ಅಸಲಿಗೆ ಬೇಕಿದ್ದುದು ಸಣ್ಣ ಸಾಂತ್ವನ ..
ನಾನು ನೋಡುವ ಹೊತ್ತಿಗಾಗಲೇ ಆಕೆ ಕುಟುಂಬ ತೊರೆದು ಅಮ್ಮನ ಮನೆ ಸೇರಿ ಎಷ್ಟು ವರ್ಷಗಳಾಗಿದ್ದವೋ.. ತೀರಾ ಬೆಳಿಗೆದ್ದು ಕಸ ಗುಡಿಸಿ, ಅಂಗಳಕ್ಕೆ ನೀರು ಹೊಡೆದು, ಕೊಟ್ಟಿಗೆ ಮನೆಯಿಂದ ದನಗಳನ್ನೆಲ್ಲ ಬ್ಯಾಣಕ್ಕೆ ಬಿಟ್ಟು, ಹಾಲು ಕರೆದು, ಅಡಕೆಯನ್ನು ಮೇಲಕ್ಕೇರಿಸಿ, ಹರಡಿ ಕೆಳಗಿಳಿದು ಅಂಗಳದ ಆ ತುದಿಯಿಂದ ಬರುವಾಗ ಗಣುಮಾಮನ ಪೂಜೆಗೂ ಹೂವನ್ನೂ ಕೊಯ್ದು, ಸ್ಕೂಲಿಗೆ ಹೊರಡುವ ಮಕ್ಕಳಿಗೆ ತಯಾರಿ, ಸಾಲು ಸಾಲು ಜನರಿಗೆ ದೋಸೆ ಹೊಯ್ದು, ಕಷಾಯಕ್ಕಿಟ್ಟು, ಆಳುಗಳಿಗೆ ಅಸ್ರಿಗೆ ಕೊಟ್ಟು, ಒಂದಾ ಎರಡಾ.. ಪೂರ್ತಿ ಮನೆ ಕೆಲಸವನ್ನು ದೆವ್ವ ಹಿಡಿದವರಂತೆ ಮಾಡುತ್ತಿದ್ದಳು.ಪೂರ್ತಿ ಬ್ಯಾಣದ ತುಂಬೆಲ್ಲ ಮುಳ್ಳಣ್ಣು, ಚವಳಿ ಎಂದೆಲ್ಲ ಬಿಚ್ಚುಗತ್ತಿ ಹಿಡಿದು ರಣಬಿಸಿಲಿನಲ್ಲಿ ಓಡಾಡುತ್ತಿದ್ದಳು.‘ಎಯ್..ನಿಂಗಳ ಬದೀಗ್ ಇದೆಲ್ಲ ಸಿಗ್ತಿಲ್ಯೆ.. ಸಮಾ ತಿಂದ್ಕಂಡು ಹೋಗು ಆಯ್ತಾ ಎನ್ನುತ್ತ ಬಕ್ಕೆ ಹಲಸು ಸುಲಿಸುಲಿದು ಕೊಡುತ್ತಿದ್ದಳು. ನಮ್ಮೆಲ್ಲರಿಗಾಕೆ ಶೈಲತ್ತೆ. ‘ಹೋಗೆ ನಂಬದೀಗೂ ಇದೆಲ್ಲ ಮಾರ್ಕೇಟ್‌ಲ್ಲಿ ಬರ್ತಿದ್ದು. ನಿಂಗಳ್ ತ್ವಾಟ ಒಂದೆನೆ ಅಲ್ಲ ಗೊತ್ತಿ ಎನ್ನುತ್ತ ತಕರಾರು ಎತ್ತಿದರೆ ಯಾವ ಮುಲಾಜು ಇಟ್ಟುಕೊಳ್ಳದೆ,‘ಹೋಗಾ ಮಾಣಿ ನೀನು ಅ ತಿಂಬಕಾ ಎನ್ನುತ್ತ ಅರ್ಧ ತಿಂದ ತಿನಿಸೂ ಕಸಿದುಕೊಳ್ಳುತ್ತಿದ್ದಳು. ಆಕೆ ಕಕ್ಕುಲಾತಿಗೆ ಯಾವ ಮಾರುತ್ತರವನ್ನೂ ಸಹಿಸುತ್ತಿರಲಿಲ್ಲ.
ನನಗೂ ಶೈಲತ್ತೆಯ ಬಗ್ಗೆ ಯಾವ ಮಾಹಿತಿಯೂ ಆರಂಭದಲ್ಲಿ ಇರಲಿಲ್ಲ.ಆಗೀನ ಕಾಲಕ್ಕೇ ಹತ್ತನೇ ತರಗತಿ ಓದಿದ್ದ ಶೈಲತ್ತೆಗೆ ಮದುವೆ ಎನ್ನುವುದು ಯಾಕೆ ಬರಕತ್ತಾಗಲಿಲ್ಲವೋ..? ತೀರಾ ರಾಜೀ ಪಂಚಾಯ್ತಿಕೆಗಳಿಗೂ ಮೊದಲೇ ಸರಹೊತ್ತಿಗೆ ಜುನೇರಿನ ಗಂಟಿನಲ್ಲಿ ಸೀರೆ ಬಿಗಿದುಕೊಂಡು ತಗ್ಗಿನಕೇರಿಯ ತೋಟಕ್ಕೆ ಸೇರಿಕೊಂಡಿದ್ದಳು. ಆಗೆಲ್ಲ ಮನೆ ತುಂಬ ಜನರಿರುತ್ತಿದ್ದ ಕಾಲ. ಒಂದೊತ್ತು ಊಟ ಮತ್ತು ವಸತಿಗಾಗಿ ವ್ಯವಹಾರಗಳು ಲೆಕ್ಕ ಹಾಕುವಷ್ಟು ಮಾನವೀಯತೆ ಹಾಳಾಗಿರಲಿಲ್ಲ. ಹಾಗಾಗಿ ತಿಂಗಳೊಪ್ಪತ್ತಿನಲ್ಲಿ ಕೆಲಸದ ಬಲದಿಂದಾಗಿ, ಅನಿವಾರ್ಯವಾಗಿ ಹೋಗುವುದರೊಂದಿಗೆ ಆಕೆ ವಾಪಸ್ ಹೋಗುವ, ಗಂಡನ ಕಥೆ ಏನಾಯಿತು..? ಆ ಮದುವೆಯ ವಿಷಯ ಕಾನೂನಿಗೆ ಒಯ್ಯಬೇಕಾ..?ಪರಿಹಾರ ಸಿಕ್ಕುತ್ತ ಇತ್ಯಾದಿ ಚರ್ಚೆಗೇ ಬಾರದೆ ಮನೆಯ ಮೂಲಸದಸ್ಯಳಾಗಿ ಹೋಗಿದ್ದಳು. ಆದರೆ ಮನೆ ಮುಂದಿನ ಗುಡ್ಡೆ ಮೇಲೆ ಆಗೀಗ ಕಣ್ಣೀರು ಹಾಕುವುದು, ಬ್ಯಾಣದದರೂ ನೆರಳಿಗೆ ಮಲಗಿದ್ದು ತನ್ನೊಳಗೆ ಪಡುವ ಸಂಕಟಕ್ಕೆ ಮೊದಮೊದಲು ಆಕೆಯನ್ನು ಸಮಾಧಾನಿಸುತ್ತಿದ್ದ ಪ್ರಕ್ರಿಯೆ ಕೂಡಾ ಕ್ರಮೇಣ ನಿಂತು ಹೋಗಿ ‘ಅವ್ಳ ಸಂಕಟ ಇದ್ದಿದ್ದೇಯಾ- ಎಂಬತಾಗಿ ಹೋಗಿತ್ತು. ಮೊದಲಿನ ಎರಡ್ಮೂರು ವರ್ಷದ ಸಂಸಾರ ಅವಳಲ್ಲಿ ಅದ್ಯಾವ ಭಾವ ಮೂಡಿಸಿತ್ತೋ, ಅದ್ಯಾಕೆ ತೀರಾ ಅದರಿಂದ ವಿಮುಖಳಾಗಿ ಹೋದಳೊ ಅಥವಾ ತೀರಾ ಒಬ್ಬಂಟಿಯಾಗಿ ಕತ್ತೆಯಂತೆ ದುಡಿಯುತ್ತ ದುಃಖ ಮರೆಯುತ್ತಿದ್ದಳೊ ಒಟ್ಟಾರೆ ಬದಲಾಗುತ್ತಿದ್ದ ಭವಿಷ್ಯತ್ತಿನ ಸಂಬಂಧಗಳಲ್ಲಿ ಆಕೆಯ ಪಾತ್ರ ಕಡೆಗಣನೆಯಾಗತೊಡಗಿ ಪರಿಸ್ಥಿತಿ ಗಂಭೀರವಾಗತೊಡಗಿತ್ತು.ಅವಳ ಅಪ್ಪ, ಅಮ್ಮ ತೀರಿ ಹೋಗಿದ್ದರು. ಹಿರಿಯಣ್ಣನ ಜತೆಗೆ ಸೊಸೆಯ ಹಿರಿತನ ಆರಂಭವಾಗಿತ್ತು. ಮಕ್ಕಳ ಆಟೋಟ ನಡವಳಿಕೆಗಳೆಲ್ಲ ಬದಲಾಗಿದ್ದವು. ಯಾರಿಗೂ ಈಗ ಮುಳ್ಳಣ್ಣು, ಬ್ಯಾಣ, ಆಲೆಮನೆಯ ಬೆಲ್ಲದಲ್ಲಿ ಪಪ್ಪಾಯಿ ಸರ ಸೇರಿಸುವ ಕೌತುಕ ಮತ್ತು ಖುಷಿ ಎರಡೂ ಉಳಿದಿರಲಿಲ್ಲ. ತೀರಾ ಆಸೆಪಟ್ಟು ಶೈಲತ್ತೆ ಎಷ್ಟೇ ಕೆಲಸ ಮಾಡಿದರೂ ಅದಕ್ಕೆ ಮೊದಲಿನ ಆಸ್ಥೆ ಜತೆಗೆ ಪುಕ್ಕಟೆ ಬಂದುಳಿದವಳು ಎನ್ನಿಸತೊಡಗಿ ಆದರ, ಗೌರವ ಎರಡೂ ಉಳಿದಿರಲಿಲ್ಲ. ಆಕೆಗದು ಅರ್ಥವಾಗುತ್ತಿರಲಿಲ್ಲವೋ ಅಥವಾ ಬದಲಾವಣೆಗಳಿಗೆ ಮನಸ್ಸು ಒಗ್ಗುತ್ತಿರಲಿಲ್ಲವೋ ಬರುಬರುತ್ತ ಶೈಲತ್ತೆ ವಿಪರೀತ ವಟಗುಡತೊಡಗಿದ್ದಳು. ಕಾರಣ ಇಷ್ಟೆ, ಒಬ್ಬಂಟಿಯಾಗಿ ಹೋಗುವ ಮನಸ್ಸಿಗೊಂದು ಮಾತಾಡಿಕೊಳ್ಳಲೂ ಆಸರೆ ಇರದಿದ್ದಾಗ, ಮನಸ್ಸು ತನ್ನಷ್ಟಕ್ಕೆ ಆಡಿಕೊಳ್ಳುವ ದಾರಿ ಹುಡುಕಿಕೊಳ್ಳುತ್ತದೆ. ಆಪ್ತ ಸಂವಹನವೇ ಇರದಿದಗ ಆಗುವ ಮಾನಸಿಕ ಬದಲಾವಣೆಯ ಹಂತ ಅದು. ತೀರಾ ಪ್ರತಿಕೆಲಸದಲ್ಲೂ ವಸ್ತುಗಳೊಂದಿಗೆ ಮಾತಾಡಿಕೊಳ್ಳುವುದು ಮಾಮೂಲಾಗತೊಡಗಿತ್ತು. ಅದರಲ್ಲೂ ತನಗೆ ಈಗ ಗೌರವ ಮತ್ತು ಆದರ ಎರಡೂ ಇಲ್ಲ, ಭಾರವಾಗುತ್ತಿದ್ದೇನೆ ಎನ್ನಿಸತೊಡಗಿ ಅದರ ಪರಿಣಾಮವನ್ನು ಕೆಲಸದ ಮೂಲಕ ಸರಿದೂಗಿಸಲು ಇನ್ನಷ್ಟು ಆಸ್ಥೆಯಿಂದ ಕೆಲಸಕ್ಕಿಳಿಯತೊಡಗಿ ಅನಾದರ ಇನ್ನಷ್ಟು ಉಲ್ಬಣಿಸಿಬಿಟ್ಟಿತ್ತು. ಶೈಲತ್ತೆ ಸುಮ್ಮನೆ ಕೂತಿದ್ದರೆ ಸಾಕು ಎನ್ನತೊಡಗಿದ್ದರು. ಆದರೆ ಕೆಲಸ ಬಿಡಿಸುವರಾರು ಇರಲಿಲ್ಲ.ಏರುತ್ತಿದ್ದ ವಯಸ್ಸು, ಕೈಕೊಡುತ್ತಿದ್ದ ಆರೋಗ್ಯ.. ಎಪ್ಪತ್ತರ ಹೊತ್ತಿಗೆ ಹಣ್ಣಾಗಿದ್ದರು. ಎತ್ತರದ ದೇಹ ಬಾಗಿಹೋಗಿತ್ತು. ಶೈಲತ್ತೆಯ ಅನುಪಸ್ಥಿತಿ ಅರಿವಾಗುತ್ತಿದ್ದಂತೆ ಮಾತುಗಳು ಬರತೊಡಗಿ ಆಕೆ ಮಾಡಲಾಗದಿದ್ದಾಗ ಹೊಸ ತಲೆಮಾರಿಗೆ ಭಾರವಾಗಿದ್ದು ಸ್ಪಷ್ಟ. ಸತತ ಹತ್ತೆಂಟು ಬಾಣಂತನ, ಮೂರು ದಶಕಗಳ ಅಡಕೆ ಕೊಯ್ಲು.. ಗದ್ದಾ -ಸಲು.. ಹತ್ತಾರು ಮದುವೆಯ ಗೌಜಿ ಎಲ್ಲವನ್ನೂ ಸಂಭಾಳಿಸಿದ್ದವಳು ಈಗ ಕೆಲಸಕ್ಕೆ ಬಾರದ ವಸ್ತುವಾಗಿದ್ದು ವರ್ಜ್ಯವಾಗತೊಡಗಿದಾಗ ಆ ಅವಮಾನ ಆಕೆಯನ್ನು ಇನ್ನಷ್ಟು ರೊಚ್ಚಿಗೆಬ್ಬಿಸುತ್ತಿತ್ತು. ತನ್ನ ಮಾತಾಡಿಕೊಳ್ಳುವ ಮಾನಸಿಕ ಸ್ಥಿತಿಗತಿ ಗಂಭೀರವಾಗಿ ಅಂಗಳದಿಂದ ಆಚೆ ಬ್ಯಾಣದವರೆಗೂ ಕೇಳಿಸುವಂತೆ ಕೂಗುತ್ತಿದ್ದಳು. ಮನುಷ್ಯರನ್ನು ಹೀಗೂ ನೋಡಿಕೊಳ್ಳಬಹುದೆನ್ನುವುದು ನನಗೆ ಅರಿವಿಗೇ ಬಂದಿದ್ದೇ ಆವತ್ತು. ಸತತ ನಾಲ್ಕು ದಶಕಗಳಿಂದ ಅಕ್ಷರಶಃ ಜೀತದಂತೆ ದುಡಿದಿದ್ದ ಮನೆಯಲ್ಲೀಗ ಶೈಲತ್ತೆಗೆ ಜಾಗವಿರಲಿಲ್ಲ. ವಣವಾಗಿದ್ದವಳಿಗೆ ದಿನಕ್ಕೆರಡು ಬಾರಿ ಪೌಡರು ಹಾಕಿ ಮಗ್ಗಲು ಬದಲಿಸುತ್ತಿದ್ದರು. ಅದಕ್ಕಾಗೆ ಮೂಲೆ ಮನೆಯ ಸುಂದ್ರಿ ಬಂದು ಮುಖ ಸಿಂಡರಿಸಿ ಹೇಗೋ ಕೆಲಸ ಮುಗಿಸಿ ಹೋಗುತ್ತಿದ್ದಳು. ಅಲ್ಲಿಂದ ಮರುದಿನದವರೆಗೂ ಆ ವಣದ ನೋವು.. ಅದರ ತೀವ್ರ ಬೇನೆಯ ಸಂಕಟ ಎಲ್ಲ ತಡೆದುಕೊಳುತ್ತ ಶೈಲತ್ತೆ ನಿರ್ಜೀವ ಕೈಗಳಿಂದ ನೊಣ ಹಾರಿಸಿಕೊಳ್ಳುತ್ತ ಮಲಗಿರುತ್ತಿದ್ದಳು. ನನ್ನ ಕೊನೆಯ ಭೇಟಿ ಹೊತ್ತಿಗೆ ಅಷ್ಟಿಷ್ಟು ಓಡಾಡುತ್ತಿದ್ದ ಶೈಲತ್ತೆ ಈಗ ಪೂರ್ತಿ ಹಾಸಿಗೆಗೆ ಬಿದ್ದಿದ್ದಾಳೆಂದು ಗೊತ್ತಾಗುತ್ತಿದ್ದಂತೆ ಏನೋ ನೆಪ ಮಾಡಿಕೊಂಡು ಆಕೆಯ ಮನೆಯತ್ತ ನಡೆದುಹೋಗಿದ್ದಾ.ಮನೆಯ ಅಂಗಳದ ಕೊಟ್ಟಿಗೆಯ ಮೂಲೆಯಲ್ಲಿ ಚಿಕ್ಕ ಮಂಚ ಹಾಕಲಾಗಿತ್ತು. ಅದರ ಮೇಲೆ ಮೊದಲು ಆ ಮನೆಯ ನಾಯಿ ಮಲಗುತ್ತಿದ್ದ ನೆನಪು ನನಗೆ. ಪೂರ್ತಿ ಅಂಗಳದವರೆಗೂ ವಾಸನೆ ಅಡರುತ್ತಿದ್ದುದು, ಆಕೆಗೆ ಎಲ್ಲ ಗೊತ್ತಾಗುತ್ತಿದ್ದರೂ ಅನಾರೋಗ್ಯ ಕೆಡುವಿ ಹಾಕಿತ್ತು. ಆ ಸಂಕಟ ಆಕೆಯನ್ನು ಇನ್ನಷ್ಟು ಕೂಗಿಸುತ್ತಿತ್ತು. ಆಗೀಗ ಚೆಂದವಾಗಿ ಮಾಣಿ.. ಮಾಣಿ.. ಎಂದು ಕೂಗಿಸಿಕೊಂಡು ಆಕೆಯ ಕೈಯ್ಯಡುಗೆಗೂ, ಬ್ಯಾಣದ ಕಾಡಿನ ಅಷ್ಟೂ ಕೌತುಕಗಳಿಗೆ, ಬಾಲ್ಯ ಸಹಜತೆಗೆ ಬೆರಗಾದವನು ನಾನು. ಉಳಿದದ್ದೇನೆ ಇದ್ದರೂ ಶೈಲತ್ತೆ ನನ್ನ ಬಾಲ್ಯಕ್ಕೆ ಕೊಟ್ಟ ಕೊಡುಗೆ ದೊಡ್ಡದು. ಹೋಗಿ ಕೊಟ್ಟಿಗೆಯ ಮೂಲೆಯ ಮಂಚದ ಮೇಲೆ ಕೂರುತ್ತಿದ್ದಂತೆ ವರ್ಷಗಳ ನೋವಿಗೆ ಮುಕ್ತಿ ಕೊಡುವಂತೆ ಗಂಟೆಗಟ್ಟಲೆ ಮಾತಾಡಿದ್ದಳು.ಸಂಜೆಗೆ ಸುಂದ್ರಿ ಬಂದಾಗ ದಿನಪೂರ್ತಿ ನೋಡಿಕೊಳ್ಳಲು ಸರಿಯಾಗಿ ಪ್ರತ್ಯೇಕವಾಗಿ ಹಣ ಕೊಡುವುದಾಗಿ ವ್ಯವಸ್ಥೆಗೆ ಒಪ್ಪಿಸಿ ಎದ್ದು ಬಂದೆ. ಅದಕ್ಕಿಂತ ಹೆಚ್ಚಿಗೇನಾದರೂ ಮಾಡಲು ಸ್ವಾತಂತ್ರ, ದಾರಿ ಎರಡೂ ನನಗಿರಲಿಲ್ಲ. ಮೌನವಾಗಿ ಬಂಡಲ್ ಘಾಟಿ ಇಳಿಯುತ್ತಿದ್ದರೆ, ಶೈಲತ್ತೆಯ ಮಾತು ರಿಂಗಣಿಸುತ್ತಿದ್ದವು. ‘ಶೈಲಿ ಯಾವತ್ತೂ ಯೋಚನೆ ಮಾಡಿ ಈ ಮನೀಗೆ ಮಣ್ಣು ಹೊರಲಿಲ್ಲ ಮಾರಾಯಾ. ಕೈಲಾದಷ್ಟು ದಿನಾ ಚೆಂದ ಮಾಡಿದಿನೊ. ಈಗ ವಯಸಾಯ್ತು ಉಸುರು ನಿಲ್ಲಲಿ ಅಂತಾ ನಾನೂ ಕಾಯ್ದಿದಿನಿ. ಆದರೆ ಮಾಣಿ ಅದು ನನ್ನ ಕೈಲಿಲ್ಲ. ಒಂಚೂರು ಎದ್ದು ಕೂತ್ಕೊಳ್ಳೊ ಹಂಗಿದ್ರೂ ನಾನೇ ಮಾಡ್ಕೊತ್ತಿದ್ದಾ. ಅದೂ ಅಗದೆ ಎಲ್ಲ ಇ ವೃಣ ಆಗಿದ್ದಾ ಮಾರಾಯ. ಸುಂದ್ರಿ ಬಂದ್ರೂ ಮೂಗು, ಮುಖ ಸಿಂಡರಿಸಿ ಹತ್ತ ನಿಮಿಷದಲ್ಲಿ ಇತ್ಲಾಗೆ ತಿರುಗ್ಸಿ ಹೋಗ್ತಾಳೆ. ಆ ಕೂಸಾದರೂ ಸರಿಯಾಗಿ ದುಡ್ಡು ದುಗ್ಗಾಣಿ ಕೊಡದೆ ಎಂಥ ಮಾಡ್ತ ಹೇಳು. ಈಗ ನಾನು ಇವ್ರ ಕೂಳಿಗೆ ದಂಡ ಅನ್ನೊ ಹಂಗೆ ಮುಖದ ಮ್ಯಾಲೆ ಮಾಡ್ತಾರಲ್ಲ ಮಾಣಿ. ನಿವೊಂಚೂರು ಹೋಗುವಾಗ ಅಣ್ಣಂಗೆ ಹೇಳು ಮಾರಾಯ. ಶೈಲಿ ಈ ಮನಿಗೆ ದಂಡ ಆಗಿದ್ಲು ಅನ್ಸೋದು ಬ್ಯಾಡ. ಐವತ್ತು ವರ್ಷದಿಂದ ಒಂದಿನಾನೂ ಕೂರದೆ ಕೆಲಸ ಮಾಡಿದ್ದೇ ಸುಳ್ಳಾತಲಿ. ದಿನಕ್ಕ ಐದ ನಿಮ್ಷ ಯಾರಾದರೂ ಬಂದು ಹೆಂಗಿದ್ದಿ ಅಂತಾ ಮಾತಾಡ್ಸಿದ್ರೂ ಸಾಕಿತ್ತು. ಸುಂದ್ರಿ ಹೊರಳಸದಿದ್ರೂ ನಾ ರಾಡಿಲಿ ಹಿಂಗೆ ಮಲಗಿರ್ತಿದ್ದಾ. ಅವರು ಖರ್ಚು ಮಾಡೋದು ಬ್ಯಾಡ.. ಔಷಧಿನೂ ಬ್ಯಾಡ. ಆದರೆ ನಾನು ದಂಡ ಪಿಂಡ ಅಂತಾರಲ್ಲ ಮಾಣಿ, ಇಷ್ಟು ವರ್ಷ ನಾನು ಯಾವತ್ತಾದರೂ ಮನಿ ಜನಕ್ಕೂ ಮೊದ್ಲೆ ಕೂತು ಉಂಡಿದ್ದು ಹೋಗ್ಲಿ ನೀರು ಕುಡಿದ್ದಿದೆಯಾ...?..- ಶೈಲತ್ತೆ ಅಸಹಾಯಕತೆಗೆ ಸಂಕಟ ಪಡುತ್ತಿದ್ದರೆ ಮನುಷ್ಯರ ಎರಡೂ ರೀತಿಯ ವರ್ತನೆಗಳಿಗೆ ಸಾಕ್ಷಿಯಾಗಿದ್ದ ನನ್ನಲ್ಲಿ ಯಾವ ಭಾವಗಳೂ ಸ್ಪುರಿಸುವುದು ಸಾಧ್ಯವೇ ಇರಲಿಲ್ಲ. ಇದಾದ ತಿಂಗಳಲ್ಲಿ ಶೈಲತ್ತೆ ಮಲಗಿದ್ದಲ್ಲೇ ರಾತ್ರಿ ಗೋಣು ಚೆಲ್ಲಿದ್ದಳು. ಅಕಸ್ಮಾತ್ ಎದ್ದರೂ ಕತ್ತೆ ದುಡಿತದ ವಿನಾ ಇನ್ಯಾವ ಸುಖವಿತ್ತು ಆಕೆಯ ಬದುಕಿನಲ್ಲಿ. ಅದ್ಯಾಕೋ ಸುಮ್ಮನೆ ಕುಳಿತು ಬಿಟ್ಟೆ. ಮನುಷ್ಯ ಕೊನೆಕೊನೆಗೆ ಇಷ್ಟು ಅಸಹಾಯಕನಾಗುವುದಾದರೆ ನನಗೆ ಅರ್ಧ ವಯಸ್ಸೇ ಸಾಕು ಎನ್ನಿಸಿದ್ದು ಪರಮ ಸತ್ಯ.
ಕಾರಣಅ
ವಳು ಎಂದರೆ...
No comments:
Post a Comment