೆ..? ಬನ್ನಿ ನನ್ನೊಂದಿಗೆ ಚರಿತ್ರೆ ಏನು ಎನ್ನುವುದನ್ನು ನಾನು ಬಿಚ್ಚಿಡುತ್ತೇನೆ.. ಇತಿಹಾಸವನ್ನು ಅವುಗಳ ಸಮಾಧಿಗಳ ಸಮೇತ ತೋರಿಸುತ್ತೇನೆ. ಅದು ವೇದಿಕೆಯ ಮೇಲೆ ಭಾಷಣ ಮಾಡಿದಂತಲ್ಲ ಇತಿಹಾಸ ಅರಿಯುವುದು.( ಕಾವೇರಿ ನೀರಿಗಾಗಿ, ಕನ್ನಡ ಹೋರಾಟದ ಸಂದರ್ಭದಲ್ಲಿ ಯಾವತ್ತಾದರೂ ನೀವೆಲ್ಲ ಬಿದಿಗಿಳಿದದ್ದು ಇದೆಯೆ..?)
ಹೌದು ಮುಸ್ಲಿಂ ದಾಳಿಗಳಿಂದಲೇ ಸಂಪೂರ್ಣ ನಮ್ಮ ದೇಶ ಜರ್ಜರಿತವಾಗಿದ್ದು ಸತ್ಯ. ಇದಕ್ಕೆ ಇತಿಹಾಸದಿಂದ ವರ್ತಮಾನದವರೆಗೂ ಸಾವಿರಾರು ದಾಖಲೆ ಮತ್ತು ನೈಜ ಮುಖಗಳಿವೆ. ಇದನ್ನು ದೃಢಪಡಿಸಲು ಅಥವಾ ತಿರುಚಲು ನಿಮ್ಮಂತವರ ಸಾಕ್ಷಿಗಳ ಅಗತ್ಯವಿಲ್ಲ. ಇವತ್ತಿಗೂ ಭಾರತ ಚೇತರಿಸಿಕೊಳ್ಳುತ್ತಿರುವ ದೇಶಗಳ ಸಾಲಿನಲ್ಲಿ ನಿಲ್ಲುತ್ತಿದೆಯಂತಾದರೆ ಅದಕ್ಕೆ ಕಾರಣ ಈ ದಾಳಿಗಳು ಮತ್ತು ಲೂಟಿಗಳೇ ಹೊರತಾಗಿ ಬೇರೇನಲ್ಲ. ರತ್ನಗಳನ್ನು ಬಳ್ಳ(ಸೇರು)ಗಳಲ್ಲಿ ಅಳೆದು ಮಾರಿದ ಮಾರುಕಟ್ಟೆ ನಮ್ಮದು ರೀ...! ನಿಮ್ಮಂತೆ ಬಿಕರಿಗೆ ನಿಂತು ಬಡಕೊಂಡ ಸಂಸ್ಕೃತಿಯಲ್ಲ. ಆ ಹೆಮ್ಮೆ ಇರಬೇಕಾದದ್ದೇ. ವಿದ್ಯಾರ್ಥಿಗಳಿಗೆ ಮೇಲ್ಪಂಕ್ತಿಯಾಗಬೇಕಾದ ಕಾಲದಲ್ಲೇ ಬಹಿರಂಗವಾಗಿ ಸ್ವಚ್ಛಂದ ಬದುಕಿನ ಪಾಠವನ್ನು ಅನಾಮತ್ತಾಗಿ ಹೇಳಿದ ನೀವು ಯಾವ ವಿಷಯದಲ್ಲಿ ಪರಿಪೂರ್ಣರಿದ್ದೀರಿ..? ಗ್ರಹಿಸಿದ್ದಿರಿ..? ಅದನ್ನಾದರೂ ಕಲಿಸಿ. ನಾವೂ ಕೊಂಚ ಆಡಾಡ್ತ ಕಲಿತು ಕೃತಾರ್ಥರಾದೇವು..!
ಇನ್ನು ಭೈರಪ್ಪನವರನ್ನು ಹೀಗೆಳೆವ ನಿಮ್ಮಂತಹ ಆಯ್ದ ಜ್ಞಾನಪೀಠಿಗಳಿಗೊಂದು ಪ್ರಶ್ನೆ. ನಿಮ್ಮ ಯಾವ ಪುಸ್ತಕ ಅಥವಾ ಕೃತಿಯನ್ನು ಭೈರಪ್ಪನವರ ಕೃತಿಯಂತೆ ಅಥವಾ ಬೇರೆ ಕೆಲ ಹೆಸರಾಂತ ಬರಹಗಾರರ ಪುಸ್ತಕಗಳಂತೆ ಮುಗಿಬಿದ್ದು ಕೊಂಡುಕೊಂಡು ಓದಿದ ಉದಾಹರಣೆ ಇದೆ. ಒಂದೇ ಒಂದು ಪುಸ್ತಕವನ್ನು ನೀವು ಜನಸಾಮನ್ಯರಿಗೆ ಹಾಗು ಓದುಗರಿಗೆ ಹಪಹಪಿಸುವಂತೆ ಬರೆದಿದ್ದೀರಾ..? ಯಾವ ನಿಮ್ಮ ಕೃತಿ ಇವತ್ತು ಸಾಮನ್ಯ ಓದುಗನ ನಾಲಿಗೆ ತುದಿಯಲ್ಲಿದೆ ಭೈರಪ್ಪನವರ ಹೊರತಾಗಿ..? (ಹೀಗೆ ಬರೆಯುವುದರಿಂದ ನನ್ನನ್ನು ಹಲವು ಬಾರಿ ಭೈರಪ್ಪನವರ ಶಿಷ್ಯ, ಹಿಂಬಾಲಕ ಎಂದೂ ಬರೆದ್ದಿದ್ದಾಗಿದೆ. ಬೇಜಾರಿಲ್ಲ. ಕಾರಣ ಅಂತಹ ದೊಡ್ಡ ಲೇಖಕರ ಜೊತೆ ಗುರುತಿಸಿಕೊಳ್ಳಲು ನನಗ್ಯಾವ ಸಂಕೋಚವೂ ಇಲ್ಲ. ವೈರುದ್ಧ್ಯವೆಂದರೆ ನಾನ್ಯಾವತ್ತೂ ಭೈರಪ್ಪನವರನ್ನು ವೈಯಕ್ತಿಕ ಭೇಟಿಯಾದದ್ದೇ ಇಲ್ಲ.)
ಕಾನರ್ಾಡರೇ ಯಾಕೆ ಪ್ರತಿ ಬಾರಿ ನಿಮ್ಮಂಥವರು ಹೀಗೆ ಪರೋಕ್ಷವಾಗಿ ಕೋಮು ಭಾವನೆಯನ್ನು ಕೆಣಕಿ ಪ್ರಚೋದಿಸುವುದು..? ನಿಮಗೆ ಸುದ್ದಿಯಲ್ಲಿರಲೇ ಬೇಕಾದರೆ ಬೇಕಾದಷ್ಟು ದಾರಿಗಳಿವೆ. ಆದಕ್ಕಾಗಿ ಕೋಮು ಭಾವನೆಗಳ ಆಟವಾಡುವ ನಿಮ್ಮ ಈ ಹುಂಬಹುಕಿಯನ್ನು, ಇಲ್ಲದ ವಿತಂಡವಾದದ ಹುಂಬತನವನ್ನು ನಾನು ಖಂಡಿಸುತ್ತೇನೆ. ಕಾರಣ ಒಮ್ಮೆ ಸಣ್ಣ ಕಿಡಿಯಾಗಿ ಹೊಮ್ಮುವ ಇಂತಹ ಸಂವೇದನಾಶೀಲ ವಿಷಯಗಳ ಫಲಿತಾಂಶ ತಾರಕವಾದರೆ ನಿಮ್ಮಂತವರು ಅದನ್ನು ತಾಳಿಕೊಳ್ಳಲಾರಿರಿ ಮತ್ತು ಅದರಲ್ಲಿ ಬಲಿಯಾಗುವವರು ಮುಗ್ಢರು. (ದಳ್ಳುರಿಯ ಅನುಭವವೇನು..? ಅದರ ಭಯಾನಕತೆಗಳೇನು..? ನಟ್ಟ ನಡುವೆಯ ರಸ್ತೆಯ ಮಧ್ಯೆ ಜೀವ ಕೈಯ್ಯಲ್ಲಿ ಹೀಡಿದು ನಮ್ಮದೇ ಹೆಂಗಸರ ರಕ್ಷಣೆಗೆ ನಿಲ್ಲುವಂತಹ ಪರಿಸ್ಥಿತಿ ಇದೆಯಲ್ಲ. ಅದು ನಿಮ್ಮ ಅನುಭವಕ್ಕೆ ಸಾಯಲಿ ಕನಸಲ್ಲೂ ಬರಲಿಕ್ಕಿಲ್ಲ. ತಣ್ಣಗೆ ಏಸಿ.ಯಲ್ಲಿ ಕೂತು ಹೇಳಿಕೆ ನೀಡಿದಂತಲ್ಲ.. ಸಾಮಾಜಿಕ ಹೋರಾಟದ ಪರಿಸ್ಥಿತಿಗಳು) ನಿಮ್ಮಗ್ಯಾಕೆ ಬೇಕು ಇಂತಹ ಸೂಕ್ಷ್ಮ ವಿಷಯಗಳನ್ನು ಕೆಣಕುವ ಉಸಾಬರಿ..?

ವಯಸ್ಸಾಗುತ್ತಿದ್ದಂತೆ ಬುದ್ಢಿಗೇಡಿಗಳಂತಾಡುವ ನಿಮ್ಮಂತಹ ಬುದ್ಢಿಜೀವಿಗಳಿಂದ ಸಮಾಜಕ್ಕೆ ಯಾವ ಮಹದುಪಕಾರವಾಗುತ್ತಿದೆ ಮತ್ತು ನಿಮ್ಮನ್ನು ನಾವೆಲ್ಲಾ ಯಾಕೆ ಬುದ್ಢಿಜೀವಿ, ಕನ್ನಡ ಮೇರು ಲೇಖಕ(ಪೀಠ ಪಡೆದ ಕಾರಣಕ್ಕೆ), ಅಥವಾ ಸಂವೇದನಾಶೀಲ ವ್ಯಕ್ತಿತ್ವದರೆಂದು ಸೈರಿಸಿಕೊಳ್ಳಬೇಕು..? ಇಂತ ಕೆಸರೆರಚಿ ಮಜಾ ನೋಡುವ ಪ್ರವೃತ್ತಿಯನ್ನು ಇನ್ನಾದರೂ ಕೈ ಬಿಡಿ.
ನೈಪಾಳ್ ಬರೆದ ವಿಷಯ ಸತ್ಯಕ್ಕೆ ಹತ್ತಿರವಾಗಿ ಇದ್ದುದೇ ಇವತ್ತೀಗೂ ಆ ಮನುಶ್ಯ ಅದನ್ನು ಬರೆದೂ ದಕ್ಕಿಸಿಕೊಂಡಿದ್ದು ನೋಬೆಲ್ಗೆ ಭಾಜನರಾದದ್ದು. ಅಂತೆಯೇ ಭೈರಪ್ಪನವರೂ ಆವರಣದಂಥಾ ವಿಷಯವನ್ನು ಬರೆದೂ ದೇಶಾದ್ಯಂತ ಕೃತಿಯನ್ನು ಪಸರಿಸಿ ಗೆದ್ದರು ಕನ್ನಡಕ್ಕೆ ಮೊದಲ ಸರಸ್ವತಿ ಸಮ್ಮಾನ ತಂದುಕೊಟ್ಟರು. ಆದರೆ ನಿಮ್ಮ ಎದೆಯಾಳದ ಕುದಿ ಕಾರಿಕೊಂಡೂ ಮುಂಬೈನಲ್ಲೂ ನಮ್ಮ ಕನ್ನಡದ ಮಾನ ಹರಾಜು ಹಾಕಿದಿರಿ.(ಕಾರಣ ಉತ್ತರ ಭಾರತದ ಕಡೆಯಲ್ಲಿ ಸಾಮಾನ್ಯ ಮಾತುಗಳಲ್ಲಿ ನಿಮ್ಮನ್ನು ಅಥವಾ ಯಾರನ್ನೂ ಇಂತಹ ಸಂದರ್ಭದಲ್ಲಿ ಹೆಸರಿನಿಂದ ಕರೆಯದೆ " ವೋ ಕನ್ನಡವಾಲೇ ಐಸಾ ಬೋಲಾ.." ಎಂದೆ ಪ್ರಚಾರಕ್ಕೆ ಬರುತ್ತದೆ. ಹೋಗುತ್ತಿರುವುದು ಕನ್ನಡದ ಮಾನ.) ಯಾಕೆ ನಿಮಗೆ ನೋಬೆಲ್ "ಪಡೆದುಕೊಳ್ಳುವುದೊಂದು" ಬಾಕಿ ಉಳಿದಿದ್ದು ಅದರ ಬುಡಕ್ಕೆ ಹೆಂಗೆ ಕೈ ಯಿಕ್ಕಲಿ ಎಂದೇ..? ಒಂಚೂರು ಇತರೆ ಭಾಷೆಯ ಪೀಠಿಗಳ ಜೀವನ ಶೈಲಿ ಮಾತಾಡುವ ವೈಖರಿ ಇತ್ಯಾದಿಗಳನ್ನು ಗಮನಿಸಿ. ನಿಮ್ಮಂತೆ ಒಬ್ಬರಾದರೂ ಆಡಾಡ್ತ ಹಲುಬುತಿದ್ದಾರೆಯೇ..? ಕಾರ್ನಾಡರೆ ಆದದ್ದಾಯಿತು. ಇನ್ನಾದರೂ ಇಂತಹ ಕುದಿ ಕಾರಿಕೊಳ್ಳುವ ಭರದಲ್ಲಿ ಕಾಲ ಮೇಲೆ ಕೊಡಲಿ ಬಾರಿಸಿಕೊಳ್ಳದಿರಿ. ಪರಿಣಾಮ ಗಂಭೀರವಾದರೆ ನಿಮ್ಮಂತವರಿಗೆ ಅದನ್ನು ತಡೆದುಕೊಳ್ಳುವುದು ಸಾಧ್ಯವಿಲ್ಲ. ಇನ್ನು ಬರೆದರೆ ಪತ್ರಿಕೆ ಪೂರ್ತಿ ಇದೇ ಆದಿತು.

 
- ಸಂತೋಷಕುಮಾರ ಮೆಹೆಂದಳೆ

No comments:

Post a Comment